Sunday, January 19, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಪಲ್ಲಕ್ಕಿ ಯಾತ್ರಿಗಳ ಪಟಾಕಿ ಸಿಡಿಸುವಿಕೆ ಹಾಗೂ ಸಂಗೀತ ವಾದ್ಯಗಳಿಗೆ ಕಡಿವಾಣ - ಕೃಪೆ: ಸಾಯಿಅಮೃತಧಾರಾ.ಕಾಂ


ಪಲ್ಲಕ್ಕಿ ಹೊತ್ತು ತರುವ ಪಾದಯಾತ್ರಿಗಳ ರಕ್ಷಣೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ದೃಷ್ಟಿಯಿಂದ ಹೊಸ ಭಕ್ತ ನಿವಾಸ (500 ಕೋಣೆ) ದಿಂದ ಶಿರಡಿ ಪೋಲಿಸ್ ಠಾಣೆಯವರೆಗಿನ ವ್ಯಾಪ್ತಿ ಪ್ರದೇಶದಲ್ಲಿ ಪಲ್ಲಕ್ಕಿ ಯಾತ್ರಿಗಳ ಪಟಾಕಿ ಸಿಡಿಸುವಿಕೆ  ಹಾಗೂ ಸಂಗೀತ ವಾದ್ಯಗಳಿಗೆ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.

ಈಗ ಶಿರಡಿಯ ಸಾಯಿಬಾಬಾರವರು ಭಾರತವಷ್ಟೇ ಅಲ್ಲದೆ ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರ ಆರಾಧ್ಯ ದೈವವಾಗಿದ್ದು ಶಿರಡಿಯು ಒಂದು ಜಗತ್ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಆದ ಕಾರಣ, ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರು ಸಾಯಿಬಾಬಾರವರ ದರ್ಶನವನ್ನು ಮಾಡುವ ಸಲುವಾಗಿ ಶಿರಡಿಗೆ ಬರುತ್ತಿದ್ದಾರೆ. ದಿನೇ ದಿನೇ, ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತು ತರುವ ಪಾದಯಾತ್ರಿಗಳ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಎರಿದೆ. ಈ ಹಿಂದೆ ಕೇವಲ 3 ಪ್ರಮುಖ ಉತ್ಸವದ ಸಂದರ್ಭಗಳಲ್ಲಿ ಮಾತ್ರ ಪಲ್ಲಕ್ಕಿಯನ್ನು ಹೊತ್ತು ತರುವ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು; ಆದರೆ ಇತ್ತೀಚಿನ ದಿನಗಳಲ್ಲಿ ವರ್ಷವಿಡೀ  ಭಕ್ತರು ಪಾದಯಾತ್ರೆಯಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.  ಹೀಗೆ ಪಾದಯಾತ್ರೆಯಲ್ಲಿ ಬರುವಾಗ ದಾರಿಯಲ್ಲಿ ಎಲ್ಲಾ ವಿಧದ ಸಂಗೀತ ವಾದ್ಯಗಳನ್ನು ಬಹಳ ಜೋರಾಗಿ ಬಾರಿಸಿಕೊಂಡು, ಬೀದಿಯಲ್ಲಿ ಪಟಾಕಿಯನ್ನು ಸಿಡಿಸುವುದರಿಂದ ದೇವಾಲಯದ ಸುತ್ತಮುತ್ತ ಶಬ್ದಮಾಲಿನ್ಯ ಬಹಳ ಹೆಚ್ಚಾಗಿದೆ. ಆದ ಕಾರಣ, ಈ ಶಬ್ದಮಾಲಿನ್ಯದಿಂದ ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಬಹಳ ತೊಂದರೆಯಾಗುತ್ತಿದೆ. ಅಲ್ಲದೆ, ಈ ಸಂದರ್ಭಗಳಲ್ಲಿ ನೂಕು ನುಗ್ಗಲು ಕೂಡ ಹೆಚ್ಚಾಗುವುದರಿಂದ ಭಕ್ತರ ಸುರಕ್ಷತೆಗೆ ಧಕ್ಕೆಯಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು.

ಆದ್ದರಿಂದ, ದಿನೇ ದಿನೇ ಶಿರಡಿಗೆ ಹರಿದುಬರುತ್ತಿರುವ ಸಾಯಿ ಭಕ್ತ ಸಾಗರದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಯಾವುದೇ ಅಹಿತಕರ ಘಟನೆಗಳೂ ಸಂಭವಿಸದೆ ಇರದಂತೆ ಮಾಡುವ ಸಲುವಾಗಿ ಹೊಸ ಭಕ್ತ ನಿವಾಸ (500 ಕೋಣೆ) ದಿಂದ ಶಿರಡಿ ಪೋಲಿಸ್ ಠಾಣೆಯವರೆಗಿನ ವ್ಯಾಪ್ತಿ ಪ್ರದೇಶದಲ್ಲಿ ಪಲ್ಲಕ್ಕಿ ಯಾತ್ರಿಗಳ ಪಟಾಕಿ ಸಿಡಿಸುವಿಕೆ  ಹಾಗೂ ಸಂಗೀತ ವಾದ್ಯಗಳಿಗೆ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ. ಸಾಯಿಭಕ್ತರು ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಬೇಕೆಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಂಡರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment