Saturday, February 2, 2013


ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಕನ್ನಡ ಗದ್ಯರೂಪ "ಭಾವಾನುವಾದ - ಶ್ರೀ ಸಾಯಿ ಸಚ್ಚರಿತ" ದ ಲೋಕಾರ್ಪಣೆ ಸಮಾರಂಭದ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ದಿವಂಗತ ಶ್ರೀ ಹೇಮಾಡಪಂತರ ಮೇರು ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯ ಮರಾಠಿ ಗದ್ಯಾನುವಾದವನ್ನು ಪುಣೆಯ ಶ್ರೀ.ಪವಾರ್ ಕಾಕಾರವರು ಬಹಳ ಸುಂದರವಾಗಿ ಮಾಡಿರುತ್ತಾರೆ. ಅದರ ಕನ್ನಡ ಅನುವಾದವನ್ನು ಮುಂಬೈನ ಶ್ರೀ.ಸಿ.ಎಸ್.ದಿನೇಶ್ ರವರು ಮಾಡಿದ್ದು ಅದರ ಲೋಕಾರ್ಪಣೆ ಸಮಾರಂಭವು ಇದೇ ತಿಂಗಳ 31ನೇ ಜನವರಿ 2013, ಗುರುವಾರದಂದು ಬೆಂಗಳೂರಿನ ತ್ಯಾಗರಾಜನಗರದ ಶ್ರೀ.ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯಿತು. ಬೆಂಗಳೂರಿನ ಚಿನ್ಮಯ ಮಿಷನ್ ನ ಪರಮ ಪೂಜ್ಯ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು ಈ ಮಹೋನ್ನತ ಕೃತಿಯನ್ನು ಬಿಡುಗಡೆ ಮಾಡಿದರು.


ಕನ್ನಡಕ್ಕೆ ಅನುವಾದ ಮಾಡಿರುವ ಈ ಉದ್ಗ್ರಂಥವು ಸುಮಾರು 970 ಪುಟಗಳಿಂದ ಕೂಡಿದ್ದು ಇದರ ಮೂಲ ಕೃತಿಯ ರಚನಕಾರರು ಅಪ್ರತಿಮ ಸಾಯಿ ಭಕ್ತರಾದ ದಿವಂಗತ ಶ್ರೀ ಹೇಮಾಡಪಂತರು.

ಮೂಲ ಕೃತಿಯಲ್ಲಿದ್ದ ಪದ್ಯಗಳ ಮರಾಠಿ ಗದ್ಯಾನುವಾದವನ್ನು ಪುಣೆಯ ಶ್ರೀ.ಪವಾರ್ ಕಾಕಾರವರು 2011 ರಲ್ಲಿ ಮಾಡಿದರು. ಅದರ ಕನ್ನಡಾನುವಾದವನ್ನು ಮುಂಬೈನ ಶ್ರೀ.ಸಿ.ಎಸ್.ದಿನೇಶ್ ರವರು ಮಾಡಿದ್ದು ಕೃತಿಯನ್ನು ಭಗವದ್ಗೀತೆ, ಭಜ ಗೋವಿಂದಂ ಮತ್ತು ಕನ್ನಡದ ಪ್ರಸಿದ್ಧ ಕವಿಗಳಾದ ದಿವಂಗತ ಡಾ.ಡಿ.ವಿ.ಗುಂಡಪ್ಪನವರ "ಮಂಕುತಿಮ್ಮನ ಕಗ್ಗ" ದ ವಿವರಣೆಗಳಿಂದ ಬಹಳ ಸುಂದರವಾಗಿ ಅಲಂಕರಿಸಿದ್ದಾರೆ.


ಕನ್ನಡ ಕೃತಿಯ ಬಿಡುಗಡೆಯು 31ನೇ ಜನವರಿ 2013, ಗುರುವಾರದಂದು ಬೆಂಗಳೂರಿನ ತ್ಯಾಗರಾಜನಗರದ ಶ್ರೀ.ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯಿತು. ಗುರುವಾರವಾದ ಕಾರಣ 2000 ಕ್ಕೂ ಹೆಚ್ಚು ಸಾಯಿ ಭಕ್ತರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪರಮ ಪೂಜ್ಯ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು 8 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಆಧ್ಯಾತ್ಮಿಕ ಪ್ರವೃತ್ತಿಯನ್ನು ಬೆಳೆಸಬೇಕಾದ ಅಗತ್ಯತೆ ಹಾಗೂ ಅವರ ವ್ಯಕ್ತಿತ್ವದ ಬೆಳವಣಿಗೆಯನ್ನು ಕುರಿತು ಬಹಳ ಸುಂದರವಾಗಿ ಮಾತನಾಡಿದರು. ಅಲ್ಲದೇ ಶಿರಡಿ ಸಾಯಿಬಾಬಾರವರಂತಹ ಅವಧೂತರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಾ ಅವರುಗಳು ಯಾವುದೇ ಆಶ್ರಮ, ಗುರು ಅಥವಾ ಶಿಷ್ಯ ಪರಂಪರೆಯನ್ನಾಗಲಿ ಹೊಂದಿರುವುದಿಲ್ಲ ಎಂದು ಮನದಟ್ಟು ಮಾಡಿಕೊಟ್ಟರು.

ಜನರು ತಮಗೆ ಕಷ್ಟ ಬಂದಾಗ ಮಾತ್ರ ಅಥವಾ ತಮಗೆ ಜೀವನದಲ್ಲಿ ಏನಾದರೂ ಒಳಿತಾಗಬೇಕೆಂದಾಗ ಮಾತ್ರ "ಸಂಕಟ ಬಂದಾಗ ವೆಂಕಟರಮಣ" ಎಂಬ ನಾಣ್ಣುಡಿಯಂತೆ ದೇವರ ಮೊರೆ ಹೋಗುವುದನ್ನು ಖಂಡಿಸಿದ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು ನಮ್ಮ ಜೀವನದಲ್ಲಿ ಪ್ರತಿನಿತ್ಯವೂ ಸಂತರ ಜೀವನ ಚರಿತ್ರೆಗಳನ್ನು ಪಾರಾಯಣ ಮಾಡಬೇಕೆಂದು ಮತ್ತು ಅವರುಗಳು ಸಮಾಜದ ಒಳಿತಿಗಾಗಿ ಮಾಡಿದ ಕೆಲಸಗಳನ್ನು ಸ್ಮರಿಸಬೇಕೆಂದು ಸಲಹೆ ನೀಡಿದರು.

ಮೈಸೂರಿನ ಪ್ರಖ್ಯಾತ ವಿದ್ವಾಂಸರಾದ ಶ್ರೀ.ಗುರುಪಾದ ಕೆ.ಹೆಗಡೆಯವರು ಸಾಯಿಬಾಬಾರವರನ್ನು ಶನಿ ಭಗವಾನರಿಗೆ ಹೋಲಿಸುತ್ತಾ ಸಾಯಿಬಾಬಾ ಹಾಗೂ ಶನಿ ಭಗವಾನರಿಬ್ಬರಿಗೂ ಸಂಖ್ಯಾ ಶಾಸ್ತ್ರದ ಪ್ರಕಾರ ಎಂಟನೇ ಸಂಖ್ಯೆಯನ್ನು ನೀಡಲಾಗಿದ್ದು ಇವರಿಬ್ಬರೂ ಜನರ ಸಂಚಿತ ಪಾಪ ಕರ್ಮಗಳನ್ನು ನಿರ್ಮೂಲನೆ ಮಾಡಿ ಅವರನ್ನು ಪುನೀತರನ್ನಾಗಿ ಮಾಡುತ್ತಾರೆ ಎಂದು ನುಡಿದರು.

ಕಾರ್ಯಕ್ರಮವು ಶ್ರೀ.ಜ್ಯೋತಿ ರಾಘವನ್ ರವರ ಸ್ವಾಗತ ಭಾಷಣದೊಂದಿಗೆ ಆರಂಭವಾದವು. ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತವನ್ನು ಹಾಗೂ ವೇದಘೋಷವನ್ನು ದೇವಾಲಯದ ಅರ್ಚಕರಾದ ಶ್ರೀ.ಕಾರ್ತೀಕ್ ರವರು ನೆರವೇರಿಸಿದರು. ಕಾರ್ಯಕ್ರಮದ ಆಗುಹೋಗುಗಳನ್ನು ಹಾಗೂ ಸಂಪೂರ್ಣ ಮೇಲ್ವಿಚಾರಣೆಯನ್ನು ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾದ ಶ್ರೀ.ಶೇಷಾದ್ರಿಯವರು ನೋಡಿಕೊಂಡರು. ದೇವಾಲಯದ ಸಾಯಿ ಭಜನ ಗಾಯಕರಾದ ಶ್ರೀ.ರಾಧಾಕೃಷ್ಣರವರು ಸುಶ್ರಾವ್ಯವಾಗಿ ಸಾಯಿ ಭಜನೆಯನ್ನು ಹಾಡುವ ಮುಖಾಂತರ ಆಮಂತ್ರಣ ಪ್ರಾರ್ಥನೆಯನ್ನು ನೆರವೇರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಶ್ರೀ.ಜ್ಯೋತಿ ರಾಘವನ್ ರವರು ಮಾಡಿದರು. ಲೋಕಾರ್ಪಣೆಯ ಸಮಾರಂಭದ ದಿನದಂದು 120ಕ್ಕೂ ಹೆಚ್ಚು ಪುಸ್ತಕಗಳನ್ನು ಸಾಯಿ ಭಕ್ತರು ಖರೀದಿಸಿದರು.

ಪುಸ್ತಕವು ಸುಂದರವಾಗಿ ಹೊರಬರಲು ಕಾರಣರಾದ ಎಲ್ಲಾ ವ್ಯಕ್ತಿಗಳಿಗೂ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

ಪುಸ್ತಕದ ಬೆಲೆಯು 380/- ರೂಪಾಯಿಗಳಾಗಿದ್ದು ಈ ಕೆಳಕಂಡ ಸ್ಥಳದಲ್ಲಿ ದೊರೆಯುತ್ತದೆ.

ಶ್ರೀ.ಸಾಯಿ ಅಧ್ಯಾತ್ಮಿಕ ಕೇಂದ್ರ
1ನೇ ಬ್ಲಾಕ್, ತ್ಯಾಗರಾಜನಗರ
ಬೆಂಗಳೂರು-560 028,
ಕರ್ನಾಟಕ, ಭಾರತ
ದೂರವಾಣಿ ಸಂಖ್ಯೆ: +91 80 2661 5507
ಇ-ಮೈಲ್ ವಿಳಾಸ: ssscsaipadananda@yahoo.com


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment