Wednesday, October 3, 2012

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರಮ್ (ದಕ್ಷಿಣ ಶಿರಡಿ),ಮುಖ್ಯರಸ್ತೆ, ಜೈನ್ ಮಂದಿರದ ಹತ್ತಿರ, ಪೆನುಕೊಂಡ - 515 110, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಚಾರಿತ್ರಿಕ ಹಿನ್ನೆಲೆಯುಳ್ಳ ಈ ಪ್ರಸಿದ್ಧ ಮಂದಿರವನ್ನು ಖ್ಯಾತ ಸಾಯಿ ಮಹಾಭಕ್ತರಾದ ಪರಮ ಪೂಜ್ಯ ಶ್ರೀ.ಸ್ವಾಮಿ ಕೇಶವಯ್ಯನವರು ಸ್ಥಾಪಿಸಿದ್ದಾರೆ.

ಶ್ರೀ.ಸ್ವಾಮಿ ಕೇಶವಯ್ಯನವರು 1942 ರಿಂದ 1950 ರವರೆಗೆ ಪೆನುಕೊಂಡ ಪಟ್ಟಣದಲ್ಲಿ ಸಬ್ ರಿಜಿಸ್ಟಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಪ್ರತಿನಿತ್ಯ ತಮ್ಮ ಮನೆಯಲ್ಲಿ ಸಾಯಿ ಭಜನೆ ಹಾಗೂ ನಾಮ ಜಪವನ್ನು ನಡೆಸುತ್ತಿದ್ದರು. ತಮ್ಮ ಹತ್ತಿರ ಬರುವ ಎಲ್ಲಾ ಸಾಯಿ ಭಕ್ತರಿಗೂ ಪವಿತ್ರ ಉಧಿಯನ್ನು ನೀಡುತ್ತಿದ್ದರು. ಇದರಿಂದ ಅನೇಕ ಭಕ್ತರ ರೋಗಗಳು ಗುಣವಾಗುತ್ತಿದ್ದವು ಹಾಗೂ ಅನೇಕ ಭಕ್ತರ ಮನದ ಬಯಕೆಗಳು ಪರಿಪೂರ್ಣವಾಗುತ್ತಿದ್ದವೆಂದು ಹೇಳಲಾಗುತ್ತದೆ. ಈ ಉತ್ತಮ ಕಾರ್ಯಕ್ಕಾಗಿ ಇಂದಿಗೂ ಸಾಯಿ ಭಕ್ತರು ಶ್ರೀ.ಸ್ವಾಮಿ ಕೇಶವಯ್ಯನವರನ್ನು ಸ್ಮರಿಸುತ್ತಾರೆ. ಶ್ರೀ.ಸ್ವಾಮಿ ಕೇಶವಯ್ಯನವರು ಈ ಪ್ರಸಿದ್ಧ ಮಂದಿರವನ್ನು 1947 ರಲ್ಲಿ ಪ್ರಾರಂಭಿಸಿದರು ಮತ್ತು ಈ ಕ್ಷೇತ್ರಕ್ಕೆ "ದಕ್ಷಿಣ ಶಿರಡಿ" ಎಂದು ಕರೆಯುತ್ತಿದ್ದರು. ದೇವಾಲಯ ಪ್ರಾರಂಭವಾಗಿ 65 ವರ್ಷಗಳು ಕಳೆದಿವೆ. ಈ ಉತ್ತಮ ಸಾಯಿ ಮಂದಿರವನ್ನು ಪ್ರಾರಂಭಿಸಿದ್ದಕ್ಕಾಗಿ ಸಾಯಿಭಕ್ತರು ಶ್ರೀ.ಸ್ವಾಮಿ ಕೇಶವಯ್ಯನವರನ್ನು ಇಂದಿಗೂ ಮನದಲ್ಲಿ ಸ್ಮರಿಸುತ್ತಾರೆ.

ಶ್ರೀ.ಸ್ವಾಮಿ ಕೇಶವಯ್ಯನವರು "ಶಿರಡಿಯನ್ನು ಹೊರತುಪಡಿಸಿ ಪ್ರಪಂಚದ ಯಾವ ಸ್ಥಳದಲ್ಲಿಯೂ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಬಾರದು" ಎಂದು ಬಲವಾಗಿ ನಂಬಿದ್ದರು ಹಾಗೂ ಪ್ರತಿಪಾದಿಸುತ್ತಿದ್ದರು. ಆದ ಕಾರಣ, ಶ್ರೀ.ಸ್ವಾಮಿ ಕೇಶವಯ್ಯನವರು ಈ ಮಂದಿರದಲ್ಲಿ ಶಿರಡಿಯಿಂದ ತಂದ ಅಮೃತಶಿಲೆಯ ಪಾದುಕೆಗಳನ್ನು ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟದ ಮುಂದೆ ಪ್ರತಿಷ್ಟಾಪಿಸಿ ಪ್ರತಿನಿತ್ಯ ಪೂಜೆಯನ್ನು ಪ್ರಾರಂಭಿಸಿದರು. ಆದ ಕಾರಣ, ಸಾಯಿ ಭಕ್ತರಿಗೆ ಈ ಮಂದಿರದಲ್ಲಿ ಸಾಯಿಬಾಬಾರವರ ವಿಗ್ರಹವು ಕಾಣಿಸುವುದಿಲ್ಲ.

ಪೆನುಕೊಂಡದ ಸಾಯಿ ಭಕ್ತರು ಸಾಯಿಬಾಬಾರವರನ್ನು "ಕರೆದರೆ ಓಡಿ ಬರುವ ದೈವ"  ಎಂದು ಬಲವಾಗಿ ನಂಬಿದ್ದಾರೆ. ಆದ್ದರಿಂದ ಇಲ್ಲಿ ಭಕ್ತರು ಸಾಯಿಬಾಬಾರವರನ್ನು ಅನನ್ಯ ಭಕ್ತಿ ಹಾಗೂ ಶ್ರದ್ಧೆಗಳಿಂದ ಪೂಜಿಸುತ್ತಾ ಬಂದಿದ್ದಾರೆ. ದೇವಾಲಯದಲ್ಲಿ ಪ್ರತಿನಿತ್ಯ ಅಖಂಡ ಆರಾಧನೆ, ಪೂಜೆ, ಅಭಿಷೇಕಗಳು ನಡೆಯುತ್ತದೆ. ಅಲ್ಲದೆ, ಗುರುವಾರ ಹಾಗೂ ಭಾನುವಾರಗಳಂದು ವಿಶೇಷ ಅಭಿಷೇಕ, ಪೂಜೆ ಹಾಗೂ ಭಜನೆಗಳು ನಡೆಯುತ್ತವೆ.

ಈ ಮಂದಿರದಲ್ಲಿ 1947 ನೇ ಇಸವಿಯಿಂದ ಮುಖ್ಯ ಉತ್ಸವಗಳಾದ ಶ್ರೀರಾಮನವಮಿ, ಗುರುಪೂರ್ಣಿಮೆ, ವಿಜಯದಶಮಿ (ಸಾಯಿಬಾಬಾ ಸಮಾಧಿ ದಿವಸ), ದತ್ತ ಜಯಂತಿ ಹಾಗೂ ಶ್ರೀ.ಸ್ವಾಮಿ ಕೇಶವಯ್ಯನವರ ಸಮಾಧಿ ದಿವಸ (9ನೇ ಆಗಸ್ಟ್) ಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ.  ಈ ದೇವಾಲಯದ ಅಭಿವೃದ್ಧಿಗಾಗಿ ಅನೇಕ ಮಹನೀಯರು ಧನಸಹಾಯವನ್ನು ಮಾಡಿರುತ್ತಾರೆ. ಈ ಮಂದಿರದ ಭಜನ ತಂಡದವರು ಶಿರಡಿ, ಬೆಂಗಳೂರು, ಹೈದರಾಬಾದ್, ಚನ್ನೈ, ಕೇರಳ, ಕೊಯಂಬತ್ತೂರು ಮತ್ತಿತರ ಕಡೆಗಳಲ್ಲಿ ಅನೇಕ ಬಾರಿ 3 ದಿನ ಹಾಗೂ  7 ದಿನಗಳ ಕಾಲ ನಾಮ ಸಪ್ತಾಹವನ್ನು ಮಾಡಿರುತ್ತಾರೆ. ಸಾಯಿ ಭಕ್ತರಾದ ಶ್ರೀ.ಡಿ.ಶಂಕರಯ್ಯ, ಶ್ರೀ.ಕುಬೇರಪ್ಪ, ಶ್ರೀ.ರಾಮಪ್ರಸಾದ ಗುರೂಜಿ ಮತ್ತು ಶ್ರೀ.ಸ್ವಾಮಿ ಕೇಶವಯ್ಯನವರ ಕುಟುಂಬದವರು ಈ ಮಂದಿರಕ್ಕೆ ತುಂಬು ಹೃದಯದಿಂದ ಧನ ಸಹಾಯವನ್ನು ಮಾಡಿದ್ದಾರೆ.

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಪೆನುಕೊಂಡ ಪಟ್ಟಣದಲ್ಲಿ ಇರುತ್ತದೆ.  ದೇವಾಲಯವು ಜೈನ್ ಮಂದಿರದ ಹತ್ತಿರವಿದ್ದು ಪೆನುಕೊಂಡ ಬಸ್ ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ದೇವಾಲಯದ ಭೂಮಿ ಪೂಜೆಯನ್ನು 1946 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸಾಯಿ ಭಕ್ತರೊಬ್ಬರು ದಾನವಾಗಿ ನೀಡಿರುವ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ದೇವಾಲಯದ ಉದ್ಘಾಟನೆಯನ್ನು 24ನೇ ಅಕ್ಟೋಬರ್ 1947 ರ ಪರಮ ಪವಿತ್ರ ವಿಜಯದಶಮಿಯ ದಿವಸದಂದು ಶ್ರೀ.ಸ್ವಾಮಿ ಕೇಶವಯ್ಯನವರು ದೇವಾಲಯದ ಸಮಿತಿಯ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಸ್ವಾಮಿ ಕೇಶವಯ್ಯನವರು  ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ ಸ್ವಾಮಿ ಕೇಶವಯ್ಯನವರು ಶಿರಡಿಯಿಂದ ತಂದು ಪ್ರತಿಷ್ಟಾಪಿಸಿರುವ ಅಮೃತಶಿಲೆಯ ಪಾದುಕೆಗಳನ್ನು ಹಾಗೂ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ನೋಡಬಹುದು. 











ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ        : 7:30 ರಿಂದ 11:00 ರವರೆಗೆ.
ಸಂಜೆ        : 6:00 ರಿಂದ ರಾತ್ರಿ 10:00 ರವರೆಗೆ.

ಸ್ವಾಮಿ ಕೇಶವಯ್ಯನವರು ಸಾಯಿ ನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಹೇಳಿಕೊಂಡು ಸಾಯಿಬಾಬಾರವರಿಗೆ ಆರತಿಯನ್ನು ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದರು. ಆದ ಕಾರಣ, ದೇವಾಲಯದ ಆಡಳಿತ ಮಂಡಳಿಯು ಅದೇ ಪದ್ಧತಿಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುತ್ತದೆ.

ಪ್ರತಿದಿನ ಬೆಳಿಗ್ಗೆ 7:30 ಕ್ಕೆ ರುದ್ರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕವನ್ನು ನಿಗದಿಪಡಿಸಲಾಗಿರುವುದಿಲ್ಲ. 

ಪ್ರತಿದಿನ ಸಂಜೆ 6 ರಿಂದ ರಾತ್ರಿ 9 ರವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. ಅಲ್ಲದೆ, ಗುರುವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆ ಹಾಗೂ ಭಜನೆಯ ಕಾರ್ಯಕ್ರಮವಿರುತ್ತದೆ.

ವಿಶೇಷ ಉತ್ಸವದ ದಿನಗಳು:

ಗುರುಪೂರ್ಣಿಮೆ.
ಶ್ರೀ ಸ್ವಾಮಿ ಕೇಶವಯ್ಯನವರ ಸಮಾಧಿ ದಿವಸ ಪ್ರತಿ ವರ್ಷ 9ನೇ ಆಗಸ್ಟ್.
ವಿಜಯದಶಮಿ.
ದತ್ತ ಜಯಂತಿ.

ದೇಣಿಗೆಗೆ ಮನವಿ:  

ದೇವಾಲಯದ ಆಡಳಿತ ಮಂಡಳಿಯು 100 ಜನ ಸಾಯಿ ಭಕ್ತರು ಒಟ್ಟಿಗೆ ಕುಳಿತು ಧ್ಯಾನ, ಸಾಯಿ ಸಚ್ಚರಿತ್ರೆ ಪಠಣ ಹಾಗೂ ಭಜನೆಯನ್ನು ಮಾಡಲು ಸರಿ ಹೊಂದುವಂತೆ ಧ್ಯಾನ ಮಂದಿರ ಹಾಗೂ ರಾಜಗೋಪುರವನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಿರುತ್ತದೆ. ಈ ಉತ್ತಮ ಕಾರ್ಯಕ್ಕಾಗಿ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿ ಮಂದಿರಮ್, ಪೆನುಕೊಂಡ" ಇವರ ಹೆಸರಿಗೆ ಸಂದಾಯವಾಗುವಂತೆ ನಗದು/ಚೆಕ್/ಡಿಡಿಯನ್ನು ಉಳಿತಾಯ ಖಾತೆ ಸಂಖ್ಯೆ:00003351, ಆಂಧ್ರ ಬ್ಯಾಂಕ್, ಪೆನುಕೊಂಡ ಗೆ ಕಳುಹಿಸಿಕೊಡಬಹುದಾಗಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಜೈನ್ ಮಂದಿರದ ಹತ್ತಿರ, ಪೆನುಕೊಂಡ.


ವಿಳಾಸ:
ಶ್ರೀ ಶಿರಡಿ ಸಾಯಿ ಮಂದಿರಮ್ (ದಕ್ಷಿಣ ಶಿರಡಿ)
ಮುಖ್ಯರಸ್ತೆ, ಜೈನ್ ಮಂದಿರದ ಹತ್ತಿರ,
ಪೆನುಕೊಂಡ - 515 110,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಪಿ.ರಾಮಚಂದ್ರ ಶಾಸ್ತ್ರಿ - ಪ್ರಧಾನ ಅರ್ಚಕರು / ಶ್ರೀ.ಜೆ.ರಾಮಮೋಹನ್ - ಕಾರ್ಯದರ್ಶಿ / ಡಾ.ವೈ.ರಾಮಾಂಜನೇಯುಲು.

ದೂರವಾಣಿ ಸಂಖ್ಯೆಗಳು:
+ 91 96189 97131 / +91 99635 85685 / +91 99899 46562


ಮಾರ್ಗಸೂಚಿ: 
ಪೆನುಕೊಂಡ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಜೈನ್ ಮಂದಿರದ ಹತ್ತಿರವಿರುತ್ತದೆ ಹಾಗೂ ಪೆನುಕೊಂಡ ಬಸ್ ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment