Saturday, January 26, 2013


ಪುಲಗಾವ್ ಸಾಯಿಬಾಬಾ ಮಂದಿರ, ವಾರ್ದಾ ಜಿಲ್ಲೆ, ಮಹಾರಾಷ್ಟ್ರದ ವತಿಯಿಂದ ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ

ಪುಲಗಾವ್ ಸಾಯಿಬಾಬಾ ಮಂದಿರ, ವಾರ್ದಾ ಜಿಲ್ಲೆ, ಮಹಾರಾಷ್ಟ್ರದ ವತಿಯಿಂದ ಇದೇ ತಿಂಗಳ 30ನೇ ಜನವರಿ 2013 (ಬುಧವಾರ) ರಿಂದ ಮುಂದಿನ ತಿಂಗಳ 1ನೇ ಫೆಬ್ರವರಿ 2013 (ಶುಕ್ರವಾರ) ರವರೆಗೆ ನೂತನ ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.




ಶಿರಡಿ ಸಾಯಿಬಾಬಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆಯನ್ನು ಧೂಪಖೇಡಾದ ಸಾಯಿಧಾಮ್ (ಚಾಂದ್ ಭಾಯಿ ಪಾಟೀಲರ ಗ್ರಾಮ) ನ ಶ್ರೀ.ಸಾಯಿ ಸಾಗರ್ ಸ್ವಾಮಿ ಬಲದೇವಜಿ ಭಾರತಿಯವರು ನೆರವೇರಿಸಲಿದ್ದಾರೆ. ಸುಪ್ರಸಿದ್ಧ ಸಾಯಿಬಾಬಾ ಚಿತ್ರಕಾರರಾದ ಶ್ರೀ.ಸುನೀಲ್ ಶೇಗಾವಂಕರ್, ಶ್ರೀ.ಕಿಶೋರ್ ಪಾರುಲ್ಕರ್ (ಸಾಯಿಬಾಬಾರವರ ಪಾದುಕೆಗಳನ್ನು ಹೊಂದಿರುವರ ಮಧ್ಯಪ್ರದೇಶದ ಹರ್ದಾ ನಿವಾಸಿ), ಶ್ರೀ.ಸುಭಾಷ್ ಬೂಟಿ (ಸಾಯಿ ಮಹಾಭಕ್ತರಾದ ಶ್ರೀ.ಬಾಪು ಸಾಹೇಬ್ ಬೂಟಿಯವರ ಮೊಮ್ಮಗ), ಶ್ರೀ.ಪ್ರಮೋದ್ ಭೀಷ್ಮ (ಶ್ರೀ.ಶ್ರೀಕೃಷ್ಣ ಜಾಗೇಶ್ವರ ಭೀಷ್ಮರವರ ಮೊಮ್ಮಗ), ಶ್ರೀ.ಬಾಬುಲ್ ಜೀ ಪಠಾಣ್ (ಧೂಪಖೇಡಾದ ಚಾಂದ್ ಭಾಯಿ ಪಾಟೀಲರ ಮರಿಮಗ), ನಾಸಿಕ್ ನ ಖ್ಯಾತ ಸಾಯಿ ಭಕ್ತೆಯಾದ ಶ್ರೀಮತಿ.ಆಶಾ ದೀದಿ ನಾಯರ್ ಹಾಗೂ ಇನ್ನೂ ಹಲವಾರು ಗಣ್ಯವ್ಯಕ್ತಿಗಳು ಈ ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ:

30ನೇ ಜನವರಿ 2013 - ಸಂಜೆ 7:00 ರಿಂದ 10:00 - ನಾಗ್ಪುರದ ಶ್ರೀ.ನರೇಂದ್ರ ನಾಶಿರಕರ್ ರವರಿಂದ ಶ್ರೀ.ಸಾಯಿ ರುದ್ರಾಧ್ಯಾಯದ ಸಂಗೀತ ಕಥನ.

31ನೇ ಜನವರಿ 2013 - ಸಂಜೆ ಸಂಜೆ 7:00 ರಿಂದ 10:00 -  ಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ಪಾರಸ್ ಜೈನ್ (ಶಿರಡಿವಾಲೇ) ಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ.

1ನೇ ಫೆಬ್ರವರಿ 2013 - ಮಧ್ಯಾನ್ಹ 12:00 ರಿಂದ ಸಾಯಿ ಮಹಾಪ್ರಸಾದ ವಿತರಣೆ.

ಸಾಯಿ ಭಕ್ತರು ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಳಾಸವನ್ನು ಸಾಯಿಭಕ್ತರು ಸಂಪರ್ಕಿಸತಕ್ಕದ್ದು.

ಶ್ರೀ ಸಾಯಿಧಾಮ ಚಾರಿಟಬಲ್ ಟ್ರಸ್ಟ್
ಪುಲಗಾವ್ - 442 302,
ವಾರ್ದಾ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿ: ಶ್ರೀ.ಅಶೋಕ್ ಚಾಂದಕ್
ಸಂಪರ್ಕಿಸಬೇಕಾದ ದೂರವಾಣಿ: +91 98906 94503 /+91 99223 65111
ಇ-ಮೈಲ್ ವಿಳಾಸ: mohinisai7@gmail.com

ಕನ್ನಡ ಅನುವಾದ: ಶ್ರೀಕಂಠಶರ್ಮ

Friday, January 18, 2013

ಪ್ರಖ್ಯಾತ ಸಾಯಿ ಬರಹಗಾರ್ತಿ ಹಾಗೂ ಹವ್ಯಾಸಿ ಚಿತ್ರಗಾರ್ತಿ ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆ ಮತ್ತು ಪ್ರಖ್ಯಾತ ಸಾಯಿ ಬರಹಗಾರ್ತಿ ಹಾಗೂ ಹವ್ಯಾಸಿ ಚಿತ್ರಗಾರ್ತಿಯಾಗಿದ್ದಾರೆ. 

ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು 15ನೇ ಜನವರಿ 1954 ರಂದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಜನಿಸಿದರು.

ಇವರು ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ.ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೇ, ಜವಳಿ ವಿನ್ಯಾಸ ವಿಭಾಗದಲ್ಲಿ ಡಿಪ್ಲೊಮಾ ಗಳಿಸಿದ್ದಾರೆ.

ಇವರು ಹಲವಾರು ಶಿರಡಿ ಸಾಯಿಬಾಬಾರವರ ಸಮಕಾಲೀನ ಭಕ್ತರುಗಳ ವಂಶಸ್ಥರನ್ನು ಮುಖತಃ ಭೇಟಿ ಮಾಡಿ ಅವರ ಸಂದರ್ಶನವನ್ನು ಮಾಡುತ್ತಿದ್ದಾರೆ ಮತ್ತು ಅವರುಗಳು ನೀಡಿದ ಮಾಹಿತಿಯ ಅಧಾರದ ಮೇಲೆ ಆ ಮಹಾಭಕ್ತರುಗಳ ಜೀವನ ಚರಿತ್ರೆಯನ್ನು ಬರೆಯತ್ತಿದ್ದಾರೆ.

ಇವರು 75 ರಿಂದ 80 ಸಾಯಿ ಮಹಾಭಕ್ತರ ಬಗ್ಗೆ ಮಾಹಿತಿಯನ್ನು ಕಲೆಹಾಕುವ ಯೋಜನೆಯನ್ನು ಹೊಂದಿದ್ದಾರೆ ಮತ್ತು ಅವರುಗಳು ನೀಡಿದ ಮಾಹಿತಿಯ ಅಧಾರದ ಮೇಲೆ ಭಕ್ತ ವೃಂದಕ್ಕೆ ಸಾಯಿಬಾಬಾರವರು ನೀಡುವ ಸಂದೇಶ, ಅವರ ಜೀವನ ಶೈಲಿ ಮತ್ತು ಅವರ ಬಗ್ಗೆ ಮತ್ತಿತರ ಪ್ರಮುಖ ಮಾಹಿತಿಗಳನ್ನು ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಇವರು ಸಾಯಿ ಮಹಾಭಕ್ತರುಗಳ ಜೀವನದ ಬಗ್ಗೆ ಬರೆದ ಲೇಖನಗಳು 2002ನೇ ಇಸವಿಯಿಂದ ಶಿರಡಿ ಸಾಯಿಬಾಬಾ ಸಂಸ್ಥಾನದ "ಶ್ರೀ ಸಾಯಿಲೀಲಾ" ದ್ವೈಮಾಸಿಕ ಪತ್ರಿಕೆಯಲ್ಲಿ "Sainchyaa Saanidhyaat" ಎಂಬ ಶೀರ್ಷಿಕೆಯ ಅಡಿಯಲ್ಲಿ ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಕಟವಾಗುತ್ತಿವೆ.  ಅಷ್ಟೇ ಅಲ್ಲದೇ, ಇವರು ಸಾಯಿಬಾಬಾರವರ ಬಗ್ಗೆ ಬರೆದ ಇತರ ಲೇಖನಗಳೂ ಕೂಡ ಶ್ರೀ ಸಾಯಿಲೀಲಾ ದ್ವೈಮಾಸಿಕ ಪತ್ರಿಕೆ ಹಾಗೂ ಇನ್ನಿತರ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.

ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರ ಪತಿ ಶ್ರೀ.ಸುಧೀರ್ ದಿವಾಡಕರ್ ರವರು "Sainchyaa Saanidhyaat" ಎಂಬ ಶೀರ್ಷಿಕೆಯ ಅಡಿಯಲ್ಲಿ ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ಆಂಗ್ಲ ಭಾಷೆಗೆ "In Sai's Proximity" ಎಂಬ ಶೀರ್ಷಿಕೆಯ ಅಡಿಯಲ್ಲಿ ತರ್ಜುಮೆ ಮಾಡುತ್ತಿದ್ದಾರೆ ಮತ್ತು ಅವುಗಳು ಶಿರಡಿ ಸಾಯಿಬಾಬಾ ಸಂಸ್ಥಾನದ "ಶ್ರೀ ಸಾಯಿಲೀಲಾ" ದ್ವೈಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. 



ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು ಹವ್ಯಾಸಿ ಚಿತ್ರಗಾರ್ತಿಯಾಗಿದ್ದು ಆಯಿಲ್ ಪೈಂಟಿಂಗ್ ನಲ್ಲಿ ಸಾಯಿಬಾಬಾರವರ ಚಿತ್ರಗಳನ್ನು ಬಹಳ ಸುಂದರವಾಗಿ ಬರೆಯುತ್ತಾರೆ. ಇವರು ರಚಿಸಿದ ಅನೇಕ ಸಾಯಿಬಾಬಾರವರ ಚಿತ್ರಗಳು ಶ್ರೀ ಸಾಯಿಲೀಲಾ ದ್ವೈಮಾಸಿಕ ಪತ್ರಿಕೆಯ ಮುಖಪುಟ ಹಾಗೂ ಒಳಪುಟಗಳಲ್ಲಿ ಪ್ರಕಟವಾಗಿರುತ್ತವೆ.

ಇವರು ಸಾಯಿಬಾಬಾರವರ ಸಮಕಾಲೀನ ಮಹಾಭಕ್ತರಾದ ಶ್ರೀ ದಾಸಗಣುರವರ ಬಗ್ಗೆ ಮರಾಠಿಯಲ್ಲಿ ಬರೆದ ಜೀವನಚರಿತ್ರೆಯು 2010 ನೇ ಇಸವಿಯಲ್ಲಿ ಪ್ರಕಟವಾಗಿರುತ್ತದೆ.

ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ಮತ್ತು ಶ್ರೀ.ಸುಧೀರ್ ದಿವಾಡಕರ್ ರವರು "ಶ್ರೀ ಸಾಯಿಲೀಲಾ" ದ್ವೈಮಾಸಿಕ ಪತ್ರಿಕೆಯಲ್ಲಿ "Sainchyaa Saanidhyaat" ಎಂಬ ಶೀರ್ಷಿಕೆಯ ಅಡಿಯಲ್ಲಿ ಮರಾಠಿ ಭಾಷೆಯಲ್ಲಿ ಪ್ರಕಟವಾದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಗೊಳಿಸುವ ಇಚ್ಚೆಯನ್ನು ಹೊಂದಿದ್ದಾರೆ.

ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶ್ರೀ.ಸುಧೀರ್ ದಿವಾಡಕರ್ ರವರನ್ನು ವಿವಾಹವಾಗಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಪ್ರಸ್ತುತ ಇವರು ಮುಂಬೈ ನಗರದ ದಾದರ್ ಪೂರ್ವದಲ್ಲಿರುವ ಸ್ವಗೃಹದಲ್ಲಿ  ತಮ್ಮ ಪತಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್
ನಂ.61,  ಹಿಂದೂ ಕಾಲೋನಿ,
ದಾದರ್ ಪೂರ್ವ, 
ಮುಂಬೈ - 400 014, 
ಮಹಾರಾಷ್ಟ್ರ, ಭಾರತ

ದೂರವಾಣಿ ಸಂಖ್ಯೆಗಳು:

+91 93239 71117/+91 93233 43583

ಇ-ಮೈಲ್ ವಿಳಾಸ:

mugdha54@rediffmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, January 8, 2013

ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಕನ್ನಡ ಗದ್ಯರೂಪದ ಬಿಡುಗಡೆ ಸಮಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ

ದಿವಂಗತ ಶ್ರೀ ಹೇಮಾಡಪಂತರ ಮೇರು ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯ ಮರಾಠಿ ಗದ್ಯಾನುವಾದವನ್ನು ಪುಣೆಯ ಶ್ರೀ.ಪವಾರ್ ಕಾಕಾರವರು ಬಹಳ ಸುಂದರವಾಗಿ ಮಾಡಿರುತ್ತಾರೆ. ಅದರ ಕನ್ನಡ ಅನುವಾದವನ್ನು ಮುಂಬೈನ ಶ್ರೀ.ಸಿ.ಎಸ್.ದಿನೇಶ್ ರವರು ಮಾಡಿದ್ದು ಅದರ ಲೋಕಾರ್ಪಣೆ ಸಮಾರಂಭವು ಇದೇ ತಿಂಗಳ 31ನೇ ಜನವರಿ 2013, ಗುರುವಾರದಂದು ಬೆಂಗಳೂರಿನ ತ್ಯಾಗರಾಜನಗರದ ಶ್ರೀ.ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯಲಿದ್ದು, ಬೆಂಗಳೂರಿನ ಚಿನ್ಮಯ ಮಿಷನ್ ನ ಪರಮ ಪೂಜ್ಯ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು ಈ ಮಹೋನ್ನತ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ.

ಅನುವಾದಕರಾದ ಶ್ರೀ.ಸಿ.ಎಸ್.ದಿನೇಶ್ ರವರು ಕನ್ನಡದ ಪ್ರಸಿದ್ಧ ಕವಿಗಳಾದ ದಿವಂಗತ ಡಾ.ಡಿ.ವಿ.ಗುಂಡಪ್ಪನವರ "ಮಂಕುತಿಮ್ಮನ ಕಗ್ಗ" ದ ವಿವರಣೆಗಳಿಂದ ಕೃತಿಯನ್ನು ಬಹಳ ಸುಂದರವಾಗಿ ಅಲಂಕರಿಸಿದ್ದಾರೆ.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಲೋಕಾರ್ಪಣೆಗೊಳ್ಳಲಿರುವ ಶ್ರೀ.ಸಾಯಿ ಸಚ್ಚರಿತ್ರೆಯ ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟವನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ: 



ಕನ್ನಡ ಅನುವಾದ: ಶ್ರೀಕಂಠಶರ್ಮ

Thursday, January 3, 2013

ಹುಬ್ಬಳ್ಳಿಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳ (ನೋಂದಣಿ), ಉಣಕಲ್ ರೈಲು ನಿಲ್ದಾಣದ ಎದುರುಗಡೆ, ಶಿರಡಿ ನಗರ, ಹುಬ್ಬಳ್ಳಿ-580 032, ಧಾರವಾಡ ಜಿಲ್ಲೆ, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಶಿರಡಿ ನಗರದ ಉಣಕಲ್ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೆಂಟ್ರಲ್ ಸ್ಕೂಲ್ ನ ಹತ್ತಿರ ಇರುತ್ತದೆ. ದೇವಾಲಯವು ಹುಬ್ಬಳ್ಳಿಯ ಉಣಕಲ್ ರೈಲು ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ. ದೇವಾಲಯವನ್ನು 30,000 ಚದರ ಅಡಿ ವಿಸ್ತಾರವಾದ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ದೇವಾಲಯದ ಭೂಮಿಪೂಜೆಯನ್ನು 1988 ನೇ ಇಸವಿಯ ಯುಗಾದಿ ಹಬ್ಬದ ದಿನದಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 24ನೇ ಮಾರ್ಚ್ 1993 ರಂದು ಪ್ರಖ್ಯಾತ ಸಾಯಿಭಕ್ತರಾದ ಸಾಯಿರತ್ನ ಶ್ರೀ.ಎಂ.ರಂಗಾಚಾರಿಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು, ಬೆಂಗಳೂರಿನ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾದ ಶ್ರೀ.ಸಿ.ವಿ.ಭಾಸ್ಕರ ರಾವ್ ಮತ್ತು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಕೆ.ಆರ್.ಗೋಪಿನಾಥ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷಯಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಮಹಡಿಯಲ್ಲಿರುವ ಗರ್ಭಗುಡಿಯಲ್ಲಿ 5-1/2  ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಕಪ್ಪು ಶಿಲೆಯ ಗಣಪತಿ, ಅಮೃತಶಿಲೆಯ ದತ್ತಾತ್ರೇಯ ದೇವರ ವಿಗ್ರಹಗಳನ್ನು  ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.

ದೇವಾಲಯದ ನೆಲಮಾಳಿಗೆಯಲ್ಲಿ ಶ್ರೀ ವಿವೇಕಾನಂದ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಇದರ ಉದ್ಘಾಟನೆಯನ್ನು 25ನೇ ಮಾರ್ಚ್ 1993 ರಂದು ಅಂದಿನ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷೆಯಾದ ಪ್ರೊಫೆಸರ್ ಡಾ.ಲೇಖಾ ಪಾಠಕ್ ರವರು ನೆರವೇರಿಸಿರುತ್ತಾರೆ. ಈ ಸ್ಥಳದಲ್ಲಿರುವ ಗೋಡೆಯಲ್ಲಿ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಎರಡು ಭಾವಚಿತ್ರಗಳ ಮಧ್ಯದಲ್ಲಿ ಪವಿತ್ರ "ಓಂ" ಅನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ.

ಶ್ರೀ ಸಾಯಿಬಾಬಾ ಭಕ್ತ ನಿವಾಸದ ಶಂಕುಸ್ಥಾಪನೆಯನ್ನು 25ನೇ ಮಾರ್ಚ್ 1993 ರಂದು ಖ್ಯಾತ ಉದ್ಯಮಿ ಹಾಗೂ ದಾನಿಗಳಾದ ಶ್ರೀ.ಆರ್.ಎನ್.ಶೆಟ್ಟಿಯವರು ನೆರವೇರಿಸಿರುತ್ತಾರೆ.

ನೆಲಮಾಳಿಗೆಯಲ್ಲಿರುವ ಧ್ಯಾನ ಮಂದಿರದ ಪಕ್ಕದಲ್ಲಿರುವ ಸಣ್ಣ ಮಂದಿರದಲ್ಲಿ ಸುಮಾರು 2-1/2 ಅಡಿ ಎತ್ತರದ ಸುಂದರ ಕಪ್ಪುಶಿಲೆಯ ಹನುಮಂತನ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ಮುಖ್ಯ ದೇವಾಲಯದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಅಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಧುನಿಯ ಎದುರುಗಡೆ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ಇರಿಸಲಾಗಿದೆ.

ದೇವಾಲಯದ ಪ್ರಾಂಗಣದ ಮುಂಭಾಗದಲ್ಲಿ ಪವಿತ್ರ ಬೇವಿನ ಮರದ ಅಡಿಯಲ್ಲಿ ಗುರುಸ್ಥಾನವನ್ನು ಸ್ಥಾಪಿಸಲಾಗಿದೆ.

ದೇವಾಲಯದಲ್ಲಿ ಸುಂದರ ಮರದ ಪಲ್ಲಕ್ಕಿಯನ್ನು ಇರಿಸಲಾಗಿದ್ದು ಇದನ್ನು ಗುರುವಾರ ಹಾಗೂ ಹಬ್ಬದ ದಿನಗಳಂದು ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತಿದೆ.

ದೇವಾಲಯದ ಹಿಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ವಿಶಾಲವಾದ ಕಲ್ಯಾಣ ಮಂಟಪ ಹಾಗೂ ಪ್ರಸಾದಾಲಯವನ್ನು ಸ್ಥಾಪಿಸಲಾಗಿದೆ. ಕಲ್ಯಾಣ ಮಂಟಪವನ್ನು ಸ್ಥಳೀಯರಿಗೆ ಅತ್ಯಂತ ಕಡಿಮೆ ದರದಲ್ಲಿ ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳನ್ನು ನೆರವೇರಿಸಲು ನೀಡಲಾಗುತ್ತಿದೆ. ಪ್ರಸಾದಾಲಯವನ್ನು ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಅನ್ನದಾನಕ್ಕೆ ಬಳಸಲಾಗುತ್ತಿದೆ.



















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ದೇವಾಲಯದ ಸಮಯ:

ಬೆಳಿಗ್ಗೆ : 5:00 ರಿಂದ 1:30.
ಸಂಜೆ : 4:00 ರಿಂದ 9:30.

ಗುರುವಾರದಂದು ದೇವಾಲಯವನ್ನು ಬೆಳಿಗ್ಗೆ 5:00 ರಿಂದ ರಾತ್ರಿ 10:30 ರವರೆಗೆ ಇಡೀ ದಿನ ದರ್ಶನಕ್ಕೆ ತೆರೆದಿಡಲಾಗಿರುತ್ತದೆ.


ಆರತಿಯ ಸಮಯ:

ಕಾಕಡಾ ಆರತಿ : 5:15  ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : ಸೂರ್ಯಾಸ್ತ ಸಮಯ
ಶೇಜಾರತಿ      : 9:00 ಗಂಟೆ

ಗುರುವಾರದಂದು ಮಧ್ಯಾನ್ಹ ಆರತಿಯನ್ನು 12:30 ಕ್ಕೆ ಹಾಗೂ ಶೇಜಾರತಿಯನ್ನು ರಾತ್ರಿ 10:30 ಕ್ಕೆ ನೆರವೇರಿಸಲಾಗುತ್ತದೆ.

ಪ್ರತಿದಿನ ಬೆಳಿಗ್ಗೆ 7:00 ಕ್ಕೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ, ರುದ್ರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ.

ಪ್ರತಿ ಭಾನುವಾರ ಹಾಗೂ ಹುಣ್ಣಿಮೆಯ ದಿನಗಳಂದು ಸಂಜೆ 5:00 ಗಂಟೆಗೆ ಸತ್ಯನಾರಾಯಣ ಪೂಜೆಯನ್ನು  ಆಚರಿಸಲಾಗುತ್ತದೆ.


ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ ಯುಗಾದಿಯಂದು ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.
ಕಾರ್ತೀಕ ದೀಪೋತ್ಸವ.


ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ಗುರುವಾರ ಬೆಳಿಗ್ಗೆ ಹಾಗೂ ಸಂಜೆ ದೇವಾಲಯಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಗುತ್ತಿದೆ.

ಪ್ರತಿ ತಿಂಗಳಿನ ಮೊದಲನೇ ಗುರುವಾರದಂದು ದೇವಾಲಯದ ಆವರಣದಲ್ಲಿ ಉಚಿತ ಹೋಮಿಯೋಪಥಿ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರತಿವರ್ಷ ದೇವಾಲಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.


ದೇಣಿಗೆಗೆ ಮನವಿ:

ದೇವಾಲಯದ ದಿನಿನಿತ್ಯದ ಆಗುಹೋಗುಗಳಿಗಾಗಿ, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳ (ನೋಂದಣಿ)", ಭಾರತೀಯ ಸ್ಟೇಟ್ ಬ್ಯಾಂಕ್, ರಾಜಾನಗರ ಶಾಖೆ, ಹುಬ್ಬಳ್ಳಿ, ಖಾತೆ ಸಂಖ್ಯೆ: 30100714156 ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಉಣಕಲ್ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೆಂಟ್ರಲ್ ಸ್ಕೂಲ್ ನ ಹತ್ತಿರ, ಶಿರಡಿ ನಗರ, ಹುಬ್ಬಳ್ಳಿ.


ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಹಾಮಂಡಳ (ನೋಂದಣಿ),
ಉಣಕಲ್ ರೈಲು ನಿಲ್ದಾಣದ ಎದುರುಗಡೆ, ಶಿರಡಿ ನಗರ,
ಹುಬ್ಬಳ್ಳಿ-580 032, ಧಾರವಾಡ ಜಿಲ್ಲೆ,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಪಿ.ಎನ್.ದೊಂಗಾಡಿ - ಅಧ್ಯಕ್ಷರು / ಶ್ರೀ.ರುಕ್ಮಾಸಾ ಬಿ.ಹಬೀಬ್.

ದೂರವಾಣಿ ಸಂಖ್ಯೆಗಳು:
+91 98440 75526 / +91 94481 30953 /+91 836 3200125 (ದೇವಾಲಯ)



ಮಾರ್ಗಸೂಚಿ:
ದೇವಾಲಯವು ಹುಬ್ಬಳ್ಳಿಯ ಶಿರಡಿ ನಗರದ ಉಣಕಲ್ ರೈಲು ನಿಲ್ದಾಣದ ಎದುರುಗಡೆ ಹಾಗೂ ಸೆಂಟ್ರಲ್ ಸ್ಕೂಲ್ ನ ಹತ್ತಿರ ಇರುತ್ತದೆ. ದೇವಾಲಯವು ಹುಬ್ಬಳ್ಳಿಯ ಉಣಕಲ್ ರೈಲು ನಿಲ್ದಾಣದಿಂದ ನೆಡಿಗೆಯ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ
ದೇವನಹಳ್ಳಿ ಸಾಯಿಬಾಬಾ ಮಂದಿರದ ವತಿಯಿಂದ ವೈಭವೋಪೇತ ಹೊಸ ವರ್ಷದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವನಹಳ್ಳಿ ಸಾಯಿಬಾಬಾ ಮಂದಿರದ ವತಿಯಿಂದ ಇದೇ ತಿಂಗಳ 1ನೇ ಜನವರಿ 2013, ಮಂಗಳವಾರದಂದು ಹೊಸ ವರ್ಷವನ್ನು  ಅತ್ಯಂತ ವೈಭವವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ದಿನವಿಡೀ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದಿನದ ಕಾರ್ಯಕ್ರಮಗಳು ಬೆಳಿಗ್ಗೆ ಬಾಬಾರವರಿಗೆ ಕಾಕಡಾ ಆರತಿ ಹಾಗೂ ಮಂಗಳಸ್ನಾನದೊಂದಿಗೆ ಆರಂಭವಾದವು. ನಂತರ ವಿಶೇಷ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಖ್ಯಾತ ಸಾಯಿ ಭಜನ ಗಾಯಕರಾದ ಹಾಗೂ ಸಾಯಿಬಾಬಾ ಸಂಸ್ಥಾನದ ಗಾಯಕರಾದ ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾನ್ಹ 1 ಗಂಟೆಯವರೆಗೆ ಹಲವಾರು ಉತ್ತಮ ಸಾಯಿ ಭಜನೆಗಳನ್ನು ಹಾಡಿ ಭಕ್ತರನ್ನು ರಂಜಿಸಿದರು. ಸಂಜೆಯ ಕಾರ್ಯಕ್ರಮಗಳು 5 ಗಂಟೆಗೆ ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರ ಸಾಯಿ ಭಜನೆಯೊಂದಿಗೆ ಆರಂಭವಾದವು. ಶ್ರೀ.ಕೈಲಾಶ್ ಹರೇಕೃಷ್ಣ ದಾಸ್ ರವರು ರಾತ್ರಿ 10 ಗಂಟೆಯವರೆಗೆ ಹಲವಾರು ಸಾಯಿ ಭಜನೆಗಳನ್ನು ಎಂದಿನಂತೆ ತಮ್ಮ ಅತ್ಯುತ್ತಮ ಧ್ವನಿಯಲ್ಲಿ ಹಾಡಿ ನೆರೆದಿದ್ದ ಸಾಯಿ ಭಕ್ತರನ್ನು ರಂಜಿಸಿದರು. ಭಾರತದ ಹತ್ತು ಪ್ರಖ್ಯಾತ ಸಂತರು ಹಾಗೂ ದತ್ತಾತ್ರೇಯರ ಭಾವಚಿತ್ರಗಳನ್ನು ಒಳಗೊಂಡ ಸುಂದರ ಹೊಸವರ್ಷದ ಕ್ಯಾಲೆಂಡರ್ ಹಾಗೂ ಮಹಾಪ್ರಸಾದವನ್ನು ಬೆಳಿಗ್ಗೆಯಿಂದ ರಾತ್ರಿಯವರೆವಿಗೂ ದೇವಾಲಯಕ್ಕೆ ದರ್ಶನಕ್ಕೆ ಬಂದ ಎಲ್ಲಾ ಸಾಯಿ ಭಕ್ತರಿಗೂ ವಿತರಿಸಲಾಯಿತು. ಸುಮಾರು 20000 ಕ್ಕೂ ಹೆಚ್ಚು ಸಾಯಿ ಭಕ್ತರು ಹೊಸ ವರ್ಷದ ದಿನದಂದು ಸಾಯಿಬಾಬಾರವರ ದರ್ಶನವನ್ನು ಪಡೆದು ಪುನೀತರಾದರು. 




ಕನ್ನಡ ಅನುವಾದ: ಶ್ರೀಕಂಠಶರ್ಮ

Tuesday, January 1, 2013

ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಶಿವರಾಜ್ ಸಿಂಗ್ ಚವಾಣ್ ರವರು ತಮ್ಮ ಕುಟುಂಬದ ಸದಸ್ಯರೊಡನೆ ಇದೇ ತಿಂಗಳ 1ನೇ ಜನವರಿ 2013, ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆಯವರು ಕೂಡ ಉಪಸ್ಥಿತರಿದ್ದರು.



ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಮಧ್ಯಪ್ರದೇಶ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ಶಿವರಾಜ್ ಸಿಂಗ್ ಚವಾಣ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆಯವರು ಸನ್ಮಾನಿಸಿದರು.   



ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಕೇಂದ್ರ ಬೃಹತ್ ಕೈಗಾರಿಕೆ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ಬೃಹತ್ ಕೈಗಾರಿಕೆ ಸಚಿವರಾದ ಶ್ರೀ.ಪ್ರಫುಲ್ ಪಟೇಲ್ ರವರು ತಮ್ಮ ಕುಟುಂಬದ ಸದಸ್ಯರೊಡನೆ ಇದೇ ತಿಂಗಳ 1ನೇ ಜನವರಿ 2013, ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆಯವರು ಕೂಡ ಉಪಸ್ಥಿತರಿದ್ದರು. 
 
 

ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಕೇಂದ್ರ ಬೃಹತ್ ಕೈಗಾರಿಕೆ ಸಚಿವರಾದ ಶ್ರೀ.ಪ್ರಫುಲ್ ಪಟೇಲ್  ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆಯವರು ಸನ್ಮಾನಿಸಿದರು. 
 


ಕನ್ನಡ ಅನುವಾದ: ಶ್ರೀಕಂಠ ಶರ್ಮ