ಶ್ರೀ ಸಾಯಿ ರುದ್ರಾಧ್ಯಾಯ ಸಂಗೀತ ಕಥೆಯ ಹರಿಕಾರ ಬಹುಮುಖ ಪ್ರತಿಭೆಯ ಸಾಯಿ ಬಂಧು - ಶ್ರೀ.ನರೇಂದ್ರ ಸುಧಾಕರ ರಾವ್ ನಾಶಿರಕರ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ನರೇಂದ್ರ ಸುಧಾಕರ ರಾವ್ ನಾಶಿರಕರ್ ರವರು ಬಹುಮುಖ ಪ್ರತಿಭೆಯುಳ್ಳ ಸಾಯಿ ಬಂಧು. ಇವರು ಪ್ರಖ್ಯಾತ ಸಾಯಿಭಜನ ಗಾಯಕರು, ಬರಹಗಾರರು, ಆಂಕರ್, ಪ್ರವಚನಕಾರರು, ಸಂಗೀತ ಸಂಯೋಜಕರು, ಕವಿಗಳು ಹಾಗೂ ಸಮಾಜ ಸೇವಕರು. ಇವರನ್ನು ಹತ್ತಿರದಿಂದ ಬಲ್ಲ ಸಾಯಿಬಂಧುಗಳು ಹಾಗೂ ಸ್ನೇಹಿತರು ಇವರನ್ನು "ಸಾಯಿ ಸ್ನೇಹಿ" ಎಂಬ ಹೆಸರಿನಿಂದ ಕರೆಯುವ ವಾಡಿಕೆಯಿದೆ. ಇವರು ಮಹಾರಾಷ್ಟ್ರದಾದ್ಯಂತ ತಮ್ಮ "ಶ್ರೀ ಸಾಯಿ ರುದ್ರಾಧ್ಯಾಯ ಸಂಗೀತ ಕಥೆ" ಯ ಮುಖಾಂತರ ಮನೆ ಮಾತಾಗಿದ್ದಾರೆ.
ಇವರು 19ನೇ ಅಕ್ಟೋಬರ್ 1964 ರಂದು ಖ್ಯಾತ ಸಾಯಿ ಮಹಾಭಕ್ತರಾದ ಹರಿ ಸೀತಾರಾಮ ದೀಕ್ಷಿತ್ ಆಲಿಯಾಸ್ ಕಾಕಾ ಸಾಹೇಬ್ ದೀಕ್ಷಿತ್ ರವರ ಹುಟ್ಟೂರಾದ ಮಹಾರಾಷ್ಟ್ರದ ವಾರ್ದಾ ಜಿಲ್ಲೆಯ ಹಿಂಗನಘಾಟ್ ಪಟ್ಟಣದಲ್ಲಿ ಜನಿಸಿದರು. ಇವರ ತಾಯಿ ಶ್ರೀಮತಿ.ರಜನಿ ಸುಧಾಕರ ರಾವ್ ನಾಶಿರಕರ್ ಹಾಗೂ ತಂದೆ ದಿವಂಗತ ಶ್ರೀ.ಸುಧಾಕರ ರಾವ್ ನಾಶಿರಕರ್.
ಇವರು ಬಿ.ಎಸ್.ಸಿ ಪದವೀಧರರು. ಅಲ್ಲದೇ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮರ್ ನಲ್ಲಿ ಡಿಪ್ಲೋಮಾವನ್ನು ಕೂಡ ಗಳಿಸಿದ್ದಾರೆ.
ಇವರು ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಸಮಾಜ ಸೇವಕರಾಗಿ ನಿಷೇಧಿತ ಔಷಧಿಗಳ ವಿರುದ್ಧ ಅದರಲ್ಲೂ ವಿಶೇಷವಾಗಿ ಗುಟ್ಕಾ ಹಾಗೂ ಮಾವಾಗಳ ವಿರುದ್ಧ ನಿರಂತರ ಹೋರಾಟ ಹಾಗೂ ಚಳುವಳಿಗಳನ್ನು ನಡೆಸುತ್ತಾ ತಮಗಿರುವ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಾದ್ಯಂತ ಸೈಕಲ್ ಮೇಲೆ ಸುಮಾರು 5000 ಕಿಲೋಮೀಟರ್ ಗಳಿಗೂ ಹೆಚ್ಚು ದೂರವನ್ನು ಕ್ರಮಿಸುತ್ತಾ ಗುಟ್ಕಾ ವಿರೋಧಿ ಚಳುವಳಿ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.
ಇವರು "ಮಿಷನ್ ಶ್ರೀ ಸಾಯಿರುದ್ರ, ನಾಗಪುರ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಧೂಪಖೇಡಾದ ಸಾಯಿಧಾಮ್ ಆಶ್ರಮದ ಸ್ವಾಮಿ ಬಲದೇವಜಿ ಭಾರತಿ ಅವರ ಮಾರ್ಗದರ್ಶನದಂತೆ ಸಾಯಿಬಾಬಾರವರ ಜೀವನ ಹಾಗೂ ತತ್ವಗಳನ್ನು ಪ್ರಚಾರ ಮಾಡುವ ಉತ್ತಮ ಕಾರ್ಯವನ್ನು ಕೈಗೊಂಡಿದ್ದಾರೆ.
ಶಿರಡಿ ಸಾಯಿಬಾಬಾ ಸಂಸ್ಥಾನ ಪ್ರಕಟಣೆ ಮಾಡಿರುವ ಪವಿತ್ರ "ಶ್ರೀ ಸಾಯಿ ಸಚ್ಚರಿತ್ರೆ" ಯನ್ನು ಆಧರಿಸಿ ಸಾಯಿಬಾಬಾರವರ ಜೀವನ ಹಾಗೂ ತತ್ವಗಳನ್ನು ಪ್ರಚಾರ ಮಾಡುವ ಉದ್ದೇಶವನ್ನು ಮಿಷನ್ ಶ್ರೀ ಸಾಯಿರುದ್ರ, ನಾಗಪುರ ಹೊಂದಿರುತ್ತದೆ. ಈ ಉದ್ದೇಶಕ್ಕಾಗಿ ಶ್ರೀ ನರೇಂದ್ರ ನಾಶಿರಕರ್ ರವರು "ಶ್ರೀ ಸಾಯಿ ರುದ್ರಾಧ್ಯಾಯ" ವೆಂದು ಕರೆಯಲ್ಪಡುವ ಶ್ರೀ ಸಾಯಿ ಸಚ್ಚರಿತ್ರೆಯ 11ನೇ ಅಧ್ಯಾಯವನ್ನು ಸಂಗೀತ ಕಥೆಯ ಮುಖಾಂತರ ಸಾಯಿ ಭಕ್ತರಿಗೆ ತಲುಪಿಸುವ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಶಿರಡಿ ಸಾಯಿಬಾಬಾ ಸಂಸ್ಥಾನದವರು ಶ್ರೀ ಸಾಯಿ ಸಚ್ಚರಿತ್ರೆಯ 11ನೇ ಅಧ್ಯಾಯವನ್ನು ಪ್ರತ್ಯೇಕವಾಗಿ ಪ್ರಕಟಣೆ ಮಾಡುತ್ತಾ ಬಂದಿದ್ದಾರೆ. ಆದ ಕಾರಣ ಈ ಅಧ್ಯಾಯದ ಮಹತ್ವ ಮಹತ್ತರವಾದುದು ಎಂದು ನಮಗೆ ತಿಳಿದುಬರುತ್ತದೆ. ಈ ಅಧ್ಯಾಯದಲ್ಲಿ ಸಾಯಿಬಾಬಾರವರು ಹನ್ನೊಂದು ಅಭಿವಚನವನ್ನು ಉಚ್ಚರಿಸಿರುವುದೇ ಅಲ್ಲದೇ ಇನ್ನೂ ಅನೇಕ ಅಭಿವಚನಗಳನ್ನು ಉಚ್ಚರಿಸಿದ್ದಾರೆ. ಆದುದರಿಂದ ಶ್ರೀ ಸಾಯಿ ಸಚ್ಚರಿತೆಯ 11ನೇ ಅಧ್ಯಾಯಕ್ಕೆ ಅತಿ ಹೆಚ್ಚಿನ ಮಹತ್ವವಿರುತ್ತದೆ. ಮಿಷನ್ ಶ್ರೀ ಸಾಯಿರುದ್ರ, ನಾಗಪುರವು ಈ ಹನ್ನೊಂದನೇ ಅಧ್ಯಾಯವನ್ನು ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಮುದ್ರಿಸಿ ಆಸಕ್ತಿಯುಳ್ಳ ಸಾಯಿ ಭಕ್ತರಿಗೆ ಉಚಿತವಾಗಿ ಹಂಚುವ ಕೆಲಸವನ್ನು ಮಾಡುತ್ತಿದೆ. ಸಾಯಿಬಾಬಾರವರ ಜೀವನ ಹಾಗೂ ತತ್ವಗಳನ್ನು ಪ್ರಚಾರ ಮಾಡುವ ಮುಖಾಂತರ ಜನರಲ್ಲಿ ನಂಬಿಕೆ, ಶಾಂತಿ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಪ್ರಪಂಚದಾದ್ಯಂತ ಹರಡಬಹುದು ಎಂಬ ದೃಢ ನಂಬಿಕೆಯನ್ನು ಮಿಷನ್ ಶ್ರೀ ಸಾಯಿರುದ್ರ, ನಾಗಪುರ ಹೊಂದಿದೆ.
ಶ್ರೀ ಸಾಯಿ ಸಚ್ಚರಿತ್ರೆಯ 11ನೇ ಅಧ್ಯಾಯದಲ್ಲಿ ಶಿರಡಿ ಸಾಯಿಬಾಬಾರವರು ನುಡಿದಿರುವ ಕೆಲವು ಅಭಿವಚನಗಳು ಈ ಕೆಳಕಂಡಂತೆ ಇವೆ:
ಓವಿ 150 - "ಯಾರು ಸಂಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ಗಮನವಿಟ್ಟು ಈ ಅಧ್ಯಾಯವನ್ನು ಪ್ರತಿನಿತ್ಯ ಪಾರಾಯಣ ಮಾಡುವರೋ, ಅವರ ಎಲ್ಲಾ ಕಷ್ಟಗಳು ಈ ಅಧ್ಯಾಯದ ಪಾರಾಯಣದ ಕೊನೆಯಲ್ಲಿ ಪರಿಹಾರವಾಗುತ್ತವೆ".
ಓವಿ 152 - "ಯಾವುದನ್ನು ಪಡೆಯಲು ಸಾಧ್ಯವಿಲ್ಲವೋ ಅದನ್ನು ಪಡೆಯಿರಿ. ಕೊನೆಗೆ ಆಶಾರಹಿತರಾಗಿರಿ. ಅತ್ಯಂತ ಕ್ಲಿಷ್ಟಕರವಾದ ನಾಲ್ಕು ವಿಧದ ಮುಕ್ತಿಯನ್ನು ಮತ್ತು ಪರಮ ಶಾಂತಿಯನ್ನು ಪಡೆಯಿರಿ".
ಓವಿ 153 - "ಹಾಗೆಯೇ ಆಗಲಿ. ಯಾವ ಭಕ್ತರಿಗೆ ಪರಮಾರ್ಥದ ಬ್ರಹ್ಮಾನಂದವನ್ನು ಮತ್ತು ಸರಿಯಾದ ಜ್ಞಾನವನ್ನು ಹೊಂದಬೇಕೆಂದು ಆಸೆಯಿರುವುದೋ, ಅಂತಹ ಭಕ್ತರು ಈ ಅಧ್ಯಾಯವನ್ನು ಪದೇ ಪದೇ ವಿಶೇಷ ಶ್ರದ್ಧೆಯಿಂದ ಪಾರಾಯಣ ಮಾಡಬೇಕು".
ಓವಿ 154 - "ಮನಸ್ಸು ಪರಿಶುದ್ಧವಾಗುತ್ತದೆ. ಸಚ್ಚರಿತ್ರೆಯ ಪಾರಾಯಣದಿಂದ ಆಧ್ಯಾತ್ಮಿಕ ಇಚ್ಚೆ ಪ್ರಬಲವಾಗುತ್ತದೆ. ನೀವು ಇಚ್ಚಿಸಿದ್ದನ್ನು ಪಡೆಯಬಹುದು ಹಾಗೂ ಯಾವ ಇಚ್ಚೆಯು ಅಹಿತಕರವೋ, ಹಾನಿಕಾರಕವೋ ಅದು ನಾಶಗೊಳ್ಳುತ್ತದೆ. ಸ್ವಂತವಾಗಿ ನೀವೇ ಸಾಯಿಬಾಬಾರವರ ಸನಿಹತೆಯನ್ನು ಅನುಭವಿಸಬಹುದು".
ಶ್ರೀ ಸಾಯಿ ರುದ್ರಾಧ್ಯಾಯ ಸಂಗೀತ ಕಥೆಯ ವಿಶೇಷತೆಗಳು:
- ರಾಮಾಯಣ ಹಾಗೂ ಗುರುವಾಣಿಗಳಂತೆ ಶ್ರೀ ಸಾಯಿ ಸಚ್ಚರಿತೆಯ 11ನೇ ಅಧ್ಯಾಯವಾದ ಶ್ರೀ ಸಾಯಿ ರುದ್ರಾಧ್ಯಾಯ ಸಂಗೀತ ಕಥೆಯ ಪ್ರಪ್ರಥಮ ಪ್ರಯತ್ನ ಇದಾಗಿರುತ್ತದೆ.
- ಈ ಕಲಿಯುಗದಲ್ಲಿ ಸಾಯಿಬಾಬಾರವರ ಉಪದೇಶಗಳು ಮಾತ್ರ ಯುವ ಜನಾಂಗದ ಮನಸ್ಸಿನಲ್ಲಿ ಕ್ರಾಂತಿಯನ್ನು ಉಂಟು ಮಾಡಲು ಸಾಧ್ಯ.
- ಸಾಯಿಬಾಬಾರವರ ಉಪದೇಶಗಳು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಒತ್ತಡ ನಿರ್ವಹಣೆಗೆ ಬಹಳ ಸಹಕಾರಿಯಾಗುತ್ತದೆ.
- ಈ ಸಂಗೀತ ಕಥೆಯನ್ನು ನಡೆಸಿಕೊಡುತ್ತಿರುವವರು ಉದ್ಧಾಮ ಪಂಡಿತರಾಗಲೀ, ಜ್ಞಾನಿಯಾಗಲೀ ಅಥವಾ ಮಹಾರಾಜರಾಗಿರದೇ ಒಬ್ಬ ವಿನೀತ ಸಾಯಿ ಬಂಧುವಾಗಿರುತ್ತಾರೆ.
- ಸಾಯಿ ಪ್ರಪಂಚದಲ್ಲಿ ಡಾ.ಅಂಬೇಡ್ಕರ್ ರವರು ಕೂಡ ತಮ್ಮದೇ ಆದ ರೀತಿಯಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅದನ್ನು ಈ ಸಂಗೀತ ಕಥೆಯಲ್ಲಿ ತಿಳಿಸಲಾಗುತ್ತದೆ.
- ಇಂದಿನ ಆಧುನಿಕ ಪ್ರಪಂಚದಲ್ಲಿ ಕೆಲವು ದುಷ್ಟ ಶಕ್ತಿಗಳು ಭಕ್ತರಲ್ಲಿ ಸಾಯಿಬಾಬಾರವರ ಬಗ್ಗೆ ಇರುವ ಅಂಧ ಶ್ರದ್ಧೆಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅಂತಹ ದುಷ್ಟ ಶಕ್ತಿಗಳ ಹತ್ತಿರ ವ್ಯವಹರಿಸುವಾಗ ಸಮರ್ಥವಾಗಿ ನಿಭಾಯಿಸಲು ಇರಬೇಕಾದ ಗುಣಗಳನ್ನು ಈ ಸಂಗೀತ ಕಥೆಯ ಮುಖಾಂತರ ಭಕ್ತರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.
ಪ್ರವಚನಕಾರರಾಗಿ, ಶ್ರೀ.ನರೇಂದ್ರ ನಾಶಿರಕರ್ ರವರು ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್, ಅಹಮದ್ ನಗರ, ಚಂದ್ರಾಪುರ, ಬೀಡ್ ನಾಗಪುರ, ವಾರ್ದಾ, ವರೋರ, ರಾಮ್ಟೆಕ್ ಹಾಗೂ ಇನ್ನು ಹಲವಾರು ಕಡೆಗಳಲ್ಲಿ ಶ್ರೀ ಸಾಯಿ ರುದ್ರಾಧ್ಯಾಯ ಸಂಗೀತ ಕಥೆಗಳನ್ನು ನಡೆಸಿಕೊಟ್ಟಿದ್ದಾರೆ.
ಸಂಗೀತ ಸಂಯೋಜಕ ಹಾಗೂ ಗಾಯಕರಾಗಿ ಇವರು 4 ಧ್ವನಿ ಸುರಳಿಗಳನ್ನು ಹೊರತಂದಿದ್ದಾರೆ. ಅವು ಯಾವುವೆಂದರೆ: 1.ಮಾ ದೋಂಘರ್ಗಡ್ ವಾಲಿ - ಟಿ-ಸೀರೀಸ್ - ಗಾಯಕರು ಹಾಗೂ ಸಂಗೀತ ಸಂಯೋಜಕರು. 2. ಶಿವರಾಯಾಚಾ ಶೂರವೀರನೋ - ವೀನಸ್ 3. ಆಜಾ ಬಂದೇ ಧೂಪಗಾವ್, ಜಹಾ ಮಿಲೇಗೀ ಸಾಯಿಚಾವ್ (ಗಾಯಕರು: ಸುರೇಶ್ ವಾಡಕರ್, ರಾಜಾ ಹಾಸನ್, ಸಂಭಾಷಣೆ: ಸುಧೀರ್ ದಳವಿ, ಮನೋಹರ್ ಮಹಾಜನ್ ಮತ್ತು ಸ್ಮಿತಾ ಜಯಕರ್) - ಸಂಗೀತ ಸಂಯೋಜಕರು 4. ಮೇರೇ ಛೋಟೀಸೀ ಕುಟಿಯಾ ಮೇ ಸಾಯಿ ಪದಾರೋನಾ - ಸಂಗೀತ ಸಂಯೋಜಕರು. ಇವರು ಆಜಾ ಬಂದೇ ಧೂಪಗಾವ್, ಜಹಾ ಮಿಲೇಗೀ ಸಾಯಿಚಾವ್ ಮತ್ತು ಮೇರೇ ಛೋಟೀಸೀ ಕುಟಿಯಾ ಮೇ ಸಾಯಿ ಪದಾರೋನಾ ಧ್ವನಿಸುರಳಿಗಳ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಧೂಪಗಾವ್ ನಲ್ಲಿರುವ ಸಾಯಿಧಾಮ್ ಮಂದಿರದ ಅನ್ನದಾನಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
ಇವರು ರಾಷ್ಟ್ರ ಪ್ರೇರಣಾ ಜ್ಯೋತಿ ಯಾತ್ರೆ ಗಾಗಿ ರಚಿಸಿ ಸಂಗೀತ ಸಂಯೋಜನೆ ಮಾಡಿದ ಶೀರ್ಷಿಕೆ ಗೀತೆಗಾಗಿ ಇವರನ್ನು ಹಿಂದಿನ ರಾಷ್ಟ್ರಪತಿಗಳಾದ ಶ್ರೀಮತಿ.ಪ್ರತಿಭಾ ಪಾಟೀಲ್ ರವರು 9ನೇ ಆಗಸ್ಟ್ 2010 ರಂದು ರಾಷ್ಟ್ರಪತಿ ಭವನದಲ್ಲಿ ನೆಡೆದ ಸಮಾರಂಭದಲ್ಲಿ ಸನ್ಮಾನ ಮಾಡಿರುತ್ತಾರೆ. ಇವರ ಸಮಾಜ ಸೇವಾ ಕೈಂಕರ್ಯವನ್ನು ಮೆಚ್ಚಿ ಇನ್ನು ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಇವರು ಶ್ರೀಮತಿ.ಮೋನಿಕಾ ನರೇಂದ್ರ ನಾಶಿರಕರ್ ರವರನ್ನು ವಿವಾಹವಾಗಿದ್ದು ನಾಗಪುರದ ಸ್ವಗೃಹದಲ್ಲಿ ಧರ್ಮಪತ್ನಿ, ಅತ್ತೆ ಮಾವನವರೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ನರೇಂದ್ರ ನಾಶಿರಕರ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ. "ಶ್ರೀ ಸಾಯಿ ರುದ್ರಾಧ್ಯಾಯ ಸಂಗೀತ ಕಥೆ" ಯನ್ನು ತಮ್ಮ ಸ್ಥಳಗಳಲ್ಲಿ ಏರ್ಪಡಿಸಲು ಇಚ್ಚಿಸುವ ಸಾಯಿ ಭಕ್ತರು ಅವರನ್ನು ನೇರವಾಗಿ ಈ ಕೆಳಗೆ ನೀಡಿರುವ ವಿಳಾಸದಲ್ಲಿ ಸಂಪರ್ಕಿಸಬಹುದಾಗಿದೆ.
ವಿಳಾಸ:
ಶ್ರೀ.ನರೇಂದ್ರ ಸುಧಾಕರ ರಾವ್ ನಾಶಿರಕರ್
ಕೇರ್ ಆಫ್. ಶ್ರೀ.ಜಿ.ಜಿ.ಪರ್ದಿ,
ಪ್ಲಾಟ್ ನಂ.48, ಪರ್ಯಾವರಣ ನಗರ,
ಸೋಮಾಲವಾಡ, ವಾರ್ದಾ ರಸ್ತೆ,
ನಾಗಪುರ-25,
ಮಹಾರಾಷ್ಟ್ರ, ಭಾರತ.
ದೂರವಾಣಿ ಸಂಖ್ಯೆಗಳು:
+91 98503 52130/+91 86005 43706
ಇ-ಮೈಲ್ ವಿಳಾಸ:
sairudra11@gmail.com
ಫೇಸ್ ಬುಕ್ ವಿಳಾಸ:
https://www.facebook.com/narendra.nashirkar.5
ಸಾಯಿಬಾಬಾ ಧ್ವನಿಸುರಳಿಗಳು:
ಆಜಾ ಬಂದೇ ಧೂಪಗಾವ್, ಜಹಾ ಮಿಲೇಗೀ ಸಾಯಿಚಾವ್ ಮತ್ತು ಮೇರೇ ಛೋಟೀಸೀ ಕುಟಿಯಾ ಮೇ ಸಾಯಿ ಪದಾರೋನಾ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment