Friday, January 16, 2015

ಶಿರಡಿ ಸಂಸ್ಥಾನದ ವತಿಯಿಂದ ಸಾಯಿ ಪ್ರಸಾದಾಲಯದ ಆವರಣದಲ್ಲಿ ಜೈವಿಕ ಅನಿಲ ಘಟಕದ ಸ್ಥಾಪನೆಗೆ ಭೂಮಿ ಪೂಜಾ ಕಾರ್ಯಕ್ರಮದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಇದೇ ತಿಂಗಳ  ಮಕರ ಸಂಕ್ರಾಂತಿಯ ಶುಭ ದಿನವಾದ 15ನೇ ಜನವರಿ 2015, ಗುರುವಾರ ದಂದು ಸಾಯಿ ಪ್ರಸಾದಾಲಯದ ಆವರಣದಲ್ಲಿ ಐದು ಟನ್ ಸಾಮರ್ಥ್ಯವನ್ನು ಹೊಂದಿರುವ ಸುಮಾರು 58 ಲಕ್ಷ ರೂಪಾಯಿ ವೆಚ್ಚ ತಗಲುವ ಜೈವಿಕ ಅನಿಲ ಘಟಕದ ಸ್ಥಾಪನೆಗೆ ಭೂಮಿ ಪೂಜೆಯನ್ನು ನೆರವೇರಿಸಿದರು. 


ಈ ಸಂದರ್ಭದಲ್ಲಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಸೂರ್ಯಭಾನ್ ಗಮೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ದಿಲೀಪ್ ಉಗಳೆ, ಉಪ ಅಭಿಯಂತರರಾದ ಶ್ರೀ.ವಿಜಯ್ ರೋಹಮಾರೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಸಾಯಿ ಪ್ರಸಾದಾಲಯದ ಅಧೀಕ್ಷಕರಾದ ಶ್ರೀ.ವಿಜಯ್ ಸಿಂಕಾರ್, ನೀರು ಸರಬರಾಜು ವಿಭಾಗದ ಮುಖ್ಯಸ್ಥರಾದ ಶ್ರೀ.ರಾಜೇಂದ್ರ ಜಗ್ತಪ್ ಮತ್ತು ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ.ಅತುಲ್ ವಾಗ್ ರವರುಗಳು ಕೂಡ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಇಂಧನದ ವೆಚ್ಚವನ್ನು ಉಳಿಸುವ ಸಲುವಾಗಿ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿಯ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನದ ಮೇಲುಸ್ತುವಾರಿ ಸಮಿತಿಯು ಸಾಯಿ ಭಕ್ತರು ನೀಡಿದ ಉದಾರ ದೇಣಿಗೆಯ ಸಹಾಯದಿಂದ  ಪ್ರಸಾದಾಲಯದ ಆವರಣದಲ್ಲಿ   ಜೈವಿಕ ಅನಿಲ ಘಟಕವನ್ನು ಸ್ಥಾಪಿಸಲು ಒಪ್ಪಿಗೆ ನೀಡಿತು. ಈ ಘಟಕ ಸ್ಥಾಪನೆಗೆ ಸರಿ ಸುಮಾರು 58 ಲಕ್ಷ ರೂಪಾಯಿ ತಗುಲಲಿದ್ದು ಸಾಯಿ ಭಕ್ತರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ ಪ್ರತಿವರ್ಷ ಶ್ರೀ ಸಾಯಿಬಾಬಾ ಸಂಸ್ಥಾನದ ಬೊಕ್ಕಸಕ್ಕೆ 25 ಲಕ್ಷ ರೂಪಾಯಿಗಳ ಉಳಿತಾಯವಾಗಲಿದೆ ಎಂದರು. ಈ ಘಟಕದ ಸ್ಥಾಪನೆಯ ಗುತ್ತಿಗೆಯನ್ನು ಪುಣೆಯ ಇನ್ಪ್ರೊಟೆಕ್ ಸಲ್ಯೂಷನ್ಸ್ ಎಂಬ ಪ್ರತಿಷ್ಟಿತ ಸಂಸ್ಥೆಗೆ ವಹಿಸಿದ್ದು ಇನ್ನು ಕೇವಲ ಮೂರು ತಿಂಗಳಿನಲ್ಲಿ ಈ ಜೈವಿಕ ಅನಿಲ ಘಟಕವು ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಸಹ ತಿಳಿಸಿದರು.  

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 


No comments:

Post a Comment