Saturday, December 12, 2009

ಪ್ರಪಂಚದ ಅತಿ ಎತ್ತರದ ಶಿರಡಿ ಸಾಯಿಬಾಬ ವಿಗ್ರಹ - ಕೃಪೆ - ಸಾಯಿಅಮೃತಧಾರಾ.ಕಾಂ

 ಪ್ರಪಂಚದ ಅತಿ ಎತ್ತರದ ಶಿರಡಿ ಸಾಯಿಬಾಬ ವಿಗ್ರಹವು ಭಾರತದ ಆಂಧ್ರಪ್ರದೇಶದ ಮಚಲಿಪಟ್ಟಣದಲ್ಲಿದೆ. ಸಾಯಿಬಾಬನ ವಿಗ್ರಹವು ೫೪ ಅಡಿ ಎತ್ತರವಿದ್ದು ನೋಡಲು ಬಹಳ ಆಕರ್ಷಕವಾಗಿದೆ.



Monday, December 7, 2009

 ಕೊಯಂಬತ್ತೂರಿನ ನಾಗ ಸಾಯಿ ಮಂದಿರ - ಕೃಪೆ - ಸಾಯಿಅಮೃತಧಾರಾ.ಕಾಂ
 
೧೯೩೯ರಲ್ಲಿ ಪೂಜ್ಯ ಶ್ರೀ.ಶ್ರೀ.ಶ್ರೀ.ನರಸಿಂಹ ಸ್ವಾಮಿಗಳು ಶ್ರೀ. ಅ.ವ.ಕ.ಚಾರಿ, ಶ್ರೀ.ಹ.ವರದರಾಜ ಅಯ್ಯ ಮತ್ತು ಅವರ ಸೋದರ ಶ್ರೀ.ಸಿ.ವಿ. ರಾಜನ್ ಅವರುಗಳ ಜೊತೆ ಕಲೆತು ಶಿರಡಿ ಸಾಯಿಬಾಬರವರ ಆಂದೋಲನವನ್ನು ಪ್ರಾರಂಭಿಸಿ ಪ್ರಪ್ರಥಮ ಶಿರಡಿ ಸಾಯಿಬಾಬ ಮಂದಿರವನ್ನು ಹಿಂದಿನ ಮದ್ರಾಸ್ ಪ್ರಾಂತ್ಯವಾದ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಪ್ರಾರಂಭಿಸಿದರು. ಅದಕ್ಕೆ ಶ್ರೀ ಸಾಯಿ ಬಾಬ ಮಂಡಳಿ ಎಂದು ಹೆಸರಿಸಿ ಸಾರ್ವಜನಿಕರಿಗೆ ಬಾಬನ ದರ್ಶನ ಯೋಗ ಕಲ್ಪಿಸಿದರು. ಪೂಜ್ಯ ನರಸಿಂಹ ಸ್ವಾಮಿಗಳು ಮಂಡಳಿಯ ಸಂಪೂರ್ಣ ಜವಾಬ್ಧಾರಿಯನ್ನು ೧೯೪೨ರಲ್ಲಿ ಅ.ವ.ಕ.ಚಾರಿಯವರಿಗೆ ವಹಿಸಿದರು. ದಿವಂಗತ ಶ್ರೀ.ಸಿ.ವರದರಾಜ ಅಯ್ಯ ಮೇಟುಪಾಳ್ಯಂ ಮುಖ್ಯ ರಸ್ತೆಯಲ್ಲಿ ದಾನವಾಗಿ ನೀಡಿದ ೧ ಎಕರೆ ಪ್ರದೇಶದಲ್ಲಿ ಹುಲ್ಲು ಕೊಟ್ಟಿಗೆಯನ್ನು ನಿರ್ಮಿಸಿ ಅದನ್ನೇ ಶ್ರೀ ಸಾಯಿ ಬಾಬ ಮಂಡಳಿ ಎಂದು ಹೆಸರಿಸಿದರು. ಮುಂದೆ ಅದಕ್ಕೆ ಶ್ರೀ ಸಾಯಿ ಬಾಬ ಮಟಮ್ ಎಂದು ನಾಮಕರಣ ಮಾಡಲಾಯಿತು. ಅಲ್ಲಿ ಯಾವ ಜಾತಿ, ಮತ, ಅಂತಸ್ತು,ವರ್ಣಗಳ ಭೇದವಿಲ್ಲದೆ ಎಲ್ಲ ವರ್ಗದ ಜನರು ಬಂದು ಸಾಯಿಬಾಬನ ಪೂಜೆ ಮಾಡಲು ಅವಕಾಶ ಕಲ್ಪಿಸಲಾಯಿತು. ಶ್ರೀ ಸಾಯಿ ಮಟಮ್ ಕೊಯಂಬತ್ತೂರಿನ ಸುತ್ತ ಮುತ್ತಲಿನ ಪ್ರದೇಶದ ಸಾಯಿ ಭಕ್ತರಿಗೆ ಸಭೆ ಸೇರುವ ಸ್ಥಳವಾಗಿ ಮಾರ್ಪಟ್ಟಿತು. ಪ್ರತಿ ಗುರುವಾರ ಸಾಯಿ ಬಾಬನ ಭಜನೆಯನ್ನು ತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ.

 



















                        


ನಾಗ ಸಾಯಿಯ ಉದಯ

೭ನೆ ಜನವರಿ ೧೯೪೩ ಗುರುವಾರದ ಸಾಯಂಕಾಲ ಸಾಯಿಬಾಬನ ಪೂಜೆ ನಡೆಯುತ್ತಿರುವ ಸಮಯದಲ್ಲಿ ಒಂದು ಅದ್ಬುತ ಪವಾಡ ಜರುಗಿತು. ಶಂಖ, ಚಕ್ರ, ತ್ರಿಪುಂದ್ರಗಳ ದಿವ್ಯ ಚಿನ್ಹೆಗಳನ್ನು ಹೊಂದಿದ ಸಣ್ಣ ನಾಗರ ಹಾವೊಂದು ಸಾಯಿಬಾಬನ ಫೋಟೋದ ಮುಂದೆ ಧಡೀರನೆ ಕಾಣಿಸಿಕೊಂಡಿತು. ಎಲ್ಲ ದೀಪಗಳು ದೇದೀಪ್ಯಮಾನವಾಗಿ ಪ್ರಜ್ವಲಿಸುತ್ತಿದ್ದು, ತಾಳ, ವಾದ್ಯಗಳ ಸಮ್ಮಿಳನದೊಂದಿಗೆ ಭಜನೆ ಸಂಪೂರ್ಣ ತಾರಕಕ್ಕೇರಿತ್ತು. ನಾಗರ ಹಾವು ಸ್ವಲ್ಪವು ಕದಲದೆ ಸಾಯಿಬಾಬನನ್ನು ಪೂಜಿಸುವಂತೆ ತೋರುತ್ತಿತ್ತು. ಆರತಿ, ದೀಪ ಬೆಳಗುವಿಕೆ, ಭಜನೆಯ ಸದ್ದು ಇವುಗಳಿಂದ ನಾಗನು ಸ್ವಲ್ಪವೂ ವಿಚಲಿತನಾಗಲಿಲ್ಲ. ಈ ಆಶ್ಚರ್ಯಕರವಾದ ದೃಶ್ಯವನ್ನು ಅಲ್ಲಿ ನೆರೆದಿದ್ದ ನೂರಾರು ಮಂದಿ ಮೂಕವಿಸ್ಮಿತರಾಗಿ ವೀಕ್ಷಿಸಿದರು. ಅಲ್ಲಿ ನೆರೆದಿದ್ದ ಯಾರೊಬ್ಬರು ನಾಗನನ್ನು ಕಂಡು ಭಯಪಡಲಿಲ್ಲ. ಈ ಅದ್ಭುತ ವಿಷಯ ಕೊಯಂಬತ್ತೂರಿನ ಸುತ್ತ ಮುತ್ತಲಿನ ಪ್ರದೇಶದ ಜನರಿಗೆ ತಿಳಿಯಿತು. ಚಿಕ್ಕವರು, ದೊಡ್ಡವರು, ಹೆಂಗಸರು, ಮಕ್ಕಳು ಸಹಸ್ರಾರು ಸಂಖ್ಯೆಯಲ್ಲಿ ಬಂದು ಶ್ರೀ ಸಾಯಿ ಮಟಮ್ ನಲ್ಲಿ ಸೇರಿದರು. ನಾಗನು ಹೀಗೆ ೪೮ ಗಂಟೆಗಳು ನಿಂತಲ್ಲೇ ಅಲುಗಾಡದೆ ನಿಂತಿದ್ದನು. ಶಿರಡಿ ಸಾಯಿಬಾಬನ ಭಕ್ತರು ನಾಗನ ಮೇಲೆ ಪುಷ್ಪಗಳನ್ನು ಚೆಲ್ಲಿ ಭಕ್ತಿಯಿಂದ ನಮಸ್ಕಾರ ಮಾಡಹತ್ತಿದರು. ಭಕ್ತರ ಪುಷ್ಪವೃಷ್ಟಿಯಿಂದ ನಾಗನು ಸಂಪೂರ್ಣ ಮುಚ್ಚಿ ಹೋದನು. ನಾಗರಾಜನಿಗೆ ಆರತಿಯನ್ನು ಬೆಳಗಲಾಯಿತು. ಮಾರನೆಯ ದಿವಸ ನಾಗನ ಛಾಯಾಚಿತ್ರವನ್ನು ತೆಗೆಯಲು ಛಾಯಾಗ್ರಾಹಕ ಬಂದನು. ಆದರೆ ಭಕ್ತರ ಪುಷ್ಪವೃಷ್ಟಿಯಿಂದ ನಾಗನು ಸಂಪೂರ್ಣ ಮುಚ್ಚಿ ಹೋದ ಕಾರಣ ಫೋಟೋ ತೆಗೆಯಲು ಸಾಧ್ಯವಾಗಲಿಲ್ಲ. ಅಲ್ಲಿ ನೆರೆದಿದ್ದ ಯಾವ ಭಕ್ತರಿಗೂ ಮುಂದೆ ಹೋಗಿ ಪುಷ್ಪಗಳನ್ನು ಪಕ್ಕಕ್ಕೆ ಸರಿಸುವ ಧೈರ್ಯ ಬರಲಿಲ್ಲ. ಭಕ್ತಿಯಿಂದ ಪ್ರಾರ್ಥನೆ ಮಾಡುವ ಒಂದೇ ಉಪಾಯ ಭಕ್ತರಿಗೆ ಉಳಿಯಿತು. ಭಕ್ತರು ಭಕ್ತಿಯಿಂದ ನಾಗನನ್ನು ಪ್ರಾರ್ಥಿಸಿದ್ದೆ ತಡ, ನಾಗರಾಜನು ಹೂವಿನ ಮಧ್ಯದೊಳಗಿಂದ ಚಂಗನೆ ಎಗರಿ ಛಾಯಾಚಿತ್ರವನ್ನು ತೆಗೆಯಲು ಛಾಯಾಗ್ರಾಹಕನಿಗೆ ಅನುವು ಮಾಡಿ ಕೊಟ್ಟಿತು. ಅಲ್ಲಿ ನೆರೆದಿದ್ದ ಎಲ್ಲ ಭಕ್ತರಿಗೂ ಇದು ಸಾಯಿಬಾಬನ ಪವಾಡವೆಂದು ತಿಳಿಯಿತು. ಭಕ್ತರೆಲ್ಲರೂ ನಾಗರಾಜನನ್ನು ಭಕ್ತಿಯಿಂದ ಸ್ತುತಿಸಿ ತಮ್ಮ ನಿತ್ಯ ಪೂಜೆಗೆ ಅನುವು ಮಾಡಿ ಕೊಟ್ಟು ಸರಿದು ಹೋಗುವಂತೆ ಪ್ರಾರ್ಥಿಸಿದರು. ಆ ಕ್ಷಣವೇ ನಾಗರಾಜನು ಶಿರಡಿ ಸಾಯಿಬಾಬನ  ಫೋಟೋದ ಮುಂದೆ ಬಂದು ಪ್ರದಕ್ಷಿಣೆ ಮಾಡಿ ಹೊರಕ್ಕೆ ಹೋದನು. ಮಂದಿರದ ಹೊರಗೆ ಒಂದು ಹುತ್ತ ತಂತಾನೆ ಕಾಣಿಸಿಕೊಂಡಿತು. ಈ ಹುತ್ತದ ಜಾಗವನ್ನು ಸಾಯಿ ಭಕ್ತರು "ಪವಿತ್ರ ಸ್ಥಳ" ಎಂದು ಪರಿಗಣಿಸಿದ್ದಾರೆ ಮತ್ತು ಅಂದಿನಿಂದ ಇಂದಿನವರೆಗೆ ಕೊಯಂಬತ್ತೂರಿನ ಶಿರಡಿ ಸಾಯಿಬಾಬನನ್ನು  ಭಕ್ತರು "ನಾಗ ಸಾಯಿ" ಎಂದು ಭಕ್ತಿಯಿಂದ ಪೂಜಿಸುತ್ತಿದ್ದಾರೆ.

Sunday, December 6, 2009

 ಹೆಜ್ಜೆ ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಿರುವ ಬೆಂಗಳೂರಿನ ಏಕೈಕ ಶಿರಡಿ ಸಾಯಿಬಾಬ ಮಂದಿರ - ಕೃಪೆ - ಸಾಯಿಅಮೃತಧಾರಾ.ಕಾಂ

ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗದಲ್ಲಿ ಹುಣಸೇಮಾರನಹಳ್ಳಿ ಎಂಬ ಹಳ್ಳಿಯು ಬಲಭಾಗಕ್ಕೆ ಸಿಗುತ್ತದೆ. ಅಲ್ಲಿ "ಶ್ರೀ ಶಿರಡಿ ಸಾಯಿ ಆನಂದಮಯಿ ದೇವಸ್ಥಾನ" ಎಂಬ ಸುಂದರ ಸಾಯಿಬಾಬನ ಮಂದಿರವಿದೆ.

ಈ ದೇವಸ್ಥಾನದ ವಿಶೇಷವೇನೆಂದರೆ, ದ್ವಾರಕಮಾಯಿಯನ್ನು ಶಿರಡಿಯಲ್ಲಿನ ದ್ವಾರಕಮಾಯಿಯಂತೆಯೇ ನಿರ್ಮಿಸಲಾಗಿದೆ.

ಇಲ್ಲಿನ ಮತ್ತೊಂದು ಮಹತ್ವವಾದ ವಿಶೇಷವೇನೆಂದರೆ ದೇವಸ್ಥಾನದ ಎಡಭಾಗದಿಂದ ಪ್ರಾರಂಭಿಸಿ ೧೦೮  ಹಾಸು ಕಲ್ಲುಗಳನ್ನು  ವೃತ್ತಾಕಾರವಾಗಿ ನಿರ್ಮಿಸಲಾಗಿದ್ದು ಆ ಹಾಸು ಕಲ್ಲುಗಳು ಸರಿಯಾಗಿ ದೇವಸ್ಥಾನದ ಮುಂಭಾಗದ  ಬಲಭಾಗದಲ್ಲಿ ಅಂತ್ಯಗೊಳ್ಳುತ್ತದೆ. ಸಾಯಿ ನಾಮವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ತಾರಕ ಮಂತ್ರವನ್ನು ಅಥವಾ ಸಾಯಿಬಾಬ ಅಷ್ಟೋತ್ತರವನ್ನು ಜಪಿಸುತ್ತ ಭಕ್ತರು ಹೆಜ್ಜೆ ಪ್ರದಕ್ಷಿಣೆಯನ್ನು ಮಾಡಿ ದೇವಸ್ಥಾನದ ಒಳಗೆ ಪ್ರವೇಶಿಸುವಂತೆ ಅನುಕೂಲ ಮಾಡಿಕೊಡಲಾಗಿದೆ. ಈ ಸುಂದರ ಕಲ್ಪನೆಯನ್ನು ಸಾಕಾರಗೊಳಿಸಿರುವ ದೇವಸ್ಥಾನದ ಮಾಲೀಕರಾದ ಕ್ಯಾಪ್ಟನ್  ವ.ವ. ಮಹೇಶರನ್ನು ಸಾಯಿ ಭಕ್ತರು ಎಷ್ಟು ಅಭಿನಂದಿಸಿದರೂ ಸಾಲದು.

ದೇವಸ್ಥಾನದ ವಿಳಾಸ ಈ ಕೆಳಕಂಡಂತೆ ಇದೆ:

ಕ್ಯಾಪ್ಟನ್ ವ.ವ. ಮಹೇಶ
ಶ್ರೀ ಶಿರಡಿ ಸಾಯಿ ಅನಂದಮಯಿ ದೇವಸ್ಥಾನ
ಹುಣಸೇಮರದಪಾಳ್ಯ, ಮೈಸೂರು ರಸ್ತೆ ಪಕ್ಕ,
ಅಮೃತ್ ಡಿಸ್ತಿಲ್ಲರಿ ಹಿಂಭಾಗ,
ಬೆಂಗಳೂರು.
ದೂರವಾಣಿ:   ೨೮೪೩೭೩೪೫/೯೯೮೦೪೭೯೯೯೨/ ೯೪೪೮೧೧೬೧೪೬  

ಸಾಯಿ ಭಕ್ತರು ಈ ಮಂದಿರಕ್ಕೆ ತಪ್ಪದೆ ತೆರಳಿ ಸಾಯಿಬಾಬನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ನಮ್ಮ ವೆಬ್ ಸೈಟಿನ ಆಶಯ.

Saturday, December 5, 2009

 ಶಿರಡಿ ಸಾಯಿಬಾಬಾರವರ ೫ ರುಪಾಯಿ ಮುಖ ಬೆಲೆಯ ಅಂಚೆ ಚೀಟಿ - ಕೃಪೆ - ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬನ ಭಕ್ತರಿಗೊಂದು ಸಿಹಿ ಸುದ್ದಿ. ಭಾರತದ ಅಂಚೆ ಇಲಾಖೆಯು ಶಿರಡಿ ಸಾಯಿಬಾಬಾರವರ ೫ ರುಪಾಯಿ ಮುಖ ಬೆಲೆಯ ಅಂಚೆ ಚೀಟಿ, ಪ್ರಥಮ ದಿವಸದ ಲಕೋಟೆ, ಸಾಯಿಬಾಬರವರ ಬಗ್ಗೆ ಕೈಪಿಡಿಯನ್ನು ದಿನಾಂಕ ೨೦.೦೫.೨೦೦೮ ರಂದು ನಾಸಿಕ್ ನ ಅಂಚೆ ಮುದ್ರಣಾಲಯದಿಂದ ಹೊರತಂದಿದೆ. ಒಟ್ಟು ೦.೪ ದಶಲಕ್ಷ ಅಂಚೆ ಚೀಟಿಗಳನ್ನು ಹೊರತಂದಿದೆ.