ಪವಿತ್ರ ಗುರುಪೂರ್ಣಿಮೆಯ ಅಂಗವಾಗಿ ದಿನೇ ದಿನೇ ಶಿರಡಿಗೆ ಹರಿದುಬರುತ್ತಿರುವ ಸಾಯಿ ಭಕ್ತ ಸಾಗರವನ್ನು ಗಮನದಲ್ಲಿಟ್ಟುಕೊಂಡು ಇದೇ ತಿಂಗಳ 18ನೇ ಜುಲೈ 2013, ಗುರುವಾರದಂದು ಸಾಯಿ ಆಶ್ರಮ ವಸತಿ ಸಮುಚ್ಚಯ- 2 ನೇ ಹಂತವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಲಾಯಿತು. ಸಾಯಿ ಆಶ್ರಮ ವಸತಿ ಸಮುಚ್ಚಯಗಳು ಚನ್ನೈ ನ ಶಿರಡಿ ಸಾಯಿ ಟ್ರಸ್ಟ್ ನ ಶ್ರಿ.ಕೆ.ವಿ.ರಮಣಿಯವರು ಸಾಯಿಬಾಬಾರವರ ಮೇಲಿನ ಪ್ರೀತಿ ಹಾಗೂ ಅವರಿಗೆ ಸೇವೆಯ ಸಂಕೇತವಾಗಿ ನೀಡಿದ ಕೊಡುಗೆಯಾಗಿರುತ್ತದೆ.
ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯವನ್ನು ಬಹಿರಂಗಗೊಳಿಸಿ ಮಾತನಾಡಿದ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಸಮಿತಿಯ ಸದಸ್ಯರೂ ಹಾಗೂ ಕಾರ್ಯಕಾರಿ ಅಧಿಕಾರಿಗಳೂ ಆದ ಶ್ರೀ.ಕಿಶೊರ್ ಮೋರೆಯವರು ಸಾಯಿ ಆಶ್ರಮ-2 ವಸತಿ ಸಮುಚ್ಚಯವು ನೀಮಗಾವ್-ಕೊರಾಳೆ ಪರಿಧಿಯಲ್ಲಿದ್ದು 7 ಎಕರೆಗೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿದೆ; 3,25,190 ಚದರ ಅಡಿಗಳಷ್ಟು ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ; ಈ ಭಕ್ತನಿವಾಸದಲ್ಲಿ 32 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಪ್ರತಿಯೊಂದು ಹಾಲ್ ಗಳಲ್ಲಿ 18 ಹಾಸಿಗೆಗಳನ್ನು ಇರಿಸಲಾಗಿದೆ. ಈ ವಸತಿ ಸಮುಚ್ಚಯದಲ್ಲಿ ಒಟ್ಟು 6 ಕಟ್ಟಡಗಳಿದ್ದು ಒಟ್ಟು 192 ಹಾಲ್ ಗಳನ್ನು ನಿರ್ಮಿಸಲಾಗಿದೆ. ಏಕ ಕಾಲಕ್ಕೆ 5000 ಕ್ಕೂ ಹೆಚ್ಚು ಸಾಯಿ ಭಕ್ತರು ಈ ಭಕ್ತನಿವಾಸದಲ್ಲಿ ಉಳಿದುಕೊಳ್ಳಬಹುದಾಗಿರುತ್ತದೆ. ಈ ವಸತಿ ಸಮುಚ್ಚಯದಲ್ಲಿ ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ ಇರುತ್ತದೆ. ಈ ವಸತಿ ಸಮುಚ್ಚಯದಲ್ಲಿ ಉಳಿದುಕೊಂಡ ಭಕ್ತರ ಸುಖ ಸಂತೋಷಗಳನ್ನು ಗಮನದಲ್ಲಿಟ್ಟುಕೊಂಡು ಕಣ್ಣುಗಳಿಗೆ ಮುದ ನೀಡುವ ಉತ್ತಮ ಗಿಡ ಮರಗಳನ್ನು ಬೆಳೆಸಿದ್ದು ಅತ್ಯಾಕರ್ಷಕ ನೈಸರ್ಗಿಕ ಭೂ ದೃಶ್ಯವನ್ನು ಹೊಂದಿದೆ. ಈ ಆಶ್ರಮಕ್ಕೆ ಬಂದು ಸೇರುವ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸಲಾಗಿದ್ದು ಹಾದಿಯ ಇಕ್ಕೆಲಗಳಲ್ಲೂ ಬೀದಿ ದೀಪಗಳನ್ನು ಹಾಕಲಾಗಿದೆ. ಅಷ್ಟೇ ಅಲ್ಲದೆ, ಈ ಆಶ್ರಮದ ಒಳಗಡೆ ಬಸ್ಸು, ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಇರಿಸಲು ವಿಸ್ತಾರವಾದ ಪಾರ್ಕಿಂಗ್ ಸೌಲಭ್ಯವನ್ನು ಸಹ ನಿರ್ಮಾಣ ಮಾಡಲಾಗಿದೆ. ನೈಸರ್ಗಿಕ ಸಂಪತ್ತು ಎನಿಸಿಕೊಂಡ ನೀರನ್ನು ಉತ್ತಮ ರೀತಿಯಲ್ಲಿ ಬಳಸುವ ನಿಟ್ಟಿನಿಂದ ಆ ನೀರನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಬಿಸಿ ನೀರಿಗಾಗಿ ಸೋಲಾರ್ ಹೇಟಿಂಗ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಸಾಯಿ ಭಕ್ತರು ಉತ್ಸವದ ಸಂದರ್ಭಗಳಲ್ಲಿ ಹಾಗೂ ಪಲ್ಲಕ್ಕಿ ಉತ್ಸವ ಯಾತ್ರೆಯ ಜೊತೆಯಲ್ಲಿ ಬಂದಾಗ ಈ ಸಾಯಿ ಆಶ್ರಮ ವಸತಿ ಸಮುಚ್ಚಯ- 2 ಬಹಳ ಪ್ರಯೋಜನಕಾರಿಯಾಗುತ್ತದೆ.
ಈ ವಸತಿ ಸಮುಚ್ಚಯದ ಬಾಡಿಗೆ 24 ತಾಸುಗಳಿಗೆ ಕೇವಲ 10 ರೂಪಾಯಿಗಳೆಂದು ನಿಗದಿಪಡಿಸಲಾಗಿದ್ದು ಎಲ್ಲ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಾಗಿರುತ್ತದೆ. ಇಲ್ಲಿ ತಂಗುವ ಭಕ್ತರಿಗೆ ಸಂಸ್ಥಾನವು ಮಂಚ ಹಾಗೂ ಹಾಸಿಗೆಯನ್ನು ಸಹ ನೀಡುತ್ತದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿ ಯಾತ್ರೆಯನ್ನು ಕೈಗೊಳ್ಳಬೇಕೆಂದು ಮತ್ತು ಈ ವಸತಿ ಸಮುಚ್ಚಯದ ಪ್ರಯೋಜನ ಪಡೆಯಬೇಕೆಂದು ಕಾರ್ಯಕಾರಿ ಅಧಿಕಾರಿಗಳಾದ ಮೋರೆಯವರುತಿಳಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ : ಕುಮಾರಿ ಶಂಶಾದ್ ಆಲಿ ಬೇಗ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment