ಶಿರಡಿ ಸಾಯಿಬಾಬಾರವರ ಅತ್ಯದ್ಭುತ ಲೀಲೆಗಳನ್ನು ಕುರಿತು ಖ್ಯಾತ ಲೇಖಕಿ, ಸಾಯಿ ಸಂಶೋಧಕಿ ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ರಚಿಸಿ ನವದೆಹಲಿಯ ಸ್ಟರ್ಲಿಂಗ್ ಪಬ್ಲಿಷರ್ಸ್ ನವರು ಪ್ರಕಟಣೆ ಮಾಡುತ್ತಿರುವ "ಬಾಬಾ'ಸ್ ಡಿವೈನ್ ಸಿಂಫೋನಿ" ಪುಸ್ತಕವನ್ನು ಇತ್ತೀಚೆಗೆ ಶಿರಡಿಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಬಿಡುಗಡೆ ಮಾಡಲಾಯಿತು.
ಈ ಪುಸ್ತಕದಲ್ಲಿ ಸಾಯಿಬಾಬಾರವರ ಅವತರಣ ಕಾಲದಿಂದ ಇಲ್ಲಿಯವರೆಗೆ ನಡೆಸಿದ ಹಲವಾರು ಅತ್ಯಧ್ಬುತ ಲೀಲೆಗಳನ್ನು ಪ್ರಸ್ತುತ ಪಡಿಸಲಾಗಿದ್ದು ಯಾವ ರೀತಿ ಸಾಯಿಭಕ್ತರು ಸಾಯಿಬಾಬಾರವರಿಗೆ ಸಂಪೂರ್ಣವಾಗಿ ಶರಣಾಗತರಾಗಿದ್ದಾರೆ ಹಾಗೂ ಹೇಗೆ ಸಾಯಿಬಾಬಾರವರು ತಮ್ಮ ಭಕ್ತರಿಗೆ ಅಭಯವನ್ನಿತ್ತು ಅವರನ್ನು ಸದಾಕಾಲ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ತಮ್ಮ ಭಕ್ತರು ಪ್ರಪಂಚದ ಯಾವುದೇ ಸ್ಥಳಗಳಲ್ಲಿ ಇದ್ದರೂ ಅವರ ಹೃದಯ ಕಮಲದಲ್ಲಿ ನೆಲೆಸಿ, ಅವರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿ ಅವರಿಗೆ ಸಹಾಯ ಮಾಡುತ್ತಾ ಭಕ್ತರಿಗೆ ತಮ್ಮ ಮೇಲಿರುವ ನಂಬಿಕೆಯನ್ನು ಅವರು ಹೇಗೆ ಉಳಿಸಿಕೊಂಡಿದ್ದಾರೆ ಎಂಬುದನ್ನು ಕೂಡ ನಾವುಗಳು ನೋಡಬಹುದಾಗಿದೆ. ಈ ಲೀಲೆಗಳು ಸಾಯಿಬಾಬಾರವರ ಅಮರತ್ವವನ್ನು ಧೃಡಪಡಿಸುವುದಷ್ಟೇ ಅಲ್ಲದೆ ಹೇಗೆ ಇಂದಿಗೂ ಸಾಯಿಬಾಬಾರವರು ತಮ್ಮ ಭಕ್ತರನ್ನು ಸಂಕಷ್ಟಗಳಿಂದ ಪಾರು ಮಾಡುತ್ತಿದ್ದಾರೆ ಎಂಬುದನ್ನು ನಿರೂಪಿಸುತ್ತವೆ.
ಸಾಯಿ ಭಕ್ತ ಶ್ರೀಮತಿ. ವಿನ್ನಿ ಚಿಟ್ಲೂರಿಯವರು ತಮಿಳುನಾಡಿನ ನೀಲಗಿರಿ ಪ್ರಾಂತ್ಯದ ಅರವನಕಾಡು ಎಂಬ ಸ್ಥಳದಲ್ಲಿ ಜನಿಸಿದರು. ಅವರ ಮೊದಲ ವಿದ್ಯಾಭ್ಯಾಸವು ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆಯಿತು. ನಂತರ ಇವರು ನವದೆಹಲಿಯ ಕಲಾವತಿ ಸರೇನ್ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳಿ ಅಲ್ಲಿ "ಡಿಪ್ಲೋಮ್ಯಾಟ್ ಆಫ್ ದಿ ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್" ಪದವಿಯನ್ನು ಗಳಿಸಿದರು. ಇವರು ಅಮೇರಿಕಾದಲ್ಲಿ ಇದ್ದಾಗ ಇವರು ತಮಗೆ ತಮ್ಮ ಕುಟುಂಬದ ಸದಸ್ಯರೊಡನೆ ಇದ್ದ ಕರ್ಮ ಬಂಧನದ ಬಗ್ಗೆ ಯೋಚಿಸಲು ಆರಂಭಿಸಿದರು. ಇವರ ತಂದೆಯವರಂತೆ ಇವರೂ ಸಹ ಸರಿ ಸುಮಾರು 60 ವರ್ಷಗಳಿಂದ ಸಾಯಿಬಾಬಾರವರ ಆರಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಇವರ ಹಾಗೂ ಸಾಯಿಬಾಬಾರವರ ನಡುವೆ ಸಂಬಂಧ ಯಾವುದೇ ಷರತ್ತಿಲ್ಲದೆ ಪ್ರೀತಿಸುವ ಒಬ್ಬ "ಉತ್ತಮ ಸ್ನೇಹಿತ" ರಂತೆ ಇದೆ. ಇವರು ತಮ್ಮ 50ನೇ ವಯಸ್ಸಿನಲ್ಲೇ ವೈದ್ಯಕೀಯ ವೃತ್ತಿಗೆ ತಿಲಾಂಜಲಿಯನ್ನಿತ್ತು 1994 ರಲ್ಲಿ ಅಮೇರಿಕಾದಿಂದ ಶಿರಡಿಗೆ ಬಂದು ಶಾಶ್ವತವಾಗಿ ಶಿರಡಿಯಲ್ಲಿಯೇ ನೆಲೆಸಿದ್ದಾರೆ. ಅಂದಿನಿಂದ ಇವರು ಸಾಯಿಬಾಬಾರವರ ಬಗ್ಗೆ ವ್ಯಾಪಕ ಸಂಶೋಧನೆಯನ್ನು ನಡೆಸುತ್ತಾ ಬಂದಿದ್ದಾರೆ. "ತಾನು ಹೆಚ್ಚು ಹೆಚ್ಚು ಆಳವಾಗಿ ಸಾಯಿಬಾಬಾರವರ ಬಗ್ಗೆ ಅಧ್ಯಯನ ಮಾಡಿದಷ್ಟೂ, ತಾನು ಎಷ್ಟು ಅಜ್ಞಾನಿ ಎಂಬ ಅರಿವು ಆಗಿದೆ" ಎಂದು ನಮ್ರತೆಯಿಂದ ನುಡಿಯುತ್ತಾರೆ. ಅಲ್ಲದೆ, "ಈ ಅಭೇದ್ಯನಾದ ಭಗವಂತನನ್ನು ಅರ್ಥ ಮಾಡಿಕೊಳ್ಳಲು ಇನ್ನು ಹಲವಾರು ಜನ್ಮ ಎತ್ತಿದರೂ ಸಾಲದು; ತಮ್ಮ ಅನ್ವೇಷಣೆ ಹೀಗೆಯೇ ಮುಂದುವರಿಯುತ್ತದೆ" ಎಂಬ ಮಾತುಗಳನ್ನು ಕೂಡ ಸೇರಿಸುವುದನ್ನು ಅವರು ಮರೆಯುವುದಿಲ್ಲ.
ಪ್ರಸ್ತುತ "ಬಾಬಾ'ಸ್ ಡಿವೈನ್ ಸಿಂಪೋನಿ" ಪುಸ್ತಕದಲ್ಲಿ ದಿನಕ್ಕೊಂದರಂತೆ 365 ದಿನಗಳಿಗೆ 365 ಲೀಲೆಗಳನ್ನು ಸಾದರಪಡಿಸಲಾಗಿದೆ. ಈ ಲೀಲೆಗಳನ್ನು ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ಬಹಳ ಸುಂದರವಾಗಿ ವರ್ಣಿಸಿದ್ದಾರೆ. ಈ ಪುಸ್ತಕದ ಬೆಲೆ ಕೇವಲ 250 ರೂಪಾಯಿಗಳಾಗಿರುತ್ತದೆ.
ಪುಸ್ತಕದ ಪ್ರತಿಗಳಿಗಾಗಿ ಸಾಯಿ ಭಕ್ತರು ಶ್ರೀ. ನಾಗರಾಜ್ ಅನ್ವೇಕರ್ ರವರನ್ನು ದೂರವಾಣಿ ಸಂಖ್ಯೆ +91 99023 88699 ರಲ್ಲಿ ಸಂಪರ್ಕಿಸಬಹುದಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment