Friday, January 31, 2014
Monday, January 27, 2014
ಹೊಸದಾಗಿ ನವೀಕರಿಸಲಾದ ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರ, ಬೂದಿಗೆರೆ, ಬೆಂಗಳೂರು ಕುಂಭಾಭಿಷೇಕ ಮಹೋತ್ಸವ - ಕೃಪೆ: ಸಾಯಿಅಮೃತಧಾರಾ.ಕಾಂ
ಹೊಸದಾಗಿ ನವೀಕರಿಸಲಾದ ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರ, ಬೂದಿಗೆರೆ, ಬೆಂಗಳೂರಿನ ಕುಂಭಾಭಿಷೇಕ ಮಹೋತ್ಸವವನ್ನು ಇದೇ ತಿಂಗಳ 30ನೇ ಜನವರಿ 2014, ಗುರುವಾರದಿಂದ 2ನೇ ಫೆಬ್ರವರಿ 2014, ಭಾನುವಾರದವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ.
ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Saturday, January 25, 2014
ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ, ಅನಂತಪುರದ ವತಿಯಿಂದ ಶ್ರೀ ಸಾಯಿ ವಿಶ್ವ ಚೈತನ್ಯ ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಸಾಯಿ ಯುವ ಭಕ್ತ ಸಮ್ಮೇಳನದ ಆಯೋಜನೆ
ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ, ಅನಂತಪುರದ ವತಿಯಿಂದ ಶ್ರೀ ಸಾಯಿ ವಿಶ್ವ ಚೈತನ್ಯ ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಸಾಯಿ ಯುವ ಭಕ್ತ ಸಮ್ಮೇಳನವನ್ನು ಇದೇ ತಿಂಗಳ 26ನೇ ಜನವರಿ 2014, ಭಾನುವಾರದಂದು ಬೆಳಿಗ್ಗೆ 10:00 ಘಂಟೆಗೆ ಅನಂತಪುರದ ಜಿಲ್ಲಾ ಪರಿಷತ್ ಕಚೇರಿಯ ಎದುರುಗಡೆ ಇರುವ ಶ್ರೀ ಗೀತಾ ಮಂದಿರದಲ್ಲಿ ಆಯೋಜಿಸಲಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Wednesday, January 22, 2014
ಸಾಯಿ ಸುಮಿರನ್ - ಭಕ್ತೋಂ ಕೇ ಅನುಭವ್ ಪುಸ್ತಕ ಲೋಕಾರ್ಪಣೆ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ಸಾಯಿ ಸುಮಿರನ್ ಟೈಮ್ಸ್ ನ ಹಿಂದಿನ ಸಂಚಿಕೆಗಳಲ್ಲಿ ಪ್ರಕಟಗೊಂಡ ಸಾಯಿ ಭಕ್ತರ ಅಭೂತಪೂರ್ವ ಅನುಭವಗಳು ಹಾಗೂ ಆಯ್ದ ಸಂಪಾದಕೀಯ ಲೇಖನಗಳನ್ನು ಒಳಗೊಂಡ "ಸಾಯಿ ಸುಮಿರನ್ - ಭಕ್ತೋಂ ಕೇ ಅನುಭವ್" ಎಂಬ ಪುಸ್ತಕವು ಇದೇ ತಿಂಗಳ 19ನೇ ಜನವರಿ 2014, ಭಾನುವಾರ ದಂದು ನವದೆಹಲಿಯ ಚಿನ್ಮಯ ಮಿಶಿನ್ ಆಡಿಟೋರಿಯಂ ನಲ್ಲಿ ಲೋಕಾರ್ಪಣೆಗೊಂಡಿತು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Tuesday, January 21, 2014
ಶಿರಡಿ ಸಾಯಿಬಾಬಾ ಸಂಸ್ಥಾನದ ಉಚಿತ ಪ್ರಸಾದ ಭೋಜನ ಯೋಜನೆಯ ಯಶೋಗಾಥೆಯ ಬಗ್ಗೆ ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ
ಸಾಯಿ ಭಕ್ತರು ಉದಾರವಾಗಿ ನೀಡುತ್ತಿರುವ ದೇಣಿಗೆಯಿಂದ ಶಿರಡಿಯ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಈ ಯೋಜನೆಯ ಅಡಿಯಲ್ಲಿ 1ನೇ ಜನವರಿ 2013 ರಿಂದ 31ನೇ ಡಿಸೆಂಬರ್ 2013 ರ ಒಳಗೆ ಬರುವ ಒಟ್ಟು 365 ದಿನಗಳಲ್ಲಿ 204 ದಿನಗಳಂದು ಪ್ರಸಾದ ಭೋಜನವನ್ನು ಉಚಿತವಾಗಿ ನೀಡಲಾಗಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು.
ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ತಮ್ಮನ್ನು ಕಾಣಲು ಬರುವ ಭಕ್ತರಿಗೆ ನಿರಂತರ ಅನ್ನದಾನವನ್ನು ಮಾಡುವ ಅತ್ಯುತ್ತಮ ಯೋಜನೆಯನ್ನು ಪ್ರಾರಂಭಿಸಿದ್ದರು. ಶ್ರೀ ಸಾಯಿಬಾಬಾರವರು ಪ್ರಾರಂಭಿಸಿದ ಈ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನವು ನೀಮಗಾವ್- ಕೊರಾಳೆ ಗ್ರಾಮದ ಸರಹದ್ದಿನಲ್ಲಿ ಸರಿ ಸುಮಾರು 8 ಎಕರೆ ವಿಶಾಲವಾದ ಪ್ರದೇಶದಲ್ಲಿ ಸಾಯಿಬಾಬಾ ಪ್ರಸಾದಾಲಯವನ್ನು ನಿರ್ಮಿಸಿರುತ್ತಾರೆ. ಇದು ಏಷಿಯಾದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಸಾದಾಲಯವೆಂದು ಹೇಳಲಾಗುತ್ತದೆ. ಈ ಭವನದೊಳಗೆ
ಬೃಹತ್ ಭೋಜನ ಶಾಲೆಯನ್ನು ನಿರ್ಮಾಣ ಮಾಡಲಾಗಿದ್ದು ಒಂದೇ ಬಾರಿಗೆ 5,500 ಭಕ್ತರಿಗೆ ಕುಳಿತು
ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಪ್ರತಿನಿತ್ಯ ಸುಮಾರು 1 ಲಕ್ಷ ಜನರು ಇಲ್ಲಿ
ಭೋಜನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯ ದಿನದಂದು ಸುಮಾರು 30,000-35,000 ಭಕ್ತರು ಹಾಗೂ ಹಬ್ಬ ಹರಿದಿನಗಳು/ರಜಾದಿನಗಳಂದು ಸುಮಾರು 70,000-80,000 ಭಕ್ತರು ಪ್ರಸಾದ ಭೋಜನವನ್ನು ಸ್ವೀಕರಿಸುತ್ತಿದ್ದಾರೆ. ಹಾಗಾಗಿ, ಪ್ರತಿ ವರ್ಷ ಸುಮಾರು 1 ಕೋಟಿ ಸಾಯಿ ಭಕ್ತರು ಸಾಯಿಬಾಬಾ ಪ್ರಸಾದಾಲಯದಲ್ಲಿ ಭೋಜನವನ್ನು ಸ್ವೀಕರಿಸುತ್ತಿದ್ದಾರೆ. ಪ್ರಸಾದಾಲಯದ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸಾಯಿಬಾಬಾ ಸಂಸ್ಥಾನದವರು ಅಡುಗೆ ಪರಿಕರಗಳು, ಅಡುಗೆ ಕೋಣೆ ಹಾಗೂ ಭೋಜನ ಶಾಲೆಯ ಸ್ವಚ್ಚತೆ, ಎಲ್ಲ ಕೆಲಸಗಾರರಿಗೆ ಸಮವಸ್ತ್ರ ವಿತರಣೆ ಮತ್ತಿತರ ವ್ಯವಸ್ಥೆಗಳಿಗಾಗಿ ಪ್ರತಿ ವರ್ಷ ಸರಿ
ಸುಮಾರು 60 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿದ್ದಾರೆ ಎಂದು ಶ್ರೀ. ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು.
ಭಕ್ತರು ಸಾಯಿಬಾಬಾ ಪ್ರಸಾದಾಲಯದಲ್ಲಿ ಉತ್ತಮ ಗುಣಮಟ್ಟದ ಭೋಜನವನ್ನು ಸವಿಯಲು ಹೆಚ್ಚು ಹೊತ್ತು ಕಾಯಬೇಕಾದ ಅವಶ್ಯಕತೆಯಿರುವುದಿಲ್ಲ. ಶಿರಡಿ ಸಾಯಿಬಾಬಾ ಸಂಸ್ಥಾನದ ಈ ಉತ್ತಮ ಸೇವೆಯನ್ನು ಗುರುತಿಸಿ ಟ್ರಾನ್ಸ್ ಪೆಸಿಫಿಕ್ ಸರ್ಟಿಫಿಕೇಶನ್ಸ್ ಲಿಮಿಟೆಡ್ (TCL) ಸಂಸ್ಥೆಯು 30ನೇ ಸೆಪ್ಟೆಂಬರ್ 2013 ರಿಂದ 3 ವರ್ಷಗಳಿಗೆ ಅನ್ವಯವಾಗುವಂತೆ ISO-22000-2005 (Food Safety Standard) ಸರ್ಟಿಫಿಕೇಟ್ ನೀಡಿ ಗೌರವಿಸಿದೆ. ಅಲ್ಲದೆ, ಭಾರತ
ಸರ್ಕಾರದ ಅಸಂಪ್ರದಾಯಿಕ ಇಂಧನಗಳ ಸಚಿವರಾದ ಶ್ರೀ.ಫರೂಕ್ ಅಬ್ದುಲ್ಲಾರವರು ಶಿರಡಿ
ಸಾಯಿಬಾಬಾ ಸಂಸ್ಥಾನದ ಸೌರ ಉಗಿ ಅಡುಗೆ ಯೋಜನೆಯನ್ನು ಧಾರ್ಮಿಕ ಸಂಸ್ಥೆಗಳಲ್ಲಿಯೇ ಅತ್ಯಂತ
ಬೃಹತ್ ಯೋಜನೆ
ಎಂದು ಗುರುತಿಸಿ ಇದೇ ತಿಂಗಳ 17ನೇ ಡಿಸೆಂಬರ್ 2013, ಮಂಗಳವಾರ ದಂದು ನವದೆಹಲಿಯ ಅಶೋಕ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಅಷ್ಟೇ ಅಲ್ಲದೆ, ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರಾರಂಭಿಸಿದ ಉಚಿತ ಪ್ರಸಾದ ಭೋಜನ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಯೋಜನೆಯ ಅಡಿಯಲ್ಲಿ, 1ನೇ ಜನವರಿ 2013 ರಿಂದ 31ನೇ ಡಿಸೆಂಬರ್ 2013 ರ ಒಳಗೆ 336 ಸಾಯಿ ಭಕ್ತರು 5,11,88,813 ರೂಪಾಯಿಗಳ ದೇಣಿಗೆಯನ್ನು ದಾರಾಳವಾಗಿ ನೀಡಿರುತ್ತಾರೆ. ಆದ ಕಾರಣ, 365 ದಿನಗಳಲ್ಲಿ 204 ದಿನಗಳಂದು ಸಾಯಿ ಭಕ್ತರಿಗೆ ಪ್ರಸಾದ ಭೋಜನವನ್ನು ಉಚಿತವಾಗಿ ನೀಡಲಾಗಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
Monday, January 20, 2014
ಖ್ಯಾತ ಲೇಖಕಿ, ಸಾಯಿ ಸಂಶೋಧಕಿ ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರ "ಬಾಬಾ'ಸ್ ಡಿವೈನ್ ಸಿಂಫೋನಿ" ಪುಸ್ತಕದ ಲೋಕಾರ್ಪಣೆ ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾರವರ ಅತ್ಯದ್ಭುತ ಲೀಲೆಗಳನ್ನು ಕುರಿತು ಖ್ಯಾತ ಲೇಖಕಿ, ಸಾಯಿ ಸಂಶೋಧಕಿ ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ರಚಿಸಿ ನವದೆಹಲಿಯ ಸ್ಟರ್ಲಿಂಗ್ ಪಬ್ಲಿಷರ್ಸ್ ನವರು ಪ್ರಕಟಣೆ ಮಾಡುತ್ತಿರುವ "ಬಾಬಾ'ಸ್ ಡಿವೈನ್ ಸಿಂಫೋನಿ" ಪುಸ್ತಕವನ್ನು ಇತ್ತೀಚೆಗೆ ಶಿರಡಿಯಲ್ಲಿ ನಡೆದ ಸರಳ ಸಮಾರಂಭವೊಂದರಲ್ಲಿ ಬಿಡುಗಡೆ ಮಾಡಲಾಯಿತು.
ಈ ಪುಸ್ತಕದಲ್ಲಿ ಸಾಯಿಬಾಬಾರವರ ಅವತರಣ ಕಾಲದಿಂದ ಇಲ್ಲಿಯವರೆಗೆ ನಡೆಸಿದ ಹಲವಾರು ಅತ್ಯಧ್ಬುತ ಲೀಲೆಗಳನ್ನು ಪ್ರಸ್ತುತ ಪಡಿಸಲಾಗಿದ್ದು ಯಾವ ರೀತಿ ಸಾಯಿಭಕ್ತರು ಸಾಯಿಬಾಬಾರವರಿಗೆ ಸಂಪೂರ್ಣವಾಗಿ ಶರಣಾಗತರಾಗಿದ್ದಾರೆ ಹಾಗೂ ಹೇಗೆ ಸಾಯಿಬಾಬಾರವರು ತಮ್ಮ ಭಕ್ತರಿಗೆ ಅಭಯವನ್ನಿತ್ತು ಅವರನ್ನು ಸದಾಕಾಲ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ತಮ್ಮ ಭಕ್ತರು ಪ್ರಪಂಚದ ಯಾವುದೇ ಸ್ಥಳಗಳಲ್ಲಿ ಇದ್ದರೂ ಅವರ ಹೃದಯ ಕಮಲದಲ್ಲಿ ನೆಲೆಸಿ, ಅವರಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿ ಅವರಿಗೆ ಸಹಾಯ ಮಾಡುತ್ತಾ ಭಕ್ತರಿಗೆ ತಮ್ಮ ಮೇಲಿರುವ ನಂಬಿಕೆಯನ್ನು ಅವರು ಹೇಗೆ ಉಳಿಸಿಕೊಂಡಿದ್ದಾರೆ ಎಂಬುದನ್ನು ಕೂಡ ನಾವುಗಳು ನೋಡಬಹುದಾಗಿದೆ. ಈ ಲೀಲೆಗಳು ಸಾಯಿಬಾಬಾರವರ ಅಮರತ್ವವನ್ನು ಧೃಡಪಡಿಸುವುದಷ್ಟೇ ಅಲ್ಲದೆ ಹೇಗೆ ಇಂದಿಗೂ ಸಾಯಿಬಾಬಾರವರು ತಮ್ಮ ಭಕ್ತರನ್ನು ಸಂಕಷ್ಟಗಳಿಂದ ಪಾರು ಮಾಡುತ್ತಿದ್ದಾರೆ ಎಂಬುದನ್ನು ನಿರೂಪಿಸುತ್ತವೆ.
ಸಾಯಿ ಭಕ್ತ ಶ್ರೀಮತಿ. ವಿನ್ನಿ ಚಿಟ್ಲೂರಿಯವರು ತಮಿಳುನಾಡಿನ ನೀಲಗಿರಿ ಪ್ರಾಂತ್ಯದ ಅರವನಕಾಡು ಎಂಬ ಸ್ಥಳದಲ್ಲಿ ಜನಿಸಿದರು. ಅವರ ಮೊದಲ ವಿದ್ಯಾಭ್ಯಾಸವು ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆಯಿತು. ನಂತರ ಇವರು ನವದೆಹಲಿಯ ಕಲಾವತಿ ಸರೇನ್ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಹೆಚ್ಚಿನ ವ್ಯಾಸಂಗಕ್ಕಾಗಿ ಅಮೇರಿಕಾಗೆ ತೆರಳಿ ಅಲ್ಲಿ "ಡಿಪ್ಲೋಮ್ಯಾಟ್ ಆಫ್ ದಿ ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್" ಪದವಿಯನ್ನು ಗಳಿಸಿದರು. ಇವರು ಅಮೇರಿಕಾದಲ್ಲಿ ಇದ್ದಾಗ ಇವರು ತಮಗೆ ತಮ್ಮ ಕುಟುಂಬದ ಸದಸ್ಯರೊಡನೆ ಇದ್ದ ಕರ್ಮ ಬಂಧನದ ಬಗ್ಗೆ ಯೋಚಿಸಲು ಆರಂಭಿಸಿದರು. ಇವರ ತಂದೆಯವರಂತೆ ಇವರೂ ಸಹ ಸರಿ ಸುಮಾರು 60 ವರ್ಷಗಳಿಂದ ಸಾಯಿಬಾಬಾರವರ ಆರಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಇವರ ಹಾಗೂ ಸಾಯಿಬಾಬಾರವರ ನಡುವೆ ಸಂಬಂಧ ಯಾವುದೇ ಷರತ್ತಿಲ್ಲದೆ ಪ್ರೀತಿಸುವ ಒಬ್ಬ "ಉತ್ತಮ ಸ್ನೇಹಿತ" ರಂತೆ ಇದೆ. ಇವರು ತಮ್ಮ 50ನೇ ವಯಸ್ಸಿನಲ್ಲೇ ವೈದ್ಯಕೀಯ ವೃತ್ತಿಗೆ ತಿಲಾಂಜಲಿಯನ್ನಿತ್ತು 1994 ರಲ್ಲಿ ಅಮೇರಿಕಾದಿಂದ ಶಿರಡಿಗೆ ಬಂದು ಶಾಶ್ವತವಾಗಿ ಶಿರಡಿಯಲ್ಲಿಯೇ ನೆಲೆಸಿದ್ದಾರೆ. ಅಂದಿನಿಂದ ಇವರು ಸಾಯಿಬಾಬಾರವರ ಬಗ್ಗೆ ವ್ಯಾಪಕ ಸಂಶೋಧನೆಯನ್ನು ನಡೆಸುತ್ತಾ ಬಂದಿದ್ದಾರೆ. "ತಾನು ಹೆಚ್ಚು ಹೆಚ್ಚು ಆಳವಾಗಿ ಸಾಯಿಬಾಬಾರವರ ಬಗ್ಗೆ ಅಧ್ಯಯನ ಮಾಡಿದಷ್ಟೂ, ತಾನು ಎಷ್ಟು ಅಜ್ಞಾನಿ ಎಂಬ ಅರಿವು ಆಗಿದೆ" ಎಂದು ನಮ್ರತೆಯಿಂದ ನುಡಿಯುತ್ತಾರೆ. ಅಲ್ಲದೆ, "ಈ ಅಭೇದ್ಯನಾದ ಭಗವಂತನನ್ನು ಅರ್ಥ ಮಾಡಿಕೊಳ್ಳಲು ಇನ್ನು ಹಲವಾರು ಜನ್ಮ ಎತ್ತಿದರೂ ಸಾಲದು; ತಮ್ಮ ಅನ್ವೇಷಣೆ ಹೀಗೆಯೇ ಮುಂದುವರಿಯುತ್ತದೆ" ಎಂಬ ಮಾತುಗಳನ್ನು ಕೂಡ ಸೇರಿಸುವುದನ್ನು ಅವರು ಮರೆಯುವುದಿಲ್ಲ.
ಪ್ರಸ್ತುತ "ಬಾಬಾ'ಸ್ ಡಿವೈನ್ ಸಿಂಪೋನಿ" ಪುಸ್ತಕದಲ್ಲಿ ದಿನಕ್ಕೊಂದರಂತೆ 365 ದಿನಗಳಿಗೆ 365 ಲೀಲೆಗಳನ್ನು ಸಾದರಪಡಿಸಲಾಗಿದೆ. ಈ ಲೀಲೆಗಳನ್ನು ಸಾಯಿ ಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿಯವರು ಬಹಳ ಸುಂದರವಾಗಿ ವರ್ಣಿಸಿದ್ದಾರೆ. ಈ ಪುಸ್ತಕದ ಬೆಲೆ ಕೇವಲ 250 ರೂಪಾಯಿಗಳಾಗಿರುತ್ತದೆ.
ಪುಸ್ತಕದ ಪ್ರತಿಗಳಿಗಾಗಿ ಸಾಯಿ ಭಕ್ತರು ಶ್ರೀ. ನಾಗರಾಜ್ ಅನ್ವೇಕರ್ ರವರನ್ನು ದೂರವಾಣಿ ಸಂಖ್ಯೆ +91 99023 88699 ರಲ್ಲಿ ಸಂಪರ್ಕಿಸಬಹುದಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶ್ರೀ ದತ್ತಾತ್ರೇಯ ಸಾಯಿ ಆಶ್ರಮ, ದೆಂಕನಾಳ್, ಒರಿಸ್ಸಾದ ವತಿಯಿಂದ 20ನೇ ಫೆಬ್ರವರಿ 2014 ರಿಂದ 22ನೇ ಫೆಬ್ರವರಿ 2014 ರವರೆಗೆ 13ನೇ ವಾರ್ಷಿಕೋತ್ಸವ ಹಾಗೂ ಅಖಿಲ ಭಾರತ ಸಾಯಿ ಭಕ್ತರ ಸಮಾವೇಶದ ಆಯೋಜನೆ-ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ದತ್ತಾತ್ರೇಯ ಸಾಯಿ ಆಶ್ರಮ, ದೆಂಕನಾಳ್, ಒರಿಸ್ಸಾ ತನ್ನ 13ನೇ ವಾರ್ಷಿಕೋತ್ಸವ ಹಾಗೂ ಅಖಿಲ ಭಾರತ ಸಾಯಿ ಭಕ್ತರ ಸಮಾವೇಶವನ್ನು ಮುಂದಿನ ತಿಂಗಳ 20ನೇ ಫೆಬ್ರವರಿ 2014 ರಿಂದ 22ನೇ ಫೆಬ್ರವರಿ 2014 ರವರೆಗೆ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ. ಸಾಯಿಭಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಆಶ್ರಮದ ಟ್ರಸ್ಟಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Sunday, January 19, 2014
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊನ್ನೂರಿನಲ್ಲಿ ಪ್ರಪ್ರಥಮ ಆಂಧ್ರ ರಾಜ್ಯ ಮಹಿಳಾ ಸಾಯಿ ಭಕ್ತೆಯರ ಸಮಾವೇಶದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊನ್ನೂರಿನಲ್ಲಿ ಪ್ರಪ್ರಥಮ ಆಂಧ್ರ ರಾಜ್ಯ ಮಹಿಳಾ ಸಾಯಿ ಭಕ್ತೆಯರ ಸಮಾವೇಶವನ್ನು ಇದೇ ತಿಂಗಳ 19ನೇ ಜನವರಿ 2014, ಭಾನುವಾರ ದಂದು ಆಯೋಜಿಸಲಾಗಿದೆ. ಈ ಸಮಾವೇಶವನ್ನು ಖ್ಯಾತ ಸಾಯಿ ತತ್ವ ಪ್ರಚಾರಕ, ಇತಿಹಾಸಕಾರ, ಸಂಶೋಧಕರೂ ಹಾಗೂ ವಯೋವೃದ್ಧರೂ ಆದ ಶ್ರೀ.ಅಲ್ಲೂರಿ ಗೋಪಾಲ್ ರಾವ್ ರವರು ಆಯೋಜಿಸುತ್ತಿದ್ದು ಇದರಲ್ಲಿ ಆಂಧ್ರಪ್ರದೇಶದ ಖ್ಯಾತ ಮಹಿಳಾ ಸಾಯಿ ತತ್ವ ಪ್ರಚಾರಕಿಯರೂ, ಸಾಯಿ ಬಂಧುಗಳೂ ಭಾಗವಹಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಥವಾ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ದೂರವಾಣಿ ಸಂಖ್ಯೆಗಳಾದ 08643-236818, 98490 01328 ಅನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಪಲ್ಲಕ್ಕಿ ಯಾತ್ರಿಗಳ ಪಟಾಕಿ ಸಿಡಿಸುವಿಕೆ ಹಾಗೂ ಸಂಗೀತ ವಾದ್ಯಗಳಿಗೆ ಕಡಿವಾಣ - ಕೃಪೆ: ಸಾಯಿಅಮೃತಧಾರಾ.ಕಾಂ
ಪಲ್ಲಕ್ಕಿ ಹೊತ್ತು ತರುವ ಪಾದಯಾತ್ರಿಗಳ ರಕ್ಷಣೆ ಹಾಗೂ ದಿನೇ ದಿನೇ ಹೆಚ್ಚುತ್ತಿರುವ ಶಬ್ದ ಮಾಲಿನ್ಯವನ್ನು ತಡೆಗಟ್ಟುವ ದೃಷ್ಟಿಯಿಂದ ಹೊಸ ಭಕ್ತ ನಿವಾಸ (500 ಕೋಣೆ) ದಿಂದ ಶಿರಡಿ ಪೋಲಿಸ್ ಠಾಣೆಯವರೆಗಿನ ವ್ಯಾಪ್ತಿ ಪ್ರದೇಶದಲ್ಲಿ ಪಲ್ಲಕ್ಕಿ ಯಾತ್ರಿಗಳ ಪಟಾಕಿ ಸಿಡಿಸುವಿಕೆ ಹಾಗೂ ಸಂಗೀತ ವಾದ್ಯಗಳಿಗೆ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.
ಈಗ ಶಿರಡಿಯ ಸಾಯಿಬಾಬಾರವರು ಭಾರತವಷ್ಟೇ ಅಲ್ಲದೆ ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರ ಆರಾಧ್ಯ ದೈವವಾಗಿದ್ದು ಶಿರಡಿಯು ಒಂದು ಜಗತ್ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಆದ ಕಾರಣ, ಪ್ರಪಂಚದ ಎಲ್ಲಾ ಭಾಗಗಳಿಂದ ಭಕ್ತರು ಸಾಯಿಬಾಬಾರವರ ದರ್ಶನವನ್ನು ಮಾಡುವ ಸಲುವಾಗಿ ಶಿರಡಿಗೆ ಬರುತ್ತಿದ್ದಾರೆ. ದಿನೇ ದಿನೇ, ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತು ತರುವ ಪಾದಯಾತ್ರಿಗಳ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಎರಿದೆ. ಈ ಹಿಂದೆ ಕೇವಲ 3 ಪ್ರಮುಖ ಉತ್ಸವದ ಸಂದರ್ಭಗಳಲ್ಲಿ ಮಾತ್ರ ಪಲ್ಲಕ್ಕಿಯನ್ನು ಹೊತ್ತು ತರುವ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು; ಆದರೆ ಇತ್ತೀಚಿನ ದಿನಗಳಲ್ಲಿ ವರ್ಷವಿಡೀ ಭಕ್ತರು ಪಾದಯಾತ್ರೆಯಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಹೀಗೆ ಪಾದಯಾತ್ರೆಯಲ್ಲಿ ಬರುವಾಗ ದಾರಿಯಲ್ಲಿ ಎಲ್ಲಾ ವಿಧದ ಸಂಗೀತ ವಾದ್ಯಗಳನ್ನು ಬಹಳ ಜೋರಾಗಿ ಬಾರಿಸಿಕೊಂಡು, ಬೀದಿಯಲ್ಲಿ ಪಟಾಕಿಯನ್ನು ಸಿಡಿಸುವುದರಿಂದ ದೇವಾಲಯದ ಸುತ್ತಮುತ್ತ ಶಬ್ದಮಾಲಿನ್ಯ ಬಹಳ ಹೆಚ್ಚಾಗಿದೆ. ಆದ ಕಾರಣ, ಈ ಶಬ್ದಮಾಲಿನ್ಯದಿಂದ ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಬಹಳ ತೊಂದರೆಯಾಗುತ್ತಿದೆ. ಅಲ್ಲದೆ, ಈ ಸಂದರ್ಭಗಳಲ್ಲಿ ನೂಕು ನುಗ್ಗಲು ಕೂಡ ಹೆಚ್ಚಾಗುವುದರಿಂದ ಭಕ್ತರ ಸುರಕ್ಷತೆಗೆ ಧಕ್ಕೆಯಾಗುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು.
ಆದ್ದರಿಂದ, ದಿನೇ ದಿನೇ ಶಿರಡಿಗೆ ಹರಿದುಬರುತ್ತಿರುವ ಸಾಯಿ ಭಕ್ತ ಸಾಗರದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಯಾವುದೇ ಅಹಿತಕರ ಘಟನೆಗಳೂ ಸಂಭವಿಸದೆ ಇರದಂತೆ ಮಾಡುವ ಸಲುವಾಗಿ ಹೊಸ ಭಕ್ತ ನಿವಾಸ (500 ಕೋಣೆ) ದಿಂದ ಶಿರಡಿ ಪೋಲಿಸ್ ಠಾಣೆಯವರೆಗಿನ ವ್ಯಾಪ್ತಿ ಪ್ರದೇಶದಲ್ಲಿ ಪಲ್ಲಕ್ಕಿ ಯಾತ್ರಿಗಳ ಪಟಾಕಿ ಸಿಡಿಸುವಿಕೆ ಹಾಗೂ ಸಂಗೀತ ವಾದ್ಯಗಳಿಗೆ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ. ಸಾಯಿಭಕ್ತರು ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ನೀಡಬೇಕೆಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಂಡರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 28ನೇ ಜನವರಿ 2013, ಶನಿವಾರ ದಂದು ಸಾಮಾನ್ಯ ಜ್ಞಾನ ಆಧಾರಿತ ರಸಪ್ರಶ್ನೆ ಕಾರ್ಯಕ್ರಮವನ್ನು ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಶಿರಡಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಕಲಿಯುವಿಕೆಯಲ್ಲಿ ಉತ್ಸುಕತೆ, ಶೋಧನಾ ಮನೋಭಾವ, ಆತ್ಮ ಸ್ಥೈರ್ಯ, ಸ್ಪರ್ಧಾ ಮನೋಭಾವ, ತಾರ್ಕಿಕ ಚಿಂತನಾ ಪ್ರವೃತ್ತಿ, ಗಮನವಿಟ್ಟು ಕೇಳುವ ಕುಶಲತೆ, ಮಾತುಗಾರಿಕೆ, ಚರ್ಚೆ ಮಾಡುವ ಕುಶಲತೆ, ಉಚ್ಚಾರಣಾ ರೀತಿ ಮತ್ತು ವ್ಯಕ್ತಿತ್ವ ವಿಕಸನಕ್ಕಾಗಿ ಈ ರಸಪ್ರಶ್ನೆಯನ್ನು ಆಯೋಜಿಸಲಾಗಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ವಿಷಯಗಳಾದ ಗಣಿತ, ವಿಜ್ಞಾನ, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ಕ್ರೀಡೆ, ಪ್ರಚಲಿತ ವಿದ್ಯಮಾನಗಳು ಹಾಗೂ ಭಾಷೆಯ ವಿಷಯಗಳಿಂದ ಆಯ್ದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಉಪಾಧ್ಯಾಯರಿಗೆ ಉಚಿತವಾಗಿ ಟೀ, ಲಘು ಉಪಹಾರ ಹಾಗೂ ಭೋಜನವನ್ನು ನೀಡಲಾಗುತ್ತದೆ. ಹೊರ ಊರುಗಳಿಂದ ಭಾಗವಹಿಸುವ ವಿದ್ಯಾರ್ಥಿ ಹಾಗೂ ಉಪಾಧ್ಯಾಯರಿಗೆ ಉಚಿತ ವಸತಿಯನ್ನು ಸಹ ಕಲ್ಪಿಸಲಾಗುತ್ತದೆ, ಆದರೆ ಪ್ರಯಾಣ ಭತ್ಯೆಯನ್ನು ಸ್ಪರ್ಧಿಗಳೇ ಭರಿಸಬೇಕಾಗಿರುತ್ತದೆ. ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರನ್ನು saibabacollegeshirdi@gmail.com ಅಥವಾ www.saibabacollegeshirdi.in ಮುಖಾಂತರವಾಗಿ 16ನೇ ಜನವರಿ 2014 ರ ಒಳಗಡೆ ನೀಡಿ ನೋಂದಣಿ ಮಾಡಿಕೊಳ್ಳಲು ಈ ಮುಖಾಂತರ ಮನವಿ ಮಾಡ ಲಾಗಿದೆ. ಸ್ಪರ್ಧೆಯ ದಿನದಂದು ವಿದ್ಯಾರ್ಥಿಗಳು ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಸಹಿ ಮಾಡಿರುವ ಪತ್ರವನ್ನು ತಪ್ಪದೆ ಸಲ್ಲಿಸಬೇಕಾಗಿರುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 2,101 ರೂಪಾಯಿಗಳ ಪ್ರಥಮ ಬಹುಮಾನ, 1,501 ರೂಪಾಯಿಗಳ ದ್ವಿತೀಯ ಬಹುಮಾನ, 1,101 ರೂಪಾಯಿಗಳ ತೃತೀಯ ಬಹುಮಾನ ಹಾಗೂ 501 ರೂಪಾಯಿಗಳ ಎರಡು ಸಮಾಧಾನಕರ ಬಹುಮಾನವನ್ನು ನೀಡಲಾಗುತ್ತದೆ. ಅಲ್ಲದೇ ಪಾರಿತೋಷಕ ಹಾಗೂ ಪ್ರಶಂಸಾ ಪತ್ರವನ್ನು ಸಹ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿರಡಿ ಸಾಯಿಬಾಬಾ ಹೈಯರ್ ಸೆಕೆಂಡರಿ ಶಾಲೆಯನ್ನು ದೂರವಾಣಿ ಸಂಖ್ಯೆಗಳಾದ (02423) 259634, 259635 , 258500 &
+91 95535 00537 ಮುಖಾಂತರ ಸಂಪರ್ಕಿಸಬೇಕಾಗಿ ಕೋರಲಾಗಿದೆ. ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ 16 ಹಳ್ಳಿಗಳಿಗೆ ಉಚಿತ ಸಂಚಾರಿ ವೈದ್ಯಕೀಯ ಘಟಕದ ವಿಸ್ತರಣೆ - ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಪ್ರಯೋಗಾರ್ಥವಾಗಿ ಪ್ರಾರಂಭಿಸಲಾದ ಉಚಿತ ಸಂಚಾರಿ ವೈದ್ಯಕೀಯ ಘಟಕವು ಅತ್ಯುತ್ತಮ ಸೇವೆಯನ್ನು ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದ ಕಾರಣ, ಶಿರಡಿ ಸಾಯಿಬಾಬಾ ಸಂಸ್ಥಾನವು ಈ ಸೌಲಭ್ಯವನ್ನು 16 ಹಳ್ಳಿಗಳಿಗೆ ವಿಸ್ತರಿಸಬೇಕೆಂದು ತೀರ್ಮಾನಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಶಿರಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಾವಿರಾರು ಬಡ ಜನರು ವಾಸಿಸುತ್ತಿದ್ದು ಅವರುಗಳು ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗಳಿಗೆ ಅಥವಾ ಕ್ಲಿನಿಕ್ ಗಳಿಗೆ ಹೋಗಲು ಸಮರ್ಥರಾಗಿಲ್ಲ. ಅಲ್ಲದೆ, ಈ ಹಳ್ಳಿಗಳಲ್ಲಿ ಈಗಲೂ ಅಂಧಶ್ರದ್ಧೆ ಹಾಗೂ ಹಣಕಾಸಿನ ತೊಂದರೆಯಿರುವ ಕಾರಣ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ಈ ಬಡ ಜನರು ವೈದ್ಯಕೀಯ ನೆರವನ್ನು ಪಡೆಯಲು ಸಮರ್ಥರಾಗಿಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಶಿರಡಿ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯು ಉಚಿತ ಸಂಚಾರಿ ವೈದ್ಯಕೀಯ ಘಟಕವನ್ನು ಪ್ರಾರಂಭಿಸಲು ನಿರ್ಧರಿಸಿತ್ತು. ಅದರಂತೆ ಕಳೆದ ವರ್ಷದ ಪವಿತ್ರ ಮಕರ ಸಂಕ್ರಾಂತಿಯ ದಿನ ಅಂದರೆ 14ನೇ ಜನವರಿ 2013 ರಂದು ಶುಭ ಮಹೂರ್ತದಲ್ಲಿ ಈ ಸಂಚಾರಿ ಘಟಕದ ಉದ್ಘಾಟನೆಯಾಗಿತ್ತು. ಪ್ರಾಯೋಗಿಕವಾಗಿ ಈ ಸಂಚಾರಿ ಘಟಕವು ನಂದುರ್ಕಿ,ಕುರ್ಡ್,ವೇಸ್,ಭದ್ರಾಪುರ್,ರಂಜನ್ ಗಾವ್, ದೇಶಮುಖ್, ಕಾಕಡಿ ಹಳ್ಳಿಗಳಿಗೆ ನಿಯಮಿತವಾಗಿ ಸಂಚಾರ ಮಾಡುತ್ತಿದ್ದು ಈ ಹಳ್ಳಿಗಳ ಜನರು ಈ ಉಚಿತ ಸಂಚಾರಿ ಘಟಕವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಷ್ಟೇ ಅಲ್ಲದೆ ಅದರ ಪ್ರಯೋಜನವನ್ನೂ ಸಹ ಪಡೆಯುತ್ತಿದ್ದಾರೆ. 14ನೇ ಜನವರಿ 2013 ರಿಂದ 31ನೇ ಡಿಸೆಂಬರ್ 2013 ರವರೆಗೂ ಒಟ್ಟು
28,343 ರೋಗಿಗಳು ಇದರ ಲಾಭವನ್ನು ಪಡೆದಿದ್ದಾರೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು.
ಉಚಿತ ವೈದ್ಯಕೀಯ ಸಂಚಾರಿ ಘಟಕದ ಪ್ರಯೋಜನವನ್ನು ಪಡೆದ ಜನರು ನೀಡಿದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಶಿರಡಿ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯು ಇನ್ನೂ 4 ಹಳ್ಳಿಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಣೆ ಮಾಡಿದೆ. ಹಳ್ಳಿಗಳಾದ ನಂದುರ್ಕಿ,ಕುರ್ಡ್,ವಾಲ್ಕಿ, ವೇಸ್,ಭದ್ರಾಪುರ್, ಪಿಂಪಲಾಸ್, ಕೇಲ್ವಾಡ್, ರಂಜನ್ ಗಾವ್, ದೇಶಮುಖ್, ಕಾಕಡಿ, ನಿರ್ಮಲ್ ಪಿಂಪ್ರಿ, ಮೊರವಾಡಿ, ಚೌಲ್ಕೆವಾಡಿ, ರಂಜನ್ ಗಾವ್ ಕೂ, ನಾಪವಾಡಿ, ರಾಮಪುರವಾಡಿ, ಏಕರುಕೆ ಮತ್ತು ಗಣೇಶನಗರ್ ಗಳಿಗೆ ಸರದಿ ಆಧಾರದ ಮೇಲೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ, ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ಇನ್ನೂ ಹೆಚ್ಚು ಸಂಚಾರಿ ವೈದ್ಯಕೀಯ ವಾಹನಗಳನ್ನು ಖರೀದಿಸಲು ಸಹ ನಿರ್ಧರಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆರಡು ವಾಹನಗಳ ಸೇರ್ಪಡೆಯಾಗಲಿದೆ. ಶಿರಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಬಡ ರೋಗಿಗಳು ಈ ಘಟಕಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಶ್ರೀ.ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಂಡರು.
ಮರಾಠಿಯಿಂದ ಆಂಗ್ಲ ಭಾಷೆಗೆ ತರ್ಜುಮೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
Monday, January 13, 2014
ಖ್ಯಾತ ಸಾಯಿ ಬಂಧು ಶ್ರೀ.ಮಾಸಿಲಪುರಂ ಮಾಣಿಕ್ಯಂ ಆಲಿಯಾಸ್ "ಉಧಿ ಬಾಬಾ" ಇನ್ನಿಲ್ಲ - ಕೃಪೆ:ಸಾಯಿಅಮೃತಧಾರಾ.ಕಾಂ
ಖ್ಯಾತ ಸಾಯಿ ಬಂಧು ಶ್ರೀ.ಮಾಸಿಲಪುರಂ ಮಾಣಿಕ್ಯಂ ಆಲಿಯಾಸ್ "ಉಧಿ ಬಾಬಾ" ರವರು ಇದೇ ತಿಂಗಳ 13ನೇ ಜನವರಿ 2014, ಸೋಮವಾರ ದಂದು ಬೆಳಿಗ್ಗೆ ತಮಿಳುನಾಡಿನ ವೆಲ್ಲೂರಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾದರೆಂದು ತಿಳಿಸಲು
ವಿಷಾದಿಸುತ್ತೇವೆ.ಅವರಿಗೆ 60 ವರ್ಷ ವಯಸ್ಸಾಗಿತ್ತು. ಇವರು ತಮಿಳುನಾಡು ಸರ್ಕಾರದ ಸಹಕಾರಿ ಇಲಾಖೆಯಲ್ಲಿ ಸಹಾಯಕ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ಉಧಿ ಬಾಬಾರವರು ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತಿರುವ ಸಾವಿರಾರು ರೋಗಿಗಳ ಹಣೆಯ ಮೇಲೆ ಸಾಯಿಬಾಬಾರವರ ಪವಿತ್ರ ಉಧಿಯನ್ನು ಹಚ್ಚುವ ಮುಖಾಂತರ ಅವರ ಖಾಯಿಲೆಗಳನ್ನು ಗುಣಪಡಿಸುವುದಕ್ಕೆ ಹೆಸರುವಾಸಿಯಾಗಿದ್ದರು. ಸರ್ಕಾರಿ ವೃತ್ತಿಯಿಂದ ನಿವೃತ್ತರಾದ ನಂತರ ಇವರು
ಒಂದು ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಮುಖಾಂತರ ಪ್ರತಿ ವರ್ಷ ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡುವ ಉತ್ತಮ ಕೆಲಸವನ್ನು ಮಾಡುತ್ತಿದ್ದರು. ಇತ್ತೀಚೆಗಷ್ಟೇ ಅಂದರೆ 1ನೇ ಜನವರಿ 2014 ರಂದು ಸಾಯಿಬಾಬಾರವರ ದರ್ಶನವನ್ನು ಮಾಡಿ ಶಿರಡಿಯಿಂದ ಹಿಂತಿರುಗಿದ್ದರು.
ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ ಹಾಗೂ ಸಾಯಿಅಮೃತವಾಣಿ ಬ್ಲಾಗ್ ನ ತಂಡವು ಈ ಖ್ಯಾತ
ಸಾಯಿ ಬಂಧುವಿನ ಅಕಾಲಿಕ ಮರಣಕ್ಕೆ ಅತೀವ ಶೋಕವನ್ನು ವ್ಯಕ್ತಪಡಿಸುತ್ತದೆ ಹಾಗೂ ಅವರ
ಆತ್ಮಕ್ಕೆ ಶಾಂತಿ ಸಿಗಲೆಂದು ಸಾಯಿಬಾಬಾರವರಲ್ಲಿ ಪ್ರಾರ್ಥನೆ ಮಾಡುತ್ತದೆ. ಅಲ್ಲದೇ, ಅವರ
ಮನೆಯವರಿಗೆ ಈ ಅಕಾಲಿಕ ಮರಣದ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು
ಸಾಯಿಬಾಬಾರವರನ್ನು ಪ್ರಾರ್ಥಿಸುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Sunday, January 12, 2014
ಸಾಯಿ ಮಹಾಭಕ್ತ - ಶ್ರೀ.ಗೋಪಾಲ್ ರಾವ್ ಮುಕುಂದ್ ಆಲಿಯಾಸ್ ಬಾಪು ಸಾಹೇಬ್ ಬೂಟಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಗೋಪಾಲ್ ರಾವ್ ಮುಕುಂದ್ ಆಲಿಯಾಸ್ ಬಾಪು ಸಾಹೇಬ್ ಬೂಟಿಯವರು ನಾಗಪುರದ ಶ್ರೀಮಂತರು ಹಾಗೂ ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು 1910 ನೇ ಇಸವಿಯಲ್ಲಿ ಮತ್ತೊಬ್ಬ ಸಾಯಿಭಕ್ತ ಶ್ರೀ.ಎಸ್.ಬಿ.ಧುಮಾಳ್ ರವರ ಮುಖಾಂತರ ಸಾಯಿ ಭಕ್ತರಾಗಿ ರೂಪುಗೊಂಡರು. ಇವರು ತಮ್ಮ ಮನೆಯವರೊಂದಿಗೆ ಶಿರಡಿಗೆ ಬಂದು ಶಾಶ್ವತವಾಗಿ ನೆಲೆಸಿ ಸಾಯಿಬಾಬಾರವರ ಸೇವೆಯನ್ನು ಮಾಡಿದರು. ಸಾಯಿಬಾಬಾರವರು ಇವರನ್ನು "ಭೂತಯ್ಯ" ಎಂದು ಸಂಬೋಧಿಸುತ್ತಿದ್ದರು.
ಬೂಟಿಯವರು ಶಿರಡಿಯಲ್ಲಿ ಒಂದು ಭೂಮಿಯನ್ನು ಖರೀದಿ ಮಾಡಿ ಮನೆಯನ್ನು ನಿರ್ಮಿಸಿ ಅಲ್ಲೇ ಶಾಶ್ವತವಾಗಿ ವಾಸ ಮಾಡಬೇಕೆಂದು ಹಲವಾರು ಬಾರಿ ಯೋಚನೆ ಮಾಡುತ್ತಿದ್ದರು. ಪ್ರತಿದಿನ ಮಧ್ಯಾನ್ಹದ ಆರತಿಯ ನಂತರ ಮಸೀದಿಗೆ ತೆರಳಿ ಅಲ್ಲಿ ಸಾಯಿಬಾಬಾರವರ ಎಡಗಡೆ ಕುಳಿತು ಅವರೊಂದಿಗೆ ಮಧ್ಯಾನ್ಹದ ಭೋಜನವನ್ನು ಸ್ವೀಕರಿಸುತ್ತಿದ್ದರು.
ಒಮ್ಮೆ ಬೂಟಿಯವರಿಗೆ ವಾಂತಿ ಹಾಗೂ ಆಮಶಂಕೆ ಆರಂಭವಾಯಿತು. ಅವರ ಬಳಿಯಿದ್ದ ಎಲ್ಲಾ ಬಗೆಯ ಔಷಧಿಗಳನ್ನು ತೆಗೆದುಕೊಂಡರೂ ರೋಗ ಗುಣವಾಗಲಿಲ್ಲ. ಇದರಿಂದ ಬೂಟಿಯವರ ಹೆದರಿಕೆ ಪ್ರಾರಂಭವಾಯಿತು. ಹಲವಾರು ಬಾರಿ ವಾಂತಿ ಹಾಗೂ ಭೇದಿಯಾದ ಕಾರಣ ಬಹಳ ಆಯಾಸವಾಗಿದ್ದರಿಂದ ಮಸೀದಿಗೆ ಹೋಗಲೂ ಸಹ ತ್ರಾಣವಿಲ್ಲದಂತಾಯಿತು. ಬಾಬಾರವರಿಗೆ ಈ ವಿಷಯ ತಿಳಿಯಿತು. ಬಾಬಾರವರು ಅವರನ್ನು ಕರೆಯಿಸಿ ತಮ್ಮ ಮುಂದೆ ಕೂರಿಸಿಕೊಂಡು "ಎಚ್ಚರದಿಂದಿರು! ಇನ್ನು ನೀನು ವಾಂತಿ ಮಾಡಕೂಡದು" ಎಂದು ತಮ್ಮ ತೋರುಬೆರಳನ್ನು ಸೂಚಿಸುತ್ತಾ ಹೇಳಿದರು. ಆ ಕೂಡಲೇ ಬೂಟಿಯವರ ವಾಂತಿ ಮತ್ತು ಭೇದಿ ನಿಂತಿತು. ಹಿಂದೆ ಇನ್ನೊಂದು ಸಂದರ್ಭದಲ್ಲಿ ಅವರಿಗೆ ಕಾಲರಾ ಜಾಡ್ಯವು ಅಂಟಿಕೊಂಡು ಬಹಳ ಬಾಯಾರಿಕೆಯಿಂದ ಬಳಲುತ್ತಿದ್ದರು. ಡಾ.ಪಿಳ್ಳೆಯವರು ಅವರಿಗೆ ಅನೇಕ ಔಷಧೋಪಚಾರಗಳನ್ನು ಮಾಡಿದರು. ಆದರೂ ರೋಗ ಗುಣವಾಗಲಿಲ್ಲ. ಆಗ ಬೂಟಿಯವರು ಬಾಬಾರವರಲ್ಲಿಗೆ ಧಾವಿಸಿದರು. ಬಾಬಾರವರು "ಬಾದಾಮಿ, ಆಕ್ರೋಟು, ಪಿಸ್ತಾ - ಈ 3 ವಸ್ತುಗಳನ್ನು ಅರೆದು, ಸಕ್ಕರೆ ಹಾಕಿ ಹಾಲಿನಲ್ಲಿ ಸೇರಿಸಿ ಬೇಯಿಸಿ ಕುಡಿ" ಎಂದರು. ಬೇರೆ ವೈದ್ಯರನ್ನು ಕೇಳಿದರೆ ಇದರಿಂದ ರೋಗ ಹೆಚ್ಚಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಬೂಟಿಯವರು ಸಾಯಿಬಾಬಾರವರ ಆಜ್ಞೆಯನ್ನು ಪಾಲಿಸಿ ಈ ಔಷಧಿಯನ್ನು ತಯಾರಿಸಿ ಕುಡಿದರು. ಅವರ ರೋಗ ಆ ಕೂಡಲೇ ಗುಣವಾಯಿತು (ಶ್ರೀ ಸಾಯಿ ಸಚ್ಚರಿತ್ರೆ 13ನೇ ಅಧ್ಯಾಯ).
ಒಮ್ಮೆ ಪ್ರಸಿದ್ಧ ಜ್ಯೋತಿಷಿಯಾದ ಶ್ರೀ ನಾನಾ ಸಾಹೇಬ್ ಡೇಂಗಳೆಯವರು ಬಾಪು ಸಾಹೇಬ್ ಬೂಟಿಯವರಿಗೆ "ಈ ದಿನ ನಿಮಗೆ ಗ್ರಹಗತಿಗಳು ಸರಿಯಾಗಿಲ್ಲ, ಅಪಾಯವಿದೆ, ಎಚ್ಚರಿಕೆಯಿಂದಿರಿ" ಎಂದರು. ಬಾಪು ಸಾಹೇಬರು ಇದರಿಂದ ಗಾಬರಿಯಾದರು. ಮನದಲ್ಲಿ ಚಿಂತೆ ಮಾಡಲು ಪ್ರಾರಂಭಿಸಿದರು. ಎಂದಿನಂತೆ ಆ ದಿನ ಅವರು ಮಸೀದಿಗೆ ಬಂದಾಗ ಬಾಬಾರವರು "ನಾನಾ ನಿನಗೇನು ಹೇಳಿದರು? ನಿನಗೆ ಈ ದಿನ ಮರಣ ಸಂಭವವಿದೆಯೆಂದು ಹೇಳಿರುತ್ತಾರೆ ಅಲ್ಲವೇ? ನೀನೇನೂ ಹೆದರಬೇಡ. ಹೇಗೆ ಆ ಮೃತ್ಯುವು ನಿನ್ನನ್ನು ಕೊಲ್ಲುವುದೋ ನೋಡೋಣ" ಎಂದರು. ಆ ದಿನ ಸಂಜೆ ಬಾಪು ಸಾಹೇಬರು ತಮ್ಮ ಬಹಿರ್ದಷೆಯನ್ನು ತೀರಿಸುವ ಸಲುವಾಗಿ ಮನೆಯ ಹಿತ್ತಲಿಗೆ ಹೋಗಿದ್ದಾಗ ಅಲ್ಲಿ ಒಂದು ಸರ್ಪವನ್ನು ಕಂಡರು. ಅಲ್ಲಿಯೇ ಇದ್ದ ಅವರ ಮನೆಯ ಜವಾನ ಲಹಾಣು ಸರ್ಪವನ್ನು ಹೊಡೆಯಲು ಕಲ್ಲನ್ನು ಎತ್ತಿದನು. ಆದರೆ ಬಾಪು ಸಾಹೇಬರು ಅವನನ್ನು ತಡೆದು ಒಂದು ದೊಡ್ಡ ಕೋಲನ್ನು ತರುವಂತೆ ಹೇಳಿ ಕಳುಹಿಸಿದರು. ಜವಾನನು ಕೋಲನ್ನು ತರುವುದರೊಳಗಾಗಿ ಆ ಸರ್ಪವು ಗೋಡೆಯಿಂದ ಕೆಳಗೆ ಇಳಿಯುವಾಗ ಆಯತಪ್ಪಿ ಬಿದ್ದು ಅಲ್ಲಿಯೇ ಇದ್ದ ಒಂದು ಸಂದಿಯಲ್ಲಿ ಮಾಯವಾಯಿತು. ಆಗ ಬಾಪು ಸಾಹೇಬರು ಬಾಬಾರವರ ಮಾತುಗಳನ್ನು ಜ್ಞಾಪಕಕ್ಕೆ ತಂದುಕೊಂಡು ಸಂತೋಷಭರಿತರಾದರು (ಶ್ರೀ ಸಾಯಿ ಸಚ್ಚರಿತ್ರೆ, 22ನೇ ಅಧ್ಯಾಯ).
ಒಮ್ಮೆ ಬೂಟಿಯವರು ದೀಕ್ಷಿತವಾಡಾದ ಮೇಲ್ಮಹಡಿಯಲ್ಲಿ ಮಲಗಿದ್ದಾಗ ಕನಸಿನಲ್ಲಿ ಬಾಬಾರವರು ದರ್ಶನ ನೀಡಿ "ನಿನ್ನದೇ ಆದ ಒಂದು ಧರ್ಮಶಾಲೆಯನ್ನು ದೇವಸ್ಥಾನ ಸಹಿತ ನಿರ್ಮಾಣ ಮಾಡು" ಎಂದರು. ಅಲ್ಲಿಯೇ ಪಕ್ಕದಲ್ಲಿ ಮಲಗಿದ್ದ ಶ್ಯಾಮ ಅವರಿಗೂ ಅದೇ ತರಹದ ಕನಸು ಬಿದ್ದಿತು. ಕೂಡಲೇ ಎಚ್ಚರಗೊಂಡ ಬಾಪು ಸಾಹೇಬರು ಅಳುತ್ತಿದ್ದ ಶ್ಯಾಮ ಅವರನ್ನು ನೋಡಿ ಏಕೆ ಅಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರು. ಆಗ ಶ್ಯಾಮ "ಬಾಬಾರವರು ನನ್ನ ಕನಸಿನಲ್ಲಿ ದರ್ಶನ ನೀಡಿ ದೇವಸ್ಥಾನ ಸಹಿತವಾದ ವಾಡಾ ನಿರ್ಮಾಣ ಮಾಡು ಎಂದು ಆಜ್ಞಾಪಿಸಿದರು. ಅವರ ವಾಣಿಯನ್ನು ಕೇಳಿ ಆನಂದಭರಿತನಾದೆ. ಆದುದರಿಂದಲೇ ಆನಂದಬಾಷ್ಪ ಸುರಿಯುತ್ತಿದೆ" ಎಂದು ಹೇಳಿದರು. ಇಬ್ಬರ ಕನಸೂ ಒಂದೇ ಆಗಿರುವುದನ್ನು ಕಂಡು ಬೂಟಿಯವರಿಗೆ ಅಚ್ಚರಿಯಾಯಿತು. ಕೂಡಲೇ ವಾಡಾ ನಿರ್ಮಾಣಕ್ಕೋಸ್ಕರ ಶ್ಯಾಮ ಅವರೊಡನೆ ಕಲೆತು ಒಂದು ಯೋಜನೆಯನ್ನು ತಯಾರಿಸಿದರು. ಕಾಕಾ ಸಾಹೇಬ್ ದೀಕ್ಷಿತರೂ ಆ ಯೋಜನೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಮಾರನೇ ದಿನ ಬೆಳಿಗ್ಗೆ ಆ ಯೋಜನೆಯನ್ನು ಸಾಯಿಬಾಬಾರವರ ಮುಂದೆ ಇರಿಸಲಾಯಿತು. ಬಾಬಾರವರೂ ಕೂಡ ಆ ಯೋಜನೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
ಹೀಗೆ ಬೂಟಿವಾಡಾದ ನಿರ್ಮಾಣ ಕಾರ್ಯವು ಸರಿ ಸುಮಾರು 30ನೇ ಡಿಸೆಂಬರ್ 1915 ರ ಹೊತ್ತಿಗೆ ಆರಂಭವಾಯಿತು (ಖಾಪರ್ಡೆ ಡೈರಿ, ಪುಟ ಸಂಖ್ಯೆ 123). ಶ್ಯಾಮರವರು ಕೂಡಲೇ ಕಾರ್ಯತತ್ಪರರಾಗಿ ಕೆಲಸವನ್ನು ಪ್ರಾರಂಭಿಸಿ ನೆಲಮಾಳಿಗೆ ಹಾಗೂ ನೆಲ ಅಂತಸ್ತನ್ನು ಪೂರ್ಣಗೊಳಿಸಿದರು. ಭಾವಿಯ ನಿರ್ಮಾಣವನ್ನು ಕೂಡ ಪೂರ್ಣಗೊಳಿಸಿದರು. ಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಮತ್ತು ಬರುವಾಗ ನಿಂತು ನಿರ್ಮಾಣ ಕಾರ್ಯವನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರು ಲೇಂಡಿಗೆ ಹೋಗುತ್ತಿರುವಾಗ "ಆ ಬಾಗಿಲನ್ನು ಇಲ್ಲಿ ಇರಿಸು. ಕಿಟಕಿಯನ್ನು ಇಲ್ಲಿ ಇರಿಸು. ಮಹಾದ್ವಾರವನ್ನು ಪೂರ್ವಕ್ಕೆ ಇರಿಸು. ಇದರಿಂದ ಅಂದ ಹೆಚ್ಚುತ್ತದೆ" ಎಂದು ಸೂಚಿಸಿದರು. ನಿರ್ಮಾಣದ ಮೇಲ್ವಿಚಾರಣೆಯನ್ನು ಬಾಪು ಸಾಹೇಬರೇ ವಹಿಸಿಕೊಂಡಿದ್ದರು. ಈ ರೀತಿ ಕೆಲಸ ಸಾಗುತ್ತಿರುವಾಗ ಮಧ್ಯದ ಅಂಗಳದಲ್ಲಿ ಮುರಳೀಧರನ ಪ್ರತಿಮೆಯನ್ನು ಇಡಬೇಕೆಂಬ ಬಯಕೆ ಬೂಟಿಯವರ ಮನದಲ್ಲಿ ಬಂದಿತು. ಇದನ್ನು ಬಾಬಾರವರಿಗೆ ತಿಳಿಸಲು ಶ್ಯಾಮ ಅವರಿಗೆ ಹೇಳಿದರು. ಶ್ಯಾಮ ಅವರು ಬಾಬಾ ಅವರನ್ನು ಕೇಳಲಾಗಿ ಅವರು ತಮ್ಮ ಸಮ್ಮತಿಯನ್ನು ಸೂಚಿಸಿದರು. ದೇವಾಲಯ ಪೂರ್ತಿಯಾದ ನಂತರ ನಾನೇ ಅಲ್ಲಿಗೆ ಬಂದು ವಾಸಿಸುವೆನೆಂದು ನುಡಿದರು. ನಂತರ ವಾಡಾವನ್ನು ನೋಡಿ "ನಾವೇ ಈ ವಾಡಾವನ್ನು ಉಪಯೋಗಿಸೋಣ. ಅಲ್ಲಿಯೇ ವಾಸ ಮಾಡೋಣ" ಎಂದು ಹೇಳಿದರು. ಆಗ ಶ್ಯಾಮ ಅವರು ಮಧ್ಯದ ಅಂಗಳದಲ್ಲಿ ಪೂಜಾಸ್ಥಳಕ್ಕೆ ತಳಪಾಯ ಹಾಕಲು ಈ ದಿವಸ ಪ್ರಶಸ್ತವಾಗಿದೆಯೇ ಎಂದು ಕೇಳಲು ಬಾಬಾರವರು "ಸರಿಯಾಗಿದೆ" ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಶ್ಯಾಮರವರು ಕೂಡಲೇ ಪೂಜೆ ಮಾಡಿ ತೆಂಗಿನಕಾಯಿಯನ್ನು ಒಡೆದು ಕಾರ್ಯವನ್ನು ಆರಂಭಿಸಿದರು. ಅಂದುಕೊಂಡಂತೆ ಸಮಯಕ್ಕೆ ಸರಿಯಾಗಿ ಎಲ್ಲಾ ಕೆಲಸವೂ ಸಂಪೂರ್ಣವಾಯಿತು. ಮುರಳೀಧರನ ಪ್ರತಿಮೆಯ ತಯಾರಿಕೆಗೂ ಹೇಳಿದ್ದರು. ಆದರೆ ಆ ಪ್ರತಿಮೆ ತಯಾರಾಗುವ ಮೊದಲೇ ಪರಿಸ್ಥಿತಿ ಬದಲಾಯಿತು. ಬಾಬಾರವರು ತೀವ್ರ ಜ್ವರದಿಂದ ಹಾಸಿಗೆ ಹಿಡಿದರು. ಬಾಪು ಸಾಹೇಬರು ತಮ್ಮ ವಾಡಾ ಬಾಬಾರವರ ಪಾದಧೂಳಿಯಿಂದ ಪವಿತ್ರವಾಗುವುದೋ ಇಲ್ಲವೋ ಎಂದು ಅತ್ಯಂತ ಕಳವಳದಿಂದಿದ್ದರು. ಬಾಬಾರವರು ಗತಿಸುವ ಮೊದಲು ನನ್ನನ್ನು ವಾಡಾಕ್ಕೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಅದರಿಂದ ಅವರೆಲ್ಲರಿಗೂ ಸಮಾಧಾನವಾಯಿತು. ಬಾಬಾರವರು ಇಹಲೋಕವನ್ನು ತ್ಯಜಿಸಿದ ನಂತರ ತಕ್ಕ ಮರ್ಯಾದೆ ಮತ್ತು ಸಂಭ್ರಮದಿಂದ ಮುರಳೀಧರನ ಪ್ರತಿಮೆಗೋಸ್ಕರ ಮೀಸಲಾಗಿಟ್ಟಿದ್ದ ಸ್ಥಳದಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ನಿಜವಾಗಿ ಹೇಳಬೇಕೆಂದರೆ ಸಾಯಿಬಾಬಾರವರೇ ಮುರಳೀಧರನಾದರು. ಇದೇ ಈಗಿರುವ ಸಮಾಧಿ ಮಂದಿರ. ಇದನ್ನು ಶ್ರೀಮಾನ್ ಬೂಟಿಯವರು ನಿರ್ಮಾಣ ಮಾಡಿದ್ದರಿಂದ "ಬೂಟಿವಾಡಾ" ಎಂಬ ಹೆಸರು ಬಂದಿತು. ಬಾಬಾರವರ ಪರಮ ಪವಿತ್ರ ಭೌತಿಕ ಶರೀರವನ್ನು ಸಮಾಧಿ ಮಾಡಲ್ಪಟ್ಟಿರುವ ವಾಡಾದ ನಿರ್ಮಾಪಕರಾದ ಶ್ರೀಮಾನ್ ಬೂಟಿಯವರೇ ಧನ್ಯರು. ಸಾಯಿಬಾಬಾರವರು ಈ ವಾಡಾವನ್ನು "ಡಗ್ಡೀವಾಡಾ" (ಕಲ್ಲಿನ ಕಟ್ಟಡ) ಎಂದು ಕರೆಯುತ್ತಿದ್ದರು. ಬಾಪೂ ಸಾಹೇಬ್ ಬೂಟಿಯವರು ವಾಡಾದ ಸಂರಕ್ಷಣೆಗಾಗಿ ಪ್ರತಿವರ್ಷ 500 ರೂಪಾಯಿಗಳನ್ನು ನೀಡುತ್ತಿದ್ದರು. (ಶ್ರೀ ಸಾಯಿ ಸಚ್ಚರಿತ್ರೆ, 39ನೇ ಅಧ್ಯಾಯ).
ಸಾಯಿಬಾಬಾರವರ ಸಮಾಧಿ ಮಂದಿರದ ಪೂಜಾ ಕಾರ್ಯಗಳ ಮೇಲ್ವಿಚಾರಣೆಗಾಗಿ 27ನೇ ಅಕ್ಟೋಬರ್ 1918 ರಂದು ಶ್ರೀ ಬಾಪು ಸಾಹೇಬ್ ಬೂಟಿಯವರ ನೇತೃತ್ವದಲ್ಲಿ 15 ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಬೂಟಿಯವರು ಕಾಕಾ ಸಾಹೇಬ್ ದೀಕ್ಷಿತ್ ರವರನ್ನು ಬಾಬಾ ಸಮಾಧಿಯನ್ನು ನೋಡಿಕೊಳ್ಳಲು ನೇಮಿಸಿದರು.
ಈ ರೀತಿಯಲ್ಲಿ ಬೂಟಿಯವರು ಅತೀವ ಶ್ರದ್ಧಾ ಭಕ್ತಿಯಿಂದ ತಮ್ಮ ಕೊನೆಯ ಉಸಿರಿರುವ ತನಕ ಸಾಯಿಬಾಬಾರವರನ್ನು ಸೇವಿಸಿ ಕಾಲಾನಂತರ 1921ನೇ ಇಸವಿಯಲ್ಲಿ ಮುಂಬೈನಲ್ಲಿ ನಿಧನ ಹೊಂದಿದರು.
(ಆಧಾರ: ಶ್ರೀ ಸಾಯಿ ಸಚ್ಚರಿತ್ರೆ, 13, 22 ಮತ್ತು 39 ಅಧ್ಯಾಯಗಳು)
ಕನ್ನಡ ಅನುವಾದ: ಶ್ರೀಕಂಠ ಶರ್ಮ
Friday, January 10, 2014
ಸಾಯಿ ಮಹಾಭಕ್ತ ಶ್ರೀ.ಚೋಳ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಚೋಳ್ಕರ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು ಮುಂಬೈ ಹತ್ತಿರದ ಥಾಣೆಯ ಸಿವಿಲ್ ನ್ಯಾಯಾಲಯದಲ್ಲಿ ಪರೀಕ್ಷಾ ಅವಧಿಯಲ್ಲಿರುವ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಪ್ರತಿನಿತ್ಯ ಸಂತ ದಾಸಗಣು ಮಹಾರಾಜರ ಕೀರ್ತನೆಯನ್ನು ಕೇಳಲು ಶ್ರೀ ಕೌಪೀನೇಶ್ವರ ದೇವಾಲಯಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದರು. ಒಂದು ದಿನ ದಾಸಗಣುರವರು ಹರಿ ಕೀರ್ತನೆಯನ್ನು ಮಾಡುತ್ತಿದ್ದಾಗ ಇವರ ಹೃದಯದಲ್ಲಿ ಸಾಯಿಬಾಬಾರವರ ಬಗ್ಗೆ ಅತಿಯಾದ ಪ್ರೀತಿ ಉಕ್ಕಿತು. ಆಗ ಅವರು ತಮ್ಮ ಮನದಲ್ಲಿ "ಓ ದಯಾಮಯನಾದ ಸಾಯಿಬಾಬನೇ, ದಯಮಾಡಿ ಈ ಅಸಹಾಯಕ ಪ್ರಾಣಿಯ ಬಗ್ಗೆ ಕನಿಕರ ತೋರು" ಎಂದು ಪ್ರಾರ್ಥನೆ ಮಾಡಿಕೊಂಡರು.
ಶ್ರೀ.ಚೋಳ್ಕರ್ ರವರು ಪರೀಕ್ಷಾವಧಿಯಲ್ಲಿನ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಡಿಮೆ ಸಂಬಳ ಬರುತ್ತಿದ್ದ ಕಾರಣ ಬಡವರಾಗಿದ್ದರು. ಆದ ಕಾರಣ ಸಂಸಾರದ ಭಾರವನ್ನು ಹೊರಲು ಅಸಮರ್ಥರಾಗಿದ್ದು ತಮ್ಮ ಸರ್ಕಾರಿ ನೌಕರಿಯನ್ನು ಖಾಯಂಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಸಾಯಿಬಾಬಾರವರ ಮೇಲೆ ಹೊರಿಸಿದ್ದರು.
ಸಾಮಾನ್ಯವಾಗಿ ಭಕ್ತರು ತಮ್ಮ ಬಯಕೆ ಪೂರ್ಣವಾದರೆ ಒಬ್ಬ ಬ್ರಾಹ್ಮಣನಿಗೆ ಹೊಟ್ಟೆ ತುಂಬಾ ಭೋಜನವಿಡುವುದಾಗಿ ಹರಸಿಕೊಳ್ಳುವ ಪರಿಪಾಠ ಇಟ್ಟುಕೊಂಡಿರುತ್ತಾರೆ. ಶ್ರೀಮಂತ ಭಕ್ತರಾದರೆ ಸಾವಿರಾರು ಬ್ರಾಹ್ಮಣರಿಗೆ ಭೋಜನವಿಡುವುದಾಗಿ ಅಥವಾ ನೂರಾರು ಹಸುಗಳನ್ನು ದಾನ ಮಾಡುವುದಾಗಿ ಹರಸಿಕೊಳ್ಳುತ್ತಾರೆ.
ಆದರೆ ಶ್ರೀ.ಚೋಳ್ಕರ್ ರವರು ಕಡು ಬಡವರಾಗಿದ್ದರು. ಆದ್ದರಿಂದ ಅವರು ಸಾಯಿಬಾಬಾರವರಿಗೆ ವಂದಿಸುತ್ತಾ "ಬಾಬಾ, ನಾನು ಸಂಸಾರ ನಿರ್ವಹಣೆಯನ್ನು ಮಾಡಲಾಗದಿರುವ ಕಡು ಬಡವ. ನಾನು ಈಗ ಮಾಡುತ್ತಿರುವ ಕೆಲಸ ಖಾಯಂ ಆಗಬೇಕಾದರೆ ಇಲಾಖೆಯವರು ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು. ನಾನು ಬಹಳ ಕಷ್ಟಪಟ್ಟು ಚೆನ್ನಾಗಿ ಓದಿ ಪರೀಕ್ಷೆಗೆ ತಯಾರಾಗಿದ್ದೇನೆ. ನಾನು ಈ ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ ಈಗ ಇರುವ ಕೆಲಸ ಸಹ ಕಳೆದುಕೊಳ್ಳುತ್ತೇನೆ. ನಿಮ್ಮ ದಯೆಯಿಂದ ಈ ಸಾರಿ ನನಗೆ ಇಲಾಖೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಖಾಯಂ ಕೆಲಸ ದೊರೆತರೆ ಶಿರಡಿಗೆ ಬಂದು ನಿಮ್ಮ ಪಾದಪದ್ಮಗಳಿಗೆ ವಂದಿಸಿ ನಿಮ್ಮ ಹೆಸರಿನಲ್ಲಿ ನಾನು ಕಲ್ಲುಸಕ್ಕರೆ ಹಂಚುತ್ತೇನೆ" ಎಂದು ಪ್ರಾರ್ಥನೆ ಮಾಡಿಕೊಂಡರು.
ನಂತರ ಸಾಯಿಬಾಬಾರವರ ಆಶೀರ್ವಾದದಿಂದ ಶ್ರೀ.ಚೋಳ್ಕರ್ ರವರು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಖಾಯಂ ಕೆಲಸ ದೊರಕಿತು. ಆಗ ಅವರು ಹರಕೆಯನ್ನು ಪೂರೈಸುವುದೊಂದೆ ಉಳಿಯಿತು. ಈಗಾಗಲೇ ತಿಳಿಸಿದಂತೆ ಶ್ರೀ.ಚೋಳ್ಕರ್ ರವರು ಕಡು ಬಡವರಾದ ಕಾರಣ ಸಂಸಾರ ತಾಪತ್ರಯವಿದ್ದುದರಿಂದ ಶಿರಡಿಗೆ ಹೋಗಲು ಬೇಕಾದ ಹಣದ ಕೊರತೆ ಇದ್ದಿತು. ಆದರೂ ತಮ್ಮ ಖರ್ಚನ್ನು ಹೇಗಾದರೂ ಮಾಡಿ ಕಡಿಮೆ ಮಾಡಬೇಕೆಂದು ನಿರ್ಧಾರ ಮಾಡಿ "ಇಂದಿನಿಂದ ನನ್ನ ದಿನ ನಿತ್ಯದ ಆಹಾರದಲ್ಲಿ ಅಥವಾ ಚಹಾದಲ್ಲಿ ಸಕ್ಕರೆ ಉಪಯೋಗಿಸದೇ ಹಣ ಉಳಿಸುತ್ತೇನೆ" ಎಂದು ಧೃಡ ಸಂಕಲ್ಪ ಮಾಡಿ ಸಕ್ಕರೆಯನ್ನು ಬಳಸುವುದನ್ನೇ ಬಿಟ್ಟುಬಿಟ್ಟರು.
ಈ ರೀತಿ ಹಲವಾರು ತಿಂಗಳುಗಳು ಉರುಳಿದವು. ನಂತರ ಹಣವನ್ನು ಸ್ವಲ್ಪ ಸಲ್ಪವೇ ಕೂಡಿಸಿ ಕೆಲವು ದಿನಗಳ ನಂತರ ಶಿರಡಿಗೆ ಬಂದು ತಮ್ಮ ಹರಕೆಯನ್ನು ಪೂರೈಸಿ, "ನನ್ನ ಬಹು ದಿನಗಳ ಆಸೆಯು ಇಂದು ನೆರವೇರಿತು" ಎಂದು ಮನದಲ್ಲಿ ಅಂದುಕೊಂಡು ಶಿರಡಿ ಸಾಯಿಬಾಬಾರವರ ದಿವ್ಯ ಚರಣಗಳಿಗೆ ಭಕ್ತಿ ಹಾಗೂ ನಮ್ರತೆಯಿಂದ ವಂದಿಸಿದರು. ಅಲ್ಲದೆ ಸಾಯಿಬಾಬಾರವರಿಗೆ ಕಲ್ಲುಸಕ್ಕರೆ ಹಾಗೂ ತೆಂಗಿನಕಾಯಿಯನ್ನು ಅರ್ಪಣೆ ಮಾಡಿದರು.
ಶ್ರೀ.ಚೋಳ್ಕರ್ ರವರು ಬಾಪು ಸಾಹೇಬ್ ಜೋಗ್ ರವರ ಅತಿಥಿಯಾಗಿ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಆದ ಕಾರಣ ಜೋಗ್ ರವರು ಮನೆಗೆ ಹೊರಡಲು ಎದ್ದಾಗ ತಾವೂ ಅವರ ಜೊತೆಗೆ ಎದ್ದು ಹೊರಡಲು ಅನುವಾದರು. ಆಗ ಬಾಬಾರವರು ಜೋಗ್ ರವರನ್ನು ಉದ್ದೇಶಿಸಿ "ಈ ದಿನ ನಿನ್ನ ಅತಿಥಿಗೆ ಚಹಾದಲ್ಲಿ ಹೆಚ್ಚಾಗಿ ಸಕ್ಕರೆ ಹಾಕಿ ಕುಡಿಯಲು ನೀಡು" ಎಂದರು.
ತಮಗೆ ಮಾತ್ರ ತಿಳಿದಿದ್ದ ತಮ್ಮ ಹರಕೆಯ ವಿಷಯ ಸಾಯಿಬಾಬಾರವರಿಗೆ ಗೊತ್ತಾಗಿರುವುದು ತಿಳಿದು ಶ್ರೀ.ಚೋಳ್ಕರ್ ರವರಿಗೆ ಅತ್ಯಂತ ಆಶ್ಚರ್ಯವಾಯಿತು. ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಉಕ್ಕಿತು. ಕೂಡಲೇ ಅವರು ಪುನಃ ಸಾಯಿಬಾಬಾರವರ ಪಾದಕಮಲಗಳಿಗೆ ಭಕ್ತಿಯಿಂದ ವಂದಿಸಿದರು.
ಚಹಾವನ್ನೇ ಕುಡಿಯದ ಸಾಯಿಬಾಬಾರವರು ಏಕೆ ಈ ರೀತಿ ನುಡಿದರು? ಸಾಯಿಬಾಬಾರವರು ತಮ್ಮ ಮಾತಿನಿಂದ ಚೋಳ್ಕರ್ ರವರಿಗೆ ನಿಶ್ಚಲ ಭಕ್ತಿಯುಂಟಾಗುವಂತೆ ಮಾಡಿದರು. ಅಲ್ಲದೆ, ಬಾಬಾರವರು "ನೀನು ನನಗೆ ಕಲ್ಲುಸಕ್ಕರೆ ನೀಡುವೆನೆಂದು ವಾಗ್ದಾನ ಮಾಡಿದ್ದೆ. ಆ ಕಲ್ಲುಸಕ್ಕರೆ ನನಗೆ ಸಂದಿದೆ. ಆದ ಕಾರಣ ನಿನ್ನ ಹರಕೆಯು ಕೂಡ ಪೂರ್ಣವಾಗಿದೆ. ನೀನು ರಹಸ್ಯವಾಗಿಟ್ಟಿದ್ದರೂ ಹರಕೆಯನ್ನು ಪೂರ್ಣ ಮಾಡಲು ನೀನು ಅನುಭವಿಸಿದ ಕಷ್ಟಗಳೆಲ್ಲವೂ ನನಗೆ ತಿಳಿದಿದೆ" ಎಂದು ನುಡಿದರು.
ಶ್ರೀ ಶಿರಡಿ ಸಾಯಿಬಾಬಾರವರ ಈ ಅದ್ಭುತ ಲೀಲೆಯನ್ನು ಶ್ರೀ ಸಾಯಿ ಸಚ್ಚರಿತ್ರೆಯ 15ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಯಾವ ಭಕ್ತರು ಶಿರಡಿ ಸಾಯಿಬಾಬಾರವರಿಗೆ ಹರಕೆಯನ್ನು ಮಾಡಿಕೊಂಡು ಶ್ರೀ ಸಾಯಿ ಸಚ್ಚರಿತ್ರೆಯ 15ನೇ ಅಧ್ಯಾಯವನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪ್ರತಿನಿತ್ಯ ಪಾರಾಯಣ ಮಾಡುತ್ತಾರೋ ಅವರ ಬಯಕೆಗಳೆಲ್ಲವೂ ಸಾಯಿಬಾಬಾರವರ ಆಶೀರ್ವಾದದಿಂದ ಪೂರ್ಣಗೊಳ್ಳುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
(ಆಧಾರ: ಶ್ರೀ ಸಾಯಿ ಸಚ್ಚರಿತ್ರೆ, 15ನೇ ಅಧ್ಯಾಯ)
ಕನ್ನಡ ಅನುವಾದ: ಶ್ರೀಕಂಠ ಶರ್ಮ
Tuesday, January 7, 2014
ಹಿಂದಿ ಚಿತ್ರತಾರೆ ಶ್ರೀಮತಿ.ರವೀನಾ ಟಂಡನ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ
ಖ್ಯಾತ ಹಿಂದಿ ಚಿತ್ರತಾರೆ ಶ್ರೀಮತಿ.ರವೀನಾ ಟಂಡನ್ ರವರು ಇದೇ ತಿಂಗಳ 7ನೇ ಜನವರಿ 2014, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ರವೀನಾ ಟಂಡನ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಸನ್ಮಾನಿಸಿದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Sunday, January 5, 2014
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವಾರಾದ ಶ್ರೀ.ಪ್ರಫುಲ್ ಪಟೇಲ್ ರವರು ಇದೇ ತಿಂಗಳ 5ನೇ ಜನವರಿ 2014, ಭಾನುವಾರ ದಂದು
ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ
ಶಿರಡಿ ಸಾಯಿಬಾಬಾ
ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ ಹಾಗೂ ಶ್ರೀ.ಬಿಪಿನ್ ಕೊಲ್ಹೆಯವರು ಕೂಡ ಉಪಸ್ಥಿತರಿದ್ದರು.
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀ.ಪ್ರಫುಲ್ ಪಟೇಲ್ ರವರನ್ನು ಶಿರಡಿ ಸಾಯಿಬಾಬಾ
ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶ್ರೀ.ಬಿಪಿನ್ ಕೊಲ್ಹೆಯವರು ಕೂಡ ಉಪಸ್ಥಿತರಿದ್ದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Subscribe to:
Posts (Atom)