Sunday, October 2, 2011

ಸಾಯಿ ಮಹಾಭಕ್ತ  - ಗೋಪಾಲ್  ರಾವ್ ಗುಂಡ - ಕೃಪೆ: ಸಾಯಿಅಮೃತಧಾರಾ.ಕಾಂ 


ಗೋಪಾಲ್ ರಾವ್ ಗುಂಡರವರು ಕೋಪರ್ಗಾವ್ ನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಕಾರ್ಯವನ್ನು ನಿರ್ವಹಿಸುತ್ತಿದ್ದರು. ಇವರಿಗೆ ಪುತ್ರ ಸಂತಾನವಿರಲಿಲ್ಲ. ಆದ ಕಾರಣ ಇವರು ಸಾಯಿಬಾಬಾರವರ ಮೊರೆ ಹೋದರು. ನಾನಾ ಸಾಹೇಬ್ ಡೇನ್ಗಳೆ ಯವರಂತೆ ಇವರೂ ಸಹ ಧಾರ್ಮಿಕ ಮನೋಭಾವವನ್ನು ಹೊಂದಿದ್ದರು ಮತ್ತು ಇವರಿಬ್ಬರೂ ಬಹಳ ಆತ್ಮೀಯ ಸ್ನೇಹಿತರಾಗಿದ್ದರು.  ನಾನಾ ಸಾಹೇಬ್ ಡೇನ್ಗಳೆಯವರ ಸಲಹೆ ಮೇರೆಗೆ ಗುಂಡರವರು ಸಾಯಿಬಾಬಾರವರ ದರ್ಶನವನ್ನು ಮಾಡಿದರು. 

ಗೋಪಾಲ್ ರಾವ್ ಗುಂಡರವರಿಗೆ 3 ಜನ ಹೆಂಡತಿಯರಿದ್ದರು. ಆದರೂ ಅವರಿಗೆ ಪುತ್ರ ಸಂತಾನವಿರಲಿಲ್ಲ. ಆದರೆ, ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ಇವರಿಗೆ ಪುತ್ರನ ಭಾಗ್ಯ ಒದಗಿಬಂದಿತು. ಸಾಯಿಬಾಬಾರವರಿಗೆ ತಮ್ಮ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಮಸೀದಿಯನ್ನು ಜೀರ್ಣೋದ್ದಾರ ಮಾಡಬೇಕೆಂದು ಮನಸ್ಸು ಮಾಡಿದರು. ಅದಕ್ಕಾಗಿ ಬೇಕಾದ ಕಲ್ಲು, ಇಟ್ಟಿಗೆ, ಮರಳು ಮತ್ತು ಇತರ ಎಲ್ಲಾ ಸಾಮಗ್ರಿಗಳನ್ನು ಅಣಿ ಮಾಡಿಕೊಂಡರು. ಆದರೆ ಬಾಬಾರವರು ಗೋಪಾಲ್ ರಾವ್ ಗುಂಡರವರಿಗೆ ಅನುಮತಿಯನ್ನು ನೀಡಲಿಲ್ಲ. ನಂತರ ಮಾಳಸಾಪತಿಯವರ ಒತ್ತಾಯದಿಂದ ಬಾಬಾರವರು ಒಪ್ಪಿದರು. ಬಾಬಾರವರು ಈ ಕೆಲಸವನ್ನು ನಾನಾ ಸಾಹೇಬ್ ಚಂದೋರ್ಕರ್ ಮತ್ತು ಕಾಕಾ ಸಾಹೇಬ್ ದೀಕ್ಷಿತ್ ರವರಿಗೆ ವಹಿಸಿದರು. ಆದ್ದರಿಂದ ಮಸೀದಿಯನ್ನು ದುರಸ್ತಿ ಮಾಡುವುದಕ್ಕೆ ಗೋಪಾಲ್ ರಾವ್ ಗುಂಡರವರಿಗೆ ಬಾಬಾ ಒಪ್ಪಿಗೆ ನೀಡಲಿಲ್ಲ. 

ಆದರೆ, ಸ್ವಲ್ಪ ದಿನಗಳ ನಂತರ ಸಾಯಿಬಾಬಾರವರು ಶಿರಡಿಯಲ್ಲಿದ್ದ ಶನಿ ಮಂದಿರ ಮತ್ತು ಇತರ ಮಂದಿರಗಳ ಜೀರ್ಣೋದ್ದಾರ ಕಾರ್ಯಕ್ಕಾಗಿ ಆ ಸಾಮಗ್ರಿಗಳನ್ನು ಉಪಯೋಗಿಸಲು ಗೋಪಾಲ್ ರಾವ್ ಗುಂಡರವರಿಗೆ ಆಜ್ಞಾಪಿಸಿದರು. ಇದರಿಂದ ಗೋಪಾಲ್ ರಾವ್ ಗುಂಡರವರಿಗೆ ಅತೀವ ಆನಂದವಾಯಿತು. ಕೊಡಲೇ ಕೆಲಸವನ್ನು ಪ್ರಾರಂಭಿಸಿ ಶನಿ ಮಂದಿರವನ್ನು ಜೀರ್ಣೋದ್ದಾರ ಮಾಡಿದ್ದೇ ಅಲ್ಲದೇ ಅದು ಚಿಕ್ಕದಾಗಿದ್ದರಿಂದ ಸ್ವಲ್ಪ ವಿಸ್ತರಣೆಯನ್ನು ಕೂಡ ಮಾಡಿಸಿದರು. ಅಲ್ಲದೇ, ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಬೇವಿನ ಮರದ ಕೆಳಗಡೆ ಇದ್ದ ಗುರುಸ್ಥಾನದ ದುರಸ್ತಿ ಕಾರ್ಯವನ್ನು ಕೂಡ ಮಾಡಿಸಿದರು. 

ಗೋಪಾಲ್ ರಾವ್ ಗುಂಡರವರು ತಮಗೆ ಪುತ್ರ ಸಂತಾನವಾಗಿದ್ದು ಸಾಯಿಬಾಬಾರವರ ಆಶೀರ್ವಾದದ ಫಲ ಎಂದು ಮನಗಂಡಿದ್ದರು. ಆ ಸಂತೋಷಕ್ಕಾಗಿ 1897 ರಲ್ಲಿ ಶಿರೈದ್ಯಲ್ಲಿ ಒಂದು ಜಾತ್ರೆ ಅಥವಾ ಉರುಸ್ ನಡೆಸಬೇಕೆಂದು ಮನಸ್ಸಿನಲ್ಲಿ ಅಂದುಕೊಂಡರು. ಇವರು ತಮ್ಮ ಅನಿಸಿಕೆಯನ್ನು ದಾದಾ ಕೋತೆ, ತಾತ್ಯಾ ಕೋತೆ, ಮಾಧವ ರಾವ್ ದೇಶಪಾಂಡೆ ಮತ್ತು ಇತರ ಸಾಯಿಭಕ್ತರ ಮುಂದೆ ಇರಿಸಿದರು.  ಅವರೆಲ್ಲರೂ ಇದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಸಾಯಿಬಾಬಾರವರು ಕೂಡ ಇದಕ್ಕೆ ಸಮ್ಮತಿಸಿದರು. 

ನಂತರ ಈ ವಿಷಯವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅವರಿಗೆ ಅರ್ಜಿಯನ್ನು ಸಲ್ಲಿಸಿದರು. ಆದರೆ, ಆ ಗ್ರಾಮದ ಪಟೇಲನು ಅದಕ್ಕೆ ಒಪ್ಪದೇ ವಿರುದ್ಧವಾಗಿ ಬರೆದಿದ್ದರಿಂದ ಜಿಲ್ಲಾಧಿಕಾರಿಯು ಒಪ್ಪಿಗೆ ನೀಡಲಿಲ್ಲ. ಬಾಬಾರವರ ಆಶೀರ್ವಾದದ ಫಲದಿಂದ ಮತ್ತೊಮ್ಮೆ ಪ್ರಯತ್ನಿಸಿ ಅವರುಗಳು ಜಯಶೀಲರಾದರು. ಉರುಸ್ ಶ್ರೀರಾಮನವಮಿಯ ದಿನ ನಡೆಯಬೇಕೆಂದು ಬಾಬಾರವರ ಸಲಹೆಯ ಮೇರೆಗೆ ನಿರ್ಧಾರವಾಯಿತು. ಹೀಗೆ 1897 ರಿಂದ ನಿರಂತರವಾಗಿ ಶ್ರೀರಾಮನವಮಿ ಹಾಗು ಉರುಸ್ ಕಾರ್ಯಕ್ರಮ ಒಟ್ಟಿಗೆ ನಡೆದುಕೊಂಡು ಬರುತ್ತಿದೆ. ಹೀಗೆ ಗೋಪಾಲ್ ರಾವ್ ಗುಂಡರವರು ಈ ಶ್ರೀರಾಮನವಮಿ ಉತ್ಸವ ಪ್ರಾರಂಭವಾಗಲು ಕಾರಣರಾದರು. ಉತ್ಸವದ ಸಿದ್ಧತೆಗಳನ್ನೂ ತಾತ್ಯಾ ಕೋತೆ ಪಾಟೀಲ್ ನೋಡಿಕೊಳ್ಳುತ್ತಿದ್ದರು. 

ನಂತರದ ದಿನಗಳಲ್ಲಿ ಸಾಯಿಬಾಬಾರವರ ಆಶೀರ್ವಾದದಿಂದ ದಾಮು ಅಣ್ಣಾರವರು ಕೂಡ ಪುತ್ರ ಸಂತಾನವನ್ನು ಪಡೆದರು. ಗೋಪಾಲ್ ರಾವ್ ಗುಂಡರವರು ದಾಮು ಅಣ್ಣಾರವರಿಗೆ ಆ ಸಂತೋಷಕ್ಕಾಗಿ ದ್ವಾರಕಾಮಾಯಿ ಮಸೀದಿಯ ಮೇಲೆ ಧ್ವಜವನ್ನು ನೆಡುವಂತೆ ಪ್ರೇರೇಪಿಸಿದರು. ದಾಮು ಅಣ್ಣಾರವರು ಈ ವಿಷಯವನ್ನು ನಾನಾ ಸಾಹೇಬ್ ನಿಮೋಣ್ಕರ್ ರವರ ಮುಂದೆ ಇರಿಸಿದರು. ಅವರು ಇದಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಅದರಂತೆ ದಾಮು ಅಣ್ಣಾರವರು ಶ್ರೀರಾಮನವಮಿಯ ದಿವಸ ಮಸೀದಿಯ ಮೇಲೆ ಧ್ವಜವನ್ನು ನೆಡುವ ಕಾರ್ಯವನ್ನು ಪ್ರಾರಂಭಿಸಿದರು. 

ಇಂದಿಗೂ ಶ್ರೀರಾಮನವಮಿಯ ದಿವಸ ಎರಡು ಧ್ವಜಗಳನ್ನು ಭಜನೆ, ಪೂಜೆ ಮತ್ತು ಭಾಜಾ ಭಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ತಂದು ದ್ವಾರಕಾಮಾಯಿ ಮಸೀದಿಯ ಚಾವಣಿಯ ಮೇಲೆ ನೆಡಲಾಗುತ್ತಿದೆ. ಹಸಿರು ಬಣ್ಣದ ಧ್ವಜವನ್ನು ದಾಮು ಅಣ್ಣಾರವರ ಮನೆಯವರು ಹಾಗೂ ಬಣ್ಣದ ಕಸೂತಿಯನ್ನು ಮಾಡಿದ ಧ್ವಜವನ್ನು ನಿಮೋಣ್ಕರ್ ರವರ ಮನೆಯವರು  ನೆಡುತ್ತಾರೆ. ಈ ಧ್ವಜಗಳನ್ನು ಕೊಂಡಾಜಿ ಸುತಾರ್ ರವರ ಮನೆಯಲ್ಲಿ ಸಿದ್ಧ ಪಡಿಸಲಾಗುತ್ತದೆ. ನಂತರ ಮೆರವಣಿಗೆಯಲ್ಲಿ ತಂದು ದ್ವಾರಕಾಮಾಯಿ ಮಸೀದಿಯ ಮೇಲೆ ನೆಡಲಾಗುತ್ತದೆ. 
ಸಾಯಿಬಾಬಾರವರ ಸಮಾಧಿಯ ನಂತರ, ಗೋಪಾಲ್ ರಾವ್ ಗುಂಡರವರು ತಮ್ಮ ಕಲ್ಲಿನ ಮನೆಯನ್ನು ಸಾಯಿಬಾಬಾ ಸಂಸ್ಥಾನಕ್ಕೆ ದಾನವಾಗಿ ನೀಡಿದರು. 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment