ಮಹಾರಾಷ್ಟ್ರದ ಪುಣೆ ನಗರದ ಶಿವಾಜಿನಗರದಲ್ಲಿರುವ ಈ ಮಂದಿರವು ಅತ್ಯಂತ ಪುರಾತನ ಮಂದಿರವಾಗಿದ್ದು ಸ್ಥಳೀಯ ಹಾಗೂ ಪ್ರಪಂಚದ ಎಲ್ಲಾ ಭಾಗಗಳಿಂದ ಸಾವಿರಾರು ಸಾಯಿ ಭಕ್ತರು ಈ ಮಂದಿರಕ್ಕೆ ನಿಯಮಿತವಾಗಿ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ದೇವಾಲಯದ ಇತಿಹಾಸವು ಅತ್ಯಂತ ವಿಚಿತ್ರವಾಗಿದ್ದು, ಕೇಳಲು ಅತ್ಯಂತ ಕುತೂಹಲವಾಗಿದ್ದು, ಸಾಯಿಭಕ್ತರ ಮೈನವಿರೇಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇವಾಲಯವು ಶಿವಾಜಿನಗರದ ಮುತ್ತ ನದಿಯ ದಡದಲ್ಲಿರುವ ರಾಸನೆ ಚಾವಲ್ ನಲ್ಲಿ ಇದೆ. ಇತ್ತೀಚೆಗೆ ದೇವಾಲಯದ ಹಿಂಭಾಗದಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಲಾಗಿದ್ದು ಹಿಂದೆ ಮಳೆಗಾಲದಲ್ಲಿ ಆಗುತ್ತಿದ್ದಂತೆ ನದಿಯ ನೀರು ಈಗ ದೇವಾಲಯದ ಒಳಗಡೆ ಬರುವ ಸಾಧ್ಯತೆ ಇರುವುದಿಲ್ಲ. ಶಿವಾಜಿನಗರದ ಬಸ್ ನಿಲ್ದಾಣದಿಂದ ನಿರ್ಮಿಸಲಾಗಿರುವ ಹೊಸ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಮೊದಲು ರಾಸನೆ ಚಾವಲ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಬಂದು ಬಲಕ್ಕೆ ನೋಡಿದರೆ ಶ್ರೀ ಶಿರಡಿ ಸಾಯಿಬಾಬಾರವರ ದರ್ಶನ ನಮಗೆ ಆಗುತ್ತದೆ. ಶ್ರೀ ಸಾಯಿಬಾಬಾರವರನ್ನು ನೋಡಿದ ಕೊಡಲೇ ಸಾರ್ಥಕತೆಯ ಮನೋಭಾವನೆ ನಮ್ಮಲ್ಲಿ ಮೂಡುತ್ತದೆ.
ಶ್ರೀ ದಾಮೋದರ ಪಂತ್ ರಾಸನೆ ಒಬ್ಬ ಮಹಾನ್ ಸಾಯಿ ಭಕ್ತರಾಗಿದ್ದು ಶ್ರೀ ಸಾಯಿಬಾಬಾರವರ ಅವತರಣ ಕಾಲದ ಉತ್ತರಾರ್ಧದಲ್ಲಿ ಅವರ ಅನುಯಾಯಿಯಾಗಿದ್ದರು. ಈ ರಾಸನೆ ಚಾವಲ್ ಶ್ರೀ ದಾಮೋದರ ಪಂತ್ ರಾಸನೆಯವರಿಗೆ ಸೇರಿರುತ್ತದೆ. 1945 ನೇ ಇಸವಿಯಲ್ಲಿ ಶ್ರೀ ದಾಮೋದರ ಪಂತ್ ರಾಸನೆಯವರ ಮಗನಾದ ಶ್ರೀ ನಾನಾ ಸಾಹೇಬ್ ರಾಸನೆಯವರು ರಾಸನೆ ಚಾವಲ್ ನಲ್ಲಿದ್ದ ಎರಡು ಕೋಣೆಗಳನ್ನು ಶ್ರೀ ಸಾಯಿಬಾಬಾ ಮಂದಿರವಾಗಿ ಪರಿವರ್ತನೆ ಮಾಡಿ ಅಲ್ಲಿ ಶ್ರೀ ಸಾಯಿಬಾಬಾರವರ ಪೂಜೆಯನ್ನು ಪ್ರಾರಂಭಿಸಿದರು. ಅಂದಿನಿಂದ ಶ್ರೀ ಸಾಯಿಬಾಬಾರವರ ಪೂಜೆ ಈ ಸ್ಥಳದಲ್ಲಿ ಬಹಳ ಚೆನ್ನಾಗಿ ನಡೆಯುತ್ತಿದೆ. ಬೆಳಗಿನ ಹಾಗೂ ಸಂಜೆಯ ಆರತಿಗೆ ಭಕ್ತರು ಇಲ್ಲಿ ಕಿಕ್ಕಿರಿದು ಸೇರುತ್ತಾರೆ. ಪುಣೆಯ ಸೆಷನ್ಸ್ ನ್ಯಾಯಾಧೀಶರಾದ ಶ್ರೀ.ಪಾಟೀಲ್, ಬೆಳಗಾಂ ನ ನ್ಯಾಯಾಧೀಶರಾದ ಶ್ರೀ. ಚೌಗಲೆ, ಶ್ರೀ.ವಿ.ಶಂಕರ ಮೊದಲಿಯಾರ್, ಶ್ರೀ.ಪಿ.ಎಸ್.ರಾವ್, ಶ್ರೀ.ರಂಗನಾಥನ್, ಶ್ರೀ.ಬೇಂದ್ರೆ, ಶ್ರೀ.ಗಾಯಕವಾಡ್, ಶ್ರೀ.ತಾಕವಾನೆ ಗುರೂಜೀ ಈ ಮಂದಿರದ ಪ್ರಸಿದ್ಧ ಸಾಯಿಭಕ್ತರ ಸಾಲಿನಲ್ಲಿ ನಿಲ್ಲುತ್ತಾರೆ. ಖೇಡ್ ಗ್ರಾಮದವರಾದ ಶ್ರೀ.ನಿಕ್ಕಂರವರು ಪೋಲಿಸ್ ಇಲಾಖೆಯಲ್ಲಿ ಜಮಾದಾರರಾಗಿ ಕೆಲಸ ಮಾಡುತ್ತಿದ್ದರು. ಇವರು ಪ್ರಾಮಾಣಿಕ ಸಾಯಿ ಭಕ್ತರಾದ ಕಾರಣ, ಶ್ರೀ.ನಾನಾಸಾಹೇಬ್ ರಾಸನೆಯವರು ಇವರನ್ನು ದೇವಾಲಯದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ನಾನಾ ಸಾಹೇಬ್ ರಾಸನೆಯವರ ಆದೇಶದಂತೆ ಶ್ರೀ.ನಿಕ್ಕಂರವರು ಪೋಲಿಸ್ ಇಲಾಖೆಗೆ ರಾಜೀನಾಮೆ ನೀಡಿ ತಮ್ಮ ಇಡೀ ಜೀವನವನ್ನು ಈ ದೇವಾಲಯದ ಸೇವೆಗಾಗಿ ಮೀಸಲಿಟ್ಟರು. ಶ್ರೀ ಸಾಯಿಬಾಬಾರವರ ಕೃಪೆಯಿಂದ ದೊರೆತ ಒಂದು ಪವಿತ್ರ ದಂತವನ್ನು ಇವರು ದೇವಾಲಯಕ್ಕೆ ನೀಡಿದ್ದಾರೆ. ಇವರಿಗೆ ಶ್ರೀ ಸಾಯಿಬಾಬಾರವರ ಪವಿತ್ರ ದಂತವು ಹೇಗೆ ದೊರೆಯಿತು ಎಂಬ ವಿಷಯವು ಬಹಳ ಕುತೂಹಲಕಾರಿಯಾಗಿದ್ದು ಎಲ್ಲಾ ಸಾಯಿಭಕ್ತರೂ ತಿಳಿದುಕೊಳ್ಳಬೇಕಾದ ವಿಷಯವಾಗಿರುತ್ತದೆ.
ಶಿರಡಿಯ ನಿವಾಸಿಯಾಗಿದ್ದ ಕಾಶೀಭಾಯಿ ಎಂಬ ಹುಡುಗಿಯು ನಿಫಾಢದ ಹುಡುಗನನ್ನು ಮದುವೆಯಾದಳು. ಆದರೆ, ದುರದೃಷ್ಟವಶಾತ್ ಅವಳು ತನ್ನ ಗಂಡನನ್ನು ಮದುವೆಯಾದ ಕೆಲವೇ ವರ್ಷಗಳಲ್ಲಿ ಕಳೆದುಕೊಂಡಳು. ಅವಳ ಗಂಡನು ತೀರಿಕೊಂಡಾಗ ಇವಳು ಗರ್ಭಿಣಿಯಾಗಿದ್ದಳು. ಕಾಲಾನಂತರದಲ್ಲಿ ಅವಳಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು. ಅವನಿಗೆ ಮಾಧವ ಎಂದು ನಾಮಕರಣ ಮಾಡಲಾಯಿತು. ಅವಳ ಮಗನಿಗೆ ಒಂದು ವರ್ಷ ತುಂಬಿದ ನಂತರ ಅವಳು ನಿಫಾಢವನ್ನು ತೊರೆದು ಶಿರಡಿಯಲ್ಲಿದ್ದ ತನ್ನ ತಂದೆಯ ಮನೆಗೆ ಬಂದುಬಿಟ್ಟಳು. ಜೀವನೋಪಾಯಕ್ಕಾಗಿ ಅವಳು ಒಂದು ಹೊಲದಲ್ಲಿ ದಿನವಿಡೀ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಮಗನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಕಾರಣ ಅವಳು ಮಗನನ್ನು ಬೆಳಗಿನಿಂದ ಸಂಜೆಯವರೆಗೆ ಮಸೀದಿಯಲ್ಲಿ ಬಿಟ್ಟು ಹೋಗುತ್ತಿದ್ದಳು. ಸಂಜೆ ಕೆಲಸ ಮುಗಿಸಿಕೊಂಡು ಹೋಗುವಾಗ ಮಸೀದಿಗೆ ಬಂದು ಮಗನನ್ನು ಕರೆದುಕೊಂಡು ಹೋಗುತ್ತಿದ್ದಳು. ಅಲ್ಲದೆ, ಸಾಯಿಬಾಬಾರವರಿಗೆ ನಮಸ್ಕರಿಸಿ ಹೋಗುತ್ತಿದ್ದಳು. ಹೀಗೆ ನಾಲ್ಕೈದು ವರ್ಷಗಳು ಉರುಳಿದವು. ಮಾಧವನಿಗೆ ಐದು ವರ್ಷಗಳು ತುಂಬಿದಾಗ, ಸಾಯಿಬಾಬಾರವರು ಅವನಿಗೆ ಪ್ರತಿನಿತ್ಯ ಒಂದು ರೂಪಾಯಿಯನ್ನು ಕೊಡಲು ಪ್ರಾರಂಭಿಸಿದರು. ಅದಕ್ಕೆ ಬದಲಾಗಿ ಮಾಧವನು ಸಾಯಿಬಾಬಾರವರು ಹೇಳುತ್ತಿದ್ದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದನು.
ಕಾಶೀಭಾಯಿಗೆ ಬಾಬಾರವರು ಅನೇಕರಿಗೆ ಹಣವನ್ನು ನೀಡುತ್ತಿರುವ ವಿಷಯ ತಿಳಿದಿತ್ತು. ಒಮ್ಮೆ ಅವಳು ಮಸೀದಿಗೆ ಬಂದು ಸಾಯಿಬಾಬಾರವರಿಗೆ "ಬಾಬಾ, ನೀವು ಪ್ರತಿನಿತ್ಯ ಕೆಲವರಿಗೆ 50 ರೂಪಾಯಿಗಳು, ಮತ್ತೆ ಕೆಲವರಿಗೆ 30 ರೂಪಾಯಿಗಳು, ಇನ್ನಿತರರಿಗೆ 25 ರೂಪಾಯಿಗಳಂತೆ ಹಣವನ್ನು ನೀಡುತ್ತಿದ್ದೀರಿ. ನನ್ನ ಮಗ ಮಾಧವ ನೀವು ಹೇಳುವ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾನೆ. ಆದರೂ ಅವನಿಗೆ ಕೇವಲ ಒಂದು ರೂಪಾಯಿಯನ್ನು ಕೊಡುತ್ತಿದ್ದೀರಲ್ಲಾ. ಹೀಗೇಕೆ ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದಳು.
ಅದಕ್ಕೆ ಬಾಬಾರವರು "ಕಾಶೀಭಾಯಿ, ನಾನು ನಿನ್ನ ಮಗನಿಗೆ ಕಡಿಮೆ ಹಣ ನೀಡಿ ಇತರರಿಗೆ ಹೆಚ್ಚಿಗೆ ಹಣ ನೀಡುತ್ತಿದ್ದೇನೆ ಎಂಬ ವಿಷಯ ನನಗೆ ಗೊತ್ತಿದೆ. ಆದರೆ, ನಾನು ಬೇರೆಯವರಿಗೆ ಈ ರೀತಿಯ ಹಣವನ್ನು ಕೊಡುವುದನ್ನು ಕೆಲ ಸಮಯದ ನಂತರ ನಿಲ್ಲಿಸುತ್ತೇನೆ. ಆದರೆ, ನಿನ್ನ ಮಗನಿಗೆ ನಾನು ಹಣ ನೀಡುವುದನ್ನು ನಿಲ್ಲಿಸುವುದಿಲ್ಲ. ನಾನು ನಿನ್ನಂತೆ ಗಂಡನನ್ನು ಕಳೆದುಕೊಂಡು ಯಾವ ರಕ್ಷಣೆ ಇಲ್ಲದೆ ವಿಧವೆಯರಾಗಿರುವವರ ಒಡೆಯ" ಎಂದು ನುಡಿದರು.
ಕಾಶೀಭಾಯಿಗೆ ಶ್ರೀ ಸಾಯಿಬಾಬಾರವರ ಮಾತುಗಳು ಅರ್ಥವಾಗದೆ ಅವಳು "ನನ್ನ ಒಡೆಯ ಐದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾನೆ. ನಾನು ಆಗಿನಿಂದಲೂ ವಿಧವೆಯಾಗಿದ್ದೇನೆ" ಎಂದು ನುಡಿದಳು.
ಕಾಶೀಭಾಯಿಯ ಮಾತುಗಳನ್ನು ಕೇಳಿ ಸಾಯಿಬಾಬಾರವರ ಕೋಪ ನೆತ್ತಿಗೇರಿತು. ಅವರು ಕೋಪದಿಂದ ಅವಳಿಗೆ ಜೋರು ದನಿಯಲ್ಲಿ ನಿಂದಿಸಲು ಪ್ರಾರಂಭಿಸಿದರು. ಸಾಯಿಬಾಬಾರವರ ಕೋಪವನ್ನು ಕಂಡು ಹೆದರಿದ ಕಾಶೀಭಾಯಿ ಕೂಡಲೇ ಮಸೀದಿಯಿಂದ ಓಡಿಹೋದಳು. ಅಂದಿನಿಂದ ಸ್ವಲ್ಪ ದಿನಗಳವರೆಗೆ ಅವಳು ಮಸೀದಿಗೆ ಹೋಗುವುದನ್ನು ನಿಲ್ಲಿಸಿದಳು. ಆದರೆ, 2-3 ದಿನಗಳ ನಂತರ ಸಾಯಿಬಾಬಾರವರು ಜ್ಞಾಪಕ ಮಾಡಿಕೊಂಡು ಕಾಶೀಭಾಯಿಗೆ ಮಸೀದಿಗೆ ಬರುವಂತೆ ಹೇಳಿ ಕಳುಹಿಸಿದರು. ಕಾಶೀಭಾಯಿ ಮಾಧವನೊಂದಿಗೆ ಮಸೀದಿಗೆ ಬಂದಳು. ಅವಳಿಗೆ ಸಾಯಿಬಾಬಾರವರ ಹತ್ತಿರ ಮಾತನಾಡಲು ಧೈರ್ಯ ಬರಲಿಲ್ಲ. ಸಾಯಿಬಾಬಾರವರೇ ಅವಳೊಂದಿಗೆ ಮೆಲುದನಿಯಲ್ಲಿ ಮಾತನಾಡಿದರು. ಆ ಸಮಯದಲ್ಲಿ ಸಾಯಿಬಾಬಾರವರ ಒಂದು ದಂತವು ಬಿದ್ದು ಹೋಗುವ ಸ್ಥಿತಿಯಲ್ಲಿ ಇದ್ದಿತು. ಆದ ಕಾರಣ, ಸಾಯಿಬಾಬಾರವರು ಆ ದಂತವನ್ನು ಕಿತ್ತು ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಸ್ವಲ್ಪ ಉಧಿಯನ್ನು ಅದರ ಜೊತೆಗೆ ಇರಿಸಿ ಕಾಶೀಭಾಯಿಗೆ ನೀಡಿ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವಂತೆ ತಿಳಿಸಿದರು. ಹಾಗೂ, ಅದರಿಂದ ಅವಳಿಗೆ ತುಂಬಾ ಒಳಿತಾಗುವುದೆಂದು ಭರವಸೆಯನ್ನು ನೀಡಿದರು.
ಹೀಗೆ ಕಾಲವು ಉರುಳಿತು. ಮಾಧವನು ವಯಸ್ಸಿಗೆ ಬಂದನು. ಎಲ್ಲರೂ ಅವನನ್ನು ಮಾಧವ ರಾವ್ ಎಂದು ಕರೆಯುತ್ತಿದ್ದರು. ಕಾಶೀಭಾಯಿ ತೀರಿಕೊಂಡ ನಂತರ ಮಾಧವ ರಾವ್ ಶಿರಡಿಯನ್ನು ಬಿಟ್ಟು ನಿಫಾಢಕ್ಕೆ ಹೋಗಿ ನೆಲೆಸಿದನು. ಒಮ್ಮೆ ಅವನು ತೀವ್ರ ಖಾಯಿಲೆಯಾಗಿ ಹಾಸಿಗೆ ಹಿಡಿದನು. ಆಗ ಶ್ರೀ ಸಾಯಿಬಾಬಾರವರು ಅವನ ಕನಸಿನಲ್ಲಿ ಬಂದು "ಅತಿ ಶೀಘ್ರದಲ್ಲಿಯೇ ನಿನ್ನ ಬಳಿಗೆ ಒಬ್ಬ ಮನುಷ್ಯ ಬರುತ್ತಾನೆ. ನೀನು ತೋಳಿಗೆ ಕಟ್ಟಿಕೊಂಡಿರುವ ಆ ತಾಯಿತವನ್ನು ಅವನಿಗೆ ನೀಡಬೇಕು" ಎಂದು ಆಜ್ಞೆ ಮಾಡಿದರು. ಅದೇ ದಿನ ನಿಕ್ಕಂ ಮಾಧವ ರಾವ್ ನನ್ನು ನೋಡಲು ನಿಫಾಢಕ್ಕೆ ಬಂದರು.ನಿಕ್ಕಂರವರಿಗೂ ಅದೇ ರೀತಿ ಕನಸು ಬಿದ್ದ ಕಾರಣ ಆ ತಾಯಿತವನ್ನು ತೆಗೆದುಕೊಂಡು ಹೋಗಲು ಅವರು ನಿಫಾಢಕ್ಕೆ ಬಂದಿದ್ದರು. ಇಬ್ಬರು ಒಂದೇ ರೀತಿಯ ಕನಸನ್ನು ಕಂಡಿದ್ದು ಮಾತುಕತೆಯ ನಂತರ ತಿಳಿಯಿತು. ಆದುದರಿಂದ ಶ್ರೀ ಮಾಧವ ರಾವ್ ಆ ತಾಯಿತವನ್ನು ನಿಕ್ಕಂರವರಿಗೆ ನೀಡಿದನು. ಈ ತಾಯಿತವನ್ನು ನಿಕ್ಕಂ ರವರು ಬಹಳ ವರ್ಷ ಇಟ್ಟುಕೊಂಡಿದ್ದರು. ನಂತರ ಇದನ್ನು ಶಿವಾಜಿನಗರದ ರಾಸನೆ ಚಾವಲ್ ನಲ್ಲಿರುವ ಈ ಮಂದಿರಕ್ಕೆ ನೀಡಿದರು. ಅದೇ ತಾಯಿತವನ್ನು ಈಗ ಶ್ರೀ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಕೆಳಗಡೆ ಇರಿಸಲಾಗಿದೆ. ಈ ಪವಿತ್ರ ಪಾದುಕೆಗಳನ್ನು ಪರಮ ಪೂಜ್ಯ ನರಸಿಂಹ ಸ್ವಾಮೀಜಿಯವರು 1950 ನೇ ಇಸವಿಯಲ್ಲಿ ಸ್ಥಾಪಿಸಿರುತ್ತಾರೆ. ಶ್ರೀ ಸಾಯಿಬಾಬಾರವರ ಪವಿತ್ರ ದಂತವನ್ನು ಪವಿತ್ರ ಪಾದುಕೆಗಳ ಕೆಳಗಡೆ ಸ್ಥಾಪಿಸಿರುವ ಕಾರಣ ಈ ಮಂದಿರವು ಸಾಯಿಭಕ್ತರಿಗೆ ಮಹತ್ವದ್ದಾಗಿರುತ್ತದೆ.
ಈ ಮಂದಿರದ ಉಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ 1950 ನೇ ಇಸವಿಯಲ್ಲಿ ಶ್ರೀ ಸಾಯಿ ದಾಸ ಮಂಡಳ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಶ್ರೀ. ರಂಗನಾಥನ್ ರವರು ಈ ಮಂಡಳದ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದರು. ಅವರ ಮರಣದ ನಂತರ ಶ್ರೀ.ಎಸ್.ರಾಮಕೃಷ್ಣಾಜಿಯವರು ಕಾರ್ಯದರ್ಶಿ ಪಟ್ಟವನ್ನು ಅಲಂಕರಿಸಿದ್ದಷ್ಟೇ ಅಲ್ಲದೆ ಇಂದಿಗೂ ಮಂದಿರವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ದಸರಾ, ರಾಮನವಮಿ ಹಾಗೂ ಗುರುಪೂರ್ಣಿಮೆ ಉತ್ಸವಗಳನ್ನು ಬಹಳ ವೈಭವದಿಂದ ಇಂದಿಗೂ ಆಚರಿಸಲಾಗುತ್ತಿದೆ.
ಪುಣೆಯ ಖ್ಯಾತ ಸಾಯಿ ಭಕ್ತರಾದ ಶ್ರೀ.ನಾನಾಸಾಹೇಬ್ ಅವಸ್ತಿಯವರು ಕೂಡ ಈ ಮಂದಿರದ ಪ್ರಗತಿಗೆ ಬಹಳ ಶ್ರಮಿಸಿದ್ದಾರೆ ಮತ್ತು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ. ಶ್ರೀ ಸಾಯಿಬಾಬಾರವರು ಜೀವಂತರಾಗಿದ್ದಾಗ ಅವರನ್ನು ನೋಡಿದ ಕೆಲವೇ ಅದೃಷ್ಟವಂತ ಭಕ್ತರಲ್ಲಿ ಇವರೂ ಒಬ್ಬರು. ಆದರೆ ಇಂದು ಶ್ರೀ ನಾನಾ ಸಾಹೇಬ್ ಅವಸ್ತಿಯವರು ಬದುಕುಳಿದಿಲ್ಲ. ಇದು ಶ್ರೀ ಸಾಯಿ ದಾಸ ಮಂಡಳಕ್ಕೆ ಆಗಿರುವ ದೊಡ್ಡ ನಷ್ಟವೆಂದೇ ಹೇಳಬೇಕು. ಆದರೆ ಈ ಮಂದಿರದ ಸ್ವಯಂ ಸೇವಕರು ಬಹಳ ಉತ್ತಮವಾಗಿ ಮಂದಿರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಈ ದೇವಾಲಯದಲ್ಲಿ ನಡೆದ ಒಂದು ಲೀಲೆಯನ್ನು ಇಲ್ಲಿ ಸ್ಮರಿಸಲೇಬೇಕಾಗುತ್ತದೆ. 12ನೇ ಜುಲೈ 1961 ರಂದು ಜೋರು ಪ್ರವಾಹವಾಗಿ ಪನ್ ಶೆಟ್ ಡ್ಯಾಮ್ ಒಡೆದುಹೋಗಿ ಇದೇ ಪುಣೆ ನಗರವು ಜಲಾವೃತವಾಗಿತ್ತು. ಇಡೀ ಪುಣೆ ನಗರವು ಹಾಳಾಗಿ ಹೋಗಿದ್ದಷ್ಟೆ ಅಲ್ಲದೆ ಹಲವಾರು ಮನೆಗಳು ಉರುಳಿಬಿದ್ದಿತ್ತು. ನದಿಯ ದಡದ ಪಕ್ಕದಲ್ಲೇ ಈ ಮಂದಿರವಿದ್ದ ಕಾರಣ ಈ ಮಂದಿರದ ಗೋಪುರದವರೆಗೂ ಅಂದರೆ ಸರಿ ಸುಮಾರು 20 ರಿಂದ 25 ಅಡಿ ಎತ್ತರದವರೆಗೆ ನೀರು ತುಂಬಿಕೊಂಡಿತ್ತು. ದೇವಾಲಯದ ಸುತ್ತಲೂ ನೀರು-ಮಣ್ಣು ತುಂಬಿಕೊಂಡು ದೇವಾಲಯ ಕಾಣಿಸುತ್ತಲೇ ಇರಲಿಲ್ಲ. ಎರಡು ದಿನಗಳ ನಂತರ ಪ್ರವಾಹ ಕಮ್ಮಿಯಾದ ಮೇಲೆ ದೇವಾಲಯದ ಸ್ಥಿತಿಯನ್ನು ನೋಡಲು ಶ್ರೀ ಸಾಯಿ ದಾಸ ಮಂಡಳದ ಸದಸ್ಯರು ಬಂದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಹಳೆಯ ದೇವಾಲಯಕ್ಕೆ ಸ್ವಲ್ಪವೂ ಹಾನಿಯಾಗಿರಲಿಲ್ಲ. ದೇವಾಲಯದ ಆವರಣದಲ್ಲಿದ್ದ ಪವಿತ್ರ ಔದುಂಬರ ವೃಕ್ಷಕ್ಕೂ ಸಹ ಯಾವುದೇ ರೀತಿಯ ಹಾನಿಯಾಗಿರಲಿಲ್ಲ.ಶ್ರೀ ಸಾಯಿಬಾಬಾರವರ ವರ್ಣರಂಜಿತ ಚಿತ್ರಪಟ ಕೂಡ ಸ್ವಲ್ಪವೂ ಹಾಳಾಗಿರಲಿಲ್ಲ. ಪ್ರಸ್ತುತ, ರಾಜಸ್ಥಾನದ ಜೈಪುರದಿಂದ ತರಿಸಲಾದ ಶ್ರೀ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ಹಾಗೂ ಮೇಲೆ ತಿಳಿಸಿದ ವರ್ಣರಂಜಿತ ಚಿತ್ರಪಟವನ್ನು ದೇವಾಲಯದಲ್ಲಿ ಇರಿಸಲಾಗಿದೆ ಹಾಗೂ ಪ್ರತಿನಿತ್ಯ ಶ್ರದ್ಧಾ-ಭಕ್ತಿಗಳಿಂದ ಪೂಜಿಸಲಾಗುತ್ತಿದೆ.
ಶ್ರೀ ಸಾಯಿಬಾಬಾರವರ ದಂತವನ್ನು ಪವಿತ್ರ ಪಾದುಕೆಗಳ ಕೆಳಗಡೆ ಇರಿಸಲಾಗಿರುವ ಈ ಸಾಯಿ ಮಂದಿರಕ್ಕೆ ಪ್ರತಿಯೊಬ್ಬ ಸಾಯಿ ಭಕ್ತರೂ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ಈ ಸಾಯಿ ಭಕ್ತನ ಮನದಾಳದ ಬಯಕೆ.
ದೇವಾಲಯದ ಸಂಪರ್ಕದ ವಿವರ ಈ ಕೆಳಕಂಡಂತೆ ಇದೆ:
ಶ್ರೀ ಸಾಯಿಬಾಬಾರವರ ದಂತವನ್ನು ಪವಿತ್ರ ಪಾದುಕೆಗಳ ಕೆಳಗಡೆ ಇರಿಸಲಾಗಿರುವ ಈ ಸಾಯಿ ಮಂದಿರಕ್ಕೆ ಪ್ರತಿಯೊಬ್ಬ ಸಾಯಿ ಭಕ್ತರೂ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ಈ ಸಾಯಿ ಭಕ್ತನ ಮನದಾಳದ ಬಯಕೆ.
ದೇವಾಲಯದ ಸಂಪರ್ಕದ ವಿವರ ಈ ಕೆಳಕಂಡಂತೆ ಇದೆ:
ಶ್ರೀ ಸಾಯಿ ದಾಸ ಮಂಡಳ,
83/84, ಶಿವಾಜಿನಗರ, ರಾಸನೆ ಚಾವಲ್,
ಜೂನ ತೋಪಖಾನ,
ಪುಣೆ-411 004, ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿ: ಡಾ.ಪ್ರಕಾಶ್ ರಾಸನೆ - ಅಧ್ಯಕ್ಷರು ದೂರವಾಣಿ ಸಂಖ್ಯೆಗಳು : +91-020-2551 0790/2445 5399/2433 5745/2567 6155 /+91 98906 65626
(ಆಧಾರ: ಶ್ರೀ. ಎಸ್. ಎಂ. ಗರ್ಜೆಯವರು ಮರಾಠಿಯಲ್ಲಿ ಬರೆದು ಶ್ರೀ ಸಾಯಿಲೀಲಾ ಮಾಸಪತ್ರಿಕೆ ಜನವರಿ 1976 ರಲ್ಲಿ ಪ್ರಕಟವಾದ ಲೇಖನ)
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment