ಶಿರಡಿ ಸಾಯಿಬಾಬಾರವರ ದಿನಚರಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾರವರ ಬಳಿ ಸಾವಿರಾರು ಭಕ್ತರು ಲೌಕಿಕ ಸುಖಗಳಾದ ಹಣ, ಆರೋಗ್ಯ ಮತ್ತು ಸಂತಾನಕ್ಕಾಗಿ ಪ್ರತಿನಿತ್ಯ ಬಂದು ಬೇಡಿಕೊಳ್ಳುತ್ತಿದ್ದರೂ ಕೂಡ ಅವರು ಬಹಳ ಕಠಿಣವಾದ ದಿನಚರಿಯನ್ನು ಆಚರಿಸುತ್ತಿದ್ದರು. ಪ್ರತಿದಿನ ಬೆಳಿಗ್ಗೆ 5 ಘಂಟೆಗೆ ಎದ್ದು ಧುನಿಯ ಮುಂದೆ ಕುಳಿತುಕೊಳ್ಳುತ್ತಿದ್ದರು. ನಂತರ ನಿತ್ಯ ಕರ್ಮಗಳನ್ನು ಮುಗಿಸಿ ಪುನಃ ಧುನಿಯ ಮುಂದೆ ಕುಳಿತುಕೊಳ್ಳುತ್ತಿದ್ದರು. "ಬಾಬಾರವರು ಧುನಿಯ ಮುಂದೆ ಇದ್ದ ಕಂಭಕ್ಕೆ ಒರಗಿಕೊಂಡು ಕುಳಿತುಕೊಂಡು ಏನೋ ಮಾಡುತ್ತಿದ್ದರು" ಎಂದು ಸಾಯಿಭಕ್ತ ಪುರಂದರೆಯವರು ಹೇಳುತ್ತಾರೆ. ಸಾಯಿಯವರು ಧುನಿಯ ಮುಂದೆ ಕುಳಿತಿದ್ದಾಗ ಅವರ ಬಳಿ 50 ಅಡಿಯ ದೂರದಲ್ಲಿ ಯಾರು ಹೋಗಲು ಅವಕಾಶ ನೀಡುತ್ತಿರಲಿಲ್ಲ. ಸಾಯಿಬಾಬಾರವರು "ಯಾದೇ ಹಕ್" (ಅಲ್ಲಾನನ್ನು ಸ್ಮರಿಸಿ), "ಅಲ್ಲಾ ಮಾಲಿಕ್" (ಅಲ್ಲಾನೇ ಗುರುವು), ಮತ್ತು "ಅಲ್ಲಾ ವಲಿ ಹೈ" (ಅಲ್ಲಾನೇ ನಮ್ಮ ಉದ್ಧಾರಕ) ಎಂದು ಆಗಾಗ್ಗೆ ಉಚ್ಚರಿಸುತ್ತಿದ್ದರೆಂದು ತಿಳಿದುಬಂದಿದೆ.
ಅಬ್ದುಲ್ ಬಾಬಾ ಮತ್ತು ಮಾಧವ ಫಾಸ್ಲೆ ತಮ್ಮ ಪಾಡಿ ತಾವು ಗದ್ದಲ ಮಾಡದೇ ಮಸೀದಿಯನ್ನು ಚೆನ್ನಾಗಿ,ಗುಡಿಸಿ, ತೊಳೆದು , ಒರೆಸಿ, ಶುಭ್ರಗೊಳಿಸಿ ದೀಪಗಳಿಗೆ ಎಣ್ಣೆಯನ್ನು ಹಾಕಿ, ಪವಿತ್ರ ಧುನಿಗೆ ಕಟ್ಟಿಗೆಯನ್ನು ಹಾಕಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ದ್ವಾರಕಾಮಾಯಿಗೆ ಬಾಬಾರವರ ದರ್ಶನಕ್ಕೆ ಬರುತ್ತಿದ್ದ ಮೊದಲನೇ ಭಕ್ತ ಭಾಗೋಜಿ ಶಿಂಧೆಯವರು. ಭಾಗೋಜಿಯವರು ಪ್ರತಿನಿತ್ಯ ಸರಿಯಾದ ಸಮಯಕ್ಕೆ ಬಂದು ಬಾಬಾರವರ ಬಲಗೈನ್ನು ಚೆನ್ನಾಗಿ ತಿಕ್ಕಿ ಪ್ರೀತಿಯಿಂದ ಅದಕ್ಕೆ ಪಟ್ಟಿಯನ್ನು ಸುತ್ತುತ್ತಿದ್ದರು. ನಗೋಜ್ ಎಂಬ ಹಳ್ಳಿಯ ಕಮ್ಮಾರನೊಬ್ಬನ ಮಗುವು ಕುಲುಮೆಯಲ್ಲಿ ಆಕಸ್ಮಿಕವಾಗಿ ಬಿದ್ದಾಗ ತಮ್ಮ ಅಂತರ್ಜ್ಞಾನದಿಂದ ತಿಳಿದು ಸಾಯಿಬಾಬಾರವರು ತಮ್ಮ ಬಲ ಕೈಯನ್ನು ಧುನಿಯಲ್ಲಿ ಹಾಕಿ ಮಗುವನ್ನು ರಕ್ಷಿಸುವ ಲೀಲೆಯನ್ನು ಸಾಯಿಸಚ್ಚರಿತ್ರೆಯ 7ನೇ ಅಧ್ಯಾಯದಲ್ಲಿ ನೋಡಬಹುದು. ಅಂದಿನಿಂದ ಭಾಗೋಜಿ ಶಿಂಧೆಯವರೇ ಪ್ರತಿನಿತ್ಯ ಬೆಳಗಿನ ಜಾವ ಮಸೀದಿಗೆ ಬಂದು ಸಾಯಿಬಾಬಾರವರ ಕೈಗಳ ಆರೈಕೆಯನ್ನು ಮಾಡುತ್ತಿದ್ದರು. ಕೈಗಳನ್ನು ಚೆನ್ನಾಗಿ ನೀವಿ ಪಟ್ಟಿಯನ್ನು ಕಟ್ಟಿದ ನಂತರ ಸಾಯಿಬಾಬಾರವರ ಪೂರ್ತಿ ದೇಹವನ್ನು ಚೆನ್ನಾಗಿ ತಿಕ್ಕಿ ಅಂಗಮರ್ಧನ ಮಾಡುತ್ತಿದ್ದರು. ನಂತರ ಹುಕ್ಕಾವನ್ನು ಹೊತ್ತಿಸಿ ಬಾಬಾರವರಿಗೆ ನೀಡುತ್ತಿದ್ದರು. ಸಾಯಿಬಾಬಾರವರು ಒಂದೆರಡು ಬಾರಿ ಅದನ್ನು ಎಳೆದು ಭಾಗೋಜಿಯವರಿಗೆ ನೀಡುತ್ತಿದ್ದರು. ಹೀಗೆ ಸುಮಾರು ಐದಾರು ಬಾರಿ ಇವರಿಬ್ಬರು ಹುಕ್ಕಾವನ್ನು ಒಬ್ಬರಾದ ಮೇಲೆ ಒಬ್ಬರು ಎಳೆಯುತ್ತಿದ್ದರು. ಇದಾದ ನಂತರ ಭಾಗೋಜಿ ಶಿಂಧೆ ಮನೆಗೆ ತೆರಳುತ್ತಿದ್ದರು.
ನಂತರ ಕೆಲವು ನಿರ್ದಿಷ್ಟ ಸಾಯಿಭಕ್ತರು ಬಂದು ಸಾಯಿಯವರ ಪಾದಗಳನ್ನು ಚೆನ್ನಾಗಿ ನೀವಿ ಆರೈಕೆ ಮಾಡಿ ಹೋಗುತ್ತಿದ್ದರು. ಇದಾದ ನಂತರ ಸಾಯಿಯವರು ತಮ್ಮ ಕೈ,ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿದ್ದರು. ಆಗ ಬಹಳ ನೀರನ್ನು ಬಳಸುತ್ತಿದ್ದರು. ಆ ದೃಶ್ಯವನ್ನು ನೋಡುವುದೇ ಒಂದು ಭಾಗ್ಯವೆಂದು ಹೇಳಬಹುದು. ಸಾಯಿಬಾಬಾರವರು ನಿತ್ಯ ಸ್ನಾನ ಮಾಡುತ್ತಿರಲಿಲ್ಲ. ವಾರಕ್ಕೊಮ್ಮೆ ತಮ ಸ್ಥೂಲ ಶರೀರದ ಸ್ನಾನವನ್ನು ಮಾಡುತ್ತಿದ್ದರು. ಆದರೆ ಬಾಬಾರವರು ಆಗಾಗ್ಗೆ "ನಾನು ಗಂಗಾ-ಯಮುನಾ ನದಿಯಲ್ಲಿ ಸ್ನಾನ ಮಾಡಿದೆ" ಎಂದು ಹೇಳುತ್ತಿದ್ದರು. ಇದನ್ನು ಅವರು ತಮ್ಮ ಸೂಕ್ಷ್ಮ ಶರೀರದಲ್ಲಿ ಮಾಡುತ್ತಿದ್ದರು. ಇದರಿಂದ ಆ ನದಿಗಳು ಹೆಚ್ಚು ಪವಿತ್ರತೆಯನ್ನು ಪಡೆಯುತ್ತಿದ್ದವು. ಅನೇಕ ಭಕ್ತರು ಸಾಯಿಯವರು ಶಿರಡಿಯಲ್ಲಿ ತಮ್ಮ ಸ್ಥೂಲ ಶರೀರದ ಸ್ನಾನ ಮಾಡಿದಾಗ ಕಾದುಕೊಂಡು ಇದ್ದು ಆ ಪವಿತ್ರ ಸ್ನಾನದ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಖಾಯಿಲೆಯಾದಾಗ ಆ ನೀರನ್ನು ಪವಿತ್ರ ತೀರ್ಥವೆಂದು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ನಂತರ ಸರಿಯಾಗಿ 8 ಘಂಟೆಗೆ ಸಾಯಿಬಾಬಾರವರು 5 ಮನೆಗಳಿಗೆ ಭಿಕ್ಷೆಗೆ ಹೋಗುತ್ತಿದ್ದರು. ಹಾಗೆ ಭಿಕ್ಷೆಗೆ ಹೋದಾಗ ಯಾವಾಗಲೂ ಒಂದೇ ಕಡೆಯಲ್ಲಿ ನಿಂತು ಭಿಕ್ಷೆಗಾಗಿ ಯಾಚಿಸುತ್ತಿದ್ದರು. ಸಾಯಿಯವರು ತಾವು ತಂದ ಭಿಕ್ಷೆಯಲ್ಲಿ ಸ್ವಲ್ಪವೇ ಮಾತ್ರ ತಿಂದು ಮಿಕ್ಕಿದ್ದನ್ನು ಮಸೀದಿಯಲ್ಲಿದ್ದ ಕೊಲಂಬದಲ್ಲಿ ಇಡುತ್ತಿದ್ದರು. ಯಾರು ಬೇಕಾದರೂ ಅದರಿಂದ ತೆಗೆದುಕೊಂಡು ತಿನ್ನಬಹುದಾಗಿತ್ತು. ನಂತರ ಮಸೀದಿಯ ಕಟಕಟೆಯ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಸಾಯಿಯವರ ಪ್ರಮುಖ ಅಂಕಿತ ಭಕ್ತರು ಬಂದು ನಮಸ್ಕಾರ ಮಾಡಿಕೊಂಡು ಹೋಗುತ್ತಿದ್ದರು. ಆ ನಂತರ ಎಲ್ಲಾ ಭಕ್ತರು ಬಂದು ಬಾಬಾರವರ ದರ್ಶನ ಮಾಡುತ್ತಿದ್ದರು. ಈ ಬೆಳಗಿನ ದರ್ಬಾರು ಸುಮಾರು 9:30 ರ ವರೆಗೆ ನಡೆಯುತ್ತಿತ್ತು. ಈ ಸಮಯದಲ್ಲಿ ಕೆಲವು ಭಕ್ತರು ಸಾಯಿಯವರಿಗೆ ತಮ್ಮ ವಂದನೆ ಸಲ್ಲಿಸಲು ಬಂದರೆ, ಮತ್ತೆ ಕೆಲವರು ಸಾಯಿಯವರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬರುತ್ತಿದ್ದರು. ಇನ್ನೂ ಕೆಲವು ಭಕ್ತರು ಸಾಯಿಯವರ ಬಳಿ ಏನಾದರೂ ಬೇಡಲು ಬರುತ್ತಿದ್ದರು. ಈ ದರ್ಬಾರು ನೆಡೆಯುತ್ತಿರುವಾಗ ಅನೇಕ ಬಾರಿ ಸಾಯಿಬಾಬಾರಾರು ತಮ್ಮ ಹಣದಿಂದ ಹಣ್ಣುಗಳನ್ನು ತರಿಸಿ ಕೆಲವು ಭಕ್ತರಿಗೆ ಆಶೀರ್ವಾದವಾಗಿ ನೀಡುತ್ತಿದ್ದರು. ಅಲ್ಲದೆ, ಅರ್ಥಗರ್ಭಿತವಾದ ಅನೇಕ ಕಥೆಗಳನ್ನು, ದೃಷ್ಟಾಂತಗಳನ್ನು ಭಕ್ತರಿಗೆ ಸುಂದರವಾಗಿ ಹೇಳುತ್ತಿದ್ದರು. ಇದರ ಅರ್ಥ ಯಾರಿಗೆ ಅನ್ವಯವಾಗುತ್ತಿತ್ತೋ ಅವರಿಗೆ ಉತ್ತರ ಸಿಕ್ಕುತ್ತಿತ್ತು ಮತ್ತು ಅವರು ಅದರಂತೆ ನಡೆಯುತ್ತಿದ್ದರು. ಮಿಕ್ಕವರಿಗೆ ಇದರಿಂದ ಒಳ್ಳೆಯ ಜ್ಞಾನ ಸಂಪಾದನೆಯಾಗುತ್ತಿತ್ತು.
ಬೆಳಗಿನ ದರ್ಬಾರ್ ಮುಗಿದ ನಂತರ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ತೆರಳುತ್ತಿದ್ದರು. ಸಾಯಿಯವರೊಂದಿಗೆ ನಾನಾ ಸಾಹೇಬ್ ನಿಮೋನ್ಕರ್, ಗೋಪಾಲ ರಾವ್ ಬೂಟಿಯವರು ತೆರಳುತ್ತಿದ್ದರು. ಭಾಗೋಜಿ ಶಿಂಧೆಯವರು ಸಾಯಿಬಾಬಾರವರಿಗೆ ಶ್ವೇತಛತ್ರವನ್ನು ಹಿಡಿಯುತ್ತಿದ್ದರು. ಲೇಂಡಿ ಉದ್ಯಾನವನದೊಳಗೆ ಸಾಯಿಬಾಬಾ ಒಬ್ಬರೇ ಹೋಗುತ್ತಿದ್ದರು. ಅಲ್ಲಿ ನಂದಾದೀಪಕ್ಕೆ ಬೆನ್ನು ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದರು. ಅಬ್ದುಲ್ ಬಾಬಾ ಎರಡು ಮಡಿಕೆಗಳಲ್ಲಿ ನೀರನ್ನು ತಂದು ಬಾಬಾರವರ ಮುಂದೆ ಇಡುತ್ತಿದ್ದರು. ಬಾಬಾರವರು ಆ ನೀರನ್ನು ಎಲ್ಲಾ ದಿಕ್ಕುಗಳಲ್ಲಿ ಚೆಲ್ಲುತ್ತಾ ಏನನ್ನೋ ಗೊಣಗುಟ್ಟುತ್ತಿದ್ದರು. ಅಬ್ದುಲ್ ಬಾಬಾರವರಿಗೆ ಸಾಯಿಬಾಬಾ ಏನನ್ನು ಉಚ್ಚರಿಸುತ್ತಿದ್ದರೆಂದು ತಿಳಿಯುತ್ತಿರಲಿಲ್ಲ. ಸುಮಾರು 1 ಘಂಟೆಯ ನಂತರ ಬಾಬಾರವರು ತಮ್ಮ ಜೊತೆಯವರೊಡನೆ ಮೆರವಣಿಗೆಯಲ್ಲಿ ದ್ವಾರಕಾಮಾಯಿಗೆ ವಾಪಸಾಗುತ್ತಿದ್ದರು.
ಪುನಃ ಬೆಳಿಗ್ಗೆ 10.30 ಕ್ಕೆ ಎರಡನೇ ದರ್ಬಾರ್ ಪ್ರಾರಂಭವಾಗಿ ಸುಮಾರು 1 ಘಂಟೆಗಳ ಕಾಲ ನಡೆಯುತ್ತಿತ್ತು. ಆ ಸಮಯದಲ್ಲಿ ಭಕ್ತರು ತಮ್ಮನ್ನು ಪೂಜಿಸಲು ಮತ್ತು ಆರತಿಯನ್ನು ಮಾಡಲು ಬಾಬಾರವರು ಅನುಮತಿ ನೀಡುತ್ತಿದ್ದರು. 11.30 ಕ್ಕೆ ಸರಿಯಾಗಿ ಮಸೀದಿಯ ಘಂಟೆ ಬಾರಿಸುತ್ತಿತ್ತು. ಆಗ ಮಧ್ಯಾನ್ಹ ಆರತಿಗೆ ಶಿರಡಿಯ ಜನರೆಲ್ಲಾ ದ್ವಾರಕಾಮಾಯಿಗೆ ಬಂದು ಸೇರುತ್ತಿದ್ದರು. ಆರತಿಯ ಸಮಯದಲ್ಲಿ ಭಕ್ತರು ತಂದ ಎಲ್ಲಾ ಭಕ್ಷ್ಯ ಭೋಜ್ಯ, ಹಣ್ಣು ಮತ್ತು ಸಿಹಿತಿನಿಸುಗಳನ್ನು ನೈವೇದ್ಯ ಮಾಡಲಾಗುತ್ತಿತ್ತು. ಆರತಿಯ ನಂತರ ಎಲ್ಲವನ್ನು ಬಾಬಾರವರು ಚೆನ್ನಾಗಿ ಬೆರೆಸುತ್ತಿದ್ದರು. ಆ ಪ್ರಸಾದವನ್ನು ಎಲ್ಲರಿಗೂ ಹಂಚಲಾಗುತ್ತಿತ್ತು. ಸಾಯಿಯವರು ಕೆಲವು ಭಕ್ತರೊಡನೆ ಮಸೀದಿಯ ಒಳಗಡೆ ಕುಳಿತು ಭೋಜನ ಮಾಡುತ್ತಿದ್ದರು.
ಮಧ್ಯಾನ್ಹ ಊಟವಾದ ನಂತರ 1 ರಿಂದ 2 ಘಂಟೆಯ ತನಕ ಸಾಯಿಯವರು ಒಬ್ಬರೇ ದ್ವಾರಕಾಮಾಯಿಯಲ್ಲಿ ಏಕಾಂತದಲ್ಲಿ ಇರುತ್ತಿದ್ದರು. ಆಗ ದ್ವಾರಕಾಮಾಯಿಯ ತೆರೆಯನ್ನು ಹಾಕಲಾಗುತ್ತಿತ್ತು. ಆ ಸಮಯದಲ್ಲಿ ಸಾಯಿಬಾಬಾರವರು ತಮ್ಮ ಬಳಿಯಿದ್ದ ಹಣದ ಚೀಲದಿಂದ ಒಂದೊಂದೇ ನಾಣ್ಯವನ್ನು ತೆಗೆದುಕೊಂಡು ಅದನ್ನು ತಮ್ಮ ಕೈಗಳಿಂದ ಚೆನ್ನಾಗಿ ತಿಕ್ಕುತ್ತಾ "ಇದು ನಾನಾ ಹಣ, ಇದು ಕಾಕಾನ ಹಣ " ಎಂದು ಉಚ್ಚರಿಸುತ್ತಿದ್ದರು. ಸಾಯಿಯವರು ಹೀಗೆ ಮಾಡುವಾಗ ಯಾರಾದರೂ ಮಸೀದಿಗೆ ಬಂದರೆ ಕೂಡಲೇ ಆ ಹಣದ ಚೀಲವನ್ನು ಒಳಗೆ ಮುಚ್ಚಿಡುತ್ತಿದ್ದರು. 2 ಘಂಟೆಯ ನಂತರ ಸಾಯಿಬಾಬಾರವರು ಪುನಃ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು ಮತ್ತು ಸುಮಾರು 1 ಘಂಟೆಗಳ ಕಾಲ ಅಲ್ಲಿ ಕಳೆದ ನಂತರ ಪುನಃ ದ್ವಾರಕಾಮಾಯಿಗೆ ವಾಪಸಾಗುತ್ತಿದ್ದರು.
ಮಧ್ಯಾನ್ಹ 3 ಘಂಟೆಯಿಂದ ಸಂಜೆ 5 ಘಂಟೆಯ ವರೆಗೆ ದ್ವಾರಕಾಮಾಯಿಯಲ್ಲೇ ಕಳೆಯುತ್ತಿದ್ದರು. ಆಗ ಸಾಯಿಯವರೊಬ್ಬರೇ ಏಕಾಂತದಲ್ಲಿ ಕಳೆಯುತ್ತಿದ್ದರು. ಕೆಲವೊಮ್ಮೆ ತಮ್ಮ ಸಹಾಯಕರನ್ನು ಕರೆದು ಕೆಲವು ನಿರ್ದಿಷ್ಟ ಭಕ್ತರಿಗೆ ದ್ವಾರಕಾಮಾಯಿಗೆ ಬರುವಂತೆ ಹೇಳಿ ಕಳುಹಿಸಿ ಅವರೊಡನೆ ಗುಪ್ತ ಸಮಾಲೋಚನೆ ಮಾಡುತ್ತಿದ್ದರು.
ಸಂಜೆಯ ದರ್ಬಾರ್ 5 ಘಂಟೆಗೆ ಪ್ರಾರಂಭವಾಗಿ 7 ಘಂಟೆಯವರೆಗೆ ನಡೆಯುತ್ತಿತ್ತು. ನಂತರ ಸಂಜೆಯ ಸಾಯಿಬಾಬಾರವರು ವಾಯು ವಿಹಾರಕ್ಕೆ ಹೊರಡುತ್ತಿದ್ದರು. ದ್ವಾರಕಾಮಾಯಿಯ ಎದುರುಗಡೆ ಇದ್ದ ಸಣ್ಣ ರಸ್ತೆಯಲ್ಲಿ ಅತ್ತಿಂದ ಇತ್ತ ಓಡಾಡುತ್ತಿದ್ದರು ಮತ್ತು ರಸ್ತೆಯ ಬದಿಯ ಒಂದು ಸ್ಥಳದಲ್ಲಿ ತಮ್ಮ ಮೊಣ ಕೈಗಳನ್ನು ಊರಿಕೊಂಡು ಒರಗಿಕೊಂಡು ಸ್ವಲ್ಪ ಕಾಲ ನಿಲ್ಲುತ್ತಿದ್ದರು. ಆ ಪವಿತ್ರ ಸ್ಥಳದಲ್ಲಿ ಗೋಡೆಯಲ್ಲಿ ಸಣ್ಣ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ ಮತ್ತು ಸಣ್ಣ ದೇಗುಲವನ್ನು ಕೂಡ ನಿರ್ಮಿಸಲಾಗಿದೆ.
ರಾತ್ರಿ 8:30 ಕ್ಕೆ ಸರಿಯಾಗಿ ದ್ವಾರಕಾಮಾಯಿಯ ಘಂಟೆ ಆರತಿಯ ಸಮಯವಾಯಿತೆಂದು ಸೂಚಿಸಲು ಬಾರಿಸುತ್ತಿತ್ತು. ಆಗ ಪುನಃ ಶಿರಡಿಯ ಜನರೆಲ್ಲಾ ಬಂದು ದ್ವಾರಕಾಮಾಯಿಯ ಹೊರಗಿದ್ದ ಸಭಾಮಂಟಪದಲ್ಲಿ ಸೇರುತ್ತಿದ್ದರು. ದಿನ ಬಿಟ್ಟು ದಿನ ಸಾಯಿಬಾಬಾರವರು ಚಾವಡಿಯಲ್ಲಿ ಮಲಗುತ್ತಿದ್ದರು. ಅಂದು ಸಾಯಿಯವರು ಚಾವಡಿಯಲ್ಲಿ ಮಲಗುವ ದಿನವಾಗಿದ್ದರೆ, ಕೆಲವು ಭಕ್ತರು ಚಾವಡಿಯಲ್ಲಿ ಸೇರಿ ಅನೇಕ ಪಕ್ಕವಾದ್ಯಗಳೊಡನೆ ಭಜನೆಯನ್ನು ಮಾಡುತ್ತಿದ್ದರು. ಮತ್ತೆ ಕೆಲವು ಸಾಯಿಭಕ್ತರು ಸಾಯಿಬಾಬಾರವರ ಚಾವಡಿ ಮೆರವಣಿಗೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡುತ್ತಿದ್ದರು. ನಂತರ ಚಾವಡಿ ಮೆರವಣಿಗೆ ಆರಂಭವಾಗುತ್ತಿತ್ತು. ಶಿರಡಿಯ ಜನರೆಲ್ಲಾ ಚಾವಡಿ ಮೆರವಣಿಗೆಯಲ್ಲಿ ಭಾಗವಹಿಸಿ ಸಾಯಿಯವರನ್ನು ಮೆರವಣಿಗೆಯಲ್ಲಿ ಚಾವಡಿಗೆ ಕರೆದುಕೊಂಡು ಹೋಗಿ ಅಲ್ಲಿ ಆರತಿಯನ್ನು ಮಾಡುತ್ತಿದ್ದರು. ಆರತಿಯ ನಂತರ ಭಕ್ತರೆಲ್ಲಾ ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದರು. ಚಾವಡಿಯಲ್ಲಿ ಸಾಯಿಬಾಬಾರವರೊಬ್ಬರೇ ಸುಮಾರು 50 ರಿಂದ 60 ಹೊದ್ದಿಗೆಗಳನ್ನು ಜೋಡಿಸಿಕೊಂಡು ಮಲಗುತ್ತಿದ್ದರು. ಮಾರನೇ ದಿನ ಬೆಳಗಿನ ಜಾವ ತಾತ್ಯಾ ಬಂದು ಸಾಯಿಯವರನ್ನು ಎಬ್ಬಿಸಿ ದ್ವಾರಕಾಮಾಯಿಗೆ ಕರೆದುಕೊಂಡು ಹೋಗುವ ತನಕ ಸಾಯಿಯವರು ಚಾವಡಿಯಲ್ಲೇ ಇರುತ್ತಿದ್ದರು. ದ್ವಾರಕಾಮಾಯಿಯಲ್ಲಿ ಸಾಯಿಯವರು ಮಹಾಲ್ಸಾಪತಿ ಮತ್ತು ತಾತ್ಯಾರವರೊಡನೆ ಮಲಗುತ್ತಿದ್ದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment