ವಿಸ್ತೃತ ಕನ್ನಡ ಗದ್ಯರೂಪದ ಸಾಯಿ ಸಚ್ಚರಿತೆಯ ಅನುವಾದಕ ಶ್ರೀ.ಸಿ.ಎಸ್.ದಿನೇಶ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಸಿ.ಎಸ್.ದಿನೇಶ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ದಿವಂಗತ ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆ (ಓವಿ ಯಿಂದ ಓವಿ) ಯನ್ನು ಗದ್ಯರೂಪದಲ್ಲಿ ಕನ್ನಡಕ್ಕೆ ವಿಸ್ತೃತವಾಗಿ ಅನುವಾದ ಮಾಡಿರುವ "ಭಾವಾನುವಾದ ಶ್ರೀ ಸಾಯಿ ಸಚ್ಚರಿತ" ದ ಲೇಖಕರು.
ಶ್ರೀ.ಸಿ.ಎಸ್.ದಿನೇಶ್ ರವರು ರವರು ಮುಂಬೈ ನಿವಾಸಿಯಾದ "ವೀಣಾ ವಿದ್ವಾನ್" ದಿವಂಗತ ಶ್ರೀ.ಶಂಕರನಾರಾಯಣ ರಾವ್ ಮತ್ತು ಶ್ರೀಮತಿ.ಜಯಮ್ಮನವರ ದ್ವಿತೀಯ ಪುತ್ರನಾಗಿ 29ನೇ ಮೇ 1948 ರಂದು ಕರ್ನಾಟಕದ ಚಿಕ್ಕಮಗಳೂರು ಪಟ್ಟಣ ಹಾಗೂ ಜಿಲ್ಲೆಯಲ್ಲಿ ಜನಿಸಿರುತ್ತಾರೆ.
ಇವರ ಒಂದನೇ ತರಗತಿ ವ್ಯಾಸಂಗ ಮುಂಬೈನಲ್ಲಿ ಮಾಡಿಸಿದ ತಂದೆತಾಯಿ ಮುಂದಿನ ವ್ಯಾಸಂಗವನ್ನು ಚಿಕ್ಕಮಗಳೂರಿನಲ್ಲಿ ಅಜ್ಜಿ ತಾತನವರ ಆಶ್ರಯದಲ್ಲಿ ಮಾಡಿಸಲು ಕಳುಹಿಸಿಕೊಟ್ಟರು. ತಾತನ ಆಶ್ರಯದಲ್ಲಿ ಬೆಳೆದು ಡಿಪ್ಲೊಮಾ ಎಲೆಕ್ಟ್ರಿಕಲ್ ತನಕ ವ್ಯಾಸಂಗ ಮಾಡಿದರು. ತಾತನವರ ಆಶ್ರಯದಲ್ಲಿ ಒಳ್ಳೆಯ ನಡೆ-ನುಡಿ, ಆಚಾರ-ವಿಚಾರಗಳು ಇವರಿಗೆ ಪ್ರಾಪ್ತವಾದವು. ತಾತನವರ ಮನೆಯಲ್ಲಿ ಅನವರತವೂ ಬಡ ಮಕ್ಕಳಿಗೆ ಸಹಾಯ ಮಾಡುವುದು, ಪರ ಊರುಗಳಿಂದ ಓದಲು ಬಂದ ವಿದ್ಯಾರ್ಥಿಗಳಿಗೆ ವಾರಾನ್ನ ನೀಡುವುದು, ಸಂತರನ್ನು ಕರೆಯಿಸುವುದು, ಹಳೆಯದಾದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದು, ಸಾಮೂಹಿಕ ಅನ್ನದಾನ ಮಾಡುವುದು, ನಿರಂತರ ವ್ರತಗಳ ಆಚರಣೆ, ನವರಾತ್ರಿ ಉತ್ಸವದ ಆಚರಣೆ, ಆಗಾಗ್ಗೆ ಸೂರ್ಯ ನಮಸ್ಕಾರವನ್ನು ಹಮ್ಮಿಕೊಳ್ಳುತ್ತಿದ್ದುದು - ಈ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಇವರ ಮನದಲ್ಲಿ ಪಾರಮಾರ್ಥಿಕದತ್ತ ಒಲವು ಮೂಡಿಸುವುದಲ್ಲಿ ಯಶಸ್ವಿಯಾದವೆಂದೇ ಹೇಳಬೇಕು.
ಇವರು ತಮ್ಮ ದೊಡ್ಡಪ್ಪನವರು 1959 ರಲ್ಲಿ ನಿರ್ದೇಶಿಸಿದ "ನಚಿಕೇತ" ನಾಟಕದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ನಂತರ ದೊಡ್ಡಪ್ಪನವರಿಗೆ "ಅಕ್ಕಮಹಾದೇವಿ" ಎಂಬ ಕನ್ನಡ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಈ ಕಾರ್ಯಗಳೂ ಕೂಡ ಇವರನ್ನು ಪಾರಮಾರ್ಥಿಕ ವಿಚಾರಗಳತ್ತ ಬಲವಾಗಿ ಸೆಳೆದವು.
ವಿದ್ಯಾಭ್ಯಾಸ ಮುಗಿದ ನಂತರ ಕೆಲವು ವರ್ಷಗಳ ಕಾಲ ಮುಂಬೈನ ಪ್ರತಿಷ್ಟಿತ ಮಫತ್ ಲಾಲ್ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರ 1976 ರಲ್ಲಿ ತಮ್ಮ ಮಿತ್ರರ ಸಹಾಯದಿಂದ ನೈಜೀರಿಯಾಕ್ಕೆ ತೆರಳಿ ಅಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರ ಮುಂಬೈಗೆ ಬಂದು ಶಾಶ್ವತವಾಗಿ ನೆಲೆಸಿದರು.
ನೈಜೀರಿಯಾದಲ್ಲಿ ತಂಗಿದ್ದಾಗ 1990 ನೇ ಇಸವಿಯಲ್ಲಿ ಲಾಗೋಸ್ ನ ಸಾಯಿಬಾಬಾ ಮಂದಿರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ದೊರೆಯಿತು ಮತ್ತು ಅಲ್ಲಿನ ಭಕ್ತರ ಜೊತೆಯಲ್ಲಿ ಭಜನೆ, ಸತ್ಯಂಗ, ಕೀರ್ತನೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು.
1995 ನೇ ಇಸವಿಯಿಂದ ಮುಂಬೈನ ಚೆಂಬೂರಿನಲ್ಲಿರುವ ಚಿನ್ಮಯ ಮಿಶನ್ ನ ಅಧ್ಯಯನ ವೃತ್ತದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ದೊರೆಯಿತು. ಆ ಸಮಯದಲ್ಲಿ ಹಲವಾರು ಸ್ವಾಮೀಜಿಗಳ ಪ್ರವಚನ, ಉಪನ್ಯಾಸಗಳ ಆನಂದವನ್ನು ಸವಿಯುವ ಅವಕಾಶ ಲಭಿಸಿತು. ಆ ಸಂದರ್ಭದಲ್ಲಿ ಚಿನ್ಮಯ ಮಿಶನ್ ನ ಶ್ರೀ.ಟಿ.ಜಿ.ರಾವ್ ಹಾಗೂ ಶ್ರೀ.ಆಚಾರ್ಯ ರವರುಗಳು ಇವರ ಆಧ್ಯಾತ್ಮಿಕ ಗುರುಗಳಾಗಿ ಇವರನ್ನು ಆಧ್ಯಾತ್ಮಿಕ ವಿಚಾರಗಳತ್ತ ಸೆಳೆದರು.
ಮುಂದೆ 2011 ನೇ ಇಸವಿಯಲ್ಲಿ ದಿವಂಗತ ಶ್ರೀ ಹೇಮಾಡಪಂತರ ಮೇರು ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯ ಮರಾಠಿ ಗದ್ಯಾನುವಾದವನ್ನು ಮಾಡಿ ಅದನ್ನು ಹೊರತಂದ ಪುಣೆಯ ಶ್ರೀ.ಪವಾರ್ ಕಾಕಾರವರ ಪರಿಚಯವಾಯಿತು. ಹೀಗೆ ಆ ಉದ್ಗ್ರಂಥವನ್ನು ಕನ್ನಡ ಭಾಷೆಗೆ ಅನುವಾದ ಮಾಡುವ ಅವಕಾಶ ದೊರೆಯಿತು. ಆ ಸಂದರ್ಭವನ್ನು ಬಹಳ ಉತ್ತಮವಾಗಿ ಬಳಸಿಕೊಂಡು ಆ ಮೇರುಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಸಾಯಿಬಾಬಾರವರ ಆಶೀರ್ವಾದದಿಂದ 31ನೇ ಜನವರಿ 2013 ರಂದು ಬೆಂಗಳೂರಿನ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬಿಡುಗಡೆ ಮಾಡಿದರು.
ಪ್ರಸ್ತುತ ಇವರು ಸಾಯಿಬಾಬಾರವರ ಮೇಲೆ "ದೈನಂದಿಕ ಸಾಯಿ ಸ್ಮರಣೆ" ಎಂಬ ಮತ್ತೊಂದು ಪುಸ್ತಕದ ರಚನೆಯಲ್ಲಿ ತೊಡಗಿದ್ದು ಅತಿ ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ಇಚ್ಛೆಯನ್ನು ಹೊಂದಿದ್ದಾರೆ. ಈ ಕೃತಿಯ ವಿಶೇಷತೆಯೇನೆಂದರೆ ದಿನಕ್ಕೊಂದರಂತೆ 365 ಸಾಯಿಬಾಬಾರವರ ಲೀಲೆಗಳನ್ನು ಇದರಲ್ಲಿ ಬರೆಯಲಾಗಿದೆ.
ಇವರಿಗೆ ಧರ್ಮಪತ್ನಿ, ಶ್ರೀ.ಶ್ರೀಹರ್ಷ ಮತ್ತು ಶ್ರೀ.ಶ್ರೀಧರ್ ಎಂಬ ಹೆಸರಿನ ಇಬ್ಬರು ಗಂಡು ಮಕ್ಕಳು ಹಾಗೂ ಶ್ರೀಮತಿ.ಸಂಗೀತ ಎಂಬ ಹೆಣ್ಣು ಮಗಳಿದ್ದಾರೆ.
ಪ್ರಸ್ತುತ ಇವರು ತಮ್ಮ ಧರ್ಮಪತ್ನಿಯ ಜೊತೆಗೆ ಮುಂಬೈನ ಚೆಂಬೂರಿನ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ಸಿ.ಎಸ್.ದಿನೇಶ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಶ್ರೀ.ಸಿ.ಎಸ್.ದಿನೇಶ್
ನಂ.108, ಸುಕೃತ,
ಮೈಸೂರು ಕಾಲೋನಿ, ಮಹಲಾರ್ಡ್,
ಚೆಂಬೂರು,
ಮುಂಬೈ - 400 074,
ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆಗಳು:
+91 22 25543020 (ಮನೆ)/+91 98204 64489 (ಮೊಬೈಲ್)
ಇ-ಮೈಲ್ ವಿಳಾಸ:
dinesh1948@rediffmail.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment