ಸಾಯಿ ಮಹಾ ಭಕ್ತೆ - ಶ್ರೀಮತಿ ತಾರಾಭಾಯಿ ಸದಾಶಿವ ತಾರ್ಕಡ್ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ
ಶ್ರೀಮತಿ ತಾರಾಭಾಯಿ ಸದಾಶಿವ ತಾರ್ಕಡ್ ರವರು ಪುಣೆಯಲ್ಲಿದ್ದಾಗ ತಮ್ಮ ಮುಂಬೈ ನಲ್ಲಿದ್ದ ತಮ್ಮ ಭಾವನವರಾದ ಶ್ರೀ.ಆರ್.ತಾರ್ಕಡ್ ರವರಿಂದ ಸಾಯಿಬಾಬಾರವರ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡರು. ಅವರ ಭಾವನವರು ಸಾಯಿಯವರ ಲೀಲೆಗಳನ್ನು ಹಾಡಿ ಹೊಗಳಿದಾಗ ಸ್ವಾಭಾವಿಕವಾಗಿ ತಾರಾಭಾಯಿಯವರ ಮನಸ್ಸು ಕೂಡ ಅವರ ಬಗ್ಗೆ ಆಸಕ್ತಿಯನ್ನು ತಳೆಯಿತು. ಏಕೆಂದರೆ ತಾರಾಭಾಯಿಯವರ ೧೫ ತಿಂಗಳ ಮಗು ನಳಿನಿ ಬಹಳ ಖಾಯಿಲೆಯಿಂದ ಬಳಲುತ್ತಿದ್ದಳು. ಅವರ ಭಾವನವರ ಮಾತನ್ನು ಆಲಿಸಿದ ತಾರಾಭಾಯಿ ಸಾಯಿಬಾಬಾರವರು ತಮ್ಮ ಮಗಳ ಖಾಯಿಲೆಯನ್ನು ಗುಣ ಮಾಡಿದರೆ ಆ ಕ್ಷಣವೇ ಶಿರಡಿಗೆ ತನ್ನ ಮನೆಯವರೊಂದಿಗೆ ತೆರಳುತ್ತೇನೆ ಎಂದು ಹರಸಿಕೊಂಡರು. ಆಶ್ಚರ್ಯವೆಂಬಂತೆ ಮಗಳ ಖಾಯಿಲೆ ಸಂಪೂರ್ಣ ಕಡಿಮೆಯಾಯಿತು. ಆಗ ತಾರಾಭಾಯಿ ತಮ್ಮ ಗಂಡ ಮತ್ತು ಮಗಳೊಡನೆ ಶಿರಡಿಗೆ ತೆರಳಿದರು.
ತಾರಾಭಾಯಿಯವರು ಸಾಯಿಬಾಬಾರವರಲ್ಲಿ ಸಂಪೂರ್ಣ ಶರಣಾಗತರಾಗಿ ಸಾಯಿಯವರ ಅಂಕಿತ ಭಕ್ತರಾಗಿದ್ದರು. ಇವರು ಮೊದಲ ಬಾರಿಗೆ ಶಿರಡಿಗೆ ಹೋದಾಗ ಶಿರಡಿಯಲ್ಲಿ ಯಾವುದೇ ಬೀದಿ ದೀಪಗಳಾಗಲಿ ಅಥವಾ ಶಿರಡಿ ಗ್ರಾಮವನ್ನು ನೋಡಿಕೊಳ್ಳಲು ಯಾವುದೇ ಒಂದು ಗ್ರಾಮದ ಸಂಸ್ಥೆಯಾಗಲಿ ಇರಲಿಲ್ಲ. ರಾತ್ರಿಯ ಕತ್ತಲಿನಲ್ಲಿ ತಾರಭಾಯಿಯವರು ನಡೆಯುತ್ತಿದ್ದರು. ಆಗ ಅವರಿಗೆ ಒಂದು ಸ್ಥಳದಲ್ಲಿ ನಿಲ್ಲಬೇಕೆಂದು ಅನಿಸಿತು. ಅಲ್ಲಿಂದ ಮುಂದೆ ಕಾಲಿರಿಸದೆ ಅಲ್ಲೇ ನಿಂತರು. ಯಾರೋ ದೀಪವನ್ನು ತಂದು ಇವರ ಬಳಿ ಹಿಡಿದರು. ದೀಪದ ಬೆಳಕಿನಲ್ಲಿ ನೋಡಲಾಗಿ ಇವರ ಮುಂದೆಯೇ ಒಂದು ದೊಡ್ಡ ಸರ್ಪ ಸುರುಳಿ ಸುತ್ತಿಕೊಂಡು ಕುಳಿತಿತ್ತು. ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದರೆ ಇವರು ಸರ್ಪದ ಮೇಲೆ ಕಾಲಿಡುತ್ತಿದ್ದರು. ಅವರು ಯಾಕೆ ತಮ್ಮ ಕಾಲನ್ನು ಮುಂದೆ ಇಡಲಿಲ್ಲ. ಅದೇ ಸಮಯದಲ್ಲಿ ದೀಪವು ಅಲ್ಲಿಗೆ ಹೇಗೆ ಬಂದಿತು ಎಂದು ಅವರಿಗೆ ತಿಳಿಯಲಿಲ್ಲ. ಸಾಯಿಬಾಬಾರವರು ತಮ್ಮ ಭಕ್ತರನ್ನು ಈ ರೀತಿ ಸಾದಾ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು.
ಒಮ್ಮೆ ತಾರಾಭಾಯಿಯವರು ತಮ್ಮ ಜೊತೆಯಲ್ಲಿ ತಮ್ಮ ಮನೆಯ ಕೆಲಸದವನನ್ನು ಕೂಡ ಶಿರಡಿಗೆ ಕರೆದುಕೊಂಡು ಹೋಗಿದ್ದರು. ಅವನು ಅತೀವ ಸೊಂಟದ ನೋವಿನಿಂದ ಬಳಲುತ್ತಿದ್ದನು. ಆಗ ಶಿರಡಿಯಲ್ಲಿ ಯಾವುದೇ ಆಸ್ಪತ್ರೆಯಾಗಲಿ ಇರಲಿಲ್ಲ. ತಾರಭಾಯಿಯವರ ಗಂಡ ಸಾಯಿಬಾಬಾರವರ ಬಳಿಗೆ ಬಂದು ಅವರನ್ನು ಪ್ರಾರ್ಥಿಸಲು ಸಾಯಿಬಾಬಾರವರು ಲೇಂಡಿ ಉದ್ಯಾನವನದ ಬಳಿ ಕೋರ್ ಪಡ್ ಎಲೆಗಳಿದ್ದು ಅದನ್ನು ತಂದು ಎರಡು ಭಾಗವನ್ನಾಗಿ ಸೀಳಿ ಬೆಂಕಿಯಲ್ಲಿ ಅದನ್ನು ಚೆನ್ನಾಗಿ ಬೇಯಿಸಿ ಅದನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದೆಂದು ಹೇಳಿದರು. ಸಾಯಿಯವರ ಆದೇಶದಂತೆ ಮಾಡಲಾಗಿ ರೋಗಿಗೆ ಸಂಪೂರ್ಣ ಗುಣವಾಯಿತು.
ಒಮ್ಮೆ ತಾರಾಭಾಯಿ ಕಣ್ಣು ಬೇನೆಯಿಂದ ಬಳಲುತ್ತಿದ್ದರು. ಅವರು ಹೋಗಿ ಸಾಯಿಬಾಬಾರವರ ಮುಂದೆ ಕುಳಿತರು. ಎರಡು ಕಣ್ಣುಗಳು ಬಹಳ ನೋಯುತ್ತಿತ್ತು ಮತ್ತು ನೀರು ಸುರಿಯುತ್ತಿತ್ತು. ಸಾಯಿಬಾಬಾರವರು ತಾರಭಾಯಿಯನ್ನು ದೃಷ್ಟಿಸಿ ನೋಡಿದರು. ಕೂಡಲೇ ಅವರ ಕಣ್ಣು ಬೇನೆ ಮತ್ತು ನೀರು ಸುರಿಯುವುದು ನಿಂತಿತು. ಆದರೆ ಸಾಯಿಬಾಬಾರವರ ಕಣ್ಣುಗಳಿಂದ ನೀರು ಒಂದೇ ಸಮನೆ ಸುರಿಯುತ್ತಿತ್ತು. ತಮ್ಮ ಬಳಿಗೆ ಬಂದ ಯಾವುದೇ ಭಕ್ತರ ತೊಂದರೆಗಳಿಗೆ ಸಾಯಿಬಾಬಾರವರು ಕ್ಷಣಮಾತ್ರದಲ್ಲಿ ಪರಿಹಾರವನ್ನು ಸೂಚಿಸುತ್ತಿದ್ದರು. ತಮ್ಮ ಭಕ್ತರ ಕಾಯಿಲೆ ಯನ್ನು ತಾವು ತೆಗೆದುಕೊಂಡು ಅವರ ತೊಂದರೆಯನ್ನು ಹೇಗೆ ಪರಿಹರಿಸುತ್ತಿದ್ದರೆಂದು ಯಾವ ಭಕ್ತರಿಗೂ ಕೂಡ ತಿಳಿಯುತ್ತಿರಲಿಲ್ಲ.
ಕ್ರಿ.ಶ.೧೯೧೫ ರಲ್ಲಿ ತಾರಾಭಾಯಿ ಅತೀವ ತಲೆನೋವಿನಿಂದ ನೆರಳುತ್ತಿದ್ದರು. ತಮ್ಮ ತಲೆ ಸಿಡಿದು ಹೋಗುವುದೇನೋ ಎಂಬುವಷ್ಟು ಯಾತನೆಯಾಗಿ ಅವರು ಶಿರಡಿಗೆ ಹೋಗಿ ಸಾಯಿಯವರ ಬಳಿ ತಮ್ಮ ಪ್ರಾಣವನ್ನು ಬಿಡಬೇಕೆಂದು ನಿಶ್ಚಯಿಸಿ ತಮ್ಮ ಪತಿಯೊಡನೆ ಶಿರಡಿಗೆ ಹೊರಟರು. ಕೋಪರ್ ಗಾವ್ ನಲ್ಲಿ ಗೋದಾವರಿ ನದಿಯನ್ನು ದಾಟುವಾಗ ಇವರ ಮನಸ್ಸಿನಲ್ಲಿ ನದಿಯಲ್ಲಿ ಸ್ನಾನ ಮಾಡಬೇಕೆಂದು ಅನಿಸಿತು. ಕೂಡಲೇ ಗೋದಾವರಿ ನದಿಯ ಕೊರೆಯುವ ನೀರಿನಲ್ಲಿ ಸ್ನಾನ ಮಾಡಿದರು. ಸಾಮಾನ್ಯವಾಗಿ ತಲೆನೋವಿದ್ದಾಗ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ತಲೆನೋವು ಹೆಚ್ಚಾಗುತ್ತದೆ. ಆದರೆ ಇವರ ತಲೆನೋವು ಮಂಗ ಮಾಯವಾಯಿತು. ಅಷ್ಟೇ ಅಲ್ಲಾ, ಮುಂದೆ ಎಂದಿಗೂ ತಲೆ ನೋವು ಪುನಃ ಬರಲೇ ಇಲ್ಲ.
ಕ್ರಿ.ಶ.೧೯೨೭ ರಲ್ಲಿ ಸಾಯಿಯವರ ಮಹಾಸಮಾಧಿಯಾಗಿ ೯ ವರ್ಷಗಳ ನಂತರ ತಾರ್ಕಡ್ ಕುಟುಂಬ ಶಿರಡಿಗೆ ಹೊರಟಿತು. ಆಗ ತಾರಾಭಾಯಿ ತುಂಬು ಗರ್ಭಿಣಿಯಾಗಿದ್ದರು. ಆದರೂ ಧೈರ್ಯ ಮಾಡಿ ಶಿರಡಿಗೆ ಹೊರಟರು. ಶಿರಡಿಯಲ್ಲಿ ಅವರಿಗೆ ಗರ್ಭಪಾತವಾಗಿ ಮಗು ಹೊಟ್ಟೆಯಲ್ಲೇ ಸತ್ತು ಹೋಯಿತು. ಆಲ್ಲದೇ, ಅವರ ದೇಹವೆಲ್ಲ ನೀಲಿಗಟ್ಟಿ, ರಕ್ತವೆಲ್ಲ ವಿಷವಾಗಹತ್ತಿತು. ಅಲ್ಲಿ ಆಗ ತಕ್ಷಣಕ್ಕೆ ಯಾವುದೇ ವೈದ್ಯರಿರಲಿಲ್ಲ. ಹತ್ತಿರದ ಅಹಮದ್ ನಗರದಿಂದ ಔಷಧಿಗಳನ್ನು ತಂದು ಕೊಡಲಾಯಿತಾದರೂ ಯಾವುದೇ ಗುಣ ಕಾಣದೆ ಪರಿಸ್ಥಿತಿ ಹದಗೆಡಲು ಆರಂಭವಾಯಿತು. ಆಗ ತಾರಾಭಾಯಿಯವರ ಪತಿ ಶ್ರೀ.ಸದಾಶಿವ ತಾರ್ಕಡ್ ಸಾಕೋರಿ ಆಶ್ರಮಕ್ಕೆ ತೆರಳಿ ಉಪಾಸಿನಿ ಬಾಬಾರವರನ್ನು ಪ್ರಾರ್ಥನೆ ಮಾಡಲು ಉಪಾಸಿನಿ ಬಾಬಾರವರು "ನೀನು ಇಲ್ಲಿಗೆ ಏಕೆ ಬಂದೆ. ಶಿರಡಿಯಲ್ಲೇ ಒಳ್ಳೆಯ ವೈದ್ಯರು ಹಾಗೂ ನರ್ಸುಗಳು ಇದ್ದರೆ. ನೀನು ಅಲ್ಲಿಗೆ ಹೋಗು" ಎಂದು ಹೇಳಿ ಕಳುಹಿಸಿದರು. ತಾರಾಭಾಯಿ ಪ್ರಜ್ಞೆ ತಪ್ಪಿದರು. ಆದರೆ ಆ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿಯೇ ಅವರು ತಮ್ಮ ಬಳಿಯಿದ್ದವರಿಗೆ ಏನು ಮಾಡಬೇಕೆಂದು ನಿರ್ದೇಶನ ಮಾಡುತ್ತಿದ್ದರು, ಆಲ್ಲದೇ ಅವರಿಗೆ ಸಾಯಿಯವರ ಪವಿತ್ರ ಉಧಿ ಮತ್ತು ತೀರ್ಥವನ್ನು ಕೊಡಲಾಯಿತು. ಆಶ್ಚರ್ಯವೆಂಬಂತೆ ಹೊಟ್ಟೆಯಲ್ಲಿದ್ದ ಭ್ರೂಣವು ಹೊರಬಂದಿತು. ಅನೇಕ ವಾರಗಳು ಅರೆ ಪ್ರಜ್ಞಾವಸ್ಥೆಯಲ್ಲೇ ಇದ್ದು ತಾರಭಾಯಿಯವರು ಸಂಪೂರ್ಣ ಗುಣ ಹೊಂದಿದರು. ಇದು ಸಾಯಿಬಾಬಾರವರ ಲೀಲೆಯಲ್ಲದೆ ಮತ್ತೇನು?
ಇದೇ ರೀತಿಯಲ್ಲಿ ಸಾಯಿಬಾಬಾರವರು ತಾರಾಭಾಯಿಯವರ ಗಂಡನನ್ನು ಕೂಡ ಆಶೀರ್ವದಿಸಿದರು. ಶ್ರೀ.ಸದಾಶಿವ ತಾರ್ಕಡ್ ರು ಒಂದು ಗಿರಣಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆ ಕೆಲಸದಿಂದ ಅವರನ್ನು ಯಾವುದೋ ಕಾರಣಕ್ಕಾಗಿ ವಜಾ ಮಾಡಿದರು. ಯಾವುದೇ ಕೆಲಸವಿಲ್ಲದೇ ಅನೇಕ ದಿನಗಳನ್ನು ಕಳೆದರು. ಆ ಸಮಯದಲ್ಲಿ ಸಾಯಿಬಾಬಾರವರನ್ನು ಕಾಣಲು ಶಿರಡಿಗೆ ತೆರಳಿದರು. ಸಾಯಿಯವರು ಅವರಿಗೆ ಕೆಲಸ ಕೊಡಿಸುವುದನ್ನು ಬಿಟ್ಟು ತಾತ್ಯಾ ಪಾಟೀಲ್ ಮತ್ತಿತರರ ಜೊತೆ ಅಹಮದ್ ನಗರದಲ್ಲಿ ನಡೆಯುತ್ತಿದ್ದ ಸಿನಿಮಾಗೆ ಹೋಗಿ ನಂತರ ಅಲ್ಲಿಂದಲೇ ಪುಣೆಗೆ ಹೋಗುವಂತೆ ಸೂಚಿಸಿದರು. ಸದಾಶಿವ ಅವರಿಗೆ ಬಾಬಾರವರ ಮಾತುಗಳನ್ನು ಕೇಳಿ ಕೆಲಸ ಕೇಳಲು ಬಂದರೆ ಸಿನಿಮಾಗೆ ಹೋಗಿ ಮೋಜು ಮಾಡಲು ಹೇಳುತ್ತಾರೆಂದು ಸ್ವಲ್ಪ ಬೇಜಾರಾಯಿತು. ಆದರೆ ಸಾಯಿಬಾಬರವರ ಮಾತನ್ನು ಮೀರುವ ಹಾಗಿರಲಿಲ್ಲ. ಆದ್ದರಿಂದ ತಾತ್ಯಾ ಮತ್ತಿತರರೊಂದಿಗೆ ಅಹಮದ್ ನಗರಕ್ಕೆ ಸಿನಿಮಾಗೆ ತೆರಳಿ ಅಲ್ಲಿಂದ ಪುಣೆಗೆ ಹೊರಟರು. ಪುಣೆಗೆ ಬಂದು ನೋಡಿದಾಗ ತಮ್ಮ ಗಿರಣಿಯಲ್ಲಿ ಕೆಲಸಗಾರರು ಮುಷ್ಕರ ನಡೆಸುತ್ತಿದ್ದುದರಿಂದ ಕೆಲಸ ನಿಂತು ಹೋಗಿ ಸದಾಶಿವ ರವರು ಒಳ್ಳೆಯ ಮ್ಯಾನೇಜರ್ ಆಗಿದ್ದು ಅವರು ಕೆಲಸಗಾರರನ್ನು ಚೆನ್ನಾಗಿ ನೋಡಿಕೊಳ್ಳುವ ಕಲೆ ಇದೆ ಎಂದು ಮನಗಂಡು ತಮ್ಮ ತಪ್ಪನ್ನು ಅರಿತುಕೊಂಡು ಇವರ ಗಿರಣಿಯ ಮಾಲೀಕರು ಇವರಿಗೋಸ್ಕರ ಎಲ್ಲಾ ಕಡೆ ತಂತಿಯನ್ನು ಕಳುಹಿಸಿದ್ದುದು ಗೊತ್ತಾಯಿತು. ಇದನ್ನು ಮೊದಲೇ ತಮ್ಮ ಅಂತರ್ ದೃಷ್ಟಿಯಿಂದ ತಿಳಿದ ಸಾಯಿಬಾಬಾರವರು ಇವರನ್ನು ವಾಪಸ್ ಪುಣೆಗೆ ಹೋಗುವಂತೆ ಆದೇಶ ನೀಡಿದ್ದರು. ಹೀಗೆ ಸಾಯಿಬಾಬಾರವರು ಸದಾಶಿವ ತಾರ್ಕಡ್ ರವರನ್ನು ಕೂಡ ಕಷ್ಟಗಳಿಂದ ಪಾರುಮಾಡಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.
ಕ್ರಿ.ಶ.೧೯೧೫ ರಲ್ಲಿ ತಾರಾಭಾಯಿ ತಮ್ಮ ಪತಿಯೊಡನೆ ಶಿರಡಿಗೆ ತೆರಳಿದಾಗ ಸಾಯಿಯವರು ಇವರನ್ನು ರಾಧಾಕೃಷ್ಣ ಮಾಯಿಯವರ ಜೊತೆಯಲ್ಲಿರುವಂತೆ ಆದೇಶವಿತ್ತರು. ರಾಧಾಕೃಷ್ಣ ಮಾಯಿಯವರು ಒಬ್ಬ ಬ್ರಾಹ್ಮಣ ವಿಧವೆಯಾಗಿದ್ದರು ಮತ್ತು ಅನನ್ಯ ಸಾಯಿಭಕ್ತೆಯಾಗಿದ್ದರು. ಅವರು ಮಸೀದಿಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಆದರೆ ಅವರ ನಾಲಿಗೆ ತುಂಬಾ ಹರಿತವಾಗಿತ್ತು. ಸರಿಯಾಗಿ ಕೆಲಸ ಮಾಡದಿದ್ದರೆ ಚೆನ್ನಾಗಿ ಬಯುತ್ತಿದ್ದರು ಮತ್ತು ತೆಗಳುತ್ತಿದ್ದರು. ಇದರಿಂದ ತಾರಭಾಯಿಯವರು ತಮಗೆ ಸಾಯಿಬಾಬಾ ಈ ರೂಪದಲ್ಲಿ ಶಿಕ್ಷೆಯನ್ನು ನೀಡುತ್ತಿದ್ದಾರೆ ಎಂದು ಭಾವಿಸಿದ್ದರು. ರಾಧಾಕೃಷ್ಣ ಮಾಯಿಯವರು ಸಾಯಿಯವರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು ಮತ್ತು ಸಾಯಿಬಾಬಾ ಸಂಸ್ಥಾನಕ್ಕೆ ಬಹಳ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರ ಜೀವನವನ್ನೇ ಸಾಯಿಬಾಬಾರವರ ಸೇವೆಗೆ ಮುಡುಪಾಗಿ ಇಟ್ಟಿದ್ದರು. ಆದುದರಿಂದ ರಾಧಾಕೃಷ್ಣ ಮಾಯಿಯವರ ಜೊತೆ ತಾರಭಾಯಿಯವರು ಇದ್ದುದರಿಂದ ಅವರಿಗೆ ಸಾಯಿಬಾಬಾರವರ ಬಗ್ಗೆ ಇನ್ನು ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಯಿತು ಮತ್ತು ಸಾಯಿ ಸೇವೆಯ ಮಹತ್ವ ಚೆನ್ನಾಗಿ ಅರಿವಾಯಿತು.
No comments:
Post a Comment