Friday, February 28, 2014

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಿರಡಿಯ ಶ್ರೀ ಸಾಯಿನಾಥ ಆಸ್ಪತ್ರೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಗೆ 14ನೇ ಮೇ 2014 ರಂದು 50 ವರ್ಷಗಳು ತುಂಬಲಿದ್ದು ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು  ಎಲ್ಲ ಸಿದ್ಧತೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು.

ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ತಮ್ಮ ಬಳಿಗೆ ಬರುತ್ತಿದ್ದ ಹಲವಾರು ರೋಗಿಗಳ ರೋಗವನ್ನು ಪವಿತ್ರ ಉಧಿಯನ್ನು ನೀಡುವ ಮುಖಾಂತರ ಗುಣಪಡಿಸುತ್ತಿದ್ದರೆಂದು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ ನಾವುಗಳೆಲ್ಲಾ ಓದಿದ್ದೇವೆ. ಶ್ರೀ ಸಾಯಿಬಾಬಾರವರು ಪ್ರಾರಂಭಿಸಿದ ಈ ಮಹೋನ್ನತ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 1964ನೇ ಇಸವಿಯಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯನ್ನು ಪ್ರಾರಂಭಿಸಿದ್ದಷ್ಟೇ ಅಲ್ಲದೇ ಬಡ ರೋಗಿಗಳ ಸೇವೇಯನ್ನು ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿದೆ. ಪ್ರತಿನಿತ್ಯ ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಬಡ ರೋಗಿಗಳು ಈ ಆಸ್ಪತ್ರೆಗೆ ಬಂದು ವಿವಿಧ ಖಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದಾರೆ. ಈ ಆಸ್ಪತ್ರೆಗೆ 14ನೇ ಮೇ 2014 ರಂದು 50 ವರ್ಷಗಳು  ತುಂಬಲಿದೆ. ಆದ ಕಾರಣ, ಶಿರಡಿ ಸಾಯಿಬಾಬಾ ಸಂಸ್ಥಾನವು ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 


ಆದುದರಿಂದ,  ಎಲ್ಲಾ ಹಳೆಯ ಉದ್ಯೋಗಿಗಳು, ಸಾರ್ವಜನಿಕರು ಹಾಗೂ ಸಾಯಿಭಕ್ತರ ಬಳಿ ಶ್ರೀ ಸಾಯಿನಾಥ ಆಸ್ಪತ್ರೆಗೆ ಸಂಬಂಧಿಸಿದ ಯಾವುದೇ ಪತ್ರಿಕಾ ಪ್ರಕಟಣೆಗಳು, ಭಾವಚಿತ್ರಗಳು ಇದ್ದಲ್ಲಿ ಅದನ್ನು 14ನೇ ಏಪ್ರಿಲ್ 2014 ರ ಒಳಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ತಲುಪಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ. ಅಲ್ಲದೇ ಮಾಹಿತಿಯನ್ನು  ms_sainath@yahoo.com ಗೆ ಮಿಂಚಂಚೆಯ ಮುಖಾಂತರವಾಗಿ ಕೂಡ ಕಳುಹಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 02423-258 533 ಅನ್ನು ಸಂಪರ್ಕಿಸಬೇಕೆಂದು ಶ್ರೀ ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Wednesday, February 26, 2014

ಕೇಂದ್ರ ಸಾರಿಗೆ ಖಾತೆ ರಾಜ್ಯ ಸಚಿವ ಶ್ರೀ. ಸರ್ವೇ ಸತ್ಯನಾರಾಯಣ ಶಿರಡಿ ಭೇಟಿ – ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ಸಾರಿಗೆ ಖಾತೆ ರಾಜ್ಯ ಸಚಿವರಾದ ಶ್ರೀ. ಸರ್ವೇ ಸತ್ಯನಾರಾಯಣರವರು ಇದೇ ತಿಂಗಳ 26ನೇ ಫೆಬ್ರವರಿ 2014, ಬುಧವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ ಮತ್ತು ಸಂಸತ್ ಸದಸ್ಯರಾದ ಶ್ರೀ.ಬಾವ್ ಸಾಹೇಬ್ ವಾಕ್ಚುರೆಯವರುಗಳು ಕೂಡ ಉಪಸ್ಥಿತರಿದ್ದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, February 25, 2014

ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ


ಮುಂಬೈನ ಸಾಯಿಭಕ್ತರಾದ ಶ್ರೀ.ಪ್ರಕಾಶ್ ಗಂಗವಾನಿಯವರ ಸಹಯೋಗದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿನಾಥ ಆಸ್ಪತ್ರೆಯು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 343 ಕಣ್ಣಿನ ರೋಗಿಗಳಿಗೆ ಉಚಿತವಾಗಿ ಕನ್ನಡಕವನ್ನು ವಿತರಣೆ ಮಾಡಲಾಯಿತು ಎಂದು ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

16ನೇ ಫೆಬ್ರವರಿ 2014, ಭಾನುವಾರ ದಿಂದ 18ನೇ ಫೆಬ್ರವರಿ 2014, ಮಂಗಳವಾರ ದವರೆಗೆ ಶ್ರೀ ಸಾಯಿನಾಥ ಅಸ್ಪತ್ರೆಯಲ್ಲಿ ಈ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಉಚಿತ ಕನ್ನಡಕಗಳ ವಿತರಣೆ ಹಾಗೂ ಉಚಿತ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು. 


ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಒಟ್ಟು 450 ಕಣ್ಣಿನ ರೋಗಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ನೇತ್ರ ತಪಾಸಣೆಯ ನಂತರ 25 ರೋಗಿಗಳಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು ಹಾಗೂ 343 ಕಣ್ಣಿನ ರೋಗಿಗಳಿಗೆ ಮುಂಬೈನ ಸಾಯಿಭಕ್ತರಾದ ಶ್ರೀ.ಪ್ರಕಾಶ್ ಗಂಗವಾನಿಯವರು ನೀಡಿದ ಉದಾರವಾದ ದೇಣಿಗೆಯ ಸಹಾಯದಿಂದ ಉಚಿತವಾಗಿ ಕನ್ನಡಕವನ್ನು ವಿತರಣೆ ಮಾಡಲಾಯಿತು. 


ಈ ಶಿಬಿರವನ್ನು ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಅಪ್ಪಾಸಾಹೇಬ್ ಶಿಂಧೆ, ವೈದ್ಯಕೀಯ ಅಧೀಕ್ಷಕರಾದ ಡಾ.ಕೌಶಿಕ್ ಮಕ್ವಾನ, ವೈದ್ಯಕೀಯ ನಿರ್ದೇಶಕರಾದ ಶ್ರೀ.ಸಂಜಯ್ ಪತಾರೆ, ನೇತ್ರ ತಜ್ಞ ಡಾ.ಸುನೀಲ್ ಸೊಂಟಕ್ಕೆ, ಡಾ.ಎಸ್.ಮನೀಷಾ ಅಗರವಾಲ್ ಮತ್ತು ಇತರ ಆಸ್ಪತ್ರೆಯ ನೌಕರರ ಸಹಾಯದಿಂದ ಬಹಳ ಉತ್ತಮವಾಗಿ ಆಯೋಜಿಸಲಾಗಿತ್ತು ಹಾಗೂ ಅತ್ಯಂತ ಯಶಸ್ವಿಯಾಯಿತು.



ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Friday, February 21, 2014

ಮಹಾರಾಷ್ಟ್ರ ನಿರ್ಮಾಣ ಸೇನಾದ ಅಧ್ಯಕ್ಷ ಶ್ರೀ. ರಾಜ್ ಠಾಕ್ರೆ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ನಿರ್ಮಾಣ ಸೇನಾದ ಅಧ್ಯಕ್ಷ ಶ್ರೀ. ರಾಜ್ ಠಾಕ್ರೆಯವರು ಇದೇ ತಿಂಗಳ ಶಿರಡಿ ಭೇಟಿ 21ನೇ  ಫೆಬ್ರವರಿ 2014, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.  


ಕನ್ನಡ ಅನುವಾದ: ಶ್ರೀಕಂಠ ಶರ್ಮ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ಶಿರಡಿ ಭೇಟಿ -ಕೃಪೆ: ಸಾಯಿಅಮೃತಧಾರಾ.ಕಾಂ



ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ  ಶ್ರೀ.ಅಶೋಕ್ ಚವಾಣ್ ರವರು ಇದೇ ತಿಂಗಳ ಶಿರಡಿ ಭೇಟಿ 21ನೇ  ಫೆಬ್ರವರಿ 2014, ಶುಕ್ರವಾರ ದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.  

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, February 13, 2014

ಸಾಯಿ ಮಹಾಭಕ್ತೆ ಶ್ರೀಮತಿ ಚಂದ್ರಾಬಾಯಿ ಬೋರ್ಕರ್ ರವರ ಸಾಯಿಬಾಬಾ ಮಂದಿರ - ಶ್ರೀ ರಾಮ್ ಸಾಯಿ ನಿವಾಸ, ತಿಲಕ್ ಮಂದಿರ ರಸ್ತೆ, ಅಂಚೆ ಕಚೇರಿ ಹತ್ತಿರ, ವಿಲೇ ಪಾರ್ಲೆ, ಮುಂಬೈ- 400 057, ಮಹಾರಾಷ್ಟ್ರ, ಭಾರತ


ಸಾಯಿ ಭಕ್ತರು ಮುಂಬೈನ ಹಳೆಯ ವಸಾಹತುಗಳಾದ ಬಾಂದ್ರಾ ದಿಂದ ವಿಲೇ ಪಾರ್ಲೆಯವರೆಗೆ ಹುಡುಕಿಕೊಂಡು ಹೋದರೆ ದಾರಿಯಲ್ಲಿ ಹಲವಾರು ಸುಪ್ರಸಿದ್ಧ ಸಾಯಿ ಮಹಾಭಕ್ತರ ಮನೆಗಳು ಸಿಗುತ್ತವೆ. ಶ್ರೀ ಸಾಯಿ ಸಚ್ಚರಿತ್ರೆಯ ಲೇಖಕರಾದ ಶ್ರೀ.ಗೋವಿಂದ ರಘುನಾಥ ದಾಭೋಲ್ಕರ್ ಆಲಿಯಾಸ್ ಹೇಮಾಡಪಂತರು ಬಾಂದ್ರಾದ ನಿವಾಸಿಯಾಗಿದ್ದರು. ವಕೀಲರಾದ ಶ್ರೀ ಹರಿ ಸೀತಾರಾಮ ದೀಕ್ಷಿತ್ ಆಲಿಯಾಸ್ ಕಾಕಾಸಾಹೇಬ್ ದೀಕ್ಷಿತ್ ರವರು ವಿಲೇ ಪಾರ್ಲೆಯ ನಿವಾಸಿಯಾಗಿದ್ದರು ಸಾಯಿ ಸಚ್ಚರಿತ್ರೆ, 20ನೇ  ಅಧ್ಯಾಯ, ಪುಟ ಸಂಖ್ಯೆ 106 ರಿಂದ 110 (7ನೇ  ಆವೃತ್ತಿ, 1974) ಪಾರಾಯಣ ಮಾಡಿದರೆ ಹೇಗೆ ಸಾಯಿಬಾಬಾರವರು ದಾಸಗಣುರವರ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿಲೇ ಪಾರ್ಲೆಯಲ್ಲಿದ್ದ  ಶ್ರೀ ಕಾಕಾ ಸಾಹೇಬ್ ದೀಕ್ಷಿತ್ ರವರ ಮನೆಯ ಕೆಲಸದವಳ ಬಳಿಗೆ ಕಳುಹಿಸಿದರು ಎಂಬ ವಿಷಯ ತಿಳಿಯುತ್ತದೆ.

1933ನೇ ಇಸವಿಯಲ್ಲಿ "ಶ್ರೀ ಸಾಯಿಬಾಬಾ ಆಫ್ ಶಿರಡಿ" ಎಂಬ ಆಂಗ್ಲ ಪುಸ್ತಕವನ್ನು ಬರೆದ ರಾವ್ ಬಹದ್ದೂರ್ ಎಂ.ಡಬ್ಲ್ಯೂ. ಪ್ರಧಾನ್ ರವರು ಸಂತಾಕ್ರೂಜ್ ನಲ್ಲಿ ವಾಸಿಸುತ್ತಿದ್ದರು. ಅದೇ ರೀತಿ ಶ್ರೀ ರಘುನಾಥ್ ರಾವ್ ತೆಂಡೂಲ್ಕರ್ ಮತ್ತು ಅವರ ಧರ್ಮಪತ್ನಿ ಸಾವಿತ್ರಿಬಾಯಿ, ಶ್ರೀ ರಾಮಚಂದ್ರ ಅತ್ಮಾರಾಂ ಆಲಿಯಾಸ್ ಬಾಬಾಸಾಹೇಬ್ ತರ್ಕಡ್ , ಶ್ರೀ.ಬಾಳಾರಾಮ್ ಮಾನಕರ್, ಶ್ರೀ ಬಾಳಾರಾಮ್ ಧುರಂಧರ್ ಹಾಗೂ ಶ್ರೀ ಸಾಯಿಬಾಬಾರವರ ದ್ವಾರಕಾಮಾಯಿ ಚಿತ್ರವನ್ನು ರಚಿಸಿದ ಶ್ರೀ.ಶ್ಯಾಮರಾವ್ ಜಯಕರ್ ರವರುಗಳು ಇದೇ ಸ್ಥಳದಲ್ಲಿ ವಾಸಿಸುತ್ತಿದ್ದರು. ಈ ಎಲ್ಲಾ ಮಹಾಭಕ್ತರ ಮನೆಗಳೂ ಇಲ್ಲಿರುವುದರಿಂದ ಈ ಸ್ಥಳವು ಪವಿತ್ರತೆಯನ್ನು ಪಡೆದಿದೆ ಎಂದೇ ಹೇಳಬಹುದು.

ವಿಲೇ ಪಾರ್ಲೆ ಪೂರ್ವದ ತಿಲಕ್ ಮಂದಿರದ ರಸ್ತೆಯಲ್ಲಿ "ಶ್ರೀ ರಾಮ್ ಸಾಯಿ ನಿವಾಸ" ಎಂಬ ಕಟ್ಟಡವಿದೆ. ನೀವು ಈ ಕಟ್ಟಡದ ಕಾಂಪೌಂಡ್ ಒಳಗೆ ಕಾಲಿಟ್ಟ ಕೂಡಲೇ ಕುಳಿತ ಭಂಗಿಯಲ್ಲಿ ಪ್ರತಿಷ್ಟಾಪಿಸಲಾಗಿರುವ ಸಾಯಿಬಾಬಾರವರ ಸುಂದರ ವಿಗ್ರಹವು ನಿಮ್ಮನ್ನು ಸ್ವಾಗತಿಸುತ್ತದೆ. ಈ ವಿಗ್ರಹವನ್ನು ಖ್ಯಾತ ಶಿಲ್ಪಿ ಶ್ರೀ ವಸಂತ್ ಗೋವೇಕರ್ ರವರು ಕೆತ್ತಿದ್ದಾರೆ. ಈ ವಿಗ್ರಹವನ್ನು ಕಟ್ಟಡದ ಮುಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿನ ನಾಲ್ಕೂವರೆ ಅಡಿ ಎತ್ತರದ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ಈ ಮಂದಿರವು ವಿಲೇ ಪಾರ್ಲೆಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಸಾಯಿ ಭಕ್ತರ ಅಚ್ಚುಮೆಚ್ಚಿನ ತಾಣವಾಗಿದೆ. ಪ್ರತಿದಿನ ಈ ಸ್ಥಳಕ್ಕೆ ನೂರಾರು ಸಾಯಿಭಕ್ತರು ಬಂದು ದರ್ಶನ ಪಡೆದು ಹೋಗುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಸಾಯಿಬಾಬಾ ಮಂದಿರಗಳ ಹುಟ್ಟಿನ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹೇಗೆ ಸಾಯಿಬಾಬಾರವರು ತಮ್ಮದೇ ಆದ ರೀತಿಯಲ್ಲಿ ಭಕ್ತರಲ್ಲಿ ಸ್ಫೂರ್ತಿಯನ್ನು ತುಂಬಿ ಆಯಾ ಸ್ಥಳಗಳಲ್ಲಿ ಭಕ್ತಿಯನ್ನು ಪುನರುತ್ಥಾನ ಮಾಡಲು ದೇವಾಲಯಗಳ ನಿರ್ಮಾಣಕ್ಕೆ ಕಾರಣೀಭೂತರಾದರು ಎಂಬ ವಿಷಯ ಮನದಟ್ಟಾಗುತ್ತದೆ. ಈ ದೇವಾಲಯದ ಇತಿಹಾಸವೂ ಕೂಡ ಅದೇ ರೀತಿಯದ್ದಾಗಿದೆ. ಶ್ರೀಮತಿ ಚಂದ್ರಾಬಾಯಿ ಬೋರ್ಕರ್ ರವರು ಶ್ರೀ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿದ್ದರು. ಇವರು ಆಗಾಗ್ಗೆ ಶಿರಡಿಗೆ ಹೋಗಿ ಅಲ್ಲಿ ಹೆಚ್ಚಿನ ಸಮಯವನ್ನು ಸಾಯಿ ಸನ್ನಿಧಿಯಲ್ಲಿ ಕಳೆಯುತ್ತಿದ್ದರು. ವಿಲೇ ಪಾರ್ಲೆಯ ಅನೇಕ ಸಾಯಿ ಭಕ್ತರು ಇವರ ಜೊತೆಯಲ್ಲಿ ಶಿರಡಿಗೆ ಆಗಾಗ್ಗೆ ಹೋಗಿ ಸಾಯಿಬಾಬಾರವರ ದರ್ಶನ, ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದರು. ಮತ್ತೊಬ್ಬ ಸಾಯಿ ಮಹಾಭಕ್ತರಾದ ಶ್ರೀ ನಾನಾ ಸಾಹೇಬ್ ಚಾಂದೋರ್ಕರ್ ರವರ ಧರ್ಮಪತ್ನಿ ಶ್ರೀಮತಿ.ಶಾರದಾಬಾಯಿ ಹಾಗೂ ಚಂದ್ರಾಬಾಯಿ ಬೋರ್ಕರ್ ಒಳ್ಳೆಯ ಸ್ನೇಹಿತೆಯರಾಗಿದ್ದರು. ಇವರಿಬ್ಬರು ಅನೇಕ ಬಾರಿ ಶಿರಡಿಗೆ ಹೋಗಿ ಸಾಯಿಬಾಬಾರವರ ದರ್ಶನ ಮಾಡಿ ಬಂದಿದ್ದೂ ಉಂಟು. ಸಾಯಿಬಾಬಾರವರ ಅಚ್ಚುಮೆಚ್ಚಿನ ಭಕ್ತರಾಗಿದ್ದ ತಾತ್ಯಾ ಕೋತೆ ಪಾಟೀಲ್ ರವರನ್ನು ಚಂದ್ರಬಾಯಿ ಬೋರ್ಕರ್ ರವರು ತಮ್ಮ ಒಡಹುಟ್ಟಿದ ಸಹೋದರನಂತೆ ಕಾಣುತ್ತಿದ್ದರು. ಸಾಯಿಬಾಬಾರವರ ಆಶೀರ್ವಾದದ ಫಲದಿಂದ ತಾತ್ಯಾ ಹಾಗೂ ಚಂದ್ರಬಾಯಿ ಇಬ್ಬರೂ ಒಂದೇ ವರ್ಷದಲ್ಲಿ ಪುತ್ರರನ್ನು ಪಡೆದದ್ದು ಒಂದು ಸೋಜಿಗವೇ ಸರಿ. ಆಗ ಚಂದ್ರಾಬಾಯಿಯವರಿಗೆ ಐವತ್ತು ವರ್ಷಗಳಾಗಿತ್ತು. ಚಂದ್ರಬಾಯಿಯವರ ಅನನ್ಯ ಸಾಯಿಭಕ್ತಿ ಅವರನ್ನು ಹಲವಾರು ಬಾರಿ ಶಿರಡಿಗೆ ಕರೆದುಕೊಂಡು ಹೋಗಿದ್ದಷ್ಟೇ ಅಲ್ಲದೆ, ಸಾಯಿಬಾಬಾರವರ ದೇಹಾವಸನದ ಕೊನೆಯ ಕ್ಷಣಗಳಲ್ಲಿ ಅವರು ಸಾಯಿಯವರ ಬಳಿಯೇ ಇರುವಂತೆ ಮಾಡಿತು. ಸಾಯಿಬಾಬಾರವರ ಮಹಾಸಮಾಧಿಯ ಸಮಯದಲ್ಲಿ ಅವರ ಬಾಯಿಯಲ್ಲಿ ತುಳಸಿಯನ್ನು ಶ್ರೀಮತಿ.ಚಂದ್ರಾಬಾಯಿ ಬೋರ್ಕರ್ ರವರು ಅರ್ಪಣೆ ಮಾಡಿದ್ದರು.



ತಮಗೆ ಸಾಯಿಬಾಬಾರವರೊಂದಿಗೆ ಇದ್ದ ಹಲವಾರು ವರ್ಷಗಳ ಬಾಂಧವ್ಯದ ಕುರುಹಾಗಿ ಮುಂಬೈನ ವಿಲೇ ಪಾರ್ಲೆಯಲ್ಲಿರುವ ತಮ್ಮ ಸ್ಥಳದಲ್ಲಿ ಸಾಯಿಬಾಬಾರವರ ಮಂದಿರವನ್ನು ನಿರ್ಮಾಣ ಮಾಡಬೇಕೆಂದು ಶ್ರೀಮತಿ.ಚಂದ್ರಾಬಾಯಿಯವರು ಹಲವಾರು ವರ್ಷಗಳು ಪ್ರಯತ್ನಪಟ್ಟರೂ ಸಹ ಅವರ ಆಶೆ 1958 ಇಸವಿಯವರೆಗೂ ಕೈಗೂಡಿರಲಿಲ್ಲ. ಆ ವರ್ಷದ ಶ್ರೀರಾಮನವಮಿಯಂದು ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಪಂಡಿತ್ ಪದ್ಮನಾಭಶಾಸ್ತ್ರೀ ಪಾಯಲೆಯವರು ತಮ್ಮ ಅಮೃತ ಹಸ್ತದಿಂದ ಚಂದ್ರಾಬಾಯಿ ಬೋರ್ಕರ್ ರವರ ಕಟ್ಟಡದ ಕಾಂಪೌಂಡ್ ನ ಒಳಗಡೆ ಪ್ರತಿಷ್ಟಾಪಿಸಿದರು. ಹಿಂದಿನ ರಾತ್ರಿಯಷ್ಟೇ ಚಂದ್ರಾಬಾಯಿ ಹಾಗೂ ಅವರ ಸೊಸೆ ಶ್ರೀಮತಿ.ಮಂಗಳಾಬಾಯಿಯವರಿಗೆ ವಿಗ್ರಹದ ಪ್ರತಿಷ್ಟಾಪನೆಯ ಬಗ್ಗೆ ಕನಸು ಬಿದ್ದಿತ್ತು. ಈ ಘಟನೆ ಶ್ರೀಮತಿ.ಮಂಗಳಾಬಾಯಿಯವರ ಜೀವನದಲ್ಲಿ ಒಂದು ಮಹತ್ವದ ಬದಲಾವಣೆಯನ್ನೇ ತಂದಿತು. ಆ ದಿನದಿಂದ ಶ್ರೀಮತಿ.ಮಂಗಳಾಬಾಯಿಯವರು ಪ್ರಾರ್ಥನಾ ಸಮಾಜವನ್ನು ಬಿಟ್ಟು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆಯಾಗಿ ಪರಿವರ್ತನೆಗೊಂಡರು. ತಮ್ಮ ಮನದ ಆಸೆಯಂತೆ ತಮ್ಮ ಸ್ವಗೃಹದಲ್ಲಿ ಸಾಯಿಬಾಬಾರವರ ವಿಗ್ರಹದ ಪ್ರತಿಷ್ಟಾಪನೆಯನ್ನು ಮಾಡಿದ ಶ್ರೀಮತಿ.ಚಂದ್ರಾಬಾಯಿಯವರು ಸರಿಯಾಗಿ ಎಂಟು ತಿಂಗಳ ನಂತರ ಅಂದರೆ ನವೆಂಬರ್ 1958 ರಲ್ಲಿ ಸಾಯಿಪಾದವನ್ನು ಸೇರಿದರು.



ಶ್ರೀ ಸಾಯಿಬಾಬಾರವರ ಪೂಜೆ ಹಾಗೂ ಆರತಿಯನ್ನು ಮಾಡುವ ಸಲುವಾಗಿ ಒಬ್ಬ ಪುರೋಹಿತರನ್ನು ಈ ಮಂದಿರದಲ್ಲಿ ನೇಮಿಸಲಾಗಿದೆ. ಶಿರಡಿಯಲ್ಲಿ ಆಚರಿಸುವ ಎಲ್ಲಾ ಪ್ರಮುಖ ಉತ್ಸವಗಳನ್ನು ಈ ಮಂದಿರದಲ್ಲೂ ಹಮ್ಮಿಕೊಳ್ಳಲಾಗುತ್ತದೆ. ಪ್ರಖ್ಯಾತ ಕೀರ್ತನಕಾರರಾದ ಶ್ರೀಮತಿ. ಭಾನುತಾಯಿ ದುಖಾಂಡೆ ಹಲವಾರು ವರ್ಷಗಳ ಕಾಲ ಈ ಮಂದಿರದಲ್ಲಿ ಕೀರ್ತನೆ ಹಾಗೂ ಹರಿಕಥೆಯನ್ನು ಮಾಡುತ್ತಿದ್ದರು. ಈ ಕಾರಣದಿಂದ ಹೆಚ್ಚು ಹೆಚ್ಚು ಜನರು ಸಾಯಿ ಭಕ್ತರಾಗಿ ಪರಿವರ್ತನೆಯಾಗುವಲ್ಲಿ ಸಹಾಯಕವಾಯಿತು.

ಪ್ರಸ್ತುತ ಶ್ರೀಮತಿ.ಮಂಗಳ ಬೋರ್ಕರ್ ರವರ ಸೊಸೆಯಾದ ಶ್ರೀಮತಿ.ಉಜ್ವಲ ಬೋರ್ಕರ್ ರವರು ಈ ಮಂದಿರದ ಉಸ್ತುವಾರಿಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.   ಪ್ರತಿಯೊಬ್ಬ ಸಾಯಿಭಕ್ತರೂ ಒಮ್ಮೆಯಾದರೂ ಈ ಸಾಯಿ ಮಂದಿರಕ್ಕೆ ಭೇಟಿ ಕೊಟ್ಟು ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ನಮ್ಮ ಹೆಬ್ಬಯಕೆ.

ಈ ಸಾಯಿ ಮಂದಿರದ ವಿಳಾಸ ಈ ಕೆಳಕಂಡಂತೆ ಇದೆ:

ಶ್ರೀ ರಾಮ್ ಸಾಯಿ  ನಿವಾಸ, 
ತಿಲಕ್ ಮಂದಿರ ರಸ್ತೆ, ಅಂಚೆ ಕಚೇರಿ ಹತ್ತಿರ, 
ವಿಲೇ ಪಾರ್ಲೆ, 
ಮುಂಬೈ- 400 057, 
ಮಹಾರಾಷ್ಟ್ರ, ಭಾರತ

(ಆಧಾರ: ಶ್ರೀ ಸಾಯಿಲೀಲಾ ಮಾಸಪತ್ರಿಕೆ (ಮರಾಠಿ) ನವೆಂಬರ್ 1975 ಸಂಚಿಕೆಯಲ್ಲಿ ಶ್ರೀ.ಚಂದ್ರಕಾಂತ್ ಡಿ. ಸಾಮಂತ್ ರವರು ಬರೆದ ಲೇಖನ)

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, February 12, 2014

ಭಾರತ ಸೇನಾ ದಂಡನಾಯಕ ಜನರಲ್ ಶ್ರೀ.ಭಿಕ್ರಂ ಸಿಂಗ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ. ಕಾಂ

ಭಾರತ ಸೇನಾ ದಂಡನಾಯಕರಾದ ಜನರಲ್ ಶ್ರೀ.ಭಿಕ್ರಂ ಸಿಂಗ್  ರವರು ಇದೇ ತಿಂಗಳ 12ನೇ ಫೆಬ್ರವರಿ 2014, ಬುಧವಾರ ದಂದು ತಮ್ಮ ಧರ್ಮ ಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ


Monday, February 10, 2014

ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮುಂಬೈನ ಸಾಯಿಭಕ್ತರಾದ ಶ್ರೀ.ಪ್ರಕಾಶ್ ಗಂಗವಾನಿಯವರು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ನೀಡಿರುವ ಉದಾರವಾದ ಕಾಣಿಕೆಯ ಸಹಾಯದಿಂದ ಶ್ರೀ ಸಾಯಿನಾಥ ಆಸ್ಪತ್ರೆಯು ಇದೇ ತಿಂಗಳ 16ನೇ ಫೆಬ್ರವರಿ 2014, ಭಾನುವಾರ ದಂದು ಒಂದು ದಿನದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇತ್ರ ತಜ್ಞರನ್ನು ಕಾಣಬಯಸುವ ರೋಗಿಗಳು 16ನೇ ಫೆಬ್ರವರಿ 2014, ಭಾನುವಾರ ದಂದು ಶ್ರೀ ಸಾಯಿನಾಥ ಅಸ್ಪತ್ರೆಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ ಆಗಮಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆಯ ನಂತರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕಾಗಿರುತ್ತದೆ. 17ನೇ ಫೆಬ್ರವರಿ  2014 ರಿಂದ 19ನೇ ಫೆಬ್ರವರಿ 2014 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಹಲವಾರು ನುರಿತ ನೇತ್ರ ತಜ್ಞರು ಸುಮಾರು 100 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಿದ್ದಾರೆ. ಅಲ್ಲದೇ, ಕಣ್ಣಿನ ದೃಷ್ಟಿ ಮಂದವಾಗಿರುವವರಿಗೆ ಉಚಿತ ಕನ್ನಡಕವನ್ನು ಸಹ ವಿತರಿಸಲಾಗುತ್ತದೆ ಹಾಗೂ ಇದರ ಸಂಪೂರ್ಣ ವೆಚ್ಚವನ್ನು ಸಹ ಮುಂಬೈನ ಸಾಯಿ ಭಕ್ತರಾದ ಶ್ರೀ. ಪ್ರಕಾಶ್ ಗಂಗವಾನಿಯವರೇ ಭರಿಸಲಿದ್ದಾರೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು. 

ಆದ ಕಾರಣ, ಯಾವುದೇ ರೀತಿಯ ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ದಿನಾಂಕ 16ನೇ ಫೆಬ್ರವರಿ 2014, ಭಾನುವಾರ ದಂದು ಬೆಳಿಗ್ಗೆ 7 ರಿಂದ ಮಧ್ಯಾನ್ಹ 1 ಗಂಟೆಯ ಒಳಗೆ  ಶ್ರೀ ಸಾಯಿನಾಥ ಅಸ್ಪತ್ರೆಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿ ಈ ನೇತ್ರ ತಪಾಸಣಾ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಅಜಯ್ ಮೋರೆಯವರು ಮನವಿ ಮಾಡಿಕೊಂಡಿದ್ದಾರೆ.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Saturday, February 8, 2014

ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನ 12ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ - ಕೃಪೆ: ಸಾಯಿ ಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನಿಂದ ಈ ವರ್ಷ ಹೊರ ಹೋಗುತ್ತಿರುವ 12ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಇದೇ  ತಿಂಗಳ 7ನೇ ಫೆಬ್ರವರಿ 2014, ಶುಕ್ರವಾರ ದಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಶುಭ ಕೋರಲಾಯಿತು. ಮಹಾರಾಷ್ಟ್ರ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಮಂಡಳಿ, ಪುಣೆಯ ವತಿಯಿಂದ 2014ನೇ  ಇಸವಿಯಲ್ಲಿ ನಡೆಯುವ ಈ  ವಾರ್ಷಿಕ ಪರೀಕ್ಷೆಯನ್ನು ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಕ್ಕೆ ಸೇರಿದ ಒಟ್ಟು 506 ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಿದ್ದಾರೆ. ಪ್ರಖ್ಯಾತ ಮರಾಠಿ ಚಲನಚಿತ್ರ ತಾರೆ ಅಮೃತ ಗುಘೆ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವರಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

 
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಚಲನಚಿತ್ರ ತಾರೆ ಅಮೃತ ಗುಘೆಯವರು "ಶ್ರೀ ಸಾಯಿಬಾಬಾರವರ ನೆಲದಲ್ಲಿ ಶಿಕ್ಷಣ ಪಡೆಯುತ್ತಿರುವುದು ನಿಮ್ಮೆಲ್ಲರ ಅದೃಷ್ಟವೆಂದೇ ಹೇಳಬೇಕು. ಅಂತಹ ಪುಣ್ಯ ಭೂಮಿಗೆ ಬಂದು ನಿಮಗೆ ಬಹುಮಾನವನ್ನು ನೀಡುತ್ತಿರುವುದು ನನ್ನ ಅದೃಷ್ಟವೆಂದು ತಿಳಿದಿದ್ದೇನೆ" ಎಂದು ನುಡಿದರು. ಅಷ್ಟೇ ಅಲ್ಲದೆ ಅವರು ಇನ್ನೂ ಹಲವಾರು ಹಿತವಚನಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು. ಚಲನಚಿತ್ರ  ತಾರೆಯನ್ನು ಹತ್ತಿರದಿಂದ  ನೋಡಿ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳು  ಅತ್ಯಂತ ಸಂತೋಷಭರಿತರಾದರು. 


 ಕಾರ್ಯಕ್ರಮದ ಪ್ರಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳು ಮಾತನಾಡಿ ಕಾಲೇಜಿನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಷ್ಟೇ ಅಲ್ಲದೆ ಪಾಠ ಹೇಳಿಕೊಟ್ಟ ಗುರುಗಳನ್ನು ಅಭಿನಂದಿಸುವುದರ ಮುಖಾಂತರ ತಮ್ಮ ಕೃತಜ್ಞತೆಯನ್ನು ತಿಳಿಸುವುದನ್ನು ಮರೆಯಲಿಲ್ಲ. ಅನೇಕ ಪ್ರಾಧ್ಯಾಪಕರು ಕೂಡ ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಹಾಗೂ ಅವರ ಭವಿಷ್ಯದ ಬಗ್ಗೆ ಹಲವಾರು ಉಪಯುಕ್ತ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ಸಾಯಿಬಾಬಾ ಮಹಾಪ್ರಸಾದಾಲಯದಲ್ಲಿ ವಿಶೇಷ ಔತಣ ಕೂಟವನ್ನು ಏರ್ಪಡಿಸಲಾಗಿತ್ತು. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀಮತಿ.ವಂದನಾ ದೇಶಮುಖ್, ಶ್ರೀಮತಿ.ನೇಹಾ ಚಲ್ಕೆ, ಶ್ರೀಮತಿ.ಪಲ್ಲವಿ ಜಗ್ತಪ್ ರವರುಗಳು ವಹಿಸಿಕೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವರಾಜ್ ರವರು ವಂದನಾರ್ಪಣೆಯನ್ನು ಮಾಡಿದರು.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Thursday, February 6, 2014

ಮಾಜಿ ಸೇನಾ ದಂಡನಾಯಕ ಶ್ರೀ.ವಿ.ಕೆ.ಸಿಂಗ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಭಾರತದ ಮಾಜಿ ಸೇನಾ ದಂಡನಾಯಕರಾದ ಶ್ರೀ ವಿ.ಕೆ.ಸಿಂಗ್ ರವರು ತಮ್ಮ ಧರ್ಮಪತ್ನಿಯೊಂದಿಗೆ ಇದೇ ತಿಂಗಳ 6ನೇ  ಫೆಬ್ರವರಿ 2014, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು. 



 ಕನ್ನಡ ಅನುವಾದ: ಶ್ರೀಕಂಠ ಶರ್ಮ

ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ ನ ವತಿಯಿಂದ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಸಂಚ್ಯುರೋ ದ್ವಿಚಕ್ತ್ರ ವಾಹನದ ಕೊಡುಗೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್  ಇದೇ ತಿಂಗಳ 6ನೇ  ಫೆಬ್ರವರಿ 2014, ಗುರುವಾರ ದಂದು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ  55,000/- ರೂಪಾಯಿ (ಐವತ್ತೈದು ಸಾವಿರ ರೂಪಾಯಿಗಳು ಮಾತ್ರ) ಬೆಲೆಬಾಳುವ ಸಂಚ್ಯುರೋ 125 ಸಿಸಿ ದ್ವಿಚಕ್ತ್ರ ವಾಹನವನ್ನು ಕಾಣಿಕೆಯಾಗಿ ನೀಡಿತು. ಆ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ, ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ.ಹೇಮಂತ್ ಜಾಧವ್, ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯ ವಲಯ ವ್ಯವಸ್ಥಾಪಕರಾದ ಶ್ರೀ.ಮಂದಾರ್ ಘಾಡ್ಗೆ, ಸೇವಾ ಮ್ಯಾನೇಜರ್ ಶ್ರೀ. ಮಹಾಜನ್ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ ಡೀಲರ್ ಆದ ಶ್ರೀ.ಅವತಾಡೆ ಅವರುಗಳು ಉಪಸ್ಥಿತರಿದ್ದರು.

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, February 4, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ವಿಐಪಿ ಪಾಸುಗಳ ಬಗ್ಗೆ ಸ್ಪಷ್ಟೀಕರಣ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು  ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರನ್ನು ಹೊರತುಪಡಿಸಿ ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಮಾತ್ರ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸುತ್ತಿದೆ,  ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. 
 
ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯು 18ನೇ ನವೆಂಬರ್ 2013 ರಿಂದ ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಮಾತ್ರ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸುತ್ತಿದೆ. ಆದರೆ, ಟಿವಿ ಮಾಧ್ಯಮಗಳು ಈ ವಿಷಯದ ಬಗ್ಗೆ ಬಿತ್ತರಿಸಿದ ಸುದ್ದಿಯನ್ನು ಅನೇಕ ಸಾಯಿ ಭಕ್ತರು ತಪ್ಪಾಗಿ ಅರ್ಥೈಸಿದ್ದಾರೆ ಹಾಗೂ ಸಾಯಿಬಾಬಾರವರ ದರ್ಶನ ಹಾಗೂ ಆರತಿಯನ್ನು ನೋಡಲು ಎಲ್ಲಾ ಭಕ್ತರೂ ಶುಲ್ಕ ನೀಡಬೇಕಾಗಿರುತ್ತದೆ  ಎಂದು ತಿಳಿದಿದ್ದಾರೆ. ಆದರೆ, ಸರತಿಯಲ್ಲಿ ಬಂದು ದರ್ಶನ ಮಾಡಲು ಆಗದೇ ಶ್ರೀಘ್ರ ದರ್ಶನ ಮಾಡಲು ಬಯಸುವ ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಮಾತ್ರ ಶ್ರೀ ಸಾಯಿಬಾಬಾ ಸಂಸ್ಥಾನವು ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸುತ್ತಿದೆ. ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನವು ಸರತಿಯಲ್ಲಿ ಬಂದು ಶ್ರೀ ಸಾಯಿಬಾಬಾರವರ ದರ್ಶನ ಮಾಡುವ ಎಲ್ಲಾ ಸಾಯಿ ಭಕ್ತರಿಗೂ 15ನೇ ಆಗಸ್ಟ್ 2013 ರಿಂದ ಎರಡು ಲಾಡುಗಳನ್ನು ಒಳಗೊಂಡ ಪ್ರಸಾದದ ಪೊಟ್ಟಣವನ್ನು ಉಚಿತವಾಗಿ ನೀಡುತ್ತಿದೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು. 
 
ಶ್ರೀ ಸಾಯಿಬಾಬಾ ಸಂಸ್ಥಾನವು ವಿಐಪಿ ವರ್ಗೀಕರಣಕ್ಕೆ ಸೇರಿದವರಿಗೆ ಶುಲ್ಕವನ್ನು ವಿಧಿಸುವ ಮೊದಲು ಪ್ರತಿನಿತ್ಯ ಸುಮಾರು 700 ರಿಂದ 800 ವಿಐಪಿಗಳು ಆರತಿ ದರ್ಶನವನ್ನು ಮಾಡುತ್ತಿದ್ದರು. ಸುಮಾರು 70 ರಿಂದ 90 ಪ್ರತಿಶತ ವಿಐಪಿಗಳು ಬೆಳಗಿನ ಕಾಕಡಾ ಆರತಿ ದರ್ಶನವನ್ನು ಮಾಡುತ್ತಿದ್ದರು. ಆದುದರಿಂದ ಕೇವಲ 10 ಪ್ರತಿಶತ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ ಭಕ್ತರು ಮಾತ್ರ ಕಾಕಡಾ ಆರತಿಯ ದರ್ಶನವನ್ನು ಮಾಡಲು ಸಾಧ್ಯವಾಗಿತ್ತು. ಮಾರನೇ ದಿನ ಬೆಳಗಿನ 4 ಘಂಟೆಯ ಕಾಕಡಾ ಆರತಿಗೆ ಹಿಂದಿನ ರಾತ್ರಿ  10.30 ರಿಂದ ನಿದ್ದೆಗೆಟ್ಟು ಸರತಿಯಲ್ಲಿ ನಿಂತಿದ್ದರೂ ಕೂಡ ಸಾಮಾನ್ಯ ಸರತಿಯಲ್ಲಿ ಬರುವ ಭಕ್ತರಿಗೆ ಆರತಿಯ ದರ್ಶನ ಭಾಗ್ಯ ಸಿಗುತ್ತಿರಲಿಲ್ಲ. ಆದರೆ, ಆರತಿಯ ಸಮಯಕ್ಕೆ ಬಂದು ವಿಐಪಿಗಳು ಕಾಕಡಾ ಆರತಿ ದರ್ಶನ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಶ್ರೀ ಸಾಯಿಬಾಬಾ ಸಂಸ್ಥಾನವು ಆರತಿ ಮತ್ತು ದರ್ಶನಕ್ಕೆ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದ ಮೇಲೆ 25 ರಿಂದ 30 ಪ್ರತಿಶತ ವಿಐಪಿಗಳು ಮಾತ್ರ ಆರತಿ ಮತ್ತು ದರ್ಶನ ಮಾಡುತ್ತಿದ್ದು ವಿಐಪಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿದಿದೆ. ಇದರಿಂದ 60 ರಿಂದ 70 ಪ್ರತಿಶತ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ ಭಕ್ತರು ಈಗ  ಕಾಕಡಾ ಆರತಿಯ ದರ್ಶನವನ್ನು ಮಾಡಲು ಸಾಧ್ಯವಾಗಿದೆ ಎಂದು ಶ್ರೀ ಅಜಯ್ ಮೋರೆಯವರು ಸ್ಪಷ್ಟೀಕರಣ ನೀಡಿದರು. . 

ಮರಾಠಿಯಿಂದ ಆಂಗ್ಲ ಭಾಷೆಗೆ ತರ್ಜುಮೆ: ಶ್ರೀ.ರಾಜೇಶ್ ಶೇಲಾತ್ಕರ್, ಮುಂಬೈ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

Monday, February 3, 2014

ಶ್ರೀ ಸಾಯಿಬಾಬಾರವರ ದಂತವನ್ನು ಪವಿತ್ರ ಪಾದುಕೆಗಳ ಕೆಳಗಡೆ ಇರಿಸಲಾಗಿರುವ ಸಾಯಿ ಮಂದಿರ - ಶ್ರೀ ಸಾಯಿ ದಾಸ ಮಂಡಳ, 83/84, ಶಿವಾಜಿನಗರ, ರಾಸನೆ ಚಾವಲ್, ಜೂನ ತೋಪಖಾನ, ಪುಣೆ-411 004, ಮಹಾರಾಷ್ಟ್ರ, ಭಾರತ- ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಪುಣೆ ನಗರದ ಶಿವಾಜಿನಗರದಲ್ಲಿರುವ ಈ ಮಂದಿರವು ಅತ್ಯಂತ ಪುರಾತನ ಮಂದಿರವಾಗಿದ್ದು ಸ್ಥಳೀಯ ಹಾಗೂ ಪ್ರಪಂಚದ ಎಲ್ಲಾ ಭಾಗಗಳಿಂದ ಸಾವಿರಾರು ಸಾಯಿ ಭಕ್ತರು ಈ ಮಂದಿರಕ್ಕೆ ನಿಯಮಿತವಾಗಿ ಬರುವ ಪರಿಪಾಠ ಇಟ್ಟುಕೊಂಡಿದ್ದಾರೆ. ಈ ದೇವಾಲಯದ ಇತಿಹಾಸವು ಅತ್ಯಂತ ವಿಚಿತ್ರವಾಗಿದ್ದು, ಕೇಳಲು ಅತ್ಯಂತ ಕುತೂಹಲವಾಗಿದ್ದು, ಸಾಯಿಭಕ್ತರ ಮೈನವಿರೇಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ದೇವಾಲಯವು ಶಿವಾಜಿನಗರದ ಮುತ್ತ ನದಿಯ ದಡದಲ್ಲಿರುವ  ರಾಸನೆ ಚಾವಲ್ ನಲ್ಲಿ ಇದೆ. ಇತ್ತೀಚೆಗೆ ದೇವಾಲಯದ ಹಿಂಭಾಗದಲ್ಲಿ ಒಂದು ತಡೆಗೋಡೆಯನ್ನು ನಿರ್ಮಿಸಲಾಗಿದ್ದು ಹಿಂದೆ ಮಳೆಗಾಲದಲ್ಲಿ ಆಗುತ್ತಿದ್ದಂತೆ ನದಿಯ ನೀರು ಈಗ ದೇವಾಲಯದ ಒಳಗಡೆ ಬರುವ ಸಾಧ್ಯತೆ ಇರುವುದಿಲ್ಲ. ಶಿವಾಜಿನಗರದ ಬಸ್ ನಿಲ್ದಾಣದಿಂದ ನಿರ್ಮಿಸಲಾಗಿರುವ ಹೊಸ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಮೊದಲು ರಾಸನೆ ಚಾವಲ್ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಬಂದು ಬಲಕ್ಕೆ ನೋಡಿದರೆ ಶ್ರೀ ಶಿರಡಿ ಸಾಯಿಬಾಬಾರವರ ದರ್ಶನ ನಮಗೆ ಆಗುತ್ತದೆ. ಶ್ರೀ ಸಾಯಿಬಾಬಾರವರನ್ನು ನೋಡಿದ ಕೊಡಲೇ ಸಾರ್ಥಕತೆಯ ಮನೋಭಾವನೆ ನಮ್ಮಲ್ಲಿ ಮೂಡುತ್ತದೆ.


ಶ್ರೀ ದಾಮೋದರ ಪಂತ್ ರಾಸನೆ ಒಬ್ಬ ಮಹಾನ್ ಸಾಯಿ ಭಕ್ತರಾಗಿದ್ದು ಶ್ರೀ ಸಾಯಿಬಾಬಾರವರ ಅವತರಣ ಕಾಲದ ಉತ್ತರಾರ್ಧದಲ್ಲಿ ಅವರ ಅನುಯಾಯಿಯಾಗಿದ್ದರು. ಈ ರಾಸನೆ ಚಾವಲ್ ಶ್ರೀ ದಾಮೋದರ ಪಂತ್ ರಾಸನೆಯವರಿಗೆ ಸೇರಿರುತ್ತದೆ. 1945 ನೇ ಇಸವಿಯಲ್ಲಿ ಶ್ರೀ ದಾಮೋದರ ಪಂತ್ ರಾಸನೆಯವರ ಮಗನಾದ ಶ್ರೀ ನಾನಾ ಸಾಹೇಬ್ ರಾಸನೆಯವರು ರಾಸನೆ ಚಾವಲ್ ನಲ್ಲಿದ್ದ ಎರಡು ಕೋಣೆಗಳನ್ನು ಶ್ರೀ ಸಾಯಿಬಾಬಾ ಮಂದಿರವಾಗಿ ಪರಿವರ್ತನೆ ಮಾಡಿ ಅಲ್ಲಿ ಶ್ರೀ ಸಾಯಿಬಾಬಾರವರ ಪೂಜೆಯನ್ನು ಪ್ರಾರಂಭಿಸಿದರು. ಅಂದಿನಿಂದ ಶ್ರೀ ಸಾಯಿಬಾಬಾರವರ ಪೂಜೆ ಈ ಸ್ಥಳದಲ್ಲಿ ಬಹಳ ಚೆನ್ನಾಗಿ ನಡೆಯುತ್ತಿದೆ. ಬೆಳಗಿನ ಹಾಗೂ ಸಂಜೆಯ ಆರತಿಗೆ ಭಕ್ತರು ಇಲ್ಲಿ ಕಿಕ್ಕಿರಿದು ಸೇರುತ್ತಾರೆ. ಪುಣೆಯ ಸೆಷನ್ಸ್ ನ್ಯಾಯಾಧೀಶರಾದ ಶ್ರೀ.ಪಾಟೀಲ್, ಬೆಳಗಾಂ ನ ನ್ಯಾಯಾಧೀಶರಾದ ಶ್ರೀ. ಚೌಗಲೆ, ಶ್ರೀ.ವಿ.ಶಂಕರ ಮೊದಲಿಯಾರ್, ಶ್ರೀ.ಪಿ.ಎಸ್.ರಾವ್, ಶ್ರೀ.ರಂಗನಾಥನ್, ಶ್ರೀ.ಬೇಂದ್ರೆ, ಶ್ರೀ.ಗಾಯಕವಾಡ್, ಶ್ರೀ.ತಾಕವಾನೆ ಗುರೂಜೀ ಈ ಮಂದಿರದ ಪ್ರಸಿದ್ಧ ಸಾಯಿಭಕ್ತರ ಸಾಲಿನಲ್ಲಿ ನಿಲ್ಲುತ್ತಾರೆ. ಖೇಡ್  ಗ್ರಾಮದವರಾದ ಶ್ರೀ.ನಿಕ್ಕಂರವರು ಪೋಲಿಸ್ ಇಲಾಖೆಯಲ್ಲಿ ಜಮಾದಾರರಾಗಿ ಕೆಲಸ ಮಾಡುತ್ತಿದ್ದರು. ಇವರು ಪ್ರಾಮಾಣಿಕ ಸಾಯಿ ಭಕ್ತರಾದ ಕಾರಣ, ಶ್ರೀ.ನಾನಾಸಾಹೇಬ್ ರಾಸನೆಯವರು ಇವರನ್ನು ದೇವಾಲಯದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು. ನಾನಾ ಸಾಹೇಬ್ ರಾಸನೆಯವರ ಆದೇಶದಂತೆ ಶ್ರೀ.ನಿಕ್ಕಂರವರು ಪೋಲಿಸ್ ಇಲಾಖೆಗೆ ರಾಜೀನಾಮೆ ನೀಡಿ ತಮ್ಮ ಇಡೀ ಜೀವನವನ್ನು ಈ ದೇವಾಲಯದ ಸೇವೆಗಾಗಿ ಮೀಸಲಿಟ್ಟರು. ಶ್ರೀ ಸಾಯಿಬಾಬಾರವರ ಕೃಪೆಯಿಂದ ದೊರೆತ ಒಂದು ಪವಿತ್ರ ದಂತವನ್ನು ಇವರು ದೇವಾಲಯಕ್ಕೆ ನೀಡಿದ್ದಾರೆ. ಇವರಿಗೆ ಶ್ರೀ ಸಾಯಿಬಾಬಾರವರ ಪವಿತ್ರ ದಂತವು ಹೇಗೆ ದೊರೆಯಿತು ಎಂಬ ವಿಷಯವು ಬಹಳ ಕುತೂಹಲಕಾರಿಯಾಗಿದ್ದು ಎಲ್ಲಾ ಸಾಯಿಭಕ್ತರೂ ತಿಳಿದುಕೊಳ್ಳಬೇಕಾದ ವಿಷಯವಾಗಿರುತ್ತದೆ. 

ಶಿರಡಿಯ ನಿವಾಸಿಯಾಗಿದ್ದ ಕಾಶೀಭಾಯಿ ಎಂಬ ಹುಡುಗಿಯು ನಿಫಾಢದ ಹುಡುಗನನ್ನು ಮದುವೆಯಾದಳು. ಆದರೆ, ದುರದೃಷ್ಟವಶಾತ್ ಅವಳು ತನ್ನ ಗಂಡನನ್ನು ಮದುವೆಯಾದ ಕೆಲವೇ ವರ್ಷಗಳಲ್ಲಿ ಕಳೆದುಕೊಂಡಳು. ಅವಳ ಗಂಡನು ತೀರಿಕೊಂಡಾಗ ಇವಳು ಗರ್ಭಿಣಿಯಾಗಿದ್ದಳು. ಕಾಲಾನಂತರದಲ್ಲಿ ಅವಳಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದಳು. ಅವನಿಗೆ ಮಾಧವ ಎಂದು ನಾಮಕರಣ ಮಾಡಲಾಯಿತು. ಅವಳ ಮಗನಿಗೆ ಒಂದು ವರ್ಷ ತುಂಬಿದ ನಂತರ ಅವಳು ನಿಫಾಢವನ್ನು ತೊರೆದು ಶಿರಡಿಯಲ್ಲಿದ್ದ ತನ್ನ ತಂದೆಯ ಮನೆಗೆ ಬಂದುಬಿಟ್ಟಳು. ಜೀವನೋಪಾಯಕ್ಕಾಗಿ ಅವಳು ಒಂದು ಹೊಲದಲ್ಲಿ ದಿನವಿಡೀ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಮಗನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ  ಇಲ್ಲದ ಕಾರಣ ಅವಳು ಮಗನನ್ನು ಬೆಳಗಿನಿಂದ ಸಂಜೆಯವರೆಗೆ ಮಸೀದಿಯಲ್ಲಿ ಬಿಟ್ಟು ಹೋಗುತ್ತಿದ್ದಳು. ಸಂಜೆ ಕೆಲಸ ಮುಗಿಸಿಕೊಂಡು ಹೋಗುವಾಗ ಮಸೀದಿಗೆ ಬಂದು ಮಗನನ್ನು ಕರೆದುಕೊಂಡು ಹೋಗುತ್ತಿದ್ದಳು. ಅಲ್ಲದೆ, ಸಾಯಿಬಾಬಾರವರಿಗೆ ನಮಸ್ಕರಿಸಿ ಹೋಗುತ್ತಿದ್ದಳು. ಹೀಗೆ ನಾಲ್ಕೈದು ವರ್ಷಗಳು ಉರುಳಿದವು. ಮಾಧವನಿಗೆ ಐದು ವರ್ಷಗಳು ತುಂಬಿದಾಗ, ಸಾಯಿಬಾಬಾರವರು ಅವನಿಗೆ ಪ್ರತಿನಿತ್ಯ ಒಂದು ರೂಪಾಯಿಯನ್ನು ಕೊಡಲು ಪ್ರಾರಂಭಿಸಿದರು. ಅದಕ್ಕೆ ಬದಲಾಗಿ ಮಾಧವನು ಸಾಯಿಬಾಬಾರವರು ಹೇಳುತ್ತಿದ್ದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದನು. 

ಕಾಶೀಭಾಯಿಗೆ ಬಾಬಾರವರು ಅನೇಕರಿಗೆ ಹಣವನ್ನು ನೀಡುತ್ತಿರುವ ವಿಷಯ ತಿಳಿದಿತ್ತು.  ಒಮ್ಮೆ ಅವಳು ಮಸೀದಿಗೆ ಬಂದು ಸಾಯಿಬಾಬಾರವರಿಗೆ "ಬಾಬಾ, ನೀವು ಪ್ರತಿನಿತ್ಯ ಕೆಲವರಿಗೆ 50 ರೂಪಾಯಿಗಳು,  ಮತ್ತೆ ಕೆಲವರಿಗೆ 30 ರೂಪಾಯಿಗಳು, ಇನ್ನಿತರರಿಗೆ 25 ರೂಪಾಯಿಗಳಂತೆ ಹಣವನ್ನು ನೀಡುತ್ತಿದ್ದೀರಿ. ನನ್ನ ಮಗ ಮಾಧವ ನೀವು ಹೇಳುವ ಎಲ್ಲಾ ಕೆಲಸವನ್ನು ಮಾಡುತ್ತಿದ್ದಾನೆ. ಆದರೂ ಅವನಿಗೆ ಕೇವಲ ಒಂದು ರೂಪಾಯಿಯನ್ನು ಕೊಡುತ್ತಿದ್ದೀರಲ್ಲಾ.  ಹೀಗೇಕೆ ಮಾಡುತ್ತಿದ್ದೀರಿ?" ಎಂದು ಪ್ರಶ್ನಿಸಿದಳು.

ಅದಕ್ಕೆ ಬಾಬಾರವರು "ಕಾಶೀಭಾಯಿ, ನಾನು ನಿನ್ನ ಮಗನಿಗೆ ಕಡಿಮೆ ಹಣ ನೀಡಿ ಇತರರಿಗೆ ಹೆಚ್ಚಿಗೆ ಹಣ ನೀಡುತ್ತಿದ್ದೇನೆ ಎಂಬ ವಿಷಯ ನನಗೆ ಗೊತ್ತಿದೆ. ಆದರೆ, ನಾನು ಬೇರೆಯವರಿಗೆ ಈ ರೀತಿಯ ಹಣವನ್ನು ಕೊಡುವುದನ್ನು ಕೆಲ ಸಮಯದ ನಂತರ ನಿಲ್ಲಿಸುತ್ತೇನೆ. ಆದರೆ, ನಿನ್ನ ಮಗನಿಗೆ ನಾನು ಹಣ ನೀಡುವುದನ್ನು ನಿಲ್ಲಿಸುವುದಿಲ್ಲ. ನಾನು ನಿನ್ನಂತೆ ಗಂಡನನ್ನು ಕಳೆದುಕೊಂಡು ಯಾವ ರಕ್ಷಣೆ ಇಲ್ಲದೆ ವಿಧವೆಯರಾಗಿರುವವರ ಒಡೆಯ" ಎಂದು ನುಡಿದರು.

ಕಾಶೀಭಾಯಿಗೆ ಶ್ರೀ ಸಾಯಿಬಾಬಾರವರ ಮಾತುಗಳು ಅರ್ಥವಾಗದೆ ಅವಳು "ನನ್ನ ಒಡೆಯ ಐದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾನೆ. ನಾನು ಆಗಿನಿಂದಲೂ ವಿಧವೆಯಾಗಿದ್ದೇನೆ" ಎಂದು ನುಡಿದಳು.


ಕಾಶೀಭಾಯಿಯ ಮಾತುಗಳನ್ನು ಕೇಳಿ ಸಾಯಿಬಾಬಾರವರ ಕೋಪ ನೆತ್ತಿಗೇರಿತು. ಅವರು ಕೋಪದಿಂದ ಅವಳಿಗೆ ಜೋರು ದನಿಯಲ್ಲಿ ನಿಂದಿಸಲು ಪ್ರಾರಂಭಿಸಿದರು. ಸಾಯಿಬಾಬಾರವರ ಕೋಪವನ್ನು ಕಂಡು ಹೆದರಿದ ಕಾಶೀಭಾಯಿ ಕೂಡಲೇ ಮಸೀದಿಯಿಂದ ಓಡಿಹೋದಳು. ಅಂದಿನಿಂದ ಸ್ವಲ್ಪ ದಿನಗಳವರೆಗೆ ಅವಳು ಮಸೀದಿಗೆ ಹೋಗುವುದನ್ನು ನಿಲ್ಲಿಸಿದಳು. ಆದರೆ, 2-3 ದಿನಗಳ ನಂತರ ಸಾಯಿಬಾಬಾರವರು ಜ್ಞಾಪಕ ಮಾಡಿಕೊಂಡು ಕಾಶೀಭಾಯಿಗೆ ಮಸೀದಿಗೆ ಬರುವಂತೆ  ಹೇಳಿ ಕಳುಹಿಸಿದರು. ಕಾಶೀಭಾಯಿ ಮಾಧವನೊಂದಿಗೆ ಮಸೀದಿಗೆ ಬಂದಳು. ಅವಳಿಗೆ ಸಾಯಿಬಾಬಾರವರ ಹತ್ತಿರ ಮಾತನಾಡಲು ಧೈರ್ಯ ಬರಲಿಲ್ಲ. ಸಾಯಿಬಾಬಾರವರೇ ಅವಳೊಂದಿಗೆ ಮೆಲುದನಿಯಲ್ಲಿ ಮಾತನಾಡಿದರು. ಆ ಸಮಯದಲ್ಲಿ ಸಾಯಿಬಾಬಾರವರ ಒಂದು ದಂತವು ಬಿದ್ದು ಹೋಗುವ ಸ್ಥಿತಿಯಲ್ಲಿ ಇದ್ದಿತು. ಆದ ಕಾರಣ, ಸಾಯಿಬಾಬಾರವರು ಆ ದಂತವನ್ನು ಕಿತ್ತು ಅದನ್ನು ಒಂದು ಬಟ್ಟೆಯಲ್ಲಿ ಸುತ್ತಿ ಸ್ವಲ್ಪ ಉಧಿಯನ್ನು ಅದರ ಜೊತೆಗೆ ಇರಿಸಿ ಕಾಶೀಭಾಯಿಗೆ ನೀಡಿ ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವಂತೆ ತಿಳಿಸಿದರು. ಹಾಗೂ, ಅದರಿಂದ ಅವಳಿಗೆ ತುಂಬಾ ಒಳಿತಾಗುವುದೆಂದು ಭರವಸೆಯನ್ನು ನೀಡಿದರು.

ಹೀಗೆ ಕಾಲವು  ಉರುಳಿತು. ಮಾಧವನು ವಯಸ್ಸಿಗೆ ಬಂದನು. ಎಲ್ಲರೂ ಅವನನ್ನು ಮಾಧವ ರಾವ್ ಎಂದು ಕರೆಯುತ್ತಿದ್ದರು. ಕಾಶೀಭಾಯಿ ತೀರಿಕೊಂಡ ನಂತರ ಮಾಧವ ರಾವ್ ಶಿರಡಿಯನ್ನು ಬಿಟ್ಟು ನಿಫಾಢಕ್ಕೆ ಹೋಗಿ ನೆಲೆಸಿದನು. ಒಮ್ಮೆ ಅವನು ತೀವ್ರ ಖಾಯಿಲೆಯಾಗಿ ಹಾಸಿಗೆ ಹಿಡಿದನು. ಆಗ ಶ್ರೀ ಸಾಯಿಬಾಬಾರವರು ಅವನ ಕನಸಿನಲ್ಲಿ ಬಂದು "ಅತಿ ಶೀಘ್ರದಲ್ಲಿಯೇ ನಿನ್ನ ಬಳಿಗೆ ಒಬ್ಬ ಮನುಷ್ಯ ಬರುತ್ತಾನೆ. ನೀನು ತೋಳಿಗೆ ಕಟ್ಟಿಕೊಂಡಿರುವ ಆ ತಾಯಿತವನ್ನು ಅವನಿಗೆ ನೀಡಬೇಕು" ಎಂದು ಆಜ್ಞೆ ಮಾಡಿದರು. ಅದೇ ದಿನ ನಿಕ್ಕಂ ಮಾಧವ ರಾವ್ ನನ್ನು ನೋಡಲು ನಿಫಾಢಕ್ಕೆ ಬಂದರು.ನಿಕ್ಕಂರವರಿಗೂ ಅದೇ ರೀತಿ ಕನಸು ಬಿದ್ದ ಕಾರಣ ಆ ತಾಯಿತವನ್ನು ತೆಗೆದುಕೊಂಡು ಹೋಗಲು ಅವರು ನಿಫಾಢಕ್ಕೆ ಬಂದಿದ್ದರು. ಇಬ್ಬರು ಒಂದೇ ರೀತಿಯ ಕನಸನ್ನು ಕಂಡಿದ್ದು ಮಾತುಕತೆಯ ನಂತರ ತಿಳಿಯಿತು. ಆದುದರಿಂದ ಶ್ರೀ ಮಾಧವ ರಾವ್ ಆ ತಾಯಿತವನ್ನು ನಿಕ್ಕಂರವರಿಗೆ ನೀಡಿದನು. ಈ ತಾಯಿತವನ್ನು ನಿಕ್ಕಂ ರವರು ಬಹಳ ವರ್ಷ ಇಟ್ಟುಕೊಂಡಿದ್ದರು. ನಂತರ ಇದನ್ನು ಶಿವಾಜಿನಗರದ ರಾಸನೆ ಚಾವಲ್ ನಲ್ಲಿರುವ ಈ ಮಂದಿರಕ್ಕೆ ನೀಡಿದರು. ಅದೇ ತಾಯಿತವನ್ನು ಈಗ ಶ್ರೀ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಕೆಳಗಡೆ ಇರಿಸಲಾಗಿದೆ.  ಈ ಪವಿತ್ರ ಪಾದುಕೆಗಳನ್ನು ಪರಮ ಪೂಜ್ಯ ನರಸಿಂಹ ಸ್ವಾಮೀಜಿಯವರು 1950 ನೇ ಇಸವಿಯಲ್ಲಿ ಸ್ಥಾಪಿಸಿರುತ್ತಾರೆ.  ಶ್ರೀ ಸಾಯಿಬಾಬಾರವರ ಪವಿತ್ರ ದಂತವನ್ನು ಪವಿತ್ರ ಪಾದುಕೆಗಳ ಕೆಳಗಡೆ ಸ್ಥಾಪಿಸಿರುವ ಕಾರಣ ಈ ಮಂದಿರವು ಸಾಯಿಭಕ್ತರಿಗೆ ಮಹತ್ವದ್ದಾಗಿರುತ್ತದೆ. 


ಈ ಮಂದಿರದ ಉಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ 1950 ನೇ ಇಸವಿಯಲ್ಲಿ ಶ್ರೀ ಸಾಯಿ ದಾಸ ಮಂಡಳ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಶ್ರೀ. ರಂಗನಾಥನ್ ರವರು ಈ ಮಂಡಳದ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದರು. ಅವರ ಮರಣದ ನಂತರ ಶ್ರೀ.ಎಸ್.ರಾಮಕೃಷ್ಣಾಜಿಯವರು ಕಾರ್ಯದರ್ಶಿ ಪಟ್ಟವನ್ನು ಅಲಂಕರಿಸಿದ್ದಷ್ಟೇ ಅಲ್ಲದೆ ಇಂದಿಗೂ ಮಂದಿರವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ದಸರಾ, ರಾಮನವಮಿ ಹಾಗೂ ಗುರುಪೂರ್ಣಿಮೆ ಉತ್ಸವಗಳನ್ನು ಬಹಳ ವೈಭವದಿಂದ ಇಂದಿಗೂ ಆಚರಿಸಲಾಗುತ್ತಿದೆ.

ಪುಣೆಯ ಖ್ಯಾತ ಸಾಯಿ ಭಕ್ತರಾದ ಶ್ರೀ.ನಾನಾಸಾಹೇಬ್ ಅವಸ್ತಿಯವರು ಕೂಡ ಈ ಮಂದಿರದ ಪ್ರಗತಿಗೆ ಬಹಳ ಶ್ರಮಿಸಿದ್ದಾರೆ ಮತ್ತು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ. ಶ್ರೀ ಸಾಯಿಬಾಬಾರವರು ಜೀವಂತರಾಗಿದ್ದಾಗ ಅವರನ್ನು ನೋಡಿದ ಕೆಲವೇ ಅದೃಷ್ಟವಂತ ಭಕ್ತರಲ್ಲಿ ಇವರೂ ಒಬ್ಬರು. ಆದರೆ ಇಂದು ಶ್ರೀ ನಾನಾ ಸಾಹೇಬ್ ಅವಸ್ತಿಯವರು ಬದುಕುಳಿದಿಲ್ಲ. ಇದು ಶ್ರೀ ಸಾಯಿ ದಾಸ ಮಂಡಳಕ್ಕೆ ಆಗಿರುವ ದೊಡ್ಡ ನಷ್ಟವೆಂದೇ ಹೇಳಬೇಕು. ಆದರೆ ಈ ಮಂದಿರದ ಸ್ವಯಂ ಸೇವಕರು ಬಹಳ ಉತ್ತಮವಾಗಿ ಮಂದಿರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ದೇವಾಲಯದಲ್ಲಿ ನಡೆದ ಒಂದು ಲೀಲೆಯನ್ನು ಇಲ್ಲಿ ಸ್ಮರಿಸಲೇಬೇಕಾಗುತ್ತದೆ. 12ನೇ ಜುಲೈ 1961 ರಂದು ಜೋರು ಪ್ರವಾಹವಾಗಿ ಪನ್ ಶೆಟ್ ಡ್ಯಾಮ್ ಒಡೆದುಹೋಗಿ ಇದೇ ಪುಣೆ ನಗರವು ಜಲಾವೃತವಾಗಿತ್ತು. ಇಡೀ ಪುಣೆ ನಗರವು ಹಾಳಾಗಿ ಹೋಗಿದ್ದಷ್ಟೆ  ಅಲ್ಲದೆ ಹಲವಾರು ಮನೆಗಳು ಉರುಳಿಬಿದ್ದಿತ್ತು. ನದಿಯ ದಡದ ಪಕ್ಕದಲ್ಲೇ ಈ ಮಂದಿರವಿದ್ದ ಕಾರಣ ಈ ಮಂದಿರದ ಗೋಪುರದವರೆಗೂ ಅಂದರೆ ಸರಿ ಸುಮಾರು 20 ರಿಂದ 25 ಅಡಿ ಎತ್ತರದವರೆಗೆ ನೀರು ತುಂಬಿಕೊಂಡಿತ್ತು. ದೇವಾಲಯದ ಸುತ್ತಲೂ ನೀರು-ಮಣ್ಣು ತುಂಬಿಕೊಂಡು ದೇವಾಲಯ ಕಾಣಿಸುತ್ತಲೇ ಇರಲಿಲ್ಲ. ಎರಡು ದಿನಗಳ ನಂತರ ಪ್ರವಾಹ ಕಮ್ಮಿಯಾದ ಮೇಲೆ ದೇವಾಲಯದ ಸ್ಥಿತಿಯನ್ನು  ನೋಡಲು ಶ್ರೀ ಸಾಯಿ ದಾಸ ಮಂಡಳದ ಸದಸ್ಯರು ಬಂದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಹಳೆಯ ದೇವಾಲಯಕ್ಕೆ ಸ್ವಲ್ಪವೂ ಹಾನಿಯಾಗಿರಲಿಲ್ಲ. ದೇವಾಲಯದ ಆವರಣದಲ್ಲಿದ್ದ ಪವಿತ್ರ ಔದುಂಬರ ವೃಕ್ಷಕ್ಕೂ ಸಹ ಯಾವುದೇ ರೀತಿಯ ಹಾನಿಯಾಗಿರಲಿಲ್ಲ.ಶ್ರೀ ಸಾಯಿಬಾಬಾರವರ ವರ್ಣರಂಜಿತ ಚಿತ್ರಪಟ ಕೂಡ ಸ್ವಲ್ಪವೂ ಹಾಳಾಗಿರಲಿಲ್ಲ. ಪ್ರಸ್ತುತ, ರಾಜಸ್ಥಾನದ ಜೈಪುರದಿಂದ ತರಿಸಲಾದ ಶ್ರೀ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ಹಾಗೂ ಮೇಲೆ ತಿಳಿಸಿದ ವರ್ಣರಂಜಿತ ಚಿತ್ರಪಟವನ್ನು  ದೇವಾಲಯದಲ್ಲಿ ಇರಿಸಲಾಗಿದೆ ಹಾಗೂ ಪ್ರತಿನಿತ್ಯ ಶ್ರದ್ಧಾ-ಭಕ್ತಿಗಳಿಂದ ಪೂಜಿಸಲಾಗುತ್ತಿದೆ.

ಶ್ರೀ ಸಾಯಿಬಾಬಾರವರ ದಂತವನ್ನು ಪವಿತ್ರ ಪಾದುಕೆಗಳ ಕೆಳಗಡೆ ಇರಿಸಲಾಗಿರುವ ಈ ಸಾಯಿ ಮಂದಿರಕ್ಕೆ ಪ್ರತಿಯೊಬ್ಬ ಸಾಯಿ ಭಕ್ತರೂ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಅನುಗ್ರಹಕ್ಕೆ ಪಾತ್ರರಾಗಬೇಕೆಂಬುದು ಈ ಸಾಯಿ ಭಕ್ತನ ಮನದಾಳದ ಬಯಕೆ.

ದೇವಾಲಯದ ಸಂಪರ್ಕದ ವಿವರ ಈ ಕೆಳಕಂಡಂತೆ ಇದೆ:


ಶ್ರೀ ಸಾಯಿ ದಾಸ ಮಂಡಳ, 
83/84, ಶಿವಾಜಿನಗರ, ರಾಸನೆ ಚಾವಲ್, 
ಜೂನ ತೋಪಖಾನ, 
ಪುಣೆ-411 004, ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿ: ಡಾ.ಪ್ರಕಾಶ್ ರಾಸನೆ - ಅಧ್ಯಕ್ಷರು
ದೂರವಾಣಿ ಸಂಖ್ಯೆಗಳು : +91-020-2551 0790/2445 5399/2433 5745/2567 6155 /+91 98906 65626

(ಆಧಾರ:  ಶ್ರೀ. ಎಸ್. ಎಂ. ಗರ್ಜೆಯವರು ಮರಾಠಿಯಲ್ಲಿ ಬರೆದು ಶ್ರೀ ಸಾಯಿಲೀಲಾ ಮಾಸಪತ್ರಿಕೆ ಜನವರಿ 1976 ರಲ್ಲಿ ಪ್ರಕಟವಾದ ಲೇಖನ) 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, February 1, 2014

ಪ್ರಪಂಚದ ಪ್ರಪ್ರಥಮ ಶ್ರೀ ಸಾಯಿಬಾಬಾರವರ ಬ್ಲೆಸ್ಸಿಂಗ್ ಕಾರ್ಡ್ - ಕೃಪೆ: ಸಾಯಿಅಮೃತಧಾರಾ.ಕಾಂ



ನವಿ ಮುಂಬೈನ ಪಬ್ಲಿಷಿಂಗ್ ಸಂಸ್ಥೆಯಾದ ಪ್ರಸಾರ್ ಕಮ್ಯುನಿಕೇಷನ್ಸ್ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ ಶ್ರೀ ಸಾಯಿಬಾಬಾರವರ ಬ್ಲೆಸ್ಸಿಂಗ್ ಕಾರ್ಡ್ಅನ್ನು ಹೊರತಂದಿದೆ. 

ಈ ಬ್ಲೆಸ್ಸಿಂಗ್ ಕಾರ್ಡ್  ಗಳು ಟಾರಟ್ ಮತ್ತು ಏಂಜಲ್ ಕಾರ್ಡ್ ಗಳಂತಿದ್ದು ಶ್ರೀ ಸಾಯಿಬಾಬಾರವರ ಮಾರ್ಗದರ್ಶನದಂತೆ  ಅವರ 60 ಸೂಕ್ತಿಗಳನ್ನು ಆಯ್ದುಕೊಂಡು ಅವುಗಳನ್ನು ನಯನ ಮನೋಹರವಾದ ವಿನ್ಯಾಸದೊಂದಿಗೆ ಬಳಸಿಕೊಂಡು ಚಿತ್ರಗಳ  ಮುಖಾಂತರ ಅವರ ಸಂದೇಶವನ್ನು ಭಕ್ತರಿಗೆ ತಲುಪಿಸುವ ಉತ್ತಮ ಪ್ರಯತ್ನವನ್ನು ಮಾಡಲಾಗಿದೆ. ಸಾಯಿಬಾಬಾರವರ ಈ ಸಂದೇಶವನ್ನು ಓದಿ ಅರ್ಥ ಮಾಡಿಕೊಳ್ಳಲು ಯಾವುದೇ ವಿಶೇಷ ಪರಿಣತಿಯ ಅಗತ್ಯವಿರುವುದಿಲ್ಲ. ಇನ್ನೂ ಹೇಳಬೇಕೆಂದರೆ ಈ ಬ್ಲೆಸ್ಸಿಂಗ್ ಕಾರ್ಡ್  ಗಳ ಜೊತೆಗೆ ಇದನ್ನು ಬಳಸುವ ವಿಧಾನವನ್ನು ಕುರಿತು ಒಂದು ಮಾರ್ಗದರ್ಶಿ ಪುಸ್ತಕವನ್ನು ಸಹ ಕೊಡಲಾಗಿದೆ. 

"ಶ್ರೀ ಸಾಯಿಬಾಬಾರವರನ್ನು ಮನದಲ್ಲಿ ನೆನೆಸಿಕೊಂಡಾಗ ಅವರು ನಮ್ಮ ಬಳಿ ಬಂದು ನಮ್ಮ ಪ್ರಶ್ನೆಗೆ ಉತ್ತರವನ್ನು ನೀಡುವುದನ್ನು ನಾವುಗಳೆಲ್ಲಾ ನೋಡಿದ್ದೇವೆ. ಆದರೆ ನಾವುಗಳು ಸಂಕಷ್ಟಕ್ಕೆ ಸಿಲುಕಿ ನಮ್ಮ ಮನಸ್ಸು ಅಸ್ತವ್ಯಸ್ತವಾಗಿದ್ದಾಗ ಶ್ರೀ ಸಾಯಿಬಾಬಾರವರ ದನಿಯಾಗಲಿ ಅವರ ಮಾರ್ಗದರ್ಶನವಾಗಲಿ ನಮ್ಮ ಅನುಭವಕ್ಕೆ ಬರುವುದಿಲ್ಲ. ಆದ ಕಾರಣ, ಶ್ರೀ ಸಾಯಿಬಾಬಾ ಬ್ಲೆಸ್ಸಿಂಗ್ ಕಾರ್ಡ್ ಗಳು ಅಂತಹ ಸಂದರ್ಭಗಳಲ್ಲಿ ನಮಗೆ ಬಹಳ ಸಹಾಯಕವಾಗುತ್ತವೆ. ಈ ಬ್ಲೆಸ್ಸಿಂಗ್ ಕಾರ್ಡ್ ಗಳು  ನಮ್ಮ ಮನಸ್ಸಿನಲ್ಲಿ ಏಕಾಗ್ರತೆಯನ್ನು ತಂದುಕೊಂಡು ಶ್ರೀ ಸಾಯಿಬಾಬಾರವರಿಂದ ಅಥವಾ ಇನ್ಯಾವುದೇ ಆಧ್ಯಾತ್ಮಿಕ ಗುರುಗಳಿಂದ ಮಾರ್ಗದರ್ಶನ ಪಡೆಯಲು ಸಹಾಯ ಮಾಡುತ್ತವೆ" ಎಂದು ಪ್ರಸಾರ್ ಕಮ್ಯುನಿಕೇಷನ್ಸ್ ನ ಮಾಲೀಕರಾದ ಶಂಷಾದ್ ಆಲಿ ಬೇಗ್ ರವರು ಹೇಳುತ್ತಾರೆ.

"ಶ್ರೀ ಸಾಯಿಬಾಬಾರವರು ಈ ಅನನ್ಯ ಸ್ಪೂರ್ತಿದಾಯಕ ಕಲ್ಪನೆ ನನಗೆ ನೀಡಿ ಈ ಬ್ಲೆಸ್ಸಿಂಗ್ ಕಾರ್ಡ್ ಗಳ ಪರಿಕಲ್ಪನೆ, ತಯಾರಿಕೆ ಹಾಗೂ ವಿತರಣೆಯ ಪ್ರತಿಯೊಂದು ಹಂತದಲ್ಲಿ ಮಾರ್ಗದರ್ಶನ ನೀಡಿದ್ದಾರೆ" ಎಂದು ಶಂಷಾದ್ ಆಲಿ ಬೇಗ್ ರವರು ಹೇಳುತ್ತಾರೆ.

ಶ್ರೀ ಸಾಯಿಬಾಬಾರವರು ನನಗೆ ಈ ಕಲ್ಪನೆಯನ್ನು ಪ್ರಥಮ ಬಾರಿಗೆ 2010 ನೇ ಇಸವಿಯಲ್ಲಿ ನೀಡಿದ್ದರೂ ಸಹ ಆ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಾನು ಹಿಂಜರಿದೆ. ಏಕೆಂದರೆ, ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಟಾರಟ್ ಮತ್ತು ಏಂಜಲ್ ಕಾರ್ಡ್ ಗಳು ಇರುವಾಗ ನನ್ನ ಈ ಸಾಯಿಬಾಬಾ ಬ್ಲೆಸ್ಸಿಂಗ್ ಕಾರ್ಡ್ ಗಳನ್ನು ಯಾರು ಸ್ವೀಕರಿಸುತ್ತಾರೆ" ಎಂದು ನಾನು ಯೋಚನೆ ಮಾಡಿದೆ ಎಂದು ಶಂಷಾದ್ ಆಲಿ ಬೇಗ್ ರವರು ಹೇಳುತ್ತಾರೆ.

ಅಲ್ಲದೇ, ಶ್ರೀ ಸಾಯಿಬಾಬಾರವರ ಸಂದೇಶಗಳು ತತ್ವ ಸಂದೇಶಗಳಾಗಿದ್ದು, ಈಗಿನ ಲೌಕಿಕ ಪ್ರಪಂಚದಲ್ಲಿನ ಜನರ ದಿನನಿತ್ಯದ ತೊಂದರೆಗಳಾದ ಹಣಕಾಸು, ಕೆಲಸ, ಪ್ರೀತಿ, ಬಾಂಧವ್ಯ ಮತ್ತಿತರ ಹಲವಾರು ವಿಷಯಗಳನ್ನು ಕುರಿತು ಹೇಗೆ ಈ ಸಂದೇಶಗಳು ಸಹಾಯ ಮಾಡುತ್ತವೆ ಎಂದು ಯೋಚನೆಗೀಡಾದೆ ಎಂದು ಅವರು ಹೇಳುತ್ತಾರೆ. 

ಆದರೆ, ಮೇ 2012 ರಲ್ಲಿ ಒಂದು ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ದಿವ್ಯ ಸಂದೇಶವು ಜೋರಾಗಿ ಹಾಗೂ ಸ್ಪಷ್ಟವಾಗಿ ಕೇಳಿಸಿತು. ಒಂದು ಅಧಿವೇಶನದಲ್ಲಿ ಸಾಯಿಬಾಬಾರವರು ವೇದಿಕೆಯಲ್ಲಿ ನಿಂತು ನನ್ನನ್ನು ಕುರಿತು "ಹಣಕಾಸಿನ ಬಗ್ಗೆ ಏಕೆ ಚಿಂತಿಸುವೆ. ಅದೆಲ್ಲವನ್ನೂ ನಾನು ನೋಡಿಕೊಳ್ಳುವೆ. ಚಿಂತಿಸಬೇಡ. ನೀನು ಕೆಲಸವನ್ನು ಪ್ರಾರಂಭಿಸು. ನಿನಗೆ ನಾನು ಸಹಾಯ ಮಾಡುವೆ" ಎಂದು ಹೇಳುತ್ತಿರುವಂತೆ ಭಾಸವಾಯಿತು ಎಂದು ಶಂಷಾದ್  ನುಡಿಯುತ್ತಾರೆ. 

ಈ ಘಟನೆ ಶಂಷಾದ್ ರವರ ಜೀವನದಲ್ಲಿ ಮಹತ್ವದ ತಿರುವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಶಂಷಾದ್ ರವರು ತಮ್ಮ ಸಂಪೂರ್ಣ ಶಕ್ತಿಯನ್ನು ಈ ಯೋಜನೆಗೆ ವಿನಿಯೋಗಿಸಿದರು. "ಸಾಯಿಬಾಬಾರವರು ನುಡಿದಂತೆ ಅವರೇ ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು" ಎಂದು ಶಂಷಾದ್  ನಿಟ್ಟುಸಿರು ಬಿಡುತ್ತಾರೆ.

"ಬ್ಲೆಸ್ಸಿಂಗ್ ಕಾರ್ಡ್ ಗಳ ಮುದ್ರಣ ನಡೆಯುವಾಗ ಮತ್ತೊಂದು ಪವಾಡ ಜರುಗಿತು. ಎಲ್ಲಾ ಕಾರ್ಡ್ ಗಳು ಬಹಳ ಉತ್ತಮವಾಗಿ ಮುದ್ರಣವಾಗಿದ್ದವು. ಆದರೆ, ಒಂದು ಕಾರ್ಡ್ ನ ಬಣ್ಣವು ಸ್ವಲ್ಪ ಮಾಸಿ ಹೋಗಿ ಅಂದುಕೊಂಡಂತೆ ಮುದ್ರಣವಾಗಿರಲಿಲ್ಲ. ನಾನು ಇದು ಒಂದು ಸಣ್ಣ ತಪ್ಪಾಗಿದ್ದು ಯಾರಿಗೂ ಗೊತ್ತಾಗುವುದಿಲ್ಲ ಎಂದು ತಿಳಿದಿದ್ದೆ. ನನಗೆ ನಾನೇ ಸಮಾಧಾನ ತಂದುಕೊಂಡಿದ್ದರೂ ಸಹ ನನ್ನ ಮನಸ್ಸಿನಲ್ಲಿ ಆ ಒಂದು ಕಾರ್ಡ್ ಬಗ್ಗೆ ಯೋಚನೆ ಸುಳಿಯುತ್ತಲೇ ಇದ್ದಿತು. ಆಗ ನಾನು ಸಾಯಿಬಾಬಾರವರನ್ನು ಕುರಿತು ಪಾರ್ಥನೆ ಮಾಡಿಕೊಂಡೆ. ನಂತರ ಮುದ್ರಕರ ಬಳಿ ಈ ವಿಷಯ ಕುರಿತು ಪ್ರಸ್ತಾಪ ಮಾಡಿದೆ. ಆದರೆ ಮುದ್ರಕರು ಆ ಒಂದು ಕಾರ್ಡ್ ನ ಬಗ್ಗೆ ಏನೂ ಮಾಡಲು ಆಗುವುದಿಲ್ಲ ಎಂದು ತಲೆ ಅಲ್ಲಾಡಿಸಿದರು. ಆಗ ಅಲ್ಲಿಗೆ ಬಂದ ಮುದ್ರಣ ಮೇಲ್ವಿಚಾರಕರನ್ನು ಈ ಬಗ್ಗೆ ಕೇಳಿದಾಗ ಅವರು ಇದರ ಬಣ್ಣವನ್ನು ಸರಿ ಮಾಡಬಹುದು ಎಂದು ನುಡಿದರು. ಅಷ್ಟೇ ಅಲ್ಲದೆ ಆ ಕೂಡಲೇ ಕಾರ್ಯತತ್ಪರರಾಗಿ ಮುದ್ರಣ ಯಂತ್ರಕ್ಕೆ ಕೆಲವು ತಿದ್ದುಪಡಿ ಮಾದಿದರು. ಆ ಕ್ಷಣದಲ್ಲೇ ಆ ಕಳೆಗುಂದಿದ ಕಾರ್ಡ್ ಗೆ ಬದಲಾಗಿ ಉತ್ತಮ ಗುಣಮಟ್ಟದ ಕಾರ್ಡ್ ಗಳು ಹೊರಬರಲಾರಂಭಿಸಿತು" ಎಂದು ಶಂಷಾದ್ ಸಂತೋಷದಿಂದ ನುಡಿಯುತ್ತಾರೆ.

"ಮೊದಲು ಹಣವನ್ನು ಉಳಿಸುವ ಸಲುವಾಗಿ ಬ್ಲೆಸ್ಸಿಂಗ್  ಕಾರ್ಡ್ ಗಳನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಕೇವಲ ಎರಡು ಕರಪತ್ರಗಳನ್ನು ಇರಿಸಲು ಯೋಚನೆ ಮಾಡಿದ್ದೆ. ಆದರೆ, ಆಗಲೂ ಸಹ ಸಾಯಿಬಾಬಾರವರು ಮಾರ್ಗದರ್ಶನ ನೀಡಿ ಒಂದು ಸಣ್ಣ ಮಾರ್ಗದರ್ಶಿ ಪುಸ್ತಕವನ್ನು ಜೊತೆಗಿರಿಸುವಂತೆ ಸಲಹೆ ನೀಡಿದರು" ಎಂದು ಶಂಷಾದ್  ಹೇಳುತ್ತಾರೆ. 

ಸಾಯಿಬಾಬಾರವರು "ನಾನು ನನ್ನ ಭಕ್ತರನ್ನು ಈ ಬ್ಲೆಸ್ಸಿಂಗ್ ಕಾರ್ಡ್ ಗಳಲ್ಲಿರುವ ಚಿತ್ರಗಳ ಮುಖಾಂತರ, ಸಂದೇಶದ ಮುಖಾಂತರ, ಅವರಿಗೆ ವಿವೇಚನಾ ಶಕ್ತಿ ನೀಡುವ ಮುಖಾಂತರ, ಯಾವುದೋ ರೀತಿಯ ಶಬ್ದವನ್ನು ಮಾಡುವ ಮುಖಾಂತರ... ಹಾಗೂ ಇನ್ನು ಬೇರೆ ಬೇರೆ ರೀತಿಯಲ್ಲಿ ಆ ಸಂದರ್ಭಕ್ಕೆ ತಕ್ಕಂತೆ ಸಂದೇಶ ರವಾನಿಸುತ್ತೇನೆ ಎಂದು ಹೇಳುವ ಮುಖಾಂತರ ನನ್ನ ಮನದಲ್ಲಿ ಎದ್ದಿದ್ದ ಮೊದಲನೇ ಪ್ರಶ್ನೆಗೂ ಕೂಡ ಉತ್ತರ ನೀಡಿದರು" ಎಂದು ಶಂಷಾದ್ ಹೇಳುತ್ತಾರೆ.

ಆದರೆ "ಈ ಸಾಯಿಬಾಬಾ ಬ್ಲೆಸ್ಸಿಂಗ್ ಕಾರ್ಡ್ ಗಳನ್ನು ಜ್ಯೋತಿಷ್ಯ ಹೇಳುವ ಸಲುವಾಗಿ ಬಳಸುವಂತಿಲ್ಲ. ಆದರೆ, ಕೇವಲ ದಿನನಿತ್ಯದ ಆಗು-ಹೋಗುಗಳಲ್ಲಿ ನಮಗೆ ಸಾಯಿಬಾಬಾರವರು ಮಾರ್ಗದರ್ಶನ ನೀಡಲು ಮಾತ್ರ ಬಳಸಬೇಕು" ಎಂಬ ಎಚ್ಚರಿಕೆಯ ಮಾತನ್ನು ಹೇಳುವುದನ್ನು ಶಂಷಾದ್ ಮರೆಯುವುದಿಲ್ಲ. 

ಈ ಬ್ಲೆಸ್ಸಿಂಗ್ ಕಾರ್ಡ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ಬ್ಲೆಸ್ಸಿಂಗ್ ಕಾರ್ಡ್ ಗಳನ್ನು ಖರೀದಿಸಲು www.sai-blessings.com  ಜೋಡಣೆಯನ್ನು ಕ್ಲಿಕ್ಕಿಸಿ ಅಥವಾ saiblessings.now@gmail.com ಗೆ ಮಿಂಚಂಚೆಯನ್ನು ಕಳು ಹಿಸಬಹುದಾಗಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ