Saturday, April 16, 2011

ಸಾಯಿಬಾಬಾರವರ ಒಪ್ಪಿಗೆ ಪಡೆದು ತೆಗೆದ ಅಪರೂಪದ ಛಾಯಾಚಿತ್ರ - ಕೃಪೆ: ಸಾಯಿಅಮೃತಧಾರಾ.ಕಾಂ  

ಸೀತಾರಾಮ್ ಮತ್ತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀ.ವಾಸುದೇವ ಸದಾಶಿವ ಜೋಷಿ ಮತ್ತು ಅವರ ಸ್ನೇಹಿತರಾದ ಚಿದಂಬರ ರಾವ್ ಕೆ.ಗದ್ರೆಯವರು ಸಾಯಿಬಾಬಾರವರ ಪರಮ ಭಕ್ತರು. ಅವರಿಬ್ಬರೂ ಆಗಾಗ್ಗೆ ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಪಡೆದು ಬರುತ್ತಿದ್ದರು. ಒಮ್ಮೆ ಜೋಷಿಯವರು ಶಿರಡಿಗೆ ಹೊರಟಿದ್ದ ತಮ್ಮ ಸ್ನೇಹಿತ ಗದ್ರೆಯವರಿಗೆ ಸಾಯಿಬಾಬಾರವರಿಗೆ ದಕ್ಷಿಣೆಯಾಗಿ ನೀಡಲು 10 ರುಪಾಯಿಗಳನ್ನು ನೀಡಿದರು.  ಅಲ್ಲದೆ, ಸಾಯಿಬಾಬಾರವರ ಒಂದು ಛಾಯಾಚಿತ್ರವನ್ನು ತೆಗೆದು ತಮಗೆ ತಂದುಕೊಡುವಂತೆ ಕೂಡ ಕೋರಿಕೊಂಡರು. ಗದ್ರೆಯವರು ಶಿರಡಿಗೆ ಹೋಗಿ ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರನ್ನು ದರ್ಶನ ಮಾಡಿ ಜೋಷಿಯವರು ನೀಡಿದ 10 ರುಪಾಯಿಗಳ ದಕ್ಷಿಣೆಯನ್ನು ನೀಡಿ ಸಾಯಿಬಾಬಾರವರಿಗೆ ನಮಸ್ಕರಿಸಿದರು.  ಸಾಯಿಬಾಬಾರವರ ಛಾಯಾಚಿತ್ರ ತೆಗೆಯಲು ಅನುಮತಿ ಕೇಳುವ ಧೈರ್ಯ ಸಾಲದೇ ಸುಮ್ಮನೆ ಮೌನವಾಗಿದ್ದರು. ಸಾಯಿಬಾಬಾರವರು ಕೂಡ ಬಹಳ ಹೊತ್ತು ಏನು ಮಾತನಾಡದೆ ಮೌನವಾಗಿದ್ದರು. ಗದ್ರೆಯವರು ಇನ್ನೇನು ದ್ವಾರಕಾಮಾಯಿ ಬಿಟ್ಟು ಹೊರಡುತ್ತಿರುವಾಗ ಸಾಯಿಬಾಬಾರವರು ಅವರನ್ನು ಕರೆದು ಛಾಯಾಚಿತ್ರವನ್ನು ತೆಗೆಯಲು ಅನುಮತಿಯನ್ನು ತಾವಾಗಿಯೇ ನೀಡಿದರು. ಅಲ್ಲದೆ, ಆ ಛಾಯಾಚಿತ್ರವನ್ನು ಲಾಭಕ್ಕಾಗಿ  ಯಾರಿಗೂ ಮಾರಾಟ ಮಾಡಬಾರದೆಂದು ನಿರ್ಭಂದಿಸಿದರು. ಅಲ್ಲದೆ, ಉಧಿ ಮತ್ತು ಪ್ರಸಾದವನ್ನು ಕೂಡ ಗದ್ರೆಯವರಿಗೆ ಕೊಟ್ಟು ಶಿರಡಿಯಿಂದ ಬೀಳ್ಕೊಟ್ಟರು. 


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment