ಬಾಪು ಸಾಹೇಬ್ ಜೋಗ್ ಆಲಿಯಾಸ್ ಸಖಾರಾಮ್ ಹರಿಯವರು 1856ನೇ ಇಸವಿಯಲ್ಲಿ ಜನಿಸಿದರು. ಅವರು ಸರ್ಕಾರಿ ಇಲಾಖೆಯೊಂದರಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹಾಗೂ 1909 ನೇ ಇಸವಿಯಲ್ಲಿ ನಿವೃತ್ತರಾಗಿ ಅದರಿಂದ ಬಂದ ಎಲ್ಲಾ ನಿವೃತ್ತಿ ಪ್ರಯೋಜನಗಳನ್ನು ಸ್ವೀಕರಿಸಿ ತಮ್ಮ ಪತ್ನಿಯೊಂದಿಗೆ ಶಿರಡಿಗೆ ಬಂದು ನೆಲೆಸಿದರು. ಜೋಗ್ ದಂಪತಿಗಳಿಗೆ ಮಕ್ಕಳ ಯೋಗವಿರಲಿಲ್ಲ. ಅವರು ತಮಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದರು.
ಮಹಾನ್ ಸತ್ಪುರುಷರಾದ ವಿಷ್ಣು ಬುವಾರವರು ಬಾಪು ಸಾಹೇಬರಿಗೆ ಹತ್ತಿರದ ಬಂಧುಗಳಾಗಿದ್ದರು. ಇವರು ಶಿರಡಿಗೆ ಬರುವುದಕ್ಕೆ ಮುಂಚೆ ಕಬಾಡ ಎಂಬಲ್ಲಿಗೆ ತೆರಳಿ ಅಲ್ಲಿ ವಾಸಿಸುತ್ತಿದ್ದ ಸಂತರಾದ ಸಖಾರಾಮ್ ಮಹಾರಾಜ್ ರವರಿಗೆ ಗೌರವ ಸಲ್ಲಿಸಿ ಅಲ್ಲಿ ಸ್ವಲ್ಪ ದಿನಗಳ ಕಾಲ ತಂಗಿದ್ದು ಅವರ ಸೇವೆಯನ್ನು ಮಾಡಿದರು. ಬಾಪು ಸಾಹೇಬರು ಶಿರಡಿಗೆ ಬರುವುದಕ್ಕೆ ಮುಂಚೆ ಅಲ್ಲಿ ಸ್ವಲ್ಪ ದಿನಗಳು ಮಾತ್ರ ಇದ್ದು ಕಬಾಡಕ್ಕೆ ಹಿಂತಿರುಗಿ ತಮ್ಮ ಜೀವಮಾನವನ್ನು ಅಲ್ಲಿ ಸೇವೆ ಮಾಡುತ್ತಾ ಕಳೆಯಬೇಕೆಂದು ನಿರ್ಧಾರ ಮಾಡಿಕೊಂಡಿದ್ದರು. ಆದರೆ ಬಾಬಾರವರು ಇವರಿಗೆ ಬೇರೆಯೇ ಯೋಜನೆಯನ್ನು ಸಿದ್ಧಪಡಿಸಿದ್ದರು. ಶಿರಡಿಯಲ್ಲಿ ಜೋಗ್ ರವರು ಸಾಥೇವಾಡಾದಲ್ಲಿ ಉಳಿದುಕೊಂಡಿದ್ದರು. ಕೆಲವು ಭಕ್ತರು ಇವರನ್ನು ಕುರಿತು ಹಾಸ್ಯ ಮಾಡಿದಾಗ ಇವರಿಗೆ ಇಷ್ಟವಾಗದೆ ಕಬಾಡಕ್ಕೆ ವಾಪಸ್ ತೆರಳುವುದಾಗಿ ಅವರುಗಳಿಗೆ ಹೆದರಿಸಿದರು. ಆಗ ಬಾಬಾರವರು ಮಧ್ಯ ಪ್ರವೇಶಿಸಿ “ಈ ವಾಡಾ ಸಾಥೆಯವರ ಅಪ್ಪನದ್ದೇನು?. ನಾನು ದಾದಾ ಕೇಳ್ಕರನಿಗೆ ನಿನಗೆ ತೊಂದರೆ ನೀಡದಂತೆ ತಾಕೀತು ಮಾಡುತ್ತೇನೆ. ನೀನು ನೆಮ್ಮದಿಯಿಂದ ಇಲ್ಲಿಯೇ ಇರುವಿಯಂತೆ. ಆಗಬಹುದಾ?” ಎಂದು ಕೇಳಿದರು. ಬಾಬಾರವರ ಸಿಹಿ ನುಡಿಗಳಿಗೆ ಮರುಳಾದ ಬಾಪು ಸಾಹೇಬ್ ಶಿರಡಿಯಲ್ಲಿಯೇ ಉಳಿದುಕೊಂಡರು.
ಬಾಪು ಸಾಹೇಬ್ "ಚಿತ್ಪಾವನ ಕೊಂಕಣಿ ಬ್ರಾಹ್ಮಣ" ಪಂಗಡಕ್ಕೆ ಸೇರಿದವರಾಗಿದ್ದು ಬಹಳ ಸಂಪ್ರದಾಯಬದ್ಧವಾದ ಜೀವನವನ್ನು ನಡೆಸುತ್ತಿದ್ದು "ಸೋವಾಲೆ" ಎಂಬ ಒಂದು ವಿಧವಾದ ಪರಿಶುದ್ಧತೆಯ ಧಾರ್ಮಿಕ ವಿಧಿಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು.ಅವರು ನ್ಯಾಯವಂತರೂ, ಪ್ರಮಾಣಿಕರೂ ಆಗಿದ್ದು ತಮ್ಮ ಎಲ್ಲಾ ವ್ಯವಹಾರವನ್ನು ನೇರ ರೀತಿಯಲ್ಲಿ ಮಾಡುತ್ತಿದ್ದರು. ಅವರ ಧರ್ಮಪತ್ನಿಯೂ ಸಹ ಅವರಂತೆಯೇ ಮನೋಧರ್ಮವನ್ನು ಹೊಂದಿದ್ದರು. ಹಾಗಾಗಿ ಅವರಿಬ್ಬರೂ ಪರಸ್ಪರ ಒಳ್ಳೆಯ ಹೊಂದಾಣಿಕೆಯನ್ನು ಹೊಂದಿದ್ದರು. ಅವರ ಧರ್ಮಪತ್ನಿಯ ಹೆಸರು "ತಾಯಿ" ಎಂದಾಗಿದ್ದು ಬಾಬಾರವರು ಆಕೆಯನ್ನು "ಆಯಿ" ಎಂದು ಕರೆಯುತ್ತಿದ್ದರು. ಬಾಪು ಸಾಹೇಬರು "ದತ್ತಾತ್ರೇಯರ ಉಪಾಸಕ" ರಾಗಿದ್ದ ಕಾರಣ ಅನನ್ಯ ದತ್ತ ಭಕ್ತರಾಗಿ ದತ್ತ ಸಂಪ್ರದಾಯದ ಎಲ್ಲಾ ಸಂಪ್ರದಾಯಗಳನ್ನೂ ಪರಿಪಾಲಿಸುತ್ತಿದ್ದರು. ಅವರು ತಮ್ಮ ಸಾಧನೆಯನ್ನು ಯಾರಿಗೂ ತೋರಿಸಿಕೊಳ್ಳದೇ ರಹಸ್ಯವಾಗಿ ಮಾಡುತ್ತಿದ್ದರು. ಇವರ ಮನೆಯ ಪೂಜಾ ಕೋಣೆಯಲ್ಲಿ ಎಲ್ಲಾ ದೇವರ ವಿಗ್ರಹಗಳೂ ಇದ್ದವು. ಪ್ರತಿ ವರ್ಷ ದತ್ತ ಜಯಂತಿಯ ದಿನದಂದು ಇವರು ದತ್ತಾತ್ರೇಯರಿಗೆ ಒಂದು ಕಫ್ನಿ ಹಾಗೂ ನೈವೇದ್ಯವನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದರು. ಒಮ್ಮೆ ಅವರು ಶಿರಡಿಯಲ್ಲಿದ್ದ ಸಂದರ್ಭದಲ್ಲಿ ದತ್ತ ಜಯಂತಿಯ ದಿನದಂದು ಬಾಬಾರವರಿಗೆ ಕಪ್ನಿಯನ್ನು ಅರ್ಪಿಸುವ ಉತ್ಕಟ ಇಚ್ಛೆ ಅವರ ಮನದಲ್ಲಿ ಬಂದಿತು. ಹಾಗಾಗಿ, ಅವರು ಬಾಳಾ ಶಿಂಪಿಯ ಬಳಿ ಒಂದು ಕಫ್ನಿಯನ್ನು ಹೊಲಿಸಿದರು. ದತ್ತ ಜಯಂತಿಯ ದಿನದಂದು ಆ ಕಪ್ನಿಯನ್ನು ತೆಗೆದುಕೊಂಡು ಬಾಬಾರವರ ಬಳಿಗೆ ತೆರಳಿ ಅವರಿಗೆ ಪೂಜೆಯನ್ನು ಸಲ್ಲಿಸಿದ ನಂತರ ಆ ಕಫ್ನಿಯನ್ನು ಅವರಿಗೆ ಕಾಣಿಕೆಯಾಗಿ ನೀಡಿದರು. ಅಂತೆಯೇ ಬಾಬಾರವರು ಸಹ ಅ ಕಫ್ನಿಯನ್ನು ಸ್ವೀಕರಿಸಿ ತಮ್ಮ ಬಳಿಯಿದ್ದ ಮತ್ತೊಂದು ಕಫ್ನಿಯನ್ನು ಪ್ರಸಾದವಾಗಿ ಅವರಿಗೆ ನೀಡಿದರು. ಬಾಪು ಸಾಹೇಬರು ಸಂತೋಷದಿಂದ ಆ ಕಫ್ನಿಯನ್ನು ಸ್ವೀಕರಿಸಿ ಅದನ್ನು ಭದ್ರವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅಲ್ಲದೇ ಪ್ರತಿ ದಿನ ಸಂಜೆಯ ವೇಳೆಯಲ್ಲಿ ಬಾಬಾರವರು ನೀಡಿದ ಆ ಪವಿತ್ರ ಕಫ್ನಿಯನ್ನು ತಮ್ಮ ತಲೆಗೆ ಬಿಳಿಯ ಬಟ್ಟೆಯೊಂದನ್ನು ಸುತ್ತಿಕೊಂಡು ಬಾಬಾರವರ ದರ್ಶನಕ್ಕೆ ಹೋಗುತ್ತಿದ್ದರು. ಬಾಪು ಸಾಹೇಬರು ಆ ಕಫ್ನಿಯನ್ನು "ದರ್ಬಾರಿ ಪೋಷಾಕು" (ರಾಜದರ್ಬಾರಿನ ಉಡುಗೆ) ಎಂದು ಕರೆಯುತ್ತಿದ್ದರು. ಬೇರೆ ಸಮಯದಲ್ಲಿ ಸಾಮಾನ್ಯ ಉಡುಪನ್ನು ಧರಿಸುತ್ತಿದ್ದರು.
ಬಾಪು ಸಾಹೇಬರು ಬಹಳ ಒಳ್ಳೆಯ ಹೃದಯವಂತಿಕೆಯ ಗುಣವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಆದರೆ ಇವರು ಸರ್ಕಾರಿ ಹುದ್ದೆಯಲ್ಲಿ ಇದ್ದ ಕಾರಣ ಕೆಲಸಗಾರರೊಂದಿಗೆ ವ್ಯವಹರಿಸುವಾಗ ಬಹಳ ಕಟ್ಟುನಿಟ್ಟಾಗಿ ನಡೆದುಕೊಳ್ಳುವಂತೆ ಕಾಣಿಸುತ್ತಿದ್ದರು. ಆದರೆ ಅವರು ಬಹಳ ಮುಂಗೋಪಿಯಾಗಿದ್ದರು. ಬಾಬಾರವರು ಬಾಪು ಸಾಹೇಬರ ಈ ವರ್ತನೆಯನ್ನು ನಿಧಾನವಾಗಿ ಬದಲಾಯಿಸುವಲ್ಲಿ ಯಶಸ್ವಿಯಾದರು. ಇವರು ಬಹಳ ಲೆಕ್ಕಾಚಾರದ ಜೀವನವನ್ನು ನಡೆಸುತ್ತಿದ್ದ ಕಾರಣ ಸ್ವಲ್ಪ ಹಣವನ್ನು ಉಳಿಸಿದ್ದರು. ಇವರು ತಮ್ಮ ಬಳಿಯಿದ್ದ ಸಂಪತ್ತಿನ ಬಗ್ಗೆ ಅಹಂಕಾರವನ್ನು ಹೊಂದಿದ್ದರೆಂದು ಬಾಬಾರವರಿಗೆ ತಿಳಿದಿತ್ತು. ಹಾಗಾಗಿ ಬಾಬಾರವರು ಅಗಾಗ್ಗೆ ಇವರ ಬಳಿ ದಕ್ಷಿಣೆಯನ್ನು ನೀಡುವಂತೆ ಕೇಳಿ ಇವರು ಕೂಡಿಟ್ಟಿದ್ದ ಹಣವೆಲ್ಲಾ ಖಾಲಿಯಾಗುವಂತೆ ಮಾಡಿದರು. ಇದರಿಂದ ಬಾಪು ಸಾಹೇಬರು ಒಳ್ಳೆಯ ಪಾಠವನ್ನು ಕಲಿತರು. ಇವರು ಪ್ರತಿ ತಿಂಗಳು ತಮ್ಮ ಪಿಂಚಣಿ ಹಣವನ್ನು ಕೋಪರಗಾವ್ ನ ಕಚೇರಿಯಿಂದ ಪಡೆದು, ಕಿರಾಣಿ ಅಂಗಡಿಯವರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡಿ ಉಳಿದ ಹಣವನ್ನು ತೆಗೆದುಕೊಂಡು ಬಂದು ಬಾಬಾರವರ ಅಡಿದಾವರೆಗಳಲ್ಲಿ ಇರಿಸುತ್ತಿದ್ದರು. ಬಾಬಾರವರು ಜೋಗರವರ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದ್ದರು. ಹಾಗಾಗಿ ಭಕ್ತರು ಅವರಿಗೆ ನೀಡುತ್ತಿದ್ದ ದಕ್ಷಿಣೆ ಹಣವನ್ನು ಜೋಪಾನ ಮಾಡುವಂತೆ ಹೇಳಿ ಜೋಗ್ ರವರಿಗೆ ನೀಡುತ್ತಿದ್ದರು. ಅಂತೆಯೇ ಜೋಗ್ ರವರು ಸಹ ಬಾಬಾರವರ ಹಣವನ್ನು ಭದ್ರವಾಗಿ ಇಟ್ಟುಕೊಂಡು ಕಾಪಾಡುತ್ತಿದ್ದರು. ತಮಗೆ ಏನಾದರೂ ವಸ್ತುವಿನ ಅಗತ್ಯ ಬಿದ್ದಾಗ ಬಾಬಾರವರು ಆ ಹಣದಿಂದ ತಂದುಕೊಡುವಂತೆ ಜೋಗ್ ರವರಿಗೆ ಹೇಳುತ್ತಿದ್ದರು. ಕೆಲವೊಮ್ಮೆ ಬಾಬಾರವರು ಜೋಗ್ ರವರಿಗೆ ನೂರು ರೂಪಾಯಿಗಳನ್ನು ನೀಡಿ ಕೆಲವು ದಿನಗಳ ನಂತರ "ಬಾಪು ಸಾಹೇಬ್, ಕೆಲವು ದಿನಗಳ ಹಿಂದೆ ಇರಿಸಿಕೊಳ್ಳುವಂತೆ ಹೇಳಿ ನೂರಾ ಇಪ್ಪತ್ತೈದು ರೂಪಾಯಿಗಳನ್ನು ನೀಡಿದ್ದೆ. ಹೋಗಿ ಅದನ್ನು ತೆಗೆದುಕೊಂಡು ಬಾ" ಎಂದು ಕೇಳುತ್ತಿದ್ದರು. ಆಗ ಬಾಪು ಸಾಹೇಬರು ಬಾಬಾರವರು ತಮಗೆ ಕೇವಲ ನೂರು ರೂಪಾಯಿಗಳನ್ನು ಮಾತ್ರ ನೀಡಿದರೆಂದು ನೆನಪಿಸುತ್ತಿದ್ದರು. ಈ ರೀತಿ ಹಲವಾರು ಬಾರಿ ಬಾಬಾ ತಮಾಷೆಗಾಗಿ ಮಾಡುತ್ತಿದ್ದರು. ಬಾಬಾರವರು ಹಾಗೆ ಹೇಳಿದಾಗಲೆಲ್ಲಾ ಜೋಗ್ ರವರು "ಬಾಬಾ, ನಿಮ್ಮ ಹಣದ ಗೊಡವೆಯೇ ನನಗೆ ಬೇಡ. ನಿಮ್ಮ ಹಣವನ್ನು ಬೇರೆ ಯಾರ ಬಳಿಯಾದರೂ ಇರಿಸಿಕೊಳ್ಳಿ" ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು. ಆಗ ಬಾಬಾರವರು ಸಮಾಧಾನ ಮಾಡುತ್ತಾ "ಬಾಪು ಸಾಹೇಬ, ಕೋಪ ಮಾಡಿಕೊಳ್ಳಬೇಡ. ನನ್ನ ಲೆಕ್ಕಾಚಾರ ತಪ್ಪಾಗಿತ್ತು. ನಾನು ನಿನಗೆ ನೀಡಿದ್ದು ಕೇವಲ ನೂರು ರೂಪಾಯಿ ಮಾತ್ರ" ಎಂದು ಹೇಳುತ್ತಿದ್ದರು. ಒಮ್ಮೆ ಭಕ್ತರೊಬ್ಬರು ಬಾಬಾರವರಿಗೆ ಒಂದು ಗಿನಿಯಾ ನೀಡಿದರು. ಬಾಬಾರವರು ಅದನ್ನು ಬಾಪು ಸಾಹೇಬರಿಗೆ ನೀಡುತ್ತಾ “ಇದೇನಿದು?” ಎಂದು ಪ್ರಶ್ನಿಸಿದರು. ಅದಕ್ಕೆ ಜೋಗ್ ರವರು ಅದು ಒಂದು ಗಿನಿಯಾ ಅಥವಾ ಹದಿನೈದು ರೂಪಾಯಿಗಳಿಗೆ ಸಮ ಎಂದು ಉತ್ತರಿಸಿದರು. ಆಗ ಬಾಬಾರವರು “ಇದು ಬಹಳ ಬೆಲೆ ಬಾಳುವಂತಹದ್ದು. ಇದನ್ನು ಇರಿಸಿಕೊಂಡು ನನಗೆ ಮೂವತ್ತು ರೂಪಾಯಿಗಳನ್ನು ನೀಡು ” ಎಂದು ನುಡಿದರು.
ಮತ್ತೊಬ್ಬ ಮಹಾ ಭಕ್ತರಾದ ಮೇಘಾರವರು 19ನೇ ಜನವರಿ 1912 ರಂದು ಕಾಲವಾದ ನಂತರ ಬಾಬಾರವರ ಎಲ್ಲಾ ಕೆಲಸಗಳನ್ನೂ ಬಾಪು ಸಾಹೇಬರೇ ನೋಡಿಕೊಳ್ಳುತ್ತಿದ್ದರು. ಬಾಬಾರವರು 1918ನೇ ಇಸವಿಯಲ್ಲಿ ಮಹಾಸಮಾಧಿಯಾಗುವವರೆಗೂ ಬಾಪು ಸಾಹೇಬರೇ ಬಾಬಾರವರಿಗೆ ಆರತಿಯನ್ನು ಸಲ್ಲಿಸುತ್ತಿದ್ದರು.
ಮೇಘಾರವರು ಮಾಡುತ್ತಿದ್ದ ಎಲ್ಲಾ ಸೇವೆಗಳ ಜವಾಬ್ದಾರಿಯು ಬಾಪು ಸಾಹೇಬರ ಮೇಲೆಯೇ ಬಿಟ್ಟು. ಬಾಬಾರವರಿಗೆ ದ್ವಾರಕಾಮಾಯಿಯಲ್ಲಿ ಆರತಿಯನ್ನು ಸಲ್ಲಿಸುವುದು, ದೀಕ್ಷಿತವಾಡಾದಲ್ಲಿ ಮತ್ತು ಗುರು ಪಾದುಕಾ ಸ್ಥಾನದಲ್ಲಿ ಸಂಜೆಯ ಆರತಿಯನ್ನು ಬೆಳಗುವುದು - ಇವೆಲ್ಲವನ್ನೂ ಬಾಪು ಸಾಹೇಬರೇ ಮಾಡುತ್ತಿದ್ದರು. ಬಾಪು ಸಾಹೇಬರು ಈ ಎಲ್ಲ ಕೆಲಸಗಳನ್ನು ಅತ್ಯಂತ ಶ್ರದ್ಧೆ ವಹಿಸಿ ಮಾಡುತ್ತಿದ್ದರು. ಸಾಮಾನ್ಯವಾಗಿ ಆರತಿಯ ಸಮಯದಲ್ಲಿ ಗಣನೀಯ ಪ್ರಮಾಣದಲ್ಲಿ ಭಕ್ತರು ಸೇರುತ್ತಿದ್ದರು. ಆದರೆ ಕೆಲವೊಮ್ಮೆ ಆರತಿಯ ಸಮಯದಲ್ಲಿ ಬಹಳ ಕಡಿಮೆ ಭಕ್ತರು ಇರುತ್ತಿದ್ದರು. ಇನ್ನು ಕೆಲವೊಮ್ಮೆ ಒಬ್ಬ ಭಕ್ತರೂ ಇರುತ್ತಿರಲಿಲ್ಲ. ಆದರೆ ಜೋಗ್ ರವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರತಿನಿತ್ಯ ಆರತಿಯನ್ನು ಅತ್ಯಂತ ಹೆಚ್ಚಿನ ಶ್ರದ್ಧಾ-ಭಕ್ತಿಗಳಿಂದ ಸಲ್ಲಿಸುತ್ತಿದ್ದರು. ಬಾಪು ಸಾಹೇಬ್ ಹಾಗೂ ಅವರ ಪತ್ನಿಯ ತಾಯಿಯವರು ಬಹಳ ಸಾತ್ವಿಕ ಜೀವನವನ್ನು ನಡೆಸುತ್ತಿದ್ದರು. ಪ್ರತಿನಿತ್ಯ ಹೊತ್ತಿಗೆ ಮುಂಚಿತವಾಗಿಯೇ ಎದ್ದು ತಣ್ಣೀರು ಸ್ನಾನ ಮಾಡಿ ತಮ್ಮ ಮನೆಯಲ್ಲಿನ ದೇವರುಗಳಿಗೆ ಪೂಜೆಯನ್ನು ಸಲ್ಲಿಸಿ, ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು ಪಾರಾಯಣ ಮಾಡುತ್ತಿದ್ದರು. ನಂತರ ಬಾಬಾರವರ ದರ್ಶನಕ್ಕೆಂದು ದ್ವಾರಕಾಮಾಯಿಗೆ ತೆರಳುತ್ತಿದ್ದರು. ಬಾಪು ಸಾಹೇಬರು ಬಾಬಾರವರ ಜೊತೆಯಲ್ಲಿಯೇ ಇದ್ದು ಅವರ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ತಾಯಿಯವರು ಮನೆಗೆ ವಾಪಸ್ ತೆರಳಿ ಮಧಾನ್ಯ ಆರತಿಗಾಗಿ ಪ್ರಸಾದವನ್ನು ತಯಾರು ಮಾಡಿಕೊಳ್ಳುತ್ತಿದ್ದರು ಹಾಗೂ ಬಾಬಾರವರು ಇವರ ಮನೆಗೆ ಕಳುಹಿಸುತ್ತಿದ್ದ ಹಲವಾರು ಭಕ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು.
ಒಂದು ದಿನ ತಾಯಿಯವರು ಉಪಹಾರ ಪ್ರಸಾದವನ್ನು ತೆಗೆದುಕೊಂಡು ದ್ವಾರಕಾಮಾಯಿಗೆ ತೆರಳಿದರು. ಬಾಬಾರವರು ಆಕೆಯನ್ನು ಹತ್ತಿರಕ್ಕೆ ಕರೆದು "ಆಯಿ ಇಂದು ನಿನ್ನ ಮನೆಯ ಬಾಗಿಲಿಗೆ ಕೋಣವೊಂದು ಬರುತ್ತದೆ.ಹಾಗಾಗಿ ಹೆಚ್ಚು ಪೂರಣ ಪೋಳಿ (ಬೇಯಿಸಿದ ಬೇಳೆ, ಬೆಲ್ಲ ಮತ್ತು ಏಲಕ್ಕಿಯನ್ನು ಚಪಾತಿಯೊಳಗೆ ಇರಿಸಿ ತಯಾರಿಸುವ ಒಂದು ಬಗೆಯ ಖಾದ್ಯ) ಯನ್ನು ತಯಾರಿಸು. ಅದರ ಮೇಲೆ ಹೆಚ್ಚಾಗಿ ತುಪ್ಪವನ್ನು ಹಾಕಿ ಕೋಣಕ್ಕೆ ತಿನ್ನಲು ನೀಡು" ಎಂದು ಹೇಳಿದರು. ಅಂತೆಯೇ ಆಯಿಯವರು ಬಾಬಾರವರ ಆಜ್ಞೆಯನ್ನು ಪಾಲಿಸಲು ಒಪ್ಪಿಕೊಂಡರು. ಆದರೆ ನಂತರ ಆಕೆ "ಬಾಬಾ, ಹೆಚ್ಚಾಗಿ ತುಪ್ಪವನ್ನು ಹಾಕಿ ಬಹಳ ಪೂರಣ ಪೋಳಿಯನ್ನು ಖಂಡಿತವಾಗಿಯೂ ತಯಾರಿಸುತ್ತೇನೆ. ನಾನೇ ನನ್ನ ಕೈಯಾರೆ ಕೋಣಕ್ಕೆ ಪೂರಣ ಪೋಳಿಯನ್ನು ಸಹ ತಿನ್ನಿಸುತ್ತೇನೆ. ಆದರೆ ಆ ಕೋಣವನ್ನು ಹುಡುಕಿಕೊಂಡು ನಾನು ಎಲ್ಲಿಗೆ ಹೋಗಲಿ. ಹಾಗೂ ಅದೇ ಕೋಣ ಎಂದು ಗುರುತು ಹಿಡಿಯುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು. ಅದಕ್ಕೆ ಬಾಬಾರವರು "ಆಯಿ, ನೀನು ಏಕೆ ಅದರ ಬಗ್ಗೆ ಚಿಂತೆ ಮಾಡುವೆ?. ನೀನು ಪೂರಣ ಪೋಳಿಯನ್ನು ಮಾಡಿ ಮುಗಿಸುವುದೇ ತಡ, ಆ ಕೋಣವು ನಿನ್ನ ಮನೆಯ ಬಾಗಿಲಿನಲ್ಲಿ ಬಂದು ನಿಂತಿರುತ್ತದೆ" ಎಂದು ಉತ್ತರಿಸಿದರು. ಆಗ ಆಯಿಯವರು ನಿರಾಶೆಯಿಂದ “ಬಾಬಾ, ನಾನು ವಾಸವಾಗಿರುವ ಮನೆಗೆ ಎರಡು ಬಾಗಿಲುಗಳಿವೆ. ಪ್ರತಿನಿತ್ಯ ಅನೇಕ ಕೋಣಗಳು ,ಮೇಯಲು ಹೋಗುವ ಸಮಯದಲ್ಲಿ ನನ್ನ ಮನೆಯ ಮುಂದೆಯೇ ಹಾದುಹೋಗುತ್ತವೆ. ಹಾಗೂ ನಾನು ಆಹಾರವನ್ನು ನೀಡುವೆನೆಂದು ತಿಳಿದು ಅವು ನನ್ನ ಮನೆಯ ಬಾಗಿಲಿನಲ್ಲಿ ಬಂದು ನಿಲ್ಲುತ್ತವೆ" ಎಂದು ಹೇಳಿದರು. ಅದಕ್ಕೆ ಬಾಬಾರವರು "ಆಯಿ, ನೀನು ಪೂರಣ ಪೋಳಿಯನ್ನು ಮಾಡಿ ಮುಗಿಸಿ ಅದರ ಮೇಲೆ ತುಪ್ಪವನ್ನು ಹಾಕಿದ್ದೇ ತಡ ಒಂದು ಕೋಣವು ಬಂದು ನಿನ್ನ ಮನೆಯ ಬಾಗಿಲಿನಲ್ಲಿ ಬಂದು ನಿಂತುಕೊಂಡು ಕಾಯುತ್ತಿರುತ್ತದೆ" ಎಂದು ನುಡಿದರು.
ಬಾಬಾರವರು ನೀಡಿದ ಉತ್ತರದಿಂದ ಆಯಿಯವರು ತೃಪ್ತಿಯಿಂದ ಮನೆಗೆ ವಾಪಸಾದರು. ಅಲ್ಲದೆ ವಿಶೇಷ ಆಸಕ್ತಿ ವಹಿಸಿ ತಟ್ಟೆಯ ತುಂಬಾ ಪೂರಣ ಪೋಳಿಯನ್ನು ತಯಾರಿಸಿದರು. ಅಲ್ಲದೆ ಅದರ ಮೇಲೆ ತುಂಬಾ ತುಪ್ಪವನ್ನು ಸಹ ಹಾಕಿದರು. ಅಷ್ಟು ಹೊತ್ತಿಗೆ ಗಂಟೆ 12:30 ಆಗಿತ್ತು. ಆ ಪೂರಣ ಪೋಳಿಗಳನ್ನು ತೆಗೆದುಕೊಂಡು ಹಿಂದಿನ ಬಾಗಿಲಿಗೆ ಹೋಗುವಷ್ಟರಲ್ಲಿ ಅವರ ಬಾಗಿಲಿನ ಮುಂದೆ ಕೋಣವೊಂದು ಕಾದುಕೊಂಡು ನಿಂತಿತ್ತು.
ಆಯಿಗೆ ಅಚ್ಚರಿಯಾಯಿತು. ಆದರೆ ಬಾಬಾರವರ ಮಾತುಗಳು ನಿಜವಾಗಿದ್ದು ಕಂಡು ಸಂತೋಷವಾಯಿತು. ಕೂಡಲೇ ಅಡುಗೆ ಮನೆಯೊಳಗೆ ಓಡಿ ಹೋಗಿ ಎಲ್ಲಾ ಪೂರಣ ಪೋಳಿಗಳನ್ನೂ ತಂದು ಆ ಕೋಣಕ್ಕೆ ತಿನ್ನಲು ನೀಡಿದರು. ಆ ಕೋಣವು ಎಲ್ಲಾ ಪೂರಣ ಪೋಳಿಗಳನ್ನು ತಿಂದ ನಂತರ ಅವರ ಎದುರೇ ಪ್ರಾಣ ಬಿಟ್ಟಿತು. ತಮ್ಮ ಕಣ್ಣೆದುರಿಗೆ ನಡೆದಿದ್ದನ್ನು ಕಂಡ ಆಯಿಗೆ ಹೆದರಿಕೆ ಮತ್ತು ದುಃಖ ಎರಡೂ ಒಮ್ಮೆಲೇ ಆಯಿತು. ಆಯಿ ಕೋಣವು ಪ್ರಾಣವನ್ನು ಬಿಟ್ಟಿದ್ದು ತಮ್ಮಿಂದಲೇ ಎಂದು ಭಾವಿಸಿದರು. ಕೂಡಲೇ ಅಡುಗೆ ಮನೆಯೊಳಗೆ ತೆರಳಿ ಅಡುಗೆ ಮಾಡಲು ಬಳಸಿದ್ದ ಎಲ್ಲಾ ಪದಾರ್ಥಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆದರೆ ಯಾವ ಪದಾರ್ಧದಲ್ಲಿಯೂ ತೊಂದರೆ ಕಂಡುಬರಲಿಲ್ಲ. ಹೀಗಾಗಿ ಆಕೆಯ ಮನಸ್ಸು ಪ್ರಕ್ಷುಬ್ಧಕ್ಕೆ ಒಳಗಾಗಿತು. ಆಗ ಆಕೆ ತಮ್ಮ ಮನಸ್ಸಿನಲ್ಲಿಯೇ “ ನಾನು ಈ ಪೂರಣ ಪೋಳಿಗಳನ್ನು ಬಹಳ ಇಷ್ಟಪಟ್ಟು ತಯಾರಿಸಿದೆ. ಆದರೂ ಹೀಗೇಕೆ ಆಯಿತು? ಈ ಕೋಣವು ಸತ್ತಿದ್ದಾದರೂ ಏಕೆ? ನಾನು ಈ ಕೋಣವನ್ನು ಸಾಯಿಸದಿದ್ದರೂ ಎಲ್ಲರೂ ನಾನೇ ಸಾಯಿಸಿದೆನೆಂದು ಆರೋಪ ಮಾಡುತ್ತಾರೆ. ಎಲ್ಲರೂ ನನ್ನ ಬಗ್ಗೆ ಏನು ತಿಳಿದುಕೊಳ್ಳಬಹುದು ಮತ್ತು ಹೇಳಬಹುದು? ನಾನು ಕೇವಲ ಬಾಬಾರವರ ಆಜ್ಞೆಯನ್ನು ಪಾಲಿಸಿದೆ ಅಷ್ಟೆ. ಇದು ಯಾರ ಕೋಣವೋ ಏನೋ ನಾನರಿಯೆ. ಈ ಕೋಣದ ಒಡೆಯನಿಗೇನಾದರೂ ವಿಷಯ ತಿಳಿದರೆ ಅವನು ನಾನೇ ಕೋಣವನ್ನು ಕೊಂದೆನೆಂದು ಆರೋಪಿಸುತ್ತಾನೆ. ಈ ಕೋಣದ ಒಡೆಯ ಕೋಣದ ಬದಲಿಗೆ ಹಣವನ್ನು ಕೇಳಿದರೆ ಏನು ಮಾಡುವುದು? ಅಥವಾ ಅವನೇನಾದರೂ ದೂರು ನೀಡಿದರೆ ಏನು ಗತಿ? ಅದರ ಫಲಿತಾಂಶ ಏನಾಗುತ್ತದೆಯೋ? ಬಾಬಾರವರು ಈ ಬ್ರಹ್ಮಾಂಡದ ಸೃಷ್ಠಿಕರ್ತರು. ನಾನು ಅವರ ಆಜ್ಞೆಯನ್ನು ಪಾಲಿಸಿದೆ ಅಷ್ಟೆ. ಹಾಗಾಗಿ, ವ್ಯತಿರಿಕ್ತ ಫಲಿತಾಂಶ ಏನಾದರೂ ಹೊರಬಂದಲ್ಲಿ ಅವರು ಖಂಡಿತವಾಗಿಯೂ ನನ್ನನ್ನು ಕ್ಷಮಿಸುತ್ತಾರೆ" ಎಂದು ಯೋಚಿಸುತ್ತಲೇ ತಮಗೆ ತಾವೇ ಸಮಾಧಾನ ಹೇಳಿಕೊಂಡರು.
ಸ್ವಲ್ಪ ಸಮಯದ ಬಳಿಕ ಅವರು ಬಾಬಾರವರ ಬಳಿಗೆ ಹೋಗಿ ನಡೆದ ವಿಚಾರವನ್ನೆಲ್ಲಾ ಚಾಚೂ ತಪ್ಪದೆ ತಿಳಿಸಿದರು. ಆಗ ಬಾಬಾರವರು “ಆಯಿ ಹೆದರಬೇಡ. ಈಗ ಏನೂ ಕೆಟ್ಟದ್ದು ಆಗಿಯೇ ಇಲ್ಲ. ಏನು ಆಗಬೇಕಾಗಿತ್ತೋ ಅದೇ ಆಗಿದೆ ಅಷ್ಟೆ. ಆ ಕೋಣಕ್ಕೆ ಅದೊಂದು ಆಸೆ (ವಾಸನೆ) ಉಳಿದುಕೊಂಡಿತ್ತು. ಆ ಆಸೆ ಪೂರ್ಣವಾದ ನಂತರ ಅದು ಬಿಡುಗಡೆ ಹೊಂದಿತು. ಅದು ಮುಂದೆ ಒಳ್ಳೆಯ ಜನ್ಮವನ್ನು ಪಡೆಯುತ್ತದೆ. ಈಗ ಹೆದರದೆ ಮನೆಗೆ ಹೋಗು. ಆ ಕೋಣವು ನಿಕೃಷ್ಟ ಜನ್ಮದಿಂದ ಬಿಡುಗಡೆ ಹೊಂದುವುದಕ್ಕೆ ನೀನು ಕಾರಣಕರ್ತಳಾದೆ ಎಂದು ದುಃಖಪಡಬೇಡ. ಆ ಕೋಣವು ಮುಂದೆ ಉತ್ತಮ ಜನ್ಮ ಪಡೆಯುವುದಕ್ಕೆ ನೀನು ಅವಕಾಶ ಮಾಡಿಕೊಟ್ಟ ಮೇಲೆ ನೀನು ಏಕೆ ದುಃಖದಿಂದ ಇರಬೇಕು?” ಪ್ರಶ್ನಿಸಿದರು. ಈ ರೀತಿಯಲ್ಲಿ ಬಾಬಾರವರು ಆಕೆಯನ್ನು ಸಂತೈಸಿ ಮನೆಗೆ ಕಳುಹಿಸಿಕೊಟ್ಟರು.
ಒಮ್ಮೆ ಪವಿತ್ರ ಪರ್ವಾನಿಯ ಪರ್ವ ಕಾಲದಲ್ಲಿ ಬಾಪು ಸಾಹೇಬ್ ಜೋಗ್ ಮತ್ತು ಅವರ ಪತ್ನಿಯವರಿಗೆ ಕೋಪರಗಾವ್ ನ ಬಳಿಯಿರುವ ಗಂಗೆಯಲ್ಲಿ ಸ್ನಾನ ಮಾಡುವ ಆಸೆಯಾಯಿತು. ಬಾಬಾರವರು ಗೋದಾವರಿಯನ್ನು ಗಂಗೆಯೆಂದು ಸಂಬೋಧಿಸುತ್ತಿದ್ದರು. ಹಾಗಾಗಿ ಎಲ್ಲಾ ಭಕ್ತರೂ ಹಾಗೆಯೇ ಕರೆಯುವ ವಾಡಿಕೆ ಇಟ್ಟುಕೊಂಡಿದ್ದರು.
ಅಂತೆಯೇ ಜೋಗ್ ಬಾಬಾರವರ ಅಪ್ಪಣೆ ಪಡೆಯಲು ಹೋದಾಗ ಬಾಬಾರವರು “ಬಾಪು ಸಾಹೇಬ್, ಬಘು ತ್ಯಾಚಾ ವಿಚಾರ್ ಉಧ್ಯಾ ಸಕಳಿ" (ಅಂದರೆ: ಬಾಪು ಸಾಹೇಬ್, ಅದರ ಬಗ್ಗೆ ನಾಳೆ ವಿಚಾರ ಮಾಡೋಣ) ಎಂದರು. ಅದಕ್ಕೆ ಉತ್ತರವಾಗಿ ಬಾಪುರವರು "ಬಾಬಾ, ನಾಳೆ ಬೆಳಿಗ್ಗೆ ಏಳು ಗಂಟೆಗೆ ಸಮಯ ಪ್ರಶಸ್ತವಾಗಿರುತ್ತದೆ. ಹಾಗಾಗಿ, ನಾವು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಕೋಪರಗಾವ್ ಗೆ ನಡೆದು ಹೊರಟರೆ ಮಾತ್ರ ಏಳು ಗಂಟೆಗೆ ತಲುಪಲು ಸಾಧ್ಯವಾಗುತ್ತದೆ. ಆಗ ಮಾತ್ರ ಗಂಗೆಯಲ್ಲಿ ಮಿಂದು ಪವಿತ್ರ ಸ್ನಾನವನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ನುಡಿದರು. ಆಗ ಬಾಬಾರವರು ಪುನಃ ಅದೇ ಮಾತನ್ನು ಪುನರುಚ್ಚರಿಸಿದರು. ಜೋಗ್ ಪರಿಪರಿಯಾಗಿ ಬಾಬಾರವರನ್ನು ಬೇಡಿಕೊಂಡರು. ಆದರೆ ಬಾಬಾರವರು "ನಾಳೆ ನೋಡೋಣ"ಎಂಬ ಒಂದೇ ಉತ್ತರವನ್ನು ಮತ್ತೆ ಮತ್ತೆ ಪುನರುಚ್ಚರಿಸಿದರು. ಆ ಪರ್ವ ಕಾಲವು ಜೀವನದಲ್ಲಿ ಒಂದೇ ಬಾರಿ ಬಂದಿತ್ತು. ಹಾಗಾಗಿ ಬಾಬಾರವರ ಉತ್ತರದಿಂದ ಜೋಗ್ ಮತ್ತು ಅವರ ಪತ್ನಿಯವರಿಗೆ ಬಹಳ ನಿರಾಶೆಯಾಯಿತು.
ಬಾಪು ಸಾಹೇಬರು ಬಾಬಾರವರ ಅನನ್ಯ ಭಕ್ತರಾಗಿದ್ದ ಕಾರಣ ಬಾಬಾರವರ ಮಾತಿಗೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆ ರಾತ್ರಿಯೆಲ್ಲಾ ಬಾಪು ಸಾಹೇಬರು ನಿದ್ರೆಯಿಲ್ಲದೆ ಒದ್ದಾಡಿದರು. ಆ ರಾತ್ರಿ ಬಾಬಾರವರು ಚಾವಡಿಯಲ್ಲಿ ಮಲಗುವ ದಿನವಾಗಿತ್ತು. ಮಾರನೇ ದಿನ ಬೆಳಿಗ್ಗೆ ಎಂದಿನಂತೆ ಬಾಪು ಸಾಹೇಬರು ಬಾಬಾರವರಿಗೆ ಕಾಕಡಾ ಆರತಿಯನ್ನು ಸಲ್ಲಿಸಿ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ್ದರು. ಆಗ ಶಿರಡಿ ಗ್ರಾಮದ ಜನರು ಓಡುತ್ತಾ ಇವರಿದ್ದೆಡೆಗೆ ಬಂದರು. ಅವರೆಲ್ಲರೂ ಶಿರಡಿಯ ಕೆರೆ-ಕಾಲುವೆಗಳು ಗಂಗೆಯಿಂದ ತುಂಬಿ ಹರಿಯುತ್ತಿವೆ ಎಂದು ಕೂಗಿಕೊಂಡು ಬರುತ್ತಿದ್ದರು. ಆಗ ಬಾಬಾರವರು ಜೋಗ್ ಕಡೆಗೆ ನೋಡುತ್ತಲೇ "ತು ಸಗ್ಲಿ ರಾತ್ ಲೇಯೆ ಶಿವೆ ದಿಲೆಯಾಸ್, ಪನ್ ದೇವಾಚೆ ದಯಾ, ಗಂಗಾ ಅಪ್ಲಾಪಾಶಿ ಆಲೆ. ಜಾ ಅಥಾ ಅಂಗೋಲೆ ಕರೂನ್ ಕರೂನ್ ಘೇಯೆ” (ಅಂದರೆ “ಇಡೀ ರಾತ್ರಿ ನೀನು ನನ್ನ ಮೇಲೆ ಬಯ್ಗುಳದ ಸುರಿಮಳೆಯನ್ನೇ ಸುರಿಸಿದೆ. ಆದರೆ ದೇವರ ದಯೆಯಿಂದ ಗಂಗಾ ಶಿರಡಿಗೆ ಆಗಮಿಸಿದೆ. ಈಗ ಹೋಗಿ ಗಂಗೆಯಲ್ಲಿ ಮಿಂದು ಬಾ") ಎಂದರು. ಈ ರೀತಿಯಲ್ಲಿ ಬಾಪು ಸಾಹೇಬ್, ಅವರ ಪತ್ನಿ ಹಾಗೂ ಶಿರಡಿಯ ಗ್ರಾಮಸ್ಥರೆಲ್ಲರೂ ಪವಿತ್ರ ಗೋದಾವರಿ ನದಿಯಲ್ಲಿ ಸ್ನಾನ ಮಾಡಿದರು.
ಬಾಪು ಸಾಹೇಬರು ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾನ್ಹ ಶಿರಡಿಯ ಕಾಲುವೆಯಲ್ಲಿ ಸ್ನಾನ ಮಾಡುವ ಪರಿಪಾಠ ಇಟ್ಟುಕೊಂಡಿದ್ದರು. ಬಾಪು ಸಾಹೇಬರ ಆನಂದವನ್ನು ನೋಡಿದ ಬಾಬಾರವರು "ಅರೇ ಬಾಪು ಸಾಹೇಬ್, ಈ ದೇವರು ಎಷ್ಟು ದಯಾಮಯ ನೋಡು. ಆದರೆ ನಾನು ಅವನಲ್ಲಿ ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಳ್ಳುವುದಿಲ್ಲ. ಅಲ್ಲದೇ ನಮಗೆ "ತಾಳ್ಮೆ" ಸಹ ಇರುವುದಿಲ್ಲ" ಎಂದರು. ಸಬೂರಿ ಎಂದರೆ ಭಗವಂತನಲ್ಲಿ ಎಡಬಿಡದ ಕೇಂದ್ರೀಕೃತವಾದ ನಂಬಿಕೆ.
ಬಾಪು ಸಾಹೇಬರು ಊಟ-ಉಪಹಾರದ ವಿಚಾರದಲ್ಲಿ ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸುತ್ತಿದ್ದರು ಹಾಗೂ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅವರು ಏಕಾದಶಿಯಂದು ಹಾಗೂ ಇತರ ವಿಶೇಷ ಹಬ್ಬದ ದಿನಗಳಂದು ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸುತ್ತಿದ್ದರು. ಆ ದಿನಗಳಂದು ಅವರು ಈರುಳ್ಳಿಯನ್ನು ಮುಟ್ಟುತ್ತಿರಲಿಲ್ಲ. ಬಾಬಾರವರು ಕೂಡ ಇದನ್ನು ಗೌರವಿಸುತ್ತಿದ್ದರು ಹಾಗೂ ಆ ದಿನಗಳಂದು ಈರುಳ್ಳಿಯನ್ನು ತಿನ್ನುವಂತೆ ಬಲವಂತ ಮಾಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಬಾಬಾರವರು ಬಾಪು ಸಾಹೇಬರನ್ನು ಮಧ್ಯಾನ್ಹದ ಊಟಕ್ಕೆ ಮನೆಗೆ ಹೋಗುವಂತೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ಯಾರಾದರೂ ಭಕ್ತರೊಂದಿಗೆ ಮನೆಗೆ ಹೋಗುವಂತೆ ಹೇಳಿ ಕಳುಹಿಸುತ್ತಿದ್ದರು. ಯಾರಾದರೂ ಭಕ್ತರು ಬಾಬಾರವರಿಗೆ ಸಿಹಿತಿಂಡಿ ಅಥವಾ ಹಣ್ಣುಗಳನ್ನು ಅರ್ಪಿಸಿದರೆ ಬಾಬಾರವರು ಇಡೀ ಬುಟ್ಟಿ ಅಥವಾ ಪೆಟ್ಟಿಗೆಯನ್ನು ಬಾಪು ಸಾಹೇಬರಿಗೆ ಕೊಟ್ಟುಬಿಡುತ್ತಿದ್ದರು.
ಬಾಪು ಸಾಹೇಬ್ ರವರ ತಾಯಿ ಶಿರಡಿ ಗ್ರಾಮದಲ್ಲಿ ಮೃತರಾದರು. ಹಾಗಾಗಿ ಅವರು ತಮ್ಮ ತಾಯಿಯವರ ಉತ್ತರ ಕ್ರಿಯೆಗಳನ್ನು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾಡಬೇಕೆಂದು ಅಂದುಕೊಂಡಿದ್ದರು. ಅದರ ಅಂಗವಾಗಿ ಅವರು ನಾಸಿಕ್ ಗೆ ಹೋಗಬೇಕೆಂದು ನಿರ್ಧರಿಸಿದ್ದರು. ಏಕೆಂದರೆ ಶಿರಡಿಯಲ್ಲಿ ಅವರ ಪಂಗಡಕ್ಕೆ ಸೇರಿದ ಬ್ರಾಹ್ಮಣರಾರೂ ಇರಲಿಲ್ಲ. ಅಂತೆಯೇ ವೈದಿಕವನ್ನು ಆಚರಿಸಲು ನಿರ್ಧರಿಸಿದ್ದ ದಿನಕ್ಕೆ ಬ್ರಾಹ್ಮಣರನ್ನು ಗೊತ್ತು ಮಾಡಿಕೊಂಡು ಬರುವ ಸಲುವಾಗಿ ನಾಸಿಕ್ ಗೆ ತೆರಳುವ ಮೊದಲು ಬಾಬಾರವರ ಒಪ್ಪಿಗೆ ಪಡೆಯಲು ಹೋಗಿದ್ದರು. ಆದರೆ ಬಾಬಾರವರು ಒಪ್ಪಿಗೆ ನೀಡದೆ ಮುಂದೆ ನೋಡೋಣ ಎಂದು ಹೇಳುತ್ತಲೇ ಬಂದರು. ಒಂದು ದಿನ ತೀವ್ರ ಹತಾಶರಾದ ಬಾಪು ಸಾಹೇಬರು ಬಾಬಾರವರಿಗೆ "ಏನಾದರೂ ಅಗಲಿ. ನಾನು ಇಂದು ಹೋಗಿಯೇ ತೀರುತ್ತೇನೆ.ನನ್ನ ಪಂಗಡಕ್ಕೆ ಸೇರಿರುವ ಯಾವ ಬ್ರಾಹ್ಮಣರು ಶಿರಡಿಯಲ್ಲಿ ಇಲ್ಲ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಬಾಬಾರವರು "ಈ ದಿನ ಸಾಯಂಕಾಲ ಇದರ ಬಗ್ಗೆ ತೀರ್ಮಾನ ಮಾಡೋಣ” ಎಂದು ನುಡಿದರು.
ಬಾಬಾರವರು ಹಾಗೆ ಹೇಳಿ ಇನ್ನೂ ಒಂದು ಗಂಟೆಯೂ ಆಗಿರಲಿಲ್ಲ. ಆಗ ಬಾಪು ಸಾಹೇಬರ ಪಂಗಡಕ್ಕೆ ಸೇರಿದ್ದ ಹಾಗೂ ಬಹಳ ವಿದ್ವಾಂಸರಾಗಿದ್ದ ಬ್ರಾಹ್ಮಣರೊಬ್ಬರು ಬಾಬಾರವರ ದರ್ಶನಕ್ಕೆಂದು ಶಿರಡಿಗೆ ಆಗಮಿಸಿದರು. ನಂತರ ಅವರು ಜೋಗ್ ರವರ ತಾಯಿಯ ಉತ್ತರ ಕ್ರಿಯಾದಿ ಕರ್ಮಗಳನ್ನು ಜೋಗ್ ರವರಿಗೆ ಇಷ್ಟವಾಗುವಂತೆ ನೆರವೇರಿಸಿದರು. ಹಾಗಾಗಿ, ಜೋಗ್ ನಾಸಿಕ್ ಗೆ ಹೋಗುವ ಪ್ರಮೇಯವೇ ಬರಲಿಲ್ಲ. ಜೋಗ್ ಆ ರೀತಿ ಒಪ್ಪಿಗೆಯನ್ನು ಕೇಳುವ ಸಮಯದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸಹ ಅಲ್ಲಿಯೇ ಇದ್ದರು. ಕಾಕಾರವರು ಬಾಬಾರವರಿಗೆ "ಬಾಬಾ, ನಾನು, ನೀವು ಹಾಗೂ ಬಾಪು ಸಾಹೇಬ ಮೂವರು ಸೇರಿ ನಾಸಿಕ್ ಗೆ ತೆರಳೋಣ. ನಾಸಿಕ್ ನಲ್ಲಿ ಜೋಗ್ ನನ್ನು ಬಿಟ್ಟು ನಾನು ಮತ್ತು ನೀವು ಮುಂಬೈಗೆ ಹೋಗೋಣ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಬಾಬಾರವರು “ಮೀ ಕಡಿ ಕೊನ್ನಾಲಾ ಸೂಡನಾರ್ ಮನುಷ್ ನಾಹಿ" (ಅಂದರೆ ನಾನು ಯಾರನ್ನೂ ನಡು ನೀರಿನಲ್ಲಿ ಕೈಬಿಡುವುದಿಲ್ಲ. ನಾನು ಆ ತರಹ ವ್ಯಕ್ತಿಯಲ್ಲ). ಈ ರೀತಿ ಬಾಬಾರವರು ಒಂದು ಸಾಧಾರಣ ಸಂಭಾಷಣೆಗೆ ಅಸಾಧಾರಣ ಅರ್ಥವನ್ನು ತಮ್ಮದೇ ಧಾಟಿಯಲ್ಲಿ ನೀಡಿದ್ದರು.
ಒಮ್ಮೆ ಬಾಪು ಸಾಹೇಬರು ಬಾಬಾರವರಿಗೆ ತಮಗೆ ಯಾವಾಗ ಸನ್ಯಾಸ ನೀಡುವಿರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ಬಾಬಾರವರು “ಈ ಪ್ರಾಪಂಚಿಕ ಜವಾಬ್ದಾರಿಯಿಂದ ನೀನು ಮುಕ್ತನಾದ ದಿನವೇ ನೀಡುವೆ" ಎಂದು ಉತ್ತರಿಸಿದ್ದರು. ಅವರ ತಾಯಿಯವರು ಕಾಲವಾದ ನಂತರ ಬಾಪು ಸಾಹೇಬರು ಜವಾಬ್ದಾರಿಯಿಂದ ಮುಕ್ತರಾದರು. ನಂತರ ಬಾಬಾರವರ ಸಮಾಧಿಯಾಗಿ ಹಲವು ವರ್ಷಗಳ ಕಾಲ ಶಿರಡಿಯಲ್ಲೇ ನೆಲೆಸಿ ಬಾಬಾರವರ ಸಮಾಧಿಯನ್ನು ನೋಡಿಕೊಳ್ಳುತ್ತಿದ್ದರು.
ಕಾಕಾ ಸಾಹೇಬ್ ದೀಕ್ಷಿತರ ಮರಣದ ನಂತರ ಇತರ ಹಲವಾರು ಭಕ್ತರು ಶಿರಡಿಯನ್ನು ತೊರೆದು ಬೇರೆ ಊರುಗಳಿಗೆ ತೆರಳಿದರು. ಯಾರೂ ಇಲ್ಲದೇ ಒಂಟಿತನ ಕಾಡತೊಡಗಿದ್ದರಿಂದ ಬಾಪು ಸಾಹೇಬರು ಸಾಕೂರಿ ಆಶ್ರಮಕ್ಕೆ ತೆರಳಲು ನಿರ್ಧರಿಸಿದರು. ಅಲ್ಲಿ ಅವರು ಕಫ್ನಿಯನ್ನು ಧರಿಸಿ ಸನ್ಯಾಸವನ್ನು ಸ್ವೀಕರಿಸಿದರು. ಅವರು ಸಾಕೂರಿಗೆ ತೆರಳಲು ನಿರ್ಧರಿಸಿದ್ದು ಇಂದಿಗೂ ಒಂದು ಕಗ್ಗಂಟಾಗಿ ಉಳಿದ ಪ್ರಶ್ನೆಯಾಗಿದೆ. ಏಕೆಂದರೆ ಇವರು ಹಾಗೂ ಬಾಬಾರವರ ಇನ್ನೊಬ್ಬ ಭಕ್ತರಾದ ಉಪಾಸನಿ ಬಾಬಾರವರಿಗೆ ಮಧುರ ಬಾಂಧವ್ಯ ಇರಲಿಲ್ಲ. ಒಮ್ಮೆ ಇವರು ಉಪಾಸನಿಯವರನ್ನು ದರದರನೆ ಎಳೆದುಕೊಂಡು ದ್ವಾರಕಾಮಾಯಿಗೆ ಕರೆದುತಂದು ಬಾಬಾರವರ ಮುಂದೆ ನಿಲ್ಲಿಸಿ ತಮ್ಮಿಬ್ಬರ ಜಗಳದ ವಿಷಯವನ್ನು ಅವರಿಗೆ ತಿಳಿಸಿ ನ್ಯಾಯ ಪಂಚಾಯಿತಿ ಮಾಡುವಂತೆ ಕೇಳಿಕೊಂಡಿದ್ದರು. ಆದಾಗ್ಯೂ ಸಾಕೂರಿಯಲ್ಲಿ ಅವರು ಬಾಬಾರವರಿಗೆ ಮಾಡುತ್ತಿದ್ದಂತೆಯೇ ಉಪಾಸನಿ ಬಾಬಾರವರಿಗೆ ಸೇವೆ ಸಲ್ಲಿಸುತ್ತಿದ್ದರು.
ತಾಯಿಯವರು ಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಆಕೆ ಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಬಾಬಾರವರ ಮೇಲೇ ಅವರಿಗೆ ಪ್ರೀತಿ ಹಾಗೂ ಭಕ್ತಿ ಎಷ್ಟಿತ್ತೆಂದರೆ ಬಾಬಾರವರು ಮಹಾಸಮಾಧಿಯಾದ ನಂತರ ತಮ್ಮ ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಶಿರಡಿಯ ಬೀದಿ ಬೀದಿಗಳಲ್ಲಿ ಗೊತ್ತು ಗುರಿ ಇಲ್ಲದೇ ತಮ್ಮ ಗುರುವನ್ನು ಹುಡುಕಿಕೊಂಡು ಅಲೆದಾಡುತ್ತಿದ್ದರು. ಆಕೆಯ ಮುಖದಲ್ಲಿ ಶೂನ್ಯ ತುಂಬಿತ್ತು. ಅವರಿಗೆ ತಮ್ಮ ಸುತ್ತಮುತ್ತಲಿನ ಪರಿವೆಯೇ ಇರಲಿಲ್ಲ. ಅಂತೆಯೇ ಬಾಬಾರವರ ಮಹಾ ನಿರ್ಯಾಣದ ಎರಡು ತಿಂಗಳಿನಲ್ಲೇ ಆಕೆಯೂ ತೀರಿಕೊಂಡರು.
ಈ ಘಟನೆಯು ಬಾಪು ಸಾಹೇಬರು ಸಮಾಧಿಯಾಗುವುದಕ್ಕೆ ಕೇವಲ ಆರು ತಿಂಗಳಿಗೆ ಮುಂಚೆ ನಡೆದಿತ್ತು. ಕಾಕಾ ಸಾಹೇಬ್ ದೀಕ್ಷಿತರು 1848 (1926) ನೇ ಇಸವಿಯ ಜ್ಯೇಷ್ಠ ಮಾಸದ ಏಕಾದಶಿಯಂದು ಸಮಾಧಿ ಹೊಂದಿದರು. ಬಾಪು ಸಾಹೇಬರು ಇದಾದ ನಂತರ ಆರು ತಿಂಗಳಿಗೆ ಸರಿಯಾಗಿ ಸಮಾಧಿ ಹೊಂದಿದರು. ಇದರ ಬಗ್ಗೆ ಒಬ್ಬ ಭಕ್ತನಿಗೆ ಒಂದು ವಿಶೇಷ ಕನಸು ಬಿತ್ತು. ಆ ಕನಸಿನಲ್ಲಿ ಭಕ್ತರ ಗುಂಪಿನಲ್ಲಿ ಬಾಬಾರವರ ಮುಂದೆ ಕುಳಿತುಕೊಂಡಿದ್ದರು. ಹಾಗೆ ಕುಳಿತಿದ್ದ ಎಲ್ಲಾ ಭಕ್ತರು ಕಣ್ಣು ಬಿಟ್ಟುಕೊಂಡು ಕುಳಿತಿದ್ದರು. ಅವರ ಪಕ್ಕದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸಹ ಕುಳಿತಿದ್ದರು. ಆದರೆ ಅವರು ಧ್ಯಾನ ಮಾಡುತ್ತಿರುವವರಂತೆ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು. ಕಾಕಾರವರ ಪಕ್ಕದ ಜಾಗ ಖಾಲಿಯಿತ್ತು. ಹಾಗಾಗಿ ಆ ಭಕ್ತನು ತನ್ನ ಕನಸಿನಲ್ಲಿಯೇ ಬಾಬಾರವರಿಗೆ ಕಾಕಾರವರ ಪಕ್ಕದ ಜಾಗ ಏಕೆ ಖಾಲಿಯಾಗಿದೆ ಎಂದು ಪ್ರಶ್ನಿಸಿದನು. ಅಲ್ಲದೇ ಕಾಕಾರವರು ಏಕೆ ತಮ್ಮ ಕಣ್ಣನ್ನು ಮುಚ್ಚುಕೊಂಡಿದ್ದಾರೆ ಎಂದೂ ಸಹ ವಿಚಾರಿಸಿದನು. ಅದಕ್ಕೆ ಬಾಬಾರವರು “ದೀಕ್ಷಿತರು ಈಗಷ್ಟೇ ಬಂದಿರುವುದಾಗಿಯೂ ಹಾಗೂ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಇನ್ನು ಆರು ತಿಂಗಳ ನಂತರ ಮತ್ತೊಬ್ಬ ಭಕ್ತರು ಬಂದು ಕುಳಿತುಕೊಳ್ಳುವರೆಂದು ತಿಳಿಸಿದರು. ಈ ರೀತಿಯಲ್ಲಿ ಬಾಬಾರವರು ಬಾಪು ಸಾಹೇಬ್ ಜೋಗ್ ರವರ ಮರಣದ ಮುನ್ಸೂಚನೆಯನ್ನು ನೀಡಿದ್ದರು.
No comments:
Post a Comment