Saturday, April 26, 2014

ಶಿರಡಿ ಸಾಯಿಬಾಬಾರವರ ಬಗ್ಗೆ ರಚಿಸಲಾದ ಹೊಸ ಪುಸ್ತಕ "ಸಾಯಿಬಾಬಾ ಎನ್ ಇನ್ಕಾರ್ನೇಶನ್" ನ ಲೋಕಾರ್ಪಣೆ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾರವರ ಬಗ್ಗೆ ರಚಿಸಲಾದ ಹೊಸ ಪುಸ್ತಕ "ಸಾಯಿಬಾಬಾ ಎನ್ ಇನ್ಕಾರ್ನೇಶನ್"  ನ ಲೋಕಾರ್ಪಣೆ ಸಮಾರಂಭವು ಮುಂದಿನ ತಿಂಗಳ 1ನೇ ಮೇ 2014, ಗುರುವಾರದಂದು ಶಿರಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ನವದೆಹಲಿಯ ಸ್ಟರ್ಲಿಂಗ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ನ ಶ್ರೀಮತಿ.ರಾಖಿ ಕರಣ್ ರವರು ಸುದ್ದಿಗಾರರಿಗೆ ತಿಳಿಸಿದರು. 

ಪುಸ್ತಕದಲ್ಲಿ 168 ಪುಟಗಳಷ್ಟು ವಿಷಯ ಹಾಗೂ 8 ಪುಟಗಳಷ್ಟು ಭಾವಚಿತ್ರವಿದ್ದು ಪುಸ್ತಕದ ಬೆಲೆಯನ್ನು 200 ರೂಪಾಯಿಗಳೆಂದು ನಿಗದಿಪಡಿಸಲಾಗಿದೆ. ಈ ಪುಸ್ತಕದ ರಚನೆಯನ್ನು ಶ್ರೀಮತಿ.ಬೇಲಾ ಶರ್ಮಾರವರು ಮಾಡಿದ್ದು ಸಾಯಿಬಾಬಾರವರ ಸಂದೇಶಗಳ ಒಳಾರ್ಥವನ್ನು ತಿಳಿಸುವ ಪ್ರಯತ್ನವನ್ನು ಶ್ರೀಮತಿ.ಬೇಲಾ ಶರ್ಮಾರವರು ಮಾಡಿದ್ದಾರೆ. ಶ್ರೀಮತಿ.ಬೇಲಾ ಶರ್ಮಾರವರು ಶ್ರೀ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಪಡಿಸುವ ಶ್ರೀ ಸಾಯಿಲೀಲಾ ದ್ವೈಮಾಸಿಕದಲ್ಲಿ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಾ ಬಂದಿದ್ದು ಸಾಯಿಲೀಲಾ ಓದುಗರಿಗೆ ಚಿರಪರಿಚಿತರಾಗಿದ್ದಾರೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, April 23, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉದ್ಯೋಗಿಗಳಿಗೆ ಅಗ್ನಿಶಾಮಕ ತರಬೇತಿ ಶಿಬಿರದ ಆಯೋಜನೆ- ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಇದೇ ತಿಂಗಳ 14ನೇ ಏಪ್ರಿಲ್ 2014, ಸೋಮವಾರ  ದಂದು ತನ್ನ ಎಲ್ಲಾ ಉದ್ಯೋಗಿಗಳಿಗೆ ಅಗ್ನಿಶಾಮಕ ತರಬೇತಿ ಶಿಬಿರವನ್ನು ಆಯೋಜಿಸಿತ್ತು. 

 
ಶ್ರೀ ಸಾಯಿಬಾಬಾ ಸಂಸ್ಥಾನವು 14ನೇ ಏಪ್ರಿಲ್ 2014 ರಿಂದ 20ನೇ ಏಪ್ರಿಲ್ 2014 ವರೆಗೆ ಅಗ್ನಿ ಸುರಕ್ಷತಾ ಸಪ್ತಾಹವನ್ನಾಗಿ ಆಚರಿಸುತ್ತಿರುವ ಪ್ರಯುಕ್ತ ಸಂಸ್ಥಾನದ ಸುರಕ್ಷತಾ ವಿಭಾಗವು ಅಗ್ನಿ ಮತ್ತು ಸುರಕ್ಷತಾ ಇಲಾಖೆಯ ಸಹಯೋಗದೊಂದಿಗೆ ವಿವಿಧ ಬಗೆಯ ಬೆಂಕಿಯನ್ನು ನಂದಿಸುವ ಉಪಕರಣಗಳನ್ನು ತನ್ನ ಎಲ್ಲಾ ವಿಭಾಗಗಳಲ್ಲಿ ಅಳವಡಿಸಿತು. 

ಈ ಬೆಂಕಿಯನ್ನು ನಂದಿಸುವ ಉಪಕರಣಗಳನ್ನು ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಸಂಸ್ಥಾನವು ಮೊದಲ ಹಂತದ ತರಬೇತಿ ಶಿಬಿರವನ್ನು 10, 12, 14 ಮತ್ತು 17ನೇ ಫೆಬ್ರವರಿ 2014 ರಂದು ತನ್ನ ಉದ್ಯೋಗಿಗಳಿಗೆ ಹಮ್ಮಿಕೊಂಡಿತ್ತು. ಅದೇ ರೀತಿ ಮೊದಲನೇ ಶಿಬಿರದಲ್ಲಿ ಪಾಲ್ಗೊಳ್ಳಲು ಆಗದಿದ್ದ ಉದ್ಯೋಗಿಗಳಿಗಾಗಿ ಎರಡನೇ ಸುತ್ತಿನ ತರಬೇತಿ ಶಿಬಿರವನ್ನು 13 ಮತ್ತು 14ನೇ ಏಪ್ರಿಲ್ 2014 ರಂದು ಎರಡು ಅಧಿವೇಶನಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿರಡಿ ನಗರ ಪಾಲಿಕೆಯ ಅಗ್ನಿ ಮತ್ತು ಸುರಕ್ಷತಾ ಅಧಿಕಾರಿ ಶ್ರೀ.ಸಾಂಭಾಜಿ ಕಾರ್ಲೆಯವರು ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಉದ್ಯೋಗಿಗಳಿಗೂ ನೀಡಿದ ಮಾರ್ಗದರ್ಶನ ಎಲ್ಲರಿಗೂ ಬಹಳ ಉಪಯೋಗವಾಯಿತೆಂದು ಹೇಳಬಹುದು. ಶ್ರೀ.ಕಾರ್ಲೆಯವರು ಈ ಶಿಬಿರವನ್ನು ಹಾಸ್ಯಮಿಶ್ರಿತ ಮನರಂಜನೆಯೊಂದಿಗೆ ನಡೆಸಿಕೊಟ್ಟರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ವಿವಿಧ ಉಪಕರಣಗಳನ್ನು ಬಳಸುವ ರೀತಿಯನ್ನು ಪ್ರದರ್ಶಿಸಿದರು. ಶಿಬಿರದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸುಮಾರು 3000 ಸಿಬ್ಬಂದಿಗಳು ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದರು.


ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿಗಳಾದ ಶ್ರೀ.ಅಜಯ್ ಮೋರೆ,ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ  ಮತ್ತು ಎಲ್ಲಾ ಆಡಳಿತಾಧಿಕಾರಿಗಳು ಈ ತರಬೇತಿ ಶಿಬಿರವು ಯಶಸ್ವಿಯಾಗಳು ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡಿದರು. ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನದ ಸುರಕ್ಷತಾ ಅಧಿಕಾರಿಗಳಾದ ಶ್ರೀ.ಎಸ್.ಆರ್.ಜಾಧವ್, ಸುರಕ್ಷತಾ ವಿಭಾಗದ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಮತ್ತು ಅಗ್ನಿ ಮತ್ತು ಸುರಕ್ಷತಾ ಇಲಾಖೆಯ ಶ್ರೀ.ಪ್ರತಾಪ್ ಕೋತೆಯವರುಗಳು ಈ ಶಿಬಿರವು ಅತ್ಯಂತ ಯಶಸ್ವಿಯಾಗಲು ಬಹಳ ಶ್ರಮವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ.ಅಭಯ್ ದುನಾಕೆಯವರು ವಹಿಸಿಕೊಂಡಿದ್ದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Tuesday, April 15, 2014

ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಶ್ರೀ.ರಾಹುಲ್ ಗಾಂಧಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಶ್ರೀ.ರಾಹುಲ್ ಗಾಂಧಿಯವರು ಇದೇ ತಿಂಗಳ 15ನೇ ಏಪ್ರಿಲ್ 2014, ಮಂಗಳವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪದೆದರು. ಆ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀ.ಮಾಣಿಕ್ ರಾವ್ ಥಾಕ್ರೆ, ಮಹಾರಾಷ್ಟ್ರದ ವ್ಯವಸಾಯ ಹಾಗೂ ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ಮತ್ತು ಅಹಮದ್ ನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರುಗಳು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ



Tuesday, April 8, 2014

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಶಿರಡಿ ಆಯೋಜಿಸಿರುವ ಶ್ರೀ ರಾಮನವಮಿ ಉತ್ಸವವು ಇದೇ ತಿಂಗಳ 7ನೇ ಏಪ್ರಿಲ್ 2014, ಸೋಮವಾರ  ದಂದು ಸೂಕ್ತ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು. ಮಹಾರಾಷ್ಟ್ರದ ಎಲ್ಲಾ ಭಾಗಗಳಿಂದ ಹಾಗೂ ದೇಶದ ಎಲ್ಲಾ ಕಡೆಗಳಿಂದ ಪಲ್ಲಕ್ಕಿಯನ್ನು ಹೊತ್ತುಕೊಂಡು ಬಾಬಾರವರ ದರ್ಶನಕ್ಕಾಗಿ ಆಗಮಿಸಿದ್ದ ಭಕ್ತರ ಸಾಯಿ ನಾಮ ಜಯಕಾರವು  ಶಿರಡಿಯನ್ನು ಸಂಪೂರ್ಣವಾಗಿ ವ್ಯಾಪಿಸಿತ್ತು.

ಉತ್ಸವದ ಮೊದಲನೆಯ ದಿನದ ಅಂಗವಾಗಿ ಇಂದು ಬೆಳಗಿನ ಕಾಕಡಾ ಆರತಿಯಾದ ನಂತರ ಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಹಾಗೂ ಪವಿತ್ರ ಸಾಯಿ ಸಚ್ಚರಿತ್ರೆಯನ್ನು ದ್ವಾರಕಾಮಾಯಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿಗಳಾದ ಶ್ರೀ.ಅಜಯ್ ಮೋರೆಯವರು ಪವಿತ್ರ ಸಾಯಿ ಸಚ್ಚರಿತ್ರೆಯನ್ನು, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಸಂಸ್ಥಾನದ ಅಧೀಕ್ಷಕರಾದ ಶ್ರೀ.ರಾಮರಾವ್ ಶೆಲ್ಕೆಯವರುಗಳು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಸಂಸ್ಥಾನದ ಪುರೋಹಿತರಾದ ಶ್ರೀ.ಉಪೇಂದ್ರ ಪಾಠಕ್ ರವರು ವೀಣೆಯನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು  ತಲುಪಿದ ನಂತರ, ಅಲ್ಲಿ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಶ್ರೀ.ಅಜಯ್ ಮೋರೆಯವರು ಮೊದಲನೆಯ ಅಧ್ಯಾಯವನ್ನು ಮತ್ತು ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇಯ ಅಧ್ಯಾಯವನ್ನು ವಿಧ್ಯುಕ್ತವಾಗಿ ಪಾರಾಯಣ ಮಾಡುವ ಮುಖಾಂತರ ಅಖಂಡ ಪಾರಾಯಣವನ್ನು ಪ್ರಾರಂಭಿಸಿದರು.


ಬೆಳಗಿನ ಕಾಕಡಾ ಆರತಿಯ ನಂತರ ಶ್ರೀ.ಅಜಯ್ ಮೋರೆಯವರು ಬಾಬಾರವರ ಪಾದ ಪೂಜೆಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು.


ಮುಂಬೈನ ಶ್ರೀ ದ್ವಾರಕಾಮಾಯಿ ಮಂಡಳಿಯವರು ಪ್ರತಿ ವರ್ಷದಂತೆ ಈ ವರ್ಷವೂ ಭಗವಾನ್  ಶ್ರೀ ರಾಮನ ಪ್ರತಿಕೃತಿಯಿರುವ ಬೃಹತ್ ಮಹಾದ್ವಾರವನ್ನು ಸಮಾಧಿ ಮಂದಿರದ ಆವರಣದಲ್ಲಿ ನಿರ್ಮಿಸಿದ್ದರು. ಅಂತೆಯೇ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಈ ಸುಂದರ ಸೃಷ್ಟಿಯನ್ನು ನೋಡಲು ಸಾಯಿ ಭಕ್ತ ಸಾಗರವೇ ಶಿರಡಿಗೆ ಹರಿದುಬಂದಿತ್ತು. 



ಶ್ರೀ. ಸತ್ಯ ಖಡ್ಗ ರಾಯ್ ಮತ್ತು ಕಟಕ್ ನ ರವೀಶ್ ವಿದ್ಯಾಪೀಠದ ಮುಖ್ಯಸ್ಥರಾದ ಡಾ.ಸಂಜಯ್ ಕುಮಾರ್ ಸತ್ಪತಿಯವರು ಜಂಟಿಯಾಗಿ ಮರಾಠಿಯಿಂದ ಒರಿಯಾಗೆ ಭಾಷಾಂತರ ಮಾಡಿರುವ  ಶ್ರೀ ಸಾಯಿಬಾಬಾರವರ ಆರತಿಯ ಪುಸ್ತಕವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸಮಾಧಿ ಮಂದಿರದ ಆವರಣದಲ್ಲಿ ಲೋಕಾರ್ಪಣೆ ಮಾಡಿದರು.


7ನೇ ಏಪ್ರಿಲ್ 2014, ಸೋಮವಾರವು ಉತ್ಸವದ ಮೊದಲನೆ ದಿನವಾದ ಕಾರಣ ದ್ವಾರಕಾಮಾಯಿಯನ್ನು ರಾತ್ರಿಯಿಡೀ ಪಾರಾಯಣ ಮಾಡುವ ಸಲುವಾಗಿ ತೆರೆದಿಡಲಾಗಿತ್ತು.

ಶ್ರೀ ಸಾಯಿಬಾಬಾ ಸಂಸ್ಥಾನದ ಆಡಳಿತ ಮಂಡಳಿಯು ಸಾಯಿ ಭಕ್ತರು ಯಾವುದೇ ತೊಂದರೆಯಿಲ್ಲದೇ ಆರಾಮವಾಗಿ ಸಾಯಿಬಾಬಾರವರ ದರ್ಶನ ಮಾಡಲು ಅನೂಕೂಲ ಮಾಡಿಕೊಟ್ಟಿದ್ದು ಸಾಯಿಭಕ್ತರಿಗೆ ಬಹಳ ಸಹಾಯಕವಾಯಿತೆಂದು ಹೇಳಬಹುದು. ಶಿರಡಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದ ಕಾರಣ ಸಂಸ್ಥಾನದ ಆಡಳಿತ ಮಂಡಳಿಯು ದರ್ಶನದ ಸಾಲಿನಲ್ಲಿ ಹಲವಾರು ಕಡೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಿತ್ತು.

ಶ್ರೀ ರಾಮನವಮಿ ಉತ್ಸವದ 2ನೇ ದಿನದ ಹಾಗೂ ಮುಖ್ಯ ದಿನದ ಕಲಾಪಗಳನ್ನು 8ನೇ ಏಪ್ರಿಲ್  2014, ಮಂಗಳವಾರ ದಂದು ನೆರವೇರಿಸಲಾಯಿತು.

ಕಾಕಡಾ ಆರತಿಯಾದ ನಂತರ ದ್ವಾರಕಾಮಾಯಿಯಲ್ಲಿ 7ನೇ ಏಪ್ರಿಲ್ 2014 ರಂದು ಆರಂಭಿಸಲಾಗಿದ್ದ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಸುಸಂಪನ್ನಗೊಳಿಸಲಾಯಿತು. ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಗುರುಸ್ಥಾನದ ಮುಖಾಂತರ ಬಾಬಾರವರ ಭಾವಚಿತ್ರ ಹಾಗೂ ವೀಣೆಯೊಂದಿಗೆ ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರೀ ಸಾಯಿಬಾಬಾ ಸಂಸ್ಥಾನದ ಅದ್ಯಕ್ಷರಾದ ಶ್ರೀ.ಬಾಲಚಂದ್ರ ದೇಬದ್ವಾರ್ ರವರು ಪವಿತ್ರ ಪೋತಿಯನ್ನು ಹಿಡಿದುಕೊಂಡಿದ್ದರೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರುಗಳು ಬಾಬಾರವರ ಭಾವಚಿತ್ರವನ್ನು ಹಾಗೂ ಮಂದಿರದ ಅಧೀಕ್ಷಕರಾದ ಶ್ರೀ.ರಾಮರಾವ್ ಶೆಲ್ಕೆಯವರು ವೀಣೆಯನ್ನು ಹಿಡಿದುಕೊಂಡಿದ್ದರು.

ನಂತರ ಸಮಾಧಿ ಮಂದಿರದಲ್ಲಿ ಗೋಧಿಯ ಚೀಲಕ್ಕೆ ಶ್ರೀ ಸಾಯಿಬಾಬಾ ಸಂಸ್ಥಾನದ ಅದ್ಯಕ್ಷರಾದ ಶ್ರೀ.ಬಾಲಚಂದ್ರ ದೇಬದ್ವಾರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ಸುವರ್ಣ ದೇಬದ್ವಾರ್ ರವರು ಪೂಜೆಯನ್ನು ಸಲ್ಲಿಸಿದರು. 


ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳಿಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಅದ್ಯಕ್ಷರಾದ ಶ್ರೀ.ಬಾಲಚಂದ್ರ ದೇಬದ್ವಾರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ಸುವರ್ಣ ದೇಬದ್ವಾರ್ ರವರು ಪೂಜೆಯನ್ನು ಸಲ್ಲಿಸಿದರು.



ಸುಮಾರು 4000ಕ್ಕೂ ಹೆಚ್ಚು ಸಾಯಿ ಭಕ್ತರು ಪಾದಯಾತ್ರೆಯಲ್ಲಿ ಪವಿತ್ರ ಗೋದಾವರಿಯಿಂದ ಕಾವಡಿಯಲ್ಲಿ ಹೊತ್ತು ತಂದ ಪವಿತ್ರ ಗೋದಾವರಿ ಜಲದಿಂದ ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ವಿಗ್ರಹಕ್ಕೆ ಜಲಾಭಿಷೇಕವನ್ನು ಮಾಡಲಾಯಿತು.

ಬೆಳಿಗ್ಗೆ 10:30ಕ್ಕೆ ಸರಿಯಾಗಿ ಶ್ರೀ.ಹೆಚ್.ಬಿ.ಪಿ.ವಿಕ್ರಮ್ ನಂದೇಡ್ಕರ್ ರವರು ಶ್ರೀ ರಾಮನ ಜನನವನ್ನು ಕುರಿತ ಕೀರ್ತನೆಯನ್ನು ಸಮಾಧಿ ಮಂದಿರದ ಪ್ರಾಂಗಣದಲ್ಲಿ ಮಾಡಿದರು.



ಮಧ್ಯಾನ್ಹ ಆರತಿಗೆ ಮುಂಚೆ ಹೊಸ ಧ್ವಜದ ಪೂಜೆಯನ್ನು ನೆರವೇರಿಸಲಾಯಿತು. ಈ ಪೂಜೆಯಲ್ಲಿ ಸಾಯಿ ಮಹಾಭಕ್ತ ದಿವಂಗತ ರಾಸನೆ ಹಾಗೂ ದಿವಂಗತ ನಾನಾ ಸಾಹೇಬ್ ನಿಮೋಣ್ಕರ್ ರವರ ವಂಶಸ್ಥರು ಭಾಗವಹಿಸಿ ಧ್ವಜಗಳಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆಯನ್ನು ಸಲ್ಲಿಸಿದರು. ಸಂಜೆ 4:00 ಗಂಟೆಗೆ ಧ್ವಜದ ಮೆರವಣಿಗೆಯನ್ನು ನೆರವೇರಿಸಲಾಯಿತು. ಸಂಜೆ 5:00 ಗಂಟೆಗೆ ಸಮಾಧಿ ಮಂದಿರದಿಂದ ಪ್ರಾರಂಭಿಸಿ ಶಿರಡಿ ಗ್ರಾಮದ ಸುತ್ತಲೂ ಬಾಬಾರವರ ರಥೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿ ಭಕ್ತರು ಭಾಗವಹಿಸಿದ್ದರು.

ಸಮಾಧಿ ಮಂದಿರ ಹಾಗೂ ಸುತ್ತಮುತ್ತಲಿನ ಸ್ಥಳಗಳನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಅಲಂಕಾರದ ಸಂಪೂರ್ಣ ವೆಚ್ಚವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಟ್ರಸ್ಟಿಯಾಗಿದ್ದ ಶ್ರೀಮತಿ.ರಿಂಪಲ್ ಲೋಹಿಯಾರವರು ವಹಿಸಿಕೊಂಡಿದ್ದರು.





8ನೇ ಏಪ್ರಿಲ್  2014, ಮಂಗಳವಾರ ವು ಉತ್ಸವದ ಪ್ರಮುಖ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಸಾಯಿ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು. ಲಕ್ಷಾಂತರ ಸಾಯಿ ಭಕ್ತರು ಸಾಯಿಬಾಬಾರವರ ದರ್ಶನವನ್ನು ಪಡೆದರು. 

ಶ್ರೀ ರಾಮನವಮಿ ಉತ್ಸವದ 3ನೇ ದಿನದ ಹಾಗೂ ಕೊನೆಯ  ದಿನದ ಕಲಾಪಗಳನ್ನು 9ನೇ ಏಪ್ರಿಲ್  2014, ಬುಧವಾರ ದಂದು ನೆರವೇರಿಸಲಾಯಿತು.

7ನೇ ಏಪ್ರಿಲ್ 2014 ರಂದು ಆರಂಭಿಸಲಾಗಿದ್ದ ಶ್ರೀ ರಾಮನವಮಿ ಉತ್ಸವಕ್ಕೆ ಶ್ರೀ.ಹೆಚ್.ಬಿ.ಪಿ.ವಿಕ್ರಮ್ ನಂದೇಡ್ಕರ್ ರವರು 12:00 ಗಂಟೆಗೆ ಸರಿಯಾಗಿ ಕಲ್ಯಾಚಿ ಕೀರ್ತನೆಯನ್ನು ಮಾಡುವ ಮುಖಾಂತರ ಮಂಗಳ ಹಾಡಿದರು. ಈ ಕೀರ್ತನೆಯಲ್ಲಿ ಸಾವಿರಾರು ಸಾಯಿ ಭಕ್ತರು ತುಂಬು ಉತ್ಸಾಹದಿಂದ ಭಾಗವಹಿಸಿದ್ದರು.

ಬೆಳಿಗ್ಗೆ ಗುರುಸ್ಥಾನದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ನೆರವೇರಿಸಿದರು.



ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಹಾಗೂ ಅವರ ಧರ್ಮಪತ್ನಿ ಡಾ.ಶ್ರೀಮತಿ.ಶುಭಾಂಗಿ ಶಿಂಧೆಯವರು ಸಮಾಧಿ ಮಂದಿರದಲ್ಲಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಪೂಜೆಯನ್ನು ನೆರವೇರಿಸಿದರು.



ಮಧ್ಯಾನ್ಹ ಆರತಿಯ ನಂತರ ದಹಿ ಹಂಡಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.



ವಿಜಯವಾಡದ ಪಿ.ಪದ್ಮಲತಾ ಶ್ರೀನಿವಾಸ್, ಭೂಪಾಲ್ ನ ಮುಕೇಶ್ ಭಾರದ್ವಾಜ್, ಮಿತೇಶ್ ಕ್ಲಾಸಸ್, ಔರಂಗಾಬಾದ್ ನ ದಿನೇಶ್ ಚಂದ್ರ, ಸುರೇಶ ಚಂದ್ರ ವಡೆಗಾವಂಕರ್, ಚೆನ್ನೈ ನ ಟಿ.ವಿಜಯ್, ಮುಂಬೈ ನ ಸುನೀಲ್ ಅಗರವಾಲ್, ಅಹಮದಾಬಾದ್ ನ ಸುಶೀಲಾದೇವಿ ಘನಶ್ಯಾಮದಾಸ್ ಮಸಾನಿ ಗೋಧಿಯಾ, ದಿಲೀಪ್ ಮೆಹತಾ, ಬೆಂಗಳೂರಿನ ಶ್ರೀನಿವಾಸ್ ಶಿರಗೂರ್ಕರ್, ಭುವನೇಶ್ವರ್ ನ ಎಸ್. ದುಷ್ಮಂತ ಕುಮಾರ್, ಡೆಹ್ರಾಡೂನ್ ನ ಸಚಿನ್ ಕುಮಾರ್, ಅಮೇರಿಕಾದ ಸೀತಾ ಹರಿಹರನ್,  ಕೊಲ್ಹಾಪುರದ ಶ್ರೀ.ಮನೋಹರ ಲಾಲ್  ಕರ್ದಾ ಮತ್ತು ಹೈದರಾಬಾದ್ ನ ಪಿ.ಸೂರ್ಯನಾರಾಯಣ ಮೂರ್ತಿ - ಈ ಎಲ್ಲಾ ಮಹನೀಯರುಗಳು ನೀಡಿದ ಉದಾರ ದೇಣಿಗೆಯಿಂದ ಉತ್ಸವದ ಎಲ್ಲಾ 3 ದಿನಗಳೂ ಎಲ್ಲಾ ಸಾಯಿಭಕ್ತರಿಗೂ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು.

ಶ್ರೀ ಸಾಯಿಬಾಬಾ ಸಂಸ್ಥಾನವು  2 ಲಕ್ಷಕ್ಕೂ ಹೆಚ್ಚು ಲಾಡು ಪ್ರಸಾದ ಪೊಟ್ಟಣಗಳನ್ನು ದರ್ಶನ ಮಾಡಿದ ಎಲ್ಲಾ ಭಕ್ತರಿಗೂ ಉಚಿತವಾಗಿ ವಿತರಣೆ ಮಾಡಿತು. ಅದೇ ರೀತಿ ಬೆಳಗಿನ ಹೊತ್ತು ಸುಮಾರು 43,000 ಭಕ್ತರಿಗೆ ಉಚಿತವಾಗಿ ಉಪಾಹಾರ ಪ್ರಸಾದದ ಪೊಟ್ಟಣಗಳನ್ನು ವಿತರಿಸಿತು.


ಶಿರಡಿಯ ಸಾಯಿ ನಗರ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಸಾಯಿ ಭಕ್ತರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಮುಂಬೈನ ಶ್ರೀ ದ್ವಾರಕಾಮಾಯಿ ಮಂಡಳಿಯವರು ಕಳೆದ 36 ವರ್ಷಗಳಿಂದ  ಶ್ರೀ ರಾಮನವಮಿ, ವಿಜಯದಶಮಿ ಉತ್ಸವಗಳ ಸಂದರ್ಭದಲ್ಲಿ ವಿವಿಧ ಪೌರಾಣಿಕ ಹಿನ್ನೆಲೆಯುಳ್ಳ ಪ್ರತಿಕೃತಿಗಳನ್ನು ಒಳಗೊಂಡ ಬೃಹತ್ ಮಹಾದ್ವಾರವನ್ನು ಸಮಾಧಿ ಮಂದಿರದ ಆವರಣದಲ್ಲಿ ನಿರ್ಮಿಸುತ್ತಾ ಬಂದಿದ್ದಾರೆ. ಅಂತೆಯೇ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಾ ಬಂದಿದ್ದಾರೆ. ಅವರ ಮಹತ್ತರ ಸೇವೆಯನ್ನು ಗುರುತಿಸುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಆ ಮಂಡಳಿಯ ಸದಸ್ಯರನ್ನು ವಿಶೇಷವಾಗಿ ಗೌರವಿಸಿತು.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್


ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Sunday, April 6, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮಾಜಿ ಅಧ್ಯಕ್ಷ ಶ್ರೀ.ಜಯಂತ್ ಕುಲಕರ್ಣಿಯವರಿಗೆ ಆತ್ಮೀಯ ಬೀಳ್ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 2ನೇ ಎಪ್ರಿಲ್ 2014, ಬುಧವಾರ ದಂದು ಸಂಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇತ್ತೀಚೆಗಷ್ಟೇ ನಿವೃತ್ತರಾದ ಶ್ರೀ ಸಾಯಿಬಾಬಾ ಸಂಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ. ಜಯಂತ್ ಕುಲಕರ್ಣಿಯವರನ್ನು ಸನ್ಮಾನಿಸಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಹಂಗಾಮಿ ಅಧ್ಯಕ್ಷ ಶ್ರೀ.ಬಾಲಚಂದ್ರ ದೇಬ್ದ್ವಾರ್,ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಸಾಯಿಬಾಬಾ ಸಂಸ್ಥಾನದ ಹಲವಾರು ಪದಾಧಿಕಾರಿಗಳು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. 
 

ತ್ರಿಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆಯವರು ಈ ಸಂದರ್ಭದಲ್ಲಿ ಮಾತನಾಡಿ ಶ್ರೀ.ಜಯಂತ್ ಕುಲಕರ್ಣಿಯವರು "ಮಾನವ ಸೇವೆಯೇ ಮಾಧವ ಸೇವೆ" ಎಂಬ ನಾಣ್ಣುಡಿಯಂತೆ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಹಲವಾರು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದು ಬಹಳ ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. 
 
ಶ್ರೀ ಸಾಯಿಬಾಬಾ ಸಂಸ್ಥಾನದ ಪರವಾಗಿ ಶ್ರೀ.ಅನಿಲ್ ಕಾವಡೆ ಹಾಗೂ ಹಂಗಾಮಿ ಅಧ್ಯಕ್ಷ ಶ್ರೀ.ಬಾಲಚಂದ್ರ ದೇಬ್ದ್ವಾರ್ ರವರು ಶ್ರೀಮತಿ ಮತ್ತು ಶ್ರೀ ಜಯಂತ್ ಕುಲಕರ್ಣಿಯವರನ್ನು ಸನ್ಮಾನಿಸಿದರು. ಸನ್ಮಾನದ ನಂತರ ಮಾತನಾಡಿದ ಶ್ರೀ.ಅನಿಲ್ ಕಾವಡೆಯವರು "ಶ್ರೀ ಜಯಂತ್ ಕುಲಕರ್ಣಿಯವರು ತಮ್ಮ ಜಿಲ್ಲಾ ಕಲೆಕ್ಟರ್ ಕೆಲಸದ ಒತ್ತಡದ ನಡುವೆ ಸಂಸ್ಥಾನದ ಕೆಲಸಗಳನ್ನು ಕೂಡ ಬಹಳ ಸಂತೋಷದಿಂದ ಹಾಗೂ ತಾಳ್ಮೆಯಿಂದ ನಿರ್ವಹಿಸಿ ಸಾಯಿ ಭಕ್ತರಿಗಾಗಿ ಹಲವಾರು ಉಪಯೋಗಿ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಇವರು ಸಂಸ್ಥಾನದ ಕೆಲಸವನ್ನು ಬಾಬಾರವರು ತಮಗೆ ವಹಿಸಿದ್ದಾರೆಂಬ ಭಾವನೆಯಿಂದ ಕಾರ್ಯ ನಿರ್ವಹಿಸಿ ಭಕ್ತ ಜನರ ಸೇವೆಯನ್ನು ಮಾಡಿದ್ದಾರೆ. ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವಾಗ ಸೇವಾ ಮನೋಭಾವನೆ ಬಹಳ ಮುಖ್ಯವಾಗಿರುತ್ತದೆ  ಮತ್ತು ಶ್ರೀ.ಜಯಂತ್ ಕುಲಕರ್ಣಿಯವರು ಉತ್ತಮ ಕಾರ್ಯಗಳನ್ನು ಮಾಡುವ ಮುಖಾಂತರ ಎಲ್ಲರಿಗೂ ಮಾದರಿಯಾಗಿರುವುದಷ್ಟೇ ಅಲ್ಲದೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರೆ ಅತಿಶಯೋಕ್ತಿ ಅಲ್ಲ" ಎಂದು ನುಡಿದರು.

ಸಂಸ್ಥಾನದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀ.ಜಯಂತ್ ಕುಲಕರ್ಣಿಯವರು "ಸರ್ಕಾರವು ನನಗೆ ಪ್ರತಿದಿನ  ಅಹಮದ್ ನಗರ ಜಿಲ್ಲೆಯ 14 ತಾಲ್ಲೂಕು ಮಟ್ಟದ ನ್ಯಾಯಾಲಯಗಳು ಹಾಗೂ 84 ನ್ಯಾಯಾಧೀಶರನ್ನು ನೋಡಿಕೊಳ್ಳುವ ಕೆಲಸವನ್ನು ವಹಿಸಿತ್ತು. ಹಾಗಾಗಿ, ಕೇವಲ ಬಾಬಾರವರ ಆಶೀರ್ವಾದದಿಂದ ನಾನು ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷನಾಗಿ ನನ್ನ ಕೈಲಾದ ಮಟ್ಟಿಗೆ ಉತ್ತಮ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿದ್ದೇನೆ ಅಷ್ಟೇ. ಸಂಸ್ಥಾನದ ವಿಷಯದಲ್ಲಿ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಕ್ತ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಿದ್ದೆ.ಸಂಸ್ಥಾನದ ಕೆಲಸವನ್ನು ದೇವರ ಕೆಲಸವೆಂದು ತಿಳಿದು ಶಕ್ತಿ ಮೀರಿ ನಾನು ಕಾರ್ಯ ನಿರ್ವಹಿಸಿದ್ದೇನೆ.  ಸಾಯಿ ಭಕ್ತರು ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದರು. ನಂತರ ಲಾಡು ಪ್ರಸಾದವನ್ನು ತೆಗೆದುಕೊಳ್ಳುವ ಸಲುವಾಗಿ ಪುನಃ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಾಯಿಬಾಬಾರವರ ದರ್ಶನಕ್ಕೆ ಸಾಲಿನಲ್ಲಿ ಹೋಗುವ ಸಮಯದಲ್ಲಿಯೇ ಉತ್ತಮ ತುಪ್ಪದಿಂದ ಮಾಡಿದ ಲಾಡು ಪ್ರಸಾದವನ್ನು ಉಚಿತವಾಗಿ ನೀಡಲು ಪ್ರಾರಂಭಿಸಲಾಯಿತು. ಸಾಯಿಬಾಬಾ ಸಂಸ್ಥಾನದ ಈ ನಿರ್ಧಾರಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಹಾಗೂ ಪ್ರಶಂಸೆ ದೊರೆಯಿತು. ಕಳೆದ ವರ್ಷ ಹಲವಾರು ಸಾಯಿ ಭಕ್ತರುಗಳು ನೀಡಿದ ದೇಣಿಗೆಯ ಹಣದಿಂದ ವರ್ಷದ 365 ದಿನಗಳಲ್ಲಿ 205 ದಿನಗಳು ಎಲ್ಲಾ ಭಕ್ತರಿಗೂ ಉಚಿತವಾಗಿ ಸಾಯಿ ಪ್ರಸಾದ ಭೋಜನವನ್ನು ನೀಡಲಾಯಿತು. ಸಾಯಿ ಆಶ್ರಮ-2 ರಲ್ಲಿ ಪಲ್ಲಕ್ಕಿಯನ್ನು ಹೊತ್ತು ತರುವ ಪಾದಯಾತ್ರಿಗಳಿಗೆ ಹಾಗೂ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಬಂಧಿಕರಿಗೆ ಉಳಿದುಕೊಳ್ಳಲು ಉಚಿತ ವಸತಿಯನ್ನು ನೀಡಲಾಯಿತು. ನಾನು ನನ್ನ ಸಂಪೂರ್ಣ ಸಮಯವನ್ನು ಸಂಸ್ಥಾನದ ಕೆಲಸಗಳಿಗೆ ಮೀಸಲಿಡಲಾಗದಿದ್ದರೂ ಸಹ ಸಾಯಿ ಭಕ್ತರ ಒಳಿತಿಗಾಗಿ ಹಲವಾರು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸಿದೆ" ಎಂದು ತಿಳಿಸಿದರು.


ಶ್ರೀ ಜಯಂತ್ ಕುಲಕರ್ಣಿಯವರನ್ನು ಸನ್ಮಾನಿಸಿದ ನಂತರ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಹಂಗಾಮಿ ಅಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೂ ಆದ ಶ್ರೀ.ಬಾಲಚಂದ್ರ ದೇಬ್ದ್ವಾರ್ ರವರು "ಶ್ರೀ ಜಯಂತ್ ಕುಲಕರ್ಣಿಯವರು ಶ್ರೀ ಸಾಯಿಬಾಬಾ ಮತ್ತು ಸಾಯಿ ಭಕ್ತರ ನಡುವೆ ಇರುವ ಸೇತುವೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಹಳ ಉತ್ತಮ ಕೆಲಸ ಮಾಡುವ ಮುಖಾಂತರ ಇಬ್ಬರನ್ನೂ ಹತ್ತಿರ ಬರುವಂತೆ ಮಾಡಿದ್ದಾರೆ. ಅಲ್ಲದೇ 32 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಷ್ಟೇ ಅಲ್ಲದೆ ಶ್ರೀ ಸಾಯಿಬಾಬಾ ಸಂಸ್ಥಾನದ ಕೆಲಸವನ್ನು ಸಹ ಉತ್ತಮವಾಗಿ ನಿರ್ವಹಿಸಿ ಸಂಸ್ಥಾನವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ" ಎಂದು ನುಡಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸ್ವಾಗತ ಭಾಷಣ ಮಾಡಿದರು. ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬ್ಲೆ, ಶ್ರೀ. ಎಸ್.ಎನ್.ಗಾರ್ಕಲ್ ರವರುಗಳು ಮಾತನಾಡಿ ಶ್ರೀ ಜಯಂತ್ ಕುಲಕರ್ಣಿಯವರ ಜೊತೆಗೆ ಕೆಲಸ ಮಾಡುವಾಗ ತಮಗಾದ ಅನುಭವಗಳನ್ನು ಹಂಚಿಕೊಂಡರು. ಶ್ರೀ.ವಿಕಾಸ್ ಶಿವರಾಜೆರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದಷ್ಟೇ ಅಲ್ಲದೆ ವಂದನಾರ್ಪಣೆಯನ್ನು ಸಹ ಸಲ್ಲಿಸಿದರು. ನಿರ್ವಾಹಕ ಅಧಿಕಾರಿಗಳಾದ ಶ್ರೀ.ಎಸ್.ವಿ.ಗಮೇ, ಶ್ರೀ.ಯು.ಪಿ.ಗೋಂದ್ಕರ್, ಶ್ರೀ.ಟಿ. ಎನ್.ಉಗಲೇ ಮತ್ತು ಸಾಯಿಬಾಬಾ ಸಂಸ್ಥಾನದ ಇತರ ಎಲ್ಲಾ ವಿಭಾಗದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Thursday, April 3, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ರಾಮನವಮಿ ಉತ್ಸವ - 2014 ರ ಆಯೋಜನೆ - ಪತ್ರಿಕಾ ಪ್ರಕಟಣೆ - ಕೃಪೆ:ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮನವಮಿ ಉತ್ಸವವನ್ನು 7ನೇ ಏಪ್ರಿಲ್ 2014, ಸೋಮವಾರ ದಿಂದ 9ನೇ ಏಪ್ರಿಲ್ 2014, ಬುಧವಾರ ದವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದು ಅದಕ್ಕೆ ಮಾಡಬೇಕಾದ ಎಲ್ಲಾ ಸಿದ್ಧತೆಗಳು ಸಂಪೋರ್ಣಗೊಂಡಿವೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು. ಲ್ಲದೆ, ಈ 3 ದಿನಗಳೂ ಜನಸಂದಣಿ ಹೆಚ್ಚಾಗಿರುವ ಕಾರಣ ಶ್ರೀ  ಸತ್ಯನಾರಾಯಣ ವ್ರತ ಹಾಗೂ ಅಭಿಷೇಕ ಪೂಜೆಯ ಕಾರ್ಯಕ್ರಮಗಳು ಇರುವುದಿಲ್ಲ ಮತ್ತು ಸಾರ್ವಜನಿಕ ಸಂಪರ್ಕಾಲಯದ ಕಚೇರಿಯಿಂದ ದರ್ಶನ/ಆರತಿಯ ಪಾಸ್ ಗಳ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. 

ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ 1912ನೇ ಇಸವಿಯಲ್ಲಿ  ಶ್ರೀ ರಾಮನವಮಿ ಉತ್ಸವವನ್ನು ಆಚರಿಸಲು ಅನುಮತಿ ನೀಡಿದ್ದರು. ಅಂದಿನಿಂದ 100 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಉತ್ಸವವನ್ನು ಶಿರಡಿಯಲ್ಲಿ ಪ್ರತಿವರ್ಷವೂ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಅಜಯ್ ಮೋರೆ ತಿಳಿಸಿದರು. 

ಈ ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಒಳ್ಳೆಯ ರೀತಿಯಲ್ಲಿ ದರ್ಶನವಾಗಲೆಂಬ ಉದ್ದೇಶದಿಂದ ಶ್ರೀ ಸಾಯಿಬಾಬಾ ಸಂಸ್ಥಾನವು ಸಂಸ್ಥಾನದ ಆವರಣದಲ್ಲಿ ಟೆಂಟ್ (ಮಂಟಪ)ದ ವ್ಯವಸ್ಥೆಯನ್ನು ಮಾಡಿದೆ. ಅಲ್ಲದೇ, ಪೋಲಿಸ್ ಸೆಕ್ಯೂರಿಟಿ ವ್ಯವಸ್ಥೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅಷ್ಟೆ ಅಲ್ಲದೆ, ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪಾದಯಾತ್ರಿಗಳು ನಿದ್ರೆ ಮಾಡುವ ಸಲುವಾಗಿ  ಹಾಗೂ ವಿಶ್ರಮಿಸಲು ಅನುಕೂಲವಾಗುವಂತೆ ಸಂಸ್ಥಾನವು ಬಟ್ಟೆಯಿಂದ ಮಾಡಿದ ಶಾಮಿಯಾನದ ಟೆಂಟ್ ವ್ಯವಸ್ಥೆಯನ್ನು ಮುಂಬೈ-ಶಿರಡಿ ಹೆದ್ದಾರಿಯಲ್ಲಿ ಹಲವಾರು ಕಡೆ ಮಾಡಿದೆ.  ಈ ಟೆಂಟ್ ಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅದಕ್ಕಾಗಿ 10 ಕುಡಿಯುವ ನೀರಿನ ಟ್ಯಾಂಕರ್ ಗಳು ಹಾಗೂ ಎಲ್ಲಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು 25 ಜನರನ್ನು ಸಹ ನೇಮಕ ಮಾಡಲಾಗಿದೆ.



ಸಿನ್ನರ್ ಗ್ರಾಮದಿಂದ ಶಿರಡಿಗೆ ಬರುವ ಮಾರ್ಗದಲ್ಲಿ ಪಾದಯಾತ್ರಿಗಳ ತುರ್ತು ವೈದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವಂತೆ ಮೊಬೈಲ್ ಚಿಕಿತ್ಸಾ ವಾಹನಗಳನ್ನೂ ಸಹ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿಯಲ್ಲಿ ಸಂಸ್ಥಾನದ ಆವರಣ, ದರ್ಶನದ ಸಾಲು, ಹೊಸ ಭಕ್ತ ನಿವಾಸ (500 ಕೋಣೆ) ಮತ್ತಿತರ ಸ್ಥಳಗಳಲ್ಲಿ ಪ್ರಥಮ ಚಿಕಿತ್ಸಾ ಘಟಕಗಳನ್ನು ವ್ಯವಸ್ಥೆ ಮಾಡಲಾಗಿದೆ. ಉತ್ಸವದ ಸಂದರ್ಭದಲ್ಲಿ ಭಕ್ತರಿಗೆ ಸುಲಭವಾಗಿ ಲಾಡು ಪ್ರಸಾದ ದೊರೆಯುವಂತೆ ಮಾಡುವ ಸಲುವಾಗಿ 250 ಕ್ವಿಂಟಾಲ್ ಸಕ್ಕರೆಯನ್ನು ಬಳಸಿ ಹೆಚ್ಚಿಗೆ ಲಾಡುಗಳನ್ನು ತಯಾರಿಸಲಾಗಿದೆ. ವಿಜಯವಾಡದ ಪಿ.ಪದ್ಮಲತಾ ಶ್ರೀನಿವಾಸ್, ಮುಕೇಶ್ ಭಾರದ್ವಾಜ್, ಮಿತೇಶ್ ಕ್ಲಾಸಸ್ ಭೂಪಾಲ್, ದಿನೇಶ್ ಚಂದ್ರ, ಸುರೇಶ ಚಂದ್ರ ವಡೆಗಾವಂಕರ್ ಔರಂಗಾಬಾದ್, ಟಿ.ವಿಜಯ್ ಚೆನ್ನೈ, ಸುನೀಲ್ ಅಗರವಾಲ್ ಮುಂಬೈ, ಸುಶೀಲಾದೇವಿ ಘನಶ್ಯಾಮದಾಸ್ ಮಸಾನಿ ಗೋಧಿಯಾ, ದಿಲೀಪ್ ಮೆಹತಾ ಅಹಮದಾಬಾದ್, ಶ್ರೀನಿವಾಸ್ ಶಿರಗೂರ್ಕರ್ ಬೆಂಗಳೂರು,ಎಸ್. ದುಷ್ಮಂತ ಕುಮಾರ್ ಭುವನೇಶ್ವರ್, ಸಚಿನ್ ಕುಮಾರ್ ಡೆಹ್ರಾಡೂನ್, ಸೀತಾ ಹರಿಹರನ್ ಅಮೇರಿಕಾ ಇವರೆಲ್ಲರೂ ನೀಡಿದ ಉದಾರ ದೇಣಿಗೆಯಿಂದ ಉತ್ಸವದ 3 ದಿನಗಳೂ ಪ್ರಸಾದಾಲಯದಲ್ಲಿ ಎಲ್ಲ ಭಕ್ತರಿಗೂ ಉಚಿತ ಪ್ರಸಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಟ್ರಸ್ಟಿಯಾಗಿದ್ದ ರಿಂಪಲ್ ಲೋಹಿಯಾರವರು ನೀಡಿರುವ ಉದಾರ ದೇಣಿಗೆಯಿಂದ ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೂವಿನ ಅಲಂಕಾರವನ್ನು ಮಾಡಲಾಗುತ್ತಿದೆ.

ಈ ಉತ್ಸವದ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. 7ನೇ ಏಪ್ರಿಲ್ 2014, ಸೋಮವಾರದಂದು ಸಂಜೆ  7.30ಕ್ಕೆ ಸಪ್ತಸುರ್ ಪರಿವಾರ್ ಪುಣೆಯ ಕುಮಾರಿ ಕವಿತಾ ಅವರಿಂದ ಭಕ್ತಿ ಹಾಗೂ ಭಾವಗೀತೆ ಕಾರ್ಯಕ್ರಮವಿರುತ್ತದೆ. ರಾತ್ರಿ 9.30ಕ್ಕೆ ಚೆನ್ನೈ ನ ಶ್ರೀ.ಎಂ.ರಾಮು ಮತ್ತು ಶ್ರೀಮತಿ. ಬಿಂದು ಮಾಧವಿಯವರಿಂದ ಭಕ್ತಿಗೀತೆಯ ಕಾರ್ಯಕ್ರಮವಿರುತ್ತದೆ. 8ನೇ ಏಪ್ರಿಲ್ 2014, ಮಂಗಳವಾರದಂದು ಸಂಜೆ  7.30ಕ್ಕೆ ಶ್ರೀ.ಅಜಿತ್ ಕಡಕಡೆಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವಿರುತ್ತದೆ. ರಾತ್ರಿ 9.30ಕ್ಕೆ ಶ್ರೀ ಸಾಯಿ ಸತ್ಸಂಗ್ ಫೆಸ್ಟಿವಲ್, ಅಸ್ಸಾಂ ತಂಡದಿಂದ ನೃತ್ಯ ಹಾಗೂ ಸಾಯಿ ಪ್ರಣಾಮಿ ಕಾರ್ಯಕ್ರಮವಿರುತ್ತದೆ.  9ನೇ ಏಪ್ರಿಲ್ 2014, ಬುಧವಾರದಂದು ಸಂಜೆ  7.30ಕ್ಕೆ ಮುಂಬೈನ ಶ್ರೀಮತಿ.ಕುಸುಮಿತಾ ತಿವಾರಿ ಮತ್ತು ಶ್ರೀ.ಯೋಗೇಶ್ ತಿವಾರಿಯವರಿಂದ ಗಾಯನ ಕಾರ್ಯಕ್ರಮವಿರುತ್ತದೆ. ರಾತ್ರಿ 9.30ಕ್ಕೆ ಥಾಣೆಯ ಮಾರುತಿ ಪಾಟೀಲ್ ರವರಿಂದ ಸಾಯಿ ಭಜನೆ ಕಾರ್ಯಕ್ರಮವಿರುತ್ತದೆ.  ಮೇಲಿನ ಎಲ್ಲಾ ಕಾರ್ಯಕ್ರಮಗಳೂ ಸಾಯಿನಗರ ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಲಾಗುವ ವೇದಿಕೆಯಲ್ಲಿ ನಡೆಯುತ್ತವೆ. ಹಾಗೆಯೇ 7ನೇ ಏಪ್ರಿಲ್ 2014, ಸೋಮವಾರ ಸಂಜೆ 4.00 ಗಂಟೆಗೆ ಮತ್ತು 9ನೇ ಏಪ್ರಿಲ್ 2014, ಬುಧವಾರ ರಾತ್ರಿ 10.30 ಕ್ಕೆ ಸಮಾಧಿ ಮಂದಿರದ ವೇದಿಕೆಯಲ್ಲಿ ಖ್ಯಾತ ಕೀರ್ತನಕಾರರಾದ ಶ್ರೀ.ಹೆಚ್.ಬಿ.ಪಿ.ವಿಕ್ರಂ ಮಹಾರಾಜ್ ನಂದೇಡ್ ಕರ್ ರವರಿಂದ ಸುಶ್ರಾವ್ಯವಾದ ಕೀರ್ತನೆ ಕಾರ್ಯಕ್ರಮವಿರುತ್ತದೆ.

ಅಲ್ಲದೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯಕಾರಿ ಅಧಿಕಾರಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಸಾಯಿಬಾಬಾ ಸಂಸ್ಥಾನದ ಎಲ್ಲಾ ಕಾರ್ಮಿಕರೂ ಹಗಲೂ ರಾತ್ರಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್

ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ