Tuesday, March 12, 2013

ಶಿರಡಿ ಸಾಯಿಬಾಬಾರವರ ಪವಿತ್ರ "ಕಫ್ನಿ" ಯನ್ನು ಪ್ರಸಾದವಾಗಿ ಪಡೆದ ಸಾಯಿ ಮಹಾಭಕ್ತ  - ಡಾ.ಕೇಶವ ಭಗವಾನ್ ಗಾವಂಕರ್- ಕೃಪೆ: ಸಾಯಿಅಮೃತಧಾರಾ.ಕಾಂ 



ಡಾ.ಕೇಶವ ಭಗವಾನ್ ಗಾವಂಕರ್ ರವರು ಶಕೆ 1828 ರ ವೈಶಾಕ ಮಾಸ, ಶುಕ್ಲ ಪಕ್ಷ ಅಂದರೆ 28ನೇ ಏಪ್ರಿಲ್ 1906, ಶನಿವಾರದಂದು ಮಹಾರಾಷ್ಟ್ರ ರಾಜ್ಯದ ಮುಂಬೈಗೆ 40 ಕಿಲೋಮೀಟರ್ ದೂರದಲ್ಲಿರುವ ವಸಾಯೈ ನ ಹತ್ತಿರದಲ್ಲಿರುವ ಮೀನುಗಾರಿಕೆ ಕೇಂದ್ರವಾದ ಅರ್ನಾಲಾ ಎಂಬ ಹಳ್ಳಿಯಲ್ಲಿ ಜನಿಸಿದರು. ಎಲ್ಲರೂ ಇವರನ್ನು ಪ್ರೀತಿಯಿಂದ ಅಪ್ಪಾಸಾಹೇಬ್ ಎಂದು ಸಂಬೋಧಿಸುತ್ತಿದ್ದರು. ಇವರ ಪೂರ್ವಿಕರು ಸಹ ಅರ್ನಾಲಾ ಗ್ರಾಮಕ್ಕೆ ಸೇರಿದವರಾಗಿದ್ದರು. ಇವರ ಮನೆತನದಲ್ಲಿ ಗಣೇಶನ ಪೂಜೆಯನ್ನು ಬಹಳ ವಿಶೇಷವಾಗಿ ಮಾಡುತ್ತಿದ್ದರು ಹಾಗೂ ಗಣೇಶನಿಂದ ವಿಫುಲವಾಗಿ ಆಶೀರ್ವದಿಸಲ್ಪಟ್ಟಿದ್ದರು. ಇವರ ಕುಟುಂಬದ ಎಲ್ಲರೂ ಬಹಳ ದೈವಭಕ್ತಿಯುಳ್ಳವರಾಗಿದ್ದರು.

ಇವರ ತಂದೆ ಭಗವಾನ್ ರವರು ಕಲ್ಲಿದ್ದಲು ಹಾಗೂ ಇಂಧನಕ್ಕೆ ಬಳಸುವ ಮರದ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಕಾಡಿಗೆ ಪಳೆಯುಳಿಕೆಗಳನ್ನು ಸಂಗ್ರಹಿಸಲು ಹೊರಗೆ ಹೋಗುತ್ತಿದ್ದ ಕಾರಣ, ಅವರು ಮನೆಯಲ್ಲಿ ಹೆಚ್ಚಿಗೆ ಸಮಯವನ್ನು ಕಳೆಯುತ್ತಿರಲಿಲ್ಲ. ಇವರದು ಅವಿಭಕ್ತ ಕುಟುಂಬವಾಗಿದ್ದು ಒಬ್ಬರಿಗೊಬ್ಬರು ಹೊಂದಿಕೊಂಡು ಬಹಳ ಅನ್ಯೋನ್ಯವಾಗಿದ್ದರು.

ಇವರ ಚಿಕ್ಕಪ್ಪ ವಿಠಲ ಕಾಕಾರವರಿಗೆ ಪರಿಚಯಸ್ತರಾಗಿದ್ದ ವಿಠೋಬ ಅಣ್ಣಾ ಪುರಂದರೆ ಎಂಬ ಜ್ಯೋತಿಷಿ ಇವರ ಜಾತಕವನ್ನು ಬರೆದಿದ್ದರು. ಜಾತಕ ಪರಿಶೀಲಿಸಿದ ಅವರು ಆಶ್ಚರ್ಯಚಕಿತರಾಗಿ ಈ ಹುಡುಗ ಮುಂದೆ ಪ್ರಖ್ಯಾತ ಸಂತನಾಗುವನೆಂದು ಭವಿಷ್ಯ ನುಡಿದಿದ್ದರು. ಇವರ ನಾಮಕರಣ ಸಮಾರಂಭದ ದಿನ ಸ್ನೇಹಿತರು ಹಾಗೂ ಬಂಧುಗಳು ಮನೆಯ ತುಂಬ ನೆರೆದಿದ್ದರು. ಇವರ ತಂದೆ ಇವರಿಗೆ ರಾಮ್ ಎಂದು ಹೆಸರಿಡಬೇಕೆಂದು ನಿರ್ಧರಿಸಿದ್ದರು. ಆದರೆ ಮನೆಯವರೆಲ್ಲರೂ ಮಧುಕರ್ ಎಂಬ ಹೆಸರನ್ನು ಇಡಲು ಸೂಚಿಸಿದ್ದರು. ಬಹಳ ಕಾಲದ ಚರ್ಚೆಯ ನಂತರ ಎಲ್ಲರೂ ಒಮ್ಮತದಿಂದ ರಾಮ್ ಎಂದೇ ಹೆಸರಿಡಲು ನಿರ್ಧರಿಸಿದರು. ಮಗುವನ್ನು ಇನ್ನೇನು ತೊಟ್ಟಿಲಿಗೆ ಹಾಕಬೇಕೆಂದು ಯೋಚಿಸುತ್ತಿರುವಾಗ ಮಗು ಜೋರಾಗಿ ರಚ್ಚೆ ಹಿಡಿದು ಅಳಲು ಪ್ರಾರಂಭಿಸಿತು. ಅಲ್ಲಿಯೇ ಇದ್ದ ವೈದ್ಯರು ಮಗುವನ್ನು ಪರೀಕ್ಷಿಸಿ ಮಗುವಿಗೆ ಯಾವುದೇ ತೊಂದರೆ ಇಲ್ಲವೆಂದು ಹೇಳಿದರು. ಆಗ ಇವರ ಚಿಕ್ಕಪ್ಪನವರು ಮಗುವಿನ ಜಾತಕವನ್ನು ಕೈಗೆತ್ತಿಕೊಂಡು ಪರಿಶೀಲಿಸಿದಾಗ ಮಗುವಿನ ಹೆಸರು "ಕೇ" ಅಕ್ಷರದಿಂದ ಪ್ರಾರಂಭವಾಗಬೇಕೆಂಬ ವಿಷಯವನ್ನು ಮನಗಂಡರು. ನಂತರ ಮಗುವಿನ ಕಿವಿಯ ಹತ್ತಿರ ಹೋಗಿ "ನಿನ್ನ ಹೆಸರನ್ನು ಕೇಶವ ಎಂದು ಇಡುತ್ತೇವೆ. ಆಗಬಹುದಾ?" ಎಂದು ಪಿಸುಗುಟ್ಟಿದರು. ಆ ಕೂಡಲೇ ಮಗುವು ಅಳುವುದನ್ನು ನಿಲ್ಲಿಸಿತು. ಈ ರೀತಿಯಲ್ಲಿ ಇವರಿಗೆ ಕೇಶವ ಎಂಬ ಹೆಸರು ಬಂದಿತು.

ಒಂದು ಮಧ್ಯರಾತ್ರಿ ಮಗುವು ತೊಟ್ಟಿಲಲ್ಲಿ ಮಲಗಿತ್ತು. ಇವರ ತಾಯಿ ಮಗುವು ಏನು ಮಾಡುತ್ತಿದೆ ಎಂದು ನೋಡಲು ಎದ್ದರು. ಆದರೆ, ಕೋಣೆಯ ತುಂಬಾ ಕತ್ತಲಿದ್ದ ಕಾರಣ ಸರಿಯಾಗಿ ಕಾಣುತ್ತಿರಲಿಲ್ಲ. ಆದ ಕಾರಣ ಕಂದೀಲನ್ನು ಹಚ್ಚಬೇಕೆಂದು ಬೆಂಕಿ ಪೊಟ್ಟಣವನ್ನು ತೆಗೆದುಕೊಂಡು ಬೆಂಕಿ ಕಡ್ಡಿಯನ್ನು ಗೀರುತ್ತಿರುವಾಗ ಆಕಸ್ಮಿಕವಾಗಿ ಬೆಂಕಿಯ ಕಡ್ಡಿಯು ಇವರ ಕೈಯಿಂದ ಜಾರಿ ಹಾಸಿಗೆಯ ಮೇಲೆ ಬಿದ್ದು ಹಾಸಿಗೆ ಹತ್ತಿಕೊಂಡು ಉರಿಯತೊಡಗಿತು. ಇವರ ತಾಯಿ ಬಹಳ ಕಷ್ಟಪಟ್ಟು ಬೆಂಕಿಯನ್ನು ನಂದಿಸಿದರು. ಆದರೆ ಮಗುವಿಗೆ ಸ್ವಲ್ಪವೂ ತೊಂದರೆಯಾಗದೆ ಸುರಕ್ಷಿತವಾಗಿತ್ತು.

ಕೇಶವರ ಬಾಲ್ಯ ಬಹಳ ಸಂತೋಷದಾಯಕವಾಗಿತ್ತು. ಇವರ ಚಿಕ್ಕಪ್ಪ ವಿಠಲ ಪಂಥ ಹಾಗೂ ಚಿಕ್ಕಮ್ಮ ತಮ್ಮಾಭಾಯಿಯವರಿಗೆ ಇವರೆಂದರೆ ಪಂಚಪ್ರಾಣ. ಇವರ ಪೋಷಕರು ಕೂಡ ಇವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದ ಕಾರಣ ಇವರು ಕೂಡ ನೆರೆ-ಹೊರೆಯಲ್ಲಿದ್ದ ಇತರ ಮಕ್ಕಳಂತೆಯೇ ಆಟವಾಡಿಕೊಂಡು ಬೆಳೆದರು.

ಇವರಿಗೆ ಪ್ರಪ್ರಥಮವಾಗಿ "ಶ್ರೀ ಗಣೇಶಾಯ ನಮಃ ಓಂ ನಮಃಸಿದ್ಧ" ಎಂಬ ಮಂತ್ರವನ್ನು ಹೇಳಿಕೊಟ್ಟು ಶಿಕ್ಷಣ ಕಲಿಕೆಯನ್ನು ಪ್ರಾರಂಭಿಸಲಾಯಿತು. ಇವರು 7 ವರ್ಷದವರಾಗಿದ್ದಾಗ ಶಾಲೆಗೆ ಹೋಗಲು ಪ್ರಾರಂಭಿಸಿದರು.

ಒಮ್ಮೆ  ಇವರು ಜ್ವರ ಹಾಗೂ ಕೆಮ್ಮು ಪ್ರಾರಂಭವಾಗಿ ಹಾಸಿಗೆ ಹಿಡಿದರು. ಇವರ ತಾಯಿ ಇವರನ್ನು ಹಾಸಿಗೆಯ ಮೇಲೆ ಮಲಗಿಸಿ ಆರೈಕೆ ಮಾಡಲು ಪ್ರಾರಂಭಿಸಿದರು. ಸ್ವಲ್ಪ ಸಮಯದ ನಂತರ ಇವರ ಕೈ ಹಿಡಿದು ನೋಡಲು ಇವರಿಗೆ ಜ್ವರ ಜಾಸ್ತಿಯಾಗಿ ಮೈ ಸುಡುತ್ತಿತ್ತು. ಕೂಡಲೆ ಡಾಕ್ಟರ್ ಅನ್ನು ಕರೆಯಿಸಲಾಯಿತು. ಅವರು ಪರಿಶೀಲನೆ ಮಾಡಿ ಇವರಿಗೆ "ಎಂಫಿಮಾ" ಕಾಯಿಲೆ ಬಂದಿರುವುದಾಗಿ ದೃಢಪಡಿಸಿದರು. ಇವರ ಎದೆಗೂಡಿಗೆ ಸೋಂಕು ತಗುಲಿ ಕೀವು ತುಂಬಿಕೊಂಡಿತ್ತು.

ಇವರ ದೇಹ ಸ್ಥಿತಿ ದಿನೇ ದಿನೇ ಹದಗೆಡತೊಡಗಿತು. ಪ್ರತಿದಿನ 104 ಡಿಗ್ರಿ ಜ್ವರ ಬಂದು ಬಹಳ ನರ‍ಳುತ್ತಿದ್ದರು. ಎಲ್ಲಾ ವೈದ್ಯೋಪಚಾರಗಳನ್ನು ಮಾಡಿದರೂ ಖಾಯಿಲೆ ಕಡಿಮೆಯಾಗಲಿಲ್ಲ. ಅನೇಕ ಡಾಕ್ಟರ್ ಗಳನ್ನು ಕರೆಯಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯ ಪ್ರಯತ್ನವೆಂದು ಇಬ್ಬರು ಪ್ರಸಿದ್ಧ ವೈದ್ಯರಾದ ಡಾಕ್ಟರ್ ಬದ್ಕಾಮ್ ಕರ್ ಮತ್ತು ಡಾಕ್ಟರ್ ರಾವ್ ಅವರುಗಳನ್ನು ಕರೆಯಿಸಲಾಯಿತು. ಅವರುಗಳು ಕೇಶವನನ್ನು ಪರೀಕ್ಷಿಸಿ ಕೂಡಲೇ ಶಸ್ತ್ರಚಿಕಿತ್ಸೆಯಾಗಬೇಕೆಂದು ಸಲಹೆ ನೀಡಿದರು. ಇವರ ಚಿಕ್ಕಪ್ಪ ಇನ್ನೂ ಹಲವಾರು ವೈದ್ಯರುಗಳ ಸಲಹೆಯನ್ನು ಕೇಳಲು ಎಲ್ಲ ವೈದ್ಯರೂ ಶಸ್ತ್ರಚಿಕಿತ್ಸೆಯೇ ಆಗಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಡಾಕ್ಟರ್ ಬದ್ಕಾಮ್ ಕರ್ ರವರು ಶಸ್ತ್ರಚಿಕಿತ್ಸೆಯನ್ನು ಮಾಡಲು ಅನುಮತಿ ಪತ್ರಕ್ಕೆ ಸಹಿ ಮಾಡುವಂತೆ ತಿಳಿಸಿದರು. ಆದರೆ, ವಿಠಲ ಕಾಕಾರವರು ಸಮ್ಮತಿ ನೀಡಲಿಲ್ಲ. ಸಣ್ಣ ವಯಸ್ಸಿನ ಹುಡುಗನಾದುದರಿಂದ ಬಹಳ ನೋವನ್ನು ಅನುಭವಿಸುತ್ತಾನೆ; ಅಲ್ಲದೇ ಖಂಡಿತವಾಗಿ ಹುಷಾರಾಗುತ್ತಾನೆಂಬ ಯಾವುದೇ ನಂಬಿಕೆಯಿಲ್ಲವಾದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸುವುದು ಬೇಡ ಎಂಬ ಅಭಿಪ್ರಾಯಕ್ಕೆ ಬಂದರು. ಹೀಗೆಯೇ 3 ತಿಂಗಳು ಕಳೆಯಿತು. ಇವರ ಮನೆಯವರೆಲ್ಲರೂ ಕೇಶವ ಹುಷಾರಾಗುವುದಿಲ್ಲವೆಂಬ ತೀರ್ಮಾನಕ್ಕೆ ಬಂದರು.

ಹೀಗಿರುವಾಗ ಯಶವಂತ ರಾವ್ ದಾಬೋಲ್ಕರ್ ರವರು ತಮ್ಮ ಮಾವನವರಾದ ಅಣ್ಣಾ ಸಾಹೇಬ್ ದಾಬೋಲ್ಕರ್ ರವರೊಡನೆ ಶಿರಡಿಗೆ ಭೇಟಿ ನೀಡಿದರು. ಶಿರಡಿಯಿಂದ ಮುಂಬೈಗೆ ವಾಪಸಾಗುವಾಗ ಸಾಯಿಬಾಬಾರವರ ಭಾವಚಿತ್ರ, ಪವಿತ್ರ ತೀರ್ಥ ಹಾಗೂ ಉಧಿಯನ್ನು ತಮ್ಮ ಜೊತೆಯಲ್ಲಿ ತಂದಿದ್ದರು. ಮುಂಬೈಗೆ ಬಂದಿಳಿದ ಕೂಡಲೇ ಕೇಶವನ ಮನೆಗೆ ತೆರಳಿ ಶಿರಡಿಯಿಂದ ತಾವು ತಂದಿದ್ದ ಪವಿತ್ರ ವಸ್ತುಗಳನ್ನು ವಿಠಲ ಕಾಕಾರವರಿಗೆ ನೀಡಿ "ಕಾಕಾ, ಬಹಳ ತಿಂಗಳುಗಳಿಂದ ಅನೇಕ ಚಿಕಿತ್ಸೆಗಳನ್ನು ಯಾವುದೇ ಪ್ರಯೋಜನವಿಲ್ಲದೇ ಮಾಡಿಸಿದ್ದೀರಿ. ಏಕೆ, ನೀವು ಸಾಯಿಬಾಬಾರವರಿಗೆ ಮೊರೆ ಹೋಗಿ, ಯಾವುದಾದರೂ ರೀತಿಯ ಹರಕೆಯನ್ನು ಮಾಡಿಕೊಂಡು ಕೇಶವನ ಖಾಯಿಲೆ ಗುಣವಾದಾಗ ಆ ಹರಕೆಯನ್ನು ತೀರಿಸಬಾರದು" ಎಂದು ನುಡಿದರು.

ಕೂಡಲೇ ವಿಠಲ ಕಾಕಾರವರು ಸಾಯಿಬಾಬಾರವರ ಭಾವಚಿತ್ರವನ್ನು ಒಂದು ಮೇಜಿನ ಮೇಲೆ ಅತೀವ ಭಕ್ತಿಯಿಂದ ಇರಿಸಿ ಹಾರವನ್ನು ಹಾಕಿ ದೀಪ, ಧೂಪಗಳನ್ನು ಹಚ್ಚಿ ಆರತಿಯನ್ನು ಮಾಡಿದರು. ನಂತರ ತಮ್ಮ ತಲೆಯನ್ನು ಸಾಯಿಬಾಬಾರವರ ಪಾದದ ಬಳಿಯಿಟ್ಟು "ಹೇ ಸಾಯಿನಾಥ, ನಾನು ಎಂದಿಗೂ ಶಿರಡಿಗೆ ಬಂದು ನಿಮ್ಮ ದರ್ಶನ ಮಾಡಿಲ್ಲ. ನಿಮ್ಮ ದಯೆ ಹಾಗೂ ಕರುಣೆಯ ಬಗ್ಗೆ ಬೇರೆಯವರಿಂದ ಕೇಳಿದ್ದೇನೆ ಅಷ್ಟೇ. ನನ್ನ ಮೊಮ್ಮಗ ಕೇಶವ ಸಾವಿನ ದವಡೆಯಲ್ಲಿದ್ದಾನೆ. ನನ್ನ ಈ ಪ್ರಾರ್ಥನೆಯನ್ನು ಆಲಿಸಿ ಅವನು ಸಂಪೂರ್ಣ ಗುಣವಾಗುವಂತೆ ಮಾಡಿ. ನಾನು ಈ ತೆಂಗಿನಕಾಯಿಯನ್ನು ನಿಮಗೆ ಅರ್ಪಣೆ ಮಾಡುತ್ತಿದ್ದೇನೆ. ಇವನಿಗೆ ಗುಣವಾದರೆ ಐದು ಸೇರು ಪೇಡವನ್ನು ನಿಮಗೆ ತಂದು ಅರ್ಪಿಸುತ್ತೇನೆ" ಎಂದು ಬೇಡಿಕೊಂಡರು. ನಂತರ ಉಧಿ ಮತ್ತು ತೀರ್ಥವನ್ನು ಕೈಗೆ ತೆಗೆದುಕೊಂಡು ಸಾಯಿಬಾಬಾರವರ ಪಾದಗಳಿಗೆ ಮುಟ್ಟಿಸಿ ಕೇಶವ ಮಲಗಿದ್ದ ಸ್ಥಳಕ್ಕೆ ಹೋದರು. ಆಗ ಕೇಶವ ಪ್ರಜ್ಞೆ ಇಲ್ಲದೇ ಹಾಸಿಗೆಯ ಮೇಲೆ ಮಲಗಿದ್ದನು. ಅದೇ ಸ್ಥಿತಿಯಲ್ಲಿ ಕೇಶವನ ಬಾಯಿಗೆ ಪವಿರ್ಥ ತೀರ್ಥವನ್ನು ಹಾಕಿ ಹಣೆಯ ಮೇಲೆ ಉಧಿಯನ್ನು ಹಚ್ಚಿ ಅವನ ಎದೆಯ ಮೇಲೆ ಸಾಯಿಬಾಬಾರವರ ಭಾವಚಿತ್ರವನ್ನು ಇರಿಸಿದರು.

ವಿಠಲ ಕಾಕಾ ಹಾಗೂ ತಮ್ಮಾಬಾಯಿಯವರು ಯಾವಾಗಲೂ ಕೇಶವನ ಹಾಸಿಗೆಯ ಬಳಿಯೇ ಕುಳಿತುಕೊಳ್ಳುತ್ತಿದ್ದರು. ಮಧ್ಯರಾತ್ರಿಯ ವೇಳೆಗೆ ತಮ್ಮಾಬಾಯಿಯವರಿಗೆ ತನಿ ನಿದ್ರೆ ಹತ್ತಿತ್ತು. ಆಗ ಅವರಿಗೊಂದು ಕನಸು ಬಿದ್ದಿತು. ಆ ಕನಸಿನಲ್ಲಿ ಸಾಯಿಬಾಬಾರವರು ಇವರ ಮನೆಗೆ ಬಂದು ತಮಗೆ ಒಂದು ತೆಂಗಿನಕಾಯಿಯನ್ನು ನೀಡುವಂತೆ ಕೇಳಿದರು. ನಂತರ ಅವರು ಕೇಶವನ ಹಾಸಿಗೆಯ ಬಳಿಗೆ ಹೋಗಿ ಅವನ ದೇಹದ ಎಲ್ಲಾ ಕಡೆ ತಮ್ಮ ಕೈಗಳನ್ನು ಆಡಿಸಿದರು. ನಂತರ ತಮ್ಮಾಬಾಯಿಯವರ ಕಡೆಗೆ ತಿರುಗಿ "ಅಲ್ಲಾ ಭಲಾ ಕರೇಗಾ" ಎಂದು ನುಡಿದು ಅದೃಶ್ಯರಾದರು. ಅಲ್ಲಿಗೆ ತಮ್ಮಾಬಾಯಿಯವರ ಕನಸು ಮುಗಿಯಿತು.

ತಮ್ಮಾಬಾಯಿಯವರು ಕೂಡಲೇ ಎದ್ದು ಕೇಶವನ ದೇಹವನ್ನು ಮುಟ್ಟಿ ನೋಡಿದರು. ದೇಹವೆಲ್ಲಾ ತಣ್ಣಗಾಗಿತ್ತು. ಕೂಡಲೇ ಕೇಶವ ಸತ್ತು ಹೋಗಿದ್ದಾನೆಂದು ಭಾವಿಸಿ ಜೋರಾಗಿ ಅಳಲು ಪ್ರಾರಂಭಿಸಿದರು. ತಮ್ಮಾಬಾಯಿ ಜೋರಾಗಿ ಅಳುವುದನ್ನು ಕೇಳಿ ಮಲಗಿದ್ದ ಮನೆಯವರೆಲ್ಲರೂ ಎನಾಯಿತೆಂದು ನೋಡಲು ಓಡಿಬಂದರು. ಮಹಡಿಯ ಮೇಲೆ ಮಲಗಿದ್ದ ಡಾಕ್ಟರ್ ಗಲವಾಂಕರ್ ರವರು ಕೂಡ ಕೆಳಗಡೆ ಇಳಿದು ಬಂದರು. ಕೇಶವನನ್ನು ಪರೀಕ್ಷಿಸಿ ನೋಡಲು ಅವನ ನಾಡಿಮಿಡಿತ ಸಹಜ ಸ್ಥಿತಿಯಲ್ಲಿದ್ದು ಜ್ವರ ಕಡಿಮೆಯಾಗಿದ್ದ ಕಾರಣ ದೇಹ ತಣ್ಣಗಾಗಿದೆ ಎಂದು ತಿಳಿಸಿದರು. ಅವರು ಎಲ್ಲರಿಗೂ ಧೈರ್ಯವಾಗಿರುವಂತೆ ಹೇಳಿದರು. ಮನೆಯವರೆಲ್ಲರೂ ಪುನಃ ನಿದ್ದೆ ಮಾಡಲು ತೆರಳಿದರು.

ಮಾರನೇ ದಿನ ಬೆಳಿಗ್ಗೆ ಕೇಶವ ಬಟ್ಟೆಗಳು ಒದ್ದೆಯಾಗಿ ಎದೆಗೆ ಅಂಟಿಕೊಂಡಿರುವುದನ್ನು ಡಾಕ್ಟರ್ ಗಲವಾಂಕರ್ ರವರು ಗಮನಿಸಿದರು. ಆ ಬಟ್ಟೆಗಳನ್ನು ಕತ್ತರಿಸಿ ತೆಗೆದುಹಾಕಿ ನೋಡಲಾಗಿ ಎದೆಯ ಬಲಭಾಗದ ತೊಟ್ಟುಗಳ ಹತ್ತಿರ ಸಣ್ಣ ರಂಧ್ರವಾಗಿರುವುದನ್ನು ನೋಡಿದರು. ಆ ರಂಧ್ರದಿಂದ ಕೀವು ಹೊರಗೆ ಬರುತ್ತಿತ್ತು. ಡಾಕ್ಟರ್ ಆ ಪ್ರದೇಶದ ಸುತ್ತ ಬಲವಾಗಿ ಕೈಗಳಿಂದ ಒತ್ತಿ ಹಿಡಿಯಲು ಹೇರಳವಾಗಿ ರಕ್ತ ಮಿಶ್ರಿತ ಕೀವು ಹೊರಬಂದಿತು. ಹೀಗೆ ಪೂರ್ಣವಾಗಿ ಕೀವನ್ನು ಇಂಗಿಸಿದ ಮೇಲೆ ಕೇಶವ ನಿಧಾನವಾಗಿ ಸಂಪೂರ್ಣ ಗುಣಮುಖನಾಗಿ ಶಾಲೆಗೆ ಹೋಗಲು ಪ್ರಾರಂಭಿಸಿದನು. ಅವನು ನೋಡುವುದಕ್ಕೆ ಯಶವಂತ ದೇಶಪಾಂಡೆಯವರಿಗೆ ಸಹಾಯ ಮಾಡಿದ ವ್ಯಕ್ತಿಯಂತೆ ಕಾಣುತ್ತಿದ್ದನು. ಅವನು ಡಾಕ್ಟರ್ ಗಾವಂಕರ್ ರವರ ಕೈಗೆ ಪೊಟ್ಟಣವೊಂದನ್ನು ನೀಡಿ "ನಾನು ಈಗ ಹೋಗುತ್ತಿದ್ದೇನೆ" ಎಂದು ನುಡಿದು ಹೊರಟುಹೋದನು.

ಕ್ರಮೇಣವಾಗಿ ಕೇಶವನ ದೇಹಸ್ಥಿತಿ ಸಂಪೂರ್ಣ ಸುಧಾರಿಸಿ ಆರೋಗ್ಯವಂತನಾದನು. ಎಲ್ಲ ಮಕ್ಕಳಂತೆ ಶಾಲೆಗೆ ಹೋಗಲು, ಆಟವನ್ನು ಆಡಲು ಪ್ರಾರಂಭಿಸಿದನು. ತೊಂದರೆಯಲ್ಲಿದ್ದಾಗ ಹರಕೆಯನ್ನು ಮಾಡಿಕೊಂಡು ನಂತರ ಅದನ್ನು ಕೂಡಲೇ ಪೂರೈಸಲಾಗದೇ ಇರುವುದು ಸರ್ವೇ ಸಾಮಾನ್ಯ. ಮರೆವಿನಿಂದಾಗಿ ಅಥವಾ ಬೇರೆ ರೀತಿಯ ತೊಂದರೆಗಳಿಂದಾಗಿ ಕೂಡಲೇ ಹರಕೆಯನ್ನು ಪೂರೈಸುವುದಿಲ್ಲ. ವಿಠಲ ಕಾಕಾರವರಿಗೂ ಇದೇ ರೀತಿಯಾಯಿತು.

ಕೊನೆಗೆ ಐದು ವರ್ಷಗಳ ನಂತರ 1918ನೇ ಇಸವಿಯ ಜನವರಿ ತಿಂಗಳಿನಲ್ಲಿ ಶಿರಡಿ ಯಾತ್ರೆಗೆ ತೆರಳಿದರು. ಕೇಶವನ ಜೊತೆಯಲ್ಲಿ ಅವರ ಕೊನೆಯ ಚಿಕ್ಕಪ್ಪನಾದ ರಾಮಚಂದ್ರ ಪಂತ್ ಮತ್ತು ಚಿಕ್ಕಮ್ಮನಾದ ತಮ್ಮಾಬಾಯಿಯ ಜೊತೆಯಲ್ಲಿ ತೆರಳಿದನು.

ಅವರುಗಳು ದ್ವಾರಕಾಮಾಯಿಗೆ ಸಾಯಿಬಾಬಾರವರ ದರ್ಶನಕ್ಕೆ ತೆರಳಿದರು. ದರ್ಶನಕ್ಕಾಗಿ ಹಲವಾರು ಭಕ್ತರು ಸರದಿಯಲ್ಲಿ ಕಾಯುತ್ತಿದ್ದರು. ಆದ್ದರಿಂದ ಕೇಶವ ಮತ್ತು ಅವನ ಮನೆಯವರು ಸರದಿಯಲ್ಲಿ ತಾಳ್ಮೆಯಿಂದ ನಿಂತುಕೊಂಡು ಕಾಯುತ್ತಿದ್ದರು. ಸಾಯಿಬಾಬಾರವರು ಕೇಶವನ ಕಡೆ ತಿರುಗಿ ಅವನನ್ನು ತಮ್ಮ ಬಳಿಗೆ ಬರುವಂತೆ ಕೈಸನ್ನೆ ಮಾಡಿದರು. ಕೇಶವ ಹತ್ತಿರ ಬಂದು ನಿಂತಾಗ "ಅರೇ, ನನಗಾಗಿ ತಂದಿರುವ ಪೇಡಗಳು ಎಲ್ಲಿ?" ಎಂದು ಕೇಳಿದರು. ಕೂಡಲೇ ರಾಮಚಂದ್ರ ಪಂತ್ ಮುಂದೆ ಹೋಗಿ ಕೇಶವನಿಗೆ ಪೇಡದ ಪೊಟ್ಟಣವನ್ನು ನೀಡಿದರು.

ಹರಕೆ ಹೊತ್ತಂತೆ ಸರಿಯಾಗಿ ಐದು ಸೇರು ಪೇಡವನ್ನು ತಂದಿದ್ದರೂ ಸಹ ಅದರಲ್ಲಿ ಇನ್ನೂ ಸ್ವಲ್ಪ ಹೆಚ್ಚಿಗೆ ಪೇಡ ಸೇರಿಸಲಾಗಿತ್ತು. ಸಾಯಿಬಾಬಾರವರು ಕೇಶವನಿಂದ ಪೇಡದ ಪೊಟ್ಟಣವನ್ನು ತೆಗೆದುಕೊಂಡರು. ಅದರಿಂದ 4 ಪೇಡವನ್ನು ಕೇಶವನಿಗೆ ಕೊಟ್ಟು ಉಳಿದ ಎಲ್ಲವನ್ನೂ ಒಮ್ಮೆಲೇ ಸಾಯಿಬಾಬಾರವರು ತಿಂದುಬಿಟ್ಟರು. ಹತ್ತಿರದಲ್ಲಿಯೇ ಇದ್ದ ಶ್ಯಾಮ "ದೇವಾ, ಏನಿದು? ನೀವೊಬ್ಬರೇ ಎಲ್ಲಾ ಪೇಡಾವನ್ನು ತಿಂದುಬಿಟ್ಟಿರಿ" ಎಂದು ಕೇಳಿದರು. ಅದಕ್ಕೆ ಬಾಬಾರವರು "ಈ ಹುಡುಗ ನನ್ನನ್ನು ಐದು ವರ್ಷಗಳಿಂದ ಹಸಿವಿದಿಂದ ಬಳಲುವಂತೆ ಮಾಡಿದ್ದಾನೆ" ಎಂದು ನುಡಿದರು. ಸರಿಯಾಗಿ ಐದು ವರ್ಷಗಳ ಹಿಂದೆ ಕೇಶವ ಸಾವಿನ ದವಡೆಯಲ್ಲಿದ್ದಾಗ ಸಾಯಿಬಾಬಾರವರು ಕನಸಿನಲ್ಲಿ ಬಂದು ಅವನ ಖಾಯಿಲೆಯನ್ನು ಗುಣಪಡಿಸಿದ್ದರು! ಇದಲ್ಲವೇ ಸಾಯಿಲೀಲೇ ಎಂದರೆ!!!!!!

ಶಿರಡಿ ಯಾತ್ರೆಗೆ ಹೋಗುವುದಕ್ಕೆ ಮುಂಚೆ ಕೇಶವನಿಗೆ ಉಪನಯನವಾಗಿತ್ತು. ಆದ ಕಾರಣ ತಲೆಯ ಮಧ್ಯಭಾಗದಲ್ಲಿನ ಜುಟ್ಟನ್ನು (ಶಿಖೆ) ಬಿಟ್ಟು ಉಳಿದ ಕೂದಲನ್ನೆಲ್ಲಾ ಕೇಶಮುಂಡನದ ಸಮಯದಲ್ಲಿ ತೆಗೆಯಲಾಗಿತ್ತು. ಇದ್ದಕ್ಕಿದ್ದಂತೆ ಸಾಯಿಬಾಬಾರವರು ಕೇಶವನ ಜುಟ್ಟನ್ನು ಹಿಡಿದು ಬಲವಾಗಿ ಎಳೆದು ಅವನ ತಲೆಯನ್ನು ತಮ್ಮ ಪಾದಗಳ ಮೇಲೆ ಇರಿಸಿದರು. ಆ ಕ್ಷಣದಲ್ಲಿ ಕೇಶವನಿಗೆ ದಿವ್ಯಜ್ಯೋತಿಯೊಂದು ಕಾಣಿಸಿಕೊಂಡು, ಅವನ ಬೆನ್ನಿನ ಹಿಂಭಾಗದಲ್ಲಿ ತೀರ್ವತರವಾದ ಕಂಪನವಾಯಿತು. ಕೇಶವನಿಗೆ ಗಾಬರಿಯಾಗಿ ದೇಹದಲ್ಲೆಲ್ಲಾ ಕಂಪನ ಉಂಟಾಯಿತು. ಈ ರೀತಿಯಲ್ಲಿ ಸಾಯಿಬಾಬಾರವರು ಕೇಶವನನ್ನು ಆಶೀರ್ವದಿಸಿದ್ದರು.

ಬಾಬಾರವರು ಕೇಶವನ ಕಣ್ಣಿನಲ್ಲಿ ಕಣ್ಣಿರಿಸಿ ಅವನಿಂದ 2 ಪೈಸೆ ದಕ್ಷಿಣೆಯನ್ನು ಕೇಳಿದರು. ಪಕ್ಕದಲ್ಲಿಯೇ ಇದ್ದ ಶ್ಯಾಮ ಕೇಶವನೇ ದಕ್ಷಿಣೆಯನ್ನು ನೀಡುತ್ತಿರುವ ರೀತಿಯಲ್ಲಿ ತಮ್ಮ ಕೈಗಳನ್ನು ಬಾಬಾರವರ ಮುಂದೆ ಚಾಚಿದರು. ಸಾಯಿಬಾಬಾರವರು ದಕ್ಷಿಣೆಯನ್ನು ಪಡೆಯುತ್ತಿರುವಂತೆ ತಮ್ಮ ಬಲಗೈಯನ್ನು ಚಾಚಿದರು. ಶ್ಯಾಮ ಅವರು ಕೇಶವನಿಗೆ "ಕೊಟ್ಟೆ" ಎಂದು ಹೇಳುವಂತೆ ಹೇಳಿಕೊಟ್ಟರು. ಬಾಬಾರವರು ಸಹ ದಕ್ಷಿಣೆಯನ್ನು ಪಡೆಯುತ್ತಿರುವಂತೆ ನಟಿಸುತ್ತಾ "ತೆಗೆದುಕೊಂಡೆ" ಎಂದು ಹೇಳಿದರು. ನಂತರ ತಮ್ಮ ಕಫ್ನಿಯ ಜೇಬಿನೊಳಗೆ ಆ ನಾಣ್ಯವನ್ನು ಇಟ್ಟುಕೊಂಡಂತೆ ನಟಿಸಿದರು. ನಂತರ ಕ್ಷಣ ಮಾತ್ರದಲ್ಲಿ ತಾವು ತೊಟ್ಟುಕೊಂಡಿದ್ದ ಕಫ್ನಿಯನ್ನು ಬಿಚ್ಚಿ ಅದನ್ನು ಕೇಶವನಿಗೆ ತೊಡಿಸಿದರು. ಸಾಯಿಬಾಬಾರವರು ಹೀಗೆಲ್ಲಾ ಮಾಡುತ್ತಿರುವಾಗ ಕೇಶವ ಅತೀವ ಆನಂದದಲ್ಲಿ ಮುಳುಗಿದ್ದ ಮತ್ತು ಅವನ ದೇಹವು ಇನ್ನೂ ಕಂಪಿಸುತ್ತಿತ್ತು.

ಅಲ್ಲಿದ್ದ ಎಲ್ಲರೂ ಸಾಯಿಬಾಬಾರವರ ಮಹಾಪ್ರಸಾದವಾದ ಕಫ್ನಿಯನ್ನು ಸ್ವೀಕರಿಸಲು ಕೇಶವ ಇನ್ನೂ ಚಿಕ್ಕ ಹುಡುಗ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆಗ ಶ್ಯಾಮರವರು ಕೇಶವನ ಸಹಾಯಕ್ಕೆ ಬಂದರು. ಅವರು ಸಾಯಿಬಾಬಾರವರಿಗೆ "ದೇವಾ, ನಾನು ಈ ಕಫ್ನಿಯನ್ನು ಕೇಶವನಿಗಾಗಿ ತೆಗೆದಿರಿಸಿರುತ್ತೇನೆ. ಅವನು ದೊಡ್ಡವನಾದಾಗ ನಾನೇ ಇದನ್ನು ಅವನಿಗೆ ನೀಡುತ್ತೇನೆ" ಎಂದು ತಿಳಿಸಿದರು. ಸಾಯಿಬಾಬಾರವರಿಗೆ ಹೇಳಿದಂತೆಯೇ ಶ್ಯಾಮ ನಡೆದುಕೊಂಡರು ಮತ್ತು ಆ ಪವಿತ್ರ ಕಫ್ನಿಯನ್ನು ಕೇಶವನಿಗೆ ನೀಡಿದರು. ಈಗ ಕೇಶವನ ವಂಶಸ್ಥರ ಬಳಿ ಆ ಪವಿತ್ರ ಕಫ್ನಿ ಇದ್ದು ಅದನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಶಿರಡಿಗೆ ಬಂದ ಮೊದಲನೇ ದಿನವೇ ಕೇಶವ ಸಾಯಿಬಾಬಾರವರ ದರ್ಶನಕ್ಕೆ ಹೋಗಿದ್ದಾಗ ಅವರು ಒಂದು ಬಾಳೆಹಣ್ಣನ್ನು ಸುಲಿದು ಚಿಕ್ಕ ಮಗುವಿಗೆ ತಿನ್ನಿಸುವಂತೆ ತಮ್ಮ ಕೈಯಾರೆ ತಿನ್ನಿಸಿದರು.

ಶಿರಡಿಗೆ ಬಂದ ಐದನೆಯ ದಿನ ಕೇಶವ ಬೆಳಗಿನ ಜಾವ ಬೇಗನೇ ಎದ್ದು ಸಾಯಿಬಾಬಾರವರ ದರ್ಶನಕ್ಕೆ ತೆರಳಿದನು. ಬಾಬಾರವರು ಧುನಿಯ ಮುಂದೆ ಕುಳಿತಿದ್ದರು. ಭಾಗೋಜಿ ಶಿಂಧೆ ಸಾಯಿಬಾಬಾರವರ ಕೈಗೆ ಕಟ್ಟಿದ್ದ ಪಟ್ಟಿಯನ್ನು ಬಿಚ್ಚುತ್ತಿದ್ದರು. ಕೇಶವನನ್ನು ನೋಡಿ ಬಾಬಾ ತಮ್ಮ ಹತ್ತಿರ ಬಂದು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಕೇಶವ ಹತ್ತಿರಕ್ಕೆ ಬಂದ ಕೂಡಲೇ ಸಾಯಿಬಾಬಾರವರು ಜೋರಾಗಿ ಕೇಶವನ ಕಪಾಳಕ್ಕೆ ಹೊಡೆದರು. ಸಾಯಿಬಾಬಾರವರು ಹೊಡೆದ ರಭಸಕ್ಕೆ ಕೇಶವ ತಲೆಯ ಮೇಲಿದ್ದ ಟೋಪಿ ಹಾರಿ ಬಿದ್ದಿತು.

ಏಳನೆಯ ದಿವಸ ಕೇಶವ ಮತ್ತು ಅವನ ಪರಿವಾರದವರು ದ್ವಾರಕಾಮಾಯಿಗೆ ಬಂದು ಹೊರಡಲು ಸಾಯಿಬಾಬಾರವರ ಅನುಮತಿಯನ್ನು ಬೇಡಿದರು. ಎಲ್ಲರೂ ಕೈಜೋಡಿಸಿ ಸಾಯಿಬಾಬಾರವರಿಗೆ ಪ್ರಣಾಮವನ್ನು ಸಲ್ಲಿಸಿದರು. ಕೇಶವನೂ ಅವರೆಲ್ಲರಂತೆಯೇ ಸಾಯಿಬಾಬಾರವರಿಗೆ ನಮಸ್ಕರಿಸಿದ. ಬಾಬಾರವರು ಅವನ ಕೈಯನ್ನು ಹಿಡಿದು ಎಳೆದು ತಮ್ಮ ಬಳಿ ಕೂರಿಸಿಕೊಂಡು ಅವನ ಕಪಾಳಕ್ಕೆ ಜೋರಾಗಿ ಹೊಡೆದರು. ನಂತರ ಅವನ ಕೈಗಳ ತುಂಬಾ ಉಧಿಯನ್ನು ನೀಡುತ್ತಾ "ಹೋಗಿ ಬಾ ಮಗು, ಅಲ್ಲಾ ನಿನಗೆ ಒಳ್ಳೆಯದನ್ನು ಮಾಡುತ್ತಾನೆ" ಎಂದು ಆಶೀರ್ವಾದ ಮಾಡಿದರು. ಸಾಯಿಬಾಬಾರವರ ಆಶೀರ್ವಾದವನ್ನು ಪಡೆದು ಕೇಶವ ಮತ್ತು ಅವನ ಮನೆಯವರು ತಮ್ಮ ಊರಿಗೆ ವಾಪಸ್ ಬಂದರು.

1938ನೇ ಇಸವಿಯಲ್ಲಿ ಒಂದು ದಿನ ಸಾಯಿಬಾಬಾರವರು ಡಾ.ಗಾವಂಕರ್ ರವರ ಕನಸಿನಲ್ಲಿ ಕಾಣಿಸಿಕೊಂಡು "ಬಾಳಾ (ಮಗು ಎಂಬ ಅರ್ಥ) ನಾನು ನಿನಗೇನು ಮಾಡಲಿ? ಈಗಿನಿಂದ ಶ್ರೀರಾಮನವಮಿ ಉತ್ಸವವನ್ನು ಆಚರಿಸು ಮತ್ತು ನನ್ನನ್ನು ತೊಟ್ಟಿಲಿನಲ್ಲಿ ಮಲಗಿಸು" ಎಂದು ಆಜ್ಞಾಪಿಸಿದರು. ಸಾಯಿಯವರ ಆಜ್ಞೆಯಂತೆ ಮೊದಲ ಬಾರಿಗೆ ಶ್ರೀರಾಮನವಮಿ ಉತ್ಸವವನ್ನು 1938ನೇ ಇಸವಿಯ ಚೈತ್ರ ಶುದ್ಧ ಪಾಡ್ಯದಿಂದ ಆರಂಭಿಸಲಾಯಿತು. ಡಾಕ್ಟರ್ ಗಾವಂಕರ್ ರವರು ಸುಂದರವಾದ ತೊಟ್ಟಿಲನ್ನು ಮಾಡಿಸಿದರು. ಅಷ್ಟೇ ಸುಂದರವಾದ ಶ್ರೀರಾಮನ ವಿಗ್ರಹಕ್ಕಾಗಿ ಗಾವಂಕರ್ ಮತ್ತು ಅವರ ಸ್ನೇಹಿತರು, ಸಂಬಂಧಿಗಳು ಹುಡುಕಾಟ ಪ್ರಾರಂಭಿಸಿದರು. ಎರಡು ತಿಂಗಳು ಕಳೆದರೂ ಕೂಡ ಅವರು ಅಂದುಕೊಂಡಿದ್ದ ವಿಗ್ರಹ ದೊರಕಲಿಲ್ಲ. ಕೊನೆಗೆ ತೊಟ್ಟಿಲಿನಲ್ಲಿ ಶ್ರೀರಾಮನ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಬೇಕೆಂದು ಅಲ್ಲರೂ ನಿರ್ಧರಿಸಿದರು. ಅದರಂತೆ ಶ್ರೀರಾಮನ ಭಾವಚಿತ್ರವನ್ನು ತೊಟ್ಟಿಲಿನಲ್ಲಿ ಇರಿಸಿ ಪೂಜಾ ವಿಧಾನಗಳು ಪ್ರಾರಂಭವಾದವು. ಆದರೆ, ಡಾಕ್ಟರ್ ಗಾವಂಕರ್ ರವರಿಗೆ ಸ್ವಲ್ಪವೂ ತೃಪ್ತಿಯಾಗಲಿಲ್ಲ. ಸಾಯಿಬಾಬಾರವರ ಭಾವಚಿತ್ರದ ಮುಂದೆ ಕುಳಿತು ಕಣ್ಣೀರು ಸುರಿಸುತ್ತಾ "ದೇವಾ ನಿಮ್ಮ ಆಜ್ಞೆಯಂತೆ ಶ್ರೀರಾಮನವಮಿ ಉತ್ಸವವನ್ನು ಪ್ರಾರಂಭಿಸಿದ್ದೇನೆ. ಆದರೆ ತೊಟ್ಟಿಲಿನಲ್ಲಿ ಇರಿಸಲು ಶ್ರೀರಾಮನ ವಿಗ್ರಹ ದೊರಕುತ್ತಿಲ್ಲ. ನನಗೆ ವಿಗ್ರಹ ದೊರಕುವವರೆಗೆ ನಾನು ಊಟವನ್ನು ಮಾಡುವುದಿಲ್ಲ" ಎಂದು ಶಪಥ ಮಾಡಿದರು. ಕೇವಲ ನೀರನ್ನು ಮಾತ್ರ ಕುಡಿಯುತ್ತಾ ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸಿದರು.

ಆ ವರ್ಷ ಶ್ರೀರಾಮನವಮಿ ಶನಿವಾರದ ದಿನ ಬಂದಿತ್ತು. ಗುರುವಾರ ಕಳೆದರೂ ವಿಗ್ರಹ ದೊರಕಲಿಲ್ಲ. ಎಂದಿನಂತೆ ಅಂದು ತಮ್ಮ ಔಷಧಾಲಯಕ್ಕೆ ಹೋದಾಗ ತುಂಬ ರೋಗಿಗಳು ಸಾಲಿನಲ್ಲಿ ಕುಳಿತು ತಮ್ಮ ಸರತಿಗಾಗಿ ಕಾಯುತ್ತಿದ್ದರು. ಆ ಸಾಲಿನಲ್ಲಿ ಒಬ್ಬ ವ್ಯಕ್ತಿ ಕುಳಿತಿದ್ದನು. ಡಾಕ್ಟರ್ ಗಾವಂಕರ್ ರವರು ಆ ವ್ಯಕ್ತಿಯನ್ನು ಈ ಮೊದಲು ತಮ್ಮ ಔಷಧಾಲಯದಲ್ಲಿ ನೋಡಿರಲಿಲ್ಲ. ಆದುದರಿಂದ ಅವರು ನೇರ ಆ ವ್ಯಕ್ತಿಯ ಬಳಿಗೆ ಹೋಗಿ ಅವನ ಆರೋಗ್ಯವನ್ನು ವಿಚಾರಿಸಿದರು. ಆಗ ಆ ವ್ಯಕ್ತಿ "ನನ್ನ ಸರತಿಗಾಗಿ ನಾನು ಕಾದು ನಂತರ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆ" ಎಂದು ನುಡಿದನು.

ಅವನ ಸರತಿ ಬಂದಿತು. ಅವನು ಬಂದು ಡಾಕ್ಟರ್ ಮುಂದೆ ನಿಂತುಕೊಂಡನು. ಅವನು ಶರ್ಟ್ ಮತ್ತು ಪ್ಯಾಂಟ್ ಧರಿಸಿ ಅದರ ಮೇಲೆ ಕೋಟನ್ನು ಕೂಡ ಧರಿಸಿದ್ದನು. ಅಲ್ಲದೇ, ತಲೆಯ ಮೇಲೆ "ಪುನರಿ ಪಗಡಿ" ಪೇಟಾ ಹಾಗೂ ಕಾಲಿಗೆ "ಪುನರಿ" ಷೂ  ಕೂಡ ಧರಿಸಿದ್ದನು. ಆ ವ್ಯಕ್ತಿ ಯಶವಂತ ದೇಶಪಾಂಡೆಯವರಿಗೆ ಸಹಾಯವನ್ನು ಮಾಡಿದ ವ್ಯಕ್ತಿಯಂತೆ ಕಾಣುತ್ತಿದ್ದನು. ಆ ವ್ಯಕ್ತಿ ಗಾವಂಕರ್ ರವರನ್ನು ಭೇಟಿ ಮಾಡಿ ಅವರ ಕೈಗೆ ಪೊಟ್ಟಣವೊಂದನ್ನು ನೀಡಿ "ನಾನು ಹೋಗುತ್ತಿದ್ದೇನೆ" ಎಂದು ಹೇಳಿ ಅಲ್ಲಿ ನಿಲ್ಲದೇ ಹೊರಟುಹೋದನು.

ಒಂದು ಕ್ಷಣ ಗಾವಂಕರ್ ರವರಿಗೆ ಎನಾಗುತ್ತಿದೆ ಎಂದು ತಿಳಿಯಲಿಲ್ಲ. ನಂತರ ಸಾವರಿಸಿಕೊಂಡು ಪೊಟ್ಟಣವನ್ನು ಬಿಚ್ಚಿ ನೋಡಲಾಗಿ ಅದರಲ್ಲಿ ಶ್ರೀರಾಮನ ಸುಂದರವಾದ ವಿಗ್ರಹವಿತ್ತು. ಆ ವಿಗ್ರಹವನ್ನು ನೋಡಿ ಗಾವಂಕರ್ ರವರಿಗೆ ಅತೀವ ಸಂತೋಷವಾಯಿತು. ಆದರೆ, ಅಷ್ಟೇ ದುಃಖವು ಕೂಡ ಆಯಿತು. "ಓ ದೇವಾ, ನೀನು ನನ್ನ ಮನೆಯ ಬಾಗಿಲಿಗೆ ಬಂದರೂ ನಾನು ನಿನ್ನನ್ನು ಗುರುತಿಸಲಿಲ್ಲ" ಎಂದು ಜೋರಾಗಿ ಚೀರಿದರು.

ಆಗಿನಿಂದ ಗಾವಂಕರ್ ರವರ ಕುರ್ಲಾ ಮನೆಯಲ್ಲಿ ಶ್ರೀರಾಮನವಮಿ ಮತ್ತು ವಿಜಯದಶಮಿಯನ್ನು ಆಚರಿಸಲು ಪ್ರಾರಂಭಿಸಿದರು. ಎರಡೂ ಹಬ್ಬದ ದಿನಗಳಂದು ಇವರ ಮನೆಯಲ್ಲಿ ಅನ್ನದಾನ ಮಾಡಲಾಗುತ್ತಿತ್ತು. 1937ನೇ ಇಸವಿಯಲ್ಲಿ ಒಂದು ರಾತ್ರಿ ಸಾಯಿಬಾಬಾರವರು ಇವರ ಕನಸಿನಲ್ಲಿ ಬಂದು "ಭಿಕ್ಷೆಯಲ್ಲಿ ಬಂದ್ ಚಪಾತಿಯು ತುಂಬಾ ರುಚಿಯಾಗಿರುತ್ತದೆ" ಎಂದು ನುಡಿದರು. ಗಾವಂಕರ್ ರವರು 50 ಕಿಲೋ ಧಾನ್ಯವನ್ನು ತಂದು ಹಿಟ್ಟನ್ನು ಬೀಸಿ ಅದರಿಂದ ಚಪಾತಿಯನ್ನು ಮಾಡಿಸಿದರು. ಸುಮಾರು  200-300 ಜನರು ಮನದಣಿಯುವಂತೆ ಭೋಜನ ಮಾಡಿದರು. ಅನ್ನದಾನ ಪ್ರಾರಂಭಿಸುವುದಕ್ಕೆ ಮೊದಲು 11 ಚಪಾತಿಯನ್ನು ಸಾಯಿಬಾಬಾರವರಿಗೆ ನೈವೇದ್ಯ ಮಾಡಲಾಯಿತು. ಅದರಲ್ಲಿ ಒಂದು ಚಪಾತಿಯನ್ನು ಬಾಬಾರವರ ಭಾವಚಿತ್ರದ ಮುಂದೆ ಇರಿಸಿ ಉಳಿದ ಚಪಾತಿಗಳನ್ನು ಸಣ್ಣ ಚೂರುಗಳನ್ನಾಗಿ ಮಾಡಿ ನೆರೆದಿದ್ದ ಎಲ್ಲರಿಗೂ ಹಂಚಲಾಯಿತು. ಆಶ್ಚರ್ಯದ ಸಂಗತಿ ಏನೆಂದರೆ 35 ವರ್ಷಗಳು ಕಳೆದರೂ ಬಾಬಾರವರ ಭಾವಚಿತ್ರದ ಮುಂದೆ ಇರಿಸಲಾದ ಚಪಾತಿಯು ಸ್ವಲ್ಪವೂ ಹಾಳಾಗಿರಲಿಲ್ಲ, ಇರುವೆಗಳು ತಿಂದಿರಲಿಲ್ಲ; ನೈವೇದ್ಯ ಮಾಡಿದಾಗ ಹೇಗೆ ಇದ್ದಿತೋ ಹಾಗೆಯೇ ಹೊಸದಾಗಿ ಇತ್ತು. ಆನಂತರ ಗಾವಂಕರ್ ರವರ ಮನೆಗೆ ದರುಶನಕ್ಕೆಂದು ಬರುತ್ತಿದ್ದ ಭಕ್ತರು ಆ ಚಪಾತಿಯನ್ನು "ಸಾಯಿಬಾಬಾರವರ ಪ್ರಸಾದ" ಎಂದು ಕೇಳಿ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಹೋಗಲು ಪ್ರಾರಂಭಿಸಿ ಕಡೆಗೆ ಆ ಚಪಾತಿಯು ಖಾಲಿಯಾಯಿತು. ಆದುದರಿಂದ ಈಗ ಗಾವಂಕರ್ ರವರ ಮನೆಗೆ ಹೋದರೆ ಈ ಚಪಾತಿಯು ಕಾಣಸಿಗುವುದಿಲ್ಲ.

ಈಗಲೂ ಮುಂಬೈಗೆ ಹೋದರೆ, ಡಾಕ್ಟರ್ ಗಾವಂಕರ್ ರವರ ಔಷಧಾಲಯದ ಪಕ್ಕದಲ್ಲಿರುವ ಕೋಣೆಯಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಸಾಯಿಬಾಬಾರವರು ನೀಡಿದ ಪವಿತ್ರ ಕಫ್ನಿ ಮತ್ತು ಶ್ರೀರಾಮ ದೇವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು. ಈ ಪವಿತ್ರ ಕೋಣೆಯು ಚಿಕ್ಕದಾಗಿದ್ದು ಸುಮಾರು 120 ಚದರ ಅಡಿ ವಿಸ್ತೀರ್ಣವಿರುತ್ತದೆ. ಈ ಕೋಣೆಯ ಪಕ್ಕದಲ್ಲಿ ಸುಮಾರು 80 ಚದರ ಅಡಿ ವಿಸ್ತೀರ್ಣದ ಅಡುಗೆ ಮನೆ ಇರುತ್ತದೆ. ಕೋಣೆಯಲ್ಲಿ ಒಂದು ಟ್ಯೂಬ್ ಲೈಟ್ ಹಾಕಲಾಗಿದೆ. ಆದರೆ  ಕಿಟಕಿಗಳ ಮುಖಾಂತರ ಒಳ್ಳೆಯ ಸೂರ್ಯನ ಕಿರಣಗಳು ಈ ಕೋಣೆಗೆ ಸಾಕಷ್ಟು ಬೆಳಕನ್ನು ಚೆಲ್ಲುತ್ತವೆ. ಕೋಣೆಯಲ್ಲಿ ಸಾಯಿಬಾಬಾರವರ ದೊಡ್ಡ ತೈಲಚಿತ್ರ, ಡಾ.ಕೇಶವ ಭಗವಾನ್ ಗಾವಂಕರ್ ರವರ ಎರಡು ಭಾವಚಿತ್ರಗಳನ್ನು ತೂಗುಹಾಕಲಾಗಿದೆ.










ಹತ್ತಿಯಿಂದ ಮಾಡಿದ ಕಫ್ನಿಯಾದುದರಿಂದ ಈ ಪವಿತ್ರ ಕಫ್ನಿಯು ಹಳದಿ ಬಣ್ಣಕ್ಕೆ ತಿರುಗಿದೆ. 1993ನೇ ಇಸವಿಯವರೆವಿಗೂ ಈ ಕಫ್ನಿಯನ್ನು ಒಂದು ಮರದ ಪೆಟ್ಟಿಗೆಯಲ್ಲಿ ಮಡಚಿ ಇರಿಸಲಾಗಿತ್ತು. ಆನಂತರ ಡಾಕ್ಟರ್ ಕೇಶವ ಭಗವಾನ್ ಗಾವಂಕರ್ ರವರ ಪುತ್ರರಾದ ಡಾಕ್ಟರ್ ಸಾಯಿನಾಥ ಗಾವಂಕರ್ ರವರು ಅದನ್ನು ಹೊರಗೆ ತೆಗೆದು ಒಂದು ಮರದ ಹಲಗೆಯ ಹೊರಪದರವಿರುವ ಗಾಜಿನ ಕಪಾಟಿನಲ್ಲಿ ತೂಗುಹಾಕಿರುತ್ತಾರೆ. ಸಾಯಿಭಕ್ತರು ಈ ಪವಿತ್ರ ಕಫ್ನಿಯನ್ನು ಹೋಗಿ ದರ್ಶನ ಮಾಡಿ ಬರಬಹುದಾಗಿದೆ.  ಈ ಕಫ್ನಿಯನ್ನು ದಸರೆಯ ಸಮಯದಲ್ಲಿ ಮಾತ್ರ ಹೊರಗೆ ತೆಗೆದು ಅದನ್ನು ಒಗೆದು ಮತ್ತೆ ಗಾಜಿನ ಕಪಾಟಿನ ಒಳಗೆ ಇರಿಸಲಾಗುತ್ತದೆ. ಇದನ್ನು ಯಾರು ಮುಟ್ಟಲು ಅವಕಾಶವಿರುವುದಿಲ್ಲ. ತಮ್ಮ ತಂದೆಯವರಿಗೆ ಸಾಯಿಬಾಬಾರವರು ನೀಡಿರುವ ಕಫ್ನಿಯ ವಿಷಯವನ್ನು ತಿಳಿದಿರುವ ಕೇವಲ ಕೆಲವು ಭಕ್ತರು ಮಾತ್ರ ಈ ಪವಿತ್ರ ಮನೆಗೆ ಪ್ರತಿ ವರ್ಷವೂ ಬಂದು ದರ್ಶನ ಮಾಡಿ ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ ಎಂದು ಡಾಕ್ಟರ್ ಸಾಯಿನಾಥ ಗಾವಂಕರ್ ನುಡಿಯುತ್ತಾರೆ.

ಸಮಾಧಿಯಾಗಿ ಹಲವಾರು ವರ್ಷಗಳ ಬಳಿಕ ಅಂದರೆ 18ನೇ ಜನವರಿ 1954 ರಂದು ಸಾಯಿಬಾಬಾರವರು ತಮ್ಮ ಮನೆ ಇಂದಿರಾ ನಿವಾಸಕ್ಕೆ ಬಂದು ತಮ್ಮ ತಂದೆ ಡಾಕ್ಟರ್ ಕೇಶವ ಭಗವಾನ್ ಗಾವಂಕರ್ ರವರ ಜೊತೆ ಗಂಟೆಗಟ್ಟಲೆ ಮಾತುಕತೆ ನಡೆಸಿ ಹೋಗಿರುತ್ತಾರೆ ಎಂದು ಡಾಕ್ಟರ್ ಸಾಯಿನಾಥ ಗಾವಂಕರ್ ಭಾವುಕರಾಗಿ ನುಡಿಯುತ್ತಾರೆ. "ಆಗ ನನಗೆ ಕೇವಲ ಐದು ವರ್ಷ. ಆದರೆ ನಮ್ಮ ಮನೆಯ ಎಲ್ಲ ಸದಸ್ಯರ ಮನದಲ್ಲಿ ಸಾಯಿಬಾಬಾರವರು ಬಂದು ಕುಳಿತು ತಂದೆಯವರ ಜೊತೆ ಮಾತುಕತೆ ನಡೆಸಿದ ದೃಶ್ಯ ಅಚ್ಚಳಿಯದೆ ನಿಂತಿದೆ. ಸಾಯಿಬಾಬಾ ಮತ್ತು ತಂದೆಯವರು ದೀರ್ಘಕಾಲ ಸಂಭಾಷಣೆಯಲ್ಲಿ ತೊಡಗಿದ್ದರು. ಮನೆಯಲ್ಲಿದ್ದ ವರಾಂಡದಲ್ಲಿ ರಾತ್ರಿ 10.30 ರಿಂದ ಮಾರನೆಯ ದಿನ ಬೆಳಗಿನ ಜಾವ 8.30 ರವರೆವಿಗೂ ಈ ಮಾತುಕತೆಗಳು ನಡೆದವು" ಎಂದು ಆ ಸ್ಥಳಕ್ಕೆ ಕೈ ತೋರಿಸುತ್ತಾ  ಡಾಕ್ಟರ್ ಸಾಯಿನಾಥ ಗಾವಂಕರ್ ರವರು ಭಾವುಕರಾಗಿ ನುಡಿಯುತ್ತಾರೆ.

ಈ ಘಟನೆಯಾದ ಹತ್ತು ವರ್ಷಗಳ ನಂತರ ಒಂದು ರಾತ್ರಿ ಡಾಕ್ಟರ್ ಕೇಶವ ಭಗವಾನ್ ಗಾವಂಕರ್ ರವರು ದೀರ್ಘ ನಿದ್ರೆಯಲ್ಲಿರುವಾಗ, ಅವರ ಕಿವಿಯಲ್ಲಿ  "ಏಳು, ನನ್ನ ಕಥೆಗಳನ್ನು ಬರೆಯಲು ಪ್ರಾರಂಭಿಸು" ಎಂಬ ಮೃದು ನುಡಿಗಳು ಕೇಳಿಸಿತು. ಕೂಡಲೇ ಡಾಕ್ಟರ್ ಗಾವಂಕರ್ ರವರಿಗೆ ಅದು ಸಾಯಿಬಾಬಾರವರ ಧ್ವನಿ ಎಂದು ಗೊತ್ತಾಯಿತು. ತಕ್ಷಣವೇ ಪುಸ್ತಕ ಮತ್ತು ಲೇಖನಿಯನ್ನು ಕೈಗೆತ್ತಿಕೊಂಡು ಸಾಯಿಬಾಬಾರವರಿಗೆ ವಂದಿಸಿ ಬರೆಯಲು ಪ್ರಾರಂಭಿಸಿದರು. ಬೆಳಗಿನ ಜಾವ 1.30 ಕ್ಕೆ ಪ್ರಾರಂಭಿಸಿ ಅದೇ ದಿನ ಬೆಳಿಗ್ಗೆ 10 ಗಂಟೆಗೆ ಸಂಪೂರ್ಣವಾಗಿ ಬರೆದು ಮುಗಿಸಿದರು. ನಂತರ ಅದನ್ನು "ಶಿರಡಿಚೇ ಸಾಯಿಬಾಬಾ" ಎಂಬ ಶೀರ್ಷಿಕೆಯ ಅಡಿಯಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟಣೆ ಮಾಡಿದರು. ಈ ಪುಸ್ತಕವು ಮರಾಠಿಯಲ್ಲಿ ಸಾಯಿಬಾಬಾರವರ ಬಗ್ಗೆ ರಚಿಸಲಾದ ಏಕಮೇವಾದ್ವಿತೀಯ ಪುಸ್ತಕ ಎಂದರೆ ತಪ್ಪಾಗಲಾರದು. ನಂತರ 2011ನೇ ಇಸವಿಯಲ್ಲಿ ಡಾಕ್ಟರ್ ಸಾಯಿನಾಥ ಗಾವಂಕರ್ ರವರು ಅದನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆ ಮಾಡಿ ಪ್ರಕಟಣೆ ಮಾಡಿರುತ್ತಾರೆ.

ಡಾಕ್ಟರ್ ಕೇಶವ ಭಗವಾನ್ ಗಾವಂಕರ್ ರವರು 29ನೇ ಜೂನ್, 1985 ರ ಪವಿತ್ರ ಆಷಾಢ ಶುದ್ಧ ಏಕಾದಶಿಯ ದಿನದಂದು 79ನೇ ವಯಸ್ಸಿನಲ್ಲಿ ತಮ್ಮ ಕುರ್ಲಾ ನಿವಾಸದಲ್ಲಿ ಮರಣ ಹೊಂದಿದರು.

ಪ್ರಸ್ತುತ ಡಾಕ್ಟರ್ ಕೇಶವ ಭಗವಾನ್ ಗಾವಂಕರ್ ರವರ ಪುತ್ರರಾದ ಡಾ.ಸಾಯಿನಾಥ ಗಾವಂಕರ್, ಅವರ ಪತ್ನಿ ಅಶ್ಮಿತ ಮತ್ತು ಪುತ್ರರಾದ ಡಾಕ್ಟರ್ ಜ್ಞಾನೇಶ್ ರವರುಗಳು ಕುರ್ಲಾದ ಎರಡು ಅಂತಸ್ತಿನ ತಮ್ಮ ಪೂರ್ವಜರ ಆಸ್ತಿಯಾದ "ಇಂದಿರಾ ನಿವಾಸ" ದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. ನೂರು ವರ್ಷಗಳಿಗೂ ಪುರಾತನವಾದ ಈ ಭವ್ಯ ಕಟ್ಟಡವು ಮುಂಬೈನ ಕುರ್ಲಾದ ಮುಖ್ಯರಸ್ತೆಯಲ್ಲಿ ಇರುತ್ತದೆ.

 ಡಾಕ್ಟರ್ ಸಾಯಿನಾಥ ಗಾವಂಕರ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:

ವಿಳಾಸ:

ಡಾಕ್ಟರ್ ಸಾಯಿನಾಥ ಗಾವಂಕರ್
ನಂ.158, ಇಂದಿರಾ ನಿವಾಸ,
ಬ್ಯಾಂಕ್ ಆಫ್ ಮಹಾರಾಷ್ಟ್ರ ಹತ್ತಿರ,
ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗ,
ಕುರ್ಲಾ ಪಶ್ಚಿಮ, ಮುಂಬೈ - 400 070,
ಮಹಾರಾಷ್ಟ್ರ, ಭಾರತ

ದೂರವಾಣಿ ಸಂಖ್ಯೆ:

+91 22 26502225 (ಸ್ಥಿರ ದೂರವಾಣಿ) / +91 98198 17587 (ಮೊಬೈಲ್)

ಇ-ಮೈಲ್ ವಿಳಾಸ:

dnyaneshgawankar81@gmail.com


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment