Tuesday, March 16, 2010

ಸಾಯಿ ಮಹಾಭಕ್ತ - ಅಬ್ದುಲ್ಲಾ ಜಾನ್ - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 




ಅಬ್ದುಲ್ಲಾ ಜಾನ್ ರವರು ಮೊದಲು ಪಾಕಿಸ್ತಾನದ ಪೇಶಾವರ್ ಸಮೀಪದಲ್ಲಿರುವ ಮರ್ಜ ಜಿಲ್ಲೆಯ ತರ್ಬೆಲ್ಲ ಗ್ರಾಮದ ವಾಸಿಯಾಗಿದ್ದರು. ಇವರು ಪಟಾಣ್ ಮುಸ್ಲಿಮರಾಗಿದ್ದರು. ನಂತರದಲ್ಲಿ ಸಾಕೂರಿ ಬಳಿಯ ಕೊರಾಳೆ ಹಳ್ಳಿಯ ನಿವಾಸಿಯಾಗಿದ್ದು ಸಾಯಿಬಾಬಾರವರ ಬಳಿ ಲೌಕಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಬಂದರು. ಚಿಕ್ಕಂದಿನಲ್ಲೇ ತಮ್ಮನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ತರ್ಬೆಲ್ಲ ಗ್ರಾಮ ತೊರೆದು ಊರೂರು ಅಲೆದಾಡುತ್ತ ಮುಸ್ಲಿಮರ ಪವಿತ್ರ ತೀರ್ಥಕ್ಷೇತ್ರ ಮೆಕ್ಕಾಗೆ ಹೋಗಲು ಯಾರಾದರು ಸಹಾಯ ಮಾಡುವರೆಂಬ ಆಸೆಯಿಂದ ಮನ್ಮಾಡ್ ಗ್ರಾಮಕ್ಕೆ ಬಂದರು. ಮನ್ಮಾಡ್ ನಿಂದ ಮುಂಬೈಗೆ ಹೋಗಬೇಕೆಂದಿದ್ದ ಅವರು ಅಲ್ಲಿಂದ ೩೦ ಮೈಲಿ ದೂರದಲ್ಲಿನ ಶಿರಡಿಯಲ್ಲಿ ಸಾಯಿಬಾಬಾರವರು ಫಕೀರರಿಗೆ ಮೆಕ್ಕಾಗೆ ಹೋಗಲು ಹಣದ ಸಹಾಯ ಮಾಡುತ್ತಾರೆಂದು ಯಾರೋ ಹೇಳಿದ್ದರಿಂದ ತಮ್ಮ ನಿರ್ಧಾರವನ್ನು ಬದಲಿಸಿ ತಮಗೂ ಕೊಡ ಸಾಯಿಬಾಬಾ ಸಹಾಯ ಮಾಡುವರೆಂಬ ಆಸೆಯಿಂದ ೧೯೧೩ ರಲ್ಲಿ ಶಿರಡಿಗೆ ಬಂದರು. ಅಬ್ದುಲ್ಲಾ ಜಾನ್ ರವರು ಮಸೀದಿಯ ದ್ವಾರದ ಬಳಿಗೆ ಬಂದಾಗ ಸಾಯಿಬಾಬಾರವರನ್ನು ನೋಡಿ ಅವರೇ ತಮ್ಮ ಗುರುವೆಂದು ಮನದಲ್ಲೇ ನಿರ್ಧರಿಸಿಕೊಂಡರು. ನಂತರ ಅಬ್ದುಲ್ಲಾ ಜಾನ್ ರವರು ಮೆಕ್ಕಾಗೆ ಹೋಗಲೇ ಇಲ್ಲ. ಏಕೆಂದರೆ, ಸಾಯಿಬಾಬಾರವರೇ ಅಬ್ದುಲ್ಲಾ ಜಾನ್ ರವರ ಎಲ್ಲ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಯಥೇಚ್ಚವಾಗಿ ಆಹಾರ ಬಟ್ಟೆಗಳನ್ನು ನೀಡಿ ಸಲಹುತ್ತಿದ್ದರು.

ಅಬ್ದುಲ್ಲಾ ಜಾನ್ ರವರು ಶಿರಡಿಯಲ್ಲಿ ಆರಾಮವಾಗಿ ಕಾಲ ಕಳೆಯಬೇಕೆಂದುಕೊಂಡಿದ್ದರು. ಅವರು ಶಿರಡಿಗೆ ಬಂದಾಗ ಅವರಿಗೆ ಕೇವಲ ೧೭ ವರ್ಷ ವಯಸ್ಸಾಗಿತ್ತು. ಜೀವನದ ಬಗ್ಗೆ ಗಂಭೀರ ಚಿಂತನೆ ಇರಲಿಲ್ಲ. ಆದರೆ ಶಿರಡಿಯಲ್ಲಿ ತಂಗಿದ್ದಾಗ ಬಾಬಾರವರು ಅಬ್ದುಲ್ಲಾ ಜಾನ್ ರವರ ಜೀವನದಲ್ಲಿ ಮಹತ್ತರವಾದ ಬದಲಾವಣೆಯಾಗುವಂತೆ ಮಾಡಿ ಹಿಂದೂ ಮುಸ್ಲಿಂ ಐಕ್ಯಮತ್ಯ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲು ಅಬ್ದುಲ್ಲಾ ಜಾನ್ ರವರು ಎಲ್ಲ ಪಟಾಣ್ ಮುಸ್ಲಿಮರಂತೆ ಹಿಂದೂಗಳನ್ನು ದ್ವೇಷಿಸುತ್ತಿದ್ದರು. ಆದರೆ, ಬಾಬಾರವರ ಬಳಿ ೩ ವರ್ಷಗಳ ಕಾಲ ಇದ್ದ ಬಳಿಕ ಆ ಭಾವನೆ ಹೋಗಿ ಹಿಂದುಗಳನ್ನು ತಮ್ಮ ಭಾಂದವರಂತೆ ಕಾಣಲು ಆರಂಭ ಮಾಡಿದರು. ಅವರಲ್ಲಿ ನಿಧಾನವಾಗಿ ರಾಷ್ಟ್ರೀಯ ಐಕ್ಯತ ಮನೋಭಾವ ಉಂಟಾಯಿತು. ಮುಂಬೈನಲ್ಲಿ ಹಿಂದೂ-ಮುಸ್ಲಿಂ ಪಂಗಡದವರು ಪರಸ್ಪರ ಹೊಡೆದಾಡುತ್ತ ಮಂದಿರ ಮಸೀದಿಗಳನ್ನು ಧ್ವಂಸ ಮಾಡುತ್ತಿರುವುದನ್ನು ಕಂಡು ಆತೀವ ದುಃಖವನ್ನು ವ್ಯಕ್ತಪಡಿಸುತ್ತಿದ್ದರು ಹಾಗೂ ಈ ರೀತಿ ಪರಸ್ಪರ ಹಿಂದೂ ಮುಸ್ಲಿಮರು ಕಾದಾಡುತ್ತಿದ್ದರೆ ವಿದೇಶಿಯರು ಇಡೀ ದೇಶವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಕಳವಳಪಡುತ್ತಿದ್ದರು.

ಸಾಯಿಬಾಬಾರವರು ಸಮಾಧಿ ಹೊಂದಿದಾಗ ಅಬ್ದುಲ್ಲಾ ಜಾನ್ ರವರು ೨೨ ವರ್ಷ ವಯಸ್ಸಿನವರಾಗಿದ್ದರು. ಆಗಲೂ ಕೂಡ ಅವರಿಗೆ ತಮ್ಮ ಆಧ್ಯಾತ್ಮಿಕ ಬೆಳವಣಿಗೆ ಬಗ್ಗೆ ಹೆಚ್ಚು ಕಾಳಜಿ ಇರಲಿಲ್ಲ. ಆದರೆ, ಬಾಬಾರವರು ಸಮಾಧಿ ಹೊಂದಿದ್ದನ್ನು ಕಂಡು ಅತೀವ ದುಃಖವಾಗಿ ಮತ್ತೆ ಹಿಂದಿನಂತೆ ಅಲೆದಾಡಲು ಪ್ರಾರಂಭಿಸಿದರು. ೧೯೨೬ ರಲ್ಲಿ ಉತ್ತರದ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿನ ಸ್ವಾಟ್ ವ್ಯಾಲಿಯಲ್ಲಿದ್ದ (ಮಲೆಕಂಡ್) ಮೊಹಮ್ಮದ್ ರವರ ನೇರ ಅನುಯಾಯಿಯಾದ ಅಕುನ್ ಬಾಬಾರವರ ಗೋರಿಯನ್ನು ಸಂದರ್ಶಿಸಿದರು. ಅಕುನ್ ಬಾಬಾರವರ ಅದ್ಭುತ ಪವಾಡ ಶಕ್ತಿಗಳನ್ನು ಕೇಳಿದ್ದ ಅಬ್ದುಲ್ಲಾ ಜಾನ್ ರವರು ಅಲ್ಲಿಯೇ ಸ್ವಲ್ಪ ತಿಂಗಳು ತಂಗಿದ್ದರು. ಆಗ ಒಂದು ದಿನ ಅಬ್ದುಲ್ಲಾ ಜಾನ್ ರವರ ಕನಸಿನಲ್ಲಿ ಒಬ್ಬ ಸಾಧು ದರ್ಶನ ನೀಡಿದರು. ಅದು ಅವರು ನಿತ್ಯ ಪ್ರಾರ್ಥನೆ ಮಾಡುತ್ತಿದ್ದ ಅಕುನ್ ಬಾಬಾ ಆಗಿರದೆ ಶಿರಡಿಯ ಸಾಯಿಬಾಬಾ ಆಗಿದ್ದರು. ಕನಸಿನಲ್ಲಿ ಸಾಯಿಬಾಬಾರವರು ಅಬ್ದುಲ್ಲಾ ಜಾನ್ ರವರ ತಲೆಯ ಬಳಿ ಕುರ್ಚಿಯಲ್ಲಿ ಕುಳಿತು ದರ್ಶನ ನೀಡಿದರು. ಬೆಳಗ್ಗೆ ಎಚ್ಚರವಾದಾಗ ಆವರಿಗೆ ತಮಗೆ ಬಿದ್ದ ಕನಸಿನ ನೆನಪಾಯಿತು. ಆಗ ಅಬ್ದುಲ್ಲಾ ಜಾನ್ ರವರಿಗೆ ಸಾಯಿಬಾಬಾರವರು ಸಮಾಧಿ ಹೊಂದಿ ೮ ವರ್ಷವಾಗಿದ್ದರೂ ಇನ್ನು ಕೂಡ ತಾವು ಬಾಬಾರವರಿಂದ ರಕ್ಷಿಸಲ್ಪಡುತ್ತಿರುವುದರ ಅರಿವಾಯಿತು. ಸಾಯಿಬಾಬಾರವರು ೧೫೦೦ ಮೈಲಿ ದೂರದಲ್ಲಿದ್ದ ಅಬ್ದುಲ್ಲಾ ಜಾನ್ ರವರಿಗೆ ಸಾಕ್ಷಾತ್ಕಾರ ನೀಡಿ ಅಬ್ದುಲ್ಲಾ ಜಾನ್ ರವರಲ್ಲಿ ಸಾಯಿಬಾಬಾ ತಮ್ಮನ್ನು ೫ ವರ್ಷಗಳ ಕಾಲ ಶಿರಡಿಯಲ್ಲಿದ್ದಾಗ ರಕ್ಷಿಸಲಿಲ್ಲ ಎಂಬ ಭಾವನೆಯನ್ನು ಹೋಗಲಾಡಿಸಿದರು. ಕೂಡಲೇ ಅಬ್ದುಲ್ಲಾ ಜಾನ್ ರವರು ಭಾರತಕ್ಕೆ ಮರಳಿ ಬಂದರು.

೧೯೨೪ ರಲ್ಲಿ ಅವರು ಮದುವೆ ಮಾಡಿಕೊಂಡು ಶಿರಡಿಯ ಬಳಿಯಿರುವ ಕೊರಾಳೆ ಎಂಬ ಹಳ್ಳಿಯಲ್ಲಿ ವಾಸಿಸಲು ಆರಂಭಿಸಿದರು. ಸಾಯಿಬಾಬಾರವರು ಆಗಾಗ್ಗೆ ಅಬ್ದುಲ್ಲಾ ಜಾನ್ ರವರಿಗೆ ದರ್ಶನ ನೀಡುತ್ತಿದ್ದರಿಂದ ಅಬ್ದುಲ್ಲಾ ರವರು ಅದೃಷ್ಟವಂತರೆಂದು ಹೇಳಬೇಕು. ಸಾಯಿಬಾಬಾರವರು ಜೀವಂತವಾಗಿದ್ದಾಗ ಸದಾಕಾಲ ಅವರ ಬಳಿ ಜನ ಜಂಗುಳಿ ಇರುತ್ತಿತ್ತು ಮತ್ತು ಮಸೀದಿಯಲ್ಲಿ ಕಾಲಿಡಲು ಕೂಡ ಕಷ್ಟವಾಗುತ್ತಿತ್ತು. ಅಪಾರ ಜನಗಳ ಜೊತೆಯಲ್ಲಿ ನಾಯಿಗಳು ಕೂಡ ಮಸೀದಿಯಲ್ಲಿ ಸದಾಕಾಲ ತುಂಬಿರುತ್ತಿದ್ದು ಸಾಯಿಬಾಬಾರವರನ್ನು ದರ್ಶನ ಮಾಡುವುದೇ ಬಹಳ ಕಷ್ಟದ ಕೆಲಸವಾಗಿತ್ತು.  ಅಬ್ದುಲ್ಲಾ ಜಾನ್ ರವರು ೧೯೩೬ ರಲ್ಲಿ ಮಸೀದಿಯು ಜನಗಳೇ ಇಲ್ಲದೆ ಖಾಲಿಯಾಗಿ ಕಾಣುತ್ತಿತ್ತು ಎಂದು ಹೇಳಿದ್ದಾರೆ.

ಸಾಯಿಬಾಬಾರವರು ಜೀವಂತವಾಗಿದ್ದಾಗ ಒಮ್ಮೆ ಅಬ್ದುಲ್ಲಾ ಜಾನ್ ರವರು "ನಿಮ್ಮ ಮರಣದ ನಂತರ ಭಕ್ತರನ್ನು ನೀವು ಕಾಪಾಡಲು ಇರುವುದಿಲ್ಲ ಮತ್ತು ನಿಮ್ಮ ಭಕ್ತರ ಮೇಲಿನ ನಿಮ್ಮ ಪ್ರಭಾವ ಕಡಿಮೆಯಾಗುತ್ತದೆ" ಎಂದರು. ಆಗ ಸಾಯಿಬಾಬಾರವರು ತಮ್ಮ ಸಮಾಧಿಯಿಂದಲೇ ತಾವು ಸದಾಕಾಲ ಭಕ್ತರಿಗೆ ಅನುಗ್ರಹಿಸುತ್ತೇನೆ ಮತ್ತು ಪ್ರಭಾವ ಬೀರುತ್ತೇನೆ ಎಂದು ಹೇಳಿ ತಾವು ಜನನ ಮರಣಗಳಿಗೆ ಅತೀತರೆಂದು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದು ಕಂಡು ಬರುತ್ತದೆ.

ಮುಸ್ಲಿಮರಲ್ಲಿ ೫ ಪ್ರಮುಖ ತತ್ವಗಳಿವೆ. ಅವು ಯಾವುವೆಂದರೆ ೧) ಕಲಾಮಿಯನ್ನು ಉಚ್ಚರಿಸುವುದು ಅಥವಾ ದೇವರು ಇಲ್ಲವೆಂದು ಹಾಗೂ ಮೊಹಮ್ಮದ್ ರವರು ತಮ್ಮ ಗುರುಗಳೆಂದು ನಂಬಿಕೆಯನ್ನು ವ್ಯಕ್ತ ಪಡಿಸುವುದು ೨) ಪ್ರತಿದಿನ ಬೆಳಗಿನ ಜಾವ ೫ ಘಂಟೆಗೆ, ೧೦ ಘಂಟೆಗೆ, ಮಧ್ಯಾನ್ಹ ೧೨ ಘಂಟೆಗೆ, ಸಂಜೆ ೫ ಘಂಟೆಗೆ ಹಾಗೂ ರಾತ್ರಿ ವೇಳೆಯಲ್ಲಿ ಪಶ್ಚಿಮ ದಿಕ್ಕಿಗೆ ಮಂಡಿಯೂರಿ ನಮಾಜ್ ಮಾಡುವುದು ೩) ರಂಜಾನ್ ವೇಳೆ ೪೦ ದಿನಗಳು ಹಾಗೂ ವರ್ಷದ ಇನ್ನಿತರ ಸಂದರ್ಭಗಳಲ್ಲಿ ೮ ರಿಂದ ೧೦ ಬಾರಿ ಉಪವಾಸ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ೪) ಭಿಕ್ಷೆ ನೀಡುವುದು ೫) ಮೆಕ್ಕಾ ಅಥವಾ ಹಜ್ ಯಾತ್ರೆ ಮಾಡುವುದು. ಸಾಯಿಬಾಬಾರವರು ಮೇಲೆ ತಿಳಿಸಿದ ೫ ತತ್ವಗಳಲ್ಲಿ ಭಿಕ್ಷೆ ನೀಡುವ ತತ್ವವನ್ನು ಮಾತ್ರ ಚಾಚೂ ತಪ್ಪದೆ ತಮ್ಮ ಜೀವನ ಪರ್ಯಂತ ಪಾಲಿಸಿದರು. ಅವರು ಸ್ವತಃ ಫಕೀರರಾಗಿದ್ದು ನಿತ್ಯ ಭಿಕ್ಷೆ ಬೇಡುತ್ತಿದರು ಕೂಡ ಶ್ರೀಮಂತರಂತೆ ಮತ್ತು ರಾಜ ಮನೆತನದವರಂತೆ ೨೦೦ ಕ್ಕೂ ಹೆಚ್ಚು ಮಂದಿ ಮನೆಗಳಿಲ್ಲದ ಭಿಕ್ಷುಕರಿಗೆ ಪ್ರತಿದಿನ ಆಹಾರ ನೀಡಿ ರಕ್ಷಿಸುತ್ತಿದ್ದರು. ಕೇವಲ ಸಸ್ಯಾಹಾರವೇ ಅಲ್ಲದೆ ಮಾಂಸಾಹಾರ ಕೂಡ ಸ್ವತಃ ತಮ್ಮ ಕೈಗಳಿಂದಲೇ ಮಾಡಿ ಬಡಿಸುತ್ತಿದ್ದರು. ಬರಿ ಆಹಾರವನ್ನೇ ಅಲ್ಲದೆ ಬಟ್ಟೆಗಳನ್ನು ಕೂಡ ಕೊಡುತ್ತಿದ್ದರು. ಅನೇಕರಿಗೆ ಪ್ರತಿದಿನ ದಾನವಾಗಿ ದಕ್ಷಿಣೆಯನ್ನು ನೀಡುತ್ತಿದ್ದರು. ತಮ್ಮನ್ನು ಬೇಡಿ ಬಂದ ನೃತ್ಯ ಮಾಡುವವರಿಗೂ, ದೊಂಬರಾಟದವರಿಗೂ, ರಾಮದಾಸಿಗಳಿಗೂ ಕೂಡ ಯಥೇಚ್ಚವಾಗಿ ಹಣವನ್ನು ನೀಡುತ್ತಿದ್ದರು. ಇವರ ದಾನಶೀಲ ಗುಣವು ದೇಶದ ಎಲ್ಲೆಡೆ ಹಬ್ಬಿ ಮದ್ರಾಸಿ ರಾಮದಾಸಿ ಮತ್ತು ತರ್ಬೆಲ್ಲ ಅಬ್ದುಲ್ಲಾ ಜಾನ್ ರವರನ್ನು ಮತ್ತು ಇವರ ತರಹ ಇನ್ನು ಅನೇಕ ಜನರನ್ನು ಶಿರಡಿ ಸಾಯಿಬಾಬಾರವರು ತಮ್ಮೆಡೆ ಸೆಳೆದರು.

Saturday, March 13, 2010

ಸಾಯಿ ಮಹಾಭಕ್ತ - ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿ - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 


ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿ ಥಾಣೆಯಲ್ಲಿ ವಾಸಿಸುತ್ತಿದ್ದರು. ಇವರು ಸಾಯಿಬಾಬಾರವರನ್ನು ೧೯೧೩ ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಇವರ ಪತ್ನಿಯು ಯಾವುದೋ ಕಾಯಿಲೆಯಿಂದ ನೆರಳುತ್ತಿದರು. ಅವರ ಪತ್ನಿಯ ಗಂಟಲು ಹಾಗೂ ಕೆನ್ನೆಗಳು ಊದಿಕೊಂಡು ಏನನ್ನು ತಿನ್ನಲಾರದ ಸ್ಥಿತಿಯಲ್ಲಿದರು. ಯಾವುದೇ ವೈದ್ಯಕೀಯ ಉಪಚಾರಗಳು ಪ್ರಯೋಜನಕಾರಿಯಾಗಲಿಲ್ಲ.  ಆಗ ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿ ತಮ್ಮ ಊರಿನ ಪರಿಚಯದವರ ಸಲಹೆಯ ಮೇರೆಗೆ ತಮ್ಮ ಪತ್ನಿಯನ್ನು ಕರೆದುಕೊಂಡು ಸಾಯಿಬಾಬಾರವರಲ್ಲಿಗೆ ಹೋದರು. ಅವರು ಪ್ರಯಾಣ ಆರಂಭಿಸಿದಾಗ ಅವರ ಪತ್ನಿಯು ಏನು ತಿನ್ನಲಾರದ ಸ್ಥಿತಿಯಲ್ಲಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಇಗಟಪುರಿಯ ಹತ್ತಿರಕ್ಕೆ ಬಂದಾಗ ಅವರು ತಮ್ಮ ಪತ್ನಿಗೆ ಟೀ ಕುಡಿಯಲು ಕೊಟ್ಟರು. ಏನು ಆಗಲಿಲ್ಲ. ನಂತರ ನಾಸಿಕ್ ತಲುಪಿದಾಗ ಮತ್ತೆ ಸ್ವಲ್ಪ ಟೀ ಕುಡಿಯಲು ಕೊಟ್ಟರು. ಆಗಲು ಏನು ತೊಂದರೆ ಆಗಲಿಲ್ಲ. ಶಿರಡಿಯನ್ನು ತಲುಪುವ ಹೊತ್ತಿಗೆ ಅವರ ಪತ್ನಿಗೆ ಬಹಳ ಗುಣ ಕಂಡು ಬಂದಿತು. ಶಿರಡಿ ತಲುಪಿ ಮಸೀದಿಗೆ ಹೋಗಿ ದಂಪತಿಗಳು ಸಾಯಿಬಾಬಾರವರಿಗೆ ಭಕ್ತಿಯಿಂದ ವಂದಿಸಿದರು. ಸಾಯಿಬಾಬಾರವರು "ಇಲ್ಲಿಗೆ ಏಕೆ ಬಂದೆ? ನಿನಗೇನು ಬೇಕು?" ಎಂದು ಕೇಳಿದರು. ಅಬ್ದುಲ್ ರಹೀಂ ಶಂಶುದ್ದೀನ್ ರಂಗಾರಿಯವರು ತಮ್ಮ ಪತ್ನಿಯವರಿಗೆ ಗಂಟಲು ಹಾಗೂ ಕೆನ್ನೆಗಳು ಊದಿಕೊಂಡು ಏನನ್ನು ತಿನ್ನಲಾರದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು. ಆಗ ಸಾಯಿಬಾಬಾರವರು ಅವರ ಪತ್ನಿಗೆ ತಮ್ಮ ಹತ್ತಿರ ಬರಲು ತಿಳಿಸಿದರು ಮತ್ತು ಅವರು ಹತ್ತಿರ ಬಂದಾಗ ಅವರ ತಲೆಯ ಮೇಲೆ ತಮ್ಮ ಹಸ್ತವನ್ನಿರಿಸಿ ಆಶೀರ್ವದಿಸುತ್ತ "ಖುದಾ ಅಚ್ಚಾ ಕರೇಗಾ" ಎಂದರು. ನಂತರ ರಂಗಾರಿಯವರು ದಕ್ಷಿಣೆಯನ್ನು ಬಾಬಾರವರಿಗೆ ಕೊಡಲು ಅದನ್ನು ಬಾಬಾರವರು ಸ್ವೀಕರಿಸಿ ಅವರಿಗೆ ಉಧಿ  ನೀಡಿ ಆಶೀರ್ವದಿಸಿದರು. ಶಿರಡಿಯಲ್ಲಿ ೨ ಘಂಟೆಗಳ ಕಾಲ ಇದ್ದು ಅವರ ಪತ್ನಿಯವರಿಗೆ ಊತ ಕಡಿಮೆಯಾದ ಮೇಲೆ ಬಾಬಾರವರ ಅನುಮತಿಯಿಲ್ಲದೆ ಶಿರಡಿಯನ್ನು ಬಿಟ್ಟು ಹೊರಟರು. ಆದರೆ ಅದಕ್ಕೆ ಅವರು ಸರಿಯಾದ ದಂಡವನ್ನೇ ತೆರಬೇಕಾಯಿತು. ಅವರು ಪ್ರಯಾಣಿಸುತ್ತಿದ್ದ ಟಾಂಗ ರಾತ್ರಿ  ಹತ್ತು ಘಂಟೆಯ ಹೊತ್ತಿಗೆ ಮಾರ್ಗ ಮಧ್ಯದಲ್ಲಿ ಮುರಿದು ಬಿದ್ದಿತು. ಆ ಸಮಯದಲ್ಲಿ ಆ ಜಾಗದಲ್ಲಿ ಬೇರೆ ಯಾವ ವಾಹನ ಸೌಕರ್ಯವಿರಲಿಲ್ಲ. ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಸುಮಾರು ಮೈಲು ದೂರವಿರುವ ಮುಂದಿನ ಹಳ್ಳಿಗೆ ಹೋಗುವ ಸ್ಥಿತಿಯಲ್ಲಿರಲಿಲ್ಲ. ಆ ಸ್ಥಳವು ನಿರ್ಜನ ಪ್ರದೇಶವಾಗಿದ್ದಿತು ಮತ್ತು ಹಾವಾಮಾನ ಕೂಡ ಪ್ರತಿಕೂಲವಾಗಿದ್ದಿತು. ರಂಗಾರಿಯವರು ಸಾಯಿಬಾಬಾರವರಿಗೆ ಹೇಳದೆ ಬಂದಿದ್ದು ತಪ್ಪಾಯಿತು ಎಂದು ಅರಿವಾಗಿ ಏನು ಮಾಡಲು ತೋಚದೆ ಮತ್ತು ಮುಂದೇನಾಗುವುದೋ ಎಂದು ತಿಳಿಯದೆ ಪರಿತಪಿಸುತ್ತಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಯಾವುದು ಟಾಂಗ ಬರುವ ಶಬ್ದ ಕೇಳಿಸಿತು. "ಥಾನವಾಲ, ಥಾನವಾಲ" ಎಂದು ಕೂಗುತ್ತ ಒಬ್ಬ ಇವರಿದ್ದ ಬಳಿಗೆ ಬಂದನು. ರಂಗಾರಿಯವರು ತಾವೇ "ಥಾನಾವಾಲ" ಎಂದು ಟಾಂಗವಾಲನಿಗೆ ಹೇಳಿದರು.  ಅವನು "ಸಾಯಿಬಾಬಾರವರಿಗೆ ನಿಮ್ಮ ಟಾಂಗ ಮುರಿದು ಬಿದ್ದಿರುವುದು ತಿಳಿದು ನಿಮ್ಮನ್ನು ಕರೆತರಲು ನನ್ನನ್ನು ಕಳುಹಿಸಿದ್ದಾರೆ" ಎಂದು ಹೇಳಿದನು.  ನಂತರ ಟಾಂಗವಾಲ ಅವರನ್ನು ಕರೆದುಕೊಂಡು  ಸುಮಾರು ೨ ಘಂಟೆಯ ಸಮಯಕ್ಕೆ ಶಿರಡಿ ತಲುಪಿಸಿದನು. ಸಾಯಿಬಾಬಾರವರು "ನನಗೆ ಹೇಳದೆ ನೀವುಗಳು ಹೊರಟಿದ್ದಕ್ಕೆ ಮಾರ್ಗ ಮಧ್ಯದಲ್ಲಿ ಕಷ್ಟಪಡಬೇಕಾಯಿತು" ಎಂದು ತಿಳಿ ಹೇಳಿದರು. ರಂಗಾರಿ ಸಾಯಿಬಾಬಾರವರ ಕ್ಷಮೆ ಯಾಚಿಸಿದರು. ಆಗ ಬಾಬಾರವರು "ಬೆಳಗಾಗುವ ತನಕ ಇಲ್ಲೇ ಇರಿ" ಎಂದು ಸೂಚಿಸಿದರು. ಮಾರನೇಯ ದಿನ ತಮ್ಮ ಬೆಳಗಿನ ಭಿಕ್ಷೆಯಿಂದ ಹಿಂತಿರುಗಿದ ನಂತರ ರಂಗಾರಿಯವರಿಗೆ ಸ್ವಲ್ಪ ಬ್ರೆಡ್, ತರಕಾರಿ ಹಾಗೂ ಸ್ವಲ್ಪ ಆಹಾರವನ್ನು ತಿನ್ನಲು ನೀಡಿದರು. ನಂತರ ಬಾಬಾರವರು "ನೀನಿನ್ನು ಹೊರಡಬಹುದು" ಎಂದು ತಿಳಿಸಿದರು. ರಂಗಾರಿಯವರು ಮಸೀದಿಯ ಹೊರಗೆ ತೆರಳಿ ಅಲ್ಲಿ ಟಾಂಗ ಇಲ್ಲದಿದ್ದನ್ನು  ಕಂಡು ಪುನಃ ಬಂದು ಸಾಯಿಬಾಬಾರವರಿಗೆ ಆ ವಿಷಯವನ್ನು ತಿಳಿಸಿದರು. ಸಾಯಿಬಾಬಾರವರು "ಈಗ ಹೋಗಿ ನೋಡು, ಟಾಂಗ ಅಲ್ಲೇ ಇದೆ" ಎಂದು ತಿಳಿಸಿದರು. ರಂಗಾರಿಯವರು ಮತ್ತೆ ಹೊರಗೆ ಹೋಗಿ ನೋಡಲು ಅಲ್ಲೇ ಟಾಂಗ ಇರುವುದನ್ನು ಕಂಡು ಆಶ್ಚರ್ಯ ಚಕಿತರಾದರು ಮತ್ತು ನಡೆದಿದ್ದನ್ನು ಅರ್ಥೈಸಲು ಅಸಮರ್ಥರಾದರು.

ರಂಗಾರಿಯವರು ಸಾಯಿಬಾಬಾರವರ ಹಣೆಗೆ ಮತ್ತು ಕೈಗಳಿಗೆ ಚಂದನ ಲೇಪನವನ್ನು ಭಕ್ತರು ಮಾಡಿರುವುದನ್ನು ಕಂಡು ಅದು ಮುಸ್ಲಿಂ ಸಂಪ್ರದಾಯಕ್ಕೆ ವಿರುದ್ದವಲ್ಲವೇ ಎಂದು ಬಾಬಾರವರನ್ನು ಕೇಳಿದರು. ಆಗ ಬಾಬಾರವರು "ರೋಮಿನಲ್ಲಿದ್ದಾಗ ರೋಮನ್ ರಂತೆ ಇರಬೇಕು ಮತ್ತು ಅಲ್ಲಿನ ಪದ್ದತಿಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಶಿರಡಿಯ ಜನರು ತಮ್ಮ ಕುಲದೇವರನ್ನು ಪೂಜಿಸದೇ ತಮ್ಮನ್ನು ಶ್ರದ್ದೆಯಿಂದ ಪೂಜಿಸುತ್ತಿದ್ದಾರೆ. ಅದಕ್ಕೆ ಬೇಡವೆಂದು ಹೇಳಿ ಅವರ ಮನಸ್ಸನ್ನು ನೋಯಿಸಲು ನಾನು ಇಷ್ಟಪಡುವುದಿಲ್ಲ ಮತ್ತು ತಾವು ಕೂಡ ದೇವರ ಅನನ್ಯ ಭಕ್ತರು " ಎಂದು ಹೇಳಿದರು.  ನಂತರ ಸಾಯಿಬಾಬಾರವರು ಸಂಗೀತದ ಬಗ್ಗೆ ರಂಗಾರಿಯವರಿಗೆ ತಿಳಿಸಿದರು. "ನೀನು ಬರುವ ಹಿಂದಿನ ರಾತ್ರಿ ಮಸೀದಿಯಲ್ಲಿ ರಾತ್ರಿಯಿಡಿ ಸಂಗೀತ ಹಾಗೂ ನೃತ್ಯ ನಡೆಯುತ್ತಿತ್ತು ಮತ್ತು ನಾನು ಅದರಲ್ಲಿ ಸಂಪೂರ್ಣ ತಲ್ಲೀನನಾಗಿದ್ದೆ" ಎಂದು ಹೇಳಿದರು. ಆಗ ರಂಗಾರಿಯವರು ಬಾಬಾರವರಿಗೆ "ಯಾರು ದೇವರನ್ನು ಪ್ರೀತಿಸುತ್ತಾರೋ ಅವರು ಸಂಗೀತ,ನೃತ್ಯಗಳು  ನಡೆಯುತ್ತಿದ್ದಾಗ ಅದಕ್ಕೆ ತಾವು ಹೆಜ್ಜೆ ಹಾಕುತ್ತ ಆನಂದಭಾಷ್ಪವನ್ನು ಸುರಿಸುತ್ತಾರೆ" ಎಂದು ಹೇಳಿದರು. ಆಗ ಸಾಯಿಬಾಬಾರವರು "ನಿನ್ನ ಗುರು ಯಾರು" ಎಂದು ಕೇಳಿದರು. ಅದಕ್ಕೆ ರಂಗಾರಿಯವರು ತಮ್ಮ ಗುರುಗಳು ಹಾಬಿ ಬಾಲೀಶ ಚಿಸ್ಥಿ ನಿಜಾಮಿ ಎಂದು ತಿಳಿಸಿದರು. ಆಗ ಬಾಬಾರವರು "ಆದುದರಿಂದಲೇ ನಿನಗೆ ಸಂಗೀತದ ಪ್ರಾಮುಖ್ಯತೆ ತಿಳಿದಿರುವುದು. ಹಾಬಿ ಬಾಲೀಶ ಚಿಸ್ಥಿ ನಿಜಾಮಿಯವರು ಕೂಡ ಸಂಗೀತ ಪ್ರಿಯರಾಗಿದ್ದು ಸಂಗೀತ ಕೇಳುತ್ತಿದ್ದಾಗ ತಾವು ಹೆಜ್ಜೆ ಹಾಕುತ್ತ ಆನಂದಭಾಷ್ಪವನ್ನು  ಸುರಿಸುತ್ತ ಸದಾಕಾಲವೂ ಆತ್ಮಾನಂದದಲ್ಲಿ ತಲ್ಲೀನರಾಗಿರುತ್ತಿದರು " ಎಂದರು.