ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಗೆ 14ನೇ ಮೇ 2014 ರಂದು 50 ವರ್ಷಗಳು ತುಂಬಲಿದ್ದು ತನ್ನ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯು ಹಲವಾರು ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಆಯೋಜಿಸಿತ್ತು ಹಾಗೂ ಸುಮಾರು 2000 ರೋಗಿಗಳು ಈ ಶಿಬಿರಗಳ ಪ್ರಯೋಜನವನ್ನು ಪಡೆದರು.
ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ ತಮ್ಮ ಬಳಿಗೆ ಬರುತ್ತಿದ್ದ ಹಲವಾರು ರೋಗಿಗಳ ರೋಗವನ್ನು ಪವಿತ್ರ ಉಧಿಯನ್ನು ನೀಡುವ ಮುಖಾಂತರ ಗುಣಪಡಿಸುತ್ತಿದ್ದರೆಂದು ಶ್ರೀ ಸಾಯಿ ಸಚ್ಚರಿತ್ರೆಯಲ್ಲಿ ನಾವುಗಳೆಲ್ಲಾ ಓದಿದ್ದೇವೆ. ಶ್ರೀ ಸಾಯಿಬಾಬಾರವರು ಪ್ರಾರಂಭಿಸಿದ ಈ ಮಹೋನ್ನತ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು 1964ನೇ ಇಸವಿಯಲ್ಲಿ ಶ್ರೀ ಸಾಯಿನಾಥ ಆಸ್ಪತ್ರೆಯನ್ನು ಪ್ರಾರಂಭಿಸಿತು.
ಈ ಸುವರ್ಣ ಮಹೋತ್ಸವದ ಅಂಗವಾಗಿ 3ನೇ ಮೇ 2014 ರಂದು ಉಚಿತ ಮಧುಮೇಹ ತಪಾಸಣಾ ಹಾಗೂ ಮಾರ್ಗದರ್ಶನ ಶಿಬಿರವನ್ನು ಆಯೋಜಿಸಲಾಗಿತ್ತು. 160 ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಈ ರೋಗಿಗಳನ್ನು ಔರಂಗಾಬಾದ್ ನ ಖ್ಯಾತ ಮಧುಮೇಹ ರೋಗ ತಜ್ಞರಾದ ಡಾ.ದೀಪಕ್ ಭೋಸ್ಲೆಯವರು ತಪಾಸಣೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಿದರು. 5ನೇ ಮೇ 2014 ರಿಂದ 10ನೇ ಮೇ 2014 ರವರೆಗೆ ಉಚಿತ ನೇತ್ರ ತಪಾಸಣಾ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಆಯೋಜಿಸಲಾಗಿತ್ತು. 1346 ರೋಗಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದರು. ಅಲ್ಲದೆ 175 ರೋಗಿಗಳಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಯಿತು. 11ನೇ ಮೇ 2014 ರಿಂದ 21ನೇ ಮೇ 2014ರವರೆಗೆ ಉಚಿತ ಕಿವಿ ತಪಾಸಣಾ ಶಿಬಿರ ಹಾಗೂ ಶ್ರವಣ ಸಾಧನದ ವಿತರಣಾ ಶಿಬಿರವನ್ನು ಆಯೊಜಿಸಲಾಗಿತ್ತು. ಇದರಲ್ಲಿ 855 ರೋಗಿಗಳಿಗೆ ತಪಾಸಣೆ ಮಾಡಲಾಯಿತು ಹಾಗೂ 300 ರೋಗಿಗಳಿಗೆ ಶ್ರಾವಣ ಸಾಧನವನ್ನು ವಿತರಿಸಲಾಯಿತು. 20ನೇ ಮೇ 2014 ರಿಂದ 24ನೇ ಮೇ 2014 ರವರೆಗೆ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ ಉದ್ಯೋಗಿಗಳಿಗಾಗಿ "ಒತ್ತಡ ನಿಯಂತ್ರಣ ಹಾಗೂ ಸುಖೀ ಜೀವನ" ಎಂಬ ವಿಷಯದ ಬಗ್ಗೆ ನಾಲ್ಕು ದಿನಗಳ ಕಾರ್ಯಾಗಾರವನ್ನು ಆಯೊಜಿಸಲಾಗಿತ್ತು. ಅಲ್ಲದೇ ಶ್ರೀ ಸಾಯಿನಾಥ ಆಸ್ಪತ್ರೆಯ ಹೊರ ರೋಗಿ ವಿಭಾಗದ ರೋಗಿಗಳಿಗೆ ಮೇ ತಿಂಗಳಿನಲ್ಲಿ ಉಚಿತ ಕೇಸ್ ಪೇಪರ್ ಗಳನ್ನು ವಿತರಿಸಲಾಯಿತು.
ಮೇಲಿನ ಈ ಎಲ್ಲಾ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆವರು ಉತ್ತಮ ಮಾರ್ಗದರ್ಶನವನ್ನು ನೀಡಿದರು. ವೈದ್ಯಕೀಯ ನಿರ್ದೇಶಕರಾದ ಡಾ.ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ್ ಪತಾರೆ, ಡಾ.ಪ್ರಫುಲ್ ಪೋರ್ವಾಲ್, ಡಾ.ಬಿ.ಬಿ.ಸಬಲೆ, ನೇತ್ರ ತಜ್ಞರಾದ ಡಾ.ಸುನೀಲ್ ಸೊಂಟಕ್ಕೆ, ಡಾ.ಶ್ರೀಮತಿ.ಮನೀಷಾ ಅಗರವಾಲ್, ಇ.ಎನ್.ಟಿ. ತಜ್ಞರಾದ ಡಾ.ರವೀಂದ್ರ ಕುಲಕರ್ಣಿ, ಸಾಯಿಬಾಬಾ ಸಂಸ್ಥಾನದ ಅಧೀಕ್ಷಕರಾದ ಶ್ರೀ.ಶೆಲ್ಕೆ, ಎಲ್ಲಾ ಸ್ತ್ರೀ ಹಾಗೂ ಪುರುಷ ದಾದಿಯರು ಮತ್ತು ಸಾಯಿಬಾಬಾ ಸಂಸ್ಥಾನದ ಎಲ್ಲಾ ಉದ್ಯೋಗಿಗಳು ಬಹಳವೇ ಶ್ರಮವಹಿಸಿ ಮೇಲೆ ತಿಳಿಸಿದ ಎಲ್ಲಾ ವೈದ್ಯಕೀಯ ಶಿಬಿರಗಳೂ ಅತ್ಯಂತ ಯಶಸ್ವಿಯಾಗಿ ನಡೆಯುವಲ್ಲಿ ಪಾತ್ರವಹಿಸಿದ್ದಾರೆ.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment