Thursday, September 4, 2014

ಖ್ಯಾತ ರಂಗೋಲಿ ಕಲಾವಿದ, ಸಾಯಿ ಭಜನ ಗಾಯಕ ಹಾಗೂ ಸಾಯಿ ಬಂಧು - ಶ್ರೀ ಭರತ್ ನಟವರ್ ವಿಸ್ಪುಟೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಭರತ್ ನಟವರ್ ವಿಸ್ಪುಟೆಯವರು ಶ್ರೀ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು. ಇವರು ಪ್ರಖ್ಯಾತ ರಂಗೋಲಿ ಕಲಾವಿದರೂ  ಹಾಗೂ ಸಾಯಿಭಜನ ಗಾಯಕರೂ ಆಗಿದ್ದಾರೆ.


ಇವರು 27ನೇ ಫೆಬ್ರವರಿ 1973 ರಂದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ರಹತಾ ತಾಲ್ಲೂಕಿನಲ್ಲಿರುವ ಶಿರಡಿ ಗ್ರಾಮದಲ್ಲಿ ಶ್ರೀ.ನಟವರ್ ಸಿ.ವಿಸ್ಪುಟೆ ಹಾಗೂ ಶ್ರೀಮತಿ.ಪುಷ್ಪಾ ನಟವರ್ ವಿಸ್ಪುಟೆಯವರ ಪುತ್ರನಾಗಿ ಜನಿಸಿದರು. 

ಇವರು ಪುಣೆ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಗಳಿಸಿ ಶಿರಡಿ ಸಾಯಿಬಾಬಾ ಸಂಸ್ಥಾನದ ನೀರು ಸರಬರಾಜು ವಿಭಾಗದಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಇವರು ಪ್ರತಿ ಗುರುವಾರದಂದು ಹಾಗೂ ವಿಶೇಷ ಉತ್ಸವದ ದಿನಗಳಲ್ಲಿ ನಡೆಯುವ  ಜಗತ್ಪ್ರಸಿದ್ಧ ಚಾವಡಿ ಉತ್ಸವದ ದಿನಗಳಂದು ಚಾವಡಿಯ ಮುಂಭಾಗದಲ್ಲಿ ರಂಗೋಲಿಯನ್ನು ಬಿಡಿಸುತ್ತಾ ಬಂದಿದಾರೆ. ಅವರು ಈ ಮಹೋನ್ನತ ನಿಸ್ವಾರ್ಥ ಸೇವೆಯನ್ನು 1990ನೇ ಇಸವಿಯಿಂದ ಮಾಡುತ್ತಾ ಬಂದಿದ್ದಾರೆ.




ಪ್ರತಿ ಗುರುವಾರಗಳಂದು ರಾತ್ರಿ 9:15 PM ಕ್ಕೆ ಪಲ್ಲಕ್ಕಿ ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿಗೆ ಬಂದು ಸೇರುತ್ತದೆ. ಈ ಉತ್ಸವವು ಸುಮಾರು 9:35 ರ ಹೊತ್ತಿಗೆ ಚಾವಡಿಗೆ ಬಂದು ಸೇರುತ್ತದೆ. ಚಾವಡಿಯ ಬಳಿಗೆ ಬಂದ ಕೂಡಲೇ ಪಲ್ಲಕ್ಕಿಯನ್ನು ಚಾವಡಿಯ ಮುಂದೆ ಈಗಾಗಲೇ ಇರಿಸಲಾಗಿರುವ ಮಂಚದ ಮೇಲೆ ಇಡಲಾಗುತ್ತದೆ. ಶ್ರೀ ಸಾಯಿಬಾಬಾರವರು 15ನೇ ಅಕ್ಟೋಬರ್ 1918 ರಂದು ತಮ್ಮ ದೇಹತ್ಯಾಗ ಮಾಡಿದಾದ ಅವರ ಪಾರ್ಥಿವ ಶರೀರವನ್ನು ಇದೇ ಮಂಚದ ಮೇಲೆ ಮೂರು ದಿನಗಳ ಕಾಲ ಇರಿಸಲಾಗಿತ್ತು. ಹೀಗೆ 2006-2007 ರವರೆಗೂ ಮಾಡಿಕೊಂಡು ಬರಲಾಯಿತು. ಆದರೆ ಶ್ರೀ ಸಾಯಿಬಾಬಾ ಸಂಸ್ಥಾನವು ಹಿಂದಿನ ದೀಕ್ಷಿತವಾಡಾದಲ್ಲಿ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಿದಾಗ  ಬಾಬಾರವರು ಬಳಸುತ್ತಿದ್ದ ಹಾಗೂ ಶಿರಡಿ ಸಂಸ್ಥಾನದ ಎಲ್ಲಾ ಮೂಲ ವಸ್ತುಗಳನ್ನೂ ಧೀರ್ಘ ಅವಧಿಯ ಕಾಲ ಸಂರಕ್ಷಿಸುವ ಉದ್ದೇಶದಿಂದ ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲು ತೀರ್ಮಾನಿಸಲಾಯಿತು. ಆದುದರಿಂದ ಆ ಮಂಚವನ್ನು ಸಹ ವಸ್ತು ಸಂಗ್ರಹಾಲಯದ ನೆಲ ಮಹಡಿಯಲ್ಲಿ ಗಾಜಿನ ಹೊದಿಕೆಯನ್ನು ಹೊದಿಸಿ ಇರಿಸಲಾಯಿತು. ಈಗ ಸಂಸ್ಥಾನವು ಅದೇ ಮಂಚದ ಪ್ರತಿರೂಪವನ್ನು ಚಾವಡಿಯಲ್ಲಿ ಇರಿಸಿದ್ದು ಪ್ರತಿ ಗುರುವಾರದಂದು ಅದೇ  ಮಂಚದ ಮೇಲೆ ಪಲ್ಲಕ್ಕಿಯನ್ನು ಇರಿಸಲಾಗುತ್ತಿದೆ.





ಮೊದಲಿನಿಂದಲೂ ಶ್ರೀ ಭರತ್ ನಟವರ್ ವಿಸ್ಪುಟೆಯವರ ಪೋಷಕರು ಶಿರಡಿಯ ನಿವಾಸಿಗಳಾಗಿರುವ ಕಾರಣದಿಂದ ವಿಸ್ಪುಟೆಯವರು ಬಾಲ್ಯದಿಂದಲೇ ಶ್ರೀ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.  ಇವರು ಪ್ರತಿ ಗುರುವಾರದಂದು ಸಂಜೆ ಧೂಪಾರತಿಯಾದ ನಂತರ  ಅಂದರೆ ರಾತ್ರಿ ಸುಮಾರು 8 ಗಂಟೆಗೆ ಚಾವಡಿಯ ಮುಂಭಾಗದ ಸ್ಥಳವನ್ನು ನೀರಿನಿಂದ ಚೆನ್ನಾಗಿ ತೊಳೆದು ಸುಂದರವಾದ ಹಾಗೂ ಬಹಳ ದೊಡ್ಡದಾದ ರಂಗೋಲಿಯನ್ನು ಬಿಡಿಸುತ್ತಾರೆ. ವಿಶೇಷ ಉತ್ಸವದ ದಿನಗಳಾದ ಶ್ರೀರಾಮನವಮಿ, ಗುರುಪೂರ್ಣಿಮೆ, ಗೋಕುಲಾಷ್ಟಮಿ, ಹಾಗೂ ವಿಜಯದಶಮಿಯ ದಿನಗಳಂದು ವಿಸ್ಪುಟೆಯವರು ಗುರುಸ್ಥಾನ ಮಂದಿರ ಹಾಗೂ ಚಾವಡಿ ಮುಂಭಾಗದಲ್ಲಿ ರಾತ್ರಿ ಸುಮಾರು 9 ಗಂಟೆಗೆ ರಂಗೋಲಿ ಬಿಡಿಸುತ್ತಾರೆ. ಈ ರಂಗೋಲಿ ಬಿಡಿಸುವುದಕ್ಕೆ ಅವರು ಸುಮಾರು 1 ಗಂಟೆ ಕಾಲಾವಕಾಶ ತೆಗೆದುಕೊಂಡು ಪೂರ್ಣಗೊಳಿಸುತ್ತಾರೆ. ಅವರು ಈ ಮಹೋನ್ನತ ನಿಸ್ವಾರ್ಥ ಸೇವೆಯನ್ನು 1990ನೇ ಇಸವಿಯಿಂದ ಮಾಡುತ್ತಾ ಬಂದಿದ್ದಾರೆ. ಚಾವಡಿಯ ಬಳಿಗೆ ಬಂದ ಕೂಡಲೇ ಪಲ್ಲಕ್ಕಿಯನ್ನು ಚಾವಡಿಯ ಮುಂದೆ ಈಗಾಗಲೇ ರಂಗೋಲಿಯ ಮೇಲೆ ಇರಿಸಲಾಗಿರುವ ಮಂಚದ ಮೇಲೆ ಸಂಪೂರ್ಣ ಗೌರವದೊಡನೆ  ಇಡಲಾಗುತ್ತದೆ. ಚಾವಡಿ ಆರತಿಯಾದ ನಂತರ ಪಲ್ಲಕ್ಕಿ ಹಾಗೂ ಮಂಚವನ್ನು ತೆಗೆದ ಆ ಸ್ಥಳದಿಂದ ತೆಗೆದ ಕೂಡಲೇ ಸಾಯಿ ಭಕ್ತರು ರಂಗೋಲಿ ಬಿಡಿಸಿರುವ ಪ್ರದೇಶದ ಬಳಿಗೆ ಓಡಿ ಹೋಗಿ ಆ ರಂಗೋಲಿಯನ್ನು ತಮ್ಮ ಕೈಗೆ ತೆಗೆದುಕೊಂಡು ತಮ್ಮ ಹಣೆ ಮತ್ತು ದೇಹದ ಮೇಲೆಲ್ಲಾ ಹಚ್ಚಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಏಕೆಂದರೆ ಸಾಯಿ ಭಕ್ತರು ಬಾಬಾರವರು ಆ ರಂಗೋಲಿಯ ಮೇಲೆ ಕುಳಿತಿದ್ದರಿಂದ ಆ ರಂಗೋಲಿ ಬಹಳ ಪವಿತ್ರವಾಗಿರುವುದೆಂಬ ನಂಬಿಕೆಯನ್ನು ಹೊಂದಿದ್ದು ಅದನ್ನು ಅವರ ಮೈಮೇಲೆ ಹಚ್ಚಿಕೊಳ್ಳುವುದರಿಂದ ಅವರುಗಳು ಪವಿತ್ರರಾಗುತ್ತಾರೆಂಬ ನಂಬಿಕೆಯನ್ನು ಹೊಂದಿದ್ದಾರೆ. ಆದುದರಿಂದ ಶ್ರೀ ಭರತ್ ನಟವರ್ ವಿಸ್ಪುಟೆಯವರು ಈ ಸಾಯಿ ಸೇವೆಯನ್ನು ಮಾಡುವ ಸೌಭಾಗ್ಯ ತಮಗೆ ದೊರೆತಿದ್ದು ತಮ್ಮ ಪುಣ್ಯವೆಂದು ಭಾವಿಸುತ್ತಾರೆ.


ಶ್ರೀ.ಭರತ್ ನಟವರ್ ವಿಸ್ಪುಟೆಯವರು ಶ್ರೀಮತಿ.ಪೂನಂ ಭರತ್ ವಿಸ್ಪುಟೆಯವರನ್ನು ವಿವಾಹವಾಗಿದ್ದು ಅವರಿಗೆ ಶ್ರೀ.ವೇದಾಂತ ಭರತ್ ವಿಸ್ಪುಟೆ ಎಂಬ ಮಗ ಹಾಗೂ ಕುಮಾರಿ.ಪವಿತ್ರ ಭರತ್ ವಿಸ್ಪುಟೆ ಎಂಬ ಮಗಳು ಇದ್ದು ಶಿರಡಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಯಾರಾದರೂ ಸಾಯಿ ಭಕ್ತರು ತಾವುಗಳು ಹಮ್ಮಿಕೊಳ್ಳುವ ಮಹಾಪಾರಾಯಣ, ಪಲ್ಲಕ್ಕಿ ಉತ್ಸವ ಅಥವಾ ಇನ್ನಿತರ ಯಾವುದೇ ಸಮಾರಂಭಗಳಿಗೆ ರಂಗೋಲಿ ಬರೆಸಬೇಕೆಂದು ಅಂದುಕೊಂಡಲ್ಲಿ ಅವರುಗಳು ಶ್ರೀ ಭರತ್ ನಟವರ್ ವಿಸ್ಪುಟೆಯವರನ್ನು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು:

ವಿಳಾಸ:

ನಂದುರ್ಕಿ ರಸ್ತೆ,  
ಗಣೇಶವಾಡಿ, ಗೋವಿಂದನಗರ,  
ಶಿರಡಿ ಅಂಚೆ-423 109, 
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ, 
ಮಹಾರಾಷ್ಟ್ರ,ಭಾರತ.

ದೂರವಾಣಿ ಸಂಖ್ಯೆ:

+91 99217 71703

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment