Sunday, October 26, 2014

ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 ಪ್ರಮಾಣಪತ್ರದ ನೀಡಿಕೆ – ಆಧಾರ: ಸಾಯಿಅಮೃತಧಾರಾ. ಕಾಂ

ಇದೇ ತಿಂಗಳ  24ನೇ ಅಕ್ಟೋಬರ್ 2014, ಶುಕ್ರವಾರ ದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿ ಪ್ರಸಾದಾಲಯದಲ್ಲಿ  ISO 22000-2005 (Food Safety Standard)  ಪ್ರಮಾಣಪತ್ರವನ್ನು ನೀಡುವ ಸಲುವಾಗಿ ಪರಿಶೋಧನೆಯನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಅಂತಿಮ ತಪಾಸಣೆಯ ನಂತರ ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು 15ನೇ ಸೆಪ್ಟೆಂಬರ್ 2014 ರಿಂದ 29ನೇ ಸೆಪ್ಟೆಂಬರ್ 2016 ರವರೆಗೂ ಅನ್ವಯವಾಗುವಂತೆ ನೀಡಲಾಗಿದೆ ಎಂದು ತಿಳಿಸಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು ಇದೇ ತಿಂಗಳ 18ನೇ ಅಕ್ಟೋಬರ್ 2014 ರಂದು ನಡೆದ ಕಾರ್ಯಕ್ರಮದಲ್ಲಿ ನೀಡಲಾಗಿತ್ತು. ಆ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ISO ಪ್ರಮಾಣಪತ್ರದ ಸಲಹೆಗಾರರೂ ಹಾಗೂ ಬೆಂಗಳೂರಿನ ಸಾಯಿ ಭಕ್ತರೂ ಆದ ಶ್ರೀ.ಕೇಶವ ಮೂರ್ತಿ, ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ.ಡಿ.ಟಿ.ಉಗಳೆ, ಪ್ರಸಾದಾಲಯದ ಹಂಗಾಮಿ ಮೇಲ್ವಿಚಾರಕರಾದ ಶ್ರೀ.ವಿಜಯ ಸಿನ್ನಾರ್, ಲಾಡು ಪ್ರಸಾದ ತಯಾರಿಕಾ ಘಟಕದ ಹಂಗಾಮಿ  ಅಧ್ಯಕ್ಷರಾದ ಶ್ರೀ.ಸಂಜಯ ಧನೇಶ್ವರ್ ಹಾಗೂ ಇನ್ನು ಹಲವಾರು ಗಣ್ಯರು ಭಾಗವಹಿಸಿದ್ದರು. ಪ್ರಸಾದಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯದೇ, ರುಚಿಯಾದ ಹಾಗೂ ಪರಿಶುದ್ಧವಾದ ಪ್ರಸಾದ ಭೋಜನವನ್ನು ಪರಿಶುದ್ಧವಾದ ವಾತವರಣದಲ್ಲಿ ಸ್ವೀಕರಿಸುವಂತೆ ಮಾಡುವ ಬಯಕೆ ಶ್ರೀ ಸಾಯಿಬಾಬಾ ಸಂಸ್ಥಾನದ್ದಾಗಿತ್ತು. ಈ  ISO 22000-2005 (Food Safety Standard)  ಪ್ರಮಾಣಪತ್ರದ ನವೀಕರಣವಾಗಿರುವುದು ಶ್ರೀ ಸಾಯಿಬಾಬಾ ಸಂಸ್ಥಾನದ ಯಶಸ್ಸೆಂಬ ಕಿರೀಟಕ್ಕೆ ಸಿಕ್ಕಿರುವ ಮತ್ತೊಂದು ಹೆಮ್ಮೆಯ ಗರಿಯೆಂದೇ ಹೇಳಬಹುದು.  ಇದರಿಂದ ಶ್ರೀ ಸಾಯಿಬಾಬಾ ಸಂಸ್ಥಾನದ ಖ್ಯಾತಿ ಪ್ರಪಂಚದಾದ್ಯಂತ ಹರಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಸಾಯಿಭಕ್ತರ ಅನುಕೂಲಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸಿದ್ದು ಬೃಹತ್  ಶ್ರೀ ಸಾಯಿ ಪ್ರಸಾದಾಲಯದ ಪ್ರಾರಂಭವು ಅಂತಹ ಯೋಜನೆಗಳಲ್ಲಿ ಒಂದಾಗಿರುತ್ತದೆ. ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಸ್ವತಃ ತಮ್ಮ ಕೈಯಾರೆ ಅಡುಗೆಯನ್ನು ಮಾಡಿ ತಮ್ಮ ಬಳಿಗೆ ಬರುತ್ತಿದ್ದ ಭಕ್ತರಿಗೆ ಬಡಿಸುತ್ತಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು ಪ್ರಪ್ರಥಮ ಬಾರಿಗೆ 1ನೇ ಜನವರಿ 1973 ರಂದು ದೀಕ್ಷಿತವಾಡದ ಪಕ್ಕದಲ್ಲಿದ್ದ ಸ್ಥಳದಲ್ಲಿ ಸಾಯಿ ಭಕ್ತರಿಗೆ ಪ್ರಸಾದ ಭೋಜನವನ್ನು ನೀಡುವ ವ್ಯವಸ್ಥೆಯನ್ನು ಮಾಡಿತ್ತು.  ಅಂದಿನ ದಿನಗಳಲ್ಲಿ ಪ್ರತಿನಿತ್ಯ ಸರಿ ಸುಮಾರು 500 ರಿಂದ 2500 ಸಾಯಿ ಭಕ್ತರು  ಪ್ರಸಾದ ಭೋಜನವನ್ನು ಸವಿಯುತ್ತಿದ್ದರು.  ಭಕ್ತರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುವ ಸಲುವಾಗಿ ಹಾಗೂ ದಿನೇ ದಿನೇ ಹೆಚ್ಚುತ್ತಿದ್ದ ಭಕ್ತರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು  25ನೇ ಜನವರಿ 1980 ರಿಂದ ಅನ್ವಯವಾಗುವಂತೆ  ಪ್ರಸಾದಾಲಯವನ್ನು ಅಲ್ಲಿಂದ ಗೇಟ್ ಸಂಖ್ಯೆ:1 ರ ಪಕ್ಕದಲ್ಲಿರುವ ಸಾಯಿ ಪ್ರಸಾದ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಈ ಸ್ಥಳದಲ್ಲಿ ಪ್ರತಿನಿತ್ಯ ಸರಿ ಸುಮಾರು 22,000 ಭಕ್ತರು ಪ್ರಸಾದ ಭೋಜನವನ್ನು ಸವಿಯುತ್ತಿದ್ದರು. ನಂತರ ಭವಿಷ್ಯದಲ್ಲಿ ಬೃಹತ್ ಆಗಿ ಬೆಳೆಯಲಿದ್ದ ಶಿರಡಿ ಪಟ್ಟಣವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥಾನದ ಆಡಳಿತ ಮಂಡಳಿಯು  ಒಂದು ಬೃಹತ್ ಪ್ರಸಾದಾಲಯ ಕಟ್ಟಡವನ್ನು ದಾಖಲೆ ಸಮಯದಲ್ಲಿ ನಿರ್ಮಿಸಿತು. ಈ ಹೊಸ ಶ್ರೀ ಸಾಯಿ ಪ್ರಸಾದಾಲಯವನ್ನು 8ನೇ ಜನವರಿ 2009 ರಂದು ಪ್ರಾರಂಭಿಸಲಾಗಿದ್ದು ಇಲ್ಲಿ ಒಂದೇ ಬಾರಿಗೆ ಸುಮಾರು 5000 ಭಕ್ತರು ಕುಳಿತು ಊಟವನ್ನು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಇಂದು ಏಷಿಯಾದ ಬೃಹತ್ ಪ್ರಸಾದಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸಾಯಿ ಭಕ್ತರು ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ಕಾಯದೇ, ರುಚಿಯಾದ ಹಾಗೂ ಪರಿಶುದ್ಧವಾದ ಪ್ರಸಾದ ಭೋಜನವನ್ನು ಪರಿಶುದ್ಧವಾದ ವಾತವರಣದಲ್ಲಿ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್  ಲಿಮಿಟೆಡ್ (TCL) ಸಂಸ್ಥೆಯು 30ನೇ  ಸೆಪ್ಟೆಂಬರ್ 2013 ರಂದು ISO-22000-2005 (Food Safety standard) ಪ್ರಮಾಣ ಪತ್ರವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿ ಪ್ರಸಾದಾಲಯಕ್ಕೆ  ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ ನೀಡಿತ್ತು. ಪ್ರತಿ ವರ್ಷ ಈ ಪ್ರಮಾಣ ಪತ್ರದ ನವೀಕರಣ ಮಾಡುವುದು ಕಡ್ಡಾಯವಾಗಿರುತ್ತದೆ. ಆದ ಕಾರಣ, ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್ ಲಿಮಿಟೆಡ್ (TCL) ಸಂಸ್ಥೆಯ ಪರಿಶೋಧಕರು ಶ್ರೀ ಸಾಯಿ ಪ್ರಸಾದಾಲಯಕ್ಕೆ ಭೇಟಿ ನೀಡಿ ಪರಿಶೋಧನೆ ನಡೆಸಿ ಏನಾದರೂ ನಿಯಮದ ಉಲ್ಲಂಘನೆಯಾಗಿದ್ದ ಪಕ್ಷದಲ್ಲಿ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅದನ್ನು ಆ ಕೂಡಲೇ ಸರಿಪಡಿಸಿ ಮತ್ತೊಮ್ಮೆ ಪರಿಶೋಧನೆ ನಡೆಸಿದ ನಂತರ ಪ್ರಮಾಣ ಪತ್ರವನ್ನು ನವೀಕರಿಸಲಾಗುತ್ತದೆ. ಶ್ರೀ ಸಾಯಿ ಪ್ರಸಾದಾಲಯದ ಈ ನವೀಕರಣ ಕಾರ್ಯಕಾಗಿ  ಅಹಾರ ಸುರಕ್ಷತಾ ಸಲಹೆಗಾರರಾದ ಹೈದರಾಬಾದ್ ನ  ಶ್ರೀ.ದಿಲೀಪ್ ಕುಮಾರ್ ನಂದಿಕೊಂಡ, ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್ ಲಿಮಿಟೆಡ್ (TCL) ಸಂಸ್ಥೆಯ ಮುಖ್ಯ ಪರಿಶೋಧಕರಾದ ಶ್ರೀ. ಚಂದ್ರಶೇಖರ ರೆಡ್ದಿಯವರನ್ನು ವಿಶೇಷ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಈ ಇಬ್ಬರು ಮಹನೀಯರ ಮಾರ್ಗದರ್ಶನದಲ್ಲಿ ಶ್ರೀ ಸಾಯಿ ಪ್ರಸಾದಾಲಯದಲ್ಲಿ ಸೂಕ್ತ ಬದಲಾವಣೆ ಹಾಗೂ ತಿದ್ದುಪಡಿಗಳನ್ನು ಮಾಡಲಾಯಿತು. ನಂತರ ಟ್ರಾನ್ಸ್ ಪ್ಲಾಸ್ಟಿಕ್ ಸರ್ಟಿಫಿಕೇಷನ್  ಲಿಮಿಟೆಡ್ (TCL) ಸಂಸ್ಥೆಯು  ISO-22000-2005 (Food Safety Standard) ಪ್ರಮಾಣ ಪತ್ರವನ್ನು ನೀಡುವ ಸಲುವಾಗಿ ಪರಿಶೋಧನೆಯನ್ನು ಮಾಡಿತ್ತು. ಇದರ ಅಂಗವಾಗಿ ಇತ್ತೀಚೆಗಷ್ಟೇ  ಅಂತಿಮ ತಪಾಸಣೆಯನ್ನು ನಡೆಸಿದ ಸಂಸ್ಥೆಯು ಶ್ರೀ ಸಾಯಿಬಾಬಾ ಸಂಸ್ಥಾನದ ಪ್ರಸಾದಾಲಯಕ್ಕೆ ISO 22000-2005 (Food Safety Standard)  ಪ್ರಮಾಣಪತ್ರವನ್ನು 15ನೇ ಸೆಪ್ಟೆಂಬರ್ 2014 ರಿಂದ 29ನೇ ಸೆಪ್ಟೆಂಬರ್ 2016 ರವರೆಗೂ ಅನ್ವಯವಾಗುವಂತೆ ನೀಡಿರುತ್ತದೆ. ಈ ಪ್ರಮಾಣ ಪತ್ರದ ನವೀಕರಣವಾದ  ನಂತರದಲ್ಲಿ ಶ್ರೀ ಸಾಯಿ ಪ್ರಸಾದಾಲಯದಲ್ಲಿ  ಆಹಾರ ಸುರಕ್ಷತಾ ಕ್ರಮಗಳನ್ನು ವ್ಯವಸ್ಥಿತವಾಗಿ ಮಾಡಲಾಗಿರುತ್ತದೆ.  ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಸಂಸ್ಥಾನದ ಅಧಿಕಾರಿಗಳು ಹಾಗೂ ಶ್ರೀ ಸಾಯಿ ಪ್ರಸಾದಾಲಯದ ಆಡಳಿತಕ್ಕೆ ಸಂಬಂಧಿಸಿದ ಸಿಬ್ಬಂದಿ ವರ್ಗದವರ ಪ್ರಯತ್ನವನ್ನು ಶ್ಲಾಘಿಸಲಾಯಿತು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ ಅನ್ವೇಕರ್,ಬೆಂಗಳೂರು 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

Thursday, October 23, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮೀಪೂಜೆ ಹಾಗೂ ದೀಪೋತ್ಸವದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ದೀಪಾವಳಿ ಹಬ್ಬದ ಅಂಗವಾಗಿ ಇದೇ ತಿಂಗಳ 23ನೇ ಅಕ್ಟೋಬರ್ 2014, ಗುರುವಾರ  ದಂದು ಲಕ್ಷ್ಮೀಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 

ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ಸಮಾಧಿ ಮಂದಿರದಲ್ಲಿ ಲಕ್ಷ್ಮೀ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು. 



ಇದಾದ ನಂತರ ಸಾವಿರಾರು ಸಾಯಿ ಭಕ್ತರು ಲೇಂಡಿ ಉದ್ಯಾನವನದಲ್ಲಿ ದೀಪಗಳನ್ನು ಬೆಳಗಿ ಬೆಳಕಿನ ಹಬ್ಬವನ್ನು ಸಾರ್ಥಕಗೊಳಿಸಿದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, October 10, 2014

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, ಜೇವರ್ಗಿ ರಸ್ತೆ, ರಾಮ ಮಂದಿರದ ಹತ್ತಿರ, ಕರುಣೇಶ್ವರ ನಗರ, ಗುಲ್ಬರ್ಗ-585 103,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಜೇವರ್ಗಿ ರಸ್ತೆಯಲ್ಲಿರುವ ಕರುಣೇಶ್ವರ ನಗರದಲ್ಲಿರುವ ರಾಮ ಮಂದಿರದ ಹತ್ತಿರ ಇರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ಈ ಮಂದಿರವನ್ನು 17ನೇ ಫೆಬ್ರವರಿ 2000 ದಂದು  ಶ್ರೀ.ಸದಾಶಿವ ಮಹಾರಾಜ್ ರವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ ಒಂದು ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಸತೀಶ್ ವಿ.ಗುತ್ತೇದಾರ್ ರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು   ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು.





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 5:15 ರಿಂದ ರಾತ್ರಿ 10:30 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 5:15 AM
ಛೋಟಾ ಆರತಿ  : 7:15 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  6:30 PM
ಶೇಜಾರತಿ        : 10:00 PM

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 17ನೇ ಫೆಬ್ರವರಿ ಮಂದಿರದ ವಾರ್ಷಿಕೋತ್ಸವ.
2.ಶ್ರೀರಾಮನವಮಿ.
3.ಗುರುಪೂರ್ಣಿಮೆ.
4.ವಿಜಯದಶಮಿ.

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಜೇವರ್ಗಿ ರಸ್ತೆಯಲ್ಲಿರುವ ಕರುಣೇಶ್ವರ ನಗರದಲ್ಲಿರುವ ರಾಮ ಮಂದಿರದ ಹತ್ತಿರ ಇರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, 
ಜೇವರ್ಗಿ ರಸ್ತೆ, ರಾಮ ಮಂದಿರದ ಹತ್ತಿರ,
ಕರುಣೇಶ್ವರ ನಗರ,
ಗುಲ್ಬರ್ಗ-585 103,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಡಾ.ಎನ್.ಜಿ.ಗಚ್ಚಿಮನಿ/ಶ್ರೀ.ರಾಜು ಬಿ.ಕುಲಕರ್ಣಿ

ದೂರವಾಣಿ ಸಂಖ್ಯೆ: 

+91 98453 84774/+91 98807 85872


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಉಮಾ ಅಂದೋಳ ಆಸ್ಪತ್ರೆಯ ಪಕ್ಕ, ಗುಬ್ಬಿ ಕಾಲೋನಿ, ಎಂ.ಜಿ.ರಸ್ತೆ, ಗುಲ್ಬರ್ಗ-585 101,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಎಂ.ಜಿ. ರಸ್ತೆಯಲ್ಲಿರುವ ಗುಬ್ಬಿ ಕಾಲೋನಿಯಲ್ಲಿರುವ ಉಮಾ ಅಂದೋಳ ಆಸ್ಪತ್ರೆಯ ಪಕ್ಕದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ಈ ಮಂದಿರದ ಭೂಮಿ ಪೂಜೆಯನ್ನು 26ನೇ ಆಗಸ್ಟ್  2007 ರಂದು ನೆರವೇರಿಸಲಾಯಿತು.

ಈ ಮಂದಿರವನ್ನು 15ನೇ ಡಿಸೆಂಬರ್ 2009 ರಂದು  ಮಂದಿರದ ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 80x120 ಚದರ ಅಡಿ ವಿಸ್ತೀರ್ಣವಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಎ.ಬಿ.ನರಸಿಂಹಾಚಾರ್ಯ ಅವರು ಮಂದಿರದ ಮುಖ್ಯ ಪುರೋಹಿತರಾಗಿರುತ್ತಾರೆ. ಅವರೇ  ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ 4 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು. ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತ ಶಿಲೆಯಲ್ಲಿ ಮಾಡಿದ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ.





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವು ಪ್ರತಿ ಗುರುವಾರದಂದು ಬೆಳಿಗ್ಗೆ 6:00 ರಿಂದ 11:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 5:30 ರಿಂದ ರಾತ್ರಿ 9:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಇನ್ನಿತರ ದಿನಗಳಲ್ಲಿ ಮಂದಿರವು ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 6:00 ರಿಂದ 8:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ:

ಸಂಜೆ : 6:30 ಗಂಟೆ

ಪ್ರತಿ ಗುರುವಾರಗಳಂದು ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ. ಅಲ್ಲದೇ, ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಅಭಿಷೇಕವನ್ನು ಹಮ್ಮಿಕೊಳ್ಳಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 26ನೇ ಆಗಸ್ಟ್ ಮಂದಿರದ ವಾರ್ಷಿಕೋತ್ಸವ. 
2.ಹೊಸವರ್ಷ. 
3.ಯುಗಾದಿ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಎಂ.ಜಿ. ರಸ್ತೆಯಲ್ಲಿರುವ ಗುಬ್ಬಿ ಕಾಲೋನಿಯಲ್ಲಿರುವ ಉಮಾ ಅಂದೋಳ ಆಸ್ಪತ್ರೆಯ ಪಕ್ಕದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಉಮಾ ಅಂದೋಳ ಆಸ್ಪತ್ರೆಯ ಪಕ್ಕ, 
ಗುಬ್ಬಿ ಕಾಲೋನಿ, ಎಂ.ಜಿ.ರಸ್ತೆ,  
ಗುಲ್ಬರ್ಗ-585 101,
ಕರ್ನಾಟಕ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಎ.ಬಿ.ನರಸಿಂಹಾಚಾರ್ಯ  - ಪುರೋಹಿತರು

ದೂರವಾಣಿ ಸಂಖ್ಯೆ: 

+91 97317 75345


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಮಾರುಕಟ್ಟೆ ರಸ್ತೆ, ಮಿಲನ್ ಚೌಕ್, ಮಕ್ತಾಂಪುರ, ಗುಲ್ಬರ್ಗ-585 101,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಮಾರುಕಟ್ಟೆ ರಸ್ತೆಯಲ್ಲಿರುವ ಮಿಲನ್ ಚೌಕ್ ಹತ್ತಿರದ ಮಕ್ತಾಂಪುರದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 0.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ಈ ಮಂದಿರದ ಭೂಮಿ ಪೂಜೆಯನ್ನು 19ನೇ ಫೆಬ್ರವರಿ 1999 ರಂದು ನೆರವೇರಿಸಲಾಯಿತು.

ಈ ಮಂದಿರವನ್ನು 25ನೇ ಜುಲೈ 2001 ರಂದು  ಮಂದಿರದ  ಸಂಸ್ಥಾಪಕ ಅಧ್ಯಕ್ಷರಾದ ಶ್ರೀ.ಅರುಣ್ ಜಟ್ಲಿಯವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. 

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 40x60 ಚದರ ಅಡಿ ವಿಸ್ತೀರ್ಣವಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. 

ಶ್ರೀ.ಅರುಣ್ ಜಟ್ಲಿಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಪುರೋಹಿತರಾದ ಶ್ರೀ.ಶ್ರೀನಿವಾಸ ಸರ್ದಗಿಯವರು ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು. ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತ ಶಿಲೆಯಲ್ಲಿ ಮಾಡಿದ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ.



ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವು ಬೆಳಿಗ್ಗೆ 6:00 ರಿಂದ 10:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 5:00 ರಿಂದ ರಾತ್ರಿ 8:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ:

ಬೆಳಿಗ್ಗೆ: 7:00 ಗಂಟೆ
ರಾತ್ರಿ: 7:00 ಗಂಟೆ


ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ ಫೆಬ್ರವರಿ ತಿಂಗಳಿನಲ್ಲಿ ವಿಶೇಷ ಪೂಜೆ ಹಾಗೂ ಅನ್ನದಾನ ಹಮ್ಮಿಕೊಳ್ಳಲಾಗುತ್ತದೆ.
2.ಶ್ರೀರಾಮನವಮಿ. 
3.ಗುರುಪೂರ್ಣಿಮೆ. 
4.ವಿಜಯದಶಮಿ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಮಾರುಕಟ್ಟೆ ರಸ್ತೆಯಲ್ಲಿರುವ ಮಿಲನ್ ಚೌಕ್ ಹತ್ತಿರದ ಮಕ್ತಾಂಪುರದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 0.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಮಾರುಕಟ್ಟೆ ರಸ್ತೆ,
ಮಿಲನ್ ಚೌಕ್, ಮಕ್ತಾಂಪುರ,
ಗುಲ್ಬರ್ಗ-585 101,
ಕರ್ನಾಟಕ, ಭಾರತ 

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಶ್ರೀನಿವಾಸ ಸರ್ದಗಿ - ಪುರೋಹಿತರು

ದೂರವಾಣಿ ಸಂಖ್ಯೆ: 

+91 84539 72803

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀಲಂಕಾದ ಕೊಲಂಬೋದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತುತ್ತಿರುವ ಸಾಯಿಬಾಬಾ ಮಂದಿರ - ಕೃಪೆ: ಸಾಯಿಅಮೃತಧಾರಾ.ಕಾಂ

ಇತ್ತೀಚಿನ ದಿನಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಕೀರ್ತಿ ಮತ್ತು ವೈಭವ ಪ್ರಪಂಚದಾದ್ಯಂತ ಹರಡಿದೆ. ಅದಕ್ಕೆ ಶ್ರೀಲಂಕಾ ಕೂಡ ಹೊರತಾಗಿಲ್ಲ. ಶ್ರೀಲಂಕಾದ ಕೊಲಂಬೋ ನಗರದಲ್ಲಿರುವ ಶಿರಡಿ ಸಾಯಿ ಸೆಂಟರ್ ಆಫ್ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ.ಎಸ್.ಎನ್.ಉದಯನಯಂರವರು ಇದೇ ತಿಂಗಳ 8ನೇ ಅಕ್ಟೋಬರ್ 2014, ಬುಧವಾರ ದಂದು ಶಿರಡಿಯಲ್ಲಿ  ಮಾತನಾಡುತ್ತಾ ಶ್ರೀಲಂಕಾದಲ್ಲಿ ಸುಮಾರು 30 ಶಿರಡಿ ಸಾಯಿಬಾಬಾ ಮಂದಿರಗಳಿವೆ  ಹಾಗೂ  ಕೊಲಂಬೋ ನಗರದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸಾಯಿಬಾಬಾ ಮಂದಿರ ತಲೆ ಎತ್ತುತ್ತಿದೆ ಎಂದು ಸುದ್ಧಿಗಾರರೊಂದಿಗೆ ತಿಳಿಸಿದರು. 

ಶಿರಡಿ ಸಾಯಿ ಸೆಂಟರ್ ಆಫ್ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ.ಎಸ್.ಎನ್.ಉದಯನಯಂರವರನ್ನು ಒಳಗೊಂಡ ಒಟ್ಟು  27 ಸಾಯಿ ಭಕ್ತರ ತಂಡವು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಮೋಹನ್ ಯಾದವ್ ರವರು  ತಂಡದ ಸದಸ್ಯರಿಗೆ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ.ಎಸ್.ಎನ್.ಉದಯನಯಂ ಮತ್ತು ಪ್ರತಿನಿಧಿಗಳಾದ ಶ್ರೀ.ಸೆಂಥಿಲ್ ರವರುಗಳು ಶ್ರೀಲಂಕಾದ ಜಾಫ್ನಾ, ಬಾಟಿಕುಲ, ಕ್ಯಾಂಡಿ ಮತ್ತು ಗೇಲೆ ಪ್ರಾಂತ್ಯಗಳಲ್ಲಿ ಸುಮಾರು 30 ಶಿರಡಿ ಸಾಯಿಬಾಬಾ ಮಂದಿರಗಳು ಈಗಾಗಲೇ ತಲೆ ಎತ್ತಿವೆ. ಈ ಮಂದಿರಗಳಿಗೆ ಭೇಟಿ ನೀಡುತ್ತಿರುವ ಸಾಯಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಈ ಎಲ್ಲಾ ಮಂದಿರಗಳಲ್ಲಿ ಶ್ರೀ ಸಾಯಿಬಾಬಾರವರ ದೈನಂದಿನ ಪೂಜಾ ವಿಧಿ ವಿಧಾನಗಳು ನಿಯಮಿತವಾಗಿ ನಡೆಯುತ್ತಲಿದೆ. ಅಲ್ಲದೇ, ಕೊಲಂಬೋ ನಗರವನ್ನು ಪ್ರತಿನಿಧಿಸುತ್ತಿರುವ ಮಂತ್ರಿಗಳಾದ ಶ್ರೀ.ಅರುಮುಂಗನ್ ರವರು ತಮ್ಮ ಸ್ವಂತ ಹಣದಿಂದ ಸುಮಾರು ಐದು ಎಕರೆ ವಿಸ್ತೀರ್ಣದಷ್ಟು ಬೃಹತ್ ಜಾಗವನ್ನು ಸಾಯಿ ಮಂದಿರದ ನಿರ್ಮಾಣಕ್ಕೋಸ್ಕರವಾಗಿ ತೆಗೆದುಕೊಂಡಿದ್ದಾರೆ. ಈ ಸಾಯಿಬಾಬಾ ಮಂದಿರವು  ಕೊಲಂಬೋ ನಗರದಲ್ಲಿ ತಲೆ ಎತ್ತಲಿದ್ದು ಅತಿ ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಸಾರ್ವಜನಿಕರ ದರ್ಶನಕ್ಕಾಗಿ ತೆರೆದಿಡಲಾಗುವುದು ಎಂದು ಅವರುಗಳು ಸುದ್ಧಿಗಾರರಿಗೆ ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಆಂಗ್ಲ ಭಾಷೆಯಿಂದ ಕನ್ನಡಕೆ :ಶ್ರೀಕಂಠ ಶರ್ಮ 

Sunday, October 5, 2014

ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಅಂಗವಾಗಿ ಅಸ್ಸಾಮಿ ಭಾಷೆಯಲ್ಲಿ ರಚಿಸಲಾದ "ಸಾಯಿ ಚರಿತ್ರ ದರ್ಶನ" ಮತ್ತು "ಶ್ರೀ ಸಾಯಿನಾಥ ಸಗುಣೋಪಾಸನ" ಗ್ರಂಥಗಳ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಕುರಿತು ರಚಿಸಲಾದ ಪವಿತ್ರ ಗ್ರಂಥ ಶ್ರೀ ಸಾಯಿ ಸಚ್ಚರಿತ್ರೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ ಈ ಪವಿತ್ರ ಗ್ರಂಥವು ಸಾಯಿ ಭಕ್ತರಿಗೆ ಭಗವದ್ಗೀತೆ ಹಾಗೂ ಜ್ಞಾನೇಶ್ವರಿಯಷ್ಟೇ ಮಹತ್ವವಿರುವ ಗ್ರಂಥವಾಗಿರುತ್ತದೆ. ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಅಂಗವಾಗಿ ಇದೇ ತಿಂಗಳ 3ನೇ ಅಕ್ಟೊಬರ್ 2014,ಶುಕ್ರವಾರ ದಂದ ಸಮಾಧಿ ಮಂದಿರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆಯವರು ಅಸ್ಸಾಮಿ ಭಾಷೆಯಲ್ಲಿ ರಚಿಸಲಾದ "ಸಾಯಿ ಚರಿತ್ರ ದರ್ಶನ" ಮತ್ತು "ಶ್ರೀ ಸಾಯಿನಾಥ ಸಗುಣೋಪಾಸನ"  ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.  ದಿವಂಗತ ಶ್ರೀ.ಹೇಮಾಡಪಂತರು  ಮರಾಠಿ ಮೂಲ ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಂಗ್ಲ ಭಾಷೆಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ತರ್ಜುಮೆ ಮಾಡಿದ್ದರು. ಅದರ ಅಸ್ಸಾಮಿ ಅನುವಾದವೇ ಈ "ಸಾಯಿ ಚರಿತ್ರ ದರ್ಶನ" ಗ್ರಂಥವಾಗಿರುತ್ತದೆ.  ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀ.ಕಾವಡೆಯವರು ಶ್ರೀ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಇನ್ನೂ ಹೆಚ್ಚು ಭಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಅಸ್ಸಾಮಿ ಗ್ರಂಥವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. 



ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ.ಡಿ.ಎಂ.ಸುಕ್ತಾನಕರ್, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಲೆ, ಶ್ರೀ.ಯು.ಪಿ.ಗೋಂದ್ಕರ್, ಎಲ್ಲಾ ವಿಭಾಗದ ಮುಖ್ಯಸ್ಥರೂ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ.ಕಾವಡೆಯವರು ಮಾನವನ ಜೀವನದಲ್ಲಿ ಸದ್ಗುರುವಿನ ಪೂಜೆಗೆ ಹೆಚ್ಚಿನ ಮಹತ್ವವಿರುತ್ತದೆ, ಈ ನಿಟ್ಟಿನಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯು ಮುಂದಿನ ಯುವ ಪೀಳಿಗೆಯು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಷ್ಟೇ ಅಲ್ಲದೇ ಈ ಗ್ರಂಥವು ಪ್ರತಿಯೊಬ್ಬರನ್ನೂ ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ.  ಈ ಗ್ರಂಥವು "ಮಾನವ ಸೇವೆಯೇ ಮಾಧವ ಸೇವೆ" ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸ್ಪಷ್ಟವಾಗಿ ಸಾರುತ್ತದೆ ಎಂದು ನುಡಿದರು. ಈ  ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ.ಸುಕ್ತಾನಕರ್ ರವರು ಈ ಗ್ರಂಥದ ಮರಾಠಿ  ಅವತರಣಿಕೆಯ ಬಿಡುಗಡೆ ಸಮಾರಂಭದಲ್ಲಿ ತಾವು ಭಾಗವಹಿಸಿದ್ದು ಈಗ ಪುನಃ ಇದೇ ಗ್ರಂಥದ ಅಸ್ಸಾಮಿ ಅನುವಾದಿತ ಗ್ರಂಥದ ಬಿಡುಗಡೆ ಸಮಾರಂಭದಲ್ಲೂ ತಾವು ಭಾಗವಹಿಸುವ ಭಾಗ್ಯ ತಮಗೆ ದೊರೆಯುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದು ನುಡಿದರು. ಅಲ್ಲದೆ, ಈ ಅಸ್ಸಾಮಿ ಗ್ರಂಥವು ಅಸ್ಸಾಂ ರಾಜ್ಯದಲ್ಲಿ ಸಾಯಿ ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. 

ದಿವಂಗತ ಶ್ರೀ. ಹೇಮಾಡಪಂತರು ಮೂಲ ಮರಾಠಿ ಗ್ರಂಥವನ್ನು ಓವಿ ಶೈಲಿಯಲ್ಲಿ ರಚಿಸಿದರು. ಆ ಓವಿ ಗ್ರಂಥವನ್ನು ಮರಾಠಿ ಗದ್ಯ ಶೈಲಿಯಲ್ಲಿ ಶ್ರೀ.ಕೆ.ಎಲ್.ಕೊಲೊನೆಲ್ ಮತ್ತು ಶ್ರೀ.ನಿಂಬಾಳ್ಕರ್ ರವರು ಹೊರತಂದರು.  ನಂತರ ಇದೇ ಮರಾಠಿ ಗ್ರಂಥವನ್ನು ಸಂಕ್ಷಿಪ್ತ ರೂಪದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು "ಸಾಯಿ ಚರಿತ್ರ ದರ್ಶನ" ಎಂಬ ಹೆಸರಿನಲ್ಲಿ ಹೊರತಂದರು.ಈ ಪುಸ್ತಕವು ಈಗಾಗಲೇ ಗುಜರಾತಿ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ತರ್ಜುಮೆಗೊಂಡಿರುತ್ತದೆ. ಪ್ರಸ್ತುತ  ಗೌಹಟಿಯ ಶ್ರೀ.ನಿಶಾಂತ್ ಹಜಾರಿಕಾ ಮತ್ತು ಶ್ರೀಮತಿ.ರೂಮಾ ಗೃಹರವರುಗಳು ಅಸ್ಸಾಮಿ ಭಾಷೆಯಲ್ಲಿ ಇದೇ ಗ್ರಂಥವನ್ನು ತರ್ಜುಮೆ ಮಾಡಿದ್ದು, ಗೌಹಟಿಯ ಅಸ್ಸಾಂ ಬುಕ್ ಡಿಪೋ ನ ಶ್ರೀ. ಅಭಿಜಿತ್ ಗೃಹ ರವರು  ಗ್ರಂಥವನ್ನು ಹೊರತಂದಿರುತ್ತಾರೆ. 

ಈ  ಶುಭ ಸಂದರ್ಭದಲ್ಲಿ ಶ್ರೀ. ಅಭಿಜಿತ್ ಗೃಹ ರವರು ತರ್ಜುಮೆ ಮಾಡಿರುವ ಶ್ರೀ ಸಾಯಿ ಸಗುಣೋಪಾಸನ ಎಂಬ ಮತ್ತೊಂದು ಅಸ್ಸಾಮಿ ಗ್ರಂಥವನ್ನು ಕೂಡ ಬಿಡುಗಡೆ ಮಾಡಲಾಯಿತು. 

ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಂದನಾರ್ಪಣೆಯನ್ನು ನೆರವೇರಿಸಿದರು. 

ಮರಾಠಿಯಿಂದ ಅಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, October 2, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಆಚರಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಚರಿಸಲಾಗುತ್ತಿರುವ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಮೊದಲನೇ ದಿನದ ಕಾರ್ಯಕಲಾಪಗಳು ಇದೇ ತಿಂಗಳ 2ನೇ ಅಕ್ಟೋಬರ್ 2014, ಗುರುವಾರ ದಂದು ಬೆಳಿಗ್ಗೆ ಶ್ರೀ ಸಾಯಿಬಾಬಾರವರ ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಡನೆ ವಿಧ್ಯುಕ್ತವಾಗಿ ಪ್ರಾರಂಭವಾದವು. 

ಮುಂಬೈನ ದ್ವಾರಕಾಮಾಯಿ ಮಂಡಳಿಯವರು ಸಮಾಧಿ ಮಂದಿರದ ಪ್ರಾಂಗಣದ ಮಹಾದ್ವಾರದಲ್ಲಿ ಭಗವಾನ್ ದತ್ತಾತ್ರೇಯ, ಸ್ವಾಮಿ ಸಮರ್ಥ ಹಾಗೂ ಗಜಾನನ ಮಹಾರಾಜ್ ರವರುಗಳ ವಿಗ್ರಹಗಳನ್ನು ಇರಿಸಿದ್ದು, ಎಲ್ಲಾ ಸಾಯಿ ಭಕ್ತರನ್ನು ಬಹಳವೇ ಆಕರ್ಷಿಸುತ್ತಿವೆ.



2ನೇ ಅಕ್ಟೋಬರ್ 2014, ಗುರುವಾರ ದಂದು ಬೆಳಿಗ್ಗೆ 5 ಗಂಟೆಗೆ ಸಮಾಧಿ ಮಂದಿರದಿಂದ ಶ್ರೀ ಸಾಯಿಬಾಬಾರವರ ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಡನೆ ವಿಧ್ಯುಕ್ತವಾಗಿ ಪ್ರಾರಂಭವಾದವು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು ತಲುಪಿದ ನಂತರ ಶ್ರೀ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮೊದಲನೇ ಅಧ್ಯಾಯವನ್ನು ಪಾರಾಯಣ ಮಾಡಿದರೆ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇ ಅಧ್ಯಾಯವನ್ನು ಪಾರಾಯಣ ಮಾಡಿ ಅಖಂಡ ಪಾರಾಯಣಕ್ಕೆ ಚಾಲನೆ ನೀಡಿದರು. 


ಅಖಂಡ ಪಾರಾಯಣದ ಸಲುವಾಗಿ 2ನೇ ಅಕ್ಟೋಬರ್ 2014 ರಂದು ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗಿತ್ತು. 

ಬೆಳಿಗ್ಗೆ 7.15 ಕ್ಕೆ  ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಅವರ ಪತ್ನಿಯವರು ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಪಾದ ಪೂಜೆಯನ್ನು ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಸಂಜೆ 4.00 ಗಂಟೆಗೆ ಔರಂಗಾಬಾದ್ ನ ಹರಿ ಭಕ್ತ ಪರಾಯಣ ಶ್ರೀ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರು ಕೀರ್ತನೆಯನ್ನು ಮಾಡಿದರು. ಸಂಜೆ 6.15 ಕ್ಕೆ ಧೂಪಾರತಿಯನ್ನು ನೆರವೇರಿಸಲಾಯಿತು. ನಂತರ 7.30 ರಿಂದ  to 10.00 ಗಂಟೆಯವರೆಗೆ ಸಾಯಿನಗರ ಮೈದಾನದಲ್ಲಿ ನಿರ್ಮಿಸಲಾಗಿರುವ ವಿಶೇಷ ವೇದಿಕೆಯಲ್ಲಿ ಶ್ರೀಮತಿ.ರಾಗಿಣಿ ಜಿತೇಂದ್ರ ಕಾಮಾಟಿಕರ್ ರವರಿಂದ   ಭಕ್ತಿಗೀತೆ ಹಾಗೂ ಭಾವಗೀತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಂಸ್ಥಾನಾದ ವತಿಯಿಂದ ಆಹ್ವಾನಿತ ಕಲಾವಿದರುಗಳನ್ನು ಸನ್ಮಾನಿಸಲಾಯಿತು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. 



96ನೇ ಪುಣ್ಯತಿಥಿ ಉತ್ಸವದ ಮುಖ್ಯ ದಿನವಾದ ಶುಕ್ರವಾರ, 3ನೇ ಅಕ್ಟೋಬರ್ 2014 ರಂದು ಲಕ್ಷಾಂತರ ಸಾಯಿ ಭಕ್ತರು ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.

ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವು ದ್ವಾರಕಾಮಾಯಿಯಲ್ಲಿ ಸುಸಂಪನ್ನಗೊಂಡಿತು. ನಂತರ ಶ್ರೀ ಸಾಯಿಬಾಬಾರವರ ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಶಿರಡಿಯ ಗ್ರಾಮಸ್ಥರುಗಳು ಭಾಗವಹಿಸಿದ್ದರು.

ಬೆಳಿಗ್ಗೆ 9.00 ಗಂಟೆಗೆ ಭಿಕ್ಷಾ ಜೋಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ  ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಿರಡಿಯ ಗ್ರಾಮಸ್ಥರು ಹಾಗೂ ಸಾವಿರಾರು ಮಂದಿ ಸಾಯಿ ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ 10.00 ಗಂಟೆಗೆ ಸಮಾಧಿ ಮಂದಿರದ ವೇದಿಕೆಯಲ್ಲಿ ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರಿಂದ ಕೀರ್ತನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 10.30 ಕ್ಕೆ ಸಮಾಧಿ ಮಂದಿರದಲ್ಲಿ ಆರಾಧನಾ ವಿಧಿ ಹಾಗೂ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.  ಇದನ್ನು ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆಯವರು ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಆರತಿಯ ನಂತರ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಮರಾಠಿ ಭಾಷೆಯಲ್ಲಿ ರಚಿಸಿದ್ದ "ಸಾಯಿ ಚರಿತ್ರ ದರ್ಶನ" ಎಂಬ ಪುಸ್ತಕದ ಅಸ್ಸಾಮಿ ಅನುವಾದಿತ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ.ಡಿ.ಎಂ.ಸುಕ್ತಾನಕರ್, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಲೆ, ಶ್ರೀ.ಯು.ಪಿ.ಗೋಂದ್ಕರ್, ಎಲ್ಲಾ ವಿಭಾಗದ ಮುಖ್ಯಸ್ಥರೂ ಭಾಗವಹಿಸಿದ್ದರು. ಸಂಜೆ 5 ಗಂಟೆಗೆ ಖಂಡೋಬ ಮಂದಿರಕ್ಕೆ ಮೆರವಣಿಗೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಸಂಜೆ 6.15 ಕ್ಕೆ ಧೂಪಾರತಿ ಹಮ್ಮಿಕೊಳ್ಳಲಾಗಿತ್ತು. ಸಂಜೆ 7.30 ರಿಂದ ರಾತ್ರಿ 10.00  ಗಂಟೆಯವರೆಗೆ ಸಾಯಿ ನಗರದ ಮೈದಾನದಲ್ಲಿ ಭೂಪಾಲ್ ನ ಶ್ರೀ.ಸತ್ಯನಾರಾಯಣ ನಾಯರ್ ರವರಿಂದ ಭಜನೆ ಮತ್ತು ಘಜಲ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಯಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂದಿಸಿದರು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿಯ ಗ್ರಾಮಸ್ಥರು  ಹಾಗೂ ಸಾಯಿ ಭಕ್ತರುಗಳು ಭಾಗವಹಿಸಿದ್ದರು.



ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಸಾಯಿಬಾಬಾ ಪೇಪರ್ ಪ್ರಾಡಕ್ಟ್ಸ್ ನ ಶ್ರೀ.ಆರ್.ಶರವಣರವರು ನೀಡಿದ ಉದಾದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಹಾಗೂ ದೇವಾಲಯದ ಆವರಣವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು.



3ನೇ ಅಕ್ಟೋಬರ್ 2014 ಮುಖ್ಯ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು.

2ನೇ ಅಕ್ಟೋಬರ್ 2014, ಗುರುವಾರ ದಂದು ಪ್ರಾರಂಭವಾದ ಶ್ರೀ ಸಾಯಿಬಾಬಾರವರ 96ನೇ ಮಹಾ ಸಮಾಧಿ ಉತ್ಸವವು 4ನೇ ಅಕ್ಟೋಬರ್ 2014, ಶನಿವಾರ ದಂದು ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರ ಕಲ್ಯಾಚ ಕೀರ್ತನೆ ಹಾಗೂ ದಹಿ ಹಂಡಿ ಕಾರ್ಯಕ್ರಮಗಳೊಂದಿಗೆ ಸಂಪೂರ್ಣವಾಯಿತು.

ಆ ದಿನ ಬೆಳಿಗ್ಗೆ ಗುರುಸ್ಥಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಹಾಗೂ ಸಮಾಧಿ ಮಂದಿರದಲ್ಲಿ ಪಾದ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ನೆರವೇರಿಸಿದರು. ಬೆಳಿಗ್ಗೆ 10.00 ಗಂಟೆಗೆ  ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರಿಂದ ಗೋಪಾಲಕಾಲ ಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾನ್ಹ 12.00 ದಹಿ ಹಂಡಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧ್ಯಾನ್ಹ 12.10 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು.  ಸಂಜೆ 6.15 ಕ್ಕೆ ಧೂಪಾರತಿಯನ್ನು ನೆರವೇರಿಸಲಾಯಿತು. ಸಂಜೆ 7.30 ರಿಂದ ರಾತ್ರಿ 10.00  ಗಂಟೆಯವರೆಗೆ ಸಾಯಿ ನಗರದ ಮೈದಾನದಲ್ಲಿ  ದೊರ್ಹಾಳೆಯ ಶ್ರೀ.ಶ್ರವಣ್ ಮಾಧವ ಚೌಧರಿಯವರಿಂದ ಸಾಯಿ ಕಥಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.




ಹಲವಾರು ಸಾಯಿ ಭಕ್ತರುಗಳು ನೀಡಿದ ಉದಾರವಾದ ದೇಣಿಗೆಯ ಸಹಾಯದಿಂದ ಉತ್ಸವದ ಮೂರೂ ದಿನಗಳಂದು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಮಹಾಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಐವತ್ತು ಸಾವಿರಕ್ಕೂ ಹೆಚ್ಚು ಸಾಯಿ ಭಕ್ತರು ಈ ಉಚಿತ ಪ್ರಸಾದ ಭೋಜನದ ಪ್ರಯೋಜನವನ್ನು ಪಡೆದರು. ಸಾಯಿಬಾಬಾರವರ  ದರ್ಶನವನ್ನು ಪಡೆದ ಸುಮಾರು ಒಂದು ಲಕ್ಷ ನಲವತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಾಡು ಪ್ರಸಾದದ ಪೊಟ್ಟಣಗಳನ್ನು  ದರ್ಶನದ ಸಾಲಿನಲ್ಲಿ ವಿತರಿಸಲಾಯಿತು. ಉತ್ಸವದ ಮುಖ್ಯ ದಿನದಂದು ಬೆಳಿಗ್ಗೆ 9.00 ಕ್ಕೆ ಆಯೋಜಿಸಿದ್ದ ಭಿಕ್ಷಾ ಜೋಳಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ  ಭಾಗವಹಿಸಿದ್ದ ಸ್ಥಳೀಯರು ಹಾಗೂ ಸಾಯಿಭಕ್ತರು 59,000 ರೂಪಾಯಿ ನಗದು ಹಾಗೂ 61 ಚೀಲಗಳಷ್ಟು ಅಕ್ಕಿ, ರಾಗಿ ಮತ್ತು ಗೋಧಿಯನ್ನು ಭಿಕ್ಷೆಯ ರೂಪದಲ್ಲಿ ನೀಡಿದರು.

ಎಂದಿನಂತೆ ಈ ವರ್ಷವೂ ಶ್ರೀ ಸಾಯಿಬಾಬಾರವರ ಮಹಾಸಮಾಧಿಯ ಮುಖ್ಯ ದಿನದಂದು ಶಿರಡಿಯ ಗ್ರಾಮಷ್ಟರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ವಿಶೇಷ ಭೋಜನವನ್ನು ಶ್ರೀ ಸಾಯಿಬಾಬಾ ಪ್ರಸಾದಾಲಯದಲ್ಲಿ ಏರ್ಪಡಿಸಲಾಗಿತ್ತು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶಿರಡಿ ಸಮಾಧಿ ಮಂದಿರದಿಂದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರ - ಕೃಪೆ: ಸಾಯಿಅಮೃತಧಾರಾ. ಕಾಂ

ಸಾಯಿ ಭಕ್ತರು ಹಾಗೂ ಶಿರಡಿಯ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ  ಸಿಸಿ ಟಿವಿಯ ಮೂಲಕ 2ನೇ ಅಕ್ಟೋಬರ್ 2014 ರಿಂದ  4ನೇ ಅಕ್ಟೋಬರ್  2014 ರವರೆಗೆ  ಶಿರಡಿ ಸಮಾಧಿ ಮಂದಿರದಲ್ಲಿ ನಡೆಯುವ  ಶ್ರೀ ಸಾಯಿಬಾಬಾರವರ  96ನೇ ಮಹಾಸಮಾಧಿ ಉತ್ಸವದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರವನ್ನು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ  1ನೇ ಅಕ್ಟೋಬರ್ 2014 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಶ್ರೀ ಸಾಯಿಬಾಬಾ ಸಂಸ್ಥಾನವು ಹಲವಾರು ವರ್ಷಗಳಿಂದ ಆರಾಧನಾ ವಿಧಿ ಮತ್ತು ಪೂಜೆಗಳನ್ನು ಸಮಾಧಿ ಮಂದಿರದ ಮೊದಲನೇ ಮಹಡಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಶ್ರೀ ಸಾಯಿಬಾಬಾರವರ ಸಮಾಧಿಯ ಸ್ಥಳವಾದ ಬೂಟಿವಾಡಾಕ್ಕೆ 2018ನೇ ಇಸವಿಗೆ ಸರಿಯಾಗಿ 100 ಸಂವತ್ಸರಗಳು ತುಂಬಲಿದೆ. ಈ ಪರಮ ಪವಿತ್ರ  ಸ್ಥಳದ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಇಷ್ಟು ವರ್ಷಗಳಿಂದ  ಸಮಾಧಿ ಮಂದಿರದಿಂದ ನೇರ ಪ್ರಸಾರವನ್ನು ಮಾಡುತ್ತಿರಲಿಲ್ಲ. ಆದರೆ, ಈ ವರ್ಷದಿಂದ  ಸಾಯಿ ಭಕ್ತರು ಹಾಗೂ ಶಿರಡಿಯ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ  ಸಿಸಿ ಟಿವಿಯ ಮೂಲಕ 2ನೇ ಅಕ್ಟೋಬರ್ 2014 ರಿಂದ  4ನೇ ಅಕ್ಟೋಬರ್  2014 ರವರೆಗೆ  ಶಿರಡಿ ಸಮಾಧಿ ಮಂದಿರದಲ್ಲಿ ನಡೆಯುವ  ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರವನ್ನು ಮಾಡುತ್ತಿದ್ದೇವೆ. ಆರಾಧನಾ ವಿಧಿ ಮತ್ತು ಪೂಜೆಯನ್ನು ಸಲ್ಲಿಸುತ್ತಿರುವವರು ಹಾಗೂ ನಾಮ ನಿರ್ದೇಶನ ಮಾಡಿದ ಕೆಲವು ಬ್ರಾಹ್ಮಣ ದಂಪತಿಗಳನ್ನು ಹೊರತುಪಡಿಸಿ, ಇತರ ಯಾರಿಗೂ ಆರಾಧನಾ ವಿಧಿ ಮತ್ತು ಪೂಜೆ ನಡೆಯುತ್ತಿರುವ ಸಮಯದಲ್ಲಿ ಸಮಾಧಿ ಮಂದಿರದ ಮೊದಲನೇ ಮಹಡಿಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ. ಈ ಆರಾಧನಾ ವಿಧಿ ಮತ್ತು ಪೂಜೆಯನ್ನು ನೆರವೇರಿಸಿದ ಮೇಲಿನ ಎಲ್ಲರಿಗೂ ಹಾಗೂ ಕೆಲವು ಗಣ್ಯ ವ್ಯಕ್ತಿಗಳು ಮತ್ತು ಸ್ಥಳೀಯರಿಗೆ ಸಾಯಿ ಪ್ರಸಾದಾಲಯದ ವಿಐಪಿ ವಿಭಾಗದಲ್ಲಿ ಪ್ರಸಾದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದ ಕಾರಣ, ಯಾವ ಸಾಯಿ ಭಕ್ತರೂ ದರ್ಶನದ ಸಾಲಿನಲ್ಲಿ ಬರುವಾಗ  ಆರಾಧನಾ ವಿಧಿ ಮತ್ತು ಪೂಜೆ ನಡೆಯುತ್ತಿರುವ  ಸಮಾಧಿ ಮಂದಿರದ ಮೊದಲನೇ ಮಹಡಿಗೆ ಪ್ರವೇಶ ಮಾಡದೇ ಶ್ರೀ ಸಾಯಿಬಾಬಾ ಸಂಸ್ಥಾನದೊಂದಿಗೆ ಸಹಕರಿಸಬೇಕೆಂದು ಶ್ರೀ ಜಾಧವ್ ರವರು ಈ ಮೂಲಕ  ಮನವಿ ಮಾಡಿಕೊಂಡಿದ್ದಾರೆ.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವ - 2014 – 2ನೇ ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಕಳೆದ ತಿಂಗಳ 30ನೇ ಸೆಪ್ಟೆಂಬರ್ 2014 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು  2ನೇ ಅಕ್ಟೋಬರ್ 2014 ರಿಂದ 4ನೇ  ಅಕ್ಟೋಬರ್ 2014 ರವರೆಗೆ ನಡೆಯುವ ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಸಕಲ ಸಿದ್ಧತೆಗಳು ಸಂಪೂರ್ಣಗೊಂಡಿವೆ ಎಂದು ತಿಳಿಸಿದರು. ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಸಾಯಿಭಕ್ತರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ  ಉತ್ಸವದ 3  ದಿನಗಳೂ ಸಾಯಿಬಾಬಾ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ವಿತರಿಸಲಾಗುವುದು ಎಂದು ಸಹ ಅವರು ಸುದ್ಧಿಗಾರರಿಗೆ ತಿಳಿಸಿದರು. 

ಸಾಧು ಸಂತರ ಹಾಗೂ ಸತ್ಪುರುಷರ ಮಹಾಸಮಾಧಿ ಉತ್ಸವವನ್ನು ಆಚರಿಸುವುದು ಬಹಳ ಪವಿತ್ರವಾದ ಕಾರ್ಯವಾಗಿದ್ದು ಆ ಸಂತರು ಸಮಾಧಿಯಾದ ದಿನವನ್ನು ಮಹಾಸಮಾಧಿ ದಿನವನ್ನಾಗಿ ಆಚರಿಸುವ ಪರಿಪಾಠ ಎಲ್ಲೆಡೆ ಬೆಳೆದುಕೊಂಡು ಬಂದಿದೆ ಎಂದು ಶ್ರೀ.ಜಾಧವ್ ರವರು ತಿಳಿಸಿದರು. 

ಪ್ರಪಂಚದ ಅನೇಕ ಕಡೆಗಳಿಂದ ಲಕ್ಷಾಂತರ ಸಾಯಿ ಭಕ್ತರು ಸಾಯಿಬಾಬಾರವರ ಆಶೀರ್ವಾದವನ್ನು ಪಡೆಯುವ ಸಲುವಾಗಿ ಶಿರಡಿಗೆ ಬರಲಿದ್ದಾರೆ. ಆ ಎಲ್ಲಾ ಭಕ್ತರಿಗೆ  ದೇವಾಲಯದ ಸಂಕೀರ್ಣದಲ್ಲಿ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲಿ ಒಳ್ಳೆಯ ಅನುಕೂಲತೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಹಳೆಯ ಪ್ರಸಾದಾಲಯದ ಪಕ್ಕದಲ್ಲಿ ವಿಶೇಷವಾಗಿ  ಲಾಡು ಕೌಂಟರ್ ಹಾಗೂ ಮೊಬೈಲ್ ಲಾಕರ್ ಗಳನ್ನು ತೆರಯಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನವು ದೇವಾಲಯದ ಪ್ರಾಂಗಣ, ಹಳೆಯ ಪಿಂಪಲವಾಡಿ ರಸ್ತೆ, ದರ್ಶನದ ಕ್ಯೂ ಮತ್ತು ಪಾದಚಾರಿ ಮಾರ್ಗ, ಸಾಯಿ ವಾಣಿಜ್ಯ ಸಂಕೀರ್ಣದ ಬಳಿಯಿರುವ 16 ಗುಂಟೆ ಖಾಲಿ ಸ್ಥಳ, ಸಾಯಿ ಪ್ರಸಾದ್ ಸಂಕೀರ್ಣ ಹಾಗೂ ಸಾಯಿನಗರ ಮೈದಾನ ಹಾಗೂ ಇನ್ನೂ ಹಲವಾರು ಸ್ಥಳಗಳಲ್ಲಿ  ಒಟ್ಟು 69,000 ಚದರ ಆಡಿಗಳಷ್ಟು ವಿಶಾಲವಾದ ಟೆಂಟ್ ಗಳನ್ನು ನಿರ್ಮಿಸಿದೆ. ಈ ಎಲ್ಲಾ ಸ್ಥಳಗಳಲ್ಲಿ  24 ತಾಸು ವಿದ್ಯುತ್, ನೀರು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮಳೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ಎಲ್ಲಾ ಸ್ಥಳಗಳಲ್ಲಿ  ಟೆಂಟ್ ಗಳನ್ನು  ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲಾಗಿದೆ. ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬೃಹತ್ ಟೆಂಟ್ ಅನ್ನು ನಿರ್ಮಿಸಲಾಗಿದೆ. ಶ್ರೀ ಸಾಯಿಬಾಬಾರವರ ಮಹಾಸಮಾಧಿಯ ಅಂಗವಾಗಿ ಮುಂಬೈನ ದ್ವಾರಕಾಮಾಯಿ ಮಂಡಳಿಯವರು   ಸಮಾಧಿ ಮಂದಿರದ ಹೊರಭಾಗ, ದೇವಾಲಯದ ಪ್ರಾಂಗಣವನ್ನು ಸುಂದರವಾದ ವಿದ್ಯುತ್ ದೀಪಗಳಿಂದ ಅಲಂಕರಿಸಲಿದ್ದಾರೆ. ಅಲ್ಲದೇ, ಸಮಾಧಿ ಮಂದಿರದ ಮುಖ್ಯದ್ವಾರದಲ್ಲಿ ಭಾಗವನ್ ದತ್ತಾತ್ರೇಯ, ಸ್ವಾಮಿ ಸಮರ್ಥ ಮತ್ತು ಗಜಾನನ ಮಹಾರಾಜ್ ರವರ ವಿಗ್ರಹಗಳನ್ನು ಇರಿಸಿ ಸುಂದರವಾಗಿ ಅಲಂಕರಿಸಲಿದ್ದಾರೆ. ಬೆಂಗಳೂರಿನ ಆರ್.ಶ್ರೀನಿವಾಸ್ ರವರು ನೀಡಿರುವ ಉದಾರ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ, ದ್ವಾರಕಾಮಾಯಿ, ಚಾವಡಿ ಮತ್ತು ಗುರುಸ್ಥಾನವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗುತ್ತಿದೆ ಎಂದು ಶ್ರೀ. ಜಾಧವ್ ರವರು ನುಡಿದರು. 

ಉತ್ಸವದ ಅಂಗವಾಗಿ ಹಲವಾರು ಆಹ್ವಾನಿತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಮೊದಲ ದಿನದಂದು ಸಂಜೆ 4.00 ಗಂಟೆಗೆ ಔರಂಗಾಬಾದ್ ನ  ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಕೀರ್ತನೆ, 7.30 ರಿಂದ 10.00 ರವರೆಗೆ ಶ್ರೀಮತಿ.ರಾಗಿಣಿ ಜಿತೇಂದ್ರ ಕಾಮಾಟಿಕರ್ ರವರಿಂದ ಭಕ್ತಿಗೀತೆ ಹಾಗೂ ಭಾವಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ಸವದ ಎರಡನೆಯ ದಿನದಂದು ಬೆಳಿಗ್ಗೆ 10.00 ಗಂಟೆಗೆ  ಔರಂಗಾಬಾದ್ ನ  ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ ಕೀರ್ತನೆ, ಸಂಜೆ 7.30 ರಿಂದ 10.00 ರವರೆಗೆ ಭೂಪಾಲ್ ನ ಶ್ರೀ.ಸತ್ಯಾನಂದ ನಾಯರ್ ರವರಿಂದ ಭಜನೆ ಮತ್ತು ಘಜಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ಕೊನೆಯ ದಿನದಂದು ಬೆಳಿಗ್ಗೆ 10.00 ಗಂಟೆಗೆ ಔರಂಗಾಬಾದ್ ನ  ಶ್ರೀ.ಮನೋಹರ ಬುವಾ ದೀಕ್ಷಿತ್ ರವರಿಂದ  ಗೋಪಾಲ ಕಾಲ ಕೀರ್ತನೆ, ಸಾಯಂಕಾಲ 7.30 ರಿಂದ 10.00 ರವರೆಗೆ ದೊರ್ಹಾಳೆಯ ಶ್ರೀ.ಶ್ರವಣ ಮಾಧವ ಚೌಧರಿಯವರಿಂದ ಸಾಯಿ ಕಥಾಮೃತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೀರ್ತನೆಯ ಕಾರ್ಯಕ್ರಮಗಳು ಸಮಾಧಿ ಮಂದಿರದ ಹಿಂಭಾಗದ ವೇದಿಕೆಯಲ್ಲಿ ನಡೆಯುತ್ತವೆ ಹಾಗೂ ಆಹ್ವಾನಿತ ಕಲಾವಿದರ ಕಾರ್ಯಕ್ರಮಗಳು ಸಾಯಿನಗರ ಮೈದಾನದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ನಡೆಯುತ್ತವೆ. ಉತ್ಸವದ ಮೂರು ದಿನಗಳು ಸಾಯಿಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತವಾಗಿ ಪ್ರಸಾದ ಭೋಜನವನ್ನು ವಿತರಿಸಲಾಗುವುದು. ಈ ಪ್ರಸಾದ ಭೋಜನಕ್ಕೆ ಗುಂಟೂರಿನ ಶ್ರೀ.ಕೆ.ಹೆಚ್.ವಿ.ಗೋಪಿ, ಕನ್ಮರಲಪುಡಿ ಮತ್ತು ವೆಂಕಟಲೀಲಾ ಕುಮಾರಿ, ಹೈದರಾಬಾದ್ ನ ಎಸ್.ಮೋಕ್ಷಘ್ನಚಂದ್ರ, ಕರೂರಿನ ಎನ್.ಅಂಗ ಮುತ್ತು ಕುಮಾರ್, ಇಂದೂರಿನ ಕಮಲ್ ಬಲಾನಿ, ಚೆನ್ನೈ ನ ರಾಜಗೋಪಾಲ್ ನಟರಾಜನ್, ಕೋಪರಗಾವ್ ನ ಸಂಜಯ್ ಶಂಕರ್ ವಾಣಿ, ಗೋಧಿಯಾದ ಜ್ಯೋತಿ ಸಂಜಯ್ ಸಿಂಗ್ ಮಸಾನಿ ಮತ್ತು ಸಂಜಯ್ ಸಿಂಗ್ ಘನಶ್ಯಾಮ ದಾಸ್ ಮಸಾನಿ, ರಾಯಪುರದ ಪಾರ್ಥ ಆಯುಷ್ ಅಗರವಾಲ್, ಮುಂಬೈನ ಗೌತಮ್ ನಾಯಕ್, ಹೈದರಾಬಾದ್ ನ ನಾರಾಯಣ ಅನುಮಾಲ, ಬೆಂಗಳೂರಿನ ಬದರಿನಾರಾಯಣ, ಸಾಯಿ ರಂಜನಿ, ದೆಹಲಿಯ ಶ್ರೀಮತಿ.ದೇವಿ ಮತ್ತು ಶ್ರೀ.ಕೆ.ರಾಮಕುಮಾರ್ ಅಗರವಾಲ್, ಲಕ್ನೌ ನ ವಿಕ್ರಂ ಕಪೂರ್ ಹಾಗೂ ಬೆಂಗಳೂರಿನ ಭಾರತಿ ಶಿರಗುರ್ಕರ್  ರವರುಗಳು ಉದಾರವಾದ ದೇಣಿಗೆಯನ್ನು ನೀಡಿರುತ್ತಾರೆ. 

ಉತ್ಸವಕ್ಕೆ ಹರಿದು ಬರುತ್ತಿರುವ ಹೆಚ್ಚಿನ ಸಾಯಿ ಭಕ್ತ ಸಾಗರವನ್ನು ಗಮನದಲ್ಲಿ ಇಟ್ಟುಕೊಂಡು 135 ಕ್ವಿಂಟಾಲ್ ಸಕ್ಕರೆಯನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಲಾಡು ಪ್ರಸಾದ ಪೊಟ್ಟಣಗಳನ್ನು ತಯಾರಿಸಲಾಗುತ್ತಿದೆ. ಭಕ್ತರಿಗೆ ಸುಲಭವಾಗಿ ಚಹಾ, ಕಾಫಿ ಸಿಗಲೆಂದು ಸಾಯಿ ಆಶ್ರಮ 1 ಮತ್ತು 2, ಧರ್ಮಶಾಲೆ, ಭಕ್ತಿ ನಿವಾಸ ಕಟ್ಟಡ, ಕ್ಯೂ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಗಳಲ್ಲಿ ಹೆಚ್ಚಿನ ಕೌಂಟರ್ ಗಳನ್ನು ತೆರೆಯಲಾಗಿದೆ. ಅಂತೆಯೇ ಸಮಾಧಿ ಮಂದಿರದಿಂದ ಭಕ್ತಿನಿವಾಸಕ್ಕೆ ದಿನದ 24 ತಾಸು ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.  ಈ ಬಸ್ ಗಳು ಸಾಯಿಪ್ರಸಾದ್  ಕಟ್ಟಡದಿಂದ ಹೊರಡಲಿದ್ದು ಬೆಳಿಗ್ಗೆ 10.00 ಗಂಟೆಯಿಂದ ಸಂಚಾರ ಪ್ರಾರಂಭಿಸಲಿವೆ. ಕ್ಯೂ ಕಾಂಪ್ಲೆಕ್ಸ್, ದೇವಾಲಯದ ಆವರಣ, ಹೊಸ ಭಕ್ತಿ ನಿವಾಸ, ಸಾಯಿ ಆಶ್ರಮ  ಮತ್ತು 2, ಧರ್ಮಶಾಲೆ, ಸಾಯಿ ಪ್ರಸಾದಾಲಯದ ಆವರಣಗಳಲ್ಲಿ ಸಾಯಿ ಭಕ್ತರ ಅನುಕೂಲಕ್ಕಾಗಿ ಪ್ರಥಮ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ದೇವಾಲಯದ ಆವರಣದಲ್ಲಿ ದಿನದ  24 ತಾಸುಗಳೂ ತಜ್ಞ ವೈದ್ಯರುಗಳನ್ನು ಇರಿಸಲಾಗಿದೆ. 

ಶಿರಡಿಗೆ ಹರಿದು ಬರುತ್ತಿರುವ ಹೆಚ್ಚಿನ  ಭಕ್ತರನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವಿಭಾಗವು ಶಿರಡಿಯ  ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಿದೆ. ಸಮಾಧಿ ಮಂದಿರದಲ್ಲಿ ಬಾಬಾರವರ ವಿಗ್ರಹದ ಎದುರುಗಡೆ, ಪಲ್ಲಕ್ಕಿ ಉತ್ಸವ, ಭಿಕ್ಷಾ ಜೋಳಿ ಕಾರ್ಯಕ್ರಮ, ಸೀಮೋಲ್ಲಂಘನ ಉತ್ಸವ, ರಥೋತ್ಸವ, ಸಾಯಿ ನಗರ ವೇದಿಕೆ, ದೇವಾಲಯದ ಸಂಕೀರ್ಣ, ದರ್ಶನ ಹಾಲ್, ದರ್ಶನದ ಕ್ಯೂ ಕಾಂಪ್ಲೆಕ್ಸ್, ಪ್ರಸಾದಾಲಯದ ಆವರಣ, ಭಕ್ತಿ ನಿವಾಸ, ದ್ವಾರಾವತಿ, ಸಾಯಿ ಆಶ್ರಮ 1 ಮತ್ತು 2, ಧರ್ಮಶಾಲೆ - ಈ ಎಲ್ಲಾ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳು ಕರ್ತವ್ಯ ನಿರತರಾಗಿರುತ್ತಾರೆ. 

ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ  ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಈ ವರ್ಷದ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ.ಜಾಧವ್ ರವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ. 

ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ