Saturday, February 8, 2014

ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನ 12ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ - ಕೃಪೆ: ಸಾಯಿ ಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನಿಂದ ಈ ವರ್ಷ ಹೊರ ಹೋಗುತ್ತಿರುವ 12ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಇದೇ  ತಿಂಗಳ 7ನೇ ಫೆಬ್ರವರಿ 2014, ಶುಕ್ರವಾರ ದಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶುಭ ಕೋರಲಾಯಿತು. ಮಹಾರಾಷ್ಟ್ರ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಮಂಡಳಿ, ಪುಣೆಯ ವತಿಯಿಂದ 2014ನೇ  ಇಸವಿಯಲ್ಲಿ ನಡೆಯುವ ಈ  ವಾರ್ಷಿಕ ಪರೀಕ್ಷೆಯನ್ನು ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಸೇರಿದ ಒಟ್ಟು 506 ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿದ್ದಾರೆ. ಪ್ರಖ್ಯಾತ ಮರಾಠಿ ಚಲನಚಿತ್ರ ತಾರೆ ಅಮೃತ ಗುಘೆ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವರಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

 
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚಲನಚಿತ್ರ ತಾರೆ ಅಮೃತ ಗುಘೆಯವರು "ಶ್ರೀ ಸಾಯಿಬಾಬಾರವರ ನೆಲದಲ್ಲಿ ಶಿಕ್ಷಣ ಪಡೆಯುತ್ತಿರುವುದು ನಿಮ್ಮೆಲ್ಲರ ಅದೃಷ್ಟವೆಂದೇ ಹೇಳಬೇಕು. ಅಂತಹ ಪುಣ್ಯ ಭೂಮಿಗೆ ಬಂದು ನಿಮಗೆ ಬಹುಮಾನವನ್ನು ನೀಡುತ್ತಿರುವುದು ನನ್ನ ಅದೃಷ್ಟವೆಂದು ತಿಳಿದಿದ್ದೇನೆ" ಎಂದು ನುಡಿದರು. ಅಷ್ಟೇ ಅಲ್ಲದೆ ಅವರು ಇನ್ನೂ ಹಲವಾರು ಹಿತವಚನಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಚಲನಚಿತ್ರ  ತಾರೆಯನ್ನು ಹತ್ತಿರದಿಂದ  ನೋಡಿ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳು  ಅತ್ಯಂತ ಸಂತೋಷಭರಿತರಾದರು. 


 ಕಾರ್ಯಕ್ರಮದ ಪ್ರಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳು ಮಾತನಾಡಿ ಕಾಲೇಜಿನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಷ್ಟೇ ಅಲ್ಲದೆ ಪಾಠ ಹೇಳಿಕೊಟ್ಟ ಗುರುಗಳನ್ನು ಅಭಿನಂದಿಸುವುದರ ಮುಖಾಂತರ ತಮ್ಮ ಕೃತಜ್ಞತೆಯನ್ನು ತಿಳಿಸುವುದನ್ನು ಮರೆಯಲಿಲ್ಲ. ಅನೇಕ ಪ್ರಾಧ್ಯಾಪಕರು ಕೂಡ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಹಾಗೂ ಅವರ ಭವಿಷ್ಯದ ಬಗ್ಗೆ ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ಸಾಯಿಬಾಬಾ ಮಹಾಪ್ರಸಾದಾಲಯದಲ್ಲಿ ವಿಶೇಷ ಔತಣ ಕೂಟವನ್ನು ಏರ್ಪಡಿಸಲಾಗಿತ್ತು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀಮತಿ.ವಂದನಾ ದೇಶಮುಖ್, ಶ್ರೀಮತಿ.ನೇಹಾ ಚಲ್ಕೆ, ಶ್ರೀಮತಿ.ಪಲ್ಲವಿ ಜಗ್ತಪ್ ರವರುಗಳು ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವರಾಜ್ ರವರು ವಂದನಾರ್ಪಣೆಯನ್ನು ಮಾಡಿದರು.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment