ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ರಾಮನವಮಿ ಉತ್ಸವವನ್ನು 7ನೇ ಏಪ್ರಿಲ್ 2014, ಸೋಮವಾರ ದಿಂದ 9ನೇ ಏಪ್ರಿಲ್ 2014, ಬುಧವಾರ ದವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.
ಶ್ರೀ ಸಾಯಿಬಾಬಾರವರು ತಮ್ಮ ಅವತರಣ ಕಾಲದಲ್ಲಿ 1912ನೇ ಇಸವಿಯಿಂದ ಶ್ರೀ ರಾಮನವಮಿ ಉತ್ಸವವನ್ನು ಆಚರಿಸಲು ಅನುಮತಿ ನೀಡಿದ್ದರು. ಅಂದಿನಿಂದ ಈ ಉತ್ಸವವನ್ನು ಶಿರಡಿಯಲ್ಲಿ ಪ್ರತಿವರ್ಷವೂ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಅಜಯ್ ಮೋರೆ ತಿಳಿಸಿದರು.
3 ದಿನಗಳ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:
ಉತ್ಸವದ 3 ದಿನಗಳೂ ಶಿರಡಿಯ ಸಾಯಿನಗರ ಮೈದಾನದಲ್ಲಿ ಆಹ್ವಾನಿತ ಕಲಾವಿದರಿಂದ ಸಂಜೆ 7.30 ರಿಂದ ರಾತ್ರಿ 10.30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ, ಈ 3 ದಿನಗಳೂ ಜನಸಂದಣಿ ಹೆಚ್ಚಾಗಿರುವ ಕಾರಣ ಶ್ರೀ ಸತ್ಯನಾರಾಯಣ ವ್ರತ ಹಾಗೂ ಅಭಿಷೇಕ ಪೂಜೆಯ ಕಾರ್ಯಕ್ರಮಗಳು ಇರುವುದಿಲ್ಲ.
ದ್ವಾರಕಾಮಾಯಿಯಲ್ಲಿ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣದಲ್ಲಿ ಪಾಲ್ಗೊಳ್ಳಬಯಸುವ ಸಾಯಿ ಭಕ್ತರು ತಮ್ಮ ಹೆಸರನ್ನು 6ನೇ ಏಪ್ರಿಲ್ 2014, ಭಾನುವಾರದಂದು ಮಧ್ಯಾನ್ಹ
3 ರಿಂದ 6 ರ ಒಳಗಾಗಿ ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗುವ ವೇದಿಕೆಯಲ್ಲಿ ನೀಡತಕ್ಕದ್ದು. ಅದೇ ದಿನ ರಾತ್ರಿ 7.00 ಗಂಟೆಗೆ ಲಾಟರಿಯ ಮುಖಾಂತರವಾಗಿ ಭಕ್ತರ ಹೆಸರನ್ನು ಆಯ್ಕೆ ಮಾಡಲಾಗುವುದು. ಅದೇ ರೀತಿಯಲ್ಲಿ ಉತ್ಸವದ ಮುಖ್ಯ ದಿನವಾದ 8ನೇ ಏಪ್ರಿಲ್ 2014 ರ ರಾತ್ರಿ ಸಮಾಧಿ ಮಂದಿರದಲ್ಲಿ ಭಜನೆ ಮಾಡಲು ಇಚ್ಚಿಸುವ ಸಾಯಿಭಕ್ತ ಭಜನ ಗಾಯಕ/ಗಾಯಕಿಯರು ತಮ್ಮ ಹೆಸರನ್ನು ರಕ್ಷಾಣಾ ವಿಭಾಗದ ಎದುರುಗಡೆ ಇರುವ ಪ್ರಕಟಣಾ ಕೊಠಡಿಯಲ್ಲಿ ನೀಡತಕ್ಕದ್ದು.
ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯಕಾರಿ ಅಧಿಕಾರಿಗಳು, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಸಾಯಿಬಾಬಾ ಸಂಸ್ಥಾನದ ಎಲ್ಲಾ ಕಾರ್ಮಿಕರೂ ಹಗಲೂ ರಾತ್ರಿ ಉತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ.ಅಜಯ್ ಮೋರೆಯವರು ಸುದ್ಧಿಗಾರರಿಗೆ ತಿಳಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ