Thursday, April 3, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವ - 2014 ರ ಆಯೋಜನೆ - ಪತ್ರಿಕಾ ಪ್ರಕಟಣೆ - ಕೃಪೆ:ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮನವಮಿ ಉತ್ಸವವನ್ನು 7ನೇ ಏಪ್ರಿಲ್ 2014, ಸೋಮವಾರ ದಿಂದ 9ನೇ ಏಪ್ರಿಲ್ 2014, ಬುಧವಾರ ದವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದು ಅದಕ್ಕೆ ಮಾಡಬೇಕಾದ ಎಲ್ಲಾ ಸಿದ್ಧತೆಗಳು ಸಂಪೋರ್ಣಗೊಂಡಿವೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು. ಲ್ಲದೆ, ಈ 3 ದಿನಗಳೂ ಜನಸಂದಣಿ ಹೆಚ್ಚಾಗಿರುವ ಕಾರಣ ಶ್ರೀ  ಸತ್ಯನಾರಾಯಣ ವ್ರತ ಹಾಗೂ ಅಭಿಷೇಕ ಪೂಜೆಯ ಕಾರ್ಯಕ್ರಮಗಳು ಇರುವುದಿಲ್ಲ ಮತ್ತು ಸಾರ್ವಜನಿಕ ಸಂಪರ್ಕಾಲಯದ ಕಚೇರಿಯಿಂದ ದರ್ಶನ/ಆರತಿಯ ಪಾಸ್ ಗಳ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. 

ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ 1912ನೇ ಇಸವಿಯಲ್ಲಿ  ಶ್ರೀ ರಾಮನವಮಿ ಉತ್ಸವವನ್ನು ಆಚರಿಸಲು ಅನುಮತಿ ನೀಡಿದ್ದರು. ಅಂದಿನಿಂದ 100 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಉತ್ಸವವನ್ನು ಶಿರಡಿಯಲ್ಲಿ ಪ್ರತಿವರ್ಷವೂ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಅಜಯ್ ಮೋರೆ ತಿಳಿಸಿದರು. 

ಈ ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಒಳ್ಳೆಯ ರೀತಿಯಲ್ಲಿ ದರ್ಶನವಾಗಲೆಂಬ ಉದ್ದೇಶದಿಂದ ಶ್ರೀ ಸಾಯಿಬಾಬಾ ಸಂಸ್ಥಾನವು ಸಂಸ್ಥಾನದ ಆವರಣದಲ್ಲಿ ಟೆಂಟ್ (ಮಂಟಪ)ದ ವ್ಯವಸ್ಥೆಯನ್ನು ಮಾಡಿದೆ. ಅಲ್ಲದೇ, ಪೋಲಿಸ್ ಸೆಕ್ಯೂರಿಟಿ ವ್ಯವಸ್ಥೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅಷ್ಟೆ ಅಲ್ಲದೆ, ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪಾದಯಾತ್ರಿಗಳು ನಿದ್ರೆ ಮಾಡುವ ಸಲುವಾಗಿ  ಹಾಗೂ ವಿಶ್ರಮಿಸಲು ಅನುಕೂಲವಾಗುವಂತೆ ಸಂಸ್ಥಾನವು ಬಟ್ಟೆಯಿಂದ ಮಾಡಿದ ಶಾಮಿಯಾನದ ಟೆಂಟ್ ವ್ಯವಸ್ಥೆಯನ್ನು ಮುಂಬೈ-ಶಿರಡಿ ಹೆದ್ದಾರಿಯಲ್ಲಿ ಹಲವಾರು ಕಡೆ ಮಾಡಿದೆ.  ಈ ಟೆಂಟ್ ಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅದಕ್ಕಾಗಿ 10 ಕುಡಿಯುವ ನೀರಿನ ಟ್ಯಾಂಕರ್ ಗಳು ಹಾಗೂ ಎಲ್ಲಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು 25 ಜನರನ್ನು ಸಹ ನೇಮಕ ಮಾಡಲಾಗಿದೆ.



ಸಿನ್ನರ್ ಗ್ರಾಮದಿಂದ ಶಿರಡಿಗೆ ಬರುವ ಮಾರ್ಗದಲ್ಲಿ ಪಾದಯಾತ್ರಿಗಳ ತುರ್ತು ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವಂತೆ ಮೊಬೈಲ್ ಚಿಕಿತ್ಸಾ ವಾಹನಗಳನ್ನೂ ಸಹ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ ಸಂಸ್ಥಾನದ ಆವರಣ, ದರ್ಶನದ ಸಾಲು, ಹೊಸ ಭಕ್ತ ನಿವಾಸ (500 ಕೋಣೆ) ಮತ್ತಿತರ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಘಟಕಗಳನ್ನು ವ್ಯವಸ್ಥೆ ಮಾಡಲಾಗಿದೆ. ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಸುಲಭವಾಗಿ ಲಾಡು ಪ್ರಸಾದ ದೊರೆಯುವಂತೆ ಮಾಡುವ ಸಲುವಾಗಿ 250 ಕ್ವಿಂಟಾಲ್ ಸಕ್ಕರೆಯನ್ನು ಬಳಸಿ ಹೆಚ್ಚಿಗೆ ಲಾಡುಗಳನ್ನು ತಯಾರಿಸಲಾಗಿದೆ. ವಿಜಯವಾಡದ ಪಿ.ಪದ್ಮಲತಾ ಶ್ರೀನಿವಾಸ್, ಮುಕೇಶ್ ಭಾರದ್ವಾಜ್, ಮಿತೇಶ್ ಕ್ಲಾಸಸ್ ಭೂಪಾಲ್, ದಿನೇಶ್ ಚಂದ್ರ, ಸುರೇಶ ಚಂದ್ರ ವಡೆಗಾವಂಕರ್ ಔರಂಗಾಬಾದ್, ಟಿ.ವಿಜಯ್ ಚೆನ್ನೈ, ಸುನೀಲ್ ಅಗರವಾಲ್ ಮುಂಬೈ, ಸುಶೀಲಾದೇವಿ ಘನಶ್ಯಾಮದಾಸ್ ಮಸಾನಿ ಗೋಧಿಯಾ, ದಿಲೀಪ್ ಮೆಹತಾ ಅಹಮದಾಬಾದ್, ಶ್ರೀನಿವಾಸ್ ಶಿರಗೂರ್ಕರ್ ಬೆಂಗಳೂರು,ಎಸ್. ದುಷ್ಮಂತ ಕುಮಾರ್ ಭುವನೇಶ್ವರ್, ಸಚಿನ್ ಕುಮಾರ್ ಡೆಹ್ರಾಡೂನ್, ಸೀತಾ ಹರಿಹರನ್ ಅಮೇರಿಕಾ ಇವರೆಲ್ಲರೂ ನೀಡಿದ ಉದಾರ ದೇಣಿಗೆಯಿಂದ ಉತ್ಸವದ 3 ದಿನಗಳೂ ಪ್ರಸಾದಾಲಯದಲ್ಲಿ ಎಲ್ಲ ಭಕ್ತರಿಗೂ ಉಚಿತ ಪ್ರಸಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಟ್ರಸ್ಟಿಯಾಗಿದ್ದ ರಿಂಪಲ್ ಲೋಹಿಯಾರವರು ನೀಡಿರುವ ಉದಾರ ದೇಣಿಗೆಯಿಂದ ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗುತ್ತಿದೆ.

ಈ ಉತ್ಸವದ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. 7ನೇ ಏಪ್ರಿಲ್ 2014, ಸೋಮವಾರದಂದು ಸಂಜೆ  7.30ಕ್ಕೆ ಸಪ್ತಸುರ್ ಪರಿವಾರ್ ಪುಣೆಯ ಕುಮಾರಿ ಕವಿತಾ ಅವರಿಂದ ಭಕ್ತಿ ಹಾಗೂ ಭಾವಗೀತೆ ಕಾರ್ಯಕ್ರಮವಿರುತ್ತದೆ. ರಾತ್ರಿ 9.30ಕ್ಕೆ ಚೆನ್ನೈ ನ ಶ್ರೀ.ಎಂ.ರಾಮು ಮತ್ತು ಶ್ರೀಮತಿ. ಬಿಂದು ಮಾಧವಿಯವರಿಂದ ಭಕ್ತಿಗೀತೆಯ ಕಾರ್ಯಕ್ರಮವಿರುತ್ತದೆ. 8ನೇ ಏಪ್ರಿಲ್ 2014, ಮಂಗಳವಾರದಂದು ಸಂಜೆ  7.30ಕ್ಕೆ ಶ್ರೀ.ಅಜಿತ್ ಕಡಕಡೆಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವಿರುತ್ತದೆ. ರಾತ್ರಿ 9.30ಕ್ಕೆ ಶ್ರೀ ಸಾಯಿ ಸತ್ಸಂಗ್ ಫೆಸ್ಟಿವಲ್, ಅಸ್ಸಾಂ ತಂಡದಿಂದ ನೃತ್ಯ ಹಾಗೂ ಸಾಯಿ ಪ್ರಣಾಮಿ ಕಾರ್ಯಕ್ರಮವಿರುತ್ತದೆ.  9ನೇ ಏಪ್ರಿಲ್ 2014, ಬುಧವಾರದಂದು ಸಂಜೆ  7.30ಕ್ಕೆ ಮುಂಬೈನ ಶ್ರೀಮತಿ.ಕುಸುಮಿತಾ ತಿವಾರಿ ಮತ್ತು ಶ್ರೀ.ಯೋಗೇಶ್ ತಿವಾರಿಯವರಿಂದ ಗಾಯನ ಕಾರ್ಯಕ್ರಮವಿರುತ್ತದೆ. ರಾತ್ರಿ 9.30ಕ್ಕೆ ಥಾಣೆಯ ಮಾರುತಿ ಪಾಟೀಲ್ ರವರಿಂದ ಸಾಯಿ ಭಜನೆ ಕಾರ್ಯಕ್ರಮವಿರುತ್ತದೆ.  ಮೇಲಿನ ಎಲ್ಲಾ ಕಾರ್ಯಕ್ರಮಗಳೂ ಸಾಯಿನಗರ ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಲಾಗುವ ವೇದಿಕೆಯಲ್ಲಿ ನಡೆಯುತ್ತವೆ. ಹಾಗೆಯೇ 7ನೇ ಏಪ್ರಿಲ್ 2014, ಸೋಮವಾರ ಸಂಜೆ 4.00 ಗಂಟೆಗೆ ಮತ್ತು 9ನೇ ಏಪ್ರಿಲ್ 2014, ಬುಧವಾರ ರಾತ್ರಿ 10.30 ಕ್ಕೆ ಸಮಾಧಿ ಮಂದಿರದ ವೇದಿಕೆಯಲ್ಲಿ ಖ್ಯಾತ ಕೀರ್ತನಕಾರರಾದ ಶ್ರೀ.ಹೆಚ್.ಬಿ.ಪಿ.ವಿಕ್ರಂ ಮಹಾರಾಜ್ ನಂದೇಡ್ ಕರ್ ರವರಿಂದ ಸುಶ್ರಾವ್ಯವಾದ ಕೀರ್ತನೆ ಕಾರ್ಯಕ್ರಮವಿರುತ್ತದೆ.

ಅಲ್ಲದೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯಕಾರಿ ಅಧಿಕಾರಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಸಾಯಿಬಾಬಾ ಸಂಸ್ಥಾನದ ಎಲ್ಲಾ ಕಾರ್ಮಿಕರೂ ಹಗಲೂ ರಾತ್ರಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್

ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment