Tuesday, March 5, 2013

ಬಹುಮುಖ ಪ್ರತಿಭೆಯ ಸಾಯಿಭಕ್ತೆ ಕುಮಾರಿ ಶಂಷಾದ್ ಆಲಿ ಬೇಗ್ - ಕೃಪೆ: ಸಾಯಿಅಮೃತಧಾರಾ.ಕಾಂ


ಕುಮಾರಿ ಶಂಷಾದ್ ಆಲಿ ಬೇಗ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆ. ಇವರೊಬ್ಬ ಬಹುಮುಖ ಪ್ರತಿಭೆಯುಳ್ಳ ಮಹಿಳೆ.  ಇವರೊಬ್ಬ ಪ್ರಖ್ಯಾತ ಪತ್ರಕರ್ತೆ, ಸಾಯಿ ಬರಹಗಾರ್ತಿ, ಪ್ರಕಾಶಕಿ ಹಾಗೂ ರೇಖಿ ಮಾಸ್ಟರ್ (ಉಸುಯಿ ರೇಖಿ) ಮತ್ತು ಕರುಣಾ ರೇಖಿ.

ಕುಮಾರಿ ಶಂಷಾದ್ ಆಲಿ ಬೇಗ್ ರವರು 25ನೇ ಜೂನ್ 1968 ರಂದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಜನಿಸಿದರು. ಇವರ ತಾಯಿ ಶ್ರೀಮತಿ.ಅರೇಫಾ ಬೇಗ್ ಹಾಗೂ ತಂದೆ ಶ್ರೀ.ಮಿರ್ಜಾ ಹುಸೇನ್ ಬೇಗ್.

ಇವರು ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ (ಮೈಕ್ರೋ ಬಯಾಲಜಿ).ಪದವಿಯನ್ನು ಗಳಿಸಿರುತ್ತಾರೆ.  ಬಾಂಬೆ ಕಾಲೇಜ್ ಆಫ್ ಜರ್ನಲಿಸಮ್ ನಿಂದ ಪ್ರತಿಕೋದ್ಯಮ ಹಾಗೂ ಮಾಸ್ ಕಮ್ಯುನಿಕೇಷನ್ ನಲ್ಲಿ  ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದಾರೆ. ಅಲ್ಲದೇ, ರೇಖಿ ಮಾಸ್ಟರ್ (ಉಸುಯಿ ರೇಖಿ) ಮತ್ತು ಕರುಣಾ ರೇಖಿ ಯನ್ನು ಕೂಡ ಅಭ್ಯಾಸ ಮಾಡಿರುತ್ತಾರೆ.

ಕುಮಾರಿ ಶಂಷಾದ್ ಆಲಿ ಬೇಗ್ ರವರು 1997ನೇ ಇಸವಿಯಲ್ಲಿ ಸಾಯಿ ಭಕ್ತೆಯಾಗಿ ರೂಪುಗೊಂಡರು. ಶಿರಡಿ ಸಾಯಿಬಾಬಾರವರು "ಗುಬ್ಬಿಯ ಕಾಲಿಗೆ ದಾರವನ್ನು ಕಟ್ಟಿ ಎಳೆಯುವಂತೆ ನಾನು ನನ್ನ ಭಕ್ತರನ್ನು ಶಿರಡಿಗೆ ಸೆಳೆಯುತ್ತೇನೆ" ಎಂದು ಸಾಯಿ ಸಚ್ಚರಿತ್ರೆಯಲ್ಲಿ ನುಡಿದಿದ್ದಾರೆ. ಅದರಂತೆ ಶಂಷಾದ್ ಆಲಿ ಬೇಗ್ ರವರಿಗೆ 1997 ರಲ್ಲಿ ಸಾಯಿಬಾಬಾರವರಿಂದ ಶಿರಡಿಗೆ ಬರುವಂತೆ ಅಪ್ಪಣೆಯಾಯಿತು.  ಪ್ರಪ್ರಥಮ ಬಾರಿಗೆ ಇವರು ಮುಂಬೈನ ಪನ್ವೆಲ್ ನಲ್ಲಿರುವ ಪೂಜ್ಯ ನಾರಾಯಣ ಬಾಬಾರವರ ಶ್ರೀ.ಭಗವತಿ ಸಾಯಿ ಸಂಸ್ಥಾನಕ್ಕೆ ಹೋಗಿ ಸಾಯಿಬಾಬಾರವರ ದರ್ಶನವನ್ನು ಮಾಡಿದರು. ಅಲ್ಲಿ ಇವರ ಮನಸ್ಸಿಗೆ ಬಹಳ ನೆಮ್ಮದಿ ಹಾಗೂ ಶಾಂತಿ ದೊರೆಯಿತು.

ಇದಾದ ಒಂದು ವರ್ಷದ ನಂತರ ಇವರಿಗೆ ಶಿರಡಿಗೆ ಹೋಗುವ ಸೌಭಾಗ್ಯ ಒದಗಿಬಂದಿತು. ಇವರು ಪ್ರಯಾಣ ಮಾಡುತ್ತಿದ್ದ ಬಸ್ ನಾಸಿಕ್ ತಲುಪುತ್ತಿದ್ದಂತೆ ಇವರ ಮನಸ್ಸಿನಲ್ಲಿ ಒಂದು ರೀತಿಯ ಪರಮಸುಖದ ಅನುಭವವಾಯಿತೆಂದು ಇವರು ಹೇಳುತ್ತಾರೆ.

ಇವರು ಶಿರಡಿಯನ್ನು ತಲುಪಿ ದ್ವಾರಕಾಮಾಯಿಗೆ ತೆರಳಿ ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಕಲ್ಲಿನ ಮೇಲೆ ತಮ್ಮ ಕೈಯನ್ನು ಇರಿಸಿದ ಮರುಕ್ಷಣವೇ ಒಂದು ರೀತಿಯ ಶಕ್ತಿ ಇವರ ಕೈಗಳ ಮುಖಾಂತರವಾಗಿ ದೇಹದಾದ್ಯಂತ ಪ್ರವಹಿಸಿದಂತೆ ಅನುಭವವಾಯಿತು. ಈ ಅನುಭವವನ್ನು ತಮ್ಮ ಜೀವಮಾನದಲ್ಲಿ ಮರೆಯಲಾಗುವುದಿಲ್ಲ ಎಂದು ಅತ್ಯಂತ ವಿನಮ್ರ ಭಾವದಿಂದ ಹೇಳುತ್ತಾರೆ. ಈ ಘಟನೆಯಾದ ನಂತರ ಹಲವಾರು ಬಾರಿ ಇವರು ಶಿರಡಿಗೆ ಹೋಗಿ ಬಂದಿರುತ್ತಾರೆ. ಆದರೆ, ಈ ತರಹದ ದಿವ್ಯಾನುಭವ ಮುಂದೆ ಎಂದೂ ನಡೆಯಲಿಲ್ಲ ಎಂದು ಹೇಳುತ್ತಾರೆ. ಪ್ರಾಯಶ: ಇವರ ಮೊದಲ ಭೇಟಿಯಲ್ಲಿಯೇ ಸಾಯಿಬಾಬಾರವರು ತಮಗೆ ಹಾಗೂ ತಮ್ಮ ಭಕ್ತೆಗೆ ಅವಿನಾಭಾವ ಸಂಬಂಧವಿದೆ ಎಂದು  ತಿಳಿಸುವ ಸಲುವಾಗಿ ಈ ರೀತಿಯ ದಿವ್ಯಾನುಭವ ನೀಡಿದ್ದಾರೆ ಎಂದು ಇವರು ನುಡಿಯುತ್ತಾರೆ.

ಇದಾದ ನಂತರ 2002ನೇ ಇಸವಿಯಲ್ಲಿ ಇವರ ಮನಸ್ಸಿನಲ್ಲಿ ಸಾಯಿಬಾಬಾರವರ ಬಗ್ಗೆ ಪುಸ್ತಕವನ್ನು ಬರೆಯಬೇಕೆಂಬ ಹಂಬಲ ಬೆಳೆಯಿತು. ಅದರಂತೆ ನವೆಂಬರ್ 2002ನೇ ಇಸವಿಯಲ್ಲಿ ಪುಸ್ತಕವನ್ನು ಬರೆಯಲು ಪ್ರಾರಂಭಿಸಿದರು. ಆದರೆ ಲೌಕಿಕ ಜಂಜಾಟಗಳಿಂದ ಹೊರಬರಲಾಗದೆ ಸ್ವಲ್ಪ ದಿನಗಳಲ್ಲೇ ನಿಲ್ಲಿಸಿದರು. ಪುನಃ 2003ನೇ ಇಸವಿಯಲ್ಲಿ ಮತ್ತೆ ತಮ್ಮ ಬರವಣಿಗೆಯನ್ನು ಮುಂದುವರಿಸಿದರು. ಕೊನೆಗೆ,  ಸಾಯಿಬಾಬಾರವರ ಆಶೀರ್ವಾದದಿಂದ 2006ನೇ ಇಸವಿಯಲ್ಲಿ ಪುಸ್ತಕವನ್ನು ಸಂಪೂರ್ಣಗೊಳಿಸಿ "ಸಾಯಿ ಕಥಾ ಸಾಗರ" ಎಂಬ ಶೀರ್ಷಿಕೆಯ ಅಡಿಯಲ್ಲಿ ಆಂಗ್ಲ ಭಾಷೆಯಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಹಲವಾರು ಸಾಯಿ ಲೀಲೆಗಳು, ಸಾಯಿಬಾಬಾರವರ ಉಪದೇಶಗಳು, ಈ ಪುಸ್ತಕದಲ್ಲಿ ಅಡಕವಾಗಿವೆ. ಅಲ್ಲದೆ, ಸಾಯಿಬಾಬಾರವರ ಜನ್ಮ, ಶಿರಡಿಗೆ ಬಂದ ರೀತಿ, ಉಧಿಯ ಪವಾಡಗಳು, ದಕ್ಷಿಣೆಯ ಮಹತ್ವ ಭಕ್ತರ ಅನುಭವಗಳು ಹಾಗೂ ಇನ್ನು ಹಲವಾರು ವಿಷಯಗಳ ಬಗ್ಗೆ ಅತ್ಯಂತ ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ.  



2011ನೇ ಇಸವಿಯಲ್ಲಿ ಸಾಯಿಬಾಬಾರವರು ಇವರಿಗೆ ತಮ್ಮ ಉಕ್ತಿಗಳನ್ನು ಆಶೀರ್ವಾದ ಕಾರ್ಡ್ (ಬ್ಲೆಸಿಂಗ್ ಕಾರ್ಡ್) ಗಳ ಮುಖಾಂತರ ಭಕ್ತರಿಗೆ ಮುಟ್ಟಿಸಲು ಆದೇಶ ನೀಡಿದರು. ಈ ಕಾರ್ಡ್ ಗಳು ಭವಿಷ್ಯ ಅಥವಾ ಜ್ಯೋತಿಷ್ಯ ನುಡಿಯುವ ಕಾರ್ಡ್ ಆಗಿರುವುದಿಲ್ಲ, ಬದಲಿಗೆ ಇವುಗಳು ಮಾರ್ಗದರ್ಶನ ನೀಡುವ ಕಾರ್ಡ್ ಗಳಾಗಿರುತ್ತವೆ. ಪ್ರತಿಯೊಂದು ಕಾರ್ಡ್ ಗಳ ಪಾಕೇಟಿನಲ್ಲಿ  ಇಬ್ಬರು ಪ್ರಸಿದ್ಧ ಆಧ್ಯಾತ್ಮಿಕ ಗುರುಗಳ ಆಶೀರ್ವಚನಗಳು, ಶಿರಡಿ ಸಾಯಿಬಾಬಾರವರ 60 ಸೂಕ್ತಿಗಳು ಮತ್ತು ಆಶೀರ್ವಾದ ಕಾರ್ಡ್ ಗಳನ್ನು ಉಪಯೋಗಿಸುವ ವಿಧಾನವನ್ನು ತಿಳಿಸಿಕೊಡುವ ಮಾರ್ಗದರ್ಶಿ ಪುಸ್ತಕ ಇರುತ್ತದೆ. ಈ ಆಶೀರ್ವಾದ ಕಾರ್ಡ್ ಗಳನ್ನು ನಿಮ್ಮ ಮನೆಗಳ ದೇವರ ಗೂಡು/ಕೋಣೆಯಲ್ಲಿ ಇರಿಸಬಹುದು, ನಿಮ್ಮ ಕಷ್ಟಗಳಿಗೆ/ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ಪ್ರತಿದಿನ ಒಂದು ಕಾರ್ಡ್ ಅನ್ನು ಕೈಗೆತ್ತಿಕೊಂಡು ಅದನ್ನು ಕುರಿತು ಧ್ಯಾನವನ್ನು ಮಾಡಿ ಸಾಯಿಬಾಬಾರವರು ಅದರ ಮುಖಾಂತರ ನಿಮಗೆ ನೀಡುವ ಸಂದೇಶದಂತೆ ನಡೆಯಬಹುದಾಗಿದೆ. ಈ  ಆಶೀರ್ವಾದ ಕಾರ್ಡ್ (ಬ್ಲೆಸಿಂಗ್ ಕಾರ್ಡ್) ಗಳನ್ನು 2012ನೇ ಇಸವಿಯಲ್ಲಿ ಬಿಡುಗಡೆ ಮಾಡಲಾಯಿತು.


2003ನೇ ಇಸವಿಯಲ್ಲಿ ಇವರು ಪ್ರಸಾರ್ ಕಮ್ಯುನಿಕೇಷನ್ ಎಂಬ ಹೆಸರಿನ ತಮ್ಮದೇ ಆದ ಒಂದು ಸಂಸ್ಥೆಯನ್ನು ಪ್ರಾರಂಭಿಸಿದರು. ಮುಂದೆ ಜನವರಿ 2013ನೇ ಇಸವಿಯಲ್ಲಿ ಸಾಯಿಬಾಬಾರವರ ಆದೇಶದಂತೆ ಅವರ ತತ್ವ, ಉಪದೇಶ ಮತ್ತು ಅವರ ದೈವಿಕ ಮಾರ್ಗದರ್ಶನಗಳನ್ನು ನೀಡುವ ಸಲುವಾಗಿ  http://sai-blessings.com/ ಎಂಬ ಶೀರ್ಷಿಕೆಯ ಅಡಿಯಲ್ಲಿ ಒಂದು ಅಂತರ್ಜಾಲ ತಾಣವನ್ನು ಪ್ರಾರಂಭಿಸಿದರು. ಫೆಬ್ರವರಿ 2013ರಲ್ಲಿ ಉಚಿತ ಸಾಯಿ ಆಶೀರ್ವಾದ ಸುದ್ಧಿಪತ್ರವನ್ನು ಪ್ರಾರಂಭಿಸಿದರು. ಸಾಯಿಬಾಬಾರವರ ಮಾರ್ಗದರ್ಶನದಂತೆ ಸೇವೆಗಳು ಹಾಗೂ ಸಾಯಿಬಾಬಾರವರನ್ನು ಕುರಿತಾದ ಉತ್ಪನ್ನಗಳನ್ನು ನೇರ ಸಾಯಿಭಕ್ತರಿಗೆ ತಲುಪಿಸಿ ಅವರ ಜೀವನವನ್ನು ಹಸನಾಗಿಸುವ ಉದ್ದೇಶದಿಂದ ಈ ಅಂತರ್ಜಾಲ ತಾಣವನ್ನು ಪ್ರಾರಂಭಿಸಲಾಗಿರುತ್ತದೆ. ಅಲ್ಲದೇ ಸಾಯಿಬಾಬಾರವರ ಆದೇಶದಂತೆ 1ನೇ ಫೆಬ್ರವರಿ  2013 ರಿಂದ ತಮ್ಮ ಬಳಿಗೆ ಮಾರ್ಗದರ್ಶನಕ್ಕಾಗಿ ಬರುವ ಭಕ್ತರಿಗೆ ಆಶೀರ್ವಾದ ಕಾರ್ಡ್ (ಬ್ಲೆಸಿಂಗ್ ಕಾರ್ಡ್) ಗಳ ಮುಖಾಂತರ ಸಲಹೆಯನ್ನು ಕೂಡ ಇವರು ನೀಡುತ್ತಾ ಬಂದಿದ್ದಾರೆ.

ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಪ್ರಕಟಣೆಯಾದ ಶ್ರೀ ಸಾಯಿಲೀಲಾ ದ್ವೈಮಾಸಿಕ ಪತ್ರಿಕೆಯಲ್ಲಿ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.

ಸಾಯಿಬಾಬಾರವರ ದರ್ಬಾರಿನಲ್ಲಿ ತಾವು ಒಬ್ಬ ಸದಸ್ಯೆಯಾಗಿರುವುದು ಒಂದು ರೀತಿಯ ಗೌರವ ಎಂದು ಇವರು ಭಾವಿಸಿದ್ದಾರೆ. ಅಷ್ಟೇ ಅಲ್ಲದೇ "ಸಾಯಿಬಾಬಾರವರೇ ನಮ್ಮ ಮುಖಾಂತರ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಾವೆಲ್ಲರೂ ಅವರ ಒಂದು ಆಯುಧಗಳಷ್ಟೇ" ಎಂಬ ಸೂಕ್ಷ್ಮ ವಿಚಾರವನ್ನು ಸಾಯಿಭಕ್ತರ ಬಳಿ ಹಂಚಿಕೊಳ್ಳಲು ಬಯಸುತ್ತಾರೆ.

ಪ್ರಸ್ತುತ ಇವರು ಮುಂಬೈ ನಗರದ ಕೋಪರ್ ಕೈರನೆಯಲ್ಲಿರುವ ಸ್ವಗೃಹದಲ್ಲಿ  ತಮ್ಮ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಒಬ್ಬ ತಂಗಿಯೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಕುಮಾರಿ ಶಂಷಾದ್ ಆಲಿ ಬೇಗ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಕುಮಾರಿ ಶಂಷಾದ್ ಆಲಿ ಬೇಗ್
ಪ್ರಸಾರ್ ಕಮ್ಯುನಿಕೇಷನ್,
ಸುಯಶ್ ಸಿ.ಹೆಚ್,ಎಸ್, ಕಾಂಡೋ-1,
ಬಿ-5, ಸೆಕ್ಟರ್-10,
ಕೋಪರ್ ಕೈರನೆ,
ನವಿ ಮುಂಬೈ - 400 709,
ಮಹಾರಾಷ್ಟ್ರ, ಭಾರತ

ದೂರವಾಣಿ ಸಂಖ್ಯೆ:

+91 98204 37006

ಇ-ಮೈಲ್ ವಿಳಾಸ:

saiblessings.now@gmail.com/shamshaad.baig@gmail.com

ಅಂತರ್ಜಾಲ ತಾಣ:

http://sai-blessings.com/


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment