Wednesday, November 20, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ದರ್ಶನ ಹಾಗೂ ಆರತಿ ಪಾಸುಗಳಿಗೆ ಕಡಿವಾಣ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದುವರೆಗೆ ಚಾಲ್ತಿಯಲ್ಲಿದ್ದ ಉಚಿತ ದರ್ಶನ ಹಾಗೂ ಆರತಿ ಪಾಸುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿ ಇದೇ ತಿಂಗಳ 18ನೇ ನವೆಂಬರ್ 2013 ರಿಂದ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಶಿರಡಿ ಸಾಯಿಬಾಬಾ ಸಂಸ್ಥಾನದ ಆಡಳಿತ ಸಮಿತಿಯ ಸದಸ್ಯರುಗಳು 26ನೇ ಜನವರಿ 2010 ರಂದು ಸಭೆ ನಡೆಸಿ ಶನಿವಾರ ಹಾಗೂ ಭಾನುವಾರಗಳಂದು ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ವತಿಯಿಂದ ನೀಡಲು ನಿರ್ಧಾರವನ್ನು ಕೈಗೊಂಡಿದ್ದರು. ಸಮಿತಿಯ ಈ ನಿರ್ಧಾರದಿಂದ ಶನಿವಾರ ಹಾಗೂ ಭಾನುವಾರಗಳಂದು ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಪಡೆಯುವವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.  ಇದರಿಂದ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರಿಗೆ ಲಾಭವಾಗಿತ್ತು ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಪಡೆಯುವವರ ಸಂಖ್ಯೆಯು ಹೆಚ್ಚಾಗಿತ್ತು. 

ಮೇಲಿನ ಈ ಬೆಳವಣಿಗೆಗಳನ್ನು ಗಮನಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯು ಇದೇ ತಿಂಗಳ 14ನೇ ನವೆಂಬರ್ 2013 ರಂದು ಸಭೆ ಸೇರಿ 18ನೇ ನವೆಂಬರ್ 2013 ರಿಂದ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸಲು ನಿರ್ಧಾರ ಕೈಗೊಂಡಿತು. ಆದ ಕಾರಣ ಮುಂದಿನ ದಿನಗಳಲ್ಲಿ  ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರನ್ನು ಹೊರತುಪಡಿಸಿ ವಿಐಪಿ ವರ್ಗೀಕರಣಕ್ಕೆ ಸೇರಿದವರನ್ನೂ ಒಳಗೊಂಡು ಎಲ್ಲರೂ ನಾಲ್ಕು ಆರತಿಗಳಿಗೂ ಶುಲ್ಕ ನೀಡಬೇಕಾಗಿರುತ್ತದೆ. 

ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯ ಈ ನಿರ್ಧಾರದಿಂದ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ  ಹಾಗೂ ಆರತಿಯನ್ನು ನೋಡ ಬಯಸುವ  ಸಾಯಿ ಭಕ್ತರಿಗೆ ಬಹಳ ಅನುಕೂಲವಾಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment