ಸಾಯಿ ಮಹಾಭಕ್ತ - ಮೇಘಶ್ಯಾಮ ರೇಗೆ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ
ಮೇಘಶ್ಯಾಮ ರೇಗೆ
ಮೇಘಶ್ಯಾಮ ರೇಗೆಯವರು ಇಂದೂರು ಹೈಕೋರ್ಟ್ ನ ನಿವೃತ್ತ ನ್ಯಾಯಧೀಶರಾಗಿದ್ದರು. ಇವರು ಚಿಕ್ಕಂದಿನಿಂದ ಧಾರ್ಮಿಕ ಮನೋಭಾವ ಉಳ್ಳವರಾಗಿದ್ದರು. ಆದುದರಿಂದ ಇವರು ಸಾಯಿಬಾಬಾರವರಿಂದ ಹೆಚ್ಚು ಪ್ರಯೋಜನ ಪಡೆದರು. ಇವರ ಮನೆ ದೇವರು ಗೋವಾದ ದುರ್ಗೆಯಾಗಿದ್ದು ಚಿಕ್ಕಂದಿನಿಂದ ಇವರು ಅನನ್ಯ ಭಕ್ತಿಯಿಂದ ದುರ್ಗೆಯನ್ನು ಪೂಜಿಸುತ್ತಿದ್ದರು. ಇವರ ೮ ನೇ ವಯಸ್ಸಿನಲ್ಲಿ ಇವರಿಗೆ ಉಪನಯನವಾಯಿತು. ಆಗಿನಿಂದಲೇ ಗಾಯತ್ರಿ ಮಂತ್ರ ಮತ್ತು ಸಂಧ್ಯಾವಂದನೆಯನ್ನು ತಪ್ಪದೆ ನಿತ್ಯವೂ ಆಚರಿಸುತ್ತಿದ್ದರು. ಆನಂತರ ರವಿ ವರ್ಮರವರ ಧ್ರುವನಾರಾಯಣ ಚಿತ್ರವು ಇವರನ್ನು ಬಹಳ ಆಕರ್ಷಿಸಿತು ಮತ್ತು ನಾರಾಯಣನ ಬಗ್ಗೆ ಅಪಾರ ಭಕ್ತಿಯು ಬೆಳೆಯಿತು. ಕೊನೆಯ ಕಾಲದಲ್ಲಿ ನಾರಾಯಣನಲ್ಲಿ ಪಾದಗಳಲ್ಲಿ ಲೀನವಾಗಬೇಕೆಂಬ ಬಯಕೆ ಇವರಲ್ಲಿ ಬೆಳೆಯಿತು. ಇವರು ನಿತ್ಯ ದೇವರ ಪೂಜೆ, ಪ್ರಾರ್ಥನೆ, ಧ್ಯಾನ ಮಾಡುವುದಲ್ಲದೆ ಯೋಗಾಸನ ಮತ್ತು ಪ್ರಾಣಾಯಾಮ ಕೂಡ ಮಾಡುತ್ತಿದ್ದರು. ಇವರು ಎರಡು ಘಂಟೆಗಳವರೆಗೆ ಪದ್ಮಾಸನ ಅಥವಾ ಸಿದ್ದಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳಬಲ್ಲವರಾಗಿದ್ದರು. ಒಂದು ದೇವರ ಚಿತ್ರಪಟವನ್ನು ೧೫ ನಿಮಿಷಗಳ ಕಾಲ ತದೇಕ ಚಿತ್ತದಿಂದ ನೋಡುತ್ತಿದ್ದರು. ಇವೆಲ್ಲವನ್ನೂ ಇವರು ಯಾವ ಗುರುವಿನ ಮಾರ್ಗದರ್ಶನವಿಲ್ಲದೆ ಮಾಡುತ್ತಿದ್ದರು. ಪ್ರಾಣಾಯಾಮ ಮಾಡುವಾಗ ಉಸಿರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಲ್ಲವರಾಗಿದ್ದರು. ಇವರು ತಮ್ಮ ಹೃದಯದ ಬಡಿತವನ್ನು ತಹಬದಿಯಲ್ಲಿ ಇಟ್ಟುಕೊಳ್ಳುವ ಅಥವಾ ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿದ್ದರು. ವಿಷ್ಣುವಿನಲ್ಲಿದ್ದ ಅನನ್ಯ ಭಕ್ತಿ ಮತ್ತು ನಿರಂತರ ಆಧ್ಯಾತ್ಮಿಕ ಸಾಧನೆ ಇವರಿಗೆ ತಮ್ಮ ೨೧ ನೇ ವಯಸ್ಸಿನಲ್ಲಿ ಫಲ ಕೊಟ್ಟಿತು.
ಕ್ರಿ.ಶ.೧೯೧೦ ರ ಒಂದು ರಾತ್ರಿ ಇವರಿಗೆ ಸತತ ೩ ಬಾರಿ ವಿಶೇಷವಾದ ಕನಸಾಯಿತು. ಮೊದಲನೇ ಕನಸಿನಲ್ಲಿ ಇವರ ದೇಹದಲ್ಲಿ ಬದಲಾವಣೆಯಾದಂತೆ ತೋರಿತು. ಇವರಿಂದ ಇವರ ದೇಹ ಬೇರೆಯಾದಂತೆ ತೋರಿತು ಮತ್ತು ಇವರು ಆ ದೇಹವನ್ನು ವೀಕ್ಷಿಸುತ್ತಿದ್ದಂತೆ ಭಾಸವಾಯಿತು. ಇವರ ಮುಂದೆ ವಿಷ್ಣು ನಾರಾಯಣ ನಿಂತಂತೆ ಅನಿಸಿತು. ಈ ಕನಸಿನಿಂದ ಆಧ್ಯಾತ್ಮಿಕ ಮಾರ್ಗದಲ್ಲಿ ಮೊದಲನೆಯ ಹೆಜ್ಜೆಯಾದ ದೇಹ ಮತ್ತು ಆತ್ಮಗಳ ಸಂಬಂಧದ ಅರಿವು ಅವರಿಗೆ ಆಯಿತು. ಒಂದು ಘಂಟೆಯ ನಂತರ ಮತ್ತೊಂದು ಕನಸಾಯಿತು. ಈ ಬಾರಿ ಇವರಿಂದ ಇವರ ದೇಹ ಬೇರೆಯಾದಂತೆ ತೋರಿತು ಮತ್ತು ಇವರು ಆ ದೇಹವನ್ನು ವೀಕ್ಷಿಸುತ್ತಿದ್ದಂತೆ ಭಾಸವಾಯಿತು. ಇವರ ಮುಂದೆ ವಿಷ್ಣು ನಾರಾಯಣ ನಿಂತಂತೆ ಅನಿಸಿತು. ಇಷ್ಟೇ ಆಲ್ಲದೇ ಮತ್ತೊಬ್ಬರು ನಿಂತಂತೆ ಭಾಸವಾಯಿತು. ವಿಷ್ಣು ನಾರಾಯಣ ಅವರ ಕಡೆ ಬೆರಳು ತೋರಿಸುತ್ತಾ ಅವರು ಶಿರಡಿ ಸಾಯಿಬಾಬಾರವರೆಂದು ಮತ್ತು ಅವರನ್ನು ಇನ್ನು ಮುಂದೆ ಆಶ್ರಯಿಸಬೇಕೆಂದು ಹೇಳಿದಂತೆ ಭಾಸವಾಯಿತು. ಈ ಕನಸು ರೇಗೆಯವರಿಗೆ ತಮ್ಮ ಆಧ್ಯಾತ್ಮಿಕ ಗುರುವನ್ನು ತೋರಿಸುವಲ್ಲಿ ಯಶಸ್ವಿಯಾಯಿತು. ಇನ್ನೊಂದು ಘಂಟೆಯ ನಂತರ ೩ ನೇ ಕನಸಾಯಿತು. ಅದರಲ್ಲಿ ಇವರು ಗಾಳಿಯಲ್ಲಿ ಪ್ರಯಾಣ ಮಾಡುತ್ತಿರುವಂತೆ ಭಾಸವಾಯಿತು. ಅದೇ ರೀತಿ ಪ್ರಯಾಣ ಮಾಡಿ ಅವರು ಒಂದು ಹಳ್ಳಿಗೆ ಬಂದರು. ಅದು ಯಾವ ಸ್ಥಳವೆಂದು ವಿಚಾರಿಸಲಾಗಿ ಹಳ್ಳಿಯವರು ಅದು ಶಿರಡಿ ಗ್ರಾಮವೆಂದು ಹೇಳಿದರು. ಅಲ್ಲಿ ಸಾಯಿಬಾಬಾರವರು ಇರುವರೇ ಎಂದು ಹಳ್ಳಿಯವರನ್ನು ಕೇಳಲು ಅವರು ಇರುವರೆಂದು ಹೇಳಿ ಅವರಿದ್ದ ಮಸೀದಿಯ ಬಳಿಗೆ ಇವರನ್ನು ಕರೆದುಕೊಂಡು ಹೋದಂತೆ ಅನಿಸಿತು. ಮಸೀದಿಯಲ್ಲಿ ಸಾಯಿಬಾಬಾರವರು ಕಾಲುಚಾಚಿ ಕುಳಿತಿದ್ದರು. ಅವರನ್ನು ನೋಡಿದ ಕೂಡಲೇ ರೇಗೆಯವರು ಅವರ ಕಾಲಿಗೆ ನಮಸ್ಕರಿಸಿದರು. ಆದರೆ ಅವರಿಂದ ನಮಸ್ಕಾರ ಸ್ವೀಕರಿಸದೆ ತಕ್ಷಣವೇ ಮೇಲಕ್ಕೆದ್ದು "ನೀನೇಕೆ ನನ್ನ ದರ್ಶನ ಮಾಡುತ್ತೀಯ. ನಾನೇ ನಿನಗೆ ಋಣಿಯಾಗಿದ್ದೇನೆ. ನಾನು ನಿನ್ನ ದರ್ಶನ ಮಾಡಬೇಕು" ಎಂದು ಹೇಳುತ್ತಾ ತಮ್ಮ ತಲೆಯನ್ನು ರೇಗೆಯವರ ಪಾದಗಳಲ್ಲಿ ಇಟ್ಟಂತೆ ಭಾಸವಾಯಿತು. ಅಲ್ಲಿಗೆ ೩ ನೇ ಕನಸು ಮುಗಿಯಿತು. ಈ ೩ ಕನಸುಗಳು ರೇಗೆಯವರ ಮೇಲೆ ತುಂಬಾ ಪ್ರಭಾವವನ್ನು ಬೀರಿದವು.
ರೇಗೆಯವರ ಮನದಲ್ಲಿ ಸಾಯಿಬಾಬಾರವರು ಭದ್ರವಾಗಿ ನೆಲೆ ಊರಿದರು. ಶಿರಡಿಗೆ ಹೋಗಬೇಕೆಂಬ ಬಯಕೆ ಮನದಲ್ಲಿ ತೀವ್ರವಾಯಿತು. ಆದರೆ ಆಗ ಅವರಿನ್ನು ಚಿಕ್ಕವರಿದ್ದು ಓದುತ್ತಿದ್ದರು. ಕೆಲವು ಕಾಲದ ನಂತರ ರೇಗೆಯವರು ಶಿರಡಿಗೆ ಹೋಗುವಲ್ಲಿ ಸಫಲರಾದರು. ರೇಗೆಯವರು ಶಿರಡಿಗೆ ಹೋಗಿ ಸಾಯಿಯವರ ಪಾದಪದ್ಮಗಳಿಗೆ ಭಕ್ತಿಯಿಂದ ನಮಸ್ಕರಿಸಿದರು. ಕೂಡಲೇ ಸಾಯಿಬಾಬಾರವರು "ಏನು ನೀನು ಒಬ್ಬ ಮನುಷ್ಯನಿಗೆ ನಮಸ್ಕರಿಸುತ್ತೀಯ" ಎಂದು ಕೇಳಿದರು. ಕೂಡಲೇ ರೇಗೆಯವರಿಗೆ ತಮಗೆ ಹಿಂದೆ ಬಿದ್ದ ಕನಸುಗಳು ನೆನಪಾದವು. ಅಲ್ಲಿಂದ ಎದ್ದು ರೇಗೆಯವರು ಮಂಟಪದ ಬಳಿ ಹೋಗಿ ಕುಳಿತರು. ಅಲ್ಲಿ ಎಷ್ಟು ಹೊತ್ತು ಕುಳಿತಿದ್ದರೋ ಅವರಿಗೆ ತಿಳಿಯಲಿಲ್ಲ. ಇವರಿಗೆ ಅತ್ಯಾಶ್ಚರ್ಯವಾಯಿತು. ಇವರು ಓದಿದ್ದರಿಂದ ಇವರಿಗೆ ಮಾನವ ಮಾತ್ರರಿಗೆ ನಮಸ್ಕಾರ ಮಾಡಬಾರದೆಂಬ ವಿಷಯ ತಿಳಿದಿತ್ತು. ಇವರು ಸಂದಿಗ್ಧ ಪರಿಸ್ಥಿತಿಯಲ್ಲಿ ಬಿದ್ದರು. ಕನಸಿನಲ್ಲಿ ಇವರಿಗೆ ಸಾಯಿಯವರನ್ನು ಗುರುವಾಗಿ ಸ್ವೀಕರಿಸುವಂತೆ ಆದೇಶ ಬಂದಿತ್ತು. ಇಲ್ಲಿ ನೋಡಿದರೆ ಸಾಯಿಯವರು ಇವರನ್ನು ಹತ್ತಿರ ಬಂದು ನಮಸ್ಕಾರ ಮಾಡಲು ಕೂಡ ಬಿಡುತ್ತಿರಲಿಲ್ಲ. ಇವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಇವರು ಸಾಯಿಯವರನ್ನು ಗುರುವಾಗಿ ಸ್ವೀಕರಿಸಲು ಬಹಳ ಧೃಡ ಮನಸ್ಸಿನಿಂದ ಶಿರಡಿಗೆ ಬಂದಿದ್ದರಿಂದ ಒಂದೆಡೆ ಸುಮ್ಮನೆ ಕುಳಿತರು. ಜನರೆಲ್ಲಾ ಬಂದು ಸಾಯಿದರ್ಶನ ಮಾಡಿಕೊಂಡು ಹೋಗುವ ತನಕ ಕಣ್ಣು ಮುಚ್ಚಿಕೊಂಡು ತಾಳ್ಮೆಯಿಂದ ಒಂದೆಡೆ ಕುಳಿತಿದ್ದರು. ಮಧ್ಯಾನ್ಹದ ವೇಳೆಗೆ ಇವರು ಕಣ್ಣು ಬಿಟ್ಟು ನೋಡಲಾಗಿ ಜನರೆಲ್ಲಾ ತಮ್ಮ ಮನೆಗಳಿಗೆ ಹೋಗಿದ್ದರು ಮತ್ತು ಸಾಯಿಯವರೊಬ್ಬರೇ ಇರುವುದು ಕಾಣಿಸಿತು. ಆದರೆ ಮಧ್ಯಾನ್ಹದ ವೇಳೆ ಸಾಯಿಬಾಬಾರವರನ್ನು ಯಾರು ಕೂಡ ಹೋಗಿ ನೋಡಲು ಅವಕಾಶ ಇರಲಿಲ್ಲ. ಆದರೆ ರೇಗೆಯವರಿಗೆ ಇದೆ ಒಳ್ಳೆಯ ಸಮಯ ಎಂದು ಗೊತ್ತಾಯಿತು. ಸಾಯಿಯವರು ತಮ್ಮನ್ನು ಬೈದರೂ ಅಥವಾ ಹೊಡೆಯಲು ಬಂದರೂ ಕೂಡ ಪರವಾಗಿಲ್ಲ ಎಂದು ಮನದಲ್ಲಿ ಅಂದುಕೊಂಡು ಸಾಯಿಯವರ ಬಳಿಗೆ ಹೋದರು. ಸಾಯಿಯವರು ಇವರು ತಮ್ಮ ಬಳಿಗೆ ಬರುವಂತೆ ಪ್ರೀತಿಯಿಂದ ಕರೆದರು. ರೇಗೆಯವರು ಸಾಯಿಯವರ ಬಳಿ ಬಂದು ಅವರ ಪಾದಪದ್ಮಗಳಿಗೆ ಪ್ರಣಾಮವನ್ನು ಸಲ್ಲಿಸಿದರು. ಸಾಯಿಯವರು ರೇಗೆಯವರನ್ನು ಪ್ರೀತಿಯಿಂದ ತಬ್ಬಿಕೊಂಡು ತಮ್ಮ ಬಳಿ ಕೂಡಿಸಿಕೊಂಡು "ನೀನು ನನ್ನ ಮಗು. ಬೇರೆಯವರು ನಮ್ಮ ಬಳಿಯಿದ್ದಾಗ ನಮ್ಮ ಮಕ್ಕಳನ್ನು ಹತ್ತಿರ ಬರಲು ನಾವು ಬಿಡುವುದಿಲ್ಲ ಅಲ್ಲವೇ?" ಎಂದು ಕೇಳಿದರು. ಆಗ ರೇಗೆಯವರಿಗೆ ಏಕೆ ಸಾಯಿಯವರು ತಮ್ಮನ್ನು ಅಲ್ಲಿಯವರೆಗೆ ಹತ್ತಿರ ಬರಲು ಬಿಡಲಿಲ್ಲ ಎಂಬ ವಿಷಯ ತಿಳಿಯಿತು. ತಮ್ಮನ್ನು ಮಗುವೆಂದು ಸಾಯಿಯವರು ಕರೆದಿದ್ದರಿಂದ ರೇಗೆಯವರಿಗೆ ತಾವು ಸಾಯಿಬಾಬಾರವರ ಅಂಕಿತ ಶಿಷ್ಯರೆಂದು ಗೊತ್ತಾಯಿತು. ತಮ್ಮ ಕನಸು ನಿಜವಾಯಿತು ಮತ್ತು ತಮ್ಮ ಜೀವಮಾನದ ಕೊನೆಯವರೆಗೆ ಸಾಯಿಬಾಬಾರವರೇ ತಮ್ಮ ಗುರು ಎಂದು ವಿಷ್ಣು ನಾರಾಯಣ ಆದೇಶ ನೀಡಿದ್ದು ರೇಗೆಯವರ ಮನಸ್ಸಿನಲ್ಲಿ ಚೆನ್ನಾಗಿ ನಿಂತುಬಿಟ್ಟಿತು.
ಸಾಯಿಬಾಬಾರವರು ರೇಗೆಯವರಿಗೆ ರಾಧಾಕೃಷ್ಣಮಾಯಿಯ ಬಳಿಗೆ ಹೋಗಲು ಹೇಳಿದರು. ರಾಧಾಕೃಷ್ಣಮಾಯಿಯವರು ರೇಗೆಯವರನ್ನು ತಮ್ಮ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದರು. ಸಾಯಿಯವರು ಪ್ರತಿನಿತ್ಯ ಒಂದು ರೊಟ್ಟಿಯನ್ನು ಪ್ರಸಾದವಾಗಿ ರಾಧಾಕೃಷ್ಣಮಾಯಿಯವರಿಗೆ ಕಳುಹಿಸುತ್ತಿದ್ದರು. ಆದರೆ ರೇಗೆಯವರು ಶಿರಡಿಯಲ್ಲಿದ್ದಾಗ ಎರಡು ರೊಟ್ಟಿಯನ್ನು ಕಳುಹಿಸುತ್ತಿದ್ದರು. ರಾಧಾಕೃಷ್ಣಮಾಯಿಯವರು ಸಾಯಿಯವರನ್ನು ಬಹುವಾಗಿ ಪ್ರೀತಿಸುತ್ತಿದ್ದರು ಮತ್ತು ಸಾಯಿ ಸಂಸ್ಥಾನದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಪುರಂದರೆ, ರೇಗೆ ಮತ್ತು ಇನ್ನು ಮುಂತಾದ ಅನೇಕ ಜನರ ಕೈಲಿ ರಾಧಾಕೃಷ್ಣಮಾಯಿ ಸಂಸ್ಥಾನದ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಆದರೆ ಸೇವೆ ಮಾಡುವುದೊಂದೇ ಭಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವುದಿಲ್ಲ. ಆದರೆ ರಾಧಾಕೃಷ್ಣಮಾಯಿಯವರು ಭಕ್ತಿಗೂ ಮೀರಿದ ಕೆಲವು ವಿಶೇಷ ಶಕ್ತಿಗಳನ್ನು ಹೊಂದಿದ್ದರು. ಮನಸ್ಸಿನ ಏಕಾಗ್ರತೆಯನ್ನು ಹೊಂದಿದ್ದಷ್ಟೇ ಆಲ್ಲದೇ ಒಳ್ಳೆಯ ದನಿಯನ್ನು ಪಡೆದಿದ್ದರು ಮತ್ತು ಚೆನ್ನಾಗಿ ಹಾಡುತ್ತಿದ್ದರು. ರೇಗೆಯವರು ಕೂಡ ಒಳ್ಳೆಯ ಕಂಠವನ್ನು ಹೊಂದಿದ್ದು ಚೆನ್ನಾಗಿ ಹಾಡುತ್ತಿದ್ದರು. ಇವರಿಬ್ಬರೂ ಕಲೆತು ಅನೇಕ ಆಧ್ಯಾತ್ಮಿಕ ವಿಚಾರಗಳನ್ನು ಚರ್ಚಿಸಿ ಅವುಗಳನ್ನು ಯಾರಿಗೂ ಹೇಳ್ಡದೆ ಬಹಳ ಗೌಪ್ಯವಾಗಿರಿಸಿಕೊಳ್ಳುತ್ತಿದ್ದರು. ರಾಧಾಕೃಷ್ಣಮಾಯಿಯವರು ಜಪವನ್ನು ಮಾಡುವಂತೆ ರೇಗೆಯವರಿಗೆ ಹೇಳಲು ಯಾವ ದೇವರ ಜಪ ಮಾಡಬೇಕೆಂದು ರೇಗೆ ಕೇಳಿದರು. ಆಗಾ ರಾಧಕೃಷ್ಣಮಾಯಿ ರಾಮ, ಕೃಷ್ಣ, ವಿಠಲ ಅಥವಾ ಇನ್ನ್ಯಾವ ದೇವರ ಜಪವನ್ನು ಕೂಡ ಮಾಡಬಹುದು. ಆದರೆ ತಮಗೆ ಸಾಯಿಯವರೇ ಎಲ್ಲಾ ದೇವರ ರೂಪವಾದ್ದರಿಂದ ಸಾಯಿ ಜಪವನ್ನು ತಾವು ಮಾಡುವುದಾಗಿ ಹೇಳಿದರು. ಇದನ್ನು ಕೇಳಿ ರೇಗೆಯವರು ಕೂಡ ಸಾಯಿ ನಾಮ ಜಪ ಮಾಡಲು ಪ್ರಾರಂಭಿಸಿದರು. ಇದು ಒಮ್ಮೆ ಸಾಯಿಯವರಿಗೆ ಗೊತ್ತಾಯಿತು. ಸಾಯಿಯವರು ಬಂದು ರೇಗೆಯವರನ್ನು ಏನು ಮಾಡುತ್ತಿದ್ದೆ ಎಂದು ಕೇಳಿದರು. ರೇಗೆ ನನ್ನ ದೇವರ ಜಪ ಮಾಡುತ್ತಿದ್ದೆ ಎಂದು ಹೇಳಿದರು. ಸಾಯಿಯವರು ನಿನ್ನ ದೇವರು ಯಾರೆಂದು ಕೇಳಲು, ರೇಗೆಯವರು ನಿಮಗೆ ಎಲ್ಲಾ ಗೊತ್ತಿದೆಯಲ್ಲ ಎಂದರು. ಸಾಯಿಯವರು ಹಾಗಾದರೆ ಸರಿ ಎಂದು ಸಾಯಿ ನಾಮ ಜಪ ಮಾಡಲು ತಮ್ಮ ಒಪ್ಪಿಗೆ ಇದೆ ಎಂದು ಸೂಚಿಸಿದರು. ರಾಧಾಕೃಷ್ಣಮಾಯಿ ಮತ್ತು ರೇಗೆಯವರಿಗೆ ಸಾಯಿಬಾಬಾರವರ ಮೇಲೆ ಅತೀವ ಪ್ರೀತಿ ಇತ್ತು ಮತ್ತು ಸಾಯಿಯವರು ಕೂಡ ಇವರಿಬ್ಬರನ್ನು ಬಹಳವಾಗಿ ಪ್ರೀತಿಸುತ್ತಿದ್ದರು.
ಒಮ್ಮೆ ಸಾಯಿಯವರು ಸಾಧನೆಯ ಬಗ್ಗೆ ರೇಗೆಯವರಿಗೆ ಒಂದು ಒಳ್ಳೆಯ ಭೋದನೆಯನ್ನು ಮಾಡಿದರು. ಒಂದು ಗುರುಪೂರ್ಣಿಮೆಯ ದಿವಸ ಎಲ್ಲಾ ಸಾಯಿಭಕ್ತರು ಧಾರ್ಮಿಕ ಗ್ರಂಥಗಳನ್ನು ತೆಗೆದುಕೊಂಡು ಬಂದು ಸಾಯಿಬಾಬಾರವರ ಕೈಗೆ ಕೊಟ್ಟು ಅವರಿಂದ ಅದನ್ನು ಆಶೀರ್ವಾದ ಪೂರ್ವಕವಾಗಿ ವಾಪಸು ಪಡೆದು ನಂತರ ಓದಲು ತೆಗೆದುಕೊಂಡು ಹೋಗುತ್ತಿದ್ದರು. ರೇಗೆಯವರು ಕೂಡ ಸಾಯಿಯವರ ಬಳಿಗೆ ಬಂದರು. ಆದರೆ ಅವರು ಯಾವ ಪುಸ್ತಕವನ್ನು ತಮ್ಮ ಜೊತೆ ತಂದಿರಲಿಲ್ಲ. ಸಾಯಿಬಾಬಾರವರು ಅದನ್ನು ಮನಗಂಡು ರೇಗೆಯವರಿಗೆ "ಈ ಜನರು ಪುಸ್ತಕಗಳಲ್ಲಿ ಬ್ರಹ್ಮನನ್ನು ಕಾಣಲು ಬಯಸುತ್ತಾರೆ. ಆದರೆ ಈ ಪುಸ್ತಕಗಳು ಅನೇಕ ಗೊಂದಲಗಳನ್ನು ಮನದಲ್ಲಿ ಹುಟ್ಟು ಹಾಕುತ್ತವೆ. ಆದುದರಿಂದ ನೀನು ಮಾಡಿದ್ದು ಸರಿಯಾಗಿದೆ. ಯಾವ ಪುಸ್ತಕಗಳನ್ನು ನೀನು ಓದಬೇಡ. ನನ್ನ ರೂಪವನ್ನು ನೀನು ಹೃದಯದಲ್ಲಿ ಇಟ್ಟುಕೋ. ನಿನ್ನ ಮನದ ಮತ್ತು ಹೃದಯದ ನಡುವೆ ಏಕತಾನತೆ ಬೆಳೆಸಿಕೊಂಡರೆ ಅಷ್ಟೇ ಸಾಕು" ಎಂದು ಹೇಳಿದರು.
ಹಾಗೆಂದು ಹೇಳಿದ ಮಾತ್ರಕ್ಕೆ ಸಾಯಿಬಾಬಾರವರು ಪುಸ್ತಕಗಳನ್ನು ಓದಲೇಬಾರದೆಂಬ ನಿಯಮವನ್ನೇನು ತಮ್ಮ ಭಕ್ತರ ಮೇಲೆ ಹೇರುತ್ತಿರಲಿಲ್ಲ. ಸಾಯಿಬಾಬಾರವರೇ ಸ್ವತಃ ಅನೇಕ ಭಕ್ತರಿಗೆ ಏಕನಾಥ ಭಾಗವತ, ಭಾವಾರ್ಥ ರಾಮಾಯಣ, ಜ್ಞಾನೇಶ್ವರಿ, ವಿಷ್ಣು ಸಹಸ್ರನಾಮ, ಭಗವದ್ಗೀತಾ ಮುಂತಾದ ಧಾರ್ಮಿಕ ಗ್ರಂಥಗಳನ್ನು ಪಾರಾಯಣ ಮಾಡಲು ಹೇಳುತ್ತಿದ್ದರು. ಆದರೆ ಪುಸ್ತಕಗಳಿಗಿಂತ ಹೆಚ್ಚಾಗಿ ಗುರುವಿನ ಅನನ್ಯ ಧ್ಯಾನವನ್ನು ಪ್ರತಿಪಾದಿಸುತ್ತಿದ್ದರು. ರೇಗೆಯವರಿಗೆ ಇದರ ನೇರ ಅನುಭವ ಆಗಾಗ್ಗೆ ಆಗುತ್ತಲೇ ಇರುತ್ತಿತ್ತು.
ಕ್ರಿ.ಶ.೧೯೧೬ ರ ರಾಮನವಮಿ ಸಂದರ್ಭದಲ್ಲಿ ಎಲ್ಲಾ ಸಾಯಿಭಕ್ತರು ಬಾಬಾರವರಿಗೆ ವಿಧ ವಿಧವಾದ ವಸ್ತ್ರಗಳನ್ನು ನೀಡುತ್ತಿದ್ದರು ಮತ್ತು ಅದನ್ನು ಅವರ ಆಶೀರ್ವಾದ ಎಂದು ಹಿಂದಕ್ಕೆ ಪಡೆಯುತ್ತಿದ್ದರು. ಆಗ ರೇಗೆ ಯವರು ಸಹ ೮೫/- ರುಪಾಯಿಗಳನ್ನು ಖರ್ಚು ಮಾಡಿ ಒಂದು ಅಂದವಾದ ಮಸ್ಲಿನ್ ಬಟ್ಟೆಯನ್ನು ಕೊಂಡರು. ಹೇಗಾದರೂ ಮಾಡಿ ಅದನ್ನು ಸಾಯಿಬಾಬಾರವರಿಗೆ ಕೊಡಬೇಕೆಂದು ಮತ್ತು ಪುನಃ ಅದನ್ನು ವಾಪಾಸ್ ಪಡೆಯದೇ ಸಾಯಿಯವರ ಕೈನಲ್ಲಿ ಕಟ್ಟಿಕೊಂಡರೆ ಚೆನ್ನಾಗಿರುತ್ತದೆ ಎಂದು ಯೋಚನೆ ಮಾಡುತ್ತಾ ಯಾರಿಗೂ ತಿಳಿಯದಂತೆ ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಗದ್ದುಗೆಯ ಕೆಳಗೆ ಮುಚ್ಚಿಟ್ಟರು. ಸ್ವಲ್ಪ ಸಮಯದ ನಂತರ ಗದ್ದುಗೆಯಿಂದ ಮೇಲೆದ್ದ ಬಾಬಾರವರು ಆ ಗದ್ದುಗೆಯನ್ನು ಚೆನ್ನಾಗಿ ಕೊಡವಿ ಎಂದು ಅಲ್ಲಿದ ಭಕ್ತರಿಗೆ ಹೇಳಿದರು. ಆಗ ರೇಗೆ ಅಡಗಿಸಿಟ್ಟಿದ್ದ ಮಸ್ಲಿನ್ ವಸ್ತ್ರವು ಬಾಬಾರವರಿಗೆ ಕಂಡಿತು. ಅದನ್ನು ನೋಡಿದ ಬಾಬಾರವರು ತಮ್ಮ ಕೈಗಳಿಗೆ ಅದನ್ನು ತೆಗೆದುಕೊಂಡು "ಈ ವಸ್ತ್ರವು ಯಾರದು. ನಾನು ಇದನ್ನು ಹಿಂದಕ್ಕೆ ಕೊಡುವುದಿಲ್ಲ. ಇದು ನನ್ನದು" ಎಂದು ಹೇಳುತ್ತಾ ತಮ್ಮ ಕೈಗಳಿಗೆ ಅದನ್ನು ತೊಟ್ಟುಕೊಂಡು ರೇಗೆಯವರ ಕಡೆ ನೋಡುತ್ತಾ "ಇದು ನನಗೆ ಚೆನ್ನಾಗಿ ಕಾಣುತ್ತದೆ ಅಲ್ಲವೇ" ಎಂದು ಕೇಳಿದರು. ಇದರಿಂದ ರೇಗೆಯವರಿಗೆ ಆದ ಆನಂದವನ್ನು ಸಾಯಿಭಕ್ತರು ಊಹಿಸಬಹುದು.
ಗ್ವಾಲಿಯರ್ ನ ನಿವೃತ್ತ ನ್ಯಾಯಾಧೀಶರಾದ ಪಿ.ಆರ್. ಅವಸ್ಥೆಯವರು ಶಿರಡಿಗೆ ಬರಲು ಕಾರಣಕರ್ತರು ಶ್ರೀ. ರೇಗೆ ಮತ್ತು ರಾಧಾಕೃಷ್ಣ ಮಾಯಿಯವರು. ರಾಧಾಕೃಷ್ಣ ಮಾಯಿಯವರಿಗೆ ಅನೇಕ ಪ್ರಸಿದ್ದ ವ್ಯಕ್ತಿಗಳು ಬಂದು ಸಾಯಿಬಾಬಾರವರ ಪಾದ ದರ್ಶನ ಮಾಡಿ ಹೋಗಬೇಕೆಂಬ ಬಯಕೆ ಇತ್ತು. ಅದಕ್ಕಾಗಿ ಅವರು ಬಹಳ ಶ್ರಮಿಸಿದರು.
ಒಮ್ಮೆ ಸಾಯಿಬಾಬಾರವರು ಮಸೀದಿಯಲ್ಲಿ ಒಬ್ಬರೇ ಇದ್ದಾಗ ರೇಗೆಯವರಿಗೆ ಬರ ಹೇಳಿದರು. ರೇಗೆಯವರು ಬಂದ ಕೂಡಲೇ ಅವರ ಕೈಲಿ ಮಸೀದಿಯ ತಿಜೋರಿಯ ಕೀಲಿ ಕೈಯನ್ನು ಇರಿಸಿ "ನಿನ್ನ ಕೈಯಲ್ಲಿ ಮಸೀದಿಯ ತಿಜೋರಿಯ ಬೀಗದ ಕೈಯನ್ನು ನೀಡಿದ್ದೇನೆ. ನಿನಗೆಷ್ಟು ಬೇಕೋ ಅಷ್ಟು ತೆಗೆದುಕೋ" ಎಂದು ಹೇಳಲು ರೇಗೆಯವರು ನಿರಾಕರಿಸಿ ತಾನು ಕೇಳಿದ್ದನ್ನು ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಕೇಳುವುದಾಗಿ ಹೇಳಿದರು. ಸಾಯಿಯವರು ರೇಗೆಯವರ ಕನ್ನೆಯನ್ನು ಮೃದುವಾಗಿ ಸವರಿ ತಮ್ಮ ಒಪ್ಪಿಗೆ ಸೂಚಿಸಿದರು. ಆಗ ರೇಗೆಯವರು ತಮ್ಮ ಈಗಿನ ಜನ್ಮದಲ್ಲಿಯೇ ಆಲ್ಲದೇ ಮುಂದಿನ ಎಲ್ಲಾ ಜನ್ಮಗಳಲ್ಲೂ ತಮ್ಮ ಜೊತೆಯೇ ಇರಬೇಕು ಮತ್ತು ತಮ್ಮನ್ನು ರಕ್ಷಿಸಬೇಕೆಂದು ಕೇಳಿಕೊಂಡರು. ರೇಗೆಯವರ ಮಾತುಗಳನ್ನು ಕೇಳಿ ಸಾಯಿಬಾಬಾರವರಿಗೆ ತುಂಬಾ ಸಂತೋಷವಾಗಿ ರೇಗೆಯವರನ್ನು ಬೆನ್ನನ್ನು ಮೃದುವಾಗಿ ತಟ್ಟುತ್ತಾ ತಾವು ಅನವರತವೂ ರೇಗೆಯವರ ಜೊತೆಯಲ್ಲೇ ಇರುವುದಾಗಿ ಭರವಸೆ ನೀಡಿದರು.
ಕ್ರಿ.ಶ.೧೯೧೪ ರಲ್ಲಿ ರೇಗೆಯವರು ತಮ್ಮ ಗರ್ಭಿಣಿ ಪತ್ನಿಯೊಂದಿಗೆ ಶಿರಡಿಗೆ ಹೋಗಿ ಸಾಯಿಬಾಬಾರವರ ದರ್ಶನ ಮಾಡಿದಾಗ ಸಾಯಿಯವರು "ನನ್ನ ಒಂದು ವಸ್ತು ನಿಮ್ಮ ಬಳಿಯೇ ಇದೆ" ಎಂದು ಮಾರ್ಮಿಕವಾಗಿ ಹೇಳಿದರು. ಕೆಲವು ತಿಂಗಳ ಬಳಿಕ ಮಗುವಿನೊಂದಿಗೆ ಶಿರಡಿಗೆ ತೆರಳಿದಾಗ ಸಾಯಿಯವರು "ರೇಗೆ, ಈ ಮಗು ನಿನ್ನದೋ ಅಥವಾ ನನ್ನದೋ" ಎಂದು ಕೇಳಿದರು. ಆಗ ರೇಗೆಯವರು "ನಿಮ್ಮದೇ ಬಾಬಾ" ಎಂದು ಉತ್ತರಿಸಲು ಸಾಯಿಬಾಬಾರವರು "ಈ ಮಗುವನ್ನು ನನ್ನ ಪ್ರತಿರೂಪವಾಗಿ ನಿನ್ನ ಬಳಿಯೇ ಇಟ್ಟುಕೊಂಡಿರು" ಎಂದು ಹೇಳಿದರು. ಸಾಯಿಯವರಿಗೆ ಮಗುವಿನ ಮುಂದಿನ ಭವಿಷ್ಯ ಮೊದಲೇ ತಿಳಿದಿತ್ತು. ಆದುದರಿಂದ ಹಾಗೆ ಹೇಳಿದರು. ಹಾಗೆ ಹೇಳಿ ಒಂದೂವರೆ ವರ್ಷದ ಬಳಿಕ ಮಗುವಿಗೆ ನ್ಯುಮೋನಿಯಾ ಖಾಯಿಲೆ ಬಂದು ದಿನೇ ದಿನೇ ಕೃಶವಾಗುತ್ತ ಬಂದಿತು. ರೇಗೆಯವರು ಮಗುವಿನೊಂದಿಗೆ ತಮ್ಮ ಮನೆಯ ಪೂಜಾ ಕೋಣೆಗೆ ಹೋಗಿ " ಬಾಬಾ, ಈ ಮಗು ನಿಮ್ಮದು. ಇದನ್ನು ನಿಮ್ಮ ಬಳಿಗೆ ಕರೆದುಕೊಂಡು ಸದ್ಗತಿ ನೀಡಿ. ಅದರ ಕರ್ಮವನ್ನು ನಾನು ಭರಿಸುತ್ತೇನೆ" ಎಂದು ಸಾಯಿಯವರನ್ನು ಪ್ರಾರ್ಥಿಸಿದರು. ಹಾಗೆ ಹೇಳುತ್ತಾ ತಮ್ಮ ಕೈಯನ್ನು ಮಗುವಿನ ಹಣೆಯ ಮೇಲಿಟ್ಟರು. ಆ ಮಗುವು ಇವರನ್ನು ನೋಡಿ ನಗುತ್ತ ಯೋಗಿಗಳ ಹಾಗೆ ಮಗುವಿನ ಬ್ರಹ್ಮ ರಂಧ್ರದ ಮುಖೇನ ಪ್ರಾಣ ಹೋಯಿತು. ಕೆಲವು ದಿನಗಳ ಬಳಿಕ ರೇಗೆಯವರು ಶಿರಡಿಗೆ ಹೋದಾಗ ಸಾಯಿಬಾಬಾರವರು ತಮ್ಮ ಮಾತುಗಳಿಂದ ಮಗುವಿಗೆ ಸದ್ಗತಿ ನೀಡಿರುವ ವಿಷಯವನ್ನು ಧೃಡಪಡಿಸಿದರು. ಇದನ್ನು ಸಾಯಿಸಹಸ್ರನಾಮದಲ್ಲಿ ಉಲ್ಲೇಖಿಸಲಾಗಿದೆ.
ರೇಗೆಯವರು ಯಾವಾಗಲೂ ಸಾಯಿಯವರನ್ನು ಪ್ರಾಪಂಚಿಕ ಸುಖಗಳಿಗಾಗಿ ಪ್ರಾರ್ಥಿಸಲಿಲ್ಲ. ಅವರು ತಮ್ಮ ಬಳಿ ಇದ್ದುದರಲ್ಲೇ ತೃಪ್ತಿಯನ್ನು ಹೊಂದಿದ್ದರು. ಸಾಯಿಯವರು ರೇಗೆಯವರಿಗೆ ಅವಸ್ಥಾತ್ರಯಗಳಾದ ಜಾಗ್ರತ್, ಸ್ವಪ್ನ, ಸುಷುಪ್ತಿ ಸ್ಥಿತಿಗಳಲ್ಲಿ ತಮ್ಮ ಇರುವಿಕೆಯನ್ನು ಧೃಡಪಡಿಸಿದರು ಮತ್ತು ಅನೇಕ ರೀತಿಯಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ರೇಗೆಯವರಿಗೆ ನೀಡಿದರು. ರೇಗೆಯವರು ತಮ್ಮ ತನು ಮನ ಧನಗಳನ್ನು ಸಾಯಿಯವರಿಗೆ ಅರ್ಪಿಸಿ ಅವರಿಗೆ ಸಂಪೂರ್ಣ ಶರಣಾಗಿದ್ದರು ಮತ್ತು ಸಾಯಿ ಕೃಪೆ ಬೇಡುವ ಎಲ್ಲಾ ಭಕ್ತರಿಗೂ ಕೂಡ ಹಾಗೆಯೇ ಮಾಡಬೇಕೆಂದು ಹೇಳುತ್ತಾರೆ.
No comments:
Post a Comment