Wednesday, December 31, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ಲಿಥೋಟ್ರಿಪ್ಸಿ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

 ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 4ನೇ ಡಿಸೆಂಬರ್ 2014 ರಿಂದ 8ನೇ ಡಿಸೆಂಬರ್ 2014 ರವರಗೆ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆಯಲ್ಲಿ ಅಹಮದಾಬಾದ್ ನ  ಖ್ಯಾತ ಲೇಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಕೇತನ್  ಶುಕ್ಲಾರವರ ನೇತೃತ್ವದಲ್ಲಿ ಉಚಿತ ಲಿಥೋಟ್ರಿಪ್ಸಿ ಶಿಬಿರವನ್ನು ಆಯೋಜಿಸಿತ್ತು ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ 30ನೇ  ಡಿಸೆಂಬರ್ 2014, ಮಂಗಳವಾರದಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದ್ಧಿಗಾರರಿಗೆ ತಿಳಿಸಿದರು. ಈ ಶಿಬಿರದಲ್ಲಿ ಒಟ್ಟು 37 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಿ ಮೂತ್ರಕೋಶದ  ಕಲ್ಲುಗಳನ್ನು ಹೊರತೆಗೆಯಲಾಯಿತು. 

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ನಡೆಸಲಾಗುತ್ತಿರುವ ಶ್ರೀ ಸಾಯಿನಾಥ ಆಸ್ಪತ್ರೆ ಮತ್ತು ಸಾಯಿಬಾಬಾ ಆಸ್ಪತ್ರೆಗಳಲ್ಲಿ ವರ್ಷದುದ್ದಕ್ಕೂ ನಿಯಮಿತವಾಗಿ ಕೃತಕ ಕಣ್ಣಿನ ಮಸೂರ ಶಸ್ತ್ರಚಿಕಿತ್ಸಾ ಶಿಬಿರ, ಕೃತಕ ಜೈಪುರದ ಕಾಲುಗಳ ಜೋಡಣೆ ಶಿಬಿರ, ಪ್ಲಾಸ್ಟಿಕ್ ಸರ್ಜರಿ ಶಿಬಿರ, ಹೋಮಿಯೋಪತಿ ಶಿಬಿರ, ಸಂಧಿವಾತ ಮತ್ತು ಕೀಲುನೋವು ಶಿಬಿರ,   ಹಲವಾರು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳೆಯರಿಗಾಗಿ ವಿಶೇಷ ಲ್ಯಾಪ್ರೋಸ್ಕೋಪಿ ಶಿಬಿರ, ರೋಗ ನಿರ್ಣಯ ಶಿಬಿರ, ಮೂಗು ಚಿಕಿತ್ಸಾ ಶಿಬಿರ, ಎಂಡೋಸ್ಕೋಪಿ ಶಿಬಿರ, ಕ್ಯಾನ್ಸರ್ ಪತ್ತೆ ಶಿಬಿರ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಶಿಬಿರ, ಮೆಳ್ಳುಗಣ್ಣು ಪತ್ತೆ ಶಿಬಿರ ಹಾಗೂ ಲಿಥೋಟ್ರಿಪ್ಸಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶ್ರೀ.ಜಾಧವ್ ತಿಳಿಸಿದರು. 

ಇತ್ತೀಚೆಗೆ ಹಮ್ಮಿಕೊಳ್ಳಲಾದ ಲಿಥೋಟ್ರಿಪ್ಸಿ ಶಿಬಿರದಲ್ಲಿ 19 ರೋಗಿಗಳ ಮೂತ್ರಕೋಶದಲ್ಲಿದ್ದ ಸುಮಾರು 1 ರಿಂದ 1.5 ಸೆಂಟಿಮೀಟರ್ ಗಾತ್ರದ ಸಣ್ಣ ಕಲ್ಲುಗಳನ್ನು ಲಿಥೋಟ್ರಿಪ್ಸಿ ಧ್ವನಿ ತರಂಗಗಳ ಮೂಲಕ ಯಶಸ್ವಿಯಾಗಿ ಹೊರತೆಗೆಯಲಾಯಿತು.  ಅದೇ ರೀತಿಯಲ್ಲಿ  18 ರೋಗಿಗಳ  ಮೂತ್ರಕೋಶದಲ್ಲಿದ್ದ ದೊಡ್ಡ ಗಾತ್ರದ ಕಲ್ಲುಗಳನ್ನು ಪರ್ಕ್ಯುಟೇನಿಯಸ್ ನೆಪ್ರೊಲಿಥೋಟೋಮಿ ಶಸ್ತ್ರಚಿಕಿತ್ಸೆಯ ಸಹಾಯದಿಂದ ಹೊರತೆಗೆಯಲಾಯಿತು. ಅಹಮದಾಬಾದ್ ನ ಖ್ಯಾತ ಯೂರೋಸರ್ಜನ್ ಆದ ಡಾ.ಕೇತನ್  ಶುಕ್ಲಾರವರು ತಮ್ಮ ವೈದ್ಯರ ತಂಡ ಹಾಗೂ ಆಂಬ್ಯುಲೆನ್ಸ್ ಶಸ್ತ್ರಚಿಕಿತ್ಸೆ ವ್ಯಾನ್ ನೊಂದಿಗೆ ಶಿರಡಿಯಲ್ಲಿ ನಡೆದ ಈ ಶಿಬಿರಕ್ಕೆ ಆಗಮಿಸಿ ಉಚಿತ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 

ಸಾಮಾನ್ಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ರಾಮ್ ನಾಯಕ್, ಅರವಳಿಕೆ ತಜ್ಞರು, ಶ್ರೀ ಸಾಯಿನಾಥ ಆಸ್ಪತ್ರೆಯ ಸಿಬ್ಬಂದಿಗಳು ಈ ಶಿಬಿರವು ಯಶಸ್ವಿಯಾಗಿ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.  ಈ ಶಸ್ತ್ರ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ 25,000 ದಿಂದ 30,000 ರೂಪಾಯಿಗಳವರೆಗೆ ಖರ್ಚು ತಗುಲಲಿದ್ದು ಶ್ರೀ ಸಾಯಿನಾಥ ಆಸ್ಪತ್ರೆಯು ಉಚಿತವಾಗಿ ಈ ಸೇವೆಯನ್ನು ರೋಗಿಗಳಿಗೆ ಒದಗಿಸಿತು. ಅಷ್ಟೆ ಅಲ್ಲದೆ ಎರಡು ಹೊತ್ತು ಉಚಿತ ಊಟ ಮತ್ತು ಟೀ  ಸೇವೆಯನ್ನು ಸಹ ಆಸ್ಪತ್ರೆಯ ವತಿಯಿಂದ ರೋಗಿಗಳಿಗೆ ನೀಡಲಾಯಿತು. 

ಈ ಶಿಬಿರವು ಯಶಸ್ವಿಯಾಗಿ ನಡೆಯುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ  ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಕೌಶಿಕ್ ಮಕ್ವಾನ, ವೈದ್ಯಕೀಯ ಅಧಿಕಾರಿಗಳು ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಮರಾಠಿಯಿಂದ ಆಂಗ್ಲಭಾಷೆಗೆ:ಶ್ರೀ ನಾಗರಾಜ್ ಅನ್ವೇಕರ್, ಬೆಂಗಳೂರು 
ಆಂಗ್ಲಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ  

Saturday, December 27, 2014

ವಿಶ್ವ ವಿಖ್ಯಾತ ಭಾರತೀಯ ಕುಸ್ತಿ ಪಟು ಶ್ರೀ.ಸುಶೀಲ್ ಕುಮಾರ್ ಸೋಲಂಕಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಇತ್ತೀಚೆಗಷ್ಟೆ ಮುಕ್ತಾಯವಾದ  ಒಲಂಪಿಕ್  ಕ್ರೀಡಾ ಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡ ವಿಶ್ವ ವಿಖ್ಯಾತ ಭಾರತೀಯ ಕುಸ್ತಿ ಪಟು ಶ್ರೀ.ಸುಶೀಲ್ ಕುಮಾರ್ ಸೋಲಂಕಿಯವರು ಇದೇ ತಿಂಗಳ 27ನೇ ಡಿಸೆಂಬರ್ 2014, ಶನಿವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  


ಕನ್ನಡ ಅನುವಾದ:  ಶ್ರೀಕಂಠ ಶರ್ಮ 

Friday, December 26, 2014

ತಲೆಯ ಮೇಲೆ 25 ಕೆಜಿ ತೂಕದ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತುಕೊಂಡು 300 ಕ್ಕೂ ಹೆಚ್ಚು ಕಿಲೋಮೀಟರ್ ಗಳ ದೂರದ ಶಿರಡಿಗೆ ಪಾದಯಾತ್ರೆ ಮಾಡಿದ ಗರ್ದನಖೇಡ್ ನ ಸಾಯಿ ಭಕ್ತ ದಂಪತಿಗಳು - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸ ತಾಲೂಕಿನ ಗರ್ದನಖೇಡ್ ನ ಸಾಯಿ ಭಕ್ತ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ. ಇರಾಜಿ ಅಪ್ಪಾಸೋ ಶಿಂಧೆಯವರುಗಳು ತಮ್ಮ ತಲೆಯ ಮೇಲೆ 25 ಕೆಜಿ ತೂಕದ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತುಕೊಂಡು  ತಮ್ಮ ಸ್ಥಳದಿಂದ ಕಳೆದ ಎರಡು ತಿಂಗಳ ಹಿಂದೆ ಹೊರಟು 300 ಕ್ಕೂ ಹೆಚ್ಚು ಕಿಲೋಮೀಟರ್ ಗಳ ದೂರದ ಪಾದಯಾತ್ರೆಯನ್ನು ಮಾಡಿ ಇದೇ ತಿಂಗಳ  25ನೇ ಡಿಸೆಂಬರ್ 2014, ಗುರುವಾರ ದಂದು ಶಿರಡಿಗೆ ತಲುಪಿ ತಮ್ಮ ಹರಕೆಯನ್ನು ಪೂರೈಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಮರಾಠಿಯಿಂದ ಅಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ , ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, December 23, 2014

ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜ್ ನ ವತಿಯಿಂದ ವಾರ್ಷಿಕ ಕ್ರೀಡಾ ದಿನದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿಯ ಶ್ರೀ ಸಾಯಿಬಾಬಾ ಜ್ಯೂನಿಯರ್ ಕಾಲೇಜ್ ನ ವತಿಯಿಂದ ಇದೇ ತಿಂಗಳ 12ನೇ ಡಿಸೆಂಬರ್ 2014, ಶುಕ್ರವಾರದಂದು ವಾರ್ಷಿಕ ಕ್ರೀಡಾ ದಿನವನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನ ಶಿರಡಿಯ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ವಿಕಾಸ್ ಶಿವಗಜೆಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. 


ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಕ್ರೀಡೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ವೈದ್ಯಕೀಯ ಸಾಮರ್ಥ್ಯ ಉತ್ತಮಗೊಳ್ಳುತ್ತದೆ. ಅಲ್ಲದೇ ಯುವ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನಕ್ಕೆ ಬೇಕಾದ ಸರಿಯಾದ ಮಾರ್ಗದರ್ಶನವನ್ನು ಈ ಕ್ರೀಡೆಗಳು ನೀಡುತ್ತವೆ. ಆದ ಕಾರಣ, ಎಲ್ಲಾ ಶಾಲೆಗಳಲ್ಲೂ ಕ್ರೀಡಾಕೂಟವನ್ನು ತಪ್ಪದೇ ಆಯೋಜಿಸಬೇಕು ಎಂದು ತಿಳಿಸಿದರು. 

ಶ್ರೀ.ರಾಜೇಂದ್ರ ಜಾಧವ್ ರವರು ತಮ್ಮ ಮಾತನ್ನು ಮುಂದುವರಿಸುತ್ತಾ ಭಾರತದ 30 ರಿಂದ 40 ವರ್ಷದ ಒಳಗಿನ 70 ಪ್ರತಿಶತ ಜನರು ಪ್ರತಿನಿತ್ಯ  ದೈಹಿಕ ವ್ಯಾಯಾಮಗಳನ್ನು ಮಾಡುವ ಅಭ್ಯಾಸವನ್ನು ಇರಿಸಿಕೊಂಡಿಲ್ಲ. ಹಾಗಾಗಿ, ಬಹಳಷ್ಟು ಯುವ ಜನರು ಹೃದಯಾಘಾತಕ್ಕೆ  ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು. 

ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ದೈಹಿಕ  ಸಾಮರ್ಥ್ಯ ಹೆಚ್ಚುವುದಲ್ಲದೇ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಅವಶ್ಯಕತೆ ಇದೆ ಎಂದು ತಿಳಿಸಿದ ಶ್ರೀ.ರಾಜೇಂದ್ರ ಜಾಧವ್ ರವರು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಆಟದ ಮೈದಾನದ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.  ಅಷ್ಟೇ ಅಲ್ಲದೆ "ನೀವು ಆಟಗಳಲ್ಲಿ ಭಾಗವಹಿಸಿ ಅದರಲ್ಲಿ ಸೋತರೆ ಅದನ್ನು ಸೋಲೆಂದು ಪರಿಗಣಿಸಬೇಡಿ. ಬದಲಿಗೆ ನೀವು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಂಡಲ್ಲಿ ಅದು ನಿಜವಾದ ಸೋಲು ಎಂಬುದನ್ನು ತಿಳಿಯಿರಿ" ಎಂಬ ಮಹೋನ್ನತ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. 

ಶ್ರೀ ಸಾಯಿಬಾಬಾ ಜ್ಯೂನಿಯರ್  ಕಾಲೇಜ್ ತನ್ನ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್, ಕಬಡ್ಡಿ, ನಿಧಾನಗತಿಯ ಸೈಕಲ್ ತುಳಿತ ಕ್ರೀಡೆಗಳನ್ನು ಆಯೋಜಿಸಿದ್ದರು. ಅಲ್ಲದೇ ಅಡಿಗೆ ಮತ್ತು ರಂಗೋಲಿ ಸ್ಪರ್ಧೆಗಳನ್ನು ಸಹ ಆಯೋಜಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಕುಮಾರಿ ಶ್ರದ್ಧಾ ಶೇಲರ್, ಕುಮಾರಿ ಸ್ವರೂಪ ಸೊಂಟಕ್ಕೆ, ಕುಮಾರಿ ಭಾಗ್ಯಶ್ರೀ ಸೋನಾವಾನೆ ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದರು. ಅಡಿಗೆ ಸ್ಪರ್ಧೆಯಲ್ಲಿ ಕುಮಾರಿ ಸ್ನೇಹಾ ತೋರಟ್, ಕುಮಾರಿ ರುಚಿತಾ ಓಸ್ವಾಲ್ ಮತ್ತು ಶ್ರೀ.ಹಿತೇಶ್ ಘಡಿವಾಲ್ ರವರು ಕ್ರಮವಾಗಿ ಮೊದಲನೇ, ಎರಡನೇ ಮತ್ತು ಮೂರನೇ ಸ್ಥಾನಗಳನ್ನು ಗಳಿಸಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು, 
ಕನ್ನಡಕ್ಕೆ: ಶ್ರೀಕಂಠ ಶರ್ಮ