Wednesday, January 11, 2012

ಸಾಯಿ ಮಹಾಭಕ್ತ - ಶ್ರೀ.ಚೋಟು ಭಯ್ಯಾ ಪಾರುಲ್ಕರ್ ಆಲಿಯಾಸ್ ಕೃಷ್ಣಾಜಿ ನಾರಾಯಣ್ ಪಾರುಲ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ.ಚೋಟು ಭಯ್ಯಾ ಪಾರುಲ್ಕರ್ ಆಲಿಯಾಸ್ ಕೃಷ್ಣಾಜಿ ನಾರಾಯಣ್ ಪಾರುಲ್ಕರ್ ರವರು ಅನನ್ಯ ಸಾಯಿಭಕ್ತರಾಗಿದ್ದರು. ಸಾಯಿಬಾಬಾರವರು ಕೂಡ ಇವರನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಸಾಯಿಬಾಬಾರವರ ದಿವ್ಯ ತೇಜಸನ್ನು ಕಂಡು ರೋಮಾಂಚನಗೊಂಡ ಮುಂಬೈನ ಸಾಯಿಭಕ್ತ ಹಾಗೂ ಕಲಾವಿದರಾದ ಶ್ರೀ.ಎಂ.ರಾಧಾಕೃಷ್ಣ ರಾವ್ ರವರು 7ನೇ ಜೂನ್ 1914 ರಂದು ಸಾಯಿಬಾಬಾರವರ ಒಂದು ರೇಖಾಚಿತ್ರವನ್ನು ಬಿಡಿಸಿದರು. ರೇಖಾಚಿತ್ರವನ್ನು ನೋಡಿ ಕಾಕಾ ಸಾಹೇಬ್ ದೀಕ್ಷಿತ್, ಕಾಕಾ ಮಹಾಜನಿ ಮತ್ತು ಎಲ್ಲಾ ಭಕ್ತರೂ ಬಹಳ ಇಷ್ಟಪಟ್ಟರು. ಆದರೆ, ಬಾಬಾರವರು ಆ ಚಿತ್ರವನ್ನು ನೋಡಿದರೆ ಬಹಳ ಕೋಪಗೊಳ್ಳುವರು ಎಂದೂ ಕೂಡ ಚೆನ್ನಾಗಿ ಮನಗಂಡಿದ್ದರು. ಆದುದರಿಂದ ಆ ಚಿತ್ರವನ್ನು ದ್ವಾರಕಾಮಾಯಿಯಲ್ಲಿ ಇಟ್ಟು ಅದರ ಮೇಲೆ ಯಾರಿಗೂ ಕಾಣದಂತೆ ಒಂದು ಬಿಳಿಯ ಬಟ್ಟೆಯನ್ನು ಹೊದಿಸಿದರು. ಸಾಯಿಬಾಬಾರವರ ಮನಸ್ಥಿತಿ ಸರಿಯಾಗಿರುವಾಗ ಅದನ್ನು ತೋರಿಸಬೇಕೆಂದು ನಿರ್ಧರಿಸಿದ್ದರು. ಒಂದು ದಿನ ಮಧ್ಯಾನ್ಹ ಆರತಿಯಾದ ನಂತರ ಸಾಯಿಬಾಬಾರವರು ಪ್ರಸನ್ನವದನರಾಗಿದ್ದರು. ಇದೇ ಸರಿಯಾದ ಸಮಯ ಎಂದು ಮನಗಂಡ ಶ್ಯಾಮರವರು "ದೇವಾ, ಮುಂಬೈನ ಕಲಾವಿದರೊಬ್ಬರು ನಿಮ್ಮ ರೇಖಾಚಿತ್ರವನ್ನು ಬಿಡಿಸಿದ್ದಾರೆ. ನೀವು ಅದನ್ನು ನೋಡಬೇಕೆಂಬುದು ನಮ್ಮೆಲ್ಲರ ಆಶಯ" ಎಂದರು. ಶ್ಯಾಮರವರು ಮಾತನ್ನು ಮುಗಿಸುವ ಮೊದಲೇ ಬಾಬಾರವರು "ಎಲ್ಲಿದೆ ಆ ರೇಖಾಚಿತ್ರ? ಈ ಕೂಡಲೇ ಅದನ್ನು ನನ್ನ ಬಳಿಗೆ ತನ್ನಿ. ನನ್ನ ರೇಖಾಚಿತ್ರವನ್ನು ಏಕೆ ಬಿಡಿಸಿದ್ದೀರಿ?" ಗರ್ಜಿಸಿದರು. 

ದ್ವಾರಕಾಮಾಯಿಯಲ್ಲಿ ನೆರೆದಿದ್ದ ಭಕ್ತರು ಸಾಯಿಬಾಬಾರವರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಬೇಕೆಂದು ಕೂಡಲೇ ಹೋಗಿ ಆ ರೇಖಾಚಿತ್ರವನ್ನು ತಂದು ಬಾಬಾರವರ ಮುಂದೆ ಇರಿಸಿದರು. ಆ ರೇಖಾಚಿತ್ರವನ್ನು ನೋಡಿದ ಸಾಯಿಬಾಬಾರವರು ತಮ್ಮ ಕಣ್ಣುಗಳನ್ನು ತಿರುಗಿಸುತ್ತಾ ಸಟಕಾವನ್ನು ತೆಗೆದುಕೊಂಡು ಆ ರೇಖಾಚಿತ್ರವನ್ನು ಹೊಡೆಯುವಂತೆ ಸನ್ನೆ ಮಾಡುತ್ತಾ ತಮ್ಮ ಕೈಗಳನ್ನು ಹತ್ತಿರ ತೆಗೆದುಕೊಂಡು ಹೋದರು. ಆದರೆ, ಆ ಕೂಡಲೇ ಅವರು ಶಾಂತರಾದರು. ಶ್ಯಾಮರವರು "ದೇವಾ, ಈ ರೇಖಾಚಿತ್ರವನ್ನು ಏನು ಮಾಡಬೇಕು" ಎಂದು ಕೇಳಿದರು. ಅಲ್ಲಿ ನೆರೆದಿದ್ದ ಭಕ್ತರು ಸಾಯಿಬಾಬಾ ಏನು ಹೇಳುತ್ತಾರೆ ಎಂದು ಕಾತುರದಿಂದ ನಿಂತು ನೋಡುತ್ತಿದ್ದರು. ಸಾಯಿಬಾಬಾರವರು ನಾಲ್ಕೂ ದಿಕ್ಕುಗಳಲ್ಲಿ ಮತ್ತು ಅಲ್ಲಿ ನೆರೆದಿದ್ದ ಎಲ್ಲ ಭಕ್ತರನ್ನೂ ಒಮ್ಮೆ ಅವಲೋಕನೆ ಮಾಡಿದರು. ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರು ಸಾಯಿಬಾಬಾರವರ ಪಕ್ಕದಲ್ಲೇ ನಿಂತಿದ್ದರು. ಸಾಯಿಬಾಬಾರವರು ಅವರ ಕಡೆಗೆ ತಿರುಗಿ ಮೃದುವಾದ ದನಿಯಲ್ಲಿ "ಈ ರೇಖಾಚಿತ್ರವನ್ನು ನಿನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗು. ನಿನ್ನ ಹತ್ತಿರುವ ಎಲ್ಲವೂ ಬಂಗಾರವಾಗುತ್ತದೆ" ಎಂದು ನುಡಿದರು. ಆ ರೇಖಾಚಿತ್ರವು 2 1/2 x 3 1/2 ಇಂಚು ಆಯಾಮದ್ದಾಗಿರುತ್ತದೆ. ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರು ಆ ರೇಖಾಚಿತ್ರವನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ನಿತ್ಯವೂ ಪೂಜಿಸಲು ಆರಂಭಿಸಿದರು. 

2 1/2 x 3 1/2 ಆಯಾಮದ ಸಾಯಿಯವರ ರೇಖಾಚಿತ್ರ

ಇನ್ನೊಂದು ಬಾರಿ ಪುಣೆಯ ಸಾಯಿಭಕ್ತರೊಬ್ಬರು ಸಾಯಿಬಾಬಾರವರಿಗೆ ಪಾದುಕೆಗಳನ್ನು ಕಾಣಿಕೆಯಾಗಿ ಅರ್ಪಿಸಿದರು. ಆ ದಿನ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಎಂದಿನಂತೆ ಬರಿ ಕಾಲಿನಲ್ಲಿ ಹೋಗದೇ ಆ ಪಾದುಕೆಗಳನ್ನು ಹಾಕಿಕೊಂಡು ಹೋದರು. ಲೇಂಡಿ ಉದ್ಯಾನವನದಿಂದ ಬಂದ ನಂತರ ಆ ಪಾದುಕೆಗಳನ್ನು ಕಾಲಿನಿಂದ ತೆಗೆದು, ತಮ್ಮ ಕಾಲುಗಳನ್ನು ತೊಳೆದುಕೊಂಡು ದ್ವಾರಕಾಮಾಯಿಯ ಪೂಜಾಸ್ಥಳಕ್ಕೆ ಹೋದರು. ನಂತರ ಆ ಪವಿತ್ರ ಪಾದುಕೆಗಳನ್ನು ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರಿಗೆ ನೀಡಿದರು. 

 ಸಾಯಿಬಾಬಾರವರ ಪಾದುಕೆಗಳು

ಪವಿತ್ರ ಪಾದುಕೆಗಳ ವೀಡಿಯೋ ದೃಶ್ಯಾವಳಿ 

ಈ ರೇಖಾಚಿತ್ರ ಹಾಗೂ ಪವಿತ್ರ ಪಾದುಕೆಗಳು ಈಗಲೂ ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರ ವಂಶಸ್ಥರ ಬಳಿ ಇರುತ್ತದೆ. ಮಧ್ಯಪ್ರದೇಶದ ಹರ್ದಾದಲ್ಲಿರುವ ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರ ವಂಶಸ್ಥರ ಮನೆಯಲ್ಲಿ ಈ ರೇಖಾಚಿತ್ರ ಹಾಗೂ ಪವಿತ್ರ ಪಾದುಕೆಗಳನ್ನು ಪ್ರತಿನಿತ್ಯ ವಿಧ್ಯುಕ್ತವಾಗಿ ಪೂಜಿಸಲಾಗುತ್ತಿದೆ. 

ಶ್ರೀ.ಚೋಟು ಭಯ್ಯಾ ಪಾರುಲ್ಕರ್ ರವರ 3ನೇ ತಲೆಮಾರಿಗೆ ಸೇರಿದವರಾದ ಶ್ರೀ.ಕಿಶೋರ್ ರಂಗನಾಥ್ ಪಾರುಲ್ಕರ್ ರವರು ಕಳೆದ ತೊಂಬತ್ತು ವರ್ಷದಿಂದ ಪೂಜಿಸುತ್ತಿದ್ದಂತೆ ಈ ಪವಿತ್ರ ಪಾದುಕೆ ಮತ್ತು ರೇಖಾಚಿತ್ರವನ್ನು ತಾವು ಕೂಡ ಪ್ರತಿನಿತ್ಯವೂ ಅದೇ ರೀತಿಯ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸುತ್ತಿದ್ದಾರೆ. ಈ ಪವಿತ್ರ ಪಾದುಕೆಗಳನ್ನು ಪೂಜಿಸುವ ಅವಕಾಶ ಮತ್ತು ಯೋಗ ತಮಗೆ ಸಿಕ್ಕಿದ್ದಕ್ಕೆ ಅತ್ಯಂತ ಸಂತೋಷ  ಹಾಗೂ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment