Friday, September 30, 2011

ಸಾಯಿ ಮಹಾಭಕ್ತ ಮತ್ತು ಸಾಯಿಬಾಬಾರವರ ಪ್ರಥಮ ಚಿತ್ರವನ್ನು ಬಿಡಿಸಿದ ಮಹಾನ್ ಕಲಾವಿದ - ಶ್ಯಾಮರಾವ್ ಜಯಕರ್ - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀ.ಶ್ಯಾಮರಾವ್ ಜಯಕರ್ ರವರು ಮುಂಬೈನ ವಿಲೇ ಪಾರ್ಲೆಯಲ್ಲಿ ವಾಸಿಸುತ್ತಿದ್ದರು. ಇವರು ವೃತ್ತಿಯಲ್ಲಿ ಚಿತ್ರಕಾರರಾಗಿದ್ದರು. ಇವರು ಮೊದಲ ಬಾರಿ ಶಿರಡಿಗೆ 1916-1917 ರಲ್ಲಿ ಬಂದರು. ಇವರು ಶಿರಡಿಗೆ ಅನೇಕ ಸಾಯಿ ಭಕ್ತರೊಡನೆ ಹೋಗುತ್ತಿದ್ದರು ಮತ್ತು ಅವರೊಡನೆ ತಂಗುತ್ತಿದ್ದರು ಮತ್ತು ಅವರುಗಳೆಲ್ಲಾ ಹೊರಟು ಹೋದ ಮೇಲೆ ಕೂಡ ಅಲ್ಲಿಯೇ ಸ್ವಲ್ಪ ದಿನ ಇರುತ್ತಿದ್ದರು. ಜಯಕರ್ ರವರಿಗೆ ಶಿರಡಿಯಲ್ಲಿದ್ದಾಗ ಸ್ವಲ್ಪ ಹಣ ಸಂಪಾದನೆಯಾಗುತ್ತಿತ್ತು. ಆದ್ದರಿಂದ ಸಾಯಿಬಾಬಾರವರು ಇವರಿಂದ ದಕ್ಷಿಣೆಯನ್ನು ಕೇಳಿ ಪಡೆಯುತ್ತಿದ್ದರು. ಹಾಗೆಯೇ, ಜಯಕರ್ ರವರು ಕೂಡ ಬಾಬಾರವರು ಕೇಳಿದಷ್ಟು ದಕ್ಷಿಣೆಯನ್ನು ಕೊಡುತ್ತಿದ್ದರು. ಜಯಕರ್ ರವರ ಜೊತೆಯಲ್ಲಿ ತಂಗಿದ್ದವರು ಹೊರಟು ಹೋದ ಮೇಲೆ ಅವರ ಬಳಿ ಹಣ ಇರುತ್ತಿರಲಿಲ್ಲ. ಆಗ ಸಾಯಿಬಾಬಾ ಇವರಿಂದ ದಕ್ಷಿಣೆ ಕೇಳುತ್ತಿರಲಿಲ್ಲ. ಸರ್ವಾಂತರ್ಯಾಮಿಯಾದ ಬಾಬಾರವರಿಗೆ ಜಯಕರ್ ರವರ ಸ್ಥಿತಿಗತಿಗಳ ಅರಿವಿತ್ತು. 

ಜಯಕರ್ ರವರು 16 ವರ್ಷದ ಹುಡುಗನಾಗಿದ್ದಾಗ  ಒಬ್ಬ ಬ್ರಹ್ಮಚಾರಿಯು ಇವರಿಗೆ ಶಿವ ಮಂತ್ರವನ್ನು ಉಪದೇಶಿಸಿದ್ದನು. ಸ್ವಲ್ಪ ವರ್ಷಗಳ ಬಳಿಕ ಒಬ್ಬ ಸನ್ಯಾಸಿಯು ಶಿವ ಮಂತ್ರಕ್ಕೆ ಹೊಂದಾಣಿಕೆಯಾಗುವಂತೆ ಇವರಿಗೆ ಶಕ್ತಿ ಮಂತ್ರವನ್ನು ಉಪದೇಶಿಸಿದರು. ಜಯಕರ್ ರವರು ಶಿರಡಿಗೆ ಹೋದಾಗ ಸಾಯಿಬಾಬಾರವರು ಈ ಎರಡೂ ಮಂತ್ರಗಳ ದೀಕ್ಷೆಯನ್ನು ಇವರಿಗೆ ನೀಡಿದರು. ಸಾಯಿಬಾಬಾರವರು ಎಲ್ಲರಿಗೂ ತಮ್ಮ ಗುರುವು ಯಾರೇ ಆಗಿರಲಿ ಅವರು ನೀಡಿದ ಉಪದೇಶ, ಮಂತ್ರ ದೀಕ್ಷೆಯನ್ನು ತಪ್ಪದೆ ಅನುಸರಿಸಲು ಹೇಳುತ್ತಿದ್ದರು. ಆದರೆ, ಬಾಬಾರವರು ಯಾವಾಗಲೂ ಒಳ್ಳೆಯ ಉಪದೇಶಗಳನ್ನು ತಮ್ಮ ಭಕ್ತರಿಗೆ ನೀಡುತ್ತಿದ್ದರು. ಅವರು ಅನೇಕ ಬಾರಿ "ಯಾವಾಗಲೂ ಪರಿಶುದ್ಧರಾಗಿರಿ ಮತ್ತು ಸತ್ಯತನದಿಂದ ನಡೆಯಿರಿ. ಎಲ್ಲಾ ಜನರನ್ನು ಗೌರವದಿಂದ ಕಾಣಿರಿ" ಎಂದು ಹೇಳುತ್ತಿದ್ದರು. 

ಜಯಕರ್ ರವರಿಗೆ ಶಿರಡಿಯಲ್ಲಿ ಕೆಲವು ಭಕ್ತರ ಪರಿಚಯವಿತ್ತು. ಇವರು ರಾಧಾಕೃಷ್ಣ ಮಾಯಿಯ ಬಳಿ ಯಾವ ಕೆಲಸವೂ ಇಲ್ಲದಿದ್ದರಿಂದ ಎಂದಿಗೂ ಅವರ ಬಳಿಗೆ ಹೋಗಲಿಲ್ಲ. ಇವರಿಗೆ ನಾನಾವಲ್ಲಿ ಬಗ್ಗೆ ಚೆನ್ನಾಗಿ ತಿಳಿದಿತ್ತು. ನಾನಾವಲ್ಲಿ ಬಹಳ ಭಯಂಕರ ವ್ಯಕ್ತಿಯಾಗಿದ್ದನು. ಸಾಯಿಬಾಬಾರವರು ಜಯಕರ್ ರವರಿಗೆ ನಾನಾವಲ್ಲಿಯ ಜೊತೆ ಹೋಗಬೇಡ ಎಂದು ಎಚ್ಚರಿಕೆ ನೀಡಿದ್ದರು. ಪ್ರಾರಂಭದಲ್ಲಿ ಇವರು ನಾನಾವಲ್ಲಿಯ ಜೊತೆ ಓಡಾಡುತ್ತಿದ್ದರು. ಡಾ.ಪಿಳ್ಳೆಯವರು ಕೂಡ ನಾನಾವಲ್ಲಿಯ ಜೊತೆ ಓಡಾಡುತ್ತಿದ್ದರು. ಆದರೆ ಒಮ್ಮೆ ನಾನಾವಲ್ಲಿ ಡಾ.ಪಿಳ್ಳೆಯವರನ್ನು ಚೆನ್ನಾಗಿ ಥಳಿಸಿದನು. ಅಂದಿನಿಂದ ಅವರಿಬ್ಬರೂ ನಾನಾವಲ್ಲಿಯ ಸಹವಾಸವನ್ನು ಬಿಟ್ಟುಬಿಟ್ಟರು. ನಾನಾವಲ್ಲಿ ಸಾಯಿಬಾಬಾರವರ ಭಕ್ತನಾಗಿರಲಿಲ್ಲ. ಆದರೆ, ಅವರನ್ನು ಕಂಡರೆ ಗೌರವ ಹೊಂದಿದ್ದನು. ಸಾಯಿಬಾಬಾರವರು ಆಗಾಗ್ಗೆ ನಾನಾವಲ್ಲಿಗೆ ಹೊಡೆಯುತ್ತಿದ್ದರು ಮತ್ತು ತರಲೆ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದರು. 

ಜಯಕರ್ ರವರು ಎಂಟು ತಿಂಗಳುಗಳ ಕಾಲ ಶಿರಡಿಯಲ್ಲಿ ತಂಗಿದ್ದರು ಮತ್ತು ಸಾಯಿಬಾಬಾರವರು ನೀಡಿದ ಅನೇಕ ಉಪದೇಶಗಳನ್ನು ಕೇಳಿದ್ದರು. ಆದರೆ ಯಾವುದೂ ಇವರ ನೆನಪಿನಲ್ಲಿ ಇರುತ್ತಿರಲಿಲ್ಲ. ಜಯಕರ್ ರವರ ಪ್ರಕಾರ ಬಾಬಾರವರು ಆಧ್ಯಾತ್ಮಿಕ ಉಪದೇಶಗಳನ್ನು ಜನರಿಗೆ ನೀಡುತ್ತಿದ್ದುದು ಬಹಳ ಕಮ್ಮಿಯೆಂದೇ ಹೇಳಬೇಕು. ಏಕೆಂದರೆ, ಬಹುತೇಕ ಜನರು ಸಾಯಿಬಾಬಾರವರ ಬಳಿ ಲೌಕಿಕ ವಿಷಯಗಳಾದ ಹಣ, ಆರೋಗ್ಯ ಮತ್ತಿತರ ವಿಷಯಗಳಿಗಾಗಿ ಹೋಗುತ್ತಿದ್ದರು. 

ಸಾಯಿಬಾಬಾರವರು ಜಯಕರ್ ರವರ ಯೋಗಕ್ಷೇಮವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದುದರಿಂದ, ಜಯಕರ್ ರವರು ತೃಪ್ತಿಯಿಂದ ಇದ್ದರು. ಕಾಲ ಕಳೆದಂತೆ ಜಯಕರ್ ರವರು ತಮ್ಮ ಎರಡು ಮಕ್ಕಳನ್ನು ಕಳೆದುಕೊಂಡರು. ಆದರೆ ಬಾಬಾರವರು ಇವರ ಮನೆಯವರನ್ನು ಸುಖವಾಗಿ ಇಟ್ಟಿದ್ದರು. ಜಯಕರ್ ರವರು ಜನರು ಸಾಯಿಬಾಬಾರವರ ಬಳಿಗೆ ಹಣವನ್ನು ಬೇಡುವುದಕ್ಕಾಗಿ ಮಾತ್ರ ಹೋಗಬಾರದೆಂದು, ಅದರ ಬದಲು ಅಧ್ಯಾತ್ಮಿಕ ಪ್ರಗತಿಗಾಗಿ ಹೋಗಬೇಕೆಂದು ಸದಾ ನುಡಿಯುತ್ತಿದ್ದರು. ಶಿರಡಿಯ ಮಸೀದಿಯ ಪ್ರತಿಯೊಂದು ಗೋಡೆಯು ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಜಯಕರ್ ವರು ಸದಾ ನುಡಿಯುತ್ತಿದ್ದರು. ಭಕ್ತರು ಗಾಡಿಯನ್ನು ತಂದು ಅದರ ತುಂಬಾ ಆ ಚಿನ್ನದ ಗಣಿಯನ್ನು ತೆಗೆದುಕೊಂಡು ಹೋಗಬೇಕೆಂದು ಇಚ್ಚಿಸುತ್ತಿದ್ದರು. ಆದರೆ ಯಾವ ಭಕ್ತರೂ ಕೂಡ ಆ ಚಿನ್ನದ ಗಣಿಯನ್ನು ತೆಗೆದುಕೊಂಡು ಹೋಗಲು ಬರಲಿಲ್ಲ ಎಂದು ವ್ಯಥೆ ಪಡುತ್ತಿದ್ದರು ಎಂದು ಕೂಡ ಹೇಳುತ್ತಿದ್ದರು. 

ರಾವ್ ಬಹದ್ದೂರ್ ಮೋರೆಶ್ವರ ಪ್ರಧಾನ್ ರವರು ಸಾಯಿಬಾಬಾವರ ತೈಲ ಚಿತ್ರವನ್ನು ಬಿಡಿಸುವಂತೆ ಕೇಳಿಕೊಂಡಿದ್ದರಿಂದ ಜಯಕರ್ ವರು ಶಿರಡಿಗೆ ಮೊದಲ ಬಾರಿಗೆ ಬರುವಂತೆ ಆಯಿತು. ಅದಕ್ಕಾಗಿ ಜಯಕರ್ ರವರು ಸಾಯಿಬಾಬಾರವರನ್ನು ನೋಡುವ ಅವಶ್ಯಕತೆಯಿತ್ತು. ಜಯಕರ್ ರವರು ಶಿರಡಿಗೆ ಹೋಗಿ ಸಾಯಿಬಾಬಾರವರನ್ನು ಮೊದಲ ಬಾರಿಗೆ ನೋಡಿದರು. ಬಾಬಾರವರು ಕೂಡ ಇವರನ್ನು ನೋಡಿದರು. ನಂತರ ಬಾಬಾರವರ ಚಿತ್ರವನ್ನು ಬಿಡಿಸಲು ಅವರ ಒಪ್ಪಿಗೆಯನ್ನು ಕೇಳುವ ಅವಶ್ಯಕತೆಯಿತ್ತು. ಆದುದರಿಂದ ಶ್ಯಾಮರವರು ಬಾಬಾರವರ ಬಳಿಗೆ ಹೋಗಿ ಅವರ ಚಿತ್ರವನ್ನು ಬಿಡಿಸಲು ಬಾಬಾರವರ ಅನುಮತಿಯನ್ನು ಬೇಡಿದರು. ಆಗ ಬಾಬಾರವರು "ಈ ಬಡ ಫಕೀರನ ಚಿತ್ರವನ್ನು ಬಿಡಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಶ್ಯಾಮ, ನೀನು ಬೇಕಾದರೆ ನಿನ್ನ ಚಿತ್ರವನ್ನು ಬರೆಯಿಸಿಕೊ" ಎಂದು ನುಡಿದರು. ಅನೇಕ ಬಾರಿ ಪ್ರಯತ್ನ ಮಾಡಿದ ನಂತರ ಶ್ಯಾಮರವರು ಆ ಕಾರ್ಯದಲ್ಲಿ ಜಯಶೀಲರಾಗಿ ಜಯಕರ್ ರವರ ಬಳಿಗೆ ಬಂದು ಬಾಬಾರವರು ಅವರ ಚಿತ್ರವನ್ನು ಬಿಡಿಸಲು ಒಪ್ಪಿಗೆ ನೀಡಿರುವ ವಿಷಯವನ್ನು ತಿಳಿಸಿದರು. ಆಗ ಜಯಕರ್ ರವರು ಒಂದು ಚಿತ್ರವನ್ನು ಮಾತ್ರ ಬಿಡಿಸದೆ 3 ಚಿತ್ರಗಳನ್ನು ರಚಿಸಿದರು. ಅದರಲ್ಲಿ ಎರಡು ಚಿತ್ರಗಳನ್ನು ರಾವ್ ಬಹದ್ದೂರ್  ಮೊರೇಶ್ವರ ಪ್ರಧಾನ್ ರವರು ತೆಗೆದುಕೊಂಡು ಹೋದರು. 3ನೇ ಚಿತ್ರವನ್ನು ಬಾಬಾರವರ ಬಳಿಗೆ ತೆಗೆದುಕೊಂಡು ಹೋಗಲಾಯಿತು. ಬಾಬಾರವರು ಅದನ್ನು ತಮ್ಮ ಕೈಗಳಿಂದ ಸ್ಪರ್ಶಿಸಿ ಹೆಚ್.ಎಸ್.ದೀಕ್ಷಿತ್ ರವರಿಗೆ ನೀಡಿದರು. ಆ ಚಿತ್ರವನ್ನು ಈಗಲೂ ದೀಕ್ಷಿತ್ ರವರ ಮನೆಯಲ್ಲಿ ತೂಗುಹಾಕಲಾಗಿದ್ದು ಪ್ರತಿನಿತ್ಯ ಅದನ್ನು ಪೂಜಿಸಲಾಗುತ್ತಿದೆ. 

ಜಯಕರ್ ರವರು ಸಾಯಿಬಾಬಾರವರ ಮತ್ತೊಂದು ಬೃಹತ್ ಚಿತ್ರವನ್ನು ಬಿಡಿಸಿದರು. ಅದನ್ನು ಬಹಳ ವರ್ಷಗಳ ಕಾಲ ಉಪಯೋಗಿಸದೆ ಹಾಗೆಯೇ ಇರಿಸಲಾಗಿತ್ತು. ಅದನ್ನು ಈಗ ದ್ವಾರಕಾಮಾಯಿ ಮಸೀದಿಯಲ್ಲಿ ಇರಿಸಲಾಗಿದ್ದು ಕೋಟ್ಯಾಂತರ ಸಾಯಿಭಕ್ತರು ಇದರ ದರ್ಶನ ಪಡೆಯುತ್ತಿದ್ದಾರೆ. ಈ ಚಿತ್ರವನ್ನೇ ಸಾಯಿ ಭಕ್ತರು "ದ್ವಾರಕಾಮಾಯಿ ಬಾಬಾ ಚಿತ್ರಪಟ" ಎಂದು ಕರೆಯುವ ವಾಡಿಕೆಯಿದೆ.

ಸಾಯಿಬಾಬಾರವರಿಗೆ ಜಯಕರ್ ರವರನ್ನು ಕಂಡರೆ ಅಪಾರ ಕರುಣೆಯಿತ್ತು. ಆದರೆ ಜಯಕರ್ ರವರು ಬಾಬಾರವರನ್ನು ಮತ್ತು ಎಲ್ಲಾ ವಿಷಯಗಳನ್ನು ನಿರ್ಲಕ್ಷ್ಯದಿಂದ ಕಾಣುತ್ತಿದ್ದರು.  ಇವರ ಸ್ವಭಾವ ಬಹಳ ವಿಚಿತ್ರವಾಗಿತ್ತು. ಇವರು ಯಾವ ಕೆಲಸವನ್ನು ಸರಿಯಾಗಿ ಗಮನವಿಟ್ಟು ಮಾಡುತ್ತಿರಲಿಲ್ಲ. ಈ ವಿಷಯ ಸಾಯಿಬಾಬಾರವರಿಗೆ ಚೆನ್ನಾಗಿ ತಿಳಿದಿತ್ತು. ಒಮ್ಮೆ ಬೆಳ್ಳಿಯ ಪಾದುಕೆಗಳನ್ನು ತೆಗೆದುಕೊಂಡು ಬಂದು ಅದನ್ನು ಸಾಯಿಬಾಬಾರವರ ಹಸ್ತದಿಂದ ಸ್ಪರ್ಶಿಸಿ ಪುನಃ ಪಡೆದುಕೊಂಡು ಪೂಜಿಸಬೇಕೆಂದು ಜಯಕರ್ ಆಸೆಪಟ್ಟರು.  ಅದರಂತೆ, ಬೆಳ್ಳಿಯ ಸಣ್ಣ ಪಾದುಕೆಗಳನ್ನು ತೆಗೆದುಕೊಂಡು ಬಂದು ಸಾಯಿಬಾಬಾರವರ ಕೈಗಿತ್ತರು. ಸಾಯಿಬಾಬಾರವರು ಪಾದುಕೆಗಳನ್ನು ಮತ್ತು ಜಯಕರ್ ರವರನ್ನು ಒಮ್ಮೆ ದೃಷ್ಟಿಸಿ ನೋಡಿದರು. ಅದನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ, ಅದನ್ನು ಜಯಕರ್ ರವರ ಕೈಗಳಿಗೆ ನೀಡುವ ಹಾಗೆ ಮಾಡಿ ಅದನ್ನು ಕೆಳಗೆ ಬೀಳುವಂತೆ ಮಾಡಿದರು. ಜಯಕರ್ ಅದನ್ನು ನೆಲದ ಮೇಲಿನಿಂದ ತೆಗೆದುಕೊಂಡರು ಮತ್ತು ಪೂಜೆಗೆ ಇಟ್ಟುಕೊಳ್ಳಬೇಕೆಂದು ಮನದಲ್ಲಿ ಅಂದುಕೊಂಡರು. ಅವುಗಳನ್ನು ತಮ್ಮ ಅಂಗಿಯ ಜೇಬಿನಲ್ಲಿ ಹಾಕಿಕೊಂಡರು. ಅದೇ ದಿನ ಸಾಯಂಕಾಲ ಬಟ್ಟೆಯನ್ನು ಒಗೆಯಲು ಕೊಡುವಾಗ ಪಾದುಕೆಗಳ ಸಮೇತ ಕೊಟ್ಟುಬಿಟ್ಟರು. ಈ ರೀತಿ ಪಾದುಕೆಗಳು ಕಳೆದು ಹೋದವು. ಪುನಃ ಅವರಿಗೆ ದೊರೆಯಲೇ ಇಲ್ಲ. ಅಂತರ್ಯಾಮಿಯಾದ ಬಾಬಾರವರಿಗೆ ಜಯಕರ್ ರವರು ಪಾದುಕೆಗಳನ್ನು ಕಾಪಾಡಲು ಆಗುವುದಿಲ್ಲ ಎಂದು ಮೊದಲೇ ತಿಳಿದಿತ್ತು. ಅದಕ್ಕಾಗಿಯೇ, ಅವರು ಆ ಪಾದುಕೆಗಳನ್ನು ಜಯಕರ್ ರವರಿಗೆ ನೀಡುವ ಸಂದರ್ಭದಲ್ಲಿ ತಮ್ಮ ಕೈಗಳಿಂದ ಬೀಳುವ ಹಾಗೆ ಮಾಡಿದುದು. ಅದರಂತೆ, ಜಯಕರ್ ರವರು ಪಾದುಕೆಗಳನ್ನು ಕಳೆಯುತ್ತಾರೆ ಎಂದು ಸಾಯಿಬಾಬಾರವರು ಮೊದಲೇ ಸೂಚನೆ ಈ ರೀತಿಯಲ್ಲಿ ನೀಡಿದ್ದರು.

ಒಮ್ಮೆ ಜಯಕರ್ ರವರು ಒಬ್ಬ ಮಕ್ಕಳಿಲ್ಲದ ಮುಸ್ಲಿಂ ಮಹಿಳೆಗೆ ನಾಲ್ಕು ಸಾವಿರವನ್ನು ಸಾಲವಾಗಿ ನೀಡಿದ್ದರು. ಜಯಕರ್ ರವರು 8 ಮಕ್ಕಳ ತುಂಬು ಸಂಸಾರವನ್ನು ಹೊಂದಿದ್ದರಿಂದ ಅವರಿಗೆ ದುಡ್ಡಿನ ಅವಶ್ಯಕತೆ ಬಿದ್ದಿತು. ಅದಕ್ಕಾಗಿ ಆ ಮುಸ್ಲಿಂ ಮಹಿಳೆಯಿಂದ ಹಣವನ್ನು ವಾಪಸ್ ಪಡೆಯಲು ಜಯಕರ್ ಇಚ್ಚಿಸಿದರು. ಹಣವನ್ನು ವಾಪಸ್ ಪಡೆಯಲು ಎಷ್ಟು ಪ್ರಯತ್ನಿಸಿದರೂ ಆ ಮಹಿಳೆ ಹಣವನ್ನು ಹಿಂತಿರುಗಿ ನೀಡಲಿಲ್ಲ. ಆಗ ಜಯಕರ್ ರವರು ಹಣವನ್ನು ವಾಪಸ್ ಪಡೆಯಲು ಸಾಯಿಬಾಬಾರವರ ಸಹಾಯವನ್ನು ಬೇಡಿದರು. ಆಗ ಬಾಬಾರವರು "ಆ ಕೆಟ್ಟ ಹಣದ ಆಸೆಯನ್ನು ಬಿಡು. ಆ ಹಣ ನಮಗೆ ಬೇಡ" ಎಂದು ಉತ್ತರಿಸಿದರು. ಜಯಕರ್ ರವರಿಗೆ ಹಣ ಕೊನೆಗೂ ವಾಪಸ್ ಬರಲೇ ಇಲ್ಲ. 2-3 ವರ್ಷಗಳ ನಂತರ ಆ ಮುಸ್ಲಿಂ ಮಹಿಳೆ ತನ್ನ ಎಲ್ಲಾ ಹಣವನ್ನು ಕಳೆದುಕೊಂಡಿರುವುದು ಜಯಕರ್ ರವರಿಗೆ ತಿಳಿದು ಬಂದಿತು.

ಜಯಕರ್ ರವರು ಶಿರಡಿಗೆ ಮೊದಲ ಭೇಟಿ ನೀಡಿದಾಗಿನಿಂದ ಅವರ ಬಳಿ ಸದಾಕಾಲ ಸಾಯಿಬಾಬಾರವರ ಚಿತ್ರಪಟವಿರುತ್ತಿತ್ತು. ಜಯಕರ್ ರವರು ಎಲ್ಲಿಯೇ ಹೋಗಲಿ ಸಾಯಿಬಾಬಾರವರು ಅವರನ್ನು ಮತ್ತು ಅವರ ಮನೆಯವರನ್ನು ವಿಶಿಷ್ಟ ರೀತಿಯಲ್ಲಿ ಸದಾಕಾಲ ಕಾಪಾಡುತ್ತಿದ್ದರು. ಅದರ ಕೆಲವು ಉದಾಹರಣೆಗಳು ಈ ಕೆಳಕಂಡಂತೆ ಇವೆ:

1916ನೇ ಇಸವಿಯಲ್ಲಿ ಜಯಕರ್ ರವರು ಮುಂಬೈ ನ ಭಾಗವಾದ ಮುಗಬಾತ್ ನ ಗಜಾನನ ರಾವ್ ಎಂಬುವರ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಮನೆಯ ಕೋಣೆಯೊಳಗೆ ಸಾಯಿಬಾಬಾರವರ ಚಿತ್ರಪಟವನ್ನು ಇರಿಸಲಾಗಿತ್ತು. ಒಂದು ದಿನ ರಾತ್ರಿ ಸುಮಾರು 2 ಗಂಟೆಯ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಸಾಯಿಬಾಬಾರವರ ಚಿತ್ರಪಟವಿದ್ದ ಕೋಣೆಗೆ ಮೊದಲು ನುಗ್ಗಲು ಪ್ರಯತ್ನಿಸಿದರು. ಕಿಟಕಿಯ ಎರಡು ಕಬ್ಬಿಣದ ಸರಳುಗಳನ್ನು ಯಶಸ್ವಿಯಾಗಿ ಕಿತ್ತು ಬಿಸುಟರು. ಇದರಿಂದ ಕಳ್ಳರಿಗೆ ಮನೆಯೊಳಗೆ ನುಗ್ಗಲು ಬಹಳ ಸುಲಭವಾಯಿತು. ಆದರೆ, ಅದೇ ಮನೆಯ ಇನ್ನೊಂದು ಕಡೆಯಲ್ಲಿ ವರಾಂಡದ ಹತ್ತಿರ ಕ್ಷೌರಿಕನೊಬ್ಬ ಮಲಗಿದ್ದನು. ಅವನು ಪ್ರತಿನಿತ್ಯ ಅದೇ ಸ್ಥಳದಲ್ಲಿ ಮಲಗುತ್ತಿದ್ದು ಸರಿಯಾಗಿ 4 ಘಂಟೆಗೆ ಏಳುವ ಅಭ್ಯಾಸ ಇಟ್ಟುಕೊಂಡಿದ್ದನು ಮತ್ತು ಮನೆಯ ಹಿಂಭಾಗದಲ್ಲಿ ಹೋಗಿ ಜಲಬಾಧೆಯನ್ನು ತೀರಿಸಿಕೊಂಡು ಬರುತ್ತಿದ್ದನು. ಆದರೆ, ಕಳ್ಳರು ನುಗ್ಗಲು ಯತ್ನಿಸಿದ ದಿನದಂದು 2 ಘಂಟೆಗೆ ಎದ್ದು ಮನೆಯ ಹಿಂಭಾಗದಲ್ಲಿ ಜಲಬಾಧೆಯನ್ನು ತೀರಿಸಿಕೊಳ್ಳಲು ಹೋದನು. ಅವನು ಬರುತ್ತಿರುವುದನ್ನು ನೋಡಿ ಕಳ್ಳರು ಭಯದಿಂದ ಓಡಲು ಪ್ರಾರಂಭಿಸಿದರು. ಅವರುಗಳು ಓಡುವುದನ್ನು ನೋಡಿದ ಕ್ಷೌರಿಕ "ಕಳ್ಳರು ಕಳ್ಳರು" ಎಂದು ಜೋರಾಗಿ ಕೂಗಿಕೊಂಡನು. ಅವನು ಕೂಗುವುದನ್ನು ಕೇಳಿ ಮನೆಯವರೆಲ್ಲರೂ ಎಚ್ಚರಗೊಂಡರು. ಹೀಗೆ ಮನೆಯನ್ನು ಲೂಟಿ ಮಾಡಿ ಕಳ್ಳರು ದೋಚಿಕೊಂಡು ಹೋಗುವುದು ತಪ್ಪಿತು.   ಮನೆಯವರೆಲ್ಲರೂ ಕೋಣೆಯಲ್ಲಿದ್ದ ಸಾಯಿಬಾಬಾರವರು ಮನೆಯಲ್ಲಿ ಕಳ್ಳತನ ಆಗುವುದನ್ನು ತಪ್ಪಿಸಿದರು ಎಂದು ಮನಗಂಡರು.

ಸುಮಾರು 1917ನೇ ಇಸವಿಯಲ್ಲಿ ಜಯಕರ್ ರವರ ಮನೆಯವರು ಪುಣೆಯಲ್ಲಿ ಒಂದು ಶಿಥಿಲವಾದ ಮನೆಯಲ್ಲಿ ವಾಸಿಸುತ್ತಿದ್ದರು. ಆ ಮನೆಯ ಗೋಡೆಗಳು ಹಾಗೂ ಚಾವಣಿ ಕಿತ್ತು ಬೀಳುವ ಹಾಗೆ ತೋರುತ್ತಿತ್ತು. ಆ ಮನೆಯ ಕೋಣೆಯಲ್ಲಿ ಧೂಳು ಬೀಳದಿರಲೆಂದು ಚಾವಣಿಗೆ ಒಂದು ಬಟ್ಟೆಯನ್ನು ಕಟ್ಟಿ ಅದನ್ನು ಕೆಳಗಡೆ ಇಳಿ ಬಿಡಲಾಗಿತ್ತು.  ಆ ಕೋಣೆಯಲ್ಲಿ ಸಾಯಿಬಾಬಾರವರ ಚಿತ್ರಪಟವೊಂದನ್ನು ಇರಿಸಲಾಗಿತ್ತು  ಮತ್ತು ಆ ಚಿತ್ರಪಟದ ಎದುರುಗಡೆ ಸೀಮೆಎಣ್ಣೆಯ ದೀಪದ ಬುಡ್ಡಿಯನ್ನು ಇರಿಸಲಾಗಿತ್ತು. ಆ ದೀಪದ ಪಕ್ಕದಲ್ಲೇ ಜಯಕರ್ ರವರ ಒಂದು ವರ್ಷದ ಮಗುವು ಮಲಗಿತ್ತು. ಮಧ್ಯರಾತ್ರಿಯ ವೇಳೆಯಲ್ಲಿ ಜೋರಾಗಿ ಶಬ್ದ ಕೇಳಿಸಿತು. ಚಾವಣಿಗೆ ಹೊದ್ದಿಸಿದ್ದ ಬಟ್ಟೆಯು ಕೆಳಗಡೆ ಬಿದ್ದಿತ್ತು. ಕೆಲವು ಇಟ್ಟಿಗೆಯ ಚೂರುಗಳು ಕೆಳಗಡೆ ಬಿದ್ದ ಬಟ್ಟೆಯ ಮೇಲೆ ಬಿದ್ದಿದ್ದವು. ಪೂರ್ತಿ ಚಾವಣಿಗೆ ಬಟ್ಟೆಯನ್ನು ಕಟ್ಟಿದ್ದರಿಂದ ಪೂರ್ತಿ ಚಾವಣಿಯೇ ಮುರಿದು ಮಗುವಿನ ಮೇಲೆ ಮತ್ತು ಸಾಯಿಬಾಬಾರವರ ಚಿತ್ರಪಟದ ಮೇಲೆ ಬೀಳಬೇಕಾಗಿತ್ತು. ಆದರೆ, ಸಾಯಿಬಾಬಾರವರ ಸಂಕಲ್ಪವೇ ಬೇರೆ ಇದ್ದಿತು. ಚಾವಣಿಯ ಇಟ್ಟಿಗೆಯ ಚೂರುಗಳು ಮಗುವಿನಿಂದ ಮತ್ತು ದೀಪದಿಂದ ಸುಮಾರು ಒಂದು ಅಡಿ ದೂರದಲ್ಲಿ ಬಿದ್ದಿತ್ತು. ಮಗುವಿನ ಮೇಲೆ ಬಿದ್ದಿದ್ದರೆ ಮಗುವು ಸತ್ತು ಹೋಗುತ್ತಿತ್ತು. ದೀಪದ ಮೇಲೆ ಬಿದ್ದಿದ್ದರೆ ಇಡೀ ಮನೆಯೇ ಹತ್ತಿಕೊಂಡು ಮಗುವಿನ ಸಮೇತ ಸುಟ್ಟುಹೋಗುತ್ತಿತ್ತು.  ಇದಲ್ಲವೇ, ಸಾಯಿ ಬಾಬಾರವರ ಲೀಲೆ ಎಂದರೆ!!!!!!!!!!


1917ನೇ ಇಸವಿಯಲ್ಲಿ ಜಯಕರ್ ರವರು ತಮ್ಮ ಮನೆಯವರ ಸಮೇತ ಶಿರಡಿಗೆ ಹೋಗಿ ಸುಮಾರು 10 ತಿಂಗಳುಗಳ ಕಾಲ ತಂಗಿದ್ದರು. ಇವರ ಮನೆಯವರೆಲ್ಲ ಬಾಳಾ ಬಾವುವಿನ ಅಂದರೆ ಶಾರದಾಬಾಯಿಯವರ ಮನೆಯಲ್ಲಿ ತಂಗಿದ್ದರು. ಅವರ ಮನೆಯ ಕೋಣೆಯಲ್ಲಿ ಸರ್ಪವೊಂದು ಗೂಡು ಮಾಡಿಕೊಂಡು ವಾಸ ಮಾಡುತ್ತಿತ್ತು. ಇದರಿಂದ ಇವರ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು. ಒಂದು ದಿನ ರಾತ್ರಿ ಜಯಕರ್ ರವರ ಮಗ ಮತ್ತು ಇತರರು ಆ ಸರ್ಪವು ಗೂಡಿನಿಂದ ಹೊರಬರುವುದನ್ನು ನೋಡಿ ಅದನ್ನು ಹೊಡೆದು ಕೊಂದರು.

1923ನೇ ಇಸವಿಯಲ್ಲಿ ಜಯಕರ್ ರವರ ಹತ್ತು ವರ್ಷದ ಮಗನಾದ ಸುರೇಂದ್ರನಿಗೆ ಟೈಫಾಯಿಡ್ ಜ್ವರ ಕಾಣಿಸಿಕೊಂಡಿತು. ಒಂದು ದಿನ ಸುರೇಂದ್ರನ ಜ್ವರ ಜಾಸ್ತಿಯಾಗಿ ಹೊಟ್ಟೆಯಿಂದ ವಾಯುವು ಮೇಲ್ಮುಖವಾಗಿ ಹೃದಯ ಭಾಗಕ್ಕೆ ಬಂದು ನೋವು ವಾಯುಭಾರ ಹೆಚ್ಚಾಗಿ  "ಕಾಪಾಡಿ, ಕಾಪಾಡಿ" ಎಂದು ಕೂಗಿಕೊಂಡನು. ಇದನ್ನು ನೋಡಿ ಜಯಕರ್ ವರಿಗೆ ಏನೂ ಮಾಡಲು ತೋಚದಂತಾಯಿತು. ಜಯಕರ್ ವರು ಜೋರಾಗಿ "ಬಾಬಾ" ಎಂದು ಅಳಲು ಪ್ರಾರಂಭಿಸಿದರು. ಒಂದೇ ನಿಮಿಷದಲ್ಲಿ ಸುರೇಂದ್ರನ ವಾಯುಭಾರ ಕಡಿಮೆಯಾಗಿ ಮೊದಲಿನಂತಾದನು.

ಸಾಯಿಬಾಬಾರವರು ಜಯಕರ್ ರವರಿಗೆ ಯಾವುದೇ ಮಂತ್ರೋಪದೇಶ ಮಾಡಲಿಲ್ಲ. ಏಕೆಂದರೆ, ಜಯಕರ್ ರವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲೇ ತಮ್ಮ ಗುರುವಿನಿಂದ ಮಂತ್ರೋಪದೆಶವನ್ನು ಪಡೆದು ಅವರ ಆದೇಶದಂತೆ 12 ವರ್ಷಗಳ ಕಾಲ ಉಚ್ಚರಿಸಿ ಸಿದ್ದಿ ಮಾಡಿಕೊಂಡಿದ್ದರು. ಆದ್ದರಿಂದ ಬಾಬಾರವರು ಕೇವಲ ಅಧ್ಯಾತ್ಮಿಕ ಬೋಧನೆಯನ್ನು ಮಾತ್ರ ಮಾಡುತ್ತಿದ್ದರು. ಬಾಬಾರವರು ತಮಗೆ ಪ್ರಶ್ನೆಯನ್ನು ಕೇಳುವ ವ್ಯಕ್ತಿ ಇನ್ನೊಬ್ಬರ ಮುಖಾಂತರ ಕೇಳುವುದನ್ನು ಇಷ್ಟ ಪಡುತ್ತಿರಲಿಲ್ಲ. ನೇರವಾಗಿ ತಮ್ಮನ್ನೇ ಕೇಳಬೇಕೆಂದು ಬಯಸುತ್ತಿದ್ದರು.

ಒಮ್ಮೆ ಬಾಬಾರವರು ಹೆಚ್.ಎಸ್.ದೀಕ್ಷಿತ್ ರವರನ್ನು ಕರೆದು 30 ರುಪಾಯಿಗಳ ದಕ್ಷಿಣೆಯನ್ನು ನೀಡುವಂತೆ ಕೇಳಿದರು.  ಆಗ ದೀಕ್ಷಿತ್ ರವರು ತಮ್ಮ ಬಳಿ ಹಣ ಇಲ್ಲವೆಂದು ಹೇಳಿದಾಗ ಸಾಯಿಬಾಬಾರವರು ಹಣವನ್ನು ಬಾಪು ಸಾಹೇಬ್ ಜೋಗ ರವರ ಬಳಿ ಹೋಗಿ ತರಲು ಆಜ್ಞಾಪಿಸಿದರು. ಸಾಯಿಯವರ ಆದೇಶದಂತೆ ದೀಕ್ಷಿತ್ ಹೊರಟರು. ಇನ್ನು ಮಸೀದಿಯ ಹೊರಬಾಗಿಲನ್ನು ಕೂಡ ದೀಕ್ಷಿತ್ ದಾಟಿರಲಿಲ್ಲ. ಆಗ ಬಾಬಾರವರು "ಇವನ ಮನಸ್ಸು ಸ್ಥಿರವಾಗಿಲ್ಲ" ಎಂದರು. ಸಾಯಿಬಾಬಾರವರು ಹಾಗೆ ಹೇಳಲು ಕಾರಣವೇನೆಂದರೆ ದೀಕ್ಷಿತ್ ರವರ ಮನಸ್ಸಿನಲ್ಲಿ ಸಾಯಿಬಾಬಾರವರ ಬಗ್ಗೆ ಸಂಶಯ ಮನೋಭಾವನೆ ಇತ್ತು. ಆದುದರಿಂದ ಅವರು ಸಾಯಿಬಾಬಾರವರನ್ನೇ ನೇರವಾಗಿ ಕೇಳುವ ಬದಲು ಅವರ ಬಗ್ಗೆ ಶಿರಡಿಯಲ್ಲಿದ್ದ ಅನೇಕ ಜನರಲ್ಲಿ ವಿಚಾರ ಮಾಡುತ್ತಿದ್ದರು. ಆದರೆ, ಕಾಲ ಕಳೆದಂತೆ ದೀಕ್ಷಿತ್ ರವರಿಗೆ ಸಾಯಿಬಾಬಾರವರ ಮೇಲೆ ನಂಬಿಕೆ ಹುಟ್ಟಿ ಅವರ ಮನೋಭಾವ ಬದಲಾಯಿತು.

ಬಾಬಾರವರು ಜಯಕರ್ ರವರಿಗೆ ತಮ್ಮ ಅಂತರ್ಜ್ಞಾನವನ್ನು ಪ್ರದರ್ಶಿಸುವ ಮುಖಾಂತರ ಅವರಿಗೆ ತಮ್ಮ ಮೇಲಿದ್ದ ನಂಬಿಕೆಯನ್ನು ಬಲಪಡಿಸಿದರು. ಒಮ್ಮೆ  ಜಯಕರ್ ರವರು ಸಾಯಿಬಾಬಾರವರ ಮುಂದೆ ಕುಳಿತಿದ್ದರು. ಅವರ ಅಂಗಿಯ ಜೇಬಿನಲ್ಲಿ ಕೇವಲ 3 ರುಪಾಯಿಗಳಿದ್ದವು. ಆ ಸಮಯದಲ್ಲಿ ಸಾಯಿಬಾಬಾರವರ ಪಕ್ಕದಲ್ಲಿ ಕಾಕಾ ದೀಕ್ಷಿತ್, ನಾನಾ ಸಾಹೇಬ್ ನಿಮೋಣ್ಕರ್ ರವರುಗಳು ಕೂಡ ಇದ್ದರು. ಆಗ ಬಾಬಾರವರು ಜಯಕರ್ ರವರನ್ನು ಉದ್ದೇಶಿಸಿ "ಮಾಲಾ ಚಾರ್ ದ್ಯಾವೇ"
ಎಂದು ಕೇಳಿದರು. ಜಯಕರ್ ರವರು ಸಾಯಿಬಾಬಾರವರು ತಮ್ಮನ್ನು ಹಣ ಕೇಳುತ್ತಿದ್ದಾರೆ ಎಂದು ತಿಳಿದುಕೊಂಡರು. ಆದ್ದರಿಂದ ತಮ್ಮ ಅಂಗಿಯ ಜೇಬಿನಿಂದ 3 ರುಪಾಯಿಗಳನ್ನು ತೆಗೆದು ಸಾಯಿಬಾಬಾರವರ ಮುಂದೆ ಇಟ್ಟರು. ಕಾಕಾ ಸಾಹೇಬ್ ದೀಕ್ಷಿತ್ ರವರು ಜಯಕರ್ ರವರ ಕಡೆ ನೋಡುತ್ತಾ "ನಾಲ್ಕು ರುಪಾಯಿಗಳನ್ನು ಕೇಳುತ್ತಿರುವಾಗ 3 ರುಪಾಯಿಗಳನ್ನು ಏಕೆ ಕೊಡುತ್ತಿದ್ದೀರಿ" ಎಂದು ಕೇಳಿದರು. ಕೂಡಲೇ ಬಾಬಾರವರು "ಏಕೆ ನಾಲ್ಕು ರುಪಾಯಿಗಳು? ಅವನ ಬಳಿ ಇರುವುದೇ  3 ರುಪಾಯಿಗಳು" ಎಂದು ನುಡಿದರು. ಸಾಯಿಬಾಬಾರವರಿಗೆ ಜಯಕರ್ ರವರ ಅಂಗಿಯ ಜೇಬಿನಲ್ಲಿದ್ದುದು ಕೇವಲ 3 ರುಪಾಯಿಗಳು ಎಂದು ಮೊದಲೇ ತಿಳಿದಿತ್ತು. ಸಾಯಿಬಾಬಾರವರಿಗೆ ಜಯಕರ್ ರವರು ಅವರ ಬಳಿ ಉಳಿದಿದ್ದ ಎಲ್ಲ ಹಣವನ್ನು ಸಂತೋಷದಿಂದ ನೀಡಿ ತಮ್ಮ ತೊಂದರೆಯನ್ನು ವಿಧಿಗೆ ಒಪ್ಪಿಸಬೇಕೆಂದು ಆಗಿತ್ತು. ಅದರಂತೆ, ಜಯಕರ್ ರವರು ಕೂಡ ನಡೆದುಕೊಂಡರು.

ಇನ್ನೊಂದು ಘಟನೆ ಈ ರೀತಿಯಿದೆ: 1917ನೇ ಇಸವಿಯ ಆಷಾಢ ಮಾಸದ ಒಂದು ದಿನ ಜಯಕರ್  ರವರು ಮಸೀದಿಯ ಸಭಾಮಂಟಪದಲ್ಲಿ ಸಾಯಿಬಾಬಾರವರು ಕುಳಿತಿದ್ದ ಜಾಗದಿಂದ ಸುಮಾರು ಇಪ್ಪತ್ತು ಅಡಿಗಳಷ್ಟು ದೂರದಲ್ಲಿ ಕುಳಿತಿದ್ದರು. ವರ್ದೆ ಎನ್ನುವ ಭಕ್ತರೊಬ್ಬರು ಅವರ ಬಳಿ ಕುಳಿತು ಮಾತನಾಡುತ್ತಿದ್ದರು. ಅವರು ಮಸೀದಿಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಲು ಇಚ್ಚಿಸಿ ಅದಕ್ಕೆ ಸಾಯಿಬಾಬಾರವರ ಅನುಮತಿಯನ್ನು ಬೇಡಿದರು. ಬಾಬಾರವರು ಅದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆಗ ವರ್ದೆಯವರು ತಮ್ಮ ಬಳಿ ಪೂಜೆ ಮಾಡಲು ಹಣದ ಅಭಾವವಿರುವುದಾಗಿ ತಿಳಿಸಿದರು. ಆಗ ಬಾಬಾರವರು ಜಯಕರ್ ರವರ ಬಳಿ ತಮ್ಮ ಕೈಬೆರಳನ್ನು ತೋರಿಸುತ್ತಾ "ಹೋಗಿ ಅವನನ್ನು ಕೇಳು" ಎಂದರು. ವರ್ದೆಯವರು ಜಯಕರ್ ರವರ ಬಳಿಗೆ ಬಂದು ಸಾಯಿಬಾಬಾರವರು ಮಸೀದಿಯಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಲು ಒಪ್ಪಿಗೆ ನೀಡಿರುವುದಾಗಿ ತಿಳಿಸಿ ಅದರ ಖರ್ಚಿಗಾಗಿ ಬೇಕಾದ ಹಣವನ್ನು ಇವರ ಬಳಿ ತೆಗೆದುಕೊಳ್ಳುವಂತೆ ಹೇಳಿರುವುದಾಗಿ ತಿಳಿಸಿದರು. ಜಯಕರ್ ರವರಿಗೆ ವರ್ದೆಯವರ ಪರಿಚಯ ಹೆಚ್ಚಾಗಿ ಇರಲಿಲ್ಲ. ಅವರು ಕೇವಲ ಒಬ್ಬ ಸಾಯಿಬಾಬಾರವರ ಭಕ್ತರೆಂದು ಮಾತ್ರ ತಿಳಿದಿತ್ತು. ಆದರೂ ಸಾಯಿಬಾಬಾರವರ ಆಜ್ಞೆ ಎಂದು ತಿಳಿದ ಕೂಡಲೇ ಜಯಕರ್ ರವರು ಎಷ್ಟು ಹಣ ಬೇಕೆಂದು ವರ್ದೆಯವರನ್ನು ವಿಚಾರಿಸಿದರು. ವರ್ದೆಯವರು 2-5-0 ರುಪಾಯಿಗಳು ಬೇಕೆಂದು ಕೇಳಿದರು. ಆಗ ಜಯಕರ್ ರವರ ಅಂಗಿಯ ಜೇಬಿನಲ್ಲಿ ಸರಿಯಾಗಿ ಅಷ್ಟೇ ಹಣವಿತ್ತು. ಜಯಕರ್ ರವರಿಗೆ ಇದು ಸಾಯಿಬಾಬಾರವರ ಲೀಲೆ ಎಂದು ಕೂಡಲೇ ತಿಳಿದುಬಂದಿತು. ಕೂಡಲೇ ಸ್ವಲ್ಪವೂ ತಡ ಮಾಡದೆ ತಮ್ಮ ಜೇಬಿನಿಂದ ಹಣವನ್ನು ತೆಗೆದು ವರ್ದೆಯವರಿಗೆ ಕೊಟ್ಟುಬಿಟ್ಟರು. ವರ್ದೆಯವರು ಆ ಹಣವನ್ನು ಪಡೆದು ಸತ್ಯನಾರಾಯಣ ಪೂಜೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಲು ಹೊರಟರು. ಎರಡು ಬಾಳೆಯ ಎಲೆಗಳನ್ನು ತಂದು ಸಾಯಿಬಾಬಾರವರ ಎರಡೂ ಬದಿಯಲ್ಲಿ ಕಟ್ಟಿದರು.  ಸಾಯಿಬಾಬಾರವರನ್ನೇ ಸತ್ಯನಾರಾಯಣ ಎಂದು ಭಾವಿಸಿ ವರ್ದೆಯವರು ಹೀಗೆ ಮಾಡಿದರು. ಇದಕ್ಕೆ ಬಾಬಾರವರು ಒಪ್ಪದೇ ಆ ಬಾಳೆಯ ಎಲೆಗಳನ್ನು ಸತ್ಯನಾರಾಯಣ ಸ್ವಾಮಿಯ ಚಿತ್ರಪಟದ ಎಕ್ಕೆಲೆಗಳಲ್ಲಿ ಕಟ್ಟಬೇಕೆಂದು ತಿಳಿಸಿದರು. ಆದರೆ ಮಸೀದಿಯಲ್ಲಿ ಸೇರಿದ್ದ ಎಲ್ಲಾ ಭಕ್ತರೂ ಸಾಯಿಬಾಬಾರವರೇ ಸತ್ಯನಾರಾಯಣನಂತೆ ನಟಿಸಿ ಪೂಜೆಯಲ್ಲಿ ಪಾಲ್ಗೊಳ್ಳಬೇಕೆಂದು ಹಠ ಮಾಡಿದರು. ಕೊನೆಗೆ ಬಾಬಾರವರು ಅದಕ್ಕೆ ಸಮ್ಮತಿಸಿದರು. ಸಭಾಮಂಟಪದಲ್ಲಿ ಸತ್ಯನಾರಾಯಣ ವ್ರತದ ಕಥೆಯನ್ನು ಓದಲು ಆರಂಭ ಮಾಡಿದರು. ಆಗ ಜಯಕರ್ ಮತ್ತು ಇಬ್ಬರು ಬೇರೆ ಭಕ್ತರು ಸಾಯಿಬಾಬಾರವರ ಪಕ್ಕದಲ್ಲಿ ಮಸೀದಿಯಲ್ಲೇ ಕುಳಿತಿದ್ದರು. ಅವರು ಸಾಯಿಬಾಬಾರವರ ಪಕ್ಕದಲ್ಲಿ ಮಸೀದಿಯಲ್ಲಿ ಕುಳಿತಿದ್ದರಿಂದ ಸತ್ಯನಾರಾಯಣ ವ್ರತ ಕಥೆಯನ್ನು ಕೇಳಲು ಆಗುತ್ತಿರಲಿಲ್ಲ. ಆದರೆ, ಅವರಿಗೆ ಸತ್ಯನಾರಾಯಣ ವ್ರತ ಕಥೆಯನ್ನು ಕೇಳುವುದೆಂದರೆ ಬಹಳ ಇಷ್ಟವಾಗುತ್ತಿತ್ತು. ಆದ ಕಾರಣ ಜಯಕರ್ ರವರ ಮನಸ್ಸು ಆಗ ಗೊಂದಲಮಯವಾಗಿತ್ತು. ಇವರ ಅಂತರಂಗವನ್ನು ತಿಳಿದಿದ್ದ ಬಾಬಾರವರು ಜಯಕರ್ ರವರಿಗೆ ಕೆಳಗಡೆ ಹೋಗಿ ಕುಳಿತು ಕಥೆಯನ್ನು ಕೇಳುವಂತೆ ಆಜ್ಞಾಪಿಸಿದರು.

ಇನ್ನೊಂದು ಬಾರಿ ಸಾಯಿಬಾಬಾರವರು ಒಂದು ಮುಗ್ಧ ಪ್ರಾಣಿಯನ್ನು ಹೇಗೆ ಕಾಪಾಡಿದರು ಎಂಬುದನ್ನು ನೋಡೋಣ. ಒಮ್ಮೆ ಜಯಕರ್ ರವರು ದೀಕ್ಷಿತ್ ವಾಡಾ ದ ವರಾಂಡದಲ್ಲಿ ಕುಳಿತಿದ್ದಾಗ ಒಂದು ವಿಚಿತ್ರವನ್ನು ನೋಡಿದರು. ದೊಡ್ಡ ನಾಯಿಗಳನ್ನು ಒಂದು ಸಣ್ಣ ಹುಚ್ಚು ನಾಯಿ ಅಟ್ಟಿಸಿಕೊಂಡು ಹೋಗುವುದನ್ನು ಕಂಡರು. ಆ ಸಣ್ಣ ನಾಯಿಯು ತಮ್ಮನ್ನು ಕಚ್ಚುವ ಭಯದಿಂದ ದೊಡ್ಡ ನಾಯಿಗಳು ಓಡುತ್ತಿದ್ದವು. ಈ ವಿಚಿತ್ರ ದೃಶ್ಯವನ್ನು ಕಂಡ ಶಿರಡಿಯ ಗ್ರಾಮಸ್ಥರು ಕೋಲುಗಳನ್ನು ಹಿಡಿದು ಆ ಸಣ್ಣ ನಾಯಿಯನ್ನು ಸಾಯಿಸುವ ಸಲುವಾಗಿ ಅದರ ಹಿಂದೆ ಓಡತೊಡಗಿದರು. ಈ ಘಟನೆ ನಡೆಯುತ್ತಿರುವಾಗ ಜಯಕರ್ ರವರು ಮಸೀದಿಗೆ ಬಂದಿದ್ದರು. ಅವರ ಹಿಂದೆ ನಾಯಿಯನ್ನು ಅಟ್ಟಿಸಿಕೊಂಡು ಬಂದ ಜನರುಗಳೂ ಕೂಡ ಬಂದರು. ಅವರುಗಳನ್ನು ಕಂಡ ಆ ಸಣ್ಣ ನಾಯಿಯು ಓಡಿಹೋಗಿ ಸಾಯಿಬಾಬಾರವರ ಹಿಂದೆ ಅಡಗಿ ಕುಳಿತುಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಬಂದ ಜನರು ಆ ನಾಯಿಯು ಸಾಯಿಬಾಬಾರವರ ಹಿಂಭಾಗದಿಂದ ಹೊರಗಡೆ ಬರುವುದನ್ನೇ ಕಾಯುತ್ತಾ ನಿಂತರು. ಆದರೆ, ಬಾಬಾರವರು ನಾಯಿಯನ್ನು ಅಟ್ಟಿಸಿಕೊಂಡು ಬಂದ ಜನರನ್ನು ಬಾಯಿಗೆ ಬಂದಂತೆ ಬಯ್ದರು. ಆ ಪ್ರಾಣಿಯನ್ನು ಏಕೆ ಹಿಂಸೆ ಮಾಡುವಿರಿ ಎಂದು ತರಾಟೆಗೆ ತೆಗೆದುಕೊಂಡರು. ಆಗ ಆ ಜನರು ಆ ನಾಯಿಗೆ ಹುಚ್ಚು ಹಿಡಿದಿರುವುದಾಗಿ ಹೇಳಿ ಆದ ಕಾರಣ ಅದನ್ನು ಕೊಲ್ಲಲು ಹೊರಟಿರುವುದಾಗಿ ತಿಳಿಸಿದರು. ಅದಕ್ಕೆ ಬಾಬಾರವರು ಇನ್ನು ಹೆಚ್ಚಿಗೆ ಬಯ್ಗುಳಗಳನ್ನು ಸುರಿಸಿ ಮಸೀದಿಯಿಂದ ಹೊರಟು ಹೋಗುವಂತೆ ಆಜ್ಞಾಪಿಸಿದರು. ಆಗ ಅಲ್ಲಿ ಜಯಕರ್ ಮತ್ತು ಡಾ.ಪಿಳ್ಳೆಯವರು ಕೂಡ ಇದ್ದರು. ಅವರುಗಳು ಕೂಡ ನಾಯಿಗೆ ಹುಚ್ಚು ಹಿಡಿದಿರುವುದರಿಂದ ಅದರ ಹತ್ತಿರ ಇರುವುದು ಅಪಾಯ ಎಂದು ಯೋಚಿಸತೊಡಗಿದರು. ಆದರೆ ಕೊನೆಗೆ ನಾಯಿಯನ್ನು ಅಟ್ಟಿಸಿಕೊಂಡು ಬಂದಿದ್ದ ಜನರೆಲ್ಲರೂ ವಿಧಿ ಇಲ್ಲದೆ ಬಂದ ದಾರಿಯಲ್ಲೇ ಹಿಂತಿರುಗಿದರು. ಹೀಗೆ ಸಾಯಿಬಾಬಾರವರು ಆ ನಾಯಿಯ ಪ್ರಾಣವನ್ನು ಉಳಿಸಿದರು. ಆಗ ಜಯಕರ್ ರವರು ಸಾಯಿಬಾಬಾರವರು ಆ ನಾಯಿಯ ಖಾಯಿಲೆಯನ್ನು ವಾಸಿ ಮಾಡಿ ಅದರ ಪ್ರಾಣವನ್ನು ಉಳಿಸಿರುವುದಾಗಿ ಡಾ.ಪಿಳ್ಳೆಯವರಿಗೆ ತಿಳಿಸಿದರು. ಅಂತರ್ ಜ್ಞಾನಿಯಾದ ಬಾಬಾರವರಿಗೆ ಆ ನಾಯಿಯ ಖಾಯಿಲೆಯ ವಿಷಯ, ಅದನ್ನು ವಾಸಿ ಮಾಡುವ ಬಗೆ ಮತ್ತು ಅದನ್ನು ಜನರಿಂದ ರಕ್ಷಿಸುವ ವಿಷಯವೆಲ್ಲಾ ಮೊದಲೇ ತಿಳಿದಿತ್ತೆಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ?

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಮಹಾರಾಷ್ಟ್ರ ಸರ್ಕಾರದ ಸಹಕಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಹಾರಾಷ್ಟ್ರ ಸರ್ಕಾರದ ಸಹಕಾರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ.ಹರ್ಷವರ್ಧನ ಪಾಟೀಲ್ ರವರು ಇದೇ ತಿಂಗಳ 30ನೇ ಸೆಪ್ಟೆಂಬರ್ 2011, ಶುಕ್ರವಾರ, ಶಿರಡಿಗೆ ಭೇಟಿ ನೀಡಿ ಸಾಯಿಬಬಾರವರ ಸಮಾಧಿಯ ದರ್ಶನವನ್ನು ಪಡೆದರು. ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆಯವರು ಸನ್ಮಾನಿಸಿದರು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, September 29, 2011

ಮುಂಬೈ ನ ಸಾಯಿಭಕ್ತರಿಂದ ಸಾಯಿಬಾಬಾರವರಿಗೆ ಚಂದನದ ಪಲ್ಲಕ್ಕಿಯ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಮುಂಬೈ ನ ಸಾಯಿಭಕ್ತರಾದ ಶ್ರೀ.ಸುರೇಶ ವಾದ್ವ ರವರು ಇದೇ ತಿಂಗಳ 29ನೇ ಸೆಪ್ಟೆಂಬರ್ 2011, ಗುರುವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ 19,50,000 ರುಪಾಯಿ ಬೆಲೆಬಾಳುವ ಚಂದನದ ಪಲ್ಲಕ್ಕಿಯನ್ನು ಕಾಣಿಕೆಯಾಗಿ ನೀಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, September 27, 2011

ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಮಂಗಳೂರಿನ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ (ನೋಂದಣಿ), ಲೇಡಿ ಹಿಲ್,ಉರ್ವ,ಚಿಲಿಂಬಿ, ಮಂಗಳೂರು-575 006,   ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಮಂಗಳೂರಿನ ಭೂಮಿಯನ್ನು ಮತ್ತು ಅಲ್ಲಿನ ಜನರನ್ನು ಪಾವನಗೊಳಿಸುವ ಸಲುವಾಗಿ ಸ್ವತಃ  ಶಿರಡಿ ಸಾಯಿಬಾಬಾರವರೇ ಮುಂಬೈನ  ಸಾಯಿಭಕ್ತೆ ಚಂದ್ರಾಭಾಯಿಯವರೊಂದಿಗೆ ಆಗಮಿಸಿದರು. ಚಂದ್ರಾಭಾಯಿಯವರ ಕನಸಿನಲ್ಲಿ ಕಾಣಿಸಿಕೊಂಡು "ನನ್ನನ್ನು ನಿನ್ನೊಂದಿಗೆ ಮಂಗಳೂರಿಗೆ ಕರೆದುಕೊಂಡು ಹೋಗು" ಎಂದು ಸಾಯಿಯವರು ನುಡಿದಿದ್ದರು. ಅದರಂತೆ, 1965 ರಲ್ಲಿ ಚಂದ್ರಾಭಾಯಿಯವರು ದಕ್ಷಿಣ ಕನ್ನಡದ ಪ್ರಪ್ರಥಮ ಸಾಯಿಬಾಬಾ ಮಂದಿರವನ್ನು ಉರ್ವ, ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಪ್ರಾರಂಭಿಸಿದರು. 

ಸಾಯಿಯವರ ವಾಣಿಯಾದ "ಶ್ರದ್ಧೆ ಮತ್ತು ತಾಳ್ಮೆ" ಯನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದರಿಂದ ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲಾ ಧೈರ್ಯವಾಗಿ ಎದುರಿಸಿ ಜಯಶಾಲಿಯಾದರು. ಸಾಯಿಬಾಬಾರವರ ಆಶೀರ್ವಾದದಿಂದ ಅವರ  ಮನೆಯವರೆಲ್ಲರ ಕಷ್ಟಗಳು ದೂರವಾದವು. ನಿಧಾನವಾಗಿ ಈ ಮಂದಿರಕ್ಕೆ ಬರುತ್ತಿದ್ದ ಜನರಲ್ಲಿ ಕೂಡ ಸಾಯಿಯವರು ತಮ್ಮ  ಚಮತ್ಕಾರಗಳನ್ನು ತೋರಿಸಿ ಜನರ ಲೌಕಿಕ ಹಾಗೂ ಆಧ್ಯಾತ್ಮಿಕ ಕೋರಿಕೆಗಳನ್ನು ಈಡೇರಿಸಿದರು. 

ಚಂದ್ರಾಭಾಯಿಯವರು ಕಾಲವಾದ ನಂತರ ಈ ಮಂದಿರದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಅವರ ಮೊಮ್ಮಗನಾದ ವಿಶ್ವಾಸ್ ಕುಮಾರ್ ದಾಸ್ ರವರು ವಹಿಸಿಕೊಂಡಿರುತ್ತಾರೆ. ಪ್ರತಿನಿತ್ಯ ಈ ಮಂದಿರಕ್ಕೆ ನೂರಾರು ವಿದ್ಯಾರ್ಥಿಗಳು ಬರುವುದೇ ಒಂದು ವಿಶೇಷ. ಗುರುವಾರದ ದಿನ ಈ ಮಂದಿರದಲ್ಲಿ ಸಾಯಿ ಭಕ್ತ ಸಾಗರವೇ ಹರಿದು ಬರುತ್ತದೆ.















ದೇವಾಲಯದ ವಿಶೇಷತೆಗಳು: 


ಈ ದೇವಾಲಯವು ಮಂಗಳೂರು ಉಡುಪಿ ಮುಖ್ಯರಸ್ತೆಯಲ್ಲಿ ಲೇಡಿ ಹಿಲ್ ಚರ್ಚ್ ನ ಎದುರುಗಡೆ ಮತ್ತು ಮೋರ್ ಸೂಪರ್ ಮಾರುಕಟ್ಟೆ ಹತ್ತಿರ ಇರುವ ಉರ್ವ, ಚಿಲಿಂಬಿ ಯಲ್ಲಿ ಇರುತ್ತದೆ. ದೇವಾಲಯವು ಮಂಗಳೂರು  ಬಸ್ ನಿಲ್ದಾಣದಿಂದ ಸುಮಾರು ಆರು ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ.

ದೇವಾಲಯವನ್ನು ಮೊದಲು ಒಂದು ಮನೆಯಲ್ಲಿ 1965 ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. 

ಕಾಲಾನಂತರದಲ್ಲಿ ಆ ಮನೆಯ ಪಕ್ಕದಲ್ಲಿದ್ದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿ ಅದನ್ನು 20ನೇ ಏಪ್ರಿಲ್  1967 ರಂದು  ಸಾವಿರಾರು ಜನ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ದೇವಾಲಯದ ಸಂಸ್ಥಾಪಕ ಅಧ್ಯಕ್ಷೆಯಾದ ಶ್ರೀಮತಿ.ಚಂದ್ರಾಭಾಯಿಯವರು ಉದ್ಘಾಟಿಸಿದರು. 

ದೇವಾಲಯವನ್ನು ಶ್ರೀಮತಿ.ಚಂದ್ರಾ ಭಾಯಿಯವರು ನಿರ್ಮಿಸಿರುತ್ತಾರೆ. ಇವರ ಮೊಮ್ಮಗನಾದ ಶ್ರೀ.ವಿಶ್ವಾಸ್ ಕುಮಾರ್ ದಾಸ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ  ಸುಮಾರು 4 ಅಡಿ 1/4 ಅಂಗುಲ ಎತ್ತರದ ಮಿಶ್ರಿತ ಸಿಮೆಂಟ್ ನಿಂದ ಮಾಡಿದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಸುಮಾರು 3 ಅಡಿ ಎತ್ತರದ ಗ್ರಾನೈಟ್ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಹಿಂಭಾಗದಲ್ಲಿ ಬೆಳ್ಳಿಯ ಪ್ರಭಾವಳಿ ಹಾಗೂ ಸಾಯಿಬಾಬಾರವರ ವಿಗ್ರಹದ ಮೇಲ್ಭಾಗದಲ್ಲಿ ಬೆಳ್ಳಿಯ ಆದಿಶೇಷ ಇದ್ದು ಗರ್ಭಗುಡಿಗೆ ಹೆಚ್ಚಿನ ಶೋಭೆಯನ್ನು ತಂದಿದೆ. ಸುಮಾರು 3/4 ಅಡಿ ಎತ್ತರದ ಬೆಳ್ಳಿಯ ಸಾಯಿಬಾಬಾರವರ ವಿಗ್ರಹವು ಗರ್ಭಗುಡಿಯಲ್ಲಿ ಇದ್ದು ಇದನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತಿದೆ.  

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಮರದ ಪಲ್ಲಕ್ಕಿಯನ್ನು ಮಂದಿರದ ಒಳಗಡೆ ಕಾಣಬಹುದು. 


ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಅಷ್ಟೋತ್ತರ ನಾಮಾವಳಿ : ಬೆಳಿಗ್ಗೆ 8 ಘಂಟೆಗೆ
ಛೋಟಾ ಆರತಿ : ಬೆಳಿಗ್ಗೆ 9:30 ಕ್ಕೆ
ಮಧ್ಯಾನ್ಹ ಆರತಿ : ಮಧ್ಯಾನ್ಹ 12 ಘಂಟೆಗೆ
ಧೂಪಾರತಿ : ಸಂಜೆ 6 ಘಂಟೆಗೆ
ಮಹಾಪೂಜಾ: ರಾತ್ರಿ 8 ಘಂಟೆಗೆ
ಶೇಜಾರತಿ: ರಾತ್ರಿ 9 ಘಂಟೆಗೆ

ಪ್ರತಿನಿತ್ಯ ಬೆಳ್ಳಿಯ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕವನ್ನು ನಡೆಸಲಾಗುತ್ತದೆ. ಯಾವುದೇ ನಿಗದಿತ ಸೇವಾ ಶುಲ್ಕ ಇರುವುದಿಲ್ಲ.

ಪ್ರತಿನಿತ್ಯ ಅಷ್ಟೋತ್ತರ ನಾಮಾವಳಿ ಪೂಜೆಯನ್ನು ಮಂದಿರದಲ್ಲಿ ನಡೆಸಲಾಗುತ್ತಿದೆ. ಯಾವುದೇ ನಿಗದಿತ ಸೇವಾ ಶುಲ್ಕ ಇರುವುದಿಲ್ಲ.

ಪ್ರತಿನಿತ್ಯ ನಡೆಯುವ ಪೂಜೆ ಮತ್ತು ಆರತಿಯನ್ನು ಹೊರತುಪಡಿಸಿ ವಿಶೇಷ ಪೂಜೆಗಳಾದ ಪಾದ ಪೂಜೆ, ಅಲಂಕಾರ ಪೂಜೆ, ಗುರುವಾರದ ವಿಶೇಷ ಪೂಜೆ ಮತ್ತು ಅನ್ನದಾನ ಕಾರ್ಯಕ್ರಮವನ್ನು ಮಂದಿರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.

ವಿಶೇಷ ಉತ್ಸವದ ದಿನಗಳು: 

ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 20ನೇ ಏಪ್ರಿಲ್.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ಶ್ರೀ ಕೃಷ್ಣ ಜನ್ಮಾಷ್ಟಮಿ.
ದೀಪಾವಳಿ.
ತುಳಸಿ ಪೂಜೆ.
ವಿಜಯದಶಮಿ.

ಸಾಮಾಜಿಕ ಕಾರ್ಯಚಟುವಟಿಕೆಗಳು: 

ದೇವಾಲಯದ ಟ್ರಸ್ಟ್ ನ ವತಿಯಿಂದ ಅನಿಯಮಿತವಾಗಿ ಮಂಗಳೂರಿನ ಸುತ್ತಮುತ್ತಲೂ ವಾಸಿಸುವ ಕೆಲ ವರ್ಗದ ಜನರಿಗೆ, ಅಂಧರಿಗೆ, ಅಂಗವಿಕಲರಿಗೆ ಅನ್ನದಾನ, ಶಿಕ್ಷಣ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಒಕ್ಕಲಿಗರ ಸಂಘದ ಹಿಂಭಾಗ, ಲೇಡಿ ಹಿಲ್ ಚರ್ಚ್ ಎದುರುಗಡೆ, ಉರ್ವ, ಚಿಲಿಂಬಿ, ಮಂಗಳೂರು.

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ (ನೋಂದಣಿ), 
ಲೇಡಿ ಹಿಲ್, ಉರ್ವ, ಚಿಲಿಂಬಿ, ಮಂಗಳೂರು-575 006, ಕರ್ನಾಟಕ. 

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ವಿಶ್ವಾಸ್ ಕುಮಾರ್ ದಾಸ್ - ಮ್ಯಾನೇಜಿಂಗ್ ಟ್ರಸ್ಟಿ.

ದೂರವಾಣಿ ಸಂಖ್ಯೆಗಳು: 
+91 94481 35711 /  +91 824 2455711  
ಇಮೇಲ್ ವಿಳಾಸ: 
vishwas-das@yahoo.com / shirdisai_mng@yahoo.com    
 
ಅಂತರ್ಜಾಲ ತಾಣ: 
http://www.shirdisaimangalore.org  

ಮಾರ್ಗಸೂಚಿ: 
ಲೇಡಿ ಹಿಲ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ಒಕ್ಕಲಿಗರ ಸಂಘದ ಹಿಂಭಾಗದಲ್ಲಿ ದೇವಾಲಯವಿರುತ್ತದೆ. ದೇವಾಲಯವು ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುತ್ತದೆ. ಬಸ್ ಸಂಖ್ಯೆಗಳು: 1,2,13,15,45,60 ಮತ್ತು 61.



ಕನ್ನಡ ಅನುವಾದ: ಶ್ರೀಕಂಠ ಶರ್ಮ  

Monday, September 26, 2011

ಗೋವಾ ರಾಜ್ಯದ ನಗರಸಭೆಯ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರುಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಗೋವಾ ರಾಜ್ಯದ ನಗರಸಭೆಯ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರುಗಳು ಇದೇ ತಿಂಗಳ 26ನೇ ಸೆಪ್ಟೆಂಬರ್ 2011, ಸೋಮವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಅವರುಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ರವರು ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, September 24, 2011

ಶಿರಡಿಯ ಸಾಯಿ ಭಕ್ತರಿಂದ ಸಾಯಿಬಾಬನಿಗೆ ಚಿನ್ನದ ಹಾರದ ಅರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ 
ಶಿರಡಿಯ ಸಾಯಿ ಭಕ್ತರಾದ ಶ್ರೀ.ಭಾವುಸಾಹೇಬ ಭೋಸ್ಲೆಯವರು 24ನೇ ಸೆಪ್ಟೆಂಬರ್ 2011, ಶನಿವಾರದಂದು ಸಾಯಿಬಾಬಾನಿಗೆ 58 ಗ್ರಾಂ ತೂಕದ 1,44,818 ರುಪಾಯಿ ಬೆಲೆ ಬಾಳುವ ಚಿನ್ನದ ಹಾರವನ್ನು ಕಾಣಿಕೆಯಾಗಿ ಅರ್ಪಿಸಿದರು. ಮಹಾರಾಷ್ಟ್ರ ಸರ್ಕಾರದ ಕೃಷಿ ಮತ್ತು ಮಾರಾಟ ಇಲಾಖೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ರವರು ಹಾರದ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್  ಹಾಗೂ ಶಿರಡಿ ನಗರ ಪಾಲಿಕೆಯ ಅಧ್ಯಕ್ಷೆಯಾದ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ

ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಪರಶುರಾಮ್ ಆಶ್ರಮ, ಹರಿದ್ವಾರದ ವತಿಯಿಂದ ಸಾಯಿಬಾಬಾರವರ 93ನೇ ಮಹಾಸಮಾಧಿ ಉತ್ಸವದ ಆಚರಣೆ - ಕೃಪೆ: ಶ್ರೀ.ಎಸ್. ಸಿ.ದತ್ತಾ, ಹರಿದ್ವಾರ 

ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಪರಶುರಾಮ್ ಆಶ್ರಮ, ಹರಿದ್ವಾರದ ವತಿಯಿಂದ ಸಾಯಿಬಾಬಾರವರ 93ನೇ ಮಹಾಸಮಾಧಿ ಉತ್ಸವವನ್ನು ಮುಂದಿನ ತಿಂಗಳ 6ನೇ ಅಕ್ಟೋಬರ್ 2011, ಗುರುವಾರದಂದು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. 

ಮಂದಿರದಲ್ಲಿ ಪ್ರತಿ ವರ್ಷ ನಡೆಯುವಂತೆ, ಆ ದಿನ ಸುಮಾರು 200 ಕುಷ್ಟ ರೋಗಿಗಳಿಗೆ ಮತ್ತು ಅವರ ಮನೆಯವರಿಗೆ 5 ಕಿಲೋ ಅಕ್ಕಿ, 1 ಕಿಲೋ ಬೇಳೆ, ಉಚಿತ ಭೋಜನ ಹಾಗೂ ದಕ್ಷಿಣೆಯನ್ನು ನೀಡುವ ಮುಖಾಂತರ ವಿಶೇಷವಾಗಿ ಆಚರಿಸಲಾಗುತ್ತಿದೆ. 

ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ: 

ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ.
ಸಾಯಿಬಾಬಾರವರಿಗೆ ಮಂಗಳ ಸ್ನಾನ : ಬೆಳಿಗ್ಗೆ 7 ಘಂಟೆಗೆ. 
ಸಾಯಿಬಾಬಾರವರಿಗೆ ಅರ್ಚನೆ ಪೂಜೆ : ಬೆಳಿಗ್ಗೆ 8 ಘಂಟೆಗೆ.
ಹೋಮ : ಬೆಳಿಗ್ಗೆ 9 ಘಂಟೆಗೆ. 
ಸಾಯಿ ನಾಮ ಜಪ : ಬೆಳಿಗ್ಗೆ 10 ಘಂಟೆಯಿಂದ 11 ಘಂಟೆಯವರೆಗೆ.
ಶ್ರೀ ಸಾಯಿ ಮಣಿ ಸಂಗೀತ ವೃಂದದ ವತಿಯಿಂದ ಸಾಯಿ ಭಜನೆ: ಬೆಳಿಗ್ಗೆ 11 ಘಂಟೆಯಿಂದ ಮಧ್ಯಾನ್ಹ 3 ಘಂಟೆಯವರೆಗೆ. 
ಮಧ್ಯಾನ್ಹ ಆರತಿ : 12 ಘಂಟೆಗೆ. 
ಸಾಯಿ ಮಹಾಪ್ರಸಾದ ಭೋಜನ : ಮಧ್ಯಾನ್ಹ 1 ಘಂಟೆಯಿಂದ 2 ಘಂಟೆಯವರೆಗೆ.
ಪ್ರಸಾದ ವಿತರಣೆ : ಮಧ್ಯಾನ್ಹ 2 ಘಂಟೆಯಿಂದ 3 ಘಂಟೆಯವರೆಗೆ. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ನ ಪದಾಧಿಕಾರಿಗಳು ಈ ಮುಖಾಂತರ ನಿವೇದನೆ ಮಾಡಿಕೊಳ್ಳುತ್ತಾರೆ. 

ಕಾರ್ಯಕ್ರಮ ನಡೆಯುವ ಸ್ಥಳ: 

ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್ ಪರಶುರಾಮ್ ಆಶ್ರಮ
ಹೃಷಿಕೇಶ ಬೈ ಪಾಸ್ ರಸ್ತೆ, 
ದುಧಾಧಾರಿ ಮಂದಿರದ ಎದುರುಗಡೆ, 
ಭೂಪಟ್ವಾಲ ಚೌಕ, 
ಹರಿದ್ವಾರ, ಉತ್ತರಾಂಚಲ. 
ದೂರವಾಣಿ ಸಂಖ್ಯೆಗಳು: +91 1334  260356 / 260158 

ಕನ್ನಡ ಅನುವಾದ: ಶ್ರೀಕಂಠ ಶರ್ಮ  

Wednesday, September 21, 2011

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶ್ರೀ.ಪ್ರಫುಲ್ ಪಟೇಲ್ ರವರು ಇದೇ ತಿಂಗಳ 21ನೇ ಸೆಪ್ಟೆಂಬರ್ 2011, ಬುಧವಾರ ತಮ್ಮ ಪತ್ನಿಯೊಂದಿಗೆ ಶಿರಡಿಗೆ  ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಆ ಸಮಯದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆಯವರುಗಳು ಕೂಡ ಉಪಸ್ಥಿತರಿದ್ದರು. 


ಸಮಾಧಿ ದರ್ಶನದ ನಂತರ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್  ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, September 20, 2011

 ಶಿರಡಿಯಲ್ಲಿ ಮಾನವ ಸಂಪನ್ಮೂಲ ಸಮ್ಮೇಳನ - 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆಯವರು  18ನೇ ಸೆಪ್ಟೆಂಬರ್ 2011, ಭಾನುವಾರದಂದು  ಶಿರಡಿಯಲ್ಲಿ ಮಾನವ ಸಂಪನ್ಮೂಲ ಸಮ್ಮೇಳನವನ್ನು ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಪಾಂಡುರಂಗ ಅಭಂಗ್, ಶ್ರೀ.ಶೈಲೇಶ್ ಕುಟೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ಶಿರಡಿ ನಗರ ಪಾಲಿಕೆಯ ಅಧ್ಯಕ್ಷೆ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರುಗಳು ಕೂಡ ಉಪಸ್ಥಿತರಿದ್ದರು.  





 ಕನ್ನಡ ಅನುವಾದ: ಶ್ರೀಕಂಠ ಶರ್ಮ 

Monday, September 19, 2011

ಶಿರಡಿ ಸಾಯಿ ತತ್ವ ಪ್ರಚಾರಕ ಶ್ರೀ.ಸಾಯಿ ವಿಶ್ವ ಚೈತನ್ಯ ಸ್ವಾಮೀಜಿ - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯ ಸಂಸ್ಥಾಪಕರು. ಇವರು ತಮ್ಮ ಆಧ್ಯಾತ್ಮಿಕ ಉಪದೇಶಗಳ ಮುಖಾಂತರ ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಲ್ಲಿ ಪ್ರೀತಿ, ಪ್ರೇಮ ಮತ್ತು ಸಹೋದರ ಭಾವವನ್ನು ಬೆಳೆಸುವ ಉದ್ದೇಶದಿಂದ ಸ್ವಾಮೀಜಿಯವರು ಈ ಪ್ರಚಾರ ಸಮಿತಿಯನ್ನು ಪ್ರಾರಂಭಿಸಿರುತ್ತಾರೆ.

ಸ್ವಾಮೀಜಿಯವರು 27ನೇ ನವೆಂಬರ್ 1971 ರಂದು ಆಂಧ್ರಪ್ರದೇಶದ  ಹೈದರಾಬಾದ್ ನಲ್ಲಿ ಜನಿಸಿದರು. ಇವರ ತಾಯಿಯವರು  ಶ್ರೀಮತಿ.ಕುಸುಮ ಮತ್ತು ತಂದೆಯವರು ಶ್ರೀ.ಎ.ವಿ.ಶರ್ಮ. ಇವರು ತಿರುಪತಿ ವೆಂಕಟೇಶ್ವರನ ಪರಮ ಭಕ್ತರಾಗಿರುತ್ತಾರೆ. ಇವರು ಬಾಲ್ಯದಲ್ಲಿ ತಮ್ಮ ಮಾತಾ ಪಿತೃಗಳೊಂದಿಗೆ ಹಾಗೂ ತಮ್ಮಂದಿರೊಂದಿಗೆ ಬೆಳೆಯುತ್ತಾ ತಮ್ಮ ಶಾಲೆಯ ವ್ಯಾಸಂಗವನ್ನು ವಿಜಯವಾಡಾದಲ್ಲೂ ಮತ್ತು ಕಾಲೇಜ್ ವ್ಯಾಸಂಗವನ್ನು ಹೈದರಾಬಾದ್ ನಲ್ಲೂ ಮಾಡಿದರು. ಚಿಕ್ಕಂದಿನಲ್ಲೇ ಇವರು ತಮ್ಮ ಬುದ್ಧಿವಂತಿಕೆಯ ಉತ್ತರಗಳಿಂದ ತಮ್ಮ ತಂದೆ ತಾಯಿಗಳನ್ನು, ಹಿರಿಯರನ್ನು ಬೆರಗುಗೊಳಿಸಿದರು.

ಎಲ್ಲರಂತೆ ವಿದ್ಯೆಯನ್ನು ಗಳಿಸಿ ಕೆಲಸಕ್ಕೆ ಸೇರಿಕೊಂಡರೂ ಕೂಡ ಇವರ ಅಂತರ್ವಾಣಿಯು ಇವರನ್ನು ಆಧ್ಯಾತ್ಮಿಕ ಸತ್ಯದರ್ಶನದತ್ತ ಮುಖ ಮಾಡುವಂತೆ ಮಾಡಿತು. ಕೊನೆಗೆ ಅನೇಕ ವರ್ಷಗಳ ಸತತ ಪ್ರಯತ್ನದಿಂದ ಮತ್ತು ಶಿರಡಿ ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. 

ಸ್ವಾಮೀಜಿಯವರ ವಿಶೇಷತೆ ಏನೆಂದರೆ ಇವರು ಎಲ್ಲಾ ವಯಸ್ಸಿನ ಜನರೊಡನೆ ಬಹಳ ಬೇಗ ಬೆರೆಯುತ್ತಾರೆ ಮತ್ತು ಅನೇಕ ವರ್ಷಗಳಿಂದ ಪರಿಚಯ ಇರುವವರಂತೆ ನಡೆದುಕೊಳ್ಳುತ್ತಾರೆ. ಅನೇಕ ಸಾಯಿಭಕ್ತರು ಕರೆದ ತಕ್ಷಣ ಓಡಿಹೋಗಿ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿ ಅವರ ಲೌಕಿಕ ಕಷ್ಟಗಳನ್ನು ಪರಿಹಾರ ಮಾಡಿರುತ್ತಾರೆ. ಅನೇಕ ಸಾಧು ಸಂತರುಗಳಂತೆ ಇವರು ಕೂಡ ಸಮಾಜದ ಅನೇಕ ಜನರುಗಳ ಬಾಯಿಗೆ ತುತ್ತಾದರು. ಆದರೆ ಅವುಗಳಿಗೆ ಬೆಲೆ ಕೊಡದೆ ಇಲ್ಲಿಯವರೆಗೂ ತಮ್ಮ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. "ನನ್ನ ಬಳಿ ಬರುವ ಎಲ್ಲರಿಗೂ ನಾನು ಆಹ್ವಾನ ನೀಡುತ್ತೇನೆ" ಎಂದು ಹೇಳುತ್ತಾ ಯಾವುದೇ ಲಿಂಗ ಭೇಧವನ್ನು ತೋರದೆ, ಎಲ್ಲಾ ವರ್ಗದ, ವರ್ಣದ ಮತ್ತು ಅಂತಸ್ತಿನ ಜನರಿಗೂ ಶಿರಡಿ ಸಾಯಿಯವರ ತತ್ವವನ್ನು ಭೋಧನೆ ಮಾಡುತ್ತಾ ಬಂದಿದ್ದಾರೆ. 


ಸ್ವಾಮೀಜಿಯವರು ಶ್ರೀ ಸಾಯಿ ಸಚ್ಚರಿತ್ರೆ ಮತ್ತು ಸಾಯಿ ಆರತಿಯ ಬಗ್ಗೆ ಜೀ ತೆಲುಗು ವಾಹಿನಿಯಲ್ಲಿ 10ನೇ ಡಿಸೆಂಬರ್ 2005 ರಿಂದ ಜೂನ್ 2009 ರ ವರೆಗೆ ಪ್ರವಚನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅಲ್ಲದೇ, ಭಕ್ತಿ ವಾಹಿನಿಯಲ್ಲಿ ಪ್ರತಿ ಗುರುವಾರ ಸ್ವಾಮೀಜಿಯವರ ಪ್ರವಚನ ಪ್ರಸಾರವಾಗುತ್ತಿದೆ. ಅಲ್ಲದೆ, ಸ್ವಾಮೀಜಿಯವರು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾದ "ಸಮಸ್ಯಲು ಮೀವಿ, ಸಮಾಧಾನಾಲು ಸಾಯಿವಿ" ಕಾರ್ಯಕ್ರಮದ ಮುಖಾಂತರ ಸಾಯಿಬಾಬಾರವರ ಆಶೀರ್ವಾದದಿಂದ ಸಾಯಿಭಕ್ತರ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಈ ರೀತಿಯಲ್ಲಿ ಸ್ವಾಮೀಜಿಯವರು ಭಾರತ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಜನಗಳಲ್ಲಿ  ಕೂಡ  ಸಾಯಿಬಾಬಾರವರ ತತ್ವಗಳನ್ನು ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯನ್ನು 25ನೇ ಆಗಸ್ಟ್ 2003 ರಂದು ಶಿರಡಿ ಸಾಯಿಬಾಬಾರವರ ಪ್ರೇರೇಪಣೆ  ಮತ್ತು ಆಶೀರ್ವಾದದೊಂದಿಗೆ ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಸ್ಥಾಪಿಸಿದರು.  ಸಮಿತಿಯು ಸ್ಥಾಪನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಸ್ವಾಮೀಜಿಯವರು ಭಾರತದ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಕಡೆಗಳಲ್ಲಿ 175 ಕ್ಕೂ ಹೆಚ್ಚು  "ಶ್ರೀ ಶಿರಡಿ ಸಾಯಿ ಗೀತಾ ಜ್ಞಾನ ಯಜ್ಞ" ಗಳನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ. 


ಸ್ವಾಮೀಜಿಯವರು ಯಜ್ಞದ ಕೊನೆಯಲ್ಲಿ 27 ನಕ್ಷತ್ರಗಳಿಗೆ ಅನುಗುಣವಾಗಿ 27 ವಿವಿಧ ಬಗೆಯ ಆರತಿಗಳನ್ನು ಕೇರಳದ ಪಂಚವಾದ್ಯಗಳೊಂದಿಗೆ  "ಮಹಾ ನಕ್ಷತ್ರ ಆರತಿ" ನೀಡುವುದು ಒಂದು ವಿಶೇಷವೆಂದೇ ಹೇಳಬಹುದು. 

ಸ್ವಾಮೀಜಿಯವರು ಸಾಯಿಬಾಬಾರವರ ಆಶೀರ್ವಾದದಿಂದ ಶಿರಡಿಯ ಸಮಾಧಿ ಮಂದಿರದಲ್ಲಿ ಕೂಡ 3 ಬಾರಿ ಪ್ರವಚನವನ್ನು ನೀಡಿರುತ್ತಾರೆ.

ಸ್ವಾಮೀಜಿಯವರು 2003 ರಿಂದ ಇಲ್ಲಿಯವರೆಗೂ ಸಾವಿರಾರು ಸಾಯಿ ಭಜನೆಗಳನ್ನು, ಶಿರಡಿ ಸಾಯಿ ಆರತಿಯನ್ನು  ಹಾಡಿರುತ್ತಾರೆ.  ಸಮಿತಿಯು ಅದರ ಆಡಿಯೋ ಸಿಡಿಗಳನ್ನು, ವೀಡಿಯೋ ಸಿಡಿಗಳನ್ನು  ಹೊರತಂದಿರುತ್ತದೆ.

ಸ್ವಾಮೀಜಿಯವರು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ನಾಮ ಜಪವನ್ನು ಆಯೋಜಿಸುತ್ತಾ ಬಂದಿರುತ್ತಾರೆ.ಸ್ವಾಮೀಜಿ ಮತ್ತು ಅವರ ಸಂಗಡಿಗರು 24 ಘಂಟೆಗಳ ಕಾಲ ನಿರಂತರವಾಗಿ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮಜಪವನ್ನು ಹಾಡುತ್ತಾರೆ.

ಸ್ವಾಮೀಜಿಯವರು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಆಯೋಜಿಸುತ್ತಾ ಬಂದಿರುತ್ತಾರೆ.  ಸ್ವಾಮೀಜಿ ಮತ್ತು ಅವರ ಸಂಗಡಿಗರು 30 ಘಂಟೆಗಳ ಕಾಲ ನಿರಂತರವಾಗಿ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡುತ್ತಾರೆ.

ಸ್ವಾಮೀಜಿಯವರು ಮಹಾ ಶಿರಡಿ ಸಾಯಿ ಸಂಕಲ್ಪ ಸಿದ್ಧ ಧುನಿ ಪೂಜೆಯನ್ನು ಸತತವಾಗಿ ಆಯೋಜಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಸಾಮುಹಿಕ  ಶ್ರೀ ಶಿರಡಿ ಸಾಯಿ ಸತ್ಯವ್ರತವನ್ನು ಆಯೋಜಿಸುತ್ತಾ ಬಂದಿರುತ್ತಾರೆ. 

ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿ : 

ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಆಧರಿಸಿ ಸಾಯಿ ಭಕ್ತರ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಸ್ವಾಮೀಜಿಯವರು ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿಯನ್ನು ಪ್ರಾರಂಭಿಸಿದ್ದು ಯಾರು ಯಾವ ಸಮಯದಲ್ಲಿ ಬೇಕಾದರೂ ಕೂಡ +91 99590 66663, +91 99590 77772,+99594 66663 ದೂರವಾಣಿ ಸಂಖ್ಯೆಗಳಿಗೆ ಕರೆಯನ್ನು ಮಾಡಿ ತಮ್ಮ ಸಮಸ್ಯೆಗಳಿಗೆ ಸೂಕ್ತ ಉತ್ತರಗಳನ್ನು, ಪರಿಹಾರಗಳನ್ನು ಪಡೆಯಬಹುದಾಗಿದೆ. ಇಲ್ಲಿಯವರೆಗೆ ಸರಿ ಸುಮಾರು 3,70,000 ಸಾಯಿ ಭಕ್ತರು ಈ ಸಹಾಯವಾಣಿಯ ಸಹಾಯವನ್ನು ಪಡೆದಿದ್ದಾರೆ. 

ಸ್ವಾಮೀಜಿಯವರ ಸಂಪರ್ಕದ ವಿವರಗಳು: 

ವಿಳಾಸ: 

ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ,
ಗಾಯತ್ರಿ ನಗರ, ಜಿಲ್ಲೆಲಗುಡ,
ಸರೂರುನಗರ ಮಂಡಳ, ರಂಗಾರೆಡ್ಡಿ ಜಿಲ್ಲೆ,
ಹೈದರಾಬಾದ್ - 500 079, ಆಂಧ್ರ ಪ್ರದೇಶ, ಭಾರತ.


ದೂರವಾಣಿ ಸಂಖ್ಯೆಗಳು: 
+91 9866418249, +91 40 6455 0203

ಈ ಮೇಲ್ ವಿಳಾಸ: 
shiridisaitps@gmail.com


ಅಂತರ್ಜಾಲ ತಾಣ: 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಆಂಧ್ರ ಪ್ರದೇಶದ ಸಾಯಿ ಆಧ್ಯಾತ್ಮಿಕ ಕೇಂದ್ರ - ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ, ಗಾಯತ್ರಿ ನಗರ, ಜಿಲ್ಲೆಲಗುಡ, ಸರೂರುನಗರ ಮಂಡಳ, ರಂಗಾರೆಡ್ಡಿ ಜಿಲ್ಲೆ, ಹೈದರಾಬಾದ್ - 500 079, ಆಂಧ್ರ ಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ  

ಸಮಿತಿಯ ವಿಶೇಷತೆಗಳು : 

ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯನ್ನು 25ನೇ ಆಗಸ್ಟ್ 2003 ರಂದು ಶಿರಡಿ ಸಾಯಿಬಾಬಾರವರ ಪ್ರೇರೇಪಣೆ  ಮತ್ತು ಆಶೀರ್ವಾದದೊಂದಿಗೆ ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಸ್ಥಾಪಿಸಿದರು.  ಸಮಿತಿಯು ಸ್ಥಾಪನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಸ್ವಾಮೀಜಿಯವರು ಭಾರದ ವಿವಿಧ ಸ್ಥಳಗಳಲ್ಲಿ 175 ಕ್ಕೂ ಹೆಚ್ಚು ಶ್ರೀ ಶಿರಡಿ ಸಾಯಿ ಗೀತಾ ಜ್ಞಾನ ಯಜ್ಞಗಳನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ. 

ಸ್ವಾಮೀಜಿಯವರು ಶ್ರೀ ಸಾಯಿ ಸಚ್ಚರಿತ್ರೆ ಮತ್ತು ಸಾಯಿ ಆರತಿಯ ಬಗ್ಗೆ ಜೀ ತೆಲುಗು ವಾಹಿನಿಯಲ್ಲಿ 10ನೇ ಡಿಸೆಂಬರ್ 2005 ರಿಂದ ಜೂನ್ 2009 ರ ವರೆಗೆ ಪ್ರವಚನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅಲ್ಲದೇ, ಭಕ್ತಿ ವಾಹಿನಿಯಲ್ಲಿ ಪ್ರತಿ ಗುರುವಾರ ಸ್ವಾಮೀಜಿಯವರ ಪ್ರವಚನ ಪ್ರಸಾರವಾಗುತ್ತಿದೆ. ಈ ರೀತಿಯಲ್ಲಿ ಸಮಿತಿಯು ಸ್ವಾಮೀಜಿಯವರ ಮುಖಾಂತರ ಭಾರತ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಜನಗಳಲ್ಲಿ  ಕೂಡ  ಸಾಯಿಬಾಬಾರವರ ತತ್ವಗಳನ್ನು ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಲ್ಲಿ ಪ್ರೀತಿ, ಪ್ರೇಮ ಮತ್ತು ಸಹೋದರ ಭಾವವನ್ನು ಬೆಳೆಸುವ ಉದ್ದೇಶವನ್ನು ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯು ಹೊಂದಿರುತ್ತದೆ. ಶಿಸ್ತುಬದ್ಧತೆ,  ಸಮರ್ಪಣಾ ಮನೋಭಾವ, ಭಕ್ತಿ ಮತ್ತು ವೈಚಾರಿಕತೆ - ಈ ನಾಲ್ಕು ವಿಷಯಗಳು ಸಮಿತಿಯ ಆಧಾರಸ್ಥಂಭವಾಗಿರುತ್ತವೆ.  

ಸಮಿತಿಯ ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳು: 

ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಕಡೆಗಳಲ್ಲಿ ಸ್ವಾಮೀಜಿಯವರಿಂದ "ಶ್ರೀ ಶಿರಡಿ ಸಾಯಿ ಗೀತಾ ಜ್ಞಾನ ಯಜ್ಞ" ಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಯಜ್ಞದ ಕೊನೆಯಲ್ಲಿ 27 ನಕ್ಷತ್ರಗಳಿಗೆ ಅನುಗುಣವಾಗಿ 27 ವಿವಿಧ ಬಗೆಯ ಆರತಿಗಳನ್ನು ನೀಡುವ "ಮಹಾ ನಕ್ಷತ್ರ ಆರತಿ" ನಡೆಸುವುದು ಒಂದು ವಿಶೇಷವೆಂದೇ ಹೇಳಬಹುದು. 
ಸಮಿತಿಯು ಸ್ವಾಮೀಜಿಯವರು ಹಾಡಿರುವ ಸಾಯಿ ಭಜನೆಗಳ, ಶಿರಡಿ ಸಾಯಿ ಆರತಿಯ  ಹಾಗೂ ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿರುವ ಮತ್ತು ಇನ್ನು  ಅನೇಕ ಸಿಡಿಗಳನ್ನು, ವೀಡಿಯೋ ಸಿಡಿಗಳನ್ನು  ಹೊರತಂದಿದೆ.
ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ನಾಮ ಜಪವನ್ನು ಆಯೋಜಿಸುತ್ತಾ ಬಂದಿರುತ್ತದೆ. 

ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಆಯೋಜಿಸುತ್ತಾ ಬಂದಿರುತ್ತದೆ. 

ಸಮಿತಿಯು ಮಹಾ ಶಿರಡಿ ಸಾಯಿ ಸಂಕಲ್ಪ ಸಿದ್ಧ ಧುನಿ ಪೂಜೆಯನ್ನು ಸತತವಾಗಿ ಆಯೋಜಿಸುತ್ತಾ ಬಂದಿರುತ್ತದೆ. ಅಷ್ಟೇ ಅಲ್ಲದೇ, ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಸಾಮುಹಿಕ  ಶ್ರೀ ಶಿರಡಿ ಸಾಯಿ ಸತ್ಯವ್ರತವನ್ನು ಆಯೋಜಿಸುತ್ತಾ ಬಂದಿರುತ್ತದೆ. 

ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿ : 

ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಆಧರಿಸಿ ಸಾಯಿ ಭಕ್ತರ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಸಮಿತಿಯು ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿಯನ್ನು ಪ್ರಾರಂಭಿಸಿದ್ದು ಯಾರು ಯಾವ ಸಮಯದಲ್ಲಿ ಬೇಕಾದರೂ ಕೂಡ +91 99590 66663, +91 99590 77772,+99594 66663 ದೂರವಾಣಿ ಸಂಖ್ಯೆಗಳಿಗೆ ಕರೆಯನ್ನು ಮಾಡಿ ತಮ್ಮ ಸಮಸ್ಯೆಗಳಿಗೆ ಸೂಕ್ತ ಉತ್ತರಗಳನ್ನು, ಪರಿಹಾರಗಳನ್ನು ಪಡೆಯಬಹುದಾಗಿದೆ. ಇಲ್ಲಿಯವರೆಗೆ ಸರಿ ಸುಮಾರು 3,70,000 ಸಾಯಿ ಭಕ್ತರು ಈ ಸಹಾಯವಾಣಿಯ ಸಹಾಯವನ್ನು ಪಡೆದಿದ್ದಾರೆ. 

ಸಮಿತಿಯ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಗಾಯತ್ರಿ ನಗರ, ಜಿಲ್ಲೆಲಗುಡ, ರಂಗಾರೆಡ್ಡಿ ಜಿಲ್ಲೆ, ಹೈದರಾಬಾದ್.

ವಿಳಾಸ: 

ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ,
ಗಾಯತ್ರಿ ನಗರ, ಜಿಲ್ಲೆಲಗುಡ,
ಸರೂರುನಗರ ಮಂಡಳ, ರಂಗಾರೆಡ್ಡಿ ಜಿಲ್ಲೆ,
ಹೈದರಾಬಾದ್ - 500 079, ಆಂಧ್ರ ಪ್ರದೇಶ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿ.


ದೂರವಾಣಿ ಸಂಖ್ಯೆಗಳು: 

+91 9866418249, +91 40 6455 0203

ಈ ಮೇಲ್ ವಿಳಾಸ: 
shiridisaitps@gmail.com


ಅಂತರ್ಜಾಲ ತಾಣ: 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಚಿಕ್ಕಬಳ್ಳಾಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸಾಯಿ ಬ್ರಹ್ಮ ಸೇವಾ ಟ್ರಸ್ಟ್ (ನೋಂದಣಿ), ಶಿಲ್ಪಾ ಶಾಲೆ ಎದುರುಗಡೆ, ಟ್ಯಾಂಕ್ ಬಂಡ್ ರಸ್ತೆ (ಪಶ್ಚಿಮ), ಚಿಂತಾಮಣಿ  - 563 125, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಚಿಕ್ಕಬಳ್ಳಾಪುರ ತಾಲ್ಲೂಕಿನ ಚಿಂತಾಮಣಿಯ ಪಟ್ಟಣದ ಟ್ಯಾಂಕ್ ಬಂಡ್  ರಸ್ತೆಯಲಿರುತ್ತದೆ.  ದೇವಾಲಯವು ಚಿಂತಾಮಣಿ  ಬಸ್ ನಿಲ್ದಾಣದಿಂದ ಸುಮಾರು 10 ನಿಮಿಷಗಳ  ನಡಿಗೆಯ ಅಂತರದಲ್ಲಿರುತ್ತದೆ.

ಈ ದೇವಾಲಯದ ಭೂಮಿ ಪೂಜೆಯನ್ನು 26ನೇ ಸೆಪ್ಟೆಂಬರ್  2009 ರಂದು ನೆರವೇರಿಸಲಾಯಿತು. 

ಈ ದೇವಾಲಯವನ್ನು 5ನೇ  ಮೇ 2011 ರ ಪವಿತ್ರ ಅಕ್ಷಯ ತೃತೀಯ ದಿನದಂದು ಸಾವಿರಾರು ಜನ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಬೆಂಗಳೂರಿನ ವೇದ ಬ್ರಹ್ಮ ಶ್ರೀ.ಕೃಷ್ಣಮುರ್ತಿಯವರು (ಬಾಬು) ಉದ್ಘಾಟಿಸಸಿದರು. 

ದೇವಾಲಯವನ್ನು ಸಹೋದರಿಯರಾದ ಶ್ರೀಮತಿ.ಜಿ.ಭಾಗೀರಥಿ ಮತ್ತು ಶ್ರೀಮತಿ..ಜಿ.ಈಶ್ವರಮ್ಮ ರವರುಗಳು ಜಂಟಿಯಾಗಿ  ನಿರ್ಮಿಸಿರುತ್ತಾರೆ. ಶ್ರೀ. ಆರ್.ನಾಗರಾಜ್ ಮತ್ತು ಶ್ರೀಮತಿ.ಅಶ್ವಿನಿಯವರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ  5 ಅಡಿ 6 ಅಂಗುಲ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.  ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಕಪ್ಪು ಶಿಲೆಯ ವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯ  ದೇವರ ವಿಗ್ರಹ ಮತ್ತು ಬಲಭಾಗದಲ್ಲಿ ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 
 
ಶಿರಡಿಯಲ್ಲಿ ಇರುವಂತೆ ಸುಮಾರು 6 ಅಡಿ 2 ಅಂಗುಲದ ಸಮಾಧಿಯ ಮಾದರಿಯನ್ನು ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ. 
 
ಸಾಯಿಬಾಬಾರವರ ವಿಗ್ರಹದ ಕೆಳಗಡೆ ಪುಟ್ಟ ಅಮೃತ ಶಿಲೆಯ ರಾಧಾ-ಕೃಷ್ಣ  ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹಗಳನ್ನು ಇರಿಸಲಾಗಿದೆ. 

ಸಾಯಿಬಾಬಾರವರ ವಿಗ್ರಹದ ಕೆಳಗಡೆ ದಿನನಿತ್ಯ ಅಭಿಷೇಕಕ್ಕೆ ಬಳಸುವ ಪಂಚಲೋಹದ ಗಣಪತಿ, ಸಾಯಿಬಾಬಾ ದೇವರುಗಳ ವಿಗ್ರಹಗಳನ್ನು ನೋಡಬಹುದು. 

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಮರದ ಪಲ್ಲಕ್ಕಿಯನ್ನು ಮಂದಿರದ ಒಳಗಡೆ ಕಾಣಬಹುದು. 

ದೇವಾಲಯದ ಹೊರಭಾಗದಲ್ಲಿ  ಸುಮಾರು ಸಿಮೆಂಟ್ ನಲ್ಲಿ ಮಾಡಿದ  ಗಣಪತಿ  ಹಾಗೂ  ಅದರ ಎದುರುಗಡೆ  ಶಿವಲಿಂಗವನ್ನು ಸ್ಥಾಪಿಸಲಾಗಿದೆ.
 












 
ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 
 
ಆರತಿಯ ಸಮಯ 
 
ಕಾಕಡಾ ಆರತಿ 
6:00 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
8:00 PM

ಗುರುವಾರದ ದಿನದಂದು ಮಾತ್ರ ರಾತ್ರಿ 8:30 ಕ್ಕೆ ಶೇಜಾರತಿಯ ಕಾರ್ಯಕ್ರಮವಿರುತ್ತದೆ. 

ಪ್ರತಿದಿನ ದೇವಾಲಯದಲ್ಲಿ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು. 

ಪ್ರತಿದಿನ ಬೆಳಿಗ್ಗೆ  7:30 ಘಂಟೆಯಿಂದ 8:30 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ "ಪಂಚಾಮೃತ ಅಭಿಷೇಕ" ಮಾಡಲಾಗುತ್ತದೆ.  ಸೇವಾಶುಲ್ಕ 200/- ರುಪಾಯಿಗಳು. 

ಪ್ರತಿದಿನ ಗುರುವಾರ ಬೆಳಿಗ್ಗೆ  6:30 ಘಂಟೆಯಿಂದ 7:30 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಪನ್ನೀರಿನ ಅಭಿಷೇಕ"ಮಾಡಲಾಗುತ್ತದೆ.  ಯಾವುದೇ ಸೇವಾಶುಲ್ಕ ಇರುವುದಿಲ್ಲ. ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಪನ್ನೀರಿನ ಅಭಿಷೇಕವನ್ನು ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರತಿ ಭಾನುವಾರ ಗಣಪತಿಗೆ ಹಾಗೂ ಪ್ರತಿ ಮಂಗಳವಾರ ಸುಬ್ರಮಣ್ಯ ದೇವರಿಗೆ ಪಂಚಾಮೃತ ಅಭಿಷೇಕವನ್ನು ಬೆಳಿಗ್ಗೆ 7:30 ಘಂಟೆಯಿಂದ 8:30 ಘಂಟೆಯವರೆಗೆ ಮಾಡಲಾಗುತ್ತದೆ.  ಸೇವಾಶುಲ್ಕ 200/- ರುಪಾಯಿಗಳು.  
 
ಪ್ರತಿ ಗುರುವಾರ ಸಂಜೆ 7:30 ಘಂಟೆಯಿಂದ 8:30 ಘಂಟೆಯವರೆಗೆ ಪಲ್ಲಕ್ಕಿ ಉತ್ಸವವಿರುತ್ತದೆ. ಯಾವುದೇ ಸೇವಾಶುಲ್ಕ ಇರುವುದಿಲ್ಲ. 

ಪ್ರತಿದಿನ ಶೇಜಾರತಿಯ ಸಮಯದಲ್ಲಿ ಸಾಯಿಬಾಬಾರವರಿಗೆ ಚಾಮರ ಸೇವೆಯನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ವಿಶೇಷ ಉತ್ಸವದ ದಿನಗಳು: 
 
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ಅಕ್ಷಯ ತೃತೀಯ ದಿನ.
ಗುರುಪೂರ್ಣಿಮೆ.
ಶ್ರೀರಾಮನವಮಿ. 
ವಿಜಯದಶಮಿ
ದತ್ತ ಜಯಂತಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 
 

ಸ್ಥಳ: 
 
ಶಿಲ್ಪಾ ಶಾಲೆ ಎದುರುಗಡೆ, ಟ್ಯಾಂಕ್ ಬಂಡ್ ರಸ್ತೆ (ಪಶ್ಚಿಮ),ಚಿಂತಾಮಣಿ.

ವಿಳಾಸ:


ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಶ್ರೀ ಸಾಯಿ ಬ್ರಹ್ಮ ಸೇವಾ ಟ್ರಸ್ಟ್ (ನೋಂದಣಿ), 
ಶಿಲ್ಪಾ ಶಾಲೆ ಎದುರುಗಡೆ, ಟ್ಯಾಂಕ್ ಬಂಡ್ ರಸ್ತೆ (ಪಶ್ಚಿಮ), 
ಚಿಂತಾಮಣಿ - 563 125, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀಮತಿ.ಜಿ.ಭಾಗೀರಥಿ - ಅಧ್ಯಕ್ಷೆ  / ಶ್ರೀಮತಿ.ಜಿ.ಈಶ್ವರಮ್ಮ - ಉಪಾಧ್ಯಕ್ಷೆ / ಶ್ರೀ.ಆರ್.ನಾಗರಾಜ್ - ಕಾರ್ಯದರ್ಶಿ / ಶ್ರೀಮತಿ.ಎನ್.ಅಶ್ವಿನಿ - ಖಚಾಂಚಿ / ಶ್ರೀ.ಎನ್.ವಿಜಯಕೃಷ್ಣ - ಸದಸ್ಯರು.

ದೂರವಾಣಿ ಸಂಖ್ಯೆಗಳು: 
 
+ 91 89719 99683 / +91 98454 35026

ಮಾರ್ಗಸೂಚಿ:
ಚಿಂತಾಮಣಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ ಸರಿ ಸುಮಾರು 10 ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, September 17, 2011

ಸಾಯಿ ಮಹಾಭಕ್ತೆ - ಚಂದ್ರಾಭಾಯಿ ಬೋರ್ಕರ್  - ಕೃಪೆ: ಸಾಯಿಅಮೃತಧಾರಾ.ಕಾಂ



ಶ್ರೀಮತಿ.ಚಂದ್ರಾಭಾಯಿ ಬೋರ್ಕರ್ ರವರು ಮುಂಬೈನ ವಿಲೇಪಾರ್ಲೆಯಲ್ಲಿ ವಾಸವಾಗಿದ್ದ ಶ್ರೀ.ರಾಮಚಂದ್ರ ಬೋರ್ಕರ್ ರವರ ಹೆಂಡತಿಯಾಗಿದ್ದರು. ಇವರು 1898 ರಲ್ಲಿ ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ  ಸಾಯಿಬಾಬಾರವರನ್ನು ಭೇಟಿಯಾಗಿದ್ದರು. ಸಾಯಿಬಾಬಾರವರು ಇವರಿಗೆ ಪ್ರತಿದಿನ ತಮ್ಮ ಸ್ವಹಸ್ತದಿಂದ ಸ್ವಲ್ಪ ಉಧಿಯನ್ನು ನೀಡುತ್ತಿದ್ದರು. ಚಂದ್ರಾಭಾಯಿಯವರು ಆ ಉಧಿಯು ಉತ್ತಮ ಗುಣಕಾರಕ ಶಕ್ತಿಯನ್ನು ಹೊಂದಿದ್ದರಿಂದ ಬಹಳ ಜಾಗರೂಕತೆಯಿಂದ ಅದನ್ನು ಕಾಪಾಡಿಕೊಂಡಿದ್ದರು. ಅಲ್ಲದೆ, ಅವರ ಬಳಿ ಸಾಯಿಬಾಬಾರವರು ಜ್ಞಾಪಕಾರ್ಥವಾಗಿ ನೀಡಿದ್ದ ಸಾಯಿಬಾಬಾರವರ ದಂತವನ್ನು ಒಳಗೊಂಡಿದ್ದ ತಾಯಿತವು ಕೂಡ ಇತ್ತು.

ಇವರಿಗೆ ಸಾಯಿಬಾಬಾರವರ ಮೇಲೆ ಅತೀವವಾದ ಭಕ್ತಿ ಮತ್ತು ಪ್ರೀತಿ ಇತ್ತು. ಅದೇ ರೀತಿಯಲ್ಲಿ ಸಾಯಿಬಾಬಾರವರು ಕೂಡ ಇವರ ಭಕ್ತಿಗೆ ತಕ್ಕ ರೀತಿಯಲ್ಲಿ ಸ್ಪಂದಿಸುತ್ತಿದ್ದರು. ಇವರು 1898 ರಲ್ಲಿ ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈಗ ನಮಗೆ ಕಾಣಿಸುವ ಪುನರ್ ನಿರ್ಮಾಣಗೊಂಡಿರುವ ದ್ವಾರಕಾಮಾಯಿ ಮಸೀದಿ ಮತ್ತು ಸಾಥೆವಾಡಾ ಇರಲಿಲ್ಲ. ಸಾಯಿಬಾಬಾರವರು ಈಗ ಸಾಥೆವಾಡಾ ಇರುವ ಸ್ಥಳದಲ್ಲಿದ್ದ ಬೇವಿನ ಮರದ ಕೆಳಗಡೆ ಕುಳಿತಿದ್ದರು. ಅಲ್ಲದೇ, ಬಾಬಾರವರು ಎಣ್ಣೆಯ ಬದಲು ನೀರನ್ನು ಹಣತೆಗಳಿಗೆ ಹಾಕುತ್ತಿದ್ದುದನ್ನು ಕಂಡರು. ಹಾಗೆಯೇ, ದ್ವಾರಕಾಮಾಯಿಯಲ್ಲಿ ಒಂದು ಹಲಗೆಯನ್ನೇ ಬಟ್ಟೆಗಳ ಸಹಾಯದಿಂದ ಉಯ್ಯಾಲೆಯಂತೆ ತೂಗುಹಾಕಿ ಅದರ ನಾಲ್ಕೂ ತುದಿಗಳಲ್ಲಿ ದೀಪಗಳನ್ನು ಹತ್ತಿಸಿ ಆದರ ಮೇಲೆ ಮಲಗುತ್ತಿದ್ದುದನ್ನು ಕಂಡರು. ಆಗ ಶಿರಡಿಗೆ ಯಾವ ದೊಡ್ಡ ವ್ಯಕ್ತಿಗಳೂ ಬರುತ್ತಿರಲಿಲ್ಲ. ಚಂದ್ರಾಭಾಯಿಯವರು ಶಿರಡಿಗೆ ಹೋದಾಗಲೆಲ್ಲಾ ಅವರು ಶಿರಡಿಯ ಯಾವುದಾದರೂ ಗ್ರಾಮಸ್ಥರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.

ಇವರ ಮೇಲೆ ಸಾಯಿಬಾಬಾರವರು ಅತ್ಯಂತ ಹೆಚ್ಚಿನ ಕರುಣೆಯನ್ನು ಹೊಂದಿದ್ದರು. ಇವರ ಪತಿಯವರು ಸಾಯಿಬಾಬಾರವರನ್ನು ಒಂದು ಸಲವೂ ಹೋಗಿ ಭೇಟಿ ಮಾಡಿರಲಿಲ್ಲ. ಆದರೆ, ಅವರ ಮೇಲೆ ಕೂಡ ಸಾಯಿಬಾಬಾರವರು ತಮ್ಮ ಕೃಪಾದೃಷ್ಟಿಯನ್ನು ಬೀರಿದ್ದರು. ಇವರ ಪತಿಯವರು ಇಂಜೀನಿಯರ್ ಆಗಿದ್ದು 1909ನೇ ಇಸವಿಯಲ್ಲಿ ಪಂಡರಾಪುರದ ಬಳಿಯಲ್ಲಿ ನಡೆಯುತ್ತಿದ್ದ ಸೇತುವೆ ಕಾಮಗಾರಿಯಲ್ಲಿ ನಿರತರಾಗಿದ್ದರು. ಪತಿಯು ಪಂಡರಾಪುರದಲ್ಲಿದ್ದಾಗ ಚಂದ್ರಾಭಾಯಿಯವರು ಶಿರಡಿಗೆ ಸಾಯಿಬಾಬಾರವರನ್ನು ಕಾಣಲು ಹೋಗಿದ್ದರು ಮತ್ತು ಅವರ ಸೇವೆಯಲ್ಲಿ ನಿರತರಾಗಿದ್ದರು. ಒಂದು ದಿನ ಸಾಯಿಬಾಬಾರವರು "ನೀನು ಈಗಲೇ ಪಂಡರಾಪುರಕ್ಕೆ ಹೋಗು. ನಾನು ನಿನ್ನ ಜೊತೆಯಲ್ಲೇ ಬರುತ್ತೇನೆ" ಎಂದರು. ಸಾಯಿಯವರ ಆಜ್ಞೆಯಂತೆ ಚಂದ್ರಾಭಾಯಿ ಪಂಡರಾಪುರಕ್ಕೆ ಹೊರಟರು. ಅವರಿಗೆ ಪಂಡರಾಪುರದಲ್ಲಿ ಏನು ನಡೆದಿದೆ ಎಂದು ತಿಳಿದಿರಲಿಲ್ಲ. ಅವರು ಪಂಡರಾಪುರಕ್ಕೆ ಹೋದಾಗ ಅವರ ಪತಿ ಅಲ್ಲಿ ಇರಲಿಲ್ಲ. ಅಲ್ಲಿಗೆ ಹೋದಾಗ, ಇವರ ಪತಿ ಕೆಲಸಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದಾರೆಂಬ ವಿಷಯ ತಿಳಿಯಿತು. ಆ ವಿಷಯವನ್ನು ಕೇಳಿದ ಮೇಲೆ ಚಂದ್ರಾಭಾಯಿಯವರ ಮನಸ್ಸಿಗೆ ಬಹಳ ನೋವಾಯಿತು. ಆ ಸಮಯದಲ್ಲಿ ಇವರ ಬಳಿ ಸ್ವಲ್ಪವೇ ಹಣವಿತ್ತು. ಅಷ್ಟೇ ಅಲ್ಲದೆ, ತಮ್ಮ ಜೊತೆಯಲ್ಲಿ ಇನ್ನು ಇಬ್ಬರನ್ನು ಕರೆದುಕೊಂಡು ಹೋಗಿದ್ದರು. ಇವರ ಬಳಿ ಕುರ್ಡುವಾಡಿವರೆಗೆ ಹೋಗಲು ಮಾತ್ರ ಹಣವಿತ್ತು. ಅವರು ಧೈರ್ಯ ಮಾಡಿ ಕುರ್ಡುವಾಡಿಗೆ ಹೋದರು. ಚಂದ್ರಾಭಾಯಿಯವರ ಮನಸ್ಸು ಚಿಂತೆಯಿಂದ ತುಂಬಿ ಬಹಳ ವ್ಯಾಕುಲರಾಗಿದ್ದರು ಮತ್ತು ನಡೆದ ವಿಷಯವನ್ನೇ ಕುರಿತು ಚಿಂತೆ ಮಾಡುತ್ತಿದ್ದರು. ಆ ಕ್ಷಣದಲ್ಲಿ ಅವರ ಮುಂದೆ ಫಕೀರನೊಬ್ಬ ಪ್ರತ್ಯಕ್ಷನಾದನು ಮತ್ತು ಇವರ ಚಿಂತೆಗೆ ಕಾರಣವನ್ನು ಕೇಳಿದನು. ಇವರು ಅವನಿಗೆ ಹಾರಿಕೆಯ ಉತ್ತರವನ್ನು ಕೊಡಲು ನೋಡಿದರು. ಆಗ ಫಕೀರನು ತಾನಾಗಿಯೇ ಇವರಿಗೆ ಕೂಡಲೇ ಇವರ ಇಬ್ಬರು ಸ್ನೇಹಿತೆಯರೊಂದಿಗೆ ದೌಂಡ್ ಗೆ ಹೋಗಲು ಸೂಚಿಸಿದನು ಮತ್ತು ಇವರ ಪತಿಯು ದೌಂಡ್ ನಲ್ಲಿ ಇರುವರೆಂದು ಕೂಡ ತಿಳಿಸಿದನು. ಆಗ ಚಂದ್ರಾಭಾಯಿ ತಮ್ಮ ಬಳಿ ಅಲ್ಲಿಗೆ ಹೋಗಲು ಹಣವಿಲ್ಲ ಎಂದು ತಿಳಿಸಿದರು. ಆಗ ಫಕೀರನು ಇವರಿಗೆ ದೌಂಡ್ ಗೆ ಹೋಗಲು 3 ಟಿಕೆಟ್ ಗಳನ್ನು ನೀಡಿ ಹೊರಟುಹೋದನು. ಫಕೀರನಿಂದ ಟಿಕೆಟ್ ಪಡೆದು ತಮ್ಮ ಇಬ್ಬರು ಸ್ನೇಹಿತೆಯರೊಂದಿಗೆ ಇವರು ದೌಂಡ್ ಗೆ ತೆರಳಿದರು. ಅತ್ತ ದೌಂಡ್ ನಲ್ಲಿ ಇವರ ಪತಿಯು ಚಹಾ ಕುಡಿಯುತ್ತಾ ಹಾಗೆಯೇ ತನಿ ನಿದ್ರೆ ಬಂದು ಮಲಗಿದಾಗ ಕನಸೊಂದನ್ನು ಕಂಡರು. ಕನಸಿನಲ್ಲಿ ಒಬ್ಬ ಫಕೀರನು ಇವರ ಎದುರುಗಡೆ ಪ್ರತ್ಯಕ್ಷನಾಗಿ "ನೀನು ಹೇಗೆ ನನ್ನ ತಾಯಿಯನ್ನು ಮರೆತಿರುವೆ? ನಿನ್ನ ತಾಯಿ ಈಗ ಬರುವ ರೈಲಿನಲ್ಲಿ ನಿನ್ನನ್ನು ಸಂಧಿಸಲು ಬರುತ್ತಿದ್ದಾಳೆ. ಅವಳು ಇಂತಹ ಸಂಖ್ಯೆಯ ಬೋಗಿಯಲ್ಲಿದ್ದಾಳೆ" ಎಂದು ಹೇಳಿ ಬೋಗಿಯ ಸಂಖ್ಯೆಯನ್ನು ಕೂಡ ನೀಡಿದನು.  ಆ ಕೂಡಲೇ ಚಂದ್ರಾಭಾಯಿ ಪತಿಗೆ ಎಚ್ಚರವಾಗಿ "ಯಾರು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದು" ಎಂದು ಸುತ್ತಲೂ ನೋಡಿದರು. ಆ ಕ್ಷಣವೇ ಫಕೀರನು ಮಾಯವಾಗಿದ್ದನು. ಮುಂದಿನ ರೈಲಿನಲ್ಲಿ  ಚಂದ್ರಾಭಾಯಿಯವರು  ಇಳಿದು ಬಂದು ಇವರ ಪತಿಯನ್ನು ಸಂಧಿಸಿದರು. ಇವರ ಪತಿಯು ಆ ಫಕೀರನು ಹೇಳಿದ ಬೋಗಿಯ ಬಳಿಯೇ ಇವರನ್ನು ಸ್ವಾಗತಿಸಲು ನಿಂತಿದ್ದರು. ತಮಗೆ ಬಿದ್ದ ಕನಸನ್ನು ವಿವರಿಸಿದ ಇವರ ಪತಿಯು, ಇವರು ಪೂಜಿಸುತ್ತಿದ್ದ ಸಾಯಿಬಾಬಾರವರ ಚಿತ್ರಪಟವನ್ನು ತೋರಿಸಲು ಹೇಳಿದರು. ಚಂದ್ರಾಭಾಯಿಯವರು ಚಿತ್ರಪಟವನ್ನು ತೋರಿಸಲು ತಮಗೆ ಕನಸಿನಲ್ಲಿ ದರ್ಶನ ನೀಡಿದ ಫಕೀರ ಇವರೇ ಎಂದು ಇವರಿಗೆ ತಿಳಿಸಿದರು.

ಒಮ್ಮೆ ಒಂದು ಗುರುಪೂರ್ಣಿಮೆಯ ಸಂದರ್ಭದಲ್ಲಿ ಸಾಯಿಬಾಬಾರವರು ಚಂದ್ರಾಭಾಯಿಯವರ ಗುರುಬಂಧುವಾದ ಶ್ರೀ.ಉಪಾಸಿನಿ ಮಹಾರಾಜ್ ರವರನ್ನು ಅವರು ಕರಗ್ಪುರಕ್ಕೆ ಹೊರಡುವುದಕ್ಕೆ ಮುಂಚೆಯೇ ಪೂಜಾ ಸಾಮಗ್ರಿ ಮತ್ತು ನೈವೇದ್ಯದೊಡನೆ ಹೋಗಿ  ಅರ್ಚಿಸಿ ಬರುವಂತೆ ಆಜ್ಞಾಪಿಸಿದರು. ಚಂದ್ರಾಭಾಯಿಯವರು ಹೋಗಿ ಅವರನ್ನು ಭೇಟಿ ಮಾಡಿ ಸಾಯಿಬಾಬಾರವರು ಅವರನ್ನು ಪೂಜಿಸಲು ಹೇಳಿರುವರೆಂದು ಹೇಳಿ ಅವರ ಪೂಜೆಯನ್ನು ನೆರವೇರಿಸಿ ಬಂದರು. ಅದಕ್ಕೆ ಉಪಾಸಿನಿ ಮಹಾರಾಜ್ ಕೂಡ ಒಪ್ಪಿಗೆ ಸೂಚಿಸಿ ಬೇಡವೆನ್ನದೆ ಪೂಜೆಯನ್ನು ಸ್ವೀಕರಿಸಿದರು. ಆದರೆ, ಆ ದಿನದ ನಂತರ  ಚಂದ್ರಭಾಯಿಯವರು ಮತ್ತೆಂದಿಗೂ ಕೂಡ ಉಪಾನಿಸಿ ಮಹಾರಾಜ್ ರವರನ್ನು ಪೂಜಿಸಲಿಲ್ಲ. ಚಂದ್ರಾಭಾಯಿಯವರು  ಅವರನ್ನು ಕೇವಲ ಗುರುಬಂಧುವಂತೆ ನೋಡುತ್ತಿದ್ದರು. ಶಿರಡಿಯಲ್ಲಿನ ಅನೇಕ ಜನರು ದ್ವೇಷಿಸುವಂತೆ ಚಂದ್ರಾಭಾಯಿ ಎಂದಿಗೂ ಅವರನ್ನು ದ್ವೇಷಿಸಲಿಲ್ಲ. ಸಾಯಿಬಾಬಾರವರು ಯಾರನ್ನು ದ್ವೇಷಿಸಬಾರದು ಮತ್ತು ಯಾರಾದರೂ ನಮ್ಮನ್ನು ದ್ವೇಷಿಸಿದರೆ ನಾವು ನಾಮಜಪವನ್ನು ಮಾಡುತ್ತಾ ಅಂತಹ ಜನಗಳಿಂದ ದೂರವಿರಬೇಕೆಂದು ಹೇಳುತ್ತಿದ್ದರು. ಆದರೆ, ಚಂದ್ರಾಭಾಯಿಯವರ ವರ್ತನೆ ಉಪಾಸಿನಿ ಮಹಾರಾಜ್ ರವರಿಗೆ ಮತ್ತು ಶಿರಡಿಯ ಅನೇಕ ಜನರಿಗೆ ಇಷ್ಟವಾಗಲಿಲ್ಲ. ಒಮ್ಮೆ ಚಂದ್ರಾಭಾಯಿಯವರು  ಸಾಕೋರಿ ಆಶ್ರಮಕ್ಕೆ ಅವರ ಪಂಚಕನ್ಯಾ ಪದ್ದತಿಯನ್ನು ಸರಿಗೊಳಿಸಬೇಕೆಂದು ಬಯಸಿ ಹೋಗಿದ್ದಾಗ ಉಪಾಸಿನಿ ಮಹಾರಾಜ್ ರವರು ಇವರಿಗೆ ತಮ್ಮ ಪ್ರತ್ಯೇಕ ಭೇಟಿಗೆ ಅವಕಾಶ ನೀಡದೆ, ಚಂದ್ರಾಭಾಯಿಯವರು ಹಾಗೆಯೇ ಹಿಂತಿರುಗಿದರು.

ಚಂದ್ರಾಭಾಯಿಯವರ ಮೇಲೆ ಸಾಯಿಬಾಬಾರವರು 1918 ಕ್ಕೆ ಮುಂಚೆ ಮತ್ತು 1918 ರ ತಮ್ಮ ಮಹಾಸಮಾಧಿಯ ನಂತರವೂ ಕೃಪೆಯನ್ನು ಬೀರಿದರು. 1918 ನೇ ಇಸವಿಯ ದಸರಾ ಹಬ್ಬಕ್ಕೆ ಮುಂಚೆಯೇ ಸಾಯಿಬಾಬಾರವರು ತಮ್ಮ ಅಂತ್ಯಕಾಲ ಸಮೀಪಿಸುತ್ತಿರುವುದನ್ನು ಅರಿತು ಚಂದ್ರಾಭಾಯಿಯವರನ್ನು ತಮ್ಮ ಬಳಿಗೆ ಕರೆದು "ಭಾಯಿ, ಇನ್ನು ಮುಂದೆ ನೀನು ಶಿರಡಿಗೆ ಬರುವ ತೊಂದರೆಯನ್ನು ತೆಗೆದುಕೊಳ್ಳಬೇಡ. ನೀನು ಎಲ್ಲಿ ಇರುತ್ತೀಯೋ ಅಲ್ಲಿಯೇ ನಾನು ಕೂಡ ಸದಾಕಾಲ ಇರುತ್ತೇನೆ"  ಎಂದು ನುಡಿದರು. ದಸರೆಯ ಹಬ್ಬ ಬಂದಿತು. ಆಗ ಚಂದ್ರಾಭಾಯಿ ಪಂಚಗನಿಯಲ್ಲಿದ್ದರು. ಆಗ ಹೆಚ್.ಎಸ್.ದೀಕ್ಷಿತ್ ರವರಿಂದ ಸಾಯಿಬಾಬಾರವರಿಗೆ ತುಂಬಾ ಹುಷಾರಿಲ್ಲವೆಂದು, ಇನ್ನು ಹೆಚ್ಚು ಕಾಲ ಬದುಕಿರುವ ಭರವಸೆಯಿಲ್ಲವೆಂದು ಮತ್ತು ಇವರನ್ನು ನೆನೆಯುತ್ತಿದ್ದರೆಂದು ವರ್ತಮಾನ ತಿಳಿದುಬಂದಿತು. ವಿಷಯ ತಿಳಿದ ಕೂಡಲೇ ಚಂದ್ರಾಭಾಯಿ ಶಿರಡಿಗೆ ತೆರಳಿದರು. ಸಾಯಿಬಾಬಾರವರಿಗೆ ಇವರು ಮತ್ತು ಬಾಯಜಿಯವರು ಪವಿತ್ರ ತೀರ್ಥವನ್ನು ಕುಡಿಸಿದರು. ಬಾಬಾರವರು ತೀರ್ಥವನ್ನು ಸ್ವೀಕರಿಸಿ ಬಾಯಾಜಿಯವರ ಮೇಲೆ ಒರಗಿಕೊಂಡು ತಮ್ಮ ಭೌತಿಕ ದೇಹವನ್ನು ತ್ಯಜಿಸಿದರು.

ಸಾಯಿಬಾಬಾರವರ ಮಹಾಸಮಾಧಿಯಾದ ನಂತರ ಚಂದ್ರಾಭಾಯಿಯವರು 1919 ರಲ್ಲಿ ಒಂದು ಬಾರಿ ಮತ್ತು 1933 ರಲ್ಲಿ ಮತ್ತೊಂದು ಬಾರಿ ಶಿರಡಿಗೆ ಹೋಗಿ ಬಂದರು. ಆದರೆ, ಬಾಬಾರವರು ತಾವು ಮಾತು ಕೊಟ್ಟಂತೆ ಸದಾಕಾಲ ಚಂದ್ರಾಭಾಯಿಯವರ ಜೊತೆಯಲ್ಲೇ ಇದ್ದು ಅವಶ್ಯಕತೆ ಇದ್ದಾಗಲೆಲ್ಲಾ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿದ್ದರು. ಚಂದ್ರಾಭಾಯಿಯವರು ಸಾಯಿಬಾಬಾರವರೊಂದಿಗಿನ ತಮ್ಮ ಅನುಭವಗಳನ್ನು ಮತ್ತು ಅವರ ಬಗ್ಗೆ ರಚಿಸಿದ ಕೆಲವು ಕವನಗಳನ್ನು ಸಾಯಿ ಲೀಲಾ ಮಾಸ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

1921 ನೇ ಇಸವಿಯಲ್ಲಿ  ಚಂದ್ರಾಭಾಯಿಯವರ ಪತಿ ಕುದುರೆ ಗಾಡಿಯಿಂದ ಇಳಿಯುವಾಗ ಬಿದ್ದು ತಮ್ಮ ಕಾಲನ್ನು ಮುರಿದುಕೊಂಡರು. ಆಗ ಚಂದ್ರಾಭಾಯಿಯವರು ಉಧಿಯನ್ನು ಮತ್ತು ಬೀಬಾಕಾಯಿ ಮತ್ತು ತಗಡಿಫಲದ ಮಿಶ್ರಣವನ್ನು ಮುರಿದ ಕಾಲಿಗೆ ಹಚ್ಚಿದರು. 3 ತಿಂಗಳ ಒಳಗಾಗಿ ಇವರ ಪತಿ ಸಂಪೂರ್ಣ ಗುಣ ಹೊಂದಿದರು. ಅದೇ ವರ್ಷದಲ್ಲಿ ಇವರು ಸಾಯಿಬಾಬಾರವರ ಆಶೀರ್ವಾದದಿಂದ ಒಂದು ಮಗುವಿಗೆ ಜನ್ಮವನ್ನು ಕೂಡ ನೀಡಿದರು. 1918 ರಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ಇವರು ತಮಗೆ ಒಂದು ಮಗುವಾಗಬೇಕೆಂಬ ಬಯಕೆಯನ್ನು ಹೊಂದಿದ್ದರು. ಇವರ ಮನದ ಬಯಕೆಯನ್ನು ತಿಳಿದಿದ್ದ ಸರ್ವಾಂತರ್ಯಾಮಿ ಸಾಯಿಬಾಬಾರವರು ಒಂದು ದಿನ  "ಭಾಯಿ, ನಿನ್ನ ಮನಸ್ಸಿನಲ್ಲಿರುವ ಕೋರಿಕೆಯೇನು? " ಎಂದು ಕೇಳಿದರು.  ಅದಕ್ಕೆ ಚಂದ್ರಾಭಾಯಿಯವರು "ಬಾಬಾ, ನಿಮಗೆ ಎಲ್ಲಾ ಗೊತ್ತಿದೆ. ನಾನು ನಿಮಗೆ ಹೇಳುವ ಅವಶ್ಯಕತೆ ಏನಿದೆ" ಎಂದು ಕೇಳಿದರು.

ಈ ಘಟನೆಯಾದ 3 ವರ್ಷಗಳ ನಂತರ ಚಂದ್ರಾಭಾಯಿಯವರ ಮುಟ್ಟು ನಿಂತಿತು. ಇದಾದ 3 ತಿಂಗಳ ನಂತರ ಇವರನ್ನು ಪರೀಕ್ಷಿಸಿದ ಡಾ.ಪುರಂಧರೆಯವರು ಇವರ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿರುವುದಾಗಿ ಹೇಳಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ತೆಗೆಯಬೇಕೆಂದು ಹೇಳಿದರು. ಅದಕ್ಕೆ ಚಂದ್ರಾಭಾಯಿಯವರು ಒಪ್ಪದೇ ಹತ್ತು ತಿಂಗಳು ಕಾಯುವುದಾಗಿ ಮತ್ತು ನಂತರ ಶಸ್ತ್ರಚಿಕಿತ್ಸೆಯ ಬಗ್ಗೆ ಯೋಚಿಸುವುದಾಗಿ ಹೇಳಿದರು. ಕಡೆಗೆ ಸಾಯಿಬಾಬಾರವರ ಆಶೀರ್ವಾದದಿಂದ ಹತ್ತು ತಿಂಗಳ ನಂತರ ಇವರ 51ನೇ ವಯಸ್ಸಿನಲ್ಲಿ ಪವಿತ್ರ ಧನ ತ್ರಯೋದಶಿಯಂದು ಗಂಡು ಮಗುವಿಗೆ ಜನನ ನೀಡಿದರು. ಇವರಿಗೆ ಹೆರಿಗೆಯು ಚೆಂಬೂರಿನಲ್ಲಿ ಆದಾಗ  ಇವರ ಬಳಿ ಯಾವುದೇ ವೈದ್ಯರಾಗಲಿ, ದಾದಿಯಾಗಲಿ ಅಥವಾ ಯಾವುದೇ ಮಾತ್ರೆ ಔಷಧಿಗಳಾಗಲಿ ಇರಲಿಲ್ಲ. ಇವರು ಗರ್ಭಿಣಿಯಾಗಿದ್ದ ಸಮಯದಲ್ಲಿ ಸರಿಯಾಗಿ ಆಹಾರವನ್ನು ತೆಗೆದುಕೊಳ್ಳದೆ ಅನೇಕ ದಿನ ಉಪವಾಸವನ್ನು ಮಾಡಿದರು, ಅನೇಕ ಬಾರಿ ಕಾಲುಗಳು ಊದಿಕೊಂಡು ತೊಂದರೆಯಾಯಿತು. ಆದರೆ, ಪ್ರತಿನಿತ್ಯ ನೀರಿಗೆ ಉಧಿಯನ್ನು ಬೆರೆಸಿ ತೆಗೆದುಕೊಳ್ಳುವುದನ್ನು ಮಾತ್ರ ಮರೆಯುತ್ತಿರಲಿಲ್ಲ.

ಚಂದ್ರಾಭಾಯಿಯವರ ಪತಿಯ ಮರಣ ಸಮಯದಲ್ಲಿ ಕೂಡ ಸಾಯಿಬಾಬಾರವರು ತಮ್ಮ ಕೃಪೆಯನ್ನು ಇವರ ಮೇಲೆ ತೋರಿದರು. ಇವರ ಪತಿಯು ಸಾಯುವುದಕ್ಕೆ ಎರಡು ತಿಂಗಳ ಮುಂಚೆಯೇ ಸಾಯಿಬಾಬಾರವರು ಇವರ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿದರು. ಬಾಬಾರವರು ಇವರ ಕನಸಿನಲ್ಲಿ ಕಾಣಿಸಿಕೊಂಡು "ಭಯಪಡಬೇಡ, ನಾನು ಶ್ರೀರಾಮನನ್ನು ಕರೆದುಕೊಂಡು ಹೋಗುತ್ತೇನೆ" (ಇವರ ಪತಿಯ ಹೆಸರು ರಾಮಚಂದ್ರ) ಎಂದರು. ಅದಕ್ಕೆ ಇವರು "ಬಾಬಾ, ನನ್ನನ್ನು ಮೊದಲು ಕರೆದುಕೊಂಡು ಹೋಗಿ" ಎಂದು ಕೇಳಿಕೊಂಡರು. ಅದಕ್ಕೆ ಬಾಬಾರವರು ಇವರಿಗೆ ಮಾಡುವ ಕೆಲಸವು ಇನ್ನು ಬಹಳ ಇದ್ದ ಕಾರಣ ಇವರು ಬದುಕಿರಬೇಕು ಎಂದು ತಿಳಿಸಿದರು. ಚಂದ್ರಾಭಾಯಿಯವರು ಈ ವಿಷಯವನ್ನು ತಮ್ಮ ಪತಿಗೆ ತಿಳಿಸಿದಾಗ ಅವರು ಅದು ಕೇವಲ ಕನಸು ಎಂದು ಬಹಳ ಹಗುರವಾಗಿ ತೆಗೆದುಕೊಂಡರು. ಆಗ ಚಾತುರ್ಮಾಸ್ಯ ಮುಗಿಯುವುದಕ್ಕೆ ಇನ್ನು ಎರಡು ತಿಂಗಳು ಇತ್ತು. ಸ್ವಲ್ಪ ದಿನಗಳಲ್ಲೇ ಇವರ ಪತಿ ಕಿಡ್ನಿ ವೈಫಲ್ಯದಿಂದ ಬಳಲಲು ಪ್ರಾರಂಭಿಸಿದರು. ಅವರ ಮರಣವು ಸನ್ನಿಹಿತವಾಗುತ್ತಿತ್ತು. ಆಗ ಇವರ ಪತಿಗೆ ತಾವು ಕೆಲವು ದಿನಗಳಲ್ಲೇ ಸಾಯುವ ವಿಷಯ ಮನವರಿಕೆಯಾಗಿ ತಾವು ಚಾತುರ್ಮಾಸ್ಯ ಮುಗಿದ ನಂತರ ಸಾಯಲು ಇಚ್ಚಿಸುವುದಾಗಿ ಹೇಳಿದರು. ಆದರೆ, ಸ್ವಲ್ಪ ದಿನಗಳಲ್ಲಿಯೇ ಅವರ ಮರಣದ ಎಲ್ಲ ಸೂಚನೆಗಳು ಕಾಣಿಸಿಕೊಂಡವು. ಅವರ ಕೈಕಾಲುಗಳು ಸೆಟೆದುಕೊಂಡು ಪ್ರಜ್ಞೆ ತಪ್ಪಿದರು. ಚಂದ್ರಾಭಾಯಿಯವರು ಚಾತುರ್ಮಾಸ್ಯ ಮುಗಿಯುವವರೆಗಾದರೂ ತಮ್ಮ ಪತಿಯನ್ನು ಉಳಿಸುವಂತೆ ಸಾಯಿಬಾಬಾರವರನ್ನು ಪ್ರಾರ್ಥಿಸಿದರು. ಮಾರನೇ ದಿನವೇ ಇವರ ಪತಿಗೆ ಪ್ರಜ್ಞೆ ಮರಳಿ ಬಂದಿತು ಮತ್ತು ಕೈಕಾಲುಗಳು ಸರಿಯಾಯಿತು. ಇವರ ಪತಿಯು ಬಹಳ ಸಂತೋಷದಿಂದ ಇದ್ದರು. ಚಾತುರ್ಮಾಸ್ಯ ಕಳೆದು ಏಳು ದಿನವಾದ ನಂತರ ಅಂದರೆ 1934 ರ ಕಾರ್ತೀಕ ಪೂರ್ಣಿಮೆ ಮೇಲೆ ಪಾಡ್ಯ ತಿಥಿಯು ಬಂದ ದಿನ ಮಧ್ಯರಾತ್ರಿಯಲ್ಲಿ ಚಹಾ ಮಾಡಿಸಿಕೊಂಡು ಕುಡಿದರು ಮತ್ತು ತಮ್ಮ ಪತ್ನಿಗೆ ವಿಷ್ಣು ಸಹಸ್ರನಾಮ ಮತ್ತು ಸಾಯಿಬಾಬಾರವರ ಆರತಿಯನ್ನು ಜೋರಾದ ದನಿಯಲ್ಲಿ ಉಚ್ಚರಿಸುವಂತೆ ಕೇಳಿಕೊಂಡರು. ಅವರು ಹೇಳಿದಂತೆ ಚಂದ್ರಾಭಾಯಿ ಮಾಡಿದರು. ಬೆಳಗಿನ ಜಾವದವರೆಗೂ ವಿಷ್ಣು ಸಹಸ್ರನಾಮ ಮತ್ತು ಆರತಿ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ವೈದ್ಯರು ಬಂದರು. ಇವರನ್ನು ಪರೀಕ್ಷಿಸಿ ಇವರ ಆರೋಗ್ಯ ಸುಧಾರಿಸುತ್ತದೆ ಎಂಬ ಭರವಸೆ ನೀಡಿದರು. ಆದರೆ ಚಂದ್ರಾಭಾಯಿಯವರಿಗೆ ಇವರು ಆ ದಿನ ಮಧ್ಯಾನ್ಹ ಮರಣ ಹೊಂದುವರೆಂಬ ವಿಷಯ ತಿಳಿದಿತ್ತು. ಆದ್ದರಿಂದ ತಮ್ಮ ಪತಿಗೆ ಗಂಗಾಜಲವನ್ನು ಕುಡಿಸಿದರು. ಗಂಗಜಾಲವನ್ನು ಕುಡಿದು ಇವರ ಪತಿಯು "ಶ್ರೀ ರಾಮ, ಶ್ರೀ ರಾಮ"  ಎಂದು ಉಚ್ಚರಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ಒಂದು ಚಿಕ್ಕ ಹುಡುಗ ಬಂದು "ಬಾಬಾ" ಎಂದು ಕೂಗಿದನು. ಇವರ ಪತಿಯು ಕೂಡಲೇ ಎದ್ದು ಕುಳಿತು "ಓಹೋ" ಎಂದು ನುಡಿದರು. ಮತ್ತೆ ಪುನಃ  "ಶ್ರೀ ರಾಮ, ಶ್ರೀ ರಾಮ" ಎಂದು ಉಚ್ಚರಿಸುತ್ತಾ ಮರಣವನ್ನಪ್ಪಿದರು. ಆ ಸಮಯದಲ್ಲಿ ಚಂದ್ರಾಭಾಯಿಯವರು ತಮ್ಮ ಪತಿಯ ಪಕ್ಕದಲ್ಲೇ ಕುಳಿತು  ತಮ್ಮ ಪತಿಯನ್ನು ಸಾಯಿಬಾಬಾ ಮತ್ತು ಕೃಷ್ಣ ದೇವರುಗಳ ಪವಿತ್ರ ಪಾದಗಳಲ್ಲಿ ಲೀನಗೊಳಿಸಬೇಕೆಂದು ಬೇಡಿಕೊಂಡರು.  ಹೀಗೆ ಚಂದ್ರಾಭಾಯಿಯವರ ಪತಿ ದೇವರ ಮತ್ತು ಸಾಯಿಯವರ ನಾಮಸ್ಮರಣೆ ಮಾಡುತ್ತಾ ಶಾಂತಿಯಿಂದ ಮರಣವನ್ನು ಹೊಂದಿ ಸಾಯಿಪಾದಗಳಲ್ಲಿ ಲೀನವಾದರು.  ಹೀಗೆ ಸಾಯಿಯವರು ರಾಮಚಂದ್ರ ಅವರಿಗೆ ಸದ್ಗತಿಯನ್ನು ನೀಡಿದರು.

ತಮ್ಮ ಪತಿಯ ಮರಣವಾದ ನಂತರ ಚಂದ್ರಾಭಾಯಿಯವರು ತಮ್ಮ ಮಗನ ಹಾಗು ತಾವಿದ್ದ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡರು. ಇವರಿದ್ದ ಮನೆಯನ್ನು ಕಿತ್ತುಕೊಳ್ಳುವ ಸಲುವಾಗಿ ಇವರ ಕೆಲವು ಬಂಧುಗಳು ಕಿರುಕುಳ ಕೊಡಲು ಪ್ರಾರಂಭಿಸಿದರು. ಆಗ ಚಂದ್ರಾಭಾಯಿಯವರಿಗೆ ಇವರುಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು 14,000 ರುಪಾಯಿಗಳು ಬೇಕಾಗಿತ್ತು. ಇವರ ಮನೆಗೆ ಯಾರೂ ಬಾಡಿಗೆದಾರರು ಬರದಂತೆ ಇವರ ಬಂಧುಗಳು ಮಾಟ ಮಂತ್ರಗಳನ್ನು ಕೂಡ ಮಾಡಿಸಿದರು. ಸಾಯಿಬಾಬಾರವರು ಈ ವಿಷಯವನ್ನು ಚಂದ್ರಭಾಯಿಯವರ ಕನಸಿನಲ್ಲಿ ಬಂದು ತಿಳಿಸಿ ಸೂಕ್ತ ಸಮಯದಲ್ಲಿ ಎಚ್ಚರಿಕೆ ನೀಡಿದರು. ಕೂಡಲೇ ಚಂದ್ರಾಭಾಯಿಯವರು ತಡ ಮಾಡದೆ ತಮ್ಮ ಕೆಲವು ನಂಬಿಕೆಯಿರುವ ಜನರನ್ನು ತಮ್ಮ ಊರಾದ ಗೋವಾಕ್ಕೆ ಕಳುಹಿಸಿ ತಮ್ಮ ಕುಲದೇವಿಗೆ ಪೂಜೆಯನ್ನು ಮಾಡಿಸುವಂತೆ ಹೇಳಿ ಮಾಟ ಮಂತ್ರಗಳ ತೊಂದರೆಯಿಂದ ಬಿಡುಗಡೆ ಹೊಂದಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ