ಶ್ರೀ.ಆಡಂ ಜಾನ್ ಪಟಾಣ್ ರವರು ಶಿರಡಿಯ ಸನ್ ಅಂಡ್ ಸ್ಯಾಂಡ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಂದಿರವನ್ನು ಕಟ್ಟಲು ಬಹಳ ಹಣ ಬೇಕಾಗಿದ್ದರಿಂದ ಚಂದಾ ವಸೂಲಿ ಮಾಡಲು ಪ್ರಾರಂಭಿಸಿದರು. ಆದರೆ, ಅವರಿಗೆ ಚಂದಾ ಎತ್ತಿದ್ದರಿಂದ ಹೆಚ್ಚಿಗೆ ಹಣ ದೊರೆಯಲಿಲ್ಲ. ಆ ಸಮಯದಲ್ಲಿ ಇವರಿಗೆ ಅತ್ಯಂತ ಹಿರಿಯ ಸಾಯಿಭಕ್ತೆಯಾದ ಶ್ರೀಮತಿ.ವಾರಿಜಾ ಪ್ರಭುರವರೊಡನೆ ಅತ್ಯಂತ ಹೆಚ್ಚಿನ ಪರಿಚಯವಿದ್ದಿತು. ಆದ ಕಾರಣ ಶ್ರೀ.ಆಡಂ ರವರು ತಾವು ಕೈಗೆತ್ತಿಗೊಂಡ ಕಾರ್ಯದ ಬಗ್ಗೆ ಮತ್ತು ಅದಕ್ಕೆ ಬೇಕಾದ ಹಣದ ತೊಂದರೆಯಿರುವ ಬಗ್ಗೆ ಆಕೆಯೊಡನೆ ಹೇಳಿಕೊಂಡರು. ಶ್ರೀಮತಿ.ವಾರಿಜಾ ಪ್ರಭುರವರಿಗೆ ಒಬ್ಬ ಮುಸ್ಲಿಂ ಭಕ್ತನೊಬ್ಬ ಸಾಯಿಬಾಬಾ ಮಂದಿರವನ್ನು ನಿರ್ಮಾಣ ಮಾಡಲು ಹೊರಟಿರುವುದನ್ನು ಕಂಡು ಅತ್ಯಂತ ಆಶ್ಚರ್ಯ ಮತ್ತು ಸಂತೋಷವಾಯಿತು. ಆದ ಕಾರಣ ತಮಗೆ ಬರುತ್ತಿದ ಪಿಂಚಣಿ ಹಣವನ್ನು 3 ತಿಂಗಳುಗಳ ಕಾಲ ಕೂಡಿ ಹಾಕಿ ಒಟ್ಟು ಹತ್ತು ಸಾವಿರ ರುಪಾಯಿಗಳನ್ನು ನೀಡಿದರು. ಅವರ ಮಕ್ಕಳಾದ ಸಾಯಿಭಕ್ತ ಶ್ರೀಮತಿ.ವಿನ್ನಿ ಚಿಟ್ಲೂರಿ ಮತ್ತು ಶ್ರೀಮತಿ.ಆಶಾಲತಾರವರು ಕೂಡ ದೇಣಿಗೆಯನ್ನು ನೀಡಿದ್ದರಿಂದ ಕಟ್ಟಡ ನಿರ್ಮಾಣದ ಕೆಲಸ ಆರಂಭವಾಯಿತು. ಗುರುಪೂರ್ಣಿಮೆ ಉತ್ಸವಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿತ್ತು. ಶ್ರೀ.ಆಡಂ ರವರು ಗುರುಪೂರ್ಣಿಮೆಯನ್ನು ತಮ್ಮ ಮಂದಿರದಲ್ಲಿ ಆಚರಿಸಲು ನಿರ್ಧರಿಸಿದ್ದರು. ಆದ್ದರಿಂದ ಕೊರಾಳೆ ಗ್ರಾಮದ ಮಕ್ಕಳು ಮತ್ತು ಗ್ರಾಮಸ್ಥರೆಲ್ಲ ಒಂದೇ ಮನಸ್ಸಿನಿಂದ ಹಗಲು ರಾತ್ರಿ ಕೆಲಸ ಮಾಡಿ ಮಣ್ಣಿನಲ್ಲಿ ಮಂದಿರವನ್ನು ಕಟ್ಟಿದರು. ತಮ್ಮ ಬಳಿಯಿದ್ದ ಸ್ವಲ್ಪ ಹಣದಿಂದ ಮಂದಿರದ ಒಳಗಡೆಯ ಗೋಡೆಯನ್ನು ಸಿಮೆಂಟ್ ನಿಂದ ಲೇಪನ ಮಾಡಿದರು. ಗುರುಪೂರ್ಣಿಮೆ ಉತ್ಸವವನ್ನು 3 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು. ಮೊದಲ ದಿನ ಶ್ರೀ.ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಮಾಡಲಾಯಿತು. ಪಲ್ಲಕ್ಕಿ ಉತ್ಸವ ಹಾಗೂ ಅನ್ನದಾನವನ್ನು ಕೂಡ ಉತ್ಸವದ 3 ದಿನಗಳೂ ಮಾಡಲಾಯಿತು.
ಪುಸ್ತಕವನ್ನು ಬರೆಯಲು ಬೇಕಾದ ಕೆಲವು ವಿಷಯಗಳಿಗಾಗಿ ಹುಡುಕಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಬಳಿಯಿದ್ದ ಸಾಯಿಲೀಲಾ ಮಾಸಪತ್ರಿಕೆಯಲ್ಲಿ ಬಂದ ಅಂಕಣವೊಂದರಲ್ಲಿ ಶಿರಡಿಯ ನರಸಿಂಹ ಲಾಡ್ಜ್ ನ ಹತ್ತಿರ ಸಾಯಿಬಾಬಾರವರ ಪಾದುಕೆಯನ್ನು ಸ್ಥಾಪಿಸಲಾಗಿರುವ ವಿಷಯವನ್ನು ಓದಿದ್ದರು. ಈ ವಿಷಯವನ್ನು ಪ್ರತಿನಿತ್ಯ ಸಾಯಿಬಾಬಾರವರು ಭಿಕ್ಷೆಯನ್ನು ಸ್ವೀಕರಿಸುತ್ತಿದ್ದ ಸಾಯಿ ಮಹಾಭಕ್ತ ಶ್ರೀ.ವಾಮನ್ ರಾವ್ ಗೊಂದ್ಕರ್ ರವರ ಮೊಮ್ಮಗ ಶ್ರೀ.ಅಮೃತ್ ರಾವ್ ಗೊಂದ್ಕರ್ ರವರು ಕೂಡ
ಶ್ರೀ.ಸದಾನಂದ ಎಸ್.ಗೋಡೆ, ಶ್ರೀಮತಿ.ವಿನ್ನಿ ಚಿಟ್ಲೂರಿ ಮತ್ತು ಲಾಡ್ಜ್ ನ ಮಾಲೀಕರು ಮತ್ತು ಆ ಪವಿತ್ರ ಪಾದುಕೆಗಳು ಎಲ್ಲಿ ಭಿನ್ನವಾಗುವುದೋ ಎಂಬ ಆತಂಕದಿಂದ ಇದ್ದರು. ಅವರೆಲ್ಲರೂ ಸೇರಿ ಆ ಸಂದರ್ಭ ಬಂದರೆ ಯಾವ ರೀತಿಯ ಕರ್ಮ ಕೈಗೊಳ್ಳಬೇಕೆಂದು ಸ್ಥಳೀಯ ಪುರೋಹಿತರನ್ನು ವಿಚಾರಿಸಿದರು.
3 ದಿನಗಳ ಕಾಲ ಶ್ರೀಮತಿ.ವಿನ್ನಿ ಚಿಟ್ಲೂರಿ ಮತ್ತು ಶ್ರೀ.ಆಡಂ ರವರು ಅಗಲೀಕರಣ ಕಾರ್ಯ ನಡೆಯುವ ಸ್ಥಳದಲ್ಲೇ ನಿಂತು ಏನಾಗುವುದೋ ಎಂಬ ಆತಂಕದಿಂದ ನೋಡುತ್ತಿದ್ದರು. ಕೊನೆಗೂ ಭೂಮಿಯನ್ನು ಸಮತಲಗೊಳಿಸುವ ಮಾಡುವ ಬೃಹತ್ ಯಂತ್ರ ಬಂದು ಆ ಪಾದುಕೆಗಳಿದ್ದ ಗೋಡೆಯನ್ನು ಕೆಡವಿ ಹಾಕಿತು. ಆ ಸಂದರ್ಭದಲ್ಲಿ ಪಾದುಕೆಗಳ ಮೇಲೆ ನೂರಾರು ಇಟ್ಟಿಗೆಗಳು ಬಿದ್ದವು ಆಗ ನಡೆದ ಘಟನೆ ಎಲ್ಲರನ್ನೂ ಭಾವೋದ್ವೇಗಕ್ಕೆ ಒಳಗಾಗಿಸಿ ಮಾತೇ ಹೊರಡದಂತೆ ಮಾಡಿತು. ಸಖಾರಾಮ್ ಶೆಲ್ಕೆ ಯವರ ಮನೆತನಕ್ಕೆ ಸೇರಿದ 3 ಜನ ಯುವಕರು ಮುಂದೆ ಬಂದು ಆ ಪವಿತ್ರ ಪಾದುಕೆಗಳನ್ನು ಶ್ರೀಮತಿ.ವಿನ್ನಿ ಚಿಟ್ಲೂರಿಯವರಿಗೆ ನೀಡಿದರು.
ಶ್ರೀಮತಿ.ವಿನ್ನಿ ಚಿಟ್ಲೂರಿ ಮತ್ತು ಶ್ರೀ.ಆಡಂ ರವರು ಒಂದು ವ್ಯಾನ್ ಬಾಡಿಗೆಗೆ ಪಡೆದು ಅದರಲ್ಲಿ ಪವಿತ್ರ ಪಾದುಕೆಗಳನ್ನು ಇರಿಸಿ ಜೋಪಾನವಾಗಿ ಈಗ ಕೊರಾಳೆ ಮಂದಿರವಿರುವ ಸ್ಥಳಕ್ಕೆ ತೆಗೆದುಕೊಂಡು ಹೋದರು. ಅಲ್ಲಿ ಅದಕ್ಕೆ ಪ್ರತಿನಿತ್ಯ ಅಭಿಷೇಕ ಮತ್ತು ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ಪಾದುಕೆಗಳನ್ನು ಹಾಗೆ ಬಿಡಲು ಆಗದ ಕಾರಣ ಆ ಸ್ಥಳದಲ್ಲಿ ಮಂದಿರವನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಪವಿತ್ರ ಪಾದುಕೆಗಳ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಗುರುಪೂರ್ಣಿಮೆಯ ದಿನ ಮಾಡಲು ಎಲ್ಲರೂ ಒಮ್ಮತದಿಂದ ತೀರ್ಮಾನಿಸಿದರು. ಅದರಂತೆ 3 ತಿಂಗಳುಗಳ ಕಾಲ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಹಗಲೂ ರಾತ್ರಿ ಕೆಲಸ ಮಾಡಿ ಮಂದಿರವನ್ನು ನಿರ್ಮಾಣ ಮಾಡಿದರು. ಈ ರೀತಿಯಲ್ಲಿ 2004ನೇ ಇಸವಿಯ ಪವಿತ್ರ ಗುರುಪೂರ್ಣಿಮೆಯ ದಿನ ಪಾದುಕೆಗಳ ಪ್ರತಿಷ್ಟಾಪನೆ ಕಾರ್ಯ ವಿಧ್ಯುಕ್ತವಾಗಿ ನೆರವೇರಿತು.
ಈ ಪಾದುಕೆಗಳು ಸುಮಾರು 100 ವರ್ಷಕ್ಕೂ ಹೆಚ್ಚು ಹಳೆಯದಾಗಿರುತ್ತದೆ. ಈ ಪಾದುಕೆಗಳನ್ನು ಕಲ್ಲಿನಲ್ಲಿ ಕೆತ್ತಲಾಗಿರುತ್ತದೆ. ಶಿರಡಿ ಸಾಯಿಬಾಬಾರವರು ಆ ಸ್ಥಳದಲ್ಲಿ ನಿಂತಾಗ ಶಿಲ್ಪಿಯು ಅವರ ಪಾದಗಳ ಅಳತೆಯನ್ನು ತೆಗೆದುಕೊಂಡು ಮಾಡಿದ ಹಾಗೆ ಬಹಳ ಸುಂದರವಾಗಿ ಪಾದುಕೆಗಳನ್ನು ಕಲ್ಲಿನ ಮೇಲೆ ಕೆತ್ತಲಾಗಿದೆ. ಪಾದುಕೆಗಳ ಮುಂಭಾಗದಲ್ಲಿ ಬಟ್ಟಲಿನ ಆಕಾರದಲ್ಲಿ ಒಂದು ಸಣ್ಣ ಹಳ್ಳವಿರುತ್ತದೆ. ಸಾಯಿಬಾಬಾರವರು ಭಿಕ್ಷೆಗೆ ಹೋಗುತ್ತಿದ್ದ ಸಮಯದಲ್ಲಿ ಆ ಪಾದುಕೆಗಳಿದ್ದ ಸ್ಥಳದಲ್ಲಿ ನಿಂತು ತಮ್ಮ ಜೋಳಿಗೆಯಿಂದ ನಾಯಿಗಳಿಗೆ, ಕಾಗೆಗಳಿಗೆ ಮತ್ತು ಇತರ ಪಕ್ಷಿಗಳಿಗೆ ತಮ್ಮ ಸ್ವಹಸ್ತದಿಂದ ಆಹಾರವನ್ನು ನೀಡುತ್ತಿದ್ದರೆಂದು ತಿಳಿದುಬಂದಿರುತ್ತದೆ. ನಂತರ ಆ ಬಟ್ಟಲಿನ ಆಕಾರದಲ್ಲಿದ್ದ ಹಳ್ಳದಲ್ಲಿ ತಾವು ಭಿಕ್ಷೆಯಾಗಿ ಪಡೆದಿದ್ದ ಸಾರು, ಹುಳಿ ಮುಂತಾದ ದ್ರವ್ಯ ವನ್ನು ಮತ್ತು ಕೆಲವು ಬಾರಿ ನೀರನ್ನು ತುಂಬಿಸುತ್ತಿದ್ದರೆಂದು ತಿಳಿದುಬಂದಿದೆ. ಪಕ್ಷಿಗಳು ಬಂದು ಆ ನೀರನ್ನು ಕುಡಿದು ಹೋಗುತ್ತಿದ್ದವೆಂದು ಗೊತ್ತಾಗಿದೆ.
ದುರದೃಷವಶಾತ್ ದೇವಾಲಯದ ಉದ್ಘಾಟನೆಯಾದ ಕೆಲವು ದಿನಗಳಲ್ಲೇ ಶ್ರೀ.ಆಡಂ ರವರು ತೀರಿಕೊಂಡರು. ಅವರ ಅಕಾಲಿಕ ಮರಣದ ನಂತರ ದೇವಾಲಯದ ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀ.ಸದಾನಂದ ಎಸ್.ಗೋಡೆಯವರು ವಹಿಸಿಕೊಂಡರು. ದೇವಾಲಯವು ಶಿರಡಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದ್ದು ಹೋಗಲು ಸರಿಯಾದ ವಾಹನದ ವ್ಯವಸ್ಥೆ ಇರುವುದಿಲ್ಲ. ಆದ ಕಾರಣ, ಸ್ವಂತ ವಾಹನದಲ್ಲಿ ಅಥವಾ ಯಾವುದಾದರೂ ಆಟೋ ಅಥವಾ ವಾಹನವನ್ನು ಶಿರಡಿಯಿಂದ ಈ ಸ್ಥಳಕ್ಕೆ ಹೋಗಿ ಬರುವುದಕ್ಕೆ ಮೊದಲೇ ಗೊತ್ತು ಮಾಡಿಕೊಂಡು ಹೋಗಿ ಬರುವುದು ಒಳಿತು.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
ವರ್ಷದ ಉದ್ದಕೂ ಅದರಲ್ಲೂ ವಿಶೇಷವಾಗಿ ರಾಮನವಮಿ ಉತ್ಸವದ ಸಮಯದಲ್ಲಿ ಮುಂಬೈ ಮತ್ತು ಪುಣೆಯಿಂದ ಲಕ್ಷಾಂತರ ಮಂದಿ ಪಾದಯಾತ್ರಿಗಳು ಶಿರಡಿಗೆ ಈ ಮಾರ್ಗದಲ್ಲೇ ಬರುತ್ತಾರೆ. ಅವರಿಗೆ ಉಳಿದುಕೊಳ್ಳಲು ಸ್ಥಳ, ಸ್ನಾನದ ವ್ಯವಸ್ಥೆ ಮತ್ತು ಯಾವುದೇ ಸಮಯದಲ್ಲಿ ಆಗಲಿ ಕುಡಿಯಲು ಟೀ ವ್ಯವಸ್ಥೆಯನ್ನು ಟ್ರಸ್ಟ್ ನ ಸದಸ್ಯರು ಉಚಿತವಾಗಿ ಮಾಡಿಕೊಡುತ್ತಾರೆ. ಟೀ ಮಾಡಲು ಕೆಲವು ವೇಳೆ ಹಾಲು ಸಾಕಾಗುತ್ತಿರಲಿಲ್ಲ. ಆಗ ಟ್ರಸ್ಟ್ ನ ಸದಸ್ಯರು ಗ್ರಾಮದಲ್ಲಿದ್ದ ಮನೆಗಳಿಗೆ ಹೋಗಿ ಅಪರಾತ್ರಿಯಲ್ಲಿ ಹಸುವಿನ ಹಾಲನ್ನು ಕರೆದುಕೊಂಡು ಬಂದು ಟೀ ಮಾಡಿ ಕೊಡುತ್ತಿದ್ದರು. ಪಾದಯಾತ್ರಿಗಳು ನಡೆದು ಬರುವುದರಿಂದ ಆಗುವ ಆಯಾಸವನ್ನು ಹೋಗಲಾಡಿಸಲು ಟೀ ನಲ್ಲಿ ಹೆಚ್ಚಿಗೆ ಸಕ್ಕರೆಯನ್ನು ಸೇರಿಸಿ ಕೊಡಲಾಗುತ್ತದೆ. ಸ್ವಲ್ಪ ಹೊತ್ತು ಈ ಸ್ಥಳದಲ್ಲಿ ದಣಿವಾರಿಸಿಕೊಂಡು ನಂತರ ಮುಂದಿನ 12 ಕಿಲೋಮೀಟರ್ ದೂರವನ್ನು ಪಾದಯಾತ್ರಿಗಳು ಕ್ರಮಿಸುತ್ತಾರೆ ಮತ್ತು ಶಿರಡಿಯನ್ನು ಸೇರುತ್ತಾರೆ. ಅವರಿಗೆ ದಾರಿಗೆ ಬೇಕಾಗುವ ಹಣ್ಣು ಹಂಪಲು ಮತ್ತು ತಿಂಡಿಗಳನ್ನು ಕೂಡ ಟ್ರಸ್ಟ್ ನ ವತಿಯಿಂದ ನೀಡಲಾಗುತ್ತದೆ. ಯಾತ್ರಿಗಳು ಈ ಸ್ಥಳದಲ್ಲಿ 7 ರಿಂದ 15 ದಿನಗಳ ಕಾಲ ತಂಗಲು ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತಿದೆ. ಹೀಗೆ ಉಳಿದುಕೊಳ್ಳುವ ಪಾದಯಾತ್ರಿಗಳು ಈ ಸ್ಥಳದಲ್ಲಿ ಸಾಯಿ ಸಚ್ಚರಿತ್ರೆಯ ಪಾರಾಯಣ ಮತ್ತು ಇತರ ಪವಿತ್ರ ಗ್ರಂಥಗಳ ಪಾರಾಯಣವನ್ನು ಮಾಡುತ್ತಾರೆ. ಪಾದಯಾತ್ರಿಗಳಷ್ಟೇ ಅಲ್ಲದೆ, ಈ ಸ್ಥಳವು ಗಾಯಗೊಂಡ ನಾಯಿ, ಬೆಕ್ಕು, ಹಸು ಮತ್ತಿತರ ಪ್ರಾಣಿಗಳಿಗೂ ಕೂಡ ಆಶ್ರಯ ತಾಣವಾಗಿರುತ್ತದೆ. ಸುತ್ತಮುತ್ತಲಿನ ಗ್ರಾಮಸ್ಥರು ಗಾಯಗೊಂಡ ಪ್ರಾಣಿಗಳನ್ನು ಈ ಸ್ಥಳಕ್ಕೆ ತಂದು ಬಿಡುತ್ತಾರೆ. ಅಲ್ಲದೆ, ಪ್ರತಿನಿತ್ಯ ಈ ಮಂದಿರದಲ್ಲಿ ನಾಯಿ, ಬೆಕ್ಕು, ಹಸು ಮತ್ತಿತರ ಪಕ್ಷಿಗಳಿಗೆ ಆಹಾರವನ್ನು ನೀಡಲಾಗುತ್ತಿದೆ.
ಈ ಮಂದಿರದಲ್ಲಿ ಯಾವುದೇ ಜಾತಿ ಮತ ಭೇದವಿಲ್ಲದೇ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತದೆ. ಶಿರಡಿಯಲ್ಲಿ ನಡೆಯುವ 3 ವಿಶೇಷ ಉತ್ಸವಗಳನ್ನು ಇಲ್ಲಿ ಕೂಡ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಖಾಯಿಲೆಯಿಂದ ಬಳಲುತ್ತಿರುವ ಸುತ್ತಮುತ್ತಲಿನ ಗ್ರಾಮದ ರೋಗಿಗಳನ್ನು ಟ್ರಸ್ಟ್ ನ ಸದಸ್ಯರು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಶಿರಡಿಯಲ್ಲಿರುವ ಸಾಯಿಬಾಬಾ ಆಸ್ಪತ್ರೆಗೆ ಸೇರಿಸುತ್ತಾರೆ.
ವರ್ಷದಲ್ಲಿ ಎರಡು ಬಾರಿ ಮಂದಿರದ ಆವರಣದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಶಿಬಿರದಲ್ಲಿ ಕೊರಾಳೆ ಮತ್ತು ಸುತ್ತಮುತ್ತಲಿನ ಗ್ರಾಮದ ಯುವಕರು ಮತ್ತು ಟ್ರಸ್ಟ್ ನ ಸದಸ್ಯರೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಪ್ರತಿ ತಿಂಗಳ ಒಂದು ದಿವಸ ಟ್ರಸ್ಟ್ ನ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ತಜ್ಞ ವೈದ್ಯರು ಬಂದು ಸುತ್ತಮುತ್ತಲಿನ ಗ್ರಾಮದ ರೋಗಿಗಳನ್ನು ಪರೀಕ್ಷಿಸಿ ಉಚಿತವಾಗಿ ಔಷಧಿಗಳನ್ನೂ ಕೂಡ ನೀಡುತ್ತಾರೆ.
ಆಗಾಗ್ಗೆ ತಜ್ಞ ನೇತ್ರ ವೈದ್ಯರನ್ನು ಕರೆಯಿಸಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ನಡೆಸಲಾಗುತ್ತದೆ. ನೇತ್ರ ತಪಾಸಣಾ ಉಪಕರಣಗಳು ಬಹಳ ದೊಡ್ಡ ಪ್ರಮಾಣದ್ದಾಗಿರುವುದರಿಂದ ಅವುಗಳನ್ನು ದೂರದ ಊರುಗಳಿಂದ ಈ ಗ್ರಾಮಕ್ಕೆ ತರಲು ಕಷ್ಟವಾಗುವ ಕಾರಣ ಈ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸಲಾಗುತ್ತಿಲ್ಲ.
ಟ್ರಸ್ಟ್ ನ ಸದಸ್ಯರೆಲ್ಲರೂ ಪ್ರತಿ ವರ್ಷ ರಾಮನವಮಿಗೆ ಒಂದು ವಾರ ಮುಂಚೆಯೇ ಮುಂಬೈಗೆ ಅಂಬ್ಯುಲೆನ್ಸ್, ಔಷಧಿಗಳು ಮತ್ತು ಪ್ರಥಮ ಚಿಕಿತ್ಸೆಯ ಎಲ್ಲಾ ಪರಿಕರಗಳನ್ನು ತೆಗೆದುಕೊಂಡು ಹೋಗಿ ಪಾದಯಾತ್ರೆಯ ಪ್ರಾರಂಭದಿಂದ ಶಿರಡಿಯನ್ನು ತಲುಪುವವರೆಗೆ ಯಾತ್ರಿಗಳ ಜೊತೆಗೇ ಇದ್ದು ಅವರ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಾ ಬಂದಿದ್ದಾರೆ.
ಕೊರಾಳೆ ಗ್ರಾಮದಲ್ಲಿ ಬಹಳ ಹಾವುಗಳು ಮತ್ತು ಚೇಳುಗಳಿದ್ದು ಅದರ ಕಡಿತಕ್ಕೆ ಒಳಗಾದ ಗ್ರಾಮಸ್ಥರನ್ನು ಕೂಡಲೇ ಶಿರಡಿಯ ಆಸ್ಪತ್ರೆಗೆ ಕರೆದುಕೊಂಡು ಬಂದು ನಂಜು ವಿರೋಧಿ ಚುಚ್ಚು ಮದ್ದು ಕೊಡಿಸಿ ಅನೇಕ ಗ್ರಾಮಸ್ಥರ ಪ್ರಾಣವನ್ನು ಉಳಿಸಿದ್ದಾರೆ.
ಮಂದಿರದ ಟ್ರಸ್ಟ್ ಗ್ರಾಮದ ಪ್ರಥಮ ಚಿಕಿತ್ಸಾ ಕೇಂದ್ರದೊಡನೆ ಸಹಯೋಗವನ್ನು ಹೊಂದಿರುತ್ತದೆ. ಗ್ರಾಮದಲ್ಲಿ ಕ್ಷಯ ರೋಗದಿಂದ ಬಳಲುತ್ತಿರುವ ಗ್ರಾಮಸ್ಥರನ್ನು ಕ್ಷಯರೋಗ ನಿವಾರಣಾ ಕೇಂದ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲದೆ, ಖಾಯಿಲೆಯಿಂದ ಆಸ್ಪತ್ರೆಗೆ ಬರಲು ಆಗದ ರೋಗಿಗಳಿಗೆ ತಾವೇ ಔಷಧಿಗಳನ್ನು ತಂದು ಕೊಡುತ್ತಾರೆ. ಅಷ್ಟೇ ಅಲ್ಲದೇ, ವಯಸ್ಸಾದ ಮತ್ತು ನಡೆಯಲು ಆಗದ ರೋಗಿಗಳನ್ನು ತಮ್ಮ ಟ್ರಸ್ಟ್ ನ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಾರೆ.
ಕೊರಾಳೆ ಗ್ರಾಮದಲ್ಲಿ ಬೇರೆ ಕಡೆಯಿಂದ ವಲಸೆ ಬಂದ ಅನೇಕ ಕೂಲಿ ಕಾರ್ಮಿಕರು ಮತ್ತು ಗಾರೆ ಕೆಲಸದವರು ವಾಸ ಮಾಡುತ್ತಿದ್ದು ಅವರ ಮಕ್ಕಳು ಒಳ್ಳೆಯ ಪೋಷಣೆ ಇಲ್ಲದೇ ವಿದ್ಯೆ ಮತ್ತು ಕೆಲಸ ಇಲ್ಲದೇ ದಿನೇ ದಿನೇ ಸೊರಗುತ್ತಿದ್ದಾರೆ. ಅಂತಹ ಮಕ್ಕಳನ್ನು ಟ್ರಸ್ಟ್ ನ ಸದಸ್ಯರು ಪ್ರೋತ್ಸಾಹ ನೀಡಿ ಶಿರಡಿಯಲ್ಲಿರುವ ಐ.ಟಿ.ಐ.ಗೆ ಸೇರುವಂತೆ ಮಾಡಿ ಅಲ್ಲಿ ಅವರು ಚೆನ್ನಾಗಿ ವಿದ್ಯೆ ಕಲಿತು ಎಲೆಕ್ತ್ರೀಶಿಯನ್, ಬೆಸುಗೆಗಾರ ಮತ್ತು ಪ್ಲಂಬರ್ ಆಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಡಿ ಬಾಬಾರವರ ಉಪದೇಶವನ್ನು ಅನುಸರಿಸಿ ಅನ್ನದಾನಕ್ಕೆ ಟ್ರಸ್ಟ್ ನ ಸದಸ್ಯರು ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದಾರೆ. ಗ್ರಾಮದ ಶಾಲೆಯ ಮಕ್ಕಳಿಗೆ ಆಗಾಗ್ಗೆ ಹಾಲು, ಊಟ, ಉಪಹಾರವನ್ನು ನೀಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.
ಕೆಲವು ವರ್ಷಗಳ ಹಿಂದೆ ಕೊರಾಳೆ ಗ್ರಾಮದ ಬಾವಿಯಲ್ಲಿ ಕಾಲರಾ ಕ್ರಿಮಿಗಳು ಸೇರಿಕೊಂಡು ನೂರಾರು ಗ್ರಾಮಸ್ಥರು ಕಾಲರಾ ರೋಗದಿಂದ ಬಳಲುತ್ತಿದ್ದರು. ಕೊರಾಳೆ ಗ್ರಾಮವಷ್ಟೇ ಅಲ್ಲದೇ ಪಕ್ಕದ ದೊರಾಳೆ ಮತ್ತು ರಹಾತಾ ಗ್ರಾಮಕ್ಕೂ ಕಾಲರಾ ರೋಗವು ಹರಡಿತು. ಈ ಗ್ರಾಮದ ಗ್ರಾಮಸ್ಥರು ಶಿರಡಿಗೆ ಚಿಕಿತ್ಸೆಗೆ ಹೋಗಲು ಸಮ್ಮತಿಸಲಿಲ್ಲ. ಆಗ ಶಿರಡಿ ಮತ್ತು ಅಹಮದ್ ನಗರದಿಂದ ವೈದ್ಯರುಗಳು ಗ್ರಾಮಕ್ಕೆ ಬರುವಂತಾಯಿತು. ಆ ವೈದ್ಯರುಗಳಿಗೆ ಮತ್ತು ರೋಗಿಗಳಿಗೆ ಮಂದಿರದ ಆವರಣದಲ್ಲೇ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಯಿತು. ಹಗಲೂ ರಾತ್ರಿ ಟೀ, ಊಟ ಮತ್ತು ವೈದ್ಯಕೀಯ ಉಪಚಾರಗಳನ್ನು ರೋಗಿಗಳಿಗೆ ಟ್ರಸ್ಟ್ ನ ಸದಸ್ಯರು ಮಾಡಿಕೊಟ್ಟು ಚೆನ್ನಾಗಿ ನೋಡಿಕೊಂಡರು. ಟ್ರಸ್ಟ್ ನ ವ್ಯವಸ್ಥೆಗಳನ್ನು ನೋಡಿ ವೈದ್ಯರೂ ಕೂಡ ರಾತ್ರಿಯ ವೇಳೆ ಶಿರಡಿ ಮತ್ತು ಅಹಮದ್ ನಗರಕ್ಕೆ ವಾಪಸ್ ತೆರಳದೆ ದೇವಾಲಯದಲ್ಲೇ ಉಳಿದುಕೊಂಡು ರೋಗಿಗಳ ಸೇವೆಯನ್ನು ಮಾಡಿದುದು ವಿಶೇಷವೇ ಸರಿ!!!!
ಕೊರಾಳೆ ಸಾಯಿ ಮಂದಿರ ಟ್ರಸ್ಟ್ ನ ಯುವ ಸ್ವಯಂ ಸೇವಕರು ಮಾಡುತ್ತಿರುವ ಈ ಅತ್ಯುತ್ತಮ ಸೇವೆಯನ್ನು ಕೊಂಡಾಡಿ ಶಿರಡಿಯ ಸ್ಥಳೀಯ ಪತ್ರಿಕೆಗಳಾದ ಲೋಕಮಾತಾ ಮತ್ತು ಸರೋಮಥ್ ಗಳು ಒಳ್ಳೆಯ ಪ್ರಶಂಸೆಯ ಲೇಖನಗಳನ್ನು ಪ್ರಕಟಿಸಿದ್ದವು.
ಕೊರಾಳೆ ಸಾಯಿ ಮಂದಿರ ಟ್ರಸ್ಟ್ ಗೆ ಬರುವ ದೇಣಿಗೆ ಹಣದಿಂದ ಶಾಲೆಯ ಬ್ಯಾಗ್, ಪುಸ್ತಕಗಳು, ಪೆನ್ಸಿಲ್ ಗಳು ಮತ್ತು ಸಮವಸ್ತ್ರಗಳನ್ನು ಕೊಂಡು ಬಡ ಮಕ್ಕಳಿಗೆ ನೀಡಲಾಗುತ್ತಿದೆ. ಅಲ್ಲದೇ, ಬಡ ಹೆಣ್ಣು ಮಕ್ಕಳಿಗೆ ಓದಲು ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಅಲ್ಲದೇ, ಗ್ರಾಮದ ಅನೇಕ ಹೆಣ್ಣು ಮಕ್ಕಳಿಗೆ ಹೊಲಿಗೆಯ ತರಬೇತಿಯನ್ನು ಕಲಿಯಲು ಪ್ರೋತ್ಸಾಹ ನೀಡಿ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುತ್ತಿದೆ.
ಕೊರಾಳೆ ಸಾಯಿ ಮಂದಿರ ಟ್ರಸ್ಟ್ ನ ಮುಂದಿನ ಯೋಜನೆಗಳು:
ದೇವಾಲಯದ ಟ್ರಸ್ಟ್ ಮಂದಿರದ ಮುಂದೆ ಇರುವ ಸ್ಥಳದಲ್ಲಿ ಸ್ವಲ್ಪ ಜಾಗವನ್ನು ಖರೀದಿ ಮಾಡಿರುತ್ತದೆ. ಈ ಸ್ಥಳದಲ್ಲಿ ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕವಿರುವಂತೆ ಎರಡು ದೊಡ್ಡದಾದ ಹಾಲ್ ಗಳನ್ನು ನಿರ್ಮಿಸುತ್ತಿದೆ. ಅಲ್ಲದೇ, ಕೆಲವು ಸಣ್ಣ ಸಣ್ಣ ಕೋಣೆಗಳನ್ನು ಕೂಡ ನಿರ್ಮಿಸುತ್ತಿದೆ. ಅಲ್ಲದೇ, ಬೇರೆ ಬೇರೆ ಪ್ರಸಾಧನ ಮತ್ತು ಸ್ನಾನ ಗೃಹಗಳನ್ನು ಕೂಡ ನಿರ್ಮಿಸುತ್ತಿದೆ. ರಾಮನವಮಿಯ ಸಮಯದಲ್ಲಿ ಸಾವಿರಾರು ಪಾದಯಾತ್ರಿಗಳು ಬಂದಾಗ ಉಳಿದುಕೊಳ್ಳಲು ತೊಂದರೆಯಾಗದಿರಲಿ ಎಂದು ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಕೊರಾಳೆ ಗ್ರಾಮಸ್ಥರ ಅನುಕೂಲಕ್ಕಾಗಿ ಉಚಿತ ದವಾಖಾನೆಯನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಉಚಿತ ಬೋರ್ಡಿಂಗ್ ವ್ಯವಸ್ಥೆ ಇರುವ ಆಂಗ್ಲ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಪ್ರಾರಂಭಿಸಿ ಅಲ್ಲಿ ಅನಾಥ ಮಕ್ಕಳು, ಏಡ್ಸ್ ರೋಗಿಗಳ ಮಕ್ಕಳು ಮತ್ತು ವೈಶ್ಯೆಯರಿಂದ ಪರಿತ್ಯಕ್ತರಾದ ಮಕ್ಕಳ ಕಲ್ಯಾಣಕ್ಕಾಗಿ ಊಟ, ವಸತಿ ಮತ್ತು ಶಿಕ್ಷಣವನ್ನು ನೀಡುವ ಅತ್ಯುತ್ತಮ ಯೋಜನೆಯನ್ನು ಹೊಂದಿದೆ.
ಅಹಮದ್ ನಗರದಲ್ಲಿ ನೋಂದಣಿ ಕ್ರಮ ಸಂಖ್ಯೆ: A1197 ನ ಅಡಿಯಲ್ಲಿ "ಶ್ರೀ ಸಾಯಿಬಾಬಾ ಮಂದಿರ ಟ್ರಸ್ಟ್, ಕೊರಾಳೆ" ಎಂಬ ಹೆಸರಿನಲ್ಲಿ ದತ್ತಿ ಸಂಸ್ಥೆಯಾಗಿ ನೋಂದಣಿ ಮಾಡಲಾಗಿರುತ್ತದೆ.
ಟ್ರಸ್ಟ್ ಆಡಳಿತ ಮಂಡಳಿಯ ವಿವರ:
ಶ್ರೀ.ಸದಾನಂದ ಎಸ್.ಗೋಡೆ - ಅಧ್ಯಕ್ಷರು
ಶ್ರೀಮತಿ. ಹೇಮಾ ಶಿರ್ಕೆ - ಉಪಾಧ್ಯಕ್ಷೆ
ಶ್ರೀ.ಸಂಜಯ್ ದರನ್ದಲೇ - ಕಾರ್ಯದರ್ಶಿ
ಶ್ರೀ.ವಿನಾಯಕ್ ವರ್ಗಾಡೆ - ಸದಸ್ಯರು
ಶ್ರೀ.ಪ್ರದೀಪ್ ಭಾಯಿ ಪಂಚಾಲ್ - ಸದಸ್ಯರು
ಶ್ರೀ.ಸಂಜಯ್ ಸವಾಲೇ - ಸದಸ್ಯರು
ಶ್ರೀ.ಕಲೀಮ್ ಭಾಯಿ ಪಟಾಣ್ - ಸದಸ್ಯರು
ದೇಣಿಗೆಯನ್ನು ಸ್ವೀಕರಿಸುವ ವಿಶೇಷ ಪರಿ:
ದೇಣಿಗೆಯನ್ನು ಹಣದ ಅಥವಾ ವಸ್ತುಗಳ ರೂಪದಲ್ಲಿ ಸಾಯಿಭಕ್ತರಿಂದ ಪಡೆಯಲಾಗುತ್ತಿದೆ. ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ರಸೀತಿಯನ್ನು ನೀಡಲಾಗುತ್ತಿದೆ ಮತ್ತು "ವಂದನಾ ಪತ್ರ" ವನ್ನು ಕೂಡ ಕಳಿಸಲಾಗುತ್ತಿದೆ. ಆದರೆ ಟ್ರಸ್ಟ್ ನ ಯಾವ ಸದಸ್ಯರೂ ಮಂದಿರಕ್ಕೆ ಬರುವ ಸಾಯಿ ಭಕ್ತರಿಂದ ದೇಣಿಗೆಗಾಗಿ ಮನವಿ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ದೇಣಿಗೆಯನ್ನು ನೀಡಿದವರ ಹೆಸರನ್ನು ಮಂದಿರದಲ್ಲಿ ಎಲ್ಲೂ ಹಾಕಲಾಗುವುದಿಲ್ಲ ಅಥವಾ ಅವರು ನೀಡಿದ ಕಾಣಿಕೆಯ ಮೇಲೆ ಹೆಸರನ್ನು ಬರೆಯಿಸಿದರೆ ಅದನ್ನು ಸ್ವೀಕರಿಸಲಾಗುವುದಿಲ್ಲ. ಇದಕ್ಕೆ ಕಾರಣವೇನೆಂದರೆ, ಈ ಜಗತ್ತಿನಲ್ಲಿ ಶಿರಡಿ ಸಾಯಿಬಾಬಾ ಒಬ್ಬರೇ ಕೊಡುವವರು ಮತ್ತು ಪಡೆಯುವವರು ಮತ್ತು ಸಾಯಿಬಾಬಾರವರ ಒಪ್ಪಿಗೆಯಿಲ್ಲದೆ ಯಾರೂ ಕೂಡ ಯಾವುದನ್ನೇ ಆಗಲಿ ದಾನವಾಗಿ ನೀಡಲು ಸಾಧ್ಯವಿಲ್ಲ ಎಂದು ಟ್ರಸ್ಟ್ ನ ಸದಸ್ಯರು ಅಭಿಪ್ರಾಯ ಪಡುತ್ತಾರೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ನಂದುರ್ಬಿ ಹತ್ತಿರ, ಕೊರಾಳೆ ಗ್ರಾಮ, ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ, ಮಹಾರಾಷ್ಟ್ರ.
ವಿಳಾಸ:
ಶ್ರೀ ಸಾಯಿಬಾಬಾ ಮಂದಿರ ಟ್ರಸ್ಟ್,
ಕೊರಾಳೆ ಗ್ರಾಮ, ರಹತಾ ತಾಲ್ಲೂಕು,
ಅಹಮದ್ ನಗರ, ಜಿಲ್ಲೆ, ಮಹಾರಾಷ್ಟ್ರ, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸದಾನಂದ ಎಸ್.ಗೋಡೆ - ಅಧ್ಯಕ್ಷರು
ದೂರವಾಣಿ ಸಂಖ್ಯೆಗಳು:
+91 99754 55835 / +91 98228 56666
ಇ ಮೇಲ್ ವಿಳಾಸ:
ಅಂತರ್ಜಾಲ ತಾಣ:
ಮಾರ್ಗಸೂಚಿ:
ನಂದುರ್ಬಿ ಹತ್ತಿರ. ಶಿರಡಿಯಲ್ಲಿರುವ ದ್ವಾರಾವತಿ ಭಕ್ತನಿವಾಸ ಮತ್ತು ಸಾಯಿಬಾಬಾ ಆಸ್ಪತ್ರೆಯ ಎದುರುಗಡೆ ರಸ್ತೆಯಲ್ಲಿ ಸುಮಾರು 12 ಕಿಲೋಮೀಟರ್ ಕ್ರಮಿಸಿದರೆ ಕೊರಾಳೆ ಗ್ರಾಮ ಸಿಗುತ್ತದೆ. ಸ್ವಂತ ವಾಹನದಲ್ಲಿ ಅಥವಾ ಯಾವುದಾದರೂ ಆಟೋ ಅಥವಾ ವಾಹನವನ್ನು ಶಿರಡಿಯಿಂದ ಈ ಸ್ಥಳಕ್ಕೆ ಹೋಗಿ ಬರುವುದಕ್ಕೆ ಮೊದಲೇ ಗೊತ್ತು ಮಾಡಿಕೊಂಡು ಹೋಗಿ ಬರುವುದು ಸೂಕ್ತ.
ಕನ್ನಡ ಅನುವಾದ: ಶ್ರೀಕಂಠ ಶರ್ಮ