Thursday, September 30, 2010

ಸಾಯಿ ಮಹಾಭಕ್ತ - ಕುಶಾ ಭಾವ್ ಆಲಿಯಾಸ್ ಕೃಷ್ಣಾಜಿ ಕಾಶೀನಾಥ ಜೋಷಿ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಇವರು ಕಾಶಿನಾಥ ಪದಮಕರ ಜೋಷಿ ಅವರ ಪುತ್ರರು. ಇವರು ಅಹ್ಮದ್ ನಗರದಿಂದ 70 ಮೈಲಿ ದೂರವಿದ್ದ ಮೀರಜ್ ಗವ್ ನಲ್ಲಿ ವಾಸಿಸುತ್ತಿದ್ದರು. ಕುಶಾ ಭಾವ್ ರವರು 1866 ರಲ್ಲಿ ಜನಿಸಿದರು.

ಸಾಯಿಬಾಬಾರವರು ಇವರಿಗೆ ತಮ್ಮ ಗೂಢವಾದ ಶಕ್ತಿಗಳನ್ನು ದಯಪಾಲಿಸಿದ್ದರು. ಇವರು ತಮ್ಮ ಶಾಲಾ ವ್ಯಾಸಂಗ ಮುಗಿಸಿ 5 ರಿಂದ 7 ರುಪಾಯಿಗಳ ಸಂಬಳದ ಮೇಲೆ ಸ್ಕೂಲ್ ಮಾಸ್ಟರ್ ಕೆಲಸ ಮಾಡುತ್ತಿದ್ದರು ಮತ್ತು ಬಹಳ ಬಡವರಾಗಿದ್ದರು. ಹಳ್ಳಿಯ ಪುರೋಹಿತರಾಗಲು ಶಿಕ್ಷಣವನ್ನು ಪಡೆಯುತ್ತಿದ್ದರು. ಆದರೆ ಇವರಿಗೆ ಸ್ಕೂಲ್ ಮಾಸ್ಟರ್ ಕೆಲಸವಾಗಲಿ ಅಥವಾ ಪುರೋಹಿತರ ಕೆಲಸವಾಗಲಿ ಇಷ್ಟವಾಗಲಿಲ್ಲ. ಆಗ ಇವರು ಓರ್ವ ಗುರು ಮತ್ತು ಮಹಾರಾಜರ ಬಳಿ ತೆರಳಿ ಆಸನ, ಪ್ರಾಣಾಯಾಮ ಮತ್ತು ಕುಂಡಲಿನಿ ವಿದ್ಯೆಯಲ್ಲಿ ಶಿಕ್ಷಣ ಪಡೆದರು. ಆ ಗುರುವು ಇವರಿಗೆ ಸಾಮಾನ್ಯವಾದ ಶಿಕ್ಷಣ ಮಾತ್ರ ನೀಡಿದರು. ಇದರಿಂದ ಕುಶಾ ಭಾವ್ ಗೆ ತೃಪ್ತಿಯಾಗಲಿಲ್ಲ. ಆದ್ದರಿಂದ ಇವರು ತಮ್ಮ ಗುರುಗಳಿಗೆ ಮಾರಣ, ಉಚ್ಚಾಟನ ಮತ್ತು ವಶೀಕರಣ ವಿದ್ಯೆಗಳನ್ನು ಬೋಧಿಸಬೇಕೆಂದು ಕೇಳಿಕೊಂಡರು. ಇವರ ಇಚ್ಚೆಯಂತೆ ಇವರ ಗುರುಗಳು ಇವರಿಗೆ ಆ ವಿದ್ಯೆಗಳನ್ನು ಹೇಳಿಕೊಟ್ಟರು. ಕುಶಾ ಭಾವ್ ರವರು ದುಷ್ಟಶಕ್ತಿಗಳೊಡನೆ ವ್ಯವಹರಿಸಬೇಕಾಗಿದ್ದರಿಂದ ಕೈಗಳಿಗೆ ಕಬ್ಬಿಣದ ಬಳೆಗಳನ್ನು ತೊಟ್ಟು ಮಂತ್ರಗಳನ್ನು ಹೇಳುತ್ತಿದ್ದರು. ಆ ಮಂತ್ರಗಳನ್ನು ಪುನರುಚ್ಚಾರ ಮಾಡಿ ಮಾಡಿ ಅದರಲ್ಲಿ ಪರಿಣತೆ ಪಡೆದು ಕೇವಲ ಮಂತ್ರ ಜಪದಿಂದ ಕುಳಿತಲ್ಲೇ ಸಿಹಿ ತಿಂಡಿಗಳನ್ನು ತರಿಸಬಲ್ಲ ಶಕ್ತಿಯನ್ನು ಪಡೆದಿದ್ದರು. ಅವರು ಸುಮ್ಮನೆ ಕೈಚಾಚಿದರೆ ಕೈ ತುಂಬಾ ಪೇಡ ಬರುವಂತೆ ಮಾಡುತ್ತಿದ್ದರು. ಅದನ್ನು ಜನಗಳಿಗೆ ತೋರಿಸಿ ಅದನ್ನು ಅವರುಗಳಿಗೆ ತಿನ್ನಲು ಕೊಡುತ್ತಿದ್ದರು. ಆದರೆ ಆ ಸಿಹಿಯನ್ನು ಅವರೇ ತಿನ್ನಲು ಆಗುತ್ತಿರಲಿಲ್ಲ. ಇವರು ದುಷ್ಟ ಶಕ್ತಿಗಳನ್ನು ಓಡಿಸುವ ಶಕ್ತಿಯನ್ನು ಪಡೆದಿದ್ದರು. ತಮ್ಮ 22 ನೇ ವಯಸ್ಸಿನ ಹೊತ್ತಿಗೆ ಇವರು ಈ ಎಲ್ಲಾ ಮಂತ್ರಶಕ್ತಿಯಲ್ಲಿ ಪರಿಣತಿಯನ್ನು ಪಡೆದಿದ್ದರು. ಆಗ ಇವರ ಗುರುಗಳು ಇವರನ್ನು ಬಿಟ್ಟು ಹಿಮಾಲಯಕ್ಕೆ ಹೋಗಿ ತಮ್ಮ ಕೊನೆಗಾಲದ ತನಕ ಅಲ್ಲಿಯೇ ಇದ್ದರು. ಕುಶಾ ಭಾವ್ ರವರು ಇವರ ಗುರುಗಳ ಜೊತೆಗೆ ದೆಹಲಿಯವರೆಗೆ ಬಂದು ಅವರನ್ನು ಬೀಳ್ಕೊಟ್ಟರು. ಗುರುಗಳು ಇವರನ್ನು ಬಿಟ್ಟು ಹೊರಡುವಾಗ ಇವರಿಗೆ ಶಿರಡಿಯ ಸಾಯಿಬಾಬಾರವರ ಬಳಿಗೆ ಹೋಗಿ ಅವರು ಹೇಳಿದಂತೆ ನಡೆಯುವಂತೆ ಆಜ್ಞಾಪಿಸಿ ಅದೃಶ್ಯರಾದರು.

ತಮ್ಮ ಗುರುಗಳ ಆಜ್ಞೆಯಂತೆ ಕುಶಾ ಭಾವ್ ರವರು 1908 ರಲ್ಲಿ ಶಿರಡಿಗೆ ಬಂದು ಸಾಯಿಬಾಬಾರವರನ್ನು ಭೇಟಿ ಮಾಡಿದರು. ಕುಶಾ ಭಾವ್ ಮಸೀದಿಯ ಬಳಿಗೆ ಬರುವಾಗಲೇ ಸಾಯಿಯವರಿಗೆ ವಿಷಯ ತಿಳಿದು ಇವರನ್ನು ಒಳಗೆ ಬರಲು ಬಿಡಲಿಲ್ಲ. ಸಾಯಿಯವರು ಕುಶಾ ಭಾವ್ ರವರಿಗೆ ಅವರು ತೊಟ್ಟಿದ್ದ ಕಬ್ಬಿಣದ ಬಳೆಗಳನ್ನು ಎಸೆಯುವಂತೆ ಮತ್ತು ಅವರು ಕಲಿತ ವಿದ್ಯೆಯಿಂದ ಸಿಹಿ ತಿಂಡಿಗಳನ್ನು ತರಿಸುವ ವಿದ್ಯೆಗಳನ್ನು ಬಿಟ್ಟರೆ ಮಾತ್ರ ಮಸೀದಿಯ ಒಳಗಡೆ ಬಿಡುವುದಾಗಿ ತಿಳಿಸಿದರು. ಸಾಯಿಯವರ ಆಜ್ಞೆಯಂತೆ ಕುಶಾ ಭಾವ್ ರವರು ಕಬ್ಬಿಣದ ಬಳೆಗಳನ್ನು ಮುರಿದು ಹಾಕಿ ಬಿಸಾಡಿದರು. ಆಗ ಇವರು ಭಿಕ್ಷೆ ಬೇಡಿ ಜೀವನ ಮಾಡಲು ಶುರು ಮಾಡಿದರು. ಸಾಯಿಬಾಬಾರವರು ಇವರಿಗೆ ಮಸೀದಿಯ ಕೊನೆಯಲ್ಲಿ ಕುಳಿತು ರಾಮದಾಸ ಸ್ವಾಮಿ ಅವರು ರಚಿಸಿದ್ದ "ದಾಸಭೋಧ  " ಎಂಬ ಗ್ರಂಥವನ್ನು ಪಾರಾಯಣ ಮಾಡಲು ಹೇಳಿದರು. ರಾತ್ರಿಯ ವೇಳೆ ಎಲ್ಲಿ ಸ್ಥಳ ಸಿಕ್ಕರೆ ಅಲ್ಲಿ ಮಲಗುತ್ತಿದ್ದರು. ಬಾಬಾರವರು ಇವರಿಗೆ ಯಾವುದೇ ಉಪದೇಶವನ್ನಾಗಲಿ ಅಥವಾ ಮಂತ್ರವನ್ನಾಗಲಿ ನೀಡಲಿಲ್ಲ. ಕುಶಾ ಭಾವ್ ಸಾಯಿಯವರ ಬಳಿಗೆ ಬಂದಾಗ ಸಾಯಿಬಾಬಾರವರ ಬಳಿ ಹೆಚ್ಚಿಗೆ ಭಕ್ತರು ಬರುತ್ತಿರಲಿಲ್ಲ. ಸಾಯಿಯವರು ದಕ್ಷಿಣೆಯನ್ನು ಕೂಡ ಆಗ ಕೇಳುತ್ತಿರಲಿಲ್ಲ. ಆದರೆ ಕೆಲವರಿಂದ ಸ್ವಲ್ಪ ಹಣವನ್ನು ಧುನಿಯ ಕಟ್ಟಿಗೆಗೊಸ್ಕರ ತೆಗೆದುಕೊಳ್ಳುತ್ತಿದ್ದರು. ಸಾಯಿಯವರು ಇವರಿಗೆ ಸದಾಕಾಲ 3 ತಲೆಯ ಮನುಷ್ಯನನ್ನು ನೋಡು ಎನ್ನುತ್ತಿದ್ದರು. ಅಂದರೆ ಗಾಣಗಾಪುರದ ದತ್ತಾತ್ರೇಯರ ದರ್ಶನ ಮಾಡುವಂತೆ ಹೇಳುತ್ತಿದ್ದರು. ಸಾಯಿಯವರ ಆಜ್ಞೆಯಂತೆ ಇವರು ಪ್ರತಿವರ್ಷ 2 ಬಾರಿ ಗಾಣಗಾಪುರಕ್ಕೆ ಹೋಗಿ ದತ್ತನ ದರ್ಶನ ಮಾಡುತ್ತಿದ್ದರು. ಪ್ರತಿವರ್ಷ ಗುರು ಪೌರ್ಣಮಿ ಮತ್ತು ಮಾಘ ಮಾಸದ ಪೌರ್ಣಮಿ ಯಂದು ತಪ್ಪದೆ ಗಾಣಗಾಪುರ ದರ್ಶನ ಮಾಡುತ್ತಿದ್ದರು. ಬಾಬಾರವರು ಒಮ್ಮೆ ಇವರಿಗೆ ಗುರುಚರಿತ್ರೆಯನ್ನು 108 ಸಲ ಪಾರಾಯಣ ಮಾಡುವಂತೆ ಮತ್ತು ಒಂದೊಂದು ಪಾರಯನವು 3 ದಿನಗಳಲ್ಲಿ ಮುಗಿಸುವಂತೆ ಆಜ್ಞಾಪಿಸಿದರು. ಸಾಯಿಯವರ ಆಜ್ಞೆಯಂತೆ ಕುಶಾ ಭಾವ್ ರವರು ಗಾಣಗಾಪುರಕ್ಕೆ ತೆರಳಿ ಅಲ್ಲಿ 11 ತಿಂಗಳು ತಂಗಿದ್ದು ಗುರುಚರಿತ್ರೆಯನ್ನು 108 ಸಲ ಪಾರಾಯಣ ಮಾಡಿದರು.

ಕುಶಾ ಭಾವ್ ರವರು ತಮ್ಮ ಮಂತ್ರ ಶಕ್ತಿಯನ್ನು ಬಳಸಲು ಸಾಯಿಬಾಬಾರವರು ಬಿಡಲಿಲ್ಲ. ಸಾಯಿಯವರ ಆಜ್ಞೆಯಂತೆ ಕುಶಾ ಭಾವ್ ರವರು ತಮ್ಮ ಮಂತ್ರ ಶಕ್ತಿಯನ್ನು ಬಳಸುತ್ತಿರಲಿಲ್ಲ.

ಒಮ್ಮೆ ಏಕಾದಶಿಯ ದಿನದಂದು ಸಾಯಿಬಾಬಾರವರು ಕುಶಾ ಭಾವ್ ರವರನ್ನು "ಈ ದಿನ ಏನನ್ನು ತಿಂದೆ" ಎಂದು ಕೇಳಿದರು. ಅದಕ್ಕೆ ಕುಶಾ ಭಾವ್ ರವರು ಈ ದಿನ ಏಕಾದಶಿಯಾದ್ದರಿಂದ ಏನನ್ನು ತಿನ್ನಲಿಲ್ಲ ಎಂದರು. ಆಗ ಬಾಬಾರವರು ಏಕಾದಶಿ ಎಂದರೇನು ಎಂದು ಕೇಳಿದರು. ಕುಶಾಭಾವ್ ರವರು ಏಕಾದಶಿಯೆಂದರೆ ಉಪವಾಸ ಮಾಡುವುದು ಎಂದು ಹೇಳಿದರು. ಪುನಃ ಬಾಬಾರವರು ಉಪವಾಸ ಎಂದರೇನು ಎಂದು ಕೇಳಿದರು. ಅದಕ್ಕೆ ಇವರು ರೋಜಾ ಎಂದು ಉತ್ತರಿಸಿದರು. ಸಾಯಿಯವರು ಪುನಃ ರೋಜಾ ಎಂದರೆ ಏನು ಎಂದು ಕೇಳಿದರು. ಅದಕ್ಕೆ ಕುಶಾಭಾವ್ ರವರು ಗೆಡ್ಡೆ ಗೆಣಸುಗಳನ್ನು ಬಿಟ್ಟು ಬೇರೆ ಎನನ್ನು ಆ ದಿನ ತಿನ್ನಬಾರದು ಎಂದು ಹೇಳಿದರು. ಆಗ ಬಾಬಾರವರು ಅಲ್ಲಿಯೇ ಇದ್ದ ಈರುಳ್ಳಿಯನ್ನು ಇವರಿಗೆ ಕೊಟ್ಟು ತಿನ್ನಲು ಹೇಳಿದರು. ಕುಶಾಭಾವ್ ರವರು "ಬಾಬಾ ನೀವು ತಿಂದರೆ ನಾನು ತಿನ್ನುತ್ತೇನೆ" ಎಂದರು. ಬಾಬಾರವರು ಸ್ವಲ್ಪ ತಿಂದರು. ಆಗ ಕುಶಾಭಾವ್ ರವರು ಸಹ ತಿಂದರು. ಆಗ ಅಲ್ಲಿ ನೆರೆದಿದ್ದ ಭಕ್ತರಿಗೆ ಸಾಯಿಬಾಬಾರವರು "ಈ ಬ್ರಾಹ್ಮಣನನ್ನು ನೋಡಿ. ಇವನು ಏಕಾದಶಿಯ ದಿನ ಈರುಳ್ಳಿ ತಿನ್ನುತ್ತಿದ್ದಾನೆ" ಎಂದು ಹೇಳಿದರು. ಆಗ ಕುಶಾಭಾವ್ ರವರು "ಬಾಬಾರವರು ತಿಂದರು. ಅದಕ್ಕೆ ನಾನು ಸಹ ತಿಂದೆ" ಎಂದರು. ಆಗ ಬಾಬಾರವರು "ಇಲ್ಲ, ನಾನು ಏನು ತಿಂದಿದ್ದೇನೆ ನೋಡು" ಎಂದು ವಾಂತಿ ಮಾಡಿಕೊಂಡರು ಮತ್ತು ಅದರಲ್ಲಿ ಆಲೂಗೆಡ್ಡೆ ಇತ್ತು. ಕುಶಾಭಾವ್ ರವರಿಗೆ ಇದನ್ನು ನೋಡಿ ಅಚ್ಚರಿಯಾಯಿತು ಮತ್ತು ಇದನ್ನೇ ಸದಾವಕಾಶ ಎಂದು ತಿಳಿದುಕೊಂಡು ಆ ಆಲೂಗೆಡ್ಡೆಯನ್ನು ತೆಗೆದುಕೊಂಡು ನುಂಗಿದರು. ಬಾಬಾರವರು ಇವರನ್ನು ತೆಗಳಿ, ಹೊಡೆದು ಬಯ್ದರು. ಆದರೆ ಕುಶಾಭಾವ್ ಏನು ಉತ್ತರ ನೀಡಲಿಲ್ಲ. ಕೂಡಲೇ ಬಾಬಾರವರು ತಮ್ಮ ಮನಸ್ಸನ್ನು ಬದಲಾಯಿಸಿ ಕುಶಾಭಾವ್ ರವರಿಗೆ ಉಧಿಯನ್ನು ಉತ್ಪಾದಿಸುವ ಶಕ್ತಿಯನ್ನು ವರವಾಗಿ ನೀಡಿದರು. "ನೀನು ನನ್ನನ್ನು ಸ್ಮರಿಸಿ ಕೈಗಳನ್ನು ಹಿಡಿದರೆ ಶಿರಡಿಯ ಧುನಿ ಮಾತೆಯ ಉಧಿ ನಿನ್ನ ಕೈಗೆ ಬರುತ್ತದೆ. ಅದನ್ನು ಧಾರಾಳವಾಗಿ ಜನರಿಗೆ ಕೊಡು. ಮತ್ತು ಅದರಿಂದ ಜನರುಗಳಿಗೆ ಉಪಕಾರವಾಗಿ ನಿನಗೆ ಪುಣ್ಯ ಬರುತ್ತದೆ" ಎಂದು ತಿಳಿಸಿದರು. ತಮ್ಮ ಈ ಶಕ್ತಿಯಿಂದ ಕುಶಾಭಾವ್ ಅನೇಕ ಜನರ ರೋಗಗಳನ್ನು ಗುಣಪಡಿಸಿದರು.

ಒಮ್ಮೆ ಬಾಬಾರವರು ಕುಶಾಭಾವ್ ರವರಿಗೆ "ಮುಂದಿನ ಸಾರಿ ನೀನು ಬರುವಾಗ ಇಬ್ಬರು ಬನ್ನಿ" ಎಂದರು. ಕುಶಾಭಾವ್ ರವರ ತಂದೆಯವರು ಆ ಸಮಯದಲ್ಲಿ ಅಲ್ಲೇ ಇದ್ದರು ಮತ್ತು ಬಾಬಾರವರ ಮಾತಿನ ಅರ್ಥ ಕುಶಾಭಾವ್ ರವರು ಮದುವೆ ಮಾಡಿಕೊಂಡು ಬರಬೇಕೆಂದು ಇತ್ತು ಎಂದು ಹೇಳಿದ್ದಾರೆ. ಸ್ವಲ್ಪ ದಿನಗಳಲ್ಲೇ ಸಾಯಿಯವರು ನುಡಿದಂತೆ ಕುಶಾಭಾವ್ ರವರು ಮದುವೆಯಾದರು. ಆಗ ಅವರು ಶಿರಡಿಗೆ ಪತ್ನಿ ಸಮೇತ ಹೋಗಿ ಬಂದರು. ಅವರಿಗೆ ಮಕ್ಕಳು, ಮೊಮ್ಮಕ್ಕಳು ಕೂಡ ಹುಟ್ಟಿದರು.

ಒಮ್ಮೆ ಬಾಬಾರವರು "ನೀನು ನನ್ನನ್ನು ನೋಡಲು ಇಷ್ಟು ದೂರ ಏಕೆ ಬರುತ್ತೀಯ. ನಾನು ಅಲ್ಲಿಯೇ ಇದ್ದೇನೆ" ಎಂದರು. ಕುಶಾಭಾವ್ ರವರಿಗೆ ಅರ್ಥವಾಗಲಿಲ್ಲ. ಆಗ ಬಾಬಾರವರು ಮೀರಜ್ ಗಾವ್ ನಲ್ಲಿ ಒಂದು ಜಾಗದಲ್ಲಿ ಅಲ್ಲಿನ ಒಂದು ತರಹ ಹಣ್ಣಿನ ಗಿಡವನ್ನು ಕಿತ್ತರೆ ಅಲ್ಲಿ ಒಂದು ಸಮಾಧಿ ಇರುವುದಾಗಿ ಮತ್ತು ಅದನ್ನು ಪೂಜಿಸಲು ಅಜ್ಞಾಪಿಸಿದರು. ಅದರಂತೆ ಕುಶಾಭಾವ್ ರವರು ಆ ಸಮಾಧಿಯನ್ನು ಪೂಜಿಸಲು ಆರಂಭಿಸಿದರು. ಅಲ್ಲಿ ಅವರು ಬಾಬಾರವರ ದರ್ಶನ ಪಡೆದರು. ಒಮ್ಮೆ ದತ್ತ ಜಯಂತಿಯ ದಿನ ಬಾಬಾರವರು ಇವರಿಗೆ ದರ್ಶನ ನೀಡಿದರು. ಅಂದಿನಿಂದ "ದತ್ತ ಜಯಂತಿ" ಯ ದಿನ ಸಾಯಿಯವರು ಇಲ್ಲಿ ದರ್ಶನ ನೀಡುತ್ತಾರೆ. ಈ ಸ್ಥಳವನ್ನು "ದತ್ತ ಬಾಬಾ ಸಮಾಧಿ" ಎಂದು ಕರೆಯುತ್ತಾರೆ. ಅಲ್ಲಿ ಫಕೀರ್ ಶಾ ಎಂಬ ಸಂತರು ಸುಮಾರು 200 ವರ್ಷಗಳು ವಾಸ ಮಾಡಿರುತ್ತಾರೆ. ಇದೇ ಸ್ಥಳದ ಬಳಿ ಅವರ ಗೋರಿ ಇದೆ. ಈ ಫಕೀರ್ ಶಾ ಅಥವಾ ದತ್ತ ಅವರು ಆಗಾಗೆ ಸಾಯಿಬಾಬಾರವರ ಬಗ್ಗೆ ಮಾತನಾಡುತ್ತಿದ್ದರು. ಜನಗಳು ಅವರನ್ನು ವರ್ಷಕ್ಕೊಮ್ಮೆ ಭೇಟಿ ಮಾಡಲು ಬರುತ್ತಿದ್ದರು. ಫಕೀರ್ ಶಾ ರವರು ಯಾರಿಗೂ ಯಾವ ಉಪದೇಶಗಳನ್ನು ನೀಡುತ್ತಿರಲಿಲ್ಲ. ಅವರನ್ನು ನೋಡಿದರೆ ಸಾಕು, ಜನಗಳಿಗೆ ಒಂದು ರೀತಿಯ ವಿಶ್ವಾಸ ಉಂಟಾಗುತ್ತಿತ್ತು. ಭಕ್ತರು ಅವರನ್ನು ಪೂಜಿಸುತ್ತಿದ್ದರು ಮತ್ತು ಅವರು ಸಾಯಿಬಾಬಾರವರು ಜೀವಂತವಾಗಿದ್ದಾರೆ ಎಂದು ಯಾವಾಗಲೂ ಹೇಳುತ್ತಿದ್ದರು. ಆದರೆ ಯಾವ ಅವತಾರವಾಗಿ ಎಂದು ತಿಳಿಸಲಿಲ್ಲ. ಫಕೀರ್ ಶಾ ರವರು ತಾವು ಮತ್ತು ಬಾಬಾರವರು ಒಂದೇ ಮಾರ್ಗದ ಸಂಬಂಧಿಗಳು ಎಂದು ಹೇಳಿದ್ದಾರೆ.

ಸಾಯಿಯವರು ಕುಶಾಭಾವ್ ರವರನ್ನು ಓರ್ವ ದತ್ತಾತ್ರೇಯ ಮಹಾರಾಜರಿಂದ ಸ್ವೀಕರಿಸಿ ಮತ್ತೋರ್ವ ದತ್ತ ಫಕೀರ್ ಬಾಬಾ ವಶಕ್ಕೆ ಒಪ್ಪಿಸಿದರು. ಕುಶಾಭಾವ್ ರವರು ಸ್ವಲ್ಪ ವರ್ಷಗಳಲ್ಲೇ ಗತಿಸಿದರು. ಅವರ ಗೋರಿ ಶಿವಾಜಿ ಬೆಟ್ಟದ ಹತ್ತಿರ ಇದೆ. ಈಗಲೂ ಕೂಡ ಅವರ ಭಕ್ತರು ಅವರನ್ನು ಪೂಜಿಸುತ್ತಿದ್ದಾರೆ.

Tuesday, September 28, 2010

ಸಾಯಿ ಮಹಾಭಕ್ತ - ಶ್ರೀ ನಾರಾಯಣ ಆಶ್ರಮ ವಾಯಿ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ

ನಾರಾಯಣ ಆಶ್ರಮ ವಾಯಿಯವರು ಆಧ್ಯಾತ್ಮಿಕ ಮಾರ್ಗಕ್ಕೆ ಬಂದ ವಿಷಯ ಬಹಳ ಆಶ್ಚರ್ಯಕರವಾಗಿದೆ. ಇವರು 1910 ರಿಂದ 1926 ರ ವರೆಗೆ ಟೋಸರ್ ಕಸ್ಟಮ್ಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆನಂತರ ನಿವೃತ್ತರಾಗಿ ಪಿಂಚಣಿ ಪಡೆಯತೊಡಗಿದರು. 1910 ರಲ್ಲಿ ಇವರಿಗೆ ದಾಸಗಣುರವರ ಕೀರ್ತನೆ ಕೇಳುವ ಅವಕಾಶ ದೊರೆಯಿತು. ಆಗ ದಾಸಗಣು ತಮ್ಮ ಕೀರ್ತನೆಯ ಸಮಯದಲ್ಲಿ ಸಾಯಿಬಾಬಾರವರನ್ನು ಕೊಂಡಾಡುತ್ತಾ ಹರಿಕಥೆ ಮಾಡುತ್ತಿದ್ದುದನ್ನು ಗಮನಿಸಿದ ನಾರಾಯಣ ಆಶ್ರಮವರರು ಪ್ರೇರೇಪಿತರಾಗಿ ಕೀರ್ತನೆ ಮುಗಿದ ನಂತರ ಅವರ ಬಳಿಗೆ ಹೋಗಿ ಸಾಯಿಬಾಬಾರವರ ಬಗ್ಗೆ ವಿಚಾರಿಸಿದಾಗ ದಾಸಗಣುರವರು ಸಾಯಿಬಾಬಾ ಶಿರಡಿಯಲ್ಲಿ ಇರುವುದಾಗಿ ತಿಳಿಸಿದರು. ಈ ವಿಷಯ ತಿಳಿದ 5 ದಿನಗಳಲ್ಲೇ ನಾರಾಯಣ ಆಶ್ರಮರವರು ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಪಡೆದರು. ಅವರಿಗೆ ಸಾಯಿಯವರ ಮೇಲೆ ಎಷ್ಟು ಪ್ರೀತಿ ಹುಟ್ಟಿತೆಂದರೆ ಕೇವಲ 6 ತಿಂಗಳಿನಲ್ಲಿ 9 ಬಾರಿ ಸಾಯಿಬಾಬಾರವರ ದರ್ಶನ ಪಡೆದರು. ಆನಂತರವೂ ಆಗಾಗ್ಗೆ ಶಿರಡಿಗೆ ತೆರಳಿ ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದರು. ಆದರೆ ಅವರ ಮೊದಲನೇ ಭೇಟಿ ಅವಿಸ್ಮರಣೀಯವಾಗಿತ್ತು. ಇದಾದ ಮೇಲೆ 1918 ತನಕವೂ ಕೂಡ ಅವರು ಸಾಯಿಬಾಬಾರವರ ಪ್ರಭಾವಕ್ಕೆ ಒಳಗಾಗಿದ್ದರು. ಸಾಯಿಬಾಬಾರವರ ಮಹಾಸಮಾಧಿಯ ನಂತರ ನಾರಾಯಣ ಆಶ್ರಮರವರು ನಾಂದೇಡ್ ಹತ್ತಿರ ನರ್ಮದ ನದಿಯ ತೀರದಲ್ಲಿದ್ದ ಗುರಡೇಶ್ವರದ ವಾಸುದೇವಾನಂದ ಸರಸ್ವತಿ ಅವರ ಆಶ್ರಮಕ್ಕೆ ತೆರಳಿದರು. ವಾಸುದೇವಾನಂದ ಸರಸ್ವತಿಯವರು 1915 ರಲ್ಲಿ ಸಮಾಧಿ ಹೊಂದಿದರು. ನಾರಾಯಣ ಆಶ್ರಮರವರು ಸಾಯಿಯವರೇ ತಮ್ಮನ್ನು ವಾಸುದೇವಾನಂದ ಸರಸ್ವತಿಯವರ ಆಶ್ರಮಕ್ಕೆ ಕಳುಹಿಸಿರುತ್ತಾರೆ ಮತ್ತು ಅವರ ಅಧೀನಕ್ಕೆ ತಮ್ಮನ್ನು ಬಿಟ್ಟಿದ್ದಾರೆ ಎಂದು ಬಲವಾಗಿ ನಂಬಿದ್ದರು. 1931 ರಲ್ಲಿ ನಾರಾಯಣ ಆಶ್ರಮರವರು ಕಾಶಿಯ ವೇದಾಶ್ರಮ ಸ್ವಾಮಿ (ತಾರಕ ಮಠ ಮತ್ತು ದುರ್ಗಾ ಘಟ್ಟ) ಬಳಿಗೆ ತೆರಳಿ ಅವರಿಂದ ಸನ್ಯಾಸ ದೀಕ್ಷೆ ಪಡೆದರು.

ನಾರಾಯಣ ಆಶ್ರಮರವರು ಸಾಯಿಬಾಬಾರವರ ಬಗ್ಗೆ ಕೆಲವು ಸಂಗತಿಗಳನ್ನು ಈ ಕೆಳಕಂಡಂತೆ ವಿವರಿಸಿದ್ದಾರೆ.

ನಾರಾಯಣ ಆಶ್ರಮರವರ ಪ್ರಕಾರ ಸಾಯಿಯವರು ಬೇರೆ ಬೇರೆ ಭಕ್ತರ ಬಳಿ ಬೇರೆ ಬೇರೆ ರೀತಿ ವ್ಯವಹರಿಸುತ್ತಿದ್ದರು. ಅನೇಕ ಭಕ್ತರು ತಮ್ಮ ಲೌಕಿಕ ಕಾರ್ಯಗಳಿಗಾಗಿ ಮಾತ್ರ ಸಾಯಿಯವರ ಬಳಿ ಬರುತ್ತಿದ್ದರು. ಹರಿ ಸೀತಾರಾಮ್ ದೀಕ್ಷಿತ್, ಚಂದೋರ್ಕರ್ ಮತ್ತು ಧಾಬೋಲ್ಕರ್ ರವರುಗಳು ಸಾಯಿಯವರಿಗೆ ಅತ್ಯಂತ ನಿಕಟವರ್ತಿಗಳಾಗಿದ್ದರು. ಅವರ ಭಕ್ತರ ಅಭಿವೃದ್ದಿಗೆ ಅವರ ನಿಕಟ ಸಂಬಂಧ ಬೇಕಾಗಿರಲಿಲ್ಲ. ಅವರ ಪ್ರಭಾವ ಎಲ್ಲೆಡೆಯಲ್ಲಿ ಇತ್ತು. ಅವರ ಉಪದೇಶಗಳು ಬೇರೆ ಬೇರೆ ರೀತಿಯಾಗಿರುತ್ತಿತ್ತು. ನಾರಾಯಣ ಆಶ್ರಮರವರಿಗೂ ಕೂಡ ಇದೇ ರೀತಿಯ ಅನುಭವವಾಯಿತು. ಸಾಯಿಬಾಬಾರವರ ಕೃಪೆಯಿಂದ ಯಾವ ಮಾತನ್ನು ಆಡದೇ ಅಥವಾ ಅವರನ್ನು ಸ್ಪರ್ಶಿಸದೆ ಅನೇಕ ಆತ್ಮಗಳ ವ್ಯತ್ಯಾಸದ ಅರಿವನ್ನು ಮತ್ತು ಆ ವ್ಯತ್ಯಾಸಗಳು ನಿಜವಲ್ಲವೆಂದು ದೇವತ್ವವೇ ನಿಜವೆಂದು ನಾರಾಯಣ ಅಶ್ರಮರವರಿಗೆ ತಿಳಿಸಿದರು. ಶ್ರೀ ನಾರಾಯಣ ಅಶ್ರಮರವರು ತಮ್ಮ ಈ ಅನುಭವಗಳನ್ನು ದೀಕ್ಷಿತ್ ರವರಿಗಾಗಲಿ ಅಥವಾ ಧಾಬೋಲ್ಕರ್ ರವರಿಗಾಗಲಿ ತಿಳಿಸಲಿಲ್ಲ. ಆದರೆ ದೀಕ್ಷಿತ್ ರವರು ಸಾಯಿಲೀಲಾ ಮಾಸಪತ್ರಿಕೆಯಲ್ಲಿ ಭಕ್ತರ ಅನುಭವಗಳು ಎಂಬ ಶೀರ್ಷಿಕೆಯಲ್ಲಿ ಈ ಅನುಭವವನ್ನು ಬರೆದಿದ್ದಾರೆ ಮತ್ತು ಧಾಬೋಲ್ಕರ್ ರವರು ಕೂಡ ಸಾಯಿ ಸಚ್ಚರಿತೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಬಾಬಾರವರು ನಾರಾಯಣ ಅಶ್ರಮರವರಿಗೆ ಕೆಲವೇ ಕೆಲವು ವಿಷಯಗಳನ್ನು, ಉಪದೇಶಗಳನ್ನು ನೀಡಿದ್ದರು. ಅವು ನೇರವಾಗಿ ಮತ್ತು ಸರಳವಾಗಿ ಇದ್ದಿತು. ಸಾಯಿಯವರು ಎಲ್ಲಾ ಭಕ್ತರು ಒಂದೇ ಗುರುವಿಗೆ ಸೇರಿದವರು ಎಂದು ಹೇಳುತ್ತಿದ್ದರು ಎಂದು ನಾರಾಯಣ ಆಶ್ರಮ ಹೇಳುತ್ತಾರೆ.

ನಾರಾಯಣ ಆಶ್ರಮ ಮತ್ತು ಅವರ ತಂದೆಯವರು ಮಾರುತಿಯ ಆರಾಧಕರಾಗಿ 1918 ರಲ್ಲಿ ವಿಲೇಪಾರ್ಲೆಯಲ್ಲಿ ಹನುಮಾನ್ ರಸ್ತೆಯಲ್ಲಿ ಮಾರುತಿ ಮಂದಿರವನ್ನು ಕಟ್ಟಿ ಬಾಬಾರವರನ್ನು ಹನುಮಾನ್ ಎಂದು ಜ್ಞಾಪಿಸಿಕೊಂಡು ಆ ದೇವರನ್ನು "ಸಾಯಿ ಮಾರುತಿ" ಎಂದು ಕರೆದರು. ಆ ದಿವಸವೇ ವಿಲೇಪಾರ್ಲೆಯಲ್ಲಿ ಸಾಯಿ ಹನುಮಾನ್ ದೇವಸ್ಥಾನದ ಕುಂಭಾಭಿಷೇಕವಾಯಿತು. ಬಾಬಾರವರು ಬ್ರಾಹ್ಮಣ ಕುಲಕ್ಕೆ ಸೇರಿದ ವಾಜೆ ಎಂಬುವರನ್ನು ಕರೆದು 25 ರುಪಾಯಿಗಳನ್ನು ಕೊಟ್ಟು ಸತ್ಯನಾರಾಯಣ ಪೂಜೆ ಮಾಡಲು ಹೇಳಿದರು. ನಾರಾಯಣ ಆಶ್ರಮರವರು ಈ ಘಟನೆಯನ್ನು ಕಾರಣ-ಪರಿಣಾಮ ಎಂದು ಅರ್ಥೈಸಿದ್ದಾರೆ. ಸಾಯಿಯವರು ನಾರಾಯಣ ಅಶ್ರಮರವರಿಗೆ ಸನ್ಯಾಸದ ಅಗತ್ಯವಿಲ್ಲ ಎಂದು ಹೇಳಿದ್ದಾರೆನ್ನಲಾಗಿದೆ. ಆದರೆ ನಾರಾಯಣ ಆಶ್ರಮರವರೆ ತಮ್ಮ ಸ್ವಂತ ಇಚ್ಚೆಯಿಂದ ಸನ್ಯಾಸ ಸ್ವೀಕರಿಸಿದರೆನ್ನಲಾಗಿದೆ.

ನಾರಾಯಣ ಆಶ್ರಮ ರವರು ತಮ್ಮ ಅನುಭವಗಳಿಂದ ನಮಗೆಲ್ಲ ಸಾಯಿಬಾಬಾರವರು "ಸಚ್ಚಿದಾನಂದ" ಸ್ವರೂಪರೆಂದು ಮನಗಾಣುವಂತೆ ಮಾಡಿದ್ದಾರೆ. ಶ್ರೀ ನಾರಾಯಣ ಆಶ್ರಮ ಪತ್ನಿ ಮತ್ತು ಮಾತೆಯವರೊಡನೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಕೂಡ ಸನ್ಯಾಸದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಸದಾ ಪಾರಮಾರ್ಥಿಕ ವಿಷಯಗಳ ಕಡೆ ತಮ್ಮ ಗಮನವನ್ನು ಹರಿಸುತ್ತಾ ಸಾಯಿ ಭಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಸುಶ್ರಾವ್ಯವಾದ ಕಂಠದಿಂದ ಸಾಯಿ ಭಜನೆಗಳನ್ನು ಮಾಡುತ್ತಿದ್ದರು. 1952 ರಲ್ಲಿ ನಡೆದ ಅಖಿಲ ಭಾರತ ಸಾಯಿಭಕ್ತರ ಸಮ್ಮೇಳನದಲ್ಲೂ ಕೂಡ ಸಾಯಿಬಾಬಾರವರ ಕೀರ್ತನೆಗಳನ್ನು ಹಾಡಿದರು.
ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀ ಸಾಯಿಬಾಬಾ ಆಂಗ್ಲ ಮಾಧ್ಯಮ ಶಾಲೆ - 28ನೇ ಸೆಪ್ಟೆಂಬರ್ 2010 ಕೃಪೆ: ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ

ಶ್ರೀ ಸಾಯಿಬಾಬಾ ಆಂಗ್ಲ ಮಾಧ್ಯಮ ಶಾಲೆಯ ಬಾಲಕರು ಇತ್ತೀಚಿಗೆ ಜಿಲ್ಲಾ ಮಟ್ಟದಲ್ಲಿ ನಡೆದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರು. ವಿಜಯಿ ತಂಡದೊಂದಿಗೆ ಉಪಸ್ಥಿತರಿರುವ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ ಮೊರೆ, ಸಾಯಿಬಾಬಾ ಆಂಗ್ಲ ಮಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ.ಜಹೀದ ಇನಾಂದಾರ್, ಬಾಲಕಿಯರ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ.ನೀತ ಚಾವನ್ಕೆ, ಕ್ರೀಡಾ ಅಧ್ಯಾಪಕರಾದ ಶ್ರೀ.ರಾಜೇಂದ್ರ ಕೊಹೊಕಡೆ, ಶ್ರೀ.ಪ್ರಭಾಕರ್ ನಗರೆ ಮತ್ತು ವಿಜಯಿ ತಂಡದ ಮಕ್ಕಳು.


ಜಿಲ್ಲಾ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಜಯಗಳಿಸಿದ ಸಾಯಿಬಾಬಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳೊಂದಿಗೆ ಗಣ್ಯರು

Saturday, September 25, 2010

ರಾಯಲ್ ಆಲ್ಬರ್ಟ್ ಹಾಲ್ , ಲಂಡನ್ ನಲ್ಲಿ 19ನೇ ಸೆಪ್ಟೆಂಬರ್ 2010 ರಂದು ನಡೆದ ಸಾಯಿ ಭಕ್ತ ಸಮ್ಮೇಳನ - ಕೃಪೆ-ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ. 

ಇದೇ ಮೊದಲ ಬಾರಿಗೆ ಲಂಡನ್ ನ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನವು 19ನೇ ಸೆಪ್ಟೆಂಬರ್ 2010, ಭಾನುವಾರದಂದು ಸಾಯಿ ಭಕ್ತ ಸಮ್ಮೇಳನವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ, ಶ್ರೀ.ವಿಶ್ವನಾಥ್ ಕೃಷ್ಣಚಂದ್ರ ಪಾಂಡೆ, ಶ್ರೀ.ಶೈಲೇಶ್ ಕುಟೆ, ಕ್ಯಾಪ್ಟೆನ್ ಸುರೇಶ ವಾಸುದೇವ, ಪ್ರಸಿದ್ದ ಸಾಯಿ ಭಜನ ಗಾಯಕರಾದ "ಭಜನ ಸಾಮ್ರಾಟ್" ಶ್ರೀ.ಅನುಪ್ ಜಲೋಟ ಮತ್ತು ಶ್ರೀಮತಿ.ಅನುಪ್ ಜಲೋಟ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಶುಭ ಸಂದರ್ಭದಲ್ಲಿ ಶ್ರೀ.ಅನುಪ್ ಜಲೋಟರವರು ತಮ್ಮ ಸುಮಧುರ ಸಾಯಿ ಭಜನೆಗಳಿಂದ ಸಾಯಿಭಕ್ತರನ್ನು ಮೈಮರೆಯುವಂತೆ ಮಾಡಿದರು.


ರಾಯಲ್ ಆಲ್ಬರ್ಟ್ ಹಾಲ್ ನ ಹೊರನೋಟ


ಭಜನ ಸಂಧ್ಯಾ ಕಾರ್ಯಕ್ರಮ ನಡೆಸಿಕೊಡುತ್ತಿರುವ ಶ್ರೀ.ಅನುಪ್ ಜಲೋಟ

ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ನರೆದಿರುವ ಸಾವಿರಾರು ಸಾಯಿ ಭಕ್ತರು

ಸಾಯಿ ಭಕ್ತ ಸಮ್ಮೇಳನದಲ್ಲಿ ಪಾಲ್ಗೊಂಡ ಗಣ್ಯರು

ಶ್ರೀ ಜಯಂತ್ ಸಾಸನೆಯವರು ಶ್ರೀಮತಿ ಮತ್ತು ಶ್ರೀ.ಅನುಪ್ ಜಲೋಟ ರವರನ್ನು ಸನ್ಮಾನಿಸುತ್ತಿರುವುದು

Thursday, September 23, 2010

ಸಾಯಿ ಮಹಾಭಕ್ತ - ಪ್ರೊ.ಜಿ.ಜಿ.ನಾರ್ಕೆ - ಆಧಾರ - ಪೂಜ್ಯ ಶ್ರೀ. ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 

ಪ್ರೊ.ಜಿ.ಜಿ.ನಾರ್ಕೆ

ಪ್ರೊ.ಜಿ.ಜಿ.ನಾರ್ಕೆಯವರು ಭೂವಿಜ್ಞಾನ ಮತ್ತು ರಾಸಾಯನಿಕ ಶಾಸ್ತ್ರಜ್ಞರಾಗಿದ್ದರು. ಸಾಯಿಬಾಬಾರವರ ನೇರ ಸಂಪರ್ಕ ಪಡೆದ ಮತ್ತು ಸಾಯಿಬಾಬಾ ಸಂಸ್ಥಾನಕ್ಕೆ ಒಳ್ಳೆಯ ಸೇವೆ ಸಲ್ಲಿಸಿದ ಪ್ರಸಿದ್ದ ಸಾಯಿಭಕ್ತರಲ್ಲಿ ಒಬ್ಬರಾಗಿದ್ದರು. ಇವರು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟೀ ಆಗಿ ಬಹಳ ದಿನ ಸೇವೆ ಸಲ್ಲಿಸಿದರು. ಅತ್ಯಂತ ವಿದ್ಯಾವಂತರಾದ ಇವರು ಸಾಯಿ ಭಕ್ತರಲ್ಲಿ ಒಂದು ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇವರು ಸಾಯಿಬಾಬಾರವರಿಂದ ಅನೇಕ ಅನುಕೂಲತೆಗಳನ್ನು ಪಡೆದರು. ಇವರು ಸಾಯಿಬಾಬಾರವರ ಬಳಿ ಬರಲು ಕಾರಣ ಇವರ ಪತ್ನಿ, ಮಾವ ಹಾಗೂ ಇವರ ತಾಯಿ. ಇವರ ಮಾವನವರು ನಾಗಪುರದ ಲಕ್ಷಾಧೀಶರಾದ ಶ್ರೀಯುತ.ಬೂಟಿಯವರು.

ನಾರ್ಕೆಯವರು ಧಾರ್ಮಿಕ ಗ್ರಂಥಗಳನ್ನು ಪಾರಾಯಣ ಮಾಡಿದ್ದರು. ಇವರು ಜ್ಞಾನೇಶ್ವರಿಯನ್ನು ಓದಿದ್ದರು. 1909 ರಲ್ಲಿ ಭಾರತ ಸರ್ಕಾರದಿಂದ ಶಿಫಾರಸು ಮಾಡಲ್ಪಟ್ಟು ಲಂಡನ್ ಗೆ ಹೋಗಿ ವಿದ್ಯಾಭ್ಯಾಸ ಮುಗಿಸಿ 1912 ರಲ್ಲಿ ಮರಳಿ ಭಾರತಕ್ಕೆ ಬಂದರು. ಇವರ ಪತ್ನಿ, ಮಾವ ಮತ್ತು ಇವರ ತಾಯಿಯವರು ಸಾಯಿಬಾಬಾರವರನ್ನು ನೋಡಲು ಶಿರಡಿಗೆ ಹೋಗಲು ಬಲವಂತ ಮಾಡಲಾಗಿ, ನಾರ್ಕೆಯವರು ಸಾಯಿಬಾಬಾರವರು ಇಚ್ಛೆ ಪಟ್ಟರೆ ಮಾತ್ರ ತಾನು ಹೋಗುವೆನೆಂದು ಉತ್ತರ ಬರೆದು ಹಾಕಿದರು. ಆಗ ಇವರ ಮಾವನಾದ ಬೂಟಿಯವರು ಸಾಯಿಬಾಬಾರವರನ್ನು ವಿಚಾರಿಸಿ ಅವರ ಅಪ್ಪಣೆ ಪಡೆದು, ಈ ವಿಷಯವನ್ನು ನಾರ್ಕೆಯವರಿಗೆ ತಿಳಿಸಿ ಸಾಯಿಯವರು ನಿನ್ನನ್ನು ಕಾಣಲು ಬಯಸುತ್ತಾರೆ ಎಂದು ತಿಳಿಸಿದರು. ಕಡೆಗೆ 1913 ರ  ಏಪ್ರಿಲ್ ತಿಂಗಳಿನಲ್ಲಿ ಇವರು ಮೊದಲ ಬಾರಿಗೆ ಸಾಯಿಬಾಬಾರವರನ್ನು ಕಾಣಲು ಶಿರಡಿಗೆ ತೆರಳಿದರು. ಶ್ಯಾಮರವರು ಇವರನ್ನು ಸಾಯಿಯವರಿಗೆ ಪರಿಚಯ ಮಾಡಿಸಿದರು. ಆಗ ಸಾಯಿಬಾಬಾರವರು ಶ್ಯಾಮನಿಗೆ "ಇವನನ್ನು ಕಳೆದ 30 ಜನ್ಮಗಳಿಂದ ನೋಡುತ್ತಿದ್ದೇನೆ" ಎಂದರು. ಈ ಮಾತನ್ನು ಕೇಳಿ ನಾರ್ಕೆಯವರಿಗೆ ಆಶ್ಚರ್ಯವಾಯಿತು. ಸಾಯಿಬಾಬಾರವರ ತೀಕ್ಷ್ಣವಾದ ಕಣ್ಣುಗಳನ್ನು ನಾರ್ಕೆಯವರು ನೋಡಿದರು. ಸಾಯಿಯವರ ನೋಟ ನಾರ್ಕೆಯವರ ಮೇಲೆಯೇ ಇತ್ತು. ಸಾಯಿಯವರ ಮಹಾಸಮಾಧಿಯಾದ ಅನೇಕ ವರ್ಷಗಳ ನಂತರ ಅಂದರೆ 1836 ರಲ್ಲಿ ಈ ಮಾತನ್ನು ನಾರ್ಕೆಯವರು ಧೃಡಪಡಿಸಿದ್ದಾರೆ. "ಸಾಯಿಯವರು ಚಾವಡಿಯಲ್ಲಿ ಕುಳಿತು ತೀಕ್ಷವಾದ ಕಣ್ಣುಗಳಿಂದ ನೋಡುತ್ತಿದ್ದುದು ನನಗೆ ಅಚ್ಚಳಿಯದೆ ಮನದಲ್ಲಿ ಉಳಿದಿದೆ" ಎಂದು ನಾರ್ಕೆಯವರು ಹೇಳಿದ್ದಾರೆ. ನಾರ್ಕೆಯವರು ಭಕ್ತರನ್ನು ಕ್ರೋಡಿಕರಿಸಿ ಸಾಯಿಬಾಬಾರವರ ಸೇವೆಯನ್ನು ಆದಷ್ಟು ಮಾಡಿದುದೇ ಆಲ್ಲದೇ ಆರತಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

ಒಂದು ದಿನ ಆರತಿಯ ಸಮಯದಲ್ಲಿ ಸಾಯಿಬಬಾರವರು ಬಹಳ ಕೋಪಗೊಂಡು ಅಲ್ಲಿ ನೆರೆದಿದ್ದ ಎಲ್ಲರನ್ನು ಬಯ್ಯುತ್ತಾ ಗದರಿಸುತ್ತಿದ್ದರು. ಇದನ್ನು ನೋಡಿ ನಾರ್ಕೆಯವರಿಗೆ "ಸಾಯಿಬಾಬಾ ಹುಚ್ಚರೇ?" ಎಂಬ ಅನುಮಾನ ಮನದಲ್ಲಿ ಸುಳಿಯಿತು. ಆರತಿಯಾದ ನಂತರ ನಾರ್ಕೆಯವರು ಮನೆಗೆ ತೆರಳಿ ಪುನಃ ಮಸೀದಿಗೆ ಬಂದು ಸಾಯಿಬಾಬಾರವರ ಕಾಲುಗಳನ್ನು ನೀವುತ್ತಾ ಕುಳಿತರು. ಸಾಯಿಯವರು ಆಗ ತಮ್ಮ ತಲೆಯನ್ನು ಅಲ್ಲಾಡಿಸುತ್ತಾ "ಅರೆ ನಾರ್ಕೆ, ನಾನು ಹುಚ್ಚನಲ್ಲಾ" ಎಂದರು. ನಾರ್ಕೆಯವರಿಗೆ ಆಗ ಸಾಯಿಯವರ ಅಂತರ್ಯಾಮಿತ್ವದ ಅರಿವಾಯಿತು. ನಾರ್ಕೆಯವರು "ಬಾಬಾರವರಿಂದ ಏನನ್ನು ಮುಚ್ಚಿಡಲಾಗುವುದಿಲ್ಲ, ಎಲ್ಲಾ ವಿಷಯ ಅವರಿಗೆ ತಿಳಿಯುತ್ತದೆ. ಅವರು ಅಂತರ್ಯಾಮಿ" ಎಂದು ಹೇಳಿದ್ದಾರೆ. ಸಾಯಿಯವರ ಒಡನಾಟದಿಂದ ನಾರ್ಕೆಯವರು "ಸಾಯಿಬಾಬಾರವರು ಭೂತ, ವರ್ತಮಾನ ಹಾಗೂ ಭವಿಷ್ಯದ ಎಲ್ಲಾ ವಿಷಯಗಳನ್ನು ಬಲ್ಲವರಾಗಿದ್ದಾರೆ" ಎಂದು ಮನಗಂಡರು.

ಸಾಯಿಬಾಬಾರವರು 1913 ರಲ್ಲಿ ಒಂದು ದಿನ ಮಾತನಾಡುತ್ತಾ ನಾರ್ಕೆಯವರ ಮಾವ ಬೂಟಿಯವರು ಕಲ್ಲಿನಿಂದ ವಾಡಾ ನಿರ್ಮಾಣ ಮಾಡುತ್ತಾರೆ ಮತ್ತು ನಾರ್ಕೆಯವರು ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದಾದ ಸುಮಾರು 3 ವರ್ಷಗಳ ನಂತರ ಅಂದರೆ 1915 - 1916 ರಲ್ಲಿ ಬೂಟಿಯವರು ಕಲ್ಲಿನ ಕಟ್ಟಡದ ನಿರ್ಮಾಣ ಕಾರ್ಯ ಆರಂಭಿಸಿದರು. 1920 ರಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಾರಂಭವಾಗಿ ನಾರ್ಕೆಯವರು ಅದರ ಟ್ರಸ್ಟಿ ಆಗಿ ಸಮಾಧಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ಇನ್ನೊಂದು ಮುಖ್ಯ ಸಂಗತಿಯೆಂದರೆ, ನಾರ್ಕೆಯವರ ತಾಯಿ ಅವರ ಮಗನ ಕೆಲಸದ ಬಗ್ಗೆ ಬಹಳ ಚಿಂತೆಯಿಂದ ಇದ್ದರು. ನಾರ್ಕೆಯವರು ಪತ್ರಿಕೆಗಳಲ್ಲಿ ಬರುತ್ತಿದ್ದ ಜಾಹೀರಾತುಗಳಿಗೆ ಅರ್ಜಿಯನ್ನು ಹಾಕುತ್ತ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಇದ್ದರು. ಅವರು ಬರ್ಮಾ ಮತ್ತು ಬಾಲಾಘಾಟ್ ನಲ್ಲಿ ಕೆಲಸ ಮಾಡಿದರು. ಒಮ್ಮೆ ಅವರು ಕೆಲಸ ಎಲ್ಲೂ ಸಿಗದೇ 13  ತಿಂಗಳುಗಳ ಕಾಲ ಶಿರಡಿಯಲ್ಲಿ ತಂಗಿದ್ದರು. ಆಗ ಅವರಿಗೆ ಬೇಜಾರು ಬಂದು ವಕೀಲಿ ವೃತ್ತಿಯನ್ನು ಆರಂಭಿಸಲು ಯೋಚನೆ ಮಾಡಿದರು. 1914 ರಲ್ಲಿ ಸಾಯಿಬಾಬಾರವರನ್ನು ಭೇಟಿಯಾದಾಗ ಅವರು ಫಕೀರರಿಗೆಲ್ಲ ಕಫ್ನಿ ಕೊಡುತ್ತಿದ್ದುದನ್ನು ನೋಡಿ ತಮಗೂ ಕಫ್ನಿ ನೀಡುವರೆಂದು ಭಾವಿಸಿದರು. ಆದರೆ, ಸಾಯಿಬಾಬಾರವರು ಇವರಿಗೆ ಮಾತ್ರ ಕೊಡಲಿಲ್ಲ. ಈ ಘಟನೆಯಾದ ಸ್ವಲ್ಪ ಸಮಯದ ಬಳಿಕ ಬಾಬಾರವರು ನಾರ್ಕೆಯವರನ್ನು ಕರೆದು ಅವರ ತಲೆಯ ಮೇಲೆ ಕೈ ಸವರಿ ತಟ್ಟಿ "ನಾನು ನಿನಗೆ ಕಫ್ನಿ ಕೊಡಲಿಲ್ಲ ಎಂದು ನನ್ನನ್ನು ನಿಂದಿಸಬೇಡ. ಆ ದೇವರು ನಿನಗೆ ಅದನ್ನು ಕೊಡಲು ಒಪ್ಪಲಿಲ್ಲ." ಎಂದರು. ಆಗ ನಾರ್ಕೆಯವರ ತಾಯಿಯವರು ಇವನು ಮುಂದೆ ಏನಾಗುವನೆಂದು ತಿಳಿಸಬೇಕೆಂದು ಬಾಬಾರವರನ್ನು ಕೇಳಲು, ಸಾಯಿಯವರು "ನಾನು ಇವನನ್ನು ಪುಣೆಯಲ್ಲಿರುವ ಹಾಗೆ ಮಾಡುತ್ತೇನೆ" ಎಂದರು. ಪ್ರತಿ ಬಾರಿ ಕೆಲಸದ ವಿಷಯವನ್ನು ಕೇಳಿದಾಗ ಬಾಬಾರವರು ತಮ್ಮ ಮಾತಿನಲ್ಲಿ ಪುಣೆ ಪದವನ್ನು ಸೇರಿಸುತ್ತಿದ್ದರು. ಬಹಳ ದಿನಗಳವರೆಗೆ ಈ ರೀತಿ ನಡೆಯಿತು. 1917 ರಲ್ಲಿ ಪುಣೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೂವಿಜ್ಞಾನ ಶಾಸ್ತ್ರಜ್ಞ ಕೆಲಸ ಖಾಲಿ ಇದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೋಡಿದ ನಾರ್ಕೆಯವರು ಬಾಬಾರವರಲ್ಲಿಗೆ ಹೋಗಿ ಅದಕ್ಕೆ ಅರ್ಜಿ ಸಲ್ಲಿಸಲೇ ಎಂದು ಕೇಳಲು ಬಾಬಾರವರು ತಮ್ಮ ಒಪ್ಪಿಗೆ ಸೂಚಿಸಿದರು. ನಾರ್ಕೆಯವರು ಪುಣೆಗೆ ತೆರಳಿ ಅಲ್ಲಿ ಸಂಬಂಧಪಟ್ಟವರನ್ನು ನೋಡಿದರು. ಯಾವ ಶಿಫಾರಸು ಕೂಡ ಇರಲಿಲ್ಲ. ಬಹಳ ಜನ ಅಭ್ಯರ್ಥಿಗಳು ಇದ್ದಿದ್ದರಿಂದ ಕೆಲಸ ಸಿಗುವುದು ಕಷ್ಟಕರವಾಗಿದ್ದಿತು. ಅದೇ ಸಮಯದಲ್ಲಿ ಬಾಬಾರವರು ಮಸೀದಿಯಲ್ಲಿದ್ದವರನ್ನು "ಈ ನಾರ್ಕೆ ಎಲ್ಲಿಗೆ ಹೋದ" ಎಂದು ಕೇಳಲು ಅಲ್ಲಿದ್ದವರು ಅವನು ಪುಣೆಗೆ ಕೆಲಸ ಹುಡುಕಿಕೊಂಡು ಹೋಗಿದ್ದಾನೆ ಎಂದು ತಿಳಿಸಿದರು. ಕೂಡಲೇ ಬಾಬಾರವರು "ನಾರ್ಕೆಯವರಿಗೆ ಮಕ್ಕಳು ಇವೆಯೇ ಎಂದು ಸಾಯಿಯವರು ಕೇಳಿದರು. ಅಲ್ಲಿದ್ದವರು ಇಲ್ಲವೆಂದು, ಮಕ್ಕಳು ಹುಟ್ಟಿ ಸತ್ತು ಹೋದವೆಂದು ಹೇಳಿದರು". "ಅಲ್ಲಾ, ಅವನನ್ನು ಅಶೀರ್ವದಿಸುತ್ತಾನೆ" ಎಂದರು. 1918 ರಲ್ಲಿ ನಾರ್ಕೆಯವರಿಗೆ ಪುಣೆಯಲ್ಲಿ ಭೂವಿಜ್ಞಾನ ಮತ್ತು ಗಣಿಯ ಪ್ರಾಧ್ಯಾಪಕರ ಕೆಲಸ ಸಿಕ್ಕಿತು. ಅನಂತರ 4 ಮಕ್ಕಳು ಹುಟ್ಟಿದರು. ಹೀಗೆ ಸಾಯಿಯವರ ಆಶೀರ್ವಾದ ಫಲಿಸಿತು ಮತ್ತು ನಾರ್ಕೆಯವರಿಗೆ ಸಾಯಿಬಾಬಾರವರ ಸಹಾಯ ದೊರೆಯಿತು.

ಸಾಯಿಬಾಬಾರವರು ನಾರ್ಕೆಯವರನ್ನು ಹೋಶಿಯಾರ್ ಅಥವಾ ಜಾಣ ಎಂದು ಆಗಾಗ್ಗೆ ಹೊಗಳುತ್ತಿದ್ದರು. ಸಾಯಿಯವರು ಎಂದಿಗೂ ಅಗತ್ಯವಾದ ವಾದ ಅಥವಾ ವಿಚಾರಣೆಯನ್ನು ಬೇಡವೆನ್ನುತ್ತಿರಲಿಲ್ಲ. ಸಾಯಿಯವರು ಹೇಳಿದ ಪ್ರತಿಯೊಂದು ವಿಷಯಗಳು ಅರ್ಥಗರ್ಭಿತವಾಗಿರುತ್ತಿದ್ದವು ಮತ್ತು ಜನ ಸಾಮಾನ್ಯರೂ ಕೂಡ ಅರ್ಥ ಮಾಡಿಕೊಳ್ಳುತ್ತಿದ್ದರು ಎಂದು ನಾರ್ಕೆಯವರು ಹೇಳಿದ್ದಾರೆ.

ನಾರ್ಕೆಯವರು ಸಾಯಿಬಾಬಾರವರು ಈ ಪ್ರಪಂಚದಲ್ಲಿ ಅಷ್ಟೇ ಆಲ್ಲದೇ ಬೇರೆ ಪ್ರಪಂಚದಲ್ಲೂ ಕೂಡ ಕಾರ್ಯ ನಿರ್ವಹಿಸುತ್ತಿದರು ಎಂದು ಹೇಳಿದ್ದಾರೆ. ಸಾಯಿಯವರು ಆಗಾಗ್ಗೆ ಇತರ ಲೋಕದ ದೃಶ್ಯಗಳನ್ನು ವಿವರಿಸುತ್ತಿದರು ಎಂದು ಹೇಳಿದ್ದಾರೆ. ಉದಾಹರಣೆಗೆ ಒಮ್ಮೆ ಒಬ್ಬ ಮಾರವಾಡಿಯ ಮಗನು ಸತ್ತಾಗ ಅವನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದಾಗ ಬಾಬಾರವರು ಹೇಳುತ್ತಿದ್ದುದನ್ನು ನಾರ್ಕೆಯವರು ಕೇಳಿಸಿಕೊಂಡರು. ಬಾಬಾರವರು "ಅವನು ಈಗ ನದಿಯ ಹತ್ತಿರ ಇರಬಹುದು. ಇಲ್ಲವೇ ನದಿಯನ್ನು ದಾಟುತ್ತಿರಬಹುದು" ಎಂದು ಹೇಳಿದ್ದನ್ನು ಕೇಳಿಸಿಕೊಂಡ ನಾರ್ಕೆಯವರು ಆ ನದಿಯನ್ನು ವೈತರಿಣಿ ನದಿಗೆ ಹೋಲಿಸಿಕೊಂಡು ಮೃತರ ಆತ್ಮಗಳು ಇದನ್ನು ದಾಟುವ ಬಗ್ಗೆ ಸಾಯಿಯವರು ಹೇಳಿದುದು ಎಂದು ಅರ್ಥೈಸಿದ್ದಾರೆ.

ನಾರ್ಕೆಯವರು ಸಾಯಿಯವರಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಬಾಬಾ ಇವರಿಗೆ ಹಿಂದಿನ ನಾಲ್ಕು ಜನ್ಮದ ವಿಷಯಗಳನ್ನು ತಿಳಿಸಿದರು. ಇದನ್ನು ಬಾಬಾ ಇತರರ ಉಪಸ್ಥಿತಿಯಲ್ಲಿ ಹೇಳುತ್ತಿದ್ದರು. ಆದರೆ ಇದು ಸಂಬಂಧಪಟ್ಟವರಿಗೆ ಮಾತ್ರವೇ ಗೊತ್ತಾಗುತ್ತಿತ್ತೆ ವಿನಹ ಇತರರಿಗೆ ತಿಳಿಯುತ್ತಿರಲಿಲ್ಲ.

ನಾರ್ಕೆಯವರು ಯೋಗ ವಾಸಿಷ್ಠವನ್ನು ಪಾರಾಯಣ ಮಾಡುತ್ತಿದ್ದರು. ಆಗ ಬಾಬಾರವರು ಒಮ್ಮೆ ಇವರಿಂದ 15 ರುಪಾಯಿಗಳ ದಕ್ಷಿಣೆಯನ್ನು ಕೇಳಿದರು. ಆಗ ನಾರ್ಕೆಯವರು "ಬಾಬಾ, ನನ್ನಲ್ಲಿ ಅಷ್ಟು ಹಣ ಇಲ್ಲವೆಂದು ನಿಮಗೆ ತಿಳಿದಿದೆ. ಆದರೂ ನನ್ನನ್ನೇಕೆ ದಕ್ಷಿಣೆ ಕೇಳುತ್ತಿದ್ದೀರಿ" ಎಂದರು. ಆಗ ಸಾಯಿಬಾಬಾರವರು "ಅಹುದು, ಅದು ನನಗೆ ತಿಳಿದಿದೆ. ಆದರೆ ನೀನು ಈಗ ಶ್ರೇಷ್ಠವಾದ ಗ್ರಂಥವನ್ನು ಓದುತ್ತಿರುವೆ. ಅದರಿಂದ ನನಗೆ 15 ರುಪಾಯಿಗಳ ದಕ್ಷಿಣೆ ಕೊಡು" ಎಂದರು. ನಾರ್ಕೆಯವರಿಗೆ ಸಾಯಿಬಾಬಾ ಅಂತರ್ಯಾಮಿ ಎಂದು ತಿಳಿದಿತ್ತು. ಆದುದರಿಂದ ಸಾಯಿಯವರು ಹೇಳಿದುದು ಯೋಗವಾಸಿಷ್ಠ ದಲ್ಲಿ ಬರುವ ಮನುಷ್ಯನ ವ್ಯಕ್ತಿತ್ವದಲ್ಲಿನ 15 ಭೂತಗಳನ್ನು ಎಂದು ವಿಶ್ಲೇಷಿಸಿದರು ಮತ್ತು ಅದರ ಅರ್ಥ ತಾವು ಸಂಪೂರ್ಣವಾಗಿ ಸಾಯಿಬಾಬಾರವರಲ್ಲಿ ಲಯವಾಗಬೇಕೆಂದು ಬಾಬಾ ಇಚ್ಚಿಸುತ್ತಿದ್ದಾರೆ ಎಂದು ಅರ್ಥೈಸಿದರು.

1916 ರಲ್ಲಿ ಶಿರಡಿಯಲ್ಲಿ ಪ್ಲೇಗ್ ರೋಗ ಬಂದಾಗ ಸಾಮಾನ್ಯವಾದ ಹಲ್ವ ಮುಂತಾದ ಸಿಹಿ ತಿಂಡಿಗಳನ್ನು ನೈವೇದ್ಯಕ್ಕೆ ದ್ವಾರಕಾಮಾಯಿಗೆ ಯಾರೂ ತರುತ್ತಿರಲಿಲ್ಲ. ಆಗ ಒಮ್ಮೆ ಬಾಬಾರವರು ನಾರ್ಕೆಯವರನ್ನು ಸಿಹಿ ತಿಂಡಿ ಮಾರುವ ಅಂಗಡಿಗೆ ಹೋಗಿ ಹಲ್ವ ತೆಗೆದುಕೊಂಡು ಬರುವಂತೆ ಆಜ್ಞಾಪಿಸಿದರು. ನಾರ್ಕೆಯವರು ಸಿಹಿ ತಿಂಡಿಯ ಅಂಗಡಿಗೆ ಹೋಗಿ ಮಾಲೀಕನಿಗೆ ಬಾಬಾರವರ ಆಜ್ಞೆಯನ್ನು ತಿಳಿಸಿದರು. ಆಗ ಅವಳು ತನ್ನ ಪತಿಯ ಮೃತ ದೇಹವನ್ನು ತೋರಿಸಿ ನಾರ್ಕೆಯವರಿಗೆ ಕಪಾಟಿನಲ್ಲಿರುವ ಸಿಹಿ ತಿಂಡಿಗಳನ್ನು ತೆಗೆದುಕೊಳ್ಳಲು ಹೇಳಿದಳು. ಅವರು ತೆಗೆದುಕೊಂಡರು. ಆದರೆ ಅದನ್ನು ಪ್ರಸಾದ ಎಂದು ಕೊಟ್ಟ ಎಲ್ಲರಿಗೂ ಪ್ಲೇಗ್ ತಗಲುವುದೇನೋ ಎಂದು ಭಯಭೀತರಾದರು. ಆಗ ಬಾಬಾರವರು ನೀನು ಶಿರಡಿಯ ಹೊರಗಡೆ ಇದ್ದರೆ ಬದುಕುವೆ ಎಂದು ತಿಳಿದಿರುವೆಯಾ ಅಥವಾ ಶಿರದಿಯಲ್ಲಿದ್ದರೆ ಸಾಯುವೆ ಎಂದು ತಿಳಿದಿರುವೆಯಾ, ಅದು ಹಾಗೆ ಆಗುವುದಿಲ್ಲ. ಯಾರು ಯಾವಾಗ ಸಾಯಬೇಕೋ ಆಗ ಅವರು ಸಾಯುವರು. ಯಾರು ಉಳಿಯಬೇಕೋ ಅವರು ಖಂಡಿತ ಉಳಿಯುವರು ಎಂದು ಆ ಹಲ್ವವನ್ನು ಪ್ರಸಾದ ಎಂದು ಎಲ್ಲರಿಗೂ ಕೊಟ್ಟರು. ಯಾರಿಗೂ ಪ್ಲೇಗ್ ಅಂಟಿಕೊಳ್ಳಲಿಲ್ಲ. ಆಗ ನಾರ್ಕೆಯವರಿಗೆ ಸಾಯಿಬಾಬಾರವರ ಅಪಾರ ಜ್ಞಾನದ ದರ್ಶನವಾಯಿತು.

ಇಷ್ಟೆಲ್ಲಾ ನಿಕಟ ಸಂಪರ್ಕವನ್ನು ನಾರ್ಕೆಯವರು ಹೊಂದಿದ್ದರೂ ಕೂಡ ಅವರು ಸಾಯಿಯವರಲ್ಲಿ ಆಳವಾದ ವಿಶ್ವಾಸ ಮತ್ತು ಗಾಢವಾದ ಪ್ರೀತಿಯನ್ನು ಹೊಂದಿರಲಿಲ್ಲ. ಆದುದರಿಂದ ದೀಕ್ಷಿತ್, ಪುರಂಧರೆ ಮತ್ತು ಇತರ ಅಂಕಿತ ಭಕ್ತರಂತೆ ನಾರ್ಕೆಯವರು ಇರಲಿಲ್ಲ.

Monday, September 20, 2010

ಸಾಯಿ ಮಹಾಭಕ್ತ - ಹರಿ ವಿನಾಯಕ ಸಾಥೆ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 

ಹರಿ ವಿನಾಯಕ ಸಾಥೆ

ರಾವ್ ಬಹದ್ದೂರ್ ಹರಿ ವಿನಾಯಕ ಸಾಥೆಯವರು ಬಾಂಬೆ ಪ್ರಾಂತ್ಯದ ಡೆಪ್ಯುಟಿ ಕಲೆಕ್ಟರ್ ಮತ್ತು ಸೆಟಲ್ಮೆಂಟ್ ಅಧಿಕಾರಿ ಆಗಿದ್ದರು. ಇವರು ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಶಿರಡಿಯಲ್ಲಿ ಮೊದಲ ವಾಡ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಾಥೆ ವಾಡದ ನಿರ್ಮಾಣ 1905-06 ರಲ್ಲಿ ಆಯಿತು. ಸಾಯಿಬಾಬಾರವರ ಕೀರ್ತಿ ದೇಶದ ಎಲ್ಲೆಡೆ ಹರಡಿ ಅವರನ್ನು ಭೇಟಿ ಮಾಡಲು ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಬರುವ ಭಕ್ತರಿಗೆ ಶಿರಡಿಯಲ್ಲಿನ ಕೆಲವೇ ಹೋಟೆಲ್ ಗಳು ಮತ್ತು ಮನೆಗಳು ಸಾಲದೇ ಅನೇಕರು ಶಿರಡಿ ಗ್ರಾಮದಲ್ಲಿದ್ದ ಮರಗಳ ಕೆಳಗೆ ಮಲಗಿಕೊಳ್ಳುತ್ತಿದ್ದರು. ಆದುದರಿಂದ ಸಾಥೆವಾಡ ನಿರ್ಮಾಣದಿಂದ ಸಾಯಿಯವರನ್ನು ಭೇಟಿ ಮಾಡಲು ಬರುವ ಎಲ್ಲಾ ಭಕ್ತರು ತಂಗಲು ಸಹಾಯವಾಯಿತು. ಇವರು ಮಾಡಿದ ಮತ್ತೊಂದು ಮುಖ್ಯ ಕೆಲಸವೆಂದರೆ ಸಾಯಿಬಾಬಾರವರ ಪೂಜೆಯನ್ನು ಮತ್ತು ಆರತಿಯನ್ನು ಮೇಘಶ್ಯಾಮ ಆಲಿಯಾಸ್ ಮೇಘ ಎಂಬ ಸಾಯಿಭಕ್ತರ ಮುಖೇನ ಪ್ರಾರಂಭ ಮಾಡಿಸಿ ಸಾಯಿಬಾಬಾರವರಿಗೆ ಭಕ್ತರು ಪೂಜೆಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿದುದು.

ಸಾಥೆಯವರು ತಮ್ಮ ಮೊದಲನೇ ಹೆಂಡತಿಯು ತೀರಿಕೊಂಡಿದ್ದರಿಂದ ಮರು ಮದುವೆಯಾಗಿದ್ದರು. ಏಕೆಂದರೆ ಇವರಿಗೆ ಮೊದಲನೇ ಹೆಂಡತಿಯಿಂದ ಬರಿಯ ಹೆಣ್ಣು ಮಕ್ಕಳೇ ಹುಟ್ಟಿದ್ದರು. ಗಂಡು ಮಕ್ಕಳಿಲ್ಲದಿದ್ದರೆ ಮುಕ್ತಿಯಿಲ್ಲ ಎಂದು ಮನಗಂಡ ಸಾಥೆಯವರು ತಮ್ಮ 50ನೇ ವಯಸ್ಸಿನಲ್ಲಿ ಮರು ಮದುವೆಯಾದರು. ಆದರೆ ಗಂಡು ಮಕ್ಕಳು ಹುಟ್ಟುತ್ತಾರೋ ಇಲ್ಲವೋ ಎಂಬ ಚಿಂತೆಯಲ್ಲಿದ್ದರು. 1904 ರಲ್ಲಿ ಸಾಥೆಯವರು ಅಹ್ಮದ್ ನಗರದ ಡೆಪ್ಯುಟಿ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಮ್ಮೆ ಸಾಥೆಯವರು ಕೋಪರ್ ಗಾವ್ ನ ಮಾಮಲ್ತೆದಾರರಾದ ಶ್ರೀಯುತ ಬಾರ್ವರವರನ್ನು ಭೇಟಿ ಮಾಡಿದಾಗ ಅವರು ಸಾಯಿಬಾಬಾರವರು ಒಬ್ಬ ಮಹಾಪುರುಷರೆಂದು ಹೇಳಿ ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ಸಾಥೆಯವರು ಸಾಯಿಯವರನ್ನು ಏನು ಕೇಳಲೇ ಇಲ್ಲ. ಆದರೆ ಬಾರ್ವರವರು ಸಾಥೆಯವರ ವಿಷಯವನ್ನು ಸಾಯಿಬಾಬಾರವರ ಬಳಿ ಹೇಳಿದಾಗ ಸಾಯಿಯವರು ಸಾಥೆಯವರು ಮರು ಮದುವೆಯಾದರೆ ಅವರಿಗೆ ಗಂಡು ಮಕ್ಕಳು ಹುಟ್ಟುತ್ತಾರೆ ಎಂದು ಹೇಳಿದರು. ಆಗ ಸಾಥೆಯವರು ಮಸೀದಿಯ ಹೊರಗಡೆ ನಿಂತಿದ್ದರು. ಸಾಯಿಯವರು ಬಾರ್ವೆಯವರಿಗೆ ಹೇಳಿದ ಮಾತುಗಳು ಇವರಿಗೆ ಕೇಳಿಸಿತು. ಆದರೆ ಸಾಥೆಯವರಿಗೆ ಇನ್ನು ನಂಬಿಕೆ ಬರಲಿಲ್ಲ. ಪುಣೆಯಲ್ಲಿನ ಪ್ರಸಿದ್ದ ಜ್ಯೋತಿಷಿಯನ್ನು ಸಾಯಿಬಾಬಾರವರು ನುಡಿದಿದ್ದು ಸರಿಯಾಗಿದೆಯೇ ಎಂದು ಪರೀಕ್ಷಿಸಲು ವಿಚಾರಿಸಿದರು. ಆ ಜ್ಯೋತಿಷಿ ಇವರ ಜಾತಕವನ್ನು ಪರಿಶೀಲಿಸಿ 1905 ರಲ್ಲಿ ಇವರಿಗೆ ಮರು ಮದುವೆಯ ಯೋಗವಿದೆ ಮತ್ತು ಇವರ 50 ನೇ ವಯಸ್ಸಿನ ನಂತರ ಇವರಿಗೆ  ಗಂಡು ಮಕ್ಕಳಾಗುವ ಯೋಗವಿದೆ ಎಂದು ಭವಿಷ್ಯ ನುಡಿದರು. ಆಗ ಸಾಥೆಯವರು ಮರು ಮದುವೆಯಾಗಲು ನಿರ್ಧರಿಸಿದರು. ಗಣೇಶ ದಾಮೋದರ ಕೇಳ್ಕರ್ ರವರಿಗೆ ಮದುವೆ ವಯಸ್ಸಿನ ಮಗಳಿದ್ದಳು. ಅವಳ ವಿಷಯವಾಗಿ ಸಾಥೆಯವರಿಗೆ ಕೇಳ್ಕರ್ ರವರು ಪತ್ರ ಬರೆದು ಯಾರಾದರೂ ಗಂಡುಗಳು ಮದುವೆಗೆ ಇರುವರೇ ಎಂದು ವಿಚಾರಿಸಿದರು. ಆಗ ಸಾಥೆಯವರು ಅಹಮದ್ ನಗರದಲ್ಲಿದ್ದರು. ಸಾಥೆಯವರು ಆ ಪತ್ರಕ್ಕೆ ಉತ್ತರವಾಗಿ ತಮಗೆ ತಿಳಿದಂತೆ ಯಾವುದೇ ಗಂಡುಗಳು ಇಲ್ಲವೆಂದು, ಆದರೆ ತಾವು ಮರು ಮದುವೆಯಾಗಲು ನಿರ್ಧರಿಸಿರುವರೆಂದು, ಕೇಳ್ಕರ್ ರವರು ಒಪ್ಪಿದರೆ ತಾವೇ ಅವರ ಮಗಳನ್ನು ವಿವಾಹ ಮಾಡಿಕೊಳ್ಳುವುದಾಗಿ ಹೇಳಿದರು. ಗಣೇಶ ದಾಮೋದರ್ ಕೇಳ್ಕರ್ ರವರು ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು ಮತ್ತು ಸಾಥೆಯವರ ಸಲಹೆಯಂತೆ ತಮ್ಮ ಮಗಳನ್ನು ಸಾಯಿಬಾಬಾರವರ ಬಳಿಗೆ ಕರೆದುಕೊಂಡು ಹೋದರು. ಸಾಯಿಯವರು ಕೇಳ್ಕರ್ ರವರ ಮಗಳ ಹಣೆಗೆ ಕುಂಕುಮವನ್ನು ಹಚ್ಚಿ ಆಶೀರ್ವದಿಸಿದರು.

ಕ್ರಿ.ಶ.1906 ರಲ್ಲಿ ಸಾಥೆಯವರ ಮರು ವಿವಾಹ ನಡೆಯಿತು. ಮೊದಲು 2 ಹೆಣ್ಣು ಮಕ್ಕಳು ಹುಟ್ಟಿದರು. ಇದರಿಂದ ಚಿಂತೆಗೀಡಾದ ಕೇಳ್ಕರ್ ರವರು ಸಾಯಿಬಾಬಾರವರ ಬಳಿಗೆ ಹೋಗಿ ತಮಗೆ ಮೊಮ್ಮಗ ಯಾವಾಗ ಹುಟ್ಟುವನು ಎಂದು ಕೇಳಿದಾಗ ಸಾಯಿಬಾಬಾರವರು "ನಾನು ಅಲ್ಲಾನನ್ನು ಪ್ರಾರ್ಥಿಸುತ್ತಿದ್ದೇನೆ. ಸಧ್ಯದಲ್ಲೇ ಗಂಡು ಮಗ ಹುಟ್ಟುವನು" ಎಂದು ಭರವಸೆ ನೀಡಿದರು. ಸಾಯಿಯವರು ನುಡಿದಂತೆ 1912 ರಲ್ಲಿ ಸಾಥೆಯವರಿಗೆ ಗಂಡು ಮಗನು ಹುಟ್ಟಿದನು. ಈಗ ಸಾಥೆಯವರ ವಂಶಸ್ಥರು ಪುಣೆ ನಗರದಲ್ಲಿದ್ದಾರೆ. ಸಾಯಿಯವರ ಅನುಗ್ರಹಕ್ಕೆ ಕೃತಜ್ಞತೆ ಸೂಚಿಸುವ ಸಲುವಾಗಿ ಶಿರಡಿಯಲ್ಲಿ ಒಂದು ವಾಡ ನಿರ್ಮಿಸಲು ಸಾಥೆಯವರು ನಿರ್ಧರಿಸಿದರು. ಆಗ ಸಾಯಿಯವರು ಹಳ್ಳಿಯ ಗೋಡೆಯನ್ನು ಕೆಡವಿ ಪುನಃ ಕಟ್ಟಲು ಸೂಚಿಸಿದರು. ಆಗ ಸಾಥೆಯವರು ಸಾಯಿಬಾಬಾರವರು ತಮಗೆ ಹಳ್ಳಿಯ ಸುತ್ತಲೂ ಇರುವ ಗೋಡೆಯನ್ನು ಕೆಡವಿ ಪುನಃ ಕಟ್ಟಲು ಹೇಳುತ್ತಿದ್ದಾರೆಂದು ಭಾವಿಸಿ ಅದಕ್ಕೆ ಬಹಳ ಹಣ ಖರ್ಚಾಗುವುದರಿಂದ ಅದು ತಮ್ಮ ಕೈಲಿ ಸಾಧ್ಯವಿಲ್ಲ ಎಂದು ಯೋಚಿಸಿದರು. ಆದರೆ ಸಾಯಿಬಾಬಾರವರು ಹಳ್ಳಿಯಲ್ಲಿದ್ದ ಒಂದು ಪಾಳು ಬಿದ್ದ ಜಾಗವನ್ನು ಕೆಡವಿ ಅದರ ಜಾಗದಲ್ಲಿ ವಾಡಾ ನಿರ್ಮಿಸಲು ಮತ್ತು ಅದರ ಮಧ್ಯ ಭಾಗದಲ್ಲಿ ಬಾಬಾರವರ ಗುರುವಿನ ಸಮಾಧಿ ಇದ್ದು ಅದರ ಸುತ್ತಲೂ ಒಂದು ಬೇವಿನ ಮರವನ್ನು ನೆಡಲು ಹೇಳಿದರು. ಸಾಯಿಯವರ ಆದೇಶದಂತೆ ಸಾಥೆಯವರು ಆ ಜಾಗವನ್ನು ಖರೀದಿಸಿ ವಾಡ ನಿರ್ಮಾಣ ಕಾರ್ಯ ಆರಂಭಿಸಿದರು. ಸಾಯಿಬಾಬಾರವರು "ಆ ಬೇವಿನ ಮರದ ಹತ್ತಿರ ತಮ್ಮ ಗುರುವಿನ ಸಮಾಧಿ ಇದೆ. ಅಲ್ಲಿ ಗೋಡೆ ಕಟ್ಟು. ಆ ಗೋಡೆಗೆ ಛಾವಣಿ  ಹಾಕಿ ಕಟ್ಟು. ಮತ್ತು ಅಲ್ಲಿ ನನ್ನ ಗುರುವಿನ ಸಮಾಧಿಗೆ ಪೂಜೆ ಆಗಲಿ" ಎಂದರು. ಬಾಬಾರವರು ತಮ್ಮ ಗುರುವಿನ ಹೆಸರನ್ನು ಹೇಳಿದರು. ಸಾಥೆಯವರು ಸಾಯಿಬಾಬಾರವರ ಗುರುವಿನ ಹೆಸರು ಸಾ ಅಥವಾ ಶಾ ಇಂದ ಕೊನೆಗೊಳ್ಳುತ್ತದೆ ಎಂದು ಹೇಳಿದರು. ಇನ್ನು ಕೆಲವರಿಗೆ ತಮ್ಮ ಗುರು ಕಬೀರ ಎಂದು ಹೇಳಿದರು. ಈಗಲೂ ಕೆಲವರು ಗುರುಸ್ಥಾನದಲ್ಲಿರುವ ಸಮಾಧಿಯನ್ನು ಕಬೀರರ ಗೋರಿ ಎಂದು ಕರೆಯುತ್ತಾರೆ. ಕಬೀರರು ಶಿರಡಿಯಲ್ಲಿ ವಾಸಿಸುತ್ತಿರಲಿಲ್ಲ ಮತ್ತು ಸಮಾಧಿ ಕೂಡ ಆಗಲಿಲ್ಲ. ಕಬೀರರ ಸಮಾಧಿ ಕಾಶಿಯಲ್ಲಿದೆ. ಹಿಂದೂ ಮತ್ತು ಮೊಹಮ್ಮದೀಯರು ಕಬೀರರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಾಡಲು ಜಗಳವಾಡಿದರು. ಅವರುಗಳು ಕಳೇಬರಕ್ಕೆ ಹೊದಿಸಿದ್ದ ಬಟ್ಟೆಯನ್ನು ತೆಗೆದು ನೋಡಿದಾಗ ಅದರೊಳಗೆ ಹೂವು ಮತ್ತು ಎಲೆಗಳಿದ್ದವು. ಆ ಹೂವು ಮತ್ತು ಎಲೆಗಳನ್ನು ಎಲ್ಲಾ ಕಡೆಯೂ ತೆಗೆದುಕೊಂಡು ಹೋಗಿ ಅಲ್ಲಿ ಗೋರಿ ಕಟ್ಟಿದರು. ಅದ್ದರಿಂದ ಈ ಬೇವಿನ ಮರದ ಕೆಳಗಡೆ ಕೆಲವು ಎಳೆಗಳು ಕಬೀರರ ದೇಹವೆಂದು ಹೇಳಲಾಗಿದೆ ಎಂದು ಅನೇಕರು ಇಂದಿಗೂ ನಂಬಿದ್ದಾರೆ.

ಸಾಥೆಯವರು ಸ್ವತಃ ಶಿರಡಿಗೆ ಹೋಗಿ ಅಲ್ಲಿ ಬಹಳ ವರ್ಷಗಳು ವಾಸವಿದ್ದರು. ಬಾಬಾರವರ ಆರತಿ ಮತ್ತು ಪೂಜೆಯನ್ನು 20ನೇ ಶತಮಾನದ ಪ್ರಾರಂಭದಲ್ಲಿ ಪಂಡರಾಪುರದ ಪಾಂಡುರಂಗನ ಆರತಿಯಲ್ಲಿರುವಂತೆಯೇ ರಚಿಸಲಾಯಿತು. ಇದನ್ನು ನಾನಾ ಸಾಹೇಬ್ ಚಂದೋರ್ಕರ್ ರವರು ಪರಿಶೀಲಿಸಿ ತಮ್ಮ ಅನುಮೋದನೆ ನೀಡಿದರು. ಗುರುಪೂರ್ಣಿಮೆಯು ಮೊದಲು ವಿಶೇಷವಾಗಿ ನಡೆಯುತ್ತಿರಲಿಲ್ಲ. ಎಲ್ಲಾ ಭಕ್ತರು ಒಟ್ಟಿಗೆ ಆರತಿ ಮತ್ತು ಪೂಜೆ ಮಾಡುವ ಪರಿಪಾಟ ಇರಲಿಲ್ಲ. 1910 ರಲ್ಲಿ ಗುರುಪೂರ್ಣಿಮೆಯ ದಿವಸ ಬಾಬಾರವರು ಕೇಳ್ಕರ್ ಅವರಿಗೆ "ಈ ದಿನ ಗುರು ಪೂರ್ಣಿಮೆ ಎಂದು ನಿನಗೆ ಗೊತ್ತಿಲ್ಲವೇ? ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು ನಿನ್ನ ಗುರುವಿನ ಪೂಜೆ ಮಾಡು" ಎಂದರು. ಈ ರೀತಿ ಎಲ್ಲರು ಒಟ್ಟಿಗೆ ಸಾಯಿಯವರ ಪೂಜೆ ಮತ್ತು ಆರತಿಯನ್ನು ಮಾಡುವ ಪರಿಪಾಟ ಆರಂಭವಾಯಿತು. ಸಾಥೆಯವರು ಓರ್ವ ಬ್ರಾಹ್ಮಣನಾದ ಮೇಘ ಅವರನ್ನು ಸಾಯಿಯವರ ಪೂಜೆ ಮತ್ತು ಆರತಿ ಮಾಡಲು ಶಿರಡಿಗೆ ಕಳುಹಿಸಿದರು. ಮೇಘ ಬ್ರಾಹ್ಮಣನಾದರೂ ಅವರಿಗೆ ಗಾಯತ್ರಿ ಮಂತ್ರವಾಗಲಿ ಅಥವಾ ಇನ್ನಿತರ ಯಾವುದೇ ಪೂಜೆಯಾಗಲಿ ಬರುತ್ತಿರಲಿಲ್ಲ. ಆಲ್ಲದೇ ಸಾಯಿಯವರು ಮುಸ್ಲಿಂ ಎಂದು ಅವರ ಪೂಜೆ ಮಾಡಲು ಮೇಘ ಮೊದಲಿಗೆ ಒಪ್ಪಲಿಲ್ಲ. ಆದರೆ ಮೇಘ ಯಾವಾಗಲೂ ಶಿವಪಂಚಾಕ್ಷರಿ ಮಂತ್ರವಾದ "ಓಂ ನಮಃ ಶಿವಾಯ" ವನ್ನು ಜಪಿಸುತ್ತಿದ್ದರು. ಸಾಥೆಯವರು ಅವರಿಗೆ ಗಾಯತ್ರಿ ಮಂತ್ರವನ್ನು, ಸಂಧ್ಯಾವಂದನೆಯನ್ನು ಹೇಳಿಕೊಟ್ಟು ಶಿವಪೂಜೆ ಮಾಡಿಕೊಂಡು ಇರುವಂತೆ ಹೇಳಿ ಶಿರಡಿಗೆ ಬಲವಂತವಾಗಿ ಕಳುಹಿಸಿದರು. ಸಾಥೆಯವರ ಒತ್ತಾಯಕ್ಕೆ ಮಣಿದು ಮೇಘರವರು ಶಿರಡಿಗೆ ಹೊರಟರು. ಮಸೀದಿಗೆ ಕಾಲಿಟ್ಟ ತಕ್ಷಣ ಬಾಬಾರವರು ಕೋಪಗೊಂಡು "ಈ ರಾಸ್ಕಲ್ ನನ್ನು ಇಲ್ಲಿಂದ ಓಡಿಸಿ" ಎಂದು ಹೇಳಿ ಮಸೀದಿಯ ಒಳಗೆ ಬರಲು ಬಿಡಲಿಲ್ಲ. ಮೇಘರವರು ತ್ರಯಂಬಕಕ್ಕೆ ಹೋಗಿ ಒಂದೂವರೆ ವರ್ಷಗಳ ಕಾಲ ಶಿವನ ಪೂಜೆಯನ್ನು ಮಾಡಿ ನಂತರ ಮರಳಿ ಶಿರಡಿಗೆ ಬಂದರು. ಆಗ ಸಾಯಿಯವರು ಅವರನ್ನು ಮಸೀದಿಯ ಒಳಗಡೆ ಬರಲು ಅನುಮತಿ ನೀಡಿದರು. ಅಷ್ಟೇ ಆಲ್ಲದೇ ಮಸೀದಿಯಲ್ಲಿ ತಮ್ಮ ಪೂಜೆಯನ್ನು ಮಾಡಲು ಅನುಮತಿ ಕೂಡ ನೀಡಿದರು. ಸಾಯಿಯವರು ಸಾಕ್ಷಾತ್ ಶಿವನ ಅವತಾರ ಎಂದು ಮೇಘರವರು ಚೆನ್ನಾಗಿ ಮನಗಂಡರು. ಪ್ರತಿನಿತ್ಯ ಶಿರಡಿಯಿಂದ 5 ಮೈಲು ದೂರದಲ್ಲಿದ್ದ ಗೋದಾವರಿ ನದಿಯಿಂದ ನೀರನ್ನು ಹೊತ್ತು ತಂದು ಸಾಯಿಯವರ ಮೇಲೆ ಅದನ್ನು ಹಾಕಿ ಅಭಿಷೇಕ ಮಾಡಿ ಪೂಜೆ ನೆರವೇರಿಸುತ್ತಿದ್ದರು.

ಸಾಥೆಯವರು ಬಾಬಾರವರಿಂದ ಲೌಕಿಕ ಅನುಕೂಲಗಳನ್ನು ಪಡೆದುಕೊಂಡರು. ಸಾಥೆಯವರು ನಿವೃತ್ತಿ ಹೊಂದಿದಾಗ ಪಿಂಚಣಿಗೆ ಅರ್ಜಿ ಹಾಕಿದಾಗ ಅವರಿಗೆ ಬರಬೇಕಾಗಿದ್ದಕ್ಕಿಂತ 50 ರುಪಾಯಿ ಕಡಿಮೆ ಮಂಜೂರಾಯಿತು. ಆಗ ಸಾಥೆಯವರು ಕಡಿಮೆ ಮಾಡಿದ್ದಕ್ಕೆ ವಿರೋಧಿಸಿ ಅರ್ಜಿಯನ್ನು ಹಾಕಿದರು. ಸಾಯಿಬಾಬಾರವರು ಧುಮಾಳ್ ರನ್ನು 50 ರುಪಾಯಿ ದಕ್ಷಿಣೆ ಕೇಳಿದರು. ಅವರು ತಮ್ಮ ಬಳಿ ಇಲ್ಲ ಎಂದರು. ಆಗ ಸಾಯಿಯವರು ಸಾಥೆಯವರ ಬಳಿ ಹೋಗಿ ತೆಗೆದುಕೊಂಡು ಬಾ ಎಂದು ಕಳುಹಿಸಿದರು. ಧುಮಾಳ್ ರವರು ಸಾಥೆಯವರ ಬಳಿ ಬಂದು 50 ರುಪಾಯಿಗಳನ್ನು ಕೇಳಿದರು. ಆಗ ಸಾಥೆಯವರಿಗೆ ಅತೀವ ಸಂತೋಷವಾಯಿತು. ಏಕೆಂದರೆ ತಾವು ಪಿಂಚಣಿ ಹಣ 50 ರುಪಾಯಿ ಏರಿಕೆಗೆ ಅರ್ಜಿ ಸರ್ಕಾರಕ್ಕೆ ಸಲಿಸಿದ್ದುದು ಜಯಪ್ರದವಾಗುವಂತೆ ಅನಿಸಿತು. ಕೂಡಲೇ ಸಾಥೆಯವರು 50 ರುಪಾಯಿಗಳನ್ನು ಧುಮಾಳ್ ರಿಗೆ ನೀಡಿದರು. ಅದೇ ದಿನ ಅವರ ಅರ್ಜಿ ಸ್ವೀಕಾರವಾಗಿ 50 ರುಪಾಯಿಗಳ ಹೆಚ್ಚಿನ ಪಿಂಚಣಿ ಮಂಜೂರಾಯಿತು.

ಸಾಥೆಯವರು ಬಾಬಾರವರ ಬಳಿ ಧಾರ್ಮಿಕ ಉನ್ನತಿಗಾಗಿ ಎಂದು ಹೋಗಲಿಲ್ಲ. ಆದರೆ ಸಾಯಿಯವರೇ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದ್ದರು. ಉದಾಹರಣೆಗಾಗಿ ಹೇಳುವುದಾದರೆ ಒಂದು ಸಾರಿ ಅವರು ಶಿರಡಿಯಲ್ಲಿದ್ದಾಗ ಅವರ ಯೋಚನೆಗಳು ಸಡಿಲವಾಗಿ ಅವರು ಒಮ್ಮೆ ಅನೈತಿಕ ಸಂಬಂಧವುಳ್ಳ ಓರ್ವ ಸ್ತ್ರೀ ಮನೆಗೆ ಹೋಗಲು ಮನಸ್ಸು ಮಾಡಿದರು. ಅಲ್ಲಿಗೆ ಹೋಗುವ ಮೊದಲು ಅವರು ಬಾಬಾರವರಿಗೆ ನಮಸ್ಕರಿಸಿದರು. ಕೂಡಲೇ ಬಾಬಾರವರು "ನೀನು ಆ ಸ್ತ್ರೀಯ ಮನೆಗೆ ಹೋಗಿದ್ದೆಯಾ" ಎಂದು ಕೇಳಿದರು. ಆಗ ಸಾಥೆಯವರು ಏನೋ ಒಂದು ರೀತಿಯ ಹಾರಿಕೆಯ ಉತ್ತರವನ್ನು ಕೊಟ್ಟರು. ಬಾಬಾರವರು ಸಾಥೆಯವರು ತಮ್ಮ ಹೇಳಿಕೆಯನ್ನು ಸಾಥೆ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲವೆಂದು ತಿಳಿದು ಸುಮ್ಮನಾದರು. ಸಂಜೆ ಸಾಥೆಯವರು ಆ ಸ್ತ್ರೀ ಮನೆಗೆ ಹೋದರು. ಆಗ ಬಾಗಿಲ ಹಿಂದೆ ನಿಂತು ಅವಳ ಬಳಿ ಮಾತನಾಡುತ್ತಿದ್ದರು. ಅದು ಅವರನ್ನು ಪತನಕ್ಕೆ ಕೊಂಡೊಯ್ಯುವುದಾಗಿತ್ತು. ಕೂಡಲೇ ಆ ಬಾಗಿಲು ತೆರೆಯಿತು. ಬಾಗಿಲ ಹೊಸ್ತಿಲಿನಲ್ಲಿ ಬಾಬಾರವರು ನಿಂತಿದ್ದರು. ಕೈಬೀಸಿ ಸಾಥೆಯವರನ್ನು ಉದ್ದೇಶಿಸಿ "ಏನು? ಎಷ್ಟು ದೂರದಿಂದ ನಿನ್ನ ಗುರುವಿನ ಬಳಿ ಬಂದಿರುವೆ? ಈಗ ಈ ನರಕಕ್ಕೆ ಬೀಳುತ್ತಿರುವೆಯಾ?" ಎಂದು ಗದರಿಸಿದರು. ಸಾಥೆಯವರು ತುಂಬಾ ಪಶ್ಚಾತ್ತಾಪ ಪಟ್ಟರು. ಪುನಃ ಅವಳ ಮನೆಯ ಬಳಿಗೆ ಸುಳಿಯಲೇ ಇಲ್ಲ. ಈ ರೀತಿ ಬಾಬಾರವರು ಸಾಥೆಯವರನ್ನು ಕಾಪಾಡಿದರು.

ಇನ್ನೊಂದು ಸಂದರ್ಭದಲ್ಲಿ ಇದೇ ರೀತಿ ಬಾಬಾರವರು ಸಹಾಯ ಮಾಡಿದರು. ಸಾಥೆಯವರು ಶಿರಡಿಯಲ್ಲಿ ಒಂದು ನಿವೇಶನವನ್ನು ಖರೀದಿಸಿ ಅದನ್ನು ನೋಡಲು ಹೋಗಬೇಕೆಂದು ಕೊಂಡಿದ್ದರು. ಅವರು ಒಂದು ಗಾಡಿಗೆ ಹೇಳಿದರು. ಅವರ ಪತ್ನಿ ಕೂಡ ಬರುವೆನೆಂದರು. ಆದರೆ ದುರದೃಷ್ಟವಶಾತ್ ಅವರ ಸಹೋದರ ಬಾಪು ಅಲ್ಲಿ ವಾಸಿಸಿದ್ದು ಆಗ ತಾನೇ ಕಾಲವಾಗಿದ್ದ. ದಾದಾ ಕೇಳ್ಕರ್ ರವರು ಬಾಪುವಿನ ವಿಧವೆ ಇದನ್ನು ತಿಳಿದರೆ ಅದರಿಂದ ಅವಳು ಹಕ್ಕು ಸಾಧಿಸಬಹುದು ಎಂದು ಅವರು ತಮ್ಮ ಮಗಳಿಗೆ (ಸಾಥೆಯವರ ಪತ್ನಿ) ನಿವೇಶನ ನೋಡಲು ಹೋಗಬೇಡ ಎಂದು ಹೇಳಿದರು. ಅದರಂತೆ ಸಾಥೆಯವರ ಪತ್ನಿ ಅವರ ಜೊತೆ ಹೊರಡಲು ಒಪ್ಪಲಿಲ್ಲ. ಆಗ ಸಾಥೆಯವರಿಗೆ ಕೋಪ ಬಂದು ಅವರು ಗಾಡಿಯವನಿಂದ ಕೋಲನ್ನು ತೆಗೆದುಕೊಂಡು ಬಂದು ತಮ್ಮ ಹೆಂಡತಿಗೆ ಹೊಡೆಯುವುದರಲ್ಲಿದ್ದರು. ಆ ಕ್ಷಣದಲ್ಲಿ ಮೇಘ ಅಲ್ಲಿಗೆ ಬಂದು ಬಾಬಾರವರು ನಿಮ್ಮನ್ನು ಕರೆಯುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ಸಾಥೆಯವರು ತಮ್ಮ ಕೋಲನ್ನು ಕೆಳಗಿಳಿಸಿದರು ಮತ್ತು ಬಾಬಾರವರ ಬಳಿ ಓಡಿ ಬಂದರು. ಆಗ ಬಾಬಾರವರು "ಏನಾಯಿಗಿದೆ ನಿನ್ನ ನಿವೇಶನಕ್ಕೆ. ಅದು ಅಲ್ಲಿಯೇ ಇದೆ. ನೀನು ಅದನ್ನೇಕೆ ನೋಡಲು ಹೋಗಬೇಕು" ಎಂದು ಕೇಳಿದರು. ಹೀಗೆ ಬಾಬಾರವರು ತಮ್ಮ ಸಹಾಯ ಹಸ್ತವನ್ನು ಯಾವಾಗಲೂ ಚಾಚುತ್ತಿದ್ದರು.

ಬಾಬಾರವರ ದಯೆ ಸಾಥೆಯವರ ಕುಟುಂಬದ ವ್ಯವಹಾರ ಮತ್ತು ಹಣದ ವಿಷಯದಲ್ಲಿ ಇದ್ದಿತು. ಸಾಥೆಯವರು ನಿವೃತ್ತರಾದಾಗ ಅವರ ಆದಾಯ ಕಡಿಮೆಯಾಗಿ ಅವರು ತಮ್ಮ ಪತ್ನಿಯ ಆಭರಣಗಳನ್ನು ಮಾರಬೇಕಾಯಿತು. ಆಗ ಬಾಬಾರವರು ಕೇಳ್ಕರ್ ರವರಿಗೆ "ಏಕೆ ಈ ದಡ್ಡ ನನ್ನ ಮಗಳ ಆಭರಣ ಮಾರಿದ" ಎಂದು ಚೆನ್ನಾಗಿ ಬಯ್ದರು.

ಸಾಥೆಯವರು ಬಾಬಾರವರು ತಮ್ಮನ್ನು ನಾನಾವಲ್ಲಿಯಿಂದ ರಕ್ಷಿಸದಿದ್ದರೂ ಬಾಬಾರವರನ್ನು ನಂಬುತ್ತಿದ್ದರು. "ಸಾಯಿ ಕರಂಡಕ" ಎಂಬ ಇಂಗ್ಲೀಷ್ ಪುಸ್ತಕದಲ್ಲಿ ಸಾಥೆಯವರು ಸಾಯಿಬಾಬಾರವರ ಬಗ್ಗೆ ಬರೆದ 10-12 ಕಥೆಗಳು ಪ್ರಕಟವಾಗಿವೆ. ಇದನ್ನು ಹಲವರು ಚಾರಿತ್ರಿಕವಾದುದು ಎಂದು ತಪ್ಪು ತಿಳಿದಿದ್ದಾರೆ. ಆದರೆ ಸಾಥೆಯವರು 1936 ರಲ್ಲಿ ಇದನ್ನು ಕಾದಂಬರಿ ಎಂದು ಹೇಳಿದ್ದಾರೆ. ಸಾಥೆಯವರು "ಸಾಯಿ ಪ್ರಭ" ಎಂಬ ನಿಯತಕಾಲಿಕವನ್ನು ನಡೆಸುತ್ತಿದ್ದರು ಮತ್ತು ಅದನ್ನು ನಾರಾಯಣ ಸುಂದರ ರಾವ್ ಆಲಿಯಾಸ್ ರಾಮಗೀರ್ ಅವರು ನೋಡಿಕೊಳ್ಳುತ್ತಿದ್ದರು. 

Sunday, September 5, 2010

ಅಂಧ ಸಾಯಿಭಕ್ತರಿಗಾಗಿ ಬ್ರೈಲ್ ಲಿಪಿಯಲ್ಲಿ ರಚಿತವಾಗಿರುವ "ಶ್ರೀ ಸಾಯಿಬಾಬಾ ಆಫ್ ಶಿರಡಿ" ಆಂಗ್ಲ ಪುಸ್ತಕ ಬಿಡುಗಡೆ - ಕೃಪೆ - ಶ್ರೀ.ಗೌತಮ್, ಪ್ರಕಾಶಕರು

ಅಂಧ ಸಾಯಿಭಕ್ತರಿಗಾಗಿ ಬ್ರೈಲ್ ಲಿಪಿಯಲ್ಲಿ ರಚಿಸಿರುವ "ಶ್ರೀ.ಸಾಯಿಬಾಬಾ ಆಫ್ ಶಿರಡಿ" ಎಂಬ ಆಂಗ್ಲ ಭಾಷೆಯ ಪುಸ್ತಕವನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಈ ಪುಸ್ತಕವನ್ನು ಬೆಂಗಳೂರಿನ ಸಾಯಿ ಭಕ್ತ ಶ್ರೀ.ಗೌತಮ್ ರವರು ಬ್ರೈಲ್ ಟ್ರಾನ್ಸ್ಕ್ರಿಪ್ಶನ್ ಸೆಂಟರ್, ಬೆಂಗಳೂರು ಇವರ ಸಹಯೋಗದೊಂದಿಗೆ ಹೊರತಂದಿದ್ದಾರೆ.

ಬ್ರೈಲ್ ಲಿಪಿಯಲ್ಲಿ ರಚಿತವಾಗಿರುವ ಪುಸ್ತಕ

ಈ ಪುಸ್ತಕವನ್ನು ಅಂಧ ಸಾಯಿ ಭಕ್ತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸುಂದರ ಸಾಯಿಬಾಬಾರವರ ವಿಗ್ರಹವನ್ನು ಕೂಡ ಗೌತಮ್ ರವರು ನೀಡುತ್ತಿದ್ದಾರೆ.

ಪುಸ್ತಕವನ್ನು ಪಡೆಯಲಿಚ್ಚಿಸುವ ಸಾಯಿಭಕ್ತರು ಈ ಕೆಳಕಂಡ ವಿಳಾಸದಲ್ಲಿ ಗೌತಮ್ ರವರನ್ನು ಸಂಪರ್ಕಿಸಬಹುದು:

ಶ್ರೀ.ಗೌತಮ್
ನಂ.45/1, ಗೋವಿಂದಪ್ಪ ರಸ್ತೆ,
ಬಸವನಗುಡಿ
ಬೆಂಗಳೂರು-560 004.
ಮೊಬೈಲ್ : 99809 03081.
ಈ ಮೇಲ್ : mailto:bsgautham@yahoo.com 
ಶಿರಡಿ ಸಾಯಿಬಾಬಾರವರಿಗೆ 10 .5 ಕಿಲೋ ಬೆಳ್ಳಿಯ ಘಂಟೆಯನ್ನು ಅರ್ಪಿಸಿದ ದೆಹಲಿಯ ಸಾಯಿ ಭಕ್ತ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ 

ದೆಹಲಿಯ ಸಾಯಿಭಕ್ತರಾದ ಶ್ರೀ.ಬ್ರಿಜಲಾಲ್ ಖದ್ರಿಯರವರು 10.5 ಕಿಲೋ ತೂಕದ ಸುಂದರವಾದ ಬೆಳ್ಳಿಯ ಘಂಟೆಯನ್ನು ಶಿರಡಿ ಸಾಯಿಬಾಬಾರವರಿಗೆ ಕಾಣಿಕೆಯಾಗಿ ಅರ್ಪಿಸಿದರು. ಅದನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸಂಸ್ಥಾನದ ಪರವಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಿರಡಿ ನಗರಾಧ್ಯಕ್ಷರಾದ ಶ್ರೀಮತಿ.ಜಯಶ್ರೀ ತೋರಟ್ ರವರು ಕೂಡ ಉಪಸ್ಥಿತರಿದ್ದರು.

ಸಾಯಿಭಕ್ತರಿಗಾಗಿ ಅದರ ಫೋಟೋವನ್ನು ಈ ಕೆಳಗೆ ಕೊಡಲಾಗಿದೆ.

ದೆಹಲಿಯ ಸಾಯಿಭಕ್ತರೊಬ್ಬರು ಸಾಸನೆಯವರಿಗೆ ಬೆಳ್ಳಿಯ ಘಂಟೆ ನೀಡುತ್ತಿರುವ ದೃಶ್ಯ

Saturday, September 4, 2010

ಪ್ರಪಂಚದಾದ್ಯಂತ ಹರಡುತ್ತಿರುವ ಶಿರಡಿ ಸಾಯಿಬಾಬಾರವರ ಮಂದಿರಗಳು, ಆಂಧ್ರ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಭಾರತದ ಅತಿ ದೊಡ್ಡ ಮಂದಿರ - ಶ್ರೀ. ಮೋಹನ್ ಯಾದವ್, ಸಾರ್ವಜನಿಕ ಸಂಪರ್ಕಾಧಿಕಾರಿ, ಶ್ರೀ.ಶಿರಡಿ ಸಾಯಿಬಾಬಾ ಸಂಸ್ಥಾನ, ಶಿರಡಿ

ಚೆನ್ನೈ ನಗರದ ಮೈಲಾಪುರ್ ಸಾಯಿಬಾಬಾ ಮಂದಿರದಲ್ಲಿ ಇತ್ತೀಚಿಗೆ ಜರುಗಿದ ಕುಂಭಾಭಿಷೇಕ ಮಹೋತ್ಸವವು ಸಾಯಿಬಾಬಾ ತಮ್ಮ ಭಕ್ತರನ್ನು ಹೇಗೆ ತಮ್ಮೆಡೆಗೆ ಆಕರ್ಷಿಸುತ್ತಾ ಇದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.

ಭಾರತದ ಆಂಧ್ರಪ್ರದೇಶದಲ್ಲೇ ಸಾವಿರಾರು ಸಾಯಿಬಾಬಾ ಮಂದಿರಗಳಿವೆ. ಆಲ್ಲದೇ, ಚೆನ್ನೈ, ದೆಹಲಿ, ಹರ್ಯಾಣ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಅನೇಕ ಸಾಯಿ ಮಂದಿರಗಳು ತಲೆ ಎತ್ತಿವೆ.

ಸಾಯಿಯವರ ಭಾರತ ದೇಶಕ್ಕಷ್ಟೇ ಸೀಮಿತವಾಗಿರದೆ ಪ್ರಪಂಚದೆಲ್ಲೆಡೆ ಹರಡಿದೆ. ಅಮೇರಿಕ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಕೆನಡಾ, ಸಿಂಗಾಪುರ್, ಕೀನ್ಯ, ಇಂಡೋನೇಶಿಯ, ಮಲೇಶಿಯ, ಮಾರಿಷಸ್, ನ್ಯೂಜಿಲ್ಯಾಂಡ್, ತಾಂಜೇನಿಯ, ಇಂಗ್ಲೆಂಡ್, ಹಾಂಗ್ ಕಾಂಗ್, ಶ್ರೀಲಂಕ, ಕುವೈತ್, ಜಾಂಬಿಯಾ, ಜಪಾನ್, ಸೌದಿ ಅರೇಬಿಯಾ, ರಷ್ಯ, ನೆದರ್ ಲ್ಯಾಂಡ್, ಸ್ಪೇನ್, ಫಿಜಿ, ಬರ್ಮುಡಾ, ನಾರ್ವೆ, ವೆಸ್ಟ್ ಇಂಡೀಸ್ ಮತ್ತು ಇನ್ನು ಹಲವಾರು ರಾಷ್ಟ್ರಗಳಲ್ಲಿ ಸಾಯಿಬಾಬಾ ಮಂದಿರಗಳು ತಲೆ ಎತ್ತಿವೆ. ಈ ಮಂದಿರಗಳಲ್ಲಿ ಪ್ರತಿ ಗುರುವಾರ 500 ರಿಂದ 600 ಭಕ್ತರು ಬಂದು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿ ಹೋಗುವ ವಾಡಿಕೆ ಇಟ್ಟುಕೊಂಡಿದ್ದಾರೆ. 100 ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳು ಎಲ್ಲೆಡೆ ತಲೆ ಎತ್ತಿವೆ. ಚಿಕಾಗೋ ಸಮೀಪದ 120 ವರ್ಷಕ್ಕೂ ಹಳೆಯದಾದ ಪುರಾತನ ಚರ್ಚ್ ಒಂದರಲ್ಲಿ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಿರುವುದೇ ಆಲ್ಲದೇ ಪ್ರತಿನಿತ್ಯ 4 ಆರತಿಗಳನ್ನು ತಪ್ಪದೆ ಮಾಡುತ್ತಾರೆ.  1982 ರಲ್ಲಿ ಅಮೇರಿಕ ದೇಶದ ನ್ಯೂಯಾರ್ಕ್ ನಗರದಲ್ಲಿ ಪ್ರಥಮ ಸಾಯಿಬಾಬಾ ಮಂದಿರ ತಲೆ ಎತ್ತಿತು. ಈ ಮಂದಿರದಲ್ಲಿನ ವಿಗ್ರಹವನ್ನು ಮುಂಬೈನ ಪ್ರಸಿದ್ದ ಶ್ರೀ.ರಾಜು ತಾಲೀಮ್ ನಿರ್ಮಿಸಿದ್ದಾರೆ. ಈ ಸುಂದರ ವಿಗ್ರಹವನ್ನು 1998 ರಲ್ಲಿ ಪ್ರತಿಷ್ಟಾಪಿಸಲಾಯಿತು. ಅಮೇರಿಕಾದ ಸ್ಲೋಶಿಂಗ್ ಮತ್ತು ವಾಲ್ದವಿನ್ ನಗರದಲ್ಲೂ ಸಾಯಿ ಮಂದಿರಗಳಿವೆ. ಅಮೇರಿಕಾದ ಡಾ.ಕಾರ್ಲಿನ್ ಮ್ಯಾಕ್ಲೇನ್ ಮತ್ತು ಮೇರಿ ರಾಬರ್ಟ್ಸ್ ರವರು ಸಾಯಿಬಾಬಾರವರ ಜೀವನ ಚರಿತ್ರೆ ಮತ್ತು ಉಪದೇಶಗಳನ್ನು ವಿಷಯವಾಗಿ ತೆಗೆದುಕೊಂಡು ಅದರ ಬಗ್ಗೆ ಪಿ.ಹೆಚ್.ಡಿ.ಅಧ್ಯಯನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಇವರುಗಳು 8 ದಿನ ಶಿರಡಿಯಲ್ಲಿ ತಂಗಿದ್ದು ಸಾಯಿಬಾಬಾರವರು ತಂಗುತ್ತಿದ್ದ ಸ್ಥಳಗಳು, ಪುಸ್ತಕಗಳು, ಕ್ಯಾಸೆಟ್ ಮತ್ತು ಸಿಡಿಗಳು, ಪ್ರಸಾದಾಲಯ, ಭಕ್ತಿ ನಿವಾಸ, ಸಾಯಿ ಆಸ್ಪತ್ರೆ ಮತ್ತು ಇನ್ನು ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದು ಹಿಂತಿರುಗಿದ್ದಾರೆ. ಆಸ್ಟ್ರೇಲಿಯದಲ್ಲಿ ಸಾಯಿಬಾಬಾರವರ 5 ಮಂದಿರಗಳಿದ್ದು ಸಿಡ್ನಿಯ ಮಂದಿರ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿದೆ. ಕೆನಡಾದ ಟೊರಂಟೊ ಮತ್ತು ವಾನ್ಕುವರ್ ನಲ್ಲಿ ಸಾಯಿ ಮಂದಿರಗಳಿವೆ. ಮುಕ್ಕಾಲು ಪಾಲು ಸಾಯಿಬಾಬಾ ವಿಗ್ರಹಗಳು ರಾಜಸ್ತಾನದ ಜೈಪುರ್ ನಲ್ಲಿ ತಯಾರಾಗುತ್ತವೆ. ಈ ವಿಗ್ರಹಗಳನ್ನು ತಯಾರಿಸುವ ಬಹುತೇಕ ಮಂದಿ ಸಾಯಿಭಕ್ತರು ಎನ್ನುವುದು ಗಮನಾರ್ಹ ಅಂಶ.

ಆಂಧ್ರ ಪ್ರದೇಶ ಅತಿ ಹೆಚ್ಚು ಸಾಯಿ ಮಂದಿರಗಳನ್ನು ಹೊಂದಿರುವ ರಾಜ್ಯ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಅದಕ್ಕೆ ಮತ್ತೊಂದು ಕಿರೀಟ ಎಂಬಂತೆ ಮತ್ತೊಂದು ಬೃಹತ್ ಮಂದಿರ ತಿರುಪತಿಗೆ 35 ಕಿಲೋಮೀಟರ್ ದೂರದಲ್ಲಿ ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿರುವ ನಗಾರಿಯ ಎಂಬಲ್ಲಿ ತಲೆ ಎತ್ತುತ್ತಿದೆ. ಈ ಮಂದಿರವು ಬೆಟ್ಟದ ಮೇಲೆ ಭೂಮಿಯಿಂದ ಸುಮಾರು 300 ರಿಂದ 400 ಅಡಿ ಎತ್ತರದಲ್ಲಿ ನಿರ್ಮಿತವಾಗುತ್ತಿದೆ. ಈ ಮಂದಿರ ಪೂರ್ಣವಾದಾಗ ಭಾರತದಲ್ಲೇ ಅತಿ ದೊಡ್ಡದಾದ ಸಾಯಿ ಮಂದಿರವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಈ ಮಂದಿರವು 10 ಎಕರೆ ಪ್ರದೇಶದಲ್ಲಿ ಸುಮಾರು 10 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರತಿ ವರ್ಷ ರಾಮನವಮಿ, ಗುರುಪೂರ್ಣಿಮೆ, ಸಾಯಿಯವರ ಪುಣ್ಯತಿಥಿ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಉತ್ಸವದ ದಿನಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಪಲ್ಲಕ್ಕಿಯೊಡನೆ ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಾರೆ. ಸಾಯಿಯವರ ಮಹಾ ನಿರ್ವಾಣವಾಗಿ 9 ದಶಕಗಳು ಕಳೆದಿವೆ. ಆದರೆ ಸಾಯಿಯವರ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ಹೆಚ್ಚುತ್ತಿರುವ ಸಾಯಿಭಕ್ತರ ಅನುಕೂಲಕ್ಕಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದವರು ಬೃಹತ್ ಪ್ರಸಾದಾಲಯ, ಸುಸಜ್ಜಿತ ಆಸ್ಪತ್ರೆ, ಭಕ್ತಿನಿವಾಸ, ದ್ವಾರಾವತಿ ಮತ್ತು ಇನ್ನು ಹಲವಾರು ವ್ಯವಸ್ಥೆಯನ್ನು ಮಾಡುತ್ತಲೇ ಬಂದಿದ್ದಾರೆ.

ಚೆನ್ನೈ ನಗರದ ಸಾಫ್ಟ್ ವೇರ್ ಉದ್ಯಮಿ ಶ್ರೀ.ಕೆ.ವಿ.ರಮಣಿ ಯವರು ಸಾಯಿ ಭಕ್ತರ ಅನುಕೂಲಕ್ಕಾಗಿ ಸಂಸ್ಥಾನಕ್ಕೆ 100 ಕೋಟಿ ರುಪಾಯಿಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ. ಅಷ್ಟೇ ಆಲ್ಲದೇ "ಸಾಯಿ ಆಶ್ರಮ" ಎಂಬ ಸುಮಾರು 10000 ಭಕ್ತರಿಗೆ ಉಳಿದುಕೊಳ್ಳಲು ಸಹಾಯವಾಗುವಂತೆ ಬೃಹತ್ ಕಟ್ಟಡದ ಮೇಲ್ವಿಚಾರಣೆಯನ್ನು ಕೂಡ ವಹಿಸಿಕೊಂಡಿದ್ದಾರೆ.

ಶಿರಡಿ ಸಾಯಿಬಾಬಾ ಸಂಸ್ಥಾನವು 2018 ರಲ್ಲಿ ನಡೆಯಲಿರುವ ಸಾಯಿಬಾಬಾರವರ ಶತಮಾನೋತ್ಸವ ಸಮಾರಂಭಕ್ಕೆ ಈಗಿನಿಂದಲೇ ಅದ್ದೂರಿ ಸಿದ್ದತೆಗಳನ್ನು ನಡೆಸುತ್ತಿದೆ.
ಭಾರತದ ಸುಪ್ರಸಿದ್ದ ಕ್ರಿಕೆಟ್ ಪಟು ವೆಂಕಟ ಸಾಯಿ ಲಕ್ಷ್ಮಣ್ ರಿಂದ "ಸಾಯಿ ಭೋಧ" ತೆಲುಗು ಸಿಡಿ ಬಿಡುಗಡೆ - ಶ್ರೀ. ಎನ್.ಜಗನ್ನಾಥ್ ದಾಸ, ಎಕ್ಸ್ಪ್ರೆಸ್ ಬಜ್.ಕಾಂ 

ಭಾರತದ ಸುಪ್ರಸಿದ್ದ ಕ್ರಿಕೆಟ್ ಪಟು ಶ್ರೀ.ವೆಂಕಟ ಸಾಯಿ ಲಕ್ಷ್ಮಣ್ ತಮ್ಮ ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ನಂತರ ತಮಗೆ ಇರುವ ಆಧ್ಯಾತ್ಮಿಕ ಆಸಕ್ತಿಯನ್ನು ಪ್ರಪಂಚದ ಎಲ್ಲಾ ಜನತೆಗೆ ತೋರ್ಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ನಲ್ಲಿ ಆಕರ್ಷಕ ಆಟವಾಡಿ ಭಾರತಕ್ಕೆ ವಿಜಯ ಮಾಲೆಯನ್ನು ತಂದು ಕೊಟ್ಟ ಲಕ್ಷ್ಮಣ್ ಭಾರತಕ್ಕೆ ಮರಳಿ ಬಂದ ಕೂಡಲೇ ನೇರ ಹೈದರಾಬಾದ್ ಗೆ ತೆರಳಿ ಅಲ್ಲಿ ಶಿರಡಿ ಸಾಯಿಬಾಬಾರವರ ಮೇಲೆ ಹೆಣೆಯಲಾದ ತೆಲುಗು ಹಾಡುಗಳ ಸಿಡಿಯನ್ನು 11ನೇ ಆಗಸ್ಟ್ 2010 ರಂದು  ಬಿಡುಗಡೆ ಮಾಡಿದ್ದಾರೆ. ಶ್ರೀ.ಲಕ್ಷ್ಮಣ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು.

ಲಕ್ಷ್ಮಣ್ ಮತ್ತು ಬಾಬಾ ಕೃಷ್ಣ ಮೋಹನ್ "ಸಾಯಿ ಭೋಧ" ಬಿಡುಗಡೆ ಸಮಾರಂಭದಲ್ಲಿ

ಸುಪ್ರಸಿದ್ದ ತೆಲುಗು ಚಲನಚಿತ್ರ ನಟರಾದ ಶ್ರೀ.ವೆಂಕಟೇಶ್, ಪ್ರಸಿದ್ದ ಬ್ಯಾಡ್ ಮಿಂಟನ್ ಪಟು ಶ್ರೀ.ಪುಲ್ಲೇಲ ಗೋಪಿಚಂದ್, ಹೈದರಾಬಾದ್ ಪೋಲಿಸ್ ಮಹಾ ಆಯುಕ್ತ ಶ್ರೀ.ಗಿರೀಶ್ ಕುಮಾರ್ ಮತ್ತು ಲಕ್ಷ್ಮಣ್ ರವರ ಚಿಕ್ಕಪ್ಪನವರಾದ  ಶ್ರೀ.ಬಾಬಾ ಕೃಷ್ಣ ಮೋಹನ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆರ್.ಬಾಬಾ ಕೃಷ್ಣ ಮೋಹನ್ ಮತ್ತು  ಆರ್.ಸುಧಾ ರವರು ನಿರ್ಮಾಪಕರಾಗಿರುವ ಈ ಧ್ವನಿಸುರಳಿಯಲ್ಲಿ ಸಾಯಿ ಸಚ್ಚರಿತೆಯಲ್ಲಿ ತಿಳಿಸಿರುವ ಸಾಯಿಬಾಬಾರವರ ಉಪದೇಶಗಳನ್ನು ಅಳವಡಿಸಿ ತೆಲುಗಿನಲ್ಲಿ ಹಾಡುಗಳನ್ನು ರಚಿಸಲಾಗಿದೆ.

ಈ ಧ್ವನಿಸುರಳಿಯಲ್ಲಿ ಸುಪ್ರಸಿದ್ದ ಗಾಯಕರಾದ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಂ, ಶಂಕರ ಮಹಾದೇವನ್, ಬಾಂಬೆ ಜಯಶ್ರೀ ಮತ್ತು ಪ್ರಿಯ ಸಹೋದರಿಯರು ಹಾಡಿರುವ ಸಾಯಿಬಾಬಾರವರ ತೆಲುಗು ಭಕ್ತಿ ಗೀತೆಗಳಿವೆ. ಅಷ್ಟೇ ಆಲ್ಲದೇ, ಪ್ರತಿ ಭಕ್ತಿ ಗೀತೆಯ ಪ್ರಾರಂಭದಲ್ಲಿ ಆ ಹಾಡಿನ ಬಗ್ಗೆ ವಿವರವಾಗಿ ವ್ಯಾಖ್ಯಾನ ನೀಡಲಾಗಿದೆ.

ಈ ಸುಂದರ ಸಮಾರಂಭದ ವೀಡಿಯೋವನ್ನು ನೋಡಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:


ದಾದರ್, ಮುಂಬೈ - ಸಾಯಿನಗರ, ಶಿರಡಿ ಹೊಸ ರೈಲು ಸೇವೆ ಆರಂಭ - ಆಧಾರ - ಮಧ್ಯ ರೈಲ್ವೆ ಪ್ರಕಟಣೆ 

ಮುಂಬೈನ ಸಾಯಿಬಾಬಾ ಭಕ್ತರಿಗೆ ಸಿಹಿ ಸುದ್ದಿ!!!!! . ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀಯುತ.ಅಶೋಕ್ ಚವಾಣ್ ರವರು ಕಳೆದ ತಿಂಗಳ 27ನೇ ಆಗಸ್ಟ್ 2010 ರ ಶುಭ ಶುಕ್ರವಾರದಂದು ದಾದರ್, ಮುಂಬೈ - ಸಾಯಿನಗರ, ಶಿರಡಿಯ ನಡುವೆ "ದಾದರ್-ಸಾಯಿನಗರ ಸೂಪರ್ ಫಾಸ್ಟ್ ರೈಲು" ಸೇವೆಗೆ ಹಸಿರು ನಿಶಾನೆ ತೋರಿಸಿದರು.

ಹೊಸ ರೈಲು ಹೂವುಗಳಿಂದ ಮತ್ತು ಸುಂದರವಾದ ಸಾಯಿಬಾಬಾರವರ ಫೋಟೋದಿಂದ ಅಲಂಕೃತಗೊಂಡು ತನ್ನ ಪ್ರಥಮ ಪ್ರಯಾಣವನ್ನು ಆರಂಭಿಸಿತು.

ಅಲಂಕೃತಗೊಂಡ ದಾದರ್- ಸಾಯಿನಗರ ಸೂಪರ್ ಫಾಸ್ಟ್ ರೈಲು

ಈ ರೈಲು ವಾರದಲ್ಲಿ 3 ದಿನ ಓಡಲಿದ್ದು, ಸೋಮವಾರ, ಬುಧವಾರ ಮತ್ತು ಶನಿವಾರಗಳಂದು ರಾತ್ರಿ 9:45 ಕ್ಕೆ ದಾದರ್ ನಿಂದ ಹೊರಟು ಬೆಳಗಿನ ಜಾವ 3:55 ಕ್ಕೆ ಸಾಯಿನಗರ ಸೇರುತ್ತದೆ. ಅದೇ ರೀತಿ ಪ್ರತಿ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಬೆಳಗ್ಗೆ 10 ಘಂಟೆಗೆ ಹೊರಟು ಅದೇ ದಿನ ಸಂಜೆ 4:05 ಕ್ಕೆ ದಾದರ್ ಸೇರುತ್ತದೆ. ಈ ರೈಲು ಥಾಣೆ, ಕಲ್ಯಾಣ್, ಇಗಾಟ್ ಪುರಿ, ನಾಸಿಕ್ ರೋಡ್, ಮನ್ಮಾಡ್ ಮತ್ತು ಕೋಪರ್ ಗಾವ್ ಮಾರ್ಗವಾಗಿ ಚಲಿಸಿ ಸಾಯಿನಗರ, ಶಿರಡಿ ತಲುಪುತ್ತದೆ. ಈ ರೈಲಿನಲ್ಲಿ ಏ.ಸಿ.2 ಮತ್ತು 3 ನೇ  ದರ್ಜೆ ಮತ್ತು 8 ಸ್ಲೀಪರ್ ಕೋಚ್ ಗಳನ್ನು ಹೊಂದಿದೆ.  

ಈ ರೈಲು ಸೇವೆಯನ್ನು ಆರಂಭಿಸಿರುವುದರಿಂದ ಪ್ರಯಾಣಿಕರ ಜನಸಂದಣಿ ಕಡಿಮೆಯಾಗುವುದೇ ಆಲ್ಲದೇ, ಪ್ರಯಾಣದ ಸಮಯವನ್ನು ಕೂಡ ಕಡಿಮೆಗೊಳಿಸಿ ಶಿರಡಿಗೆ ಸಾಯಿಭಕ್ತರು ಶೀಘ್ರವಾಗಿ ತಲುಪುವುದರಲ್ಲಿ ಸಹಾಯ ಮಾಡುತ್ತದೆ.

ರೈಲಿನ ಸಮಯ, ಮಾರ್ಗ ಹಾಗೂ ಇನ್ನಿತರ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ರೈಲು ವೇಳಾಪಟ್ಟಿ, ಮಾರ್ಗ ಹಾಗೂ ಇನ್ನಿತರ ವಿವರಗಳು

ರೈಲು ಸಂಖ್ಯೆ, ಮಾರ್ಗ ಮತ್ತು ಓಡುವ ದಿನದ ವಿವರಗಳು

Thursday, September 2, 2010

ಶಿರಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ 

ಪ್ರಪಂಚದ ಎಲ್ಲಾ ಸಾಯಿಭಕ್ತರಿಗೆ ಒಂದು ಸಿಹಿ ಸುದ್ದಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿರಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಮಹಾರಾಷ್ಟ್ರದ ಮುಖ್ಯ ಮಂತ್ರಿಗಳಾದ ಶ್ರೀಯುತ.ಅಶೋಕ್ ಚವಾಣ್ ರವರು ಕಳೆದ ತಿಂಗಳ 27ನೇ ಆಗಸ್ಟ್ 2010 ರ ಶುಭ ಶುಕ್ರವಾರದಂದು ನೆರವೇರಿಸಿದರು. ಉಪ ಮುಖ್ಯ ಮಂತ್ರಿಗಳಾದ ಶ್ರೀಯುತ.ಚಗನ್ ಭುಜ್ ಬಲ್, ವ್ಯವಸಾಯ ಖಾತೆ ಸಚಿವರಾದ ಶ್ರೀಯುತ. ಬಾಳಾಸಾಬ್ ತೋರಟ್, ಸಾರಿಗೆ ಸಚಿವರಾದ ಶ್ರೀಯುತ. ರಾಧಕೃಷ್ಣ ವಿಕ್ಹೆ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಚೇರ್ಮೆನ್ ಶ್ರೀಯುತ. ಜಯಂತ್ ಸಾಸನೆ, ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾದ ಶ್ರೀಯುತ. ಸಿನ್ಹಾ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಮಾರಂಭಕ್ಕೆ ಸಿದ್ದವಾಗಿರುವ ಬೃಹತ್ ವೇದಿಕೆ

ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ಭೂಮಿ ಫೂಜೆ ನೆರವೇರಿಸುತ್ತಿರುವ ದೃಶ್ಯ

ಈತ್ತೀಚಿನ ದಿನಗಳಲ್ಲಿ ಶಿರಡಿ ಸಾಯಿಬಾಬಾ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸರಿ ಸುಮಾರು 30,000 ಭಕ್ತರು ಭಾರತದ ಎಲ್ಲಾ ಭಾಗಗಳಿಂದಲೂ ಮತ್ತು ದೇಶ ವಿದೇಶಗಳಿಂದಲೂ ಬಂದು ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದಾರೆ. ಗುರುವಾರ ಮತ್ತು ಭಾನುವಾರಗಳಂದು ಭಕ್ತರ ಸಂಖ್ಯೆ ಸುಮಾರು 1 ಲಕ್ಷ ದಾಟುತ್ತದೆ. ಪ್ರಮುಖ ಉತ್ಸವದ ದಿನಗಳಾದ ವಿಜಯದಶಮಿ, ಗುರುಪೂರ್ಣಿಮಾ, ರಾಮನವಮಿ, ಗುಡಿ ಪಾಡ್ವ (ಯುಗಾದಿ), ಗೋಕುಲಾಷ್ಟಮಿ ದಿನಗಳಂದು ಭಕ್ತರ ಸಂಖ್ಯೆ 2 ಲಕ್ಷ ದಾಟುತ್ತದೆ. 

ಶ್ರೀಯುತ.ಅಶೋಕ್ ಚವಾಣ್ ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ದೃಶ್ಯ

ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು

ಶಿರಡಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುವುದರಿಂದ ಹೆಚ್ಚು ಹೆಚ್ಹು ಸಾಯಿ ಭಕ್ತರು ದರ್ಶನಕ್ಕೆ ಬರುವಂತೆ ಆಗುವುದೇ ಆಲ್ಲದೇ ಬಸ್ ಮತ್ತು ರೈಲುಗಳ ಜನಸಂದಣಿ ಕಡಿಮೆಯಾಗುತ್ತದೆ. ಶಿರಡಿ ವಿಮಾನ ನಿಲ್ದಾಣವು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದ್ದು ಇದರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು 260 ಕೋಟಿ  ಎಂದು ಅಂದಾಜು ಮಾಡಲಾಗಿದೆ. ವಿಮಾನ ನಿಲ್ದಾಣವು ಬರುವ ವರ್ಷದ ನವೆಂಬರ್ 2011 ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ.
ಶಿರಡಿ ಸಂಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ - ಕೃಪೆ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ  

ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಭಗವಾನ್ ಶ್ರೀ ಕೃಷ್ಣನ ಜನನವನ್ನು ಸೂಚಿಸಲು ಸಮಾಧಿ ಮಂದಿರದಲ್ಲಿ  "ಮೊಸರಿನ ಗಡಿಗೆ" ಯನ್ನು ಒಡೆಯುವ ಕಾರ್ಯಕ್ರಮವನ್ನು ೨ ನೇ ಸೆಪ್ಟೆಂಬರ್ ೨೦೧೦, ಗುರುವಾರದಂದು ಹಮ್ಮಿಕೊಳ್ಳಲಾಯಿತು. ಅದರ ಸುಂದರ ದೃಶ್ಯವನ್ನು ಸಾಯಿ ಭಕ್ತರಿಗೊಸ್ಕರ ಈ ಕೆಳಗೆ ಕೊಡಲಾಗಿದೆ.

ಭಗವಾನ್ ಶ್ರೀ ಕೃಷ್ಣ ನ ಜನನವನ್ನು ಸೂಚಿಸಲು ಮೊಸರಿನ ಗಡಿಗೆಯನ್ನು ಒಡೆಯುತ್ತಿರುವ ಸುಂದರ ದೃಶ್ಯ

Wednesday, September 1, 2010

ಶಿರಡಿ ಯಾತ್ರಿಕರು ಧರಿಸಬೇಕಾದ ಉಡುಪುಗಳು - ಆಧಾರ - ಸಾಯಿ ಕಾ ಆಂಗನ್ (ಅಂತರ್ಜಾಲ)

ಮುಂದಿನ ದಿನಗಳಲ್ಲಿ ಶಿರಡಿ ಸಾಯಿಬಾಬಾರವರ ದರ್ಶನಕ್ಕೆ ಹೋಗಬೇಕಾದರೆ ಧರಿಸಬೇಕಾದ ಉಡುಪುಗಳ ಬಗ್ಗೆ ಅತಿ ಶೀಘ್ರದಲ್ಲೇ ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಣೆ ಹೊರಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.

ದೇವಾಲಯಕ್ಕೆ ಬರುವಾಗ ಜೀನ್ಸ್, ಬರ್ಮುಡಾಗಳು, ತೋಳಿಲ್ಲದ ರವಿಕೆಗಳು, ಮಿನಿ, ಶಾರ್ಟ್ಸ್ ಹಾಗೂ ಇನ್ನು ಮುಂತಾದ ಯಾವುದೇ ರೀತಿಯ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿ ಬಂದರೆ ದೇವಾಲಯದ ಒಳಗಡೆಗೆ ಪ್ರವೇಶವನ್ನು ನಿರ್ಬಂಧಿಸಲು ಪ್ರಯತ್ನಗಳು ನಡೆದಿವೆ. ಮಹಿಳಾ ಯಾತ್ರಿಕರು ಸೀರೆಯನ್ನು ಹಾಗೂ ತುಂಬು ತೋಳಿನ ರವಿಕೆಯನ್ನು ಮತ್ತು ಪುರುಷರು ಕುರ್ತಾ/ಪೈಜಾಮ ಅಥವಾ ತುಂಬು ತೋಳಿನ ಶರ್ಟ್ ಗಳನ್ನು ಧರಿಸಿದರೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗುತ್ತಿದೆ.

ಈ ರೀತಿ ನಿರ್ಧಾರಕ್ಕೆ ಕಾರಣವೇನೆಂದರೆ ಅನೇಕ ಯಾತ್ರಿಕರು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಈ ವಿಷಯದ ಬಗ್ಗೆ ದೂರುಗಳನ್ನು ನೀಡಿರುತ್ತಾರೆ. ದೇವಾಲಯಕ್ಕೆ ಬರುವಾಗ ಒಳ್ಳೆಯ ರೀತಿಯಲ್ಲಿ ಬಂದರೆ ದೇವಾಲಯದ ಪವಿತ್ರತೆಗೆ ಧಕ್ಕೆ ಬರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಾಯಿಬಾಬಾ ಸಂಸ್ಥಾನದವರು ನಿರ್ಧರಿಸಿದ್ದಾರೆ.