ಹಿರಿಯ ಸಾಯಿಭಕ್ತ ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ (ಡಿಸೆಂಬರ್ 1917 - ಜನವರಿ 2012)
ಹಿರಿಯ ಸಾಯಿಭಕ್ತರಾದ ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು ಇದೇ ತಿಂಗಳ 11ನೇ ಜನವರಿ 2012, ಬುಧವಾರದಂದು ಶಿರಡಿಯಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ತಮ್ಮ ಹುಟ್ಟೂರಾದ ನಿಮೋಣ್ಗಾವ್ ನಲ್ಲಿ ಕೊನೆಯುಸಿರೆಳೆದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಇವರು "ದತ್ತ" ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಇವರು ಶಿರಡಿ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ ನೀಡಿದ್ದ ಪವಿತ್ರ ಪಾದುಕೆಗಳನ್ನು ಹೊಂದಿರುವ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ ನಿಮೋಣ್ಕರ್ ರವರ ಚಿಕ್ಕಪ್ಪನವರು.
ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು ತಮ್ಮ ಮರಣವನ್ನು ಒಂದು ವಾರದ ಮೊದಲೇ ಅರಿತಿದ್ದರು. ಕಳೆದ ವಾರವಷ್ಟೇ ಅವರು ಶಿರಡಿಗೆ ಹೋಗಿ ತಮಗೆ ತೀರ ಹತ್ತಿರದವರಾದ ಸ್ನೇಹಿತರೊಬ್ಬರನ್ನು ಭೇಟಿ ಮಾಡಿ ಅವರಿಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸಿದ್ದರು. ಆದರೆ, ಸಮಾಧಿ ಮಂದಿರಕ್ಕೆ ಮಾತ್ರ ದರ್ಶನಕ್ಕೆ ಹೋಗಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗ ಅವರು "ಇನ್ನು ಸ್ವಲ್ಪ ದಿನಗಳಲ್ಲೇ ನಾನು ಸಾಯಿಬಾಬಾರವರ ಬಳಿಯೇ ಹೋಗುತ್ತಿರುವಾಗ, ಸಮಾಧಿ ಮಂದಿರಕ್ಕೆ ಏಕೆ ಹೋಗಬೇಕು?" ಎಂದು ಮರುಪ್ರಶ್ನೆ ಮಾಡಿದ್ದರು ಎಂದು ಅವರ ಮನೆಯವರು ಮತ್ತು ಸ್ನೇಹಿತರು ಈ ಅಂತರ್ಜಾಲ ತಾಣಕ್ಕೆ ತಿಳಿಸಿರುತ್ತಾರೆ.
ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು ತಮ್ಮ ಮರಣವನ್ನು ಒಂದು ವಾರದ ಮೊದಲೇ ಅರಿತಿದ್ದರು. ಕಳೆದ ವಾರವಷ್ಟೇ ಅವರು ಶಿರಡಿಗೆ ಹೋಗಿ ತಮಗೆ ತೀರ ಹತ್ತಿರದವರಾದ ಸ್ನೇಹಿತರೊಬ್ಬರನ್ನು ಭೇಟಿ ಮಾಡಿ ಅವರಿಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸಿದ್ದರು. ಆದರೆ, ಸಮಾಧಿ ಮಂದಿರಕ್ಕೆ ಮಾತ್ರ ದರ್ಶನಕ್ಕೆ ಹೋಗಲಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗ ಅವರು "ಇನ್ನು ಸ್ವಲ್ಪ ದಿನಗಳಲ್ಲೇ ನಾನು ಸಾಯಿಬಾಬಾರವರ ಬಳಿಯೇ ಹೋಗುತ್ತಿರುವಾಗ, ಸಮಾಧಿ ಮಂದಿರಕ್ಕೆ ಏಕೆ ಹೋಗಬೇಕು?" ಎಂದು ಮರುಪ್ರಶ್ನೆ ಮಾಡಿದ್ದರು ಎಂದು ಅವರ ಮನೆಯವರು ಮತ್ತು ಸ್ನೇಹಿತರು ಈ ಅಂತರ್ಜಾಲ ತಾಣಕ್ಕೆ ತಿಳಿಸಿರುತ್ತಾರೆ.
ಇವರ ಅಂತಿಮ ವಿಧಿ ವಿಧಾನಗಳನ್ನು ವಿಧ್ಯುಕ್ತವಾಗಿ ನಿಮೋಣ್ಗಾವ್ ನಲ್ಲಿ ನೆರವೇರಿಸಲಾಯಿತು. ಇವರ ಅಂತಿಮ ಯಾತ್ರೆಗೆ ಕೆಲವೇ ಗಳಿಗೆ ಮುಂಚಿತವಾಗಿ ಶಿರಡಿ ಸಾಯಿಬಾಬಾರವರು ಯಾರೋ ಒಬ್ಬ ಅನಾಮಧೇಯ ಭಕ್ತರೊಬ್ಬರ ರೂಪದಲ್ಲಿ ಶಿರಡಿ ಗ್ರಾಮದಿಂದ ಬಂದು ಸಾಯಿಬಾಬಾರವರ ವಿಗ್ರಹದ ಮೇಲಿನ ಚಂದನ ಹಾಗೂ ಸಾಯಿಬಾಬಾರವರ ಸಮಾಧಿಯ ಮೇಲಿದ್ದ ಶೇಷವಸ್ತ್ರವನ್ನು ಅರ್ಪಿಸಿದ ಮೇಲೆ ಅಂತಿಮ ಯಾತ್ರೆಯ ಮೆರವಣಿಗೆ ಪ್ರಾರಂಭವಾಗಿದ್ದು ಸಾಯಿಬಾಬಾರವರ ಒಂದು ಪವಾಡವೇ ಸರಿ!!!!!!
ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರು 1917 ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಸಾಯಿಬಾಬಾರವರ ದಯೆಯಿಂದ ಪವಾಡಸದೃಶ ರೀತಿಯಲ್ಲಿ ಜನಿಸಿದರು. ಅದರ ಸಾರಾಂಶವನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ:
1917 ನೇ ಇಸವಿಯ ಡಿಸೆಂಬರ್ ತಿಂಗಳಿನಲ್ಲಿ ಪುಣೆಯಲ್ಲಿ ಪ್ಲೇಗ್ ಮಹಾಮಾರಿ ಪ್ರಾರಂಭವಾಗಿ ಎಲ್ಲೆಡೆ ವಿಪರೀತ ಹಾನಿಯನ್ನು ಮಾಡಿತ್ತು. ನಾನಾ ಸಾಹೇಬ್ ನಿಮೋಣ್ಕರ್ ರವರ ಪುತ್ರರಾದ ಸೋಮನಾಥ್ ರವರು ತಮ್ಮ ಎರಡು ವರ್ಷದ ಮಗ ಗೋಪಾಲ್ ರಾವ್ ನೊಂದಿಗೆ ನಿಮೋಣ್ ಗೆ ಹೋಗಿ ಬರಲು ನಿರ್ಧರಿಸಿದರು. ಮಾರ್ಗ ಮಧ್ಯದಲ್ಲಿ ಶಿರಡಿಗೆ ಬಂದು ಸಾಯಿಬಾಬಾರವರ ದರ್ಶನ ಪಡೆದರು. ಶಿರಡಿಯನ್ನು ಬಿಟ್ಟು ಹೊರಡುವಾಗ ಸಾಯಿಬಾಬಾರವರು "ಪೋರ ಲಾ ಜೀವ್ ಲಾವ್" (ಮಗುವನ್ನು ಉಳಿಸು) ಎಂದು ಹೇಳಿ ಉಧಿಯನ್ನು ನೀಡಿದರು. ಸೋಮನಾಥ್ ರವರು ಸಾಯಿಯವರು ತಮ್ಮ ಮಗ ಗೋಪಾಲ್ ರಾವ್ ಬಗ್ಗೆ ಹೇಳುತ್ತಿದ್ದಾರೆಂದು ತಿಳಿದು ಆ ಉಧಿಯನ್ನು ತಮ್ಮ ಮಗನಿಗೆ ನೀಡಿದರು.
ಸೋಮನಾಥ್ ಮತ್ತು ಅವರ ಮಗ ಗೋಪಾಲ್ ರಾವ್ ರವರು ನಿಮೋಣ್ಗಾವ್ ತಲುಪಿದಾಗ ಅವರ ಸೋದರನ ಮಗ ದತ್ತಾತ್ರೇಯ ಸಾವಿನ ದವಡೆಯಲ್ಲಿದ್ದರು. ಕೇವಲ 12 ದಿವಸದ ಮಗುವಾದ ದತ್ತಾತ್ರೇಯರವರ ಇಡೀ ದೇಹವು ನೀಲಿ ಬಣ್ಣಕ್ಕೆ ತಿರುಗಿತ್ತು ಮತ್ತು ಮಗುವು ಉಸಿರಾಡಲು ಬಹಳ ಕಷ್ಟಪಡುತ್ತಿತ್ತು. ಆಗ ಸೋಮನಾಥ್ ರವರಿಗೆ ಬಾಬಾರವರು ಉಧಿಯನ್ನು ತಮಗೆ ನೀಡಿದ್ದು ಆ ಮಗುವನ್ನು ಉಳಿಸಲು ಎಂದು ಅರ್ಥವಾಯಿತು. ಆಗ ದಿಕ್ಕೆಟ್ಟ ಸೋಮನಾಥ್ ರವರು ಉಧಿಗಾಗಿ ಬಹಳ ಹುಡುಕಾಡಿದರು. ಆದರೆ, ಪ್ರಯಾಣದ ಮಾರ್ಗ ಮಧ್ಯದಲ್ಲಿ ಆ ಉಧಿಯ ಪೊಟ್ಟಣ ಎಲ್ಲಿಯೋ ಬಿದ್ದು ಹೋಗಿತ್ತು. ಸೋಮನಾಥ್ ರವರು ಧೃತಿಗೆಡದೇ ಮಗುವನ್ನು ತಮ್ಮ ಕೈನಲ್ಲಿ ಎತ್ತಿಕೊಂಡು ಆ ಮಗುವನ್ನು ಉಳಿಸಿಕೊಡುವಂತೆ ಸಾಯಿಬಾಬಾರವರನ್ನು ಅತ್ಯಂತ ದೀನರಾಗಿ ಪ್ರಾರ್ಥಿಸಿದರು. ಸಾಯಿಯವರನ್ನು ಪ್ರಾರ್ಥಿಸಿದ ಕೇವಲ 15 ನಿಮಿಷಗಳಲ್ಲಿ ಮಗುವಿನ ದೇಹವು ಬಿಸಿಯಾಗಲು ಪ್ರಾರಂಭಿಸಿ ಸಾಮಾನ್ಯ ಸ್ಥಿತಿಗೆ ಬಂದಿತು. ಸಹಜ ಉಸಿರಾಟ ಪ್ರಾರಂಭವಾಗಿ ಮಗುವಿನ ದೇಹಸ್ಥಿತಿಯಲ್ಲಿ ಸುಧಾರಣೆ ಕಂಡಿತು. ಸಾಯಿಬಾಬಾರವರ ದಯೆ ಹಾಗೂ ಆಶೀರ್ವಾದದಿಂದ ಮಗುವಿಗೆ ಜೀವ ಮರಳಿ ಬಂದಿದ್ದರಿಂದ ಮಗುವಿಗೆ ಮನೆಯವರೆಲ್ಲರೂ ಸೇರಿ "ದತ್ತ" ಎಂದು ನಾಮಕರಣ ಮಾಡಿದರು.
ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ ಮತ್ತು ಅದರ ಕನ್ನಡ ರೂಪಾಂತರ ಸಾಯಿಅಮೃತವಾಣಿ.ಬ್ಲಾಗ್ಸ್ಪಾಟ್.ಕಾಮ್ ನ ಬಳಗವು ಶ್ರೀ.ದತ್ತಾತ್ರೇಯ ದೇಶಪಾಂಡೆ ನಿಮೋಣ್ಕರ್ ರವರ ಆತ್ಮಕ್ಕೆ ಶಾಂತಿಯನ್ನು ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಶಿರಡಿ ಸಾಯಿಬಾಬಾರವರನ್ನು ಅತ್ಯಂತ ವಿನಯದಿಂದ ಪ್ರಾರ್ಥಿಸುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment