Wednesday, September 24, 2014

ಶಿರಡಿಯಲ್ಲಿ "ಆನಂದಿ ವಾಸ್ತು" ದಿನದರ್ಶಿಕೆಯ ಲೋಕಾರ್ಪಣೆ -ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಇದೇ ತಿಂಗಳ 23ನೇ ಸೆಪ್ಟೆಂಬರ್ 2014, ಮಂಗಳವಾರದಂದು ಶಿರಿಡಿ ಸಮಾಧಿ ಮಂದಿರದಲ್ಲಿ  "ಆನಂದಿ ವಾಸ್ತು" ಎಂಬ ಹೆಸರಿನ ದಿನದರ್ಶಿಕೆಯನ್ನು ಲೋಕಾರ್ಪಣೆಯನ್ನು ಮಾಡಿದರು. ಈ ದಿನದರ್ಶಿಯು ವಾಸ್ತು ಶಾಸ್ತ್ರ ಆಧಾರಿತವಾಗಿದ್ದು  ಇದನ್ನು ಖ್ಯಾತ ವಾಸ್ತು ಹಾಗೂ ಜ್ಯೋತಿಷ್ಯ ತಜ್ಞರಾದ ಶ್ರೀ.ಆನಂದ ಪಿಂಪಾಲಕರ್ ರವರು ತಯಾರಿಸಿದ್ದಾರೆ. 


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಆನಂದ ಪಿಂಪಾಲಕರ್ ರವರು ಈ ದಿನದರ್ಶಿಕೆಯಲ್ಲಿ ಶುಭ ನುಡಿಗಳು, ಭೂಮಿ ಪೂಜೆಯ ಮಹೂರ್ತಗಳು, ವಾಸ್ತು ಶಾಂತಿ ವಿಚಾರ, ವಿವಾಹ, ಪುಂಸವನ, ನಾಮಕರಣ, ಕೇಶ ಮುಂಡನ (ಚೌಲ), ಉಪನಯನ,ದಿನದ ವಿಶೇಷತೆ, ಸಂಖ್ಯಾ ಶಾಸ್ತ್ರ, ದಿನದಲ್ಲಿ ಬರುವ ಒಳ್ಳೆಯ ಮಹೂರ್ತ ಸಮಯಗಳು, ನಕ್ಷತ್ರ ವಿಚಾರ, ದೇವರ ಪೂಜೆಯ ವಿವರಗಳು, ವಾಸ್ತು ಸಲಹೆಗಳು, ಸಂಕಷ್ಟದ ದಿನದಂದು ಚಂದ್ರೋದಯದ ವಿವರಗಳು, ವಾಸ್ತು  ಪ್ರಕಾರವಾಗಿ ಉದ್ಯಾನವನದ ನಿರ್ಮಾಣ - ಹಾಗೂ ಇನ್ನೂ ಹತ್ತು ಹಲವಾರು ವಿಷಯಗಳನ್ನು ಕೂಲಂಕುಶವಾಗಿ ವಿವರಿಸಲಾಗಿದೆ ಎಂದು ಅವರು ತಿಳಿಸಿದರು. ಅಷ್ಟೇ ಅಲ್ಲದೇ ಶ್ರೀ ಸಾಯಿಬಾಬಾ ಸಂಸ್ಥಾನದ ಸಿಬ್ಬಂದಿ ವರ್ಗದವರಿಗೆ ಸುಮಾರು ಒಂಬತ್ತು ಸಾವಿರ ಪ್ರತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ  ಎಂಬ ವಿಷಯವನ್ನು  ಸಹ ಅವರು ತಿಳಿಸಿದರು. ಅಲ್ಲದೇ, ಈ ದಿನದರ್ಶಿಯನ್ನು ಜನ ಸಾಮಾನ್ಯರು ಓದಿ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಇಷ್ಟಪಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಶ್ರೀ.ಅನಿಲ್ ಸಾಠೆ, ಡಾ.ಸಂದೀಪ್ ಓಸ್ವಾಲ್, ಶ್ರೀಮತಿ.ಪ್ರಿಯಾ ರಣದಿವೆ, ಶ್ರೀ.ಉಮೇಶ್ ಗಂದತ್, ಮತ್ತು ಶ್ರೀ.ಭೂಪೇಂದ್ರ ಸೋನಾವಾನೆಯವರುಗಳು ಕೂಡ ಉಪಸ್ಥಿತರಿದ್ದರು. 

ಮರಾಠಿಯಿಂದ ಆಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, September 21, 2014

ಅಮರಾವತಿಯ 25 ಅಂಧ ವಿದ್ಯಾರ್ಥಿಗಳಿಂದ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ

ಅಮರಾವತಿ ಹೆಲ್ಪಿಂಗ್ ವಿಂಗ್ ಮತ್ತು ಕ್ಲಬ್ ನ ಸಹಾಯದಿಂದ ಶಿಕ್ಷಣವನ್ನು ಕಲಿಯುತ್ತಿರುವ ಅಮರಾವತಿಯ 25 ಅಂಧ ವಿದ್ಯಾರ್ಥಿಗಳು ಇದೇ ತಿಂಗಳ 21ನೇ ಸೆಪ್ಟೆಂಬರ್ 2014, ಭಾನುವಾರ ದಂದು  ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ದರ್ಶನದ ನಂತರ ಅವರುಗಳು ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ.ಮೋಹನ್ ಯಾದವ್ ರವರೊಂದಿಗೆ ಫೋಟೋ ಸೆಷನ್ ನಲ್ಲಿ ಭಾಗವಹಿಸಿದ್ದರು. 


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, September 20, 2014

ಸಾಯಿ ಮಹಾಭಕ್ತ - ಬಾಪು ಸಾಹೇಬ್ ಜೋಗ್ - ಕೃಪೆ: ಸಾಯಿಅಮೃತಧಾರಾ. ಕಾಂ



ಬಾಪು ಸಾಹೇಬ್ ಜೋಗ್ ಆಲಿಯಾಸ್ ಸಖಾರಾಮ್ ಹರಿಯವರು 1856ನೇ ಇಸವಿಯಲ್ಲಿ ಜನಿಸಿದರು. ಅವರು ಸರ್ಕಾರಿ ಇಲಾಖೆಯೊಂದರಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹಾಗೂ 1909 ನೇ ಇಸವಿಯಲ್ಲಿ ನಿವೃತ್ತರಾಗಿ ಅದರಿಂದ ಬಂದ ಎಲ್ಲಾ ನಿವೃತ್ತಿ  ಪ್ರಯೋಜನಗಳನ್ನು ಸ್ವೀಕರಿಸಿ ತಮ್ಮ ಪತ್ನಿಯೊಂದಿಗೆ ಶಿರಡಿಗೆ ಬಂದು ನೆಲೆಸಿದರು. ಜೋಗ್ ದಂಪತಿಗಳಿಗೆ ಮಕ್ಕಳ ಯೋಗವಿರಲಿಲ್ಲ. ಅವರು ತಮಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದರು. 

ಮಹಾನ್ ಸತ್ಪುರುಷರಾದ ವಿಷ್ಣು ಬುವಾರವರು ಬಾಪು ಸಾಹೇಬರಿಗೆ ಹತ್ತಿರದ ಬಂಧುಗಳಾಗಿದ್ದರು. ಇವರು ಶಿರಡಿಗೆ ಬರುವುದಕ್ಕೆ ಮುಂಚೆ ಕಬಾಡ ಎಂಬಲ್ಲಿಗೆ ತೆರಳಿ ಅಲ್ಲಿ ವಾಸಿಸುತ್ತಿದ್ದ ಸಂತರಾದ ಸಖಾರಾಮ್ ಮಹಾರಾಜ್ ರವರಿಗೆ ಗೌರವ ಸಲ್ಲಿಸಿ ಅಲ್ಲಿ ಸ್ವಲ್ಪ ದಿನಗಳ ಕಾಲ ತಂಗಿದ್ದು ಅವರ ಸೇವೆಯನ್ನು ಮಾಡಿದರು. ಬಾಪು ಸಾಹೇಬರು ಶಿರಡಿಗೆ ಬರುವುದಕ್ಕೆ ಮುಂಚೆ ಅಲ್ಲಿ ಸ್ವಲ್ಪ ದಿನಗಳು ಮಾತ್ರ ಇದ್ದು ಕಬಾಡಕ್ಕೆ ಹಿಂತಿರುಗಿ ತಮ್ಮ ಜೀವಮಾನವನ್ನು ಅಲ್ಲಿ ಸೇವೆ ಮಾಡುತ್ತಾ  ಕಳೆಯಬೇಕೆಂದು ನಿರ್ಧಾರ ಮಾಡಿಕೊಂಡಿದ್ದರು. ಆದರೆ ಬಾಬಾರವರು ಇವರಿಗೆ ಬೇರೆಯೇ ಯೋಜನೆಯನ್ನು ಸಿದ್ಧಪಡಿಸಿದ್ದರು. ಶಿರಡಿಯಲ್ಲಿ ಜೋಗ್ ರವರು ಸಾಥೇವಾಡಾದಲ್ಲಿ ಉಳಿದುಕೊಂಡಿದ್ದರು. ಕೆಲವು ಭಕ್ತರು ಇವರನ್ನು ಕುರಿತು ಹಾಸ್ಯ ಮಾಡಿದಾಗ ಇವರಿಗೆ  ಇಷ್ಟವಾಗದೆ ಕಬಾಡಕ್ಕೆ ವಾಪಸ್ ತೆರಳುವುದಾಗಿ ಅವರುಗಳಿಗೆ ಹೆದರಿಸಿದರು. ಆಗ ಬಾಬಾರವರು ಮಧ್ಯ ಪ್ರವೇಶಿಸಿ “ಈ ವಾಡಾ ಸಾಥೆಯವರ ಅಪ್ಪನದ್ದೇನು?. ನಾನು ದಾದಾ ಕೇಳ್ಕರನಿಗೆ ನಿನಗೆ ತೊಂದರೆ ನೀಡದಂತೆ ತಾಕೀತು ಮಾಡುತ್ತೇನೆ. ನೀನು ನೆಮ್ಮದಿಯಿಂದ ಇಲ್ಲಿಯೇ ಇರುವಿಯಂತೆ. ಆಗಬಹುದಾ?” ಎಂದು ಕೇಳಿದರು. ಬಾಬಾರವರ ಸಿಹಿ ನುಡಿಗಳಿಗೆ ಮರುಳಾದ ಬಾಪು ಸಾಹೇಬ್  ಶಿರಡಿಯಲ್ಲಿಯೇ ಉಳಿದುಕೊಂಡರು. 

ಬಾಪು ಸಾಹೇಬ್ "ಚಿತ್ಪಾವನ ಕೊಂಕಣಿ ಬ್ರಾಹ್ಮಣ" ಪಂಗಡಕ್ಕೆ ಸೇರಿದವರಾಗಿದ್ದು ಬಹಳ ಸಂಪ್ರದಾಯಬದ್ಧವಾದ ಜೀವನವನ್ನು ನಡೆಸುತ್ತಿದ್ದು "ಸೋವಾಲೆ" ಎಂಬ ಒಂದು ವಿಧವಾದ ಪರಿಶುದ್ಧತೆಯ ಧಾರ್ಮಿಕ ವಿಧಿಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು.ಅವರು ನ್ಯಾಯವಂತರೂ, ಪ್ರಮಾಣಿಕರೂ ಆಗಿದ್ದು ತಮ್ಮ ಎಲ್ಲಾ ವ್ಯವಹಾರವನ್ನು ನೇರ ರೀತಿಯಲ್ಲಿ ಮಾಡುತ್ತಿದ್ದರು. ಅವರ ಧರ್ಮಪತ್ನಿಯೂ ಸಹ ಅವರಂತೆಯೇ ಮನೋಧರ್ಮವನ್ನು ಹೊಂದಿದ್ದರು. ಹಾಗಾಗಿ  ಅವರಿಬ್ಬರೂ ಪರಸ್ಪರ ಒಳ್ಳೆಯ ಹೊಂದಾಣಿಕೆಯನ್ನು ಹೊಂದಿದ್ದರು. ಅವರ ಧರ್ಮಪತ್ನಿಯ ಹೆಸರು "ತಾಯಿ" ಎಂದಾಗಿದ್ದು ಬಾಬಾರವರು ಆಕೆಯನ್ನು "ಆಯಿ" ಎಂದು ಕರೆಯುತ್ತಿದ್ದರು. ಬಾಪು ಸಾಹೇಬರು "ದತ್ತಾತ್ರೇಯರ ಉಪಾಸಕ" ರಾಗಿದ್ದ ಕಾರಣ ಅನನ್ಯ ದತ್ತ ಭಕ್ತರಾಗಿ ದತ್ತ ಸಂಪ್ರದಾಯದ ಎಲ್ಲಾ ಸಂಪ್ರದಾಯಗಳನ್ನೂ ಪರಿಪಾಲಿಸುತ್ತಿದ್ದರು. ಅವರು ತಮ್ಮ ಸಾಧನೆಯನ್ನು ಯಾರಿಗೂ ತೋರಿಸಿಕೊಳ್ಳದೇ ರಹಸ್ಯವಾಗಿ ಮಾಡುತ್ತಿದ್ದರು. ಇವರ ಮನೆಯ ಪೂಜಾ ಕೋಣೆಯಲ್ಲಿ ಎಲ್ಲಾ ದೇವರ ವಿಗ್ರಹಗಳೂ ಇದ್ದವು. ಪ್ರತಿ ವರ್ಷ ದತ್ತ ಜಯಂತಿಯ ದಿನದಂದು ಇವರು ದತ್ತಾತ್ರೇಯರಿಗೆ ಒಂದು ಕಫ್ನಿ ಹಾಗೂ ನೈವೇದ್ಯವನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದರು. ಒಮ್ಮೆ ಅವರು ಶಿರಡಿಯಲ್ಲಿದ್ದ ಸಂದರ್ಭದಲ್ಲಿ ದತ್ತ ಜಯಂತಿಯ ದಿನದಂದು ಬಾಬಾರವರಿಗೆ ಕಪ್ನಿಯನ್ನು ಅರ್ಪಿಸುವ ಉತ್ಕಟ ಇಚ್ಛೆ ಅವರ ಮನದಲ್ಲಿ ಬಂದಿತು. ಹಾಗಾಗಿ, ಅವರು ಬಾಳಾ ಶಿಂಪಿಯ ಬಳಿ ಒಂದು ಕಫ್ನಿಯನ್ನು ಹೊಲಿಸಿದರು. ದತ್ತ ಜಯಂತಿಯ ದಿನದಂದು ಆ ಕಪ್ನಿಯನ್ನು ತೆಗೆದುಕೊಂಡು  ಬಾಬಾರವರ ಬಳಿಗೆ ತೆರಳಿ ಅವರಿಗೆ ಪೂಜೆಯನ್ನು ಸಲ್ಲಿಸಿದ ನಂತರ ಆ ಕಫ್ನಿಯನ್ನು ಅವರಿಗೆ ಕಾಣಿಕೆಯಾಗಿ ನೀಡಿದರು. ಅಂತೆಯೇ ಬಾಬಾರವರು ಸಹ ಅ ಕಫ್ನಿಯನ್ನು ಸ್ವೀಕರಿಸಿ ತಮ್ಮ ಬಳಿಯಿದ್ದ ಮತ್ತೊಂದು ಕಫ್ನಿಯನ್ನು ಪ್ರಸಾದವಾಗಿ ಅವರಿಗೆ ನೀಡಿದರು. ಬಾಪು ಸಾಹೇಬರು ಸಂತೋಷದಿಂದ ಆ ಕಫ್ನಿಯನ್ನು ಸ್ವೀಕರಿಸಿ ಅದನ್ನು ಭದ್ರವಾಗಿ ತಮ್ಮ ಬಳಿ ಸಂರಕ್ಷಿಸಿದರು. ಅಲ್ಲದೇ ಪ್ರತಿ ದಿನ ಸಂಜೆಯ ವೇಳೆಯಲ್ಲಿ ಬಾಬಾರವರು ನೀಡಿದ ಆ ಪವಿತ್ರ ಕಫ್ನಿಯನ್ನು  ತಮ್ಮ  ತಲೆಗೆ ಬಿಳಿಯ ಬಟ್ಟೆಯೊಂದನ್ನು ಸುತ್ತಿಕೊಂಡು ಬಾಬಾರವರ ದರ್ಶನಕ್ಕೆ ಹೋಗುತ್ತಿದ್ದರು. ಬಾಪು ಸಾಹೇಬರು ಆ ಕಫ್ನಿಯನ್ನು "ದರ್ಬಾರಿ ಪೋಷಾಕು" (ರಾಜದರ್ಬಾರಿನ ಉಡುಗೆ) ಎಂದು ಕರೆಯುತ್ತಿದ್ದರು.  ಬೇರೆ ಸಮಯದಲ್ಲಿ ಸಾಮಾನ್ಯ ಉಡುಪನ್ನು ಧರಿಸುತ್ತಿದ್ದರು. 

ಬಾಪು ಸಾಹೇಬರು ಬಹಳ ಒಳ್ಳೆಯ ಹೃದಯವಂತಿಕೆಯ ಗುಣವನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಆದರೆ ಇವರು ಸರ್ಕಾರಿ ಹುದ್ದೆಯಲ್ಲಿ ಇದ್ದ ಕಾರಣ ಕೆಲಸಗಾರರೊಂದಿಗೆ ವ್ಯವಹರಿಸುವಾಗ ಬಹಳ ಕಟ್ಟುನಿಟ್ಟಾಗಿ ನಡೆದುಕೊಳ್ಳುವಂತೆ ಕಾಣಿಸುತ್ತಿದ್ದರು. ಆದರೆ ಅವರು ಬಹಳ ಮುಂಗೋಪಿಯಾಗಿದ್ದರು. ಬಾಬಾರವರು ಬಾಪು ಸಾಹೇಬರ ಈ ವರ್ತನೆಯನ್ನು ನಿಧಾನವಾಗಿ ಬದಲಾಯಿಸುವಲ್ಲಿ ಯಶಸ್ವಿಯಾದರು. ಇವರು ಬಹಳ ಲೆಕ್ಕಾಚಾರದ ಜೀವನವನ್ನು ನಡೆಸುತ್ತಿದ್ದ ಕಾರಣ ಸ್ವಲ್ಪ ಹಣವನ್ನು ಉಳಿಸಿದ್ದರು. ಇವರು ತಮ್ಮ ಬಳಿಯಿದ್ದ ಸಂಪತ್ತಿನ ಬಗ್ಗೆ ಅಹಂಕಾರವನ್ನು ಹೊಂದಿದ್ದರೆಂದು ಬಾಬಾರವರಿಗೆ ತಿಳಿದಿತ್ತು. ಹಾಗಾಗಿ ಬಾಬಾರವರು ಅಗಾಗ್ಗೆ ಇವರ ಬಳಿ ದಕ್ಷಿಣೆಯನ್ನು ನೀಡುವಂತೆ ಕೇಳಿ ಇವರು ಕೂಡಿಟ್ಟಿದ್ದ ಹಣವೆಲ್ಲಾ ಖಾಲಿಯಾಗುವಂತೆ ಮಾಡಿದರು. ಇದರಿಂದ ಬಾಪು ಸಾಹೇಬರು ಒಳ್ಳೆಯ ಪಾಠವನ್ನು ಕಲಿತರು. ಇವರು ಪ್ರತಿ ತಿಂಗಳು ತಮ್ಮ ಪಿಂಚಣಿ ಹಣವನ್ನು ಕೋಪರಗಾವ್ ನ ಕಚೇರಿಯಿಂದ ಪಡೆದು, ಕಿರಾಣಿ ಅಂಗಡಿಯವರಿಗೆ ನೀಡಬೇಕಾದ ಬಾಕಿ ಹಣವನ್ನು ನೀಡಿ ಉಳಿದ ಹಣವನ್ನು ತೆಗೆದುಕೊಂಡು ಬಂದು ಬಾಬಾರವರ ಅಡಿದಾವರೆಗಳಲ್ಲಿ ಇರಿಸುತ್ತಿದ್ದರು. ಬಾಬಾರವರು ಜೋಗರವರ ಮೇಲೆ ಬಹಳ ನಂಬಿಕೆಯನ್ನು ಇಟ್ಟಿದ್ದರು. ಹಾಗಾಗಿ  ಭಕ್ತರು ಅವರಿಗೆ ನೀಡುತ್ತಿದ್ದ ದಕ್ಷಿಣೆ ಹಣವನ್ನು ಜೋಪಾನ ಮಾಡುವಂತೆ ಹೇಳಿ ಜೋಗ್ ರವರಿಗೆ ನೀಡುತ್ತಿದ್ದರು.  ಅಂತೆಯೇ ಜೋಗ್ ರವರು ಸಹ ಬಾಬಾರವರ ಹಣವನ್ನು ಭದ್ರವಾಗಿ ಇಟ್ಟುಕೊಂಡು ಕಾಪಾಡುತ್ತಿದ್ದರು. ತಮಗೆ ಏನಾದರೂ ವಸ್ತುವಿನ ಅಗತ್ಯ ಬಿದ್ದಾಗ ಬಾಬಾರವರು ಆ ಹಣದಿಂದ ತಂದುಕೊಡುವಂತೆ ಜೋಗ್ ರವರಿಗೆ ಹೇಳುತ್ತಿದ್ದರು. ಕೆಲವೊಮ್ಮೆ ಬಾಬಾರವರು ಜೋಗ್ ರವರಿಗೆ ನೂರು ರೂಪಾಯಿಗಳನ್ನು ನೀಡಿ ಕೆಲವು ದಿನಗಳ ನಂತರ "ಬಾಪು ಸಾಹೇಬ್, ಕೆಲವು ದಿನಗಳ ಹಿಂದೆ ಇರಿಸಿಕೊಳ್ಳುವಂತೆ ಹೇಳಿ ನೂರಾ ಇಪ್ಪತ್ತೈದು ರೂಪಾಯಿಗಳನ್ನು ನೀಡಿದ್ದೆ. ಹೋಗಿ ಅದನ್ನು ತೆಗೆದುಕೊಂಡು ಬಾ" ಎಂದು ಕೇಳುತ್ತಿದ್ದರು. ಆಗ ಬಾಪು ಸಾಹೇಬರು ಬಾಬಾರವರು ತಮಗೆ ಕೇವಲ ನೂರು ರೂಪಾಯಿಗಳನ್ನು ಮಾತ್ರ ನೀಡಿದರೆಂದು ನೆನಪಿಸುತ್ತಿದ್ದರು. ಈ ರೀತಿ ಹಲವಾರು ಬಾರಿ ಬಾಬಾ ತಮಾಷೆಗಾಗಿ ಮಾಡುತ್ತಿದ್ದರು. ಬಾಬಾರವರು ಹಾಗೆ ಹೇಳಿದಾಗಲೆಲ್ಲಾ ಜೋಗ್ ರವರು "ಬಾಬಾ, ನಿಮ್ಮ ಹಣದ ಗೊಡವೆಯೇ ನನಗೆ ಬೇಡ. ನಿಮ್ಮ ಹಣವನ್ನು ಬೇರೆ ಯಾರ ಬಳಿಯಾದರೂ ಇರಿಸಿಕೊಳ್ಳಿ" ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು. ಆಗ ಬಾಬಾರವರು ಸಮಾಧಾನ ಮಾಡುತ್ತಾ "ಬಾಪು ಸಾಹೇಬ, ಕೋಪ ಮಾಡಿಕೊಳ್ಳಬೇಡ. ನನ್ನ ಲೆಕ್ಕಾಚಾರ ತಪ್ಪಾಗಿತ್ತು. ನಾನು ನಿನಗೆ ನೀಡಿದ್ದು ಕೇವಲ ನೂರು ರೂಪಾಯಿ ಮಾತ್ರ" ಎಂದು ಹೇಳುತ್ತಿದ್ದರು. ಒಮ್ಮೆ ಭಕ್ತರೊಬ್ಬರು ಬಾಬಾರವರಿಗೆ ಒಂದು ಗಿನಿಯಾ ನೀಡಿದರು. ಬಾಬಾರವರು ಅದನ್ನು ಬಾಪು ಸಾಹೇಬರಿಗೆ ನೀಡುತ್ತಾ “ಇದೇನಿದು?” ಎಂದು ಪ್ರಶ್ನಿಸಿದರು. ಅದಕ್ಕೆ ಜೋಗ್ ರವರು ಅದು ಒಂದು ಗಿನಿಯಾ ಅಥವಾ ಹದಿನೈದು ರೂಪಾಯಿಗಳಿಗೆ ಸಮ ಎಂದು ಉತ್ತರಿಸಿದರು. ಆಗ ಬಾಬಾರವರು “ಇದು ಬಹಳ ಬೆಲೆ ಬಾಳುವಂತಹದ್ದು. ಇದನ್ನು ಇರಿಸಿಕೊಂಡು ನನಗೆ ಮೂವತ್ತು ರೂಪಾಯಿಗಳನ್ನು ನೀಡು ” ಎಂದು ನುಡಿದರು.

ಮತ್ತೊಬ್ಬ ಮಹಾ ಭಕ್ತರಾದ ಮೇಘಾರವರು 19ನೇ ಜನವರಿ 1912 ರಂದು ಕಾಲವಾದ ನಂತರ ಬಾಬಾರವರ ಎಲ್ಲಾ ಕೆಲಸಗಳನ್ನೂ ಬಾಪು ಸಾಹೇಬರೇ ನೋಡಿಕೊಳ್ಳುತ್ತಿದ್ದರು. ಬಾಬಾರವರು 1918ನೇ ಇಸವಿಯಲ್ಲಿ ಮಹಾಸಮಾಧಿಯಾಗುವವರೆಗೂ ಬಾಪು ಸಾಹೇಬರೇ ಬಾಬಾರವರಿಗೆ ಆರತಿಯನ್ನು ಸಲ್ಲಿಸುತ್ತಿದ್ದರು. 

ಮೇಘಾರವರು  ಮಾಡುತ್ತಿದ್ದ ಎಲ್ಲಾ ಸೇವೆಗಳ ಜವಾಬ್ದಾರಿಯು ಬಾಪು ಸಾಹೇಬರ ಮೇಲೆಯೇ ಬಿಟ್ಟು. ಬಾಬಾರವರಿಗೆ ದ್ವಾರಕಾಮಾಯಿಯಲ್ಲಿ ಆರತಿಯನ್ನು ಸಲ್ಲಿಸುವುದು, ದೀಕ್ಷಿತವಾಡಾದಲ್ಲಿ ಮತ್ತು ಗುರು ಪಾದುಕಾ ಸ್ಥಾನದಲ್ಲಿ ಸಂಜೆಯ ಆರತಿಯನ್ನು ಬೆಳಗುವುದು - ಇವೆಲ್ಲವನ್ನೂ ಬಾಪು ಸಾಹೇಬರೇ ಮಾಡುತ್ತಿದ್ದರು. ಬಾಪು ಸಾಹೇಬರು ಈ ಎಲ್ಲ ಕೆಲಸಗಳನ್ನು ಅತ್ಯಂತ ಶ್ರದ್ಧೆ ವಹಿಸಿ ಮಾಡುತ್ತಿದ್ದರು. ಸಾಮಾನ್ಯವಾಗಿ ಆರತಿಯ ಸಮಯದಲ್ಲಿ ಗಣನೀಯ ಪ್ರಮಾಣದಲ್ಲಿ ಭಕ್ತರು ಸೇರುತ್ತಿದ್ದರು. ಆದರೆ ಕೆಲವೊಮ್ಮೆ ಆರತಿಯ ಸಮಯದಲ್ಲಿ ಬಹಳ ಕಡಿಮೆ ಭಕ್ತರು ಇರುತ್ತಿದ್ದರು. ಇನ್ನು ಕೆಲವೊಮ್ಮೆ ಒಬ್ಬ ಭಕ್ತರೂ ಇರುತ್ತಿರಲಿಲ್ಲ. ಆದರೆ ಜೋಗ್ ರವರು ಇದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರತಿನಿತ್ಯ ಆರತಿಯನ್ನು ಅತ್ಯಂತ ಹೆಚ್ಚಿನ ಶ್ರದ್ಧಾ-ಭಕ್ತಿಗಳಿಂದ ಸಲ್ಲಿಸುತ್ತಿದ್ದರು. ಬಾಪು ಸಾಹೇಬ್ ಹಾಗೂ ಅವರ ಪತ್ನಿಯ ತಾಯಿಯವರು ಬಹಳ ಸಾತ್ವಿಕ ಜೀವನವನ್ನು ನಡೆಸುತ್ತಿದ್ದರು. ಪ್ರತಿನಿತ್ಯ ಹೊತ್ತಿಗೆ ಮುಂಚಿತವಾಗಿಯೇ ಎದ್ದು  ತಣ್ಣೀರು ಸ್ನಾನ ಮಾಡಿ ತಮ್ಮ ಮನೆಯಲ್ಲಿನ ದೇವರುಗಳಿಗೆ ಪೂಜೆಯನ್ನು ಸಲ್ಲಿಸಿ, ಇತರ ಧಾರ್ಮಿಕ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು ಪಾರಾಯಣ ಮಾಡುತ್ತಿದ್ದರು. ನಂತರ ಬಾಬಾರವರ ದರ್ಶನಕ್ಕೆಂದು ದ್ವಾರಕಾಮಾಯಿಗೆ ತೆರಳುತ್ತಿದ್ದರು. ಬಾಪು ಸಾಹೇಬರು ಬಾಬಾರವರ ಜೊತೆಯಲ್ಲಿಯೇ ಇದ್ದು ಅವರ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ತಾಯಿಯವರು ಮನೆಗೆ ವಾಪಸ್ ತೆರಳಿ ಮಧಾನ್ಯ ಆರತಿಗಾಗಿ ಪ್ರಸಾದವನ್ನು ತಯಾರು ಮಾಡಿಕೊಳ್ಳುತ್ತಿದ್ದರು ಹಾಗೂ ಬಾಬಾರವರು ಇವರ ಮನೆಗೆ ಕಳುಹಿಸುತ್ತಿದ್ದ ಹಲವಾರು ಭಕ್ತರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. 

ಒಂದು ದಿನ ತಾಯಿಯವರು ಉಪಹಾರ ಪ್ರಸಾದವನ್ನು ತೆಗೆದುಕೊಂಡು ದ್ವಾರಕಾಮಾಯಿಗೆ ತೆರಳಿದರು. ಬಾಬಾರವರು ಆಕೆಯನ್ನು ಹತ್ತಿರಕ್ಕೆ ಕರೆದು "ಆಯಿ ಇಂದು ನಿನ್ನ ಮನೆಯ ಬಾಗಿಲಿಗೆ ಕೋಣವೊಂದು ಬರುತ್ತದೆ.ಹಾಗಾಗಿ ಹೆಚ್ಚು ಪೂರಣ ಪೋಳಿ (ಬೇಯಿಸಿದ ಬೇಳೆ, ಬೆಲ್ಲ ಮತ್ತು ಏಲಕ್ಕಿಯನ್ನು ಚಪಾತಿಯೊಳಗೆ ಇರಿಸಿ ತಯಾರಿಸುವ ಒಂದು ಬಗೆಯ ಖಾದ್ಯ) ಯನ್ನು ತಯಾರಿಸು. ಅದರ ಮೇಲೆ ಹೆಚ್ಚಾಗಿ ತುಪ್ಪವನ್ನು ಹಾಕಿ ಕೋಣಕ್ಕೆ ತಿನ್ನಲು ನೀಡು" ಎಂದು ಹೇಳಿದರು. ಅಂತೆಯೇ ಆಯಿಯವರು ಬಾಬಾರವರ ಆಜ್ಞೆಯನ್ನು ಪಾಲಿಸಲು ಒಪ್ಪಿಕೊಂಡರು.  ಆದರೆ ನಂತರ ಆಕೆ "ಬಾಬಾ, ಹೆಚ್ಚಾಗಿ ತುಪ್ಪವನ್ನು ಹಾಕಿ ಬಹಳ ಪೂರಣ ಪೋಳಿಯನ್ನು ಖಂಡಿತವಾಗಿಯೂ ತಯಾರಿಸುತ್ತೇನೆ. ನಾನೇ ನನ್ನ ಕೈಯಾರೆ ಕೋಣಕ್ಕೆ ಪೂರಣ ಪೋಳಿಯನ್ನು ಸಹ ತಿನ್ನಿಸುತ್ತೇನೆ. ಆದರೆ ಆ ಕೋಣವನ್ನು ಹುಡುಕಿಕೊಂಡು ನಾನು ಎಲ್ಲಿಗೆ ಹೋಗಲಿ. ಹಾಗೂ ಅದೇ ಕೋಣ ಎಂದು ಗುರುತು ಹಿಡಿಯುವುದಾದರೂ ಹೇಗೆ?" ಎಂದು ಪ್ರಶ್ನಿಸಿದರು. ಅದಕ್ಕೆ ಬಾಬಾರವರು "ಆಯಿ, ನೀನು ಏಕೆ ಅದರ ಬಗ್ಗೆ  ಚಿಂತೆ ಮಾಡುವೆ?. ನೀನು ಪೂರಣ ಪೋಳಿಯನ್ನು ಮಾಡಿ ಮುಗಿಸುವುದೇ ತಡ, ಆ ಕೋಣವು ನಿನ್ನ ಮನೆಯ ಬಾಗಿಲಿನಲ್ಲಿ ಬಂದು ನಿಂತಿರುತ್ತದೆ" ಎಂದು ಉತ್ತರಿಸಿದರು. ಆಗ ಆಯಿಯವರು ನಿರಾಶೆಯಿಂದ “ಬಾಬಾ, ನಾನು ವಾಸವಾಗಿರುವ ಮನೆಗೆ ಎರಡು ಬಾಗಿಲುಗಳಿವೆ. ಪ್ರತಿನಿತ್ಯ ಅನೇಕ ಕೋಣಗಳು ,ಮೇಯಲು ಹೋಗುವ ಸಮಯದಲ್ಲಿ ನನ್ನ ಮನೆಯ ಮುಂದೆಯೇ ಹಾದುಹೋಗುತ್ತವೆ. ಹಾಗೂ ನಾನು ಆಹಾರವನ್ನು ನೀಡುವೆನೆಂದು ತಿಳಿದು ಅವು ನನ್ನ ಮನೆಯ ಬಾಗಿಲಿನಲ್ಲಿ ಬಂದು ನಿಲ್ಲುತ್ತವೆ" ಎಂದು ಹೇಳಿದರು. ಅದಕ್ಕೆ ಬಾಬಾರವರು "ಆಯಿ, ನೀನು ಪೂರಣ ಪೋಳಿಯನ್ನು ಮಾಡಿ ಮುಗಿಸಿ ಅದರ ಮೇಲೆ ತುಪ್ಪವನ್ನು ಹಾಕಿದ್ದೇ ತಡ ಒಂದು ಕೋಣವು ಬಂದು ನಿನ್ನ ಮನೆಯ ಬಾಗಿಲಿನಲ್ಲಿ ಬಂದು ನಿಂತುಕೊಂಡು ಕಾಯುತ್ತಿರುತ್ತದೆ" ಎಂದು ನುಡಿದರು. 

ಬಾಬಾರವರು ನೀಡಿದ ಉತ್ತರದಿಂದ ಆಯಿಯವರು ತೃಪ್ತಿಯಿಂದ ಮನೆಗೆ ವಾಪಸಾದರು. ಅಲ್ಲದೆ ವಿಶೇಷ ಆಸಕ್ತಿ ವಹಿಸಿ ತಟ್ಟೆಯ ತುಂಬಾ ಪೂರಣ ಪೋಳಿಯನ್ನು ತಯಾರಿಸಿದರು. ಅಲ್ಲದೆ ಅದರ ಮೇಲೆ ತುಂಬಾ ತುಪ್ಪವನ್ನು ಸಹ ಹಾಕಿದರು. ಅಷ್ಟು ಹೊತ್ತಿಗೆ ಗಂಟೆ 12:30 ಆಗಿತ್ತು. ಆ ಪೂರಣ ಪೋಳಿಗಳನ್ನು ತೆಗೆದುಕೊಂಡು  ಹಿಂದಿನ ಬಾಗಿಲಿಗೆ ಹೋಗುವಷ್ಟರಲ್ಲಿ ಅವರ ಬಾಗಿಲಿನ ಮುಂದೆ ಕೋಣವೊಂದು ಕಾದುಕೊಂಡು ನಿಂತಿತ್ತು. 

ಆಯಿಗೆ ಅಚ್ಚರಿಯಾಯಿತು. ಆದರೆ ಬಾಬಾರವರ ಮಾತುಗಳು ನಿಜವಾಗಿದ್ದು ಕಂಡು ಸಂತೋಷವಾಯಿತು. ಕೂಡಲೇ ಅಡುಗೆ ಮನೆಯೊಳಗೆ ಓಡಿ ಹೋಗಿ ಎಲ್ಲಾ ಪೂರಣ ಪೋಳಿಗಳನ್ನೂ ತಂದು ಆ ಕೋಣಕ್ಕೆ ತಿನ್ನಲು ನೀಡಿದರು. ಆ ಕೋಣವು ಎಲ್ಲಾ ಪೂರಣ ಪೋಳಿಗಳನ್ನು ತಿಂದ ನಂತರ ಅವರ ಎದುರೇ ಪ್ರಾಣ ಬಿಟ್ಟಿತು. ತಮ್ಮ ಕಣ್ಣೆದುರಿಗೆ ನಡೆದಿದ್ದನ್ನು ಕಂಡ ಆಯಿಗೆ ಹೆದರಿಕೆ ಮತ್ತು ದುಃಖ ಎರಡೂ ಒಮ್ಮೆಲೇ ಆಯಿತು. ಆಯಿ ಕೋಣವು ಪ್ರಾಣವನ್ನು ಬಿಟ್ಟಿದ್ದು ತಮ್ಮಿಂದಲೇ ಎಂದು ಭಾವಿಸಿದರು. ಕೂಡಲೇ ಅಡುಗೆ ಮನೆಯೊಳಗೆ ತೆರಳಿ ಅಡುಗೆ ಮಾಡಲು ಬಳಸಿದ್ದ ಎಲ್ಲಾ ಪದಾರ್ಥಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆದರೆ ಯಾವ ಪದಾರ್ಧದಲ್ಲಿಯೂ ತೊಂದರೆ ಕಂಡುಬರಲಿಲ್ಲ. ಹೀಗಾಗಿ ಆಕೆಯ ಮನಸ್ಸು ಪ್ರಕ್ಷುಬ್ಧಕ್ಕೆ ಒಳಗಾಗಿತು. ಆಗ ಆಕೆ ತಮ್ಮ ಮನಸ್ಸಿನಲ್ಲಿಯೇ “ ನಾನು ಈ ಪೂರಣ ಪೋಳಿಗಳನ್ನು ಬಹಳ ಇಷ್ಟಪಟ್ಟು ತಯಾರಿಸಿದೆ. ಆದರೂ ಹೀಗೇಕೆ ಆಯಿತು? ಈ ಕೋಣವು ಸತ್ತಿದ್ದಾದರೂ ಏಕೆ? ನಾನು ಈ ಕೋಣವನ್ನು ಸಾಯಿಸದಿದ್ದರೂ ಎಲ್ಲರೂ ನಾನೇ ಸಾಯಿಸಿದೆನೆಂದು ಆರೋಪ ಮಾಡುತ್ತಾರೆ. ಎಲ್ಲರೂ ನನ್ನ ಬಗ್ಗೆ ಏನು ತಿಳಿದುಕೊಳ್ಳಬಹುದು ಮತ್ತು ಹೇಳಬಹುದು? ನಾನು ಕೇವಲ ಬಾಬಾರವರ ಆಜ್ಞೆಯನ್ನು ಪಾಲಿಸಿದೆ ಅಷ್ಟೆ.  ಇದು ಯಾರ ಕೋಣವೋ ಏನೋ ನಾನರಿಯೆ. ಈ ಕೋಣದ ಒಡೆಯನಿಗೇನಾದರೂ ವಿಷಯ ತಿಳಿದರೆ ಅವನು ನಾನೇ ಕೋಣವನ್ನು ಕೊಂದೆನೆಂದು ಆರೋಪಿಸುತ್ತಾನೆ. ಈ ಕೋಣದ ಒಡೆಯ ಕೋಣದ ಬದಲಿಗೆ ಹಣವನ್ನು ಕೇಳಿದರೆ ಏನು ಮಾಡುವುದು? ಅಥವಾ ಅವನೇನಾದರೂ ದೂರು ನೀಡಿದರೆ ಏನು ಗತಿ? ಅದರ ಫಲಿತಾಂಶ ಏನಾಗುತ್ತದೆಯೋ? ಬಾಬಾರವರು ಈ ಬ್ರಹ್ಮಾಂಡದ ಸೃಷ್ಠಿಕರ್ತರು. ನಾನು ಅವರ ಆಜ್ಞೆಯನ್ನು ಪಾಲಿಸಿದೆ ಅಷ್ಟೆ. ಹಾಗಾಗಿ, ವ್ಯತಿರಿಕ್ತ ಫಲಿತಾಂಶ ಏನಾದರೂ ಹೊರಬಂದಲ್ಲಿ ಅವರು ಖಂಡಿತವಾಗಿಯೂ ನನ್ನನ್ನು ಕ್ಷಮಿಸುತ್ತಾರೆ" ಎಂದು ಯೋಚಿಸುತ್ತಲೇ ತಮಗೆ ತಾವೇ ಸಮಾಧಾನ ಹೇಳಿಕೊಂಡರು. 

ಸ್ವಲ್ಪ ಸಮಯದ ಬಳಿಕ ಅವರು ಬಾಬಾರವರ ಬಳಿಗೆ ಹೋಗಿ ನಡೆದ ವಿಚಾರವನ್ನೆಲ್ಲಾ ಚಾಚೂ ತಪ್ಪದೆ ತಿಳಿಸಿದರು. ಆಗ ಬಾಬಾರವರು “ಆಯಿ ಹೆದರಬೇಡ. ಈಗ ಏನೂ ಕೆಟ್ಟದ್ದು ಆಗಿಯೇ ಇಲ್ಲ. ಏನು ಆಗಬೇಕಾಗಿತ್ತೋ ಅದೇ ಆಗಿದೆ ಅಷ್ಟೆ. ಆ ಕೋಣಕ್ಕೆ  ಅದೊಂದು ಆಸೆ (ವಾಸನೆ) ಉಳಿದುಕೊಂಡಿತ್ತು. ಆ ಆಸೆ ಪೂರ್ಣವಾದ ನಂತರ ಅದು ಬಿಡುಗಡೆ ಹೊಂದಿತು. ಅದು ಮುಂದೆ ಒಳ್ಳೆಯ ಜನ್ಮವನ್ನು ಪಡೆಯುತ್ತದೆ. ಈಗ ಹೆದರದೆ ಮನೆಗೆ ಹೋಗು. ಆ ಕೋಣವು ನಿಕೃಷ್ಟ ಜನ್ಮದಿಂದ ಬಿಡುಗಡೆ ಹೊಂದುವುದಕ್ಕೆ ನೀನು ಕಾರಣಕರ್ತಳಾದೆ ಎಂದು ದುಃಖಪಡಬೇಡ.  ಆ ಕೋಣವು ಮುಂದೆ ಉತ್ತಮ ಜನ್ಮ ಪಡೆಯುವುದಕ್ಕೆ ನೀನು ಅವಕಾಶ ಮಾಡಿಕೊಟ್ಟ ಮೇಲೆ ನೀನು ಏಕೆ ದುಃಖದಿಂದ ಇರಬೇಕು?” ಪ್ರಶ್ನಿಸಿದರು. ಈ ರೀತಿಯಲ್ಲಿ ಬಾಬಾರವರು ಆಕೆಯನ್ನು ಸಂತೈಸಿ ಮನೆಗೆ ಕಳುಹಿಸಿಕೊಟ್ಟರು. 

ಒಮ್ಮೆ ಪವಿತ್ರ ಪರ್ವಾನಿಯ ಪರ್ವ ಕಾಲದಲ್ಲಿ ಬಾಪು ಸಾಹೇಬ್ ಜೋಗ್ ಮತ್ತು ಅವರ ಪತ್ನಿಯವರಿಗೆ ಕೋಪರಗಾವ್ ನ ಬಳಿಯಿರುವ ಗಂಗೆಯಲ್ಲಿ ಸ್ನಾನ ಮಾಡುವ ಆಸೆಯಾಯಿತು. ಬಾಬಾರವರು ಗೋದಾವರಿಯನ್ನು ಗಂಗೆಯೆಂದು ಸಂಬೋಧಿಸುತ್ತಿದ್ದರು. ಹಾಗಾಗಿ ಎಲ್ಲಾ ಭಕ್ತರೂ ಹಾಗೆಯೇ ಕರೆಯುವ ವಾಡಿಕೆ ಇಟ್ಟುಕೊಂಡಿದ್ದರು. 

ಅಂತೆಯೇ ಜೋಗ್ ಬಾಬಾರವರ ಅಪ್ಪಣೆ ಪಡೆಯಲು ಹೋದಾಗ ಬಾಬಾರವರು  “ಬಾಪು ಸಾಹೇಬ್, ಬಘು ತ್ಯಾಚಾ ವಿಚಾರ್ ಉಧ್ಯಾ ಸಕಳಿ" (ಅಂದರೆ: ಬಾಪು ಸಾಹೇಬ್, ಅದರ ಬಗ್ಗೆ ನಾಳೆ ವಿಚಾರ ಮಾಡೋಣ) ಎಂದರು. ಅದಕ್ಕೆ ಉತ್ತರವಾಗಿ ಬಾಪುರವರು "ಬಾಬಾ, ನಾಳೆ ಬೆಳಿಗ್ಗೆ ಏಳು ಗಂಟೆಗೆ ಸಮಯ ಪ್ರಶಸ್ತವಾಗಿರುತ್ತದೆ.  ಹಾಗಾಗಿ, ನಾವು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಕೋಪರಗಾವ್ ಗೆ ನಡೆದು ಹೊರಟರೆ ಮಾತ್ರ ಏಳು ಗಂಟೆಗೆ ತಲುಪಲು ಸಾಧ್ಯವಾಗುತ್ತದೆ. ಆಗ ಮಾತ್ರ ಗಂಗೆಯಲ್ಲಿ ಮಿಂದು ಪವಿತ್ರ ಸ್ನಾನವನ್ನು ಮಾಡಲು ಸಾಧ್ಯವಾಗುತ್ತದೆ" ಎಂದು ನುಡಿದರು. ಆಗ ಬಾಬಾರವರು ಪುನಃ ಅದೇ ಮಾತನ್ನು ಪುನರುಚ್ಚರಿಸಿದರು. ಜೋಗ್ ಪರಿಪರಿಯಾಗಿ ಬಾಬಾರವರನ್ನು ಬೇಡಿಕೊಂಡರು. ಆದರೆ ಬಾಬಾರವರು "ನಾಳೆ ನೋಡೋಣ"ಎಂಬ ಒಂದೇ ಉತ್ತರವನ್ನು ಮತ್ತೆ ಮತ್ತೆ ಪುನರುಚ್ಚರಿಸಿದರು. ಆ ಪರ್ವ ಕಾಲವು ಜೀವನದಲ್ಲಿ ಒಂದೇ ಬಾರಿ ಬಂದಿತ್ತು. ಹಾಗಾಗಿ ಬಾಬಾರವರ ಉತ್ತರದಿಂದ ಜೋಗ್ ಮತ್ತು ಅವರ ಪತ್ನಿಯವರಿಗೆ ಬಹಳ ನಿರಾಶೆಯಾಯಿತು.  

ಬಾಪು ಸಾಹೇಬರು ಬಾಬಾರವರ ಅನನ್ಯ ಭಕ್ತರಾಗಿದ್ದ ಕಾರಣ ಬಾಬಾರವರ ಮಾತಿಗೆ ವಿರುದ್ಧವಾಗಿ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆ ರಾತ್ರಿಯೆಲ್ಲಾ ಬಾಪು ಸಾಹೇಬರು ನಿದ್ರೆಯಿಲ್ಲದೆ ಒದ್ದಾಡಿದರು. ಆ ರಾತ್ರಿ ಬಾಬಾರವರು ಚಾವಡಿಯಲ್ಲಿ ಮಲಗುವ ದಿನವಾಗಿತ್ತು. ಮಾರನೇ ದಿನ ಬೆಳಿಗ್ಗೆ ಎಂದಿನಂತೆ ಬಾಪು ಸಾಹೇಬರು ಬಾಬಾರವರಿಗೆ ಕಾಕಡಾ ಆರತಿಯನ್ನು ಸಲ್ಲಿಸಿ ಇತರ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದ್ದರು. ಆಗ ಶಿರಡಿ ಗ್ರಾಮದ ಜನರು ಓಡುತ್ತಾ ಇವರಿದ್ದೆಡೆಗೆ ಬಂದರು. ಅವರೆಲ್ಲರೂ ಶಿರಡಿಯ ಕೆರೆ-ಕಾಲುವೆಗಳು ಗಂಗೆಯಿಂದ ತುಂಬಿ ಹರಿಯುತ್ತಿವೆ ಎಂದು ಕೂಗಿಕೊಂಡು ಬರುತ್ತಿದ್ದರು. ಆಗ ಬಾಬಾರವರು ಜೋಗ್ ಕಡೆಗೆ ನೋಡುತ್ತಲೇ "ತು  ಸಗ್ಲಿ ರಾತ್  ಲೇಯೆ ಶಿವೆ ದಿಲೆಯಾಸ್, ಪನ್  ದೇವಾಚೆ ದಯಾ, ಗಂಗಾ ಅಪ್ಲಾಪಾಶಿ ಆಲೆ. ಜಾ ಅಥಾ ಅಂಗೋಲೆ ಕರೂನ್ ಕರೂನ್ ಘೇಯೆ”  (ಅಂದರೆ “ಇಡೀ ರಾತ್ರಿ ನೀನು ನನ್ನ ಮೇಲೆ ಬಯ್ಗುಳದ ಸುರಿಮಳೆಯನ್ನೇ ಸುರಿಸಿದೆ. ಆದರೆ ದೇವರ ದಯೆಯಿಂದ ಗಂಗಾ ಶಿರಡಿಗೆ ಆಗಮಿಸಿದೆ. ಈಗ ಹೋಗಿ ಗಂಗೆಯಲ್ಲಿ ಮಿಂದು ಬಾ") ಎಂದರು.  ಈ ರೀತಿಯಲ್ಲಿ ಬಾಪು ಸಾಹೇಬ್, ಅವರ ಪತ್ನಿ ಹಾಗೂ ಶಿರಡಿಯ ಗ್ರಾಮಸ್ಥರೆಲ್ಲರೂ ಪವಿತ್ರ ಗೋದಾವರಿ ನದಿಯಲ್ಲಿ ಸ್ನಾನ ಮಾಡಿದರು.

ಬಾಪು ಸಾಹೇಬರು ಪ್ರತಿದಿನ  ಬೆಳಿಗ್ಗೆ ಮತ್ತು ಮಧ್ಯಾನ್ಹ ಶಿರಡಿಯ ಕಾಲುವೆಯಲ್ಲಿ ಸ್ನಾನ ಮಾಡುವ ಪರಿಪಾಠ ಇಟ್ಟುಕೊಂಡಿದ್ದರು. ಬಾಪು ಸಾಹೇಬರ ಆನಂದವನ್ನು ನೋಡಿದ ಬಾಬಾರವರು "ಅರೇ ಬಾಪು ಸಾಹೇಬ್, ಈ ದೇವರು ಎಷ್ಟು ದಯಾಮಯ ನೋಡು. ಆದರೆ ನಾನು ಅವನಲ್ಲಿ ಸಂಪೂರ್ಣ ನಂಬಿಕೆಯನ್ನು ಇಟ್ಟುಕೊಳ್ಳುವುದಿಲ್ಲ. ಅಲ್ಲದೇ ನಮಗೆ "ತಾಳ್ಮೆ" ಸಹ ಇರುವುದಿಲ್ಲ" ಎಂದರು. ಸಬೂರಿ ಎಂದರೆ ಭಗವಂತನಲ್ಲಿ ಎಡಬಿಡದ ಕೇಂದ್ರೀಕೃತವಾದ ನಂಬಿಕೆ. 

ಬಾಪು ಸಾಹೇಬರು ಊಟ-ಉಪಹಾರದ ವಿಚಾರದಲ್ಲಿ ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸುತ್ತಿದ್ದರು ಹಾಗೂ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಅವರು ಏಕಾದಶಿಯಂದು ಹಾಗೂ ಇತರ ವಿಶೇಷ ಹಬ್ಬದ ದಿನಗಳಂದು ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸುತ್ತಿದ್ದರು. ಆ ದಿನಗಳಂದು ಅವರು ಈರುಳ್ಳಿಯನ್ನು ಮುಟ್ಟುತ್ತಿರಲಿಲ್ಲ. ಬಾಬಾರವರು ಕೂಡ ಇದನ್ನು ಗೌರವಿಸುತ್ತಿದ್ದರು ಹಾಗೂ ಆ ದಿನಗಳಂದು ಈರುಳ್ಳಿಯನ್ನು ತಿನ್ನುವಂತೆ ಬಲವಂತ ಮಾಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಬಾಬಾರವರು ಬಾಪು ಸಾಹೇಬರನ್ನು ಮಧ್ಯಾನ್ಹದ ಊಟಕ್ಕೆ ಮನೆಗೆ ಹೋಗುವಂತೆ ಕಳುಹಿಸುತ್ತಿದ್ದರು. ಕೆಲವೊಮ್ಮೆ ಯಾರಾದರೂ ಭಕ್ತರೊಂದಿಗೆ ಮನೆಗೆ ಹೋಗುವಂತೆ ಹೇಳಿ ಕಳುಹಿಸುತ್ತಿದ್ದರು. ಯಾರಾದರೂ ಭಕ್ತರು ಬಾಬಾರವರಿಗೆ ಸಿಹಿತಿಂಡಿ ಅಥವಾ ಹಣ್ಣುಗಳನ್ನು ಅರ್ಪಿಸಿದರೆ ಬಾಬಾರವರು ಇಡೀ ಬುಟ್ಟಿ ಅಥವಾ ಪೆಟ್ಟಿಗೆಯನ್ನು ಬಾಪು ಸಾಹೇಬರಿಗೆ ಕೊಟ್ಟುಬಿಡುತ್ತಿದ್ದರು. 

ಬಾಪು ಸಾಹೇಬ್ ರವರ ತಾಯಿ ಶಿರಡಿ ಗ್ರಾಮದಲ್ಲಿ ಮೃತರಾದರು. ಹಾಗಾಗಿ ಅವರು ತಮ್ಮ ತಾಯಿಯವರ ಉತ್ತರ ಕ್ರಿಯೆಗಳನ್ನು ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಾಡಬೇಕೆಂದು ಅಂದುಕೊಂಡಿದ್ದರು. ಅದರ ಅಂಗವಾಗಿ ಅವರು ನಾಸಿಕ್ ಗೆ ಹೋಗಬೇಕೆಂದು ನಿರ್ಧರಿಸಿದ್ದರು. ಏಕೆಂದರೆ ಶಿರಡಿಯಲ್ಲಿ ಅವರ ಪಂಗಡಕ್ಕೆ ಸೇರಿದ ಬ್ರಾಹ್ಮಣರಾರೂ ಇರಲಿಲ್ಲ. ಅಂತೆಯೇ ವೈದಿಕವನ್ನು ಆಚರಿಸಲು ನಿರ್ಧರಿಸಿದ್ದ ದಿನಕ್ಕೆ ಬ್ರಾಹ್ಮಣರನ್ನು ಗೊತ್ತು ಮಾಡಿಕೊಂಡು ಬರುವ ಸಲುವಾಗಿ ನಾಸಿಕ್ ಗೆ ತೆರಳುವ ಮೊದಲು ಬಾಬಾರವರ ಒಪ್ಪಿಗೆ ಪಡೆಯಲು ಹೋಗಿದ್ದರು. ಆದರೆ ಬಾಬಾರವರು ಒಪ್ಪಿಗೆ ನೀಡದೆ ಮುಂದೆ ನೋಡೋಣ ಎಂದು ಹೇಳುತ್ತಲೇ ಬಂದರು. ಒಂದು ದಿನ ತೀವ್ರ ಹತಾಶರಾದ ಬಾಪು ಸಾಹೇಬರು ಬಾಬಾರವರಿಗೆ "ಏನಾದರೂ ಅಗಲಿ. ನಾನು ಇಂದು ಹೋಗಿಯೇ ತೀರುತ್ತೇನೆ.ನನ್ನ ಪಂಗಡಕ್ಕೆ ಸೇರಿರುವ ಯಾವ ಬ್ರಾಹ್ಮಣರು ಶಿರಡಿಯಲ್ಲಿ ಇಲ್ಲ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಬಾಬಾರವರು "ಈ ದಿನ ಸಾಯಂಕಾಲ ಇದರ ಬಗ್ಗೆ ತೀರ್ಮಾನ ಮಾಡೋಣ” ಎಂದು ನುಡಿದರು.

ಬಾಬಾರವರು ಹಾಗೆ ಹೇಳಿ ಇನ್ನೂ ಒಂದು ಗಂಟೆಯೂ ಆಗಿರಲಿಲ್ಲ. ಆಗ ಬಾಪು ಸಾಹೇಬರ ಪಂಗಡಕ್ಕೆ ಸೇರಿದ್ದ ಹಾಗೂ ಬಹಳ ವಿದ್ವಾಂಸರಾಗಿದ್ದ ಬ್ರಾಹ್ಮಣರೊಬ್ಬರು ಬಾಬಾರವರ  ದರ್ಶನಕ್ಕೆಂದು ಶಿರಡಿಗೆ ಆಗಮಿಸಿದರು. ನಂತರ ಅವರು ಜೋಗ್ ರವರ ತಾಯಿಯ ಉತ್ತರ ಕ್ರಿಯಾದಿ ಕರ್ಮಗಳನ್ನು ಜೋಗ್ ರವರಿಗೆ ಇಷ್ಟವಾಗುವಂತೆ ನೆರವೇರಿಸಿದರು. ಹಾಗಾಗಿ, ಜೋಗ್ ನಾಸಿಕ್ ಗೆ ಹೋಗುವ ಪ್ರಮೇಯವೇ ಬರಲಿಲ್ಲ. ಜೋಗ್ ಆ ರೀತಿ ಒಪ್ಪಿಗೆಯನ್ನು ಕೇಳುವ ಸಮಯದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸಹ ಅಲ್ಲಿಯೇ ಇದ್ದರು. ಕಾಕಾರವರು ಬಾಬಾರವರಿಗೆ "ಬಾಬಾ, ನಾನು, ನೀವು ಹಾಗೂ ಬಾಪು ಸಾಹೇಬ ಮೂವರು ಸೇರಿ ನಾಸಿಕ್ ಗೆ ತೆರಳೋಣ. ನಾಸಿಕ್ ನಲ್ಲಿ ಜೋಗ್ ನನ್ನು ಬಿಟ್ಟು ನಾನು ಮತ್ತು ನೀವು ಮುಂಬೈಗೆ ಹೋಗೋಣ" ಎಂದು ಹೇಳಿದರು. ಅದಕ್ಕೆ ಉತ್ತರವಾಗಿ ಬಾಬಾರವರು “ಮೀ ಕಡಿ ಕೊನ್ನಾಲಾ ಸೂಡನಾರ್ ಮನುಷ್ ನಾಹಿ" (ಅಂದರೆ ನಾನು  ಯಾರನ್ನೂ ನಡು ನೀರಿನಲ್ಲಿ ಕೈಬಿಡುವುದಿಲ್ಲ. ನಾನು ಆ ತರಹ ವ್ಯಕ್ತಿಯಲ್ಲ). ಈ ರೀತಿ ಬಾಬಾರವರು ಒಂದು ಸಾಧಾರಣ ಸಂಭಾಷಣೆಗೆ ಅಸಾಧಾರಣ ಅರ್ಥವನ್ನು ತಮ್ಮದೇ ಧಾಟಿಯಲ್ಲಿ ನೀಡಿದ್ದರು. 

ಒಮ್ಮೆ ಬಾಪು ಸಾಹೇಬರು ಬಾಬಾರವರಿಗೆ ತಮಗೆ ಯಾವಾಗ ಸನ್ಯಾಸ ನೀಡುವಿರಿ ಎಂದು ಪ್ರಶ್ನಿಸಿದ್ದರು. ಅದಕ್ಕೆ ಬಾಬಾರವರು “ಈ ಪ್ರಾಪಂಚಿಕ ಜವಾಬ್ದಾರಿಯಿಂದ ನೀನು ಮುಕ್ತನಾದ ದಿನವೇ ನೀಡುವೆ" ಎಂದು ಉತ್ತರಿಸಿದ್ದರು. ಅವರ ತಾಯಿಯವರು ಕಾಲವಾದ ನಂತರ ಬಾಪು ಸಾಹೇಬರು ಜವಾಬ್ದಾರಿಯಿಂದ ಮುಕ್ತರಾದರು. ನಂತರ ಬಾಬಾರವರ ಸಮಾಧಿಯಾಗಿ ಹಲವು ವರ್ಷಗಳ ಕಾಲ ಶಿರಡಿಯಲ್ಲೇ ನೆಲೆಸಿ ಬಾಬಾರವರ  ಸಮಾಧಿಯನ್ನು ನೋಡಿಕೊಳ್ಳುತ್ತಿದ್ದರು. 

ಕಾಕಾ ಸಾಹೇಬ್ ದೀಕ್ಷಿತರ ಮರಣದ ನಂತರ  ಇತರ ಹಲವಾರು ಭಕ್ತರು ಶಿರಡಿಯನ್ನು ತೊರೆದು ಬೇರೆ ಊರುಗಳಿಗೆ ತೆರಳಿದರು. ಯಾರೂ ಇಲ್ಲದೇ ಒಂಟಿತನ ಕಾಡತೊಡಗಿದ್ದರಿಂದ  ಬಾಪು ಸಾಹೇಬರು ಸಾಕೂರಿ ಆಶ್ರಮಕ್ಕೆ ತೆರಳಲು ನಿರ್ಧರಿಸಿದರು. ಅಲ್ಲಿ ಅವರು ಕಫ್ನಿಯನ್ನು ಧರಿಸಿ ಸನ್ಯಾಸವನ್ನು ಸ್ವೀಕರಿಸಿದರು. ಅವರು ಸಾಕೂರಿಗೆ ತೆರಳಲು ನಿರ್ಧರಿಸಿದ್ದು ಇಂದಿಗೂ ಒಂದು ಕಗ್ಗಂಟಾಗಿ ಉಳಿದ ಪ್ರಶ್ನೆಯಾಗಿದೆ. ಏಕೆಂದರೆ ಇವರು ಹಾಗೂ ಬಾಬಾರವರ ಇನ್ನೊಬ್ಬ ಭಕ್ತರಾದ ಉಪಾಸನಿ ಬಾಬಾರವರಿಗೆ ಮಧುರ ಬಾಂಧವ್ಯ ಇರಲಿಲ್ಲ. ಒಮ್ಮೆ ಇವರು ಉಪಾಸನಿಯವರನ್ನು ದರದರನೆ ಎಳೆದುಕೊಂಡು ದ್ವಾರಕಾಮಾಯಿಗೆ ಕರೆದುತಂದು ಬಾಬಾರವರ ಮುಂದೆ ನಿಲ್ಲಿಸಿ ತಮ್ಮಿಬ್ಬರ ಜಗಳದ ವಿಷಯವನ್ನು ಅವರಿಗೆ ತಿಳಿಸಿ ನ್ಯಾಯ ಪಂಚಾಯಿತಿ ಮಾಡುವಂತೆ ಕೇಳಿಕೊಂಡಿದ್ದರು. ಆದಾಗ್ಯೂ ಸಾಕೂರಿಯಲ್ಲಿ ಅವರು ಬಾಬಾರವರಿಗೆ ಮಾಡುತ್ತಿದ್ದಂತೆಯೇ ಉಪಾಸನಿ ಬಾಬಾರವರಿಗೆ ಸೇವೆ ಸಲ್ಲಿಸುತ್ತಿದ್ದರು. 

ತಾಯಿಯವರು ಭಕ್ತಿಯ ಸಾಕಾರ ಮೂರ್ತಿಯಾಗಿದ್ದರು. ಆಕೆ ಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಬಾಬಾರವರ ಮೇಲೇ ಅವರಿಗೆ ಪ್ರೀತಿ ಹಾಗೂ ಭಕ್ತಿ ಎಷ್ಟಿತ್ತೆಂದರೆ ಬಾಬಾರವರು ಮಹಾಸಮಾಧಿಯಾದ ನಂತರ ತಮ್ಮ ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಶಿರಡಿಯ ಬೀದಿ ಬೀದಿಗಳಲ್ಲಿ ಗೊತ್ತು ಗುರಿ ಇಲ್ಲದೇ ತಮ್ಮ ಗುರುವನ್ನು ಹುಡುಕಿಕೊಂಡು ಅಲೆದಾಡುತ್ತಿದ್ದರು. ಆಕೆಯ ಮುಖದಲ್ಲಿ ಶೂನ್ಯ ತುಂಬಿತ್ತು. ಅವರಿಗೆ ತಮ್ಮ ಸುತ್ತಮುತ್ತಲಿನ ಪರಿವೆಯೇ ಇರಲಿಲ್ಲ.  ಅಂತೆಯೇ ಬಾಬಾರವರ ಮಹಾ ನಿರ್ಯಾಣದ ಎರಡು ತಿಂಗಳಿನಲ್ಲೇ ಆಕೆಯೂ ತೀರಿಕೊಂಡರು. 

ಈ ಘಟನೆಯು ಬಾಪು ಸಾಹೇಬರು ಸಮಾಧಿಯಾಗುವುದಕ್ಕೆ ಕೇವಲ ಆರು ತಿಂಗಳಿಗೆ ಮುಂಚೆ ನಡೆದಿತ್ತು. ಕಾಕಾ ಸಾಹೇಬ್ ದೀಕ್ಷಿತರು 1848 (1926) ನೇ ಇಸವಿಯ ಜ್ಯೇಷ್ಠ ಮಾಸದ ಏಕಾದಶಿಯಂದು ಸಮಾಧಿ ಹೊಂದಿದರು. ಬಾಪು ಸಾಹೇಬರು ಇದಾದ ನಂತರ ಆರು ತಿಂಗಳಿಗೆ ಸರಿಯಾಗಿ ಸಮಾಧಿ ಹೊಂದಿದರು. ಇದರ ಬಗ್ಗೆ ಒಬ್ಬ ಭಕ್ತನಿಗೆ ಒಂದು ವಿಶೇಷ ಕನಸು ಬಿತ್ತು. ಆ ಕನಸಿನಲ್ಲಿ ಭಕ್ತರ ಗುಂಪಿನಲ್ಲಿ ಬಾಬಾರವರ ಮುಂದೆ ಕುಳಿತುಕೊಂಡಿದ್ದರು.  ಹಾಗೆ ಕುಳಿತಿದ್ದ ಎಲ್ಲಾ ಭಕ್ತರು ಕಣ್ಣು ಬಿಟ್ಟುಕೊಂಡು ಕುಳಿತಿದ್ದರು. ಅವರ ಪಕ್ಕದಲ್ಲಿ ಕಾಕಾ ಸಾಹೇಬ್ ದೀಕ್ಷಿತರು ಸಹ ಕುಳಿತಿದ್ದರು. ಆದರೆ ಅವರು ಧ್ಯಾನ ಮಾಡುತ್ತಿರುವವರಂತೆ  ಕಣ್ಣು ಮುಚ್ಚಿಕೊಂಡು ಕುಳಿತಿದ್ದರು. ಕಾಕಾರವರ ಪಕ್ಕದ ಜಾಗ ಖಾಲಿಯಿತ್ತು. ಹಾಗಾಗಿ ಆ ಭಕ್ತನು ತನ್ನ ಕನಸಿನಲ್ಲಿಯೇ ಬಾಬಾರವರಿಗೆ ಕಾಕಾರವರ ಪಕ್ಕದ ಜಾಗ ಏಕೆ ಖಾಲಿಯಾಗಿದೆ ಎಂದು ಪ್ರಶ್ನಿಸಿದನು. ಅಲ್ಲದೇ ಕಾಕಾರವರು ಏಕೆ ತಮ್ಮ ಕಣ್ಣನ್ನು ಮುಚ್ಚುಕೊಂಡಿದ್ದಾರೆ ಎಂದೂ ಸಹ ವಿಚಾರಿಸಿದನು. ಅದಕ್ಕೆ ಬಾಬಾರವರು “ದೀಕ್ಷಿತರು ಈಗಷ್ಟೇ ಬಂದಿರುವುದಾಗಿಯೂ ಹಾಗೂ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಇನ್ನು ಆರು ತಿಂಗಳ ನಂತರ ಮತ್ತೊಬ್ಬ ಭಕ್ತರು ಬಂದು ಕುಳಿತುಕೊಳ್ಳುವರೆಂದು ತಿಳಿಸಿದರು. ಈ ರೀತಿಯಲ್ಲಿ ಬಾಬಾರವರು ಬಾಪು ಸಾಹೇಬ್ ಜೋಗ್ ರವರ ಮರಣದ ಮುನ್ಸೂಚನೆಯನ್ನು ನೀಡಿದ್ದರು.

ಬಾಪು ಸಾಹೇಬ್ ಜೋಗ್ ರವರು ಸನ್ಯಾಸಿಯಾಗಿ ತೀರಿಕೊಂಡಿದ್ದರಿಂದ ಅವರ ಸಮಾಧಿಯನ್ನು ಸಾಕೂರಿ ಆಶ್ರಮದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ಮಾಡಲಾಗಿರುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, September 18, 2014

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಆಚರಣೆ- ಪತ್ರಿಕಾ ಪ್ರಕಟಣೆ - ಕೃಪೆ:ಸಾಯಿಅಮೃತಧಾರಾ.ಕಾಂ

 ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಮುಂದಿನ ತಿಂಗಳ 2ನೇ ಅಕ್ಟೋಬರ್ 2014, ಗುರುವಾರದಿಂದ 4ನೇ ಅಕ್ಟೋಬರ್ 2014, ಶನಿವಾರದವರೆಗೆ  ಶ್ರೀ ಸಾಯಿಬಾಬಾರವರ 96ನೇ  ಪುಣ್ಯತಿಥಿ ಉತ್ಸವವನ್ನು ಹಮ್ಮಿಕೊಳ್ಳುತ್ತಿದೆ. ಅದರ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 



ಎಲ್ಲಾ  ಸಾಯಿ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು  ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಈ ಮೂಲಕ ವಿನಂತಿ ಮಾಡಿದ್ದಾರೆ.

ಶ್ರೀ ಸಾಯಿಬಾಬಾರವರ ಮಹಾಸಮಾಧಿ ಉತ್ಸವವಿರುವ ಕಾರಣ 12ನೇ ಅಕ್ಟೋಬರ್ 2014, ಗುರುವಾರದಿಂದ 4ನೇ ಅಕ್ಟೋಬರ್ 2014, ಶನಿವಾರದವರೆಗೆ ಯಾವುದೇ ವಿಐಪಿ ದರ್ಶನ/ಆರತಿ ದರ್ಶನ ಪಾಸ್ ಗಳನ್ನು ನೀಡಲಾಗುವುದಿಲ್ಲ.  ಅಲ್ಲದೇ, ಶ್ರೀ ಸಾಯಿ ಸತ್ಯನಾರಾಯಣ ವ್ರತ ಹಾಗೂ ಅಭಿಷೇಕ ಪೂಜೆಗಳ ಸೇವಾ ಚೀಟಿಗಳನ್ನು ಸಹ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಾಯಿ ಭಕ್ತರು ಶ್ರೀ ಸಾಯಿಬಾಬಾ ಸಂಸ್ಥಾನದ ಆಡಳಿತ ಕಚೇರಿಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.

ಕಾರ್ಯಕ್ರಮದ ವಿವರಗಳು: 

02-10-2014; ಗುರುವಾರ - ಮೊದಲ ದಿನ 

ಬೆಳಿಗ್ಗೆ: 

4.30 : ಕಾಕಡಾ ಆರತಿ 
5.00 : ಶ್ರೀ ಸಾಯಿಬಾಬಾರವರ  ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ  ಮೆರವಣಿಗೆ. 
5.15 : ದ್ವಾರಕಾಮಾಯಿಯಲ್ಲಿ  ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣದ ಪ್ರಾರಂಭ 
5.20 : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ.  

ಮಧ್ಯಾನ್ಹ: 

12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ. 

ಸಾಯಂಕಾಲ: 

4.00 -6.00 :  ಸಮಾಧಿ ಮಂದಿರದ ಹಿಂಭಾಗದ ವೇದಿಕೆಯ ಮೇಲೆ ಕೀರ್ತನೆಯ ಆರಂಭ. 
6.15          :  ಧೂಪಾರತಿ. 

ರಾತ್ರಿ:
7.30-10.30 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
9.15           : ಶಿರಡಿ ಗ್ರಾಮದ ಸುತ್ತಾ ಬಾಬಾರವರ ಪಲ್ಲಕ್ಕಿ ಉತ್ಸವದ ಮೆರವಣಿಗೆ. 
10.30         : ಶೇಜಾರತಿ 

ಅಖಂಡ ಪಾರಾಯಣದ ಅಂಗವಾಗಿ ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗುತ್ತದೆ. 

3-10-2014; ಶುಕ್ರವಾರ  (ಮುಖ್ಯ ದಿವಸ) - ಎರಡನೇ ದಿನ 

ಬೆಳಿಗ್ಗೆ: 

4.30    : ಕಾಕಡಾ ಆರತಿ 
5.00    : ದ್ವಾರಕಾಮಾಯಿಯಲ್ಲಿ ಅಖಂಡ ಪಾರಾಯಣದ ಸಮಾಪ್ತಿ. ಶ್ರೀ ಸಾಯಿಬಾಬಾರವರ  ಭಾವಚಿತ್ರ ಹಾಗೂ                 ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ  ಮೆರವಣಿಗೆ.
5.15    : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ. 
9.00    : "ಭಿಕ್ಷಾ ಜೋಳಿ" ಕಾರ್ಯಕ್ರಮ. 
10.00  : ಕೀರ್ತನೆ ಕಾರ್ಯಕ್ರಮ. 
10.30  : ಆರಾಧನಾ ವಿಧಿ ವಿಧಾನಗಳು ಹಾಗೂ ಪೂಜೆ. 

ಮಧ್ಯಾನ್ಹ: 

12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ. 

ಸಾಯಂಕಾಲ: 

5.00      : ಮೆರವಣಿಗೆ ಹಾಗೂ ಖಂಡೋಬ ಮಂದಿರದ ಬಳಿ ಸೀಮೋಲ್ಲಂಘನ ಕಾರ್ಯಕ್ರಮ. 
6.15      : ಧೂಪಾರತಿ  

ರಾತ್ರಿ: 

7.30-10.0: ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
9.15           : ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವ.  

ಮುಖ್ಯ ದಿವಸವಾದ ಕಾರಣ , ಸಮಾಧಿ ಮಂದಿರ ರಾತ್ರಿಯಿಡಿ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ರಾತ್ರಿ 11.00 ರಿಂದ ಮಾರನೇ ದಿನ ಬೆಳಗಿನ ಜಾವ 5.00 ರವರೆಗೆ  ಸಮಾಧಿ ಮಂದಿರದ ಹಿಂಭಾಗದ ವೇದಿಕೆಯ ಮೇಲೆ ಹಲವಾರು ಸಾಯಿ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. 

4-10-2014; ಶನಿವಾರ  ( ಕೊನೆಯ ದಿವಸ) - ಮೂರನೇ ದಿನ 

ಬೆಳಿಗ್ಗೆ: 

5.05      : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ. 
6.45      : ಗುರುಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ.  
10:00    : ಗೋಪಾಲ ಕಾಲ ಮತ್ತು ದಹಿ ಹಂಡಿ ಕಾರ್ಯಕ್ರಮ. 

ಮಧ್ಯಾನ್ಹ: 

12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ. 

ಸಾಯಂಕಾಲ: 

6.15 : ಧೂಪಾರತಿ

ರಾತ್ರಿ: 

7.30 -10.00 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
10.30          : ಶೇಜಾರತಿ. 

ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ  ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ರಹತಾದ ವೀರಭದ್ರ ಮಂದಿರ - ಕೃಪೆ: ಸಾಯಿಅಮೃತಧಾರಾ. ಕಾಂ

ಈ ಸುಪ್ರಸಿದ್ಧ ವೀರಭದ್ರ ಮಂದಿರವು ಶಿರಡಿಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿರುವ ರಹತಾ ಗ್ರಾಮದಲ್ಲಿದೆ.



ಶ್ರೀ ಸಾಯಿ ಸಚ್ಚರಿತ್ರೆಯ 5ನೇ ಅಧ್ಯಾಯದಲ್ಲಿ ಈ ಮಂದಿರದ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಲಾಗಿದ್ದು ಅದು ಈ ರೀತಿಯಿದೆ: ಒಮ್ಮೆ ಅಹಮದ್ ನಗರದಿಂದ ಜವಾಹರ ಆಲಿ ಎಂಬ ಫಕೀರನು ತನ್ನ ಶಿಷ್ಯರೊಂದಿಗೆ ರಹತಾಕ್ಕೆ ಬಂದು ಈ ವೀರಭದ್ರ ಮಂದಿರದ ಪಕ್ಕದಲ್ಲಿದ್ದ ದೊಡ್ಡ ಕೊಠಡಿಯಲ್ಲಿ ಬಿಡಾರ ಹೂಡಿದನು. ಆ ಫಕೀರನು ಒಳ್ಳೆಯ ವಿದ್ವಾಂಸನಾಗಿದ್ದು ತನ್ನ ಮಧುರವಾದ ಕಂಠದಿಂದ ಕುರಾನ್ ಅನ್ನು ಕಂಠಪಾಠ  ಮಾಡಿದ ಹಾಗೆ ಹೇಳುತ್ತಿದ್ದನು. ಹಾಗಾಗಿ ಆ ಗ್ರಾಮದ ಅನೇಕ ವಿದ್ವಾಂಸರು ಹಾಗೂ ಜನರು ಅವನ ಬಳಿಗೆ ಬರುತ್ತಿದ್ದರು ಹಾಗೂ ಅವನನ್ನು ಗೌರವದಿಂದ ಕಾಣುತ್ತಿದ್ದರು. ಅಂತಹ ಜನರ ಸಹಾಯದಿಂದ ಇದೇ ವೀರಭದ್ರ ಮಂದಿರದ ಎದುರುಗಡೆಯಲ್ಲಿ ಈದ್ಗಾ (ಮುಸ್ಲಿಮರು ಎದುರಿನಲ್ಲಿ ಕುಳಿತು ಪ್ರಾರ್ಥನೆ ಮಾಡುವ ಗೋಡೆ) ಕಟ್ಟಿಸಲು ಬಹಳ ಪ್ರಯತ್ನಪಟ್ಟನು. ಈ ವಿಷಯದಲ್ಲಿ ಕೆಲವರೊಡನೆ ಮನಸ್ತಾಪವಾದ ಕಾರಣ ಅವನು ರಹತಾವನ್ನು ಬಿಟ್ಟು ಶಿರಡಿಗೆ ಹೋಗಿ ನೆಲೆಸಬೇಕಾಯಿತು. ಅಂತೆಯೇ ಆ ಫಕೀರನು ಶಿರಡಿಗೆ ಬಂದು ಬಾಬಾರವರೊಂದಿಗೆ ಮಸೀದಿಯಲ್ಲಿ ವಾಸಿಸಲು ಪ್ರಾರಂಭಿಸಿದನು. ಫಕೀರನ ಸಿಹಿ ನುಡಿಗಳಿಗೆ ಗ್ರಾಮದ ಹಲವು ಜನರು ಮಾರು ಹೋದರು. ಆ ಫಕೀರನು ಬಾಬಾರವರನ್ನು ತನ್ನ ಶಿಷ್ಯನೆಂದು ಭಾವಿಸಿದನು. ಬಾಬಾ ಇದಕ್ಕೆ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ. ಅಲ್ಲದೇ ಆ ಫಕೀರನ ಶಿಷ್ಯನಾಗಲು ಸಂತೋಷದಿಂದ ಒಪ್ಪಿಕೊಂಡು ಅವನ ಚೇಲಾನಂತೆ ವರ್ತಿಸುತ್ತಿದ್ದರು. ಕೆಲವು ದಿನಗಳ ನಂತರ ಗುರು ಮತ್ತು ಶಿಷ್ಯರಿಬ್ಬರೂ ರಹತಾಕ್ಕೆ ಹೋಗಿ ನೆಲೆಸಬೇಕೆಂದು ತೀರ್ಮಾನಿಸಿದರು. ಗುರುವಿಗೆ ತನ್ನ ಶಿಷ್ಯನ ಯೋಗ್ಯತೆ ತಿಳಿದಿರಲಿಲ್ಲ. ಆದರೆ ಶಿಷ್ಯನಿಗೆ ಮಾತ್ರ ಗುರುವಿನ ಚೆನ್ನಾಗಿ ತಿಳಿದಿತ್ತು. ಆದರೂ ಶಿಷ್ಯನು ಆ ಫಕೀರನನ್ನು ಕೀಳಾಗಿ ಕಾಣದೆ ತನ್ನ ಗುರುವಿನ ಎಲ್ಲಾ ಕೆಲಸಗಳನ್ನು ಜಾಗರೂಕತೆಯಿಂದ ಗಮನಿಸುತ್ತಾ ಅವನು ಹೇಳುವ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದನು. ಅವರಿಬ್ಬರೂ ಆಗಾಗ್ಗೆ ಶಿರಡಿಗೆ ಬಂದು ಹೋಗುತ್ತಿದ್ದರು. ಆದರೆ ಅವರ ಮುಖ್ಯ ವಾಸಸ್ಥಾನ ರಹತಾ ಆಗಿತ್ತು. ಶಿರಡಿಯ ಬಾಬಾರವರ ಭಕ್ತರಿಗೆ ಇದು ಸಮ್ಮತವಾಗಿರಲಿಲ್ಲ. ಆದ್ದರಿಂದ ಬಾಬಾರವರನ್ನು ಶಿರಡಿಗೆ ವಾಪಸ್ ಕರೆತರುವ ಸಲುವಾಗಿ ಅವರೆಲ್ಲರೂ ಗುಂಪು ಕಟ್ಟಿಕೊಂಡು ಹೋಗಿ ಬಾಬಾರವರು ಇರುವಲ್ಲಿಗೆ ಹೊರಟರು. ಬಾಬಾರವರು ಅವರೆಲ್ಲರನ್ನೂ ಇದ್ಗಾ ಬಳಿ ಸಂದರ್ಶಿಸಿದಾಗ ಅವರು "ನನ್ನ ಫಕೀರನು ಬಹಳ ಕೋಪಿಷ್ಠ. ಅವನು ಬರುವುದರೊಳಗಾಗಿ ಶಿರಡಿಗೆ  ಹಿಂತಿರುಗಿ" ಎಂದು ಬುದ್ಧಿ ಹೇಳಿದರು. ಅವರುಗಳು ಹಾಗೆ ಮಾತನಾಡುವುದರೊಳಗಾಗಿ ಆ ಫಕೀರನು ಅಲ್ಲಿಗೇ ಬಂದನು. ನಂತರ ಅವರಿಗೆ ಹಾಗೂ ಆ ಫಕೇರನಿಗೆ ಬಹಳವೇ ಮಾತುಕತೆಗಳಾದವು. ಕೊನೆಗೆ ಗುರು ಮತ್ತು ಶಿಷ್ಯರಿಬ್ಬರೂ ಶಿರಡಿಗೆ ಹಿಂತಿರುಗಬೇಕೆಂದು ತೀರ್ಮಾನವಾಯಿತು. ಅಂತೆಯೇ ಅವರಿಬ್ಬರೂ ಶಿರಡಿಗೆ ಹಿಂತಿರುಗಿದರು. ಕೆಲವು ದಿನಗಳ ನಂತರ ಶಿರಡಿಯ ದೇವಿದಾಸ ಎಂಬುವರಿಂದ  ಆ ಫಕೀರನು ಸೋಲಿಸಲ್ಪಟ್ಟು ಶಿರಡಿಯನ್ನು ಬಿಟ್ಟು ಓಡಿ ಹೋಗಿ ಬಿಜಾಪುರದಲ್ಲಿ ನೆಲೆಸಿದನು. ಮತ್ತೆ ಕೆಲವು ವರ್ಷಗಳ ನಂತರ ಶಿರಡಿಗೆ ವಾಪಸ್ ಬಂದು ಬಾಬಾರವರ ಮುಂದೆ ತಲೆಬಾಗಿ ಅವರ ಧ್ಯಾನವನ್ನು ಮಾಡತೊಡಗಿದನು. "ನಾನು ಗುರು, ಬಾಬಾರವರು ನನ್ನ ಶಿಷ್ಯ" ಎಂಬ ದುರಭಿಮಾನವು ಆ ಫಕೀರನನ್ನು ಬಿಟ್ಟು ಓಡಿತ್ತು. ಅವನು ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಕೊಂಡನು. ಬಾಬಾರವರು ಸಹ ಅವನನ್ನು ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಸತ್ಕರಿಸಿದರು.  ಈ ಕಥೆಯಲ್ಲಿ ಬಾಬಾರವರು ಮನುಷ್ಯನು ಹೇಗೆ ತನ್ನ ಅಹಂಕಾರವನ್ನು ತೊರೆಯಬಹುದೆಂದು ನಿದರ್ಶಿಸಿದ್ದಾರೆ. ಈ ಕಥೆಯು ಬಾಬಾರವರ ಪರಮ ಭಕ್ತ ಮಹಾಳಸಾಪತಿಯವರಿಂದ ತಿಳಿದುಬಂಡಿರುತ್ತದೆ. 

ಮಂದಿರದ ವಿಳಾಸ: 

ಶ್ರೀ ವೀರಭದ್ರ ಮಂದಿರ  
ರಹತಾ ಗ್ರಾಮ-423 107, 
ಅಹಮದ್ ನಗರ ಜಿಲ್ಲೆ,  
ಮಹಾರಾಷ್ಟ್ರ, ಭಾರತ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, September 17, 2014

ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ಥೀಮ್ ಹಾಗೂ ಮಕ್ಕಳ ಮನರಂಜನೆಯ ಪಾರ್ಕ್ - ಸಾಯಿ ಹೆರಿಟೇಜ್ ವಿಲೇಜ್ - ಕೃಪೆ: ಸಾಯಿಅಮೃತಧಾರಾ.ಕಾಂ

ಸಾಯಿ ಹೆರಿಟೇಜ್ ವಿಲೇಜ್ ಶಿರಡಿ ಸಮೀಪದಲ್ಲಿರುವ ಪ್ರಪ್ರಥಮ  ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ಥೀಮ್ ಹಾಗೂ ಮಕ್ಕಳ ಮನರಂಜನೆಯ ಪಾರ್ಕ್ ಆಗಿರುತ್ತದೆ. ಈ ಥೀಮ್ ಪಾರ್ಕ್ ನ ಉದ್ಘಾಟನೆಯನ್ನು ಜುಲೈ 2014 ರಲ್ಲಿ ಮಾಡಲಾಗಿದ್ದು ಇಲ್ಲಿಗೆ ಭೇಟಿ ನೀಡುವ ಯಾತ್ರಿಕರಿಗೆ ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿ ನಡೆದ ಘಟನಾವಳಿಗಳನ್ನು ನೆನಪು ಮಾಡಿಕೊಳ್ಳುವಂತೆ ಮಾಡುವುದಷ್ಟೇ ಅಲ್ಲದೇ ಇಲ್ಲಿನ ಸುಂದರವಾದ ನೈಸರ್ಗಿಕ ಪರಿಸರ, ಮಕ್ಕಳ ಮನರಂಜನೆಯ ಕ್ರೀಡೆಗಳು ಮನಸ್ಸಿಗೆ ಮುದ ನೀಡುತ್ತವೆ. 


ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿದ್ದ ಶ್ರೀ ಸಾಯಿಬಾಬಾರವರ ಹಾಗೂ ಶಿರಡಿ ಗ್ರಾಮಸ್ಥರ ಜೀವನ ಶೈಲಿಯನ್ನು ಈ ಶಿರಡಿ ಹೆರಿಟೇಜ್ ವಿಲೇಜ್ ಪ್ರತಿಬಿಂಬಿಸುತ್ತದೆ. ಹಾಗಾಗಿ ಈ ಸ್ಥಳವು ವಿಶಿಷ್ಟವೆಂದೇ ಹೇಳಬಹುದು.  ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿ ನಡೆದ ಪ್ರಮುಖ ಘಟನಾವಳಿಗಳು ಹಾಗೂ ಅವರು ನಡೆಸಿದ ಲೀಲೆಗಳು, ಶಿರಡಿ ಗ್ರಾಮಸ್ಥರ ಜೀವನ ಶೈಲಿಗಳನ್ನು ವಿಗ್ರಹದ ರೂಪದಲ್ಲಿ ಕೆತ್ತಲಾಗಿದೆ. ಅಲ್ಲದೆ, ಬಾಬಾರವರ ಪಲ್ಲಕ್ಕಿ ಉತ್ಸವದ ದೃಶ್ಯ, ಬಾಬಾರವರು ತಮ್ಮ ಭಕ್ತರಿಗೆ ಭೋಜನವನ್ನು ಬಡಿಸುತ್ತಿರುವ ದೃಶ್ಯ, ಬಡವರಿಗೆ ಔಷಧಿಯನ್ನು ನೀಡುತ್ತಿರುವ ದೃಶ್ಯ ಹಾಗೂ ಇನ್ನೂ ಹಲವಾರು ದೃಶ್ಯಗಳನ್ನು ಈ ಸಾಯಿ ಹೆರಿಟೇಜ್ ವಿಲೇಜ್ ನಲ್ಲಿ ಯಾತ್ರಿಕರು ನೋಡಬಹುದಾಗಿದೆ. ಈ ಎಲ್ಲಾ ದೃಶ್ಯಾವಳಿಗಳನ್ನು ಸುಮಾರು 100 ವರ್ಷಗಳಿಗೂ ಹಳೆಯದಾದ ಸಪೋಟ ಮರಗಳಿರುವ ತೋಪಿನಲ್ಲಿ ನಿರ್ಮಿಸಲಾಗಿದೆ.








ಮನರಂಜನಾ ಪಾರ್ಕ್: 

ಈ ಮನರಂಜನಾ ಪಾರ್ಕ್ ನಲ್ಲಿ ಮಕ್ಕಳಿಗೆ ಹಾಗೂ ದೊಡ್ಡವರಿಗೆಂದೇ ವಿಶೇಷವಾದ ಹಲವು ರೀತಿಯ ಸಾಹಸದ ಕ್ರೀಡಾ ಉಪಕರಣಗಳನ್ನು ಇರಿಸಲಾಗಿದೆ. ಹ್ಯಾಮೋಕ್ಸ್, ಮಚನಾಸ್ ಇನ್ ಟ್ರೀಸ್,  ಮೋನೋ ರೈಲ್, ರೋಪ್ ಸೈಕಲ್, ಸಾಹಸ ಕ್ರೀಡೆಗಳು, ಒಂಟೆ ಸವಾರಿ, ರೋಪ್ ವೇ ಹಾಗೂ ಇನ್ನೂ ಹಲವಾರು ಮನೋರಂಜನಾ ಕ್ರೀಡೆಗಳನ್ನು ಇಲ್ಲಿ ಯಾತ್ರಿಕರಿಗೆಂದೇ ವಿಶೇಷವಾಗಿ ಅಳವಡಿಸಲಾಗಿದೆ.




ರುಚಿಕರವಾದ ಆಹಾರ: 

ಇಲ್ಲಿಗೆ ಬರುವ ಯಾತ್ರಿಕರಿಗೆ ಶುದ್ಧ ಸಸ್ಯಾಹಾರಿ ಆಹಾರವನ್ನು ನೀಡುವ ಸಲುವಾಗಿ ಹೋಟೆಲ್ ಗಳನ್ನು ಸಹ ತೆರೆಯಲಾಗಿದೆ.

ಈ ಮನರಂಜನಾ ಪಾರ್ಕ್ ಅನ್ನು  ಬೆಳಿಗ್ಗೆ 9 ರಿಂದ ರಾತ್ರಿ 11ರವರೆಗೆ ಸಾರ್ವಜನಿಕರಿಗಾಗಿ ತೆರೆದಿಡಲಾಗಿರುತ್ತದೆ. ಪ್ರವೇಶ ಶುಲ್ಕ ಒಬ್ಬರಿಗೆ 150/-  ರೂಪಾಯಿಗಳು ಮಾತ್ರ. ಐದು ವರ್ಷ ಕೆಳಗಿನ ಮಕ್ಕಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಅಲ್ಲದೇ, ಶಾಲಾ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕೂಡ ಇರುತ್ತದೆ.

ಸಂಪರ್ಕದ ವಿವರಗಳು: 

ಸಾಯಿ ಹೆರಿಟೇಜ್ ವಿಲೇಜ್ 
ಎಸ್.ವಿ.ಆರ್. ಹೋಟೆಲ್ ಹತ್ತಿರ, 
ಶಿರಡಿ-ಅಹಮದ್ ನಗರ ಹೆದ್ದಾರಿ,
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ, 
ಮಹಾರಾಷ್ಟ್ರ,  ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿ :ಶ್ರೀ.ಕಿಶೋರ್ ಬೋರವಾಕೆ, 
ದೂರವಾಣಿ ಸಂಖ್ಯೆಗಳು : +91 98811 94471/2/98225 99263
ಇ-ಮೇಲ್ ವಿಳಾಸ: saiheritagevillage@gmail.com 
ಅಂತರ್ಜಾಲ ತಾಣ: http://saiheritagevillage.com/index.html

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಶ್ರೀ ಸಾಯಿಬಾಬಾ ಮಂದಿರದ ವತಿಯಿಂದ ಸಾಯಿ ಮಹಾಭಕ್ತ ಡಾ.ಕೇಶವ ಭಗವಂತ ಗಾವಂಕರ್ ರವರ ಪುತ್ರ ಡಾ.ಸಾಯಿನಾಥ ಕೆ ಗಾವಂಕರ್ ರವರಿಂದ ತಮ್ಮ ಕುಟುಂಬದವರು ಅನುಭವಿಸಿದ ಸಾಯಿಲೀಲೆಯ ಕುರಿತು ಭಾಷಣ ಹಾಗೂ ಉತ್ತರಪ್ರದೇಶದ ಶ್ರೀ.ಶುಕ್ಲಾ ಮತ್ತು ತಂಡದವರಿಂದ "ಸುಂದರಕಾಂಡ" ಪಾರಾಯಣದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶ್ರೀ ಸಾಯಿಬಾಬಾ ಮಂದಿರದ ವತಿಯಿಂದ ಸಾಯಿ ಮಹಾಭಕ್ತ ಡಾ.ಕೇಶವ ಭಗವಂತ ಗಾವಂಕರ್ ರವರ ಪುತ್ರ ಡಾ.ಸಾಯಿನಾಥ ಕೆ ಗಾವಂಕರ್ ರವರಿಂದ ತಮ್ಮ ಕುಟುಂಬದವರು ಅನುಭವಿಸಿದ ಸಾಯಿಲೀಲೆಯ ಕುರಿತು ಭಾಷಣ ಹಾಗೂ ಉತ್ತರಪ್ರದೇಶದ ಶ್ರೀ.ಶುಕ್ಲಾ ಮತ್ತು ತಂಡದವರಿಂದ "ಸುಂದರಕಾಂಡ" ಪಾರಾಯಣದ ಆಯೋಜನೆಯನ್ನು ಇದೇ ತಿಂಗಳ 28ನೇ ಸೆಪ್ಟೆಂಬರ್ 2014, ಭಾನುವಾರ ದಂದು ಆಯೋಜಿಸಲಾಗಿದೆ. 

ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಕಂಡ ಆಹ್ವಾನ ಪತ್ರಿಕೆಯಲ್ಲಿ ನೀಡಲಾಗಿದೆ: 



ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಕೆ.ಸಾಯಿನಾಥ ಗಾವಂಕರ್ ರವರ ಬಾಯಿಯಿಂದಲೇ ನೇರವಾಗಿ  ಅವರ ಕುಟುಂಬದವರಿಗಾದ ಸಾಯಿಲೀಲೆಯನ್ನು ಕೇಳಿ ಆನಂದಿಸಬೇಕೆಂದು ಹಾಗೂ ಉತ್ತರಪ್ರದೇಶದ ಪ್ರಖ್ಯಾತ ಶ್ರೀ.ಶುಕ್ಲಾ ಮತ್ತು ತಂಡದವರಿಂದ "ಸುಂದರಕಾಂಡ" ಪಾರಾಯಣವನ್ನು ಆಲಿಸಿ ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಮಂದಿರದ ಆಡಳಿತ ಮಂಡಳಿಯವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, September 7, 2014

ಅನಾಮಧೇಯ ಸಾಯಿ ಭಕ್ತರಿಂದ ಸಾಯಿಬಾಬಾನಿಗೆ 511 ಗ್ರಾಂ ತೂಕದ 10,65,000/- ರೂಪಾಯಿ ಬೆಲೆಬಾಳುವ ಚಿನ್ನದ ತಟ್ಟೆಯ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಅನಾಮಧೇಯ ಸಾಯಿ ಭಕ್ತರೊಬ್ಬರು ಇದೇ ತಿಂಗಳ 7ನೇ ಸೆಪ್ಟೆಂಬರ್ 2014, ಭಾನುವಾರ ದಂದು ಶಿರಡಿ ಸಾಯಿಬಾಬನಿಗೆ 511 ಗ್ರಾಂ ತೂಕದ 10,65,000/- ರೂಪಾಯಿ ಬೆಲೆಬಾಳುವ  ಚಿನ್ನದ ತಟ್ಟೆಯನ್ನು ಕೊಡುಗೆಯಾಗಿ ನೀಡಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, September 6, 2014

ಬಿಹಾರ ರಾಜ್ಯದ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕದಂ ಘಾಟ್, ಮಿಸ್ಕಾಟ್, ಮೋತಿಹಾರಿ-845 401, ಪೂರ್ವ ಚಂಪಾರನ್ ಜಿಲ್ಲೆ,ಬಿಹಾರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಬಿಹಾರ ರಾಜ್ಯದ ಪೂರ್ವ ಚಂಪಾರನ್  ಜಿಲ್ಲೆಯ ಮೋತಿಹಾರಿ ಪಟ್ಟಣದ ಕದಂ ಘಾಟ್, ಮಿಸ್ಕಾಟ್ ನ ಬಳಿ ಇದೆ. ಈ ಮಂದಿರವು ಮೋತಿಹಾರಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ಮೋತಿಹಾರಿ ರೈಲು ನಿಲ್ದಾಣದಿಂದ 1 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ಈ ಮಂದಿರದ ಭೂಮಿ ಪೂಜೆಯನ್ನು 12ನೇ ಡಿಸೆಂಬರ್ 2010 ರಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು 17ನೇ ಏಪ್ರಿಲ್ 2012 ರಂದು ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. ಸಂಸತ್ ಸದಸ್ಯರಾದ ಶ್ರೀ.ರಾಧಾ ಮೋಹನ್ ಸಿಂಗ್ ಹಾಗೂ ಸ್ಥಳೀಯ ವಿಧಾನಸಭೆಯ ಸದಸ್ಯರಾದ ಶ್ರೀ.ಕೆ.ಆರ್.ಪ್ರಮೋದ್ ರವರುಗಳು ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಮಂದಿರವನ್ನು ಟ್ರಸ್ಟ್ ಗೆ ಸೇರಿರುವ 40x200 ಚದರ ಅಡಿ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ಶ್ರೀ.ರವಿ ಅಗರವಾಲ್ ರವರು ಮಂದಿರದ ಸಂಸ್ಥಾಪಕ ಟ್ರಸ್ಟಿಯಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು ಮಂದಿರದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ ಸುಮಾರು 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, 1 ಅಡಿ ಎತ್ತರದ ಅಮೃತಶಿಲೆಯ ಗಣಪತಿ,  ಅಮೃತಶಿಲೆಯ ಪಾದುಕೆಗಳು ಮತ್ತು ನಂದಿಯ ವಿಗ್ರಹಗಳನ್ನು ಸಹ ಮಂದಿರದಲ್ಲಿ ಪ್ರತಿಷ್ಟಾಪಿಸಲಾಗಿದೆ. 





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವನ್ನು ಬೆಳಿಗ್ಗೆ  5:00 ರಿಂದ ಮಧ್ಯಾನ್ಹ 12:00 ರವರೆಗೆ ಹಾಗೂ ಪುನಃ ಮಧ್ಯಾನ್ಹ 1:00 ರಿಂದ ರಾತ್ರಿ 10:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ: 

ಬೆಳಿಗ್ಗೆ         : 8:00 ಗಂಟೆ 
ರಾತ್ರಿ         : 8:00 ಗಂಟೆ 

ಗುರುವಾರದ ದಿನಗಳಂದು ಮಂದಿರದಲ್ಲಿ ನಾಲ್ಕು ಆರತಿಗಳನ್ನು ಮಾಡಲಾಗುತ್ತದೆ. ಗುರುವಾರದ ಆರತಿಗಳ ಸಮಯ ಇಂತಿದೆ:  

ಕಾಕಡಾ ಆರತಿ   : 6:00 ಗಂಟೆ 
ಮಧ್ಯಾನ್ಹ ಆರತಿ : 11:30 ಗಂಟೆ 
ಧೂಪಾರತಿ       :  5:30 ಗಂಟೆ 
ಶೇಜಾರತಿ        :  8:00 ಗಂಟೆ

ಪ್ರತಿ ಗುರುವಾರದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಲ್ಲದೆ ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನವನ್ನು ಮಾಡಲಾಗುತ್ತದೆ. ಅನ್ನದಾನ ಸೇವೆಯ ಸೇವಾ ಮೊಬಲಗು 12,000/- ರೂಪಾಯಿಗಳಾಗಿರುತ್ತದೆ.

ವಿಶೇಷ ಉತ್ಸವದ ದಿನಗಳು: 

1.ಹೊಸ ವರ್ಷದ ಆಚರಣೆ 
2.ಶ್ರೀರಾಮನವಮಿ 
3.ಗುರುಪೂರ್ಣಿಮೆ 
4.ವಿಜಯದಶಮಿ

ಟ್ರಸ್ಟ್ ನ ಸಾಮಾಜಿಕ ಕಾರ್ಯ ಚಟುವಟಿಕೆಗಳು:

ಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. 

ಪ್ರತಿ ಗುರುವಾರಗಳಂದು ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಂದಿರದ ಟ್ರಸ್ಟ್ ನ ವತಿಯಿಂದ ಅನ್ನದಾನವನ್ನು ಮಾಡಲಾಗುತ್ತಿದೆ. 

ಮಂದಿರದ ಟ್ರಸ್ಟ್ ನ ವತಿಯಿಂದ ಪ್ರತಿ ವರ್ಷವೂ ಅತ್ಯಂತ ಕಡಿಮೆ ದರದಲ್ಲಿ ಸುಮಾರು 300 ಜನರನ್ನು ಶಿರಡಿ ಯಾತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.  

ದೇಣಿಗೆಗೆ ಮನವಿ: 

ಶ್ರೀ ಸಾಯಿಬಾಬಾ ಟ್ರಸ್ಟ್, ಮೋತಿಹಾರಿಯು ಟ್ರಸ್ಟ್ ನ ವತಿಯಿಂದ ಹಮ್ಮಿಕೊಂಡಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ದಾನಿಗಳಿಂದ ಉದಾರವಾದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ನೀಡಬಯಸುವ ಸಾಯಿ ಭಕ್ತರು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಸಾಯಿಬಾಬಾ ಟ್ರಸ್ಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಖಾತೆ ಸಂಖ್ಯೆ: 251300010128084, ಶಾಖೆ: ಮೋತಿಹಾರಿ ಪಟ್ಟಣ, IFSC ಕೋಡ್ ಸಂಖ್ಯೆ:PUNB0251300" ಗೆ ಸಂದಾಯವಾಗುವಂತೆ ಹಣವನ್ನು ಕಳುಹಿಸಬಹುದಾಗಿರುತ್ತದೆ. 

ಮಂದಿರವಿರುವ ಸ್ಥಳ ಮತ್ತು ಮಾರ್ಗಸೂಚಿ:


ಸ್ಥಳ: 
ಈ ಶಿರಡಿ ಸಾಯಿಬಾಬಾ ಮಂದಿರವು ಬಿಹಾರ ರಾಜ್ಯದ ಪೂರ್ವ ಚಂಪಾರನ್  ಜಿಲ್ಲೆಯ ಮೋತಿಹಾರಿ ಪಟ್ಟಣದ ಕದಂ ಘಾಟ್, ಮಿಸ್ಕಾಟ್ ನ ಬಳಿ ಇದೆ. ಈ ಮಂದಿರವು ಮೋತಿಹಾರಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ಮೋತಿಹಾರಿ ರೈಲು ನಿಲ್ದಾಣದಿಂದ 1 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ವಿಳಾಸ: 
ಶ್ರೀ  ಶಿರಡಿ ಸಾಯಿಬಾಬಾ ಮಂದಿರ, 
ಕದಂ ಘಾಟ್, ಮಿಸ್ಕಾಟ್, 
ಮೋತಿಹಾರಿ-845 401, 
ಪೂರ್ವ ಚಂಪಾರನ್  ಜಿಲ್ಲೆ,
ಬಿಹಾರ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ರವಿ ಅಗರವಾಲ್ - ಟ್ರಸ್ಟಿ

ದೂರವಾಣಿ ಸಂಖ್ಯೆ: 
+91 95769 09000

ಮಿಂಚಂಚೆ: 
ravi.april04@gmail.com

ಮಾರ್ಗಸೂಚಿ: 
ಈ ಶಿರಡಿ ಸಾಯಿಬಾಬಾ ಮಂದಿರವು ಬಿಹಾರ ರಾಜ್ಯದ ಪೂರ್ವ ಚಂಪಾರನ್  ಜಿಲ್ಲೆಯ ಮೋತಿಹಾರಿ ಪಟ್ಟಣದ ಕದಂ ಘಾಟ್, ಮಿಸ್ಕಾಟ್ ನ ಬಳಿ ಇದೆ. ಈ ಮಂದಿರವು ಮೋತಿಹಾರಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ಮೋತಿಹಾರಿ ರೈಲು ನಿಲ್ದಾಣದಿಂದ 1 ಕಿಲೋಮೀಟರ್ ದೂರದಲ್ಲೂ ಇರುತ್ತದೆ. ಮಂದಿರಕ್ಕೆ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಹೇರಳವಾಗಿ ಆಟೋರಿಕ್ಷಾ ಸೌಲಭ್ಯವಿರುತ್ತದೆ. 

(ಕೃಪೆ: ಶ್ರೀ.ರವಿ ಅಗರವಾಲ್, ಟ್ರಸ್ಟಿ, ಮೋತಿಹಾರಿ ಸಾಯಿಬಾಬಾ ಮಂದಿರ, ಬಿಹಾರ).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, September 4, 2014

ಖ್ಯಾತ ರಂಗೋಲಿ ಕಲಾವಿದ, ಸಾಯಿ ಭಜನ ಗಾಯಕ ಹಾಗೂ ಸಾಯಿ ಬಂಧು - ಶ್ರೀ ಭರತ್ ನಟವರ್ ವಿಸ್ಪುಟೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಭರತ್ ನಟವರ್ ವಿಸ್ಪುಟೆಯವರು ಶ್ರೀ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು. ಇವರು ಪ್ರಖ್ಯಾತ ರಂಗೋಲಿ ಕಲಾವಿದರೂ  ಹಾಗೂ ಸಾಯಿಭಜನ ಗಾಯಕರೂ ಆಗಿದ್ದಾರೆ.


ಇವರು 27ನೇ ಫೆಬ್ರವರಿ 1973 ರಂದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ರಹತಾ ತಾಲ್ಲೂಕಿನಲ್ಲಿರುವ ಶಿರಡಿ ಗ್ರಾಮದಲ್ಲಿ ಶ್ರೀ.ನಟವರ್ ಸಿ.ವಿಸ್ಪುಟೆ ಹಾಗೂ ಶ್ರೀಮತಿ.ಪುಷ್ಪಾ ನಟವರ್ ವಿಸ್ಪುಟೆಯವರ ಪುತ್ರನಾಗಿ ಜನಿಸಿದರು. 

ಇವರು ಪುಣೆ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿಯನ್ನು ಗಳಿಸಿ ಶಿರಡಿ ಸಾಯಿಬಾಬಾ ಸಂಸ್ಥಾನದ ನೀರು ಸರಬರಾಜು ವಿಭಾಗದಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಇವರು ಪ್ರತಿ ಗುರುವಾರದಂದು ಹಾಗೂ ವಿಶೇಷ ಉತ್ಸವದ ದಿನಗಳಲ್ಲಿ ನಡೆಯುವ  ಜಗತ್ಪ್ರಸಿದ್ಧ ಚಾವಡಿ ಉತ್ಸವದ ದಿನಗಳಂದು ಚಾವಡಿಯ ಮುಂಭಾಗದಲ್ಲಿ ರಂಗೋಲಿಯನ್ನು ಬಿಡಿಸುತ್ತಾ ಬಂದಿದಾರೆ. ಅವರು ಈ ಮಹೋನ್ನತ ನಿಸ್ವಾರ್ಥ ಸೇವೆಯನ್ನು 1990ನೇ ಇಸವಿಯಿಂದ ಮಾಡುತ್ತಾ ಬಂದಿದ್ದಾರೆ.




ಪ್ರತಿ ಗುರುವಾರಗಳಂದು ರಾತ್ರಿ 9:15 PM ಕ್ಕೆ ಪಲ್ಲಕ್ಕಿ ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿಗೆ ಬಂದು ಸೇರುತ್ತದೆ. ಈ ಉತ್ಸವವು ಸುಮಾರು 9:35 ರ ಹೊತ್ತಿಗೆ ಚಾವಡಿಗೆ ಬಂದು ಸೇರುತ್ತದೆ. ಚಾವಡಿಯ ಬಳಿಗೆ ಬಂದ ಕೂಡಲೇ ಪಲ್ಲಕ್ಕಿಯನ್ನು ಚಾವಡಿಯ ಮುಂದೆ ಈಗಾಗಲೇ ಇರಿಸಲಾಗಿರುವ ಮಂಚದ ಮೇಲೆ ಇಡಲಾಗುತ್ತದೆ. ಶ್ರೀ ಸಾಯಿಬಾಬಾರವರು 15ನೇ ಅಕ್ಟೋಬರ್ 1918 ರಂದು ತಮ್ಮ ದೇಹತ್ಯಾಗ ಮಾಡಿದಾದ ಅವರ ಪಾರ್ಥಿವ ಶರೀರವನ್ನು ಇದೇ ಮಂಚದ ಮೇಲೆ ಮೂರು ದಿನಗಳ ಕಾಲ ಇರಿಸಲಾಗಿತ್ತು. ಹೀಗೆ 2006-2007 ರವರೆಗೂ ಮಾಡಿಕೊಂಡು ಬರಲಾಯಿತು. ಆದರೆ ಶ್ರೀ ಸಾಯಿಬಾಬಾ ಸಂಸ್ಥಾನವು ಹಿಂದಿನ ದೀಕ್ಷಿತವಾಡಾದಲ್ಲಿ ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಿದಾಗ  ಬಾಬಾರವರು ಬಳಸುತ್ತಿದ್ದ ಹಾಗೂ ಶಿರಡಿ ಸಂಸ್ಥಾನದ ಎಲ್ಲಾ ಮೂಲ ವಸ್ತುಗಳನ್ನೂ ಧೀರ್ಘ ಅವಧಿಯ ಕಾಲ ಸಂರಕ್ಷಿಸುವ ಉದ್ದೇಶದಿಂದ ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲು ತೀರ್ಮಾನಿಸಲಾಯಿತು. ಆದುದರಿಂದ ಆ ಮಂಚವನ್ನು ಸಹ ವಸ್ತು ಸಂಗ್ರಹಾಲಯದ ನೆಲ ಮಹಡಿಯಲ್ಲಿ ಗಾಜಿನ ಹೊದಿಕೆಯನ್ನು ಹೊದಿಸಿ ಇರಿಸಲಾಯಿತು. ಈಗ ಸಂಸ್ಥಾನವು ಅದೇ ಮಂಚದ ಪ್ರತಿರೂಪವನ್ನು ಚಾವಡಿಯಲ್ಲಿ ಇರಿಸಿದ್ದು ಪ್ರತಿ ಗುರುವಾರದಂದು ಅದೇ  ಮಂಚದ ಮೇಲೆ ಪಲ್ಲಕ್ಕಿಯನ್ನು ಇರಿಸಲಾಗುತ್ತಿದೆ.





ಮೊದಲಿನಿಂದಲೂ ಶ್ರೀ ಭರತ್ ನಟವರ್ ವಿಸ್ಪುಟೆಯವರ ಪೋಷಕರು ಶಿರಡಿಯ ನಿವಾಸಿಗಳಾಗಿರುವ ಕಾರಣದಿಂದ ವಿಸ್ಪುಟೆಯವರು ಬಾಲ್ಯದಿಂದಲೇ ಶ್ರೀ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.  ಇವರು ಪ್ರತಿ ಗುರುವಾರದಂದು ಸಂಜೆ ಧೂಪಾರತಿಯಾದ ನಂತರ  ಅಂದರೆ ರಾತ್ರಿ ಸುಮಾರು 8 ಗಂಟೆಗೆ ಚಾವಡಿಯ ಮುಂಭಾಗದ ಸ್ಥಳವನ್ನು ನೀರಿನಿಂದ ಚೆನ್ನಾಗಿ ತೊಳೆದು ಸುಂದರವಾದ ಹಾಗೂ ಬಹಳ ದೊಡ್ಡದಾದ ರಂಗೋಲಿಯನ್ನು ಬಿಡಿಸುತ್ತಾರೆ. ವಿಶೇಷ ಉತ್ಸವದ ದಿನಗಳಾದ ಶ್ರೀರಾಮನವಮಿ, ಗುರುಪೂರ್ಣಿಮೆ, ಗೋಕುಲಾಷ್ಟಮಿ, ಹಾಗೂ ವಿಜಯದಶಮಿಯ ದಿನಗಳಂದು ವಿಸ್ಪುಟೆಯವರು ಗುರುಸ್ಥಾನ ಮಂದಿರ ಹಾಗೂ ಚಾವಡಿ ಮುಂಭಾಗದಲ್ಲಿ ರಾತ್ರಿ ಸುಮಾರು 9 ಗಂಟೆಗೆ ರಂಗೋಲಿ ಬಿಡಿಸುತ್ತಾರೆ. ಈ ರಂಗೋಲಿ ಬಿಡಿಸುವುದಕ್ಕೆ ಅವರು ಸುಮಾರು 1 ಗಂಟೆ ಕಾಲಾವಕಾಶ ತೆಗೆದುಕೊಂಡು ಪೂರ್ಣಗೊಳಿಸುತ್ತಾರೆ. ಅವರು ಈ ಮಹೋನ್ನತ ನಿಸ್ವಾರ್ಥ ಸೇವೆಯನ್ನು 1990ನೇ ಇಸವಿಯಿಂದ ಮಾಡುತ್ತಾ ಬಂದಿದ್ದಾರೆ. ಚಾವಡಿಯ ಬಳಿಗೆ ಬಂದ ಕೂಡಲೇ ಪಲ್ಲಕ್ಕಿಯನ್ನು ಚಾವಡಿಯ ಮುಂದೆ ಈಗಾಗಲೇ ರಂಗೋಲಿಯ ಮೇಲೆ ಇರಿಸಲಾಗಿರುವ ಮಂಚದ ಮೇಲೆ ಸಂಪೂರ್ಣ ಗೌರವದೊಡನೆ  ಇಡಲಾಗುತ್ತದೆ. ಚಾವಡಿ ಆರತಿಯಾದ ನಂತರ ಪಲ್ಲಕ್ಕಿ ಹಾಗೂ ಮಂಚವನ್ನು ತೆಗೆದ ಆ ಸ್ಥಳದಿಂದ ತೆಗೆದ ಕೂಡಲೇ ಸಾಯಿ ಭಕ್ತರು ರಂಗೋಲಿ ಬಿಡಿಸಿರುವ ಪ್ರದೇಶದ ಬಳಿಗೆ ಓಡಿ ಹೋಗಿ ಆ ರಂಗೋಲಿಯನ್ನು ತಮ್ಮ ಕೈಗೆ ತೆಗೆದುಕೊಂಡು ತಮ್ಮ ಹಣೆ ಮತ್ತು ದೇಹದ ಮೇಲೆಲ್ಲಾ ಹಚ್ಚಿಕೊಳ್ಳುವ ಪರಿಪಾಠ ಇಟ್ಟುಕೊಂಡಿದ್ದಾರೆ. ಏಕೆಂದರೆ ಸಾಯಿ ಭಕ್ತರು ಬಾಬಾರವರು ಆ ರಂಗೋಲಿಯ ಮೇಲೆ ಕುಳಿತಿದ್ದರಿಂದ ಆ ರಂಗೋಲಿ ಬಹಳ ಪವಿತ್ರವಾಗಿರುವುದೆಂಬ ನಂಬಿಕೆಯನ್ನು ಹೊಂದಿದ್ದು ಅದನ್ನು ಅವರ ಮೈಮೇಲೆ ಹಚ್ಚಿಕೊಳ್ಳುವುದರಿಂದ ಅವರುಗಳು ಪವಿತ್ರರಾಗುತ್ತಾರೆಂಬ ನಂಬಿಕೆಯನ್ನು ಹೊಂದಿದ್ದಾರೆ. ಆದುದರಿಂದ ಶ್ರೀ ಭರತ್ ನಟವರ್ ವಿಸ್ಪುಟೆಯವರು ಈ ಸಾಯಿ ಸೇವೆಯನ್ನು ಮಾಡುವ ಸೌಭಾಗ್ಯ ತಮಗೆ ದೊರೆತಿದ್ದು ತಮ್ಮ ಪುಣ್ಯವೆಂದು ಭಾವಿಸುತ್ತಾರೆ.


ಶ್ರೀ.ಭರತ್ ನಟವರ್ ವಿಸ್ಪುಟೆಯವರು ಶ್ರೀಮತಿ.ಪೂನಂ ಭರತ್ ವಿಸ್ಪುಟೆಯವರನ್ನು ವಿವಾಹವಾಗಿದ್ದು ಅವರಿಗೆ ಶ್ರೀ.ವೇದಾಂತ ಭರತ್ ವಿಸ್ಪುಟೆ ಎಂಬ ಮಗ ಹಾಗೂ ಕುಮಾರಿ.ಪವಿತ್ರ ಭರತ್ ವಿಸ್ಪುಟೆ ಎಂಬ ಮಗಳು ಇದ್ದು ಶಿರಡಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಯಾರಾದರೂ ಸಾಯಿ ಭಕ್ತರು ತಾವುಗಳು ಹಮ್ಮಿಕೊಳ್ಳುವ ಮಹಾಪಾರಾಯಣ, ಪಲ್ಲಕ್ಕಿ ಉತ್ಸವ ಅಥವಾ ಇನ್ನಿತರ ಯಾವುದೇ ಸಮಾರಂಭಗಳಿಗೆ ರಂಗೋಲಿ ಬರೆಸಬೇಕೆಂದು ಅಂದುಕೊಂಡಲ್ಲಿ ಅವರುಗಳು ಶ್ರೀ ಭರತ್ ನಟವರ್ ವಿಸ್ಪುಟೆಯವರನ್ನು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು:

ವಿಳಾಸ:

ನಂದುರ್ಕಿ ರಸ್ತೆ,  
ಗಣೇಶವಾಡಿ, ಗೋವಿಂದನಗರ,  
ಶಿರಡಿ ಅಂಚೆ-423 109, 
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ, 
ಮಹಾರಾಷ್ಟ್ರ,ಭಾರತ.

ದೂರವಾಣಿ ಸಂಖ್ಯೆ:

+91 99217 71703

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಬಹುಮುಖ ಪ್ರತಿಭೆಯ ಲೇಖಕಿ, ಚಿಕಿತ್ಸಕಿ, ರೇಖಿ ಮಾಸ್ಟರ್ ಹಾಗೂ ಸಾಯಿ ಬಂಧು - ಶ್ರೀಮತಿ. ಜಯ ವಾಹಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀಮತಿ.ಜಯ ವಾಹಿಯವರು ಟೈಮ್ಸ್ ಗ್ರೂಪ್ ಬುಕ್ಸ್ (ಟೈಮ್ಸ್ ಆಫ್ ಇಂಡಿಯಾದ ಒಂದು ಅಂಗ ಸಂಸ್ಥೆ) ನ ಪ್ರಕಾಶನದ ಅಡಿಯಲ್ಲಿ ಹೊರಬಂದಿರುವ   "ಸಾಯಿಬಾಬಾ ಇಸ್ ಸ್ಟಿಲ್ ಅಲೈವ್" ಪುಸ್ತಕದ ಲೇಖಕರು. ಇವರೊಬ್ಬ ಅಪ್ರತಿಮ ಬರಹಗಾರ್ತಿ, ಪ್ರತಿಭಾನ್ವಿತ ಚಿಕಿತ್ಸಕಿ, ರೇಖಿ ಮಾಸ್ಟರ್, ಸ್ಪೂರ್ತಿದಾಯಕ ಮಾತುಗಾರ್ತಿಯಾಗಿದ್ದು  ಬಹುಮುಖ ಪ್ರತಿಭೆಯ ಸಾಯಿಬಂಧುವಾಗಿದ್ದಾರೆ.


 "ಸಾಯಿಬಾಬಾ ಇಸ್ ಸ್ಟಿಲ್ ಅಲೈವ್" ಪುಸ್ತಕವು ಜೂನ್ 2013 ರಲ್ಲಿ ಬಿಡುಗಡೆಯಾಗಿದ್ದು ಪ್ರಸ್ತುತ ಈ ಪುಸ್ತಕವು ಇತರ ಭಾಷೆಗಳಾದ ಹಿಂದಿ, ತಮಿಳು, ಕನ್ನಡ, ಮರಾಠಿ, ತೆಲುಗು, ಮಲಯಾಳಂ, ಜರ್ಮನ್ ಹಾಗೂ ಇನ್ನೂ ಹಲವಾರು ಭಾಷೆಗಳಿಗೆ ಅನುವಾದಗೊಳ್ಳುತ್ತಿದೆ. ಈ ಪುಸ್ತಕವು ಬಿಡುಗಡೆಯಾದ ಕೇವಲ ಎರಡು ತಿಂಗಳಲ್ಲಿ "ಬೆಸ್ಟ್ ಸೆಲ್ಲರ್" ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಷ್ಟೇ ಅಲ್ಲದೇ ಆನ್ ಲೈನ್ ಶಾಪಿಂಗ್ ತಾಣವಾದ ಅಮೆಜಾನ್.ಕಾಂ ನ "ಇಂಟರ್ ನ್ಯಾಷನಲ್ ಬೆಸ್ಟ್ ಸೆಲ್ಲರ್" ಪಟ್ಟಿಯ ಅತ್ಯುತ್ತಮ 50 ಪುಸ್ತಕಗಳ ಪಟ್ಟಿಯಲ್ಲಿ ಸೇರಿಕೊಂಡಿದೆ.



ಈ ಪುಸ್ತಕದಲ್ಲಿ ಶ್ರೀಮತಿ.ಜಯ ವಾಹಿಯವರು ತಮಗಾದ ಅದ್ಭುತ ಅನುಭವಗಳು, ಆಳವಾಗಿ ಬೇರೂರಿದ ಭಾವನೆಗಳು ಹಾಗೂ ತಮ್ಮ ತಂದೆ, ಗುರು ಹಾಗೂ ಇನ್ನೂ ಹತ್ತು ಹಲವು ಸ್ವರೂಪಗಳಲ್ಲಿ ಕಾಣಿಸಿಕೊಂಡಿರುವ ಶ್ರೀ ಶಿರಡಿ ಸಾಯಿಬಾಬಾರವರೊಂದಿಗೆ ತಮ್ಮ ಜೀವನದ ಪ್ರಯಾಣದ ವಿವರಗಳನ್ನು  ಸುಂದರವಾಗಿ ಹಂಚಿಕೊಂಡಿದ್ದಾರೆ.  ಈ ಪುಸ್ತಕದಲ್ಲಿ ಹಲವಾರು ಸಾಯಿ ಭಕ್ತರ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಕುರಿತು ಬರೆಯಲಾಗಿದ್ದು, ಓದುಗರ ಮನಸ್ಸಿಗೆ ಮುದ ಹಾಗೂ ತೃಪ್ತಿಯನ್ನು ನೀಡುವುದಷ್ಟೇ ಅಲ್ಲದೇ ಪುಸ್ತಕದ ಶೀರ್ಷಿಕೆಯಾದ  "ಸಾಯಿಬಾಬಾ ಇಸ್ ಸ್ಟಿಲ್ ಅಲೈವ್" ಎಂಬ ವಿಷಯವನ್ನು ಮನದಟ್ಟು ಮಾಡಿಕೊಡುತ್ತದೆ. 

5ನೇ ಆಗಸ್ಟ್ ರಂದು ಜನ್ಮ ತಾಳಿದ ಶ್ರೀಮತಿ ಜಯ ವಾಹಿಯವರು 2002ನೇ ಇಸವಿಯಲ್ಲಿ ಶ್ರೀ ಸಾಯಿಬಾಬಾರವರ ಭಕ್ತೆಯಾಗಿ ರೂಪುಗೊಂಡರು 

ಶ್ರೀ ಶಿರಡಿ ಸಾಯಿಬಾಬಾರವರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಶಕ್ತಿಯನ್ನು ಪಡೆದುಕೊಂಡ ಶ್ರೀಮತಿ ಜಯ ವಾಹಿಯವರು ಅದರೊಂದಿಗೆ ರೇಖಿ ಮಾಸ್ಟರ್ ಆಗಿ ತಾವು ಗಳಿಸಿದ್ದ ತಮ್ಮ ಹನ್ನೆರಡು ವರ್ಷಗಳ  ಚಿಕಿತ್ಸೆಯ ಆನುಭವವನ್ನೂ ಸೇರಿಸಿಕೊಂಡು ಹಲವಾರು ರೋಗಿಗಳ ಅಪರೂಪದ ಖಾಯಿಲೆಗಳನ್ನು ಹಾಗೂ ಇನ್ನಿತರ ತೊಂದರೆಗಳನ್ನು ಬಾಬಾರವರ ಆಶೀರ್ವಾದದಿಂದ ನೀಡುತ್ತಾ ಬಂದಿದ್ದಾರೆ. ಅಂತಹ ಒಂದು ದಿಗ್ಭ್ರಮೆಯನ್ನು ಉಂಟುಮಾಡುವ ಪವಾಡ ಸದೃಶ ಚಿಕಿತ್ಸೆಯನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಈ ಪುಸ್ತಕವು ಶ್ರೀಮತಿ ಜಯ ವಾಹಿಯವರನ್ನು ಪೂರ್ಣ ಪ್ರಮಾಣದಲ್ಲಿ ಚಿಕಿತ್ಸಕಿಯಾಗಿ ರೂಪುಗೊಳ್ಳುವಂತೆ ಮಾಡಿತಲ್ಲದೇ ದಿನ ಕಳೆದಂತೆ ಒಂದರ ಮೇಲೆ ಮತ್ತೊಂದರಂತೆ ಅವರು ಯಶಸ್ವಿ ಚಿಕಿತ್ಸಕಿಯಾಗಿ ಮುಂದುವರಿಯುವಂತೆ ಮಾಡಿದೆ. 

ಪ್ರೀತಿಯ ಸಾಕಾರ ಮೂರ್ತಿಯಾಗಿರುವ ಶ್ರೀಮತಿ ಜಯ ವಾಹಿಯವರಿಗೆ ಆರೈಕೆ, ವಿಶ್ವಾಸ ಮತ್ತು ಪ್ರೀತಿಗಳು ಸಹಜವಾಗಿ ಬಂದಿರುತ್ತವೆ. ಇವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ಇವರನ್ನು ಪ್ರೀತಿಯಿಂದ "ದೀದಿ ಜಾನ್" ಎಂದು ಕರೆಯುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಈ ಪ್ರಪಂಚದಲ್ಲಿ ಯಾರೊಬ್ಬರೂ ನೋವಿನಿಂದ ಬಳಲಬಾರದು  ಹಾಗೂ ಮನೆಗೊಬ್ಬ ಚಿಕಿತ್ಸಕನನ್ನು ಸೃಷ್ಟಿಸಬೇಕೆಂಬುದು ಇವರ ಹೆಬ್ಬಯಕೆಯಾಗಿದೆ.  ಈ ಪ್ರಪಂಚದಲ್ಲಿ ನೋವಿನಿಂದ ಬಳಲುತ್ತಿರುವವರ ನೋವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಾಬಾರವರು ಅವರಿಗೆ ನೀಡಿರುವ ಶಕ್ತಿಯನ್ನು ಹಾಗೂ ಆಶೀರ್ವಾದವನ್ನು ಮುಂದಿಟ್ಟುಕೊಂಡು ಭಾರತದ ವಿವಿಧ ಕಡೆಗಳಲ್ಲಿ ಹಾಗೂ ಪ್ರಪಂಚದಾದ್ಯಂತ ಎಲ್ಲಾ ನಗರಗಳಲ್ಲಿ ರೇಖಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಜನರಿಗೆ ರೇಖಿ ಚಿಕಿತ್ಸೆಯನ್ನು ಕಲಿಸುತ್ತಿದ್ದಾರೆ. ಅವರು ಈ ಕಾರ್ಯಾಗಾರವನ್ನು ಏಪ್ರಿಲ್ 2014 ರಲ್ಲಿ ಪ್ರಾರಂಭಿಸಿದ್ದು ಕೇವಲ ಮೂರು ತಿಂಗಳ ಒಳಗಾಗಿ 100ಕ್ಕೂ ಹೆಚ್ಚು ರೇಖಿ ಚಿಕಿತ್ಸಕರನ್ನು ತಯಾರು ಮಾಡಿದ್ದಾರೆ. ಕೇವಲ ಈಗಷ್ಟೇ ತಮ್ಮ ರೇಖಿ ಕಾರ್ಯಾಗಾರಗಳನ್ನು  ಪ್ರಾರಂಭಿಸಿರುವ ಅವರು ಇದೇ ರೀತಿ ಲಕ್ಷಾಂತರ ಚಿಕಿತ್ಸಕರನ್ನು ತಯಾರು ಮಾಡುವ ಸದುದ್ದೇಶ ಹೊಂದಿದ್ದಾರೆ.

ಇವರು ಹೀಗೆ ತಯಾರು ಮಾಡಿರುವ ರೇಖಿ ಚಿಕಿತ್ಸಕರುಗಳು ಒಂದು ಬೃಹತ್ ಸಾಯಿ ಕುಟುಂಬವಾಗಿ ಮಾರ್ಪಟ್ಟು ಅವರೆಲ್ಲರೂ ಒಗ್ಗಟ್ಟಿನಿಂದ ಪ್ರಪಂಚದ ಅನೇಕ ಕಡೆಗಳಲ್ಲಿ ನೆಲೆಸಿದ್ದು ತಮಗೆ ತಿಳಿದಿರುವ ಹಾಗೂ ತಿಳಿಯದೆ ಇರುವ ಹಲವಾರು ಜನರಿಗಾಗಿ ಪ್ರಾರ್ಥನೆ ಮತ್ತು  ರೇಖಿ ಚಿಕಿತ್ಸೆಗಳನ್ನು ಮಾಡುತ್ತಾ ಬಂದಿದ್ದಾರೆ. ಇದಕ್ಕಾಗಿಯೇ ಶ್ರೀಮತಿ. ಜಯ ವಾಹಿಯವರು "ಹೀಲ್ ದಿ ವರ್ಲ್ಡ್" ಎಂಬ ಫೇಸ್ ಬುಕ್ ಹಾಳೆಯನ್ನು ತೆರೆದಿದ್ದು ಇದರಲ್ಲಿ ಈಗಾಗಲೇ 3000 ಜನರು ಸದಸ್ಯರಾಗಿದ್ದಾರೆ. ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವವರಿಗಾಗಲೀ, ಮುರಿದು ಹೋಗಿರುವ ಸಂಬಂಧಗಳಿಗಾಗಲೀ, ನೈಸರ್ಗಿಕವಾಗಿ ಒದಗಿಬರುವ ಪ್ರಕೃತಿ ವಿಕೋಪಗಳಿಗಾಗಲೀ ಅಥವಾ ಲೋಕ ಕಲ್ಯಾಣಕ್ಕಾಗಲೀ ಈ ಫೇಸ್ ಬುಕ್ ಹಾಳೆಯ ಮೂಲಕ ರೇಖಿ ಚಿಕಿತ್ಸಕರು ಚಿಕಿತ್ಸೆಯ ಸಂದೇಶವನ್ನು ರವಾನಿಸಿದಾಗ ಅವುಗಳು ಖಂಡಿತವಾಗಿಯೂ ತಪ್ಪದೇ ನೆರವೇರುತ್ತಿವೆ. ಈ ರೀತಿಯಲ್ಲಿ ಶ್ರೀಮತಿ ಜಯ ವಾಹಿಯವರು ಮತ್ತು ಚಿಕಿತ್ಸಕರ ಕುಟುಂಬದ ಸದಸ್ಯರುಗಳು  ಒಗ್ಗಟ್ಟಿನಿಂದ ಕಾರ್ಯತತ್ಪರರಾಗಿ ಬಾಬಾರವರ ಸೃಷ್ಟಿಯ ಈ ಜಗತ್ತು ತೊಂದರೆ ಮುಕ್ತವಾಗಿ ಜಗತ್ತಿನ  ಎಲ್ಲರೂ ಅರ್ಥಪೂರ್ಣ ಜೀವನ ನಡೆಸುವಂತೆ ಮಾಡಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.

ಶ್ರೀಮತಿ. ಜಯ ವಾಹಿಯವರು  "ಸಾಯಿಬಾಬಾ ಇಸ್ ಸ್ಟಿಲ್ ಅಲೈವ್" ಎಂಬ ಮತ್ತೊಂದು ಫೇಸ್ ಬುಕ್ ಹಾಳೆಯನ್ನು ತೆರೆದಿದ್ದು ಇದರಲ್ಲಿ ಈಗಾಗಲೇ 2500 ಕ್ಕೂ ಹೆಚ್ಚು  ಜನರು ಸದಸ್ಯರಾಗಿದ್ದಾರೆ.  ಈ ಫೇಸ್ ಬುಕ್ ನ ಹಾಳೆಯಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಉಪದೇಶಗಳು, ದಿವ್ಯ ಸಂದೇಶಗಳು, ಭಕ್ತರ ಅನುಭವಗಳು, ಸಾಯಿಬಾಬಾರವರ ಮೇಲೆ ಹೆಣೆಯಲಾದ ಪದ್ಯಗಳು, ಹಾಡುಗಳು ಹಾಗೂ ಇನ್ನೂ ಹಲವಾರು ವಿಷಯಗಳನ್ನು ಕುರಿತಂತೆ ಎಲ್ಲಾ ಸದಸ್ಯರುಗಳ ನಡುವೆ ವಿಷಯ ವಿನಿಮಯ ನಿಯಮಿತವಾಗಿ ಆಗುತ್ತಿದೆ. ಸಾಯಿ ಭಕ್ತರು ಫೇಸ್ ಬುಕ್ ನ ಈ ಹಾಳೆಗೆ ಮನಸೋತು ದಾಸರಾಗಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಶ್ರೀಮತಿ ಜಯ ವಾಹಿಯವರ ವಿಶೇಷ ಸಾಮರ್ಥ್ಯಗಳು: 

ಹೀಲಿಂಗ್ ಥಿರೆಪೀಸ್
ಸಬಲೀಕರಣ ಕಾರ್ಯಾಗಾರಗಳು
ಪ್ರೇರಣೆ ನೀಡುವ ವಿಚಾರ ಗೋಷ್ಠಿಗಳು
ಕೋಪ ನಿರ್ವಹಣಾ ಕಾರ್ಯಗಾರಗಳು
ಸ್ವಯಂ ನಿರ್ವಹಣಾ ಕಾರ್ಯಕ್ರಮಗಳು 
ಚಿಕಿತ್ಸೆ ಕಲಿಕೆಯ ಅಧಿವೇಶನಗಳು 
ಆಧ್ಯಾತ್ಮಿಕ ಕಾರ್ಯಾಗಾರಗಳು 
ಸ್ತ್ರೀ ಸಬಲೀಕರಣ 
ಯುವ ಸಬಲೀಕರಣ
ಗರ್ಭಿಣಿ ಸ್ತ್ರೀಯರಿಗೆ ಕಾರ್ಯಕ್ರಮಗಳು
ಫೋಬಿಯಾ ಚಿಕಿತ್ಸೆ
ಟೈಮ್ ಲೈನ್ ಚಿಕಿತ್ಸೆ (ಎನ್.ಎಲ್.ಪಿ)
ಬಿಳಿ ಬೆಳಕು ಚಿಕಿತ್ಸೆ
ಗೋಲ್ ಸೆಟ್ಟಿಂಗ್ ಮತ್ತು ಅಯಸ್ಕಾಂತ ಸಿದ್ಧಾಂತ
ಖಿನ್ನತೆ ನಿವಾರಣೆ ಸಲಹೆ 
ಆತ್ಮಹತ್ಯೆ ನಿವಾರಣೆಗಾಗಿ ಸಲಹೆ

ಶ್ರೀಮತಿ ಜಯ ವಾಹಿಯವರಿಗೆ ದೊರೆತಿರುವ ವಿಶೇಷ ಮಾನ್ಯತೆಗಳು: 

ಸ್ಪೆಷಾಲಿಟೀಸ್: ಅಮೇರಿಕಾದ ಡೇಲ್ ಕಾರ್ನಿಜೆಯಿಂದ ತರಬೇತುದಾರರಾಗಿ ಮಾನ್ಯತೆ.  
ಅಮೇರಿಕಾದ ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ನ ಡಾ.ರಿಚರ್ಡ್ ಬಾಂಡ್ಲರ್  ರವರ ಟೈಮ್ ಲೈನ್ ಚಿಕಿತ್ಸೆ (ಎನ್.ಎಲ್.ಪಿ) ಯ ಪರವಾನಗಿ ಹೊಂದಿರುವ ಅಧಿಕೃತ ವೈದ್ಯರು. 
ಇಂಗ್ಲೆಂಡ್ ನ ದಿ ಕೋಚಿಂಗ್ ಅಕಾಡೆಮಿಯಿಂದ ಲೈಫ್ ಕೋಚಿಂಗ್ ನಲ್ಲಿ ಪ್ರಮಾಣಪತ್ರದ ಮಾನ್ಯತೆ. 
ವೇದಾಂತ ಮತ್ತು ಪೂರ್ವ ಸಿದ್ಧಾಂತ ನಿರ್ವಹಣೆಯಲ್ಲಿ ಪರಿಣತಿ ಹಾಗೂ ಮಾನ್ಯತೆ.

ಶ್ರೀಮತಿ ಜಯ ವಾಹಿಯವರ ಸಂಪರ್ಕದ ವಿವರಗಳು: 


ದೂರವಾಣಿ ಸಂಖ್ಯೆ:
 +91 98184 65473

ಮಿಂಚಂಚೆ: 
saibabaisstillalive@gmail.com 

ಫೇಸ್ ಬುಕ್  ವಿಳಾಸ:

"ಸಾಯಿಬಾಬಾ ಇಸ್ ಸ್ಟಿಲ್ ಅಲೈವ್" ಮತ್ತು "ಹೀಲ್ ದಿ ವರ್ಲ್ಡ್" 

ಅಂತರ್ಜಾಲ ತಾಣ :
www.divatyas.com

(ಆಧಾರ: ಶ್ರೀ.ಅನುರಾಗ್ ಭಾತ್ಲಾ, ನವದೆಹಲಿ ಮಿಂಚಂಚೆಯ ಮೂಲಕ ದಿನಾಂಕ 2ನೇ ಸೆಪ್ಟೆಂಬರ್ 2014 ರಂದು ನೀಡಿರುವ ಮಾಹಿತಿ)


ಕನ್ನಡ ಅನುವಾದ: ಶ್ರೀಕಂಠ ಶರ್ಮ