Friday, August 6, 2010

ಸಾಯಿ ಮಹಾಭಕ್ತ - ಶಾಂತಾರಾಮ್ ಬಲವಂತ್ ನಾಚ್ನೆ ದಹಾನುಕರ್ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಸಾಯಿಬಾಬಾ ಭಕ್ತರ ಅನುಭವಗಳು


ಶಾಂತಾರಾಮ್ ಬಲವಂತ್ ನಾಚ್ನೆ ದಹಾನುಕರ್


ಕ್ರಿ.ಶ.೧೯೦೯ ರಲ್ಲಿ ನಾಚ್ನೆಯವರ ದೊಡ್ಡ ಅಣ್ಣನವರು ಮುಂಬೈನ ಬಜೆಕರ್'ಸ್ ಆಸ್ಪತ್ರೆಯಲ್ಲಿ ಗಂಟಲಿನ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ನಾಚ್ನೆಕರ್ ರವರ ಇಡೀ ಕುಟುಂಬದವರು ಆಸ್ಪತ್ರೆಯಲ್ಲಿ ಸೇರಿದ್ದರು ಮತ್ತು ಎಲ್ಲರೂ ಬಹಳ ವ್ಯಾಕುಲರಾಗಿದ್ದರು. ಆ ಸಮಯದಲ್ಲಿ ನಾಚ್ನೆಯವರು ದಹಾನುವಿನಲ್ಲಿದ್ದರು. ಆಗ ಒಬ್ಬ ಸಾಧುವು ಇವರ ಮನೆಗೆ ಬಂದು ರೊಟ್ಟಿಯನ್ನು ಭಿಕ್ಷೆ ನೀಡುವಂತೆ ಕೇಳಿಕೊಂಡನು. ನಾಚ್ನೆ ಮನೆಯವರು ಆ ಸಾಧುವನ್ನು ಮನೆಯೊಳಗೇ ಕರೆದು ಭೋಜನವನ್ನು ನೀಡಿದರು. ಆ ಸಾಧುವು ಅವರನ್ನೆಲ್ಲ ಆಶೀರ್ವದಿಸಿದ್ದು ಮಾತ್ರವಲ್ಲದೆ ಮುಂಬೈನಲ್ಲಿ ನಡೆಯುತ್ತಿರುವ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದನು. ಅದೇ ದಿನ ನಾಚ್ನೆ ಯವರ ಸ್ನೇಹಿತರಾದ ಹರಿಭಾವು ಮೋರೆಶ್ವರ್ ಪಾನಸೆಯವರು ಸಾಯಿಬಾಬಾರವರ ಆಶೀರ್ವಾದದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವುದೆಂಬ ನಂಬಿಕೆ ತಮಗಿದೆ ಎಂದು ನಾಚ್ನೆಯವರ ಬಳಿ ಹೇಳಿದ್ದರು. ಆಗಲೇ ಮೊದಲ ಬಾರಿ ನಾಚ್ನೆಯವರು ಸಾಯಿಬಾಬಾರವರ ಹೆಸರನ್ನು ತಮ್ಮ ಜೀವನದಲ್ಲಿ ಕೇಳಿದುದು. ಅದೇ ದಿನ ಸಂಜೆ ನಾಚ್ನೆಯವರ ತಂದೆ ಆಸ್ಪತ್ರೆಯಿಂದ ಹಿಂತಿರುಗಿ ಬಂದು ಶಸ್ತ್ರಚಿಕಿತ್ಸೆ ಯಾವುದೇ ತೊಂದರೆ ಇಲ್ಲದೆ ನೆರವೇರಿದುದಾಗಿಯು ಮತ್ತು ನಾಚ್ನೆಯವರ ಅಣ್ಣನವರು ಅಪಾಯದಿಂದ ಪಾರಾಗಿರುವರೆಂದು ಶುಭ ಸಮಾಚಾರವನ್ನು ಅರುಹಿದರು. ಅಲ್ಲದೇ, ಶಸ್ತ್ರಚಿಕಿತ್ಸೆಯಾದ ಬಳಿಕ ಯಾರೋ ಒಬ್ಬ ಸಾಧುವು ನಾಚ್ನೆಯವರ ಅಣ್ಣನವರ ಬಳಿಗೆ ಬಂದು ಅವರಿಗೆ ಶಸ್ತ್ರಚಿಕಿತ್ಸೆಯಾದ ಭಾಗದ ಮೇಲೆ ಕೈಯಾಡಿಸಿ ಎಲ್ಲಾ ಒಳ್ಳೆಯದಾಗುವುದೆಂದು ನುಡಿದು ಹೊರಟು ಹೋದನೆಂದು ಕೂಡ ತಿಳಿಸಿದರು. ಆ ಸಾಧುವು ತಿಳಿಸಿದಂತೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಾಚ್ನೆಯವರ ಅಣ್ಣನವರು ಸಂಪೂರ್ಣ ಗುಣಮುಖರಾದರು.

ಕ್ರಿ.ಶ.೧೯೧೨ ರಲ್ಲಿ ನಾಚ್ನೆಯವರು ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದರು. ನಾಚ್ನೆಯವರು ಕಂದಾಯ ಇಲಾಖೆಯ ಪರೀಕ್ಷೆಗೆ ಕುಳಿತಿದ್ದರು ಮತ್ತು ಅದರ ಫಲಿತಾಂಶ ಬರುವ ಮೊದಲು ಶಿರಡಿಗೆ ತಮ್ಮ ಇಬ್ಬರು ಸ್ನೇಹಿತರಾದ ಶ್ರೀ.ಶಂಕರ ಬಾಲಕೃಷ್ಣ ವೈದ್ಯ ಮತ್ತು ಅಚ್ಯುತ ಡಾಟೇಯವರೊಂದಿಗೆ ಭೇಟಿ ನೀಡಿ ಸಾಯಿಯವರ ಆಶೀರ್ವಾದವನ್ನು ಪಡೆದರು. ಸಾಯಿಬಾಬಾರವರ ಆಶೀರ್ವಾದದಿಂದ ನಾಚ್ನೆಯವರು ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಕ್ರಿ.ಶ.೧೯೧೪ ರಲ್ಲಿ ನಾಚ್ನೆಯವರು ದಾಹುನುವಿನಲ್ಲಿ ಖಜಾನೆಯಲ್ಲಿ ಕೆಲ್ಸಸ ನಿರ್ವಹಿಸುತ್ತಿದ್ದರು. ಆಗ ಒಬ್ಬ ಬುದ್ಧಿಮಾಂದ್ಯ ವ್ಯಕ್ತಿ ರಾಮಕೃಷ್ಣ ಬಲವಂತ್ ಪಾನಸೆ ಎಂಬುವರು ಇವರನ್ನು ಕೊಲ್ಲಲು ಬಂದಾಗ ಇವರನ್ನು ಸಾಯಿಬಾಬಾರವರು ಕಾಪಾಡಿದರು.

ಕ್ರಿ.ಶ.೧೯೧೫ ರಲ್ಲಿ ಸಾಯಿಬಾಬಾರವರು ನಾಚ್ನೆಯವರು ಕೇಳದೆಯೇ ಅವರಿಗೆ ಆಶೀರ್ವದಿಸಿದರು. ಆಗ ನಾಚ್ನೆಯವರು ಥಾಣೆ ಜಿಲ್ಲೆಯ ದಾಹನುವಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

೩೧ ನೇ ಮಾರ್ಚ್ ೧೯೧೫ ರಂದು ರಾತ್ರಿಯ ವೇಳೆ ನಾಚ್ನೆ, ಶಾಂತಾರಾಮ್ ಮೋರೆಶ್ವರ್ ಪಾನಸೆ ಮತ್ತು ಇನ್ನು ಕೆಲವು ಮಂದಿ ಎತ್ತಿನ ಗಾಡಿಯಲ್ಲಿ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ಒಂದು ದಟ್ಟ ಅರಣ್ಯ ಪ್ರದೇಶವನ್ನು ದಾಟಿ ಹೋಗಬೇಕಾಗಿತ್ತು.  ಆ ಸ್ಥಳವನ್ನು ರನ್ ಶೇಟ್ ಪಾಸ್ ಎಂದು ಕರೆಯುತ್ತಿದ್ದರು. ಆ ಪ್ರದೇಶವು ಹುಲಿಗಳಿಗೆ ಹೆಸರುವಾಸಿಯಾಗಿತ್ತು. ಇದ್ದಕ್ಕಿದ್ದಂತೆ ಇವರ ಎತ್ತಿನ ಗಾಡಿಯ ಮುಂದೆ ಹುಲಿಯೊಂದು ಪ್ರತ್ಯಕ್ಷವಾಯಿತು. ಗಾಡಿಯಲ್ಲಿದ್ದವರೆಲ್ಲ ಭಯಭೀತರಾದರು. ಅವರೆಲ್ಲರೂ ಸೇರಿ ಸಾಯಿಬಾಬಾರವರನ್ನು ಭಕ್ತಿಯಿಂದ ಮನದಲ್ಲೇ ಪ್ರಾರ್ಥಿಸಿದರು. ಸಾಯಿಯವರು ಅವರನ್ನೆಲ್ಲ ಹುಲಿಯ ದವಡೆಯಿಂದ ಪಾರು ಮಾಡಿದರು.

ಕ್ರಿ.ಶ. ೧೯೧೮ ರಲ್ಲಿ ಸಾಯಿಬಾಬಾರವರ ಆಶೀರ್ವಾದದಿಂದ ನಾಚ್ನೆಯವರಿಗೆ ದಹಾನುವಿನಿಂದ ಮುಂಬೈನ ಬಾಂದ್ರಾಕ್ಕೆ ವರ್ಗವಾಯಿತು.

ಒಮ್ಮೆ ನಾಚ್ನೆಯವರು ಶಿರಡಿಗೆ ಬಂದಾಗ ಅಲ್ಲಿ ಶಂಕರ ರಾವ್ (ಬಾಲಕೃಷ್ಣ ವೈದ್ಯ) ಕೂಡ ಬಂದಿದ್ದರು. ಸಾಯಿಬಾಬಾ ಅವರನ್ನು ೬೪ ರುಪಾಯಿ ದಕ್ಷಿಣೆ ಕೇಳಿದರು. ಆಗ ಅವರು ತಮ್ಮ ಬಳಿ ಇಲ್ಲವೆಂದು ಹೇಳಿದರು. ಆಗ ಸಾಯಿಬಾಬಾರವರು ಚಂದಾ ವಸೂಲಿ ಮಾಡಿ ಕೊಡುವಂತೆ ಹೇಳಿದರು. ಸಾಯಿಯವರ ಮಾತುಗಳು ನಿಜವಾಯಿತು. ಏಕೆಂದರೆ ಮುಂದೆ ಒಂದು ದಿನ ಸಾಯಿಯವರು ಹುಷಾರಿಲ್ಲದೆ ಇದ್ದಾಗ ಒಂದು ಸಪ್ತಾಹ ಕಾರ್ಯಕ್ರಮವನ್ನು ಭಕ್ತರೆಲ್ಲ ಸೇರಿ ನಡೆಸಿದರು. ಆ ಸಪ್ತಾಹ ಕಾರ್ಯಕ್ರಮ ಮುಗಿದ ನಂತರ ಬಂದವರಿಗೆಲ್ಲ ಭೋಜನ ವ್ಯವಸ್ಥೆ ಮಾಡಲು ಹಣ ಬೇಕಾಗಿದ್ದಿತು. ಆ ಕಾರ್ಯಕ್ಕಾಗಿ ನಾಚ್ನೆ ಮತ್ತು ಶಂಕರ ರಾವ್ ಎಲ್ಲರ ಬಳಿ ಚಂದಾ ಎತ್ತಲು ಶುರು ಮಾಡಿದರು. ಚಂದಾ ಎತ್ತಿದ ಹಣವನ್ನು ಲೆಕ್ಕ ಮಾಡಲಾಗಿ ಅದು ಸರಿಯಾಗಿ ೬೪ ರುಪಾಯಿಗಳಾಗಿತ್ತು ಮತ್ತು ಅದನ್ನು ಸಾಯಿಬಾಬಾರವರ ಬಳಿಗೆ ಕೊಟ್ಟು ಕಳುಹಿಸಿದರು.

ಒಮ್ಮೆ ರಾವ್ಜಿ ಸಖಾರಾಮ ವೈದ್ಯ ಅವರ ಮಗಳು "ಮೊರು" ಪ್ಲೇಗ್ ಮಹಾಮಾರಿಯಿಂದ ಬಳಲುತ್ತಿದ್ದಳು. ನಾಚ್ನೆಯವರು ವೈದ್ಯರವರಿಗೆ ಸಾಯಿಬಾಬಾರವರ ಉಧಿಯನ್ನು ನೀಡಿ ಅವಳಿಗೆ ಕೊಡಲು ಹೇಳಿದರು. ಸಾಯಿಯವರ ಆಶೀರ್ವಾದದಿಂದ ಅವಳಿಗೆ ಗುಣವಾಯಿತು. ಕ್ರಿ.ಶ.೧೯೧೬ ರಲ್ಲಿ ಒಂದು ದೊಡ್ಡ ಅಪಾಯದಿಂದ ನಾಚ್ನೆಯವರನ್ನು ಸಾಯಿಬಾಬಾರವರು ಪಾರು ಮಾಡಿದರು.ನಾಚ್ನೆಯವರನ್ನು ಸಾಯಿಬಾಬಾರವರು ನದಿಯಲ್ಲಿ ಮುಳುಗಿ ಸಾಯುವುದರಿಂದ ತಪ್ಪಿಸಿದರು. ಪ್ರತಿದಿನ ನಾಚ್ನೆಯವರು ಮನೆಯಿಂದ ಆಫೀಸಿಗೆ ದೋಣಿಯ ಸಹಾಯದಿಂದ ನದಿಯ ದಡವನ್ನು ದಾಟಿ ಹೋಗಬೇಕಾಗುತ್ತಿತ್ತು. ಒಂದು ದಿನ ಆಫೀಸಿನಿಂದ ಹೊರಡುವುದು ತಡವಾಯಿತು. ನದಿಯ ದಡಕ್ಕೆ ಬಂದು ನೋಡಿದಾಗ ಯಾವ ದೋಣಿಯವರೂ ಇರಲಿಲ್ಲ. ಆಗ ಅಲ್ಲೇ ಒಂದು ಸಣ್ಣ ತೆಪ್ಪ ಮತ್ತು ಸಣ್ಣ ಹುಡುಗನೊಬ್ಬನು ಇದ್ದನು. ಅವನ ಸಹಾಯವನ್ನು ಪಡೆದು ತೆಪ್ಪ ತೆಗೆದುಕೊಂಡು ಹೊರಟರು. ನದಿಯ ಮಧ್ಯಭಾಗಕ್ಕೆ ಬಂದಾಗ ತೆಪ್ಪವು ತಲೆಕೆಳಗಾಯಿತು. ತೆಪ್ಪವು ಮುಳುಗುತ್ತಿದ್ದಾಗ ನಾಚ್ನೆಯವರು ಸಾಯಿಬಾಬಾರವರನ್ನು ಮನದಲ್ಲಿ ಪ್ರಾರ್ಥನೆ ಮಾಡಿದರು. ಸಾಯಿಯವರು ನಾಚ್ನೆಯವರ ಭಕ್ತಿಗೆ ಓಗೊಟ್ಟು ಅವರನ್ನು ಅಪಾಯದಿಂದ ಪಾರು ಮಾಡಿದರು.

ಕ್ರಿ.ಶ.೧೯೧೯ ರಲ್ಲಿ ಸಾಯಿಬಾಬಾರವರು ನಾಚ್ನೆ ಮತ್ತು ಅವರ ಪತ್ನಿಯವರಿಗೆ ತೆಂಗಿನಕಾಯಿಯೊಂದನ್ನು ಪ್ರಸಾದವಾಗಿ ನೀಡುತ್ತಾ ಅವರಿಗೆ ಮಗನೊಬ್ಬನು ಹುಟ್ಟುವನೆಂದು ತಿಳಿಸಿದರು. ಆದರೆ ಆಗ ಸಾಯಿಬಾಬಾರವರು ಕಣ್ಣೀರು ಹಾಕಿದರು. ಸಾಯಿಬಾಬಾ ಹೇಳಿದಂತೆ ಅವರಿಗೆ ಗಂಡು ಮಗ ಹುಟ್ಟಿದನು. ಅವನಿಗೆ ನಾಚ್ನೆ ದಂಪತಿಗಳು ಕಾಲೂರಾಮ್  ಎಂದು ಹೆಸರಿಟ್ಟರು. ನಾಚ್ನೆಯವರ ಮಗನು ಕೇವಲ ೮ ವರ್ಷಗಳು ಮಾತ್ರ ಬದುಕುತ್ತಾನೆ ಎಂದು ಸಾಯಿಬಾಬಾರವರಿಗೆ ಮೊದಲೇ ಗೊತ್ತಾಗಿತ್ತು. ಆದ್ದರಿಂದ ಸಾಯಿಬಾಬಾರವರು ಕಾಲೂರಾಮ್ ಹುಟ್ಟಿದಾಗ ಕಣ್ಣೀರು ಹಾಕಿದರು.

ಕ್ರಿ.ಶ.೧೯೨೨ ರಲ್ಲಿ ನಾಚ್ನೆಯವರಿಗೆ ಎರಡನೇ ಮದುವೆ ಮಾಡುವ ಯೋಚನೆಯನ್ನು ಅವರ ತಂದೆ ತಾಯಿಗಳು ಮಾಡಿದರು. ಏಕೆಂದರೆ ಕ್ರಿ.ಶ.೧೯೨೧ ರಲ್ಲಿ ನಾಚ್ನೆಯವರ ಮೊದಲನೇ ಹೆಂಡತಿ ತೀರಿಕೊಂಡರು. ಆಗ ಒಬ್ಬ ಶ್ರೀಮಂತ ಹುಡುಗಿ ಮತ್ತು ಒಂದು ಬಡ ಮನೆತನದ ಹುಡುಗಿಯನ್ನು ನಾಚ್ನೆ ತಂದೆ ತಾಯಿಗಳು ನೋಡಿಕೊಂಡು ಬಂದಿದ್ದರು. ಅವರಲ್ಲಿ ಯಾರನ್ನು ಮನೆಗೆ ತಂದು ಕೊಳ್ಳುವುದು ಎಂಬ ಯೋಚನೆಗೆ ಬಿದ್ದರು. ಆಗ ಸಾಯಿಬಾಬಾರವರು ನಾಚ್ನೆಯವರ ತಾಯಿಯ ಕನಸಿನಲ್ಲಿ ಬಂದು ಬಡ ಮನೆತನದ ಹುಡುಗಿಯನ್ನೇ ಮನೆ ತುಂಬಿಸಿಕೊಳ್ಳುವಂತೆ ಆಜ್ಞಾಪಿಸಿದರು. ಸಾಯಿಯವರ ಆದೇಶದಂತೆ ಕ್ರಿ.ಶ.೧೯೨೨ ರಲ್ಲಿ ಬಡ ಮನೆತನದ ಹುಡುಗಿಯನ್ನೇ ಮನೆ ತುಂಬಿಸಿಕೊಂಡರು. ಅವರಿಗೆ ಅನೇಕ ಮಕ್ಕಳಾಗಿ ಅವರ ಮನೆತನದವರೆಲ್ಲ ಈಗಲೂ ಕೂಡ ಸುಖವಾಗಿದ್ದಾರೆ.

ಕ್ರಿ.ಶ.೧೯೨೬ ರಲ್ಲಿ ನಾಚ್ನೆಯವರ ಮಕ್ಕಳಾದ ಸಾಯಿನಾಥ ಆಲಿಯಾಸ್ ಹರೇಶ್ವರ್ ಮತ್ತು ಕಾಲೂರಾಮ್ ಪಟಾಕಿಗಳು ಮತ್ತು ಬೆಂಕಿ ಪೆಟ್ಟಿಗೆಯನ್ನು ಇಟ್ಟುಕೊಂಡು ಮನೆಯೊಳಗೆ ಆಟವಾಡುತ್ತಿದ್ದರು. ಆಗ ಹುಡುಗನೊಬ್ಬ ಬೆಂಕಿ ಕಡ್ಡಿ ಗೀರಿ ಎಸೆದನು. ಆಗ ಅದು ಸಾಯಿನಾಥ್ ಮೇಲೆ ಬಿದ್ದು ಅವನ ಬಟ್ಟೆಯು ಹತ್ತಿಕೊಂಡಿತು. ನಾಚ್ನೆಯ ಹೆಂಡತಿ ಆಗ ಮನೆಯ ಹೊರಗಡೆ ಇದ್ದರು. ಅದೇ ಸಮಯದಲ್ಲಿ ಒಬ್ಬ ಫಕೀರ್ ಇವರ ಮುಂದೆ ಪ್ರತ್ಯಕ್ಷನಾಗಿ ಮನೆಯೊಳಗೆ ತನ್ನ ಕೈಗಳನ್ನು ತೋರಿಸುತ್ತಾ ಅಲ್ಲೇನು ನಡೆಯುತ್ತಿದೆ ನೋಡಲು ಹೇಳಿದನು. ನಾಚ್ನೆಯವರ ಹೆಂಡತಿ ಕೂಡಲೇ ಮನೆಯ ಒಳಗಡೆ ಹೋಗಿ ಸಾಯಿನಾಥನ ಬಟ್ಟೆಗಳಿಗೆ ಹತ್ತಿದ್ದ ಬೆಂಕಿಯನ್ನು ಆರಿಸಿದರು. ಈ ರೀತಿಯಲ್ಲಿ ಸಾಯಿನಾಥ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದನು. ಅದೇ ಕ್ಷಣದಲ್ಲಿ ಫಕೀರ್ ಕೂಡ ಮಾಯವಾದನು. ನಾಚ್ನೆಯವರ ಹೆಂಡತಿ ಮನೆಯ ಹೊರಗಡೆ ಬಂದು ನೋಡಿದಾಗ ಅಲ್ಲಿ ಈ ಫಕೀರ್ ನ ಸುಳಿವೇ ಇರಲಿಲ್ಲ. ಈ ಲೀಲೆಯನ್ನು ಸಾಯಿಬಾಬಾರವರಲ್ಲದೆ ಮತ್ತೆ ಇನ್ಯಾರು ಮಾಡಲು ಸಾಧ್ಯ?

ಕ್ರಿ.ಶ.೧೯೨೮ ರಲ್ಲಿ ಒಂದು ದಿನ ಸಾಯಿನಾಥ ಆಟವಾಡುತ್ತ ಮಹಡಿಯ ಮೇಲಿನಿಂದ ಬಿದ್ದು ಬಿಟ್ಟನು. ಅದನ್ನು ನೋಡಿದ ನಾಚ್ನೆಯವರು ಭೀತರಾಗಿ ಓಡಿಬಂದರು. ಆದರೆ ಕೆಳಗೆ ಬಿದ್ದ ಸಾಯಿನಾಥನ ಮೈ ಮೇಲೆ ಯಾವುದೇ ಗಾಯಗಳಾಗದೆ ನಗುತ್ತ ನಿಂತಿದ್ದನು. ಅವನು ಸಾಯಿಬಾಬಾ ತನ್ನನ್ನು ಕೆಳಕ್ಕೆ ಬೀಳದಂತೆ ಮೇಲಕ್ಕೆ ಎತ್ತಿ ಹಿಡಿದರು ಎಂದು ಹೇಳಿದನು.

ಕ್ರಿ.ಶ.೧೯೩೨ ರಲ್ಲಿ ಸಾಯಿನಾಥ ತನ್ನ ತಮ್ಮ ವಾಸುದೇವನಿಗೆ ಒಂದು ಉಂಗುರವನ್ನು ಕೊಟ್ಟನು. ವಾಸುದೇವನು ಗೊತ್ತಿಲ್ಲದೇ ಅದನ್ನು ಬಾಯಿಗೆ ಹಾಕಿಕೊಂದನು. ಅದು ಹೋಗಿ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿತು. ನಾಚ್ನೆಯವರು ಸಾಯಿಯವರ ಉಧಿಯನ್ನು ವಾಸುದೇವನ ಬಾಯಿಯೊಳಗೆ ಹಾಕಿ ತಮ್ಮ ಬೆರಳುಗಳನ್ನು ಗಂಟಲಿನ ಒಳಗೆ ಹಾಕಿದಾಗ ಉಂಗುರ ಅವರ ಕೈಗೆ ಸಿಕ್ಕಿ ಅದನ್ನು ಅವರು ಹೊರಗೆಳೆದರು.

ಕ್ರಿ.ಶ.೧೯೩೪ ರಲ್ಲಿ ವಾಸುದೇವನಿಗೆ ಸಿಡುಬು, ನ್ಯುಮೊನಿಯ ಮತ್ತು ದೇಹದ ಎದೆಯ ಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಂಡಿತು. ಆಗ ನಾಚ್ನೆ ಎಂದಿನಂತೆ ಸಾಯಿಯವರ ಸಹಾಯವನ್ನು ಬೇಡಿ ಉಧಿಯನ್ನು ವ್ರಣದ ಜಾಗಕ್ಕೆ ಸವರಿದರು. ಮಾರನೇ ದಿನ ಬೆಳಗ್ಗೆ ಗಾಯಗಳೆಲ್ಲ ವಾಸಿಯಾಗಿದ್ದವು. ಇದನ್ನು ನೋಡಿ ನಾಚ್ನೆಯವರ ಸ್ನೇಹಿತ ಜಾಧವ್ ರವರಿಗೆ ಆಶ್ಚರ್ಯವಾಯಿತು ಮತ್ತು ಅವರು ಕೂಡ ನ್ಯುಮೊನಿಯದಿಂದ ಬಳಲುತ್ತಿದ್ದ ತಮ್ಮ ನಾಲ್ಕುವರೆ ವರ್ಷದ ಮಗನಿಗೆ ಸಾಯಿಯವರ ಉಧಿ ನೀಡುವಂತೆ ಕೇಳಿಕೊಂಡರು. ನಾಚ್ನೆಯವರು ಉಧಿಯನ್ನು ಜಾಧವ್ ರವರ ಮಗನಿಗೆ ಜ್ವರ ಬಂದ ಆರನೆಯ ದಿನ ನೀಡಿದರು. ಮಾರನೆಯ ದಿನವೇ ಜ್ವರ ಕಡಿಮೆಯಾಯಿತು. ಇದಕ್ಕೆ ಮುಂಚೆ ಔಷಧಿ ನೀಡುತ್ತಿದ್ದ ಡಾಕ್ಟರ್ ೯ ದಿನಗಳಿಗೆ ಮುಂಚೆ ಜ್ವರ ವಾಸಿಯಾಗುವುದಿಲ್ಲವೆಂದು ಜಾಧವ್ ಗೆ ತಿಳಿಸಿದ್ದರು. ಜಾಧವ್ ರವರು ೭ ರೂಪಾಯಿಗಳ ಕಾಣಿಕೆಯನ್ನು ಸಾಯಿಬಾಬಾ ಸಂಸ್ಥಾನಕ್ಕೆ ತಮ್ಮ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಕಳುಹಿಸಿದರು.

ಕ್ರಿ.ಶ.೧೯೩೫ ರಲ್ಲಿ ಸಾಯಿಯವರು ನಾಚ್ನೆಯವರ ೨ ವರ್ಷದ ಮಗ ಆನಂದನನ್ನು ಕುದಿಯುತ್ತಿದ್ದ ಹಾಲು ಮೈಮೇಲೆ ಬೀಳುವುದನ್ನು ತಪ್ಪಿಸಿ ಕಾಪಾಡಿದರು.

ಕ್ರಿ.ಶ.೧೯೩೬ ರಲ್ಲಿ ನಾಚ್ನೆಯವರ ಮಗ ವಾಸುದೇವ ಮತ್ತು ಅವನ ಕಡೆಯ ತಮ್ಮ ಮನೆಯೊಳಗಿನ ಬೀರುವಿನಲ್ಲಿದ್ದ ಪೆಟ್ಟಿಗೆಯೊಂದಿಗೆ ಆಟವಾಡುತ್ತಿದ್ದರು. ಅದರೊಳಗಿದ್ದ ಸಣ್ಣ ಸಣ್ಣ ಗುಳಿಗೆಗಳನ್ನು ಕಂಡು ಅವುಗಳು ಪೆಪ್ಪೆರ್ ಮೆಂಟ್ ಎಂದು ತಿಳಿದು ಇಬ್ಬರು ಅದನ್ನು ಬಾಯಿಗೆ ಹಾಕಿಕೊಂಡರು. ಆದರೆ ಅದು "ಹಾವಿನ ಮಾತ್ರೆ" ಎಂದು ನಾವು ಕರೆಯುವ ಪಟಾಕಿಯಾಗಿತ್ತು. ಆಗ ನಾಚ್ನೆಯವರು ಸಾಯಿಬಾಬಾರವರ ಉಧಿ ಮತ್ತು ತೀರ್ಥವನ್ನು ಇಬ್ಬರಿಗೂ ಕುಡಿಸಿದರು. ಕೂಡಲೇ ಇಬ್ಬರಿಗೂ ವಾಂತಿಯಾಗಿ ಎಲ್ಲಾ ವಿಷವು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾದರು.

ನಾಚ್ನೆಯವರ ತಂದೆ ತಾಯಿಗಳು ಅನನ್ಯ ಸಾಯಿ ಭಕ್ತರಾಗಿದ್ದರು. ನಾಚ್ನೆ ಯವರ ತಾಯಿಯವರು ಸದಾಕಾಲ ಸಾಯಿಬಾಬಾರವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದರು. ಅವರಿಗೆ ತಮಗೆ ಸಾವು ಹತ್ತಿರವಾಗುತ್ತಿದೆ ಎಂದು ತಿಳಿದಾಗ ನಾಚ್ನೆಯವರಿಗೆ ವಿಷ್ಣು ಸಹಸ್ರನಾಮವನ್ನು ತಮ್ಮ ಪಕ್ಕದಲ್ಲಿ ಕುಳಿತು ಉಚ್ಚರಿಸಲು ಹೇಳಿದರು. ನಾಚ್ನೆಯವರು ಪೂರ್ತಿ ವಿಷ್ಣುಸಹಸ್ರನಾಮವನ್ನು ಉಚ್ಚರಿಸಿದರು. ಕಡೆಗೆ "ರಾಮ, ರಾಮ" ಎಂದು ಸ್ಮರಣೆ ಮಾಡುತ್ತಾ ೧೯೨೬ ರಲ್ಲಿ ತಮ್ಮ ದೇಹವನ್ನು ತ್ಯಜಿಸಿ ಕಾಲವಾದರು.

ನಾಚ್ನೆಯವರ ಎರಡನೇ ಹೆಂಡತಿ ಕ್ರಿ.ಶ.೧೯೨೯ ರಲ್ಲಿ ಕಾಲವಾದರು. ಆಗ ಅವರು ಹೆಂಡತಿಗೆ ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆಗಳನ್ನು ಮಾಡಿ ಅವರಿಗೆ ಸದ್ಗತಿ ನೀಡಬೇಕೆಂದು ಹಂಬಲಿಸಿದರು. ಆದರೆ ಮನೆಯಲ್ಲಿ ೩ ವರ್ಷದ ಸಣ್ಣ ಮಗನಿದ್ದನು. ಅವರ ತಂದೆಯವರು ಹುಷಾರಿಲ್ಲದೆ ನೆರಳುತ್ತಿದ್ದರು. ಆಲ್ಲದೇ ಅವರ ಬಳಿ ಆಗ ಕೇವಲ ೮೦ ರುಪಾಯಿಗಳಿದ್ದವು. ಅಷ್ಟು ಕಡಿಮೆ ಹಣದಲ್ಲಿ ನಾಸಿಕ್ ಗೆ ತೆರಳಿ ಅಂತ್ಯಕ್ರಿಯೆ ಮಾಡಲು ಸಾಲುತ್ತಿರಲಿಲ್ಲ. ಆದರೂ ಧೈರ್ಯ ಮಾಡಿ ಸಾಯಿಬಾಬಾರವರ ಮೇಲೆ ಭಾರ ಹಾಕಿ ನಾಸಿಕ್ ಗೆ ಹೊರಟರು. ರೈಲಿನಲ್ಲಿ ಸಾಯಿಬಾಬಾರವರು ಒಬ್ಬ ಸಹಪ್ರಯಾಣಿಕನ ರೂಪದಲ್ಲಿ ಬಂದು ನಾಚ್ನೆಯವರಿಗೆ ಹಣ ಸಹಾಯ ಮಾಡಿ ಅವರ ಹೆಂಡತಿಯ ಅಂತ್ಯಕ್ರಿಯೆ ಮಾಡಲು ಸಹಾಯ ಮಾಡಿದರು.

೩ ನೇ ಡಿಸೆಂಬರ್ ೧೯೨೩ ರಂದು ನಾಚ್ನೆಯವರು ಅಂಧೆರಿಯಲ್ಲಿನ ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಕುಳಿತಿದ್ದರು. ಆಗ ಶ್ರೀ. ನೋಯಲ್ ಎಂಬುವರು ರಸ್ತೆಯಲ್ಲಿ ಕಾರು ಓಡಿಸುತ್ತಾ ಬಂದರು. ಆಗ ರಸ್ತೆಯಲ್ಲಿ ಆಟವಾಡುತ್ತಿದ್ದ ವಿಠಲ್ ಎಂಬುವರ ಮಗಳಿಗೆ ಕಾರಿನ ಬ್ರೇಕ್ ಕೆಟ್ಟು ಹೋಗಿ ಡಿಕ್ಕಿ ಹೊಡೆಯಿತು. ಆಗ ನಾಚ್ನೆಯವರು ಸಾಯಿಬಾಬಾರವರನ್ನು ಮಗುವನ್ನು ರಕ್ಷಿಸುವಂತೆ ಬೇಡಿಕೊಂಡರು. ನಾಚ್ನೆ ಕೂಡಲೇ ಕಾರಿನ ಬಳಿಗೆ ಹೋಗಿ ಕೆಳಕ್ಕೆ ಬಿದ್ದಿದ್ದ ಮಗುವನ್ನು ಕೈಗೆತ್ತಿಕೊಂಡರು ಮತ್ತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದರು. ಮಗುವಿಗೆ ಬಹಳ ಪೆಟ್ಟು ಬಿದ್ದಿದ್ದರಿಂದ ಮಗುವು ಬದುಕುವುದೋ ಇಲ್ಲವೋ ಎಂದು ಡಾಕ್ಟರ್ ಗೆ ಸಂದೇಹವಾಯಿತು. ಆಗ ನಾಚ್ನೆಯವರು ಡಾಕ್ಟರ್ ಗೆ ಸಾಯಿಬಾಬಾರವರು ಮಗುವನ್ನು ಖಂಡಿತವಾಗಿ ಉಳಿಸುತ್ತಾರೆ ಎಂದು ಹೇಳಿದರು. ಮಗುವು ೧೫ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಹೊಂದಿತು. ಆಮೇಲೆ ಕಾರಿನ ಮಾಲೀಕರನ್ನು ವಿಚಾರಿಸಲಾಗಿ ತಾನು ಕಾರಿನ ಬ್ರೇಕ್ ಆ ಸಮಯದಲ್ಲಿ ಹಾಕಿರಲಿಲ್ಲ ಎಂದು,  ಆದರೆ ಕಾರಿನ ಗೇರ್ ನ ಮಧ್ಯದಲ್ಲಿ ಒಂದು ದೊಡ್ಡ ಕಲ್ಲು ಹೇಗೋ ಸಿಕ್ಕಿಕೊಂಡು ಕಾರು ನಿಂತುಕೊಂಡಿತು ಎಂದು ವಿಷಯ ತಿಳಿಯಿತು. ಆ ದೊಡ್ಡ ಕಲ್ಲು ಅಲ್ಲಿ ಹೇಗೆ ಸೇರಿಕೊಂಡಿತು ಎಂದು ಯಾ ರಿಗೂ ಅರ್ಥವಾಗಲಿಲ್ಲ. ಮಗುವೇನೋ ಬದುಕಿ ಉಳಿಯಿತು. ಆದರೆ ತಾನು ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿತ್ತು. ಹೀಗೆ ಒಂಬತ್ತು ತಿಂಗಳವರೆಗೆ ಮಾತನಾಡಲೇ ಇಲ್ಲ. ಆಗ ಒಂದು ದಿನ ದಾಸಗಣು ಅಲ್ಲಿಗೆ ಆಗಮಿಸಿದರು. ನಾಚ್ನೆಯವರಿಂದ ಮಗುವಿನ ವಿಷಯ ತಿಳಿದ ಅವರು ಮಗುವಿಗೆ ಸಾಯಿಬಾಬಾರವರ ಉಧಿಯನ್ನು ನೀಡುವಂತೆ ಸಲಹೆ ನೀಡಿದರು. ಅದರಂತೆ  ಮಗುವಿಗೆ ಉಧಿಯನ್ನು ನೀಡಲಾಯಿತು. ಉಧಿ ನೀಡಿದ ಮರುದಿನದಿಂದಲೇ ಮಗುವು ಮಾತನಾಡಲು ಪ್ರಾರಂಭ ಮಾಡಿತು. ಇದು ಸಾಯಿಯವರ ಅತ್ಯಾಶ್ಚರ್ಯಕರ ಲೀಲೆಯೆಂದರೆ ತಪ್ಪಾಗಲಾರದು.

No comments:

Post a Comment