Monday, February 28, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ಟ್ರಸ್ಟ್, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಶ್ರೀಕಂಟೇಶ್ವರ ನಗರ,  ಮಹಾಲಕ್ಷ್ಮಿ ಲೇಔಟ್ ಬಡಾವಣೆ, ಬೆಂಗಳೂರು-560 096, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ದೇವಾಲಯದ ಭೂಮಿಪೂಜೆಯನ್ನು 1983ನೇ ಇಸವಿಯಲ್ಲಿ ಮಾಡಲಾಯಿತು. 

ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ದೇವಾಲಯವು ಜುಲೈ 1983 ರಲ್ಲಿ ಪ್ರಾರಂಭವಾಯಿತು. ಶಿರಡಿ ಸಾಯಿಬಾಬಾರವರ ದೇವಾಲಯವನ್ನು 25ನೇ ಮಾರ್ಚ್ 2010 ರಂದು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಉದ್ಘಾಟಿಸಿದರು. 

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರಿಗೆ ಪ್ರತ್ಯೇಕ ಗರ್ಭಗುಡಿಯನ್ನು ನಿರ್ಮಿಸಲಾಗಿದ್ದು ಅಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ ಮತ್ತು ವಿಗ್ರಹದ ಮುಂಭಾಗದಲ್ಲಿ ಸಾಯಿ ಕೋಟಿ ಸ್ತೂಪವನ್ನು ನಿರ್ಮಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ ಪುಟ್ಟ ವಿಗ್ರಹವನ್ನು ಸಾಯಿ ಕೋಟಿ ಸ್ತೂಪದ ಮೇಲೆ ಇರಿಸಲಾಗಿದೆ. 

ದೇವಾಲಯದಲ್ಲಿ ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ದೇವರುಗಳಿಗೆ ಪ್ರತ್ಯೇಕ ಗರ್ಭಗುಡಿಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಸುಂದರ ಕಪ್ಪು ಶಿಲೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.  

ಈಶ್ವರ ದೇವಾಲಯದ ಗರ್ಭಗುಡಿಯ ಹೊರಗಡೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ದೇವಾಲಯದ ಪ್ರಾಂಗಣದಲ್ಲಿ ಕಪ್ಪು ಶಿಲೆಯ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. 

ದೇವಾಲಯದ ಹೊರಭಾಗದಲ್ಲಿ ಪವಿತ್ರ ಅರಳಿ ಮರದ ಕೆಳಗಡೆ ನಾಗದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. 














ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಮತ್ತು ಗುರುವಾರ 6:00 ಘಂಟೆಗೆ  
ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಪ್ರತಿದಿನ ಸಂಜೆ 6:30 ಕ್ಕೆ ಮತ್ತು ಗುರುವಾರ ಸಂಜೆ 6 ಘಂಟೆಗೆ
ಶೇಜಾರತಿ: ಪ್ರತಿದಿನ ರಾತ್ರಿ 8:30 ಕ್ಕೆ ಮತ್ತು ಗುರುವಾರ ರಾತ್ರಿ 9 ಘಂಟೆಗೆ

ಪ್ರತಿದಿನ ಎಲ್ಲಾ ದೇವರುಗಳಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು. 
ಪ್ರತಿದಿನ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 150/- ರುಪಾಯಿಗಳು. 
ಪ್ರತಿ ತಿಂಗಳು ದೇವಾಲಯದಲ್ಲಿ ಸಂಕಷ್ಟ ಚತುರ್ಥಿಯನ್ನು ಸಂಜೆ 6:30ಕ್ಕೆ ಹಮ್ಮಿಕೊಳ್ಳಲಾಗುತ್ತದೆ. ಸೇವಾಶುಲ್ಕ 61/- ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6:30ಕ್ಕೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 61/- ರುಪಾಯಿಗಳು. 
ಪ್ರತಿ ತಿಂಗಳ ತ್ರಯೋದಶಿಯ ದಿನದಂದು ಸಂಜೆ ಪ್ರದೋಷ ಪೂಜೆಯನ್ನು ಆಚರಿಸಲಾಗುತ್ತದೆ. ಅಭಿಷೇಕಕ್ಕೆ ಯಾವುದೇ ಸೇವಾ ಶುಲ್ಕ ಇರುವುದಿಲ್ಲ. 

ವಿಶೇಷ ಉತ್ಸವದ ದಿನಗಳು: 

1.ಶ್ರೀರಾಮನವಮಿ - ದೇವಾಲಯದ ವಾರ್ಷಿಕೋತ್ಸವ.
2. ಶಿವರಾತ್ರಿ. 
3.ವಿನಾಯಕ ಚತುರ್ಥಿ.
4. ನವರಾತ್ರಿ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
ಅಶೋಕ ಹೈಟ್ಸ್ ಅಪಾರ್ಟ್ ಮೆಂಟ್ ಹತ್ತಿರ. 

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ಟ್ರಸ್ಟ್,
3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಶ್ರೀಕಂಟೇಶ್ವರ ನಗರ,
ಮಹಾಲಕ್ಷ್ಮಿ ಲೇಔಟ್ ಬಡಾವಣೆ, ಬೆಂಗಳೂರು-560 096, ಕರ್ನಾಟಕ.


ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಹೆಚ್.ಕೆ.ರಂಗನಾಥ.

ದೂರವಾಣಿ:
+91 80 2337 5248 / +91 94489 92963 

ಮಾರ್ಗಸೂಚಿ:
ಮಹಾಲಕ್ಷ್ಮಿ ಲೇಔಟ್ ಕಡೆಯ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಹಿಂದಕ್ಕೆ ಸುಮಾರು 2 ನಿಮಿಷ  ನಡೆದರೆ ಅಶೋಕ ಹೈಟ್ಸ್ ಅಪಾರ್ಟ್ ಮೆಂಟ್ಸ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಮೊದಲನೇ ಮುಖ್ಯರಸ್ತೆ ಯಲ್ಲಿ ಸುಮಾರು 2 ನಿಮಿಷ ನಡೆದು 3ನೇ  ಅಡ್ಡರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಮಂದಿರ ಸಿಗುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, February 26, 2011

ಶಿರಡಿ ದೇವಾಲಯದ ಪ್ರಾಂಗಣದಲ್ಲಿದ್ದ ಪವಿತ್ರ ಸ್ಥಳ - ಸಾಥೆವಾಡ - ಕೃಪೆ: ಸಾಯಿಅಮೃತಧಾರಾ.ಕಾಂ    

ಸಾಥೆವಾಡ ಗುರುಸ್ಥಾನದ ಹಿಂಭಾಗದಲ್ಲಿ ಮತ್ತು ಸಮಾಧಿ ಮಂದಿರದ ನಿರ್ಗಮನ ದ್ವಾರದ ಪಕ್ಕದಲ್ಲಿ ಇದ್ದಿತು. ಸಾಯಿಬಾಬಾರವರು ಒಮ್ಮೆ ಹರಿ ವಿನಾಯಕ ಸಾಥೆಯವರಿಗೆ "ಶಿರಡಿ ಗ್ರಾಮದ ಗೋಡೆಯನ್ನು ಕೆಡವಿ ಮತ್ತೆ ಕಟ್ಟು" ಎಂದು ಆಜ್ಞಾಪಿಸಿದರು. ಸಾಯಿಬಾಬಾರವರ  ಮಾತಿನ ಅರ್ಥ ಆ ಸ್ಥಳದಲ್ಲಿ ಒಂದು ವಾಡವನ್ನು ಗೋಡೆಯನ್ನು ಸೇರಿಸಿಕೊಂಡು ಕಟ್ಟಿಸಬೇಕೆಂಬುದು. ಬಾಬಾರವರ ಆಜ್ಞೆಯಂತೆ ಸಾಥೆಯವರು ಆ ಸ್ಥಳವನ್ನು ಕೊಂಡುಕೊಂಡು ಒಂದು ವಾಡ ನಿರ್ಮಿಸಿದರು. ಈ ವಾಡವು ಶಿರಡಿಗೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಬಹಳ ಉಪಯೋಗವಾಗುತ್ತಿತ್ತು (ಸಾಯಿ ಸಚ್ಚರಿತ್ರೆ ಅಧ್ಯಾಯ 4).


ಶಿರಡಿ ಸಾಯಿಬಾಬಾ ಸಂಸ್ಥಾನದ ದೇವಾಲಯದ ಪ್ರಾಂಗಣದಲ್ಲಿ ಮೊದಲು ನಿರ್ಮಾಣವಾದ ಕಟ್ಟಡ ಸಾಥೆವಾಡ. ನಂತರ ದೀಕ್ಷಿತ್ ವಾಡಾ ನಿರ್ಮಾಣವಾಯಿತು. ನಂತರ ಬೂಟಿವಾಡ ನಿರ್ಮಾಣವಾಯಿತು. ಈ ವಾಡವನ್ನು ಸಾಥೆಯವರು ಬಾಬಾರವರ ಆಜ್ಞೆಯ ಮೇರೆಗೆ 1908 ರಲ್ಲಿ ಕಟ್ಟಿಸಿದರು. ಸಾಥೆವಾಡ ನಿರ್ಮಿಸುವ ಸಮಯದಲ್ಲಿ ಗೋಡೆಯನ್ನು ಎತ್ತರಿಸುವ ಸಲುವಾಗಿ ಬೇವಿನ ಮರದ ಕೆಲವು ಕೊಂಬೆಗಳನ್ನು ಕಡಿಯುವ ಪ್ರಸಂಗ ಒದಗಿಬಂದಿತು. ಆಗ ಬಾಬಾರವರು ನಿರ್ಮಾಣಕ್ಕೆ ಅಡ್ಡವಾಗಿರುವ ಕೆಲವು ರಂಬೆ ಕೊಂಬೆಗಳನ್ನು ಕಡಿಯಲು ಆಜ್ಞಾಪಿಸಿದರು. ಆದರೆ ಯಾರೂ ಪವಿತ್ರ ಬೇವಿನ ಮರವನ್ನು ಕಡಿಯಲು ಮುಂದೆ ಬರಲಿಲ್ಲ. ಆಗ ಬಾಬಾರವರೇ ಸ್ವತಃ ಮುಂದೆ ಬಂದು ನಿರ್ಮಾಣಕ್ಕೆ ಅಡ್ಡವಾಗಿದ್ದ ಕೊಂಬೆಗಳನ್ನು ಕಡಿದು ಹಾಕಿದರು. 

ಈ ವಾಡದಲ್ಲಿ ಅನೇಕ ಪ್ರಸಿದ್ದ ಸಾಯಿ ಮಹಾಭಕ್ತರು ವಾಸಿಸುತ್ತಿದ್ದರು. ಸಾಯಿಬಾಬಾರವರು ತಾತ್ಯಾ ಸಾಹೇಬ್ ನೂಲ್ಕರ್ ರವರಿಗೆ ಇದೇ ವಾಡಾದಲ್ಲಿ ಸದ್ಗತಿಯನ್ನು ನೀಡಿದರು. ಆ ಸಮಯದಲ್ಲಿ ನೂಲ್ಕರ್ ರವರ ಬಾಲ್ಯ ಸ್ನೇಹಿತ ನೀಲಕಂಠ ಸಹಸ್ರಬುದ್ಧೆ ಅವರ ಜೊತೆಗಿದ್ದರು. ನೀಲಕಂಠರವರು ಶಿರಡಿಗೆ ಬಂದಾಗಲೆಲ್ಲ ಈ ವಾಡಾದಲ್ಲೇ ತಂಗುತ್ತಿದ್ದರು. ದಾದಾ ಕೇಳ್ಕರ್ ಮತ್ತು ಹರಿ ವಿನಾಯಕ ಸಾಥೆಯವರು ತಮ್ಮ ಕುಟುಂಬದವರೊಡನೆ ಈ ವಾಡಾದಲ್ಲಿ ವಾಸ ಮಾಡುತ್ತಿದ್ದರು. 

ಎಲ್ಲರಿಗಿಂತ ಹೆಚ್ಚಾಗಿ ಮೇಘಾ ಮತ್ತು ದಾದಾ ಸಾಹೇಬ್ ಕಾಪರ್ಡೆಯವರು ಅತಿ ಹೆಚ್ಚು ಕಾಲ ಈ ವಾಡದಲ್ಲಿ ತಂಗಿದ್ದರು. ಸಾಯಿ ಸಚ್ಚರಿತ್ರೆಯ 28ನೇ ಅಧ್ಯಾಯದಲ್ಲಿ ಮೇಘಾರವರ ವಿಷಯವನ್ನು ಉಲ್ಲೇಖಿಸಲಾಗಿದೆ. ಮೇಘಾರವರು ಗುಜರಾತಿ ಬ್ರಾಹ್ಮಣರಾಗಿದ್ದರು. ಮೇಘಾರವರು ಬಾಬಾರವರನ್ನು ಬಹಳ ಇಷ್ಟಪಡುತ್ತಿದ್ದರು ಮತ್ತು ಸಾಕ್ಷಾತ್ ಶಿವನೆಂದೇ ಪೂಜಿಸುತ್ತಿದ್ದರು.  ಮೇಘಾರವರು ಬಾಬಾರವರನ್ನು ದ್ವಾರಕಾಮಾಯಿ ಮಸೀದಿಯಲ್ಲಿ ಮತ್ತು ಈ ವಾಡಾದಲ್ಲಿ ಪೂಜಿಸುತ್ತಿದ್ದರು. ಮೇಘಾರವರು ದೀಕ್ಷಿತ್ ತಮಗೆ ನೀಡಿದ್ದ ಬಾಬಾರವರ ಚಿತ್ರಪಟವನ್ನು ಸಾಥೆವಾಡದ ಕೊನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯ ತಪ್ಪದೆ ಪೂಜಿಸುತ್ತಿದ್ದರು. ಒಮ್ಮೆ ಬಾಬಾರವರು ಇವರ ಕನಸಿನಲ್ಲಿ ಬಂದು "ಮೇಘಾ, ತ್ರಿಶೂಲವನ್ನು ಬರೆ" ಎಂದು ಹೇಳಿ ಮಾಯವಾದರು. ಮೇಘಾರವರಿಗೆ ಆಶ್ಚರ್ಯವಾಯಿತು. ಏಕೆಂದರೆ ಕೋಣೆಯ ಬಾಗಿಲು ಹಾಕಿದ್ದು ಹಾಗೆಯೇ ಇತ್ತು. ಬಾಬಾರವರು ಹೇಗೆ ಒಳಗೆ ಬಂದರೆಂದು ಮೇಘಾರವರಿಗೆ ಆಶ್ಚರ್ಯವಾಯಿತು. ಈ ಬಗ್ಗೆ ಮಾರನೇ ದಿನ ಬಾಬಾರವರನ್ನು ಕೇಳಲಾಗಿ ಬಾಬಾರವರು "ಮೇಘಾ, ನನ್ನ ಪ್ರವೇಶಕ್ಕೆ ಯಾವುದೇ ಬಾಗಿಲುಗಳ ಅವಶ್ಯಕತೆಯಿಲ್ಲ. ನಾನು ಸಕಲ ಚರಾಚರಗಳಲ್ಲಿ ವಾಸವಾಗಿದ್ದೇನೆ" ಎಂದು ಹೇಳಿ ತಮಗೆ ರಾಮದಾಸಿ ಭಕ್ತನೊಬ್ಬ ನೀಡಿದ್ದ ಶಿವಲಿಂಗವನ್ನು ನೀಡಿ ಅದನ್ನು ತಪ್ಪದೆ ಪೂಜಿಸಲು ಹೇಳಿದರು. 

ದಾದಾ ಸಾಹೇಬ್ ಕಾಪರ್ಡೆಯವರು ಈ ವಾಡದಲ್ಲಿ ತಂಗಿದ್ದು ಪ್ರಸಿದ್ದ "ಶಿರಡಿ ಡೈರಿ" ಯನ್ನು ಬರೆದರು. ಜಗದೀಶ್ವರ್ ಭೀಷ್ಮರವರು ಇಲ್ಲಿಯೇ ವಾಸ ಮಾಡುತ್ತಿದ್ದು ಪ್ರಸಿದ್ದ "ಶ್ರೀ ಸಾಯಿನಾಥ ಸಗುಣೋಪಾಸನಾ" (ಆರತಿಯ ಪುಸ್ತಕ) ವನ್ನು ರಚಿಸಿದರು. ಬಾಬಾ ಸಾಹೇಬ್ ತರ್ಕಡ ಮತ್ತು ಅವರ ಕುಟುಂಬದವರು ಇಲ್ಲಿಯೇ ತಂಗುತ್ತಿದ್ದರು ಮತ್ತು ಜ್ಯೋತಿಂದ್ರ ತರ್ಕಡ ರವರು ಶಿರಡಿಗೆ ಬಂದಾಗಲೆಲ್ಲಾ ಇಲ್ಲಿಯೇ ಇಳಿದುಕೊಳ್ಳುತ್ತಿದ್ದರು. ಇಲ್ಲಿ ಉಳಿದುಕೊಂಡಿದ್ದ ಎಲ್ಲ ಭಕ್ತರು ಸಮಾನ ಮನಸ್ಕರಾಗಿದ್ದು ಪ್ರತಿದಿನ ಒಂದು ನಿರ್ದಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಪ್ರತಿದಿನ ಬೆಳಗಿನ ಜಾವ ಬೇಗನೆ ಎದ್ದು ಕಾಕಡಾ ಆರತಿಗೆ ಹಾಜರಾಗುತ್ತಿದ್ದರು. ಕಾಕಡಾ ಆರತಿಯ ನಂತರ ವಾಡಾಕ್ಕೆ ಹಿಂತಿರುಗಿ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುವುದನ್ನು ಎದುರು ನೋಡುತ್ತಿದ್ದರು. ಬಾಬಾರವರ ಮೆರವಣಿಗೆ ವಾಡಾದ ಹತ್ತಿರ ಬರುತ್ತಿದ್ದಂತೆ ಹೊರಗೆ ಬಂದು ಬಾಬಾರವರ ದರ್ಶನ ಮಾಡುತ್ತಿದ್ದರು. ಬಾಬಾರವರು ಲೇಂಡಿ ಉದ್ಯಾನವನದಿಂದ ಹಿಂತಿರುಗುವಾಗಲೂ ಸಹ ಬಾಬಾರವರ ದರ್ಶನ ಮಾಡುತ್ತಿದ್ದರು. ಅಲ್ಲದೆ, ಪ್ರತಿದಿನ ನಡೆಯುತ್ತಿದ್ದ ಎಲ್ಲಾ ಆರತಿಗಳಿಗೂ ತಪ್ಪದೆ ಹಾಜರಾಗುತ್ತಿದ್ದರು.  

ಪ್ರತಿದಿನ ಸಂಜೆ ಪವಿತ್ರ ಗ್ರಂಥಗಳಾದ ರಾಮಾಯಣ, ಏಕನಾಥ ಭಾಗವತ ಮತ್ತು ಯೋಗ ವಾಸಿಷ್ಠ ಗಳನ್ನು ಪಾರಾಯಣ  ಮಾಡುತ್ತಿದ್ದರು ಮತ್ತು ಅದರಲ್ಲಿ ಅಡಕವಾದ ಸೂಕ್ಷ್ಮ ವಿಚಾರಗಳನ್ನು ಕುರಿತು ಚರ್ಚಿಸುತ್ತಿದ್ದರು. ಅಲ್ಲದೆ, ಪ್ರತಿದಿನ ರಾತ್ರಿ ಭೀಷ್ಮರವರು ಮಾಡುತ್ತಿದ್ದ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. 

ಮತ್ತೊಬ್ಬ ಮಹೋನ್ನತ ಸಾಯಿಭಕ್ತರಾದ ಸ್ವಾಮಿ ಶರಣಾನಂದರು ಶಿರಡಿಗೆ ಬಂದಾಗಲೆಲ್ಲಾ ಇದೇ ವಾಡದಲ್ಲಿ ಇಳಿದುಕೊಳ್ಳುತ್ತಿದ್ದರು. ಇವರು ತಮ್ಮ 94ನೇ ವಯಸ್ಸಿನಲ್ಲಿ 1983 ರಲ್ಲಿ ಸ್ವರ್ಗಸ್ಥರಾದರು. 



ಈ ಪವಿತ್ರ ವಾಡಾವನ್ನು ಶ್ರೀ.ಆರ್ ಎಸ್.ನಾವಲ್ಕರ್ ರವರು 30ನೇ ಸೆಪ್ಟೆಂಬರ್ 1924 ರಂದು ಖರೀದಿಸಿದರು. ನಂತರದ ದಿನಗಳಲ್ಲಿ  ಶ್ರೀ.ವಿ.ಎನ್.ಗೋರಕ್ಷಾಕರ್ ರವರು ನಾವಲ್ಕರ್ ರವರ ಕುಟುಂಬವರ್ಗದವರ ಮನವೊಲಿಸಿ ಈ ಪವಿತ್ರ ವಾಡವನ್ನು ಸಾಯಿಬಾಬಾ ಸಂಸ್ಥಾನದವರಿಗೆ ಕೊಡಿಸುವುದರಲ್ಲಿ  ಪ್ರಮುಖ ಪಾತ್ರವನ್ನು ವಹಿಸಿದರು. 1939 ರಲ್ಲಿ ನಾವಲ್ಕರ್ ಕುಟುಂಬದವರು ಈ ವಾಡವನ್ನು ಸಾಯಿಬಾಬಾ ಸಂಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು. 1941 ರಲ್ಲಿ ಸಾಯಿಬಾಬಾ ಸಂಸ್ಥಾನದವರು ಯಾತ್ರಿಕರು ಉಳಿದುಕೊಳ್ಳಲು ಅನುಕೂಲವಾಗುವಂತೆ ಇನ್ನು ನಾಲ್ಕು ದೊಡ್ಡ ಕೋಣೆಗಳನ್ನು ನಿರ್ಮಿಸಿದರು. 1980 ರ ವರೆಗೂ ಈ ವಾಡದಲ್ಲಿ ಯಾತ್ರಿಕರು ತಂಗುತ್ತಿದ್ದರು. ನಂತರದ ದಿನಗಳಲ್ಲಿ ಸ್ವಲ್ಪ ಕಾಲ ಈ ಸ್ಥಳವನ್ನು ಸಾರ್ವಜನಿಕ ಸಂಪರ್ಕ ಕೇಂದ್ರವನ್ನಾಗಿ ಮಾರ್ಪಡಿಸಿದ್ದರು. ಆದರೆ 1998-1999 ರಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದವರು ದೇವಾಲಯದ ಜೀರ್ಣೋದ್ದಾರ ಕಾರ್ಯವನ್ನು  ಕೈಗೊಂಡಾಗ ಈ ವಾಡಾವನ್ನು ಕೆಡವಲಾಯಿತು. 

ಕನ್ನಡ ಅನುವಾದ:ಶ್ರೀಕಂಠ ಶರ್ಮ

Wednesday, February 23, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಗಣಪತಿ ನಗರ, ಪೈಪ್ ಲೈನ್ ರಸ್ತೆ,ಡಾ.ರಾಜಕುಮಾರ್ ರಸ್ತೆ, ಜನಪ್ರಿಯ ನಿವಾಸ ಎದುರುಗಡೆ ರಸ್ತೆ, ಆಚಾರ್ಯ ಕಾಲೇಜ್ ಮುಖ್ಯ ರಸ್ತೆ, ಚಿಕ್ಕಬಾಣಾವರ, ಯಶವಂತಪುರ ಹೋಬಳಿ, ಬೆಂಗಳೂರು-560 090. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ದೇವಾಲಯದ ಭೂಮಿಪೂಜೆಯನ್ನು ಆಗಸ್ಟ್ 2005 ರಲ್ಲಿ ನೆರವೇರಿಸಲಾಯಿತು. 

ಈ ದೇವಾಲಯವನ್ನು 7ನೇ  ಆಗಸ್ಟ್ 2008 ರಂದು  ಪಂಜಾಬ್  ರಾಜ್ಯದ  ಅಂಬಾಲಾ  ಕ್ಯಾಂಟ್  ನ  ಸ್ವಾಮೀಜಿ  ಶ್ರೀ.ಸತ್ಯಾನಂದ ಮಹಾರಾಜ್ ರವರು ನೆರವೇರಿಸಿದರು. 

ದೇವಾಲಯದಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ಸುಂದರ ವಿಗ್ರಹ, ಕಪ್ಪು ಶಿಲೆಯ ಗಣೇಶ, ವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯ ದೇವರು ಮತ್ತು ನಾಗರ ಕಲ್ಲು ದೇವರುಗಳನ್ನು  ನೋಡಬಹುದು.







ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:
ಪ್ರತಿದಿನ ಬೆಳಿಗ್ಗೆ 7:30 ಕ್ಕೆ
ಪ್ರತಿದಿನ ಸಂಜೆ 6:30 ಕ್ಕೆ

ಪ್ರತಿದಿನ ಬೆಳಿಗ್ಗೆ ಸಾಯಿಬಾಬಾರವರ ಪಂಚೋಲೋಹ ಮತ್ತು ಅಮೃತ ಶಿಲೆಯ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 601/- ರುಪಾಯಿಗಳಾಗಿದ್ದು ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇಲ್ಲ.
ಪ್ರತಿದಿನ ಬೆಳಿಗ್ಗೆ ಸಾಯಿಬಾಬಾರವರ ಪಂಚೋಲೋಹ ಮತ್ತು ಅಮೃತ ಶಿಲೆಯ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕವನ್ನು ಬಾಬಾರವರಿಗೆ ವಸ್ತ್ರ ಸಮರ್ಪಣೆಯೊಂದಿಗೆ ಮಾಡಲಾಗುತ್ತದೆ. ಸೇವಾ ಶುಲ್ಕ 1001/- ರುಪಾಯಿಗಳಾಗಿದ್ದು ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇಲ್ಲ. 

ವಿಶೇಷ ಉತ್ಸವದ ದಿನಗಳು:
  1. ಶ್ರೀರಾಮನವಮಿ. 
  2. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 7ನೇ ಆಗಸ್ಟ್.
  3. ಗುರುಪೂರ್ಣಿಮಾ.
  4. ವಿಜಯದಶಮಿ (ಸಾಯಿಬಾಬಾ ಸಮಾಧಿ ದಿವಸ).
  5. ದೀಪಾವಳಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಕೃಷ್ಣ ಪಾಲಿಟೆಕ್ನಿಕ್ ಮತ್ತು ಜನಪ್ರಿಯ ನಿವಾಸ ಅಪಾರ್ಟ್ ಮೆಂಟ್ ಹತ್ತಿರ.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಗಣಪತಿ ನಗರ, ಪೈಪ್ ಲೈನ್ ರಸ್ತೆ,ಡಾ.ರಾಜಕುಮಾರ್ ರಸ್ತೆ,
ಜನಪ್ರಿಯ ನಿವಾಸ ಎದುರುಗಡೆ ರಸ್ತೆ, ಆಚಾರ್ಯ ಕಾಲೇಜ್ ಮುಖ್ಯ ರಸ್ತೆ,
ಚಿಕ್ಕಬಾಣಾವರ, ಯಶವಂತಪುರ ಹೋಬಳಿ,
ಬೆಂಗಳೂರು-560 090. ಕರ್ನಾಟಕ.


ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀಮತಿ.ಹೆಚ್.ಆರ್.ಗಾಯತ್ರಿ


ದೂರವಾಣಿ:
+91 98804 52341

ಮಾರ್ಗಸೂಚಿ:
ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಜನಪ್ರಿಯ ನಿವಾಸ ಬಸ್ ನಿಲ್ದಾಣದ ಬಳಿ ಇಳಿಯುವುದು. 10 ನಿಮಿಷ ನಡೆದರೆ  ದೇವಾಲಯ ಸಿಗುತ್ತದೆ. ದೇವಾಲಯವು ಕೃಷ್ಣ ಪಾಲಿಟೆಕ್ನಿಕ್  ನಿಂದ 5 ನಿಮಿಷದ ನಡೆದರೆ ಸಿಗುತ್ತದೆ. ಬಸ್ ಸಂಖ್ಯೆ ಗಳು:253, 235J, 250P ಮತ್ತು ಹೆಸರಘಟ್ಟಕ್ಕೆ ಮತ್ತು ಚಿಕ್ಕಬಾಣಾವರಕ್ಕೆ ತೆರಳುವ ಎಲ್ಲ ಬಸ್ ಗಳು ಇಲ್ಲಿ ನಿಲ್ಲುತ್ತವೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಆನಂದಮಯಿ ಮಂದಿರ, ಶ್ರೀ ಶಿರಡಿ ಸಾಯಿ ಅನಂದಮಯಿ ಟ್ರಸ್ಟ್, ಹುಣಸೆಮರದಪಾಳ್ಯ,ಮೈಸೂರು ರಸ್ತೆ ಪಕ್ಕ, ಅಮೃತ್ ಡಿಸ್ಟಿಲ್ಲರಿ ಹತ್ತಿರ, ಕೆಂಗೇರಿ ಹೋಬಳಿ, ಬೆಂಗಳೂರು, ಕರ್ನಾಟಕ  - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯದ ಭೂಮಿಪೂಜೆಯನ್ನು ಜನವರಿ 1995 ರಲ್ಲಿ ನೆರವೇರಿಸಲಾಯಿತು. 

ಈ ದೇವಾಲಯವನ್ನು 20ನೇ ಜುಲೈ 2002 ರಂದು ಸಾಯಿಭಕ್ತರ ಸಹಕಾರದೊಂದಿಗೆ ದೇವಾಲಯದ ಟ್ರಸ್ಟ್ ನ ಸದಸ್ಯರು ಉದ್ಘಾಟಿಸಿದರು. 

ಈ ದೇವಾಲಯವು ಹಲವು ವಿಶೇಷತೆಗಳಿಂದ ಕೂಡಿದೆ. 1. ಈ ದೇವಾಲಯದ ರಾಜಗೋಪುರವನ್ನು ಶಿರಡಿ ದೇವಾಲಯದ ಮಾದರಿಯಲ್ಲೇ ನಿರ್ಮಿಸಲಾಗಿದೆ. 2. ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಶಿರಡಿಯಲ್ಲಿರುವಂತೆ ಖಂಡೋಬ ಮಂದಿರವನ್ನು ದೇವಾಲಯದ ದ್ವಾರದಲ್ಲಿ ನಿರ್ಮಿಸಲಾಗಿದೆ. 3. ದೇವಾಲಯದ ಆವರಣದ ಎಡಭಾಗದಿಂದ ಪ್ರಾರಂಭ ಮಾಡಿ ೧೦೮ ಹಾಸುಕಲ್ಲುಗಳನ್ನು ದೇವಾಲಯದ ಸುತ್ತಲೂ ನೆಡಲಾಗಿದ್ದು ಈ ಕಲ್ಲುಗಳು ಸರಿಯಾಗಿ ದೇವಾಲಯದ ಬಲಭಾಗದಲ್ ಮಹಾದ್ವಾರದ ಮುಂಭಾಗದಲ್ಲಿ ಕೊನೆಗೊಳ್ಳುತ್ತವೆ. ಈ ರೀತಿಯ ವ್ಯವಸ್ಥೆ ಇರುವುದರಿಂದ ಸಾಯಿಭಕ್ತರು ಸಾಯಿ ನಾಮ   ಜಪವನ್ನು ಮಾಡುತ್ತಾ  "ಹೆಜ್ಜೆ ಪ್ರದಕ್ಷಿಣೆ" ಮಾಡಲು ಅನುಕೂಲವಾಗಿದೆ. 4.ಇಲ್ಲಿ ದ್ವಾರಕಾಮಾಯಿಯನ್ನು ಶಿರಡಿಯಲ್ಲಿರುವಂತೆ ನಿರ್ಮಿಸಲಾಗಿದ್ದು ಶಿರಡಿಯ ದ್ವಾರಕಾಮಾಯಿಯಲ್ಲಿರುವ ಎಲ್ಲಾ ವಸ್ತುಗಳನ್ನು ಇಲ್ಲಿ ಸಾಂಕೇತಿಕವಾಗಿ ಇರಿಸಲಾಗಿದೆ. 

ದೇವಾಲಯದಲ್ಲಿ ಅಮೃತ ಶಿಲೆಯ ಖಂಡೋಬ ಮತ್ತು ಅವನ ಪತ್ನಿಯರ ವಿಗ್ರಹಗಳು, ಸಾಯಿಬಾಬಾ, ಗಣಪತಿ, ದತ್ತಾತ್ರೇಯ ವಿಗ್ರಹಗಳನ್ನು ನೋಡಬಹುದು. ಅಲ್ಲದೆ, ಕಪ್ಪು ಶಿಲೆಯ ಶಿವಲಿಂಗ, ಆಂಜನೇಯ, ಸುಬ್ರಮಣ್ಯ, ಕೃಷ್ಣ, ರಾಮ, ಸೀತ, ಲಕ್ಷ್ಮಣ, ರಾಜರಾಜೇಶ್ವರಿ ವಿಗ್ರಹಗಳನ್ನು ಕೂಡ ಸಾಯಿಭಕ್ತರು ನೋಡಬಹುದು. ಅಲ್ಲದೆ, ಸಾಯಿಬಾಬಾ ಮತ್ತು ಲಕ್ಷ್ಮಿನರಸಿಂಹ  ದೇವರ ಪಂಚಲೋಹ ವಿಗ್ರಹಗಳನ್ನು ಕೂಡ ಇರಿಸಲಾಗಿದೆ. 

ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ನಂದಿಯ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಪವಿತ್ರ ಧುನಿಯನ್ನು ಶಿರಡಿಯಲ್ಲಿರುವಂತೆ ದ್ವಾರಕಾಮಾಯಿಯಲ್ಲಿ ನಿರ್ಮಿಸಲಾಗಿದೆ. 

ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಗುರುಸ್ಥಾನವನ್ನು ನಿರ್ಮಿಸಲಾಗಿದ್ದು ಇಲ್ಲಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ ಮತ್ತು ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
























ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ 6 ಘಂಟೆಗೆ 
ಶೇಜಾರತಿ: ರಾತ್ರಿ 8 ಘಂಟೆಗೆ (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ)

ಗುರುವಾರ ಮತ್ತು ಭಾನುವಾರಗಳಂದು ರಾತ್ರಿ 8:30 ಕ್ಕೆ ಶೇಜಾರತಿ ನಡೆಯುತ್ತದೆ. 
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 30/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 
  1. ಶ್ರೀರಾಮನವಮಿ. 
  2. ಪ್ರತಿ ವರ್ಷದ 20ನೇ ಜುಲೈ (ಹತ್ತಿರದ ಭಾನುವಾರದಂದು) ದೇವಾಲಯದ ವಾರ್ಷಿಕೋತ್ಸವ. 
  3. ಗುರುಪೂರ್ಣಿಮಾ. 
  4. ವಿಜಯದಶಮಿ (ಸಾಯಿಬಾಬಾ ಸಮಾಧಿ ದಿವಸ). 
  5. ದತ್ತಜಯಂತಿ. 
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಟ್ರಸ್ಟ್ ನ ವತಿಯಿಂದ ದೇವಾಲಯದ ಎದುರುಗಡೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆಯನ್ನು ನಡೆಸಲಾಗುತ್ತಿದೆ. 

ದೇಣಿಗೆಗಾಗಿ ಮನವಿ: 

ದೇವಾಲಯದ ವತಿಯಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ನಡೆಸುತ್ತಿರುವ ಶಾಲೆಯ ಖರ್ಚುವೆಚ್ಚಗಳಿಗಾಗಿ ಮತ್ತು ದೇವಾಲಯದ ಇತರ ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಣ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿ ಆನಂದಮಯಿ ಟ್ರಸ್ಟ್, ಬೆಂಗಳೂರು" ಇವರಿಗೆ ಸಂದಾಯವಾಗುವಂತೆ ಚೆಕ್ ಅಥವಾ ಡಿಡಿಯನ್ನು ಈ ಕೆಳಗೆ ನೀಡಿರುವ ದೇವಾಲಯದ ವಿಳಾಸಕ್ಕೆ ಸಂದಾಯ ಮಾಡಬಹುದು. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಅಮೃತ್ ಡಿಸ್ಟಿಲ್ಲರಿ ಹತ್ತಿರ, ಮೈಸೂರು ರಸ್ತೆಯಿಂದ 2 ಕಿಲೋಮೀಟರ್ ಒಳಗಡೆ. 

ವಿಳಾಸ:
ಶ್ರೀ ಶಿರಡಿ ಸಾಯಿ ಆನಂದಮಯಿ ಮಂದಿರ,
ಶ್ರೀ ಶಿರಡಿ ಸಾಯಿ ಅನಂದಮಯಿ ಟ್ರಸ್ಟ್,
ಹುಣಸೆಮರದಪಾಳ್ಯ,ಮೈಸೂರು ರಸ್ತೆ ಪಕ್ಕ,
ಅಮೃತ್ ಡಿಸ್ಟಿಲ್ಲರಿ ಹತ್ತಿರ, ಕೆಂಗೇರಿ ಹೋಬಳಿ, ಬೆಂಗಳೂರು, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಕ್ಯಾಪ್ಟನ್.ವಿ ವಿ.ಮಹೇಶ್ / ಶ್ರೀಮತಿ. ಸಂಯುಕ್ತ ಮಹೇಶ್

ದೂರವಾಣಿ:
+91 80 2843 7345 / +91 94481 16146 / +91 99804 79992

ಈ ಮೇಲ್ ವಿಳಾಸ:
vvmahesh@yahoo.com

ಮಾರ್ಗಸೂಚಿ:
ಹುಣಸೆಮರದಪಾಳ್ಯ  ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯದ ಎದುರುಗಡೆ ಬಸ್ ನಿಲ್ದಾಣ  ಇರುತ್ತದೆ.  ಬಸ್ ಸಂಖ್ಯೆಗಳು: 221 F, 221 H, 230, 230A.



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, February 19, 2011

ಸಾಯಿ ಭಜನ ಗಾಯಕ - ಶ್ರೀ.ಮುಕುಂದ ರೋಲೆ - ಕೃಪೆ: ಸಾಯಿ ಅಮೃತಧಾರಾ.ಕಾಂ 

ಸಾಯಿ ಭಜನ ಗಾಯಕ ಶ್ರೀ.ಮುಕುಂದ ರೋಲೆ

ಶ್ರೀ.ಮುಕುಂದ ರೋಲೆಯವರು 25ನೇ ಮೇ 1964 ರಂದು ಕರ್ನಾಟಕದ ಮಂಡ್ಯ ನಗರದಲ್ಲಿ ದಿವಂಗತ ಶ್ರೀ.ರೋಲೆ ವೆಂಕಟಾಚಲಯ್ಯ ಮತ್ತು ದಿವಂಗತ ಶ್ರೀಮತಿ. ಆರ್.ವಿ.ಕಮಲಮ್ಮನವರ ಕಿರಿಯ ಮಗನಾಗಿ ಜನಿಸಿದರು. ಇವರ ತಂದೆಯವರು ಪ್ರಸಿದ್ದ ಕಲಾಕಾರರು, ಸಂಗೀತ ವಿದ್ವಾಂಸರು ಮತ್ತು ಹರಿಕಥಾ ವಿದ್ವಾನ್ ಆಗಿದ್ದರು. ಇವರು ಇವರ ತಂದೆಯವರಿಂದ ತಮ್ಮ 8ನೇ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಪ್ರಾರಂಭಿಸಿದರು. 

ಇವರ ತಂದೆ ತಾಯಿಯವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಮಂಡ್ಯದ ಹಳೆ ನಗರ ಪ್ರದೇಶದ ಸಾಯಿ ಭಜನ ಮಂಡಳಿಯಲ್ಲಿ ಮಂಡ್ಯ ನಗರದಲ್ಲಿ ವಾಸವಿರುವ ತನಕವೂ ಕೂಡ ಪ್ರತಿ ಗುರುವಾರ ತಪ್ಪದೆ ಸಾಯಿ ಭಜನೆಯನ್ನು ಮಾಡುತ್ತಿದ್ದರು. ಮುಕುಂದ ರೋಲೆಯವರು ಕೂಡ ಮಂಡ್ಯ ನಗರದ ಬಾಲ ವಿಕಾಸ ಕೇಂದ್ರದಲ್ಲಿ ತಪ್ಪದೆ ಭಜನೆಯನ್ನು ಹಾಡುತ್ತಿದ್ದರು. ನಂತರ ಇವರ ಮನೆಯವರು ಬೆಂಗಳೂರಿನ ದೊಮ್ಮಲೂರು ಬಡಾವಣೆಯಲ್ಲಿ ಬಂದು ನೆಲೆಸಿದರು. ದೊಮ್ಮಲೂರಿನ ಸಾಯಿಬಾಬಾ ಸೇವಾ ಸಮಿತಿಯಲ್ಲಿ ಪ್ರತಿ ಗುರುವಾರ ತಪ್ಪದೆ ಭಜನೆಯ ಕಾರ್ಯಕ್ರಮವನ್ನು ಮುಂದುವರಿಸಿದರು. ಬೆಂಗಳೂರಿನಲ್ಲಿರುವಾಗ ಮುಕುಂದ ರೋಲೆಯವರು ತಮ್ಮ ತಂದೆ ತಾಯಿಯವರಿಂದ ಅನೇಕ ಸಾಯಿ ಭಜನೆಗಳನ್ನು ಹಾಡುವುದನ್ನು ಕಲಿತರು. ಇವರಿಗೆ "ಹೇ ಗೋವಿಂದ ಹೇ ಗೋಪಾಲ" ಮತ್ತು "ಹೇ ಮಾಧವ ಮಧುಸೂದನ" ಭಜನೆಗಳನ್ನು ಹಾಡುವುದೆಂದರೆ ಬಹಳ ಇಷ್ಟವಾದ ವಿಷಯವಾಗಿತ್ತು. 1989ನೇ ಇಸವಿಯಲ್ಲಿ ಇವರದೇ ಆದ "ಮುಕುಂದ ಮಿತ್ರ ಮಂಡಳಿ ಭಜನ ವೃಂದ" ವನ್ನು ಸ್ಥಾಪಿಸಿ ಇವರ ಸಹೋದರ ದಿವಂಗತ ಶ್ರೀ.ನಂದಾ ರಮೇಶ್ ರೋಲೆಯವರೊಂದಿಗೆ ಅಲಸೂರಿನ ಕೇಂಬ್ರಿಡ್ಜ್ ಬಡಾವಣೆಯಲ್ಲಿರುವ ಪ್ರತಿಷ್ಟಿತ ಸಾಯಿ ಸಮಾಜದಲ್ಲಿ ಪ್ರತಿ ಗುರುವಾರ ಭಜನೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತಾರೆ.

ಶ್ರೀ.ಮುಕುಂದ ರೋಲೆಯವರು ಬೆಂಗಳೂರಿನ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ, ಚೆನ್ನೈನ ಮೈಲಾಪುರ ಸಾಯಿಬಾಬಾ ಮಂದಿರ, ಕೊಯಂಬತ್ತೂರಿನ ನಾಗಸಾಯಿ ಮಂದಿರ ಮತ್ತು ದ್ವಾರಕಾಮಾಯಿ ಮಂದಿರ, ಟಿ.ಟಿ.ಪಾಳ್ಯದ ವೆಂಕೂಸಾಬಾಬಾ ಮಂದಿರ, ಸೇಲಂನ ಸಾಯಿಬಾಬಾ ಪಾದುಕಾ ಟ್ರಸ್ಟ್ ಮತ್ತಿತರ ಕಡೆಗಳಲ್ಲಿ ತಮ್ಮ ಭಜನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಶ್ರೀ.ಮುಕುಂದ ರೋಲೆಯವರು ಆಕಾಶವಾಣಿಯ "ಬಿ" ಶ್ರೇಣಿಯ ಕಲಾವಿದರಾಗಿದ್ದು ಕಳೆದ 25 ವರ್ಷಗಳಿಂದ ಭಾವಗೀತೆ ಹಾಗೂ ಸುಗಮ ಸಂಗೀತದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಶ್ರೀ.ಮುಕುಂದ ರೋಲೆಯವರು ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರು ಅಭಿನಯಿಸಿದ ಕೆಲವು ಧಾರಾವಾಹಿಗಳೆಂದರೆ ಕೃಷ್ಣ ನೀ ಬೇಗನೆ ಬಾರೋ, ರೀ ಮರೀಬೇಡಿ, ಕಥಾ ವ್ಯಕ್ತಿ, ಕಲಿಕರ್ಣ, ಬೇಡವಾದ ಮಗು ಮತ್ತಿತರ ಧಾರಾವಾಹಿಗಳು.

ಬೆಂಗಳೂರಿನ ಅನೇಕ ಪ್ರತಿಷ್ಟಿತ ವಾದ್ಯಗೋಷ್ಠಿ ತಂಡದ ಸದಸ್ಯರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ಇವರು ಪ್ರತಿನಿಧಿಸುತ್ತಿರುವ ಕೆಲವು ವಾದ್ಯಗೋಷ್ಠಿಗಳೆಂದರೆ ನ್ಯೂ ಫೈವ್ ಸ್ಟಾರ್ ಮ್ಯುಸಿಕ್, ಶ್ರುತಿ ಮೆಲೋಡಿ ಏನ್ ಮ್ಯುಸಿಕ್ ಮತ್ತು ಇನ್ನು ಹಲವಾರು ವಾದ್ಯಗೋಷ್ಠಿಗಳು.

ಇವರು ದೇವಾಲಯಗಳಲ್ಲಿ ನೀಡಿದ ಭಜನೆಯ ಕಾರ್ಯಕ್ರಮಗಳಿಗೆ, ವಾದ್ಯಗೋಷ್ಠಿಯ ಕಾರ್ಯಕ್ರಮಗಳಿಗೆ ಮತ್ತು ಭಾವಗೀತೆಯ ಕಾರ್ಯಕ್ರಮಗಳಿಗಾಗಿ ಅನೇಕ ಪ್ರಶಸ್ತಿಗಳು, ಬಿರುದು ಪತ್ರಗಳನ್ನು ಮತ್ತು ಸನ್ಮಾನಗಳನ್ನೂ ಪಡೆದಿರುತ್ತಾರೆ. 

ಶ್ರೀ.ಮುಕುಂದ ರೋಲೆಯವರು ಹಾಡಿರುವ ಸಾಯಿಬಾಬಾರವರ 6 ಭಜನೆಯ ಸಿಡಿಗಳನ್ನು ಇವರ ಧರ್ಮಪತ್ನಿಯವರಾದ ಶ್ರೀಮತಿ.ಇಂದಿರಾಣಿ ಮುಕುಂದ ಅವರು ಇತ್ತೀಚಿಗೆ ಜನವರಿ 2011 ರಲ್ಲಿ ಬಿಡುಗಡೆಗೊಳಿಸಿರುತ್ತಾರೆ. 

ಶ್ರೀ.ಮುಕುಂದ ರೋಲೆಯವರ ಧರ್ಮಪತ್ನಿ ಮತ್ತು ಮಕ್ಕಳು ಇವರೊಡನೆ ವೃಂದಗಾನದಲ್ಲಿ ಹಾಡುವ ಮುಖಾಂತರ ಇವರಿಗೆ ಬಹಳ ಒಳ್ಳೆಯ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. 

ಶ್ರೀ.ಮುಕುಂದ ರೋಲೆಯವರು ತಮ್ಮ ಕೊನೆಯ ಉಸಿರಿರುವ ತನಕ ಸಾಯಿ ಭಜನೆಗಳನ್ನು  ಹಾಡುತ್ತಿರಬೇಕು ಮತ್ತು ಸಾಯಿ ಭಜನೆಗಳನ್ನು ಇಂದಿನ ಯುವ ಜನಾಂಗಕ್ಕೆ ಕಲಿಸಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ. 

ಶ್ರೀ.ಮುಕುಂದ ರೋಲೆಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಸಂಪರ್ಕದ ವಿವರಗಳು 
ಗಾಯಕರ ಹೆಸರು
ಶ್ರೀ.ವಿ.ಮುಕುಂದ ರೋಲೆ 
ವಿಳಾಸ
ಮುಕುಂದ ಮಿತ್ರ ಮಂಡಳಿ ಭಜನ ವೃಂದ, ನಂ.8,  ಫ್ಲಾಟ್ ಸಂಖ್ಯೆ 3-ಬಿ, ಎಂ.ಎಸ್. ಕ್ರಿಸ್ಟಲ್ ಅಪಾರ್ಟ್ ಮೆಂಟ್, ಮಲ್ಲೇಶಪಾಳ್ಯ  ಮುಖ್ಯರಸ್ತೆ, ಮಲ್ಲೇಶಪಾಳ್ಯ, ಬೆಂಗಳೂರು - 560 075, ಕರ್ನಾಟಕ, ಭಾರತ.
ದೂರವಾಣಿ
+91 98440 68330 / +91 98445 40431

ಈ ಮೇಲ್
ಇಲ್ಲ
ಅಂತರ್ಜಾಲ
ಇಲ್ಲ 
ಅಲ್ಬಮ್ ಗಳು
ಭಕ್ತಿ ಅಮೃತಾಂಜಲಿ, ಭಕ್ತಿ ಪುಷ್ಪಾಂಜಲಿ, ಭಕ್ತಿ ಗೀತಾಂಜಲಿ, ಭಕ್ತಿ  ಕುಸುಮಾಂಜಲಿ, ಶ್ರೀ ಸಾಯಿ ಕೃಪಾಂಜಲಿ, ಭಕ್ತಿ ಪ್ರೇಮಾಂಜಲಿ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ಗಾನಾಮೃತಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯಾಮೃತಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ ನಾಮಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ  ಮಂದಿರಂ,ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ ದರ್ಶನಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ ಅವತಾರ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, February 13, 2011

ಭಾರತದ ಅಗ್ರಮಾನ್ಯ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ಮತ್ತು ಮುಂಬೈ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶ್ರೀ.ಕೃಪಾಶಂಕರ್ ಸಿಂಗ್ ಶಿರಡಿ ಭೇಟಿ - 13ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಅಗ್ರಮಾನ್ಯ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ಮತ್ತು ಮುಂಬೈ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಶ್ರೀ.ಕೃಪಾಶಂಕರ್ ಸಿಂಗ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, February 10, 2011

ಸಾಯಿ ಭಜನ ಗಾಯಕ - ಶ್ರೀ.ಟಿ.ವಿ.ಹರಿಹರನ್ - ಕೃಪೆ: ಸಾಯಿ ಅಮೃತಧಾರಾ.ಕಾಂ


ಖ್ಯಾತ ಸಾಯಿಭಜನ ಗಾಯಕರಾದ  ಶ್ರೀ.ಟಿ.ವಿ.ಹರಿಹರನ್ ರವರು 4ನೇ ಸೆಪ್ಟೆಂಬರ್ 1959 ರಂದು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಒಂದು ಅವಿಭಕ್ತ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ಬಾಲ್ಯದ ದಿನಗಳಲ್ಲಿ ಪಿಟೀಲು ವಾದನವನ್ನು ಖ್ಯಾತ ಪಿಟೀಲು ವಿದ್ವಾಂಸರಾದ ಶ್ರೀ.ಸಂಬವೂರು ವಡಕರೈ ಶಿವರಾಮಕೃಷ್ಣ ಭಾಗವತರ್ ರವರ ಬಳಿ ಕಲಿತು ಕರ್ನಾಟಕ ಮತ್ತು ತಮಿಳುನಾಡಿನ ಹಲವು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದರು. ಇವರು ತಮ್ಮ ಶಾಲಾ ಮತ್ತು ಪದವಿ ಪೂರ್ವ ವ್ಯಾಸಂಗವನ್ನು ತಮ್ಮ ಹುಟ್ಟೂರಿನಲ್ಲಿ ಮಾಡಿದರು. ಇವರ ಸ್ನೇಹಿತರು ಇವರನ್ನು ಪ್ರೀತಿಯಿಂದ "ಹರಿ" ಎಂದು ಸಂಬೋಧಿಸುತ್ತಿದ್ದರು. ಇವರು ತಮ್ಮ ಪದವಿ ವ್ಯಾಸಂಗಕ್ಕಾಗಿ ಆಂಧ್ರಪ್ರದೇಶದ ಪುಟ್ಟಪರ್ತಿಯ ಶ್ರೀ.ಸತ್ಯ ಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ (ಈಗ ಸತ್ಯ ಸಾಯಿ ಯುನಿವರ್ಸಿಟಿ ಎಂದು ನಾಮಕರಣಗೊಂಡಿದೆ) ನಲ್ಲಿ 1979 ರಲ್ಲಿ ಸೇರಿ ಅಲ್ಲಿನ ಮೊದಲ ತಂಡದ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದರು. ಅಲ್ಲಿ ಕಲಿಯುತ್ತಿದ್ದಾಗ ಶ್ರೀ.ಸತ್ಯಸಾಯಿಬಾಬಾರವರ ಆಶೀರ್ವಾದದೊಂದಿಗೆ ಭಜನೆಯ ಹಾಡುಗಳನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿ ಹಾಡಲು ಪ್ರಾರಂಭಿಸಿದರು.

ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದು ಸುಮಾರು 2 ವರ್ಷಗಳ ಕಾಲ ಸತ್ಯಸಾಯಿ ಯುನಿವರ್ಸಿಟಿಯಲ್ಲಿ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದರು. ನಂತರ ಬೆಂಗಳೂರಿಗೆ ಬಂದು ನೆಲೆಸಿ ವಿದೇಶಿ ಸಂಸ್ಥೆಯಾದ ಸ್ಮಿತ್ ಕ್ಲೈನ್ ಅಂಡ್ ಫ್ರೆಂಚ್ ಫಾರ್ಮಸುಟಿಕಲ್ ನಲ್ಲಿ 1985 ರಿಂದ 1988 ರವರೆಗೆ ಸುಮಾರು 3 ವರ್ಷಗಳ ಕಾಲ ಮಾರ್ಕೆಟಿಂಗ್ ರಿಸರ್ಚ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸಿದರು. ನಂತರ 1988 ರಲ್ಲಿ ತಮ್ಮ ಹೃದಯದ ಒಳಗಿನ ಭಗವಂತನ ಕರೆಗೆ ಓಗೊಟ್ಟು ತಮ್ಮ ಭಜನೆಗಳ ಮುಖಾಂತರ ಸಾಯಿಬಾಬಾರವರ ಸಂದೇಶವಾದ ವಿಶ್ವಪ್ರೇಮ ಸಂದೇಶವನ್ನು ಜಗತ್ತಿಗೆ ತಿಳಿಯಪಡಿಸುವ ಉದ್ದೇಶದಿಂದ ಒಂದು ದಿನ ಇದ್ದಕ್ಕಿದಂತೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲಿಲ್ಲ.

ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಶ್ರೀ.ಹರಿಹರನ್ ರವರು ತಮ್ಮ ಸುಮಧುರ ಸಾಯಿ ಭಜನೆಗಳಿಂದ, ಸಂಕೀರ್ತನೆಗಳಿಂದ, ಭಕ್ತಿ ಗೀತೆಗಳಿಂದ ವಿಶ್ವದಾದ್ಯಂತ ಎಲ್ಲರ ಮನವನ್ನು ತಣಿಸುತ್ತಾ ಸಾಯಿ ಭಜನಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಪ್ರಚಾರ ಪಡಿಸುತ್ತಿದ್ದಾರೆ. ಇವರು ತಮ್ಮ ಭಕ್ತಿಗೀತೆಗಳ ಮುಖಾಂತರ ಎಲ್ಲರ ಮನವನ್ನು ತಣಿಸುತ್ತಿದ್ದಾರೆ. ಇವರು ತಮ್ಮ ಜೀವನವನ್ನೇ ಈ ಸಾಯಿಭಜನೆಗಾಗಿ ಮತ್ತು ಸಾಯಿ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದಾರೆ. ಇವರು ಪ್ರಪಂಚದ ಉದ್ದಗಲಕ್ಕೂ ಸುತ್ತಾಡಿ ಅನೇಕ ಪ್ರಮುಖ ಸ್ಥಳಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್, ಗಾಯನ ಸಮಾಜ, ಸಿಂಧಿ ಹಾಲ್ ನಲ್ಲಿ ತಮ್ಮ ಕಾರ್ಯಕ್ರಮ ನೀಡಿರುವುದೇ ಅಲ್ಲದೇ, ಕರ್ನಾಟಕದ ಇತರ ಕಡೆಗಳಲ್ಲಿ ಮತ್ತು ತಮಿಳುನಾಡು,ಮಹಾರಾಷ್ಟ್ರ, ದೆಹಲಿ, ಕೇರಳ ರಾಜ್ಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ, ಆಸ್ಟ್ರೇಲಿಯ, ಕೆನಡಾ, ಸಿಂಗಪೂರ್, ಅಮೇರಿಕ, ದುಬೈ, ಅಬು ದಾಬಿ, ಕುವೈತ್, ಬೆಹರೈನ್, ಶಾರ್ಜಾ ಮತ್ತಿತರ ದೇಶಗಳಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲಾ, ಹಿಂದಿ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ.ರವಿಂದ್ರ ಜೈನ ರವರ ಜೊತೆಯಲ್ಲಿ ಬೆಂಗಳೂರಿನ ಗಾಯನ ಸಮಾಜದಲ್ಲಿ ಕಾರ್ಯಕ್ರಮವನ್ನು ನೀಡಿದ ಹೆಗ್ಗಳಿಕೆ ಇವರದು.

ಶ್ರೀ.ಹರಿಹರನ್ ರವರು ಕನ್ನಡ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಮಲಯಾಳಂ, ಮರಾಠಿ ಭಾಷೆಗಳಲ್ಲಿ ಭಜನೆಗಳನ್ನು ಹಾಡುವ ಪರಿಣತಿಯನ್ನು ಹೊಂದಿದ್ದಾರೆ. ಇವರು ತಾವೇ ಸ್ವತಃ ಹಾಡುಗಳನ್ನು ರಚಿಸಿ, ಸಂಗೀತ ಸಂಯೋಜನೆ ಮಾಡಿ ಹಾಡುವ ಸಾಮರ್ಥ್ಯವನ್ನು ಹೊಂದಿದ್ದು ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ.

ಶ್ರೀ.ಹರಿಹರನ್ ರವರು ಅನೇಕ ಧ್ವನಿಸುರಳಿಗಳನ್ನು ಹೊರತಂದಿದ್ದಾರೆ. ಅದರಲ್ಲಿ ಮುಖ್ಯವಾದವುಗಳೆಂದರೆ, ಹೆಚ್.ಎಂ.ವಿ.ಯವರ ಸಾಯಿ ಪ್ರೇಮವರ್ಷ, ಸೋಹಂ ಸೋಹಂ, ವಾಯ್ಸ್ ಆಫ್ ದ ಹಾರ್ಟ್, ಭಜನ್ ಜೆಮ್ಸ್, ಮಧುರಂ ಸಾಯಿ ಗೀತಂ, ಸಾಯಿ ಶಿವ ಕಾನ್ಷಿಯಸ್ನೆಸ್, ಒನ್ನೆಸ್ ಮತ್ತಿತರ ಧ್ವನಿಸುರಳಿಗಳು.

ಇತ್ತೀಚಿಗೆ 2010 ನೇ ಇಸವಿಯಲ್ಲಿ ಭಾರತದ ಸಂಗೀತ ಕ್ಷೇತ್ರದ ದಿಗ್ಗಜರುಗಳು ಹಾಡಿರುವ 5 ಧ್ವನಿಸುರಳಿಗಳನ್ನು ಅತ್ಯಂತ ಯಶಸ್ವಿಯಾಗಿ  ಹೊರತಂದಿದ್ದಾರೆ.  ಈ ಧ್ವನಿಸುರಳಿಗಳಲ್ಲಿ ಭಾರತದ ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ.ಹರಿಹರನ್, ಶಂಕರ್ ಮಹಾದೇವನ್, ಶ್ರೀ.ಸುಮೀತ್ ತಪ್ಪೂಜಿ, ಶ್ರೀಮತಿ.ರೀಚ ಶರ್ಮ, ಶ್ರೀ.ಕುನಾಲ್ ಗಾಂಜಾವಾಲಾ, ಶ್ರೀಮತಿ.ಗಾಯತ್ರಿ ಮತ್ತು ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕರಾದ ಶ್ರೀ.ಟಿಪ್ಪು ಮತ್ತು ಶ್ರೀಮತಿ.ಹರಿಣಿ ಇವರುಗಳು ಹಾಡಿದ್ದಾರೆ.

ಶ್ರೀ.ಹರಿಹರನ್ ರವರು ಸಾಯಿಭಕ್ತರ ಅನುಕೂಲಕ್ಕಾಗಿ ಸುಮಾರು 250ಕ್ಕೂ ಹೆಚ್ಚು ಸಾಯಿ ಭಜನೆಗಳನ್ನು ರಚಿಸಿದ್ದು ಈ ಭಜನೆಗಳು ಪ್ರಪಂಚದಾದ್ಯಂತ ಸಾಯಿ ಮಂದಿರಗಳಲ್ಲಿ ಅತ್ಯಂತ ಜನಪ್ರಿಯ ಭಜನೆಗಳೆಂದು ಹೆಸರನ್ನು ಗಳಿಸಿವೆ. ಅಷ್ಟೇ ಅಲ್ಲದೇ, ಈ ಭಜನೆಗಳನ್ನು ಎಲ್ಲಾ ಸಾಯಿಮಂದಿರಗಳಲ್ಲಿ ಹಾಡಲಾಗುತ್ತಿದೆ ಕೂಡ.

ಶ್ರೀ.ಹರಿಹರನ್ ರವರು ತಾವು ಕಾರ್ಯಕ್ರಮ ನೀಡುವುದಷ್ಟೇ ಅಲ್ಲದೇ ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ಭಜನೆಯ ಶಿಕ್ಷಣವನ್ನು ಕಳೆದ 25 ವರ್ಷಗಳಿಂದ ಹೇಳಿಕೊಡುವ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ, ಆನ್ ಲೈನ್ ಭಜನೆಯ ತರಗತಿಗಳನ್ನು ಕೂಡ ನಡೆಸುತ್ತಿದ್ದಾರೆ (http://www.tvhariharen.com/online.html ).

ಶ್ರೀ.ಹರಿಹರನ್ ರವರು ಅನೇಕ ಸಾಯಿಬಾಬಾ ಮಂದಿರಗಳಿಂದ ಮತ್ತು ಸಂಘ ಸಂಸ್ಥೆ ಗಳಿಂದ ಪ್ರಶಸ್ತಿಗಳಿಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ.

ಇವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಗಾಯಕರ ಹೆಸರು  ಶ್ರೀ.ಟಿ.ವಿ.ಹರಿಹರನ್ 
ವಿಳಾಸ
ನಂ  ಎ3, “ಲಕ್ಷ್ಯ ಪಾರಡೈಸ್”, 1 ನೇ  “ಎ” ಮುಖ್ಯರಸ್ತೆ, 
ಜಿ.ಎಂ.ಪಾಳ್ಯ, ನ್ಯೂ ತಿಪ್ಪಸಂದ್ರ ಅಂಚೆ,
ಬೆಂಗಳೂರು-560 075.ಕರ್ನಾಟಕ,ಭಾರತ.
ದೂರವಾಣಿ +91 80 2524 5915 / +91 98861 40959 / +91 98855 20530
ಇಮೇಲ್ tvhariharen@gmail.com, hariharen@hotmail.com
ಅಂತರ್ಜಾಲ http://www.tvhariharen.com
ಅಲ್ಬಮ್ ಗಳು 
ಸಾಯಿ ಪ್ರೇಮವರ್ಷ, ಸೋಹಂ ಸೋಹಂ, ವಾಯ್ಸ್ ಆಫ್ ದ ಹಾರ್ಟ್, ಭಜನ್ ಜೆಮ್ಸ್, ಮಧುರಂ ಸಾಯಿ ಗೀತಂ, ಸಾಯಿ ಶಿವ ಕಾನ್ಷಿಯಸ್ನೆಸ್, ಒನ್ನೆಸ್ ಮತ್ತಿತರ ಧ್ವನಿಸುರಳಿಗಳು.
ಭಜನೆಗಳು 
http://www.youtube.com/watch?v=9IK6ETDWs9s http://www.youtube.com/watch?v=ZyRl09u5PsY



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಹೈದರಾಬಾದ್ ಸಾಯಿ ಭಕ್ತನಿಂದ ಸಾಯಿಬಾಬಾನಿಗೆ ಚಿನ್ನದ ಕಿರೀಟದ ಕಾಣಿಕೆ - 10ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಹೈದರಾಬಾದ್ ಸಾಯಿಭಕ್ತರಾದ ಶ್ರೀ.ಸುದರ್ಶನ್ ಪುನ್ರಾಜ್ ರವರು 735 ಗ್ರಾಂ ತೂಕದ ಸುಮಾರು 10,48,050 ರುಪಾಯಿ ಬೆಲೆ ಬಾಳುವ ಚಿನ್ನದ ಕಿರೀಟವನ್ನು ಸಾಯಿಬಾಬಾನಿಗೆ ಕಾಣಿಕೆಯಾಗಿ ನೀಡಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ
ಕೇಂದ್ರ ಸಚಿವರಾದ ಶ್ರೀ.ಕೆ.ಹೆಚ್.ಮುನಿಯಪ್ಪ ಮತ್ತು ಶ್ರೀ.ವಿ.ನಾರಾಯಣಸ್ವಾಮಿ ಶಿರಡಿ ಭೇಟಿ - 10ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಶ್ರೀ.ಕೆ.ಹೆಚ್.ಮುನಿಯಪ್ಪ ಮತ್ತು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯಗಳ ರಾಜ್ಯ ಸಚಿವ ಶ್ರೀ.ವಿ.ನಾರಾಯಣಸ್ವಾಮಿ ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಆ ಸಂದರ್ಭದಲ್ಲಿ ಶಿರಡಿಯ ಸಂಸತ್ ಸದಸ್ಯರಾದ ಶ್ರೀ.ಬವ್ ಸಾಹೇಬ್ ವಾಕ್ಚುರೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, February 9, 2011

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ.ದಿಗ್ವಿಜಯ್ ಸಿಂಗ್ ಶಿರಡಿ ಭೇಟಿ - 9ನೇ ಫೆಬ್ರವರಿ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ.ದಿಗ್ವಿಜಯ್ ಸಿಂಗ್ ರವರು ಇತ್ತೀಚಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ಸಮಾಧಿ ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಡಾ.ಏಕನಾಥ್ ಗೊಂಡಕರ್ ರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶ್ರೀಮತಿ.ರಾಜಶ್ರೀ ಸಾಸನೆ ಮತ್ತು ಶಿರಡಿ ನಗರಸಭೆಯ ಅಧ್ಯಕ್ಷೆ ಶ್ರೀಮತಿ.ಅಲ್ಕಾ ಶೆಜ್ವಾಲ್ ರವರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ