ಕಳೆದ ತಿಂಗಳ 30ನೇ ಸೆಪ್ಟೆಂಬರ್ 2014 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು 2ನೇ ಅಕ್ಟೋಬರ್ 2014 ರಿಂದ 4ನೇ ಅಕ್ಟೋಬರ್ 2014 ರವರೆಗೆ ನಡೆಯುವ ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಸಕಲ ಸಿದ್ಧತೆಗಳು ಸಂಪೂರ್ಣಗೊಂಡಿವೆ ಎಂದು ತಿಳಿಸಿದರು. ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಸಾಯಿಭಕ್ತರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ ಉತ್ಸವದ 3 ದಿನಗಳೂ ಸಾಯಿಬಾಬಾ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ವಿತರಿಸಲಾಗುವುದು ಎಂದು ಸಹ ಅವರು ಸುದ್ಧಿಗಾರರಿಗೆ ತಿಳಿಸಿದರು.
ಸಾಧು ಸಂತರ ಹಾಗೂ ಸತ್ಪುರುಷರ ಮಹಾಸಮಾಧಿ ಉತ್ಸವವನ್ನು ಆಚರಿಸುವುದು ಬಹಳ ಪವಿತ್ರವಾದ ಕಾರ್ಯವಾಗಿದ್ದು ಆ ಸಂತರು ಸಮಾಧಿಯಾದ ದಿನವನ್ನು ಮಹಾಸಮಾಧಿ ದಿನವನ್ನಾಗಿ ಆಚರಿಸುವ ಪರಿಪಾಠ ಎಲ್ಲೆಡೆ ಬೆಳೆದುಕೊಂಡು ಬಂದಿದೆ ಎಂದು ಶ್ರೀ.ಜಾಧವ್ ರವರು ತಿಳಿಸಿದರು.
ಪ್ರಪಂಚದ ಅನೇಕ ಕಡೆಗಳಿಂದ ಲಕ್ಷಾಂತರ ಸಾಯಿ ಭಕ್ತರು ಸಾಯಿಬಾಬಾರವರ ಆಶೀರ್ವಾದವನ್ನು ಪಡೆಯುವ ಸಲುವಾಗಿ ಶಿರಡಿಗೆ ಬರಲಿದ್ದಾರೆ. ಆ ಎಲ್ಲಾ ಭಕ್ತರಿಗೆ ದೇವಾಲಯದ ಸಂಕೀರ್ಣದಲ್ಲಿ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿ ಒಳ್ಳೆಯ ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಹಳೆಯ ಪ್ರಸಾದಾಲಯದ ಪಕ್ಕದಲ್ಲಿ ವಿಶೇಷವಾಗಿ ಲಾಡು ಕೌಂಟರ್ ಹಾಗೂ ಮೊಬೈಲ್ ಲಾಕರ್ ಗಳನ್ನು ತೆರಯಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನವು ದೇವಾಲಯದ ಪ್ರಾಂಗಣ, ಹಳೆಯ ಪಿಂಪಲವಾಡಿ ರಸ್ತೆ, ದರ್ಶನದ ಕ್ಯೂ ಮತ್ತು ಪಾದಚಾರಿ ಮಾರ್ಗ, ಸಾಯಿ ವಾಣಿಜ್ಯ ಸಂಕೀರ್ಣದ ಬಳಿಯಿರುವ 16 ಗುಂಟೆ ಖಾಲಿ ಸ್ಥಳ, ಸಾಯಿ ಪ್ರಸಾದ್ ಸಂಕೀರ್ಣ ಹಾಗೂ ಸಾಯಿನಗರ ಮೈದಾನ ಹಾಗೂ ಇನ್ನೂ ಹಲವಾರು ಸ್ಥಳಗಳಲ್ಲಿ ಒಟ್ಟು 69,000 ಚದರ ಆಡಿಗಳಷ್ಟು ವಿಶಾಲವಾದ ಟೆಂಟ್ ಗಳನ್ನು ನಿರ್ಮಿಸಿದೆ. ಈ ಎಲ್ಲಾ ಸ್ಥಳಗಳಲ್ಲಿ 24 ತಾಸು ವಿದ್ಯುತ್, ನೀರು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮಳೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ಎಲ್ಲಾ ಸ್ಥಳಗಳಲ್ಲಿ ಟೆಂಟ್ ಗಳನ್ನು ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ. ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬೃಹತ್ ಟೆಂಟ್ ಅನ್ನು ನಿರ್ಮಿಸಲಾಗಿದೆ. ಶ್ರೀ ಸಾಯಿಬಾಬಾರವರ ಮಹಾಸಮಾಧಿಯ ಅಂಗವಾಗಿ ಮುಂಬೈನ ದ್ವಾರಕಾಮಾಯಿ ಮಂಡಳಿಯವರು ಸಮಾಧಿ ಮಂದಿರದ ಹೊರಭಾಗ, ದೇವಾಲಯದ ಪ್ರಾಂಗಣವನ್ನು ಸುಂದರವಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಿದ್ದಾರೆ. ಅಲ್ಲದೇ, ಸಮಾಧಿ ಮಂದಿರದ ಮುಖ್ಯದ್ವಾರದಲ್ಲಿ ಭಾಗವನ್ ದತ್ತಾತ್ರೇಯ, ಸ್ವಾಮಿ ಸಮರ್ಥ ಮತ್ತು ಗಜಾನನ ಮಹಾರಾಜ್ ರವರ ವಿಗ್ರಹಗಳನ್ನು ಇರಿಸಿ ಸುಂದರವಾಗಿ ಅಲಂಕರಿಸಲಿದ್ದಾರೆ. ಬೆಂಗಳೂರಿನ ಆರ್.ಶ್ರೀನಿವಾಸ್ ರವರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ, ದ್ವಾರಕಾಮಾಯಿ, ಚಾವಡಿ ಮತ್ತು ಗುರುಸ್ಥಾನವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗುತ್ತಿದೆ ಎಂದು ಶ್ರೀ. ಜಾಧವ್ ರವರು ನುಡಿದರು.
ಉತ್ಸವದ ಅಂಗವಾಗಿ ಹಲವಾರು ಆಹ್ವಾನಿತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಮೊದಲ ದಿನದಂದು ಸಂಜೆ 4.00 ಗಂಟೆಗೆ ಔರಂಗಾಬಾದ್ ನ ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಕೀರ್ತನೆ, 7.30 ರಿಂದ 10.00 ರವರೆಗೆ ಶ್ರೀಮತಿ.ರಾಗಿಣಿ ಜಿತೇಂದ್ರ ಕಾಮಾಟಿಕರ್ ರವರಿಂದ ಭಕ್ತಿಗೀತೆ ಹಾಗೂ ಭಾವಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವದ ಎರಡನೆಯ ದಿನದಂದು ಬೆಳಿಗ್ಗೆ 10.00 ಗಂಟೆಗೆ ಔರಂಗಾಬಾದ್ ನ ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಕೀರ್ತನೆ, ಸಂಜೆ 7.30 ರಿಂದ 10.00 ರವರೆಗೆ ಭೂಪಾಲ್ ನ ಶ್ರೀ.ಸತ್ಯಾನಂದ ನಾಯರ್ ರವರಿಂದ ಭಜನೆ ಮತ್ತು ಘಜಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಕೊನೆಯ ದಿನದಂದು ಬೆಳಿಗ್ಗೆ 10.00 ಗಂಟೆಗೆ ಔರಂಗಾಬಾದ್ ನ ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಗೋಪಾಲ ಕಾಲ ಕೀರ್ತನೆ, ಸಾಯಂಕಾಲ 7.30 ರಿಂದ 10.00 ರವರೆಗೆ ದೊರ್ಹಾಳೆಯ ಶ್ರೀ.ಶ್ರವಣ ಮಾಧವ ಚೌಧರಿಯವರಿಂದ ಸಾಯಿ ಕಥಾಮೃತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೀರ್ತನೆಯ ಕಾರ್ಯಕ್ರಮಗಳು ಸಮಾಧಿ ಮಂದಿರದ ಹಿಂಭಾಗದ ವೇದಿಕೆಯಲ್ಲಿ ನಡೆಯುತ್ತವೆ ಹಾಗೂ ಆಹ್ವಾನಿತ ಕಲಾವಿದರ ಕಾರ್ಯಕ್ರಮಗಳು ಸಾಯಿನಗರ ಮೈದಾನದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ನಡೆಯುತ್ತವೆ. ಉತ್ಸವದ ಮೂರು ದಿನಗಳು ಸಾಯಿಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತವಾಗಿ ಪ್ರಸಾದ ಭೋಜನವನ್ನು ವಿತರಿಸಲಾಗುವುದು. ಈ ಪ್ರಸಾದ ಭೋಜನಕ್ಕೆ ಗುಂಟೂರಿನ ಶ್ರೀ.ಕೆ.ಹೆಚ್.ವಿ.ಗೋಪಿ, ಕನ್ಮರಲಪುಡಿ ಮತ್ತು ವೆಂಕಟಲೀಲಾ ಕುಮಾರಿ, ಹೈದರಾಬಾದ್ ನ ಎಸ್.ಮೋಕ್ಷಘ್ನಚಂದ್ರ, ಕರೂರಿನ ಎನ್.ಅಂಗ ಮುತ್ತು ಕುಮಾರ್, ಇಂದೂರಿನ ಕಮಲ್ ಬಲಾನಿ, ಚೆನ್ನೈ ನ ರಾಜಗೋಪಾಲ್ ನಟರಾಜನ್, ಕೋಪರಗಾವ್ ನ ಸಂಜಯ್ ಶಂಕರ್ ವಾಣಿ, ಗೋಧಿಯಾದ ಜ್ಯೋತಿ ಸಂಜಯ್ ಸಿಂಗ್ ಮಸಾನಿ ಮತ್ತು ಸಂಜಯ್ ಸಿಂಗ್ ಘನಶ್ಯಾಮ ದಾಸ್ ಮಸಾನಿ, ರಾಯಪುರದ ಪಾರ್ಥ ಆಯುಷ್ ಅಗರವಾಲ್, ಮುಂಬೈನ ಗೌತಮ್ ನಾಯಕ್, ಹೈದರಾಬಾದ್ ನ ನಾರಾಯಣ ಅನುಮಾಲ, ಬೆಂಗಳೂರಿನ ಬದರಿನಾರಾಯಣ, ಸಾಯಿ ರಂಜನಿ, ದೆಹಲಿಯ ಶ್ರೀಮತಿ.ದೇವಿ ಮತ್ತು ಶ್ರೀ.ಕೆ.ರಾಮಕುಮಾರ್ ಅಗರವಾಲ್, ಲಕ್ನೌ ನ ವಿಕ್ರಂ ಕಪೂರ್ ಹಾಗೂ ಬೆಂಗಳೂರಿನ ಭಾರತಿ ಶಿರಗುರ್ಕರ್ ರವರುಗಳು ಉದಾರವಾದ ದೇಣಿಗೆಯನ್ನು ನೀಡಿರುತ್ತಾರೆ.
ಉತ್ಸವಕ್ಕೆ ಹರಿದು ಬರುತ್ತಿರುವ ಹೆಚ್ಚಿನ ಸಾಯಿ ಭಕ್ತ ಸಾಗರವನ್ನು ಗಮನದಲ್ಲಿ ಇಟ್ಟುಕೊಂಡು 135 ಕ್ವಿಂಟಾಲ್ ಸಕ್ಕರೆಯನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಲಾಡು ಪ್ರಸಾದ ಪೊಟ್ಟಣಗಳನ್ನು ತಯಾರಿಸಲಾಗುತ್ತಿದೆ. ಭಕ್ತರಿಗೆ ಸುಲಭವಾಗಿ ಚಹಾ, ಕಾಫಿ ಸಿಗಲೆಂದು ಸಾಯಿ ಆಶ್ರಮ 1 ಮತ್ತು 2, ಧರ್ಮಶಾಲೆ, ಭಕ್ತಿ ನಿವಾಸ ಕಟ್ಟಡ, ಕ್ಯೂ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಗಳಲ್ಲಿ ಹೆಚ್ಚಿನ ಕೌಂಟರ್ ಗಳನ್ನು ತೆರೆಯಲಾಗಿದೆ. ಅಂತೆಯೇ ಸಮಾಧಿ ಮಂದಿರದಿಂದ ಭಕ್ತಿನಿವಾಸಕ್ಕೆ ದಿನದ 24 ತಾಸು ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಸ್ ಗಳು ಸಾಯಿಪ್ರಸಾದ್ ಕಟ್ಟಡದಿಂದ ಹೊರಡಲಿದ್ದು ಬೆಳಿಗ್ಗೆ 10.00 ಗಂಟೆಯಿಂದ ಸಂಚಾರ ಪ್ರಾರಂಭಿಸಲಿವೆ. ಕ್ಯೂ ಕಾಂಪ್ಲೆಕ್ಸ್, ದೇವಾಲಯದ ಆವರಣ, ಹೊಸ ಭಕ್ತಿ ನಿವಾಸ, ಸಾಯಿ ಆಶ್ರಮ ಮತ್ತು 2, ಧರ್ಮಶಾಲೆ, ಸಾಯಿ ಪ್ರಸಾದಾಲಯದ ಆವರಣಗಳಲ್ಲಿ ಸಾಯಿ ಭಕ್ತರ ಅನುಕೂಲಕ್ಕಾಗಿ ಪ್ರಥಮ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ದೇವಾಲಯದ ಆವರಣದಲ್ಲಿ ದಿನದ 24 ತಾಸುಗಳೂ ತಜ್ಞ ವೈದ್ಯರುಗಳನ್ನು ಇರಿಸಲಾಗಿದೆ.
ಶಿರಡಿಗೆ ಹರಿದು ಬರುತ್ತಿರುವ ಹೆಚ್ಚಿನ ಭಕ್ತರನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವಿಭಾಗವು ಶಿರಡಿಯ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಿದೆ. ಸಮಾಧಿ ಮಂದಿರದಲ್ಲಿ ಬಾಬಾರವರ ವಿಗ್ರಹದ ಎದುರುಗಡೆ, ಪಲ್ಲಕ್ಕಿ ಉತ್ಸವ, ಭಿಕ್ಷಾ ಜೋಳಿ ಕಾರ್ಯಕ್ರಮ, ಸೀಮೋಲ್ಲಂಘನ ಉತ್ಸವ, ರಥೋತ್ಸವ, ಸಾಯಿ ನಗರ ವೇದಿಕೆ, ದೇವಾಲಯದ ಸಂಕೀರ್ಣ, ದರ್ಶನ ಹಾಲ್, ದರ್ಶನದ ಕ್ಯೂ ಕಾಂಪ್ಲೆಕ್ಸ್, ಪ್ರಸಾದಾಲಯದ ಆವರಣ, ಭಕ್ತಿ ನಿವಾಸ, ದ್ವಾರಾವತಿ, ಸಾಯಿ ಆಶ್ರಮ 1 ಮತ್ತು 2, ಧರ್ಮಶಾಲೆ - ಈ ಎಲ್ಲಾ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಕರ್ತವ್ಯ ನಿರತರಾಗಿರುತ್ತಾರೆ.
ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಈ ವರ್ಷದ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ.
ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment