Thursday, February 10, 2011

ಸಾಯಿ ಭಜನ ಗಾಯಕ - ಶ್ರೀ.ಟಿ.ವಿ.ಹರಿಹರನ್ - ಕೃಪೆ: ಸಾಯಿ ಅಮೃತಧಾರಾ.ಕಾಂ


ಖ್ಯಾತ ಸಾಯಿಭಜನ ಗಾಯಕರಾದ  ಶ್ರೀ.ಟಿ.ವಿ.ಹರಿಹರನ್ ರವರು 4ನೇ ಸೆಪ್ಟೆಂಬರ್ 1959 ರಂದು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಒಂದು ಅವಿಭಕ್ತ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ಬಾಲ್ಯದ ದಿನಗಳಲ್ಲಿ ಪಿಟೀಲು ವಾದನವನ್ನು ಖ್ಯಾತ ಪಿಟೀಲು ವಿದ್ವಾಂಸರಾದ ಶ್ರೀ.ಸಂಬವೂರು ವಡಕರೈ ಶಿವರಾಮಕೃಷ್ಣ ಭಾಗವತರ್ ರವರ ಬಳಿ ಕಲಿತು ಕರ್ನಾಟಕ ಮತ್ತು ತಮಿಳುನಾಡಿನ ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದರು. ಇವರು ತಮ್ಮ ಶಾಲಾ ಮತ್ತು ಪದವಿ ಪೂರ್ವ ವ್ಯಾಸಂಗವನ್ನು ತಮ್ಮ ಹುಟ್ಟೂರಿನಲ್ಲಿ ಮಾಡಿದರು. ಇವರ ಸ್ನೇಹಿತರು ಇವರನ್ನು ಪ್ರೀತಿಯಿಂದ "ಹರಿ" ಎಂದು ಸಂಬೋಧಿಸುತ್ತಿದ್ದರು. ಇವರು ತಮ್ಮ ಪದವಿ ವ್ಯಾಸಂಗಕ್ಕಾಗಿ ಆಂಧ್ರಪ್ರದೇಶದ ಪುಟ್ಟಪರ್ತಿಯ ಶ್ರೀ.ಸತ್ಯ ಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ (ಈಗ ಸತ್ಯ ಸಾಯಿ ಯುನಿವರ್ಸಿಟಿ ಎಂದು ನಾಮಕರಣಗೊಂಡಿದೆ) ನಲ್ಲಿ 1979 ರಲ್ಲಿ ಸೇರಿ ಅಲ್ಲಿನ ಮೊದಲ ತಂಡದ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದರು. ಅಲ್ಲಿ ಕಲಿಯುತ್ತಿದ್ದಾಗ ಶ್ರೀ.ಸತ್ಯಸಾಯಿಬಾಬಾರವರ ಆಶೀರ್ವಾದದೊಂದಿಗೆ ಭಜನೆಯ ಹಾಡುಗಳನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿ ಹಾಡಲು ಪ್ರಾರಂಭಿಸಿದರು.

ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದು ಸುಮಾರು 2 ವರ್ಷಗಳ ಕಾಲ ಸತ್ಯಸಾಯಿ ಯುನಿವರ್ಸಿಟಿಯಲ್ಲಿ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದರು. ನಂತರ ಬೆಂಗಳೂರಿಗೆ ಬಂದು ನೆಲೆಸಿ ವಿದೇಶಿ ಸಂಸ್ಥೆಯಾದ ಸ್ಮಿತ್ ಕ್ಲೈನ್ ಅಂಡ್ ಫ್ರೆಂಚ್ ಫಾರ್ಮಸುಟಿಕಲ್ ನಲ್ಲಿ 1985 ರಿಂದ 1988 ರವರೆಗೆ ಸುಮಾರು 3 ವರ್ಷಗಳ ಕಾಲ ಮಾರ್ಕೆಟಿಂಗ್ ರಿಸರ್ಚ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸಿದರು. ನಂತರ 1988 ರಲ್ಲಿ ತಮ್ಮ ಹೃದಯದ ಒಳಗಿನ ಭಗವಂತನ ಕರೆಗೆ ಓಗೊಟ್ಟು ತಮ್ಮ ಭಜನೆಗಳ ಮುಖಾಂತರ ಸಾಯಿಬಾಬಾರವರ ಸಂದೇಶವಾದ ವಿಶ್ವಪ್ರೇಮ ಸಂದೇಶವನ್ನು ಜಗತ್ತಿಗೆ ತಿಳಿಯಪಡಿಸುವ ಉದ್ದೇಶದಿಂದ ಒಂದು ದಿನ ಇದ್ದಕ್ಕಿದಂತೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲಿಲ್ಲ.

ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಶ್ರೀ.ಹರಿಹರನ್ ರವರು ತಮ್ಮ ಸುಮಧುರ ಸಾಯಿ ಭಜನೆಗಳಿಂದ, ಸಂಕೀರ್ತನೆಗಳಿಂದ, ಭಕ್ತಿ ಗೀತೆಗಳಿಂದ ವಿಶ್ವದಾದ್ಯಂತ ಎಲ್ಲರ ಮನವನ್ನು ತಣಿಸುತ್ತಾ ಸಾಯಿ ಭಜನಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರಚಾರ ಪಡಿಸುತ್ತಿದ್ದಾರೆ. ಇವರು ತಮ್ಮ ಭಕ್ತಿಗೀತೆಗಳ ಮುಖಾಂತರ ಎಲ್ಲರ ಮನವನ್ನು ತಣಿಸುತ್ತಿದ್ದಾರೆ. ಇವರು ತಮ್ಮ ಜೀವನವನ್ನೇ ಈ ಸಾಯಿಭಜನೆಗಾಗಿ ಮತ್ತು ಸಾಯಿ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಇವರು ಪ್ರಪಂಚದ ಉದ್ದಗಲಕ್ಕೂ ಸುತ್ತಾಡಿ ಅನೇಕ ಪ್ರಮುಖ ಸ್ಥಳಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್, ಗಾಯನ ಸಮಾಜ, ಸಿಂಧಿ ಹಾಲ್ ನಲ್ಲಿ ತಮ್ಮ ಕಾರ್ಯಕ್ರಮ ನೀಡಿರುವುದೇ ಅಲ್ಲದೇ, ಕರ್ನಾಟಕದ ಇತರ ಕಡೆಗಳಲ್ಲಿ ಮತ್ತು ತಮಿಳುನಾಡು,ಮಹಾರಾಷ್ಟ್ರ, ದೆಹಲಿ, ಕೇರಳ ರಾಜ್ಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ, ಆಸ್ಟ್ರೇಲಿಯ, ಕೆನಡಾ, ಸಿಂಗಪೂರ್, ಅಮೇರಿಕ, ದುಬೈ, ಅಬು ದಾಬಿ, ಕುವೈತ್, ಬೆಹರೈನ್, ಶಾರ್ಜಾ ಮತ್ತಿತರ ದೇಶಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲಾ, ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ.ರವಿಂದ್ರ ಜೈನ ರವರ ಜೊತೆಯಲ್ಲಿ ಬೆಂಗಳೂರಿನ ಗಾಯನ ಸಮಾಜದಲ್ಲಿ ಕಾರ್ಯಕ್ರಮವನ್ನು ನೀಡಿದ ಹೆಗ್ಗಳಿಕೆ ಇವರದು.

ಶ್ರೀ.ಹರಿಹರನ್ ರವರು ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಭಜನೆಗಳನ್ನು ಹಾಡುವ ಪರಿಣತಿಯನ್ನು ಹೊಂದಿದ್ದಾರೆ. ಇವರು ತಾವೇ ಸ್ವತಃ ಹಾಡುಗಳನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿ ಹಾಡುವ ಸಾಮರ್ಥ್ಯವನ್ನು ಹೊಂದಿದ್ದು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ.

ಶ್ರೀ.ಹರಿಹರನ್ ರವರು ಅನೇಕ ಧ್ವನಿಸುರಳಿಗಳನ್ನು ಹೊರತಂದಿದ್ದಾರೆ. ಅದರಲ್ಲಿ ಮುಖ್ಯವಾದವುಗಳೆಂದರೆ, ಹೆಚ್.ಎಂ.ವಿ.ಯವರ ಸಾಯಿ ಪ್ರೇಮವರ್ಷ, ಸೋಹಂ ಸೋಹಂ, ವಾಯ್ಸ್ ಆಫ್ ದ ಹಾರ್ಟ್, ಭಜನ್ ಜೆಮ್ಸ್, ಮಧುರಂ ಸಾಯಿ ಗೀತಂ, ಸಾಯಿ ಶಿವ ಕಾನ್ಷಿಯಸ್ನೆಸ್, ಒನ್ನೆಸ್ ಮತ್ತಿತರ ಧ್ವನಿಸುರಳಿಗಳು.

ಇತ್ತೀಚಿಗೆ 2010 ನೇ ಇಸವಿಯಲ್ಲಿ ಭಾರತದ ಸಂಗೀತ ಕ್ಷೇತ್ರದ ದಿಗ್ಗಜರುಗಳು ಹಾಡಿರುವ 5 ಧ್ವನಿಸುರಳಿಗಳನ್ನು ಅತ್ಯಂತ ಯಶಸ್ವಿಯಾಗಿ  ಹೊರತಂದಿದ್ದಾರೆ.  ಈ ಧ್ವನಿಸುರಳಿಗಳಲ್ಲಿ ಭಾರತದ ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ.ಹರಿಹರನ್, ಶಂಕರ್ ಮಹಾದೇವನ್, ಶ್ರೀ.ಸುಮೀತ್ ತಪ್ಪೂಜಿ, ಶ್ರೀಮತಿ.ರೀಚ ಶರ್ಮ, ಶ್ರೀ.ಕುನಾಲ್ ಗಾಂಜಾವಾಲಾ, ಶ್ರೀಮತಿ.ಗಾಯತ್ರಿ ಮತ್ತು ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ.ಟಿಪ್ಪು ಮತ್ತು ಶ್ರೀಮತಿ.ಹರಿಣಿ ಇವರುಗಳು ಹಾಡಿದ್ದಾರೆ.

ಶ್ರೀ.ಹರಿಹರನ್ ರವರು ಸಾಯಿಭಕ್ತರ ಅನುಕೂಲಕ್ಕಾಗಿ ಸುಮಾರು 250ಕ್ಕೂ ಹೆಚ್ಚು ಸಾಯಿ ಭಜನೆಗಳನ್ನು ರಚಿಸಿದ್ದು ಈ ಭಜನೆಗಳು ಪ್ರಪಂಚದಾದ್ಯಂತ ಸಾಯಿ ಮಂದಿರಗಳಲ್ಲಿ ಅತ್ಯಂತ ಜನಪ್ರಿಯ ಭಜನೆಗಳೆಂದು ಹೆಸರನ್ನು ಗಳಿಸಿವೆ. ಅಷ್ಟೇ ಅಲ್ಲದೇ, ಈ ಭಜನೆಗಳನ್ನು ಎಲ್ಲಾ ಸಾಯಿಮಂದಿರಗಳಲ್ಲಿ ಹಾಡಲಾಗುತ್ತಿದೆ ಕೂಡ.

ಶ್ರೀ.ಹರಿಹರನ್ ರವರು ತಾವು ಕಾರ್ಯಕ್ರಮ ನೀಡುವುದಷ್ಟೇ ಅಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಭಜನೆಯ ಶಿಕ್ಷಣವನ್ನು ಕಳೆದ 25 ವರ್ಷಗಳಿಂದ ಹೇಳಿಕೊಡುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ, ಆನ್ ಲೈನ್ ಭಜನೆಯ ತರಗತಿಗಳನ್ನು ಕೂಡ ನಡೆಸುತ್ತಿದ್ದಾರೆ (http://www.tvhariharen.com/online.html ).

ಶ್ರೀ.ಹರಿಹರನ್ ರವರು ಅನೇಕ ಸಾಯಿಬಾಬಾ ಮಂದಿರಗಳಿಂದ ಮತ್ತು ಸಂಘ ಸಂಸ್ಥೆ ಗಳಿಂದ ಪ್ರಶಸ್ತಿಗಳಿಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಗಾಯಕರ ಹೆಸರು  ಶ್ರೀ.ಟಿ.ವಿ.ಹರಿಹರನ್ 
ವಿಳಾಸ
ನಂ  ಎ3, “ಲಕ್ಷ್ಯ ಪಾರಡೈಸ್”, 1 ನೇ  “ಎ” ಮುಖ್ಯರಸ್ತೆ, 
ಜಿ.ಎಂ.ಪಾಳ್ಯ, ನ್ಯೂ ತಿಪ್ಪಸಂದ್ರ ಅಂಚೆ,
ಬೆಂಗಳೂರು-560 075.ಕರ್ನಾಟಕ,ಭಾರತ.
ದೂರವಾಣಿ +91 80 2524 5915 / +91 98861 40959 / +91 98855 20530
ಇಮೇಲ್ tvhariharen@gmail.com, hariharen@hotmail.com
ಅಂತರ್ಜಾಲ http://www.tvhariharen.com
ಅಲ್ಬಮ್ ಗಳು 
ಸಾಯಿ ಪ್ರೇಮವರ್ಷ, ಸೋಹಂ ಸೋಹಂ, ವಾಯ್ಸ್ ಆಫ್ ದ ಹಾರ್ಟ್, ಭಜನ್ ಜೆಮ್ಸ್, ಮಧುರಂ ಸಾಯಿ ಗೀತಂ, ಸಾಯಿ ಶಿವ ಕಾನ್ಷಿಯಸ್ನೆಸ್, ಒನ್ನೆಸ್ ಮತ್ತಿತರ ಧ್ವನಿಸುರಳಿಗಳು.
ಭಜನೆಗಳು 
http://www.youtube.com/watch?v=9IK6ETDWs9s http://www.youtube.com/watch?v=ZyRl09u5PsY



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment