ಶಿರಡಿ ಸಾಯಿಬಾಬಾರವರ ಅಪ್ಪಣೆಯನ್ನು ಪಡೆದು ನಾನು ನನ್ನ ಅನುಭವಗಳನ್ನು ಹೇಳಲು ಪ್ರಾರಂಭಿಸುತ್ತೇನೆ. ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಯಾವುದೇ ತೊಂದರೆಯಾದಾಗ ಸಾಯಿಬಾಬಾ ನಮ್ಮನ್ನು ಕಾಪಾಡಿದ್ದಾರೆ.
ಕೆಲವು ವರ್ಷಗಳ ಹಿಂದಿನ ಮಾತು. ನಾನು ನನ್ನ ಸ್ವಂತ ಕಾರ್ಯಗಳಲ್ಲಿ ಮಾತ್ರ ಗಮನ ಹರಿಸುತ್ತಾ ಸ್ವಾರ್ಥ ಜೀವನವನ್ನು ನೆಡೆಸುತ್ತಿದ್ದೆ. ನನ್ನ ಸ್ವಂತ ಯಶಸ್ಸು, ಬ್ಯಾಂಕ್ ಬ್ಯಾಲೆನ್ಸ್ ಗಳ ಬಗ್ಗೆ ಮಾತ್ರ ಗಮನ ಹರಿಸುತ್ತಾ ಸಾಮಾಜಿಕವಾಗಿ ಯಾರೊಡನೆ ಬೆರೆಯದೇ, ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳದೇ ಜೀವನ ನೆಡೆಸುತ್ತಿದ್ದೆ. ಆಗ ನನಗೆ ಶಿರಡಿಗೆ ಬರುವಂತೆ ಸಾಯಿಬಾಬಾರವರಿಂದ ಬುಲಾವ್ ಬಂದಿತು. ನನ್ನ ಬುದ್ಧಿಯನ್ನು ಸರಿ ಮಾಡಲು ಸಾಯಿಬಾಬಾ ನನ್ನನ್ನು ಕರೆಸಿಕೊಂಡಿರಬಹುದು ಎಂಬುದು ನನ್ನ ಅನಿಸಿಕೆ.
ಅಕ್ಟೊಬರ್ 5, 2003 ರಂದು ನಾನು ಹಾಗೂ ನನ್ನ ಮನೆಯವರು ಶಿರಡಿಯನ್ನು ತಲುಪಿದೆವು. ನನ್ನ ಧರ್ಮಪತ್ನಿಯು ದೈಹಿಕ ತೊಂದರೆಯಿಂದ ಬಳಲುತ್ತಿದ್ದಳು. ಆದರೆ ನಾನು ಅದರ ಕಡೆಗೆ ಸ್ವಲ್ಪವೂ ಗಮನ ಹರಿಸಲಿಲ್ಲ. ನಾವು ಶಿರಡಿಗೆ ಸಮೀಪದಲ್ಲಿರುವ ಕೋಪರಗಾವ್ ಎಂಬ ಗ್ರಾಮವನ್ನು ತಲುಪಿದೆವು. ಅಲ್ಲಿ ಒಬ್ಬ ಆಟೋ ಚಾಲಕನೊಂದಿಗೆ 60/- ರೂಪಾಯಿ ಶುಲ್ಕ ಎಂಬ ಒಪ್ಪಂದ ಮಾಡಿಕೊಂಡು ಆಟೋ ಹತ್ತಿದೆವು. ಆದರೆ ಶಿರಡಿ ತಲುಪಿದ ನಂತರ ಆಟೋ ಚಾಲಕ 80/-ರೂಪಾಯಿ ನೀಡಬೇಕೆಂದು ಗಲಾಟೆ ಮಾಡಲು ಪ್ರಾರಂಭಿಸಿದ. ನನಗೆ ಕೋಪ ಬಂದು ವಿಷಯವನ್ನು ಪೊಲೀಸರಿಗೆ ತಿಳಿಸುವುದಾಗಿ ಬೆದರಿಸಿದೆ. ಅದಕ್ಕೆ ಆ ಆಟೋ ಚಾಲಕ "ಈ ಹಣವನ್ನೂ ನೀವೇ ಇಟ್ಟುಕೊಳ್ಳಿ. ಸಾಯಿಬಾಬಾರವರ ಒಬ್ಬ ಭಿಕ್ಷುಕನಿಗೆ ಹಣವನ್ನು ನೀಡಿದೆ ಎಂದು ನಾನು ತಿಳಿದುಕೊಳ್ಳುತ್ತೇನೆ" ಎಂದು ಹೇಳಿ ಹಣವನ್ನು ಪಡೆಯದೇ ಹಾಗೆಯೇ ಹೊರಟುಹೋದ.
ಇದು ಶಿರಡಿಗೆ ನಮ್ಮ ಮೊದಲ ಭೇಟಿಯಾಗಿತ್ತು. ಆದರೆ ಅತ್ಯಂತ ತ್ವರಿತ ಗತಿಯಲ್ಲಿ ದರ್ಶನವನ್ನು ಮಾಡಿದೆವು. ಆದ ಕಾರಣ ನಾವು ದ್ವಾರಕಾಮಾಯಿಯ 3 ಮೆಟ್ಟಿಲುಗಳನ್ನು ಕೂಡ ಹತ್ತುವುದನ್ನು ಮರೆತೆವು. ಆದರೆ, ಸಾಯಿಬಾಬಾರವರ ಅಪ್ಪಣೆಯಿಲ್ಲದೆ ಯಾರೂ ಕೂಡ 3 ಮೆಟ್ಟಿಲುಗಳನ್ನು ಹತ್ತಲಾಗುವುದಿಲ್ಲ ಮತ್ತು ಹಾಗೆ ಹತ್ತಿಳಿದ ಯಾವುದೇ ವ್ಯಕ್ತಿಯ ಬಯಕೆಗಳು ಖಂಡಿತವಾಗಿ ಪೂರ್ಣವಾಗುವುದು ಎಂದು ಮನಗಂಡೆವು.
ಶಿರಡಿಯಿಂದ ವಾಪಸ್ ಬಂದ ನಂತರ ನಾನು ಮತ್ತೆ ನನ್ನ ಕೆಲಸಗಳಲ್ಲಿ ಮುಳುಗಿ ಹೋದೆ. ದಿನ ಕಳೆದಂತೆ ನನ್ನ ಪತ್ನಿಯ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಆದರೂ ಕೂಡ ನಾನು ಅವಳ ಬಗ್ಗೆ ಸ್ವಲ್ಪವೂ ಗಮನ ಹರಿಸಲಿಲ್ಲ. ಡಿಸೆಂಬರ್ 4, 2003 ರಂದು ನನ್ನ ಪತ್ನಿ ನನಗೆ ಫೋನ್ ಮಾಡಿ ಅಳಲು ಪ್ರಾರಂಭಿಸಿದಳು. ನಾನು ಕೂಡಲೇ ಮನೆಗೆ ಓಡಿದೆ. ನಾನು ಹಾಗೂ ನಾನು ಬಾಡಿಗೆಗೆ ಇದ್ದ ಮನೆಯ ಮಾಲೀಕರು ಸೇರಿ ನನ್ನ ಪತ್ನಿಯನ್ನು ವೊಕಾರ್ಡ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಡಾ.ಚಂದ್ರಶೇಖರ್ ರವರು ಕೊಲೊನೋಸ್ಕೋಪಿ ಹಾಗೂ ಬಯಾಪ್ಸಿ ಮಾಡಿ ಕ್ಯಾನ್ಸರ್ ಕಾಯಿಲೆ ಇರಬಹುದು ಎಂಬ ಸಂದೇಹದಿಂದ ತ್ವರಿತವಾಗಿ ಸಿಟಿ ಸ್ಕ್ಯಾನ್ ಮಾಡಿಸಬೇಕೆಂದು ಸಲಹೆ ನೀಡಿದರು. ನಮ್ಮ ಕುಟುಂಬದ ತೊಂದರೆಯ ದಿನಗಳು ಈ ರೀತಿಯಲ್ಲಿ ಪ್ರಾರಂಭವಾಯಿತು. ಬೆಂಗಳೂರಿನ ಮಲ್ಯ ಆಸ್ಪತ್ರೆಯ ಪ್ರಸಿದ್ಧ ಕ್ಯಾನ್ಸರ್ ತಜ್ಞರಾದ ಡಾ.ನಂದಕುಮಾರ್ ಜಯರಾಂ ರವರನ್ನು ಕೂಡಲೇ ಕಾಣಬೇಕೆಂದು ಡಾ.ಚಂದ್ರಶೇಖರ್ ರವರು ನನಗೆ ಸಲಹೆ ನೀಡಿದರು. ಅವರ ಸಲಹೆಯಂತೆ ನಾನು ನನ್ನ ಪತ್ನಿಯನ್ನು ಡಿಸೆಂಬರ್ 9 ರಂದು ಮಲ್ಯ ಆಸ್ಪತ್ರೆಗೆ ದಾಖಲು ಮಾಡಿದೆ. ನನ್ನ ಪತ್ನಿಗೆ ಅದೇ ದಿನವೇ ಶಸ್ತ್ರಚಿಕಿತ್ಸೆ ಕೂಡ ಮಾಡಲಾಯಿತು. ಅಂದಿನಿಂದ ನಾನು ಸಾಯಿ ತಾರಕ ಮಂತ್ರವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಯನ್ನು ಹೇಳಿಕೊಳ್ಳಲು ಪ್ರಾರಂಭಿಸಿದೆ. ಶಸ್ತ್ರಚಿಕಿತ್ಸೆಯಾದ ನಂತರದ ದಿನದಿಂದ ಕೀಮೊಥಿರೆಪಿ ಹಾಗೂ ರೇಡಿಯೋಥಿರೆಪಿ ಚಿಕಿತ್ಸೆ ಪ್ರಾರಂಭಿಸಬೇಕಾಗಿತ್ತು. ಆದರೆ, ಬೆಂಗಳೂರಿನಲ್ಲಿ ನಮ್ಮ ಬಂಧುಗಳು ಯಾರೂ ಇಲ್ಲದ ಕಾರಣದಿಂದ ಹಾಗೂ ಹೆಚ್ಚು ಸ್ನೇಹಿತರು ಇಲ್ಲದ ಕಾರಣದಿಂದ ನನಗೆ ಒಂಟಿತನ ಹಾಗೂ ಅಸಹಾಯಕತೆ ಕಾಡಲು ಪ್ರಾರಂಭವಾಯಿತು. ಆದ ಕಾರಣ ಹೆಚ್ಚಿನ ಚಿಕಿತ್ಸೆಯನ್ನು ನನ್ನ ಸ್ವಂತ ಸ್ಥಳವಾದ ಕೋಲ್ಕತ್ತಾದಲ್ಲಿ ಮಾಡಿಸಲು ತೀರ್ಮಾನ ಮಾಡಿದೆ. ನಮ್ಮ ಬಳಿ ಇದ್ದ ಎಲ್ಲಾ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಿ ಹಣವನ್ನು ತೆಗೆದುಕೊಂಡು ಕೊಲ್ಕತ್ತಾಗೆ ತೆರಳಿದೆ.
ಆದರೆ ಕೊಲ್ಕತ್ತಾದಲ್ಲಿ ರೇಡಿಯೋಥಿರೆಪಿ ಚಿಕಿತ್ಸೆ ವ್ಯವಸ್ಥೆ ಅಷ್ಟು ಸರಿ ಇಲ್ಲದ ಕಾರಣ ನಾನು ಮತ್ತೆ ಬೆಂಗಳೂರಿಗೆ ವಾಪಾಸಾಗಿ ಮಲ್ಯ ಆಸ್ಪತ್ರೆಯಲ್ಲಿ ಕೀಮೊಥಿರೆಪಿ ಹಾಗೂ ರೇಡಿಯೋಥಿರೆಪಿ ಚಿಕಿತ್ಸೆಯನ್ನು ಮಾಡಿಸಲು ಪ್ರಾರಂಭಿಸಿದೆ. ಕೆಲವೇ ದಿನಗಳಲ್ಲಿ ನಾವು ಅತ್ಯಂತ ದಯನೀಯ ಸ್ಥಿತಿಯನ್ನು ತಲುಪಿದೆವು. ಆಗ ನನಗೆ ಶಿರಡಿಯಲ್ಲಿ ಆ ಆಟೋ ಚಾಲಕ ಹೇಳಿದ ಮಾತುಗಳು ನೆನಪಿಗೆ ಬಂದು ದುಃಖ ಉಮ್ಮಳಿಸಿ ಬಂದಿತು. ಆ ದಿನದಿಂದ ಮನೆಯವರೆಲ್ಲರೂ ಹಗಲಿರುಳೂ ಸಾಯಿ ಧ್ಯಾನವನ್ನು ಮಾಡಲು ಪ್ರಾರಂಭಿಸಿದೆವು.
ಡಾ.ನಂದಕುಮಾರ್ ಜಯರಾಂ ರವರು ನಮಗೆ ಕೀಮೊಥಿರೆಪಿ ಚಿಕಿತ್ಸೆಗೆ ಡಾ.ನಳಿನಿ ಕಿಲಾರ ಬಳಿ ಹೋಗುವಂತೆ ಸೂಚನೆ ನೀಡಿದರು. ಅದರಂತೆ ನಾವು ಡಾ.ನಳಿನಿ ಕಿಲಾರರವರನ್ನು ಭೇಟಿ ಮಾಡಿದಾಗ ಅವರು ಶಸ್ತ್ರಚಿಕಿತ್ಸೆಯಾಗಿದ್ದರೂ ಸಹ ಕೀಮೊಥಿರೆಪಿ ಚಿಕಿತ್ಸೆಯಿಂದ ಕ್ಯಾನ್ಸರ್ ಗೆಡ್ಡೆಯನ್ನು ಸಂಪೂರ್ಣವಾಗಿ ಗುಣಪಡಿಸುವ ಸಾಧ್ಯತೆ ಬಹಳ ಕಡಿಮೆ ಇದೆ; ಕೇವಲ ಪವಾಡದಿಂದ ಮಾತ್ರ ಗುಣವಾಗಿ ನಿಮ್ಮ ಪತ್ನಿ ಬದುಕುಳಿಯಬಹುದು ಎಂಬ ಮಾತುಗಳನ್ನು ಪದೇ ಪದೇ ಪುನರುಚ್ಚರಿಸಿದರು.
ಡಾಕ್ಟರ್ ರವರ ಈ ಮಾತನ್ನು ಕೇಳಿ ನನ್ನ ಪತ್ನಿ ದುಃಖದಿಂದ ಅಳಲು ಪ್ರಾರಂಭಿಸಿದಳು ಹಾಗೂ ತನಗೆ ಕೀಮೊಥಿರೆಪಿ ಚಿಕಿತ್ಸೆ ಮಾಡಿಸಬೇಡಿ ಎಂದು ಬೇಡಿಕೊಂಡಳು. ಆಗ ನಾನು "ಪವಾಡದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಸಾಯಿಬಾಬಾರವರ ಪಾದ ಕಮಲಗಳಲ್ಲಿ ಸಂಪೂರ್ಣ ಶರಣಾಗತರಾಗಿ ಎಲ್ಲಾ ಒಳಿತು ಕೆಡುಕುಗಳನ್ನು ಅವರ ಮರ್ಜಿಗೆ ಬಿಟ್ಟುಬಿಡೋಣ. ಯಾವ ದಾರಿಗಳೂ ನಮಗೆ ಕಾಣದೇ ಹೋದಾಗ ಸಾಯಿಬಾಬಾರವರು ನಮಗೆ ದಾರಿಯನ್ನು ಖಂಡಿತ ತೋರಿಸುತ್ತಾರೆ " ಎಂದು ಧೃಡವಾಗಿ ಹೇಳಿದೆ.
ಒಟ್ಟಾರೆ 6 ಕೀಮೊಥಿರೆಪಿ ಚಿಕಿತ್ಸೆಗಳನ್ನು ಮಾಡಿಸಬೇಕಾಗಿತ್ತು. ಅದರಲ್ಲಿ 3 ಕೀಮೊಥಿರೆಪಿ ಚಿಕಿತ್ಸೆಗಳು ಮುಗಿದು ರಕ್ತ ಪರೀಕ್ಷೆಯನ್ನು ಮಾಡಲಾಯಿತು. ಆಗ ಕ್ಯಾನ್ಸರ್ ಕಾಯಿಲೆಯು ಪ್ರತಿಶತ 75.9 ರಿಂದ ಪ್ರತಿಶತ 1.9 ಕ್ಕೆ ಒಮ್ಮೆಲೇ ಇಳಿದಿತ್ತು. ಈ ಅಧ್ಬುತ ಪವಾಡವನ್ನು ಕಂಡು ಡಾಕ್ಟರ್ ಗಳು ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದರು ಹಾಗೂ ಇದೊಂದು ಅತ್ಯಂತ ಅಪರೂಪದ ವಿಷಯವಾದ್ದರಿಂದ ಸಂತಸವನ್ನು ಸಹ ವ್ಯಕ್ತಪಡಿಸಿದರು. ಉಳಿದ 3 ಕೀಮೊಥಿರೆಪಿ ಚಿಕಿತ್ಸೆಯನ್ನು ಸಹ ಮುಗಿಸಿ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮತ್ತೊಂದು ಪವಾಡ ನಡೆದಿತ್ತು. ಒಂದೇ ಒಂದು ಕ್ಯಾನ್ಸರ್ ಗೆಡ್ಡೆಯು ಸಹ ಕಂಡು ಬರಲಿಲ್ಲ. ಕೀಮೊಥಿರೆಪಿ ಚಿಕಿತ್ಸೆಯನ್ನು ಮಾಡಿದಾಗ ಕೂದಲು ಉದುರುವುದು, ತೂಕ ಕಳೆದುಕೊಳ್ಳುವುದು ಹಾಗೂ ದೇಹದ ಆರೋಗ್ಯದಲ್ಲಿ ಏರುಪೇರು ಕಂಡು ಬರುವುದು ಸರ್ವೇ ಸಾಮಾನ್ಯ. ಆದರೆ ಸಾಯಿಬಾಬಾರವರ ದಯೆಯಿಂದ ನನ್ನ ಪತ್ನಿಗೆ ಈ ರೀತಿಯ ಯಾವುದೇ ಅಡ್ಡ ಪರಿಣಾಮಗಳು ಆಗಲಿಲ್ಲ ಎನ್ನುವುದು ಮಹದಾಶ್ಚರ್ಯದ ಸಂಗತಿ.
ಇಂದು ನಾನು, ನನ್ನ ಪತ್ನಿ ಹಾಗೂ ನನ್ನ ಮಗಳು ಸಾಯಿಬಾಬಾರವರ ಸಂಪೂರ್ಣ ಕೃಪೆ ಹಾಗೂ ಆಶೀರ್ವಾದವನ್ನು ಪಡೆದಿದ್ದೇವೆ. ಅಲ್ಲದೆ, "ಯಾವುದಾದರೂ ಒಂದು ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡಿ ಸಮಾಜದ ಋಣವನ್ನು ತೀರಿಸಬೇಕೆಂಬ ಸತ್ಯವನ್ನು ನಾನು ಈ ಘಟನೆಯಿಂದ ಅರಿತುಕೊಂಡೆ"- ಶ್ರೀ.ಸುಬ್ರತೋ ಬ್ಯಾನರ್ಜಿ ಯವರ ಸ್ವಂತ ಅನುಭವ.
ಹಿಂದಿಯಿಂದ ಇಂಗ್ಲೀಷ್ ಗೆ ಅನುವಾದ: ರೋಹಿಣಿ ತ್ರಿಭುವನ್
ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದ: ಶ್ರೀಕಂಠ ಶರ್ಮ