Friday, June 28, 2013

ಅನಾರೋಗ್ಯದಿಂದ ಬಳಲುತ್ತಿರುವ ಬಡ ರೋಗಿಗಳನ್ನು ಮೊಬೈಲ್ ಔಷಧಾಲಯದ ಮುಖಾಂತರ ಸಂತೈಸುತ್ತಿರುವ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನ - ಕೃಪೆ: ಶ್ರೀ ಸಾಯಿ ಲೀಲಾ ಮಾಸಪತ್ರಿಕೆ ಮಾರ್ಚ್-ಏಪ್ರಿಲ್  2013 ಸಂಚಿಕೆ



ಶಿರಡಿ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ಉಧಿಯನ್ನು ನೀಡುವ ಮುಖಾಂತರ ಅನೇಕ ಭಕ್ತರ ದೈಹಿಕ ಹಾಗೂ ಮಾನಸಿಕ ಖಾಯಿಲೆಗಳನ್ನು ಹೇಗೆ ನಿವಾರಣೆ ಮಾಡುತ್ತಿದ್ದರೆಂಬ ವಿಷಯವನ್ನು ನಾವುಗಳೆಲ್ಲಾ  ಸಾಯಿ ಸಚ್ಚರಿತ್ರೆಯಲ್ಲಿ ಓದಿದ್ದೇವೆ. ಅದರಿಂದ ಪ್ರೇರೇಪಿತರಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 1964 ನೇ ಇಸವಿಯಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯನ್ನು ಬಡ ರೋಗಿಗಳಿಗಾಗಿ ಪ್ರಾರಂಭಿಸಿತು. ದಿನೇ ದಿನೇ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು 2006 ರಲ್ಲಿ ಸಾಯಿಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಿತು.

ಶಿರಡಿಯ ಸುತ್ತಮುತ್ತ ಹಣದ ಹಾಗೂ ಮಾಹಿತಿಯ ತೊಂದರೆಯಿಂದ ಸರಿಯಾದ ವೈದ್ಯಕೀಯ ನೆರವು ಸಿಗದೇ ಪರದಾಡುತ್ತಿರುವ ಅನೇಕ ಗ್ರಾಮಗಳಿವೆ. ಆದ ಕಾರಣ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಯ ತ್ರಿ-ಸದಸ್ಯ ಸಮಿತಿಯು ಅಂತಹ ಬಡ ರೋಗಿಗಳ ಮನೆ ಬಾಗಿಲಿಗೆ ವೈದ್ಯಕೀಯ ನೆರವನ್ನು ಸಂಪೂರ್ಣ ಉಚಿತವಾಗಿ ನೀಡುವ ನಿರ್ಧಾರವನ್ನು ಕೈಗೊಂಡಿತು.

ಆ ನಿರ್ಧಾರದಂತೆ ಮಕರ ಸಂಕ್ರಾಂತಿಯ ಶುಭ ದಿನವಾದ 14ನೇ ಜನವರಿ 2013 ರಂದು ತ್ರಿ-ಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಅಹಮದ್ ನಗರದ ಜಿಲ್ಲಾ ಮುಖ್ಯ ನ್ಯಾಯಾಧೀಶರೂ ಆದ ಶ್ರೀ ಜಯಂತ್ ಕುಲಕರ್ಣಿಯವರು ಈ ಮೊಬೈಲ್ ಔಷಧಾಲಯದ ಉದ್ಘಾಟನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು.

ಶ್ರೀ ಸಾಯಿಬಾಬಾ ಸಂಸ್ಥಾನದ ಈ ಅನನ್ಯ ಸೇವೆಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಪ್ರಯೋಗಾರ್ಥವಾಗಿ ಮೊದಲ ದಿನ ಈ ಮೊಬೈಲ್ ವ್ಯಾನ್ ಅನ್ನು ತೆಗೆದುಕೊಂಡು ಹೋದಾಗ 306 ರೋಗಿಗಳು ಇದರ ಪ್ರಯೋಜನವನ್ನು ಪಡೆದರು. ಅದರ ವಿವರ ಈ ರೀತಿಯಿದೆ: ನಂದುರ್ಕಿ ಕುರ್ದ್-72, ವೇಸ್-98, ಭದ್ರಾಪುರ್-70, ರಂಜನಗಾವ್ ದೇಶಮುಖ್-26 ಹಾಗೂ ಕಾಕಡಿ-40. ಕೇವಲ 20 ದಿನಗಳಲ್ಲಿ 3417 ರೋಗಿಗಳು ಈ ಮೊಬೈಲ್ ಔಷಧಾಲಯ ಸೇವೆಯ ಪೂರ್ಣ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಈ ಅನನ್ಯ ಸೇವೆಯನ್ನು ನೀಡುತ್ತಿರುವುದಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವನ್ನು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ.

ಈ ಮೊಬೈಲ್ ಔಷಧಾಲಯದಲ್ಲಿ ಒಬ್ಬ ವೈದ್ಯಕೀಯ ಅಧಿಕಾರಿ, ವೈದ್ಯಕೀಯ ಕಾರ್ಯಕರ್ತರು ಹಾಗೂ ರೋಗಿಗಳಿಗೆ ಅಗತ್ಯವಾದ ಎಲ್ಲಾ ವೈದ್ಯಕೀಯ ಉಪಕರಣಗಳಿವೆ.

ಪ್ರಾರಂಭಿದಲ್ಲಿ ಕೇವಲ ಮಂಗಳವಾರ ಹಾಗೂ ಶುಕ್ರವಾರ ಈ ಈ ಮೊಬೈಲ್ ಔಷಧಾಲಯ ಸೇವೆಯನ್ನುನೀಡಲಾಗುತ್ತಿತ್ತು. ಆದರೆ, ಈಗ ವಾರದ ನಾಲ್ಕು ದಿನಗಳು ಅಂದರೆ, ಸೋಮವಾರ, ಮಂಗಳವಾರ, ಗುರುವಾರ ಹಾಗೂ ಶುಕ್ರವಾರಗಳಂದು ಈ ಸೇವೆಯನ್ನು ನೀಡಲಾಗುತ್ತಿದೆ. ಕೇವಲ ಹೆಚ್ಚುವರಿ ದಿನಗಳು ಮಾತ್ರವಲ್ಲದೇ ಸೇವೆಯನ್ನು ನೀಡುವ ಹಳ್ಳಿಗಳ ವಿಸ್ತೀರ್ಣವನ್ನು ಕೂಡ ಹೆಚ್ಚಿಸಲಾಗಿದೆ.

ಶ್ರೀ ಸಾಯಿಬಾಬಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಶ್ರೀ.ಕೌಶಿಕ್ ಮಕ್ವಾನಾ, ಶ್ರೀ.ಸಾಯಿನಾಥ ಆಸ್ಪತ್ರೆಯ  ವೈದ್ಯಕೀಯ ನಿರ್ದೇಶಕರಾದ ಡಾ.ಸಂಜಯ ಪತಾರೆ, ಅಧೀಕ್ಷಕರಾದ ಶ್ರಿ. ಸುಭಾಷ್ ಚಿತ್ರೆಯವರುಗಳು ಈ  ಸೇವೆಯು ದೂರದ ಹಳ್ಳಿಗಳಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಂಡು ಅತ್ಯಂತ ಶ್ರದ್ಧೆಯಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.

ಮರಾಠಿಯಿಂದ  ಆಂಗ್ಲ ಭಾಷೆಗೆ ಅನುವಾದ: ಕುಮಾರಿ.ಶಂಶಾದ್ ಆಲಿ ಬೇಗ್ 
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ: ಶ್ರೀಕಂಠ ಶರ್ಮ  

No comments:

Post a Comment