Sunday, April 6, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮಾಜಿ ಅಧ್ಯಕ್ಷ ಶ್ರೀ.ಜಯಂತ್ ಕುಲಕರ್ಣಿಯವರಿಗೆ ಆತ್ಮೀಯ ಬೀಳ್ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 2ನೇ ಎಪ್ರಿಲ್ 2014, ಬುಧವಾರ ದಂದು ಸಂಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇತ್ತೀಚೆಗಷ್ಟೇ ನಿವೃತ್ತರಾದ ಶ್ರೀ ಸಾಯಿಬಾಬಾ ಸಂಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ. ಜಯಂತ್ ಕುಲಕರ್ಣಿಯವರನ್ನು ಸನ್ಮಾನಿಸಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಹಂಗಾಮಿ ಅಧ್ಯಕ್ಷ ಶ್ರೀ.ಬಾಲಚಂದ್ರ ದೇಬ್ದ್ವಾರ್,ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಸಾಯಿಬಾಬಾ ಸಂಸ್ಥಾನದ ಹಲವಾರು ಪದಾಧಿಕಾರಿಗಳು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. 
 

ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆಯವರು ಈ ಸಂದರ್ಭದಲ್ಲಿ ಮಾತನಾಡಿ ಶ್ರೀ.ಜಯಂತ್ ಕುಲಕರ್ಣಿಯವರು "ಮಾನವ ಸೇವೆಯೇ ಮಾಧವ ಸೇವೆ" ಎಂಬ ನಾಣ್ಣುಡಿಯಂತೆ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದು ಬಹಳ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. 
 
ಶ್ರೀ ಸಾಯಿಬಾಬಾ ಸಂಸ್ಥಾನದ ಪರವಾಗಿ ಶ್ರೀ.ಅನಿಲ್ ಕಾವಡೆ ಹಾಗೂ ಹಂಗಾಮಿ ಅಧ್ಯಕ್ಷ ಶ್ರೀ.ಬಾಲಚಂದ್ರ ದೇಬ್ದ್ವಾರ್ ರವರು ಶ್ರೀಮತಿ ಮತ್ತು ಶ್ರೀ ಜಯಂತ್ ಕುಲಕರ್ಣಿಯವರನ್ನು ಸನ್ಮಾನಿಸಿದರು. ಸನ್ಮಾನದ ನಂತರ ಮಾತನಾಡಿದ ಶ್ರೀ.ಅನಿಲ್ ಕಾವಡೆಯವರು "ಶ್ರೀ ಜಯಂತ್ ಕುಲಕರ್ಣಿಯವರು ತಮ್ಮ ಜಿಲ್ಲಾ ಕಲೆಕ್ಟರ್ ಕೆಲಸದ ಒತ್ತಡದ ನಡುವೆ ಸಂಸ್ಥಾನದ ಕೆಲಸಗಳನ್ನು ಕೂಡ ಬಹಳ ಸಂತೋಷದಿಂದ ಹಾಗೂ ತಾಳ್ಮೆಯಿಂದ ನಿರ್ವಹಿಸಿ ಸಾಯಿ ಭಕ್ತರಿಗಾಗಿ ಹಲವಾರು ಉಪಯೋಗಿ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಇವರು ಸಂಸ್ಥಾನದ ಕೆಲಸವನ್ನು ಬಾಬಾರವರು ತಮಗೆ ವಹಿಸಿದ್ದಾರೆಂಬ ಭಾವನೆಯಿಂದ ಕಾರ್ಯ ನಿರ್ವಹಿಸಿ ಭಕ್ತ ಜನರ ಸೇವೆಯನ್ನು ಮಾಡಿದ್ದಾರೆ. ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಸೇವಾ ಮನೋಭಾವನೆ ಬಹಳ ಮುಖ್ಯವಾಗಿರುತ್ತದೆ  ಮತ್ತು ಶ್ರೀ.ಜಯಂತ್ ಕುಲಕರ್ಣಿಯವರು ಉತ್ತಮ ಕಾರ್ಯಗಳನ್ನು ಮಾಡುವ ಮುಖಾಂತರ ಎಲ್ಲರಿಗೂ ಮಾದರಿಯಾಗಿರುವುದಷ್ಟೇ ಅಲ್ಲದೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ" ಎಂದು ನುಡಿದರು.

ಸಂಸ್ಥಾನದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀ.ಜಯಂತ್ ಕುಲಕರ್ಣಿಯವರು "ಸರ್ಕಾರವು ನನಗೆ ಪ್ರತಿದಿನ  ಅಹಮದ್ ನಗರ ಜಿಲ್ಲೆಯ 14 ತಾಲ್ಲೂಕು ಮಟ್ಟದ ನ್ಯಾಯಾಲಯಗಳು ಹಾಗೂ 84 ನ್ಯಾಯಾಧೀಶರನ್ನು ನೋಡಿಕೊಳ್ಳುವ ಕೆಲಸವನ್ನು ವಹಿಸಿತ್ತು. ಹಾಗಾಗಿ, ಕೇವಲ ಬಾಬಾರವರ ಆಶೀರ್ವಾದದಿಂದ ನಾನು ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷನಾಗಿ ನನ್ನ ಕೈಲಾದ ಮಟ್ಟಿಗೆ ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿದ್ದೇನೆ ಅಷ್ಟೇ. ಸಂಸ್ಥಾನದ ವಿಷಯದಲ್ಲಿ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಕ್ತ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಿದ್ದೆ.ಸಂಸ್ಥಾನದ ಕೆಲಸವನ್ನು ದೇವರ ಕೆಲಸವೆಂದು ತಿಳಿದು ಶಕ್ತಿ ಮೀರಿ ನಾನು ಕಾರ್ಯ ನಿರ್ವಹಿಸಿದ್ದೇನೆ.  ಸಾಯಿ ಭಕ್ತರು ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು. ನಂತರ ಲಾಡು ಪ್ರಸಾದವನ್ನು ತೆಗೆದುಕೊಳ್ಳುವ ಸಲುವಾಗಿ ಪುನಃ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಾಯಿಬಾಬಾರವರ ದರ್ಶನಕ್ಕೆ ಸಾಲಿನಲ್ಲಿ ಹೋಗುವ ಸಮಯದಲ್ಲಿಯೇ ಉತ್ತಮ ತುಪ್ಪದಿಂದ ಮಾಡಿದ ಲಾಡು ಪ್ರಸಾದವನ್ನು ಉಚಿತವಾಗಿ ನೀಡಲು ಪ್ರಾರಂಭಿಸಲಾಯಿತು. ಸಾಯಿಬಾಬಾ ಸಂಸ್ಥಾನದ ಈ ನಿರ್ಧಾರಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ದೊರೆಯಿತು. ಕಳೆದ ವರ್ಷ ಹಲವಾರು ಸಾಯಿ ಭಕ್ತರುಗಳು ನೀಡಿದ ದೇಣಿಗೆಯ ಹಣದಿಂದ ವರ್ಷದ 365 ದಿನಗಳಲ್ಲಿ 205 ದಿನಗಳು ಎಲ್ಲಾ ಭಕ್ತರಿಗೂ ಉಚಿತವಾಗಿ ಸಾಯಿ ಪ್ರಸಾದ ಭೋಜನವನ್ನು ನೀಡಲಾಯಿತು. ಸಾಯಿ ಆಶ್ರಮ-2 ರಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುವ ಪಾದಯಾತ್ರಿಗಳಿಗೆ ಹಾಗೂ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ಉಚಿತ ವಸತಿಯನ್ನು ನೀಡಲಾಯಿತು. ನಾನು ನನ್ನ ಸಂಪೂರ್ಣ ಸಮಯವನ್ನು ಸಂಸ್ಥಾನದ ಕೆಲಸಗಳಿಗೆ ಮೀಸಲಿಡಲಾಗದಿದ್ದರೂ ಸಹ ಸಾಯಿ ಭಕ್ತರ ಒಳಿತಿಗಾಗಿ ಹಲವಾರು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸಿದೆ" ಎಂದು ತಿಳಿಸಿದರು.


ಶ್ರೀ ಜಯಂತ್ ಕುಲಕರ್ಣಿಯವರನ್ನು ಸನ್ಮಾನಿಸಿದ ನಂತರ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಹಂಗಾಮಿ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೂ ಆದ ಶ್ರೀ.ಬಾಲಚಂದ್ರ ದೇಬ್ದ್ವಾರ್ ರವರು "ಶ್ರೀ ಜಯಂತ್ ಕುಲಕರ್ಣಿಯವರು ಶ್ರೀ ಸಾಯಿಬಾಬಾ ಮತ್ತು ಸಾಯಿ ಭಕ್ತರ ನಡುವೆ ಇರುವ ಸೇತುವೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಹಳ ಉತ್ತಮ ಕೆಲಸ ಮಾಡುವ ಮುಖಾಂತರ ಇಬ್ಬರನ್ನೂ ಹತ್ತಿರ ಬರುವಂತೆ ಮಾಡಿದ್ದಾರೆ. ಅಲ್ಲದೇ 32 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಷ್ಟೇ ಅಲ್ಲದೆ ಶ್ರೀ ಸಾಯಿಬಾಬಾ ಸಂಸ್ಥಾನದ ಕೆಲಸವನ್ನು ಸಹ ಉತ್ತಮವಾಗಿ ನಿರ್ವಹಿಸಿ ಸಂಸ್ಥಾನವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ" ಎಂದು ನುಡಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸ್ವಾಗತ ಭಾಷಣ ಮಾಡಿದರು. ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬ್ಲೆ, ಶ್ರೀ. ಎಸ್.ಎನ್.ಗಾರ್ಕಲ್ ರವರುಗಳು ಮಾತನಾಡಿ ಶ್ರೀ ಜಯಂತ್ ಕುಲಕರ್ಣಿಯವರ ಜೊತೆಗೆ ಕೆಲಸ ಮಾಡುವಾಗ ತಮಗಾದ ಅನುಭವಗಳನ್ನು ಹಂಚಿಕೊಂಡರು. ಶ್ರೀ.ವಿಕಾಸ್ ಶಿವರಾಜೆರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಷ್ಟೇ ಅಲ್ಲದೆ ವಂದನಾರ್ಪಣೆಯನ್ನು ಸಹ ಸಲ್ಲಿಸಿದರು. ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ವಿ.ಗಮೇ, ಶ್ರೀ.ಯು.ಪಿ.ಗೋಂದ್ಕರ್, ಶ್ರೀ.ಟಿ. ಎನ್.ಉಗಲೇ ಮತ್ತು ಸಾಯಿಬಾಬಾ ಸಂಸ್ಥಾನದ ಇತರ ಎಲ್ಲಾ ವಿಭಾಗದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment