Monday, July 28, 2014

ದಕ್ಷಿಣ ಕನ್ನಡ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಪುಚಾಡಿ, ಕಟಿಪಲ್ಲ ಮಾರ್ಗ, ಸೂರಿಂಜೆ ಅಂಚೆ, ಮುಲ್ಕಿ-575 030, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ತಾಲೂಕಿನ ಪುಚಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಮಂಗಳೂರು ಬಸ್ ನಿಲ್ದಾಣದಿಂದ  20 ಕಿಲೋಮೀಟರ್ ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಸುಮಾರು 7 ಕಿಲೋಮೀಟರ್ ಗಳ ಅಂತರದಲ್ಲಿದೆ.

ಈ ಮಂದಿರದ ಭೂಮಿಪೂಜೆಯನ್ನು 4ನೇ ಜೂನ್ 2012 ರಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು 1ನೇ ಜೂನ್ 2014 ರಂದು ಮಂದಿರದ ಟ್ರಸ್ಟ್ ನ ಸದಸ್ಯರು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು.

ಈ ಮಂದಿರವನ್ನು ಸುಮಾರು ಟ್ರಸ್ಟ್ ಗೆ ಸೇರಿರುವ ಸುಮಾರು 5 ಸೆಂಟ್ ಭೂಮಿಯಲ್ಲಿ ನಿರ್ಮಿಸಲಾಗಿದೆ.

ಶ್ರೀ.ಬಾಲಕೃಷ್ಣ ಶೆಟ್ಟಿಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ಮಂದಿರದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.




ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವು ಪ್ರತಿನಿತ್ಯ ಬೆಳಿಗ್ಗೆ 7:00 ಗಂಟೆಯಿಂದ  ರಾತ್ರಿ 9:00 ರವರೆಗೆ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ .

ಆರತಿಯ ಸಮಯ:

ಬೆಳಗಿನ ಆರತಿ : 7:00 AM
ರಾತ್ರಿಯ ಆರತಿ: 7:00 AM

ಪ್ರತಿ ಗುರುವಾರಗಳಂದು ವಿಶೇಷ ಪೂಜೆಯನ್ನು ನೆರವೇರಿಸಿ  ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನವನ್ನು ಮಾಡಲಾಗುತ್ತಿದೆ.

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ
2.ಗುರುಪೂರ್ಣಿಮೆ


ಸಾಮಾಜಿಕ ಕಾರ್ಯಚಟುವಟಿಕೆಗಳು:


  • ಮಂದಿರದ ಟ್ರಸ್ಟ್ ನ ವತಿಯಿಂದ ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. 
  • ಮಂದಿರದ ಟ್ರಸ್ಟ್ ಸ್ಥಳೀಯ ಬಡ ನಾಗರೀಕರಿಗೆ ನಿಯಮಿತವಾಗಿ ಉಚಿತ ಔಷಧ ವಿತರಣೆಯನ್ನು ಮಾಡುತ್ತಿದೆ. 
  • ಮಂದಿರದ ಟ್ರಸ್ಟ್ ಆಗಿಂದಾಗ್ಗೆ ಸ್ಥಳೀಯ ಬಡ ನಾಗರೀಕರಿಗೆ ಅವರ ಅಗತ್ಯತೆಗೆ ತಕ್ಕಂತೆ ಹಣಕಾಸಿನ ನೆರವು ನೀಡುತ್ತಿದೆ. 

ದೇಣಿಗೆಗೆ ಮನವಿ:

ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ನೋಂದಣಿ), ಸೂರಿಂಜೆಯು ತನ್ನ  ಮಂದಿರದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹಾಗೂ ಕಾರ್ಯಚಟುವಟಿಕೆಗಳಿಗಾಗಿ ಸಹೃದಯ ಸಾಯಿಭಕ್ತರಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ನೋಂದಣಿ), ಭಾರತೀಯ ಸ್ಟೇಟ್ ಬ್ಯಾಂಕ್, ಖಾತೆ ಸಂಖ್ಯೆ:32552388778, ಶಾಖೆ: ಸೂರತ್ಕಲ್  ಐ.ಎಫ್.ಎಸ್.ಸಿ.ಸಂಖ್ಯೆ:SBIN0015314" ಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:  
ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ತಾಲೂಕಿನ ಪುಚಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಮಂಗಳೂರು ಬಸ್ ನಿಲ್ದಾಣದಿಂದ  20 ಕಿಲೋಮೀಟರ್ ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಸುಮಾರು 7 ಕಿಲೋಮೀಟರ್ ಗಳ ಅಂತರದಲ್ಲಿದೆ.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿ ಫ್ರೆಂಡ್ಸ್ (ನೋಂದಣಿ),
ಪುಚಾಡಿ, ಕಟಿಪಲ್ಲ ಮಾರ್ಗ,
ಸೂರಿಂಜೆ ಅಂಚೆ, ಮುಲ್ಕಿ-575 030,
ದಕ್ಷಿಣ ಕನ್ನಡ ಜಿಲ್ಲೆ,
ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಬಾಲಕೃಷ್ಣ ಶೆಟ್ಟಿ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 
+ 91 97430 10099

ಇ-ಮೇಲ್ ವಿಳಾಸ:  
shirdisaimandira@gmail.com/ shettybalakrishna@infotech-search.com

ಮಾರ್ಗಸೂಚಿ:  
ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ತಾಲೂಕಿನ ಪುಚಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಮಂಗಳೂರು ಬಸ್ ನಿಲ್ದಾಣದಿಂದ  20 ಕಿಲೋಮೀಟರ್ ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಸುಮಾರು 7 ಕಿಲೋಮೀಟರ್ ಗಳ ಅಂತರದಲ್ಲಿದೆ. ಮಂಗಳೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 15 ಹಾಗೂ ಸೂರತ್ಕಲ್ ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 53 ಅನ್ನು ಹತ್ತಿ ಪುಚಾಡಿ ಗ್ರಾಮವನ್ನು ತಲುಪಬಹುದಾಗಿರುತ್ತದೆ. (ಕೃಪೆ: ಶ್ರೀ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಸೂರಿಂಜೆ ಸಾಯಿಬಾಬಾ ಮಂದಿರ  ಮತ್ತು ಶ್ರೀಮತಿ.ಸುಮತಿ ಪೈ, ಮಂಗಳೂರು)

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಆಯೋಜನೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 27ನೇ ಜುಲೈ 2014 ರಿಂದ 4ನೇ ಆಗಸ್ಟ್ 2014 ರವರೆಗೆ ಶ್ರೀ ಸಾಯಿ ಸಚ್ಚರಿತ್ರೆಯ  ಮಹಾಪಾರಾಯಣವನ್ನು ಆಯೋಜಿಸಿದೆ. ಅದರ ಅಂಗವಾಗಿ 27ನೇ ಜುಲೈ 2014 ರಂದು ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣ ಸಮಾರಂಭವು ಅತ್ಯಂತ ಶುಭಪ್ರದವಾಗಿ ಆರಂಭಗೊಂಡಿತು. ಸುಮಾರು  5000 ಕ್ಕೂ ಹೆಚ್ಚು ಸಾಯಿ ಭಕ್ತರು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಪ್ರಾರಂಭಿಸುವುದರೊಂದಿಗೆ ಏಳು ದಿನಗಳ ಕಾರ್ಯಕ್ರಮವು ಆರಂಭವಾಯಿತು. 

ಇಂದು ಬೆಳಗಿನ ಜಾವ ಶ್ರೀ ಸಾಯಿ ಸಚ್ಚರಿತ್ರೆಯನ್ನು ಸಮಾಧಿ ಮಂದಿರದಿಂದ ಗುರುಸ್ಥಾನ ಹಾಗೂ ದ್ವಾರಕಾಮಾಯಿ ಮುಖಾಂತರವಾಗಿ ದಕ್ಷಿಣಮುಖಿ ಹನುಮಾನ್ ಮಂದಿರದ ಎದುರುಗಡೆ ವಿಶೇಷವಾಗಿ ನಿರ್ಮಿಸಲಾಗಿರುವ ಮಹಾಪಾರಾಯಣ ಮಂಟಪಕ್ಕೆ  ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಾವುಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಉತ್ತಮರಾವ್ ಗೊಂಡ್ಕರ್, ಶ್ರೀ.ದಿಲೀಪ್ ಉಗಳೆ, ಸಾಯಿಬಾಬಾ ಸಂಸ್ಥಾನದ ಪುರೋಹಿತರು, ಸ್ಥಳೀಯರು ಹಾಗೂ ಹಲವಾರು ಸಾಯಿಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


ಮೆರವಣಿಗೆಯು ಮಹಾಪಾರಾಯಣ ಮಂಟಪವನ್ನು ತಲುಪಿದ ನಂತರ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಕಳಶ ಪೂಜೆಯನ್ನು ನೆರವೇರಿಸಿ ಮಹಾಪಾರಾಯಣವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದರು. ಬೆಳಿಗ್ಗೆ 7:00 ಗಂಟೆಯಿಂದ  11.30 ರವರೆಗೆ ಪುರುಷ ಸಾಯಿಭಕ್ತರು ಹಾಗೂ ಮಧ್ಯಾನ್ಹ  1:00 ಗಂಟೆಯಿಂದ ಸಂಜೆ 5:30 ರವರೆಗೆ ಮಹಿಳಾ ಸಾಯಿಭಕ್ತರು ಪವಿತ್ರ  ಶ್ರೀ ಸಾಯಿ ಸಚ್ಚರಿತ್ರೆಯ  ಎಂಟು ಅಧ್ಯಾಯಗಳನ್ನು ಪಾರಾಯಣ ಮಾಡಿ ಸುಸಂಪನ್ನಗೊಳಿಸಿದರು. ಸಂಸ್ಥಾನವು ಪುರುಷ ಹಾಗೂ ಮಹಿಳಾ ಸಾಯಿಭಕ್ತರಿಗಾಗಿ ಪ್ರತ್ಯೇಕ ಸಮಯವನ್ನು ನಿಗದಿಪಡಿಸಿದ್ದು ಅವರುಗಳು ಪ್ರತಿನಿತ್ಯ ಎಂಟು ಅಧ್ಯಾಯಗಳನ್ನು ಪಾರಾಯಣ ಮಾಡಲಿದ್ದಾರೆ. 




ಅದೇ ದಿನ ಸಾಯಂಕಾಲ 5:30 ರಿಂದ  6:45 ರವರೆಗೆ ಶಿರಡಿಯ ಶ್ರೀಮತಿ.ಆಶಾಬಾಯಿ ಭಾನುದಾಸ್ ಗೊಂಡ್ಕರ್ ರವರಿಂದ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ 7:30 ರಿಂದ 9:30  ರವರೆಗೆ ಬೀಡ್  ನ ಕಲಾವಿದರಾದ ಶ್ರೀ.ಸಾಯಿ ಗೋಪಾಲ್ ದೇಶಮುಖ್ ರವರಿಂದ   “ದರ್ಬಾರ್ ಮೇರೇ ಸಾಯಿ ಕಾ” ಕಾರ್ಯಕ್ರಮ ನಡೆಯಿತು. ನಂತರ ರಾತ್ರಿ 9:30 ರಿಂದ 10:15 ರವರೆಗೆ ಶ್ರೀ.ಶ್ರಾವಾಣ್ ಮಾಧವ ಚೌಧರಿಯವರಿಂದ ಪ್ರವಚನ ಏರ್ಪಡಿಸಲಾಗಿತ್ತು. 
  
ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ಮತ್ತು ಶಿರಡಿಯ ಸ್ಥಳೀಯರು 27ನೇ ಜುಲೈ 2014 ರಂದು ಪ್ರಾರಂಭಿಸಿದ್ದ ಶ್ರೀ ಸಾಯಿ ಸಚ್ಚರಿತ್ರೆ ಮಹಾಪಾರಾಯಣವು 3ನೇ ಆಗಸ್ಟ್ 2014 ರಂದು ಶಿರಡಿ ಗ್ರಾಮದ ಸುತ್ತಲೂ  ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವುದರೊಂದಿಗೆ ಸುಸಂಪನ್ನಗೊಂಡಿತು.


ಈ ಮಹಾಪಾರಯಣದಲ್ಲಿ ಸುಮಾರು 5000 ಕ್ಕೂ ಹೆಚ್ಚು ಸಾಯಿ ಭಕ್ತರು ಶಿರಡಿ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಬಂದು ಭಾಗವಹಿಸಿದ್ದರು.

ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿಸದಸ್ಯ ಸಮಿತಿಯ ಅಧ್ಯಕ್ಷರೂ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿ ಹಾಗೂ ಅವರ ಧರ್ಮಪತ್ನಿಯವರಾದ ಶ್ರೀಮತಿ.ಸುಷ್ಮಾ ಕುಲಕರ್ಣಿಯವರು ಶ್ರೀ ಸಾಯಿ ಸಚ್ಚರಿತ್ರೆಯ ಪೂಜೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು. ಆ ಸಂದರ್ಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ. ಬಾವುಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್, ಶ್ರೀ.ಉತ್ತಮರಾವ್ ಗೋಂಡ್ಕರ್, ಹಾಗೂ ಶ್ರೀ.ದಿಲೀಪ್ ಉಗಳೆ ಆದಿಸಿಂಹ ಮತ್ತು ಶಿರಡಿ ಹಾಗೂ  ಸುತ್ತಮುತ್ತಲಿನ ಗ್ರಾಮಗಳಿಂದ ಪಾರಾಯಣಕ್ಕೆಂದು ಆಗಮಿಸಿದ್ದ ಸಹಸ್ರಾರು ಸಾಯಿ ಭಕ್ತರು ಭಾಗವಹಿಸಿದ್ದರು.




ಮಹಾಪಾರಾಯಣಕ್ಕೆ ಆಗಮಿಸಿದ್ದ ಎಲ್ಲಾ ಸಾಯಿ ಭಕ್ತರಿಗೂ ವಿಶೇಷವಾಗಿ ಸ್ನೇಹಭೋಜನವನ್ನು ಏರ್ಪಡಿಸಲಾಗಿತ್ತು. ಮಧ್ಯಾನ್ಹ 3:30 ರಿಂದ ಶಿರಡಿ ಗ್ರಾಮದ ಸುತ್ತಲೂ ಡೋಲು, ತಾಳ ಹಾಗೂ ಚಿಪಳಿಗಳ ನಾದದೊಂದಿಗೆ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಪಾರಾಯಣದಲ್ಲಿ ಭಾಗವಹಿಸಿದ್ದ ಸಾಯಿ ಭಕ್ತರು ಹಾಗೂ ಶಿರಡಿ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀ ಸಾಯಿಬಾಬಾರವರ ಜೀವನ ಚರಿತ್ರೆ ಆಧಾರಿತ ನಾಟಕವನ್ನು ಸಹ ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದರುಗಳು ನಡೆಸಿಕೊಟ್ಟರು. ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣದ ಅಂಗವಾಗಿ ಮುಂಬೈನ ಶ್ರೀ.ಮನೀಷ್ ಭತೀಜಾರವರು ನೀಡಿದ ದೇಣಿಗೆಯ ಸಹಾಯದಿಂದ ಸುಂದರವಾದ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. 


ಮಹಾಪಾರಾಯಣದ ಅಂಗವಾಗಿ ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಕೀರ್ತನೆ ಕಾರ್ಯಕ್ರಮಗಳನ್ನು ಈ 8 ದಿನಗಳೂ ಹಮ್ಮಿಕೊಳ್ಳಲಾಗಿತ್ತು. ಮಹಾಪಾರಯಣವು 4ನೇ ಆಗಸ್ಟ್ 2014 ರಂದು ದೋಭಿವಿಲಿಯ ಹರಿಭಕ್ತ ಪರಾಯಣ ಶ್ರೀ.ವೈಭವ್ ಬುವಾ ಓಕ್ ರವರ ಕಲ್ಯಾಚಿ ಕೀರ್ತನೆಯೊಂದಿಗೆ ಕೊನೆಗೊಂಡಿತು. ಗೋಪಾಲಕಾಲ ಕಾರ್ಯಕ್ರಮದ ನಂತರ ಎಲ್ಲಾ ಸಾಯಿಭಕ್ತರಿಗೂ "ಮಹಾಪ್ರಸಾದ ಭೋಜನ" ಏರ್ಪಡಿಸಲಾಗಿತ್ತು.

ಈ ವರ್ಷದ ಮಹಾಪಾರಾಯಣವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಮುಖ್ಯ ಜಿಲ್ಲ ನ್ಯಾಯಾಧೀಶರಾದ ಶ್ರೀ.ಶಶಿಕಾಂತ್  ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ತ್ರಿಸದಸ್ಯ ಸಮಿತಿಯ  ಸದಸ್ಯರೂ ಹಾಗೂ ಜಿಲ್ಲಾ ಕಲೆಕ್ಟರ್ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗೀಯ ಮುಖ್ಯಸ್ಥರೂ ಹಾಗೂ ಸಿಬ್ಬಂದಿ ವರ್ಗದವರು  ಬಹಳ ಶ್ರಮವಹಿಸಿದ್ದಾರೆ.

ಜಪಾನ್ ದೇಶದಿಂದ 3ನೇ ಆಗಸ್ಟ್ 2014 ರಂದು ಶಿರಡಿಗೆ ಆಗಮಿಸಿದ್ದ ಸಾಯಿ ಭಕ್ತರು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಅವರುಗಳನ್ನು ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಸ್ವಾಗತಿಸಿದರು.(ಮರಾಠಿಯಿಂದ ಆಂಗ್ಲ ಭಾಷೆಗೆ ಶ್ರೀ.ನಾಗರಾಜ ಅನ್ವೇಕರ್, ಬೆಂಗಳೂರು).



ಕನ್ನಡ ಅನುವಾದ: ಶ್ರೀಕಂಠ ಶರ್ಮ 

Sunday, July 27, 2014

ಚನ್ನೈನಿಂದ ಶಿರಡಿಗೆ ಪಾದಯಾತ್ರೆಯಲ್ಲಿ ಬಂದ ಸಾಯಿಭಕ್ತರನ್ನು ಸ್ವಾಗತಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ - ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ.ವಿ.ಚಂದ್ರಮೌಳಿಯವರ ನೇತೃತ್ವದಲ್ಲಿ ಚನ್ನೈನಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಪಾದಯಾತ್ರೆಯಲ್ಲಿ ಬಂದು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದ ಹದಿಮೂರು ಜನ ಸಾಯಿಭಕ್ತರ ತಂಡವನ್ನು ಇದೇ ತಿಂಗಳ 26ನೇ ಜುಲೈ 2014, ಶನಿವಾರ ದಂದು ಶ್ರೀ ಸಾಯಿಬಾಬಾ ಸಂಸ್ಥಾನದ ಪರವಾಗಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸ್ವಾಗತಿಸಿದರು. ಈ ಪಾದಯಾತ್ರಿಗಳು ಕಳೆದ ನಾಲ್ಕು ವರ್ಷಗಳಿಂದ ಈ ರೀತಿ ಪಲ್ಲಕ್ಕಿಯನ್ನು ಹೊತ್ತುಕೊಂಡು ಪಾದಯಾತ್ರೆಯಲ್ಲಿ ಬಂದು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆಯುತ್ತಿದ್ದಾರೆ.


ಈ ವರ್ಷ ಶ್ರೀ.ವಿ.ಚಂದ್ರಮೌಳಿಯವರ ಜೊತೆಯಲ್ಲಿ ಶ್ರೀ.ಬಿ.ಎಂ.ಶ್ರೀಧರ ಗುಪ್ತಾ, ಶ್ರೀ.ಟಿ.ಡಿ.ಅಶೋಕ್ ಕುಮಾರ್, ಶ್ರೀ.ಎಸ್.ಕಾರ್ತಿಕೇಯನ್, ಶ್ರೀ.ಎಸ್.ಎ.ಆನಂದ್, ಶ್ರೀ.ಎ.ರಾಧಾಕೃಷ್ಣ ಮೂರ್ತಿ, ಶ್ರೀ.ಎ.ಸುಮಾನ್, ಶ್ರೀ. ಪಿ.ಎಸ್. ಪರಮೇಶ್ವರನ್, ಶ್ರೀ.ಎಂ.ಎಸ್.ಶಕ್ತಿದಯಾಳನ್, ಶ್ರೀ.ಎಸ್.ಮೋಹನ್ ರಾಜ್, ಶ್ರೀ.ಪಿ.ವಿ.ಕದಿರವನ್, ಶ್ರೀ.ಎಂ.ಲಿಂಗಮ್, ಶ್ರೀ.ಆರ್.ಉದಯಕುಮಾರ್, ಮತ್ತು ಶ್ರೀ.ಆರ್. ಉಮಾಮದನ್ ರವರುಗಳು ಪಲ್ಲಕ್ಕಿಯನ್ನು ಹೊತ್ತು ಪ್ರತಿನಿತ್ಯ ಸುಮಾರು 50 ಕಿಲೋಮೀಟರ್ ಗಳಂತೆ  31 ದಿನಗಳಲ್ಲಿ ಒಟ್ಟು 1650 ಕಿಲೋಮೀಟರ್ ಗಳನ್ನು ಕ್ರಮಿಸಿ ಶಿರಡಿ ತಲುಪಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯರುಗಳು ಕೇವಲ ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ತಾವುಗಳು ಈ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇವರುಗಳು ಮೊದಲು ಚನ್ನೈನ ಮೈಲಾಪುರ ಸಾಯಿಬಾಬಾ ಮಂದಿರದಲ್ಲಿ ಬಾಬಾರವರ ದರ್ಶನವನ್ನು ಮಾಡಿ ನಂತರ ತಮ್ಮ ಪಾದಯಾತ್ರೆಯನ್ನು ಪ್ರಾರಂಭಿಸಿದರು. ಅಲ್ಲಿಂದ ಸುಮಾರು 50 ಕಿಲೋಮೀಟರ್ ಕ್ರಮಿಸಿ ಪಟ್ಟಿಪುಲಂನ ಸಾಯಿಮಂದಿರಕ್ಕೆ ಭೇಟಿ ನೀಡಿ ಸಾಯಿಬಾಬಾರವರ ದರ್ಶನವನ್ನು ಪಡೆದರು. ಅಲ್ಲಿನ ಸಾಯಿಬಾಬಾ ಮಂದಿರದ ಸಂಸ್ಥಾಪಕರಾದ ಶ್ರೀಯುತ.ಕೆ.ವಿ.ರಮಣಿಯವರು ಪಾದಯಾತ್ರಿಗಳಿಗೆ ತುಳಸಿ ಮಾಲೆಯನ್ನು ಹಾಕಿ ಸತ್ಕರಿಸಿ ಅವರೆಲ್ಲರಿಗೂ ಶುಭ ಹಾರೈಸಿ ಪಾದಯಾತ್ರೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು. ಅಷ್ಟೇ ಅಲ್ಲದೇ ಅವರೊಂದಿಗೆ ಅನವರತವಾಗಿ ಸಂಪರ್ಕದಲ್ಲಿದ್ದು ಅವರ ದಿನನಿತ್ಯದ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಪಡೆದು ಅವರಿಗೆ ಸೂಕ್ತ  ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಪಾದಯಾತ್ರಿಗಳು ಚನ್ನೈಯಿಂದ ಹೊರಟ ಪಾದಯಾತ್ರಿಗಳು ತಿರುಪತಿಯ ವೆಂಕಟೇಶ್ವರ ಹಾಗೂ ಪಂಢರಾಪುರದ ಪಾಂಡುರಂಗನ ದರ್ಶನವನ್ನು ಸಹ ಮಾಡಿದರು. 

ಚನ್ನೈನಿಂದ ಶಿರಡಿಗೆ ಪಾದಯಾತ್ರೆಯಲ್ಲಿ ನಡೆದುಬರುವಾಗ ತಮ್ಮ ತಂಡದ ಸದಸ್ಯರಿಗೆ ಆದ ಅನುಭವಗಳನ್ನು ಹಂಚಿಕೊಂಡ ಶ್ರೀ.ಚಂದ್ರಮೌಳಿಯವರು " ಶಿರಡಿಯ ಶ್ರೀ ಸಾಯಿಬಾಬಾರವರು ಕಲಿಯುಗದ ಮಹೋನ್ನತ ಸಂತರಾಗಿದ್ದಾರೆ. ಅವರು ಇಂದಿಗೂ ಜೀವಂತವಾಗಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಅದನ್ನು ಅರಿಯಬೇಕಾದರೆ ಜಾಗೃತ ಭಕ್ತಿ ಇರಬೇಕು. ಶ್ರೀ ಸಾಯಿಬಾಬಾರವರ ಅನುಗ್ರಹದಿಂದ ಮುಂದಿನ ವರ್ಷ ನಾವುಗಳು ರಥದೊಂದಿಗೆ ಶಿರಡಿಗೆ ಪಾದಯಾತ್ರೆಯಲ್ಲಿ ಬರಬೇಕೆಂದು ನಿರ್ಧರಿಸಿದ್ದೇವೆ" ಎಂದು ನುಡಿದರು. ಈ ಸಂದರ್ಭದಲ್ಲಿ ಪಾದಯಾತ್ರಿಗಳನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸನ್ಮಾನಿಸಿದರು. ನಂತರ ಮಾತನಾಡಿದ ಶ್ರೀ.ಶಿಂಧೆಯವರು ಪಾದಯಾತ್ರಿಗಳ  ಈ ಮಹೋನ್ನತ ಕಾರ್ಯವನ್ನು ಶ್ಲಾಘಿಸಿದಷ್ಟೇ ಅಲ್ಲದೇ ಮುಂದಿನ ವರ್ಷದ ಪಾದಯಾತ್ರೆಗೆ ಅಗತ್ಯವಿರುವ ಎಲ್ಲಾ ಸಹಾಯಗಳನ್ನು ಮಾಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ  ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಎಲ್ಲಾ ಪಾದಯಾತ್ರಿಗಳಿಗೂ ಸಂಸ್ಥಾನದ ಪರವಾಗಿ ವಂದನಾರ್ಪಣೆಯನ್ನು ಸಲ್ಲಿಸಿದರು (ಮರಾಠಿಯಿಂದ ಆಂಗ್ಲ ಭಾಷೆಗೆ ಅನುವಾದ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರಾವಣ ಮಾಸದ ಅಂಗವಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೆಚ್ಚುವರಿ ಶ್ರೀ ಸಾಯಿ ಸತ್ಯವ್ರತ ಪೂಜೆಯ ತಂಡಗಳ ಸೇರ್ಪಡೆ- ಕೃಪೆ: ಸಾಯಿಅಮೃತಧಾರಾ.ಕಾಂ

ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶಿರಡಿಗೆ ಹರಿದು ಬರುವ ಹೆಚ್ಚುವರಿ  ಗಮನದಲ್ಲಿಟ್ಟುಕೊಂಡು ಹಾಗೂ ಈ ಪವಿತ್ರ ಶ್ರಾವಣ ಮಾಸದಲ್ಲಿ ಸತ್ಯನಾರಾಯಣ ಪೂಜೆಗೆ ಭಕ್ತರು ನೀಡುವ ಹೆಚ್ಚಿನ ಮಹತ್ವವನ್ನು ಮನಗಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಈ ತಿಂಗಳ  27ನೇ ಜುಲೈ 2014 ರಿಂದ 25ನೇ ಆಗಸ್ಟ್ 2014 ರವರೆಗೆ ಆರು ಶ್ರೀ ಸಾಯಿ ಸತ್ಯವ್ರತ ಪೂಜೆಯ ತಂಡಗಳನ್ನು ಆಯೋಜಿಸಿದೆ ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ನ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ಸಾಮಾನ್ಯವಾಗಿ ಪ್ರತಿನಿತ್ಯ ಬೆಳಿಗ್ಗೆ 7 ರಿಂದ 8, 9 ರಿಂದ 10 ಹಾಗೂ 11 ರಿಂದ 12 ರವರಗೆ ಮೂರು ತಂಡಗಳನ್ನು ಶ್ರೀ ಸಾಯಿ ಸತ್ಯವ್ರತ ಪೂಜೆಗೆಂದು ಶ್ರೀ ಸಾಯಿಬಾಬಾ ಸಂಸ್ಥಾನವು ಆಯೋಜಿಸುತ್ತಿದೆ ಎಂದು ಶ್ರೀ.ಸೋನಾವಾನೆಯವರು ತಿಳಿಸಿದರು.

ಆದರೆ ಪವಿತ್ರ ಶ್ರಾವಣ ಮಾಸದಲ್ಲಿ ಶ್ರೀ ಸಾಯಿ ಸತ್ಯನಾರಾಯಣ ಪೂಜೆಗೆ ಹೆಚ್ಚಿನ ಮಹತ್ವವಿರುವ ಕಾರಣ ಸಾಯಿ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸೇವಾ ಪತ್ರಕಕ್ಕಾಗಿ  ಹೆಚ್ಚಿನ ಬೇಡಿಕೆಯನ್ನು ಸಲ್ಲಿಸುತ್ತಾರೆ. 

ಹಾಗಾಗಿ ಅಂತಹ ಭಕ್ತರ ಕೋರಿಕೆಯನ್ನು ಪೂರ್ಣಗೊಳಿಸುವುದಕ್ಕಾಗಿ ಶ್ರೀ ಸಾಯಿಬಾಬಾ ಸಂಸ್ಥಾನವು  ಈ ವರ್ಷ ಶ್ರಾವಣ ಮಾಸದದಲ್ಲಿ ಬೆಳಿಗ್ಗೆ 7 ರಿಂದ 8, 10 ರಿಂದ 11, 11 ರಿಂದ 12, ಮಧ್ಯಾನ್ಹ  1 ರಿಂದ 2, 3 ರಿಂದ 4 ಮತ್ತು ಸಂಜೆ 5 ರಿಂದ 6 ಗಂಟೆಯವರೆಗೆ ಆರು ಶ್ರೀ ಸಾಯಿ ಸತ್ಯವ್ರತಗಳ ತಂಡಗಳನ್ನು ಆಯೋಜಿಸಲಿದೆ.  ಪ್ರತಿ ತಂಡದಲ್ಲಿ 100 ಮಂದಿ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.  ಸಾಯಿಭಕ್ತರು  ಪೂಜೆಗಾಗಿ ಸೇವಾ ಪತ್ರಕಗಳನ್ನು ಸೇವೆಯ ದಿನಕ್ಕೆ  ಒಂದು ದಿನ ಮುಂಚಿತವಾಗಿ ಅಂದರೆ ಹಿಂದಿನ ದಿನ ಮಧ್ಯಾನ್ಹ  2 ಗಂಟೆಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ. ಈ ತಾತ್ಕಾಲಿಕ ಬದಲಾವಣೆಗೆ ಸಾಯಿ ಭಕ್ತರು ತುಂಬು ಹೃದಯದಿಂದ ಸಹಕಾರ ನೀಡಬೇಕೆಂದು ಶ್ರೀ ಸೋನಾವಾನೆಯವರು ಕೋರಿಕೊಳ್ಳುತ್ತಾರೆ.(ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, July 26, 2014

ಶ್ರೀ ಸಾಯಿಬಾಬಾರವರು ಲೇಂಡಿ ಉದ್ಯಾನವನಕ್ಕೆ ಹೋಗುತ್ತಿರುವಾಗ ತೆಗೆದ ಅತ್ಯಂತ ಅಪರೂಪದ ಕಪ್ಪು ಬಿಳುಪಿನ ಭಾವಚಿತ್ರದ ವಿವರ - ಕೃಪೆ: ಸಾಯಿಅಮೃತಧಾರಾ.ಕಾಂ

ಬಾಬಾರವರು ಪ್ರತಿನಿತ್ಯ ಬೆಳಿಗ್ಗೆ 8.30 ರಿಂದ 9.30 ರ ನಡುವೆ ತಪ್ಪದೇ ಲೇಂಡಿ ಉದ್ಯಾನವನಕ್ಕೆ ಹೋಗುತ್ತಿದ್ದರು. ಅವರು ಲೇಂಡಿ ಉದ್ಯಾನವನಕ್ಕೆ ಹೋಗುವಾಗ ಅದೂ ಅವರಿಗೆ ಮನಸ್ಸು ಬಂದಾಗ ಮಾತ್ರ ಕಾಲಿಗೆ ಪಾದರಕ್ಷೆಗಳನ್ನು ಉಪಯೋಗಿಸುತ್ತಿದ್ದರು.  ಅವರು ಮೊದಲು ಮಸೀದಿಯಿಂದ ಹೊರಗೆ ಬಂದು ಹೊರಗಡೆಯಿದ್ದ ಗೋಡೆಗೆ ಒರಗಿಕೊಂಡು ಸ್ವಲ್ಪ ಹೊತ್ತು ನಿಂತುಕೊಳ್ಳುತ್ತಿದ್ದರು. ನಂತರ ಅಲ್ಲಿಂದ ಮಾರುತಿ ಮಂದಿರದ ಬಳಿಗೆ ತೆರಳಿ ಮಂದಿರದ ಒಳಗಿದ್ದ ಹನುಮಂತನನ್ನೇ ದಿಟ್ಟಿಸಿ ನೋಡುತ್ತಾ ಕೈಯಿಂದ ಏನೋ ಸನ್ನೆಗಳನ್ನು ಮಾಡುತ್ತಿದ್ದರು.  ನಂತರ ಗುರುಸ್ಥಾನಕ್ಕೆ ಅಡ್ಡಲಾಗಿದ್ದ ರಸ್ತೆಯ ಬಳಿ ನಿಂತು ಯಾರೊಡನೆಯೋ ಮಾತನಾಡುತ್ತಿರುವಂತೆ ಸ್ವಲ್ಪ ಹೊತ್ತು ನಿಂತಿದ್ದು ನಂತರ ಅಲ್ಲಿಂದ ಮುಂದೆ ಹೋಗುತ್ತಿದ್ದರು. ಗುರುಸ್ಥಾನದ ಹತ್ತಿರದ ಮನೆಗಳಲ್ಲಿ ವಾಸಿಸುತ್ತಿದ್ದ ಭಕ್ತರು ಹಾಗೂ ಆಗಷ್ಟೇ ಶಿರಡಿಗೆ ಬರುತ್ತಿದ್ದ ಭಕ್ತರು ದಾರಿಯಲ್ಲಿಯೇ ಬಾಬಾರವರ ದರ್ಶನ ಮಾಡಿಕೊಳ್ಳುತ್ತಿದ್ದರು. ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತು  ಬಾಬಾರವರು ಮಸೀದಿಯಿಂದ ಹೊರಬರುವುದನ್ನೇ ಕಾಯುತ್ತಿದ್ದರು. ಬಾಬಾರವರು ನಿಧಾನವಾಗಿ ದಾರಿಯಲ್ಲಿ ಸಾಗುತ್ತಾ ಪ್ರತಿಯೊಬ್ಬ ಭಕ್ತರ ಹೆಸರು ಹಿಡಿದು ಕರೆಯುತ್ತಾ ಪ್ರೀತಿಯಿಂದ ನಗುನಗುತಾ ಮಾತನಾಡಿಸಿ ನಂತರವಷ್ಟೇ ಮುಂದೆ ಸಾಗುತ್ತಿದ್ದರು.

ನಂತರ ಅವರು ಎಡಕ್ಕೆ ತಿರುಗಿ ಬಾಲಾಜಿ ಪಿಲಾಜಿ ಗುರವ್ ರವರ ಮನೆಯ ಬಳಿಗೆ ಹೋಗುತ್ತಿದ್ದರು. ಅಲ್ಲಿ ಅವರು ಬಾಲಾಜಿ ಪಿಲಾಜಿ ಗುರವ್ ರವರ ಮನೆಯ ಗೋಡೆಗೆ ಒರಗಿಕೊಂಡು ನಿಲ್ಲುತ್ತಿದ್ದರು. ಹಾಗೆ ಒಮ್ಮೆ ಅವರು ಬಾಲಾಜಿ ಪಿಲಾಜಿ ಗುರಾವ್ ರ ಮನೆಯ ಗೋಡೆಗೆ ಒರಗಿಕೊಂಡು ನಿಂತಿದ್ದಾಗ ಈ ಹಳೆಯ ಹಾಗೂ ಅತ್ಯಂತ ಅಪರೂಪದ ಭಾವಚಿತ್ರವನ್ನು ಸೆರೆಹಿಡಿಯಲಾಗಿರುತ್ತದೆ.    


ಮೇಲಿನ ಈ ಅಪರೂಪದ ಚಿತ್ರದಲ್ಲಿ  ನಾನಾ ಸಾಹೇಬ್ ನಿಮೋಣ್ಕರ್ ರವರು ಬಾಬಾರವರ ಬಲಭಾಗದಲ್ಲಿ , ಬಾಪು ಸಾಹೇಬ ಬೂಟಿಯವರು ಬಾಬಾರವರ ಎಡಭಾಗದಲ್ಲಿ, ಭಾಗೋಜಿ ಶಿಂಧೆಯವರು ಬಾಬಾರವರ ಹಿಂದೆ ನಿಂತುಕೊಂಡು ಅವರ ಮೇಲೆ ಛತ್ರಿಯನ್ನು ಹಿಡಿದಿದ್ದು ಹಾಗೂ ಚೋಪದಾರರು ಬಾಬಾರವರ ಮುಂದುಗಡೆ ನಿಂತುಕೊಂಡಿರುತ್ತಾರೆ. ಬೂಟಿಯವರು ಈ ಚಿತ್ರದಲ್ಲಿ ತಮ್ಮ ತಲೆಯನ್ನು ಕೆಳಗೆ ಮಾಡಿ ನೋಡುತ್ತಿರುವುದನ್ನು ನಾವುಗಳು ಗಮನಿಸಬಹುದಾಗಿದೆ. ಅದು ಏಕೆಂದರೆ, ಬೂಟಿಯವರು ತಮ್ಮ ಜೀವಮಾನದಲ್ಲಿ ಎಂದಿಗೂ ಬಾಬಾರವರ ಮುಖವನ್ನು ನೋಡಿಕೊಂಡು ಮಾತನಾಡುತ್ತಿರಲಿಲ್ಲ. ಬದಲಿಗೆ ಬಾಬಾರವರಿಗೆ ತಲೆಬಾಗಿ ವಂದಿಸಿ ಗೌರವ ಸೂಚಿಸುತ್ತಿದ್ದರು. ಭಾವಚಿತ್ರವನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದರೆ ಬಾಬಾರವರು ಒಂದು ಕಾಲಿನ ಮೇಲೆ ಭಾಗವಾನ್ ಶ್ರೀಕೃಷ್ಣನಂತೆ ನಿಂತುಕೊಂಡಿದ್ದಾರೆ. ಅಲ್ಲದೆ ಅವರು ಧರಿಸಿರುವ ಕಫ್ನಿಯಿಂದ ದಾರದ ಎಳೆಯೊಂದು ಹೊರ ಚಾಚಿದೆ. 

ಅಲ್ಲಿ ಸ್ವಲ್ಪ ಹೊತ್ತು ನೀಂತುಕೊಂಡಿದ್ದ ನಂತರ ಬಾಬಾರವರು ಅಲ್ಲಿಂದ ಹೊರಟು ವಿಠಲನ ಮಂದಿರದ ಹತ್ತಿರ ಹೋಗಿ  ಅಲ್ಲಿ ರಸ್ತೆಯನ್ನು ದಾಟಿ ಬಲಕ್ಕೆ ತಿರುಗಿ ಹಳೆಯ ಅಂಚೆ ಕಛೇರಿಯ ಬಳಿಯಿದ್ದ ಕನೀಫನಾಥ ಮಂದಿರಕ್ಕೆ ಹೋಗುತ್ತಿದ್ದರು.  ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಪುನಃ ಬಲಕ್ಕೆ ತಿರುಗಿ ಲೇಂಡಿ ಉದ್ಯಾನವನವನ್ನು ಪ್ರವೇಶಿಸುತ್ತಿದ್ದರು. ಲೇಂಡಿ ಉದ್ಯಾನವನದಲ್ಲಿ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುತ್ತಿದ್ದರು. ಬಾಬಾರವರು ಕೆಲವೊಂದು ದಿನ ಲೇಂಡಿ ಉದ್ಯಾನವನದಲ್ಲಿ ಸ್ನಾನವನ್ನು ಸಹ ಮಾಡುತ್ತಿದ್ದರು. 

ಬಾಬಾರವರು ಪುನಃ ಮಧ್ಯಾನ್ಹ 2.30 ಕ್ಕೆ ಲೇಂಡಿ ಉದ್ಯಾನವನಕ್ಕೆ ಹೋಗಿ ಬರುತ್ತಿದ್ದರು. ಲೇಂಡಿಯಿಂದ ಹಿಂತಿರುಗಿದ ನಂತರ ಮಸೀದಿಯಲ್ಲಿ ದರ್ಬಾರು ನಡೆಸುತ್ತಿದ್ದರು.  (ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿ). 

ಕನ್ನಡ ಅನುವಾದ:ಶ್ರೀಕಂಠ ಶರ್ಮ 

Friday, July 25, 2014

ಶ್ರೀ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣದ ಆಯೋಜನೆ- ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) 27ನೇ ಜುಲೈ 2014 ರಿಂದ 4ನೇ ಆಗಸ್ಟ್ 2014 ರವರೆಗೆ ಶ್ರೀ ಸಾಯಿ ಸಚ್ಚರಿತ್ರೆಯ ಮಹಾಪಾರಾಯಣವನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. 

ಮಹಾಪಾರಾಯಣದ ಅಂಗವಾಗಿ ಪ್ರತಿದಿನ ಬೆಳಿಗ್ಗೆ 7:00 ರಿಂದ  11:30 ರವರೆಗೆ (ಪುರುಷ ಸಾಯಿಭಕ್ತರು) ಹಾಗೂ ಮಧ್ಯಾನ್ಹ   1:00 ರಿಂದ 5:30 ರವರೆಗೆ (ಮಹಿಳಾ ಸಾಯಿಭಕ್ತರು) ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡಲಿದ್ದಾರೆ. 

ಪಾರಾಯಣದ ಮೊದಲನೇ ದಿನವಾದ 27ನೇ ಜುಲೈ 2014 ರಂದು ಸಂಜೆ 5:30 ರಿಂದ 6:45 ರವರೆಗೆ ಶಿರಡಿಯ ಶ್ರೀಮತಿ.ಆಶಾಭಾಯಿ ಭಾನುದಾಸ್ ಗೋಂಡ್ಕರ್ ರವರಿಂದ ಪ್ರವಚನ,  7:30 ರಿಂದ 9:30 ರವರೆಗೆ ಬೀಡ್  ನ ಶ್ರೀ.ಸಾಯಿ ಗೋಪಾಲ್ ದೇಶಮುಖ್ ರವರಿಂದ   “ದರ್ಬಾರ್  ಮೇರೇ ಸಾಯಿ ಕಾ” ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ರಾತ್ರಿ  9:30 ರಿಂದ  10:15 ರವರೆಗೆ ಶ್ರೀ.ಶ್ರಾವಣ್ ಮಾಧವ ಚೌಧರಿಯವರಿಂದ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ಎರಡನೇ ದಿನವಾದ 28ನೇ ಜುಲೈ 2014 ರಂದು ಸಂಜೆ 5:30 ರಿಂದ 7:00 ರವರೆಗೆ ನಾಗಪುರದ ಶ್ರೀ.ಅಭಿಷೇಕ್ ನಾನೋಟಿಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ, ಹಾಗೂ  ರಾತ್ರಿ  9:00 ರಿಂದ  10:15 ರವರೆಗೆ ಅಹಮದ್ ನಗರದ ಶ್ರೀ.ಪ್ರಕಾಶ್ ಲಗಡ್ ರವರಿಂದ ಭಕ್ತಿ ಸಂಗೀತದ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ಮೂರನೇ ದಿನವಾದ 29ನೇ ಜುಲೈ 2014 ರಂದು ಸಂಜೆ 5:30 ರಿಂದ 7:00 ರವರೆಗೆ ಶಿರೂರಿನ ಹರಿ ಭಕ್ತಪರಾಯಣ ಶ್ರೀ.ಕಿರಣ್ ಮಹಾರಾಜ್ ಭಾಗವತ್ ರವರಿಂದ ಕೀರ್ತನೆ,  7:30 ರಿಂದ 8:30 ರವರೆಗೆ ಶ್ರೀ. ಜ್ಞಾನದೇವ ನಿವೃತ್ತಿ ಗೋಂಡ್ಕರ್ ರವರಿಂದ ಪ್ರವಚನ  ಹಾಗೂ ರಾತ್ರಿ  8:30 ರಿಂದ  10:15 ರವರೆಗೆ ಆದರ್ಶ ಪ್ರೌಢಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ನಾಲ್ಕನೇ ದಿನವಾದ 30ನೇ ಜುಲೈ 2014 ರಂದು ಸಂಜೆ 5:30 ರಿಂದ 7:00 ರವರೆಗೆ ಹರಿಭಕ್ತ ಪಾರಾಯಣ ಶ್ರೀ.ಚಂದ್ರಕಾಂತ್ ಮಹಾರಾಜ್ ಖಂಡಗಾಲೆಯವರಿಂದ ರವರಿಂದ ಹೆಣ್ಣು ಭ್ರೂಣಗಳ ಹತ್ಯೆಯ ಬಗ್ಗೆ ಪ್ರವಚನ ಹಾಗೂ 7:30 ರಿಂದ 10:15 ರವರೆಗೆ ಶಿರಡಿಯ ಶ್ರೀ.ಪಾರಸ್ ಜೈನ್, ಶ್ರೀ.ಕಿಶೋರ್ ಗಗರೆ ಮತ್ತು ರಾಹುಲ್ ಬಿಗಾಡಿಯವರುಗಳಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ಐದನೇ ದಿನವಾದ 1ನೇ ಆಗಸ್ಟ್ 2014 ರಂದು ಸಂಜೆ 5:30 ರಿಂದ 7:00 ರವರೆಗೆ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ  ಹಾಗೂ 7:30 ರಿಂದ 10:15 ರವರೆಗೆ ಮುಂಬೈನ ಶ್ರೀಮತಿ. ಪದ್ಮಾ ರಾಮಸ್ವಾಮಿಯವರ ಬಾಲಗೋಪಾಲ ಭಜನ ಮಂಡಲಿಯಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ಆರನೇ  ದಿನವಾದ 2ನೇ ಆಗಸ್ಟ್ 2014 ರಂದು ಸಂಜೆ 5:30 ರಿಂದ 6:45 ರವರೆಗೆ ಸಾಯಿ ಕೃಪಾ ಮಹಿಳಾ ಮಂಡಳಿ ಹಾಗೂ ನಾದಬ್ರಹ್ಮ ರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 7:30 ರಿಂದ 10:15 ರವರೆಗೆ ಮನಹರ್ ಉದಾಸ್ ರವರಿಂದ  ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ಏಳನೇ  ದಿನವಾದ 3ನೇ ಆಗಸ್ಟ್ 2014 ರಂದು  ಬೆಳಿಗ್ಗೆ 7:00 ರಿಂದ 8:30 ರವರೆಗೆ ಪುರುಷ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡುತ್ತಾರೆ ಹಾಗೂ 8:30 ರಿಂದ  9:00 ರ ಒಳಗೆ ಮಹಾಪಾರಾಯಣವನ್ನು ಸುಸಂಪನ್ನಗೊಳಿಸುತ್ತಾರೆ. ಅಂತೆಯೇ  ಬೆಳಿಗ್ಗೆ 9:30 ಕ್ಕೆ ಮಹಿಳಾ ಸಾಯಿ ಭಕ್ತರು ಶ್ರೀ ಸಾಯಿ ಸಚ್ಚರಿತ್ರೆಯ 53ನೇ ಅಧ್ಯಾಯವನ್ನು ಪಾರಾಯಣ ಮಾಡುತ್ತಾರೆ ಹಾಗೂ ಮಹಾಪಾರಾಯಣವನ್ನು ಸುಸಂಪನ್ನಗೊಳಿಸುತ್ತಾರೆ. ಮಧ್ಯಾನ್ಹ  3:30 ರಿಂದ 6:00 ರವರೆಗೆ ಶ್ರೀ ಸಾಯಿ ಸಚ್ಚರಿತ್ರೆ ಪೋತಿಯನ್ನು ಮೆರವಣಿಗೆಯಲ್ಲಿ ಶಿರಡಿ ಗ್ರಾಮದ ಸುತ್ತಲೂ ತೆಗೆದುಕೊಂಡು ಹೋಗಲಾಗುತ್ತದೆ. ರಾತ್ರಿ  8:30 ರಿಂದ 10:15 ರವರೆಗೆ ಶಿರಡಿಯ ಶ್ರೀ ಗಣಪತ್ ಅಣ್ಣಾಸಾಹೇಬ್ ಗೋಂಡ್ಕರ್ ರವರಿಂದ ಹಳದಿಯ ಮಹತ್ವದ ಬಗ್ಗೆ ಹಾಗೂ ಮದುವೆಯ ಬಗ್ಗೆ ಸಾಂಪ್ರದಾಯಿಕ ಗೀತೆಗಳನ್ನು ಆಯೋಜಿಸಲಾಗಿದೆ. 

ಪಾರಾಯಣದ ಕೊನೆಯ  ದಿನವಾದ 4ನೇ ಆಗಸ್ಟ್ 2014 ರಂದು  ಬೆಳಿಗ್ಗೆ 9:30 ರಿಂದ 12:00 ರವರೆಗೆ ದೋಬಿವಾಲಿಯ ಹರಿಭಕ್ತ ಪರಾಯಣ ಶ್ರೀ.ವೈಭವ ಬುವಾ ಓಕ್ ರವರಿಂದ "ಕಲ್ಯಾಚೆ ಕೀರ್ತನೆ",  ಮಧ್ಯಾನ್ಹ  12:30 ರಿಂದ 4:00 ರವರೆಗೆ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದ ಭೋಜನವನ್ನು ಆಯೋಜಿಸಲಾಗಿದೆ. ಅಂತೆಯೇ ಸಂಜೆ 7:00 ರಿಂದ  9:00 ರವರೆಗೆ ಕೊರಾಳೆಯ ಶ್ರೀ.ಕೃಷ್ಣ ಕೊಳಗೆಯವರಿಂದ ಭಕ್ತಿ ಗೀತೆಯ ಕಾರ್ಯಕ್ರಮ ಹಾಗೂ ರಾತ್ರಿ 9:00 ರಿಂದ  10:15 ರವರೆಗೆ ಶ್ರೀ ಗೋವಿಂದ ಸಂಭಾಜಿ ಕಂಡಾರೆಯವರಿಂದ "ಏಕತಾರಿ ಭಜನೆ" ಯ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಶ್ರೀ ಸಾಯಿಬಾಬಾ ಸಂಸ್ಥಾನವು ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ದಕ್ಷಿಣ ಮುಖಿ ಹನುಮಾನ್ ಮಂದಿರದ ಎದುರುಗಡೆ ಹಾಕಲಾಗುವ ವಿಶೇಷ ಮಹಾಪಾರಾಯಣ ಮಂಟಪದಲ್ಲಿ ಆಯೋಜಿಸುತ್ತಿದೆ.  ಸಾಯಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯೋಜನ ಪಡೆಯಬೇಕೆಂದು ಹಾಗೂ ಶ್ರೀ  ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥಾನದ ಆಡಳಿತ ಮಂಡಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ ನಾಗಾರಾಜ್ ಅನ್ವೇಕರ್, ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ

ದಕ್ಷಿಣ ಕನ್ನಡ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕೊಲ್ಕಾಡಿ, ಪಂಜಿನಡ್ಕ ಅಂಚೆ, ಮುಲ್ಕಿ-574 154, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾರವರ ಮಂದಿರವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಕೊಲ್ಕಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಕಾರ್ನಾಡ್ ವೃತ್ತದಿಂದ ಸುಮಾರು ಎರಡು ಕಿಲೋಮೀಟರ್ ಹಾಗೂ ಮುಲ್ಕಿ ಬಸ್ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ಗಳ ಅಂತರದಲ್ಲಿದೆ. 

ಈ ಮಂದಿರದ ಭೂಮಿಪೂಜೆಯನ್ನು 12ನೇ ಏಪ್ರಿಲ್ 2011 ರಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು ಪವಿತ್ರ ರಾಮನವಮಿಯ ದಿನವಾದ 15ನೇ ಏಪ್ರಿಲ್ 2012 ರಂದು ಮಂದಿರದ ಸಂಸ್ಥಾಪಕ ಅಧ್ಯಕ್ಷರಾದ ಮುಂಬೈನ ಶ್ರೀ.ಈಶ್ವರ ಎಲ್.ಶೆಟ್ಟಿಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. 

ಈ ಮಂದಿರವನ್ನು ಸುಮಾರು ಟ್ರಸ್ಟ್ ನ ಸದಸ್ಯರಾದ  ಶ್ರೀ.ಶ್ರೀಧರ್ ರವರು ದಾನವಾಗಿ ನೀಡಿರುವ 4000 ಚದರ ಅಡಿ ಭೂಮಿಯಲ್ಲಿ ನಿರ್ಮಿಸಲಾಗಿದೆ.

ಶ್ರೀ.ಈಶ್ವರ ಎಲ್. ಶೆಟ್ಟಿಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಶ್ರೀಧರ್ ರವರು ಮಂದಿರದ ದಿನನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ ಶ್ರೀ.ಈಶ್ವರ ಎಲ್. ಶೆಟ್ಟಿಯವರು ನೀಡಿರುವ 3.5 ಅಡಿ ಎತ್ತ್ತರದ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.  ಅಲ್ಲದೇ ಸಾಯಿಬಾಬಾರವರ  ಬೆಳ್ಳಿಯ ಪಾದುಕೆಗಳನ್ನು ಸಹ ಇರಿಸಲಾಗಿದೆ. 







ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವು ಪ್ರತಿನಿತ್ಯ ಬೆಳಿಗ್ಗೆ 6:00 ಗಂಟೆಯಿಂದ  ರಾತ್ರಿ 8:00 ರವರೆಗೆ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ .

ಆರತಿಯ ಸಮಯ:

ಕಾಕಡಾ ಆರತಿ : 6:00 AM
ಧೂಪಾರತಿ      : 6:00 PM
ಶೇಜಾರತಿ       : 8:00 PM

ಪ್ರತಿ ಗುರುವಾರಗಳಂದು ವಿಶೇಷ ಪೂಜೆಯನ್ನು ನೆರವೇರಿಸಿ  ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನವನ್ನು ಮಾಡಲಾಗುತ್ತಿದೆ. 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರುಪೂರ್ಣಿಮೆ 
3.ವಿಜಯದಶಮಿ 

ಸಾಮಾಜಿಕ ಕಾರ್ಯಚಟುವಟಿಕೆಗಳು:

ಮಂದಿರದ ಟ್ರಸ್ಟ್ ನ ವತಿಯಿಂದ ಪ್ರತಿ ವರ್ಷ ಮಂದಿರದ ಸುತ್ತಮುತ್ತಲೂ ಇರುವ ವೃದ್ಧರಿಗೆ ಹಾಗೂ ಬಡ ಜನರಿಗೆ ಶಿರಡಿ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. 

ದೇಣಿಗೆಗೆ ಮನವಿ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಮುಲ್ಕಿಯು ಮಂದಿರದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಹಾಗೂ ಕಾರ್ಯಚಟುವಟಿಕೆಗಳಿಗಾಗಿ ಸಹೃದಯ ಸಾಯಿಭಕ್ತರಿಂದ ಹಾಗೂ ಸಾರ್ವಜನಿಕರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಮಿತಿ, ಕಾರ್ಪೊರೇಷನ್ ಬ್ಯಾಂಕ್, ಖಾತೆ ಸಂಖ್ಯೆ:019700101010951, ಶಾಖೆ: ಮುಲ್ಕಿ ಐ.ಎಫ್.ಎಸ್.ಸಿ.ಸಂಖ್ಯೆ:Corp0000197" ಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಮಂದಿರವು ಮುಲ್ಕಿ ತಾಲೂಕಿನ ಕೊಲ್ಕಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಕಾರ್ನಾಡ್ ವೃತ್ತದಿಂದ ಸುಮಾರು ಎರಡು ಕಿಲೋಮೀಟರ್ ಹಾಗೂ ಮುಲ್ಕಿ ಬಸ್ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ಗಳ ಅಂತರದಲ್ಲಿದೆ.

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಕೊಲ್ಕಾಡಿ, ಪಂಜಿನಡ್ಕ ಅಂಚೆ, 
ಮುಲ್ಕಿ-574 154, 
ದಕ್ಷಿಣ ಕನ್ನಡ ಜಿಲ್ಲೆ, 
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಶ್ರೀಧರ್/ಶ್ರೀ.ಯಶವಂತ್/ಶ್ರೀ.ಪ್ರದೀಪ್ ಸಾಲಿಯಾನ್ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+91 96204 27042 

ಇ-ಮೇಲ್ ವಿಳಾಸ: 
Yashu.mulki@gmail.com,  pradeep_bsalian@yahoo.com

ಮಾರ್ಗಸೂಚಿ: 
ಮಂದಿರವು ಮುಲ್ಕಿ ತಾಲೂಕಿನ ಕೊಲ್ಕಾಡಿ ಎಂಬ ಗ್ರಾಮದಲ್ಲಿದೆ. ಮಂದಿರವು ಕಾರ್ನಾಡ್ ವೃತ್ತದಿಂದ ಸುಮಾರು ಎರಡು ಕಿಲೋಮೀಟರ್ ಹಾಗೂ ಮುಲ್ಕಿ ಬಸ್ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ಗಳ ಅಂತರದಲ್ಲಿದೆ. ಮುಲ್ಕಿ ಬಸ್ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಟೀಲು ಅಥವಾ ಕಿನ್ನಿಗೋಳಿ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಹೋದರೆ ಕಾರ್ನಾಡ್ ವೃತ್ತ ಸಿಗುತ್ತದೆ. ಅದೇ ರಸ್ತೆಯಲ್ಲಿ ಅಲ್ಲಿಂದ ಮುಂದೆ ಸುಮಾರು 2 ಕಿಲೋಮೀಟರ್ ಗಳಷ್ಟು ದೂರ  ಕ್ರಮಿಸಿದರೆ ಮಂದಿರ ಸಿಗುತ್ತದೆ. (ಕೃಪೆ: ಶ್ರೀ.ಪ್ರದೀಪ್ ಸಾಲಿಯಾನ್, ಮುಲ್ಕಿ ಸಾಯಿಬಾಬಾ ಮಂದಿರ ಮತ್ತು ಶ್ರೀಮತಿ.ಸುಮತಿ ಪೈ, ಮಂಗಳೂರು)

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, July 24, 2014

ಕೆಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ.ಶ್ರೀಪಾದ ನಾಯಕ್ ರ ಶಿರಡಿ ಭೇಟಿ- ಕೃಪೆ: ಸಾಯಿಅಮೃತಧಾರಾ.ಕಾಂ

 ಕೆಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾದ ಶ್ರೀ.ಶ್ರೀಪಾದ ನಾಯಕ್ ರವರು ಇದೇ ತಿಂಗಳ 24ನೇ ಜುಲೈ 2014, ಗುರುವಾರ ದಂದು ಶಿರಡಿಗೆ ಭೇಟಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಕೆಂದ್ರ ಸಚಿವರನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, July 23, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ "ಕಾರ್ಗಿಲ್ ಗೌರವ ಕಳಶ" ದ ಸ್ವಾಗತ - ಕೃಪೆ: ಸಾಯಿಅಮೃತಧಾರಾ.ಕಾಂ

ಕಾರ್ಗಿಲ್ ವಿಜಯ ಯಾತ್ರೆಗೆ 15 ವರ್ಷಗಳು ತುಂಬಿದ ಸಂದರ್ಭದಲ್ಲಿ ಭಾರತದ ಎಲ್ಲಾ ಭಾಗಗಳಿಂದ ಜನರು ಹೊತ್ತು ತಂದಿದ್ದ "ಕಾರ್ಗಿಲ್ ಗೌರವ ಕಳಶ" ವನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧಿಕಾರಿಗಳು ಇದೇ ತಿಂಗಳ  23ನೇ ಜುಲೈ  2014, ಬುಧವಾರ ದಂದು ಸ್ವಾಗತ ಮಾಡಿದರು. ಆ ಕಳಶವನ್ನು ಹೊತ್ತು ತಂದಿದ್ದ ಜನರು ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಮಾಡಿ ಪುನೀತರಾದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, July 22, 2014

ಶಿರಡಿಯಲ್ಲಿರುವ ಹೊಸ್ತಿಲಿನ ಮಹತ್ವ - ಕೃಪೆ: ಸಾಯಿಅಮೃತಧಾರಾ.ಕಾಂ

ಒಂದು ಮನೆ, ಕೋಣೆ, ಗ್ರಾಮ ಅಥವಾ ಊರಿನ ಸರಹದ್ದಿನಲ್ಲಿ  ಮಹಾದ್ವಾರದ ಕೆಳಗೆ ಒಂದು ಮರ ಅಥವಾ ಕಲ್ಲನ್ನು ಅಡ್ಡವಾಗಿ ಹಾಕುತ್ತಾರೆ. ಅದನ್ನು "ಹೊಸ್ತಿಲು", "ಹೊಸಿಲು" ಅಥವಾ "ವಾಸಕಲ್ಲು" ಎಂಬ ಹೆಸರುಗಳಿಂದ ಕರೆಯುತ್ತಾರೆ. ಅಂತೆಯೇ ಶಿರಡಿಯಲ್ಲಿನ ಚಾವಡಿ ಮತ್ತು ಶ್ಯಾಮ ಸುಂದರ ಹಾಲ್ ನ ನಡುವೆ ಇರುವ ಖಾಲಿ ಸ್ಥಳದಲ್ಲಿ ಒಂದು ಹೊಸ್ತಿಲು ಇರುತ್ತದೆ. ಶ್ರೀ ಸಾಯಿಬಾಬಾ ಸಂಸ್ಥಾನ (ಶಿರಡಿ) ವು 2013ನೇ ಇಸವಿಯಲ್ಲಿ ಇದರ ಪಕ್ಕದಲ್ಲಿಯೇ ಒಂದು ಕಮಾನನ್ನು ನಿರ್ಮಾಣ ಮಾಡಿರುತ್ತದೆ. ಅನೇಕ ಸಾಯಿಭಕ್ತರಿಗೆ ಈ ಹೊಸ್ತಿಲಿನ ಬಗ್ಗೆ ಮಾಹಿತಿ ಇಲ್ಲ. ಈ ಹೊಸ್ತಿಲು ಎರಡು ಗ್ರಾಮಗಳಾದ ಶಿರಡಿ ಹಾಗೂ ಭೀರಗಾವ್ ಅನ್ನು ಬೇರ್ಪಡಿಸುತ್ತದೆ.

ಹಿಂದಿನ ಕಾಲದಲ್ಲಿ ಶಿರಡಿಯು ಒಂದು ಸಣ್ಣ ಗ್ರಾಮವಾಗಿತ್ತು. ನಂತರ ಬಾಬಾರವರ ಅವತರಣ ಕಾಲದಲ್ಲಿ ಬಾಬಾರವರ ಮಹಾಭಕ್ತರಾದ ದಿವಂಗತ ಶ್ರೀ.ರಾಮಚಂದ್ರ ದಾದಾ ಪಾಟೀಲರು ಭೀರಗಾವ್ ಹಾಗೂ ಶಿರಡಿಯನ್ನು ಒಗ್ಗೂಡಿಸಿ ಶಿರಡಿ ಒಂದು ದೊಡ್ಡ ಗ್ರಾಮವಾಗುವಂತೆ ಮಾಡಿದರು.

ಇದೇ ಕಾರಣಕ್ಕಾಗಿ ಶಿರಡಿಯ ದ್ವಾರಕಾಮಾಯಿಯ ಬಳಿ ಎರಡು ಚಾವಡಿಗಳಿರುತ್ತವೆ. ಉತ್ತರದ ಚಾವಡಿಯು ಶಿರಡಿಗೆ ಹಾಗೂ ದಕ್ಷಿಣದ ಚಾವಡಿಯು ಭೀರಗಾವ್ ಗೆ ಸೇರಿರುತ್ತದೆ. ಹಾಗೆಯೇ, ಶಿರಡಿಯ ದಕ್ಷಿಣ ಮುಖಿ ಹನುಮಾನ್ ಮಂದಿರದಲ್ಲಿ ಮೊದಲು ಈ ಎರಡೂ ಗ್ರಾಮಗಳನ್ನು ಪ್ರತಿನಿಧಿಸುವ ಸಲುವಾಗಿ ಎರಡು ಪುಟ್ಟ ಹನುಮಂತನ ವಿಗ್ರಹಗಳನ್ನು ಇರಿಸಲಾಗಿತ್ತು. ಆದರೆ ಶ್ರೀ ಸಾಯಿಬಾಬಾ ಸಂಸ್ಥಾನದವರು ವಸ್ತು ಸಂಗ್ರಹಾಲಯವನ್ನು ನಿರ್ಮಾಣ  ಮಾಡಿದ ನಂತರ ಹಾಗೂ  ಹಳೆಯ ಹನುಮಾನ್ ಮಂದಿರವನ್ನು ನವೀಕರಣಗೊಳಿಸಿದಾಗ ಈ ಎರಡು ಪುಟ್ಟ ವಿಗ್ರಹಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಿ ಅದರ ಬದಲಿಗೆ ಆಳೆತ್ತರದ ಒಂದು ಹನುಮಂತನ ವಿಗ್ರಹವನ್ನು ಹೊಸ ಮಂದಿರದಲ್ಲಿ ಪ್ರತಿಷ್ಟಾಪಿಸಿದರು. 


ಹಿಂದಿನ ದಿನಗಳಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಈ ಹೊಸ್ತಿಲಿನ ಮೇಲೆ ತೆಂಗಿನಕಾಯಿಯನ್ನು ಒಡೆದು ಪೂಜೆ ಸಲ್ಲಿಸುತ್ತಿದ್ದರು. ಶಿರಡಿ ನಿವಾಸಿಗಳು ಈ ಹೊಸ್ತಿಲಿಗೆ ಸಕ್ಕರೆಯನ್ನು ಅರ್ಪಣೆ ಮಾಡಿ ಪೂಜಿಸುವ ಪರಿಪಾಠ ಇಟ್ಟುಕೊಂಡಿದ್ದರು. ಅಲ್ಲದೇ ಶಿರಡಿ ಗ್ರಾಮದಲ್ಲಿ ಯಾರಾದರೂ ಮೃತರಾದಾಗ ಅವರ ದೇಹವನ್ನು ಮೆರವಣಿಗೆಯಲ್ಲಿ ತಂದು ಹೊಸ್ತಿಲಿನ ಮೇಲೆ ಇರಿಸಿ ನಂತರ ತೆಗೆದುಕೊಂಡು ಹೋಗಿ ಉತ್ತರಕ್ರಿಯೆಗಳನ್ನು ಮಾಡುತ್ತಿದ್ದರು. ಈ ಹೊಸ್ತಿಲಿನ ಬಗ್ಗೆ ತಿಳಿದಿರುವ ಶಿರಡಿ ಗ್ರಾಮದ ಹಳೆಯ ನಿವಾಸಿಗಳು ಇಂದಿಗೂ ಪವಿತ್ರ ಹಿಂದೂ ಮಾಸಗಳಾದ ಶ್ರಾವಣ ಹಾಗೂ ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.

ಹಿಂದೂ ಪುರಾಣವಾದ ಭಾಗವತ ಮಹಾಪುರಾಣದಲ್ಲಿ ಬರುವ ನರಸಿಂಹಾವತಾರದ ಕಥೆಯನ್ನು ನೋಡಿದಾಗ ನಮಗೆ ಹೊಸ್ತಿಲಿನ ಮಹತ್ವ ಚೆನ್ನಾಗಿ ಮನದಟ್ಟಾಗುತ್ತದೆ. ನರಸಿಂಹಾವತಾರದ ಕಥೆ ಈ ಕೆಳಕಂಡಂತೆ ಇದೆ:

ಭಗವಾನ್ ಮಹಾವಿಷ್ಣುವಿನ ವೈಕುಂಠ ಲೋಕದಲ್ಲಿ ದ್ವಾರಪಾಲಕರಾಗಿದ್ದ ಜಯ ಮತ್ತು ವಿಜಯರು ನಾಲ್ವರು ಕುಮಾರರ ಶಾಪದಿಂದಾಗಿ ಹಿರಣ್ಯಕಶಿಪು ಹಾಗೂ ಹಿರಣ್ಯಾಕ್ಷನೆಂಬ ಹೆಸರಿನಿಂದ ಮುಂದಿನ ಸತ್ಯ ಯುಗದಲ್ಲಿ ದಕ್ಷ ಪ್ರಜಾಪತಿಯ ಮಗಳಾದ ದಿತಿ ಹಾಗೂ ಕಶ್ಯಪ ಮುನಿಯ ಪುತ್ರರಾಗಿ ಜನ್ಮ ತಾಳುತ್ತಾರೆ ಹಾಗೂ ಹಿರಣ್ಯರೆಂಬ ಹೆಸರಿನಿಂದ ಪ್ರಸಿದ್ಧರಾಗಿರುತ್ತಾರೆ. ಮುಸ್ಸಂಜೆಯ ವೇಳೆಯಲ್ಲಿ ದಿತಿ ಹಾಗೂ ಕಶ್ಯಪ ಮುನಿಯು ರತಿಕ್ರೀಡೆಯಲ್ಲಿ ತೊಡಗಿದ್ದರಿಂದ ಹಾಗೂ ಮುಸ್ಸಂಜೆಯ ಸಮಯ ಅಶುಭವಾದ ಕಾರಣದಿಂದ ಹಿರಣ್ಯಕಶಿಪು ಹಾಗೂ ಹಿರಣ್ಯಾಕ್ಷರು ರಾಕ್ಷಸರಾಗಿ ಜನ್ಮ ತಾಳುತ್ತಾರೆ.

ಕಾಲಾನಂತರದಲ್ಲಿ ವಿಷ್ಣುವು ವರಾಹ ರೂಪವನ್ನು ಧರಿಸಿ ಹಿರಣ್ಯಾಕ್ಷನನ್ನು ಸಂಹಾರ ಮಾಡುತ್ತಾನೆ. ಆ ದಿನದಿಂದ ಹಿರಣ್ಯಕಶಿಪುವು ವಿಷ್ಣುವನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ. ಆದುದರಿಂದ ಹೇಗಾದರೂ ಮಾಡಿ ವಿಷ್ಣುವನ್ನು ಸಂಹಾರ ಮಾಡಬೇಕೆಂದು ಆಲೋಚಿಸಿದ ಅವನು ಬ್ರಹ್ಮದೇವನನ್ನು ಕುರಿತು ತಪಸ್ಸನ್ನು ಆಚರಿಸಿದ ಪಕ್ಷದಲ್ಲಿ ಇತರ ರಕ್ಕಸರಿಗೆ ವರ ನೀಡಿದಂತೆ ತನಗೂ ಬ್ರಹ್ಮದೇವನು ವರ ನೀಡಬಹುದೆಂದು ಯೋಚಿಸುತ್ತಾನೆ. ಹಿರಣ್ಯಕಶಿಪುವಿನ ತಪಸ್ಸಿನಿಂದ ಬ್ರಹ್ಮದೇವನು ಸುಪ್ರೀತನಾಗುತ್ತಾನೆ ಹಾಗೂ ಅವನ ಮುಂದೆ ಪ್ರತ್ಯಕ್ಷನಾಗಿ ಅವನಿಗಿಷ್ಟವಾದ ವರವನ್ನು ಬೇಡಿಕೊಳ್ಳುವಂತೆ ಹೇಳುತ್ತಾನೆ. ಆಗ ಹಿರಣ್ಯಕಶಿಪುವು ತನಗೆ ಅಮರತ್ವವನ್ನು ದಯಪಾಲಿಸುವಂತೆ  ಬ್ರಹ್ಮನನ್ನು ಬೇಡಿಕೊಳ್ಳುತ್ತಾನೆ. ಆದರೆ ಬ್ರಹ್ಮದೇವನು ಅದಕ್ಕೆ ಒಪ್ಪುವುದಿಲ್ಲ. ಆಗ ಹಿರಣ್ಯಕಶಿಪುವು ಬ್ರಹ್ಮನನ್ನು  ಈ ಕೆಳಗಿನಂತೆ ಯಾಚಿಸುತ್ತಾನೆ.

"ಎಲೈ ದೇವನೇ, ನೀನು ಸೃಷ್ಟಿ ಮಾಡಿದ ಯಾವ ಜೀವಿಯಿಂದಲೂ ನನಗೆ ಮರಣ ಬರದಂತೆ ವರವನ್ನು ದಯಪಾಲಿಸು. ನಾನು ಯಾವುದೇ ಮನೆಯ ಒಳಗೆ ಅಥವಾ ಹೊರಗೆ ಸಾಯಬಾರದು. ಬೆಳಗಿನ ಸಮಯ ಅಥವಾ ರಾತ್ರಿಯ ಸಮಯದಲ್ಲಿ ಸಾಯಬಾರದು. ನೆಲದಲ್ಲಿ ಅಥವಾ ಆಕಾಶದಲ್ಲಿ ಸಾಯಬಾರದು. ನೀನು ಸೃಷ್ಟಿ ಮಾಡಿದ ಯಾವ ಮನುಶ್ಯರಿಂದಲೋ, ಆಯುಧದಿಂದಲೂ ಅಥವಾ ಪ್ರಾಣಿಯಿಂದಲೂ  ಸಾಯಬಾರದು. ಜೀವಂತವಿರುವ ಅಥವಾ ಜೀವವಿಲ್ಲದಿರುವ ಯಾವುದರಿಂದಲೂ ನನಗೆ ಮರಣ ಸಂಭವಿಸಬಾರದು. ಯಾವ ದೇವತೆಗಳಿಂದಲೂ ಅಥವಾ ರಾಕ್ಷಸರಿಂದಲೂ ಅಥವಾ ಭೂಮಿಯೊಳಗೆ ವಾಸಿಸುವ ಹಾವು ಮತ್ತು ಇತರ ಯಾವುದೇ ಪ್ರಾಣಿಗಳಿಂದಲೂ ಸಾಯಬಾರದು.  ನನಗೆ ಯಾರೂ ಶತ್ರುಗಳಿರಬಾರದು. ಈ ಭೂಮಂಡಲದ ಮೇಲೆ ಜೀವಿಸಿರುವ ಎಲ್ಲರಿಗೂ ಹಾಗೂ ಎಲ್ಲಾ  ದೇವತೆಗಳಿಗೂ ನಾನೇ ನಾಯಕನಾಗುವಂತೆ ಅನುಗ್ರಹಿಸು. ಅಲ್ಲದೇ, ದೀರ್ಘಕಾಲದವರೆಗೆ ನಾನು  ತಪಸ್ಸು ಹಾಗೂ ಯೋಗವನ್ನಾಚರಿಸಿ ಗಳಿಸಿರುವ ಎಲ್ಲಾ ಅತೀಂದ್ರಿಯ ಶಕ್ತಿಗಳೂ ಯಾವುದೇ ಸಮಯದಲ್ಲೂ ವ್ಯಯವಾಗದಂತೆ ವರವನ್ನು ನೀಡು" ಎಂದು ಕೋರಿಕೊಂಡನು.

ಹಿರಣ್ಯಕಶಿಪುವು ಈ ರೀತಿ ತಪಸ್ಸನ್ನಾಚರಿಸುತ್ತಿರಬೇಕಾದರೆ ಅದೇ ಅವಕಾಶಕ್ಕೆ ಬಹಳ ದಿನಗಳಿಂದ ಕಾಯುತ್ತಿದ್ದ ಇಂದ್ರ ಹಾಗೂ ಮತ್ತಿತರ ದೇವತೆಗಳು ಅವನ ಅರಮನೆಗೆ ಮುತ್ತಿಗೆ ಹಾಕುತ್ತಾರೆ.  ಆ ಸಮಯದಲ್ಲಿ ಅಲ್ಲಿಗೆ ಬಂದ ಮಹರ್ಷಿ ನಾರದರು ಯಾವ ತಪ್ಪನ್ನು ಮಾಡದ ಹಿರಣ್ಯಕಶಿಪುವಿನ ಧರ್ಮಪತ್ನಿಯಾದ ಕಯಾದುವನ್ನು ರಕ್ಷಿಸಬೇಕೆಂದು ಮನಸ್ಸು ಮಾಡಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ನಾರದರ ಆರೈಕೆಯಲ್ಲಿರುವ ಸಮಯದಲ್ಲಿ ಆಕೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಹಿರಣ್ಯಕಶಿಪುವಿನ ಮಗನಾದ ಪ್ರಹ್ಲಾದನಿಗೆ ತಾಯಿಯ ಗರ್ಭದಲ್ಲಿರುವ ಸಮಯದಲ್ಲಿಯೇ ನಾರದರು ಕಾಲ ಕಾಲಕ್ಕೆ ದಿವ್ಯ ಸಂದೇಶಗಳನ್ನು ರವಾನಿಸುತ್ತಾರೆ. ಹಾಗಾಗಿ, ಮುಂದೆ ಪ್ರಹ್ಲಾದನು ಭಗವಾನ್ ನಾರಾಯಣನ ಅನನ್ಯ ಭಕ್ತನಾಗಿ ರೂಪುಗೊಳ್ಳುತ್ತಾನೆ. ಇದರಿಂದ ತಂದೆಯಾದ ಹಿರಣ್ಯಕಶಿಪುವಿಗೆ ಬಹಳವೇ ಕೋಪ ಉಕ್ಕಿ ಬರುತ್ತದೆ.

ಕೋಪದಿಂದ ಕೆಂಡಮಂಡಲವಾದ ಹಿರಣ್ಯಕಶಿಪುವು ತನ್ನ ಮಗನಾದ ಪ್ರಹ್ಲಾದನನ್ನೇ ಹಲವಾರು ಬಾರಿ ಕೊಲ್ಲಿಸಲು ನೋಡುತ್ತಾನೆ. ಆದರೆ ಪ್ರಹ್ಲಾದನಿಗೆ ತೊಂದರೆಯಾದಾಗಲೆಲ್ಲಾ ವಿಷ್ಣುವು ಅವನನ್ನು ರಕ್ಷಿಸುತ್ತಾ ಹೋಗುತ್ತಾನೆ. ಒಮ್ಮೆ ಹಿರಣ್ಯಕಶಿಪುವು ತನ್ನನ್ನು ಸರ್ವಶಕ್ತ ಭಗವಂತನೆಂದು ಅಂಗೀಕರಿಸುವಂತೆ ಪ್ರಹ್ಲಾದನಿಗೆ ಆಜ್ಞೆ ಮಾಡಲು ಅವನು ಅದಕ್ಕೆ ಒಪ್ಪದೇ ಭಗವಾನ್ ಮಹಾವಿಷ್ಣುವೇ  ಸರ್ವಶಕ್ತ ಹಾಗೂ ಸರ್ವಾಂತರ್ಯಾಮಿಯಾದ ಭಗವಂತನೆಂದು ನುಡಿಯುತ್ತಾನೆ. ಆಗ ಹಿರಣ್ಯಕಶಿಪುವು ಒಂದು ಕಂಭದ ಕಡೆಗೆ ತನ್ನ ಕೈ ತೋರಿಸಿ ವಿಷ್ಣುವು ಆ ಕಂಭದಲ್ಲಿ ಇರುವನೇ ಎಂದು ತನ್ನ ಮಗನನ್ನು ಪ್ರಶ್ನಿಸಿದನು. ಅದಕ್ಕೆ ಪ್ರಹ್ಲಾದನು ಭಗವಾನ್ ನಾರಾಯಣನು ಆ ಕಂಭದಲ್ಲಿಯೂ ಇರುವನೆಂದು ಬಲು ಧೃಢವಾಗಿ ಉತ್ತರಿಸಿದನು. ಪ್ರಹ್ಲಾದನ ಈ ಉತ್ತರದಿಂದ ಕುಪಿತನಾದ ಹಿರಣ್ಯಕಶಿಪುವು ಆ ಕಂಭಕ್ಕೆ ತನ್ನ ಗದೆಯಿಂದ ಬಲವಾಗಿ ಹೊಡೆಯುತ್ತಾನೆ.  ಆಗ ಭಯಂಕರವಾದ ಸದ್ದಿನೊಂದಿಗೆ ಆ ಕಂಭದಿಂದ ಭಗವಾನ್ ಮಹಾವಿಷ್ಣುವು ನರಸಿಂಹನ ರೂಪದಲ್ಲಿ ಹೊರಬಂದು ಹಿರಣ್ಯಕಶಿಪುವಿನ ಮೇಲೆರಗುತ್ತಾನೆ. ಬ್ರಹ್ಮ ದೇವನು ನೀಡಿದ ವರಕ್ಕೆ ಅಪಚಾರವಾಗಬಾರದೆಂಬ ಕಾರಣದಿಂದ ವಿಷ್ಣುವು ಮನುಷ್ಯನೂ  ಅಲ್ಲದೇ, ಪ್ರಾಣಿಯೂ ಅಲ್ಲದೇ ಅವೆರಡರ ಸಮ್ಮಿಶ್ರಣದ ರೂಪವಾದ ನರಸಿಂಹನ ರೂಪದಲ್ಲಿ ಬರುತ್ತಾನೆ. ಆಗ ಹಗಲು ಅಥವಾ ರಾತ್ರಿಯಾಗಿರದೇ ಮುಸ್ಸಂಜೆಯ ಸಮಯವಾಗಿರುತ್ತದೆ. ಹಿರಣ್ಯಕಶಿಪುವಿನ ಅರಮನೆಯ ಒಳಗೆ ಅಥವಾ ಹೊರಗೆ ಆಗಿರದೇ ಬದಲಿಗೆ ಅವನ ಅರಮನೆಯ ಹೊಸ್ತಿಲಿನ ಮೇಲೆ ಅಡ್ಡಲಾಗಿ ಕುಳಿತುಕೊಂಡು ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ತನ್ನ ಬಲವಾದ ಉಗುರುಗಳನ್ನೇ ಆಯುಧವನ್ನಾಗಿ ಬಳಸಿ ಅವನನ್ನು ಸಂಹರಿಸುತ್ತಾನೆ. ಹಿರಣ್ಯಕಶಿಪುವಿನ ಸಂಹಾರವಾದ ಮೇಲೂ  ನರಸಿಂಹ ಶಾಂತನಾಗುವುದಿಲ್ಲ. ಅಲ್ಲದೇ ಅವನ ಉಗುರುಗಳು ಬಹಳ ಉರಿಯುತ್ತಿರುತ್ತವೆ. ಆಗ ವಿಷ್ಣುವಿನ ಧರ್ಮಪತ್ನಿಯಾದ ಮಹಾಲಕ್ಷ್ಮಿಯು ಅತ್ತಿ (ಔದುಂಬರ) ಮರದ ಹಣ್ಣುಗಳನ್ನು ವಿಷ್ಣುವಿನ ಉರಿಯುತ್ತಿರುವ ಉಗುರುಗಳಿಗೆ ಹಾಕುತ್ತಾಳೆ. ಆಗ ಭಗವಾನ್ ವಿಷ್ಣುವು ಪ್ರಸನ್ನನಾಗುತ್ತಾನೆ.

ಮೇಲಿನ ಈ ನರಸಿಂಹವಾತಾರದ ಕಥೆಯು ದುಷ್ಟ ಶಕ್ತಿಗಳ ಮೇಲೆ ಧರ್ಮವು ಸಾಧಿಸಿದ ವಿಜಯವನ್ನು ಸೂಚಿಸುತ್ತದೆ.

ಭಾರತದ ಪುರಾತನ ಗ್ರಂಥಗಳು ಹಾಗೂ ವೇದಗಳನ್ನು ಪರಾಂಬರಿಸಿದಾಗ ಹೊಸ್ತಿಲಿನ ಮಹತ್ವವನ್ನು ಈ ಕೆಳಕಂಡಂತೆ ಅರ್ಥೈಸಬಹುದಾಗಿರುತ್ತದೆ:

ಒಂದು ಮನೆ ಎಂದ ಮೇಲೆ ಹೊಸ್ತಿಲು ಇರಲೇಬೇಕೆಂಬ ನಿಯಮವಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಹೇಳಬೇಕೆಂದರೆ ಹೊಸ್ತಿಲು ಕೇವಲ ಒಂದು ಮನೆ, ಗ್ರಾಮ, ಪಟ್ಟಣ, ಮತ್ತು ದೇವಾಲಯದ   ಮುಖ್ಯದ್ವಾರದ ಗಡಿಯನ್ನು ಸೂಚಿಸುವುದಷ್ಟೇ ಅಲ್ಲದೇ ವಿಷ್ಣುವಿನ ಒಳಗೆ ಅಂತರ್ಗತವಾಗಿರುವ ದೇವಿ  ಮಹಾಲಕ್ಷ್ಮಿಯನ್ನು ಪ್ರತಿನಿಧಿಸುತ್ತದೆ. ಅದುದರಿಂದ ನಮ್ಮ ದೇಶದ ಪ್ರಾಚೀನ ಸಾಹಿತ್ಯವನ್ನು ಅವಲೋಕನೆ ಮಾಡಿದಾಗ "ಹೊಸ್ತಿಲು" ಪದವನ್ನು ನಪೂಂಸಕ ಲಿಂಗವಾಗಿ ಪರಿಗಣಿಸದೇ ಬದಲಿಗೆ ಪೂಜ್ಯ ಭಾವನೆಯಿಂದ ಸ್ತ್ರೀಲಿಂಗ ಪದವಾದ "ಅವಳು" ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ. ಯಾವುದೇ ಒಂದು ಕಟ್ಟಡ, ವಸತಿ ಸಮುಚ್ಚಯ ಅಥವಾ ಲೇಔಟ್ ನಿರ್ಮಾಣ ಮಾಡುವ ಪ್ರಾರಂಭದಲ್ಲಿಯೇ ಕಲ್ಲನ್ನು ಇರಿಸಿ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸುವ ಸಂಪ್ರದಾಯ ನಮ್ಮಲ್ಲಿ ಬೆಳೆದುಬಂದಿದೆ. ಆ ಸಂದರ್ಭದಲ್ಲಿ ಎಲ್ಲಾ ದೇವರುಗಳನ್ನು ಮಂತ್ರಪೂರ್ವಕವಾಗಿ  ಆವಾಹನೆ ಮಾಡಿ ಆ ಕಲ್ಲನ್ನೇ ದೇವರೆಂಬ ಭಾವನೆಯಿಂದ  ಭಕ್ತಿಯಿಂದ ಪೂಜಿಸಿ ಕೊನೆಗೆ ಒಂದು ಮರ ಅಥವಾ ಕಲ್ಲಿನ ಹೊಸ್ತಿಲನ್ನು ಇರಿಸುವ ಪರಿಪಾಠ ಇಂದಿಗೂ ಇದೆ. ಈ ಅಡಿಪಾಯದ ಕಲ್ಲನ್ನು "ಆಧಾರ ಇಷ್ಟಿಕ" ಎಂಬ ಹೆಸರಿನಿಂದ ಕರೆಯಲಾಗುತ್ತದೆ. (ಇಷ್ಟಿಕ ಎಂದರೆ ಇಟ್ಟಿಗೆ ಅಥವಾ ಕಲ್ಲು ಎಂಬ ಅರ್ಥ ಬರುತ್ತದೆ).  ಈ ಹೊಸ್ತಿಲನ್ನು "ವಾಸುದೇವ" (ವಿಷ್ಣುವಿನ ಒಂದು ರೂಪ) ನೆಂದು ಪರಿಗಣಿಸಲಾಗುತ್ತದೆ. ನಾವು ಈ ವಾಸುದೇವ ಎಂಬ ಪದವನ್ನು ಸೂಕ್ಷ್ಮವಾಗಿ ಅವಲೋಕನೆ ಮಾಡಿ ಪದ ವಿಭಜನೆಯನ್ನು ಮಾಡಿದಾಗ ಪದದ ಮೊದಲ ಭಾಗವು  "ವಾಸ" ಎಂದಾಗುತ್ತದೆ. "ವಾಸ" ಎಂಬ ಪದಕ್ಕೆ "ಇರುವುದು" ಅಥವಾ "ತಂಗುವುದು" ಎಂಬ ಅರ್ಥವಿರುತ್ತದೆ. ಆದ್ದರಿಂದ ವಾಸುದೇವನಲ್ಲಿ ಯಾರು ವಾಸಿಸುತ್ತಾರೆ ಎಂಬ ಪ್ರಶ್ನೆ ನಮ್ಮೆಲ್ಲರ ಮನದಲ್ಲಿ ಉದ್ಭವಿಸುತ್ತದೆ. ವಾಸುದೇವನಲ್ಲಿ ನಮ್ಮ ಪ್ರೀತಿಯ ತಾಯಿ ಹಾಗೂ ವಾಸುದೇವನ ಪತಿಯಾದ "ಮಾ ಭಗವತಿ ಮಹಾಲಕ್ಷ್ಮಿ" ಯನ್ನು ಬಿಟ್ಟು ಬೇರೆ ಯಾರು ವಾಸಿಸಲು ಸಾಧ್ಯ. ಹಾಗಾಗಿ  ಯಾವ ಸ್ಥಳದಲ್ಲಿ ಲಕ್ಷ್ಮಿಯು ವಾಸಿಸುತ್ತಾಳೋ ಆ ಸ್ಥಳದಲ್ಲಿ ಎಲ್ಲಾ ರೀತಿಯ ಸಂಪತ್ತುಗಳೂ ಮನೆ ಮಾಡಿರುತ್ತದೆ. ಇಲ್ಲಿ ನಾವುಗಳು ಗಮನಿಸಬೇಕಾದ ಒಂದು ಅಂಶವೇನೆಂದರೆ ಲಕ್ಷ್ಮಿಯು ಕೇವಲ ಲೌಕಿಕ ವೈಭವವಷ್ಟೇ ಅಲ್ಲದೇ ಬದಲಿಗೆ ಶಾಂತಿ, ನೆಮ್ಮದಿ, ಸಂತೋಷ, ಜ್ಞಾನ, ಕಾಂತಿಯತೆ ಹಾಗೂ ಇನ್ನೂ ಹಲವಾರು ಬಗೆಯ ಆಧ್ಯಾತ್ಮಿಕ ಸಂಪತ್ತನ್ನೂ ಸಹ ಸೂಚಿಸುತ್ತಾಳೆ.  ಹಾಗಾಗಿ ಮಹಾಲಕ್ಷ್ಮಿ ಎಂದರೆ  ಕೇವಲ ಲೌಕಿಕ  ಸಂಪತ್ತನ್ನು ನೀಡುವವಳು ಎಂದು ನಾವು ತಿಳಿದಿದ್ದರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಇಲ್ಲವೆಂದೇ ಹೇಳಬೇಕಾಗುತ್ತದೆ. ಅಂತಹ ಸಂಶಯಾತ್ಮರಿಗೆ ಋಗ್ವೇದ ಸಂಹಿತೆಯಲ್ಲಿ ಮಾತೆ ಲಕ್ಷ್ಮಿಯ ವೈಭವವನ್ನು ಕೊಂಡಾಡುವ "ಶ್ರೀ ಸೂಕ್ತ" ಮಂತ್ರವು ತಕ್ಕ ಉತ್ತರವನ್ನು ನೀಡಿ ಕಣ್ಣು ತೆರೆಯುವಂತೆ ಮಾಡುತ್ತದೆ. ಶ್ರೀ ಸೂಕ್ತ ಮಂತ್ರದಲ್ಲಿ ಮಹಾಲಕ್ಷ್ಮಿಯನ್ನು "ಮೋಕ್ಷ ಲಕ್ಷ್ಮಿ" (ಅಂದರೆ ಮೋಕ್ಷವನ್ನು ನೀಡುವವಳು ಎಂಬ ಅರ್ಥ ಬರುತ್ತದೆ) ಎಂದು ಹೊಗಳಲಾಗಿದೆ. ಹಾಗಾಗಿ, ವಾಸುದೇವನ ಒಳಗೆ ಅನಾದಿ ಕಾಲದಿಂದಲೂ ಮಹಾಲಕ್ಷ್ಮಿಯು ಅಂತರ್ಗತವಾಗಿರುವುದರಿಂದ ಅವನು ನಮಗೆಲ್ಲರಿಗೂ ಶುಭಪ್ರದನಾಗಿದ್ದಾನೆ. ಆದುದರಿಂದ ಲಕ್ಷ್ಮಿಯನ್ನು ಇಲ್ಲಿ ಕೇವಲ ಒಂದು ಹೆಣ್ಣು ದೇವತೆಯೆಂದು ಪರಿಗಣಿಸದೇ  ಬದಲಿಗೆ ಭಗವಾನ್ ವಿಷ್ಣುವಿನ "ಕ್ರಿಯಾತ್ಮಕ ಶಕ್ತಿ" ಎಂದು ಪರಿಗಣಿಸಲಾಗುತ್ತದೆ. 

ನಾವುಗಳು ಶಂಕುಸ್ಥಾಪನೆಯನ್ನು ಮಾಡುವ ಸಂದರ್ಭದಲ್ಲಿ  "ಆಧಾರ ಇಷ್ಟಿಕೆ" ಮತ್ತು ಕಲ್ಲನ್ನು ಇರಿಸುವಾಗ ವೇದ ಮಂತ್ರಗಳಾದ ಪುರುಷ ಸೂಕ್ತ, ಶ್ರೀ ಸೂಕ್ತ, ಭೂ ಸೂಕ್ತ, ಭಾಗ್ಯ ಸೂಕ್ತ, ನೀಳಾ ಸೂಕ್ತವನ್ನು ಉಚ್ಚರಿಸುತ್ತಾ  ಸರ್ವ ಶಕ್ತ ಭಗವಂತನ ಪುರುಷ ರೂಪವನ್ನು "ಪರಮ ಪುರುಷ" ನೆಂದೂ ಹಾಗೂ ಅವನ ಹೃದಯದ ಒಳಗೆ  ಸದಾ ವಾಸವಾಗಿರುವ ಹೆಣ್ಣು ದೇವತೆಯನ್ನು "ಪರಾ ಶಕ್ತಿ"  ಎಂದು  ಸ್ತುತಿಸುವ ಪರಿಪಾಠ ಇಟ್ಟುಕೊಂಡಿದ್ದೇವೆ.  ಹಾಗೆ ನಾವು ಪ್ರಾರ್ಥಿಸುವಾಗ "ಎಲೈ ದೇವನೇ, ಎಲೈ ವಿಶ್ವ ಮಾತೆಯೇ, ನಾವು ನಿಮ್ಮನ್ನು ಒಂದು ಅಧಮ್ಯ ಚೇತನದ ರೂಪದಲ್ಲಿ ನಿನ್ನ ಸಹೋದರಿಯಾದ ಭೂದೇವಿಯ ಗರ್ಭದಲ್ಲಿ ಇರಿಸಲಾಗಿರುವ  ಈ ಹೊಸ್ತಿಲಿನಲ್ಲಿ ಬಂದು ಶಾಶ್ವತವಾಗಿ  ನೆಲೆಸಿ ಈ ಮನೆ, ಮಂದಿರ, ಗ್ರಾಮ ಅಥವಾ ಊರಿಗೆ ಸದಾಕಾಲವೂ ಸುಖ ಶಾಂತಿಯನ್ನು ದಯಪಾಲಿಸು. ಎಲೈ ದೇವಿಯೇ, ನಮ್ಮ ತಂದೆಯಾದ ನಾರಾಯಣನ ಹೃದಯ ಕಮಲದಲ್ಲಿ ವಾಸವಾಗಿರುವವಳೇ, ಈ ಗ್ರಾಮದಲ್ಲಿ ವಾಸಿಸುವ ಸರ್ವರಿಗೂ ಸದಾ ತಡೆಯಿಲ್ಲದ ಸಂತೋಷ, ಶಾಶ್ವತವಾದ ಸಮೃದ್ಧಿ, ದೇವರು ಮತ್ತು ಗುರುವಿನಲ್ಲಿ ಅಪಾರವಾದ ನಂಬಿಕೆ ಹಾಗೂ ಮನಶ್ಯಾಂತಿಯನ್ನು  ಎಂದೆಂದಿಗೂ ಕರುಣಿಸು. ನೀನು ನಮಗೆ ನೀಡುತ್ತಿರುವ ರಕ್ಷಣೆಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ನಾವುಗಳು ಈ ಹೊಸ್ತಿಲಿನಲ್ಲಿ ನೆಲೆಸಿರುವ ನಿನ್ನನ್ನು ಪ್ರತಿನಿತ್ಯವೂ ಅರಿಶಿನ ಹಾಗೂ ಕುಂಕುಮಗಳಿಂದ ಪೂಜಿಸುತ್ತೇವೆ. ಎಲೈ ತಾಯಿಯೇ, ಕ್ಷೀರಸಾಗರ ಸಂಜಾತೆಯೇ, ನಮ್ಮ ಮನದ ಯಾವ ಮೂಲೆಯಲ್ಲಿಯೂ ಯಾವುದೇ ರೀತಿಯ ಋಣಾತ್ಮಕ ಹಾಗೂ ಕೆಟ್ಟ ಆಲೋಚನೆಗಳೂ ಸುಳಿಯದಂತೆ ನೋಡಿಕೋ. ಅಲ್ಲದೇ  ಯಾವ ರೀತಿಯಲ್ಲಿ ನೀನು ನಮ್ಮ ಮನೆಯ  ಬಾಗಿಲಿನಲ್ಲಿರುವ ಹೊಸ್ತಿಲಿನಲ್ಲಿ ದೃಢವಾಗಿ ನಿಂತು ನಿನ್ನ ಮಕ್ಕಳಿಗೆ ಬರುವ ಎಲ್ಲಾ ತೊಂದರೆಗಳನ್ನೂ ನಿವಾರಿಸುತ್ತಿದ್ದೀಯೋ ಅದೇ ರೀತಿ ಆ ಪರಮ ಪುರುಷನ ಪಾದ ಪದ್ಮಗಳಲ್ಲಿ ಸ್ಥಿರವಾಗಿ ಭಕ್ತಿ ನೆಲೆಸುವಂತೆ ಮಾಡು" (ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿ ಹಾಗೂ ಡಾ.ಪಿ.ವಿ.ಶಿವಚರಣ್. ಭಾವಚಿತ್ರ ಕೃಪೆ: ಶ್ರೀ.ನಾಗರಾಜ ಅನ್ವೇಕರ್, ಬೆಂಗಳೂರು).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, July 19, 2014

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ನೀಲಾದ್ರಿ ನಗರ, ಹುಲಿಮಂಗಲ ಅಂಚೆ, ಬೆಂಗಳೂರು ಗ್ರಾಮಾಂತರ-560 105, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲೆಕ್ಟ್ರಾನಿಕ್ ಸಿಟಿ ಬಳಿಯಿರುವ ಹುಲಿಮಂಗಲ ಅಂಚೆ ವ್ಯಾಪ್ತಿಯಲ್ಲಿ ಬರುವ ನೀಲಾದ್ರಿ ನಗರದಲ್ಲಿದೆ.  

ಈ ಮಂದಿರದ ಉದ್ಘಾಟನೆಯನ್ನು ಮಹಾಶಿವರಾತ್ರಿಯ ಶುಭ ದಿನವಾದ 27ನೇ  ಫೆಬ್ರವರಿ 2014 ರಂದು ಶ್ರೀ.ಆನಂದ ಗುರೂಜಿಯವರು ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. 

ಶ್ರೀ.ಮಧುರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ದಿನನಿತ್ಯದ ಆಗು-ಹೋಗುಗಳನ್ನು ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದೆ. 

ಮಂದಿರದಲ್ಲಿ ಸುಮಾರು 4 ಅಡಿ ಎತ್ತರದ ಸುಂದರ ಅಮೃತಶಿಲೆಯ  ಶ್ರೀ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಬಾಬಾರವರ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿಯ ವಿಗ್ರಹವನ್ನೂ  ಸಹ ಪ್ರತಿಷ್ಟಾಪಿಸಲಾಗಿದೆ. 

ಮಂದಿರದ ಆವರಣದಲ್ಲಿ ಪವಿತ್ರ ಧುನಿ, ಕಪ್ಪು ಶಿಲೆಯ ಗಣಪತಿ ಹಾಗೂ ಸುಬ್ರಮಣ್ಯ ದೇವರುಗಳ ವಿಗ್ರಹಗಳನ್ನೂ ಸಹ ಪ್ರತಿಷ್ಟಾಪಿಸಲಾಗಿದೆ. 









ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ:

ಬೆಳಿಗ್ಗೆ 5:30 ರಿಂದ ಮಧ್ಯಾನ್ಹ  12:30 ರವರೆಗೆ 
ಸಂಜೆ 6:00 ರಿಂದ ರಾತ್ರಿ 9:00 ರವರೆಗೆ 

ಆರತಿಯ ಸಮಯ:

ಕಾಕಡಾ ಆರತಿ   - ಬೆಳಿಗ್ಗೆ 5:30 ಕ್ಕೆ 
ಮಧ್ಯಾನ್ಹ ಆರತಿ  - ಮಧ್ಯಾನ್ಹ 12:00 ಕ್ಕೆ 
ಧೂಪಾರತಿ        - ಸಂಜೆ 6:00 ಕ್ಕೆ 
ಶೇಜಾರತಿ         - ರಾತ್ರಿ 8:30 ಕ್ಕೆ 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರುಪೂರ್ಣಿಮೆ 
3.ವಿಜಯದಶಮಿ 
4.ದತ್ತ ಜಯಂತಿ 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ನೀಲಾದ್ರಿ ನಗರ, ಹುಲಿಮಂಗಲ ಅಂಚೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ 

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ  
ನೀಲಾದ್ರಿ ನಗರ, ಹುಲಿಮಂಗಲ ಅಂಚೆ, 
ಬೆಂಗಳೂರು ಗ್ರಾಮಾಂತರ ಜಿಲ್ಲೆ-560 105,
ಕರ್ನಾಟಕ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ಮಧು - ಅಧ್ಯಕ್ಷರು 

ದೂರವಾಣಿ ಸಂಖ್ಯೆಗಳು:
+91 96113 33395/+91 99029 23122

ಮಾರ್ಗಸೂಚಿ: 
ಮಂದಿರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಲಿಮಂಗಲ ಅಂಚೆ ವ್ಯಾಪ್ತಿಯಲ್ಲಿ ಬರುವ ನೀಲಾದ್ರಿ ನಗರದಲ್ಲಿದೆ. 

ಕೃಪೆ: ಶ್ರೀ.ನಾಗರಾಜ ಅನ್ವೇಕರ್, ಬೆಂಗಳೂರು
ಕನ್ನಡ ಅನುವಾದ: ಶ್ರೀಕಂಠ ಶರ್ಮ 

Thursday, July 17, 2014

ಕರ್ನಾಟಕದ ಶಿರಡಿ ಸಾಯಿಬಾಬಾ ಮಂದಿರ-ಓಂ ಸಾಯಿ ಸಮಾಜ, ಕಾರ್ಪೊರೇಷನ್ ಕ್ವಾರ್ಟರ್ಸ್ ನ ಹತ್ತಿರ, ತಿಲಕವಾಡಿ, ಬೆಳಗಾಂ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ


ಈ ಪ್ರಸಿದ್ಧ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಬೆಳಗಾಂ ಪಟ್ಟಣದ ತಿಲಕವಾಡಿಯ ಕಾರ್ಪೊರೇಷನ್  ಕ್ವಾರ್ಟರ್ಸ್ ನ ಹತ್ತಿರ ಇದೆ.

ಈ ಪುರಾತನ ಸಾಯಿಬಾಬಾ ಮಂದಿರವನ್ನು 5ನೇ ಡಿಸೆಂಬರ್ 1953 ರಂದು ಆಂಧ್ರಪ್ರದೇಶದ ಅಂಧ ಸ್ವಾಮೀಜಿಯೊಬ್ಬರು ತಮಿಳುನಾಡಿನ ಪ್ರೊದತ್ತೂರ್ ನ ಬಾಬಾ  ಶ್ರೀ ಸಾಯಿಗಾರು ಚರಣಾನಂದ ಸರಸ್ವತಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಉದ್ಘಾಟಿಸಿದರು. 

ಕೆಲ ವರ್ಷಗಳ ನಂತರ ಹಳೆಯ ಮಂದಿರವನ್ನು ಜೀರ್ಣೋದ್ಧಾರ ಮಾಡಿ ಅದೇ ಸ್ಥಳದಲ್ಲಿ ಹೊಸ ಮಂದಿರವನ್ನು ನಿರ್ಮಾಣ ಮಾಡಲಾಯಿತು. ಈ ಹೊಸ ಮಂದಿರವನ್ನು 5ನೇ ಮೇ 1975 ರಂದು ದೇವಾಲಯದ ಸಂಸ್ಥಾಪಕರಾದ ಶ್ರೀ.ವಕೀಲ್ ಜವಳಿಯವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು.  

ಪ್ರಸ್ತುತ ಮಂದಿರದ ಆಡಳಿತವನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯು ವಹಿಸಿಕೊಂಡಿದ್ದು ಮಂದಿರದ ನಿರ್ವಾಹಕರು ಮಂದಿರದ ದಿನನಿತ್ಯದ ಆಗು ಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ 4 ಅಡಿ ಎತ್ತರದ ಸುಂದರವಾದ ಅಮೃತಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ, ಶ್ರೀ ಸಾಯಿಬಾಬಾರವರ ವಿಗ್ರಹದ ಮುಂದೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಸಹ ಪ್ರತಿಷ್ಟಾಪಿಸಲಾಗಿದೆ. 

ಪವಿತ್ರ ಧುನಿ, ಗುರುಸ್ಥಾನ, ದತ್ತ ಮಂದಿರ (ಒಂದು ಅಡಿ ಎತ್ತರದ ಸುಂದರ ಅಮೃತ ಶಿಲೆಯ ದತ್ತಾತ್ರೇಯ), ನಂದಾದೀಪ, ಶ್ರೀ ಸಾಯಿಬಾಬಾರವರ ಪ್ರೀತಿಯ ಅಶ್ವವಾದ ಶ್ಯಾಮಕರ್ಣನ ಪ್ರತಿರೂಪ, ಕಪ್ಪು ಶಿಲೆಯ ನಾಗದೇವತೆಗಳ ವಿಗ್ರಹಗಳು, ದಕ್ಷಿಣಮುಖಿ ಹನುಮಾನ್ ಮಂದಿರ ಹಾಗೂ ಗೋಶಾಲೆಗಳನ್ನು ಸಹ ಮಂದಿರದ ಆವರಣದಲ್ಲಿ ಪ್ರತಿಷ್ಟಾಪಿಸಲಾಗಿದೆ. 



 




ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ:

6:00 AM to 1:00 PM
4:00 PM to 8:30 PM

ಗುರುವಾರದಂದು ಮಂದಿರವನ್ನು ದಿನವಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.


ಆರತಿಯ ಸಮಯ:

ಕಾಕಡಾ ಆರತಿ    - 6:00 
ಮಧ್ಯಾನ್ಹ ಆರತಿ  - 12:00 
ಧೂಪಾರತಿ        - 7:00 
ಶೇಜಾರತಿ         - 8:00 

ಗುರುವಾರದಂದು ಮಂದಿರವನ್ನು ದಿನವಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ ಹಾಗೂ ರಾತ್ರಿಯ ಶೇಜಾರತಿಯನ್ನು 10:00 ಗಂಟೆಗೆ ಮಾಡಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಮಂದಿರದಲ್ಲಿ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು:

1.ಶ್ರೀರಾಮನವಮಿ 
2.ಗುರುಪೂರ್ಣಿಮೆ 
3.ವಿಜಯದಶಮಿ 
4.ದತ್ತ ಜಯಂತಿ 
5.ಹನುಮಾನ್ ಜಯಂತಿ 

ಮಂದಿರದ ಸಾಮಾಜಿಕ ಕಾರ್ಯಚಟುವಟಿಕೆಗಳು:

ಹನುಮಾನ್ ಮಂದಿರದಲ್ಲಿ ಹಾಗೂ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಪ್ರತಿನಿತ್ಯ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 

ಸ್ಥಳ: 
 ಕಾರ್ಪೊರೇಷನ್  ಕ್ವಾರ್ಟರ್ಸ್ ನ ಹತ್ತಿರ, ಮೊದಲನೇ ರೈಲ್ವೇ ಗೇಟ್, ತಿಲಕವಾಡಿ, ಬೆಳಗಾಂ. 

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ 
ಓಂ ಸಾಯಿ ಸಮಾಜ, 
ಮೊದಲನೇ ರೈಲ್ವೇ ಗೇಟ್, 
ಕಾರ್ಪೋರೇಷನ್ ಕ್ವಾರ್ಟರ್ಸ್ ನ ಹತ್ತಿರ, 
ತಿಲಕವಾಡಿ, 
ಬೆಳಗಾಂ-590 006,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ರವಿ - ನಿರ್ವಾಹಕರು 

ದೂರವಾಣಿ ಸಂಖ್ಯೆಗಳು: 
+91 831 2464920/+91 94481 58115

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Wednesday, July 16, 2014

ಶ್ರೀ ಶಿರಡಿ ಸಾಯಿಬಾಬಾರವರು ತಮ್ಮ ಬಳಿ ಸದಾ ಇರಿಸಿಕೊಂಡಿರುತ್ತಿದ್ದ ಇಟ್ಟಿಗೆಯ ಮಹತ್ವ- ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರು ಶಿರಡಿಗೆ ಬಂದು ದ್ವಾರಕಾಮಾಯಿಯಲ್ಲಿ ಶಾಶ್ವತವಾಗಿ ನೆಲೆಸಿದ ನಂತರದಿಂದ ಅವರ ಬಳಿ ಸದಾ ಒಂದು ಇಟ್ಟಿಗೆಯನ್ನು ಇರಿಸಿಕೊಳ್ಳುತ್ತಿದ್ದರು. ಅದು ಅವರ ಜೀವನದ ಸಂಗಾತಿಯಾಗಿತ್ತು. ಆ ಇಟ್ಟಿಗೆಯ ಸುತ್ತಳತೆಯು   3-1/2x9 ಇಂಚುಗಳಾಗಿತ್ತು. ಬಾಬಾರವರು ಆ ಇಟ್ಟಿಗೆಯನ್ನು ಬಹಳ ಪ್ರೀತಿಸುತ್ತಿದ್ದರು ಹಾಗೂ ಆ ಇಟ್ಟಿಗೆಯನ್ನು "ನನ್ನ ಜೀವನದ ಸಂಗಾತಿ" ಎಂದು ಯಾವಾಗಲೂ ಹೇಳುತ್ತಿದ್ದರು. ಅವರು ದ್ವಾರಕಾಮಾಯಿಯಲ್ಲಿ ಒಬ್ಬರೇ ಏಕಾಂತದಲ್ಲಿ ಕುಳಿತುಕೊಂಡಿದ್ದಾಗ ಆ ಇಟ್ಟಿಗೆಯ ಮೇಲೆ ತಮ್ಮ ಕೈಯನ್ನು ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದರು. ಅವರು ಮಲಗಿಕೊಳ್ಳುವಾಗ ಆ ಇಟ್ಟಿಗೆಯನ್ನು ತಲೆದಿಂಬಿನಂತೆ ಇರಿಸಿಕೊಳ್ಳುತ್ತಿದ್ದರು. ಮಹಾಳಸಾಪತಿ ಮತ್ತು ಕಾಶೀರಾಂ ಶಿಂಪಿಯವರು ಆ ಇಟ್ಟಿಗೆಗೆ ಪ್ರತಿನಿತ್ಯ ಮಂಗಳ ಸ್ನಾನವನ್ನು ಮಾಡಿಸಿ ಅದನ್ನು ಒಣಗಿಸುವ ಸಲುವಾಗಿ  ಧುನಿಯ ಪಕ್ಕದಲ್ಲಿದ್ದ ಕಂಬಕ್ಕೆ ಒರಗಿಸಿ ನಿಲ್ಲಿಸುತ್ತಿದ್ದರು. ರಾತ್ರಿಯ ವೇಳೆಯಲ್ಲಿ ಆ ಇಟ್ಟಿಗೆಯನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಸುತ್ತಿ  ಬಾಬಾರವರಿಗೆ ತಲೆದಿಂಬಿನಂತೆ ಇಟ್ಟುಕೊಳ್ಳಲು ನೀಡುತ್ತಿದ್ದರು. 

ಹೀಗಿರುವಾಗ ಒಂದು ದಿನ ದ್ವಾರಕಾಮಾಯಿಯನ್ನು ಪ್ರತಿನಿತ್ಯ ಗುಡಿಸಿ, ಸಾರಿಸಲು ಬರುತ್ತಿದ್ದ ಮಧು ಫಾಸ್ಲೆ ಎಂಬ ಹುಡುಗ ಅಕಸ್ಮಾತ್ತಾಗಿ ಆ ಇಟ್ಟಿಗೆಯನ್ನು ಕೆಳಗೆ ಎತ್ತಿಹಾಕಲು ಆ ಇಟ್ಟಿಗೆಯು ಒಡೆದು ಎರಡು ಹೋಳಾಯಿತು. ಮುಂದೆ ಆಗಬಹುದಾದ ಪರಿಣಾಮವನ್ನು ನೆನೆದು ಹೆದರಿದ ಅವನು ಮುರಿದ ಆ ಎರಡು ತುಂಡುಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದರಂತೆ ಹಾಗೆಯೇ ಸೇರಿಸಿ  ಅದನ್ನು ಧುನಿಯ ಪಕ್ಕದಲ್ಲಿ ಇರಿಸಿ ಮಸೀದಿಯಿಂದ ಹೊರಟು ಹೋದನು. ಬಾಬಾ ಮಸೀದಿಗೆ ವಾಪಸ್ ಬಂದವರೇ ಆ ಇಟ್ಟಿಗೆಯ ಬಗ್ಗೆ ಮಹಾಳಸಾಪತಿಯ ಹತ್ತಿರ ವಿಚಾರಿಸಿದರು.  ಮಹಾಳಸಾಪತಿಯವರು ಆ ಇಟ್ಟಿಗೆಯನ್ನು ಮೇಲೆಕ್ಕೆತ್ತಲು ಹೋದಾಗ ಆ ಇಟ್ಟಿಗೆಯ ಒಂದು ಭಾಗ ನೆಲದ ಮೇಲೆ ಬಿದ್ದಿತು. ಅದನ್ನು ನೋಡಿ ಬಾಬಾರವರು ಸಾಮಾನ್ಯ ಮಾನವರಂತೆ ಅಳತೊಡಗಿದರು. ಅವರು "ಇದು ಕೇವಲ ಇಟ್ಟಿಗೆಯಾಗಿರಲಿಲ್ಲ, ಬದಲಿಗೆ, ನನ್ನ ಭಾಗ್ಯವೇ ಒಡೆದು ಹೋದಂತೆ ಆಗಿದೆ. ಇದು ನನ್ನ ಜೀವನದ ಸಂಗಾತಿಯಾಗಿತ್ತು. ಈಗ ಈ ಇಟ್ಟಿಗೆಯು ಒಡೆದುಹೋಯಿತು. ನಾನು ಕೂಡ ಇನ್ನು ಹೆಚ್ಚು ದಿನಗಳ ಕಾಲ ಬದುಕಿರಲಾರೆ" ಎಂದು ಭಾವುಕರಾಗಿ ನುಡಿದರು. ಆಗ ಮಹಾಳಸಾಪತಿಯವರು ಬಾಬಾರವರನ್ನು ಸಮಾಧಾನ ಮಾಡುತ್ತಾ "ಬಾಬಾ, ಯೋಚನೆ ಮಾಡಬೇಡಿ. ನಾನು ಈ ಇಟ್ಟಿಗೆಯ ಎರಡೂ ತುಂಡುಗಳನ್ನು ಚಿನ್ನದ ತಿಂತಿಯಿಂದ ಜೋಡಿಸಿಕೊಡುತ್ತೇನೆ" ಎಂದರು. ಅದಕ್ಕೆ ಬಾಬಾರವರು "ಎಲೈ ಭಗತ್, ಈ ಇಟ್ಟಿಗೆಯು ಚಿನ್ನದ ಇಟ್ಟಿಗೆಗಿಂತಲೂ ಬೆಲೆಬಾಳುತ್ತದೆ. ನನ್ನ ಸಂಗಾತಿಯೇ ಒಡೆದುಹೋಗಿದೆ. ನಾನು ಬದುಕಿರಲು ಸಾಧ್ಯವೇ ಇಲ್ಲ" ಎಂದು ನುಡಿದರು. ಈ ಘಟನೆಯಾದ ನಂತರದಿಂದ ಬಾಬಾರವರ ದೇಹಸ್ಥಿತಿ ಬಿಗಡಾಯಿಸಲು ಪ್ರಾರಂಭಿಸಿ ಸರಿಯಾಗಿ 5ನೇ ದಿನ ಬಾಬಾರವರು ಮಹಾಸಮಾಧಿ ಹೊಂದಿದರು. ಈ ಘಟನೆಯನ್ನು ಶ್ರೀ ಸಾಯಿ ಸಚ್ಚರಿತ್ರೆಯ 44ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿದೆ. ಪಂಢರಪುರದ ಪಾಂಡುರಂಗ ಇಟ್ಟಿಗೆಯ ಮೇಲೆ ನಿಂತುಕೊಂಡಿದ್ದರೆ  ಶಿರಡಿ ಸಾಯಿಬಾಬಾರವರು ಅದೇ ಇಟ್ಟಿಗೆಯನ್ನು ತಲೆದಿಂಬಿನಂತೆ ಉಪಯೋಗಿಸುತ್ತಿದ್ದರು. 

ಬಹುಶಃ ಈ ಇಟ್ಟಿಗೆಯ ಮಹತ್ವ ಹೀಗಿರಬಹುದು: ಇಟ್ಟಿಗೆಯನ್ನು ಮಣ್ಣು ಹಾಗೂ ಮರಳಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಒಂದು ರೂಪವನ್ನು ನೀಡಿ ಅದನ್ನು ಚೆನ್ನಾಗಿ ಸುಟ್ಟು ಒಣಗಿಸಲಾಗುತ್ತದೆ. ಇಟ್ಟಿಗೆಯು ಮನುಷ್ಯನ ದೇಹವನ್ನು ಪ್ರತಿನಿಧಿಸುತ್ತದೆ. ಅದು ಒಡೆಯುವುದು ಮರಣವನ್ನು ಸೂಚಿಸುತ್ತದೆ. ಇಟ್ಟಿಗೆಯನ್ನು ಗೂಡಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಅದನ್ನು ಹದ ಮಾಡಿ ಗಟ್ಟಿಯಾಗುವಂತೆ ಮಾಡಲಾಗುತ್ತದೆ.  ಇಷ್ಟಾದರೂ ಕೂಡ ಆ ಇಟ್ಟಿಗೆಯು ಒಡೆಯುತ್ತದೆ. ಇಟ್ಟಿಗೆಯನ್ನು ಸುಡುವುದು ಮನುಷ್ಯನ ಅಂತರಂಗದ ಆರು ಶತ್ರುಗಳನ್ನು ಸುಡುವುದರ ಸಂಕೇತವಾಗಿರುತ್ತದೆ. ಪಂಢರಾಪುರದ ವಿಠಲನು ಇಟ್ಟಿಗೆಯನ್ನು ಮೆಟ್ಟಿ ನಿಲ್ಲುವ ಮೂಲಕ ನಮ್ಮಲ್ಲಿರುವ ಅರಿಷಡ್ವರ್ಗಗಳನ್ನು ಮೆಟ್ಟಿ ನಿಂತಿದ್ದಾನೆ.  ಅಂತೆಯೇ ಬಾಬಾರವರು ಇಟ್ಟಿಗೆಯನ್ನು ತಮ್ಮ ತಲೆಯ ಕೆಳಗೆ ಇರಿಸಿಕೊಳ್ಳುವ ಮೂಲಕ ಅರಿಷಡ್ವರ್ಗಗಳನ್ನು ಧನಾತ್ಮಕ ಶಕ್ತಿಯನ್ನಾಗಿ ಪರಿವರ್ತಿಸಿ  ತಮ್ಮ ಭಕ್ತರನ್ನು ಲೌಕಿಕ ಆಸೆ ಆಕಾಂಕ್ಷೆಗಳಿಂದ ಮುಕ್ತಗೊಳಿಸಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಉದಾಹರಣೆ ನೀಡಬೇಕೆಂದರೆ ಅರಿಷಡ್ವರ್ಗಗಳಲ್ಲಿ ಒಂದಾದ ಪ್ರೀತಿ ಹಾಗೂ ಹಾತೊರೆಯುವ ಭಾವನೆಯನ್ನು ನಾವು ಬಾಬಾರವರ ಕಡೆ ತಿರುಗಿಸಬಹುದಾಗಿದೆ.  ಹೇಗೆ ಗೋಪಿಯರು ತಮ್ಮ ಪ್ರೀತಿಯನ್ನು ಭಗವಾನ್ ಶ್ರೀಕೃಷ್ಣನ ಕಡೆಗೆ ತಿರುಗಿಸುತ್ತಾರೋ ಹಾಗೆಯೇ ನಾನುಗಳು ಸಹ ನಮ್ಮ ಪ್ರೀತಿಯನ್ನು ಶ್ರೀ ಸಾಯಿಬಾಬಾರವರ ಕಡೆಗೆ ತಿರುಗಿಸಬಹುದಾಗಿದೆ. 

1918ನೇ ಇಸವಿಯಲ್ಲಿ ಬಾಬಾರವರ ಮಹಾಸಮಾಧಿಯಾದಾಗ, ಅವರ ಕೊನೆಯ ಇಚ್ಛೆಯಂತೆ ಅವರ ದೇಹವನ್ನು ಬೂಟಿವಾಡಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಅಲ್ಲಿ ಸಮಾಧಿ ಮಾಡಲಾಯಿತು. ಹಾಗೆ ಸಮಾಧಿ ಮಾಡುವ ಸಮಯದಲ್ಲಿ ಮಧು ಫಾಸ್ಲೆ ಆ ಒಡೆದ ಇಟ್ಟಿಗೆಯ ತುಂಡುಗಳನ್ನು ದಿಂಬಿನಂತೆ ಬಾಬಾರವರ ತಲೆಯ ಕೆಳಗೆ ಇರಿಸಿದನು. ಮಧು ಫಾಸ್ಲೆ, ಶ್ಯಾಮ ಹಾಗೂ ತಾತ್ಯಾ ಕೋತೆ  ಪಾಟೀಲ್ ರವರುಗಳು ಈ ವಿಷಯವನ್ನು ಡಾ.ಗಾವಂಕರ್ ರವರಿಗೆ ತಿಳಿಸಿರುತ್ತಾರೆ. ಈ ರೀತಿಯಲ್ಲಿ ಈ ಪುಣ್ಯವಂತ ಇಟ್ಟಿಗೆಯು ಬಾಬಾರವರ ಸಮಾಧಿಯ ಜೊತೆಯಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡಿರುತ್ತದೆ. (ಆಧಾರ: ಸಾಯಿ ಭಕ್ತೆ ವಿನ್ನಿ ಚಿಟ್ಲೂರಿಯವರ ಬಾಬಾ'ಸ್ ಋಣಾನುಬಂಧ್ )


ಕನ್ನಡ ಅನುವಾದ: ಶ್ರೀಕಂಠ ಶರ್ಮ 

ಶ್ರೀ ಶಿರಡಿ ಸಾಯಿಬಾಬಾರವರು "ಶ್ರೀ ರಾಮ ವಿಜಯ" ಗ್ರಂಥ ಪಾರಾಯಣಕ್ಕೆ ಹೆಚ್ಚಿನ ಮಹತ್ವ ನೀಡಿದ ಉದ್ದೇಶ - ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರು ತಮ್ಮ ಭೌತಿಕ ದೇಹವನ್ನು 15ನೇ ಅಕ್ಟೋಬರ್ 1918 ರಂದು ತ್ಯಜಿಸಿದರು. ಆ ದಿನವು ದಕ್ಷಿಣಾಯನದ ಮೊದಲನೇ ದಿನ ಹಾಗೂ ಹುಣ್ಣಿಮೆಗೆ ಮುಂಚಿತವಾಗಿ ಬರುವ ಪವಿತ್ರ ವಿಜಯದಶಮಿಯ ದಿನವಾಗಿತ್ತು. ಅಲ್ಲದೆ ಮುಸ್ಲಿಮರ ಹಬ್ಬವಾದ ಮೊಹರಂ ಬರುವ ತಿಂಗಳ ಒಂಬತ್ತನೆಯ ದಿನ ಹಾಗೂ ಆ ರಾತ್ರಿಯು "ಪ್ರಾಣಿವಧೆ ಮಾಡುವ ರಾತ್ರಿ" ಯಾಗಿತ್ತು. ಆ ದಿನ ಮಧ್ಯಾನ್ಹ ಸುಮಾರು 2:35 ರ ವೇಳೆಯಲ್ಲಿ ಶ್ರೀ ಸಾಯಿಬಾಬಾರವರು ತಮ್ಮ ದೇಹತ್ಯಾಗ ಮಾಡಿದರು. ಆ ಸಮಯದಲ್ಲಿ ಆಗಷ್ಟೇ ದಶಮಿ ಮುಗಿದು ಏಕಾದಶಿಯ ಉದಯವಾಗಿತ್ತು. ಆದ ಕಾರಣ, ಶ್ರೀ ಸಾಯಿಬಾಬಾರವರು ಪವಿತ್ರ ಏಕಾದಶಿಯನ್ನೇ ತಮ್ಮ ನಿರ್ಯಾಣ ಯಾತ್ರೆಗೆ ಬಳಸಿಕೊಂಡಿದ್ದರು. ಆದರೆ ಆ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಸರಿಯಾಗಿ ದಶಮಿ ತಿಥಿ ಇದ್ದ ಕಾರಣ ಶ್ರೀ ಸಾಯಿಬಾಬಾರವರ ನಿರ್ಯಾಣದ ದಿನವನ್ನು ವಿಜಯದಶಮಿ ಎಂದು ಪರಿಗಣಿಸಿ ಅವರ ಮಹಾಸಮಾಧಿಯ ದಿನವನ್ನು ವಿಜಯದಶಮಿಯಂದೇ ಆಚರಿಸಿಕೊಂಡು ಬರಲಾಗುತ್ತಿದೆ. (ಆಧಾರ: ಶ್ರೀ ಸಾಯಿ ಸಚ್ಚರಿತ್ರೆ ಅಧ್ಯಾಯ 42).

ಶ್ರೀ ಸಾಯಿಬಾಬಾರವರು ತಮ್ಮ ಮಹಾಸಮಾಧಿಗೆ ಸರಿಯಾಗಿ 14 ದಿನಗಳಿಗೆ ಮುಂಚೆಯೇ ತಾವು ಮರಣ ಹೊಂದುವರೆಂದು ತಿಳಿದಿದ್ದರು. ಹಾಗಾಗಿ ಅವರು ವಜೆ ಎಂಬ ಭಕ್ತರಿಗೆ ತಮ್ಮ ಮುಂದೆ "ಶ್ರೀ ರಾಮ ವಿಜಯ"  ಗ್ರಂಥವನ್ನು ಓದಿ ಹೇಳಲು  ನೇಮಕ ಮಾಡಿದರು.  ಅಂತೆಯೇ ವಜೆಯವರು ದ್ವಾರಕಾಮಾಯಿ ಮಸೀದಿಯಲ್ಲಿ ಬಾಬಾರವರ ಎದುರುಗಡೆ ಕುಳಿತು ಶ್ರೀ ರಾಮ ವಿಜಯವನ್ನು ಮತ್ತೆ ಮತ್ತೆ ಓದಿ ಹೇಳಿದರು. ಶ್ರೀ ಸಾಯಿಬಾಬಾರವರು ಆ ಗ್ರಂಥ ಪಾರಾಯಣವನ್ನು ಅತ್ಯಂತ ಶ್ರದ್ಧೆಯಿಂದ ಆಲಿಸಿದರು. ಹೀಗೆಯೇ ಎಂಟು ದಿನಗಳು ಉರುಳಿದವು. ನಂತರ ಬಾಬಾರವರು ವಜೆಯವರಿಗೆ ಸ್ವಲ್ಪವೂ ನಿಲ್ಲಿಸದೇ ಸ್ಪಷ್ಟವಾಗಿ ಹಾಗೂ ಜೋರಾಗಿ  ಪಾರಾಯಣ ಮಾಡುವಂತೆ ಆಜ್ಞಾಪಿಸಿದರು.  ಆದ ಕಾರಣ ವಜೆಯವರು ಮುಂದಿನ 3 ದಿನಗಳು ಹಗಲು ರಾತ್ರಿ ಎಡಬಿಡದೆ ಪಾರಾಯಣ ಮಾಡಿದರು. ಈ ರೀತಿಯಲ್ಲಿ ವಜೆಯವರು ಒಟ್ಟು ಹನ್ನೊಂದು ದಿನಗಳ ಕಾಲ ಶ್ರೀ ರಾಮ ವಿಜಯವನ್ನು ಹಲವಾರು ಬಾರಿ ಪಾರಾಯಣ ಮಾಡಿದರು. ಅಷ್ಟು ಹೊತ್ತಿಗೆ ವಜೆಯವರು ಬಹಳವೇ ದಣಿದಿದ್ದರು. ಆಗ ಬಾಬಾರವರು ವಜೆಯವರಿಗೆ ಪಾರಾಯಣವನ್ನು ನಿಲ್ಲಿಸುವಂತೆ ಆಜ್ಞಾಪಿಸಿ ಅವರಿಗೆ  ಮನೆಗೆ ಹೋಗುವಂತೆ ತಿಳಿಸಿದರು. ನಂತರ ಸಾಯಿಬಾಬಾರವರು ಶಾಂತಿಯಿಂದ ಇದ್ದರು. ಸಾಧು ಸಂತರಿಗೆ ತಾವು ಮರಣ ಹೊಂದುವರೆಂದು ತಿಳಿದಾಗ ಸಾಮಾನ್ಯವಾಗಿ ಪವಿತ್ರ ಧಾರ್ಮಿಕ ಗ್ರಂಥಗಳನ್ನು ಬೇರೆಯವರಿಂದ ಓದಿಸಿ ಗಮನವಿಟ್ಟು ಕೇಳಿಸಿಕೊಳ್ಳುವುದು  ವಾಡಿಕೆಯಲ್ಲಿದೆ.  (ಆಧಾರ: ಶ್ರೀ ಸಾಯಿ ಸಚ್ಚರಿತೆ ಅಧ್ಯಾಯ 43).

ಅಂತೆಯೇ ಶ್ರೀ ಸಾಯಿಬಾಬಾರವರು ಕೂಡ ಶ್ರೀ ರಾಮ ವಿಜಯದ ಪಾರಾಯಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಆದರೆ  ಶ್ರೀ ಶಿರಡಿ  ಸಾಯಿಬಾಬಾರವರು "ಶ್ರೀ ರಾಮ ವಿಜಯ" ಗ್ರಂಥ ಪಾರಾಯಣಕ್ಕೆ ಏಕೆ ಹೆಚ್ಚಿನ ಮಹತ್ವ ನೀಡಿದರೆಂದು ಪರಿಶೀಲಿಸಿ ನೋಡಿದರೆ ಶ್ರೀ ರಾಮ ವಿಜಯವೆಂಬ  ಗ್ರಂಥದ ಒಳಗೆ ಅಡಕವಾಗಿರುವ ಮಹೋನ್ನತ ಆಧ್ಯಾತ್ಮಿಕ ತತ್ವದ ಅರಿವಾಗುತ್ತದೆ. ಈ ಪವಿತ್ರ ಗ್ರಂಥದ ಆಧ್ಯಾತ್ಮಿಕ  ಸಾರಾಂಶ ಈ ಕೆಳಕಂಡಂತೆ ಇದೆ: 

"ಶ್ರೀ ರಾಮ ವಿಜಯ" ಗ್ರಂಥವು ಭಾರತೀಯ ಸಾಹಿತ್ಯ ಲೋಕದಲ್ಲಿನ ಅತ್ಯಂತ ಅಪರೂಪವಾದ ಮೇರುಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹರ್ಷಿ ವಾಲ್ಮೀಕಿಯು ಸಂಸ್ಕೃತ ಭಾಷೆಯಲ್ಲಿ ಮೇರುಕೃತಿಯಾದ "ಶ್ರೀಮದ್ ರಾಮಾಯಣ" ವನ್ನು ರಚನೆ ಮಾಡಿದ ಮೇಲೆ ಹಲವಾರು ವಿದ್ವಾಂಸರು ಬೇರೆ ಬೇರೆ  ಭಾಷೆಗಳಲ್ಲಿ ರಾಮಾಯಣವನ್ನು ತಮ್ಮದೇ ಆದ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ.  ಮಹರ್ಷಿ ವಾಲ್ಮೀಕಿಯವರ ಮೂಲ ಶ್ರೀಮದ್ ರಾಮಾಯಣ ಗ್ರಂಥಕ್ಕೆ ಹೋಲಿಸಿ ನೋಡಿದಾಗ ಪ್ರಪಂಚದಾದ್ಯಂತ ಪ್ರಚಲಿತದಲ್ಲಿರುವ ಇತರ ಆವೃತ್ತಿಗಳಲ್ಲಿ ಹಲವಾರು ವ್ಯತ್ಯಾಸ ಕಂಡುಬಂದರೂ ಸಹ ಎಲ್ಲಾ ಗ್ರಂಥಗಳ ಸಾರ ಒಂದೇ ಆಗಿರುತ್ತದೆ. ಅದೇನೆಂದರೆ, ಭಗವಾನ್ ಮಹಾವಿಷ್ಣುವು ಶ್ರೀರಾಮನ ಅವತಾರವನ್ನೆತ್ತಿ ರಾಕ್ಷಸ ರಾಜನಾದ ರಾವಣ ಹಾಗೂ ಅವನ ಸಹಚರರನ್ನು ವಧಿಸಿ ಶಾಂತಿ ಹಾಗೂ ಸದಾಚಾರದಿಂದ ಕೂಡಿರುವ "ರಾಮ ರಾಜ್ಯ" ದ ಸ್ಥಾಪನೆ ಮಾಡುವುದೇ ಆಗಿರುತ್ತದೆ. ಆದ ಕಾರಣ ನಾವುಗಳು ಶ್ರೀಮದ್ ರಾಮಾಯಣದ ಸತ್ಯಾಸತ್ಯತೆಯ ಗೋಜಿಗೆಗಾದೆ ಹೋಗದೆ  ಬದಲಿಗೆ ಭಗವಾನ್ ಶ್ರೀರಾಮನ ಜೀವನದ ಮೌಲ್ಯ ಹಾಗೂ ಸಾರವನ್ನು ಅರ್ಥ ಮಾಡಿಕೊಳ್ಳುವುದು ಬುದ್ಧಿವಂತಿಕೆ ಎನಿಸಿಕೊಳ್ಳುತ್ತದೆ. ಇನ್ನೂ ಹೇಳಬೇಕೆಂದರೆ, ನಮಗೆ ಲಭ್ಯವಿರುವ  ಶ್ರೀಮದ್ ರಾಮಾಯಣದ ಎಲ್ಲಾ  ಆವೃತ್ತಿಗಳನ್ನು ಅವಲೋಕನೆ ಮಾಡಿದಾಗ  ಮಹರ್ಷಿ ವಾಲ್ಮೀಕಿಯವರ ಮೂಲ ಶ್ರೀಮದ್ ರಾಮಾಯಣಕ್ಕಿಂತ ಸ್ವಲ್ಪ ಭಿನ್ನವಾಗಿ ಬೇರೆ ಬೇರೆ ಆವೃತ್ತಿಗಳಲ್ಲಿ ಬರೆದಿದ್ದರೂ ಸಹ ಆ ಗ್ರಂಥಗಳ ಲೇಖಕರು ರಾಮಾಯಣದ ಮುಖ್ಯ ಪಾತ್ರಧಾರಿಯಾದ ಭಗವಾನ್ ಶ್ರೀರಾಮನ ಗುಣಗಾನವನ್ನು ಮಾಡುವ ಮೂಲಕ ರಾಮಾಯಣದ ಪೂಜ್ಯತೆಯನ್ನು ಕಾಪಾಡಿದ್ದಾರೆ. ಆದುದರಿಂದ, ರಾಮಾಯಣದ ಎಲ್ಲಾ ಆವೃತ್ತಿಗಳ ಸಾರವು "ಬ್ರಹ್ಮಜ್ಞಾನ" ಅಥವಾ "ಬ್ರಹ್ಮ ವಿದ್ಯೆ" ಯನ್ನು ಹೊಂದುವ ಬಗ್ಗೆಯೇ ಆಗಿರುತ್ತದೆ ಹೊರತೂ ಬೇರೆಯಾಗಿರುವುದಿಲ್ಲ.  ಹಾಗಾಗಿ, ಶ್ರೀ ರಾಮ ವಿಜಯವು ಭಗವಾನ್ ಶ್ರೀ ರಾಮನ ಜೀವನವನ್ನು  ಕುರಿತು ರಚಿಸಲಾದ ಒಂದು ಮಹೋನ್ನತ ಗ್ರಂಥವಾಗಿರುತ್ತದೆ. 

ಶ್ರೀ ರಾಮ ವಿಜಯದ  ಕೆಲವು ಪ್ರಮುಖ ವಿಷಯಗಳು ಈ ಕೆಳಕಂಡಂತೆ ಇವೆ: 


  • ರಾವಣ, ಕುಂಭಕರ್ಣ ಮತ್ತು ವಿಭೀಷಣರ ಜನನ. ಅವರುಗಳು ಬ್ರಹ್ಮದೇವರಿಗೆ  ಪ್ರಾರ್ಥನೆ ಮಾಡಿದುದು ಹಾಗೂ ಬ್ರಹ್ಮದೇವರು ಅವರಿಗೆ ವರವನ್ನು ನೀಡಿದುದು 
  • ಭಗವಾನ್ ವಿಷ್ಣುವು ದೇವತೆಗಳಿಗೆ ಅಭಯವನ್ನಿತ್ತು ಮುಂದೆ ತಾನು ದಶರಥ ಮತ್ತು ಕೌಸಲ್ಯ ರ  ಮಗ ಶ್ರೀರಾಮನಾಗಿ ಅವತಾರವೆತ್ತುವುದಾಗಿ ಘೋಷಣೆ ಮಾಡಿದುದು
  • ಶ್ರವಣ ಕುಮಾರನ ಕಥೆ 
  • ದೇವಿ ಮಹಾಲಕ್ಷ್ಮಿ ರಾಜ ಪದ್ಮಾಕ್ಷ ನ ಮಗಳಾಗಿ ಅವತಾರ ತಳೆದದ್ದು
  • ಕಾಲಾನಂತರದಲ್ಲಿ ಮಹಾಲಕ್ಷ್ಮಿಯೇ ಜನಕ ರಾಜನ ಕುವರಿಯಾಗಿ ಅವತಾರ ತಳೆದದ್ದು
  • ಹನುಮಂತ ದೇವರ ಅವತಾರದ ಕಥೆ 
  • ಅಹಿರಾವಣ ಮತ್ತು ಮಹಿರಾವಣರ ಕಥೆ 
  • ಲವ-ಕುಶರ ಜನನ

ಗಂಥದ ಹೆಸರೇ ಹೇಳುವಂತೆ ಶ್ರೀ ರಾಮ ವಿಜಯದಲ್ಲಿ  "ಭಗವಾನ್ ಶ್ರೀ ರಾಮನ ವಿಜಯ" ವನ್ನು ಕುರಿತು ಉಲ್ಲೇಖಿಸಲಾಗಿದೆ. ಇನ್ನೂ ಹೇಳಬೇಕೆಂದರೆ ನಮ್ಮ ಅಂತರಂಗದ ಆರು ಶತ್ರುಗಳಾದ "ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ" ದ ಮೇಲೆ ನಮ್ಮ ಆತ್ಮವು ಸಾಧಿಸುವ ವಿಜಯವನ್ನು ಸೂಚಿಸುತ್ತದೆ.ಪ್ರಸ್ತುತ ಗ್ರಂಥದಲ್ಲಿ ರಾಕ್ಷಸರಾದ ರಾವಣ, ಕುಂಭಕರ್ಣ, ಶುಕ, ಸರಣ, ಇಂದ್ರಜಿತ್, ಪ್ರಹಸ್ತ, ಮಹಿರಾವಣ ಮತ್ತಿತರರ ಮೇಲೆ ಭಗವಾನ್  ಶ್ರೀರಾಮನು ಸಾಧಿಸಿದ ವಿಜಯವನ್ನು ಕುರಿತು ಹೇಳಲಾಗಿದೆ. ಒಮ್ಮೆ ನಾವು ನಮ್ಮ ಅಂತರಂಗದ ಆರು ಶತ್ರುಗಳನ್ನು ನಿಗ್ರಹಿಸಿದರೆ ಸಾಕು, ಜ್ಞಾನವೆಂಬ ಜ್ಯೋತಿಯು  ಪ್ರಕಾಶಮಾನವಾಗಿ ಬೆಳಗಲು ಪ್ರಾರಂಭಿಸಿ "ಮಾರ್ಗವೇ ಇಲ್ಲದ ಮಾರ್ಗ" ಅಂದರೆ ಈ ಜನನ ಮರಣಗಳೆಂಬ ಜೀವನಚಕ್ರದ ಬಂಧನವನ್ನು ತಪ್ಪಿಸಿ ಭವಸಾಗರವನ್ನು ದಾಟಿಸುತ್ತದೆ. ಯಾರು ಶ್ರೀ ರಾಮ ವಿಜಯ ಗ್ರಂಥವನ್ನು ಶ್ರದ್ಧಾ ಭಕ್ತಿಗಳಿಂದ ಪಾರಾಯಣ ಮಾಡುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತರಾಗಿ ಮುಕ್ತಿಯನ್ನು ಹೊಂದುತ್ತಾರೆಂಬ ಪ್ರತೀತಿ ನಮ್ಮಲ್ಲಿ ಬೆಳೆದು ಬಂದಿದೆ. ( ಆಧಾರ:ಡಾ.ಪಿ.ವಿ.ಶಿವಚರಣ್)


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, July 14, 2014

ಶಿರಡಿಯ ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಆಯೋಜನೆ- ಒಂದು ವರದಿ- ಕೃಪೆ: ಸಾಯಿಅಮೃತಧಾರಾ. ಕಾಂ

ಶಿರಡಿಯ ಶ್ರೀ ಸಾಯಿನಾಥ ಆಸ್ಪತ್ರೆಯು ಶಿರಡಿಯ ಲಯನ್ಸ್ ಕ್ಲಬ್ ಮತ್ತು ಭಾರತೀಯ ವೈದ್ಯಕೀಯ ಸಂಘದ ಸಹಯೋಗದೊಂದಿಗೆ ಇದೇ ತಿಂಗಳ 1ನೇ ಜುಲೈ 2014, ಮಂಗಳವಾರ ದಂದು ತನ್ನ ಆಸ್ಪತ್ರೆಯ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು ಹಾಗೂ ಆ ಶಿಬಿರದಲ್ಲಿ ಒಟ್ಟು 71 ರಕ್ತದಾನಿಗಳು ಭಾಗವಹಿಸಿದ್ದರು ಎಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ರಕ್ತದಾನ ಶಿಬಿರದಲ್ಲಿ ಹಲವು ವೈದ್ಯರುಗಳು ಹಾಗೂ ಮಹಿಳೆಯರೂ ಸಹ ಸ್ವಇಚ್ಛೆಯಿಂದ ಭಾಗವಹಿಸಿದ್ದರು. ಶಿರಡಿಯ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ.ವಸಂತ್ ಕದಂ, ಸದಸ್ಯರುಗಳಾದ ಶ್ರೀ.ಸಚಿನ್ ಸಾರಂಗಾರ್, ಶ್ರೀ.ವಿಶಾಲ್ ತಿಡಕೆ, ಶ್ರೀ.ದಿಲೀಪ್ ವಾಕ್ಚುರೆ ಮತ್ತು ಶ್ರೀ.ಬಾವುಸಾಹೇಬ್ ಲವಾಂಡೆಯವರುಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎಂದು ಸಹ ಶ್ರೀ.ಸೋನಾವಾನೆಯವರು ಸುದ್ದಿಗಾರರಿಗೆ ತಿಳಿಸಿದರು. 

ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರ ಉತ್ತಮ ಮಾರ್ಗದರ್ಶನದಲ್ಲಿ  ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಭಾಕರ್ ರಾವ್, ವೈದ್ಯಕೀಯ ಅಧೀಕ್ಷಕರಾದ ಡಾ.ಸಂಜಯ್ ಪಟಾರೆ ಹಾಗೂ ಆಸ್ಪತ್ರೆಯ ಹಲವಾರು ಸಿಬ್ಬಂದಿಗಳು ವಿಶೇಷ ಮುತುವರ್ಜಿ ವಹಿಸಿ ಈ ರಕ್ತದಾನ ಶಿಬಿರ ಯಶಸ್ವಿಯಾಗಲು ದುಡಿದರೆಂದು ಸಹ ಶ್ರೀ.ಸೋನಾವಾನೆಯವರು ತಿಳಿಸಿದರು. 

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ 

ಗುರುಪೂರ್ಣಿಮಾ ಉತ್ಸವ 2014 – ಒಂದು ವರದಿ – ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಆಯೋಜಿಸಿದ್ದ ಗುರುಪೂರ್ಣಿಮಾ ಉತ್ಸವವು 11ನೇ ಜುಲೈ 2014, ಶುಕ್ರವಾರದಂದು ಬಹಳ ವಿಜೃಂಭಣೆಯಿಂದ ಪ್ರಾರಂಭವಾಯಿತು. ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಪಲ್ಲಕ್ಕಿಗಳೊಂದಿಗೆ ಶಿರಡಿಗೆ ಆಗಮಿಸಿದ್ದರು.

ಈ ವರ್ಷದ ಗುರುಪೂರ್ಣಿಮೆಯಲ್ಲಿ ಸುಮಾರು 50 ಪಲ್ಲಕ್ಕಿ ಪಾದಯಾತ್ರಿ ತಂಡದವರು ಭಾಗವಹಿಸಿದ್ದರು. ಹಾಗಾಗಿ ಪುಣೆಯಿಂದ ಶಿರಡಿಗೆ ಪಲ್ಲಕ್ಕಿಯಲ್ಲಿ ಆಗಮಿಸಿದ್ದ ಪಾದಯಾತ್ರಿ ತಂಡದವರನ್ನು ನೋಡಿಕೊಳ್ಳುವ ಸಲುವಾಗಿ ವಿಶೇಷ ಶ್ರೀ ಸಾಯಿಬಾಬಾ ಪಲ್ಲಕ್ಕಿ ಉತ್ಸವ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿಯು ಪಾದಯಾತ್ರಿಗಳ ಎಲ್ಲಾ ಅನುಕೂಲತೆಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಂಡರು. ಪಲ್ಲಕ್ಕಿ ಉತ್ಸವದಲ್ಲಿ ಜೋರಾಗಿ ಬಾರಿಸುತ್ತಿದ್ದ  ಡ್ರಮ್ ಗಳ ಸದ್ದಿಗೆ ಶಿರಡಿ ಪಟ್ಟಣದ ಎಲ್ಲೆಡೆ ಒಂದು ರೀತಿಯ ಧನಾತ್ಮಕ ತರಂಗಗಳ  ಅಲೆಯೇ ತುಂಬಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತೆಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ.

ಬೆಂಗಳೂರಿನ ಸಾಯಿ ಭಕ್ತರಾದ  ಶ್ರೀ.ಸುಬ್ರಮಣಿ ರಾಜು ಮತ್ತು ಶ್ರೀ. ಪ್ರಸಾದ ಬಾಬುರವರು ನೀಡಿದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಹಾಗೂ ಅದರ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು.





ಉತ್ಸವದ ಮೊದಲ ದಿನದ ಅಂಗವಾಗಿ 11ನೇ ಜುಲೈ 2014, ಶುಕ್ರವಾರದಂದು ಸಾಯಿಬಾಬಾರವರ ಭಾವಚಿತ್ರ, ವಿಗ್ರಹ, ವೀಣೆ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಉತ್ಸವದಲ್ಲಿ ಸಮಾಧಿ ಮಂದಿರದಿಂದ ದ್ವಾರಕಾಮಾಯಿಗೆ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯ ನಿರ್ವಾಹಕ ಅಧಿಕಾರಿಯಾದ ಶ್ರೀ.ಬಾವು ಸಾಹೇಬ್ ಸಬಲೆ, ಶ್ರೀ.ಸುಭಾಷ್ ಗಾರ್ಕಲ್  ಹಾಗೂ ಮತ್ತಿತರರು ಉತ್ಸವದಲ್ಲಿ ಭಾಗವಹಿಸಿದ್ದರು. 


ಉತ್ಸವವು ದ್ವಾರಕಾಮಯಿಗೆ ಬಂದ ನಂತರ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ ಮೊದಲನೇ ಅಧ್ಯಾಯವನ್ನು ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇ ಅಧ್ಯಾಯವನ್ನು ಪಾರಾಯಣ ಮಾಡುವ ಮುಖಾಂತರ ಅಖಂಡ ಪಾರಾಯಣವನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದರು.


ನಂತರ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ, ಹಾಗೂ ಅವರ ಧರ್ಮಪತ್ನಿಯವರು ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳಿಗೆ ಪೂಜೆಯನ್ನು ಸಲ್ಲಿಸಿದರು.


ಮಧ್ಯಾನ್ಹ 12:30 ಕ್ಕೆ ಮಧ್ಯಾನ್ಹದ ಆರತಿಯನ್ನು ನೆರವೇರಿಸಲಾಯಿತು. ಸಂಜೆ 4 ರಿಂದ  6 ಗಂಟೆಯವರೆಗೆ ಹರಿಭಕ್ತಪರಾಯಣ ಶ್ರೀ.ಮಾಧವರಾವ್ ಅಜಗಾವಂಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿತ್ತು. ಸಂಜೆ 7:30 ರಿಂದ ರಾತ್ರಿ 10:30 ರವರೆಗೆ ಸಮಾಧಿ ಮಂದಿರದ ಎದುರುಗಡೆ ಹಾಕಲಾಗಿದ್ದ ವಿಶೇಷ ವೇದಿಕೆಯಲ್ಲಿ ಭೂಪಾಲ್ ನ ಶ್ರೀ.ಸುಮಿತ್ ಪೊಂಡಾರವರಿಂದ  "ಸಾಯಿ ಅಮೃತ ಕಥಾ" ವನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 9:15 ಕ್ಕೆ ಶಿರಡಿ ಪಟ್ಟಣದ  ಸುತ್ತ ಶ್ರೀ ಸಾಯಿಬಾಬಾರವರ ಪಲ್ಲಕ್ಕಿ  ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ನ ತಂಡದವರು ಸಮಾಧಿ ಮಂದಿರ ಹಾಗೂ ಅದರ  ಸುತ್ತಮುತ್ತಲಿನ ಪ್ರದೇಶವನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿದ್ದರು.


ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ 12ನೇ ಜುಲೈ 2014, ಶನಿವಾರದಂದು ದೇಶದ ವಿವಿಧ ಸ್ಥಳಗಳಿಂದ ಲಕ್ಷಾಂತರ ಮಂದಿ ಸಾಯಿ ಭಕ್ತರು ಆಗಮಿಸಿ ಶ್ರೀ ಸಾಯಿಬಾಬಾರವರ ಪವಿತ್ರ ಸಮಾಧಿಯ ದರ್ಶನವನ್ನು ಪಡೆದರು.








ಶ್ರೀ ಸಾಯಿಬಾಬಾ ಸಂಸ್ಥಾನದ  ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಶಶಿಕಾಂತ್ ಕುಲಕರ್ಣಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ಸುಷ್ಮಾ ಕುಲಕರ್ಣಿಯವರು ಬಾಬಾರವರ ಪವಿತ್ರ ಪಾದುಕೆಗಳಿಗೆ ಪೂಜೆಯನ್ನು ಸಲ್ಲಿಸಿದರು.


ದ್ವಾರಕಾಮಾಯಿಯಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣ ಮುಕ್ತಾಯಗೊಂಡಿತು. ನಂತರ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಬಾಬಾರವರ ಭಾವಚಿತ್ರ ಹಾಗೂ ವೀಣೆಯೊಂದಿಗೆ ದ್ವಾರಕಾಮಾಯಿಯಿಂದ ಗುರುಸ್ಥಾನದ ಮುಖಾಂತರವಾಗಿ ಸಮಾಧಿ ಮಂದಿರಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಶಶಿಕಾಂತ ಕುಲಕರ್ಣಿಯವರು ಶ್ರೀ ಸಾಯಿ ಸಚ್ಚರಿತ್ರೆಯನ್ನು ಹಿಡಿದುಕೊಂಡಿದ್ದರೆ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ ಹಾಗೂ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಬಾಬಾರವರ ಭಾವಚಿತ್ರವನ್ನು ಹಿಡಿದುಕೊಂಡಿದ್ದರು. ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಸಾವಿರಾರು ಸಾಯಿ ಭಕ್ತರು ಮೆರವಣಿಗೆಯಲ್ಲಿ  ಪಾಲ್ಗೊಂಡಿದ್ದರು.


ಮಹಾರಾಷ್ಟ್ರದ ಕೃಷಿ ಹಾಗೂ ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ಹಾಗೂ ಅವರ ಪತ್ನಿಯವರು ಉತ್ಸವದ ಮುಖ್ಯ ದಿನದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.



ಸಂಜೆ 4 ರಿಂದ  6 ಗಂಟೆಯವರೆಗೆ ಹರಿಭಕ್ತಪರಾಯಣ ಶ್ರೀ.ಮಾಧವರಾವ್ ಅಜಗಾವಂಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿತ್ತು. ಸಂಜೆ 7:30 ರಿಂದ ರಾತ್ರಿ 10:30 ರವರೆಗೆ ಸಮಾಧಿ ಮಂದಿರದ ಎದುರುಗಡೆ ಹಾಕಲಾಗಿದ್ದ ವಿಶೇಷ ವೇದಿಕೆಯಲ್ಲಿ ಮುಂಬೈನ ಶ್ರೀ.ವಿಜಯ್ ಸಕ್ಕರ್ಕರ್ ಮತ್ತು ಅವರ ತಂಡದವರಿಂದ ಹಿಂದಿ-ಮರಾಠಿ ನೃತ್ಯ ನಾಟಕವಾದ "ಸಾಯಿ  ವಾಯ್ಸ್" ಅನ್ನು ಏರ್ಪಡಿಸಲಾಗಿತ್ತು. ರಾತ್ರಿ 9:15 ಕ್ಕೆ ಶಿರಡಿ ಪಟ್ಟಣದ  ಸುತ್ತ ಶ್ರೀ ಸಾಯಿಬಾಬಾರವರ ರಥ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 11.00 ರಿಂದ ಮಾರನೇ ದಿನ ಬೆಳಿಗ್ಗೆ 5 ಗಂಟೆಯವರೆಗೆ ಆಹ್ವಾನಿತ ಸಾಯಿ ಭಕ್ತ ಗಾಯಕರಿಂದ ಸಾಯಿ ಭಜನೆಯನ್ನು ಸಮಾಧಿ ಮಂದಿರದ ಪ್ರಾಂಗಣದಲ್ಲಿರುವ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಶ್ರೀಮತಿ.ಮುಗ್ಧ ದಿವಾಡಕರ್ ರವರು ಶಿರಡಿ ಸಾಯಿಬಾಬಾರವರ ಬಗ್ಗೆ ಮರಾಠಿ ಭಾಷೆಯಲ್ಲಿ ರಚಿಸಿ ಪುಣೆಯ ಅನುಬಂಧ್ ಪ್ರಕಾಶನವು ಹೊರತಂದಿರುವ  "ಸಾಯಿಂಚ್ಯಾ ಸಾನಿಧ್ಯಾತ್" ಎಂಬ ಹೊಸ ಪುಸ್ತಕವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು  ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಶ್ರೀಮತಿ.ಮುಗ್ಧ ದಿವಾಡಕರ್, ಶ್ರೀ.ಸುಧೀರ್ ದಿವಾಡಕರ್, ಪ್ರಕಾಶಕರಾದ ಶ್ರೀ.ಎ.ಎ.ಕುಲಕರ್ಣಿಯವರುಗಳು ಭಾಗವಹಿಸಿದ್ದರು. ಈ ಪುಸ್ತಕದಲ್ಲಿ 1854 ರಿಂದ  1918 ರವರೆಗೆ ಸಾಯಿಬಾಬಾರವರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಸಾಯಿ ಮಹಾಭಕ್ತರ ಅನುಭವಗಳನ್ನು ಉಲ್ಲೇಖಿಸಲಾಗಿದೆ.



11ನೇ ಜುಲೈ 2014, ಶುಕ್ರವಾರದಂದು ಪ್ರಾರಂಭವಾದ ಗುರುಪೂರ್ಣಿಮೆ ಉತ್ಸವವು 13ನೇ ಜುಲೈ 2014, ಭಾನುವಾರದಂದು ಸಮಾಧಿ ಮಂದಿರದಲ್ಲಿ ಪರ್ಬಾನಿಯ  ಹರಿಭಕ್ತಪರಾಯಣ ಶ್ರೀ.ಮಾಧವರಾವ್ ಅಜಗಾವಂಕರ್ ರವರ   ಲ್ಯಾಚಾ ಕೀರ್ತನೆ ಹಾಗೂ ದಹಿ ಹಂಡಿ (ಮೊಸರಿನ ಗಡಿಗೆ) ಒಡೆಯುವ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯಿತು.    



ಉತ್ಸವದ ಮುಕ್ತಾಯದ ದಿನವಾದ ಕಾರಣ ಅಂದು ಬೆಳಗಿನ ಜಾವ  ಗುರುಸ್ಥಾನದಲ್ಲಿ ರುದ್ರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು.  ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆ ಮತ್ತು ಅವರ ಧರ್ಮಪತ್ನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ನಂತರ ಸಮಾಧಿ ಮಂದಿರದಲ್ಲಿ ನೆಡೆದ ಸಮಾರಂಭದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಹಾಗೂ ಅವರ ಧರ್ಮಪತ್ನಿಯವರು ಸಾಯಿಬಾಬಾರವರ ಪವಿತ್ರ ಪಾದುಕೆಗಳಿಗೆ  ಪಾದ ಪೂಜೆಯನ್ನು ಸಲ್ಲಿಸಿದರು.


ದೀಪಾಲಂಕಾರವನ್ನು ಮಾಡಿದ ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ನ ತಂಡದ ಸದಸ್ಯರು ಹಾಗೂ ಹೂವಿನ ಅಲಂಕಾರಕ್ಕೆ ಧನ ಸಹಾಯ ಮಾಡಿದ ಬೆಂಗಳೂರಿನ ಸಾಯಿ ಭಕ್ತರಾದ  ಶ್ರೀ.ಸುಬ್ರಮಣಿ ರಾಜು ಮತ್ತು ಶ್ರೀ. ಪ್ರಸಾದ ಬಾಬುರವರಿಗೆ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸನ್ಮಾನ ಮಾಡಲಾಯಿತು.



ಉತ್ಸವದ ಕೊನೆಯ ಕಾರ್ಯಕ್ರಮವಾದ "ಸಾಯಿ ಮಿಲನ್ ಕಿ ಆಸ್" ಅನ್ನು ಸಂಜೆ 7.30 ರಿಂದ ರಾತ್ರಿ  10.30 ರವರೆಗೆ ಸಮಾಧಿ ಮಂದಿರದ ಎದುರುಗಡೆ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ  ಶ್ರೀರಾಮಪುರದ ಕಲಾವಿದರಾದ ಶ್ರೀ.ವಿಶ್ವನಾಥ ಓಜಾರವರು ಬಹಳ ಸುಂದರವಾಗಿ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಎಲ್ಲ ಭಕ್ತರೂ ಮುಕ್ತ ಕಂಠದಿಂದ ಹೊಗಳಿದರು. 

ಗುರು ಪೂರ್ಣಿಮಾ ಉತ್ಸವದ ಅಂಗವಾಗಿ ಉತ್ಸವದ 3 ದಿನಗಳೂ ಎಲ್ಲ ಭಕ್ತರಿಗೂ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಸಿಕಂದರಾಬಾದ್ ನ ಶ್ರೀಮತಿ. ಶ್ರಾವಣಿ ಮತ್ತು ಶ್ರೀ.ಸಾರಥಿ ಕಲ್ಪವಲ್ಲಿ, ದೆಹಲಿಯ ಶ್ರೀಮತಿ.ವೃಂದಾ ಸುಂದರಂ, ಚಿರಾಲದ ಶ್ರೀ.ಕರುಮುಡಿ ವೆಂಕಟರಮಣ ರೆಡ್ಡಿ, ಮುಂಬೈನ ಶ್ರೀ.ಅಡ್ಯಾನ್ ನಾರಂಗ್,  ಶ್ರೀ.ಅನಿಲ್ ದಿಧಿಕರ್, ಗೋಂಡ್ಯಾದ ಶ್ರೀ.ಘನಶ್ಯಾಮದಾಸ ರಾಮಕಿಶನ್ ಮಸಾನಿ, ಮುಂಬೈನ ಶ್ರೀ.ಸುನೀಲ್ ಅಗರವಾಲ್, ಶ್ರೀ.ಶಿವಪ್ರಕಾಶ ಗುಪ್ತಾ, ಹೈದರಾಬಾದ್ ನ ಶ್ರೀ.ಸುಧೀಶ್ ತಿಮ್ಮರಾಜು, ಶ್ರೀ.ಕರಣಂ ನಾರಾಯಣ, ಜಬಲ್ ಪುರದ ಸಾಯಿ ಗ್ರಾಫಿಕ್ಸ್ ನ ಶ್ರೀ.ಶಿಶಿರ್ ಪಾಂಡೆ, ಹೈದರಾಬಾದ್ ನ ಶ್ರೀ.ಪೊನ್ನಪುಲ ಪಾರ್ಥಸಾರಥಿ ಮತ್ತು ಶ್ರೀಮತಿ.ಸುಲೋಚನ ಕಾರ್ತೀಕ್ ಸಂಜಯ್, ಥಾಣೆಯ ಶ್ರೀ.ನರೇಶ್ ವಿ. ಉಧಾನಿ ಮತ್ತು ನವದೆಹಲಿಯ ಶ್ರೀ.ಪ್ರವೀಣ್ ಕುಮಾರ್ ಭಟ್ಟರವರುಗಳು ಬಹಳವಾಗಿ ಧನಸಹಾಯವನ್ನು ಮಾಡಿ ಪ್ರಸಾದ ಭೋಜನವನ್ನು ಪ್ರಾಯೋಜಿಸಿದರು.

ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಾಯಿ ಭಕ್ತರು ಆಗಮಿಸಿ ಶ್ರೀ ಸಾಯಿಬಾಬಾರವರ ಆಶೀರ್ವಾದವನ್ನು ಪಡೆದರು. 

2,50,000 ಕ್ಕೂ ಹೆಚ್ಚು ಉಚಿತ ಲಾಡು ಪ್ರಸಾದ ಪೊಟ್ಟಣಗಳನ್ನು ದರ್ಶನದ ಸಾಲಿನಲ್ಲಿ ಭಕ್ತರಿಗೆ ಹಂಚಲಾಯಿತು. ಅಲ್ಲದೇ ಉಚಿತ ಉಪಹಾರ ಪೊಟ್ಟಣಗಳನ್ನೂ ಸಹ ಹಂಚಲಾಯಿತು. ಎಲ್ಲಾ ಪಲ್ಲಕ್ಕಿ ಪಾದಯಾತ್ರಿಗಳಿಗೂ ಸಾಯಿ ಆಶ್ರಮ-2 ರಲ್ಲಿ ಉಚಿತವಾಗಿ ತಂಗಲು ವ್ಯವಸ್ಥೆಯನ್ನು ಮಾಡಲಾಗಿತ್ತು.   

ಶ್ರೀ ಸಾಯಿಬಾಬಾ ಸಂಸ್ಥಾನದವರು ಗುರುಪೂರ್ಣಿಮೆ ಉತ್ಸವದ ಅಂಗವಾಗಿ ಮಾಡಿದ್ದ ಎಲ್ಲಾ ವ್ಯವಸ್ಥೆಗಳನ್ನು ಸಾಯಿ ಭಕ್ತರುಗಳು ಮುಕ್ತ ಕಂಠದಿಂದ ಹೊಗಳಿದರು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ, ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ